ಜೇನುನೊಣಗಳು ಎರಿಗಳಲ್ಲಿ ಮೇಣದಿಂದ ಷಡ್ಬುಜಾಕೃತಿಯ ಕಣಗಳನ್ನು ರಚಿಸಿ ಮರಿಸಾಕಣೆ, ಜೇನುತುಪ್ಪ ಮತ್ತು ಪರಾಗದ ಸಂಗ್ರಹಣೆಗೆ ಉಪಯೋಗಿಸುತ್ತವೆ. ಅವು ಎರಿಯ ಮೇಲೆ ಓಡಾಡಿ, ಆಹಾರದ ಪ್ರತೀಕವಾಗಿ ನೃತ್ಯಗಳನ್ನು ಮಾಡಿ, ಆಹಾರವನ್ನು ಒಂದಕ್ಕೊಂದು ವಿನಿಮಯ ಮಾಡಿಕೊಂಡು ರೆಕ್ಕೆ ಬೀಸುವುದರ ಮೂಲಕ ಗೂಡನ್ನು ತಂಪಾಗಿಡುತ್ತವೆ.

ಗೂಡಿನ ಸ್ಥಳದ ಆಯ್ಕೆ : ಜೇನುನೊಣಗಳು ಸಾಮಾನ್ಯವಾಗಿ ಕುಟುಂಬದಲ್ಲಿ ಹೊಸರಾಣಿ ಬೆಳವಣಿಗೆಯಾದಾಗ, ಆಹಾರದ ಕೊರತೆ ಹಾಗೂ ಶತ್ರುಗಳ ಉಪಟಳದಿಂದ ಮೂಲವಾಸಸ್ಥಳದ ಬಿಟ್ಟು ಹೊಸ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಈ ಸನ್ನವೇಶದಲ್ಲಿ ಕೆಲಸಗಾರ ನೊಣಗಳು ಗೂಡಿನಿಂದ ಹಾರಿ ಗುಂಪಾಗಿ ಮರದ ಕೊಂಬೆಯ ಅಡಿಯಲ್ಲಿ ಒಂದೆರಡು ದಿನ ನೇತಾಡುತ್ತವೆ. ಇವು ನೇತಾಡುವ ಸಮಯದಲ್ಲಿ ಗೂಢಚಾರ ನೊಣಗಳು ಹೊರಬಂದು ಅವಶ್ಯಕ ಸ್ಥಳವನ್ನು ಹುಡುಕಲು ಸನ್ನದ್ದವಾಗುತ್ತವೆ. ಕೆಲವು ಬಾರಿ ಹೊಸ ಕುಟುಂಬವು ಮೂಲ ಕುಟುಂಬವನ್ನು ಬಿಡುವ ಮೊದಲೇ ಗೂಢಚಾರ ನೊಣಗಳು ಸೂಕ್ತ ಸ್ಥಳವನ್ನು ಗುರುತಿಸಿದ ನಂತರ ಆ ಸ್ಥಳವನ್ನು ಪರೀಕ್ಷಿಸುತ್ತವೆ. ಆಯ್ಕೆಯಾದ ಸ್ಥಳದಲ್ಲಿ ನೊಣಗಳು ಒಂದಕ್ಕೊಂದು ಬಾಚಿಕೊಳ್ಳುವುದು, ಮಕರಂದವನ್ನು ಪರಸ್ಪರ ಬದಲಿಸಿಕೊಳ್ಳುವುದು, ನೆಸೊನೋವ್‌ಗ್ರಂಥಿಗಳಿಂದ ವಾಸನೆಯನ್ನು ಹೊರಸೂಸುವುದು ಮತ್ತು ರೆಕ್ಕೆ ಬೀಸುವುದನ್ನು ಕಾಣಬಹುದು.

ಗೂಢಚಾರ ನೊಣಗಳು ಸೂಕ್ತ ಸ್ಥಳವನ್ನು ಗುರುತಿಸಿದಲ್ಲಿ ಕುಟುಂಬಕ್ಕೆ ಮರಳಿದ ನಂತರ ನೃತ್ಯವನ್ನು ಮಾಡುತ್ತವೆ. ಕೆಲಸಗಾರ ನೊಣಗಳು ಗೂಢಚಾರ ನೊಣಗಳ ನೃತ್ಯದಿಂದ ಹೊಸಗೂಡಿನ ದಿಕ್ಕು ಹಾಗೂ ಗುಣಮಟ್ಟವನ್ನು ತಿಳಿಯುತ್ತವೆ. ಕಡಿಮೆ ನೃತ್ಯಗಳ ಸಂಖ್ಯೆ ಆ ಸ್ಥಳದ ಅನಾನುಕೂಲತೆಯನ್ನು ತಿಳಿಸಿದರೆ, ಒಂದೇ ಕಡೆ ಹೆಚ್ಚು ಸಂಖ್ಯೆಯಲ್ಲಿ ನೃತ್ಯ ನಡೆಸುತ್ತಿದ್ದರೆ ಅದನ್ನು ಸೂಕ್ತ ಸ್ಥಳವೆಂದು ತಿಳಿಯುತ್ತವೆ. ಅಂತಹ ಸ್ಥಳದ ಸಮೀಪದಲ್ಲಿ ಗೂಢಚಾರ ನೊಣಗಳು ರಭಸವಾಗಿ ಓಡಾಡುವುದರೊಂದಿಗೆ ನೊಣಗಳು ಚದುರಲು ಸಹಕಾರಿಯಾಗುತ್ತದೆ. ಕೆಲಸಗಾರ ನೊಣಗಳು ನಂತರ ರಾಣಿಯೊಂದಿಗೆ ಹೊಸ ಸ್ಥಳಕ್ಕೆ ಧಾವಿಸಿದಾಗ ಗೂಢಚಾರ ನೊಣಗಳು ರಭಸವಾಗಿ ಹಾರುವ ಮತ್ತು ಸ್ರವಿಕೆಗಳ ಮೂಲಕ ಹೊಸ ಸ್ಥಳವನ್ನು ತೋರಿಸಲು ಮುಂದಾಗುತ್ತವೆ.

ಸ್ಥಳದ ಗುಣಲಕ್ಷಣಗಳು : ಹೊಸ ಸ್ಥಳವನ್ನು ಮೂಲ ಕುಟುಂಬದಿಂದ ಸುಮಾರು ೪೦೦ -೬೦೦ ಮೀಟರ್ ದೂರದಲ್ಲಿ ಆಯ್ಕೆ ಮಾಡಿಕೊಳ್ಳುತ್ತವೆ ಈ ಗುಣ ಆಹಾರದ ಲಭ್ಯತೆ ಮತ್ತು ಸ್ಥಳದ ಸೂಕ್ತತೆಯನ್ನು ಅವಲಂಬಿಸಿರುತ್ತದೆ. ಇದೇ ರೀತಿ ಜೇನು ಕುಟುಂಬಗಳು ೫೦ ರಿಂದ ೧೬೦೦ ಮೀಟರ್‌ಗಳವರೆಗೂ ಹಾರಿ ಹೊಸಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ನಿದರ್ಶನಗಳಿವೆ. ಜೇನು ನೊಣಗಳ ಆಯ್ಕೆ ಮಾಡಿದ ಸ್ಥಳ ಗಾಳಿಯಾಡುವಂತಿದ್ದು ವಿವಿಧ ಋತುಗಳ ಪರಿಸರಕ್ಕೆ ಹೊಂದಿಕೊಳ್ಳುವಂತಿರುತ್ತದೆ. ಸಾಮಾನ್ಯವಾಗಿ ಜೇನು ನೊಣಗಳ ಗೂಡಿನ ಮುಖದ್ವಾರ ಸುಮಾರು ೧ – ೨ ಸೆಂ.ಮೀ ಇದ್ದು ವಾತಾವರಣದ ಅವಶ್ಯಕತೆಗೆ ತಕ್ಕಂತೆ ಬದಲಿಸುತ್ತವೆ. ಜೇನುಗೂಡಿನ ಪೊಟರೆಗಳು ಸಾಮಾನ್ಯವಾಗಿ ಕೊಳವೆಯಾಕಾರದಲ್ಲಿದ್ದು ಕತ್ತಲಿನ ಹಾಗೂ ತಂಪು ವಾತಾವರಣದಿಂದ ಕೂಡಿರುತ್ತವೆ. ಸ್ವಾಭಾವಿಕವಾಗಿ ಹೆಚ್ಚಿನ ಕುಟುಂಬಗಳ ಮುಖದ್ವಾರವು ದಕ್ಷಿಣ ದಿಕ್ಕಾಗಿರುವುದು ಕಂಡು ಬಂದಿದೆ.

ಎರಿ ಕಟ್ಟುವಿಕೆ :  ದೇಹದ ಮೇಣದ ಗ್ರಂಥಿಗಳಿಂದ ಸ್ರವಿತವಾಗುವ ಮೇಣದಿಂದ ಎರಿ ಕಟ್ಟುತ್ತವೆ. ಜೇನು ಕುಟುಂಬಗಳು ಹೊಸ ಸ್ಥಳದಲ್ಲಿ ಶೇ. ೯೦ ರಷ್ಟು ಎರಿಕಟ್ಟುವಿಕೆಯನ್ನು ೪೫ -೫೦ ದಿನಗಳಲ್ಲಿ ಮುಗಿಸುವುದರಿಂದ ಮರಿಗಳ ಬೆಳೆಸುವಿಕೆ ಮತ್ತು ಆಹಾರದ ಶೇಖರಣೆಗೆ ಸಹಕಾರಿಯಾಗುತ್ತದೆ. ಎರಿಯು ವಿಸ್ಮಯಕಾರಿಯಾದ ವಾಸ್ತುಶೈಲಿಯಿಂದ ಕೂಡಿ ಕಣಗಳು ಷಡ್ಬುಜಾಕೃತಿಯಲ್ಲಿದ್ದು ಚಿಕ್ಕ ಕಣಗಳಲ್ಲಿ ಕೆಲಸಗಾರ ಮರಿಗಳನ್ನು ಮತ್ತು ದೊಡ್ಡ ಕಣಗಳಲ್ಲಿ ಗಂಡು ನೊಣಗಳನ್ನು ಸಾಕಣೆ ಮಾಡುತ್ತವೆ. ಎರಡೂ ರೀತಿಯ ಕಣಗಳನ್ನು ಆಹಾರ ಶೇಖರಿಸಲು ಬಳಸುತ್ತವೆ. ಆದರೆ ರಾಣಿನೊಣವನ್ನು ಸಾಕಣೆಮಾಡಲು ಕಣಗಳನ್ನು ವಿಶೇಷವಾಗಿ ಉದ್ದ ಹಾಗೂ ದೊಡ್ಡದಾಗಿ ಎರಿಯ ಕೆಳತುದಿಯಲ್ಲಿ ಕಟ್ಟುತ್ತವೆ.

ಷಡ್ಬುಜಾಕೃತಿಯ ಕಣಗಳ ಜೇನುಗೂಡು

ಎರಿಗಳನ್ನು ಕಟ್ಟುವ ಪ್ರಾರಂಭದಲ್ಲಿ ಕೆಲಸಗಾರ ನೊಣಗಳು ಸರಪಳಿಯಾಕಾರದಲ್ಲಿ ಒಂದಕ್ಕೊಂದು ಬಿಗಿಯಾಗಿ ಜೋತುಬಿದ್ದು ಗುಂಪುಗೂಡಿ ೩೨ -೩೫ ಡಿಗ್ರಿ ಸೆ. ಉಷ್ಣತೆಯನ್ನು ಉಂಟುಮಾಡುವ ಮೂಲಕ ಮೇಣವನ್ನು ಸ್ರವಿಸಲು ಅವಕಾಶಮಾಡಿಕೊಳ್ಳುತ್ತವೆ. ಕೆಲಸಗಾರ ನೊಣಗಳು ಎರಿಕಟ್ಟುವಿಕೆಯನ್ನು ಪಾಯ ನಿರ್ಮಿಸುವುದರ ಮೂಲಕ ಪ್ರಾರಂಭಿಸುತ್ತವೆ. ಈ ನೊಣಗಳು ನಾಲ್ಕು ಜೊತೆ ಮೇಣದ ಗ್ರಂಥಿಗಳಿಂದ ಸ್ರವಿತವಾದ ಮೇಣವನ್ನು ಜೊಲ್ಲು ರಸದೊಂದಿಗೆ ಬೆರೆಸಿ ಮೃದುಗೊಳಿಸಿ  ಪಾಯ ನಿರ್ಮಿಸುತ್ತವೆ. ಅಂಕಿ ಅಂಶಗಳ ಪ್ರಕಾರ ೬೬,೦೦೦ ನೊಣಗಳು ಒಂದು ಗಂಟೆಗೆ ಒಂದು ಕಿ.ಗ್ರಾಂ ಮೇಣವನ್ನು ಉಪಯೋಗಿಸಿಕೊಂಡು ೭೭,೦೦೦ ಕಣಗಳನ್ನು ನಿರ್ಮಿಸುತ್ತವೆ ಎಂದು ಅಂದಾಜು ಮಾಡಲಾಗಿದೆ. ಎರಿಕಟ್ಟುವಿಕೆಯಲ್ಲಿ ಅನೇಕ ಕೆಲಸಗಾರ  ನೊಣಗಳು ಕಾರ್ಯನಿರತವಾಗಿ ಒಂದೇ ಗಾತ್ರದ ಕಣಗಳನ್ನು ನಿರ್ಮಿಸುವುದರಿಂದ  ಎರಿ ಕಟ್ಟುವಿಕೆ ತ್ವರಿತಗತಿಯಲ್ಲಿ ನಡೆಯುತ್ತದೆ. ಮೇಣದ ದಪ್ಪವಾದ ಪದರುಗಳನ್ನು  ಎರಿಯ ತಳಹದಿಯಲ್ಲಿಟ್ಟು ಅವುಗಳ ಮೇಲೆ ತೆಳುವಾದ ಮೇಣದ ಗೋಡೆಗಳನ್ನು ನಿರ್ಮಿಸುತ್ತವೆ. ಸಾಮಾನ್ಯವಾಗಿ ಕಣದ ಗೋಡೆಯ ದಪ್ಪ ೦.೭೩ ಮಿ.ಮೀ ಇರುತ್ತದೆ.

ಕೆಲಸಗಾರ ನೊಣಗಳು ಎರಿಯ ಕಣಗಳನ್ನು ಕಟ್ಟಲು ಸೂಕ್ತ ರಚನೆಗಳನ್ನು ಹೊಂದಿದ್ದು ಕುತ್ತಿಗೆ ಭಾಗದ ಕೂದಲುಗಳು ಗುರುತ್ವಾಕರ್ಷಣೆಯನ್ನು ಗುರುತಿಸಲೂ ಕಣಗಳ ಗೋಡೆಯ ದಪ್ಪವನ್ನು ಕುಡಿಮೀಸೆಯ ಸೂಕ್ಷ್ಮಾಂಗಗಳಿಂದಲೂ ಮತ್ತು ಅವುಗಳ ವ್ಯಾಸವನ್ನು ಮುಂಗಾಲುಗಳ ತುದಿಯಿಂದಲೂ ನಿಗದಿಪಡಿಸುತ್ತವೆ.

ಜೇನುನೊಣಗಳು ಸಾಮಾನ್ಯವಾಗಿ ಎರಿಗಳನ್ನು ಶುದ್ಧ ಮೇಣದಿಂದ ನಿರ್ಮಿಸಿದರೂ ಕೆಲವೊಂದು ಬಾರಿ ಸಸ್ಯಗಳ ಅಂಟನ್ನು ಸೇರಿಸಿ ಕಟ್ಟುತ್ತವೆ. ಈ ಅಂಟನ್ನು ಹೆಚ್ಚಾಗಿ ಸಂದುಗಳನ್ನು ಮುಚ್ಚಲು ಉಪಯೋಗಿಸುವುದರಿಂದ ಶತ್ರುಗಳು ಕುಟುಂಬದೊಳಗೆ ನುಸುಳುವುದನ್ನು ತಪ್ಪಿಸಲು ಸಹಾಯಕವಾಗುತ್ತದೆ. ಜೇನುತುಪ್ಪವನ್ನು ಎರಿಯ ಮೇಲ್ಭಾಗದಲ್ಲಿ ಶೇಖರಿಸಿದರೆ ಮರಿಹುಳುಗಳನ್ನು ಮಧ್ಯದ ಭಾಗಗಳಲ್ಲಿ ಸಾಕಣೆ ಮಾಡುತ್ತವೆ. ಮೊಟ್ಟೆ ಮರಿಗಳನ್ನು ಮಧ್ಯದ ಎರಿಯಲ್ಲಿ ಸಾಕಣೇ ಮಾಡುವುದರಿಂದ ಉಷ್ಣತೆಯನ್ನು ನಿಯಂತ್ರಿಸುವ ಜೊತೆಗೆ ಮರಿ ಹುಳುಗಳಿಗೆ ಸುಲಭವಾಗಿ ಆಹಾರ ನೀಡಲು ಸಾಧ್ಯವಾಗುತ್ತದೆ.

ನೊಣಗಳು ಕಟ್ಟಿದ ಎರಿಯ ಕಣಗಳನ್ನು ಪುನಃ ಮರಿಸಾಕಣೆ, ಜೇನುತುಪ್ಪ ಮತ್ತು ಪರಾಗದ ಶೇಖರಣೆಗೆ ಬಳಸುತ್ತವೆ. ಜೇನು ನೊಣಗಳು ಗುಂಪುಕಟ್ಟಲು, ಚೋದಕ ರಾಸಾಯನಿಕಗಳನ್ನು ಹಂಚಲು ಮತ್ತು ನೃತ್ಯಗಳನ್ನು ನಡೆಸಲು ಎರಿಯ ಮೇಲ್ಮೈ ಬಹಳ ಅವಶ್ಯಕವಾಗಿದೆ.

ಎರಿಗಳ ರಚನೆ : ಜೇನು ನೊಣಗಳು ನಿರ್ಮಿಸುವ ಎರಿಗಳ ಕಣಗಳು ಷಡ್ಭುಜಾಕೃತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜಾಣ್ಮೆಯಿಂದ ಕಟ್ಟಲ್ಪಟ್ಟಿರುವುದಲ್ಲದೆ ತಾಂತ್ರಿಕ ದೃಷ್ಟಿಯಿಂದ ಅವಲೋಕಿಸಿದಾಗ ಷಡ್ಭುಜಾಕೃತಿಯ ರಚನೆಯಲ್ಲಿ ಅನೇಕ ಅನುಕೂಲಕರ ಅಂಶಗಳಿರುವುದು ಕಂಡು ಬರುತ್ತದೆ. ವೃತ್ತಾಕಾರದ, ತ್ರಿಕೋಣಾಕಾರದ, ಚತುರ್ಭುಜಾಕಾರ, ಪಂಚಭುಜಾಕಾರ, ಷಡ್ಭುಜಾಕಾರ ಹಾಗೂ ಅಷ್ಟಭುಜಾಕಾರ ಇತ್ಯಾದಿಯಾಗಿ ವಿವಿಧ ಆಕಾರದ ಕಣಗಳನ್ನು ಹೋಲಿಸಿ ಚತುರ್ಭುಜಾಕಾರ, ತ್ರಿಭುಜಾಕಾರ ಮತ್ತು ಷಡ್ಭುಜಾಕಾರದ  ಕಣಗಳ ಭಾರವನ್ನು ತಡೆದುಕೊಳ್ಳುವ ಶಕ್ತಿಯನ್ನು ಪರೀಕ್ಷಿಸಿದಾಗ ಷಡ್ಭುಜಾಕಾರದ ಕಣಗಳ ರಚನೆಯಿಂದ ಕಡಿಮೆ ಸ್ಥಳದಲ್ಲಿ ಹೆಚ್ಚು ಕಣಗಳನ್ನು ನಿರ್ಮಿಸಲ್ಪಟ್ಟು ಮೊಟ್ಟೆಮರಿಗಳನ್ನು ಸಾಕಲು ಹಾಗೂ ಹೆಚ್ಚು ಆಹಾರದ ಸಂಗ್ರಹಣೆಗೆ ಅವಕಾಶವಾಗುವುದಲ್ಲದೇ ಸೂಕ್ತ ಕಣಗಳನ್ನು ರಚಿಸಲು ಬೇಕಾಗುವ ಹೆಚ್ಚಿನ ಮೇಣ,  ಸಮಯ ಮತ್ತು ಶ್ರಮ ಕಡಿಮೆಯಾಗಿರುತ್ತದೆ. ಗಣಿತಶಾಸ್ತ್ರಜ್ಞರು ಹಾಗೂ ವಾಸ್ತು ಶಿಲ್ಪಶಾಸ್ತ್ರಜ್ಞರ ಗಮನವನ್ನು ಸೆಳೆದಾಗ ಷಡ್ಭುಜಾಕೃತಿಯ ಪ್ರಾಮುಖ್ಯತೆ ಜೇನು ನೊಣಗಳಿಗೆ ಬಹಳ ಹಿಂದೆಯೇ ತಿಳಿದಿತ್ತೆನ್ನುವುದನ್ನು ಸೋಜಿಗದ ಸಂಗತಿಯೆನಿಸುತ್ತದೆ. ಷಡ್ಭುಜಾಕೃತಿ, ಚತುರ್ಭುಜಾಕಾರ ಮತ್ತು  ತ್ರಿಕೋನಾಕೃತಿಗಳ ಕಣಗಳ ನಡುವೆ ಖಾಲಿ ಸ್ಥಳ ಇಲ್ಲದಿದ್ದು, ಪಂಚಭುಜಾಕೃತಿ, ಸಪ್ತಭುಜಾಕೃತಿ ಮತ್ತು ಅಷ್ಟಭುಜಾಕೃತಿ ಹಾಗೂ ವೃತ್ತಾಕೃತಿಯ ಕಣಗಳನ್ನು ನಿರ್ಮಿಸುವಾಗ ನಡುವೆ ಖಾಲಿ ಸ್ಥಳ ಉಳಿಯುವ ಸಾಧ್ಯತೆ ಇರುತ್ತದೆ (ಚಿತ್ರ ೨೮).

ವಿವಿಧ ಬಗೆಯ ಕಣಗಳ ರಚನೆಯಲ್ಲಿನ ವ್ಯತ್ಯಾಸಗಳು

ಜೇನುನೊಣಗಳು ಒಂದಕ್ಕೊಂದು ಸಮಾನಾಂತರವಾದ ಅನೇಕ ಎರಿಗಳನ್ನು ನಿರ್ಮಾಣ ಮಾಡುವಾಗ ಎರಿಗಳ ನಡುವಿನ ಅಂತರವನ್ನು ನಿರ್ದಿಷ್ಟ ಪ್ರಮಾಣದಲ್ಲಿಡುತ್ತವೆ. ಈ ಅಂತರಗಳ ನಡುವೆ ಜೇನು ಕುಟುಂಬದಲ್ಲಿ ೭ – ೮ ಮಿ.ಮೀ ಆದರೆ ಯೂರೋಪಿಯನ್ ಜೇನು ಕುಟುಂಬದಲ್ಲಿ ೮ – ೧೦ ಮಿ.ಮೀ. ನಷ್ಟಿರುತ್ತದೆ. ಈ ಅಂತರದಲ್ಲಿ ಜೇನು ನೊಣಗಳು ಸರಾಗವಾಗಿ ಸಂಚರಿಸಿ ಕುಟುಂಬದ ವಿವಿಧ ಕೆಲಸ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸುತ್ತವೆ. ಈ ಜಾಗವು ಸುಲಭವಾಗಿ ಗಾಳಿಯಾಡಲು, ಕಣಗಳಿಂದ ಮರಿಗಳು ಬೆಳವಣಿಗೆಯಾಗಿ ನೊಣಗಳು ಹೊರಬರಲು ಮತ್ತು ಕುಟುಂಬದ ಉಷ್ಣತೆಯನ್ನು ನಿಯಂತ್ರಿಸಲು ಅತ್ಯಂತ ಅವಶ್ಯಕವಾಗಿರುತ್ತದೆ.