ಜೇನುನೊಣಗಳು ಮಾನವನಿಗೆ ನೈಸರ್ಗಿಕ ದ್ರರ ಬಂಗಾರವೆಂದೇ ಪರಿಗಣಿಸಲ್ಪಟ್ಟಿರುವ ಪೌಷ್ಟಿಕವಾದ ಜೇನುತುಪ್ಪವನ್ನು ನೀಡುತ್ತವೆ. ಸರ್ವವ್ಯಾಧಿ ನಿವಾರಕ ಗುಣಗಳುಳ್ಳ ಜೇನುತುಪ್ಪಕ್ಕೆ ಪರ್ಯಾಯವಾದ ಆಹಾರ ಪದಾರ್ಥ ಪ್ರಕೃತಿಯಲ್ಲಿ ಬೇರೊಂದಿಲ್ಲ. ಜೇನುಮೇಣವು ಜೇನುನೊಣಗಳಿಂದ ದೊರೆಯುವ ಮತ್ತೊಂದು ಬಹುಪಯೋಗಿ ವಸ್ತುವಾಗಿದ್ದು ಮೇಣದ ಬತ್ತಿ. ಸೌಂದರ್ಯವರ್ಧಕಗಳು ಮುಂತಾದವುಗಳಲ್ಲಿ ಬಳಸಲಾಗುತ್ತದೆಯಲ್ಲದೆ ಇವುಗಳ ಇತರ ಉತ್ಪನ್ನಗಳಾದ ಜೇನು ಅಂಟು, ಜೇನುವಿಷ, ಪರಾಗ ಮತ್ತು ರಾಜಶಾಹಿ ರಸಗಳೆಲ್ಲವೂ ಜೈವಿಕವಾಗಿ ಕ್ರಿಯಾಶೀಲವಾಗಿದ್ದು ಪರಿಣಾಮಕಾರಿ ಔಷಧೀ ಗುಣಗಳನ್ನು ಹೊಂದಿವೆ.

ಜೇನುತುಪ್ಪ

ಜೇನುತುಪ್ಪ ಪ್ರಕೃತಿಯ ಸ್ವಾಭಾವಿಕ ಸಿಹಿಯಾದುದರಿಂದ ಇದನ್ನು ಮನುಷ್ಯ ಪ್ರಾಚೀನ ಕಾಲದಿಂದಲೂ ಸವಿಯುತ್ತಾ ಬಂದಿದ್ದು ಇದು ಹೆಚ್ಚಿನ ಪೌಷ್ಟಿಕ ಹಾಗೂ ಆರೋಗ್ಯಕರ ಗುಣಗಳನ್ನು ಹೊಂದಿದೆ. ಜೇನುನೊಣಗಳು ಸ್ವಾಭಾವಿಕವಾಗಿ ನಾನಾ ರೀತಿಯ ಸಸ್ಯಗಳ ಹೂಗಳಿಂದ ದೊರೆಯುವ ಮಕರಂದವನ್ನು ಸಂಗ್ರಹಿಸಿ ಜೇನುತುಪ್ಪದ ರೂಪದಲ್ಲಿ ಕೂಡಿಡುತ್ತವೆ.

ಜೇನುತುಪ್ಪದ ಉತ್ಪಾದನೆ :  ಭಾರತದಲ್ಲಿ ಸುಮಾರು ೫೦ ಲಕ್ಷ ಜೇನು ಕುಟುಂಬಗಳಿಂದ ೬ ಲಕ್ಷ ಮೆಟ್ರಿಕ್ ಟನ್ ಜೇನುತುಪ್ಪವನ್ನು ಉತ್ಪಾದಿಸುವ ಸಾಮರ್ಥ್ಯವಿದೆ ಎಂಬುದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ  ಅಂಕಿ ಅಂಶಗಳಿಂದ ತಿಳಿದು ಬಂದಿದೆ. ದಿನದಿನಕ್ಕೂ ತೀವ್ರವಾಗಿ ಕಾಡುತ್ತಿರುವ ಥಾಯ್‌ಸ್ಯಾಕ್‌ಬ್ರೂಡ್ ನಂಜುರೋಗವು  ಕರ್ನಾಟಕ ರಾಜ್ಯದಲ್ಲಿ ಸುಮಾರು ಎಂಟು ಸಾವಿರ ಪೂರ್ಣಾವಧಿ ಮತ್ತು ೪೫ ಸಾವಿರ ಅರೆಕಾಲಿಕ ಜೇನುಕೃಷಿಕರನ್ನು ಅಪಾರ ಚಿಂತೆಗೀಡು ಮಾಡಿತ್ತು. ಕರ್ನಾಟಕ ರಾಜ್ಯದಲ್ಲಿ ಥಾಯ್‌ಸ್ಯಾಕ್‌ಬ್ರೂಡ್ ರೋಗದಿಂದಾಗಿ ಜೇನುತುಪ್ಪದ ಉತ್ಪಾದನೆಯು  ತೀವ್ರ ಕಡಿಮೆಯಾಗಿದ್ದು  ವಾರ್ಷಿಕ ೩ ಲಕ್ಷ ಕಿ.ಗ್ರಾಂ ಉತ್ಪಾದನೆಯಾಗುತ್ತಿತ್ತು. ಈ ರೋಗದಿಂದಾಗಿ ಭಾರತ ದೇಶದಲ್ಲಿ  ಜೇನುತುಪ್ಪದ ಉತ್ಪಾದನೆ ಕುಂಠಿತವಾಗಿ ಪ್ರತಿವರ್ಷವೂ ರಾಷ್ಟ್ರೀಯ ವರಮಾನಕ್ಕೆ ಸುಮಾರು ೩ ಕೋಟಿ ರೂಪಾಯಿಗಳ ನಿವ್ವಳ ಆದಾಯವು ಕೈ ತಪ್ಪಿ ಹೋಗುತ್ತಿದೆ.

೧೯೯೬ – ೯೭ ರಲ್ಲಿ ಭಾರತದ ರಫ್ತು ಮಾಡಿದ ಜೇನುತುಪ್ಪದ ಪ್ರಮಾಣವು ಕೇವಲ ಒಂದು ಸಾವಿರ ಮೆಟ್ರಿಕ್ ಟನ್‌ಗಳು. ಆದರೆ ಚೀನಾ ಸುಮಾರು ೭೦ ಸಾವಿರ ಮೆಟ್ರಿಕ್ ಟನ್‌ಜೇನುತುಪ್ಪವನ್ನು ರಫ್ತು ಮಾಡುತ್ತಿದೆ. ಭಾರತವು ರಫ್ತಿನಲ್ಲಿ  ಬಹಳ ಹಿಂದೆ ಇದ್ದು ಅದರಲ್ಲೂ ಕರ್ನಾಟಕದಿಂದ ರಫ್ತು ಪ್ರಮಾಣವು ತೀರಾ ಕಡಿಮೆಯಾಗಿದೆ. ರಾಜ್ಯದ ಜೇನು ಕೃಷಿಗಾರರ ಒಕ್ಕೂಟಕ್ಕೆ ಯೂರೋಪ್ ರಾಷ್ಟ್ರಗಳಿಂದ ಕೇವಲ ೨೦ ಮೆಟ್ರಿಕ್ ಟನ್ ಜೇನುತುಪ್ಪದ ರಫ್ತಿನ ಬೇಡಿಕೆ ಇದ್ದರೂ ಅದನ್ನು ರಫ್ತು ಮಾಡುವಲ್ಲಿ ಒಕ್ಕೂಟ ವಿಫಲವಾಗಿದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ೧೯೮೬ ರ ಅಂಕಿ ಅಂಶಗಳ ಪ್ರಕಾರ ಭಾರತದ ಜೇನುತುಪ್ಪದ ಉತ್ಪಾದನೆ ೧೮,೦೦೦ ಮೆಟ್ರಿಕ್ ಟನ್. ಇದರ ಅರ್ಧಕ್ಕಿಂತಲೂ ಹೆಚ್ಚಿನ ಜೇನುತುಪ್ಪವನ್ನು ನೈಸರ್ಗಿಕ ಹೆಜ್ಜೇನು ಮತ್ತು ತುಡುವೆ ಜೇನು ಕುಟುಂಬಗಳಿಂದ ಪಡೆಯಲಾಗುತ್ತದೆ, ಭಾರತದಲ್ಲಿ  ಮಾರಾಟವಾಗುತ್ತಿರುವ ಹೆಚ್ಚು ಜೇನುತುಪ್ಪವನ್ನು ಆಹಾರವಾಗಿ ಬಳಸಲಾಗುತ್ತಿದೆ ಮತ್ತು ಶೇಕಡಾ ೮೮ – ೯೫ ರಷ್ಟು ಜೇನುತುಪ್ಪವನ್ನು ನೇರವಾಗಿಯೂ ಇನ್ನುಳಿದುದನ್ನು ಬೇಕರಿ ಪದಾರ್ಥಗಳು, ಸಿಹಿತಿನಿಸುಗಳು ಮತ್ತು ಇನ್ನಿತರ ಆಹಾರಗಳಲ್ಲಿ ಬಳಸಲಾಗುತ್ತಿದೆ.

ಜೇನುಕುಟುಂಬದಲ್ಲಿ ಕೆಲಸಗಾರ ನೊಣಗಳು ವಯಸ್ಸಿಗನುಗುಣವಾಗಿ ದೈನಂದಿನ ಕೆಲಸಗಳನ್ನು ಮಾಡುತ್ತವೆ. ಅವುಗಳಲ್ಲಿ ಆಹಾರ ಶೇಖರಣಾ ಜೇನುನೊಣಗಳು ಮಕರಂದ ಸಿಗುವ ಸಸ್ಯಗಳ ಹೂಗಳನ್ನು ಗುರುತಿಸಿ ತಮ್ಮ ಹೀರು ಕೊಳವೆಗಳ ಮೂಲಕ ಹೂಗಳಲ್ಲಿನ ಮಕರಂದವನ್ನು ಹೀರಿ ಮಧುಚೀಲದಲ್ಲಿ ತುಂಬಿಸಿಕೊಂಡು ಗೂಡುಗಳಿಗೆ ಹಿಂದಿರುಗುತ್ತವೆ. ಮಧುಚೀಲದಲ್ಲಿ ಮಕರಂದವು ಅನೇಕ ಕಿಣ್ವಗಳೊಂದಿಗೆ ಸಂಯೋಜನೆಯಾಗಿ ಪಚನಗೊಂಡ ಮಕರಂದವನ್ನು ಎರಿಯ ಷಡ್ಬುಜಾಕೃತಿಯ ಮೇಣದ ಕಣಗಳಲ್ಲಿಡುತ್ತವೆ. ಈ ಸಮಯದಲ್ಲಿ ಸ್ವಲ್ಪ ಪರಾಗವೂ ಮಕರಂದದೊಂದಿಗೆ ಬೆಳೆಯಬಹುದು. ಕಣಗಳಿಗೆ ತುಂಬಿಸಿದ ಪಚನಗೊಂಡ ಮಕರಂದವನ್ನು ಪುನಃ ಕಣಗಳಿಂದ ಮಧುಚೀಲಕ್ಕೆ ಮತ್ತು ಮಧು ಚೀಲದಿಂದ ಕಣಗಳಿಗೆ ಅನೇಕ ಬಾರಿ ನೊಣಗಳು ವರ್ಗಾಯಿಸುತ್ತವೆ. ರೆಕ್ಕೆ ಬೀಸುವುದರ ಮೂಲಕ ಪಚನಗೊಂಡ ಮಕರಂದದ ನೀರಿನ ಅಂಶವನ್ನು ಶೇ. ೧೮ ರಿಂದ ೨೪ ರ ನಡುವೆ ಇರಿಸುತ್ತವೆ. ಹೀಗೆ ಪರಿವರ್ತಿತ ಮಕರಂದದ ರೂಪವೇ ಜೇನುತುಪ್ಪ, ತಮ್ಮ ಕುಟುಂಬಕ್ಕೆ ಬೇಕಾಗುವಷ್ಟು ಜೇನುತುಪ್ಪವನ್ನು ಉಪಯೋಗಿಸಿ ಉಳಿದಿದ್ದನ್ನು ಎರಿಗಳ ಕಣಗಳಲ್ಲಿಯೇ ಇರಿಸಿ ಮೇಣದ ಕವಚದಿಂದ ಮುಚ್ಚುತ್ತವೆ ಮತ್ತು ಅಗತ್ಯವಿದ್ದಾಗ ಮುಚ್ಚಿದ ಮೇಣದ ಕವಚವನ್ನು ತೆಗೆದು ಉಪಯೋಗಿಸುತ್ತವೆ. ಈ ರೀತಿ ಜೇನುನೊಣಗಳು ಒಂದು ಕಿ. ಗ್ರಾಂ ಜೇನುತುಪ್ಪವನ್ನು ಉತ್ಪಾದಿಸಲು ಸುಮಾರು ೧೦ -೧೨ ಮಿಲಿಯನ್ ಹೂಗಳಿಂದ ಮಕರಂದವನ್ನು ತಂದು ಹದಮಾಡಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಜೇನುತುಪ್ಪದ ವಿಧಗಳು : ಜೇನುನೊಣಗಳ ಮಕರಂದ ಶೇಖರಣೆ ಮತ್ತು ಜೇನುತುಪ್ಪದ ರಾಸಾಯನಿಕ ಗುಣಗಳು ಪರಿಸರದಲ್ಲಿನ ಸಸ್ಯಗಳನ್ನು ಅವಲಂಭಿಸಿರುತ್ತವೆ. ಮಧುವನದ ಸುತ್ತಲೂ ಏಕ ಜಾತಿಯ ಸಸ್ಯಸಂಪತ್ತಿದ್ದು ಅವು ಮಕರಂದವನ್ನು ಶೇಖರಿಸಿ ಜೇನುತುಪ್ಪವನ್ನಾಗಿ ಪರಿವರ್ತಿಸುತ್ತವೆ ಈ  ರೀತಿಯ ಜೇನುತುಪ್ಪವನ್ನು ಏಕ ಬಗೆಯ ಸಸ್ಯಗಳ ಜೇನು ತುಪ್ಪವೆಂದೂ ಮತ್ತು ಒಂದೇ ಜಾತಿಯ ಸಸ್ಯಗಳ ಹೂಗಳು ಸಾಕಷ್ಟು ಸಿಗದೆ ಸುತ್ತಮುತ್ತಲಿನ ವಿವಿಧ ಜಾತಿಯ ಹೂಗಳಿಂದ ಮಕರಂದವನ್ನು ಶೇಖರಿಸಿ ಜೇನುತುಪ್ಪವನ್ನಾಗಿ ಪರಿವರ್ತನೆಗೊಂಡಲ್ಲಿ ಅದನ್ನು ಬಹು ಬಗೆಯ ಹೂಗಳ ಜೇನು ತುಪ್ಪವೆಂದು ಕರೆಯಲಾಗುತ್ತದೆ.

ಜೇನುತುಪ್ಪದ ಘಟಕಗಳು : ಜೇನುತುಪ್ಪವು ವಿಶಿಷ್ಟ ಬಣ್ಣ, ವಾಸನೆ ಮತ್ತು ರುಚಿಯಿಂದ ಕೂಡಿರುವುದಾರೂ ಆಯಾ ಸಸ್ಯಗಳ ಹೂಗಳ ಮಕರಂದ ಮತ್ತು ಪರಾಗದ ಗುಣವನ್ನು ಅವಲಂಭಿಸಿರುತ್ತದೆ. ಜೇನುತುಪ್ಪವು ಬಹುಪಾಲು ಸರಳ ಶರ್ಕರಗಳು ಮತ್ತು ತೇವಾಂಶದಿಂದ ಕೂಡಿರುತ್ತದೆ. ಇದರಲ್ಲಿನ ಸಕ್ಕರೆಯ ಸಾಮಾನ್ಯ ರೂಪಗಳೆಂದರೆ ಡೆಕ್ಸ್‌ಟ್ರೋಸ್‌, ಗ್ಲೂಕೋಸ್‌ಮತ್ತು ಲೆವುಲೋಸ್‌ಗಳು. ಇಷ್ಟೇ ಅಲ್ಲದೇ ಜೇನುತುಪ್ಪವು ಕಬ್ಬಿನ ಸಕ್ಕರೆಯಂತಹ ಸುಕ್ರೋಸ್ ಹಾಗೂ ಡೆಕ್ಸಿಟ್ರಿನ್‌ಗಳೆಂಬ ಪಿಷ್ಠ ಪದಾರ್ಥಗಳು, ಅಂಟುಗಳು, ಆಮ್ಲಗಳು ಕಿಣ್ವಗಳು, ಜೀವಸತ್ವಗಳು, ಪರಾಗದಕಣಗಳು, ಮೇಣದ ಕಣಗಳು, ಬಣ್ಣ ನೀಡುವ ವಸ್ತುಗಳನ್ನು ಒಳಗೊಂಡಿರುತ್ತದೆ. ಜೇನು ತುಪ್ಪದಲ್ಲಿ ಸಿಲಿಕಾನ್, ಕಬ್ಬಣ, ತಾಮ್ರ, ಮ್ಯಾಂಗನೀಸ್, ಕ್ಲೋರಿನ್, ಕ್ಯಾಲ್ಸಿಯಂ, ಪೊಟಾಸಿಯಂ, ಸೋಡಿಯಂ, ರಂಜಕ, ಗಂಧಕ, ಅಲ್ಯೂಮಿನಿಯಂ ಮತ್ತು ಮೆಗ್ನೇಷಿಯಂ ಇವುಗಳ ಸಂಯುಕ್ತ ಲೋಹವಸ್ತುಗಳು ಇರುತ್ತವೆ ಜೇನುತುಪ್ಪದಲ್ಲಿನ ಮುಖ್ಯ ಆಮ್ಲಗಳೆಂದರೆ ಪಾರ್ಮಿಕ್, ಮ್ಯಾಲಿಕ್ ಅಸಿಟಿಕ್, ಸಿಟ್ರಿಕ್, ಸಕ್ಸಿನಿಕ್, ಲ್ಯಾಕ್ಟಿಕ್ ಮತ್ತು ಅಮೈನೋ ಆಮ್ಲಗಳು. ಇದರಲ್ಲಿನ ವಿವಿಧ ಕಿಣ್ವಗಳೆಂದರೆ ಇನ್ವರ್ಟೇಸ್ ಡಯಾಸ್ಪೇಸ್ ಡಯಾಸ್ಪೇಸ್ ಮತ್ತು ಕ್ಯಾಟಲೇಸ್ ಆಗಿವೆ. ಇದರಲ್ಲಿ ಎ. ಬಿ – ಕಾಂಪ್ಲೆಕ್ಸ್, ಬಿ೧. ಬಿ೨ , ಬಿ೩ ಮತ್ತು ಸಿ ಜೀವಸತ್ವಗಳು ಮುಖ್ಯವಾದವು. ಸಸ್ಯಮೂಲ ಬಣ್ಣ ಕೊಡುವ ವಸ್ತುಗಳೆಂದರೆ ಕ್ಯಾರೋಟಿನ್, ಕ್ಸಾಂತೋಫಿಲ್ ಮುಂತಾದವು. ವಿವಿಧ ಸ್ಥಳ, ಹೂಗಳ ಮೂಲ ಹಾಗೂ ವಿವಿಧ ಪ್ರಭೇಧಗಳ ಜೇನುನೊಣಗಳಿಗನುಗುಣವಾಗಿ ಜೇನುತುಪ್ಪದ ರಾಸಾಯನಿಕ ಗುಣವು ವ್ಯತ್ಯಾಸಗೊಳ್ಳುತ್ತವೆ (ಕೋಷ್ಟಕ ೨೨ ಮತ್ತು ೨೪).

ಕೋಷ್ಟಕ ೨೨ : ಜೇನುತುಪ್ಪದಲ್ಲಿನ ಶೇಕಡಾವಾರು ಘಟಕಗಳು

ಕ್ರ.ಸಂ ಘಟಕಗಳು ಶೇಕಡಾವಾರು ಪ್ರಮಾಣ
ತೇವಾಂಶ ೧೮ -೨೪
ಸರಳ ಸಕ್ಕರೆಗಳು ೬೫ – ೭೫
ಸುಕ್ರೋಸ್‌ ೨೦. – ೫.೦
ಬೂದಿ ಮೂಲದ ಅಂಶಗಳು ೧.೦ – ೦.೩
ಆಮ್ಲಗಳು ೦.೦ – ೦.೧
ಸಸಾರಜನಕ ೦.೨೬ – ೦.೨೮
ಖನಿಜಗಳು ೦.೧೭ – ೦.೧೯
ಇತರೆ ಅಂಶಗಳು ೨.೨೧ – ೨.೪೦

ಜೇನುತುಪ್ಪ ತೆಗೆಯುವ ರೀತಿ :  ಜೇನುತುಪ್ಪವನ್ನು ತೆಗೆಯಲೆಂದೇ ಇರುವ ವಿಶೇಷವಾದ ಸ್ಥಳದಲ್ಲಿ ಜೇನುತುಪ್ಪವನ್ನು ತೆಗೆಯಬೇಕಾಗುತ್ತದೆ. ಇದರಿಂದಾಗಿ ಕೆಲಸಗಾರನೊಣಗಳು ಜೇನುತುಪ್ಪವನ್ನು ಹೀರಿ ನಂತರ ಚುಚ್ಚಿ ತೊಂದರೆ ಕೊಡುವುದನ್ನು ತಪ್ಪಿಸಬಹುದಾಗಿದೆ. ಜೇನುತುಪ್ಪವನ್ನು ಜೇನುಗೂಡುಗಳಿಂದ ಎರಡು ರೀತಿಗಳಲ್ಲಿ ತೆಗೆಯಬಹುದು ಕೈಯಿಂದ ಹಿಂದುಡಿಕೆ ಮತ್ತು ಯಂತ್ರದ ಸಹಾಯದಿಂದ ತೆಗೆಯುವುದು.

ಹಿಂಡುವುದು : ಜೇನುತುಪ್ಪವನ್ನು ನೈಸರ್ಗಿಕ ಜೇನುಗೂಡುಗಳಿಂದ ಎರಿಯನ್ನು ಕೈಯಿಂದಲೇ ಹಿಮಡಿ ತೆಗೆಯುವ ವಿಧಾನ ಪ್ರಾಚೀನ ಭಾಗವನ್ನು ಗುರುತಿಸಿ, ಮೊಟ್ಟೆ ಮರಿಗಳಿರುವ ಎರಿಯ ಭಾಗವನ್ನು ಜೇನುತುಪ್ಪದಿಂದ ಕೂಡಿದ ಭಾಗದಿಂದ ಬೇರ್ಪಡಿಸಿ, ಶುದ್ಧ ಪಾತ್ರೆಗಳಲ್ಲಿ ಶೇಖರಿಸಿ, ಶುದ್ಧವಾದ ತೆಳ್ಳಗಿನ ಬಟ್ಟೆಯಲ್ಲಿ ಹಿಮಡಿ ಅದರ ಸೂಕ್ಷ್ಮ ರಂಧ್ರಗಳ ಮೂಲಕ ಹೊರಬರುವಂತೆ ಮಾಡಲಾಗುತ್ತದೆ. ಈ ವಿಧಾನವನ್ನು ಪೆಟ್ಟಿಗೆಗಳಲ್ಲಿ ಸಾಕಲು ಸಾಧ್ಯವಿಲ್ಲದ ಹೆಜ್ಜೇನು ಮತ್ತು ಕೋಲುಜೇನು ಗೂಡುಗಳಿಂದ ಜೇನು ಶೇಖರಿಸಲು

ಉಪಯೋಗಿಸಲಾಗುತ್ತದೆಯಲ್ಲದೆ, ತುಡುವೆ ಜೇನಿನ ನೈಸರ್ಗಿಕ ಕುಟುಂಬಗಳಿಂದ ಜೇನುತುಪ್ಪ ತೆಗೆಯವಾಗಲೂ ಬಳಸಲಾಗುತ್ತದೆ. ಈ ವಿಧಾನದಿಂದ ಶೇಖರಿಸಿದ ಜೇನುತುಪ್ಪದಲ್ಲಿ ಹೆಚ್ಚಿನ ಮೇಣದ ಕಣಗಳು, ಪರಾಗದ ಕಣಗಳು ಮತ್ತು ಎರಿಯಲ್ಲಿನ ಕಲ್ಮಶಗಳು ಬೆರೆಯುವ ಸಂಭವವಿರುವುದಲ್ಲದೆ ಇಡೀ ಜೇನು ಎರಿಯು ಹಾಳಾಗುವುದರಿಂದ ಜೇನುಕುಟುಂಬಗಳ ಪಲಾಯನವಾಗುವುದಲ್ಲದೆ ಜೇನುತುಪ್ಪವನ್ನು ಸಂಗ್ರಹಿಸಲು ಹೊಸ ಎರಿಯನ್ನು ನಿರ್ಮಿಸಬೇಕಾಗುವುದರಿಂದ ಜೇನುನೊಣಗಳ ವೇಳೆ ಮತ್ತು ಶಕ್ತಿಯು ವ್ಯಯವಾಗುತ್ತದೆ.

ಯಂತ್ರದ ಮೂಲಕ ತೆಗೆಯುವುದು : ಯಂತ್ರದ ಮೂಲಕ ಎರಿಗಳಿಂದ ಜೇನುತುಪ್ಪ ತೆಗೆಯುವುದನ್ನು ಈ ಮುಂದಿನ ಹಂತಗಳಲ್ಲಿ ತೆಗೆದು ಸಂಗ್ರಹಿಸಲಾಗುತ್ತದೆ.

೧. ಜೇನುಕೋಣೆಯಲ್ಲಿನ ಹದವಾದ ಜೇನುತುಪ್ಪ ತುಂಬಿದ ಚೌಕಟ್ಟುಗಳ ಮೇಲಿನ ಜೇನುನೊಣಗಳನ್ನು ಬೇರ್ಪಡಿಸುವುದು.

೨. ಚೌಕಟ್ಟುಗಳನ್ನು ಸುಮಾರು ೩೨ -೩೫ ಡಿಗ್ರಿ ಸೆ. ನಲ್ಲಿ ಸ್ವಲ್ಪ ಕಾಲ ಇಡುವುದು.

೩. ಹರಿತವಾದ ಚಾಕುವಿನಿಮದ ಎರಿಯ ಕವಚವನ್ನು ಹೊರತೆಗೆಯುವುದು.

೪. ಯಂತ್ರದಲ್ಲಿಟ್ಟು ಕೇಂದ್ರಾಪಗಮನ ವಿಧಾನದಿಂದ ಜೇನುತುಪ್ಪವನ್ನು ತೆಗೆಯುವುದು.

೫. ಜೇನುತುಪ್ಪವನ್ನು ಶೋಧಿಸುವುದು

೬. ಬಾಟಲಿಗಳಲ್ಲಿ ತುಂಬಿಸುವುದು.

೭. ಜೇನುತುಪ್ಪವನ್ನು ಶೇಖರಿಸುವುದು.

ಜೇನು ತುಪ್ಪಕ್ಕೆ ಜೇನುನೋಣಗಳು ಆಕರ್ಷಿತಗೊಂಡು ತೊಂದರೆ ಕೊಡುವ ಸಾಧ್ಯತೆ ಇರುವುದರಿಂದ ಹದವಾದ ಜೇನು ಎರಿಗಳನ್ನು ಜೇನುತುಪ್ಪ ತೆಗೆಯಲೆಂದೇ ನಿರ್ಮಿಸಲಾದ  ಕೊಠಡಿಗೆ ಸಾಗಿಸಿ ಯಾವುದೇ ಜೇನುನೊಣಗಳು ಒಳ ಬರದಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಈ ವಿಧಾನವು ಆಧುನಿಕ ರೀತಿಯದಾಗಿದ್ದು ಜೇನುತುಪ್ಪ ತೆಗೆಯುವ ಯಂತ್ರಗಳನ್ನು ವಿವಿಧ ಜಾತಿಯ ಜೇನುನೊಣಗಳ ಎರಿಗಳ ಅಳತೆಗನುಗುಣವಾಗಿ ತಯಾರಿಸಲಾಗಿರುತ್ತದೆ. ಜೇನುತುಪ್ಪ ತೆಗೆಯುವ ಯಂತ್ರದಲ್ಲಿ ಸುಮಾರು ೪, ೬, ೮, ೧೦ ಸಂಖ್ಯೆಗಳ ಎರಿಗಳನ್ನಿಡುವ ಅವಕಾಶವಿರುತ್ತದೆ. ಹದವಾದ ಮೇಣದ ಕವಚ ಹಾಕಿದ ಪಕ್ವವಾದ ಜೇನು ಎರಿಯನ್ನು ಗುರುತಿಸಿ, ಕವಚವನ್ನು ಚಾಕುವಿನಿಂದ ತೆಗೆದು ಜೇನು ತೆಗೆಯುವ ಯಂತ್ರದಲ್ಲಿ ಇಡಲಾಗುತ್ತದೆ. ಜೇನು ಚೌಕಟ್ಟುಗಳಿಗಿರುವ ಜೇನುಯಂತ್ರದ ಭಾಗವನ್ನು ಒಂದು ನಿಮಿಷಕ್ಕೆ ಸುಮಾರು ೩೦೦ – ೩೫೦ ಸುತ್ತುಗಳಂತೆ ತಿರುಗಿಸಿದಾಗ ಕೇಂದ್ರಾಪಗಮನ ಚಲನೆಯ ಒತ್ತಡದಿಂದಾಗಿ ಜೇನುತುಪ್ಪವು ಹೊರಬಂದು ಪಾತ್ರೆಯಲ್ಲಿ ಶೇಖರಣೆಯಾಗುತ್ತದೆ. ಇದೇ ರೀತಿ ಎರಿಗಳನ್ನು ಮತ್ತೊಂದು ಕಡೆ ತಿರುಗಿಸಿ ಕೇಂದ್ರೋದ್ಯಮ ಚಲನೆಯ ಒತ್ತಡಕ್ಕೆ ಒಳಪಡಿಸಿದಾಗ ಜೇನುತುಪ್ಪವು ಪೂರ್ಣವಾಗಿ ಹೊರ ಬರುತ್ತದೆ. ಈ ವಿಧಾನದಿಂದ ತೆಗೆದ ಜೇನುತುಪ್ಪದಲ್ಲಿ ಮೇಣದ ಕಣಗಳ ಮತ್ತು ಕಲ್ಮಶಗಳ ಪ್ರಮಾಣವು ಕಡಿಮೆಯಾಗಿರುವುದರಲ್ಲದೆ ಜೇನು ಎರಿಯು ಹಾಳಾಗದೆ ಪುನಃ ಅದೇ ಎರಿಗಳನ್ನು ಜೇನುಶೇಖರಣೆಗೆ ಉಪಯೋಗಿಸಬಹುದಾಗಿದೆ.

ಜೇನುತುಪ್ಪದ ಶೇಖರಣೆ : ಜೇನುತುಪ್ಪದಲ್ಲಿ ಮೇಣದ ಚೂರುಗಳು, ಪರಾಗದ ಕಣಗಳು, ಕಲ್ಮಶಗಳು ಮುಂತಾದ ಅನಾವಶ್ಯಕ ವಸ್ತುಗಳಿರುತ್ತವೆ. ಆದುದರಿಂದ ಜೇನುತುಪ್ಪವನ್ನು ಹೆಚ್ಚು ಕಾಲ ಕೆಡದಂತೆ ಇಡಲು ಅನಾವಶ್ಯಕ ವಸ್ತುಗಳನ್ನು ಹೊರತೆಗೆಯಬೇಕಲ್ಲದೆ  ಅದರಲ್ಲಿ ಬೆಳೆಯುವ ನೊರೆ ಶಿಲೀಂಧ್ರವನ್ನು ನಾಶಪಡಿಸಬೇಕು. ಹರಳೀಕರಣವು ಜೇನುತುಪ್ಪದ ಸಾಮಾನ್ಯ ಗುಣವಾಗಿದ್ದು ಅದರಲ್ಲಿನ ಗ್ಲೂಕೋಸ್‌ಸಕ್ಕರೆ ಕಣಗಳು. ಪರಾಗ. ಮೇಣದ ಚೂರುಗಳು. ಇತರೆ ಕಲ್ಮಶಗಳು, ತೇವಾಂಶ ಮುಂತಾದವು  ಹರಳುಗಟ್ಟುವಂತೆ ಮಾಡುತ್ತವೆ. ಅಲ್ಲದೆ ಹರಳುಗಟ್ಟುವಿಕೆಯ ಗುಣವು ಮಧುವನದ ಸುತ್ತಲಿನ ಸಸ್ಯಗಳ ಹೂಗಳು, ಪರಿಸರದ ಉಷ್ಣತೆ, ತೇವಾಂಶ ಮುಂತಾದವುಗಳನ್ನು ಸಹ ಅವಲಂಭಿಸಿರುತ್ತದೆ ಜೇನುತುಪ್ಪ ಹುಳಿಯಾಗುವಿಕೆ ಅದರಲ್ಲಿನ ನೊರೆ ಶಿಲೀಂಧ್ರದ ಪ್ರಮಾಣ, ದ್ವಿಗುಣಗೊಳ್ಳುವ ವೇಗ, ಉಷ್ಣತೆ, ತೇವಾಂಶ ಮತ್ತು ಶೇಖರಿಸುವ ಸ್ಥಿತಿಗಳನ್ನು ಅವಲಂಭಿಸಿರುತ್ತದೆ. ಇಂಗಾಲದ ಡೈ ಆಕ್ಸೈಡನ್ನು ಧೂಪಕ ರೂಪದಲ್ಲಿ ಹೊರಸೂಸಿ ಅಸಿಟಿಕ್ ಆಮ್ಲವನ್ನಾಗಿ ಪರಿವರ್ತನೆ ಮಾಡುವುದರಿಂದ ಜೇನುತುಪ್ಪ ಹುಳಿಯಾಗುತ್ತದೆ.

ಕೋಷ್ಟಕ : ಭಾರತದಲ್ಲಿ ದೊರೆಯುವ ವಿವಿಧ ಜೇನುತುಪ್ಪಗಳ ಗುಣಗಳು

ಗುಣಗಳು

ಭಾರತದಲ್ಲಿ ಯಂತ್ರದಿಂದ ತೆಗೆದ ಜೇನುತುಪ್ಪ

ಭಾರತದಲ್ಲಿ ಎರಿಗಳನ್ನು ಹಿಂಡಿ ತೆಗೆದ ಜೇನುತುಪ್ಪ

ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆಯುವ ಜೇನುತುಪ್ಪ

ಉನ್ನತ ದರ್ಜೆ

ದರ್ಜೆ

ಶ್ರೇಷ್ಠ  ದರ್ಜೆ

೧. ಸಾಮಾನ್ಯ ಮೂಲ ಗುರುತ್ವಾಕರ್ಷಣೆ ೨೭ ಡಿ.ಸೆ ೧.೪೧ ೧.೩೯   ೧.೩೭ ೧.೩೭ ೧.೩೮
೨. ತೇವಾಂಶ (ತೂಕಕ್ಕನುಗುಣವಾಗಿ) ೨೦ ೨೨   ೨೫ ೨೫ ೨೧
೩. ಪೂರ್ಣ ಇಳಿಮುಖ ಸಕ್ಕರೆ (ತೂಕಕ್ಕನುಗುಣವಾಗಿ) ೭೦ ೬೫   ೫೫ ೬೫ ೬೫
೪. ಸಕ್ಕರೆ ಅಂಶ (ತೂಕಕ್ಕನುಗುಣವಾಗಿ) ೫.೦ ೫.೦   ೫.೦ ೫.೦ ೫.೦
೫. ಶೇಕಡ ಬೂದಿ (ತೂಕಕ್ಕನುಗುಣವಾಗಿ) ೦.೫ ೦.೫   ೦.೫ ೦.೫ ೦.೬
೬. ಆಮ್ಲೀಯ ಗುಣ (ತೂಕಕ್ಕನುಗುಣವಾಗಿ) ೦.೨ ೦.೨   ೦.೨ ೦.೨ ೦.೨
೭. ಪರಾಗದ ಸಂಖ್ಯೆ / ಗ್ರಾಂ ಜೇನುತುಪ್ಪದಲ್ಲಿ   – ೫೦೦೦
೮. ಆಪ್ಟಿಕಲ್ ಸಾಂದ್ರತೆ (೬೦೦ ನ್ಯಾ.ಮೀ. ನಲ್ಲಿ)   – ೦.೩
೯. ಫ್ರುಕ್ಟೋಸ್ ಮತ್ತು ಗ್ಲೂಕೋಸ್‌ಗಳ ಸರಾಸರಿ ಅನುಪಾತ ೧.೦ ೧.೦   ೧.೦ ೧.೦ ೧.೦

ಭಾರತೀಯ ಮಾನಕ ಬ್ಯೂರೋ, ೧೯೯೭

ಜೇನುತುಪ್ಪದ ಹರಳುಗಟ್ಟುವಿಕೆಯನ್ನು ತಡೆಗಟ್ಟಲು ನೀರಿನ ಪಾತ್ರೆಯಲ್ಲಿಟ್ಟು ಕಡಿಮೆ ಶಾಖದಲ್ಲಿ ಕಾಯಿಸಲಾಗುತ್ತದೆ. ಆದರೆ ಜೇಣುತುಪ್ಪವನ್ನು ಹೆಚ್ಚಿಗೆ ಕಾಯಿಸುವುದರಿಂದ ಅದರ ರುಚಿ, ಬಣ್ಣ ಮತ್ತು ವಾಸನೆ ಹಾಳಾಗಿ ಅದರಲ್ಲಿನ ಹೈಡ್ರಾಕ್ಸಿ ಮೀಥೈಲ್ ಪರ್ ಪ್ಯೂರಾಲ್ (ಎಚ್.ಎಂ.ಎಫ್) ಅಂಶವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಜೇನುತುಪ್ಪವು ಕೆಡುವ ಸಾಧ್ಯತೆ ಇರುತ್ತದೆ. ಜೇನುತುಪ್ಪದಲ್ಲಿನ ನೊರೆ ಶಿಲೀಂಧ್ರವನ್ನು ನಾಶಮಾಡಲು, ಕೆಡುವುದನ್ನು ತಡೆಗಟ್ಟಲು ಮತ್ತು ನೈಸರ್ಗಿಕ ವಾಸನೆ, ಬಣ್ಣ ಮತ್ತು ರುಚಿಯನ್ನು ಕಾಪಾಡಲು ಕಡಿಮೆ ಉಷ್ಣತೆಯಲ್ಲಿ ಹೆಚ್ಚಿನ ಸಮಯದವರೆಗೆ ನೇರವಾಗಿ ಅಥವಾ ನೀರಿನಲ್ಲಿ ಪರೋಕ್ಷವಾಗಿ ಕಾಯಿಸುವುದು ಅಗತ್ಯ. ಈ ರೀತಿ ಶುದ್ಧೀಕರಿಸುವ ವಿಧಾನವನ್ನು ಜೇನುತುಪ್ಪದ ಸಂಸ್ಕರಣೆ ಎಂದು ಕರೆಯುವರು. ಜೇನುತುಪ್ಪದ ಸಂಸ್ಕರಣೆಯ ವಿವಿಧ ಹಂತಗಳೆಂದರೆ ಕಾಯಿಸುವುದು, ಕರಗಿಸುವುದು, ಶೋಧಿಸುವುದು, ಶುದ್ಧೀಕರಿಸುವುದು, ತೇವಾಂಶ ತಗ್ಗಿಸುವುದು ಮತ್ತು ಜೇನುತುಪ್ಪವನ್ನು ಸೀಸೆಗಳಲ್ಲಿ ಕೆಡದಂತೆ ಶೇಖರಿಸುವುದಾಗಿವೆ.

ಕೋಷ್ಟಕ ೨೪ : ವಿವಿಧ ಜೇನುತುಪ್ಪ ಮಾದರಿಗಳ ರಾಸಾಯನಿಕ ಘಟನೆಗಳು

ಜೇನುತುಪ್ಪದ ಮಾದರಿ

ಶೇ
ತೇವಾಂಶ

ಶೇ
ಗ್ಲುಕೋಸ್

ಶೇ
ಹಣ್ಣಿನ
ಸಕ್ಕರೆ

ಶೇ
ಸಾಮಾನ್ಯ ಸಕ್ಕರೆ

ಶೇ
ಬೂದಿ

ಶೇ
ಫಾರ್ಮಿಕ ಆಮ್ಲ

೧. ಎಲ್ಲಾ ಕಡೆ ದೊರೆಯುವ ಸಾಮಾನ್ಯ ತರದ್ದು ೧೯.೯ ೩೨.೮೨ ೩೭.೯೫ ೧.೬೬ ೦.೨೯ ೦.೧೬
೨. ಕೊಡಗು ೩೫.೬೮ ೩೫.೬೮ ೩೯.೩ ೦.೬೮ ೦.೧೭ ೦.೨೦
೩. ಬೆಳಗಾವಿ ೨೨.೯೪ ೨೭.೧೫ ೨೯.೭೭ ೩.೨೨ ೦.೫೩ ೦.೨೫
೪. ಮಹಾಬಲೇಶ್ವರ ೧೯೬.೨ ೩೦.೦೮ ೪೧.೩೭ ೧.೬೦ ೦.೨೧ ೦.೧೩
೫. ಕೊಯಮತ್ತೂರ(ಹತ್ತಿ ಹೂವಿನದು) ೨೧.೯೯ ೬೯.೬೮ ೬.೯೬ ೦.೨೨ ೦.೦೭
೬. ಕೊಯಮತ್ತೂರು (ಬೇವಿನದು) ೨೨.೮೫ ೬೯.೧೬ ೭.೪೬ ೦.೦೬ ೦.೧೬
೭. ಪಂಜಾಬ್ (ಅಂಟುವಾಳದ್ದು) ೧೭.೦ ೨೮.೧ ೪.೯೪ ೦.೧೪ ೦.೧೮
೮. ಅಮೆರಿಕಾ (೧೯ ಮಾದರಿಗಳ ಸರಾಸರಿ) ೧೭.೭ ೨೪.೦೨ ೪೦.೫೦ ೧.೯ ೦.೧೮
೯. ಬ್ರಿಟನ್ ೧೮.೪೮ ೭೪.೪೩ ೧.೫೨ ೦.೧೫

ಜೇನುತುಪ್ಪವು ಹೆಚ್ಚಿನ ಸಾಂದ್ರತೆಯಿಂದ ಕೂಡಿರುವುದರಿಂದ ಮತ್ತು ಶೋಧಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ೪೦ – ೪೫ ಡಿಗ್ರಿ ಸೆ. ಉಷ್ಣತೆಯಲ್ಲಿ  ಸ್ವಲ್ಪ ಸಮಯ ಕಾಯಿಸಬೇಕಾಗುತ್ತದೆ. ಅದರಲ್ಲಿನ ಬುರುಗು ಶಿಲೀಂಧ್ರವನ್ನು ಹಾಳು ಮಾಡಲು ೬೫ ಡಿಗ್ರಿ ಸೆ. ಉಷ್ಣತೆಯಲ್ಲಿ ೨೦ ನಿಮಿಷಗಳು ಕಾಯಿಸಬೇಕಾಗುತ್ತದೆ. ಹೆಚ್ಚು ಹರಳೀಕರಣವಿರುವ ಜೇನುತುಪ್ಪವನ್ನು ೭೦ ಡಿಗ್ರಿ ಸೆ. ಉಷ್ಣತೆಯವರೆಗೂ ಕಾಯಿಸಬಹುದಾದರೂ ಉಷ್ಣತೆಯನ್ನು ಹೆಚ್ಚಿಸಿದಲ್ಲಿ ಕಾಯಿಸುವ ವೇಳೆಯನ್ನು ಕಡಿಮೆ ಮಾಡಬೇಕಾಗುತ್ತದೆ. (ಕೋಷ್ಟಕ. ೨೫).

ಕಪ್ಪು ಬಣ್ಣದಿಂದ ಕೂಡಿದ ಜೇನುತುಪ್ಪವನ್ನು ೬೫ ಡಿಗ್ರಿ ಸೆ. ಗಿಂತ ಹೆಚ್ಚು ಕಾಯಿಸಿದಲ್ಲಿ ಇನ್ನೂ ಕಪ್ಪಾಗಿ ಅಹಿತಕರ ವಾಸನೆಯನ್ನು ಉಂಟು ಮಾಡುವುದರಿಂದಲೂ, ಅದರಲ್ಲಿನ ರಾಸಾಯನಿಕ ಎಚ್.ಎಂ.ಎಫ್ ನ ಅಂಶವು ಹೆಚ್ಚಾಗಿ ಆರೋಗ್ಯಕ್ಕೆ ಹಣಾಇಯಾಗುತ್ತದೆ. ಈ ರೀತಿಯ ಜೇನುತುಪ್ಪದ ಉತ್ಪಾದನೆಯು ೧೯೭೪ ರ ಆಹಾರ ಕಲಬೆರಕೆ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ.

ಜೇನುತುಪ್ಪವನ್ನು ಮುಚ್ಚಳವಿಲ್ಲದ ಪಾತ್ರೆಗಳಲ್ಲಿ ಕಾಯಿಸುವುದರಿಂದ ಅದರ ನೈಸರ್ಗಿಕ ವಾಸನೆ. ಬಣ್ಣ ಮುಂತಾದವು ಬದಲಾಗುವ ಸಂಭವವಿರುತ್ತದೆ. ಇದು ಹೆಚ್ಚಿನ ಸಾಂದ್ರತೆಯಿಂದ ಕೂಡಿರುವುದರಿಂದ ಸಮವಾಗಿ ಬಿಸಿ ತಗುಲುವ ಸಂಭವ ಕಡಿಮೆಯಾಗುವುದರಿಂದ ಜೇನುತುಪ್ಪವನ್ನು ಉಚ್ಚಳವಿರುವ ಪಾತ್ರೆಗಳಲ್ಲಿ ಕಾಯಿಸಬೇಕು ಮತ್ತು ಕಾಯಿಸುವಾಗ ಆಗಿಂದಾಗ್ಗೆ ತಿರುವುತ್ತಿರಬೇಕು. ನಂತರ ಜೇನುತುಪ್ಪವನ್ನು ಸುಮಾರು ೧೫ ಡಿಗ್ರಿ ಸೆ. ನಲ್ಲಿ ಶೇಖರಿಸುವುದರಿಂದ ಕೆಡದಂತೆ ಹೆಚ್ಚು ಕಾಲ ಇಡಬಹುದು.

ಜೇನುತುಪ್ಪವನ್ನು ಕಡಿಮೆ ಉಷ್ಣತೆಯಾದ ಸುಮಾರು ೧೧ ಡಿಗ್ರಿ ಸೆ. ನಲ್ಲಿ ಸಂಗ್ರಹಿಸುವುದರಿಂದ ಬುರುಗು ಶಿಲೀಂಧ್ರದ ಬೆಳೆಯುವಿಕೆಯನ್ನು ನಿಯಂತ್ರಿಸಿ ಹುಳಿಯಾಗುವಿಕೆಯನ್ನು ತಡೆಗಟ್ಟಬಹುದು. ಇದನ್ನು ಶೋಧಿಸಲು ಒಮದು ಅಂಗುಲಕ್ಕೆ ಸುಮಾರು ೮ – ೧೨ ಸಣ್ಣ ರಂಧ್ರಗಳಿಂದ ಕೂಡಿದ ಶೋಧಕಗಳನ್ನು ಉಪಯೋಗಿಸುವುದು ಸೂಕ್ತ. ಈ ರೀತಿ ಶೋಧಿಸಿದ ಜೇನುತುಪ್ಪವನ್ನು ಕ್ರಮವಾಗಿ ೩೦, ೫೦ ಮತ್ತು ೮೦ ಎಳೆಗಳ ಶೋಧಕಗಳ ಮೂಲಕ ಶೋಧಿಸಬೇಕಾಗುತ್ತದೆ. ಜೇನುತುಪ್ಪವನ್ನು ಶೇಖರಿಸುವ ಬಾಟಲುಗಳು ಗಾಳಿಯಾಡದೆ ಕಬ್ಬಿಣದ ಲೋಹಗಳಿಂದ ಕೂಡಿರಬಾರದು. ಆದುದರಿಂದ ಪ್ಲಾಸ್ಟಿಕ ಬಾಟಲುಗಳು ಮತ್ತು ಗಾಜಿನ ಬಾಟಲುಗಳು ಉತ್ತಮ. ಜೇನುತುಪ್ಪ ಶೇಖರಣೆಗೆ ಉಪಯೋಗಿಸುವ ಬಾಟಲುಗಳ ಮೇಲೆ ಸರಬರಾಜುದಾರರ ಹೆಸರು ಮತ್ತು ವಿಳಾಸ, ತೂಕ. ಅಡಕದ ಪ್ರಮಾಣ, ಸಿದ್ಧಪಡಿಸಿದ ದಿನಾಂಕ, ವಾಯಿದೆಯ ಸಮಾಪ್ತ ದಿನಾಂಕ ಹಾಗೂ ಆಮದು ಮಾಡಿದ್ದಲ್ಲಿ ಅದರ ಸ್ಥಳ ಮುಂತಾದವುಗಳನ್ನು ನಮೂದಿಸಿ ಮಾರಾಟ ಮಾಡಬೇಕು.

ಸಂಸ್ಕರಿಸಿ ಶೇಖರಿಸಿರುವ ಶುದ್ಧ ಜೇನುತುಪ್ಪ

 ಆಗ್‌ಮಾರ್ಕನ್ ನಿಯಮಗಳ ಆಧಾರದ ಮೇಲೆ ಜೇನುತುಪ್ಪದಲ್ಲಿನ ತೇವಾಂಶದ ಪ್ರಮಾಣವನ್ನನುಸರಿಸಿ ಜೇನುತುಪ್ಪವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಶೆ. ೨೦ ರಷ್ಟು ತೇವಾಂಶ ಹೊಂದಿದ ವಿಶೇಷ ದರ್ಜೆ, ಶೇ ೨೨ ರಷ್ಟು ತೇವಾಂಶ ಹೊಂದಿದ ಎ ದರ್ಜೆ ಮತ್ತು ಶೇ ೨೫ ರಷ್ಟು ತೇವಾಂಶ ಹೊಂದಿದ ನಿರ್ದಿಷ್ಟ ದರ್ಜೆಗಳಾಗಿವೆ. ಭಾರತೀಯ ಮಾನಕ ಬ್ಯೂರೊ ನಿಗದಿ ಪಡಿಸಿದ ವಿವಿಧ ದರ್ಜೆಯ ಜೇನುತುಪ್ಪಗಳ ಗುಣಧರ್ಮಗಳನ್ನು ಕೋಷ್ಟಕ ೨೩ ರಲ್ಲಿ ನೀಡಲಾಗಿದೆ.

ಜೇನುತುಪ್ಪವನ್ನು ಅದರಲ್ಲಿನ ಹೈಡ್ರಾಕ್ಸಿ ಮೀಥೈಲ್ ಪರ‍್ಪ್ಯೂರಾಲ್ (ಎಚ್.ಎಮ್.ಎಫ್) ಎಂಬ ರಾಸಾಯನಿಕ ಅಂಶವನ್ನು ಆಧರಿಸಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಒಂದು ಗ್ರಾಂ ಜೇನುತುಪ್ಪದಲ್ಲಿ ಶೂನ್ಯದಿಂದ ಸುಮಾರು ೧೦ ಮೈಕ್ರೋ ಗ್ರಾಂ ಎಚ್.ಎಮ್.ಎಫ್. ಅಂಶವಿದ್ದಲ್ಲಿ ಒಂದನೇ ದರ್ಜೆಯ ಜೇನುತುಪ್ಪವೆಂದೂ, ೧೧ ರಿಂದ ೨೦ ಮೈಕ್ರೋ ಗ್ರಾಂಗಳಷ್ಟು ಇದ್ದಲ್ಲಿ ಎರಡನೇ ದರ್ಜೆಯ ಜೇನುತುಪ್ಪವೆಂದೂ ಮತ್ತು ೨೧ – ೩೦ ಮೈಕ್ರೋ ಗ್ರಾಂಗಳಷ್ಟು ಎಚ್.ಎಮ್.ಎಫ್ ಅಂಶವಿದ್ದಲ್ಲಿ ಮೂರನೇ ದರ್ಜೆಯ ಜೇನುತುಪ್ಪವೆಂದೂ ಕರೆಯಲಾಗುತ್ತದೆ. ಇದೇ ರೀತಿ ಜೇನುತುಪ್ಪದಲ್ಲಿ ಎಚ್.ಎಮ್.ಎಫ್. ಅಂಶವು ೩೦ ಮೈ. ಗ್ರಾಂಗಳಿಗೂ ಮೀರಿದಲ್ಲಿ ಅದನ್ನು ಅಶುದ್ಧ ಜೇನುತುಪ್ಪವೆಂದು ವಿಂಗಡಿಸಲಾಗಿದೆ.

ಜೇನುತುಪ್ಪದ ಸೇವನೆ ದೇಶದಿಂದ ದೇಶಕ್ಕೆ ವ್ಯತ್ಯಾಸಗೊಳ್ಳುತ್ತಿದ್ದು ಜರ್ಮನಿಯಲ್ಲಿ ವಾರ್ಷಿಕ ಒಬ್ಬರು ಸರಾಸರಿ ಒಂದು ಕಿ. ಗ್ರಾಂ. ಜೇನುತುಪ್ಪವನ್ನು ಸೇವಿಸಿದರೆ, ಅಮೆರಿಕೆಯಲ್ಲಿ ೫೦೦ ಗ್ರಾಂ ಮತ್ತು ಭಾರತದಲ್ಲಿ ಕೇವಲ ೫ ಗ್ರಾಂ ಜೇನುತುಪ್ಪವನ್ನು ಮಾತ್ರ ಸೇವಿಸಲಾಗುತ್ತಿದೆ.

ಜೇನುತುಪ್ಪವು ಶರ್ಕರಗಳಿಂದ ಕೂಡಿದ್ದು ಉಷ್ಣ ಮತ್ತು ಶಕ್ತಿಯ ಮುಖ್ಯ ಮೂಲವಾಗಿದೆ. ಒಂದು ಕಿ.ಗ್ರಾಂ. ಜೇನುತುಪ್ಪದ ಸರಾಸರಿ ಶಕ್ತಿ ೬೫ ಮೊಟ್ಟೆಗಳಿಗೆ ಸಮವಾಗುತ್ತದೆ ಇತರ ಹೋಲಿಕೆಗಳೆಂದರೆ ಇದರ ಒಂದು ಕಿ. ಗ್ರಾಂ. ಹಾಲು ಅಥವಾ ೧೨ ಕಿ. ಗ್ರಾಂ ಸೇಬು ಅಥವಾ ೨೦ ಕಿ.ಗ್ರಾಂ ಕ್ಯಾರೆಟ್‌ಗಳಿಗೆ ಸಮವಾಗಿರುತ್ತದೆ.

ಕೋಷ್ಟಕ ೨೫ : ಜೇನುತುಪ್ಪ ಸಂಸ್ಕರಣೆ ಮತ್ತು ತೇವಾಂಶ ತಗ್ಗಿಸುವಿಕೆಯಲ್ಲಿನ ವಿವಿಧ ಹಂತಗಳು

ಕಚ್ಚಾ ಜೇನುತುಪ್ಪ –> ಜೇನುತುಪ್ಪ ಹರಿಯುವಿಕೆ      –> ಶೋಧಿಸುವಿಕೆ –>  ಸಂಸ್ಕರಣೆ

ಶೂನ್ಯಭಾಗ (ವ್ಯಾಕ್ಯೂಮ್) ತೆಗೆಯುವಿಕೆ <– ಘನೀಕರಣ <– ತೇವಾಂಶ ತಗ್ಗಿಸುವಿಕೆ |

ಶೇಖರಣೆ <– ಬಾಟಲಿಗೆ ಹಾಕುವುದು <– ಸ್ಥಿರವಾಗುವಿಕೆ <– ತಂಪು ಮಾಡುವಿಕೆ

ಜೇನುತುಪ್ಪದ ಉಪಯೋಗಗಳು : ಇತಿಹಾಸದಾದ್ಯಂತ ಜೇನುತುಪ್ಪವು ಮನುಷ್ಯನ ಪ್ರಮುಖ ಸಿಹಿತಿನಿಸುಗಳಲ್ಲಿ ಒಂದಾಗಿದ್ದು ಅತಿ ಬೇಗ ಶರೀರಕ್ಕೆ  ಶಕ್ತಿಯನ್ನು ಒದಗಿಸುವ ಮೂಲವೆಂದೂ ಪರಿಗಣಿಸಲಾಗಿದೆ. ೧೦೦ ಗ್ರಾಂ ಜೇನು ತುಪ್ಪದಿಂದ ಸುಮಾರು ೩೫೦ ಕ್ಯಾಲರಿಗಳಷ್ಟು ಶಕ್ತಿ ದೊರೆಯುತ್ತಿದ್ದು ಇದರಲ್ಲಿರುವ ಕಿಣ್ವಗಳು ದೇಹದ ಪಚನಕ್ರಿಯೆಯನ್ನು ಹೆಚ್ಚಿಸುತ್ತವೆ. ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ಆರೋಗ್ಯ, ಶಕ್ತಿ ಮತ್ತು ಆಯಸ್ಸು ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಡಿಸಲಾಗಿದೆ. ಜೇನು ತುಪ್ಪವನ್ನು ನೇರವಾಗಿ ತೆಗೆದುಕೊಳ್ಳುವುದು ಸಾಮಾನ್ಯವಾದರೂ, ತಿನಿಸುಗಳ ತಯಾರಿಕೆ, ಕೇಕ್‌ಹಾಗೂ ಬ್ರೆಡ್‌ಗಳು ಕೆಡದಂತೆ ಹೆಚ್ಚು ಸಮಯ ಉಳಿಸಿ ಕೊಳ್ಳುವುದಕ್ಕೂ ಬಳಸಲಾಗುತ್ತದೆಯಲ್ಲದೆ ಹಣ್ಣಿನ ರಸಗಳು ಹಾಗೂ ದೀರ್ಘಕಾಲ ಇಡಲಾಗುವ ಇತರ ಆಹಾರ ಪದಾರ್ಥಗಳಲ್ಲಿಯೂ ಸಕ್ಕರೆಗೆ ಬದಲಾಗಿ ಆಹಾರ ರಕ್ಷಕದಂತೆ ಬಳಸಲಾಗುತ್ತದೆ. ಇದು ವೈನ್‌ಮತ್ತು ಬೀರ್‌ನಂತಹ ಮಾದಕಪಾನೀಯ ತಯಾರಿಕೆಯಲ್ಲೂ ಅವಶ್ಯಕವಾಗಿದ್ದು, ಧಾರ್ಮಿಕ ಪೂಜೆ ಮತ್ತು ಪುನಸ್ಕಾರಗಳಲ್ಲಿ ಉಪಯೋಗಿಸುತ್ತಾರೆ.

ಜೇನುತುಪ್ಪವನ್ನು ಪುರಾತನ ಕಾಲದಿಂದಲೂ ಆಯುರ್ವೆದ, ಹೋಮಿಯೋಪತಿ ಹಾಗೂ ಯುನಾನಿ ಔಷಧಿಗಳಲ್ಲಿ ಬಹುವಾಗಿ ಬಳಸಲಾಗುತ್ತಿದ್ದು ಇದು ಮನುಷ್ಯನ ರಕ್ತವನ್ನು ಶುದ್ಧೀಕರಿಸುವುದಲ್ಲದೇ ಕಣ್ಣನ್ನು ಶುಚಿಗೊಳಿಸುವ ಶಕ್ತಿಯನ್ನು ಪಡೆದಿದೆ. ಶೀತ ಕೆಮ್ಮು, ಜ್ವರ, ಗಂಟಲುಉರಿ ಮತ್ತು ಸುಟ್ಟಗಾಯಗಳನ್ನು ಉಪಶಮನಗೊಳಿಸುವ ಇದು ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ನಂಜುರೋಗ ನಿರೋಧಕ ಗುಣಗಳನ್ನೂ ಹೊಂದಿದೆ. ಇದು ಶ್ವಾಸಕಾಂಗಗಳ ಮತ್ತು ಜೀರ್ಣಾಂಗಗಳ ಅನೇಕ ತೊಂದರೆಗಳನ್ನು ನಿವಾರಿಸುವುದಲ್ಲದೆ ಕ್ಷಯ ರೋಗ, ರಕ್ತದ ಒತ್ತಡ, ಮಲಬದ್ಧತೆ ಮುಂತಾದ ರೋಗಗಳನ್ನು ಹತೋಟಿಯಲ್ಲಿಡುತ್ತದೆ. ಜೇನು ತುಪ್ಪವು ದೇಹದ ತೂಕ ಮತ್ತು ಆರೋಗ್ಯವನ್ನು ವೃದ್ಧಿಸುವುದಲ್ಲದೆ ಗಾಯಗಳನ್ನು ಗುಣಪಡಿಸಲು, ಡ್ರೆಸ್ ಮಾಡಲು ಉಪಯೋಗಿಸಲಾಗುತ್ತದೆ. ಇದೇ ರೀತಿ ಜೇನು ತುಪ್ಪದಿಂದ ಹಲ್ಲಿನ ಅನೇಕ ರೋಗಗಳು ಗುಣ ಮುಖವಾಗಿರುವುದು ಕಂಡು ಬಂದಿದ್ದು ಸಾಲ್ಮೋನೆಲ್ಲಾ. ಶಿಗೆಲ್ಲಾ. ಕ್ಲೆಬ್ಸಿಯೆಲ್ಲಾ ಮುಂತಾದ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುವುದರಿಂದ ಇದು ಉತ್ತಮ ನೈಸರ್ಗಿಕ ಔಷಧಿವಾಗಿದೆ.

ಜೇನುತುಪ್ಪದ ಗುಣಮಟ್ಟ ಪರೀಕ್ಷಿಸುವಿಕೆ :  ಜೇನುತುಪ್ಪದ ಗುಣಲಕ್ಷಣಗಳನ್ನು ಅನೇಕ ರಾಸಾಯನಿಕ ಪರೀಕ್ಷೆಗಳಿಂದ ದೃಢಪಡಿಸಬಹುದಾದರೂ ಈ ಮುಂದಿನ ಶಾಸ್ತ್ರೀಯ ವಿಧಾನಗಳಿಂದ ಸ್ಥಳದಲ್ಲಿಯೇ ಪರೀಕ್ಷಿಸಬಹುದಾಗಿದೆ :

೧. ಗಾಜಿನ ಜಾಡಿಯಲ್ಲಿನ ಶುದ್ಧವಾದ ನೀರಿನಲ್ಲಿ ಒಂದು ತೊಟ್ಟು ಜೇನುತುಪ್ಪವನ್ನು ಹಾಕಿದಾಗ ಜಾಡಿಯ ತಳದಲ್ಲಿ ತಲುಪಿದರೆ ಶುದ್ದ ತುಪ್ಪವೆಂದೂ ಮತ್ತು ಜಾಡಿಯ ತಳ ತಲುಪುವ ಮಾರ್ಗದಲ್ಲಿ ಕರಗಿದಲ್ಲಿ ಅಶುದ್ಧ ಜೇನುತುಪ್ಪವೆಂದು ಪರಿಗಣಿಸುವುದು.

೨. ಶೇಕಡಾ ೧೦ : ೩ ರ ನೀರು ಮತ್ತು ಅಯೋಡಿನ್‌ನಿಂದ ಕೂಡಿದ ದ್ರಾವಣಕ್ಕೆ ೩ – ೪ ತೊಟ್ಟು ಜೇನುತುಪ್ಪವನ್ನು ಸೇರಿಸಿದಲ್ಲಿ, ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದಿದ್ದಲ್ಲಿ ಶುದ್ಧತುಪ್ಪವೆಂದು, ಕೆಂಪು ಮಿಶ್ರಿತ ಬಣ್ಣಕ್ಕೆ ತಿರುಗಿದಲ್ಲಿ ಅಶುದ್ಧವೆಂದು ತಿಳಿಯುವುದು.

೩. ಜೇನುತುಪ್ಪಕ್ಕೆ ಬೆಂಕಿಯನ್ನು ಅಂಟಿಸಿದಾಗ ಹತ್ತಿಕೊಂಡು ಉರಿದಲ್ಲಿ ಶುದ್ದತುಪ್ಪವೆಂದು ಪರಿಗಣಿಸಲಾಗುತ್ತದೆ.

೪. ಜೇನುತುಪ್ಪವನ್ನು ಬಟ್ಟೆಯ ತುಣಿಕಿನೊಂದಿಗೆ ಸುಟ್ಟಾಗ ಶಬ್ದವಿಲ್ಲದೇ ಉರಿದಲ್ಲಿ ಶುದ್ಧಜೇನುತುಪ್ಪವೆಂದೂ, ಶಬ್ದದೊಂದಿಗೆ ಉರಿದಲ್ಲಿ ಅಶುದ್ಧವೆಂದೂ ಪರಿಗಣಿಸಬಹುದು.

೫. ಎರಡು ತೊಟ್ಟು ಜೇನುತುಪ್ಪವನ್ನು ಶುದ್ಧ ಬಿಳಿಯಬಟ್ಟೆಯ ಮೇಲೆ ಹಾಕಿ ಸ್ವಲ್ಪ ಹೊತ್ತಿನ ನಂತರ ಒಗೆದಾಗ ತುಪ್ಪವು ಶುದ್ಧವಾದಲ್ಲಿ ಯಾವುದೇ ಕಲೆಯು ಉಳಿಯುವುದಿಲ್ಲ. ಆದರೆ ಜೇನುತುಪ್ಪವು ಅಶುದ್ಧವಿದ್ದಲ್ಲಿ ಬಟ್ಟೆಯ ಮೇಲೆ ಕಲೆಯು ಉಳಿಯುತ್ತದೆ.

ಜೇನುಮೇಣ

ಜೇನುಮೇಣವು ಜೇನುನೊಣಗಳ ಎರಡನೇ ಪ್ರಧಾನ ಉತ್ಪಾದನೆಯಾಗಿದ್ದು, ಸುಮಾರು ೯ – ೧೭ ದಿನಗಳ ವಯಸ್ಸಿನ ಕೆಲಸಗಾರ ನೊಣಗಳು ತಮ್ಮ ಹೊಟ್ಟೆಯ ಅಡಿಭಾಗದಲ್ಲಿರುವ ನಾಲ್ಕು ಜೊತೆ ಮೇಣದ ಗ್ರಂಥಿಗಳಿಂದ ಸ್ರವಿಸುತ್ತವೆ. ಜೇನುತುಪ್ಪ, ಪರಾಗ, ಮುಂತಾದವುಗಳನ್ನು ಶೇಖರಿಸಲು ಅಗತ್ಯವಾದ ಎರಿಗಳನ್ನು ಕಟ್ಟಲು ಜೇನು ಮೇಣವು ಅತ್ಯಗತ್ಯ. ಒಂದು ಕಿ.ಗ್ರಾಂ ಜೇನುಮೇಣವನ್ನು ಉತ್ಪಾದಿಸಲು ಜೇನುನೊಣಗಳು ಸುಮಾರು ೮ – ೧೦ ಕಿ.ಗ್ರಾಂಗಳಷ್ಟು ಜೇನುತುಪ್ಪವನ್ನು ಸೇವಿಸುತ್ತವೆ ಎಮದು ಅಂದಾಜು ಮಾಡಲಾಗಿದೆ.

ಜೇನುಮೇಣದಲ್ಲಿ ವಿವಿಧ ಆಮ್ಲಗಳು, ಹೈಡ್ರೋಕಾರ್ಬನ್‌ಗಳು ಸೇರಿದಂತೆ ಅನೇಕ ಪದಾರ್ಥಗಳಿರುತ್ತವೆ (ಕೋಷ್ಟಕ ೨೬).

ಕೋಷ್ಟಕ ೨೬ : ಜೇನುಮೇಣದಲ್ಲಿನ ರಾಸಾಯನಿಕ ಘಟಕಗಳು

ಕ್ರ.ಸಂ

ಘಟಕ

ಶೇಕಡಾವಾರು ಪ್ರಮಾಣ

ಹೈಡ್ರೋಕಾರ್ಬನ್‌ಗಳು ೧೪
ಮಾನೋ ಎಸ್ಟರ‍್ಗಳು ೩೫
ಡೈ ಎಸ್ಟರಗಳು ೧೪
ಟ್ರೈ ಎಸ್ಟರ್‌ಗಳು
ಹೈಡ್ರಾಕ್ಸಿ ಮಾನೋ ಎಸ್ಟರ್‌ಗಳು
ಹೈಡ್ರಾಕ್ಸಿ ಪಾಲಿ ಎಸ್ಟರ್‌ಗಳು
ಮುಕ್ತ ಆಮ್ಲಗಳು ೧೨
ಇತರೆ ೧೦

ಜೇನುಮೇಣದ ಗುಣಗಳು : ಜೇನುಮೇಣವು ಹಳದಿ ಬಣ್ಣದಿಂದ ಕೂಡಿದ್ದು ಜೇನುತುಪ್ಪದ ವಾಸನೆಯನ್ನು ಹೊಂದಿರುತ್ತದೆ. ಇದು ನೀರಿನಲ್ಲಿ ಕರಗುದಿಲ್ಲವಾದರೂ ತಣ್ಣಗಿನ ಆಲ್ಕೋಹಾಲ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮತ್ತು ಕ್ಲೋರೋಫಾರಂ, ಈಥರ್, ಬೆಂಜಿನ್ ರಾಸಾಯನಿಕಗಳಲ್ಲಿ ಪೂರ್ಣವಾಗಿ ಕರಗುತ್ತದೆ.

ಜೇನುಮೇಣದ ಸಂಗ್ರಹ ವಿಧಾನಗಳು

ಹಳೆಯ ಎರಿಗಳಿಂದ ಮೇಣದ ಸಂಗ್ರಹ :  ಮೇಣವನ್ನು ಕರಗಿಸಲು ಉಪಯೋಗಿಸುವ ನೀರು ಖನಿಜ ಮುಕ್ತವಾಗಿದ್ದು ಮೃದುವಾಗಿರಬೇಕು. ಮೇಣದಲ್ಲಿನ ಆಮ್ಲಗಳು ಸತುವಿನೊಂದಿಗೆ ರಾಸಾಯನಿಕವಾಗಿ ವರ್ತಿಸುವುದರಿಂದ ಮೇಣದ ಬಣ್ಣವು ಮುಸುಕಾವುದಲ್ಲದೆ ಅದರ ಗುಣ ಮಟ್ಟವು ಕುಗ್ಗುವುದರಿಂದ ಮೇಣವನ್ನು ಕರಗಿಸಲು ಉಕ್ಕಿನ ಅಥವಾ ಅಲ್ಯೂಮಿನಿಯಂ ಪಾತ್ರೆ ಉತ್ತಮ. ಜೇನು ಕುಟುಂಬದಲ್ಲಿನ ಹಳೆಯ ಮತ್ತು ಕಪ್ಪಾದ ಎರಿಗಳನ್ನು ಶುದ್ಧ ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿ ತೊಳೆಯುವುದರಿಂದ ನೀರಿನಲ್ಲಿ ಕರಗುವ ಕಶ್ಮಲಗಳನ್ನು ಹೊರತೆಗೆದು ನಂತರ ನೀರಿನಲ್ಲಿ ಹಾಕಿ ಕುದಿಸಬೇಕು. ಹೀಗೆ ಕುದಿಸಿದ ನೀರಿನಲ್ಲಿ ಮೇಣವು ಕರಗಿ ಈ ದ್ರಾವಣವನ್ನು ತೆಳುವಾದ ಬಟ್ಟೆಯ ಮೂಲಕ ಇನ್ನೊಂದು ಪಾತ್ರೆಗೆ ಶೋಧಿಸಿದಾಗ ಎಲ್ಲ ಕಲ್ಮಶಗಳು ಬಟ್ಟೆಯಲ್ಲಿಯೇ ಉಳಿದುಕೊಳ್ಳುತ್ತವೆ. ಮೇಣ ಮತ್ತು ನೀರಿನ ದ್ರಾವಣವಿರುವ ಪಾತ್ರೆಯನ್ನು ಹಾಗೆಯೇ ತಂಪಾಗಲು ಇರಿಸಿದಾಗ, ಮೇಣವು ನೀರಿನ ಮೇಲ್ಭಾಗದಲ್ಲಿ ಪದರುಗಟ್ಟುತ್ತದೆ. ಈ ಮೇಣವನ್ನು ಸಂಗ್ರಹಿಸಬಹುದಾಗಿದೆ.

ಒತ್ತುವ ಸಾಧನದಿಂದ ಮೇಣದ ಸಂಗ್ರಹ : ಮೇಣದ ಪದರುಗಳು ಅಥವಾ ಹಳೆಯ ಎರಿಗಳನ್ನು ಬಟ್ಟೆಯ ಚೀಲದಲ್ಲಿಟ್ಟು ಆ ಚೀಲವನ್ನು ಒತ್ತುವ ಸಾಧನದ ಲೋಹಗಳ ತಟ್ಟೆಗಳ ಮಧ್ಯೆ ಇಡಲಾಗುತ್ತದೆ. ಒತ್ತುವ ಸಾಧನವನ್ನು ಕುದಿಯುವ ನೀರಿನಲ್ಲಿಟ್ಟು ಮೇಣದ ಚೀಲವನ್ನು ಲೋಹದ ತಟ್ಟೆಗಳ ಮಧ್ಯೆ ತಿರುಗಣೆಯ ಸಹಾಯದಿಂದ ಒತ್ತಬೇಕು. ಹೀಗೆ ಮಾಡಿದಲ್ಲಿ ಕರಗಿದ ಮೇಣವು ಚೀಲದ ಮೂಲಕ ಹೊರಬಂದು ನೀರಿನ ಮೇಲೆ ತೇಲುತ್ತದೆ. ತಣ್ಣಗಾದ ನಂತರ ಮೇಣವನ್ನು ಹೊರತೆಗೆಯಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹಳೆಯ ಎರಿಗಳು ದೊರೆತರೆ ಇಂಥ ಮೇಣದ ಒತ್ತುವ ಸಾಧನವು ಬಹಳ ಉಪಯುಕ್ತವಾಗಿದ್ದು. ಈ ವಿಧಾನದಲ್ಲಿ ತೆಗೆದ ಮೇಣವು ಕಪ್ಪು ಬಣ್ಣದಿಂದ ಕೂಡಿರುತ್ತದೆ.

ಹಬೆಯಿಂದ ಮೇಣ ತೆಗೆಯುವ ವಿಧಾನ : ಈ ವಿಧನದಲ್ಲಿ ಶಾಖ ನಿರೋಧಕ ಪಾತ್ರೆಯಲ್ಲಿ ಹಬೆಯನ್ನು ನೇರವಾಗಿ ಮೇಣದ ಎರಿಗಳ ಮೇಲೆ ಹಾಯಿಸಿ ಅಥವಾ ಬಹೆಯಿಂದ ಬಿಸಿ ಮಾಡಿದ ಸುರುಳಿಗಳನ್ನು ತಗುಲಿಸಿ ಮೇಣವನ್ನು ಕರಗಿಸಲಾಗುವುದು. ಕರಗಿದ ಮೇಣವು ಸಾಧನದ ಕೆಲಗೆ ಅಳವಡಿಸಿದ ಪಾತ್ರೆಯಲ್ಲಿ ಸಂಗ್ರಹಗೊಳ್ಳುವುದು.

ಸೂರ್ಯನ ಶಾಖದಿಂದ ಮೇಣ ತೆಗೆಯುವುದು : ಮೇಣವನ್ನು ಸಂಗ್ರಹಿಸುವ ವಿಧಾನಗಳಲ್ಲಿ ಸೂರ್ಯನ ಶಾಖದಿಂದ ಸಂಗ್ರಹಿಸುವುದು ಉತ್ತಮವಾಗಿದೆ. ಈ ವಿಧಾನದಲ್ಲಿ ಮೇಣವು ತೆಳ್ಳಗೆ ಕರಗಿ ಸಂಗ್ರಹಿಸುವ ಪಾತ್ರೆಗೆ ಹರಿದು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈ ವಿಧಾನದಿಂದ ಮೇಣವನ್ನು ಕರಗಿಸಲು ಹೆಚ್ಚು ಕಾಲ ತೆಗೆದುಕೊಂಡರೂ ಮೇಣವು ಉತ್ತಮ ಮಟ್ಟದಾಗಿರುತ್ತದೆ.

ಜೇನುಮೇಣದ ಉಪಯೋಗಗಳು :  ಜೇನುಮೇಣವನ್ನು ಈಜಿಪ್ಟಿಯನ್ನರು ಮೃತರ ಕಳೇಬರಗಳನ್ನು ಕೆಲವು ದಿನ ಕೆಡದಂತೆ ಇಡಲು ಉಪಯೋಗಿಸುತ್ತಿದ್ದುದಾಗಿ ಇತಿಹಾಸ ಮೂಲಗಳು ತಿಳಿಸುತ್ತವೆ. ಈ ಮೇಣವನ್ನು ಮೇಣದ ಹಾಳೆಗಳ ತಯಾರಿಕೆ, ಸೌಂದರ್ಯವರ್ಧಕಗಳು, ಔಷಧಿಗಳು, ಚರ್ಮದ ಮುಲಾಮು ಮತ್ತು ಇತರ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಪಾದರಕ್ಷಣೆಗಳ ಹೊಳಪನ್ನು ನೀಡುವ ಪಾಲಿಷ್‌ಗಳು. ಮೇಣದ ಪ್ರತಿಮೆಗಳು. ಅಚ್ಚು ಪ್ರತಿಗಳನ್ನು ತೆಗೆಯುವ ಕಾಗದಗಳು, ಶಾಯಿಗಳು, ಅಂಟಿಸಲು ಉಪಯೋಗಿಸುವ ಟೇಪುಗಳು ಮತ್ತು ಮದ್ದು ಗುಂಡುಗಳ ಕಾರ್ಖಾನೆಗಳಲ್ಲಿ ಅನೇಕ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಚೀನಾ ದೇಶವು ಪ್ರಪಂಚದಲ್ಲಿ ಹೆಚ್ಚು ಜೇನುಮೇಣವನ್ನು ಉತ್ಪಾದಿಸುವ ರಾಷ್ಟ್ರವಾಗಿದ್ದು ಇದು ೧೯೮೨ ರಲ್ಲಿ ಸುಮಾರು ೪೩,೪೦೦ ಮೆಟ್ರಿಕ್ ಟನ್‌ಜೇನುಮೇಣವನ್ನು ಉತ್ಪಾದಿಸಿತ್ತು. ಆದರೆ ಭಾರತವು ಕೇವಲ ೧೫ – ೨೦ ಟನ್ ಮಾತ್ರ ಜೇನುಮೇಣವನ್ನು ಉತ್ಪಾದಿಸುತ್ತಿದ್ದು. ಜೇನುಮೇಣವನ್ನು ಅಮೇರಿಕಾ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ ಮತ್ತು ಜಪಾನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ರಾಜಶಾಹಿ ರಸ

ರಾಜಶಾಹಿ ರಸವು ಯುವ ಕೆಲಸಗಾರ  ನೊಣಗಳ ತಲೆಯ ಭಾಗಗಳ ಹೈಪೊಪೆರಂಜಿಯಲ್ ಗ್ರಂಥಿಗಳಿಂದ ಸ್ರವಿಸುವ ಹಾಲಿನ ಬಣ್ಣದ ದ್ರವವಸ್ತು. ಇದೊಂದು ಶೀಘ್ರ ರಕ್ತಗತವಾಗುವ ದ್ರವರೂಪದ ಆಹಾರವಾಗಿದ್ದು, ಬಿ ಜೀವಸತ್ವ, ಶಕ್ತಿಯುತವಾದ ಸಸಾರಜನಕ. ಹಾರ್ಮೋನ್‌ಗಳು ಮತ್ತು ಅಗತ್ಯವಿರುವ ಆಮ್ಲಗಳಿಂದ ತುಂಬಿರುವ ರಸವಾಗಿದೆ. ಆದ್ದರಿಂದಲೇ ಈ ರಸವನ್ನು ಹುಳುವಿನಾವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀಡಿದಾಗ ಅದು ಶಕ್ತಿ ಶಾಲಿಯಾದ ರಾಣಿ ನೊಣವಾಗಿ ಬೆಳವಣಿಗೆಯಾಗುತ್ತದೆ (ಕೋಷ್ಟಕ ೨೭).

ಕೋಷ್ಟಕ  ೨೭: ಒಮದು ಗ್ರಾಂ ರಾಜಶಾಹಿ ರಸದಲ್ಲಿನ ವಿವಿಧ ರಾಸಾಯನಿಕ ಘಟಕಗಳು

ಕ್ರ.ಸಂ

ಘಟಕಗಳು

ಶೇಕಡಾವಾರು ಪ್ರಮಾಣ

ತೇವಾಂಶ ೫೭ – ೭೦
ಸಸಾರಜನಕ ೧೭ – ೪೫
ಸಕ್ಕರೆಗಳು ೧೮ – ೫೨
ಕೊಬ್ಬುಗಳು ೩.೫ – ೧೯
ಖನಿಜಗಳು ೨ – ೩
ಜೀವಸತ್ವಗಳು

ರಾಜಶಾಹಿ ರಸವನ್ನು ಪಡೆಯುವ ತಾಂತ್ರಿಕತೆ : ರಾಜಶಾಹಿ ರಸವನ್ನು ಪಡೆಯಲು ಬಲಿಷ್ಠವೂ, ಉತ್ತಮವೂ ಆದ ರಾಣಿಯುಳ್ಳ ಜೇನುಕುಟುಂಬಗಳನ್ನು ಗುರುತಿಸಿ ಸಂಸಾರ ಕೋಣೆ, ಮತ್ತು ಜೇನು ಕೋಣೆಯನ್ನು ರಾಣಿ ತಡೆ ಹಲಗೆಯಿಂದ ಬೇರ್ಪಡಿಸಬೇಕು. ಸಂಸಾರ ಕೋಣೆಯಲ್ಲಿ ಕೋಶಾವಸ್ಥೆಯಲ್ಲಿರುವ ಜೇನುಮರಿಗಳು ಖಾಲಿ ಎರಿಗಳು ಮತ್ತು ಜೇನುತುಪ್ಪ ಹಾಗೂ ಪರಾಗವುಳ್ಳ ಚೌಕಟ್ಟುಗಳಿರಬೇಕು. ಅಂತೆಯೇ ರಾಜಶಾಹಿರಸ ಪಡೆಯಲು ಹೆಚ್ಚಿನ ದಾದಿ ನೊಣಗಳು ಅವಶ್ಯಕ. ರಾಜಶಾಹಿ ರಸ ಪಡೆಯುವ ಒಂದು ಎರಿಯ ಚೌಕಟ್ಟಿನಲ್ಲಿ ೮ – ೧೦ ಮೇಣದಿಂದ ತಯಾರಿಸಿದ ರಾಣಿ ಬಟ್ಟಲುಗಳನ್ನು ಮಾಡಿ ಕುಟುಂಬಕ್ಕೆ ನೀಡಿದಲ್ಲಿ ೬೦ – ೭೨ ಗಂಟೆಗಳ ಕಸಿಯಾದ  ನಂತರ ೨೦೦ ಮಿ.ಗ್ರಾಂ.ನಷ್ಟು ರಾಜಶಾಹಿರಸ ರಾಣಿಯ ಬಟ್ಟಲಿನಲ್ಲಿ ಶೇಖರಣೆಯಾಗಿರುತ್ತದೆ, ಈ ರಸವನ್ನು ಶುದ್ಧವಾದ ಬಾಟಲಿನಲ್ಲಿ ಶೇಖರಿಸಿಡಬಹುದು. ಈ ರೀತಿ ರಾಣಿ ಬಟ್ಟಲುಗಳನ್ನು ಮತ್ತೆ ಮತ್ತೆ ಕಸಿ ಮಾಡುವುದರ ಮೂಲಕ ಹೆಚ್ಚಿನ ರಾಜಶಾಹಿರಸವನ್ನು ಪಡೆಯಬಹುದಾಗಿದೆ.

ಫ್ರಾನ್ಸ, ಪಶ್ಚಿಮ ಜರ್ಮನಿ. ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳು ರಾಜಶಾಹಿ ರಸವನ್ನು ರಫ್ತು ಮಾಡುತ್ತವೆ. ೧೯೮೩ ರಲ್ಲಿ ಜಪಾನ್ ದೇಶವು ವರ್ಷವೊಂದಕ್ಕೆ ನೂರು ಟನ್‌ರಾಜಶಾಹಿ ರಸವನ್ನು ಬಳಸಿ ವಿಶೇಷ ದಾಖಲೆಯನ್ನು ಸ್ಥಾಪಿಸಿದೆ. ೧೯೫೯ ರಲ್ಲಿ ಇದರ ಉತ್ಪಾದನೆ ೧೦೦ ಕಿ.ಗ್ರಾಂ ಆದರೆ ನಂತರದ ೪ ವರ್ಷಗಳಲ್ಲಿ ಅದು ೧೫೦೦ ಕಿ.ಗ್ರಾಂಗಳಿಗೆ ಹೆಚ್ಚಿತು. ೧೯೮೨ ರಲ್ಲಿ ೧೪೦ ಟನ್‌ರಾಜಶಾಹಿ ರಸವನ್ನು ಜಪಾನ್‌ದೇಶ ಉತ್ಪಾದಿಸಿ ೨೨ ಕೋಟಿ ಡಾಲರ್ ಲಾಭ ಪಡೆಯಿತು. ಬಳಕೆದಾರರಿಗೆ ಮೌಲ್ಯಮಾಪನದ ಪತ್ರಿಕೆಗಳನ್ನು ಕಳುಹಿಸಿ ಅವರ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಿದಾಗ ರಾಜಶಾಹಿರಸದ ಸೇವನೆಯಿಂದ ಅನೇಕ ಜನರಲ್ಲಿ ನೋವು, ನಿಶ್ಯಕ್ತಿ, ಮಲಬದ್ಧತೆ ನಿವಾರಣೆ, ಆರೋಗ್ಯದಲ್ಲಿ ಸುಧಾರಣೆ, ಶೀತಕ್ಕೆ ಪ್ರತಿರೋಧ, ರಕ್ತದ ಒತ್ತಡದಲ್ಲಿ ಸಮತೋಲನ ಹಾಗೂ ಜೀರ್ಣಶಕ್ತಿಯ ವೃದ್ಧಿಯಾಗಿರುವುದು ಕಂಡುಬಂದಿದೆ.

ಔಷಧ ತಯಾರಕ ಕಂಪೆನಿ ಅರಡೈ ಫ್ರೆಂಚ್‌ರವರು ಸೇನಾ ಪಡೆಯ ಆಸ್ಪತ್ರೆಯಲ್ಲಿ ರಾಜಶಾಹಿರಸ ಚಿಕಿತ್ಸೆಗೆ ಯೋಗ್ಯವೆಂದು ಶಿಫಾರಸ್ಸು ಮಾಡಿದ್ದಾರೆ. ಇದರಲ್ಲಿನ ಜೀವಸತ್ವ ಬಿ – ೧೨ ರ ನಿರಂತರ ಸೇವನೆಯಿಂದ ಆರೋಗ್ಯ ಸುಧಾರಿಸಲು ಸಹಕಾರಿಯಾಗುವುದಲ್ಲದೆ ರೋಗನಿರೋಧಕ ಶಕ್ತಿಯೂ ಬೆಳೆಯುತ್ತದೆ.

ಜೇನುಅಂಟು (ಪ್ರೊಪ್ರೋಲಿಸ್)

ಜೇನುಅಂಟು ಗೋಂದಿನಂತೆ ಅಂಟಿಕೊಳ್ಳುವ ವಸ್ತುವಾಗಿದ್ದು ಜೇನುನೊಣಗಳು ಇದನ್ನು ಅನೇಕ ವಿಧದ ಸಸ್ಯಗಳ ಮೊಗ್ಗು ಮತ್ತು ತೊಗಟೆಗಳಿಂದ ಸಂಗ್ರಹಿಸಿ ಕೆಲವೊಮ್ಮೆ ಮೇನದೊಂದಿಗೆ ಬೆರೆಸಿ ಗೂಡನ್ನು ಕಟ್ಟಲು ಉಪಯೋಗಿಸುತ್ತವೆ. ಗೂಡಿನಲ್ಲಿ ಬೇಡದ ಜಾಗಗಳಿಗೆ, ಚೌಕಟ್ಟುಗಳ ನಡುವೆ, ಪೆಟ್ಟಿಗೆಯ ಸಂದುಗೊಂದುಗಳಿಗೆ ಈ ಅಂಟನ್ನು ಮೆತ್ತುತ್ತವೆ. ಅದರಲ್ಲೂ ಯೂರೋಪಿಯನ್‌ಜೇನು ಕುಟುಂಬಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಜೇನು ಅಂಟು ಶೇಖರಿಸುವ ಗುಣವು ಕೋಲುಜೇನಿನ ನೊಣಗಳಲ್ಲಿ ಹೆಚ್ಚಾಗಿದ್ದು ಇದು ನೈಸರ್ಗಿಕವಾಗಿ ಶತ್ರುಗಳಿಂದ ರಕ್ಷಣೆ ಪಡೆಯಲು ಗೂಡಿನ ಇಕ್ಕೆಲುಗಳ ಪೆಟ್ಟಿಗೆಗೆ ಅಂಟಿಸುತ್ತವೆ. ಜೇನು ಅಂಟಿನಲ್ಲಿ ಅರ್ಧದಷ್ಟು ರೆಸಿನ್‌ಗಳು ಮತ್ತು ಬಾಸಮ್‌ಗಳು ಮತ್ತು ಕಾಲುಭಾಗ ಮೇಣ. ಇನ್ನುಳಿದ ಕಾಲುಭಾಗ ಕೊಬ್ಬಿನಾಮ್ಲಗಳು ಮತ್ತು ಪಾಲಿ ಪೆಪ್ಪೈಡ್‌ಗಳು ಇರುತ್ತವೆ. ಇದರ ಜೊತೆಗೆ ಇದರಲ್ಲಿ ಸಸಾರಜನಕಗಳು, ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ (ಕೋಷ್ಟಕ ೨೮).

ಈ ಅಂಟನ್ನು ಚರ್ಮರೊಗ, ಹುಣ್ಣು, ಸುಟ್ಟ ಚರ್ಮಗಳ ಮೇಲೆ ಹಚ್ಚಿ ಗುಣಪಡಿಸಬಹುದು ಮತ್ತು ಸೌಂದರ್ಯವರ್ಧಕಗಳ ಅಂಶವಾಗಿ ಈ ಅಂಟು ಬಹು ಉಪಕಾರಿಯಾಗಿದೆ.

ಕೋಷ್ಟಕ ೨೮ : ಜೇನು ಅಂಟಿನ ವಿವಿಧ ಘಟಕಗಳು ಮತ್ತು ಅವುಗಳ ಪ್ರಮಾಣ

ಘಟಕ

ಶೇಕಡಾವಾರು ಪ್ರಮಾಣ

ರೆಸಿನ್‌ಗಳು ಮತ್ತು ಬಾಸಮ್‌ ೫೫
ಸುವಾಸಣಾ ಎಣ್ಣೆ ೧೦
ಮೇಣ ೩೦
ಪರಾಗ

ಪ್ರಚಲಿತ ವೈದ್ಯಕೀಯ ಪದ್ಧತಿಯಿಂದ ಗುಣಪಡಿಸಲಾಗದ ಕೆಲವಾರು ಗರ್ಭಾಶಯಕ್ಕೆ ಸಂಬಂಧಿಸಿದ ರೋಗಗಳನ್ನು ನಿವಾರಿಸುವಲ್ಲಿ ಇದನ್ನು ಉಪಯೋಗಿಸಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ರೋಗವನ್ನು ಗುಣಪಡಿಸುವ ಜೇನುಅಂಟಿನ ಮಹತ್ವವು ರುಮೇನಿಯ ಮತ್ತು ಆಸ್ಟ್ರೀಯ ದೇಶಗಳಲ್ಲಿ ಕಂಡುಬಂದಿದೆ. ಇಟಲಿ ದೇಶದ ಮಾರುಕಟ್ಟೆಯಲ್ಲಿ ಜೇನಿನ ಅಂಟಿನಿಂದ ತಯಾರಾದ ಹಲವಾರು ಸಾಮಗ್ರಿಗಳು ಔಷಧೀಯ ರೂಪದಲ್ಲಿ ಮಾರಲ್ಪಡುತ್ತವೆ.

ಜೇನುವಿಷ

ಜೇನುವಿಷ ಒಂದು ಪಾರದರ್ಶಕವಸ್ತು, ಕಟುವಾದ ವಾಸನೆ ಮತ್ತು ಕಹಿಯಾದ ರುಚಿ ಹೊಂದಿರುತ್ತದೆ. ಲಿಟ್ಮಸ್ ಚೀಟಿಗಳೊಡನೆ ಆಮ್ಲದಂತೆ ಪ್ರತಿಕ್ರಿಯಿಸುವ ಇದು ಮೆಲಿಟಿನ್, ಹಿಸ್ಟಮಿನ್ ಅಪಾಮಿನ್, ಪಾಸ್ಪೋಲೈಪೊಸ್, ಹ್ಯಾಲುರೋನಿಡೇಸ್, ಪಾರ್ಮಿಕ್, ಹೈಡ್ರೋಕ್ಲೋರಿಕ್ ಮತ್ತು ಆರ್ಥೊಪ್ಯಾಂತರಿಕ್ ಆಮ್ಲಗಳನ್ನು, ಟ್ರೆಪ್ಟೊಫಾನ್, ಗಂಧಕ ಮುಂತಾದ ವಸ್ತುಗಳನ್ನು ಹೊಂದಿರುವುದೆಂದು ತಿಳಿದು ಬಂದಿದೆ. ಜೇನುವಿಷ ಹಲವು ಸಸಾರಜನಕ ಹಾಗೂ ಆವಿಯಾಗುವ ಕೆಲವು ಎಣ್ಣೆಗಳನ್ನು ಹೊಂದಿರುತ್ತದೆ.

ಜೇನುವಿಷವನ್ನು ಸಂಗ್ರಹಿಸುವ ವಿಧಾನ

೧. ಅನೇಕ ಜೇನುನೊಣಗಳನ್ನು ಅಗಲವಾದ ಬಾಯಿಯಿಂದ ಕೂಡಿದ ಗಾಜಿನ ಜಾಡಿಯಲ್ಲಿ ಕೂಡಿಹಾಕಿ ಅದರ ಬಾಯಿಯನ್ನು ಈಥರ್ ರಾಸಾಯನಿಕದಿಂದ ಕೂಡಿದ ಕಾಗದದಿಂದ ಮುಚ್ಚಬೇಕು. ಈಥರ್ ಘಾಟಿನ ವಾಸನೆಯಿಂದ ಜೇನುನೊನಗಳು ಜಾಡಿಯ ಗೋಡೆಗೆ ಚುಚ್ಚುವ ಮೂಲಕ ವಿಷವನ್ನು ಹೊರಸೂಸುತ್ತವೆ. ಅನಂತರ ವಿಷವನ್ನು ಶೇಖರಿಸಬಹುದು.

೨. ಮರದ ಚೌಕಟ್ಟಿಗೆ ಅಂಟಿಸಿದ ೩ – ೪ ಸೆಂ.ಮೀ ಉದ್ದದ ತಾಮ್ರದ ತಂತಿಗೆ ವಿದ್ಯುತ್ತನ್ನು ಹರಿಸಿ. ಜೇನುನೊನಗಳನ್ನು ಆ ವಿದ್ಯುತ್ ಚಾಲಿತ ತಂತಿಗಳಿಗೆ ತಗುಲುವಂತೆ ಮಾಡಿದಾಗ ವಿದ್ಯುತ್ತಿನ ಪರಿಣಾಮದಿಮದ ಗಾಬರಿಗೊಮಡು ಮರದ ಚೌಕಟ್ಟಿಗೆ ಅಳವಡಿಸಿದ ನೈಲಾನ್ ಪರದೆಗೆ ಚುಚ್ಚುವುದರಿಂದ ಅದರ ಕೆಳಗಡೆಯ ಗಾಜಿನ ಮೇಲೆ ವಿಷವು ಶೇಖರಣೆಯಾಗುತ್ತದೆ. ಅದು ಒಣಗಿದ ನಂತರ ಹೊರತೆಗೆದು ನಂತರ ಮರದ ಚೌಕಟ್ಟನ್ನು ವಿಷ ತೆಗೆಯಲು ಉಪಯೋಗಿಸಬಹುದು.

ಕೋಷ್ಟಕ ೨೯ : ಜೇನುವಿಷದ ವಿವಿಧ ಘಟಕಗಳು

ಘಟಕ

ಶೇಕಡಾ ಒಣತೂಕ

ಕಿಣ್ವಗಳು ೧೧ – ೧೫
ಸಸಾರಜನಕ ಮತ್ತು ಪೆಪ್ಪೈಡ್‌ಗಳು ೬೫ – ೭೫
ಅಮೈನುಗಳು ೦.೫ – ೩.೦
ಅಮೈನೋ ಆಮ್ಲಗಳು ೦.೫ – ೧.೦
ಸಕ್ಕರೆಗಳು
ಪಾಸ್ಫೋಲಿಪಿಡ್‌ಗಳು
ಆವಿಯಾಗುವ ವಸ್ತುಗಳು ೪ – ೮

ಜೇನುವಿಷವು ಬಹು ಬೇಗನೆ ಆವಿಯಾಗುವ ವಸ್ತುವಾಗಿದ್ದು ಕೊಠಡಿಯ ಉಷ್ಣತೆಯಲ್ಲಿ ತನ್ನ ತೂಕದ ಶೇಕಡ ೩೦- ೭೦ ಭಾಗವನ್ನು ಆವಿಯ ರೂಪದಲ್ಲಿ ಕಳೆದುಕೊಳ್ಳುತ್ತದೆ. ಒಣ ಜೇನುವಿಷವು ಪಾರದರ್ಶಕ ವಸ್ತುವಾಗಿದ್ದು ನೀರಿನಲ್ಲಿ ಮತ್ತು ಆಮ್ಲಗಳಲ್ಲಿ ಸರಾಗವಾಗಿ ಕರಗುತ್ತದೆ. ಪೊಟ್ಯಾಸಿಯಂ ಪರ್ಮಾಂಗನೇಟ್ ಇದರ ಚಟುವಟಿಕೆಯನ್ನು ಕುಂದಿಸುವ ಗುಣವನ್ನು ಪಡೆದಿದ್ದು ಹೆಚ್ಚಿನ ಶಾಖ ನಿರೋಧಕ ಗುಣವನ್ನು ಹೊಂದಿದೆ. ಒಣ ರೂಪದಲ್ಲಿರುವ ಜೇನುವಿಷವು ಹಲವಾರು ವರ್ಷಗಳ ಕಾಲ ತನ್ನ ವಿಷಗುಣವನ್ನು ಉಳಿಸಿಕೊಂಡಿರುತ್ತದೆ. ನೀರಿನಲ್ಲಿ ಕರಗಿಸಿದ ಜೇಣುವಿಷದ ದ್ರಾವಣವು ಎಲ್ಲಾ ಬಗೆಯ ರೋಗಾಣುಗಳಿಂದಲೂ ಮುಕ್ತವಾಗಿರುವುದೆಂದು ತಿಳಿದು ಬಂದಿದೆ. ಈ ದ್ರಾವಣವನ್ನು ೧ : ೫೦,೦೦೦ ಅನುಪಾತಕ್ಕೆ ದುರ್ಬಲಗೊಳಿಸಿದಾಗಲೂ ರೋಗಾಣು ಮುಕ್ತವಾಗಿರುತ್ತದೆಯಲ್ಲದೆ. ಜೇನುವಿಷ ವಿಶೇಷ ಗುಣಗಳನ್ನು ಹೊಂದಿದ್ದು ನಿರಂತರ ಜೇನುಕೃಷಿಯಲ್ಲಿ ತೊಡಗಿರುವವರನ್ನು ವಾತದ ಖಾಯಿಲೆಯಿಂದ ದೂರವಿಡುತ್ತದೆ. ನರಗಳನ್ನು ಉತ್ತೇಜಿಸಿ ಕಾರ್ಯಪ್ರವೃತ್ತವಾಗಿಸುವಲ್ಲಿ ಇದು ಪರಿಣಾಮಕಾರಿಯಾಗಿದ್ದು  ಮಾನವ ಶರೀರದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ.

ಜೇನು ಪರಾಗ

ಪರಾಗವು ಪ್ರಕೃತಿಯಲ್ಲಿ ಸಸ್ಯಗಳಿಂದ ಸಿಗುವ ನೈಸರ್ಗಿಕ ವಸ್ತುವಾಗಿದ್ದು ಜೇನುನೊಣಗಳ ಮುಖ್ಯ ಆಹಾರವೂ ಆಗಿದೆ. ಜೇನುನೊಣಗಳು ಸಸ್ಯಗಳಿಂದ ಸಿಗುವ ಪರಾಗವನ್ನು ತಮ್ಮ ಹಿಂಗಾಲುಗಳಲ್ಲಿನ ಪರಾಗ ಬುಟ್ಟಿಗಳಲ್ಲಿ ಶೇಖರಿಸಿಕೊಂಡು ಗೂಡಿಗೆ ಮರಳುವಾಗ ಜೇನು ಕುಟುಂಬದ ಮುಖ್ಯ ದ್ವಾರದಲ್ಲಿ ಪರಾಗದ ಬೋನುಗಳನ್ನಿಟ್ಟು ಪರಾಗವನ್ನು ಶೇಖರಿಸಬಹುದಾಗಿದೆ. ಪರಾಗವನ್ನು ಬಹಳ ಹಿಂದಿನಿಂದಲೂ ಗ್ರೀಕರು, ಈಜಿಪ್ಟಿಯನ್ನರು, ಪರ್ಶಿಯನ್ನರು ಮತ್ತು ಚೀನಿಯರು ಉಪಯೋಗಿಸುತ್ತಿದ್ದುದಾಗಿ ಇತಿಹಾಸ ತಿಳಿಸುತ್ತದೆ. ಮನುಷ್ಯನು ಜೇನು ಪರಾಗವನ್ನು ಪೌಷ್ಟಿಕ ಆಹಾರವಾಗಿ ಉಪಯೋಗಿಸುತ್ತಾ ಬಂದಿದ್ದು ಪರಾಗವು ಗೊನಿಡೋಟ್ರೋಪಿಕ್ ಹಾರ್ಮೋನುಗಳನ್ನು ಹೊಮದಿರುವುದರಿಂದ ಮನುಷ್ಯರ ಪ್ರೋಸ್ಟೇಟ್ ಗ್ರಂಥಿಯು ಉತ್ತಮವಾಗಿ

ಕೋಷ್ಟಕ ೩೦: ಜೇನು ಪರಾಗದ ಘಟಕಗಳು ಮತ್ತು ಶೇಕಡಾವಾರು ಪ್ರಮಾಣ

ಘಟಕ

ಶೇಕಡಾವಾರು ಪ್ರಮಾಣ

ತೇವಾಂಶ ೧೧.೨ – ೧೨.೦
ಸಸಾರಜನಕಗಳು ೨೧.೦ – ೨೨.೦
ಕೊಬ್ಬುಗಳು ೫.೦ – ೬.೦೦
ಇಳಿಮುಖ ಸಕ್ಕರೆ ೨೫.೦ – ೨೬.೦
ಇಳಿಮುಖವಲ್ಲದ ಸಕ್ಕರೆ ೨.೦ – ೩.೦
ಬೂದಿ ೨.೭ – ೩.೦
ಉಳಿದ ಅಂಶಗಳು ೨೮.೦ – ೩೦.೦

ಕಾರ್ಯನಿರ್ವಹಿಸುತ್ತದೆಂದು ತಿಳಿಯಲಾಗಿದೆ. ಜೇನುಪರಾಗದಲ್ಲಿ ಸಸಾರಜನಕಗಳು, ಶರ್ಕರ ಪಿಷ್ಟಗಳು, ಎಸ್ಟರುಗಳು ಸೇರಿದಂತೆ ವಿವಿಧ ಘಟಕಗಳಿರುತ್ತವೆ (ಕೊಷ್ಟಕ ೩೦).