ಜೇನುನೊಣಗಳು ಮಾನವನಿಗೆ ನೀಡುತ್ತಿರುವ ವರದಾನವೆಂದರೆ ಜೇನುತುಪ್ಪ ಮತ್ತು ಪರಾಗಸ್ಪರ್ಶ ಸೇವೆ. ಪರಾಗಸ್ಪರ್ಶಕ್ರಿಯೆ ಪ್ರಕೃತಿಯ ದೈವದತ್ತ ಕೊಡುಗೆ. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಹೊಸ ತಳಿಗಳ ಉಪಯೋಗ, ರಸ ಗೊಬ್ಬರಗಳ ಬಳಕೆ, ಬೆಳೆಸಂರಕ್ಷಣೆಯ ವಿಧಾನಗಳು ಮುಂತಾದ ಅನೇಕ ಕೃಷಿ ಕಾರ್ಯಕ್ರಮಗಳು ಬಹಳ ಮುಖ್ಯವಾದುವು. ಅದೇ ರೀತಿ ಪರಾಗಸ್ಪರ್ಶ ಕ್ರಿಯೆಯ ಸೇವೆ ಕೃಷಿ ಉತ್ಪಾದನೆಯಲ್ಲ ಗಣನೀಯ ಪಾತ್ರವಹಿಸುತ್ತದೆ.

ಕ್ರಿ. ಶ. ೧೭೫೦ ರಲ್ಲಿ ಇಂಗ್ಲೆಂಡಿನ ಅರ್ಥರ್ ಡಾಬ್ಸ್ ಎನ್ನುವವರು ಮೊದಲಿಗೆ ಜೇನುನೊಣಗಳು ಹೂವುಗಳಿಂದ ಫಲೋತ್ಪತ್ತಿಗೆ ಕಾರಣವಾಗಬಲ್ಲ ಪರಾಗವನ್ನು ಸಂಗ್ರಹಿಸುತ್ತವೆ ಎಂದು ತೋರಿಸಿಕೊಟ್ಟರು. ಪರಾಗಸ್ಪರ್ಶಕ್ರಿಯೆಯ ವಿಧಾನವನ್ನು ಮುಲ್ಲರ್‌ರವರು ಸುಮಾರು ೧೮೮೨ರಲ್ಲಿಯೇ ಕಂಡುಕೊಂಡಿದ್ದರೆ ಡಾರ್ವಿನ್ನರು (೧೮೮೭) ಕೈಯಿಂದ ಮತ್ತು ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆಂದು ತಿಳಿಸಿದ್ದರು. ಈಚೆಗೆ ಪರಾಗ ಸ್ಫರ್ಶ ಕ್ರಿಯೆಯಲ್ಲಿ ಜೇನುನೊಣಗಳ ಮಹತ್ವದ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಕೃಷಿಯಲ್ಲಿ ಅಧಿಕ ಇಳುವರಿಗೆ ಕಾರಣವಾಗಿದೆ. ಭಾರತದಲ್ಲಿ ಜೇನು ಸಾಕಾಣಿಕೆ, ಜೇನು ತುಪ್ಪ ಮತ್ತು ಮೇಣದ ಸಲುವಾಗಿ ಮಾತ್ರ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿ ಉಳಿದಿದ್ದು ಇದಕ್ಕೆ ಮೂಲಕಾರಣ ಬೆಳೆಗಳಲ್ಲಿ ಪರಾಗಸ್ಪರ್ಶದ ಮಹತ್ವ, ಪ್ರಕೃತಿಯಲ್ಲಿ ಪರಾಗಸ್ಪರ್ಶ ನಡೆಯುವ ವಿಧಾನಗಳು ಮತ್ತು ಇದರಲ್ಲಿ ಜೇನು ನೊಣಗಳ ಪಾತ್ರದ ಬಗ್ಗೆ ಜನರಲ್ಲಿ ಸ್ಪಷ್ಟವಾಗಿ ತಿಳಿಯದಿರುವುದು ಕಾರಣವಾಗಿದೆ.

ಪರಾದಸ್ಪರ್ಶ ಕ್ರಿಯೆ : ಸಂತಾನೋತ್ಪತ್ತಿ, ಎಲ್ಲ ಜೀವಿಗಳಿಗೂ ಅವಶ್ಯಕವಾಗಿ ನಡೆಸುವ ಒಂದು ನೈಸರ್ಗಿಕ ಕ್ರಿಯೆ. ಸಸ್ಯಗಳಲ್ಲಿ ಈ ಕ್ರಿಯೆ ಪರಾಗರೇಣುಗಳು ಗಂಡಿನ ಪರಾಗ ಕೋಶದಿಂದ ಹೆಣ್ಣಿನ ಗರ್ಭಕೋಶದಲ್ಲಿರುವ ಅಂಡಾಣುಗಳೊಡನೆ ಸಂಯೋಜನೆ ಹೊಂದಿ ಗರ್ಭಕೋಶದಿಂದ ಹೊಸ ಸಸ್ಯ ಉಗಮಕ್ಕೆ ಕಾರಣವಾಗುತ್ತದೆ. ಈ ರೀತಿಯಿಂದ ಸಂತಾನೋತ್ಪತ್ತಿ ಹೊಂದುವ ಸಸ್ಯಗಳಲ್ಲಿ ಲೈಂಗಿಕ ಅಂಗಗಳು ಹೂವುಗಳಲ್ಲಿರುತ್ತವೆ. ಹೆಣ್ಣು ಮತ್ತು ಗಂಡು ಜನನಾಂಗಗಳು ಗಿಡದ ಒಂದೇ ಹೂವಿನಲ್ಲಾಗಲಿ. ಬೇರೆಬೇರೆ ಹೂವುಗಳಲ್ಲಾಗಲಿ ಅಥವಾ ಅದೇ ಜಾತಿಯ ಬೇರೆ ಬೇರೆ ಗಿಡಗಳ ಹೂವುಗಳಲ್ಲಾಗಲಿ ಇರಬಹುದು. ಚಲಿಸಲು ಅಸಮರ್ಥವಾದ ಸಸ್ಯಗಳಲ್ಲಿ ಗಂಡು ಜನನಾಂಗದಿಂದ ಪರಾಗರೇಣುಗಳು ಹೆಣ್ಣು ಶಲಾಕಾಗ್ರದ ಮೇಲೆ ವರ್ಗಾವಣೆ ಹೊಂದಿ ಪರಾಗರೇಣುಗಳ ಮತ್ತು ಅಂಡಾಣುಗಳ ಸಂಪರ್ಕ ಸಾಧ್ಯವಾಗುವುದಿಲ್ಲ. ವಿವಿಧ ರೀತಿಯಿಂದ ಗಂಡು ಮತ್ತು ಹೆಣ್ಣು ಜನಕಾಂಗಗಳ ಸಂಪರ್ಕಕ್ಕೆ ಕಾರಣವಾಗುವ ಪ್ರಕ್ರಿಯೆಯನ್ನು ಪರಾಗಸ್ಫರ್ಶ ಕ್ರಿಯೆ ಎಂದು ಕರೆಯುತ್ತಾರೆ. ಪ್ರಕೃತಿಯಲ್ಲಿರುವ ಶೇ. ೬೦ ಕ್ಕೂ ಹೆಚ್ಚು ಸಸ್ಯಗಳ ವಂಶಾಭಿವೃದ್ಧಿ ಹೂವುಗಳ ಮೂಲಕವೇ ಆಗುತ್ತದೆ.

ಹೂವುಗಳಲ್ಲಿ ಪುಷ್ಪತಲ, ಪುಷ್ಪಪಾತ್ರೆ, ಪುಷ್ಪದಳ, ಕೇಸರಮಂಡಲ ಮತ್ತು ಅಂಡಾಶಯವೆಂಬ ೫ ಮುಖ್ಯ ಭಾಗಗಳಿದ್ದು ಇವುಗಳಲ್ಲಿ ಕೇಸರಮಂಡಲವು ಗಂಡು ಜನನಾಂಗದಲ್ಲಿ ಅನೇಕ ಕೇಸರದಂಡಗಳನ್ನೊಳಗೊಂಡಿದ್ದು. ತುದಿಯಲ್ಲಿ ಪರಾಗಕೋಶಗಳು ಇರುತ್ತವೆ. ಕೋಶಗಳಲ್ಲಿ ಅಸಂಖ್ಯಾತ ಪರಾಗರೇಣುಗಳು ಹುಟ್ಟಿ

ಜೇನುನೊಣಗಳಿಂದಾಗುವ ಪರಾಗಸ್ಪರ್ಶ ಕ್ರಿಯೆಯಿಂದ ಬೆಳೆಗಳ ಇಳುವರಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ

ಬೆಳೆದು ಪರಾಗಕೋಶಗಳು ಬಲಿತು ಒಡೆದಾಗ ಪರಾಗರೇಣುಗಳುನ ಹೊರಚಿಮ್ಮುತ್ತವೆ. ಇವೇ ಗಂಡು ಜೀವಾಣುಗಳು. ಹೂವುಗಳ ಮಧ್ಯಭಾಗದಲ್ಲಿ ಅಂಡಾಶಯ ಮಂಡಲವಿದ್ದು ಒಂದು ಅಥವಾ ಅನೇಕ ಅಂಡಗಳಿರುತ್ತವೆ. ಅಂಡಕೋಶದ ಮೇಲ್ಭಾಗದಲ್ಲಿ ಕೊಳವೆಯಾಕಾರದ  ಶಲಾಕೆ ಮತ್ತು ತುದಿಯಲ್ಲಿ ಶಲಾಕಾಗ್ರ ಇರುತ್ತದೆ. ಶಲಾಕಾಗ್ರದ ಮೇಲ್ಮೈಯಲ್ಲಿ ಜಿಗುಟಾದ ದ್ರವ ಮತ್ತು ನುಣುಪಾದ ರೋಮಗಳಿರುತ್ತವೆ. ಪರಾಗ ಕೋಶಗಳು ಬಿರಿದು, ಪರಾಗರೇಣುಗಳು ಹೊರಬಿದ್ದು ಶಲಾಕಾಗ್ರವನ್ನು ಸೇರಬೇಕು. ಅನಂತರ ಅದರೊಳಗಿನ ಜೀವಾಣುವು ಶಲಾಕೆಯ ಮೂಲಕ ಅಂಡಾಶಯವನ್ನು ಪ್ರವೇಶಿಸಿ ಅದರೊಳಗಿನ ಜೀವಾಣುವಿನೊಡನೆ ಸಂಯೋಜನೆ ಹೊಂದಿ ಬೀಜೋತ್ಪತ್ತಿಯಾಗುತ್ತದೆ. ಹೀಗೆ ಬೀಜೋತ್ಪತ್ತಿಯಾಗಲು ಪರಾಗರೇಣುಗಳು ಶಲಾಕಾಗ್ರದ ಮೇಲೆ ವರ್ಗಾವಣೆ ಹೊಂದಬೇಕು. ಈ ವರ್ಗಾವಣೆಯನ್ನು ‘ಪರಾಗಸ್ಪರ್ಶ’ ಎಂದೂ. ವರ್ಗಾವಣೆಗೆ ಕಾರಣವಾಗುವ ಮಧ್ಯವರ್ತಿಯನ್ನು ‘ಪರಾಗಸ್ಪರ್ಶಕ’ ಅಥವಾ ‘ಪರಾಗಸ್ಪರ್ಶಿ’ ಎಂದೂ ಕರೆಯಲಾಗುತ್ತದೆ. ಪರಾಗಸ್ಪರ್ಶ ಕ್ರಿಯೆಯಲ್ಲಿ, ಸ್ಥಕೀಯ ಮತ್ತು ಪರಕೀಯ ಪರಾಗಸ್ಪರ್ಶ ಎನ್ನುವ ಎರಡು ವಿಧಗಳಿವೆ.

ಒಂದು ಹೂವಿನ ಪರಾಗರೇಣುಗಳು ಅದೇ ಹೂವಿನ ಅಥವಾ ಅದೇ ಗಿಡದಲ್ಲಿನ ಬೇರೊಂದು ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆ ಹೊಂದಿ ಉಂಟಾಗುವ ಪರಾಗಸ್ಪರ್ಶವನ್ನು ‘ಸ್ವಕೀಯ ಪರಾಗಸ್ಪರ್ಶ’ ವೆಂದೂ, ಒಂದು ಸಸ್ಯದ ಹೂವಿನಲ್ಲಿರುವ ಪರಾಗರೇಣುಗಳು ಅದೇ ಜಾತಿಯ ಇನ್ನೊಂದು ಸಸ್ಯದ ಹೂವಿನಲ್ಲಿರುವ ಶಲಾಕಾಗ್ರಕ್ಕೆ ವರ್ಗಾವಣೆ ಹೊಂದಿ ಉಂಟಾಗುವ ಪರಾಗಸ್ಪರ್ಶವನ್ನು ‘ಪರಕೀಯ ಪರಾಗಸ್ಪರ್ಶ’ ವೆಂದೂ ಕರೆಯುತ್ತೇವೆ. ಈ ಎರಡೂ ವಿಧದ ಪರಾಗಸ್ಪರ್ಶ ಕ್ರಿಯೆಗಳನ್ನು ಗಮನಿಸಿದಾಗ ಎರಡರಲ್ಲೂ ಪರಾಗರೇಣುಗಳ ವರ್ಗಾವಣೆಗೆ ಮಧ್ಯವರ್ತಿಗಳ ಅವಶ್ಯಕತೆ ಇರುವುದು ತಿಳಿಯುತ್ತದೆ.

ನಿಸರ್ಗದಲ್ಲಿ ಪರಾಗಸ್ಪರ್ಶ ಕ್ರಿಯೆ ನಿರ್ಜೀವ ಮೂಲಗಳಾದ ಗುರುತ್ವ ಶಕ್ತಿ, ನೀರು, ವಾಯು ಹಾಗೂ ಜೈವಿಕ ಮೂಲಗಳಾದ ಕೀಟಗಳು ಮತ್ತು ಇತರ ಪ್ರಾಣಿಗಳಿಂದ ಉಂಟಾಗುತ್ತದೆ. ಗುರುತ್ವಶಕ್ತಿಯಿಂದ ಉಂಟಾಗುವ ಪರಾಗಸ್ಪರ್ಶಕ್ರಿಯೆ, ಹೆಚ್ಚಾಗಿ ಸ್ವಕೀಯ ಪರಾಗಸ್ಪರ್ಶಕ ಸಸ್ಯಗಳಲ್ಲಿ ಕಂಡು ಬರುತ್ತದೆ. ಇಲ್ಲಿ ಪರಾಗರೇಣುಗಳು ಗುರುತ್ವಾಕರ್ಷಣ ಶಕ್ತಿಯಿಂದಾಗಿ ಶಲಾಕಾಗ್ರದ ಮೇಲೆ ಬೀಳುತ್ತವೆ. ನೀರಿನಿಂದ ಆಗುವ ಪರಾಗಸ್ಪರ್ಶಕ್ರಿಯೆ ಕೇವಲ ನೀರಿನಲ್ಲಿ ಬೆಳೆಯುವ ಸಸ್ಯಗಳಲ್ಲಿ ಮಾತ್ರ ಕಂಡುಬರುತ್ತದೆ. ಗಾಳಿಯಿಮದ ಉಂಟಾಗುವ ಪರಾಗಸ್ಪರ್ಶವು ಬೆಳೆಗಳನ್ನೂ ಒಳಗೊಂಡಂತೆ ಅನೇಕ ಸಸ್ಯಗಳಲ್ಲಿ ಕಂಡು ಬರುತ್ತದೆ. ಜೈವಿಕ ಮೂಲಗಳಿಂದ ಪರಾಗಸ್ಪರ್ಶ ಕ್ರಿಯೆ ಹೊಮದುವ ಸಸ್ಯಗಳು ಪರಾಗಸ್ಪರ್ಶಕಗಳೊಡನೆ ಪರಸ್ಪರ ಸಹಾಯಕ ಸಂಬಂಧಗಳನ್ನು ಹೊಂದಿದ್ದು ಹೂವುಗಳ ಆಕರ್ಷಕ ಬಣ್ಣ, ಸುವಾಸನೆ ಮತ್ತು ಅಧಿಕ ಮಕರಂದದಿಂದಾಗಿ, ಪರಾಗಸ್ಪರ್ಶಿಗಳಾದ ಪಕ್ಷಿ, ಬಾವಲಿ, ಅಳಿಲು, ನೊಣ, ಕಡಜ, ದುಂಬಿ, ಚಿಟ್ಟೆ, ಪತಂಗ, ಥ್ರಿಪ್ಸ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜೇನುನೊಣಗಳು ಆಕರ್ಷಿಸಲ್ಪಡುತ್ತವೆ. ಇವು ಆಹಾರಕ್ಕಾಗಿ ಪರಾಗ ಮತ್ತು ಮಕರಂದವನ್ನು ಸಂಗ್ರಹಿಸುವ ಉದ್ದೇಶದಿಂದ ಸಸ್ಯಗಳ ಹೂವುಗಳನ್ನು ಸಂದರ್ಶಿಸುತ್ತವೆ. ಅದರಲ್ಲೂ ಕೀಟಗಳು ಹೂವುಗಳನ್ನು ಸಂದರ್ಶಿಸಿದಾಗ ಅವುಗಳ ಮೈಮೇಲೆಲ್ಲ ಪರಾಗರೇಣುಗಳು ಅಂಟಿಕೊಳ್ಳುತ್ತವೆ.  ಈ ರೀತಿ ಹೂವಿನಿಂದ ಹೂವಿಗೆ ಆಕಾರ ಸಂಗ್ರಹಿಸಲು ಹೋದಾಗ ಇವುಗಳ ಮೈಮೇಲೆಲ್ಲ ಪರಾಗರೇಣುಗಳು ಶಲಾಕಾಗ್ರಕ್ಕೆ ಅಂಟಿಕೊಳ್ಳುತ್ತವೆ. ಹೀಗೆ ಕೀಟಗಳು ತಮಗರಿವಿಲ್ಲದೆಯೇ ಸಸ್ಯಸಂಕುಲದ ವಂಶಾಭಿವೃದ್ಧಿಗೆ ಅತ್ಯಂತ ಅವಶ್ಯಕವಾದ ಪರಾಗಸ್ಪರ್ಶಕ್ರಿಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತವೆ. ವಿವಿಧ ರೀತಿಯ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೈವಿಕ ಪರಾಗಸ್ಪರ್ಶ ಅದರಲ್ಲೂ ಜೇನುನೊಣಗಳಿಂದ ಉಂಟಾಗುವ ಪರಾಗಸ್ಪರ್ಶ ಈ ಮುಂದಿನ ಕಾರಣಗಳಿಂದಾಗಿ ಅತ್ಯಂತ ಉತ್ತಮವಾಗಿದೆ.

ಅಂಗಾಂಗಗಳ ರಚನೆ :  ಜೇನು ನೊಣಗಳ ಕಾಲುಗಳಲ್ಲಿ ಪರಾಗವನ್ನು ಕೊಂಡೊಯ್ಯಲು ಪರಾಗದ ಬುಟ್ಟಿಗಳಿದ್ದು ಅವುಗಳ ಪೂರ್ಣ ಶರೀರ ಹಾಗೂ ಕಾಲುಗಳು ರೋಮದಿಂದ ಆವೃತವಾಗಿರುವುದರಿಂದ ಅಧಿಕ ಸಂಖ್ಯೆಯ ಪರಾಗರೇಣುಳನ್ನು ಹೂವಿನಿಂದ ಹೂವಿಗೆ ವರ್ಗಾಯಿಸಬಲ್ಲವು. ಇವುಗಳ ಚೂಪಾದ ದವಡೆಗಳು ಪರಾಗಕೋಶಗಳನ್ನು ಕೆರೆದು ಪರಾಗರೇಣುಗಳನ್ನು ಹೊರತೆಗೆಯಲು ಸಶಕ್ತವಾಗಿವೆ.

ಹೂವುಗಳ ಬಗ್ಗೆ ಅತೀವ ನಿಷ್ಠೆ :  ಜೇನುನೊಣಗಳಿಗೆ ಹೂವು ಗಿಡಗಳ ಬಗ್ಗೆ ಇರುವ ನಿಷ್ಠೆ ಇತರ ಯಾವುದೇ ಕೀಟಗಳಲ್ಲಿ ಕಂಡುಬರುವುದಿಲ್ಲ. ಪರಾಗ, ಮಕರಂದಗಳಿಗಾಗಿ ಜೇನು ನೊಣಗಳು ಒಂದು ಬೆಳೆಯನ್ನು ಸಂದರ್ಶಿಸಿದರೆ, ಆ ಬೆಳೆಯಲ್ಲಿ ಅವುಗಳ ಸಂಗ್ರಹಣೆ ಮುಗಿಯುವ ತನಕ ಅದೇ ಬೆಳೆಯನ್ನು ಸಂದರ್ಶಿಸುತ್ತಿರುತ್ತವೆ. ಆ ಬೆಳೆಯ ಎಲ್ಲ ಹೂವುಗಳ ಪರಾಗ ಮತ್ತು ಮಕರಂದಗಳು ಮುಗಿದ ನಂತರವೇ ಬೇರೆ ಬೆಳೆಗೆ ಹೋಗಲು ಆರಂಭಿಸುತ್ತವೆ. ಹೀಗೆ ಒಂದು ಪ್ರದೇಶದಲ್ಲಿರುವ  ಒಂದೇ ಜಾತಿಯ ಗಿಡದ ಎಲ್ಲ ಹೂವುಗಳನ್ನು ಪದೇಪದೇ ಸಂದರ್ಶಿಸುವುದರಿಂದ ಬೆಳೆಗಳಲ್ಲಿ ಪರಾಗಸ್ಪರ್ಶಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಕೆಲಸ ನಿರ್ವಹಿಸುವ ಸಾಮರ್ಥ್ಯ : ಜೇನುನೊಣಗಳು ಇತರೆ ಕೀಟಗಳಿಗಿಂತ ಹೆಚ್ಚು ಕಾಲ ಆಹಾರ ಸಂಗ್ರಹಣೆಯಲ್ಲಿ ತೊಡಗಿರುತ್ತವೆ. ಈ ಕಾರ್ಯವನ್ನು ಬೆಳಗಿನಿಂದಲೇ ಆರಂಭಿಸಿ ಸಾಯಂಕಾಲದವರೆಗೆ ಅವಿರತವಾಗಿ ನಿರ್ವಹಿಸುತ್ತವೆ. ಅಲ್ಲದೆ ಹೆಜ್ಜೇನು ನೊಣಗಳು ಬೆಳದಿಂಗಳ ರಾತ್ರಿಯಲ್ಲಿಯೂ ನಿರಂತರವಾಗಿ ಆಹಾರ ಸಂಗ್ರಹಣೆ ಮಾಡುತ್ತವೆ. ಇಂದು ಜೇನುನೊಣ ಸುಮಾರು ೫೦೦೦ ಬಾರಿ ಹೂವುಗಳನ್ನು ಸ್ಪರ್ಷಿಸುವ ಶಕ್ತಿ ಹೊಂದಿದೆಯೆಂದು ಸಂಶೋಧನೆಗಳು ತಿಳಿಸಿವೆ.

ಮಕರಂದ ಮತ್ತು ಪರಾಗದ ಅವಶ್ಯಕತೆ : ಕುಟುಂಬದಲ್ಲಿ  ಜೇನುನೊಣಗಳು ತಮ್ಮ ಮರಿಹುಳುಗಳನ್ನು ಪೋಷಿಸಿ ಬೆಳೆಸುತ್ತವೆ. ಸಸಾರಜನಕವನ್ನು ಸಮೃದ್ಧವಾಗಿ ಒಳಗೊಂಡಿರುವ ಪರಾಗ ಮತ್ತು ಶರ್ಕರಪಿಷ್ಠ ಪದಾರ್ಥಗಳನ್ನು ಹೊಂದಿರುವ ಮಕರಂದ ಜೇನು ನೊಣಗಳಿಗೆ ಶಕ್ತಿಯ ಮೂಲಾಧಾರವಾಗಿವೆ. ಈ ನಿರಂತರ ಬೇಡಿಕೆಯನ್ನು ಪೂರೈಸಲು ಜೇನು ನೊಣಗಳು ವಿವಿಧ ಸಸ್ಯಗಳನ್ನು ಸಂದರ್ಶಿಸುತ್ತ ಪರಾಗ ಮತ್ತು ಮಕರಂದವನ್ನು ಸಂಗ್ರಹಿಸುವುದಲ್ಲದೆ ವಿಫುಲವಾಗಿ ಇವು ಲಭ್ಯವಿದ್ದಾಗ ಪರಾಗ ಮತ್ತು ಮಕರಂದವನ್ನು ಗೂಡಿನಲ್ಲಿ ಶೇಖರಿಸುವ ಉದ್ದೇಶದಿಂದ ಅನೇಕ ಬಾರಿ ಹೂವುಗಳನ್ನು ಸಂದರ್ಶಿಸುತ್ತವೆ.

ಪರಾಗ ಮತ್ತು ಮಕರಂದದ ಸಂಗ್ರಹಣೆ :  ಬೆಳೆಗಳು ಹೂವಿನ ಹಂತದಲ್ಲಿರುವಾಗ ಪರಾಗಸ್ಪರ್ಶಕ ಕೀಟಗಳ ಸಂಖ್ಯೆ ಅಧಿಕವಾದಷ್ಟೂ ಪರಾಗ ಸ್ಪರ್ಶ ಕ್ರಿಯೆ ಹೆಚ್ಚು ಪರಿಣಾಮಕಾರಿ. ಜೇನುನೊಣಗಳು ತಮ್ಮೊಳಗೆ ವಿಶಿಷ್ಟ ರೀತಿಯ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಆಹಾರದ ಮೂಲವನ್ನು ಪತ್ತೆ ಮಾಡಿ ತನ್ನ ಸಂಗಾತಿಗಳಿಗೆಲ್ಲ ನೃತ್ಯದ ಮೂಲಕ ತಿಳಿಯಪಡಿಸಿ ಆಹಾರಕ್ಕಾಗಿ ಅವೆಲ್ಲವೂ ಅದೇ ಪ್ರದೇಶಕ್ಕೆ ಬರುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ಅಧಿಕ ಸಂಖ್ಯೆಯ ನೊಣಗಳು ಬೆಳೆಯ ಹೂವುಗಳನ್ನು ಸಂದರ್ಶಿಸುವುದರಿಂದ ಪರಾಗಸ್ಪರ್ಶ ಕ್ರಿಯೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಹವಾಮಾನಕ್ಕೆ ಹೊಂದಿಕೊಳ್ಳುವ ಗುಣ : ಜೇನುನೊಣಗಳ ಪ್ರಭೇದಗಳು ವಿಶ್ವದ ಎಲ್ಲ ಭಾಗಗಳಲ್ಲಿಯೂ ವಿತರಣೆಯಾಗಿದ್ದು ಪರಿಸರದ ಎಲ್ಲಾ ಪರಿಸ್ಥಿತಿಗಳಿಗೂ ಹೊಂದಿಕೊಳ್ಳಬಲ್ಲವಾಗಿವೆ. ೧೫ ಡಿಗ್ರಿ ಸೆ.ನಿಂದ ೩೮ ಡಿಗ್ರಿ ಸೆ. ಉಷ್ಣಾಂಶದಲ್ಲಿಯೂ ಸಹ ಇವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆಂದು ತಿಳಿಯಲಾಗಿದೆ. ಸ್ವಕೀಯ ಮತ್ತು ಪರಕೀಯ ಪರಾಗಸ್ಪರ್ಶಗಳೆರಡರಲ್ಲಿಯೂ ಜೇನುನೊಣಗಳ ಪಾತ್ರವಿದ್ದರೂ ಸಾಕಷ್ಟು ಬೆಳೆಗಳಲ್ಲಿ ಇವು ಪರಕೀಯ ಪರಾಗಸ್ಪರ್ಶವನ್ನುಂಟುಮಾಡುತ್ತವೆ. ಪರಕೀಯ ಪರಾಗಸ್ಪರ್ಶದಿಂದ ವಂಶವಾಹಿಗಳ ಮರುಸಂಯೋಜನೆಯಾಗಿ ಸಸ್ಯಗಳಲ್ಲಿ ವೈವಿಧ್ಯತೆ ಉಂಟಾಗುವುದರಿಂದ ಹೊಸ ಸಂಕರನ ತಳಿ ಅಥವಾ ಪ್ರಭೇದಗಳು ಉಂಟಾಗುತ್ತಿರುತ್ತವೆ. ಆಧುನಿಕ ಕೃಷಿ ವಿಜ್ಞಾನದಲ್ಲಿ ತಳಿ ಶಾಸ್ತ್ರದ ವಿಜ್ಞಾನಿಗಳು ಹೊಸ ಸಂಕರಣ ತಳಿಗಳ ಸೃಷ್ಟಿಗೆ ನಿರಂತರ ಪ್ರಯತ್ನಗಳು ನಡೆಸುತ್ತಿದ್ದರೂ, ಸ್ವಾಭಾವಿಕವಾಗಿಯೇ ಈ ಕಾರ್ಯವನ್ನು ಮಾಡುತ್ತಿರುವ ಜೇನುನೊಣಗಳು ನೈಸರ್ಗಿಕ ತಳಿಸಂವರ್ಧಕಗಳಾಗಿವೆ.

ಕೋಷ್ಠಕ ೧೫ : ಹುಚ್ಚೆಳ್ಳು ಬೆಳೆಯ ಇಳುವರಿಯಲ್ಲಿ ಜೇನುನೊಣಗಳ ಪರಾಗಸ್ಪರ್ಶದ ಪ್ರಭಾವ

ಪರಾಗಸ್ಪರ್ಶ ವಿಧಾನಗಳು

ಪ್ರತಿ ಹೂವಿನಲ್ಲಿ ಬೀಜಗಳ ಸಂಖ್ಯೆ

ಶೇಕಡಾವಾರು ಬಲಿತ ಬೀಜಗಳು

೧೦೦೦ ಬೀಜಗಳ ತೂಕ (ಗ್ರಾಂಗಳಲ್ಲಿ)

ಒಟ್ಟಿನ ಇಳುವರಿ (ಕಿ.ಗ್ರಾಂ / ಹೆಕ್ಟೇರ್)

ಜೇನುನೊಣಗಳಿಂದ ಪರಾಗಸ್ಪರ್ಶ ೬೩.೫ ೭೧.೬೦ ೪.೯೮ ೬೧೧.೪೫
ಮುಕ್ತ ಪರಾಗಸ್ಪರ್ಶ ೬೪.೦೦ ೬೪.೨೦ ೪.೩೨ ೫೬೧.೪೭
ಸ್ವಕೀಯ ಪರಾಗಸ್ಪರ್ಶ ೫೭.೩೦ ೨೬.೧೦ ೩.೨೧ ೨೭೭.೪೭

(ಮೂಲ : ರೆಹಮಾನ್, ೧೯೯೩)

ಜಗತ್ತಿನಾದ್ಯಂತ ವಿವಿಧ ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳಲ್ಲಿ ನಡೆಸಲಾದ ಸಂಶೋಧನೆಗಳಲ್ಲಿ, ಜೇನುನೊಣಗಳ ಪರಾಗಸ್ಪರ್ಶದಿಂದ ಹಾಗೂ ಇತರೆ ಮೂಲಗಳ ಪರಾಗಸ್ಪರ್ಶದಿಂದ ವಿವಿಧ ಬೆಳೆಗಳಲ್ಲಿ ಬರುವ ಉತ್ಪಾದನೆ ಹಾಗೂ ಗುಣಮಟ್ಟವನ್ನು ಹೋಲಿಸಿ ನೋಡಲಾಗಿದ್ದು, ಜೇನುನೊಣದ ಪರಾಗಸ್ಪರ್ಶ ಇತರೆ ವಿಧಾನಗಳಿಗಿಂತ ಶ್ರೇಷ್ಠ ಮಟ್ಟದಾಗಿರುವುದು ಕಂಡುಬಂದಿದೆ. ಉದಾಹರಣೆಗೆ ಕೋಷ್ಟಕ ೧೪,೧೫ ಮತ್ತು ೧೬ ರಲ್ಲಿ ಹುಚ್ಚೆಳ್ಳು, ಮೂಲಂಗಿ ಮತ್ತು ಸೂರ್ಯಕ್ರಾಂತಿ ಬೆಲೆಗಳಲ್ಲಿ ಜೇನುನೊಣದ ಪರಾಗಸ್ಪರ್ಶವು, ತುಂಬಿದ ಬೀಜಗಳ ಸಂಖ್ಯೆ, ಬೀಜಗಳ ತೂಕ, ಈಳುವರಿ, ಶೇಕಡಾವಾರು ಕಾಯಿಕಟ್ಟುವಿಕೆ, ಕಾಯಿಗಳಲ್ಲಿ ಬೀಜಗಳ ಸಂಖ್ಯೆ, ಎಣ್ಣೆಯ ಅಂಶ ಇತ್ಯಾದಿ ಗುಣಮಟ್ಟಗಳನ್ನು ಗಮನಾರ್ಹವಾಗಿ ಹೆಚ್ಚಿಸಿರುವುದನ್ನು ಕಾಣಬಹುದು. ಜೇನುನೊಣಗಳಿಂದಾಗುವ ಪರಾಗಸ್ಪರ್ಶದ ಶ್ರೇಷ್ಠತೆಗೆ ಕೆಳಗಿನ ಅಂಶಗಳು ಕಾರಣವಾಗಿವೆ.

  • ಜೇನುನೊಣಗಳು ಪರಾಗರೇಣುವು ಶಲಾಕಾಗ್ರದ ಮೇಲೆ ಮೊಳಕೆಯೊಡೆದುವುದನ್ನು ಪ್ರಚೋದಿಸುವುದರಿಂದ, ಪರಾಗರೇಣುವಿನಲ್ಲಿರುವ ಜೀವಾಣು ಬೇಗನೆ ಅಂಡಾಶಯವನ್ನು ಪ್ರವೇಶಿಸಿ, ಗರ್ಭಕಟ್ಟುವಿಕೆಯ ಕ್ರಿಯೆ ಅತಿ ಶೀಘ್ರದಲ್ಲಿ ನಡೆಯುತ್ತದೆ.
  • ಜೇನುನೊಣಗಳ ಪರಾಗಸ್ಪರ್ಶದಿಂದ ಉತ್ಪತ್ತಿಯಾದ ಬೀಜಗಳು ಸದೃಢವಾಗಿದ್ದು ಅವುಗಳ ಬಾಳಿಕೆ, ಎಣ್ಣೆಯ ಅಂಶ, ಗಾತ್ರ ಮತ್ತು ತೂಕ ಹೆಚ್ಚಾಗಿರುತ್ತದೆ. ಅಲ್ಲದೆ ಅವುಗಳ ಮೊಳಕೆಯೊಡೆಯುವ ಶೇಕಡಾವಾರು ಪ್ರಮಾಣ ಅಧಿಕವಾಗಿದ್ದು, ಹುಟ್ಟಿಬರುವ ಸಸ್ಯಗಳು ಹೆಚ್ಚು ಆರೋಗ್ಯದಿಂದ ಬೇಗನೆ ಬೆಳೆಯುವ ಶಕ್ತಿಯನ್ನು ಹೊಂದಿರುತ್ತವೆ.

ಕೋಷ್ಠಕ ೧೬ : ಮೂಲಂಗಿ ಬೆಳೆಯ ಬೀಜೋತ್ಪಾದನೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದಾಗುವ ಪರಿಣಾಮಗಳು

 

ಪರಾಗಸ್ಪರ್ಶ ವಿಧಾನಗಳು

ಶೇಕಡಾವಾರು ಕಾಯಿ ಕಟ್ಟುವಿಕೆ

ಕಾಯಿಗಳ

೧೦೦೦ ಬೀಜಗಳ ತೂಕ (ಗ್ರಾಂಗಳಲ್ಲಿ)

ಬೀಜಗಳ ಸಂಖ್ಯೆ (ಕಿ.ಗ್ರಾಂ / ಹೆಕ್ಟೇರ್)

ಉದ್ದ

ವ್ಯಾಸ

ಜೇನುನೊಣಗಳಿಂದ ೫೧.೦೦ ೪೩.೦೦ ೬.೭೦ ೦.೯೩ ೪.೩೦
ಪರಾಗಸ್ಪರ್ಶ          
ಮುಕ್ತ ಪರಾಗಸ್ಪರ್ಶ ೬೪.೦೦ ೪೫.೦೦ ೬.೫೦ ೧.೦೦ ೩.೭೦
ಯಾವುದೇ          
ಪರಾಗಸ್ಪರ್ಶಕವಿಲ್ಲದೆ ೯.೦೦ ೩೫.೦೦ ೬.೮೦ ೦.೦೪ ೩.೦೦

(ಮೂಲ : ಸೆರ್ವಾನ್ಸಿಯ ಮತ್ತು ಪೋರಬೆಸ್, ೧೯೯೩)

 ಕೋಷ್ಟಕ ೧೭ : ಸೂರ್ಯಕಾಂತಿ ಸಂಕರಣ ಬೀಜೋತ್ಪಾದನೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದಾಗುವ ಪರಿಣಾಮ

 

ಪರಾಗಸ್ಪರ್ಶ ವಿಧಾನಗಳು

ತುಂಬಿದ ಬೀಜಗಳ ತೂಕ (ಗ್ರಾಂ)

ಬಲಿತ ಬೀಜಗಳ ಸಂಖ್ಯೆ

ಎಣ್ಣೆಯ ಅಂಶ (ಶೇ.)

ಕೈಯಿಂದ ಕೃತಕ ಪರಾಗಸ್ಪರ್ಶ ೧೨.೯೮ ೩೬೦.೧೪ ೩೮.೪೦
ಕೋಲು ಜೇನುನೊಣಗಳಿಂದ ಮಾತ್ರ ಪರಾಗಸ್ಪರ್ಶ ೧೩.೫೯ ೩೩೦.೪೦ ೪೨.೨೦
ಜೇನುನೊಣಗಳಿಂದಲೇ ಪರಾಗಸ್ಪರ್ಶ ೨೫.೪೦ ೫೦೧.೧೩ ೫೩.೧೦
ಕೈಯಿಂದ ಮತ್ತು ಜೇನುನೊಣಗಳಿಂದ ಪರಾಗಸ್ಪರ್ಶ ೨೪.೭೫ ೫೩೪.೭೩ ೪೬.೦೦
ಯಾವುದೇ ವಿಧದ ಪರಾಗಸ್ಪರ್ಶವಿಲ್ಲದೆ ೫.೧೬ ೫೩.೧೭ ೩೯.೧೦

(ಮೂಲ : ರಾಜಗೋಪಾಲ್ ಮತ್ತು ಇತರರು, ೧೯೯೯)

  • ಯಾವುದೇ ಬೆಳೆಗಳಲ್ಲಿ ಹಣ್ಣು ಅಥವಾ ಕಾಯಿಯ ಆಕಾರ ಮತ್ತು ಗಾತ್ರ ಅವುಗಳೊಳಗಿನ ಬೀಜಗಳ ಬೆಳವಣಿಗೆಯ ಮೇಲೆ ಆಧಾರಿತವಾಗಿರುತ್ತದೆ. ಕಲ್ಲಂಗಡಿ, ಕರ್ಬೂಜ, ಸೌತೆ ಮತ್ತು ಕುಂಬಳ ಜಾತಿಯ ಇತರೇ ಬೆಳೆಗಳಲ್ಲಿ ಹೆಚ್ಚು ಸಂಖ್ಯೆಯ ಬೀಜಗಳು ಹುಟ್ಟಿಕೊಳ್ಳಲು ಜೇನುನೊಣಗಳು ಪದೇ ಪದೇ ಸಂದರ್ಶಿಸುವುದೇ ಕಾರಣವಾಗಿ, ಕಾಯಿಗಳು ಒಳ್ಳೆಯ ಆಕಾರ ಮತ್ತು ಗಾತ್ರವನ್ನು ಹೊಂದಿರುತ್ತವೆ. ಕೋಷ್ಟಕ ೧೭ ಮತ್ತು ೧೮ ನ್ನು ಗಮನಿಸಿದಾಗ, ಜೇನುನೊಣಗಳ ಉಪಸ್ಥಿತಿಯಲ್ಲಿ ಶೇಕಡಾವಾರು ಕಾಯಿಕಟ್ಟುವಿಕೆ ಅಧಿಕವಾಗಿದ್ದು, ವಕ್ರಾಕಾರದ ಶೇಕಡಾವಾರು ಹಣ್ಣುಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿರುವುದು ಮತ್ತು ಜೇನುನೊಣಗಳು ಹೂವುಗಳನ್ನು ಸಂದರ್ಶಿಸುವ ಆವರ್ತನೆಯ ಹೆಚ್ಚಿದಂತೆಲ್ಲ, ಶೇಕಡಾವಾರು ಕಾಯಿಕಟ್ಟುವಿಕೆ, ಹಣ್ಣಿನ ಸರಾಸರಿ ತೂಕ ಮತ್ತು ಪ್ರತಿ ಹಣ್ಣಿನಲ್ಲಿನ ಸರಾಸರಿ ಬೀಜಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ, ಬೆಳೆಗಳ ಇಳುವರಿ ಗಮನಾರ್ಹವಾಗಿ ಹೆಚ್ಚಾಗುತ್ತದೆ

ಅನೇಕ ಸಸ್ಯಗಳು, ಅದರಲ್ಲೂ ಆರ್ಥಿಕ ಮಹತ್ವವನ್ನು ಹೊಂದಿರುವ ಬಹಳಷ್ಟು ಗಿಡಮರಗಳು ಮತ್ತು ಬೆಳೆಗಳು ತಮ್ಮ ಹೂವುಗಳ ವಿಶಿಷ್ಟ ರಚನೆಯಿಂದಾಗಿ ಪರಾಗಸ್ಪರ್ಶಕ್ಕಾಗಿ ಕೀಟಗಳನ್ನೇ ಅವಲಂಬಿಸಿವೆ. ಉದಾಹರಣೆಗೆ,

  • ಪಪಾಯ, ಖರ್ಜೂರ, ಆಸ್ಪಾರಗಸ್ ಮತ್ತು ಸ್ಪಿನಾಚ್ ಮುಂತಾದವುಗಳಲ್ಲಿ ಗಂಡು ಮತ್ತು ಹೆಣ್ಣು ಹೂವುಗಳನ್ನು ಹೊಂದಿರುವ ಸಸ್ಯಗಳು ಬೇರೆ ಬೇರೆಯಾಗಿರುತ್ತವೆ. ಇಲ್ಲಿ ಗಂಡು ಸಸ್ಯದ ಹೂವಿನಿಂದ ಪರಾಗರೇಣುಗಳು ಹೆಣ್ಣು ಸಸ್ಯದ ಹೂವಿಗೆ ವರ್ಗಾವಣೆಯಾದಲ್ಲಿ ಮಾತ್ರ ಫಲಬಿಡುತ್ತವೆ.
  • ತೆಂಗು, ಮಾವು, ಸ್ಟ್ರಾಬೆರಿ ಮತ್ತು ಕುಂಬಳ ಜಾತಿಯ ಸಸ್ಯಗಳಲ್ಲಿ ಒಂದೇ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೂವುಗಳಿದ್ದರೂ ಅವು ಹೂಗೊಂಚಲಿನ ಅಥವಾ ಸಸ್ಯದ ಬೇರೆ ಬೇರೆ ಭಾಗಗಳಲ್ಲಿರುತ್ತವೆ. ಹೀಗಾಗಿ ಗಂಡು ಹೂವಿನಿಂದ ಪರಾಗರೇಣುವಿನ ವರ್ಗಾವಣೆಗೆ ಮಧ್ಯವರ್ತಿಯ ಅವಶ್ಯಕತೆ ಹೆಚ್ಚಾಗಿರುತ್ತದೆ.
  • ಹುಣಸೆ, ಕರಿಮೆಣಸು, ಇತ್ಯಾದಿಗಳು ಗಂಡು ಮತ್ತು ಹೆಣ್ಣು ಭಾಗಗಳನ್ನು ಹೊಂದಿರುವ ಪರಿಪೂರ್ಣ ಹೂವುಗಳನ್ನು ಹೊಂದಿರುತ್ತವೆ. ಆದರೆ ಶಲಾಕಾಗ್ರ, ಪರಾಗಕೋಶಗಳಿಗಿಂತ ಹೆಚ್ಚು ಎತ್ತರದಲ್ಲಿರುವುದರಿಂದ ಪರಾಗರೇಣುಗಳು ಶಲಾಕಾಗ್ರವನ್ನು ತಲುಪಲು ಪರಾಗಸ್ಪರ್ಶಕಗಳ ಅವಶ್ಯಕತೆ ಇರುತ್ತದೆ.
  • ಸಜ್ಜೆಯಲ್ಲಿ ಪರಾಗಕೋಶ ಒಡೆದು ಪರಾಗರೇಣುಗಳು ಬಿಡುಗಡೆಯಾಗುವ ಅದೇ ತೆನೆಯಲ್ಲಿನ ಶಲಾಕಾಗ್ರಗಳು ಅವುಗಳನ್ನು ಸ್ವೀಕರಿಸುವ ಪ್ರಾಪ್ತ ಹಂತವನ್ನು ತಲುಪಿರುವುದಿಲ್ಲ. ಅದೇ ರೀತಿ ಶುಗರ್‌ಬೀಟ್‌ನಲ್ಲಿ ಶಲಾಕಾಗ್ರ ಪರಾಗರೇಣುಗಳನ್ನು ಸ್ವೀಕರಿಸುವ ಹಂತದಲ್ಲಿದ್ದಾಗ ಪರಾಗಕೋಶದಿಂದ ಅವುಗಳ ಬಿಡುಗಡೆಯಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಶಲಾಕಾಗ್ರ ಪ್ರಾಪ್ತ ಹಂತದಲ್ಲಿದ್ದಾಗ ಅದೇ ಜಾತಿಯ ಬೇರೊಂದು ಸಸ್ಯದಿಂದ ಪರಾಗರೇಣುಗಳ ವರ್ಗಾವಣೆಯಾಗಬೇಕಾಗುತ್ತದೆ.
  • ಸಾಸಿವೆ, ರೈ, ಹೂಕೋಸು, ಮೂಲಂಗಿ ಮತ್ತು ಕೆಲವು ತಂಬಾಕಿನ ತಳಿಗಳಲ್ಲಿ ಅದೇ ಸಸ್ಯದ ಹೂವಿನ ಪರಾಗರೇಣು ಅದೇ ಹೂವಿನ ಶಲಾಕೆಯನ್ನು ಪ್ರವೇಶಿಸಲು, ಗಾತ್ರದಲ್ಲಿನ ವ್ಯತ್ಯಾಸ ಮತ್ತಿತರ ಕಾರಣಗಳಿಂದ ಅಸಮರ್ಥವಾಗಿರುತ್ತದೆ. ಇವುಗಳಲ್ಲಿ ಪರಿಣಾಮಕಾರಿ ಪರಾಗಸ್ಪರ್ಶಕ್ಕಾಗಿ ಬೇರೆ ಸಸ್ಯಗಳಿಂದ ಮಾತ್ರ ಪರಾಗರೇಣುಗಳ ವರ್ಗಾವಣೆಯಾಗಬೇಕಾಗಿದೆ.
  • ಸಂಕರಣ ಬೀಜಗಳ ಉತ್ಪಾದನೆಗೆಂದು ಹಲವಾರು ಬೆಳೆಗಳಲ್ಲಿ ಬರಡು ಪರಾಗರೇಣುಗಳನ್ನು ಹೊಂದಿರುವ ಅಥವಾ ಪರಾಗರೇಣುಗಳು ಇಲ್ಲದೇ ಇರುವ ಸಾಲುಗಳನ್ನು ಬೆಳೆಸಿಕೊಳ್ಳಲಾಗುತ್ತದೆ. ಇವುಗಳಲ್ಲಿ ಪರಾಗಸ್ಪರ್ಶವಾಗಲು  ಫಲವತ್ತಾದ ಸಾಲುಗಳಿಂದ ಪರಾಗರೇಣುಗಳ ವರ್ಗಾವಣೆಯಾಗಬೇಕಾಗುತ್ತದೆ.
  • ಕುದುರೆ ಮಸಾಲೆ ಸಸ್ಯಗಳಲ್ಲಿ ಶಲಾಕಾಗ್ರವು ತೆಳುವಾದ ಮೇಣದ ಪೊರೆಯನ್ನು ಹೊಂದಿರುತ್ತದೆ. ಈ ಪೊರೆ ಕಳಚಿ ಹೋಗುವವರೆಗೆ ಅದು ಪರಾಗರೇಣುಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿರುವುದಿಲ್ಲ. ಈ ಪೊರೆಯು ಜೇನುನೊಣಗಳ ಓಡಾಟದಿಂದ ಮುರಿದು ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.

ಕೋಷ್ಟಕ ೧೮ : ಕಲ್ಲಂಗಡಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದಾಗುವ ಪರಿಣಾಮಗಳು

ಪರಾಗಸ್ಪರ್ಶ ವಿಧಾನಗಳು

ಶೇಕಡಾವಾರು ಕಾಯಿಕಟ್ಟುವಿಕೆ

ವಕ್ರವಾಗಿರುವ ಹಣ್ಣುಗಳ ಶೇಕಡಾವಾರು ಸಂಖ್ಯೆ

ಜೇನುನೊಣಗಳ ಅನುಪಸ್ಥಿತಿಯಲ್ಲಿ ೯.೦೦ ೪೯.೯೯
ಜೇನುನೊಣಗಳ ಉಪಸ್ಥಿತಿಯಲ್ಲಿ ೪೩.೩೦ ೧೪.೧೩
ಕಡ್ಡಿ ಜೇನುನೊಣಗಳ ಉಪಸ್ಥಿತಿಯಲ್ಲಿ ೨೯.೧೦ ೨೧.೫೬

(ಮೂಲ : ಗ್ರೇವಾಲ್ ಮತ್ತು ಸಿಧು ೧೯೭೫)

ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಜೇನುನೊಣಗಳು ಮಹತ್ತರದ ಪಾತ್ರವಹಿಸಿ ಪರಾಗಸ್ಪರ್ಶವನ್ನುಂಟು ಮಾಡುತ್ತವೆ. ಜೇನುನೊಣಗಳಿಲ್ಲದೆ ಈ ಕ್ರಿಯೆ ಪರಿಣಾಮಕಾರಿಯಾಗಿರದೆ ಅತಿ ಕಡಿಮೆ ಇಳುವರಿಗೆ ಕಾರಣವಾಗಬಹುದೆಂದು ತಿಳಿಯಬಹುದು. ಜೇನುಕೃಷಿ ತಜ್ಞ ಡಾ.ಎನ್.ಪಿ. ಗೋಯಲ್‌ರವರು, ಭಾರತದಲ್ಲಿ ಜೇನುನೊಣಗಳಿಂದ ಉಂಟಾಗಬಹುದಾದ ಪರಾಗಸ್ಪರ್ಶದ ಕೊರತೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿನ ಆರ್ಥಿಕ ನಷ್ಟ ವಾರ್ಷಿಕ ೩೦೦೦ ಕೋಟಿ ರೂಪಾಯಿಗಳಷ್ಟು ಎಂದು ಅಂದಾಜು ಮಾಡಿದ್ದಾರೆ.

ಪರಾಗಸ್ಪರ್ಶಕ್ಕಾಗಿ ಜೇನುನೊಣಗಳನ್ನು ಅವಲಂಭಿಸಿರುವ ಬೆಳೆಗಳು

ಭಾರತದಲ್ಲಿನ ಅನೇಕ ಬೆಳೆಗಳು ಪರಗಸ್ಪರ್ಶಕ್ಕಾಗಿ ಜೇನುನೊಣಗಳನ್ನು ಅವಲಂಭಿಸಿವೆ. ಅವುಗಳಲ್ಲಿ, ಎಣ್ಣೆಕಾಳು ಬೆಳೆಗಳಾದ ಸಾಸಿವೆ, ಹುಚ್ಚೆಳ್ಳು, ಕುಸುಮೆ, ಎಳ್ಳು, ಸೂರ್ಯಕಾಂತಿ, ಅಗಸೆ, ದ್ವಿದಳ ಧಾನ್ಯಗಳಾದ ತೊಗರಿ, ಉದ್ದು, ಹೆಸರು, ಸೋಯಾ ಅವರೆ, ಗೋರಿಕಾಯಿ, ಅಲಸಂದೆ, ಬಟಾಣಿ, ಮೇವಿನ ಬೆಳೆಗಳಾದ ಕುದುರೆ ಮಸಾಲೆ, ಬರ್ಸೀಮ್ ಮತ್ತು ಕೋವರ್, ತರಕಾರಿಗಳಾದ ಕುಂಬಳ, ಸೀಮೆಬದನೆ, ಸೌತೆ, ತೊಂಡೆ, ನುಗ್ಗೆ, ಪಡವಲ, ಹಾಗಲ, ಹೀರೆ, ಕ್ಯಾರೆಟ್, ಮೂಲಂಗಿ. ಎಲೆಕೋಸು, ಗೆಡ್ಡೆ ಕೋಸು, ಹೂಕೋಸು, ಈರುಳ್ಳಿ, ಹಣ್ಣಿನ ಬೆಳೆಗಳಾದ ಕಲ್ಲಂಗಡಿ, ಕರ್ಬೂಜ, ಮೂಸಂಬಿ, ಕಿತ್ತಳೆ, ನಿಂಬೆ, ಸ್ಟ್ರಾಬೆರಿ, ಸೀಬೆ, ದಾಳಿಂಬೆ, ಸೇಬು, ಮಾವು ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ, ಕಾಫಿ, ತಂಬಾಕು, ಏಲಕ್ಕಿ, ತೆಂಗು, ಅಡಿಕೆ ಇತ್ಯಾದಿ ಪ್ರಮುಖವಾದವುಗಳು. ಈ ಬೆಳೆಗಳಲ್ಲಿ ಜೇನುನೊಣಗಳಿರುವ ಪೆಟ್ಟಿಗೆಗಳನ್ನು ಇಟ್ಟಾಗ ಉಂಟಾದ ಶೇಕಡಾವಾರು ಅಧಿಕ ಇಳುವರಿಯನ್ನು ಕೋಷ್ಟಕ ೧೭, ೧೮ ಮತ್ತು ೧೯ ರಲ್ಲಿ ಕೊಡಲಾಗಿದೆ.

ಕೊಷ್ಟಕ ೧೯ : ವಿವಿಧ ಬೆಳೆಗಳಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಉಂಟಾದ ಶೇಕಡಾವಾರು ಇಳುವರಿ

ಬೆಳೆ ಶೇ. ಅಧಿಕ ಇಳುವರಿ ಬೆಳೆ ಶೇ. ಅಧಿಕ ಇಳುವರಿ
ಅಗಸೆ ೨ – ೪೯ ಮೂಲಂಗಿ ೧೦೦ – ೧೨೫
ಸಾಸಿವೆ ೧೩ – ೨೨೨ ಸೇಬು ೧೮೦ – ೬೯೫೦
ಹುಚ್ಚೆಳ್ಳು ೧೭ – ೨೫೦ ಸೌತೆ, ಕುಂಬಳ ೨೧ – ೬೭೦೦
ಕುಸುಮೆ ೪ – ೧೧೪ ದ್ರಾಕ್ಷಿ ೨೩ – ೫೪
ಸೂರ್ಯಕಾಂತಿ ೨೧ – ೩೪೦೦ ಸೀಬೆ ೧೨ – ೭೦
ಕೋಸು ೯ – ೧೩೫ ಕಾಫಿ ೧೭ – ೩೯
ಕ್ಯಾರಟ್ ೩೫೪ – ೯೮೭೮ ಹತ್ತಿ ೨ – ೫೦
ಈರುಳ್ಳಿ ೨೨ – ೧೦೦ ಅವರೆ ೮ – ೯೦

(ಮೂಲ : ಡಿಯೋಡಿಕರ್ ಮತ್ತು ಸೂರ್ಯನಾರಾಯಣ, ೧೯೯೭)

ಯಾವುದೇ ಬೆಳೆಯಲ್ಲಿ ಪರಾಗಸ್ಪರ್ಶಕ್ಕೆಂದು ಜೇನು ಕುಟುಂಬಗಳನ್ನು ಇರಿಸಿದಾಗ ಜೇನುನೊಣಗಳಿಂದ ಈ ಕ್ರಿಯೆ ಗರಿಷ್ಠ ಪ್ರಮಾಣದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದುದು ಆರ್ಥಿಕ ದೃಷ್ಟಿಯಿಂದ ಅತ್ಯಂತ ಅವಶ್ಯಕ. ಆದ್ದರಿಂದ ಯಾವ ಅಂಶಗಳ ಮೇಲೆ ಜೇನುನೊಣಗಳ ಕಾರ್ಯದಕ್ಷತೆ ಅವಲಂಬಿತವಾಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಜೇನು ಕುಟುಂಬದಲ್ಲಿನ ನೊಣಗಳ ಸಂಖ್ಯೆ : ಬಲಯುತವಾದ ಕುಟುಂಬಗಳು ಬಲಹೀನ ಕುಟುಂಬಗಳಿಗಿಂತ ಉತ್ತಮ. ಏಕೆಂದರೆ ಬಲಯುತ ಕುಟುಂಬಗಳಲ್ಲಿ ಆಹಾರ ಸಂಗ್ರಹಿಸುವ ಪ್ರೌಢ ನೊಣಗಳು ಶೇಕಡಾವಾರು ಸಂಖ್ಯೆ ಅಧಿಕವಾಗಿರುತ್ತದೆ. ಹೆಚ್ಚು ಸಂಖ್ಯೆಯಲ್ಲಿ ನೊಣಗಳು ಹೂವುಗಳನ್ನು ಸಂದಶಿಸುವುದರಿಂದ ಪರಾಗಸ್ಪರ್ಶ ಕ್ರಿಯೆ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ. ಆದ್ದರಿಂದ ಪರಾಗ ಸ್ಪರ್ಶಕ್ಕಾಗಿ ಇಟ್ಟಿರುವ ಕುಟುಂಬವು ಚೆನ್ನಾಗಿ ಹೊಂದಿಕೊಂಡಿದ್ದು ಹೆಚ್ಚು ಮೊಟ್ಟೆಯನ್ನಿಡುವ ರಾಣಿನೊಣಗಳನ್ನು ಹೊಂದಿರಬೇಕು. ಕುಟುಂಬದಲ್ಲಿ ಕನಿಷ್ಠ ಆರು ಎರಿಗಳನ್ನು ಮುಚ್ಚಬಹುದಾದಷ್ಟು ಸಂಖ್ಯೆಯನ್ನೊಳಗೊಂಡಿರುವ ಆರೋಗ್ಯಪೂರ್ಣ ಪ್ರೌಢ ಜೇನುನೊಣಗಳಿರಬೇಕು.

ಕೋಷ್ಟಕ ೨೦: ಜೇನುನೊಣಗಳ ಪರಾಗಸ್ಪರ್ಶದಿಂದ ವಿವಿಧ ಬೆಳೆಗಳಲ್ಲಿ ಶೇಕಡವಾರು ಅಧಿಕ ಇಳುವರಿ

ಕ್ರ. ಸಂ ಬೆಳೆಗಳು ಶೇಕಡವಾರು ಅಧಿಕ ಇಳುವರಿ
ಸೂರ್ಯಕಾಂತಿ ೪೫ – ೫೦
ಸಾಸಿವೆ ೪೫ – ೫೦
ಹತ್ತಿ ೨೫ – ೫೦
ಟೊಮ್ಯಾಟೋ ೨೫ – ೩೦
ಕುಂಬಳ ಜಾತಿಯ ಬೆಳೆಗಳು ೧೦೦ – ೧೫೦
ಸೌತೆ ಜಾತಿಯ ಬೆಳೆಗಳು ೨೫ – ೩೦
ಕಲ್ಲಂಗಡಿ ೮೦ – ೯೦
ದ್ರಾಕ್ಷಿ ೨೫ – ೩೦
ನಿಂಬೆ ಜಾತಿ ಬೆಳೆಗಳು ೫೦ – ೫೫
೧೦ ಸೇಬು ೫೦ – ೬೦
೧೧ ಲವಂಗ ೫೦ – ೬೦
೧೨ ಏಲಕ್ಕಿ ೯೦ – ೯೫

 ಪ್ರತಿ ಎಕರೆ ಪ್ರದೇಶದಲ್ಲಿ ಇರಿಸಬೇಕಾದ ಜೇನು ಕುಟುಂಬಗಳ ಸಂಖ್ಯೆ : ಪರಿಣಾಮಕಾರಿ ಪರಾಗಸ್ಪರ್ಶ ಬೇಕಾದ ಜೇಣು ಕುಟುಂಬಗಳ ಸಂಖ್ಯೆ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿರುವ, ಬೆಳೆ, ಸಸ್ಯಗಳ ಸಂಖ್ಯೆ (ಬೆಳೆಯ ಸಾಂದ್ರತೆ), ಒಟ್ಟಾರೆ ಹೂ ಅಥವಾ ಹೂ ಗೊಂಚಲುಗಳ ಸಂಖ್ಯೆಗನುಸಾರವಾಗಿ ಹೆಚ್ಚು ಕಡಿಮೆಯಾಗಿರುತ್ತದೆ. ಉದಾಹರಣೆಗೆ ತೆಂಗು ಮತ್ತು ಮಾವಿನಂತಹ ಬೆಳೆಗಳಲ್ಲಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿನ ಗಿಡಗಳ ಸಂಖ್ಯೆ ವಾರ್ಷಿಕ ಬೆಳೆಗಳಿಗಿಂತ ಅತ್ಯಂತ ಕಡಿಮೆ. ಇಂತಹ ಬೆಳೆಗಳಿಗೆ ಕಡಿಮೆ ಕುಟುಂಬಗಳು ಸಾಕಾಗುತ್ತವೆ. ಸೌತೆ ಜಾತಿಯ ಬೆಳೆಗಳಲ್ಲಿ ಸಸ್ಯಗಳ ಹಾಗೂ ಹೂವುಗಳ ಸಂಖ್ಯೆಯು ಅಧಿಕವಾಗಿರುವುದರಿಂದ ಹೆಚ್ಚು ಕುಟುಂಬಗಳು ಬೇಕಾಗುತ್ತವೆ. ಜೇನುನೊಣಗಳಿಂದ ಪರಾಗಸ್ಪರ್ಶದ ಅವಶ್ಯಕತೆ ಇರುವ ಎಲ್ಲ ಬೆಳೆಗಳಲ್ಲಿ ನಿಖರವಾಗಿ ಬೇಕಾಗುವ ಜೇನು ಕುಟುಂಬಗಳ ಸಂಖ್ಯೆಯನ್ನು ನಿರ್ಧರಿಸಲಾಗಿಲ್ಲ. ಲಭ್ಯವಿರುವ ಮಾಹಿತಿಗಳ ಪ್ರಕಾರ ಕೆಲವು ಬೆಳೆಗಳಿಗೆ ಬೇಕಾಗಿರುವ ಜೇನು ಕುಟುಂಬಗಳ ಸಂಖ್ಯೆ ಪ್ರತಿ ಹೆಕ್ಟೇರಿಗೆ ಬೇರೆ ಬೇರೆಯಾಗಿರುವುದನ್ನು ಮುಂದೆ ತಿಳಿಸಲಾಗಿದೆ:

ಬಾದಾಮಿ ಮತ್ತು ಸೌತೇ ಜಾತಿಯ ಬೆಳೆಗಳು ೮ – ೧೦
ಎಪ್ರಿಕಾಟ್ಸ್ ಮತ್ತು ಪೀಚ್‌ಗಳಿಗೆ ೬ – ೮
ಹತ್ತಿ, ಸಾಸಿವೆ, ಚೆರಿ ಮತ್ತು ಪ್ಲಮ್‌ಗಳು ೪ – ೬
ದ್ರಾಕ್ಷಿ, ಪಪಾಯ, ಸೀಬೆ, ಮಾವು, ಎಳ್ಳು, ತೆಂಗು,ನಿಂಬೆ, ಸೇಬು ಮತ್ತು ಕಲ್ಲಂಗಡಿ ಬೆಳೆಗಳು ೨ – ೪
ಸೂರ್ಯಕಾಂತಿ ಮತ್ತು ರಾಸ್ಬೆರಿಗಳು ೨ – ೩

 ಬೆಳೆಗಳಲ್ಲಿ ಜೇನು ಕುಟುಂಬಗಳ ಹಂಚಿಕೆ :  ಸಾಮಾನ್ಯವಾಗಿ ಜೇನುನೊಣಗಳು ಗೂಡಿನಿಂದ ೩೦೦ – ೫೦೦ ಮೀ. ಸುತ್ತಳತೆಯಲ್ಲಿ ಲಭ್ಯವಿರುವ ಸಸ್ಯಗಳಿಂದ ಆಹಾರವನ್ನು ಸಂಗ್ರಹಿಸುತ್ತವೆ. ಹೆಚ್ಚು ದೂರ ಹೋದಂತೆಲ್ಲ ಪರಾಗಸ್ಪರ್ಶ ಕ್ರಿಯೆ ಕಡಿಮೆಯಾಗುತ್ತಾ ಹೋಗುತ್ತದೆ. ಅದರಲ್ಲೂ ಪ್ರತಿಕೂಲ ಹವಾಮಾನಗಳಲ್ಲಿ ಗೂಡಿಗೆ ತೀರಾ ಸಮೀಪದಲ್ಲಿರುವ ಸಸ್ಯಗಳಿಂದ ಮಾತ್ರ ಆಹಾರ ಸಂಗ್ರಹಿಸಲು ಪ್ರಯತ್ನಿಸುತ್ತವೆ. ಆದ್ದರಿಂದ ಒಂದೇ ಸ್ಥಳದಲ್ಲಿ ಹೆಚ್ಚು ಕುಟುಂಬಗಳನ್ನು ಇರಿಸುವುದಕ್ಕಿಂತ , ಒಂದೊಂದೇ ಕುಟುಂಬವನ್ನು ಸೂಕ್ತ ಅಂತರದಲ್ಲಿ ಇರಿಸುವುದೇ ಹೆಚ್ಚು ಪರಿಣಾಮಕಾರಿ.

ಬೆಳೆಗಳಲ್ಲಿನ ಹೂವಿನ ಹಂತ : ಜೇನುನೊಣಗಳು ಉದ್ದೇಶಿತ ಬೆಳೆಯ ಹೂವುಗಳನ್ನೇ ನೇರವಾಗಿ ಸಂದರ್ಶಿಸುವಂತೆ ಮಾಡಲು, ಬೆಳೆಯಲ್ಲಿ ಶೇಕಡಾ ೫ -೧೦ ರಷ್ಟು ಹೂವು ಬಿಟ್ಟಿರುವಾಗ ಜೇನು ಕುಟುಂಬಗಳನ್ನು ಇಡಬೇಕು. ಮೊದಲೇ ಇರಿಸಿದಲ್ಲಿ ಅವುಗಳು ಸಮೀಪದಲ್ಲಿ ಲಭ್ಯವಿರುವ ಇತರೆ ಸಸ್ಯಗಳಿಂದ ಆಹಾರ ಸಂಗ್ರಹಣೆ ಆರಂಭಿಸಿ ಬೇಕಾಗಿರುವ ಬೆಳೆಯ ಹೂವುಗಳಿಗೆ ಸೂಕ್ತ ಹಂತದಲ್ಲಿ ಸಂದರ್ಶಿಸದೆ ಇರಬಹುದು. ತೀರಾ ತಡವಾಗಿ ಕುಟುಂಬಗಳನ್ನು ಸಾಗಿಸಿದ್ದಲ್ಲಿ ಹೆಚ್ಚು ಹೂವುಗಳಲ್ಲಿ ಪ್ರಾಪ್ತ ಹಂತವು ಮೀರಿ ಪರಾಗಸ್ಪರ್ಶಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ.

ಪರಾಗಸ್ಪರ್ಶ ಕ್ರಿಯೆ ಅವಶ್ಯಕವಾದ ಸಮಯದಲ್ಲಿನ ಹವಾಮಾನದ ಪರಿಸ್ಥಿತಿ : ಹವಾಮಾನದ ವೈಪರೀತ್ಯಗಳು ಸಸ್ಯಗಳಲ್ಲಿ ಪರಾಗರೇಣುವಿನ ಉತ್ಪತ್ತಿ, ಬಿಡುಗಡೆ ಮೊಳಕೆಯೊಡೆಯುವಿಕೆ, ಮಕರಂದ ಸ್ರವಿಸುವಿಕೆ, ಬೀಜ ಮತ್ತು ಕಾಯಿಗಳ ಉತ್ಪತ್ತಿ ಇತ್ಯಾದಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು, ತಂಪಾದ, ಮೋಡ ಮುಸುಕಿದ ಅಥವಾ ಬಿರಿಗಾಳಿಯಿಂದ ಕೂಡಿದ ಹವಾಮಾನದಲ್ಲಿ ಜೇನುನೊಣಗಳ ಚಟುವಟಿಕೆಗಳು ಅತಿ ಕಡಿಮೆಯಾಗಿರುತ್ತದೆ. ೧೫ ಡಿಗ್ರಿ ಸೆ. ನಿಂದ ೩೮ ಡಿಗ್ರಿ ಸೆ. ಒಳಗಿನ ಉಷ್ಣತೆಯಲ್ಲಿ ಹಾಗೂ ಶಾಖವಿರುವ ಸ್ವಚ್ಛ ವಾತಾವರಣದಲ್ಲಿ ಇವುಗಳ ಚಟುವಟಿಕೆ ಹೆಚ್ಚಾಗಿದ್ದು ಸುವ್ಯವಸ್ಥಿತವಾಗಿ ಪರಾಗಸ್ಪರ್ಶವನ್ನುಂಟುಮಾಡುತ್ತವೆ.

ಪರಾಗಸ್ಪರ್ಶಕ್ಕಾಗಿ ನಿರ್ವಹಣಾ ಕ್ರಮಗಳು : ಬೆಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಜೇನು ನೊಣಗಳಿಂದ ಪರಾಗಸ್ಪರ್ಶ ಕ್ರಿಯೆ ಉಂಟಾಗುವಂತೆ ಮಾಡಲು, ಕೃಷಿಕರು, ಕೆಲವು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ, ಬೆಳೆಯಲ್ಲಿ ಇರಿಸಿದ ಜೇನು ಕುಟುಂಬ ಆರೋಗ್ಯದಿಂದಿರುವಂತೆ ನೋಡಿಕೊಳ್ಳುವುದು. ಕುಟುಂಬವು ಯಾವುದೇ ನೈಸರ್ಗಿಕ ಶತ್ರುವಿನ ಅಥವಾ ರೋಗದ ಬಾಧೆಗೆ ತುತ್ತಾಗಿರಬಾರದು. ಆಹಾರದ ಕೊರತೆಯಿದ್ದಲ್ಲಿ ಸಕ್ಕರೆ ಪಾಕವನ್ನು ಕೊಟ್ಟು ನೊಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಲು ಬೇರೆ ಕುಟುಂಬದಿಂದ ಮೊಟ್ಟೆ ಮರಿಗಳಿರುವ ಎರಿಗಳನ್ನು ಪ್ರೌಢನೊಣಗಳೊಂದ ಬೇರ್ಪಡಿಸಿ, ಬೆಳೆಯಲ್ಲಿ ಇರಿಸಲಿರುವ ಕುಟುಂಬಕ್ಕೆ ಕೊಡಬೇಕು. ತೀರಾ ಹಳೆಯ ಮತ್ತು ಮೊಟ್ಟೆ ಇಡಲು ಸೂಕ್ತವಾಗಿಲ್ಲದ ಎರಿಗಳನ್ನು ತೆಗೆದು ಹಾಕಬೇಕು. ಕುಟುಂಬದ ರಾಣಿ ವಯಸ್ಸಾಗಿ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆಯಾಗಿದ್ದಲ್ಲಿ ಆ ಕುಟುಂಬಕ್ಕೆ ಮೊಟ್ಟೆ ಇಡಲು ಆರಂಭಿಸಿರುವ ಹೊಸ ರಾಣಿಯನ್ನು ಒದಗಿಸಬೇಕು. ಜೇನುತುಪ್ಪ ಸಂಗ್ರಹಣೆಗೆ ಜೇನು ಕೋಣೆಯ ಚೌಕಟ್ಟುಗಳನ್ನು ಕೊಟ್ಟು ಸಾಕಷ್ಟು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕು. ಈ ಕ್ರಮಗಳೆಲ್ಲವನ್ನು ಮೊದಲೇ ಕೈಗೊಂಡು, ಕುಟುಂಬಗಳನ್ನು ಬೆಳೆಗಳಿಗಿರುವ ಪ್ರದೇಶಕ್ಕೆ ವರ್ಗಾಯಿಸಿದಾಗ ಅಲ್ಲಿ ಜೇನುನೊಣಗಳ ಚಟುವಟಿಕೆ ಹೆಚ್ಚಾಗಿರುತ್ತದೆ. ಈಗಾಗಲೇ ಹಿಂದೆ ತಿಳಿಸಿರುವಂತೆ ಬೆಳೆಗೆ ಶಿಫಾರಸ್ಸು ಮಾಡಿದಷ್ಟು ಸಂಖ್ಯೆಯ ಜೇನು ಕುಟುಂಬಗಳನ್ನು ಸೂಕ್ತ ಅಂತರದಲ್ಲಿ ಇರಿಸಬೇಕು. ಚಳಿಗಾಲದಲ್ಲಿ ಮುಕ್ತವಾಗಿ ಸೂರ್ಯನ ಬಿಸಿಲು ಬೀಳುವಂತಹ ಸ್ಥಳದಲ್ಲಿ ಗೂಡಿನ ದ್ವಾರವು ಪೂರ್ವ ದಿಕ್ಕಿಗೆ ಇರುವಂತೆ ಹಾಗೂ ಬೇಸಿಗೆ ಕಾಲವಾಗಿದ್ದಲ್ಲಿ, ತಂಪಾದ, ನರೆಳಿರುವ ಜಾಗದಲ್ಲಿ ಇಡಬೇಕು. ಜೇನುನೊಣಗಳು ಹೆಚ್ಚು ಪರಾಗವನ್ನು ಸಂಗ್ರಹಿಸಿ ತರುವಂತೆ ಅವುಗಳನ್ನು ಪ್ರಚೋದಿಸಲು, ೧ ಭಾಗ ಸಕ್ಕರೆ, ೨ – ೩ ಭಾಗ ನೀರಿನ ದ್ರಾವಣ ತಯಾರಿಸಿ ಕುಟುಂಬಗಳಿಗೆ ಕೊಡಬೇಕು. ಇದರಿಂದ ಹೆಚ್ಚು ಸಂಖ್ಯೆಯಲ್ಲಿ ಜೇನುನೊಣಗಳು ಪರಾಗ ಸಂಗ್ರಹಣೆ ತೊಡಗುತ್ತವೆ.

ಉದ್ದೇಶಿತ ಬೆಳೆಯ ಹೂವುಗಳಿಗೆ ಜೇನುನೊಣಗಳನ್ನು ಹೆಚ್ಚು ಆಕರ್ಷಿಸಲು ೧ ಭಾಗ ಸಕ್ಕರೆ, ೩ ಭಾಗ ನೀರಿನ ದ್ರಾವಣ ತಯಾರಿಸಿ, ಅದರಲ್ಲಿ ಚೆನ್ನಾಗಿ ಅರಳಿ ಪರಾಗರೇಣುಗಳನ್ನು ಹೊಂದಿರುವ ಬೆಳೆಯ ಹೂವುಗಳನ್ನು ಕೊಡಬೇಕು. ಇದಲ್ಲದೆ ಬಿ – ಕ್ಯೂ ಮತ್ತು ಬಿ – ಹಿಯರ್ ಮುಂತಾದ ಜೇಣು ನೊಣ ಆಕರ್ಷಕಗಳನ್ನು ವಿವಿಧ ಪ್ರಮಾಣದಲ್ಲಿ ಹೂಗಳಿಗೆ ಸಿಂಪಡಿಸುವ ಮೂಲಕ ಜೇಣು ನೊಣಗಳನ್ನು ಆಕರ್ಷಿಸಬಹುದು (ಕೋಷ್ಟಕ ೨೧).

ಕೋಷ್ಟಕ ೨೧ : ಎಳ್ಳಿನ ಇಳುವರಿ ಹೆಚ್ಚಿಸುವಿಕೆಯಲ್ಲಿ ಜೇನುನೊಣ ಆಕರ್ಷಕಗಳ ಪರಿಣಾಮ

ಜೇನುನೊಣ
ಆಕರ್ಷಗಳು

ಗಿಡದ ಕಾಯಿಗಳ ಸಂಖ್ಯೆ

ಕಾಯಿಯ
ಬೀಜಗಳ
ಸಂಖ್ಯೆ

೧೦೦ ಬೀಜಗಳ ತೂಕ (ಗ್ರಾಂ)

ಇಳುವರಿ (ಕಿ.ಗ್ರಾಂ/ ಹೆಕ್ಟೇರಿಗೆ)

ಶೇಕಡ ಎಣ್ಣೆಯ ಅಂಶ

ಬಿ – ಕ್ಯೂ ೧೦ ಗ್ರಾಂ ೨೩.೭೩ ೬೯.೩೫ ೩.೮೭ ೧೫.೮೬ ೫೨.೬೬
ಬಿ – ಕ್ಯೂ ೧೨.೫ ಗ್ರಾಂ ೨೩.೧೭ ೬೭.೯೧ ೩.೪೫ ೯.೯೩ ೫೨.೮೨
ಬಿ – ಕ್ಯೂ ೧೫ ಗ್ರಾಂ ೨೬.೮೩ ೬೮.೮೪ ೩.೭೪ ೧೩.೩೧ ೫೩.೦೩
ಬಿ – ಹಿಯರ್          
೨ ಮಿ.ಲಿ. ೨೬.೭೭ ೬೫.೬೩ ೩.೬೫ ೧೫.೯೨ ೨.೬೨
ಬಿ -ಹಿಯರ್          
೪ ಮಿ.ಲಿ. ೨೬.೨೦ ೬೫.೭೬ ೩.೬೯ ೧೨.೩೮ ೫೨.೮೨
ಬಿ – ಹಿಯರ್          
೬ ಮಿ.ಲಿ. ೨೪.೮೦ ೬೫.೯೩ ೩.೪೩ ೧೦.೯೬ ೫೨.೯೧
ಸಕ್ಕರೆ ೧೦% ೨೫.೨೦ ೬೬.೦೩ ೩.೮೮ ೧೨.೩೯ ೫೩.೬೮
ನೀರು ಮಾತ್ರ ೧೭.೯೩ ೫೭.೭೯ ೩.೨೫ ೭.೪೩ ೫೧.೯೪

ರಾಸಾಯನಿಕ ಕೀಟನಾಶಕಗಳು ಜೇನುನೊಣಗಳಿಗೆ ಮಾರಕವಾಗಿರುವುದರಿಂದ, ಬೆಳೆಯು ಹೂವಿನ ಹಂತದಲ್ಲಿರುವಾಗ ಅವುಗಳ ಬಳಕೆಯನ್ನು ಸೀಮಿತಗೊಳಿಸಬೇಕು. ಅನಿವಾರ್ಯವಾಗಿ ಉಪಯೋಗಿಸಲೇ ಬೇಕಾದಾಗ ಜೇಣುನೊಣಗಳಿಗೆ ಅಪಾಯಕಾರಿಯಲ್ಲದ ಕೀಟನಾಶಕಗಳನ್ನು, ಜೇಣುನೊಣಗಳ ಚಟುವಟಿಕೆ ಕಡಿಮೆ ಇರುವ ವೇಳೆಯಲ್ಲಿ ಸಿಂಪಡಿಸುವುದು ಸೂಕ್ತ.

ಸ್ಥಳಾಂತರ ಜೇನು ಕೃಷಿ :  ಜೇನುನೊಣಗಳು ಶ್ರಮ ಜೀವಿಗಳು ಮತ್ತು ಕುಟುಂಬದ ಏಳಿಗೆಗೋಸ್ಕರ ದುಡಿಯುವ ಕೀಟಗಳು, ಜೇನು ಕುಟುಂಬಗಳನ್ನು ತಮಗೆ ಆಹಾರ ಸಿಗುವ ಸೌಲಭ್ಯಗಳನ್ನರಿತು ಹವಾಮಾನಕ್ಕನುಗುಣವಾಗಿ  ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಿ ಅಲ್ಲಿ ಆಹಾರ ಸಿಗುವ ಕಾಲ ಮುಗಿದ ನಂತರ ಮೂಲ ಸ್ಥಳಗಳಲ್ಲಿ ಇಡುವುದನ್ನು ಸ್ಥಳಾಂತರಿ ಜೇನುಕೃಷಿ ಎಂದು ಕರೆಯುತ್ತಾರೆ. ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಹವಾಮಾನವು ಕಾಲದಿಂದ ಕಾಲಕ್ಕೆ ವ್ಯತ್ಯಾಸಗೊಳ್ಳುವುದರಿಂದ ಜೇನು ನೊಣಗಳಿಗೆ ಆಹಾರ ಒದಗಿಸುವ ಸಸ್ಯಗಳು ವ್ಯತ್ಯಾಸಗೊಳ್ಳುತ್ತಿರುತ್ತವೆ. ಆದುದರಿಂದ ಜೇನು ಕುಟುಂಬಗಳನ್ನು ಕಡಿಮೆ ಆಹಾರದಿಂದ ಕೂಡಿದ ಪ್ರದೇಶದಿಂದ ಆಹಾರ ಹೇರಳವಾಗಿರುವ ಪ್ರದೇಶಗಳಿಗೆ ಸ್ಥಳಾಂತರಿಸುವುದು ಅತ್ಯಗತ್ಯವಾಗಿದೆ. ಈ ವಿಧಾನವು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ರೂಢಿಯಲ್ಲಿದ್ದು ಇದರ ಅವಶ್ಯಕತೆ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಅತ್ಯಾವಶ್ಯಕ. ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಜೂನ್‌ನಿಂದ ಅಕ್ಟೋಬರ್‌ತಿಂಗಳವರೆಗೆ ಸುಮಾರು ೨೦೦ -೯೦೦ ಸೆಂ.ಮೀ ಮಳೆ ಬೀಳುತ್ತದೆ. ಈ ಸಮಯದಲ್ಲಿ ಜೇನು ನೊಣಗಳು ಗೂಡಿನಲ್ಲಿರುವ ಆಹಾರವನ್ನು ಮಾತ್ರ ಉಪಯೋಗಿಸಬೇಕಾಗುತ್ತಲ್ಲದೆ. ಪರಿಸರದಲ್ಲಿ ಆಹಾರ ದೊರೆತರೂ ಮಳೆಯಿಂದ ಶೇಖರಿಸಲಾಗುವುದಿಲ್ಲ. ಇದರಿಂದ ಆಹಾರದ ಕೊರತೆಯಾಗುವುದರಿಂದ ಗೂಡಿನಲ್ಲಿ ಮೊಟ್ಟೆ ಮರಿಗಳಿಲ್ಲದೆ ಜೇನುನೊಣಗಳ ಸಂಖ್ಯೆ ತುಂಬಾ ಕಡಿಮೆಯಾಗಬಹುದು ಮತ್ತು ಆಹಾರ ಸಂಗ್ರಹ ಮುಗಿದಿದ್ದರೆ, ಮೇನದ ಚಿಟ್ಟೆ, ಕಡಜ ಮುಂತಾದ ಶತ್ರುಗಳ ಹಾವಳಿಯು ಹೆಚ್ಚಾಗುವುದರಿಂದ ನೊಣಗಳು ಸಾಮಾನ್ಯವಾಗಿ ಪೆಟ್ಟಿಗೆಯನ್ನು ಒಂದೇ ಸ್ಥಳದಲ್ಲಿಟ್ಟಲ್ಲಿ ಜೇನುತುಪ್ಪದ ಉತ್ಪತ್ತಿಯು ಕಡಿಮೆಯಾಗುವುದಲ್ಲದೆ ಕುಟುಂಬಗಳು ಕ್ಷೀಣಿಸುತ್ತವೆ. ಆದುದರಿಂದ ಜೇನುಕುಟುಂಬಗಳನ್ನು ಸುರಕ್ಷಿತವಾಗಿ ಸೂಕ್ತವಾದ ಸ್ಥಳಗಳಿಗೆ ಸಾಗಿಸಿ ಸಾಕಣೆ ಮಾಡಲಾಗುತ್ತದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಜೇನು ಕೃಷಿಕರು ತಮ್ಮ ಬೆಳೆಗಳಲ್ಲಿ ಜೇನುಕುಟುಂಬಗಳನ್ನು ಇರಿಸಿಕೊಳ್ಳುವುದಲ್ಲದೆ ಇತರೇ ಕೃಷಿಕರಿಗೆ ಬಾಡಿಗೆ ಆಧಾರದಲ್ಲಿ ಕುಟುಂಬಗಳನ್ನು ಒದಗಿಸುತ್ತಾರೆ. ಸ್ಥಳದಿಂದ ಸ್ಥಳಕ್ಕೆ ಜೇನು ಕುಟುಂಬಗಳನ್ನು ಸಾಗಿಸುವುದರಿಂದ ಜೇನುನೊಣಗಳು ಬೆಳೆಗಳಿಂದ ಸಾಕಷ್ಟು ಪರಾಗ ಮತ್ತು ಮಕರಂದವನ್ನು ಸಂಗ್ರಹಿಸುತ್ತವೆ. ಇದರಿಂದ ಜೇನು ಕುಟುಂಬಗಳ ಅಭಿವೃದ್ಧಿ ಹೊಂದುವುದರ ಜೊತೆಗೆ ಹೆಚ್ಚಿನ ಜೇನುತುಪ್ಪದ ಉತ್ಪಾದನೆಯಾಗುತ್ತದೆ. ಇದರಿಂದ ಜೇನು ಕೃಷಿಕರಿಗೆ ಆದಾಯ ಸಿಗುವುದಲ್ಲದೆ ವ್ಯವಸಾಯಗಾರರಿಗೆ ಜೇನುನೊಣ ಪರಾಗಸ್ಪರ್ಶ ಕ್ರಿಯೆಯಿಂದ ತಮ್ಮ ಬೆಳೆಗಳಲ್ಲಿ ಅಧಿಕ ಇಳುವರಿ ದೊರೆಯುತ್ತದೆ.

ಭಾರತ ದೇಶದಲ್ಲಿ ಸ್ಥಳಾಂತರ ಜೇನುಕೃಷಿಗೆ ಹೆಚ್ಚಿನ ಅವಕಾಶಗಳಿದ್ದು ಕರ್ನಾಟಕ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿನ ಜೇನು ಕುಟುಂಬಗಳನ್ನು ಒಂದೆಡೆ ಇಟ್ಟು ಪರಿಸರದಲ್ಲಿ ದೊರೆಯುವ ಹೂಗಳನ್ನು ಅವಲಂಬಿಸಿರುವುದರಿಂದ ಆಹಾರ ದೊರೆಯದೆ ಗೂಡನ್ನು ಬಿಟ್ಟು ಪರಾರಿಯಾಗುತ್ತವೆ. ಈ ಪರಿಣಾಮವನ್ನು ತಪ್ಪಿಸಲು ಮಳೆಗಾಲ ಪ್ರಾರಂಭದ ಕಾಲದಲ್ಲಿ ಮಲೆನಾಡು ಪ್ರದೇಶಗಳಿಂದ ಮೈದಾನ ಪ್ರದೇಶಗಳಿಗೆ ಜೇನು ಕುಟುಂಬಗಳನ್ನು ಸ್ಥಳಾಂತರಿಸುವುದು ಅಗತ್ಯ. ಮೈದಾನ ಪ್ರದೇಶಗಳಲ್ಲಿ ಎಳ್ಳು, ಹುಚ್ಚೆಳ್ಳು, ಜೋಳ, ಸೂರ್ಯಕಾಂತಿ, ಅಡಿಕೆ, ತೆಂಗು, ನೀಲಗಿರಿ ಮುಂತಾದ ಬೆಳೆಗಳಿಂದ ಸಾಕಷ್ಟು ಪರಾಗ ಮತ್ತು ಮಕರಂದ ಸಿಗುವುದು.

ಕುಟುಂಬಗಳನ್ನು ಸ್ಥಳಾಂತರಿಸುವ ವಿಧಾನಗಳು : ಜೇನು ಪೆಟ್ಟಿಗೆಗಳನ್ನು ಇಡುವ ಸ್ಥಳವನ್ನು ಮೊದಲೇ ಪರೀಕ್ಷಿಸಿ ಗುಡುಗಳನ್ನಿಡುವ ಜಾಗವನ್ನು ಸಿದ್ದಪಡಿಸಿಕೊಂಡಿರಬೇಕು. ಸಾಗಿಸುವ ಕುಟುಂಬಗಳಿಗನುಸಾರವಾಗಿ ಅಲ್ಲಿನ ಬೆಳೆಗಳು, ಹೂ ಅರಳುವ ಸಮಯ ಮತ್ತು ಆಹಾರ ದೊರಕುವ ಮಟ್ಟ ಹಾಗು ಇಡಬಹುದಾದ ಜೇನು ಕುಟುಂಬಗಳ ಸಂಖ್ಯೆಯನ್ನು ತಿಳಿದು ಇಡಬೇಕು. ಹೆಚ್ಚು ಕುಟುಂಬಗಳನ್ನಿಟ್ಟರೆ ನೊಣಗಳಿಗೆ ಸಾಕಷ್ಟು ಆಹಾರ ದೊರೆಯದೆ ಸ್ಥಳಾಂತರಿ ಜೇನುಕೃಷಿಯಿಂದ ಹೆಚ್ಚಿನ ಪ್ರಯೋಜನವಾಗಲಾರದು. ಬೆಳೆಗಳ ಹಂಗಾಮು ಮುಗಿದ ನಂತರ ಇನ್ನೊಂದು ಕಡೆಗೆ ಇದೇ ರೀತಿ ಸಾಗಿಸಿಡಬಹುದು. ಈ ರೀತಿಯಾಗಿ ಬೆಳೆಗಳು ಮುಗಿಯುವವರೆಗೆ ಇಟ್ಟು ಆನಂತರ ಜೇನು ಪೆಟ್ಟಿಗೆಗಳನ್ನು ಮರಳಿ ಮೂಲ ಸ್ಥಳಗಳಲ್ಲಿರಿಸಬಹುದು. ಈ ರೀತಿ ಮೈದಾನ ಪ್ರದೇಶಗಳಲ್ಲಿಯೂ ಕುಟುಂಬಗಳನ್ನು ಸ್ಥಳಾಂತರಿಸಿ ಹೆಚ್ಚು ಜೇನು ಕುಟುಂಬ ಮತ್ತು ಜೇನುತುಪ್ಪವನ್ನು ಪಡೆಯಬಹುದಾಗಿದೆ. ಅಲ್ಲದೆ ಸ್ಥಳೀಯವಾಗಿ ಅಗತ್ಯಕ್ಕನುಸಾರವಾಗಿ ಜೇನು ಕುಟುಂಬಗಳನ್ನು ಸ್ಥಳಾಂತರಿಸಿ ಹೆಚ್ಚಿನ ಉತ್ಪಾದನೆಯನ್ನು ನಿರೀಕ್ಷಿಸಬಹುದು.

ಜೇನುಕುಟುಂಬಗಳನ್ನು ಕತ್ತಲಾದ ನಂತರ ಅಥವಾ ಮುಂಜಾನೆ ಸಾಗಿಸುವುದು ಉತ್ತಮ. ಈ ವೇಳೆಯಲ್ಲಿ ವಾತಾವರಣವು ತಂಪಾಗಿದ್ದು, ಹೊರಗಿನಿಂದ ಎಲ್ಲಾ ನೊಣಗಳು ಬಂದು ಸೇರಿದ ಮೇಲೆ ಮೊಟ್ಟೆ ಮರಿಗಳಿಗೆ ಯಾವುದೇ ತೊಂದರೆಯಾಗದಂತೆ ಸಾಗಿಸಬೇಕು. ಸ್ಥಳಾಂತರಿಸಲು ಉಪಯೋಗಿಸುವ ಜೇನುಕುಟುಂಬಗಳು ಸಾಕಷ್ಟು ಪರಾಗ, ಜೇನುತುಪ್ಪ ಮತ್ತು ಹೆಚ್ಚು ಮೊಟ್ಟೆ ಮರಿಗಳಿಂದ ಕೂಡಿರಬೇಕು. ಸಾಗಾಣಿಕೆಗೆ ಪೆಟ್ಟಿಗೆಗಳು ಉತ್ತಮ ಗುಣಮಟ್ಟದ್ದಾಗಿದ್ದು ಯಾವುದೇ ಸಂದುಗೊಂದುಗಳಿರಬಾರದು. ಆಹಾರ ಶೇಖರಣೆಯಲ್ಲಿನ ನೊಣಗಳು ಸಂಜೆ ಪೂರ್ಣವಾಗಿ ಪೆಟ್ಟಿಗೆಗೆ ಬಂದ ನಂತರ ದ್ವಾರವನ್ನು ಶುದ್ದವಾದ ಹತ್ತಿ ಬಟ್ಟೆಯಿಂದ ಮುಚ್ಚಬೇಕು. ಪೆಟ್ಟಿಗೆಗಳಲ್ಲಿ ಪೂರ್ಣ ಚೌಕಟ್ಟುಗಳಿದ್ದಲ್ಲಿ ಸಾಗಾಣಿಕೆಯಲ್ಲಿ ಚೌಕಟ್ಟುಗಳ ಅಲುಗಾಡುವಿಕೆಯಿಂದ ತಪ್ಪಿಸಿ ಎರಿಗಳು ಹಾಳಾಗುವುದನ್ನು ತಪ್ಪಿಸಬಹುದು. ಪೆಟ್ಟಿಗೆಗಳ ಯಾವುದೇ ಭಾಗ ಅಲುಗಾಡದಂತೆ ಬಿಗಿಯಾಗಿ ಹಗ್ಗದಿಂದ ಕಟ್ಟಬೇಕು. ಆನಂತರ ಪೆಟ್ಟಿಗೆಗಳನ್ನು ಸಾಗಾಣಿಕೆಯ ವಾಹನದಲ್ಲಿ ಕಡಿಮೆ ಇದ್ದಲ್ಲಿ ಒಂದರ ಪಕ್ಕದಲ್ಲಿ ಒಂದರಂತೆ ಮತ್ತು ಹೆಚ್ಚು ಕುಟುಂಬಗಳಿದ್ದಲ್ಲಿ ಅಗತ್ಯವಾದರೆ ಒಂದರ ಮೇಲೊಂದರಂತೆ ಸರಾಗವಾಗಿ ಗಾಳಿಯಾಡುವಂತೆ ಜೋಡಿಸಬೇಕು. ವಾಹನದಲ್ಲಿ ಖಾಲಿ ಜಾಗವಿದ್ದಲ್ಲಿ ಪೆಟ್ಟಿಗೆಗಳು ಅಲುಗಾಡದಂತೆ ಮರದ ತುಂಡುಗಳನ್ನಿಡಬೇಕು. ಇದರ ಜೊತೆಗೆ ಪೆಟ್ಟಿಗೆಗಳಿಂದ ಒಂದೊಂದು ಬಾರಿ ನೊಣಗಳು ಹೊರ ಬಂದು ಹಾಳಾಗುವುದನ್ನು ತಪ್ಪಿಸಲು ಸೊಳ್ಳೆ ಪರದೆಯಿಂದ ಪೆಟ್ಟಿಗೆಗಳನ್ನು ಸುತ್ತುವರಿಯಬಹುದು. ಕುಟುಂಬಗಳನ್ನು ಹೆಚ್ಚು ದೂರದವರೆಗೆ ಸಾಗಿಸಬೇಕಾದಲ್ಲಿ ಶುದ್ದನೀರನ್ನು ಜೇನುನೊಣಗಳ ಮೇಲೆ ಚಿಮುಕಿಸುವುದರಿಂದ  ಕುಟುಂಬದಲ್ಲಿ ಉಷ್ಣತೆ ಹೆಚ್ಚುವುದನ್ನು ತಪ್ಪಿಸಬಹುದು. ಸಾಗಿಸಬೇಕಾದ ಸ್ಥಳವು ನೂರಾರು ಕಿಲೋ ಮೀಟರಗಳಿದ್ದು ಒಂದೇ ದಿನದಲ್ಲಿ ಸಾಗಿಸಲು ಅಸಾಧ್ಯವಾದಲ್ಲಿ ಸಂಜೆಯ ವೇಳೆ (ಸುಮಾರು ೪ – ೫ ಗಂಟೆ) ಸಾಗಣೆ ವಾಹನವನ್ನು ನಿಶ್ಯಬ್ದವಿರುವ ಜಾಗದಲ್ಲಿ ನಿಲ್ಲಿಸಿ ಪೆಟ್ಟಿಗೆಗಳ ದ್ವಾರವನ್ನು ಮುಚ್ಚಿರುವ ಬಟ್ಟೆ ಹೊರತೆಗೆದು ಜೇನುನೊಣಗಳು ಒಂದೆರಡು ಗಂಟೆ ಹೊರಗೆ ಹಾರಾಡಿ ಮತ್ತೆ ಪೆಟ್ಟಿಗೆಗೆ ಬಂದ ನಂತರ ದ್ವಾರವನ್ನು ಮುಚ್ಚಿ ಪ್ರಯಾಣವನ್ನು ಮುಂದುವರಿಸಬಹುದು. ಸೂಕ್ತ ಸ್ಥಳವನ್ನು ತಲುಪಿದ ನಂತರ ಪೆಟ್ಟಿಗೆಗಳನ್ನು ಕೆಳಗಿಳಿಸಿ ಆಯ್ಕೆ ಸ್ಥಳದಲ್ಲಿ ಸೂಕ್ತವಾಗಿ ಜೋಡಿಸಿ ದ್ವಾರದ ಬಟ್ಟೆಯನ್ನು ಹೊರತೆಗೆದು ಸ್ವಲ್ಪ ಸಮಯದ ನಂತರ ಸಕ್ಕರೆ ಪಾಕವನ್ನು ನೀಡಬೇಕು. ಆನಂತರ ಕುಟುಂಬಗಳನ್ನು ಪರೀಕ್ಷಿಸಿ ಸಾಗಾಣಿಕಾ ಸಮಯದಲ್ಲಿ ಯಾವುದೇ ತೊಂದರೆಗಳಾಗಿದ್ದಲ್ಲಿ ಸರಿಪಡಿಸಬಹುದು.

ಸ್ಥಳಾಂತರಿ ಜೇನುಕೃಷಿಯ ಉಪಯೋಗಗಳು

೧. ಜೇನು ಕುಟುಂಬಗಳು ಪರಾರಿಯಾಗುವುದನ್ನು ನಿಯಂತ್ರಿಸಬಹುದು.

೨. ರೈತನ ಬೆಳೆಗಳಲ್ಲಿ ಪರಕೀಯ ಪರಾಗಸ್ಪಶ೯ ಕ್ರಿಯೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು.

೩. ಸಾಗಿಸಿದ ಸ್ಥಳದಲ್ಲಿ ಇರುವ ಹೂಗಳಿಂದ ಜೇನು ಉತ್ಪತ್ತಿಯಾಗಿ ಕೃಷಿಕನ ಆದಾಯ ಹೆಚ್ಚುವುದು.

೪. ಹೊಸ ಮರಿ ಕುಟುಂಬಗಳನ್ನು ಸಕಾಲದಲ್ಲಿ ಪಡೆಯಲು ಅನುಕೂಲವಾಗುತ್ತದೆ.

೫. ಜೇನು ಕೃಷಿಕರ ಮತ್ತು ರೈತನ ಬಾಂಧವ್ಯ ಹೆಚ್ಚಾಗುತ್ತದೆ.