ಜೇನುನೊಣಗಳು ಪ್ರಮುಖ ಆಹಾರವಾದ ಮಕರಂದ ಮತ್ತು ಪರಾಗವನ್ನು ಸಸ್ಯಗಳಿಂದ ಪಡೆಯುತ್ತವೆ. ಒಂದೊಂದು ಬಾರಿ ಹೂಗಳೇತರ ಭಾಗಗಳಿಂದಲೂ ಮಕರಂದ ಮತ್ತು ಕೆಲವು ಜಾತಿಯ ಕೀಟಗಳು ವಿಸರ್ಜಿಸುವ ಸಿಹಿ ಅಂಟನ್ನು ಸಹಾ ಶೇಖರಿಸುತ್ತವೆ.

ಜೇನು ನೊಣಗಳು ಸಸ್ಯಗಳಿಂದ ದೊರೆಯುವ ಪಿಷ್ಟ ಮತ್ತು ಸಸಾರಜನಕಗಳನ್ನು ಗ್ರಂಥಿವ್ಯೂಹದ ಸ್ರವಣಗಳಿಂದ, ಜೀರ್ಣಿಸಿಕೊಳ್ಳುವ ಮೂಲಕ ದೈನಂದಿನ ಚಲನವಲನಗಳಿಗೆ ಶಕ್ತಿಯನ್ನು ಪಡೆಯುತ್ತವೆ. ಪ್ರಕೃತಿಯಲ್ಲಿ ಮಕರಂದವು ಹೇರಳವಾಗಿ ಸಿಗುತ್ತಿದ್ದಲ್ಲಿ ಎರಿಗಳಲ್ಲಿ ಸಂಗ್ರಹಿಸಿ ಜೇನುತುಪ್ಪವನ್ನಾಗಿ ಪರಿವರ್ತಿಸಿದರೆ, ಪರಾಗವನ್ನು ಸಸ್ಯಗಳಿಂದ ಶೇಖರಿಸಿ ಮರಿಗಳಿಗೂ ತಿನ್ನಿಸಿ ತಾವು ತಿಂದೂ ಉಳಿದ ಪರಾಗವನ್ನು ಎರಿಗಳಲ್ಲಿ ಸಂಗ್ರಹಿಸುತ್ತವೆ. ಪರಾಗವು ಧೂಳಿನಂತಹ ಕಣಗಳಿಂದ ಕೂಡಿದ್ದು ಜೇನುನೊಣ ಮತ್ತು ಮರಿಗಳಿಗೆ ಸಸಾರಜನಕಗಳು, ಜೀವಸತ್ವಗಳು ಹಾಗೂ ಇತರ ಅವಶ್ಯಕ ಘಟಕಗಳನ್ನು ಒದಗಿಸುತ್ತದೆ. ಜೇನು ನೊಣಗಳಿಗೆ ದೈನಂದಿನ ಚಲನವಲನ, ಆರೋಗ್ಯ ಮತ್ತು ಕುಟುಂಬವನ್ನು ಅಧಿಕ ಉಷ್ಣತೆಯಿಂದ ನಿಯಂತ್ರಿಸಲು ನೀರೂ ಅತ್ಯಾವಶ್ಯಕ. ಇದರ ಜೊತೆಗೆ ಯೂರೋಪಿಯನ್ ಜೇನು ನೊಣಗಳು ಅನೇಕ ರೀತಿಯ ಗಿಡ ಮರಗಳಿಂದ ಅಂಟಿನಂತಹ ಪದಾರ್ಥವನ್ನು ತರುತ್ತವೆ. ಈ ಅಂಟನ್ನು ತರುವ ಗುಣವು ತುಡುವೆ ಜೇನು ನೊಣಗಳಲ್ಲಿ ತುಂಬಾ ವಿರಳವಾಗಿರುತ್ತದೆ. ಪ್ರಪಂಚದ ಸುಮಾರು ೨,೫೦,೦೦೦ ಹೂ ಬಿಡುವ ಸಸ್ಯ ಪ್ರಭೇದಗಳಲ್ಲಿ ಅನೇಕ ಸಸ್ಯಗಳು ಪರಾಗಸ್ಪರ್ಶಕ್ಕಾಗಿ ಜೇನುನೊಣಗಳನ್ನೇ ಅವಲಂಭಿಸಿರುತ್ತವೆ. ಈ ಸಸ್ಯಗಳಲ್ಲಿ ಸುಮಾರು ೪೦,೦೦೦ ಪ್ರಭೇದಗಳು ಜೇನುನೊಣಗಳಿಗೆ ಉತ್ತಮ ಆಹಾರವನ್ನು ಒದಗಿಸುತ್ತವೆ.

ಉತ್ತಮ ಜೇನುತುಪ್ಪ ನೀಡಬಲ್ಲ ಕುಟುಂಬ ೧,೧೫,೦೦೦ ದಿಂದ ೨,೦೦,೦೦೦ ನೊಣಗಳನ್ನು ವಾರ್ಷಿಕವಾಗಿ ಬೆಳೆಸಲು ೧೫ – ೩೦ ಕಿ.ಗ್ರಾಂ ಪರಾಗ ಮತ್ತು ೮೦ ಕಿ.ಗ್ರಾಂಗಳಷ್ಟು ಜೇನುತುಪ್ಪವನ್ನು ತಿನ್ನುತ್ತವೆ. ಇವು ೨೦ ಕಿ.ಗ್ರಾಂ ಪರಾಗವನ್ನು ತರಲು ಸುಮಾರು ೧.೩ ಮಿಲಿಯನ್ ಬಾರಿ ಹಾರಿ ತರಬೇಕಾಗುತ್ತದೆ. ಇದೇ ರೀತಿ ೬೦ ಕಿ.ಗ್ರಾಂ ಜೇನುತುಪ್ಪವನ್ನು ೩ ಮಿಲಿಯನ್ ಬಾರಿ ಹಾರಿ ತರುತ್ತವೆ. ೧ – ೫ ಕಿ.ಗ್ರಾಂ ತೂಕದಿಂದ ಕೂಡಿದ ಕುಟುಂಬ ೧,೫೦,೦೦೦ ಜೇನುನೊಣಗಳನ್ನು ಬೆಳೆಸಲು ೨೦ ಕಿ.ಗ್ರಾಂ ಪರಾಗ ಮತ್ತು ೬೦ ಕಿ.ಗ್ರಾಂ ಜೇನುತುಪ್ಪವು ವಾರ್ಷಿಕವಾಗಿ ಅಗತ್ಯವಿರುತ್ತದೆ. ಇಷ್ಟು ಪ್ರಮಾಣದ ಆಹಾರವನ್ನು ತರಲು ಒಂದು ಹಾರಾಟಕ್ಕೆ ೪.೫ ಕಿ.ಮೀ. ನಂತೆ ೨೦ ಮಿಲಿಯನ್ ಕಿ.ಮೀ. ಹಾರಾಟ ನಡೆಸಬೇಕಾಗುತ್ತದೆ.

ಶಕ್ತಿ ನೀಡುವ ಆಹಾರಗಳು : ಜೇನು ನೊಣಗಳು ಆಹಾರವನ್ನು ಸಸ್ಯಗಳ ಹೂಗಳಿಂದ ಪಡೆದರೆ, ಸಸ್ಯಗಳು ಆಹಾರವನ್ನು ದ್ಯುತಿ ಸಂಶ್ಲೇಷಣಾ ಕ್ರಿಯೆಯ ಮೂಲಕ ತಯಾರಿಸಿಕೊಳ್ಳುತ್ತವೆ. ಮಕರಂದವು ಹೂಗಳಲ್ಲಿರುವ ಮಕರಂದ ಗ್ರಂಥಿಗಳಿಂದ ಸ್ರವಿಸಲ್ಪಟ್ಟರೆ, ಅದನ್ನು ಹೂಗಳ ಮಕರಮದವೆಂದೂ, ಕೆಲವು ಸಸ್ಯಗಳಲ್ಲಿ ಹೂಗಳ ಹೊರಭಾಗವಾದ ಎಲೆಗಳ ಕಾಂಡ ಮತ್ತು ತೊಟ್ಟುಗಳ ಭಾಗಗಳಿಂದಲೂ ಸ್ರವಿಸಲ್ಪಡುವ ಮಕರಂದವನ್ನು ಹೂಗಳೇತರ ಮಕರಂದವೆಂದು ಕರೆಯಲಾಗುತ್ತದೆ. ಜೇನುನೊಣಗಳು ಆಗಾಗ ಪಿಷ್ಟ ಪದಾರ್ಥಗಳನ್ನು ಕೆಲವು ಬಗೆಯ ಕೀಟಗಳಿಂದ ವಿಸರ್ಜಿಸಲ್ಪಡುವ ಸಿಹಿ ಅಂಟು ಮತ್ತು ಇತರೆ ಸಿಹಿ ದ್ರವಗಳಿಂದ ಪಡೆಯುತ್ತವೆ.

ಆಹಾರ ಸಂಗ್ರಹಣೆಯಲ್ಲಿ ತೊಡಗಿರುವ ಜೇನುನೊಣಗಳು

ಮಕರಂದ : ಮಕರಂದವು ಸಸ್ಯಗಳಲ್ಲಿ ಮುಖ್ಯವಾಗಿ ಹೂಗಳಲ್ಲಿ ಉತ್ಪತ್ತಿಯಾಗುತ್ತದೆ. ಇದು ಸಾಮಾನ್ಯವಾಗಿ ಸಕ್ಕರೆ, ಹಣ್ಣಿನ ಸಕ್ಕರೆ, ಮತ್ತು ಗ್ಲೂಕೋಸ್‌ಗಳನ್ನು ಹೊಂದಿದ್ದು ಸ್ವಲ್ಪ ಪ್ರಮಾಣದಲ್ಲಿ ಮಾಲ್ಟೋಸ್, ಮತ್ತು ರಾಪಿನೋಸ್ ಸಕ್ಕರೆ ಅಂಶಗಳಿರುತ್ತವೆ. ಸಸ್ಯಗಳು ಮಕರಂದವನ್ನು ಸ್ರವಿಸಿದರೂ ಅದರ ಪ್ರಮಾಣವು ಸ್ಥಳೀಯ ವಾತಾವರಣದೊಂದಿಗೆ ವ್ಯತ್ಯಾಸಗೊಳ್ಳುತ್ತದೆ. ಮಕರಂದವು ಸಕ್ಕರೆಗಳ ಜೊತೆಗೆ ಅನೇಕ ಸಾವಯವ ಆಮ್ಲಗಳು, ಸಸ್ಯ ವರ್ಣಕಗಳು, ಅವಶ್ಯಕ ಎಣ್ಣೆ, ಕಿಣ್ವಗಳು ಸುವಾಸನಾ ವಸ್ತುಗಳು, ಖನಿಜಗಳು, ಮತ್ತು ಅಮೈನೋ ಆಮ್ಲಗಳು ಮುಂತಾದ ವಸ್ತುಗಳನ್ನು ಕನಿಷ್ಠ ಪ್ರಮಾಣದಲ್ಲಿ ಹೊಂದಿರುತ್ತದೆ. ಮಕರಂದದಲ್ಲಿನ ಘನವಸ್ತುಗಳ ಪ್ರಮಾಣವು ಶೇ. ೪ – ೬೫ರಷ್ಟಿದ್ದು ನೀರಿನ ಅಂಶ ಜೇನು ತುಪ್ಪಕ್ಕಿಂತ (ಶೇ. ೧೮) ಹೆಚ್ಚಾಗಿರುತ್ತದೆ.

ಮಕರಂದದ ಘಟಕಗಳು ಸಾಮಾನ್ಯವಾಗಿ ಸಸ್ಯಗಳಲ್ಲಿ ಒಂದೇ ಆದರೂ ಸಕ್ಕರೆಯ ಅಂಶವು ಪ್ರಭೇದದಿಂದ ಪ್ರಭೇದಕ್ಕೆ ಮತ್ತು ಒಂದೇ ಪ್ರಭೇದದಿಂದ ಅನೇಕ ಉಪಪ್ರಭೇದಗಳಿಗೆ ಹಾಗೂ ವಾತಾವರಣದೊಂದಿಗೆ ವ್ಯತ್ಯಾಸಗೊಳ್ಳುತ್ತವೆ. ಈ ಘಟಕಗಳು ಜೇನುತುಪ್ಪದ ಗುಣವನ್ನು ನಿರ್ಧರಿಸುತ್ತವೆ. ಮಕರಂದವು ಸಾಮಾನ್ಯವಾಗಿ  ಹೆಚ್ಚಿನ ಸಸ್ಯಗಳಲ್ಲಿ ಬೆಳಗಿನ ವೇಳೆಯಲ್ಲಿ ಸ್ರವಿತವಾದರೆ ಬೆಳಕಿನ ಪ್ರಖರತೆಯು ಹೆಚ್ಚಿದಲ್ಲಿ ಮಕರಂದದ ಉತ್ಪತ್ತಿಯೂ ಹೆಚ್ಚುವ ಸಾಧ್ಯತೆ ಇರುತ್ತದೆ. ಹೀಗೆಯೇ ಆಯಾ ಪ್ರದೇಶದ ಮಳೆಯ ಪ್ರಮಾಣ ಹಾಗೂ ಮಣ್ಣಿನಲ್ಲಿರುವ ಬೆಳೆಯು ಪೋಷಕಾಂಶಗಳೂ ಮಕರಂದದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ.

ಹೂಗಳೇತರ ಮಕರಂದ :  ಹೂಗಳೇತರ ಮಕರಂದವು ಸಸ್ಯಗಳ ಕೆಲವು ಭಾಗಗಳಲ್ಲಿ ಸ್ರವಿಕೆಯಾಗುತ್ತದೆ. ರಬ್ಬರ್ ತೊಟಗಳಲ್ಲಿ ಹೂಗಳಿಂದ ಮಕರಂದ ಮತ್ತು ಪರಾಗ ಸ್ರವಿಸಿದರೂ ಅವುಗಳೊಂದಿಗೆ ಹೂಗಳೇತರ ಭಾಗಗಳಿಂದಲೂ ಮಕರಂದವು ಸ್ರವಿಸಲ್ಪಡುತ್ತದೆ. ಈ ಬಗೆಯ ಮಕರಂದ ಸ್ರವಿಸುವ ಸಸ್ಯಗಳಲ್ಲಿ ಮಕರಂದ ಗ್ರಂಥಿಗಳು ಚಿಗುರೆಲೆಗಳಲ್ಲಿ ಹೆಚ್ಚಾಗಿದ್ದು ಸುಮಾರು ೩ – ೪ ವಾರಗಳ ಕಾಲ ಮಕರಂದವನ್ನು ಸ್ರವಿಸುತ್ತವೆ. ಆದರೆ ಎಲೆಗಳು ಬಲಿತಂತೆ ಮಕರಂದದ ಸ್ರವಿಕೆ ಕಡಿಮೆಯಾಗುವುದಲ್ಲದೆ ಹೂಗಳೇತರ ಮಕರಂದದಲ್ಲಿ ಶೇ. ೪೦ – ೫೦ರಷ್ಟು ಅಂಶವಿರುತ್ತದೆ.

ಸಿಹಿ ಅಂಟು : ಸಿಹಿಅಂಟು ಪ್ರಪಂಚದ ಕೆಲವು ಶೀತವಲಯ ಹಾಗೂ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸಿಹಿಅಂಟು ಸಸ್ಯಗಳಲ್ಲಿ ರಸ ಹೀರುವ ಕೆಲವು ಜಾತಿಯ ಕೀಟಗಳಿಂದ ಉತ್ಪತ್ತಿಯಾಗುತ್ತದೆ. ಅವುಗಳೆಂದರೆ ಜಿಗಿಹುಳು, ಹಿಟ್ಟು ತಿಗಣೆ, ಶಲ್ಕ ಕೀಟ, ಹೇನು ಮುಂತಾದವುಗಳು. ಈ ಕೀಟಗಳಲ್ಲಿ ಬಾಯಿಯ ಭಾಗಗಳು ಸಸ್ಯಗಳಿಂದ ರಸವನ್ನು ಹೀರಲು ಹೊಂದಿಕೆಯಾಗಿದ್ದು, ಸಸ್ಯಗಳ ರಸವು ಕೀಟಗಳ ಜೀರ್ಣನಾಳದಲ್ಲಿ  ಪಚನಗೊಂಡು ದೇಹಕ್ಕೆ ಹೆಚ್ಚಾದ ಶರ್ಕರಗಳು ಸಿಹಿ ಅಂಟಾಗಿ ವಿಸರ್ಜಿಸಲ್ಪಡುತ್ತದೆ. ಈ  ವಿಸರ್ಜನೆ ಸಸ್ಯ ಭಾಗಗಳ ಮೇಲೆ ಶೇಖರಣೆಯಾಗುವುದರಿಂದ ಜೇನು ನೊಣಗಳೂ ಸೇರಿದಂತೆ ಅನೇಕ ಜಾತಿಯ ಕೀಟಗಳು ಇದನ್ನು ಹೀರಿಕೊಂಡು  ಶೇಖರಿಸುತ್ತವೆ. ಸಿಹಿ ಅಂಟಿನ ಘಟಕಗಳು ಹೂಗಳ ಮಕರಂದದ ಘಟಕಗಳಿಂದ ಕೆಲವು ಗುಣಗಳಲ್ಲಿ ವ್ಯತ್ಯಾಸಗೊಂಡರೂ ಇದರಲ್ಲಿನ ಸಕ್ಕರೆಯ ಅಂಶಗಳ ಜೊತೆಗೆ ಕೀಟಗಳ ಕಿಣ್ವಗಳು ಮತ್ತು ಮೆಲೆಜಿಟೋಸ್ ಎಂಬ ನೀರಿನಲ್ಲಿ ಕರಗದ ಸಕ್ಕರೆಯ ಅಂಶವೂ ಇರುತ್ತದೆ. ಕೋನಿಫರ್ ಜಾತಿಯ ಮರಗಳು ಸಹ ಮಕರಂದದ ಜೊತೆಗೆ ಸಿಹಿ ಅಂಟನ್ನು ಉತ್ಪತ್ತಿ ಮಾಡುತ್ತವೆ.

ಜೇನುನೊಣಗಳು ಸಾಮಾನ್ಯವಾಗಿ ಸಿಹಿಯಾದ ಎಲ್ಲ ದ್ರವವನ್ನು ಹೀರುತ್ತವೆ. ಅವುಗಳಲ್ಲಿ ಮುಖ್ಯವಾದುವೆಂದರೆ ಕಬ್ಬಿನ ರಸ, ಕಬ್ಬಿನ ಕಾರ್ಖಾನೆ, ಕಬ್ಬಿನ ರಸ ತೆಗೆಯುವ ಅಂಗಡಿ, ಆಲೆಮನೆ ಮುಂತಾದವು, ಅವುಗಳಲ್ಲಿ ಜೇನುನೊಣಗಳ ಹಿಂಡೇ ಕಬ್ಬಿನ ರಸವನ್ನು ಹೀರಲು ಹಾರಾಡುತ್ತಿರುವ ದೃಶ್ಯ ಕಂಡು ಬರುವುದು ಸರ್ವೇಸಾಮಾನ್ಯವಾಗಿರುತ್ತದೆ. ಅಲ್ಲದೆ ಜೇನುನೊಣಗಳು ಕೊಯ್ದು ಹಣ್ಣುಗಳು ಹಾಗೂ ಸುಗಂಧರಾಜ ಹೂಗಳಿಂದಲೂ ದ್ರವವನ್ನು ಹೀರುವುದು ಸಾಮಾನ್ಯವಾಗಿ ಮಾರುಕಟ್ಟೆ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಜೇನು ನೊಣಗಳು ಇತರ ಬಲಹೀನ ಜೇನು ಕುಟುಂಬಗಳಿಂದಲೂ ಜೇನುತುಪ್ಪವನ್ನು ಕದ್ದು ಸಂಗ್ರಹಿಸುತ್ತವೆ.

ಪರಾಗ : ಪರಾಗವು ಜೇನುನೊಣಗಳ ಬೆಳವಣಿಗೆಗೆ ಅಗತ್ಯ ಆಹಾರವಾಗಿದ್ದು ಇದರಲ್ಲಿನ ಅಮೈನೋ ಆಮ್ಲಗಳು, ಜೇನು ಮರಿಗಳು ಪೂರ್ಣರೂಪಾಂತರದ ಮೂಲಕ ಪ್ರೌಢನೊಣಗಳಾಗಿ ಬೆಳೆಯಲು ಅತ್ಯಾವಶ್ಯಕ. ಯುವ ಜೇನುನೊಣಗಳು ರಾಜಶಾಹಿರಸವನ್ನು ತಯಾರಿಸಲು ಇದು ಅತ್ಯಾವಶ್ಯಕವಾದ ಪದಾರ್ಥವಾಗಿದ್ದು ಇದರಲ್ಲಿ ಸಸಾರಜನಕ, ಗಂಧಕ, ರಂಜಕ, ಪಿಷ್ಠ ಪದಾರ್ಥಗಳು, ತೈಲ ಮತ್ತು ಸಕ್ಕರೆಗಳು ಇರುತ್ತವೆ. ಸಸಾರಜನಕದಿಂದ ಸಮೃದ್ಧವಾದ ಪರಾಗವು ಸಸ್ಯಾಹಾರಿ ಜೀವಿಗಳಿಗೆ ಅಧಿಕ ಪುಷ್ಟಿಯನ್ನು ಕೊಡಬಲ್ಲದು. ಜೇನುನೊನಗಳು ಪರಾಗವನ್ನು ಗೂಡಿನ ಮರಿಹುಳುಗಳ ಹಾಗೂ ಪ್ರೌಢನೊಣಗಳ ಆಹಾರವಾಗಿ ಬಳಸುವ ಉದ್ದೇಶದಿಂದ ಪರಿಸರದ ವಿವಿಧ ಸಸ್ಯಗಳಿಂದ ತಮ್ಮ ಪರಾಗದ ಬುಟ್ಟಿಗಳಲ್ಲಿ ಶೇಖರಿಸುವಾಗ ಬಾಯಿಯೊಳಗಿನ ಜೊಲ್ಲಿನಿಂದ ಮೃದುಗೊಳಿಸುತ್ತವೆ. ನಂತರ ಗೂಡನ್ನು ತಲುಪಿದಾಗ ಎಳೆ ವಯಸ್ಸಿನ ನೊಣಗಳು ಪರಾಗವನ್ನು ನೊಣಗಳಿಂದ ತೆಗೆದುಕೊಂಡು ಪುಡಿಮಾಡಿ ಗೂಡಿನ ಕಣಗಳಲ್ಲಿ ತುಂಬುತ್ತವೆ.

ಪರಾಗದ ಅಭಾವವಾದಾಗ ಎಳೆಜೇನುನೋಣಗಳು ಸಾಯುತ್ತಿರುತ್ತವೆ. ಜೇನುನೊಣಗಳು ಕೃತಕ ಸಕ್ಕರೆ ಪಾಕವನ್ನು ತಿಂದು ಗೂಡಿನ ಕೆಲಸಗಳನ್ನು ಮಾಡಬಲ್ಲವಾದರೂ ಶಕ್ತಿಯು ಕುಂದುವುದರಿಂದ ಅಭಾವಕಾಲದಲ್ಲಿ ಪರಾಗವನ್ನು ಕೃತಕವಾಗಿ ನೀಡಲೇಬೇಕಾಗುತ್ತದೆ. ಒಂದು ಯೂರೋಪಿಯನ್ ಜೇನುಕುಟುಂಬಕ್ಕೆ ವಾರ್ಷಿಕ ೨೦ – ೩೦ ಕಿ.ಗ್ರಾಂ ಪರಾಗದ ದಾಸ್ತಾನು ಅವಶ್ಯಕವೆಂದು ತಿಳಿಯಲಾಗಿದೆ.

ಜೇನು ಅಂಟು :  ಇದು ಸಸ್ಯಗಳಿಂದ ದೊರೆಯುವ ಅಂಟಿನಿಂದ ಕೂಡಿದ ಉತ್ಪನ್ನವಾಗಿದ್ದು ಜೇನು ನೊಣಗಳು ಗೂಡಿನ ಸಂದುಗೊಂದುಗಳನ್ನು ಮುಚ್ಚಲು ಬಳಸುತ್ತವೆ. ಇದು ಸಸ್ಯಗಳಲ್ಲಿ ಎಲೆಯ ಮೊಗ್ಗು ಮತ್ತು ಹೂಗಳ ಮೊಗ್ಗುಗಳ ಭಾಗಗಳಲ್ಲಿ ಹೆಚ್ಚಾಗಿ ಸ್ರವಿತವಾಗುತ್ತದೆ. ಇದರ ಶೇಖರಣೆ ಯೂರೋಪಿಯನ್ ಜೇನು ನೊಣಗಳಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ಕುಟುಂಬಗಳನ್ನು ಶತ್ರುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆಯಲ್ಲದೇ ನಸುರು ಜೇನುನೊಣಗಳು ಕಣಗಳನ್ನು ಕಟ್ಟಲೂ ಈ ಪದಾರ್ಥವನ್ನು ಸೇರಿಸುತ್ತವೆ.

ಜೇನುನೊಣಗಳ ಪ್ರಮುಖ ಆಹಾರ ಸಸ್ಯಗಳು : ಜೇನುನೊಣಗಳು ಆಹಾರಕ್ಕಾಗಿ ಸಸ್ಯಗಳಲ್ಲಿ ದೊರೆಯುವ ಮಕರಂದ ಮತ್ತು ಪರಾಗವನ್ನು ಅವಲಂಬಿಸಿರುವುದರಿಂದ ಜೇನುಕೃಷಿಕನಿಗೆ ಜೇನು ನೊಣಗಳ ಮುಖ್ಯ ಸಸ್ಯಗಳು, ಅವುಗಳ ಆಹಾರದ ವಿಧ, ಹೂಬಿಡುವ ಕಾಲ, ದೊರೆಯುವ ಆಹಾರದ ಪ್ರಮಾಣದ ಬಗ್ಗೆ ತಿಳಿದಿರಬೇಕು. ಸಸ್ಯಗಳನ್ನು ಅವುಗಳಿಂದ ಉತ್ಪಾದನೆಯಾಗುವ ಜೇನು ನೊಣಗಳ ಆಹಾರದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪರಾಗದ ಸಸ್ಯಗಳು, ಮಕರಂದದ ಸಸ್ಯಗಳು ಮತ್ತು ಪರಾಗ ಮತ್ತು ಮಕರಂದ ಎರಡನ್ನೂ ಉತ್ಪಾದಿಸುವ ಸಸ್ಯಗಳು. ಹೂಗಳು ಕೇವಲ ಪರಾಗ, ಮಕರಂದ ಮತ್ತು ಪರಾಗ ಮತ್ತು ಮಕರಂದಗಳೆರಡನ್ನೂ ಉತ್ಪಾದಿಸಿದರೂ ಇವುಗಳ ಪ್ರಮಾಣವು ಕಾಲದಿಂದ ಕಾಲಕ್ಕೆ ವ್ಯತ್ಯಾಸಗೊಳ್ಳುತ್ತವೆ. ಹೂಗಳಲ್ಲಿ ಹೆಚ್ಚು ಪರಾಗ ಮತ್ತು ಕಡಿಮೆ ಪ್ರಮಾಣದಲ್ಲಿ ಮಕರಂದವು ಉತ್ಪತ್ತಿಯಾದರೆ, ಪರಾಗದ ಸಸ್ಯಗಳೆಂದೂ, ಹೆಚ್ಚಿ ಮಕರಂದ ಮತ್ತು ಕಡಿಮೆ ಪ್ರಮಾಣದಲ್ಲಿ ಪರಾಗವನ್ನು ಉತ್ಪಾದಿಸಿದರೆ, ಅವುಗಳನ್ನು ಮಕರಂದದ ಸಸ್ಯಗಳೆಂದೂ ಕರೆಯಲಾಗುತ್ತದೆ. ಎಲ್ಲ ಜಾತಿಯ ಸಸ್ಯಗಳು ವರ್ಷದ ಎಲ್ಲ ಕಾಲಗಳಲ್ಲಿಯೂ ಹೂಗಳನ್ನು ಬಿಡುವುದಿಲ್ಲ. ಇದು ಆಯಾ ಪ್ರದೇಶ ಮತ್ತು ಸಸ್ಯ ಜಾತಿಗನುಗುಣವಾಗಿ ಬೇರೆ ಬೇರೆಯಾಗಿರುತ್ತದೆ. ಆದುದರಿಂದ ಜೇನು ಕೃಷಿಕರು ತಮ್ಮ ಜೇನು ಕುಟುಂಬಗಳಿಗೆ ಸಮ ಪ್ರಮಾಣದಲ್ಲಿ ಪರಾಗ ಮತ್ತು ಮಕರಂದ ಸಿಗುವಂತೆ ನೋಡಿಕೊಳ್ಳಲು ತಮ್ಮ ಪ್ರದೇಶದ ಸಸ್ಯಗಳು ಹೂಬಿಡುವ ಕಾಲವನ್ನು ತಿಳಿಯುವುದು ಬಹಳ ಮುಖ್ಯ. ಕರ್ನಾಟಕ ರಾಜ್ಯದಲ್ಲಿ ಜೇನುನೊಣಗಳಿಗೆ ಅತ್ಯಗತ್ಯವಾದ ಸಸ್ಯಗಳು ಆಹಾರದ ಮೂಲ ಮತ್ತು ಅವುಗಳ ಹೂಬಿಡುವ ಕಾಲವನ್ನು ಕೋಷ್ಟಕ ೧೩ ರಲ್ಲಿ ತಿಳಿಸಲಾಗಿದೆ.

ಕೋಷ್ಟಕ ೧೩ : ಜೇನುನೊಣಗಳ ಆಹಾರ ಸಸ್ಯಗಳಲ್ಲಿ ಆಹಾರದ ಮೂಲ ಮತ್ತು ಹೂ ಬಿಡುವ ಕಾಲ

ಸಸ್ಯದ ಸಾಮಾನ್ಯ ಹೆಸರು

ಆಹಾರದ ಮೂಲ

ಹೂ ಬಿಡುವ ಕಾಲ

ಕೃಷಿ ಬೆಳೆಗಳು
ಸೂರ್ಯಕಾಂತಿ ಪರಾಗ + ಮಕರಂದ ಜನವರಿ – ಡಿಸೆಂಬರ್
ಹುಚ್ಚೆಳ್ಳು ಪರಾಗ + ಮಕರಂದ ಸೆಪ್ಟೆಂಬರ್ – ಅಕ್ಷೋಬರ್
ಎಳ್ಳು ಪರಾಗ + ಮಕರಂದ ಜುಲೈ – ಅಗಸ್ಟ್
ರಾಗಿ ಪರಾಗ ಸೆಪ್ಟೆಂಬರ್ – ಅಕ್ಷೋಬರ್
ಬತ್ತ ಪರಾಗ ಜುಲೈ – ಅಗಸ್ಟ್
ಮೆಕ್ಕೆಜೋಳ ಪರಾಗ ಜನವರಿ – ಡಿಸೆಂಬರ್
ಜೋಳ ಪರಾಗ ಜೂನ್ – ಜುಲೈ
ಹತ್ತಿ ಪರಾಗ + ಮಕರಂದ
ಸಾಸಿವೆ ಪರಾಗ + ಮಕರಂದ ಅಕ್ಟೋಬರ್ – ಫೆಬ್ರವರಿ
ಸೋಯಾ ಅವರೆ ಮಕರಂದ + ಪರಾಗ ಜುಲೈ – ಅಗಸ್ಟ್
ಕುಸುಮೆ ಪರಾಗ + ಮಕರಂದ ಡಿಸೆಂಬರ್ – ಜನವರಿ
ಅಲಸಂದೆ ಮಕರಂದ + ಪರಾಗ ಜನವರಿ – ಡಿಸೆಂಬರ್
ತೋಟಗಾರಿಕಾ ಬೆಳೆಗಳು
ಸೀಬೆ ಮಕರಂದ + ಪರಾಗ ಮೇ – ಜೂನ್
ಬಾಳೆ ಮಕರಂದ + ಪರಾಗ ಜನವರಿ – ಡಿಸೆಂಬರ್
ಮಾವು ಮಕರಂದ + ಪರಾಗ ಜನವರಿ – ಏಪ್ರಿಲ್
ಪರಂಗಿ ಪರಾಗ + ಮಕರಂದ ಮೇ – ಜೂನ್
ಹುಣಸೆ ಮಕರಂದ + ಪರಾಗ ಏಪ್ರಿಲ್ – ಜುಲೈ
ಗೋಡಂಬಿ ಪರಾಗ + ಮಕರಂದ ಡಿಸೆಂಬರ್ – ಜನವರಿ
ನಿಂಬೆ ಮಕರಂದ + ಪರಾಗ ಫೆಬ್ರವರಿ – ಮಾರ್ಚ್
ತೆಂಗು ಪರಾಗ + ಮಕರಂದ ಜನವರಿ – ಡಿಸೆಂಬರ್
ಎಲಚೆ ಮಕರಂದ + ಪರಾಗ ಜುಲೈ – ಅಕ್ಟೋಬರ್
ಲಿಚೆ ಮಕರಂದ ಮಾರ್ಚ್ – ಏಪ್ರಿಲ್
ನುಗ್ಗೆ ಮಕರಂದ + ಪರಾಗ ಜನವರಿ – ಡಿಸೆಂಬರ್
ಸೇಬು ಮಕರಂದ + ಪರಾಗ ಮಾರ್ಚ್ – ಏಪ್ರಿಲ್
ಬಾದಾಮಿ ಮಕರಂದ + ಪರಾಗ ಫೆಬ್ರವರಿ – ಏಪ್ರಿಲ್
ಕ್ಯಾರೆಟ್ ಮಕರಂದ + ಪರಾಗ ಫೆಬ್ರವರಿ – ಮೇ
ಕೊತ್ತುಂಬರಿ ಮಕರಂದ + ಪರಾಗ ಫೆಬ್ರವರಿ – ಮೇ
ಈರುಳ್ಳಿ ಮಕರಂದ + ಪರಾಗ ಮೇ – ಜೂನ್
ಕುಂಬಳ ಪರಾಗ + ಮಕರಂದ ಜನವರಿ – ಡಿಸೆಂಬರ್
ಅಂಟುನಾಳ ಮಕರಂದ + ಪರಾಗ ಡಿಸೆಂಬರ್ – ಜನವರಿ
ಏಪ್ರಕಾಟ್ ಮಕರಂದ + ಪರಾಗ ಫೆಬ್ರವರಿ – ಮಾರ್ಚ್
ಪೀಚ್ ಮಕರಂದ + ಪರಾಗ ಫೆಬ್ರವರಿ – ಮಾರ್ಚ್
ಪಿಯರ್ ಮಕರಂದ + ಪರಾಗ ಫೆಬ್ರವರಿ – ಮಾರ್ಚ್
ಮೂಲಂಗಿ ಮಕರಂದ + ಪರಾಗ ಫೆಬ್ರವರಿ – ಮಾರ್ಚ್
ಬದನೆ ಮಕರಂದ + ಪರಾಗ ಫೆಬ್ರವರಿ – ಮಾರ್ಚ್
ಸೌತೆ ಮಕರಂದ + ಪರಾಗ ಜುಲೈ – ಸೆಪ್ಟೆಂಬರ್
ಚೆಂಡುಮಲ್ಲಿಗೆ ಮಕರಂದ + ಪರಾಗ ಸೆಪ್ಟೆಂಬರ್ – ನವೆಂಬರ್
ತುಳಸಿ ಮಕರಂದ + ಪರಾಗ ಸೆಪ್ಟೆಂಬರ್ – ನವೆಂಬರ್
ಕೋಸು ಮಕರಂದ + ಪರಾಗ ಮಾರ್ಚ್ – ಮೇ
ಹರಳು ಪರಾಗ ನವೆಂಬರ್ – ಮಾರ್ಚ್
ಸೇವಂತಿಗೆ ಮಕರಂದ + ಪರಾಗ ಮಾರ್ಚ್ – ಏಪ್ರಿಲ್
ಬೆಂಡೆ ಮಕರಂದ + ಪರಾಗ ಅಗಸ್ಟ್ – ನವೆಂಬರ್
ಕಾಡಿನ ಮರಗಳು
ನೀಲಗಿರಿ ಮಕರಂದ + ಪರಾಗ ಅಕ್ಟೋಬರ್ – ಜನವರಿ
ನೇರಳೆ ಮಕರಂದ + ಪರಾಗ ಏಪ್ರಿಲ್ – ಮೇ
ಹೊಂಗೆ ಮಕರಂದ + ಪರಾಗ ಏಪ್ರಿಲ್ – ಮೇ
ರಬ್ಬರ್ ಮಕರಂದ ಮಾರ್ಚ್ – ಏಪ್ರಿಲ್
ಬಿರಡಿ ಮರ ಮಕರಂದ ಮಾರ್ಚ್ – ಏಪ್ರಿಲ್
ಸಿಲ್ವರ್ ಓಕ್ ಮಕರಂದ ಮಾರ್ಚ್ – ಏಪ್ರಿಲ್
ಸೀಗೆಕಾಯಿ ಮಕರಂದ ಅಕ್ಟೋಬರ್ – ಡಿಸೆಂಬರ್
ಬೇವು ಮಕರಂದ ಮಾರ್ಚ್ – ಏಪ್ರಿಲ್
ಗ್ಲಿರಿಸೀಡಿಯಾ ಮಕರಂದ + ಪರಾಗ ಫೆಬ್ರವರಿ – ಏಪ್ರಿಲ್
ಕರಿಬೇವು ಮಕರಂದ + ಪರಾಗ ಏಪ್ರಿಲ್
ನೆಲ್ಲಿಕಾಯಿ ಪರಾಗ ಏಪ್ರಿಲ್ – ಮೇ
ಜಾಲಿಮರ ಮಕರಂದ + ಪರಾಗ ಜೂನ್
ಗುಲ್ ಮೊಹರ್ ಮಕರಂದ ಏಪ್ರಿಲ್ – ಮೇ
ಚೆರಿ ಮಕರಂದ + ಪರಾಗ ನವೆಂಬರ್ – ಡಿಸೆಂಬರ್
ಪೆಲ್ಟೋಪೋರಂ ಮಕರಂದ + ಪರಾಗ ಫೆಬ್ರವರಿ – ಜೂನ್

ಜೇನುಕೃಷಿಗೆ ಸಸ್ಯ ಸಂಪತ್ತು ಅತ್ಯಾವಶ್ಯಕವಾಗಿದ್ದು ಅವುಗಳ ಸಂರಕ್ಷಣೆ ಅಗತ್ಯವಾಗಿದೆ. ಜೇನು ನೊಣಗಳು ಸಸ್ಯಗಳಲ್ಲಿನ ಮಕರಂದವನ್ನು ಹೀರಿ ಜೇನುತುಪ್ಪವನ್ನಾಗಿ ಮಾರ್ಪಡಿಸುವುದರಿಂದ ಹಾಗೂ ಜೇನುನೊಣಗಳ ಬೆಳವಣಿಗೆಗೆ ಪರಾಗ ಅತ್ಯಾವಶ್ಯಕವಾಗಿರುವುದರಿಂದ ಯಶಸ್ವೀ ಜೇನುಸಾಕಾಣಿಕೆಗಾಗಿ ಪರಾಗ ಮತ್ತು ಮಕರಂದವನ್ನು ಹೆಚ್ಚಾಗಿ ಸ್ರವಿಸುವ ಗಿಡ ಮರಗಳನ್ನು ಉಳಿಸಿ ಬೆಳೆಸುವುದು ಅತ್ಯಂತ ಅವಶ್ಯಕ. ಇಂತಹ ಸಸ್ಯಗಳನ್ನು ಬರಡು ಭೂಮಿ ಮತ್ತು ಇತರ ಪಾಳು ಭೂಮಿಗಳಲ್ಲಿ ಬೆಳೆಸಬಹುದು. ಅಲ್ಲದೆ ಅನೇಕ ತರಕಾರಿ, ತೋಟಗಾರಿಕಾ ಬೆಳೆಗಳು ಮತ್ತು ಕಾಡಿನಲ್ಲಿ ಬೆಳೆಸಬಹುದಾದ ಮರಗಳೂ ಜೇನುಕೃಷಿಗೆ ಸಹಾಯಕವಾಗಿರುವುದರಿಂದ ಪ್ರತಿಯೊಬ್ಬರೂ ಇಂತಹ ಸಸ್ಯಸಂಪತ್ತನ್ನು ಸಂರಕ್ಷಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು.

ಜೇನುನೊಣ ಆಹಾರ ಸಸ್ಯಗಳಲ್ಲಿ ವಿಷಕಾರತ್ವ

ಭಾರತದಲ್ಲಿ ಪೀಡೆನಾಶಕಗಳ ಉಪಯೋಗವು ಸ್ವಾತಂತ್ರ್ಯಕ್ಕೂ ಮೊದಲಿನಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಬಳಸುವುದರ ಮೂಲಕ ಪ್ರಾರಂಭವಾಯಿತು. ಆದರೆ ೧೯೫೧ ರವರೆಗೂ ಹೊರ ದೇಶಗಳಿಂದ ಪೀಡೆನಾಶಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ೧೯೫೨ರಲ್ಲಿ ಬಿ.ಎಚ್‌.ಸಿ ತಯಾರಿಕಾ ಘಟಕವನ್ನು ಕೊಲ್ಕತ್ತಾದಲ್ಲಿ ಪ್ರಾರಂಭಿಸಲಾಗಿ ೧೯೯೪ – ೧೯೯೫ ರ ಅಂಕಿ ಅಂಶಗಳ ಪ್ರಕಾರ ೭೪೪೬೩ ಟನ್ ಕೀಟನಾಶಕಗಳು, ೬೦೯೯ ಟನ್ ಶಿಲೀಂಧ್ರನಾಶಕಗಳು ಸೇರಿದಂತೆ ಒಟ್ಟು ೮೮೮೯೦ ಟನ್‌ಗಳಷ್ಟು ಪೀಡೆನಾಶಕಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಇವುಗಳಲ್ಲಿ ಶೇ. ೭೦ ರಷ್ಟು ಪೀಡೆನಾಶಕಗಳನ್ನು ಕೃಷಿಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ಇತ್ತೀಚಿಗೆ ಪೀಡೆನಾಶಕಗಳ ಬಳಕೆ ಶೇ. ೨೫ರಷ್ಟು ಬೆಳೆಗಳಿಂದ ಕೂಡಿದ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತಿದ್ದು, ಭಾರತದಲ್ಲಿ ಇದರ ಬಳಕೆ ಒಂದು ಹೆಕ್ಟೇರಿಗೆ ಸರಾಸರಿ ೪೫೦ ಗ್ರಾಂಗಳಾದರೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಪ್ರತಿ ಹೆಕ್ಟೇರಿಗೆ ೧೦ ಕಿ.ಗ್ರಾಂಗಳಷ್ಟು ಪೀಡೆನಾಶಕಗಳನ್ನು ಬಳಸಲಾಗುತ್ತಿದೆ.

ಪರಿಸರ ಮಾಲಿನ್ಯದಿಂದ ವಿಷವಾಗುವಿಕೆ :  ಕಾರ್ಖಾನೆಗಳಿರುವ ಪ್ರದೇಶಗಳಲ್ಲಿ ಆರ್ಸೆನಿಕ್ ವಿಷವನ್ನು ಹೊರಸೂಸುತ್ತಿರುವುದರಿಂದ ಅವು ಜೇನುನೊಣಗಳಿಗೂ ವಿಷಕಾರಿಯಾಗುತ್ತವೆ. ಇದೇ ರೀತಿ ಈ ಕಾರ್ಖಾನೆ ರಾಸಾಯನಿಕಗಳು ಹೂಗಳ ಪರಾಗ ಮತ್ತು ಮಕರಂದದೊಂದಿಗೆ ಬೆರೆತು ವಿಷವಾಗುತ್ತವೆ. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳಿಂದ ಪ್ಲೋರಿನ್ ಅಂಶವು ಹೊರಸೂಸಿ ಹೂಗಳ ಪರಾಗ ಮತ್ತು ಮಕರಂದದಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಫಾಸ್ಪೇಟ್, ಫೀನಾಲ್ ಮಿಶ್ರಣಗಳು ಪರಾಗದ ಮೇಲೆ ಕಂಡುಬರುತ್ತವೆ.

ವಿಷಪೂರಿತ ಮಕರಂದ : ಕೆಲವು ಪ್ರಭೇದದ ಸಸ್ಯಗಳ ಮಕರಂದವು ವಿಷಪೂರಿತವಾಗಿರುತ್ತದೆ. ಇದಕ್ಕೆ ಕಾರಣ ಮಕರಂದದಲ್ಲಿನ ಮ್ಯಾನೋಸ್ ಎಂಬ ರಾಸಾಯನಿಕ. ಇದರಿಂದಾಗಿ ಜೇನುತುಪ್ಪದಲ್ಲಿಯೂ ವಿಷದ ಅಂಶ ಕಂಡುಬರುವ ಸಾಧ್ಯತೆ ಇದೆ. ಮ್ಯಾನೋಸ್ ಅಂಶವು ಪಿಷ್ಟಗಳ ಜೀರ್ಣತೆಯನ್ನು ಕುಂದಿಸುವುದರಿಂದ ಜೇನು ನೊಣಗಳು ಫುಕ್ಟೋಸ್ ಮತ್ತು ಗ್ಲೂಕೋಸ್‌ಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೂಗಳ ಮಕರಂದಕ್ಕೆ ಯಾವುದೇ ವಿಷವು ಸೇರಿದಾಗಲೂ ಅದು ಜೇನುನೊಣಗಳಿಗೆ ವಿಷಕಾರಿಯಾಗುತ್ತದೆ. ವಿಷಕಾರಿಕೀಟಗಳಾದ ಆಸಿಫೇಟ್, ಡೈಮೀಥೋಯೇಟ್, ಪ್ಯಾರಾಥಿಯಾನ್‌, ಮಾನೋಕ್ರೋಟೋಫಾಸ್, ಮೆಥೊಯೇಟ್ ಮುಂತಾದವುಗಳು ದೀರ್ಘಕಾಲ ಮಕರಂದದಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ.

ಪೀಡೆ ನಾಶಕಗಳಲ್ಲಿ ಕೀಟ, ಶಿಲೀಂದ್ರ, ಮೂಷಕ, ಕಳೆನಾಶಕ ಮುಂತಾದ ಬಗೆಗಳಿದ್ದು, ಜೇನುನೊಣಗಳಿಗೆ ಮುಖ್ಯವಾಗಿ ಬೆಳೆಗಳ ಹೂಗಳಿಗೆ ಸಿಂಪಡಿಸುವ ಪೀಡೆನಾಶಕಗಳಿಂದ ವಿಷವಾಗುವಿಕೆ ಉಂಟಾಗುತ್ತದೆ. ಜೇನುನೊಣಗಳ ಕುಟುಂಬದಲ್ಲಿ ಸ್ವಾಭಾವಿಕ ಸಾವು ಸಾಮಾನ್ಯವಾದರೂ ಯೂರೋಪಿಯನ್ ಜೇನುನೊಣದಲ್ಲಿ ವಿಷದಿಂದಾಗುವ ಸಾವಿನ ಮಟ್ಟವನ್ನು ಕೋಷ್ಟಕ ೧೪ ರಲ್ಲಿ ತಿಳಿಸಲಾಗಿದೆ.

ಕೋಷ್ಟಕ ೧೪ : ಪೀಡೆ ನಾಶಕಗಳಿಂದಾಗುವ ಜೇನು ನೊಣಗಳಲ್ಲಿ ವಿಷದ ಮಟ್ಟ

ಒಂದು ದಿನಕ್ಕೆ ಮುಖದ್ವಾರದ ಬಳಿ ಸತ್ತ ಜೇನು ನೊಣಗಳ ಸಂಖ್ಯೆ

ವಿಷವಾಗುವಿಕೆಯ ಮಟ್ಟ

೧೦೦ ಸಾಮಾನ್ಯ
೨೦೦ – ೪೦೦ ಕಡಿಮೆ
೫೦೦ – ೧೦೦೦ ಸುಮಾರು
೧೦೦೦ ಕ್ಕಿಂತ ಹೆಚ್ಚು ಹೆಚ್ಚು

ಮೂಲ : ಎಫ್.ಎ.ಒ. ೧೯೮೮

ಜೇನು ನೊಣಗಳು ವಿಷಗಳಿಗೆ ತುತ್ತಾಗುವ ಮೂಲಗಳೆಂದರೆ ಕೃಷಿ ಹಾಗೂ ಕೃಷಿಯೇತರ ಬೆಳೆಗಳಿಗೆ ಹೂ ಬಿಡುವ ಕಾಲದಲ್ಲಿ ದೀರ್ಘಕಾಲ ಬೆಳೆಗಳಲ್ಲಿ ವಿಷ ಉಳಿಯುವಂತಹ ಪೀಡೆನಾಶಕಗಳ ಮತ್ತು ಕಳೆನಾಶಕಗಳ ಸಿಂಪರಣೆಗಳಾಗಿವೆ.

ಕೆಲವು ಸಸ್ಯಗಳು ಉತ್ಪಾದಿಸುವ ಪರಾಗ ಮತ್ತು ಮಕರಂದವು ಜೇನುನೊಣಗಳಿಗೆ ವಿಷವನ್ನುಂಟು ಮಾಡಿ ಸಾಯಿಸುತ್ತವೆ. ಅವುಗಳಲ್ಲಿ ರೋಡೋಡೆಂಡ್ರಾನ್ ಅರ್ಬೋರಿಯಂ, ಕೊರಿನೋಕಾರ್ಪಸ್ ಲೇಮಿಗೇಟ, ಎಸ್ಕ್ಯುಲಸ್ ಕ್ಯಾಲಿಫೋರ್ನಿಯ ಪ್ರಭೇದಗಳು ಅಮೆರಿಕೆಯಲ್ಲಿ ಜೇನುನೊಣಗಳಿಗೆ ವಿಷವನ್ನುಂಟು ಮಾಡುತ್ತವೆ. ಅದೇ ರೀತಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಅಸ್ಟ್ರೊಗ್ಯಾಲಸ್. ಸೈರಿಲ್ಲಾ. ಟೀಲಿಯ ಮತ್ತು ಸೊಲ್ಯಾನಂ ನಿಗ್ರಂ ಸಸ್ಯಗಳ ಹೂಗಳು ತುಡುವೆ ಜೇನುನೊಣಗಳಿಗೆ ವಿಷವನ್ನುಂಟು ಮಾಡುತ್ತವೆ.

ಪೀಡೆನಾಶಕಗಳ ವಿಷದಿಂದಾಗಿ ಈ ಮುಂದಿನ ಪರಿಣಾಮಗಳುಂಟಾಗುತ್ತವೆ :

೧. ಆಹಾರ ಶೇಖರಣೆಯಲ್ಲಿನ ನೊಣಗಳು ಪರಾಗ ಅಥವಾ ಮಕರಂದದ ಕಲಬೆರಕೆ ಮೂಲಕ ಜೇನು ಕುಟುಂಬಕ್ಕೆ ವಿಷವನ್ನು ತರುತ್ತಿರುತ್ತವೆ.

೨. ವಿಷದ ಪರಿಣಾಮದಿಂದಾಗಿ ಅನೇಕ ಜೇನು ನೊಣಗಳು ಗೂಡಿನ ಮುಖದ್ವಾರದ ಬಳಿ ಸಾಯುತ್ತಿರುತ್ತವೆ.

೩. ನೊಣಗಳು ಮಕರಂದವನ್ನು ನಾಲಗೆಯ ಮೂಲಕ ಹೊರಸೂಸಿ ಸಾಯುತ್ತಿರುತ್ತವೆ.

೪. ಜೇನು ನೊಣಗಳು ಅಡಿಮಣೆಯ ಮೇಲೆ ಅಡ್ಡಾದಿಡ್ಡಿ ಓಡಾಡುತ್ತಿದ್ದು ಕೋಪದಿಂದ ಕೂಡಿರುತ್ತವೆ.

೫. ಹಾರಲು ನಿಶ್ಯಕ್ತವಾಗಿ ಬಹು ಬೇಗನೆ ಸಾಯುತ್ತವೆ.

೬. ಗೂಡನ್ನು ಚುರುಕಾಗಿ ಶುಚಿಗೊಳಿಸುದಿಲ್ಲ.

೭. ಮರಿಹುಳುಗಳು ಸಾಯುತ್ತಿದ್ದು ರಾಣಿಯು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತದೆ.

೮. ಜೇನು ಕುಟುಂಬವು ಅಹಿತಕರ ವಾಸನೆಯಿಂದ ಕೂಡಿರುತ್ತದೆ.

ಜೇನು ಕುಟುಂಬಗಳನ್ನು ಪೀಡೆನಾಶಕಗಳ ವಿಷದ ಬಾಧೆಯಿಂದ ತಪ್ಪಿಸಲು ಉಪಯೋಗಿಸುವ ಕಿಟನಾಶಕಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆದು ಈ ಮುಂದಿನ ಕ್ರಮಗಳನ್ನು ಅನುಸರಿಸಬಹುದು.

ಜೇನುನೊಣಗಳನ್ನು ಪೆಟ್ಟಿಗೆಯಿಂದ ಹೊರ ಬಿಡದಿರುವುದು :  ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವ ಸಮಯದಲ್ಲಿ ವಿಷಮಟ್ಟವು ಇಳಿಮುಖವಾಗುವವರೆಗೂ ಜೇನುನೊಣಗಳು ಆಹಾರಕ್ಕಾಗಿ ಹೊರ ಹೋಗದಂತೆ ಜೇನುಪೆಟ್ಟಿಗೆಯ ಮುಖದ್ವಾರವನ್ನು ಮುಚ್ಚಬಹುದು. ಇಂತಹ ಸಮಯದಲ್ಲಿ ಜೇನುಪೆಟ್ಟಿಗೆಯೊಳಗೆ ಹೆಚ್ಚು ಜಾಗವಿದ್ದು ಸರಾಗವಾಗಿ ಗಾಳಿಯಾಡುವಂತಿರಬೇಕು. ಜೇನು ಕುಟುಂಬದಲ್ಲಿ ಹೆಚ್ಚು ಜೇನುನೊಣಗಳಿದ್ದು, ಹೆಚ್ಚಿನ ಕಾಲ ಅವುಗಳನ್ನು ಹೊರ ಬಿಡಲಾಗದ ಸಮಯದಲ್ಲಿ ಒಳಗಡೆ ನೀರನ್ನು ಒದಗಿಸಬೇಕಾಗುತ್ತದೆ.

ಜೇನುಕುಟುಂಬಗಳನ್ನು ವಿಷಪೀಡಿತ ಪ್ರದೇಶದಿಂದ ದೂರ ಸಾಗಿಸುವುದು :

ಸಾಮಾನ್ಯವಾಗಿ ಆಹಾರ ಶೇಖರಣಾ ಕ್ರಿಯೆಯಲ್ಲಿ ನಿರತವಾದ ಜೇನು ನೊಣಗಳು ವಿಷಕ್ಕೆ ಆಹುತಿಯಾಗುತ್ತವೆ. ಈ ಸಮಯದಲ್ಲಿ ಕೆಲವು ಜೇನು ನೊಣಗಳು ದಾರಿಯಲ್ಲಿಯೇ ಮರಣ ಹೊಂದಿದರೂ ವಿಷ ಸೇವಿಸಿದ ಕೆಲವು ನೊಣಗಳು ಪೆಟ್ಟಿಗೆಯ ಹತ್ತಿರದಲ್ಲಿ ಸಾಯುತ್ತವೆ. ಆದುದರಿಂದ ಜೇನುಕುಟುಂಬಗಳನ್ನು ಸಮೀಪದ ಬೆಳೆಗಳಿಗೆ ಕಿಟ ನಾಶಕಗಳನ್ನು ಸಿಂಪಡಿಸುವುದಕ್ಕೂ ಮೊದಲು ಬೇರೆ ಕಡೆಗೆ ಸಾಗಿಸುವುದು ಸೂಕ್ತ. ಅವುಗಳ ಸಾಗಾಣಿಕೆಯ ಸಮಯದಲ್ಲಿ ಸಂಜೆ ಎಲ್ಲ ಜೇನು ನೊಣಗಳು ಪೆಟ್ಟಿಗೆಯೊಳಗೆ ಬಂದ ನಂತರ ದ್ವಾರವನ್ನು ಮುಚ್ಚಿ ರಾತ್ರಿಯ ವೇಳೆಯಲ್ಲಿ ಕೀಟನಾಶಕ ಬಳಸಿದ ಸ್ಥಳದಿಂದ ೩ ಕಿ.ಮೀ ಗಿಂತ ದೂರದ ಸ್ಥಳಕ್ಕೆ ಸಾಗಿಸುವುದು.

ಜೇನುನೊಣಗಳನ್ನು ವಿಷಗಳಿಂದ ರಕ್ಷಿಸುವ ವಿಧಾನಗಳು

೧. ಕಡಿಮೆ ವಿಷ ಅಥವಾ ಜೇನುನೊಣಗಳಿಗೆ ವಿಷವಾಗದ ಪೀಡೆನಾಶಕಗಳನ್ನು ಸಂಜೆಯವೇಳೆ ಬೆಳೆಗಳಿಗೆ ಉಪಯೋಗಿಸಬೇಕು.

೨. ಪೀಡೆನಾಶಕ ಸಿಂಪಡಿಸುವ ಪ್ರದೇಶಗಳಿಂದ ಜೇನು ಕುಟುಂಬಗಳನ್ನು ದೂರವಿಡಬೇಕು.

೩. ಪೀಡೆಗಳನ್ನು ನಾಶಪಡಿಸಲು ಜೈವಿಕ ಕೀಟ ನಿಯಂತ್ರಣವನ್ನು ಅನುಸರಿಸುವುದು ಸೂಕ್ತ.

೪. ಜೇನುನೊಣಗಳ ವಿಕರ್ಷಕ ಪೀಡೆಗಳನ್ನು ಬಳಸಬೇಕು.

ಜೇನುನೊಣಗಳ ವಿಷವಾಗುವಿಕೆಯಲ್ಲಿನ ಅಂಶಗಳು

. ಪೀಡೆನಾಶಕ ರೂಪ : ಧೂಳಿನ ರೂಪದ ಪೀಡೆನಾಶಕಗಳು ಜೇನುನೊಣಗಳ ಕಾಲುಗಳಿಗೆ ಅಂಟಿಕೊಂಡು ಗೂಡಿಗೆ ತಲುಪುವುದರಿಂದ ಬಹಳ ಅಪಾಯಕಾರಿಯಾಗಿವೆ. ಹರಳಿನ ರೂಪದ ಕೀಟನಾಶಕಗಳಿಂದ ವಿಷದ ಉಳಿಕೆ  ಪರಾಗ ಮತ್ತು ಮಕರಂದದಲ್ಲಿದ್ದು ಜೇನುಮರಿ ಮತ್ತು ನೊಣಗಳನ್ನು ಸಾಯಿಸುತ್ತದೆ. ಅದೇ ರೀತಿ ಧೂಪಕ ವಿಷಗಳಿಂದಲೂ ಜೇನುನೊಣಗಳಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ.

. ಕೀಟನಾಶಕದ ಆಯ್ಕೆ : ಕಡಿಮೆ ವಿಷದಿಂದ ಕೂಡಿದ ಎಂಡೋಸಲ್ಫಾನ್, ಪೆನ್ವಲರೇಟ್ ಮುಂತಾದವುಗಳು ಜೇನುನೊಣಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುವುದಿಲ್ಲ. ಆದರೆ ಹೆಚ್ಚು ವಿಷದಿಂದ ಕೂಡಿದ ಕಾರ್ಬಮೇಟ್ ವಿಷಗಳು ನೊಣಗಳ ಕಿಣ್ವಗಳ ಕಾರ್ಯವನ್ನು ಕುಂದಿಸುವುದರೊಂದಿಗೆ ಸಾಯಿಸುತ್ತವೆ.

.ಸಿಂಪರಣೆಯ ವೇಳೆ : ಮುಸ್ಸಂಜೆಯ ಸಮಯದಲ್ಲಿ ಕಡಿಮೆ ಸಂಖ್ಯೆಯ ನೊಣಗಳು ಆಹಾರ ಶೇಖರಣೆಯಲ್ಲಿ ತೊಡಗುವುದರಿಂದ ಆ ವೇಳೆಯಲ್ಲಿ ಕೀಟನಾಶಕಗಳನ್ನು ಬಳಸುವುದು ಉತ್ತಮ. ಇದು ಕೀಟನಾಶಕ ದ್ರಾವಣ ಜೇನುನೊಣಗಳ ಮೇಲೆ ನೇರವಾಗಿ ಬೀಳುವುದನ್ನು ತಪ್ಪಿಸುತ್ತದೆ.

. ಬೆಳೆಗಳ ಆಕರ್ಷಣೆ : ಜೇನುನೊಣಗಳು ಕೆಲವು ಬೆಳೆಗಳಾದ ಸಾಸಿವೆ, ಸೂರ್ಯಕಾಂತಿ ಮುಂತಾದವುಗಳಿಗೆ ೩ ಕಿ.ಮೀ. ಗಿಂತ ಹೆಚ್ಚು ದೂರದಿಂದ ಆಕರ್ಷಕವಾಗುವುದರಿಂದ ಇಂತಹ ಬೆಳೆಗಳ ಪ್ರದೇಶದಲ್ಲಿ ಬೇರೆ ಬೆಳೆಗಳ ಮೇಲೆ ಕೀಟನಾಶಕಗಳ ಸಿಂಪರಣೆ ಮಾಡಿದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

. ಹವಾಮಾನ : ಜೇನುನೊಣಗಳು ಬಿಸಿಲಿನಿಂದ ಕೂಡಿದ ಸಮಯದಲ್ಲಿ ಆಹಾರ ಶೇಖರಣೆಯಲ್ಲಿ ತೊಡಗುವುದರಿಂದ ಹವಾಮಾನವು ತಂಪಾಗಿ ಮೋಡದಿಂದ ಕವಿದ ವೇಳೆಯಲ್ಲಿ ಕೀಟನಾಶಕಗಳನ್ನು ಜೇನುನೊಣಗಳಿಗೆ ತೊಂದರೆಯಾಗದಂತೆ ಸಿಂಪಡಿಸಬಹುದು.

. ಜೇನು ಕುಟುಂಬಗಳ ದೂರ : ಜೇನು ಕುಟುಂಬಗಳನ್ನು ಕೀಟನಾಶಕ ಸಿಂಪಡಿಸುವ ಪ್ರದೇಶದಿಂದ ೩ – ೪ ಕಿ.ಮೀ. ದೂರದಲ್ಲಿರುವುದರಿಂದ ಇಂತಹ ಬೆಳೆಗಳಿಂದ ಆಹಾರ ಶೇಖರಣೆಯು ಕಡಿಮೆಯಾಗಿ ಜೇನುನೊಣಗಳಿಗೆ ವಿಷವಾಗುವಿಕೆಯನ್ನು ತಪ್ಪಿಸಬಹುದು.

ಜೇನುನೊಣಗಳಿಗೆ ವಿಷಕಾರಿಯಾಗುವ ವಿವಿಧ ಕೀಟನಾಶಕಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

() ಹೆಚ್ಚು ವಿಷದಿಂದ ಕುಡಿದ ಕೀಟ ನಾಶಕಗಳು

೧. ಕಾರ್ಬರಿಲ್ ೫೦ ಡಬ್ಲೂ. ಪಿ. (೧.೫ ಕಿ.ಗ್ರಾಂ / ಹೆ)

೨. ಸೈಪರ್ ಮೆತ್ರಿನ್ ೧೦ ಇ. ಸಿ.

೩. ಡೆಕಾಮೆತ್ರಿನ್ ೨೦ ಇ.ಸಿ.

೪. ಡೈಕ್ಲೊರೋವಾಸ್ ೧೦೦ ಇ. ಸಿ.

೫. ಮಾನೋಕ್ರೋಟೋಫಾಸ್ ೩೬ ಇ. ಸಿ

೬. ಆಕ್ಸಿಡೆಮೆಟಾನ್ ಮೀಥೈಲ್ ೨೫ ಇ. ಸಿ.

೭. ಪ್ಯಾರಾಥಿಯಾನ್ ೫೦ ಇ. ಸಿ.

೮. ಪಾಸ್ಟಮಿಡಾನ್ ೧೦೦ ಇ. ಸಿ.

೯. ಕ್ವಿನಾಲ್‌ಫಾಸ್ ೨೫ ಇ. ಸಿ.

೧೦. ಸುಮಿಥಿಯಾನ್ ೫೦ ಇ.ಸಿ,

() ಸಾಮಾನ್ಯ ವಿಷದಿಂದ ಕುಡಿದ ಕೀಟನಾಶಕಗಳು

೧. ಕಾಬ್ರಿಲ್ ೫೦ ಡಬ್ಲು. ಪಿ.

೨. ಮಾಲಾಥಿಯಾನ್ ೫೦ ಇ. ಸಿ.

೩. ಟ್ರೈಕ್ಲೋರ್‌ವಾಸ್ ೫೦ ಇ. ಸಿ.

೪. ಫೆಂಥಿಯಾನ್ ೫೦ ಇ. ಸಿ

() ಕಡಿಮೆ ವಿಷದಿಂದ ಕೂಡಿದ ಕೀಟ ಮತ್ತು ನುಸಿನಾಶಕಗಳು

೧. ಎಂಡೋಸಲ್ಪಾನ್ ೩೫ ಇ. ಸಿ.

೨. ಪೋಸೊಲೋನ್ ೫೦ ಇ. ಸಿ.

೩. ಕಾರ್ಬೋಫ್ಯೂರಾನ್ ೩ ಜಿ

೪. ಕ್ಲೋರೋಬೆಂಜಿಲೇಟ್

೫. ಡೈಕೋಫಾಲ್

೬. ಕ್ರಿಯೋಲೈಟ್

() ಸಾಮಾನ್ಯ ವಿಷದಿಂದ ಕೂಡಿದ ಶಿಲೀಂಧ್ರ ನಾಶಕಗಳು

೧. ಡೈಥೇನ್ ಎಮ್ – ೪೫, ೭೫ ಡಬ್ಲ್ಯು. ಪಿ.

೨. ಪೋಲ್ಟಾಫ್ ೮೦ ಡಬ್ಲ್ಯು. ಪಿ.

೩. ಡಿಪೋಲಿಟಾನ್ ೫೦ ಡಬ್ಲ್ಯು. ಪಿ.

೪. ಹೆಕ್ಸಾಕ್ಯಾಪ್ ೫೦ ಡಬ್ಲ್ಯು. ಪಿ.

೫. ಬ್ಯಾವಿಸ್ಟಿನ್ ೫೦ ಡಬ್ಲ್ಯು. ಪಿ.