ಜೇನುನೊಣಗಳು ಪ್ರಾಣಿಪ್ರಪಂಚದ ಅಕಶೇರುಕ ಗುಂಪಿನ ಸಂದಿಪದಿ ಉಪಕೋಟಿಯಲ್ಲಿ ಕೀಟವರ್ಗದ ಹೈಮೆನಾಪ್ಟಿರ (ಪೊರೆ ಪಕ್ಷೀಯ) ಗಣಕ್ಕೆ ಸೇರಿವೆ. ಈ ಗಣದಲ್ಲಿ ಜೇನು, ಕಡಜ, ಇರುವೆ, ಗರಗಸದ ಹುಳು, ಕಡಜದ ಜಾತಿಗೆ ಸೇರಿದ ಪರೋಪಜೀವಿಗಳು ಮುಖ್ಯವಾದುವು. ಜೇನುನೊಣಗಳು ಸಣ್ಣದರಿಂದ ಮಧ್ಯಮ ಗಾತ್ರದ ಕೀಟಗಳು, ನಾಲ್ಕು ಸಣ್ಣ ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಕೆಲವೇ ನರದಿಂಡುಗಳಿರುತ್ತವೆ. ಮುಂದಿನ ರೆಕ್ಕೆಗಳು ದೊಡ್ಡವು, ಹಿಂದಿನ ರೆಕ್ಕೆಗಳು ಚಿಕ್ಕವು. ಆಗಾಗ ಹಿಂದಿನ ರೆಕ್ಕೆ ಮುಂದಿನ ರೆಕ್ಕೆಗಳಿಗೆ ತಗುಲಿಸಿ ಕೊಂಡಿರುತ್ತದೆ. ಕೂಡುಗಣ್ಣುಗಳು ಚೆನ್ನಾಗಿ ಅಭಿವೃದ್ಧಿಯಾಗಿರುತ್ತವೆ. ಮುರು ಸರಳ ಕಣ್ಣುಗಳು ಮತ್ತು ಕುಡಿಮೀಸೆ ಗಂಡಿನಲ್ಲಿ ೧೨, ಹೆಣ್ಣಿನಲ್ಲಿ ೧೩ ತುಂಡುಗಳು ಮುನ್ನೆದೆ ಮತ್ತು ಮಧ್ಯದ ಎದೆಗೆ ಕುಡಿಕೊಂಡಿರುತ್ತವೆ. ಹೊಟ್ಟೆಗೆ ಸೊಂಟವಿದ್ದು ಅದರ ಮೊದಲನೆ ಸಂದಿ ಎದೆಯೊಡನೆ ಕೂಡಿಕೊಂಡಿರುತ್ತದೆ. ಹೆಣ್ಣಿನಲ್ಲಿ ಅಂಡನಾಳ ಅಥವಾ ಕೊಂಡಿ ವೈಶಿಷ್ಟ್ಯ ಸರ್ಸಿ ಇರುವುದಿಲ್ಲ. ಪೂರ್ಣ ರೂಪಾಂತರದ ಪ್ರಕ್ರಿಯೆ ಕಂಡುಬರುತ್ತದೆ. ಮೊಟ್ಟೆ ಮರಿ, ಕೋಶ ಮತ್ತು ಪ್ರೌಢ ಕೀಟಗಳನ್ನು ಸ್ಪಷ್ಟವಾಗಿ ಕಾಣಬಹುದು ಹಾಗೂ ಮರಿಗೆ ಕಾಲುಗಳಿರುವುದಿಲ್ಲ. ಮರಿ ಮತ್ತು ಕೋಶದ ಬೆಳವಣಿಗೆ ಕಣಗಳು ಸಾಮಾಜಿಕ ಜೀವನ ನಡೆಸುವ ಸಂಘ ಜೀವಿಗಳಾಗಿರುತ್ತವೆ ಮತ್ತು ಗೂಡುಗಳಲ್ಲಿ ವಾಸಿಸುತ್ತವೆ.

ಇವುಗಳ ಶರೀರ ಅಗಲ, ಮೈಮೇಲೆ ಹೆಚ್ಚು ಕೂದಲು, ಎದೆಯ ಕೂದಲುಗಳಲ್ಲಿ ಕವಲು, ಪರಾಗವನ್ನು ಶೇಖರಿಸಲು ಕುಂಚದಂತೆ ಹಿಂಗಾಲುಗಳ ಮೊಣಕಾಲು ಪರಾಗದ ಬುಟ್ಟಿಯಾಗಿ ಮಾರ್ಪಟ್ಟಿವೆ. ಮುನ್ನೆದೆ ಪಕ್ಕಗಳಲ್ಲಿ ಹಿಂದಕ್ಕೆ ರೆಕ್ಕೆಗಳ ಬುಡದ ಹಂಚುಗಳವರೆಗೆ ವಿಸ್ತರಿಸಿಲ್ಲ. ಬಾಯಿ ಭಾಗಗಳ ನಾಲಿಗೆ ಚೆನ್ನಾಗಿ ಬೆಳೆದು, ಅಗಿದು ನೆಕ್ಕುವ ಬಗೆಯದಾಗಿದೆ, ಗೂಡುಗಳಲ್ಲಿ ಮರಿಗಳ ಆಹಾರಕ್ಕೆ ಹೂಗಳ ಮಕರಂದ, ಪರಾಗಗಳನ್ನು ಒದಗಿಸಿಡುತ್ತವೆ.

ಜೇನು, ಕಡಜ, ಹಾಗೂ ಇರುವೆಗಳು ಎಲ್ಲರಿಗೂ ಪರಿಚಯವಿರುವ ಕೀಟಗಳು. ಜೇನು ಮತ್ತು ಕಡಜಗಳು ತಮ್ಮ ಗೂಡುಗಳಲ್ಲಿ ಮೊಟ್ಟೆಯಿಂದ ಮೊಟ್ಟೆಯಿಂದ ಬಂದ ಮರಿಗಳಿಗೆ ಸಿಕ್ಕುವಂತೆ ಆಹಾರವನ್ನು ಶೇಖರಿಸಿಡುತ್ತವೆ. ಈ ಸಾಂಘಿಕ ಜೀವಿಗಳು  ತಾಯಿ ರಕ್ಷಣೆಯಂತೆ ಆಹಾರವನ್ನು ಶೇಖರಿಸಿಡುತ್ತವೆ. ಈ ಸಾಂಘಿಕ ಜೀವಿಗಳು ತಾಯಿ ರಕ್ಷಣೆಯಂತೆ ತಮ್ಮ ಮರಿಗಳಿಗೆ ಪ್ರತಿದಿನವೂ ಆಹಾರವನ್ನು ತಂದು ತಿನ್ನಿಸಿ, ಗೂಡನ್ನು ಶುಚಿಗೊಳಿಸಿ ಪ್ರಾಯಕ್ಕೆ ಬರುವವರೆಗೂ ರಕ್ಷಿಸುತ್ತವೆ. ಜೇನುನೊಣಗಳು ದೊಡ್ಡ ಸಮುದಾಯದಲ್ಲಿ ವಾಸಿಸಿ ಜಟಿಲವಾದ ಸಾಂಘಿಕ ಅಥವಾ ಸಹಕಾರ ಜೀವನವನ್ನು ನಡೆಸುತ್ತವೆ.

‘ಪೊರೆ ಪಕ್ಷೀಯ’ ಗಣದ ಸಾಂಘಿಕ ಜೀವನದಲ್ಲಿ ‘ರಾಜ’, ‘ರಾಣಿ’ ನೊಣಗಳು ಮಾತ್ರ ಸಂತಾನೋತ್ಪಾದಕ ಕೀಟಗಳಾಗಿದ್ದು ಉಳಿದ ಜೇನುನೊಣಗಳು ಕೆಲಸಮಾಡುವ ಫಲವತ್ತಲ್ಲದ ಬಂಜೆ ನೊಣಗಳು. ಈ ಬಂಜೆ ನೊಣಗಳು ಕುಟುಂಬದ ಅಭಿವೃದ್ಧಿಗಾಗಿ ಸದಾ ಕೆಲಸಮಾಡುತ್ತವೆ. ಇವೇ ‘ಕೆಲಸಗಾರ್ತಿ’ ಜೇನುನೊಣಗಳು. ಗೂಡುಗಳನ್ನು ಕಟ್ಟುವುದು, ಶುಚಿಯಾಗಿಡುವುದು, ಆಹಾರವನ್ನು ಹುಡುಕುವುದು, ಶತ್ರುಗಳಿಂದ ರಕ್ಷಣೆ, ರಾಣಿಯಿಟ್ಟ ಅಸಂಖ್ಯಾತ ಮೊಟ್ಟೆಗಳಿಂದ ಬಂದ ಮರಿಗಳ ಸಂಪೂರ್ಣ ಪಾಲನೆ, ಇವೆಲ್ಲವೂ ಕೆಲಸಗಾರ್ತಿ ಜೇನುನೊಣಗಳ ಪ್ರಧಾನ ಕಾರ್ಯಗಳು. ಗಂಡುನೊಣಗಳಿಗೆ ಆಂಗ್ಲಭಾಷೆಯಲ್ಲಿ ‘ಡ್ರೋನ್’ಗಳೆನ್ನುತ್ತಾರೆ. ಇವುಗಳ ಏಕೈಕ ಕೆಲಸವೆಂದರೆ ರಾಣಿ ನೊಣವನ್ನು ಫಲವತ್ತಾಗಿಡುವುದು. ಇವು ಕೆಲವೇ ತಿಂಗಳುಗಳು ಮಾತ್ರ ಗೂಡಿನಲ್ಲಿರುತ್ತವೆ.

ವಿವಿಧ ಪ್ರಭೇದಗಳ ಕೆಲಸಗಾರ ಜೇನುನೊಣಗಳು ೧. ಎಪಿಸ್ ಆಂಡ್ರಿನಿಫಾರ್ಮಿಸ್ ೨. ಎಪಿಸ್ ಫ್ಲೋರಿಯ ೩. ಎಪಿಸ್ ಸೆರಾನ ೪. ಎಪಿಸ್ ಮೆಲ್ಲಿಫೇರ ೫. ಎಪಿಸ್ ಡಾರ್ಸೆಟ ೬. ಎಪಿಸ್ ಲೆಬೋರಿಯೋಸ

ಜೇನುನೊಣಗಳ ಕುಲಗಳು : ಹೈಮೆನಾಪ್ಟೆರ ಗಣವನ್ನು ವಿಷದ ಕೊಂಡಿಗಳ ಆಧಾರದ ಮೇಲೆ ಮೂರು ಮೇಲ್ದರ್ಜೆಯ ಕುಟುಂಬಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಎಪೊಯಿಡಿಯ, ವೆಸ್ಟಾಯಿಡಿಯಾ, ಫಾರ್ಮಿಕಾಯಿಡಿಯಾಗಳು. ಜೇನುನೊಣಗಳು ಎಪೊಯಿಡಿಯಾ ಮೇಲ್ದರ್ಜೆಯ ಕುಟುಂಬಕ್ಕೆ ಸೇರಿವೆ. ಎಪೊಯಿಡಿಯ ಮೇಲ್ದರ್ಜೆಯ ಕುಟುಂಬವನ್ನು ಎಪಿಡಿ, ಆಂಥೋಪೋರಿಡಿ, ಮೆಘಾಕೈಲಿಡಿ, ಆಂಡ್ರಿನಿಡಿ, ಹ್ಯಾಲಿಕ್ಟಿಡಿ, ಎಂದು ಐದು ಕುಟುಂಬಗಳಾಗಿ ವಿಂಗಡಿಸಿದೆ. ಎಪಿಡಿ ಕುಟುಂಬವನ್ನು ಎಪಿನೆ, ಮೆಲಿಪೋನಿನೆ ಮತ್ತು ಬಾಂಬಿನೆ ಎಂಬ ಮೂರು ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಜೇನುನೊಣಗಳು ಎಪಿನೆ ಉಪಕುಟುಂಬಕ್ಕೆ ಸೇರಿವೆ. ಮೆಲ್ಲಿಪೋನಾ, ಮೆಲ್ಲಿಪೋನುಲಾ, ಟ್ರೈಗೋನಾ, ಲೆಸ್ಟ್ರಿಮೆಲಿಟಾ, ಡ್ಯಾಕ್ಯೂಲೂರಿನಾ ಎಂಬ ಕುಲಗಳು ಮೆಲ್ಲಿಫೋನಿನೆ ಎಂಬ ಉಪಕುಟುಂಬಕ್ಕೆ ಸೇರಿವೆ. ಬಾಂಬಸ್ ಎಂಬ ಕುಲವನ್ನು ಬಾಂಬಿನೆ ಉಪಕುಲಕ್ಕೆ ಸೇರಿಸಲಾಗಿದೆ. ಟ್ರೈಗೋನಾ ಕುಲದಲ್ಲಿ ವಿಷಕೊಂಡಿಯಿಲ್ಲದ ಜೇನುನೊಣ ಟ್ರೈಗೋನ ಇಂಡಿಪೆನಿಸ್ಸ್ ಮತ್ತು ಎಪಿಸ್ ಕುಲದಲ್ಲಿ ಪ್ರಮುಖವಾಗಿ ಎಪಿಸ್ ಸೆರೆನಾ, ಎಪಿಸ್ ಮೆಲ್ಲಿಫೆರಾ, ಎಪಿಸ್ ಪ್ಲೋರಿಯ ಮತ್ತು ಎಪಿಸ್ ಡಾರ್ಸೆಟ ಎಂಬ ಜೇನುನೊಣಗಳಿವೆ.

ಜೇನುನೊಣಗಳ ಪ್ರಭೇದಗಳು : ಇತರೆ ಕಿಟ ಸಂಕುಲದಂತೆಯೇ ಜೇನು ನೊಣಗಳಲ್ಲಿ ಅನೇಕ ಪ್ರಭೇದ ಮತ್ತು ಉಪಪ್ರಭೇಧಗಳಿವೆ, ಪ್ರಭೇದ ಮತ್ತು ಉಪಪ್ರಭೇದಗಳ ಉದಯಕ್ಕೆ ಅವುಗಳ ಅನೇಕ ಶತಮಾನಗಳಿಂದಾಗುತ್ತಿರುವ ಅವಾಭಾವಿಕ ಆಯ್ಕೆಯೂ ಸೇರಿದಂತೆ ಅನೇಕ ಕಾರಣಗಳಿರುತ್ತವೆ. ಉಪಪ್ರಭೇದಗಳು ಆಯಾ ವಲಯಗಳಲ್ಲಿ ವಾಸಿಸುವ ಸ್ಥಳಗಳ ಹೊಂದಾಣಿಕೆಗೆ ಸಂಬಂಧಿಸಿದಂತೆ ಭೌಗೋಳಿಕವಾಗಿ ಉದ್ಭವಿಸುತ್ತವೆ. ಅವುಗಳು ಕೆಲವು ಜೈವಿಕ ಗುಣಗಳಲ್ಲಿ ಮಾತ್ರ ವ್ಯತ್ಯಾಸವಿದ್ದು ಈ ಬಗೆಯ ಪರಿಸರ ವಿಧಗಳು (ಇಕೋಟೈಪ್‌ಗಳು) ಸ್ವಾಭಾವಿಕ ಆಯ್ಕೆಯ ಮೂಲವೆಂದು ತಿಳಿಯಲಾಗಿದೆ.

ಭಾರತದಲ್ಲಿ ಐದು ಮುಖ್ಯ ಜೇನು ನೊಣಗಳ ಪ್ರಭೇದಗಳಿವೆ. ಅವುಗಳೆಂದರೆ ಮುಳ್ಳಿನ ಕೊಂಡಿಗಳಿಲ್ಲದ ರಾಳ ಜೇನು ನೊಣ (ಟ್ರೈಗೋನ ಇಂಡಿಪೆನಿಸ್ಸ್)  ಮತ್ತು ಮುಳ್ಳಿನ ಕೊಂಡಿಗಳಿಂದ ಕೂಡಿದ ಹೆಜ್ಜೇನು (ಎಪಿಸ್ ಡಾರ್ಸೆಟ), ಕೋಲುಜೇನು (ಎಪಿಸ್ ಫ್ಲೋರಿಯಂ), ತುಡುವೆ ಜೇನು (ಎಪಿಸ್ ಸೆರಾನ) ಮತ್ತು ಯೂರೋಪಿಯನ್ ಜೇನುನೊಣ (ಎಪಿಸ್ ಮೆಲ್ಲಿಫೆರ). ೧೯೬೦ ರಲ್ಲಿ ಯೂರೋಪಿಯನ್ ಜೇನು ಕುಟುಂಬಗಳನ್ನು ಭಾರತಕ್ಕೆ ಪರಿಚಯಿಸಿ ಯಶಸ್ವಿ ಸಾಕಣೆಯನ್ನು ಪ್ರಾರಂಭಿಸುವುದರೊಂದಿಗೆ ಭಾರತವು ಎಲ್ಲಾ ಜೇನುನೊಣಗಳ ಪ್ರಭೇದಗಳನ್ನು ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರವೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಐದು ಪ್ರಭೇದಗಳಲ್ಲಿ ತುಡುವೆ ಜೇನು ಮತ್ತು ಯೂರೋಪಿಯನ್ ಜೇನು ನೊಣಗಳು ಮಾತ್ರ ಪೆಟ್ಟಿಗೆಗಳಲ್ಲಿ ಸಾಕಾಣಿಕೆಗೆ ಯೋಗ್ಯವಾಗಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯೂರೋಪಿಯನ್ ಜೇನು ಮತ್ತು ಏಷ್ಯಾ ರಾಷ್ಟ್ರಗಳಲ್ಲಿ ತುಡುವೆ ಜೇನು ಹಾಗೂ ಯೂರೋಪಿಯನ್ ಜೇನು ನೊಣಗಳೆರಡು ಸಾಕಣೆಯಲ್ಲಿವೆ. ಗೂಡುಕಟ್ಟುವ ಗುಣದ ಆಧಾರದ ಮೇಲೆ ಜೇನು ನೊಣಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಮುಕ್ತವಾಗಿ ಗೂಡುಕಟ್ಟುವ ಜೇನು ನೊಣಗಳು ಮತ್ತು ಕತ್ತಲಿನ ಪೊಟರೆಗಳಲ್ಲಿ ಗೂಡು ಕಟ್ಟುವ ಜೇನು ನೊಣಗಳು. ಮುಕ್ತವಾಗಿ ಗೂಡು ಕಟ್ಟುವ ಜೇನು ನೊಣಗಳು ಒಂದೇ ಒಂದು ಎರಿಯನ್ನು ಕಟ್ಟಿದರೆ, ಪೊಟರೆಗಳಲ್ಲಿ ಗೂಡು ಕಟ್ಟುವ ಜೇನು ನೊಣಗಳು ಅನೇಕ ಎರಿಗಳನ್ನು ಸಮಾನಾಂತರವಾಗಿ ಕಟ್ಟುತ್ತವೆ.

ಜೇನು ನೊಣಗಳ ಮುಖ್ಯ ಗುಣ ಲಕ್ಷಣಗಳು : ಜೇನುನೊಣಗಳು ಎರಿಯನ್ನು ತಾವೇ ಸ್ರವಿಸಿದ ಶುದ್ಧವಾದ ಮೇಣದಿಂದ ಕಟ್ಟುತ್ತವೆ. ಇವು ಲಂಬಾಕಾರದ ಷಡ್ಭುಜಾಕೃತಿಯ ಕಣಗಳಿಂದ ಕೂಡಿದ ಎರಿಗಳನ್ನು ಕಟ್ಟಿ ಮರಿ ಸಾಕಣೆ, ಪರಾಗ ಮತ್ತು ಜೇನುತುಪ್ಪದ ಶೇಖರಣೆಗೆ ಎರಿಗಳನ್ನು ಬಳಸುತ್ತವೆ. ೯ – ಆಕ್ಸಿ – ೨ ಡೆಸಿನೋಯಿಕ್ ಆಮ್ಲವು ರಾಣಿಯು ಸ್ರವಿಸುವ ಚೋದಕ ರಾಸಾಯನಿಕದ ಮುಖ್ಯ ಅಂಶವಾಗಿದ್ದು ರಾಣಿಯ ಲೈಂಗಿಕ ಕ್ರಿಯೆಯಲ್ಲಿ ಗಂಡು ನೊಣಗಳನ್ನು ಆಕರ್ಷಿಸಲು ಸಹಕಾರಿಯಾಗಿದೆ. ಐಸೋಪೆಂಟೈಲ್ ಅಸಿಟೇಟ್ ಎಂಬುದು ಎಚ್ಚರಿಕೆ ನೀಡುವ ಮುಖ್ಯ ಚೋದಕ ರಾಸಾಯನಿಕವಾಗಿದ್ದು, ಆಹಾರ ಪರಿಶೋಧನೆಯಲ್ಲಿ ಕೆಲಸಗಾರ ನೊಣಗಳ ನೃತ್ಯವು ಸಹಕಾರಿಯಾಗುತ್ತದೆ. ಈ ನೊಣಗಳು ಪಾಲಾಗುವಿಕೆಯ ಮೂಲಕ ಕುಟುಂಬಗಳನ್ನು ದ್ವಿಗುಣಗೊಳಿಸುತ್ತವೆ.

ರಾಳ ಜೇನು (ಟ್ರೈಗೋನ ಇಂಡಿಪೆನ್ನಿಸ್) : ಇದು ಆದಿಕಾಲದ ಜೇನು ಪ್ರಭೇದ. ಜೇನು ನೊಣಗಳಲ್ಲೆಲ್ಲ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು, ಇದಕ್ಕೆ ಮುಜಂಟಿ ಜೇನು, ಮಿಶ್ರ ಜೇನು, ನಸರು ಜೇನು, ಸೊಳ್ಳೆ ಜೇನು ಇತ್ಯಾದಿ ಸ್ಥಳೀಯ ಹೆಸರುಗಳಿವೆ. ಉಳಿದ ನಾಲ್ಕು ಬಗೆಯ ಜೇನು ನೊಣಗಳಿಂದ ಕೆಲವು ಗುಣಗಳಲ್ಲಿ ಭಿನ್ನವಾಗಿದೆ. ಇದರಿಂದ ಬೇರೆ ಜೇನು ಪ್ರಭೇದಗಳಂತೆ ಆರ್ಥಿಕವಾಗಿ ಹೆಚ್ಚಿನ ಗುಣಮಟ್ಟದ ಜೇನುತುಪ್ಪವನ್ನು ಸಂಗ್ರಹಿಸುವುದಿಲ್ಲ. ಇವುಗಳಿಗೆ ಚುಚ್ಚುವ ಮುಳ್ಳಿನ ಕೊಂಡಿ ಬೆಳವಣಿಗೆಯಾಗದೆ ಇರುವುದರಿಂದ ತಮ್ಮ ಬಾಯಿಂದಲೇ ಸ್ವಲ್ಪ ಮಟ್ಟಿಗೆ ಕಚ್ಚುವುದರ ಮೂಲಕ ಕುಟುಂಬದ ರಕ್ಷಣೆಯನ್ನು ಮಾಡುತ್ತವೆ. ಇವು ಆಫ್ರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಗಿನಿಯಾ ಮತ್ತು ಸೊಲೋಮನ್ ದ್ವೀಪಗಳ ಪ್ರದೇಶಗಳಲ್ಲಿ ಹಾಗೂ ಭಾರತದ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ತಮ್ಮ ಗೂಡುಗಳನ್ನು ಅತ್ಯಂತ ಗೋಪ್ಯ ಸ್ಥಳಗಳಾದ ಮಣ್ಣಿನ ಗೋಡೆ, ಸೇತುವೆ, ಮರದ ಪೊಟರೆ ಮತ್ತು ಕಲ್ಲು ಬಂಡೆಗಳ ಸಂದುಗಳಲ್ಲಿ ಕಟ್ಟುತ್ತವೆ. ಎರಿಗಳ ರಚನೆಗೆ ಮೇಣ ಮತ್ತು ಮಣ್ಣಿನ ಮಿಶ್ರಣದಿಂದ ತಯಾರಾದ ಕಪ್ಪಾದ ಅಂಟು ಪದಾರ್ಥ (ಸೆರುಮನ್)ವನ್ನು ಬಳಸುತ್ತವೆ. ತಮ್ಮ ಕುಟುಂಬದ ರಕ್ಷಣೆಗಾಗಿ ಸುಮಾರು ೫ – ೬ ಮಿ.ಮೀ ಅಗಲದ ಮತ್ತು ೧೦ ರಿಂದ ೧೫ ಸೆಂ.ಮೀ ಉದ್ದದ ಕೊಳವೆಯಾಕಾರದ ದ್ವಾರವನ್ನು ನಿರ್ಮಿಸುತ್ತವೆ. ಕೊಳವೆಯ ಹೊರತುದಿ ಅಂಟಿನಿಂದ ಕೂಡಿದ್ದು ಇರುವೆ ಮುಂತಾದ ಶತ್ರು ಕೀಟಗಳಿಂದ ರಕ್ಷಿಸಿಕೊಳ್ಳಲು ಅನುಕೂಲವಾಗಿದೆ. ಇವುಗಳ ಕಣಗಳ ರಚನೆ ಕಡಲೆಕಾಳು ಅಥವಾ ಜೋಳದ ಕಾಳಿನ ಗಾತ್ರದಷ್ಷಿದ್ದು ಹೆಚ್ಚು ಕಡಿಮೆ ದುಂಡಾಗಿರುತ್ತವೆ. ಕಡಲೆಕಾಳು ಗಾತ್ರದ ಕಣಗಳಲ್ಲಿ ಪರಾಗ ಮತ್ತು ಜೇನು ತುಪ್ಪವನ್ನು ಸಂಗ್ರಹಿಸಿದರೆ ಜೋಳದ ಕಾಳಿನ ಗಾತ್ರದ ಕಣಗಳಲ್ಲಿ ಮೊಟ್ಟೆ ಮತ್ತು ಮರಿಗಳನ್ನು ಬೆಳೆಸುತ್ತವೆ (ಚಿತ್ರ ೪). ಈ ಜೇನು ನೊಣಗಳ ಜೇನು ತುಪ್ಪದ ಸಂಗ್ರಹಣಾ ಸಾಮರ್ಥ್ಯ ಅತ್ಯಂತ ಕಡಿಮೆಯಾಗಿದ್ದು ವರ್ಷಕ್ಕೆ ಪ್ರತಿ ಕುಟುಂಬದಿಂದ ಕೇವಲ ೧೦೦ ರಿಂದ ೨೦೦ ಗ್ರಾಂಗಳಷ್ಟು ಜೇನುತುಪ್ಪವನ್ನು ಪಡೆಯಬಹುದೆಂದು ಅಂದಾಜು ಮಾಡಲಾಗಿದೆ. ಗೂಡಿನಿಂದ ಸುಮಾರು ೦.೩ ರಿಂದ ೦.೪ ಕಿ.ಮೀ. ಸುತ್ತಳತೆಯಿಂದ ಆಹಾರ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜೇನು ನೊಣಗಳು ಕೆಲವು ಬೆಳೆಗಳ ಪರಾಗ ಸ್ಪರ್ಶ ಕ್ರಿಯೆಯಲ್ಲಿ ಪಾತ್ರವಹಿಸಿ ಇಳುವರಿಯನ್ನು ಹೆಚ್ಚಿಸುತ್ತವೆ.

ಪೊಟರೆಯಲ್ಲಿ ಕಟ್ಟಿರುವ ರಾಳ ಜೇನಿನ (ಟ್ರೈಗೋನ ಇಂಡಿಪೆನ್ನಿಸ್) ಗೂಡು

ಕೋಲು ಜೇನು (ಎಪಿಸ್ ಪ್ಲೋರಿಯಾ) : ಇದನ್ನು ಕಿರುಜೇನು, ಚಿಟ್ಟಜೇನು, ಕಡ್ಡಿಜೇನು ಮುಂತಾದ ಸ್ಥಳೀಯ ಹೆಸರುಗಳಿಂದ ಕರೆಯಲಾಗುತ್ತಿದ್ದು ಮುಖ್ಯವಾಗಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಮಲೇಶಿಯಾ ಮತ್ತು ಇಂಡೋನೇಶಿಯಾದ ಕೆಲವು ಭಾಗಗಳಲ್ಲಿ ಸಮುದ್ರ ಮಟ್ಟದಿಂದ ೫೦೦ ಮೀಟರ್ ಎತ್ತರದವರೆಗಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಬೇಸಿಗೆ ಕಾಲದಲ್ಲಿ ಇರಾನ್ ದೇಶದ ಕೆಲವೆಡೆ ಸಮುದ್ರ ಮಟ್ಟದಿಂದ ೯೦೦ ಮೀಟರ್ ಹಾಗೂ ಒಮನ್, ಭಾರತ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ೧೯೦೦ ಮೀಟರ್ ಎತ್ತರದವರೆಗೂ ಇವುಗಳು ವಾಸಿಸುತ್ತಿರುವುದು ಕಂಡು ಬಂದಿದೆ (ಚಿತ್ರ ೫). ಗಾತ್ರದಲ್ಲಿ ಇವು ತುಡುವೆ ಜೇನು ನೊಣಗಳಿಗಿಂತ ಚಿಕ್ಕದಾಗಿವೆ.

ಕೋಲು ಜೇನಿನ (ಎಪಿಸ್ ಫ್ಲೋರಿಯಾ) ಗೂಡು

ಕೋಲು ಜೇನು ನೊಣಗಳು ಹೆಚ್ಚಾಗಿ ಗಿಡದ ಪೊದೆಗಳು ಮತ್ತು ಮರಗಳ ತೆಳುವಾದ ಕೊಂಬೆಯನ್ನು ಆರಿಸಿಕೊಂಡು ಎರಿಯನ್ನು ರಚಿಸುತ್ತವೆ. ಈ ಜೇನು ನೊಣಗಳ ಎರಿಯು ಸುಮಾರು ೩೦ ಸೆಂ.ಮೀ. ಉದ್ದ, ೧೮ ಸೆಂ.ಮೀ ಎತ್ತರ ಮತ್ತು ೨ – ೩ ಸೆಂ.ಮೀ. ದಪ್ಪವಿರುತ್ತದೆ. ಎರಿಯ ಮೇಲ್ಭಾಗ ಕೊಳವೆಯಾಕಾರದಲ್ಲಿ ದಪ್ಪವಾಗಿದ್ದು, ಕೆಳಭಾಗ ತೆಳುವಾಗಿರುತ್ತದೆ. ಈ ನೊಣಗಳು ಇತರೆ ಜೇನು ಪ್ರಭೇದಗಳಂತೆ ಮೇಲ್ಭಾಗದ ಎರಿಯ ಕಣಗಳಲ್ಲಿ ಜೇನು ತುಪ್ಪದ ಸಂಗ್ರಹಣೆ ಮಾಡುತ್ತವೆ. ಅಗಲವಾದ ಎರಿಯ ಭಾಗ ಮಕರಂದ ಮತ್ತು ಪರಾಗವನ್ನು ಹೊತ್ತು ತಂದ ಕೆಲಸಗಾರ ನೊಣಗಳು ಸಂವಹನ ನೃತ್ಯ ಮಾಡುವುದಕ್ಕೆ ಸಹಕಾರಿಯಾಗುತ್ತದೆ. ಈ ಜೇನುನೊಣ ಹೆಚ್ಚಿನ ಉಷ್ಣತೆಯನ್ನು ಎದುರಿಸುವ ಗುಣವನ್ನು ಪಡೆದಿದೆ. ಶತ್ರು ಕೀಟಗಳಿಂದ ರಕ್ಷಣೆ ಪಡೆಯಲು ಯಾವುದೇ ರೀತಿಯ ಶತ್ರುವು ಗೂಡನ್ನು ಪ್ರವೇಶಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಶಬ್ದ ಮಾಡುವುದರ ಮತ್ತು ಗುಂಪು ಕಟ್ಟುವ ನಡುವಳಿಕೆಯ ಮೂಲಕ ಗೂಡನ್ನು ರಕ್ಷಿಸುತ್ತವೆ. ರಾಣಿಯು ಅನುಕೂಲಕ್ಕನುಗುಣವಾಗಿ ದಿನವೊಂದಕ್ಕೆ ಸುಮಾರು ೨೦೦ ರಿಂದ ೩೦೦ ಮೊಟ್ಟೆಗಳನ್ನಿಡುವ ಸಾಮರ್ಥ್ಯವನ್ನು ಪಡೆದಿದೆ.

ಜೇನುನೊಣಗಳು ಒಂದೇ ಸ್ಥಳದಲ್ಲಿ ಹೆಚ್ಚು ಕಾಲದವರೆಗೆ ನೆಲಸುವದು ತುಂಬಾ ವಿರಳ. ಇವು ಗೂಡನ್ನು ಬಿಟ್ಟು ಬೇರೆಡೆಗೆ ಹೋಗಿ ನೆಲಸುವ ಸಮಯದಲ್ಲಿ ತಮ್ಮ ಗೂಡಿನಲ್ಲಿರುವ ಮಕರಂದ, ಪರಾಗ ಹಾಗೂ ಸ್ವಲ್ಪ ಮೇಣವನ್ನು ಸಂಗ್ರಹಿಸಿಕೊಂಡು ಹೋಗುವ ವಿಶಿಷ್ಟ ಗುಣವನ್ನು ಹೊಂದಿರುತ್ತವೆ. ಈ ನೊಣಗಳು ಹೆಚ್ಚಿನ ವಲಸೆ ಹೋಗುವ ಗುಣವನ್ನು ಹೊಂದಿದ್ದು, ಕೆಲವು ಸಮಯಗಳಲ್ಲಿ ತಮ್ಮ ಮರಿಗಳು, ಜೇನುತುಪ್ಪ, ಪರಾಗ ಮತ್ತು ಎರಿಗಳನ್ನು ಬಿಟ್ಟು ಬೇರೆಡೆಗೆ ಹೋಗುತ್ತವೆ. ತಮ್ಮ ಕುಟುಂಬಗಳಲ್ಲಿ ಯಾವಾಗಲೂ ನೊಣಗಳು ಎರಿಯನ್ನು ಸುತ್ತುವರಿದಿದ್ದು ಬಿಸಿಲು, ಮಳೆ ಮತ್ತು ಗಾಳಿಗಳಿಂದ ಗೂಡನ್ನು ರಕ್ಷಿಸುತ್ತವೆ, ಗಂಡುನೊಣದ ಕಣಗಳು ಕೆಲಸಗಾರ ನೊಣಗಳ ಕಣಗಳಿಗಿಂತ ಸುಮಾರು ೧.೫೫ ರಷ್ಟು ದೊಡ್ಡದಾಗಿರುತ್ತವೆ. ಇವುಗಳು ಕಡಿಮೆ ಪ್ರಮಾಣದಲ್ಲಿ ಜೇನು ತುಪ್ಪದ ಸಂಗ್ರಹಣೆ ಮಾಡುವುದರಿಂದ, ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಸ್ಥಿರವಾಗಿ ನೆಲಸದೆ ಹಾಗೂ ಒಂದೇ  ಎರಿಯನ್ನು ಕಟ್ಟುವುದರಿಂದ ಸಾಕುವ ಪ್ರಯತ್ನಗಳು ನಡೆದಿಲ್ಲ. ಈ ಪ್ರಭೇದದ ಜೇನುತುಪ್ಪಕ್ಕೆ ಅರಬ್ಬೀ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆಯಿದೆ. ಎರಿಯಲ್ಲಿ  ಜೇನಿನ ಭಾಗವನ್ನು ಮಾತ್ರ ಕತ್ತರಿಸಿ ತೆಗೆದು, ಮೊಟ್ಟೆ ಮರಿಗಳಿರುವ ಭಾಗವನ್ನು ಖರ್ಜೂರದ ಎಲೆಯ ದಂಟಿನಿಂದ ಕಟ್ಟಿ ಅವುಗಳ ಸಹಜ ವಾಸಸ್ಥಾನಗಳಲ್ಲಿ ಇರಿಸುವ ವಿಧಾನದಿಂದ ಅವುಗಳನ್ನು ಸಾಕಣೆ ಮಾಡಬಹುದಾಗಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು ಅರ್ಧದಿಂದ ಒಂದು ಕಿಲೋಗ್ರಾಂನಷ್ಟು ಜೇನುತುಪ್ಪವನ್ನು ನೀಡಬಲ್ಲ ಈ ಜೇನು ಕುಟುಂಬಗಳು ಮಾನವನಿಗೆ ಮುಖ್ಯವಾಗಿ ಸಹಕಾರಿಯಾಗುವುದು ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ, ಗೂಡಿನಿಂದ ಸುಮಾರು ೦.೫ ಕಿ.ಮೀ. ದೂರದವರೆಗಿನ ಪ್ರದೇಶಗಳಿಂದ ಆಹಾರ ಸಂಗ್ರಹಿಸುವುದರಿಂದ, ಉಷ್ಣವಲಯದ ಮತ್ತು ಒಣ ತಗ್ಗು ಪ್ರದೇಶಗಳ ಹವಾಮಾನಗಳಿಗೆ ಒಗ್ಗಿಕೊಳ್ಳುವುದರಿಂದ ವಲಸೆ ಹೋದರೂ ಅತೀ ಸಮೀಪದ ಸ್ಥಳದಲ್ಲಿಯೇ ನೆಲೆಸುವುದರಿಂದ ಆಯಾ ಪ್ರದೇಶದ ಪರಾಗ ಸ್ಪರ್ಶವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತವೆ.

ಹೆಜ್ಜೇನು (ಎಪಿಸ್ ಡಾರ್ಸೆಟ) : ಜೇನುನೊಣಗಳ ಎಲ್ಲಾ ಪ್ರಭೇದಗಳಲ್ಲಿ ಇದು ಗಾತ್ರದಲ್ಲಿ ಅತ್ಯಂತ ದೊಡ್ಡದು. ಈ ಜೇನುನೊಣವನ್ನು ಕಾಡುಜೇನು, ಬಂಡೆಜೇನು, ಮರಜೇನು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಮಲೇಶಿಯಾ, ಚೀನಾ, ಫಿಲಿಫೈನ್ಸ್ ಮತ್ತು ಇಂಡೋನೇಷಿಯಾಗಳಲ್ಲಿ ಈ ನೊಣವು ಹೆಚ್ಚಾಗಿ ವ್ಯಾಪಿಸಿದ್ದು ಸಮುದ್ರಮಟ್ಟದಿಂದ ೧೦೦೦ ದಿಂದ ೧೭೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿ ವಾಸಿಸುವದು ಕಂಡು ಬರುತ್ತದೆ (ಚಿತ್ರ ೬). ಬೇಸಿಗೆ ಕಾಲದಲ್ಲಿ ಆಹಾರದ ಲಭ್ಯತೆಯನ್ನನುಸರಿಸಿ  ಗರಿಷ್ಠ  ಉಷ್ಣತೆಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಬಹಳ ದೂರ ಸಮುದ್ರ ಮಟ್ಟದಿಂದ ೨೧೦೦ ಮೀಟರ್ ಎತ್ತರದವರೆಗಿನ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ವಲಸೆ ಹೋಗುವಾಗ ಅಲ್ಲಲ್ಲಿ ಒಂದು ಅಥವಾ ೨ – ೩ ದಿನಗಳವರೆಗೆ ತಂಗುತ್ತವೆ. ಗೂಡುಗಳನ್ನು ಕಟ್ಟಲು ಎತ್ತರದ ಸ್ಥಳಗಳಾದ ದೊಡ್ಡ ಮರದ ಕೊಂಬೆಗಳು, ಕಟ್ಟಡಗಳು, ಕಲ್ಲುಬಂಡೆಗಳು, ಅಣೆಕಟ್ಟು, ನೀರಿನ ಸಂಗ್ರಹಕಗಳು ಇತ್ಯಾದಿಗಳನ್ನು ಆರಿಸಿಕೊಳ್ಳುತ್ತವೆ. ಗೂಡುಗಳು ಒಂದೇ ಎರಿಯನ್ನು ಹೊಂದಿದ್ದು, ಮುಕ್ತವಾಗಿ ಹೊರಗೆ ಕಾಣುವಂತೆ ಇರುತ್ತವೆ. ಗೂಡಿಗೆ ನೇರವಾಗಿ ಸೂರ್ಯನ ತೀಕ್ಷ್ಣ ಬಿಸಿಲು ಅಥವಾ ಮಳೆಯಿಂದ ರಕ್ಷಣೆ ಇರುವಂತೆ ಎರಿಗಳು ಆಧಾರದ ಕೆಳಭಾಗಕ್ಕೆ ಅಂಟಿಕೊಂಡಿರುತ್ತವೆ. ಎರಿಗಳ ಆಕಾರವು ಹೆಚ್ಚು ಕಡಿಮೆ ಅರ್ಧ ವೃತ್ತಾಕಾರದಲ್ಲಿದ್ದು ೪ – ೬ ಅಡಿ ವ್ಯಾಸವನ್ನು ಹೊಂದಿರುತ್ತವೆ. ಜೇನು ಕುಟುಂಬದಲ್ಲಿ ನೊಣಗಳ ಸಂಖ್ಯೆ ಅಧಿಕವಿದ್ದು, ಅತ್ಯಂತ ಸಿಟ್ಟಿನ ಸ್ವಭಾವದವುಗಳಾಗಿರುತ್ತವೆ. ಯಾವುದೇ ರೀತಿಯ ತೊಂದರೆ ಉಂಟಾದಾಗ ಶತ್ರುಗಳನ್ನು ಬಹಳ ದೂರದವರೆಗೆ ಅಟ್ಟಿಸಿಕೊಂಡು ಹೋಗಿ ಚುಚ್ಚುವ ಸ್ವಭಾವವನ್ನು ಹೊಂದಿರುವ ಈ ನೊಣಗಳು, ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಸ್ಥಿರವಾಗಿ ನೆಲಸದೇ ಇರುವುದರಿಂದ ಇವುಗಳ ಸಾಕಣೆ ಬಗ್ಗೆ ಪ್ರಯತ್ನಗಳು ನಡೆದಿದ್ದರೂ ಪ್ರಯೋಜನವಾಗಿಲ್ಲ, ಭಾರತದ ಅರಣ್ಯ ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುವ ಹೆಜ್ಜೇನು ಗೂಡುಗಳಿಂದ ಜೇನು ಬೇಟೆಗಾರರು ಸಂಗ್ರಹಿಸುವ ಜೇನುತುಪ್ಪ ಹಾಗೂ ಜೇನು ಮೇಣದ ಒಟ್ಟು ವಾರ್ಷಿಕ ಉತ್ಪಾದನೆಯ ಶೇಕಡಾ ೬೦ – ೭೦ ರಷ್ಟಿರುವುದು ಗಮನಾರ್ಹವಾಗಿದೆ. ಹೆಚ್ಚು ಸಂಖ್ಯೆಯ ಕುಟುಂಬಗಳು ಒಂದೇ ಸ್ಥಳದಲ್ಲಿ ಅಕ್ಕಪಕ್ಕದಲ್ಲಿಯೇ ವಾಸಿಸುವುದು ಈ ಜೇನುನೊಣಗಳ ವಿಶೇಷವಾಗಿದೆ. ಹೇರಳವಾಗಿ ಆಹಾರ ದೊರೆಯುವ ಋತುಗಳಲ್ಲಿ (ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನ ಕೇಂದ್ರದ ಆವರಣದ ಒಂದು ದೊಡ್ಡ ಆಲದ ಮರದಲ್ಲಿ ಸುಮಾರು ೨೫೦ ಕುಟುಂಬಗಳವರೆಗೂ ಒಟ್ಟಾಗಿ ವಾಸವಾಗಿರುವ ನಿದರ್ಶನಗಳಿವೆ) ಬೆಳದಿಂಗಳ ರಾತ್ರಿಯಲ್ಲಿಯೂ ಆಹಾರ ಸಂಗ್ರಹಣೆಯಲ್ಲಿ ತೊಡಗುವ ಈ ಜೇನುನೊಣಗಳು, ಗೂಡಿನಿಂದ ೪ – ೫ ಕಿ.ಮೀ. ದೂರದವರೆಗಿನ ಸ್ಥಳಗಳಿಂದ ಹೆಚ್ಚು ಸಂಖ್ಯೆಯಲ್ಲಿ ಆಹಾರ ಸಂಗ್ರಹಿಸುವುದರಿಂದ ಅನೇಕ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳಲ್ಲಿ ಉತ್ತಮ ಪರಾಗಸ್ಪರ್ಶಿಗಳಾಗಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಭಾರತದ ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳಲ್ಲಿ ಈ ಜೇನುನೊಣಗಳ ಕುಟುಂಬಗಳನ್ನು ಎರಡರಿಂದ ಆರು ಮೀ. ಎತ್ತರದಲ್ಲಿ ಕಾಣಬಹುದಾಗಿದೆ. ಅಂಡಮಾನ್‌ನಲ್ಲಿ ಅಮ್ಯೂಮಮ್ ಅಕ್ಸುಲೇಟಮ್ ಎಂಬ ಸಸ್ಯದ ಕಾಂಡ ಮತ್ತು ಎಲೆಗಳ ರಸವನ್ನು ಜೇಣುತುಪ್ಪ ತೆಗೆಯುವಾಗ ಜೇನು ನೊಣಗಳು ಚುಚ್ಚುವುದನ್ನು ತಪ್ಪಿಸಲು ಮೈಗೆ ಸವರಿಕೊಳ್ಳುತ್ತಾರೆ. ಹೆಜ್ಜೇನು ಕುಟುಂಬದಿಂದ ವರ್ಷಕ್ಕೆ ಸುಮಾರು ೧೫ ರಿಂದ ೫೦ ಕಿ.ಗ್ರಾಂ. ಜೇನುತುಪ್ಪವನ್ನು ಪಡೆಯಬಹುದಾಗಿದೆ.

ಹೆಜ್ಜೇನಿನ (ಎಪಿಸ್ ಡಾರ್ಸೆಟ) ಗೂಡು

ತುಡುವೆ ಜೇನು (ಎಪಿಸ್ ಸೆರಾನ) : ಪ್ರಾಚೀನ ಕಾಲದಿಂದಲೂ ಏಷ್ಯಾದಾದ್ಯಂತ ಸಾಕುತ್ತಿರುವ ಭಾರತೀಯ ಜೇನುನೊಣ. ಇದನ್ನು ಹುತ್ತದಜೇನು, ಪೊಟರೆಜೇನು ಪೂರ್ವಪ್ರಾಂತ್ಯ ರಾಷ್ಟ್ರಗಳ ಜೇನುನೊಣ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಮಲೇಶಿಯಾ, ಇಂಡೋಚೈನಾ, ಫಿಲಿಫೈನ್ಸ, ಚೈನಾ, ರಷ್ಯಾ, ಜಪಾನ್ ಮತ್ತು ಇಂಡೋನೇಶೀಯಾಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಭಾರತದಲ್ಲಿ ಈ ನೊಣವು ಎಲ್ಲೆಡೆ ವ್ಯಾಪಿಸಿದ್ದು ಹಿಂದೂಕುಷ್ ಮತ್ತು ಹಿಮಾಲಯ ಪರ್ವತ ಶ್ರೇಣಿಯ ಸಮುದ್ರ ಮಟ್ಟದಿಂದ ೨೦೦೦ ರಿಂದ ೩೦೦೦ ಮೀಟರ್ ಎತ್ತರ ಪ್ರದೇಶಗಳವರೆಗೂ ಕಂಡು ಬರುತ್ತದೆ. ರಟ್ನಾರವರು ಜೇನುನೊಣಗಳ ಜೈವಿಕ ಗುಣಗಳು, ಅವುಗಳ ಹೊರ ರಚನೆ ಮತ್ತು ಭೌಗೋಳಿಕ ಹಿನ್ನೆಲೆಯ ಆಧಾರದ ಮೇಲೆ ತುಡುವೆ ಜೇನು ನೊಣಗಳನ್ನು ಉತ್ತರ ಭಾರತದ ಕೆಲವು ರಾಜ್ಯಗಳು, ಉತ್ತರ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಉತ್ತರ ರಷ್ಯಾ ಮತ್ತು ಕೊರಿಯಾಗಳಲ್ಲಿ ಕಂಡು ಬರುವ ಜೇನುನೊಣದ ಪ್ರಭೇದವನ್ನು ಎಪಿಸ್ ಸೆರಾನಾ ಸೆರಾನಾ ಎಂತಲೂ, ಭಾರತದ ಹಿಮಾಲಯ ಪ್ರದೇಶದಲ್ಲಿ ಕಂಡುಬರುವ ಜೇನುನೊಣದ ಪ್ರಭೇದವನ್ನು ಎಪಿಸ್ ಸೆರಾನಾ ಹಿಮಾಲಯ ಎಂತಲೂ, ಜಾವಾ, ಸುಮಾತ್ರ, ಮಲೇಶಿಯ, ಥೈಲ್ಯಾಂಡ್, ಶ್ರೀಲಂಕಾ, ದಕ್ಷಿಣ ಭಾರತದ ಬೆಟ್ಟ ಗುಡ್ಡಗಳು ಮತ್ತು ಬಯಲು ಪ್ರದೇಶದ ಜೇನುನೊಣಗಳನ್ನು ಎಪಿಸ್ ಸೆರಾನಾ ಇಂಡಿಕಾ ಎಂತಲೂ ಮತ್ತು ಜಪಾನಿನ ವಿವಿಧಭಾಗಗಳಲ್ಲಿ ಕಂಡು ಬರುವ ಜೇನುನೊಣಗಳನ್ನು ಎಪಿಸ್ ಸೆರಾನಾ ಜಪಾನಿಕ ಎಂಬ ಉಪಪ್ರಭೇದಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಮಲೆನಾಡು ಮತ್ತು ಮೈದಾನ ಪ್ರದೇಶದ ಜೇನು ನೊಣಗಳೆಂಬ ಎರಡು ಉಪಪ್ರಭೇದಗಳಿವೆ. ಮೈದಾನ ಪ್ರದೇಶಗಳಲ್ಲಿ ಕೆಲಸಗಾರ ಜೇನುನೊಣಗಳು ಪರ್ವತ ಪ್ರದೇಶದ ನೊಣಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಇದರ ಗೂಡುಗಳು ನೈಸರ್ಗಿಕವಾಗಿ ಕತ್ತಲಿನಿಂದ ಕೂಡಿದ ಹುತ್ತದ ಕೋವೆ, ಮರದ ಪೊಟರೆ, ಬಿಲಗಳು, ಕಲ್ಲು ಬಂಡೆಗಳ ಸಂದುಗೊಂದುಗಳು ಇತ್ಯಾದಿ ಸ್ಥಳಗಳಲ್ಲಿ ಕಂಡು ಬರುತ್ತವೆ (ಚಿತ್ರ ೭). ಕೆಲಸಗಾರ ನೊಣಗಳು ಆಹಾರ ಸಂಗ್ರಹಣೆಗೋಸ್ಕರ ತಮ್ಮ ವಾಸಸ್ಥಳದಿಂದ ಸುಮಾರು ೧ – ೨ ಕಿ.ಮೀ ದೂರದವರೆಗೆ ಸಂಚರಿಸುತ್ತವೆ. ಎರಿಗಳು ಅರ್ಧ ವೃತ್ತಾಕಾರದಲ್ಲಿದ್ದು, ಒಂದರ ಪಕ್ಕದಲ್ಲಿ ಒಂದರಂತೆ ಸುಮಾರು ೮ – ೧೦ ಎರಿಗಳನ್ನು ಕಟ್ಟುತ್ತವೆ. ಶಾಂತ ಸ್ವಭಾವ ಹಾಗೂ ವರ್ಷಕ್ಕೆ ೫ ರಿಂದ ೧೦ ಕಿ.ಲೋ ಗ್ರಾಂ ಜೇನುತುಪ್ಪವನ್ನು ಉತ್ಪಾದಿಸುವ ಈ ನೊಣವನ್ನು ಆಧುನಿಕ ರೀತಿಯ ಭಾರತೀಯ ಮಾನಕ ಬ್ಯೂರೊ (ಬಿ.ಐ.ಎಸ್.) ದೃಢೀಕರಿಸಿದ ಪೆಟ್ಟಿಗೆಗಳಲ್ಲಿ ಸಾಕುತ್ತಾರೆ.

ತುಡುವೆ ಜೇನಿನ (ಎಪಿಸ್ ಸೆರಾನ) ಎರಿ

 ರಾಣಿ ನೊಣವು ಗಾಳಿಯಲ್ಲಿ ಹಾರಿ ಸುಮಾರು ೫ ರಿಂದ ೧೦ ಗಂಡು ಜೇನು ನೊಣಗಳೊಡನೆ ಜೋಡಿಯಾಗುತ್ತದೆಂದು ತಿಳಿಯಲಾಗಿದೆ. ಈ ಪ್ರಭೇದದ ಕೇಲಸಗಾರ ನೊಣಗಳ ಕಣಗಳು ೪.೦ ರಿಂದ ೫.೦ ಮಿ.ಮೀ. ವ್ಯಾಸವಿದ್ದು, ಗಂಡು ಜೇನುನೊಣಗಳ ಕಣಗಳು ಕೆಲಸಗಾರ ನೊಣಗಳ ಕಣಗಳಿಗಿಂತ ದೊಡ್ಡವಾಗಿರುತ್ತವೆ. ಶತ್ರುಗಳ ಕಾಟ ಹೆಚ್ಚಾದಾಗ ಮತ್ತು ಆಹಾರದ ಕೊರತೆಯಾದಾಗ ಪರಾರಿಯಾಗುವ ಈ ನೊಣಗಳು ಮೇಣದ ಚಿಟ್ಟೆಯ ಹಾವಳಿಗೀಡಾಗುವ ಸಂಭವ ಹೆಚ್ಚಾಗಿರುತ್ತದೆ. ಆಹಾರಕ್ಕಾಗಿ ಹಾರಾಟ ನಡೆಸಿ ಗೂಡನ್ನು ಬಿಟ್ಟುಹೋಗುವ ಹಾಗೂ ಹೆಚ್ಚಾಗಿ ಪಾಲಾಗುವ ಗುಣಗಳನ್ನು ಪಡೆದಿವೆ.

ಯೂರೋಪಿಯನ್ ಜೇನು (ಎಪಿಸ್ ಮೆಲ್ಲಿಫೆರಾ) :  ಈ ಪ್ರಭೇದ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವ್ಯಾಪಕವಾಗಿ ಸಾಕಾಣಿಕೆಯಲ್ಲಿದೆ. ಈ ಜೇನುನೊಣವನ್ನು ಇಟಾಲಿಯನ್ ಜೇನು, ವಿದೇಶಿ ಜೇನು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಇದರಲ್ಲಿ ಎಪಿಸ್ ಮೆಲ್ಲಿಫೆರಾ ಲಿಗುಸ್ಟಿಕಾ ಎಂಬುದು ಅತ್ಯಂತ ಉತ್ತಮ ತಳಿಯಾಗಿದೆ (ಚಿತ್ರ ೮). ಹೆಚ್ಚು ಮೊಟ್ಟೆ ಇಡುವ ರಾಣಿ, ಶಾಂತ ಸ್ವಭಾವ ಹಾಗೂ ಕಡಿಮೆ ಪಾಲಾಗುವ ಗುಣಗಳನ್ನು ಹೊಂದಿರುತ್ತವೆ. ಇದನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸಾಕಲಾಗುತ್ತಿದೆ. ಭಾರತದ ಉತ್ತರದ ರಾಜ್ಯಗಳಾದ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಈ ಜೇನುನೊಣಗಳು ಯಶಸ್ವಿಯಾಗಿ ಅಭಿವೃದ್ಧಿ ಹೊಂದುತ್ತಿದ್ದು ಸ್ಥಳೀಯ ಹವಾಮಾನಕ್ಕೆ ಒಗ್ಗಿಕೊಂಡಿರುವುದು ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿ ಈ ಪ್ರಭೇದ ಯಶಸ್ವೀ ಸಾಕಣೆಯ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚಿನ ಆಹಾರವನ್ನೊದಗಿಸುವ ಸಸ್ಯಗಳಿರುವ ಪ್ರದೇಶಗಳಲ್ಲಿ ಈ ಪ್ರಭೇದದ ಅಭಿವೃದ್ಧಿಯಾಗುತ್ತೆಂದು ಸಂಶೋಧನೆಗಳಿಂದ ತಿಳಿಯಲಾಗಿದೆ. ತುಡುವೆ ಜೇನುನೊಣಕ್ಕಿಂತ ಗಾತ್ರದಲ್ಲಿ ದೊಡ್ಡದಾದ ಇದರ ಕುಟುಂಬದಲ್ಲಿ ನೊಣಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ, ೨ ರಿಂದ ೨.೫ ಕಿ.ಮೀ ಸುತ್ತಳತೆಯಲ್ಲಿ ಆಹಾರ ಸಂಗ್ರಹಣೆಯಲ್ಲಿ ತೊಡಗುವ ಈ ಜೇನಿನ ಪ್ರತಿ ಕುಟುಂಬದಿಂದ ೩೦ – ೫೦ ಕಿ. ಗ್ರಾಂನಷ್ಟು ಜೇನುತುಪ್ಪವನ್ನು ಪಡೆಯಬಹುದು. ಈ ಜೇನನ್ನು ಸ್ಥಳಾಂತರ ಜೇನುಕೃಷಿಯಲ್ಲಿ ಬಳಸಿದಾಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜೇನುತುಪ್ಪವನ್ನು ಪಡೆಯಲು ಸಾಧ್ಯವಿದೆ. ಈ ಜೇನು ಸಹ ತುಡುವೆ ಜೇನಿನಂತೆ ಅನೇಕ ಎರಿಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಸಮಾನಾಂತರವಾಗಿ ಕಟ್ಟುತ್ತವೆ. ಸ್ಥಳಾಂತರ ಜೇನುಕೃಷಿಗೆ ಸೂಕ್ತವಾದ ತಳಿಯಾಗಿರುವುದರಿಂದ ಅನೇಕ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಇದರ ಪಾತ್ರ ಅತ್ಯಂತ ಪ್ರಧಾನವಾಗಿದೆ. ಈ ಜೇನುನೊಣಗಳನ್ನು ಲಾಂಗ್ ಸ್ಟ್ರೋತ್ ಪೆಟ್ಟಿಗೆಗಳಲ್ಲಿ ಸಾಕಣೆ ಮಾಡಲಾಗುತ್ತಿದೆ. ಜೇನುನೊಣ ಸಸ್ಯಗಳಲ್ಲಿ ಅಂಟನ್ನು  ಸಂಗ್ರಹಿಸಿ  ಪೆಟ್ಟಿಗೆಯ ಸಂದುಗೊಂದುಗಳನ್ನು ಮುಚ್ಚಿ ಹವಾನಿಯಂತ್ರಿಸುವ ಈ ಜೇನು ಕುಟುಂಬಗಳಲ್ಲಿ ಮೇಣದ ಚಿಟ್ಟೆಯ ಹಾವಳಿಯು ಸಹಾ ಕಡಿಮೆ, ಮ್ಯಾಗ್ರೋವ್ ದೇಶಗಳ ಮ್ಯಾರೆಕ್‌ನಿಂದ ಲಿಬ್ಯಾದವರೆಗೂ ಕಂಡುಬರುವ ಯೂರೋಪಿಯನ್ ಜೇನುನೊಣವನ್ನು ಎಪಿಸ್ ಮೆಲ್ಲಿಫೆರಾ ಇಂಟರ್ ಮಿಸ್ಸಿ ಎಂತಲೂ, ಈಜಿಪ್ಟ್ – ನೈಲ್ ಕಣಿವೆಗಳಲ್ಲಿ ಕಂಡು ಬರುವ ನೊಣವನ್ನು ಎಪಿಸ್ ಮೆಲ್ಲಿಫೆರಾ ಲಮಾರ್ಕಿ (ಈಜಿಪ್ಷ್ ಜೇನು ನೊಣ), ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಎಪಿಸ್ ಮೆಲ್ಲಿಫೆರಾ ಕೆಪೆನ್ಸಿಸ್ (ಕೇಪ್ ನೊಣ), ಆಫ್ರಿಕಾದ ಸಹಾರಾ ಮತ್ತು ಕಲಾಹರಿಯಲ್ಲಿ ಕಂಡುಬರುವ ಎಪಿಸ್ ಮೆಲ್ಲಿಫೆರಾ ಅಡನ್ಸೊನಿ, (ಆಫ್ರಿಕಾ ಜೇನುನೊಣ, ಯೂರೋಪ್, ಆಲ್ಪ್ಸ್‌ನ ಪಶ್ಚಿಮ ಮತ್ತು ರಷ್ಯಾ ಭಾಗಗಳಲ್ಲಿ ಕಂಡುಬರುವ ಎಪಿಸ್ ಮೆಲ್ಲಫೆರಾ (ಕಪ್ಪು ಜೇನುನೊಣ) ಅಮೆರಿಕಾ, ಆಸ್ಟ್ರೇಲಿಯಾ ಯುಗೋಸ್ಲೋವಿಯಾಗಳಲ್ಲಿ ಕಂಡುಬರುವ ಎಪಿಸ್ ಮೆಲ್ಲಿಫೆರಾ ಕಾರ್ನಿಕಾ (ಕಾರ್ನಿಯೋಲಿಸ್ ಜೇನುನೊಣ) ಮತ್ತು ಮದ್ಯ ಕಾಕಸಸ್‌ನ ಕಣಿವೆಗಳಲ್ಲಿ ಕಂಡುಬರುವ ಎಪಿಸ್ ಮೆಲ್ಲಿಫೆರಾ ಕಾಕೇಸಿಯಾ (ಕಾಕೇಸಿಯನ್ ಜೇಣುನೊಣ) ನೊಣಗಳನ್ನಾಗಿ ವಿಂಗಡಿಸಲಾಗಿದೆ.

ಯೂರೋಪಿಯನ್ ಜೇನಿನ (ಎಪಿಸ್ ಮೆಲ್ಲಿಫೆರ) ಎರಿ

ಎಪಿಸ್ ವೆಚ್ಚೀ/ಕೋಶ್ಚೇವ್‌ನಿಕೋವಿ : ಮಲೇಶಿಯಾದ ಬೋರ್ನಿಯೋ ಪ್ರದೇಶದ ಉತ್ತರ ಪೂರ್ವ ಭಾಗದ ಜೇನುನೊಣಗಳನ್ನು ಎಪಿಸ್ ವೆಚ್ಚೀ/ಕೋಶ್ಚೇವ್‌ನಿಕೋವಿ ಎಂದು ಕರೆಯಲಾಗುತ್ತದೆ. ಈ ನೊಣಗಳು ತುಡುವೆ ಜೇನುನೊಣಗಳನ್ನು ಹೋಲುತ್ತಿದ್ದು ಕೆಲವು ಜೈವಿಕ ಗುಣಗಳಲ್ಲಿ ವ್ಯತ್ಯಾಸಗೊಳ್ಳುತ್ತವೆ. ಈ ಪ್ರಭೇದದ ಗಂಡು ನೊಣಗಳು ಜೋಡಿಯ ಹಾರಾಟವನ್ನು ಸಂಜೆ ೫ ರಿಂದ ೬ ಗಂಟೆಯ ಅವಧಿಯಲ್ಲಿ ನಡೆಸುತ್ತವೆ.

ಎಪಿಸ್ ಲಾಬೋರಿಯೋಸ : ಹಿಮಾಲಯದ ಎತ್ತರ ಪ್ರದೇಶದ ಮತ್ತು ಶೀತ ಪರಿಸರದಲ್ಲಿ ವಾಸಿಸುವ ಹೆಜ್ಜೇನುಗಳು ಉಳಿದ ಭಾಗಗಳ ಹೆಜ್ಜೇನಿಗಿಂತ ಜೈವಿಕ ಗುಣಗಳಲ್ಲಿ ವ್ಯತ್ಯಾಸಗೊಳ್ಳುತ್ತಿದ್ದು ಸ್ಮಿತ್‌ರವರು ಇವುಗಳನ್ನು ಎಪಿಸ್ ಲಾಬೋರಿಯೋಸ ಎಂಬ ಪ್ರಭೇದವೆಂದು ವಿಂಗಡಿಸಿದ್ದಾರೆ. ಈ ಪ್ರಭೇದದ ಕೆಲಸಗಾರ ನೊಣಗಳು ಹೆಜ್ಜೇನಿನ ಕೆಲಸಗಾರ ನೊಣಗಳಿಗಿಂತ ಶೇ. ೧೦ ರಷ್ಟು ಹೆಚ್ಚು ಉದ್ದವಿರುವುದು ಕಂಡು ಬರುತ್ತದೆ. ಈ ನೊಣಗಳು ಗೂಡುಗಳನ್ನು ಬಂಡೆಗಳ ಮೇಲೆ ಕಟ್ಟುತ್ತವೆ ಮತ್ತು ಆಹಾರವನ್ನು ಸುಮಾರು ೪ ಕಿ.ಮೀ. ಗಳಿಂದ ತರುವ ಗುಣವನ್ನು ಪಡೆದಿವೆ.

ಎಪಿಸ್ ಅಂಡ್ರೆನಿಪಾರ್ಮಿಸ್ : ಕೋಲುಜೇನನ್ನು ಹೋಲುವ ಈ ಜೇನುನೊಣಗಳು ಚೀನಾದ ಕೆಲವು ಭಾಗಗಳಲ್ಲಿ ಕಂಡು ಬರುತ್ತಿದ್ದು, ಇವುಗಳು ಕೋಲು ಜೇನುನೊಣಗಳಿಂದ ಕೆಲವು ಜೈವಿಕ ಗುಣಗಳಾದ ಎಸ್ಟೇರೆಸ್ ಐಸೋಜೈಂ ಎಂಬ ಕಿಣ್ವದ ಗುಣಗಳಲ್ಲಿ ವ್ಯತ್ಯಾಸಗೊಳ್ಳುತ್ತವೆ. ಇವುಗಳು ಸಿಟ್ಟಾದಾಗ ಸುಮಾರು ೩೦ ರಿಂದ ೪೦ ಮೀ. ಗಳವರೆಗೆ ಅಟ್ಟಿಸಿಕೊಮಡು ಹೋಗಿ ಗುಂಪಾಗಿ ಚುಚ್ಚುವ ಗುಣವನ್ನು ಪಡೆದಿವೆ.