ಜೇನುನೊಣಗಳು ಕುಟುಂಬದ ದೈನಂದಿನ ಚಟುವಟಿಕೆಗಳನ್ನು ಸಂವಹನದ ಮೂಲಕ ನಡೆಸುತ್ತವೆ. ಈ ಕ್ರಿಯೆಯಿಂದ ಗೂಡಿನ ನೊಣಗಳನ್ನು ಪರಸ್ಪರ ಗುರುತಿಸಲು ಮತ್ತು ಆಹಾರದ ಸ್ಥಳಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ನೃತ್ಯಗಳ ಮೂಲಕ ಆಹಾರ ಸಿಗುವ ದೂರ, ದಿಕ್ಕು, ಆಹಾರದ ಗುಣಮಟ್ಟ ಮುಂತಾದವುಗಳನ್ನು ತಿಳಿಯುತ್ತವೆ. ಜೇನುನೊಣಗಳ ನೃತ್ಯಗಳನ್ನು  ಆಸ್ಟ್ರೀಯಾ ದೇಶದ ವಿಜ್ಞಾನಿ ಕಾರ್ಲ್‌ವೊನ್ ಫ್ರಿಶ್ ೧೯೬೭ ರಲ್ಲಿ ಯೂರೋಪಿಯನ್ ಜೇನುನೊಣ ಎಪಿಸ್ ಮೆಲ್ಲಿಫೆರಾ ಪ್ರಭೇದದಲ್ಲಿ ಮೊಟ್ಟ ಮೊದಲ ಬಾರಿಗೆ ತಿಳಿಸಿಕೊಟ್ಟರು. ಇ ವಿನೂತನ ಕೊಡುಗೆಗಾಗಿ ನೊಬಲ್ ಪ್ರಶಸ್ತಿಯನ್ನು ಪಡೆದರು. ಅನೇಕ ನೃತ್ಯಗಳ ಬಗೆಗಿನ ವಿವರಗಳನ್ನು ಅವರು ‘ದಿ ಡ್ಯಾನ್ಸ್ ಲಾಂಗ್ವೇಜ್ ಆಂಡ್ ಓರಿಯೆಂಟೇಶನ್ ಆಫ್ ಬೀಸ’ (ಜೇನುನೊಣಗಳ ನೃತ್ಯದ ಭಾಷೆ ಮತ್ತು ಜೇನುನೊಣಗಳ ದಿಕ್ಕು) ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಆದರೆ ಕುಟುಂಬ ಗುರುತಿಸುವುದು, ಗಂಡು – ಹೆಣ್ಣು ಜೋಡಿಯಾಗುವುದು ಮುಂತಾದ ಕ್ರಿಯೆಗಳು ರಾಣಿನೊಣ ಹೊರಸೂಸುವ ಚೋದಕ ರಾಸಾಯನಿಕಗಳ ಮೂಲಕ ನಡೆಯುತ್ತವೆ.

ಜೇನುನೊಣಗಳ ನೃತ್ಯಗಳು : ಸಂವಹನ ಕ್ರಯೆಗಳ ಬಗ್ಗೆ ಮೀಟರ್‌ಲಿಂಕ್‌ರು ಅನೇಕ ಸಂಶೋಧನೆಗಳನ್ನು ನಡೆಸಿರುತ್ತಾರೆ. ಆಹಾರದ ತರುವ ನೊಣಕ್ಕೆ ಬಟ್ಟಲಿನಲ್ಲಿ ಜೇನುತುಪ್ಪವನ್ನು ನೀಡಿ ಅದು ಜೇನುತುಪ್ಪ ಶೇಖರಿಸಿ ಗೂಡಿಗೆ ತೆರಳಿದರೂ ಬಟ್ಟಲಿನಲ್ಲಿರುವ ಆಹಾರದ ಕಡೆಗೆ ಬರಲಿಲ್ಲ. ಆದರೆ ಆಹಾರದ ಬಟ್ಟಲಿನಲ್ಲಿ ಬೇರೆ ನೊಣಗಳು ಕಾಣಿಸಿಕೊಂಡಿದ್ದರಿಂದ ಮೊದಲು ಆಹಾರ ಶೇಖರಿಸಿದ ನೊಣವು ಗೂಡಿನ ಇತರೇ ನೊಣಗಳಿಗೆ ನೀಡುತ್ತಿರುವ ಸಂವಹನ ಎಂದು ತಿಳಿಸಿದ್ದಾರೆ. ಇದೇ ರೀತಿ ಕಾರ್ಲ್‌ವೊನ್ ಫ್ರಿಶರವರು ಗಾಜಿನಿಂದ ಕೂಡಿದ ಸೂಚಕ ಜೇನುಪೆಟ್ಟಿಗೆಗಳನ್ನು ನಿರ್ಮಿಸಿ ಅದರ ಮೂಲಕ ಆಹಾರ ತರುವ ನೊಣವು ಇತರ ನೊಣಗಳೊಂದಿಗೆ ನೃತ್ಯ ಮಾಡುವುದು ಕುಡಿ ಮೀಸೆಗಳನ್ನು ಒಂದಕ್ಕೊಂದು ತಗಲಿಸುವುದು, ಆಹಾರವನ್ನು ಗೂಡಿನಲ್ಲಿಡುವುದು ಮುಂತಾದ ಕ್ರಿಯೆಗಳನ್ನು ಗಮನಿಸಿದರು. ಈ ಪ್ರಯೋಗಗಳಿಂದ ಗೂಢಚಾರ ನೊಣಗಳು ವಾಸನೆಯ ಮೂಲಕ ಇದನ್ನು ತಿಳಿಯುತ್ತವೆ ಎಂದು ತಿಳಿಸಿದ್ದಾರೆ. ಮತ್ತೊಂದು ಪ್ರಯೋಗದಲ್ಲಿ ಕಾರ್ಲ್‌ವೊನ್‌ರವರು ಸುವಾಸನೆಯಿಂದ ಕೂಡಿದ ಸಕ್ಕರೆ ಪಾಕದ ಬಟ್ಟಲುಗಳನ್ನು ಜೇನು ಕುಟುಂಬದಿಂದ ವಿವಿಧ ದೂರ ಮತ್ತು ದಿಕ್ಕುಗಳಲ್ಲಿಟ್ಟರು. ಅವುಗಳಲ್ಲಿ ಕೆಲವನ್ನು ಜೇನು ನೊಣಗಳು ಗುರುತಿಸಿದರೂ ಸಹ ಸಂಪೂರ್ಣವಾಗಿ ಗುರುತಿಸಲಾಗಲಿಲ್ಲ. ಇದರಿಂದಾಗಿ ಕಾರ್ಲ್‌ವೊನ್‌ರವರು ಕೇವಲ ವಾಸನೆ ಮಾತ್ರವಲ್ಲದೆ ನೃತ್ಯವೂ ಸಹ ಸಂವಹನ ಕ್ರಿಯೆಯಲ್ಲಿ ಭಾಗವಹಿಸುತ್ತದೆ ಎಂದು ತಿಳಿಸಿಕೊಟ್ಟರು.

ಕಾರ್ಲ್‌ವೊನ್‌ಫ್ರಿಶ್ ಮತ್ತು ಸಹೋದ್ಯೋಗಿಗಳು ಜೇನುನೊಣಗಳ ನೃತ್ಯಗಳ ಬಗ್ಗೆ ಸಂಶೋಧನೆ ಮುಂದುವರೆಸಿ ಆಹಾರವಿರುವ ದೂರ, ದಿಕ್ಕು ಮತ್ತು ಆಹಾರದ ಗುಣಮಟ್ಟವನ್ನು ಅನೇಕ ರೀತಿಯ ನೃತ್ಯಗಳಿಂದ ತಿಳಿಯಬಹುದೆಂದು ದೃಢಪಡಿಸಿದ್ದಾರೆ. ಜೇನುನೊಣಗಳಲ್ಲಿ ಮುಖ್ಯವಾಗಿ ಮೂರು ವಿಧದ ನೃತ್ಯಗಳನ್ನು ಕಾಣಬಹುದು. ವೃತ್ತಾಕಾರದ ನೃತ್ಯ, ಬಾಲ ಅಲುಗಾಡಿಸುವ  ನೃತ್ಯ ಮತ್ತು ಹೊಟ್ಟೆಯನ್ನು ಮೇಲೆ ಕೆಳಗೆ ಅಲುಗಾಡಿಸುವ ನೃತ್ಯಗಳನ್ನು ಜೇನು ನೊಣಗಳಲ್ಲಿ ಗುರುತಿಸಲಾಗಿದೆ. ಇವುಗಳ ವೃತ್ತಾಕಾರದ ನೃತ್ಯವು ಆಹಾರದ ಲಭ್ಯತೆ, ಬಾಲ ಅಲುಗಾಡಿಸುವ ನೃತ್ಯ ಆಹಾರದ ದೂರ ಮತ್ತು ಆಹಾರ ಸಿಗುವ ಸ್ಥಳಗಳನ್ನು ತಿಳಿಯಲು ಮತ್ತು ಹೊಟ್ಟೆಯನ್ನು ಮೇಲೆ ಕೆಳಗೆ ಅಲುಗಾಡಿಸುವ (ಡಿ.ವಿ.ಎ.ವಿ) ನೃತ್ಯವು ಆಹಾರ ತರುವಂತೆ ನೊಣಗಳನ್ನು ಪ್ರಚೋದಿಸಲು, ರಾಣಿನೊಣದ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ಕುಟುಂಬ ವಿಭಜನೆಯನ್ನು ತಿಳಿಯಲು ಸಹಾಯಕವಾಗುತ್ತದೆ. ಈ ನೃತ್ಯಗಳು ಎರಿಯ ಮೇಲೆ ನಡೆಯುತ್ತವೆ.

ವೃತ್ತಾಕಾರದ ನೃತ್ಯ (ರೌಂಡ್ ಡ್ಯಾನ್ಸ್) :  ಇದು ಒಂದು ಸರಳವಾದ ನರ್ತನವಾಗಿದ್ದು ಆಹಾರವು ಗೂಡಿನ ಸಮೀಪದಲ್ಲಿಯೇ ಸುಮಾರು ೧೦೦ ಮೀ. ಅಂತರದಲ್ಲಿ ಸಿಗುವಂತಿದ್ದರೆ ಪ್ರದರ್ಶಿಸಲ್ಪಡುತ್ತದೆ. ಈ ನೃತ್ಯ ಗೂಡಿನಲ್ಲಿ ಎರಿಗಳ ಮೇಲೆ ವೃತ್ತಾಕಾರೋಪಾದಿಯಲ್ಲಿ ನಡೆಯುತ್ತದೆ. ನೊಣಗಳು ಕೆಲವು ಸೆಕೆಂಡುಗಳವರೆಗೆ ಈ ನೃತ್ಯವನ್ನು ಮುಂದುವರೆಸಿ ಅನೇಕ ವೃತ್ತಗಳು ನೃತ್ಯ ಮುಗಿಸಿದ ನಂತರ ದಿಕ್ಕನ್ನು ಬದಲಾಯಿಸುತ್ತವೆ. ಈ ವೇಳೆಯಲ್ಲಿ ಯುರೋಪಿಯನ್ ಜೇನು ನೊಣಗಳು ಎರಡಕ್ಕಿಂತ ಹೆಚ್ಚು ಬಾರಿ ಒಂದೇ ದಿಕ್ಕಿನಲ್ಲಿ ತಿರುಗುತ್ತವೆ. ಹೊಸ ಜಾಗದಲ್ಲಿ ಆಹಾರ ಸಿಗುವ ಸ್ಥಳವನ್ನು ಗುರ್ತಿಸಿ ಗೂಡಿನ ಒಳಗೆ ಬರುವ ಕೆಲಸಗಾರ ನೊಣವು ಮೊದಲು ಮಕರಂದವನ್ನು ಒಂದಕ್ಕೊಂದು ಬದಲಾಯಿಸಿಕೊಂಡು ವೃತ್ತಾಕಾರದ ನೃತ್ಯವನ್ನು ಪ್ರತಿ ಒಂದು ಅಥವಾ ಎರಡು ವೃತ್ತಗಳಿಗೊಮ್ಮೆ ಎಡದಿಂದ ಬಲಬದಿಗೆ ಮತ್ತು ಬಲದಿಂದ ಎಡ ಬದಿಗೂ ನಡೆಸುತ್ತವೆ. ಈ ನೃತ್ಯವನ್ನು ಮಾಡಿದ ನಂತರ ಗೂಡಿನಲ್ಲಿರುವ ನೊಣಗಳ ಮಕರಂದ ಬದಲಾಯಿಸಿಕೊಂಡು ಪುನಃ ನೃತ್ಯವನ್ನು ಮಾಡುತ್ತವೆ. ನೃತ್ಯಗಳನ್ನು ಮಾಡಿದ ನಂತರ ಆಹಾರವನ್ನು ಸಂಗ್ರಹಿಸಲು ಗೂಡನ್ನು ಬಿಟ್ಟು ಹೊರಹೋಗುತ್ತವೆ (ಚಿತ್ರ ೨೯).

ಬಾಲ ಅಲುಗಾಡಿಸುವ ನೃತ್ಯ (ವ್ಯಾಗ್‌ಟೈಲ್‌ಡ್ಯಾನ್ಸ್) : ಗೂಡಿನಿಂದ ಆಹಾರದ ಸ್ಥಳಕ್ಕೆ ಇರುವ ಅಂತರ, ದಿಕ್ಕು ಹಾಗೂ ಆಹಾರದ ಗುಣಮಟ್ಟವನ್ನು ತಿಳಿಸಲು ಜೇನು ನೊಣಗಳು ನೃತ್ಯವನ್ನು ಮಾಡುತ್ತವೆ. ಆಹಾರ ಸಿಗುವ ಸ್ಥಳವು ಗೂಡಿನಿಂದ ೧೦೦ ಮೀ. ಗಿಂತಲೂ ಹೆಚ್ಚು ಅಂತರದಲ್ಲಿದ್ದಾಗ ಆಹಾರವನ್ನು ಸಂಗ್ರಹಿಸಿಕೊಂಡು ಹೊರಗಿನಿಂದ ಗೂಡಿನ ಒಳಗೆ ಬರುವ ನೊಣಗಳು ತಮ್ಮ ಹೊಟ್ಟೆಯ ಕೊನೆಯ  ಭಾಗವನ್ನು ಜೋರಾಗಿ ಅಲುಗಾಡಿಸುತ್ತವೆ. ಇದನ್ನು ‘ಬಾಲ ಅಲುಗಾಡಿಸುವ ನೃತ್ಯ’ ಎನ್ನುತ್ತಾರೆ. ನೊಣಗಳ ನೃತ್ಯ ವರ್ತನೆ ಅಂಕಿ ‘೮’ ರ ಆಕಾರವನ್ನು ಹೋಲುವುದರಿಂದ ಇದನ್ನು ‘ಅಂಕಿ ಎಂಟರ ನೃತ್ಯ’ ವೆಂದು ಕರೆಯುವ ವಾಡಿಕೆ ಇದೆ. ಈ ನೃತ್ಯದಲ್ಲಿ ನೊಣಗಳು ಸ್ವಲ್ಪ ಅಂತರದವರೆಗೆ ಹೊಟ್ಟೆಯ ಹಿಂದಿನ ಭಾಗವನ್ನು  ಜೋರಾಗಿ ಅಲುಗಾಡಿಸಿಕೊಂಡು ನೇರವಾಗಿ ಓಡುತ್ತವೆ. ಸುಮಾರು ಒಂದು ಸೆಕೆಂಡಿಗೆ ೧೩ – ೧೫  ಬಾರಿಯಂತೆ ಶಬ್ದವನ್ನುಂಟು ಮಾಡುತ್ತಾ ಹೊಟ್ಟೆಯನ್ನು ಅಲುಗಾಡಿಸಿಕೊಂಡು ನರ್ತಿಸುತ್ತವೆ. ಈ ಓಟದ ಅಂತ್ಯದಲ್ಲಿ ನೊಣಗಳು ಎರಿಯ ಮೇಲೆ ಅರ್ಧ ವೃತ್ತಾಕಾರಕ್ಕೆ ತಿರುಗಿಕೊಳ್ಳುತ್ತವೆ. ಪುನಃ ನೃತ್ಯದ ಮೊದಲಿನ ಸ್ಥಳಕ್ಕೆ ಹಿಂತುರುಗಿ ಬಂದು ಮತ್ತೊಮ್ಮೆ ನೇರವಾಗಿ ಓಡಿ ನಂತರ ಇನ್ನೊಂದು ಬದಿಗೂ ತಿರುಗಿಕೊಂಡು ಮತ್ತೊಂದು ಅರ್ಧ ವೃತ್ತಾಕಾರವನ್ನು ಮಾಡುತ್ತವೆ. ನೃತ್ಯವನ್ನು ಮಾಡುವ ನೊಣಗಳ ಜೊತೆ ಆಹಾರ ವಿನಿಮಯ ಮಾಡಿಕೊಳ್ಳುವುದಕ್ಕೋಸ್ಕರ ನೃತ್ಯವನ್ನು ವೀಕ್ಷಿಸುವಂತಹ ನೊಣಗಳೂ ಸಹ ಶಬ್ದವನ್ನುಂಟು ಮಾಡುತ್ತಿರುತ್ತವೆ. ಗೂಡಿನಿಂದ ಆಹಾರವು ದೊರೆಯುವ ಸ್ಥಳಕ್ಕೆ ಇರುವ ಅಂತರವನ್ನು ತಿಳಿಸಲು ಭಾಗಿಯಾಗುವಂತಹ ಅಂಶಗಳೆಂದರೆ ಎರಿಯ ಕಣಗಳ ವಿಸ್ತೀರ್ಣದಲ್ಲಿ ನೇರ ಓಟದ ಉದ್ದ, ಹೊಟ್ಟೆಯನ್ನು ಅಲುಗಾಡಿಸುವ ಹಾಗೂ ಶಬ್ದವನ್ನುಂಟುಮಾಡುವ ಅವಧಿ ಮತ್ತು ಗೂಡಿನ ದ್ವಾರದಿಂದ ನೊಣಗಳು ಓಟದ ಸ್ಥಿತಿಯನ್ನು ಅನುಸರಿಸುತ್ತವೆ.

ಆಹಾರವು ೧೦೦ ಮೀ. ಗಿಂತ ಸ್ವಲ್ಪ ದೂರದಲ್ಲಿದ್ದರೆ ೧೫ ಸೆಕೆಂಡುಗಳಿಗೆ ೯ – ೧೦ ಬಾರಿ ನೇರ ಓಟಗಳನ್ನು ನರ್ತನದ ಮುಖಾಂತರ ಮಾಡುತ್ತವೆ. ಆದರೆ ಆಹಾರವು ೬ ಕಿ.ಮೀ ದೂರದಲ್ಲಿದ್ದರೆ ೨ ಓಟಗಳು ಮಾತ್ರ ಇರುತ್ತವೆಂದು ಕಾರ್ಲ್‌ವೊನ್ ಫ್ರಿಶ್‌ರವರು ತೋರಿಸಿಕೊಟ್ಟರೂ. ಗೂಡಿನಿಂದ ಆಹಾರ ಇರುವ ಅಂತರಕ್ಕನುಗುಣವಾಗಿ ಪ್ರತಿ ೧೫ ಸೆಕೆಂಡುಗಳಿಗೆ ನೇರವಾಗಿ ಓಡುತ್ತಿರುತ್ತವೆ. ಜೋರಾಗಿ ಹೊಟ್ಟೆಯನ್ನು ಅಲುಗಾಡಿಸುವುದು. ಹೆಚ್ಚಿನ ಸಂಖ್ಯೆಯ ವೃತ್ತಗಳಿಂದ ನರ್ತಿಸುವುದು ಮತ್ತು ಜೋರಾಗಿ ಶಬ್ದವನ್ನುಂಟು ಮಾಡುವುದರಿಂದ ಒಳ್ಳೆಯ ಆಹಾರ ಸಿಗುತ್ತದೆ ಎಂದು ತಿಳಿಯಬಹುದು. ಒಳ್ಳೆಯ ಆಹಾರವು ಹೆಚ್ಚಿ ಪ್ರಮಾಣದಲ್ಲಿ ಸಿಗುವಂತಿದ್ದರೆ ಬಹಳ ಸಮಯದವರೆಗೆ ಜೋರಾಗಿ ನರ್ತಿಸುತ್ತವೆ. ನರ್ತಿಸುವ ನೊಣಗಳು, ತರುವ ಪರಾಗ ಮತ್ತು ಮಕರಂದವನ್ನು ಗಮನಿಸಿದ ನಂತರ ಇತರೆ ನೊಣಗಳೂ ಸಹ ಆಕಾರವನ್ನು ಹುಡುಕಲು ಅದೇ ದಿಕ್ಕಿಗೆ ಹೋಗುತ್ತವೆ. ಮೋಡವು ಕವಿದಿದ್ದರೂ ಸಹ ಸೂರ್ಯನಿರುವ ದಿಕ್ಕು ತಿಳಿಯುವ ಶಕ್ತಿಯನ್ನು ಇವು ಹೊಂದಿರುತ್ತವೆ.

ಆಹಾರವನ್ನು ಹುಡುಕಿಕೊಂಡು ಗೂಡಿಗೆ ಬರುವ ನೊಣದ ನೇರ ಓಟವು ಯಾವಾಗಲೂ ಆಹಾರ ದೊರೆಯುವ ದಿಕ್ಕನ್ನು ಸೂಚಿಸುತ್ತವೆ. ಇದನ್ನು ತಿಳಿದ ಗೂಡಿನಲ್ಲಿರುವ ಇತರೆ ನೊಣಗಳೂ ಸಹ ಅದೇ ದಿಕ್ಕನ್ನು ಅನುಸರಿಸಿ ಗೂಡಿನಿಂದ ಗೂಡಿಗೆ ಹಾರಿ ಹೋಗುತ್ತವೆ. ಆಹಾರ ಸಿಗುವ ದಿಕ್ಕನ್ನು ಗೂಡಿಗೆ ಸೂರ್ಯನು ಇರುವ ದಿಕ್ಕಿನಿಂದ ಸೂಚಿಸುತ್ತದೆ. ಆಹಾರ ಸೂರ್ಯನಿರುವ ದಿಕ್ಕಿನಲ್ಲಿದ್ದರೆ ಅಲುಗಾಡಿಸುವ ನರ್ತನದ ನೇರ ಓಟವು ಕೆಳ ಮುಖವಾಗಿರುತ್ತದೆ. ಆಹಾರವು ಸೂರ್ಯನಿರುವ ದಿಕ್ಕಿನಿಂದ ೬೦ ಡಿಗ್ರಿ ಕೋನದಲ್ಲಿ ಓರೆಯಾಗಿದ್ದರೆ ನೃತ್ಯದ ನೇರ ಓಟವು ೬೦ ಡಿಗ್ರಿ ಯಷ್ಟು ಓರೆಯಾಗಿರುತ್ತದೆ (ಚಿತ್ರ ೨೯).

ಜೇನುನೊಣಗಳಲ್ಲಿ ಆಹಾರ ಮತ್ತು ಸೂರ್ಯನಿರುವ ದಿಕ್ಕಿನ ಸಂದರ್ಭಕ್ಕನುಗುಣವಾಗಿ ನಡೆಯುವ ಸಂವಹನ ನೃತ್ಯಗಳು

ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಾದರೆ ತಮ್ಮ ಹೊಟ್ಟೆಯ ಐದು ಮತ್ತು ಆರನೆ ತುಂಡಿನಲ್ಲಿರುವ ಸುವಾಸನೆಯ ಗ್ರಂಥಿಯಿಂದ ಹೊರಬರುವ ಸುವಾಸನೆ ಆಹಾರವನ್ನು ಹುಡುಕುತ್ತಿರುವಂತಹ ಇತರೆ ಜೇನುನೊಣಗಳನ್ನೂ ಆಕರ್ಷಿಸುತ್ತವೆ.

ಹೊಟ್ಟೆ ಮೇಲೆ ಕೆಳಗೆ ಅಲುಗಾಡಿಸುವ ನೃತ್ಯ (ಡಿ.ವಿ..ವಿ ಡ್ಯಾನ್ಸ್) : ಈ ನರ್ತನವನ್ನು ಜೇನುತುಪ್ಪ ಹೇರಳವಾಗಿ ಸಿಗುವ ಕಾಲದಲ್ಲಿ ಕಾಣಬಹುದು. ನೊಣಗಳು ತಮ್ಮ ಮುಂದಿನ ಕಾಲುಗಳನ್ನು ಇತರೆ ನೊಣಗಳ ಮೇಲೆ ಇಟ್ಟು ಹೊಟ್ಟೆಯನ್ನು ಮೇಲೆ ಕೆಳಗೆ ಹಾಗೂ ಹಿಂದೆ ಮುಂದೆ ಅಲುಗಾಡಿಸುತ್ತವೆ. ಆಹಾರ ಸಂಗ್ರಹಣೆಯ ಕೆಲಸವನ್ನು ನಿರ್ವಹಿಸಲು ಈ  ನರ್ತನವೂ ಹೊಟ್ಟೆಯನ್ನು ಅಲುಗಾಡಿಸುವ ಮುಖಾಂತರ ನಡೆಯುತ್ತದೆ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು ಹಾಗೂ ವಿವಿಧ ಕಾಲಗಳಲ್ಲಿ ಆಹಾರ ಸಂಗ್ರಹಣೆಯ ಕೆಲಸವನ್ನು ನಿರ್ವಹಿಸಲು ಈ ನೃತ್ಯವು ನಡೆಯಲ್ಪಡುತ್ತದೆ. ಜೇನು  ಕುಟುಂಬಕ್ಕೆ ಹೆಚ್ಚಿನ ಆಹಾರ ದೊರೆಯುವ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಈ ನರ್ತನವು ಹೆಚ್ಚಾಗಿರುತ್ತದೆ. ಇದೇ ನರ್ತನವನ್ನು ಕುಟುಂಬವು ಪಾಲಾಗುವ ಸಮಯದಲ್ಲಿ ನಡೆಸುತ್ತವೆ. ಪಾಲಾಗುವಿಕೆಯ ಕೆಲವು ಗಂಟೆಗಳ ಮುಂಚೆ ನೊಣಗಳು ಹೊಟ್ಟೆಯನ್ನು ಮೇಲೆ ಕೆಳಗೆ ಜೋರಾಗಿ ಅಲುಗಾಡಿಸುವಿಕೆ ಹಳೆಯ ರಾಣಿ ಅಥವಾ ಲೈಂಗಿಕ ಸಂಪರ್ಕ ಹೊಂದಿದ ಹೊಸ ರಾಣಿ ಕೆಲವು ಕೆಲಸಗಾರ ನೊಣಗಳು ಸೇರಿಕೊಂಡು ಕುಟುಂಬವನ್ನು ಬಿಟ್ಟು ವಿಭಜನೆಯಾಗುವಂತೆ ಪ್ರಚೋದಿಸುತ್ತದೆ.

ಇತರನರ್ತನಗಳು

ಎಚ್ಚರಿಕೆಯ ನರ್ತನ : ಆಹಾರವನ್ನು ಸಂಗ್ರಹಣೆ ಮಾಡುವ ಸಮಯದಲ್ಲಿ ಕೆಲವು ನೊಣಗಳು ವಿಷ ಮಿಶ್ರಿತ ಆಹಾರವನ್ನು ಗೂಡಿಗೆ ತಂದ ನಂತರ ಈ ನರ್ತನವು ನಡೆಯುತ್ತದೆ. ವಿಷಪೂರಿತ ಆಹಾರವನ್ನು ತೆಗೆದುಕೊಂಡು ನೊಣಗಳು ಗೂಡಿಗೆ ಹಿಂತಿರುಗಿದಾಗ ಗೂಡಿನಲ್ಲಿಯೇ ಇದ್ದ ಇತರೆ ನೊಣಗಳು ಕಾರ್ಯೋನ್ಮುಖರಾಗಿ ಎಚ್ಚರಗೊಂಡು ಕುಟುಂಬದಲ್ಲಿ ವೃತ್ತದಾಕಾರೋಪಾದಿಯಲ್ಲಿ ಓಡಾಡುತ್ತಿರುತ್ತವೆ. ಈ ಓಡಾಟವನ್ನು ಗಮನಿಸಿದ ಆಹಾರವನ್ನು ಸಂಗ್ರಹಿಸುವ ನೊಣಗಳು ವಿಷದ ಅಪಾಯವನ್ನು ತಕ್ಷಣ ಅರಿತು ಕೆಲವು ಗಂಟೆಗಳವರೆಗೆ ಆಹಾರ ಸಂಗ್ರಹಣೆಗೆ ಗೂಡನ್ನು ಬಿಟ್ಟು ಹೊರಗೆ ಹೋಗುವುದನ್ನು ನಿಲ್ಲಿಸುತ್ತವೆ.

ಸ್ವಚ್ಛತೆಯ ನರ್ತನ : ನೊಣಗಳು ದೇಹವನ್ನು ಮೇಲೆ ಕೆಳಗೆ ಅಲುಗಾಡಿಸುತ್ತಾ ಈ ನೃತ್ಯವನ್ನು ಮಾಡುತ್ತವೆ. ಜೇನು ನೊಣಗಳು ಗೂಡಿನ ಸ್ವಚ್ಛತೆಯ ಬಗ್ಗೆ ಇತರೆ ನೊಣಗಳಿಗೆ ತಿಳಿಸಲು ಈ ನರ್ತನವು ನಡೆಯುತ್ತದೆ. ಒಂದು ಕೆಲಸಗಾರ ನೊಣವು ಗೂಡನ್ನು ಸ್ವಚ್ಛಗೊಳಿಸುತ್ತಿದ್ದಾಗ ಅದನ್ನು ಗಮನಿಸುವ ಇತರೆ ನೊಣಗಳೂ ಸಹ ಗೂಡನ್ನು ಸ್ವಚ್ಛಗೊಳಿಸಲು ಪಾರಂಭಿಸುತ್ತವೆ.

ಜೇನುನೊಣಗಳರಾಸಾಯನಿಕಜಗತ್ತು

ಜೇನು ನೊಣಗಳು ನೃತ್ಯಗಳ ಜೊತೆಗೆ ಚೋದಕ ರಾಸಾಯನಿಕಗಳು, ನೋಟ ಮತ್ತು ಆಯಸ್ಕಾಂತೀಯ ಅಲೆಗಳಿಂದ ಪರಿಸರದ ಜ್ಞಾನವನ್ನು ಪಡೆದು ಕುಟುಂಬದ ಕಾರ್ಯಗಳನ್ನು ಸುಸಜ್ಜಿತವಾಗಿ ನಡೆಸುತ್ತವೆ.

ಚೋದಕ ರಾಸಾಯನಿಕಗಳು :  ಚೋದಕ ರಾಸಾಯನಿಕಗಳು ನೊಣಗಳ ಶರೀರ ಗ್ರಂಥಿಗಳಿಂದ ಹೊರಬರುವ ರಾಸಾಯನಿಕ ಸ್ರವಿಕೆಯಾಗಿದ್ದು ಕುಟುಂಬದ ನೊಣಗಳೊಂದಿಗೆ ಸಂವಹನ ನಡೆಸಲು ಸಹಾಯಕವಾಗಿವೆ. ಕೆಲಸಗಾರ ನೊಣ, ರಾಣಿ ನೊಣ ಮತ್ತು ಗಂಡು ನೊಣಗಳೆಲ್ಲವೂ ಒಂದೊಂದು ರೀತಿಯ ಚೋದಕ ರಾಸಾಯನಿಕಗಳನ್ನು ಸ್ರವಿಸುತ್ತವೆ. ಇವುಗಳಲ್ಲಿ ಸುಮಾರು ೧೮ ಬಗೆಯ ಚೋದಕ ರಾಸಾಯನಿಕ ಸ್ರವಿಕೆಗಳನ್ನು ಗುರುತಿಸಲಾಗಿದೆ (ಕೋಷ್ಠಕ ೭).

ಕೆಲಸಗಾರ ನೊಣಗಳು ಸ್ರವಿಸುವ ಚೋದಕ ರಾಸಾಯನಿಕಗಳು :  ಕೆಲಸಗಾರ ನೊಣಗಳು ಗ್ರಂಥಿಗಳಿಂದ ಚೋದಕ ರಾಸಾಯನಿಕಗಳನ್ನು ಸ್ರವಿಸಿ ರೆಕ್ಕೆ ಬೀಸುವುದರ ಮೂಲಕ ಜೇನು ಕುಟುಂಬದಲ್ಲಿ ಮೂರು ರೀತಿಯಲ್ಲಿ ಹರಡುತ್ತವೆ. ಕೆಲಸಗಾರ ನೊಣಗಳ ಆಹಾರ ಬದಲಿಸಿಕೊಳ್ಳುವುದರೊಂದಿಗೆ, ಆವಿಯಾಗುವುದರ ಮೂಲಕ ಮತ್ತು ಕೆಲಸಗಾರ ನೊಣಗಳ ಕುಡಿಮೀಸೆ ಮತ್ತು ದೇಹವನ್ನು ತಗುಲಿಸಿಕೊಳ್ಳುವುದರ ಮೂಲಕ ವಾಸನೆಯನ್ನು ಹರಡುತ್ತವೆ. ಈ ವಾಸನೆಯನ್ನು ಅವುಗಳ ಕುಟುಂಬವಿರುವ ದಿಕ್ಕು, ಕುಟುಂಬದ ಮುಖ್ಯದ್ವಾರ, ಆಹಾರದ ಸ್ಥಳ ಮತ್ತು ಕುಟುಂಬ ವಿಭಜನೆಯ ಕ್ರಿಯೆಗಳಿಗೆ ಬಳಸುತ್ತವೆ. ಕುಟುಂಬದ ಪೆಟ್ಟಿಗೆಯ ಮುಖ್ಯದ್ವಾರದ ಮೂಲಕ ಬೇರೆ ಜೇನು ನೊಣಗಳು ಒಳ ಬರುವುದನ್ನು ಗುರುತಿಸಲು ಈ ವಾಸನೆ ಉಪಯೋಗವಾಗುತ್ತದೆ. ಕೆಲಸಗಾರ ನೊಣಗಳು ಚೋದಕ ರಾಸಾಯನಿಕಗಳನ್ನು ನೀರು ಶೇಖರಿಸುವಾಗ, ಬಟ್ಟಲುಗಳಲ್ಲಿ ಸಕ್ಕರೆ ಪಾಕವನ್ನು ಹೀರುವಾಗ ಮತ್ತು ಕೆಲವೊಮ್ಮೆ ಹೂಗಳಿಂದ ಆಹಾರ ಶೇಖರಿಸುವಾಗಲೂ ಸ್ರವಿಸುತ್ತವೆ. ವಾಸನಾಗ್ರ ರಾಸಾಯನಿಕಗಳು ಕುಟುಂಬ ವಿಭಜನೆಯ ಸಮಯದಲ್ಲಿ ಹೊಸ ಸ್ಥಳವನ್ನು ಹುಡುಕಲು, ಹಾರಬೇಕಾದ ದಿಕ್ಕನ್ನು ತಿಳಿಯಲು ಅವಶ್ಯಕ. ಕೆಲವು ಕೆಲಸಗಾರ ನೊಣಗಳು ಹೊಸ ಸ್ಥಳವನ್ನು ಹುಡುಕಲು, ಹಾರಬೇಕಾದ ದಿಕ್ಕನ್ನು ತಿಳಿಯಲು ಅವಶ್ಯಕ. ಕೆಲವು ಕೆಲಸಗಾರ ನೊಣಗಳು ಹೊಸ ಸ್ಥಳವನ್ನು ಆಯ್ಕೆ ಮಾಡುವ ಸಮಯದಲ್ಲಿ ವಾಸನೆಯನ್ನು ರೆಕ್ಕೆಗಳ ಬೀಸುವಿಕೆಯ ಮೂಲಕ ಹರಡಿ ಕೆಲಸಗಾರ ನೊಣಗಳು ಮತ್ತು ರಾಣಿಯು ಹೊಸ ಸ್ಥಳಕ್ಕೆ ಬರುವಂತೆ ಪ್ರಚೋದಿಸುತ್ತವೆ (ಚಿತ್ರ ೩೦).

ಚೋದಕ ರಾಸಾಯನಿಕಗಳ ಮೂಲಕ ಹೊಸ ಸ್ಥಳಕ್ಕೆ ಆಕರ್ಷಿತವಾಗಿರುವ ಜೇನುನೊಣಗಳು

ಕೆಲಸಗಾರ ನೊಣಗಳು ದಿಕ್ಕನ್ನು ಸೂಚಿಸಲು ಸ್ರವಿಸುವ ರಾಸಾಯನಿಕಗಳೆಂದರೆ  ಪಾದಸ್ರವಣ ಚೋದಕವಾದ ೨ – ೧೧ ಇಕೋಸೆನ್ – ೧ – ಅಲ್, ಪಾದಸ್ರವಣ ಚೋದಕ ರಾಸಾಯನಿಕದ ವಾಸನೆಯನ್ನು ಕೆಲಸಗಾರ ನೊಣದ ಕಾಲುಗಳ  ಮೂಲಕ ಜೇನುಪೆಟ್ಟಿಗೆಯ ಮುಖ್ಯದ್ವಾರ ಮತ್ತು ಹೂಗಳ ಮೇಲೆ ಹರಡುತ್ತವೆ.  ಚೋದಕ ರಾಸಾಯನಿಕಗಳನ್ನು  ಕೆಲಸಗಾರ ನೊಣಗಳು ಹೂಗಳಿಗೆ  ಆಕರ್ಷಿಸಲು  ಅನುಕೂಲವಾಗುತ್ತದೆ. ಜೇನುಪೆಟ್ಟಿಗೆಯ ದ್ವಾರದ ದಿಕ್ಕನ್ನೂ ತಿಳಿಯಲು  ವಾಸನಾಗ್ರ  ಚೋದಕ ರಾಸಾಯನಿಕಗಳನ್ನು ಉಪಯೋಗಿಸುತ್ತವೆ.

೨ – ಹೆಪ್ಟಾನೋನ್ ಸ್ರವಿಕೆಯು ಕೆಲಸಗಾರ ನೊಣಗಳ ದವಡೆ ಗ್ರಂಥಿಗಳಲ್ಲಿ ಉತ್ಪತ್ತಿಯಾದರೆ, ಕೆಲವು ರಾಸಾಯನಿಕಗಳು ವಿಷಕೊಂಡಿಯಲ್ಲಿ ಉತ್ಪತ್ತಿಯಾಗಿ ಶತ್ರುವಿನಿಂದ ಅಪಾಯವನ್ನು ಎದುರಿಸುವಲ್ಲಿ ಕೆಲಸಗಾರ ನೊಣಗಳನ್ನು ಎಚ್ಚರಿಸುತ್ತವೆ. ವಿಷ ಕೊಂಡಿಯಿಂದ ಉತ್ಪತ್ತಿಯಾಗುವ ಎಚ್ಚರಿಕೆಯ ವಸ್ತುವಿನಿಂದ ಕೂಡಿದ ೨ – ೧೧ – ಇಕೋಸೆನ್ ೧ – ಅಲ್‌ವು ಆಹಾರ ತರುವ ನೊಣಗಳನ್ನು ಆಕಷಿಸುತ್ತದೆ. ಕೆಲಸಗಾರ ನೊಣಗಳು ಅಪಾಯ ಕಂಡು ಬಂದಾಗ ಸ್ರವಿಕೆಯನ್ನು ಹೊರಸೂಸುವ ಮೂಲಕ ಎಚ್ಚರಿಸುತ್ತವೆ.

ಎಚ್ಚರಿಕೆಯ ಸ್ರವಿಕೆಗಳು ಬೇರೆ ಬೇರೆಯಾಗಿ ಸ್ರವಿಕೆಯಾದಾಗ ಪೂರ್ಣ ರಕ್ಷಣಾಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗುವುದಿಲ್ಲ. ೨ – ಹೆಪ್ಟಾನೋನ್ ಎಂಬ ನಿಶ್ಯಕ್ತಗೊಳಿಸುವ ವಾಸನೆ ಕಾವಲುಗಾರ ನೊಣಗಳು ದ್ವಾರದಲ್ಲಿ ಸಿಟ್ಟಿಗೇಳುವಂತೆ ಪ್ರಚೋದಿಸುತ್ತದೆ. ಈ ರಾಸಾಯನಿಕವು ಆಹಾರ ಕದಿಯುವ ನೊಣಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದರೂ ಇತರೇ ಶತ್ರುಗಳನ್ನು ತಡೆಯಲು ಸಹಕಾರಿಯಾಗುತ್ತದೆ. ವಿಷ ಕೊಂಡಿಯ ರಾಸಾಯನಿಕವು ಎಚ್ಚರಿಕೆಯ ವಸ್ತುವಾಗಿದ್ದು ಇದನ್ನು ಐಸೋಪೆಂಟೈಲ್ ಅಸಿಟೇಟ್ ಎಂದು ಕರೆಯಲಾಗುತ್ತದೆ. ಈ ರಾಸಾಯನಿಕವನ್ನು ಕೆಲಸಗಾರ ನೊಣಗಳು ವಿಷಕೊಂಡಿಯ  ಭಾಗವನ್ನು ಹೊರಸೂಸುವುದು. ರೆಕ್ಕೆ ಬೀಸುವುದರ ಮೂಲಕ ಹರಡಿ ಚುಚ್ಚಿದ ಭಾಗದಲ್ಲಿ ಚುಚ್ಚುವಂತೆ ಪ್ರಚೋದಿಸುತ್ತವೆ. ವಿಷಕೊಂಡಿಯಿಂದ ಸ್ರವಿಕೆಯಾಗುವ ಅನೇಕ ಎಚ್ಚರಿಕೆಯ ಚೋದಕ ರಾಸಾಯನಿಕಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ ೨ – ನ್ಯಾನನಾಲ್, ಐಸೋಪೆಂಟಾಲ್ ಅಸಿಟೇಟ್ ಮತ್ತು ೨ – ೧೧ ಎಕೋಸಿಸ್ – ೧ – ಆಲ್‌ಗಳು ತುಂಬಾ ಚುರುಕಾದ ರಾಸಾಯನಿಕಗಳಾಗಿವೆ.

ರಾಣಿಯಲ್ಲಿನ ಚೋದಕ ಸ್ರವಿಕೆಗಳು : ರಾಣಿಯಿಂದ ಸ್ರವಿತವಾಗುವ ಮುಖ್ಯ ಚೋದಕಗಳು ಎರಡು ರೀತಿಯ ಆಮ್ಲಗಳಾಗಿದ್ದು ದವಡೆಯ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತವೆ. ಅವುಗಳೆಂದರೆ ೯ – ಆಕ್ಸಿಕೀಟೋ – (ಇ) – ೨ – ಡೆಸಿನೋಯಿಕ್ ಆಮ್ಲ ಅಥವಾ ೯ – ಆಕ್ಸಿಡೆಸಿನೋಯಿಕ್ ಆಮ್ಲ (೯ ಒ.ಡಿ.ಎ) ಮತ್ತು ೯ – ಹೈಡ್ರಾಕ್ಸಿ – (ಇ) – ಡೆಸಿನೋಯಿಕ್ ಆಮ್ಲ (೯ ಎವ್.ಡಿ.ಎ) ಗಳಾಗಿವೆ. ರಾಣಿ ಸ್ರವಿಸುವ ೯ ಒಡಿಎ ಮತ್ತು ೯ಎಚ್‌ಡಿಎಗಳ ಸ್ರವಿಕೆಯ ಮಟ್ಟವು ರಾಣಿಯ ವಯಸ್ಸನ್ನು ಅವಲಂಬಿಸಿರುತ್ತದೆ. ಎರಡು  ದಿಗಳ ವಯಸ್ಸಿನ ಕನ್ಯಾರಾಣಿಯು ಕಡಿಮೆ ಪ್ರಮಾಣದ ೯ಒಡಿಎ ಅನ್ನು ಸ್ರವಿಸಿದರೆ ೫ – ೧೦ ದಿನಗಳ ಮತ್ತು ೧೮ ತಿಂಗಳಿಗೂ ಕಡಿಮೆ ವಯಸ್ಸಿನ ಫಲಿತ ರಾಣಿಗಳು ಕ್ರಮವಾಗಿ ೧೦೮ – ೧೩೩ ಮೈ.ಗ್ರಾಂ ಮತ್ತು ೧೦೦- ೨೦೦ ಮೈ.ಗ್ರಾಂ ದ್ರವವನ್ನು ಸ್ರವಿಸುತ್ತವೆ. ರಾಣಿಗೆ ವಯಸ್ಸಾದಂತೆ ಈ ಸ್ರವಿಕೆಯ ಮಟ್ಟವು ಕಡಿಮೆಯಾಗುತ್ತದೆ. ಮೊಟ್ಟೆ ಇಡುವ ರಾಣಿಗಳು ಸಾಮಾನ್ಯವಾಗಿ ೯ಎಚ್‌ಡಿಎ ಚೋದಕಗಳನ್ನು ೯ ಒಡಿಎ ಗಿಂತ ಕಡಿಮೆ ಮಟ್ಟದಲ್ಲಿ ಸ್ರವಿಸುತ್ತವೆ. ಕನ್ಯಾರಾಣಿಗಳು ೯ಒಡಿಎ ಮತ್ತು ೯ಎಚ್‌ಡಿಎಗಳು ಜೋಡಿಯಾಗುವ ಸಮಯದಲ್ಲಿ ಹೆಚ್ಚಾಗಿ ಸ್ರವಿಸುತ್ತವೆ.

ವಿವಿಧ ಚೋದಕಗಳು ಸೇರಿದಂತೆ ೯ ಒಡಿಎ ಮತ್ತು ೯ ಎಚ್‌ಡಿಎ ಗಳು ಜೇನು ನೊಣಗಳ ಅನೇಕ ಜೈವಿಕ ಕಾರ್ಯಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ೯ಒಡಿಎ ಮತ್ತು ೯ಎಚ್‌ಡಿಎ ಗಳ ಪ್ರಮುಖ ಕೆಲಸವೆಂದರೆ ರಾಣಿ ಬೆಳೆಸುವಿಕೆಯನ್ನು ಸ್ಥಗಿತಗೊಳಿಸುವುದು. ರಾಣಿಯ ದವಡೆ ಗ್ರಂಥಿಗಳಿಂದ ಸ್ರವಿತವಾಗುವ ಈ ಸ್ರವಿಕೆಗಳು ಕನ್ಯಾರಾಣಿಗಳಿಗಿಂತ ಜೋಡಿಯಾದ ರಾಣಿಗಳಲ್ಲಿ ಹೆಚ್ಚು ವೃದ್ಧಿಯಾಗಿರುತ್ತವೆ. ಇದರ ಜೊತೆಗೆ ಹೊಟ್ಟೆಯ ಮೇಲ್ಭಾಗದ ಗ್ರಂಥಿಗಳಿಂದ ಸ್ರವಿತವಾಗುವ ರಾಸಾಯನಿಕಗಳೂ ರಾಣಿ ಬೆಳೆಸುವಿಕೆಯಲ್ಲಿ ಪಾಲ್ಗೊಳ್ಳುತ್ತವೆ. ಜೇನು ಕುಟುಂಬದಲ್ಲಿ ಎಳೆಯ ರಾಣಿ ಬೆಳವಣಿಗೆಯಾಗುತ್ತಿದ್ದಲ್ಲಿ ಕಣಗಳು ನಿರ್ಮಿಸುವುದನ್ನು ಸ್ಥಗಿತಗೊಳಿಸುವುದು ೯ ಒಡಿಎ ಮತ್ತು ೯ ಎಚ್‌ಡಿಎ ಜೊತೆಗೆ ಕೋಶಗಳ ಹಂತದಲ್ಲಿ ರಾಣಿ ಹುಳುವಿನ ಸ್ರವಿಕೆಯೂ ಮತ್ತು ರಾಣಿಯ ಕಾಲಿನ ಟಾರ್ಸಲ್ ಗ್ರಂಥಿಗಳಿಂದ ಸ್ರವಿತವಾಗುವ ಪಾದ ಸ್ರವಣ ಚೋದಕವು ರಾಣಿ ಕಣ ನಿರ್ಮಿಸುವಿಕೆ ಮತ್ತು  ಕುಟುಂಬ ವಿಭಜನೆಯನ್ನು ತಡೆಗಟ್ಟುತ್ತದೆ ಎಂದು ದೃಢಪಡಿಸಲಾಗಿದೆ. ಈ ಚೋದಕಗಳ ಕಾರ್ಯಗಳು ಮುಂದಿನಂತಿರುತ್ತವೆ.

ಅಂಡಾಶಯದ ಬೆಳವಣಿಗೆಯ ನಿಯಂತ್ರಣ :  ರಾಣಿ ಉತ್ಪತ್ತಿ ಮಾಡುವ ರಾಸಾಯನಿಕಗಳು ಕೆಲಸಗಾರ ನೊಣದ ಅಂಡಾಶಯದ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಆದರೆ ೯ಒಡಿಎ ಚೋದಕವು ಗರ್ಭ ಧರಿಸಿದ ರಾಣಿ ಮೊಟ್ಟೆ ಇಡುವ ಗುಣದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇದರ ಜೊತೆಗೆ ಕೆಲಸಗಾರ ನೊಣದ  ಅಂಡಾಶಯ ಬೆಳವಣಿಗೆಯನ್ನು ರಾಣಿ ಹೊಟ್ಟೆಯ ಮೇಲ್ಭಾಗದ ಗ್ರಂಥಿಗಳೂ ಸೇರಿದಂತೆ ಜೇನು ಮರಿಗಳು ಸ್ರವಿಸುವ ಚೋದಕಗಳು ಕೂಡ ಪಾತ್ರವಹಿಸುತ್ತವೆ.

ಗಂಡು ಜೇನುನೊಣಗಳನ್ನು ಆಕರ್ಷಿಸುವುದು :  ರಾಣಿನೊಣ ಗಂಡು ನೊಣಗಳನ್ನು ಲೈಂಗಿಕ ಸಂಪರ್ಕಕ್ಕೆ ಆಕರ್ಷಿಸುವ ಕ್ರಿಯೆ ರಾಣಿಯ ದವಡೆ ಗ್ರಂಥಿಗಳ ಸ್ರವಿಕೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ೯ಒಡಿಎ ಮತ್ತು ಕಡಿಮೆ ಪ್ರಮಾಣದ ೯ಎಚ್‌ಡಿಎ ಚೋದಕಗಳು ರಾಣಿ ಮತ್ತು ಗಂಡು ನೊಣಗಳನ್ನು ಸುಮಾರು ೬೦. ಮೀ ಅಂತರದಿಂದ ಆಕಷಿಸಲು ಸಾಧ್ಯವಾದರೆ ಚರ್ಮ ಮೇಲ್ಭಾಗದ ಗ್ರಂಥಿಯ ಸ್ರವಿಕೆ ಸುಮಾರು ೩೦ ಸೆಂ.ಮೀ ಅಂತರದ ಗಂಡು ನೊಣಗಳನ್ನು ಆಕರ್ಷಿಸಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುತ್ತದೆ. ಇದರ ಜೊತೆಗೆ ಕೊಚ್ಚಿನೊಕೋವ್ ಗ್ರಂಥಿಯ ಚೋದಕ ರಾಸಾಯನಿಕಗಳು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುತ್ತದೆ. ಇದರ ಜೊತೆಗೆ ಕೊಚ್ಚಿನೊಕೋವ್ ಗ್ರಂಥಿಯ ಚೋದಕ ರಾಸಾಯನಿಕಗಳು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುತ್ತವೆ.

ರಾಣಿ ದವಡೆಗ್ರಂಥಿಯ ಸ್ರವಿಕೆಯಲ್ಲಿ ಕುಟುಂಬ ವಿಭಜನೆಗೆ ಸಂಬಂಧಿಸಿದ ಮೂರು ಬಗೆಯ ರಾಸಾಯನಿಕಗಳಿವೆ. ಅವು ಕೆಲಸಗಾರ ನೊಣಗಳನ್ನು ಗುಂಪುಗೂಡಿಸಲು, ಗುಂಪಿನಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲುವಂತೆ ಹಾಗೂ ಗುಂಪು ಹೊಸ ಸ್ಥಳಕ್ಕೆ ಹಾರಿ ಹೋಗಲು ಪ್ರಚೋದಿಸುವುದು. ಕುಟುಂಬ ವಿಭಜನೆಯ ಸಮಯದಲ್ಲಿ ಕೆಲಸಗಾರ ನೊಣಗಳು ರಾಣಿಯೊಂದಿಗೆ ಹಾರಿ, ಹಾರುವ ಸ್ಥಳದಲ್ಲಿ ಕೂಡುವ ಕ್ರಿಯೆಯಲ್ಲಿ ೯ಒಡಿಎ ಸಹಕಾರಿಯಾಗುತ್ತದೆ ಆದರೆ ೯ಎಚ್‌ಡಿಎ ಎಂಬುದು ವಿಭಜನೆಯ ಗುಂಪು ನಿಗದಿತ ಸ್ಥಳದಲ್ಲಿ ಸ್ವಲ್ಪ ಕಾಲ ತಂಗುವಂತೆ ಮಾಡುತ್ತದೆ. ಆದರೆ ಎರಡೂ ಚೋದಕ ರಾಸಾಯನಿಕಗಳು ಅದರಲ್ಲೂ ೯ಎಚ್‌ಡಿಎ ಗುಂಪುಗೂಡಿ ವಿಶ್ರಾಂತಿಯಿಂದಿರುವಂತೆ ಮಾಡುತ್ತದೆ. ಅನಂತರ ಕೆಲಸಗಾರ ನೊಣಗಳ ಹಾರಾಟದ ಸಮಯದಲ್ಲಿ ೯ಒಡಿಎ ಎಂಬುದು ಹೆಚ್ಚಿನ ಕಾರ್ಯಗತವಾಗಿ ೯ಎಚ್‌ಡಿಎ ಚೋದಕದೊಂದಿಗೆ ಬೆರೆತಾಗ ದ್ವಾರದಲ್ಲಿ ವಾಸನಾಗ್ರ ಚೋದಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.

ಕೆಲಸಗಾರ ನೊಣಗಳ ಆಕರ್ಷಣೆ :  ರಾಣಿಯ ಚೋದಕ ಸ್ರವಿಕೆಗಳು ಕೆಲಸಗಾರ ನೊಣಗಳನ್ನು ಗುರುತಿಸಲು ಹಾಗೂ ಆಕರ್ಷಿಸಲು ಬಹಳ ಅಗತ್ಯ. ಇದರಲ್ಲಿ ರಾಣಿ ಸ್ರವಿಸುವ ೯ಒಡಿಎ ಮತ್ತು ೯ಎಚ್‌ಡಿಎ ಗಳು ಸೇರಿದಂತೆ ಕೆಲವು ರಾಸಾಯನಿಕಗಳು ಕೆಲಸಗಾರ ನೊಣಗಳ ಮೇಲೆ ಪ್ರಭಾವ ಬೀರುತ್ತವೆ. ೯ಎಚ್‌ಡಿಎ ಎಂಬುದು ಕೆಲವು ಕಾರ್ಯ ಚಟುವಟಿಕೆಗಳಲ್ಲಿ ಸ್ವತಂತ್ರವಾಗಿ ಅಥವಾ ೯ಒಡಿಎನೊಂದಿಗೆ ನಡೆಸಿದರೂ ರಾಣಿ ಬೆಳೆಸುವಿಕೆಯನ್ನು ನಿಲ್ಲಿಸುವುದು. ಲೈಂಗಿಕ ಕ್ರಿಯೆಗೆ ಗಂಡು ನೊಣಗಳನ್ನು ಆಕರ್ಷಿಸುವುದು ಮುಂತಾದ ಕಾರ್ಯಗಳಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುವುದಿಲ್ಲ. ಆದುದರಿಂದ ಜೇನು ನೊಣಗಳು  ಈ ಸಾಮಾನ್ಯ ನಡವಳಿಕೆಗೆ ಅವಶ್ಯಕವಾದ ಚೋದಕ ರಾಸಾಯನಿಕಗಳು ಹೊಟ್ಟೆಯ ಗ್ರಂಥಿಗಳಿಂದ ಸ್ರವಿತವಾಗುತ್ತವೆ ಎಂದು ತಿಳಿಯಲಾಗಿದೆ.

ರಾಣಿ ಮತ್ತು ಕೆಲಸಗಾರ ನೊಣಗಳು ಸ್ರವಿಸುವ ಚೋದಕ ರಾಸಾಯನಿಕಗಳ ಜೊತೆಗೆ ಗಂಡು ನೊಣಗಳು, ಎರಿ ಮತ್ತು ಮರಿಹುಳುಗಳೂ ಚೋದಕ ರಾಸಾಯನಿಕಗಳನ್ನು ಸ್ರವಿಸುತ್ತವೆ. ಗಂಡುನೊಣಗಳ ದವಡೆ ಗ್ರಂಥಿಗಳಿಂದ ಸ್ರವಿತವಾಗುವ ರಾಸಾಯನವು ಜೋಡಿಯಾಗುವ ಜಾಗವನ್ನು ಗುರುತಿಸಲು ಸಾಧ್ಯವಾದರೆ, ಜೇನುಮರಿ ಮತ್ತು ಎರಿಗಳಿಂದ ಬಿಡುಗಡೆಯಾಗುವ ಸ್ರವಿಕೆಗಳು ಕ್ರಮವಾಗಿ ಮರಿಹುಳುಗಳ ಗುರುತಿಸುವಿಕೆ ಮತ್ತು ಮಕರಂದವನ್ನು  ಕೂಡಿಡುವಂತೆ ಪ್ರಚೋದಿಸುತ್ತವೆ.

ರಕ್ಷಣಾವ್ಯವಸ್ಥೆ

ಜೇನು ನೊಣಗಳು ತಮ್ಮ ಗೂಡಿನ ರಕ್ಷಣೆಯ ಬಗ್ಗೆ ನಿರ್ವಹಿಸುವ ಅನೇಕ ಎಚ್ಚರಿಕಾ ನಡುವಳಿಕೆಗಳು ವಿಸ್ಮಯಕರ. ಜೇನು ಗೂಡಿನ ಸಮೀಪ ಯಾವುದೇ ಶತ್ರು ಅಥವಾ ಇನ್ನಾವುದೇ ಬಗೆಯ ತೊಂದರೆ ಕಂಡು ಬಂದಾಗ  ರಕ್ಷಣಾ ಕ್ರಮವಾಗಿ ಗೂಡಿನ ಕೆಲಸಗಾರ ನೊಣಗಳಿಗೆ ಎಚ್ಚರಿಕೆ ಕೊಡುವುದು, ಶತ್ರುಗಳ ಮೇಲೆ ಧಾಳಿ ಮಾಡುವಂತೆ ಪ್ರಚೋದಿಸುವುದು ಮತ್ತು ಶತ್ರುಗಳನ್ನು ವಿಷದ ಕೊಂಡಿಯಿಂದ ಚುಚ್ಚುವುದು ಕುಟುಂಬದಲ್ಲಿ ರಕ್ಷಣಾ ವ್ಯವಸ್ಥೆಯ ವಿವಿಧ ಹಂತಗಳಾಗಿವೆ. ಮೊದಲಿಗೆ ಗೂಡಿನ ಮುಖದ್ವಾರದ ಕಾವಲುಗಾರ ನೊಣಗಳು ಶತ್ರುವಿನ ಆಗಮನದ ಬಗ್ಗೆ ಉಳಿದ ನೊಣಗಳಿಗೆ ಚೋದಕ ದ್ರವದ ಮುಖಾಂತರ ಎಚ್ಚರಿಕೆ ನೀಡುತ್ತವೆ. ಅನೇಕ ನೊಣಗಳು ಗೂಡಿನ ರಕ್ಷಣೆಗೋಸ್ಕರ ಹಾರಾಟವನ್ನು ಆರಂಭಿಸಿ ಶತ್ರುವನ್ನು ಚುಚ್ಚಲು ಸಜ್ಜಾಗಿ ಹರಡುತ್ತವೆ. ಶತ್ರುಗಳನ್ನು ಚುಚ್ಚಿದ ಜೇನುನೊಣದ ವಿಷದ ಕೊಂಡಿ ಹೊರಗೆ ಬಾರದೆ ಜೇನುನೊಣದ ದೇಹದಿಂದಲೇ ಬೇರ್ಪಡಿಸುವುದರಿಂದ ಒಮ್ಮೆ ಚುಚ್ಚಿದ ನೊಣ ಸಾವನ್ನಪ್ಪುತ್ತದೆ. ಚುಚ್ಚಿದ ಸ್ಥಳದಲ್ಲಿ ವಿಶೇಷವಾದ ವಾಸನೆಯಿಂದ ಕೂಡಿದ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ವಾಸನೆಯನ್ನು ಅನುಸರಿಸಿ ಧಾವಿಸುವ ಕೆಲಸಗಾರ ನೊಣಗಳು ಅದೇ ಶತ್ರುವಿನ ಮೇಲೆ ದಾಳಿ ಮಾಡಿ ಕೊಂಡಿಯಿಂದ ಚುಚ್ಚುತ್ತವೆ. ಗೂಡಿನ ಬಳಿಯಲ್ಲಿ ಯಾವುದೇ ತೊಂದರೆ ಉಂಟಾದಾಗ ರಕ್ಷಣೆಗೆ ಮುಂದಾಗುವ ಜೇನು ನೊಣಗಳು ಆಹಾರ ಸಂಗ್ರಹಣೆಗೆ ತೊಡಗಿದ್ದಾಗ ಉಂಟಾಗುವ ತೊಂದರೆಗಳ ವಿರುದ್ದ ಹೆಚ್ಚಿನ ರಕ್ಷಣಾತ್ಮಕ ನಡವಳಿಕೆಯನ್ನು ತೋರುವುದಿಲ್ಲ. ಪ್ರತಿಯೊಂದು ಪ್ರಭೇದದ ಜೇನುನೊಣಗಳು ತಮ್ಮ ಗೂಡಿನ ಹತ್ತಿರ ಅಪಾಯದ ಸೂಚನೆ ಕಂಡುಬಂದಾಗ ಎಚ್ಚರಿಕೆಯ ಚೋದಕವನ್ನು ಹೊರಸೂಸುತ್ತವೆ. ತುಡುವೆ ಜೇನು ಮತ್ತು ಯೂರೋಪಿಯನ್ ಜೇನು ನೊಣಗಳ ಗೂಡುಗಳ ಮರದ ಪ್ರವೇಶದ್ವಾರ ಚಿಕ್ಕದಾಗಿದ್ದು ಕೆಲವು ಬಾರಿ ಗೂಡುಗಳು ಪೊಟರೆಗಳಲ್ಲಿ ಇರುವುದರಿಂದ, ಈ ಎಚ್ಚರಿಕೆಯ ಚೋದಕದ ಪರಿಣಾಮ ಅತಿ ಬೇಗನೆ ನಡೆಯುತ್ತದೆ.

ಕೋಷ್ಠಕ : ಜೇನುನೊಣಗಳಿಂದ ಉತ್ಪತ್ತಿಯಾಗುವ ಚೋದಕ ರಾಸಾಯನಿಕಗಳು

ಚೋದಕ ರಾಸಾಯನಿಕಗಳು

ಗ್ರಂಥಿ

ರಾಸಾಯನಿಕಗಳು

ಕಾರ್ಯಗಳು

ಕೆಲಸಗಾರ ನೊಣ ಉತ್ಪತ್ತಿ
ನೆಸನೋವ್ ಚೋದಕ ರಾಸಾಯನಿಕಗಳು ನೆಸನೋವ್ ಗ್ರಂಥಿ ಗೆರಾನಿಯೋಲ್ ನೆರೋಲಿಕ ಆಮ್ಲ, ಜೆರಾನಿಕ್ ಆಮ್ಲ(ಇ) – ಸಿಟ್ರಾಲ್ (ಜಡ್) – ಸಿಟ್ರಾಲ್(ಇ – ಇ) – ಪಾರ್ನೆಸಾಲ್ ನೆರೋಲ್ ದಿಕ್ಕು ಸೂಚಿಸುವಿಕೆ
ಪಾದಸ್ರವಣ ಚೋದಕ ರಾಸಾಯನ ಅರ್ನ್‌‌ಹಾರ್ಟ್ ಗ್ರಂಥಿ ದಿಕ್ಕು ಸೂಚಿಸುವಿಕೆ
ಆಹಾರ ಗುರುತಿಸುವಿಕೆ ಚೋದಕ ರಾಸಾಯನ ಹೂಗಳಲ್ಲಿನ ದಿಕ್ಕು
ವಿಪತ್ತನ್ನು ಸೂಚಿಸುವ ಚೋದಕ ರಾಸಾಯನ ದವಡೆಗ್ರಂಥಿ ೨ – ಹೆಪ್ಟಾನೋನ್ ಎಚ್ಚರಿಕೆ ಮತ್ತು ರಕ್ಷಣೆ
ವಿಪತ್ತನ್ನು ಸೂಚಿಸುವ ಚೋದಕ ರಾಸಾಯನಿಕಗಳು ವಿಷಕೊಂಡಿ ಗ್ರಂಥಿ ಐಸೋಅಮೈಲ್ ಅಸಿಟೇಟ್, ೨ – ನ್ಯಾನನಾಲ್, ಎನ್ – ಬ್ಯೂಟೈಲ್ ಅಸಿಟೇಟ್, ಎನ್ – ಹೆಕ್ಸೈಲ್, ಅಸಿಟೇಟ್, ಬೆಂಜೈಲ್ ಅಸಿಟೇಟ್ ಐಸೋಪೆಂಟೈಲ್ ಆಲ್ಕೋಹಾಲ್ ಎನ್ – ಆಕ್ಟೈಲ್ ಅಸಿಟೇಟ್ (ಜಡ್) – II – ಐಕೊಸೆನ್ – I – ಆಲ್ ಎಚ್ಚರಿಕೆ ಮತ್ತು ರಕ್ಷಣೆ
ಗುರುತಿಸುವ ಚೋದಕ ರಾಸಾಯನಿಕಗಳು ಎಚ್ಚರಿಕೆ, ರಕ್ಷಣೆ ಮತ್ತು ದಿಕ್ಕು ಸೂಚನೆ ಕುಟುಂಬ ಗುರುತಿಸುವಿಕೆ
ರಾಣಿಯ ಉತ್ಪತ್ತಿ
ರಾಣಿಯ ಚೋದಕ ರಾಸಾಯನಿಕಗಳು ದವಡೆ ಗ್ರಂಥಿ ೯ – ಕೀಟೋ – (ಇ) ಡೆಸಿನೋಯಿಕ್ ಆಮ್ಲ, (೯ ಒಡಿಎ), ೯ – ಹೈಡ್ರಾಕ್ಸಿ – (ಇ) – ೨ ಡೆಸಿನೋಯಿಕ್, ಆಮ್ಲ (೯ ಎಚ್.ಡಿ.ಎ.) ರಾಣಿ ಬೆಳೆಸುವಿಕೆಯ ಸ್ಥಗಿತ, ಕೆಲಸಗಾರ ನೊಣದ ಅಂಡಾಶಯ ಬೆಳವಣಿಗೆ ಸ್ಥಗಿತ, ಗಂಡು ನೊಣ ಆಕರ್ಷಣೆ, ಪಾಲಾಗಲು ಕೆಲಸಗಾರ ನೊಣದ ಆಕರ್ಷಣೆ, ನೆಸನೋವ್ ಬಿಡುಗಡೆಯಾಗುವಂತೆ ಪ್ರಚೋದಿಸುವುದು, ಕೆಲಸಗಾರ ನೊಣಗಳು ಆಹಾರ ತರುವಂತೆ ಮಾಡುವುದು. ರಾಣಿ ಗುರುತಿಸುವಿಕೆ
ವಾಸನೆಯನ್ನು ಗ್ರಹಿಸುವ ಚೋದಕ ರಾಸಾಯನ ಕೊಚ್ಚಿವಿನಿಕೋವ್ ಗ್ರಂಥಿ ಕೆಲಸಗಾರ ನೊಣಗಳ ಆಕರ್ಷಣೆ
ಟೆರ್ಗೈಟ್ ಚೋದಕ ರಾಸಾಯನ ಟೆರ್ಗೈಟ ಗ್ರಂಥಿ ಗಂಡು ನೊಣದ ಆಕರ್ಷಣೆ ಮತ್ತು ಜೋಡಿಯಾಗುವಿಕೆ, ಕೆಲಸಗಾರನೊಣದ ಅಂಡಾಶಯದ ಬೆಳವಣಿಗೆ ಸ್ಥಗಿತಗೊಳಿಸುವಿಕೆ,
ಎಳೆವಯಸ್ಸಿನ ಚೋದಕ ರಾಸಾಯನ ರಾಣಿ ಬೆಳೆಸುವಿಕೆಯನ್ನು ಸ್ಥಗಿತಗೊಳಿಸುವಿಕೆ
ಪಾದಸ್ರವಣ ಚೋದಕ ರಾಸಾಯನ ರಾಣಿ ಕಣಗಳನ್ನು ಕಟ್ಟುವುದನ್ನು ಸ್ಥಗಿತಗೊಳಿಸುವಿಕೆ
ಗಂಡು ನೊಣಗಳ ಉತ್ಪತ್ತಿ
ಗುರುತಿಸುವ ಚೋದಕ ರಾಸಾಯನ ದವಡೆ ಗ್ರಂಥಿಗಳು ಜೋಡಿಯಾಗುವಿಕೆಯ ಜಾಗವನ್ನು ಗುರುತಿಸುವುದು
ಜೇನು ಮರಿಗಳ ಉತ್ಪತ್ತಿ
ಜೇನು ಮರಿಯಲ್ಲಿ ಚೋದಕ ರಾಸಾಯನ ಆಹಾರ ತರುವಿಕೆಯ ಪ್ರಚೋದನೆ, ಜೇನು ಮರಿಗಳ ಗುರುತಿಸುವಿಕೆ, ಕೆಲಸಗಾರ ನೊಣಗಳ ಅಂಡಾಶಯ ಬೆಳವಣಿಗೆಯನ್ನು ಸ್ಥಗಿತಗೊಳಿಸುವಿಕೆ.
ಎರಿಗಳ ಉತ್ಪತ್ತಿ
ಆಹಾರ ಕೂಡಿಸುವ ಚೋದಕ ರಾಸಾಯನ ಮಕರಂದವನ್ನು ಕೂಡಿಡುವಂತೆ ಪ್ರಚೋದಿಸುವಿಕೆ

ಹೆಜ್ಜೇನು ಮತ್ತು ಕೋಲು ಜೇನುಗಳ ಗೂಡುಗಳು ಹೊರಗೆ ಮುಕ್ತವಾಗಿರುವುದರಿಂದ ಅವುಗಳ ಕಾವಲುಗಾರ ನೊಣಗಳು ಶತ್ರುವಿನ ವಿರುದ್ಧ ಎಚ್ಚರಿಕೆಯನ್ನು ನೀಡಲು ಅಧಿಕ ಪ್ರಮಾಣದಲ್ಲಿ ಚೋದಕವನ್ನು ಸ್ರವಿಸುತ್ತವೆ. ಹೆಜ್ಜೇನು ಗೂಡುಗಳು ಒಂದರ ಪಕ್ಕದಲ್ಲಿ ಒಂದರಂತೆ ಅಧಿಕ ಸಂಖ್ಯೆಯಲ್ಲಿ ಒಂದೇ ಸ್ಥಳದಲ್ಲಿ ಕಟ್ಟಲ್ಪಟ್ಟಿರುವುದು ಸಾಮೂಹಿಕವಾಗಿ ಶತ್ರುವಿನ ಮೇಲೆ ದಾಳಿ ಮಾಡಲು ಅನುಕೂಲವಾಗಿವೆ. ಕೋಲು ಜೇನುಗಳ ಪ್ರಮುಖ ಶತ್ರು ಕೀಟಗಳಾದ ಇರುವೆ ಮತ್ತಿತರ ಕೀಟಗಳನ್ನು ತಡೆಯಲು ತಮ್ಮ ಗೂಡಿನ ಕೊಂಬೆಯ ಇಕ್ಕೆಲಗಳಲ್ಲಿ ಅಂಟಿನಂತಹ ದ್ರವವನ್ನು ತಂದು ಮೆತ್ತಿರುತ್ತವೆ. ದ್ರವವು ಅಂಟಿನಿಂದ ಕೂಡಿದ್ದು ಇದರ ಮೂಲಕ ನುಗ್ಗಿ ಬರಲು ಪ್ರಯತ್ನಿಸುವ ಕೀಟಗಳು ಅಲ್ಲಿಯೇ ಅಂಟಿಕೊಂಡು ಸಾಯುತ್ತವೆ. ಗೂಡನ್ನು ಬಿಟ್ಟು ತಪ್ಪಿಸಿಕೊಂಡು ಬೇರೊಂದು ಸ್ಥಳವನ್ನು ಹುಡುಕಿಕೊಂಡು ಹೋಗಿ ನೆಲೆಸುವುದು ಈ ಜೇನು ನೊಣಗಳು ತಮ್ಮ ಗೂಡಿನ ರಕ್ಷಣೆ ಮಾಡಿಕೊಳ್ಳುವ ಒಂದು ವಿಧಾನವಾಗಿದೆ. ಯಾವುದೇ ಸಮಯದಲ್ಲಾದರೂ ಹಾರಿಹೋಗಲು ಸಿದ್ದವಿರುವ ರಾಣಿಯ ಸಾಮರ್ಥ್ಯ ಈ ನಡವಳಿಕೆ ಸಹಕಾರಿಯಾಗಿದೆ.

ಗೂಡಿನ ಇತರ ರಕ್ಷಣಾ ವಿಧಾನಗಳು

ಹೊಟ್ಟೆಯನ್ನು ಕುಣಿಸುವುದು : ಶತ್ರು ಕೀಟಗಳು ಗೂಡಿನ ಸಮೀಪ ಬಂದಾಗ ಕೆಲಸಗಾರ ನೊಣಗಳು, ಹೊಟ್ಟೆಯ ತುದಿಯನ್ನು ಮೇಲಕ್ಕೆ ಎತ್ತಿಕೊಂಡು ಅಲ್ಲಾಡಿಸುತ್ತಾ ಶತ್ರುಗಳ ಬಳಿಗೆ ಧಾವಿಸಿ ಶತ್ರುವನ್ನು ಹಿಮ್ಮೆಟ್ಟಿಸುತ್ತವೆ.

ಶಬ್ದ ಮಾಡುವುದು : ಕೆಲವೊಮ್ಮೆ ಶತ್ರುವು ಗೂಡಿನ ಸಮೀಪ ಬಂದಾಗ ಎಲ್ಲ ನೊಣಗಳೂ ತಮ್ಮ ರೆಕ್ಕೆಯನ್ನು ಜೋರಾಗಿ ಬೀಸಲು ಪ್ರಾರಂಭಿಸಿ ‘ಹಿಸ್’ ಎನ್ನುವ ಶಬ್ದವನ್ನು ಮಾಡುತ್ತವೆ. ಈ ಶಬ್ದದಿಂದ ಶತ್ರುಗಳು ಗೂಡಿನಿಂದ ಹಿಂದೆ ಸರಿಯುತ್ತವೆ.

ಸಾಮೂಹಿಕ ರಕ್ಷಣಾ ಕ್ರಮ :  ಪಕ್ಷಿಗಳು ಮತ್ತು ಕಡಜಗಳಂತಹ ಶತ್ರುಗಳು ಜೇನು ಗೂಡಿನ ಬಳಿ ಬಂದಾಗ ಅವುಗಳ ಮೇಲೆ ನೇರ ದಾಳಿ ಮಾಡದೆ ಜೇನುನೊಣಗಳು ಹಾರಾಟದ ಚಟುವಟಿಕೆಯನ್ನು ಸ್ಥಗಿತಗೊಳಿಸಿ ‘ಹಿಸ್’ ಎನ್ನುವ ಶಬ್ದದ ಮೂಲಕ ೩೦- ೩೫ ನೊಣಗಳು ಗುಂಪಾಗಿ  ಗೂಡಿನ ಪ್ರವೇಶದ್ವಾರದ ಬಳಿಗೆ ಬರುತ್ತವೆ. ಈ ಸಂದರ್ಭದಲ್ಲಿ ಶತ್ರುಗಳು ಹಿಮ್ಮೆಟ್ಟುತ್ತವೆ. ಒಂದು ವೇಳೆ ಶತ್ರುವು ಹಿಂದೆ ಸರಿಯದೆ ಗೂಡಿನ ಸಮೀಪದಲ್ಲಿ ಜೇನು ನೊಣಗಳನ್ನು ಹಿಡಿಯುವ ಪ್ರಯತ್ನ ನಡೆಸಿದಲ್ಲಿ, ಅನೇಕ ನೊಣಗಳು ದಿಢೀರನೆ ಶತ್ರುವಿನ ಕಾಲು ಮತ್ತು ರೆಕ್ಕೆಗಳು ಸೇರಿದಂತೆ ಪೂರ್ತಿ ದೇಹವನ್ನು ಆಕ್ರಮಿಸಿ ಕೆಳಕ್ಕೆ ಬೀಳಿಸುತ್ತವೆ. ಈ ಕ್ರಿಯೆಯಲ್ಲಿ ಶತ್ರುವನ್ನು  ಉಂಡೆಯಾಕಾರದಲ್ಲಿ ಸುತ್ತುವರೆದು ಅಗತ್ಯದಲ್ಲಿ ದೇಹದ ಶಾಖವನ್ನು ಹೆಚ್ಚಿಸುವ ನೊಣಗಳು ಶತ್ರುವನ್ನು ೪೩ ಡಿಗ್ರಿ ಸೆ.ಗೂ ಅಧಿಕ ಉಷ್ಣತೆಗೆ ಒಳಪಡಿಸಿ ಸಾಯಿಸುತ್ತವೆ. ಹೆಜ್ಜೇನು ನೊಣಗಳಲ್ಲಿ ಶತ್ರು ಕೀಟಗಳನ್ನು ಸುತ್ತುವರೆದು ಸಾಯಿಸುವ ಗುಣಗಳಿದ್ದು ಕರಡಿ, ಪಕ್ಷಿ ಮತ್ತು ಮನುಷ್ಯರಿಂದ ತೊಂದರೆಯಾದಾಗ ಅಧಿಕ ಸಂಖ್ಯೆಯಲ್ಲಿ ಶತ್ರುಗಳನ್ನು ದೂರದವರೆಗೆ ಅಟ್ಟಿಸಿಕೊಂಡು ಹೋಗಿ ಮುಳ್ಳಿನಿಂದ ಚುಚ್ಚುತ್ತವೆ. ಅಪಾಯದ ಸುಳಿಯಲ್ಲಿರುವ ನೊಣ ತನ್ನ ಗೂಡಿನ ಇತರ ನೊಣಗಳಿಗೆ ಸೂಚನೆ ನೀಡಿ ಪ್ರತಿದಾಳಿಗೆ ಪ್ರಚೋದಿಸಲು ಸಶಕ್ತವಾಗಿರುತ್ತವೆ. ಈ ಜೇನುನೊಣಗಳು ಗೂಡಿನಿಂದ ಸುಮಾರು ೧.೫ ರಿಂದ ೩.೦ ಕಿ.ಮೀ. ವರೆಗೂ ಶತ್ರುಗಳನ್ನು ಅಟ್ಟಿಸಿಕೊಂಡು ಹೋಗಿರುವ ನಿದರ್ಶನಗಳಿವೆ. ಜೇನು ಕುಟುಂಬದಲ್ಲಿ ರಾಣಿ ನೊಣವಿಲ್ಲದಿರುವಾಗ, ರೋಗದಿಂದ ನರಳುವಾಗ, ಜೇನು ತುಪ್ಪವನ್ನು ತೆಗೆಯುವಾಗ ಮತ್ತು ಹೂವುಗಳ ಮೇಲೆ ಕೀಟನಾಶಕಗಳ ಸಿಂಪರಣೆಯಾದಾಗ ಜೇನು ನೊಣಗಳಲ್ಲಿ ಸಿಟ್ಟಾಗುವ ನಡತೆಯನ್ನು ಸಾಮಾನ್ಯವಾಗಿ ಕಾಣಬಹುದು. ಅರಣ್ಯದಲ್ಲಿ ಕಟ್ಟಿರುವ ಜೇನು ಕುಟುಂಬಗಳು ಮಾನವನ ಯಾವುದೇ ಚಟುವಟಿಕೆ ಕಂಡು ಬಂದಾಗ ಅದನ್ನು ಗೂಡಿಗೆ ಒದಗಲಿರುವ ಅಪಾಯವೆಂದು ಪರಿಗಣಿಸಿ ದಾಳಿ ಮಾಡಲು ಸಜ್ಜಾಗುತ್ತವೆ.