ಜೇನುನೊಣಗಳು ಇತರೆ ಪ್ರಾಣಿಗಳಂತೆ ಸ್ವಾಭಾವಿಕ ಶತ್ರುಗಳಿಗೆ ತುತ್ತಾಗುತ್ತಿರುವುದು ರೋಮನ್ನರ ಕಾಲದಿಂದಲೂ ತಿಳಿದುಬಂದಿದೆ. ಜೇನುನೊಣಗಳ ಶತ್ರುಗಳಲ್ಲಿ ಕಡಜ, ಮೇಣದ ಪತಂಗ, ಇರುವೆ, ಜೇಡ, ಪಕ್ಷಿಗಳು ಹಾಗೂ ಅನೇಕ ಬಗೆಯ ಪರಭಕ್ಷಕ ಕೀಟಗಳು ಸ್ವಾಭಾವಿಕ ಶತ್ರುಗಳಾಗಿದ್ದವೆಂಬ ವರದಿಗಳಿವೆ. ಜೇನುನೊಣಗಳಲ್ಲಿ ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ಏಕಾಣುಜೀವಿಗಳಿಂದಾಗುವ ಅನೇಕ ಬಗೆಯ ರೋಗಗಳನ್ನೂ ಗುರುತಿಸಲಾಗಿದೆ.

೧೮೫೦ ಕ್ಕೂ ಮೊದಲು ಜೇನುನೊಣಗಳ ರೋಗಗಳು ವಾತಾವರಣದ ವಿವಿಧ ವೈಪರಿತ್ಯಗಳಿಂದ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡರೂ ಸ್ಥಳಾಂತರ ಚೌಕಟ್ಟುಗಳಿಂದ ಕೂಡಿದ ಜೇನು ಪೆಟ್ಟಿಗೆಗಳ ಆವಿಷ್ಕಾರದ ನಂತರ ವಾಹನ, ರೈಲು ಮತ್ತು ವಿಮಾನಗಳ ಮೂಲಕ ರೋಗ ಪೀಡಿತ ಜೇನು ಕುಟುಂಬಗಳ ಸಾಗಾಣಿಕೆಯ ಮೂಲಕ ರೋಗಗಳು ಪ್ರಪಂಚದಾದ್ಯಂತ ಹರಡಲು ಕಾರಣವಾಗಿವೆ.

ಸ್ವಾಭಾವಿಕ ಶತ್ರುಗಳು

ಜೇನುನೊಣಗಳ ಶತ್ರುಗಳಲ್ಲಿ ಮೇಣದ ಪತಂಗಗಳು, ಕಡಜ, ಇರುವೆಗಳು, ವಿವಿಧ ಜಾತಿಯ ಪಕ್ಷಿಗಳು, ಇಲಿ, ಕರಡಿ ಮತ್ತು ಮಂಗ ಮುಂತಾದವು ಮುಖ್ಯವಾದವುಗಳು. ಮೇಣದ ಪತಂಗಗಳು ಜೇನು ಕುಟುಂಬದ ದಾಸ್ತಾನಿನಲ್ಲಿ ಜೇನಿನ ಎರಿಗಳು ಮತ್ತು ಪರಾಗವನ್ನು ತಿಂದು ಹಾನಿಯನ್ನುಂಟು ಮಾಡುತ್ತವೆ. ಭಾರತದಲ್ಲಿ ಇವುಗಳಿಂದಾಗಿ ಪ್ರತಿ ವರ್ಷ ಶೇಕಡಾ ೪೦ ರಷ್ಟು ಜೇನು ಕುಟುಂಬಗಳು ಪೆಟ್ಟಿಗೆಗಳನ್ನು ಬಿಟ್ಟು ಪರಾರಿಯಾಗಲು ಕಾರಣವಾಗಿವೆ.

ಮೇಣದ ಪತಂಗ : ಮೇಣದ ಪತಂಗಗಳಲ್ಲಿ ದೊಡ್ಡ ಮೇಣದ ಪತಂಗ ಮತ್ತು ಸಣ್ಣ ಮೇಣದ ಪತಂಗ ಎಂಬ ಎರಡು ಪ್ರಭೇದಗಳಿದ್ದು ದೊಡ್ಡ ಮೇಣದ ಪತಂಗವು ನಸು ಕಂದು ಬಣ್ಣದಿಂದ ಕೂಡಿ ಸುಮಾರು ೧೦ – ೧೫ ಮಿ.ಮೀ. ಉದ್ದ ಹಾಗೂ ಸಣ್ಣ ಮೇಣದ ಪತಂಗವು ಬಿಳಿ ಮಿಶ್ರಿತ ಬೂದು ಬಣ್ಣದಿಂದ ಕೂಡಿ ೮ – ೧೨ ಮಿ.ಮೀ. ಉದ್ದವಿರುತ್ತದೆ (ಚಿತ್ರ ೪೪). ಮೇಣದ ಪತಂಗಗಳು ಎಲ್ಲಾ ಪ್ರಭೇದಗಳ ಜೇನು ನೊಣಗಳ ಎರಿಗಳ ಮೇಲೆ ವರ್ಷವಿಡಿ ಕಂಡು ಬಂದರೂ ಬಲಹೀನ ಜೇನು ಕುಟುಂಬಗಳಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ.

ಜೀವನ ಚರಿತ್ರೆ :  ಕೋಶಾವಸ್ಥೆಯಿಂದ ಹೊರಬಂದ ಹೆಣ್ಣು ಮತ್ತು ಗಂಡು ಪತಂಗಗಳ ಲೈಂಗಿಕ ಸಂಪರ್ಕದ ನಂತರ ಹೆಣ್ಣು ಪತಂಗಗಳು ಜೇನು ಪೆಟ್ಟಿಗೆಯ ದ್ವಾರ ಅಥವಾ ಸಂದುಗಳ ಮೂಲಕ ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಪೆಟ್ಟಿಗೆ ಸೇರುತ್ತವೆ. ಬಲಹೀನ ಕುಟುಂಬಗಳಿಗೆ ಹಗಲು ಸಮಯದಲ್ಲಿಯೇ ಒಳ ಸೇರಲು ಹಿಂಜರಿಯದ ಹೆಣ್ಣು ಪತಂಗಗಳು ಎರಿಯ ಮೇಲೆ ಸುಮಾರು ೩೦೦ – ೫೦೦ ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡುತ್ತವೆ. ಮೊಟ್ಟೆಗಳು ಒಡೆದ ೮ – ೧೦ ದಿನಗಳಲ್ಲಿ ಸಣ್ಣ ಬಿಳಿ ಬಣ್ಣದ ಮರಿಗಳು ಹೊರ ಬಂದು ಅಡಿ ಮಣೆಯ ಮೇಲೆ ಬಿದ್ದ ಮೇಣ, ಪರಾಗವಿದ್ದಂತಹ ಎರಿಗಳು, ಜೇನುತುಪ್ಪದ ಎರಿಗಳು, ಜೇನುತುಪ್ಪ ತೆಗೆದ ಎರಿಗಳು ಹೀಗೆ ಎಲ್ಲಾ ಬಗೆಯ ಎರಿಗಳನ್ನು ತಿನ್ನುತ್ತಾ ಸುಮಾರು ೧೮ – ೨೦ ದಿನಗಳಲ್ಲಿ ಎರಿಯ ಮಧ್ಯದವರೆಗೂ ರೇಷ್ಮೆ ಮತ್ತು ಹಿಕ್ಕೆಗಳಿಂದ ಹೆಣೆದಿರುವ ಸುರಂಗ ಮಾರ್ಗಗಳನ್ನು ವಿಸ್ತರಿಸುತ್ತವೆ. ಇದರಿಂದಾಗಿ ಎರಿಗಳು ಕಪ್ಪು ಬಣ್ಣಕ್ಕೆ ತಿರುಗಿ ಸಂಪೂರ್ಣವಾಗಿ ನಾಶವಾಗುತ್ತವೆ (ಚಿತ್ರ ೪೩).

ಪೂರ್ಣ ಬೆಳೆದ ಮರಿಗಳು ಮುಸುಕು ಬೂದು ಬಣ್ಣ ಸುಮಾರು ೨.೦ – ೨.೫ ಸೆಂ.ಮೀ. ಉದ್ದ. ಜೇನು ಪೆಟ್ಟಿಗೆಯ ಸಂದುಗೊಂದುಗಳಲ್ಲಿ ತಾವೇ ವಿಸರ್ಜಿಸಿದ ಪದಾರ್ಥಗಳೊಂದಿಗೆ ಬಿಳಿ ರೇಷ್ಮೆ ಸುರಂಗಗಳಲ್ಲಿ ಕೋಶಾವಸ್ಥೆ ಹೊಂದಿ ಸುಮಾರು ೩೯ – ೬೦ ದಿನಗಳಲ್ಲಿ ಬೆಳೆದು ಪ್ರೌಢ ಪತಂಗಗಳಾಗಿ ಹೊರಬಂದು ಒಂದು ವಾರದವರೆಗೂ ಜೀವಿಸುತ್ತವೆ. ಅದೇ ರೀತಿ ಸಣ್ಣ ಮೇಣದ ಪತಂಗ ೮ ವಾರಗಳಲ್ಲಿ ಬೆಳವಣಿಗೆಯಾಗುತ್ತದೆ. ಪತಂಗದ ಮರಿಗಳ ಹಾವಳಿ ಮುಂದುವರಿದಂತೆ ಸ್ಥಳದ ಅಭಾವದಿಂದಾಗಿ ರಾಣಿಯು ಮೊಟ್ಟೆಗಳನ್ನು ಇಡುವುದು ಕಡಿಮೆಯಾಗುತ್ತದೆ. ಕೆಲಸಗಾರ ನೊಣಗಳು ಮರಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಎರಿಗಳ ಅಡಿಮಣೆ ಅತವಾ ಜೇನು ಪೆಟ್ಟಿಗೆಯ ಮೂಲೆಗಳಲ್ಲಿ ಗುಂಪುಗೂಡುತ್ತವೆ. ಶೀಘ್ರವೇ ಜೇನು ಕುಟುಂಬಗಳು ಬಲಹೀನವಾಗಿ ಪೆಟ್ಟಿಗೆಯನ್ನು ಬಿಟ್ಟು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೊಡ್ಡ ಮೇಣದ ಪತಂಗಕ್ಕೆ ಹೋಲಿಸಿದರೆ ಸಣ್ಣ ಮೇಣದ ಪತಂಗದ ಬಾಧೆ ಕಡಿಮೆ. ಏಕೆಂದರೆ ಸಣ್ಣಮೇಣದ ಪತಂಗ ಕಡಿಮೆ ಮೊಟ್ಟೆಗಳನ್ನಿಟ್ಟು ಕಡಿಮೆ ಪ್ರಮಾಣದ ಮೇಣವನ್ನು ತಿನ್ನುವುದರಿಂದ ಮರಿಗಳಿಂದ ಹಾನಿಯು ಕಡಿಮೆಯಾಗುತ್ತದೆ.

ದೊಡ್ಡ ಮೇಣದ ಪತಂಗ ಮತ್ತು ಅದರ ಮರಿಹುಳು. ಇವುಗಳ ಹಾವಳಿಯಿಂದ ನಾಶವಾಗಿರುವ ಎರಿ

ನಿಯಂತ್ರಣ : ಕೀಟಪೀಡೆಗಳ ಹಾವಳಿಗೆ ತುತ್ತಾದ ಜೇನು ಕುಟುಂಬಗಳನ್ನು ರಕ್ಷಿಸಲು ಯಾವುದೇ ಕೀಟ ನಾಶಕಗಳ ಬಳಕೆ ಜೇನು ಕುಟುಂಬಗಳಿಗೂ ಮಾರಕವಾಗುವುದರಿಂದ ಸೂಕ್ತ ನಿರ್ವಹಣಾ ಕ್ರಮಗಳಿಂದ ಜೇನು ಕುಟುಂಬಗಳನ್ನು ರಕ್ಷಿಸಬಹುದಾಗಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಉತ್ತಮ ಗುಣಮಟ್ಟದ ಜೇನು ಪೆಟ್ಟಿಗೆಗಳನ್ನು ಬಳಸುವುದು, ಅವಶ್ಯಕವಿಲ್ಲದ ಎರಿಗಳಿಂದ ಕೂಡಿದ ಚೌಕಟ್ಟುಗಳನ್ನು ಜೇನು ಕುಟುಂಬದಿಂದ ಹೊರ ತೆಗೆಯುವುದು, ಪೆಟ್ಟಿಗೆಗಳಲ್ಲಿ ಸಂದು ಮತ್ತು ಬಿರುಕುಗಳಿದ್ದಲ್ಲಿ ಸುಣ್ಣ ಮತ್ತು ಗಂಧಕದ ಪುಡಿಯಿಂದ ತಯಾರಿಸಿದ ಅಂಟಿನಿಂದ ಮುಚ್ಚುವುದು, ಬಲಹೀನ ಕುಟುಂಬಗಳನ್ನು ಒಂದುಗೂಡಿಸಿ ಬಲಯುತಗೊಳಿಸುವುದು, ಆಗಾಗ್ಗೆ ಜೇನು ಕುಟುಂಬಗಳನ್ನು ಪರೀಕ್ಷಿಸಿ ಅಡಿಮಣೆಯನ್ನು ಶುಚಿಗೊಳಿಸುವುದು, ಉಪಯೋಗಿಸಿದ ಖಾಲಿ ಜೇನು ಎರಿಗಳು, ಪೆಟ್ಟಿಗೆಯ ಭಾಗಗಳು, ಜೇನಿನ ಮೇಣ ಮತ್ತು ಇತರೆ ಭಾಗಗಳನ್ನು ಒಂದರ ಮೇಲೊಂದು ಗಾಳಿಯಾಡದಂತೆ ಜೋಡಿಸಿ ಕೋಣೆಗಳಲ್ಲಿ ದಾಸ್ತಾನು ಮಾಡುವುದು, ಗ್ಯಾಮ ಕಿರಣಗಳನ್ನು ಉಪಯೋಗಿಸಿ ಮೇಣದ ಪತಂಗಗಳನ್ನು ಸಾಯಿಸುವುದು, ಗಂಡು ಪತಂಗಗಳನ್ನು ನಿರ್ಲಿಂಗಗೊಳಿಸುವುದು,  ಜೈವಿಕ ನಿಯಂತ್ರಣದಲ್ಲಿ ಮೇಣದ ಪತಂಗಗಳನ್ನು ಸೂಕ್ಷ್ಮಾಣು ಕೀಟನಾಶಕಗಳಾದ ಬ್ಯಾಸಿಲಸ್ ತುರಿಜಿಯೆಂಸಿಸ್ ಉಪಯೋಗಿಸಿ ನಿಯಂತ್ರಿಸುವುದು ಮತ್ತು ಎಥಿಲೀನ್ ಆಕ್ಸೈಡ್, ಮೀಥೈಲ್ ಬ್ರೋಮೈಡ್, ಇಂಗಾಲದ ಡೈ ಆಕ್ಸೈಡ್, ಪ್ಯಾರಡೈಕ್ಲೋರೊಬೆಂಜಿನ್ ಮುಂತಾದವುಗಳ ಹೊಗೆಯನ್ನು ನೀಡುವುದರಿಂದ ಮೇಣದ ಪತಂಗಗಳನ್ನು ನಿಯಂತ್ರಿಸಬಹುದಾಗಿದೆ. ಈ ಹೊಗೆ ರೂಪದ ಕೀಟನಾಶಕಗಳನ್ನು ಗಾಳಿಯಾಡದಿರುವ ಪೆಟ್ಟಿಗೆಗಳಲ್ಲಿ ಹಾವಳಿಗೊಳಗಾಗಿರುವ ಎರಿಗಳನ್ನಿಟ್ಟು ಕೀಟನಾಶಕ ಧೂಪಕವನ್ನು ಹಾಕುವುದರಿಂದ ಪತಂಗದ ಹಂತಗಳು ಸಾಯುತ್ತವೆ.

ಕಡಜಗಳು : ಕಡಜಗಳ ಪ್ರಭೇದಗಳು ಜೇನುನೊಣಗಳನ್ನು ಹಿಡಿದು ತಿನ್ನುತ್ತವೆ. ಕಡಜಗಳ ಹಾವಳಿ ಎಲ್ಲಾ ಪ್ರಭೇದಗಳ ಜೇನುನೊಣಗಳಲ್ಲಿ ಕಂಡು ಬಂದರೂ ಯೂರೋಪಿಯನ್ ಜೇನು ನೊಣಗಳ ಕುಟುಂಬಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ. ಜೇನು ಕುಟುಂಬಗಳು ಬಲಿಷ್ಠವಾಗಿದ್ದಲ್ಲಿ ಹೆಚ್ಚಾಗಿ ದಾಳಿ ನಡೆಸುವ ಕಡಜಗಳು ಪ್ರತಿ ವರ್ಷ ಅನೇಕ ಜೇನು ಕುಟುಂಬಗಳನ್ನು ನಾಶ ಮಾಡುತ್ತವೆ. ಮಳೆಗಾಲದಲ್ಲಿ ಇವುಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದ್ದು ಪಶ್ಚಿಮ ಘಟ್ಟಗಳ ಜಿಲ್ಲೆಗಳಾದ ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾಂ, ಚಿಕ್ಕಮಂಗಳೂರು ಮತ್ತು  ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಹಾವಳಿಯನ್ನುಂಟುಮಾಡುತ್ತವೆ.

ಕಡಜಗಳು ಜೇನುಪೆಟ್ಟಿಗೆಗಳ ದ್ವಾರ, ಆಹಾರ ಶೇಖರಣಾ ಸಮಯದಲ್ಲಿ ಹೂಗಳ ಮೇಲೆ ಮತ್ತು ಹಾರಾಟದ ವೇಳೆಯಲ್ಲಿ ಜೇನುನೊಣಗಳ ಮೇಲೆ ದಾಳಿಮಾಡಿ ಹಿಡಿಯುತ್ತವೆ. ಜೇನುನೊಣಗಳನ್ನು ಹಿಡಿದು ತಿನ್ನುವ ಕಡಜಗಳ ಮುಖ್ಯ ಪ್ರಭೇದಗಳಲ್ಲಿ ವೆಸ್ಪ ಮ್ಯಾಂಡೇರಿನ. ವೆಸ್ಪ ಓರಿಯಂಟಲಿಸ್, ವೆಸ್ಪ ಕ್ಯ್ರಾಬ್ರೊ, ವೆಸ್ಪ ಮ್ಯಾಗ್ನಿಫೆರಾಗಳು ಪ್ರಪಂಚದಾದ್ಯಂತ ಕಂಡು ಬಂದರೆ ಏಷ್ಯಾ ಖಂಡದಲ್ಲಿ ವೆಸ್ಪ ಬೆಸಾಲಿಸ್, ವೆಸ್ಪ ಸಿಂಕ್ಟ, ವೆಸ್ಪ ಡ್ಯುಕಾಲಸ್, ವೆಸ್ಟ, ಮಾಗ್ನಿಪಿಕ, ವೆಸ್ಪಟ್ರೋಪಿಕಾ, ವೆಸ್ಪ ವೆಲುಂಟಿನಾ, ವೆಸ ಅಪಿಲಿನಾಲಿಸ್, ವೆಸ್ಪ ಅರೇರಿಯಾ ಪ್ರಭೇದಗಳು ಸಾಮಾನ್ಯವಾಗಿ ಕಂಡು ಬರುತ್ತವೆ (ಚಿತ್ರ ೪೪). 

ಜೇನುನೊಣಗಳ ಪರಭಕ್ಷಕ ಕಡಜ ವೆಸ್ಪ ಮ್ಯಾಂಡೇರಿನ.

 ವೆಸ್ಪ ಮ್ಯಾಂಡೇರಿನಾ  ಅತಿ ದೊಡ್ಡ ಕಡಜವಾಗಿದ್ದು ಇದರ ದೇಹ ೩ – ೪ ಸೆಂ.ಮೀ. ಉದ್ದವಿರುತ್ತದೆ. ಜೇನುನೊಣಗಳು ಮತ್ತು ಇತರೆ ಕಡಜಗಳನ್ನು ಸಹಾ ಇದು ಬೇಟೆಯಾಡುತ್ತದೆ. ಕಡಜಗಳ ಗೂಡುಗಳನ್ನು ನಾಶ ಮಾಡುವುದು ಮತ್ತು ಸೂಕ್ತ ವಿಧಾನಗಳಿಂದ ಅವುಗಳನ್ನು ಹಿಡಿದು ಸಾಯಿಸುವುದು ಹಾಗೂ ಕಡಜದ ಬೋನುಗಳನ್ನು ಜೇನು ಕುಟುಂಬದ ದ್ವಾರದಲ್ಲಿ ಇಡುವುದರಿಂದ ಕಡಜದ ಹಾವಳಿಯನ್ನು ತಡೆಗಟ್ಟಬಹುದು.

ಇರುವೆಗಳು

ಇರುವೆಗಳು ಜೇನುನೊಣಗಳ ಸ್ವಾಭಾವಿಕ ಶತ್ರುಗಳಾಗಿವೆ, ಜೇನು ಕುಟುಂಬಗಳನ್ನು ಭಕ್ಷಿಸುವ ಇರುವೆಗಳು ಜೇನುಗೂಡಿನ ಉತ್ಪನ್ನಗಳಾದ ಪರಾಗ, ಜೇನುತುಪ್ಪ, ಜೇನುಮೇಣ, ಜೇನುಮರಿಗಳು ಮತ್ತು ಪ್ರೌಢ ನೊಣಗಳನ್ನು ಕೊಂದು ತಿನ್ನುತ್ತವೆ. ಇದರಿಂದಾಗಿ ಜೇನು ಕುಟುಂಬಗಳು ನಾಶವಾಗುವುದಲ್ಲದೆ ಗೂಡು ಬಿಟ್ಟು ಪಲಾಯನಗೊಳ್ಳುತ್ತವೆ. ಏಷಿಯಾದಲ್ಲಿ ಜೇನು ಕುಟುಂಬಗಳನ್ನು ಭಕ್ಷಿಸುವ ಇರುವೆಗಳೆಂದರೆ ಬಡಗಿ ಇರುವೆ, ಕೆಂಜುಗ, ಗೊದ್ದ, ಮುಂತಾದವುಗಳು. ಭಾರತದಲ್ಲಿ ಅದರಲ್ಲೂ ಕರ್ನಾಟಕದ ಕೆಲವು ಭಾಗಗಳಲ್ಲಿ ಕೆಂಜಿಗದ ಕಾಟವು ಹೆಚ್ಚಾಗಿದ್ದು ಕೋಲುಜೇನು ಸೇರಿದಂತೆ ಎಲ್ಲಾ ಜಾತಿಯ ಪ್ರಭೇದಗಳನ್ನು ತೊಂದರೆಗೊಳಪಡಿಸುತ್ತವೆ. ಬಡಗಿ ಇರುವೆಯ ಹಾವಳಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿದ್ದು ಗಮನೀಯ ಹಾನಿಯನ್ನುಂಟು ಮಾಡುತ್ತವೆ.

ಇರುವೆಗಳಿಂದ ಜೇನು ಕುಟುಂಬಗಳನ್ನು ರಕ್ಷಿಸಲು ಮಧುವನದ ಸುತ್ತಲೂ ನೈರ್ಮಲ್ಯತೆ ಕಾಪಾಡುವದು. ಇರುವೆ ಗೂಡುಗಳನ್ನು ಪತ್ತೆ ಮಾಡಿ ಕೀಟನಾಶಕಗಳನ್ನು ಸಿಂಪಡಿಸುವುದು ಹಾಗೂ ಜೇನು ಪೆಟ್ಟಿಗೆಯ ಆಧಾರಸ್ಥಂಭದ ಸುತ್ತಲೂ ಕೀಟನಾಶಕ ದ್ರಾವಣಗಳು ಮತ್ತು ಇರುವೆ ಭಾವಿಗಳನ್ನು ನಿರ್ಮಿಸುವುದರಿಂದ ತಡೆಗಟ್ಟಬಹುದಾಗಿದೆ.

ಪಕ್ಷಿಗಳು

ಪಕ್ಷಿಗಳು ಜೇನುನೊಣಗಳ ಸಾಮಾನ್ಯ ಭಕ್ಷಕಗಳಾಗಿವೆ. ಇವುಗಳು ಜೇನು ನೊಣಗಳನ್ನು ಹಾರಾಟದ ಸಮಯದಲ್ಲಿ, ಹೂಗಳಿಂದ ಆಹಾರವನ್ನು ಶೇಖರಿಸುವಾಗ ಮತ್ತು ಕುಟುಂಬಗಳ ದ್ವಾರದಲ್ಲಿ ಹಿಡಿದು ತಿನ್ನುತ್ತವೆ. ಇವುಗಳು ಸಾಮಾನ್ಯವಾಗಿ ಕೀಟಾಹಾರಿ ಪಕ್ಷಿಗಳೇ ಆಗಿದ್ದೂ ಅವುಗಳಲ್ಲಿ ಪೆರ್ನಿಸ್ ಎಪಿವೋರಸ್ ಪ್ರಭೇದ ಮುಖ್ಯವಾದುದಾಗಿದೆ.

ಜೇನುನೊಣಗಳನ್ನು ಹಿಡಿದು ತಿನ್ನುವ ಮೇರೋಪ್ಸ್ ಎಂಬ ಪಕ್ಷಿ ಕುಲದಲ್ಲಿ ೨೧ ಪ್ರಭೇದಗಳಿರುತ್ತವೆ. ಈ ಪಕ್ಷಿಗಳು ಕೀಟಭಕ್ಷಕಗಳಾಗಿದ್ದು ಅವುಗಳಲ್ಲಿ ಮೇರೋಪ್ಸ್  ಎಪಿನಿಸ್ಟರ್ ಎಂಬ ಪಕ್ಷಿ  ೩೦೦ ವಿವಿಧ ಬಗೆಯ ಕೀಟ ಪ್ರಭೇದಗಳನ್ನು ಯೂರೋಪ್, ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ವಿಸ್ತರಿಸಿ ಕಬಳಿಸುವುದು ಕಂಡುಬರುತ್ತದೆ. ನೀಲಿ ಮೂತಿಯ ಮೇರೋಪ್ಸ್ ಪೆರ್ಸಿಸ್ಕಸ್ ಮತ್ತು ಹಸಿರು ಬಣ್ಣದ ಮೇರೋಪ್ಸ್ ಓರಿಯಂಟಾಲಿಸ್‌ಗಳು ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಸಾಮಾನ್ಯವಾಗಿ ಕಂಡು ಬಂದರೆ, ಆಸ್ಟ್ರೇಲಿಯಾದಲ್ಲಿ ರೈನ್‌ಬೋ ಪಕ್ಷಿ ಮೇರೋಪ್ಸ್ ಆರನೆಟಸ್ ಜೇನು ನೊಣಗಳ ಸಾಮಾನ್ಯ ಶತ್ರುವಾಗಿದೆ.

ಪಕ್ಷಿಗಳು ಕೆಲವು ಸಂದರ್ಭಗಳಲ್ಲಿ ಜೇನುನೊಣಗಳನ್ನು ಕಬಳಿಸುತ್ತವೆ. ಮಧುವನದ ಹತ್ತಿರದಲ್ಲಿ ಇವು ನೆಲಸಿ ಅಗತ್ಯವಿದ್ದಷ್ಟು ಕೀಟಗಳು ಸಿಗದಿದ್ದಲ್ಲಿ ಮತ್ತು ವಲಸೆ ಹೋಗುವಾಗ ಮಧುವನಗಳನ್ನು ಗಮನಿಸಿದಲ್ಲಿ ಹೆಚ್ಚಾಗಿ ಕಬಳಿಸುವ ಸಾಧ್ಯತೆ ಇರುತ್ತದೆ. ಪಕ್ಷಿಗಳು ಸುಮಾರು ೧೬ ಜೇನು ನೊಣಗಳನ್ನು ಕೊಂದರೂ ಕನಿಷ್ಠ ಒಂದು ಜೇನುನೊಣವನ್ನು ತಿನ್ನುವ ಕೀಟಭಕ್ಷಕವನ್ನು ಸಹಾ ನಾಶಪಡಿಸುತ್ತವೆ. ಜೇನುನೊಣಗಳನ್ನು  ಭಕ್ಷಿಸುವ ಇನ್ನುಳಿದ ಪಕ್ಷಿಗಳೆಂದರೆ ರಾಜ ಪಕ್ಷಿಗಳು, ಫ್ಲೈಕ್ಯಾಚರ್‌ಗಳು, ಡ್ರಾಂಗೋಗಳು. ಮರಕುಟುಕ ಮುಂತಾದವು. ಮರಕುಟುಕಗಳ ಕೊಕ್ಕು ಚೂಪಾಗಿರುವುದರಿಂದ ಮತ್ತು ನಾಲಗೆ ಅಂಟಿನಿಂದ ಕೂಡಿರುವುದರಿಂದ ಜೇನುನೊಣಗಳನ್ನು ಸುಲಭವಾಗಿ ಹಿಡಿದು ತಿನ್ನಲು ಅನುಕೂಲವಾಗುತ್ತದೆ. ಯೂರೋಪ್‌ನ ಕೆಲವು ಭಾಗಗಳಲ್ಲಿ ಹಸಿರು ಮರಕುಟುಕವು ಹೆಚ್ಚಿನ ಹಾವಳಿಯನ್ನುಂಟು ಮಾಡುತ್ತದೆ. ಇದೇ ರೀತಿ ಶೀತದಿಂದ ಕೂಡಿದ ವಾತಾವರಣದಲ್ಲಿ ಪಕ್ಷಿಗಳು ಯೂರೋಪಿಯನ್ ಜೇನು ಕುಟುಂಬಗಳನ್ನು ನಾಶ ಪಡಿಸಿರುವ ನಿದರ್ಶನಗಳು ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶಗಳಾದ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬಂದರೆ, ಮೈದಾನ ಪ್ರದೇಶಗಳಲ್ಲಿ ಚಳಿಗಾಲ ಮತ್ತು ಮಳೆಗಾಲದ ಮೋಡ ಕವಿದ ದಿನಗಳಲ್ಲಿ ಜೇನುನೊಣಗಳನ್ನು ಭಕ್ಷಿಸುತ್ತವೆ.

ಮಧುವನದ ಸುತ್ತಲಿನ ಪಕ್ಷಿಗಳ ಗೂಡನ್ನು ನಾಶಮಾಡುವುದು, ಬೆದರಿಸುವುದು ಮತ್ತು ಕಾವಲುಗಾರ ಗೊಂಬೆಗಳನ್ನು ಮಧುವನದ ಸುತ್ತಲೂ ನಿರ್ಮಿಸುವುದರಿಂದ ಪಕ್ಷಿಗಳ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ.

ಸಸ್ತನಿ ಶತ್ರುಗಳು

ಸಸ್ತನಿಗಳು ಕಾಲುಗಳ ಉಗುರುಗಳಿಂದ ಜೇನುಗೂಡುಗಳನ್ನು ಕೆಡವಿ ಜೇನು ಮತ್ತು ಮೇಣವನ್ನು ತಿನ್ನುವ ಶಕ್ತಿಯನ್ನು ಪಡೆದಿವೆ. ಸಸ್ತನಿಗಳಲ್ಲಿ ಪ್ರಮುಖವಾದವುಗಳು ಕರಡಿಗಳು. ಇವುಗಳ ೧೦ ಪ್ರಭೇದಗಳಲ್ಲಿ ೫ ಪ್ರಭೇದಗಳು ಜೇನುಗೂಡುಗಳನ್ನು ಏಷ್ಯಾ, ಯೂರೋಪ್ ಮತ್ತು ಉತ್ತರ ಅಮೇರಿಕೆಗಳಲ್ಲಿ ಬೇಟೆಯಾಡುವುದು ಕಂಡು ಬರುತ್ತದೆ. ಅವುಗಳಲ್ಲಿ ಪ್ರಮುಖವೆಂದರೆ ಉತ್ತರ ಅಮೇರಿಕಾ ಮತ್ತು ಕೆನಡಾದ ಕಪ್ಪು ಕರಡಿ, ಯುರೋಪ್ ಮತ್ತು ಏಷ್ಯಾಗಳ ಬೂದು ಕರಡಿ, ಭಾರತ ಮತ್ತು ಶ್ರೀಲಂಕಾಗಳ ಕಪ್ಪು ಕರಡಿಗಳಾಗಿರುತ್ತವೆ. ಇದೇ ರೀತಿ ಇಲಿಗಳು, ಕೋತಿಗಳು, ಚಿಂಪಾಂಜಿಗಳು, ಗೊರಿಲ್ಲಾಗಳು ಹಾಗೂ ಮನುಷ್ಯನು ಸೇರಿದಂತೆ ಅನೇಕ ಸಸ್ತನಿಗಳು ಜೇನುನೊಣಗಳ ಶತ್ರುಗಳಾಗಿವೆ.

ನುಸಿಗಳು

ಜೇನುನೊಣಗಳು ಅನೇಕ ರೀತಿಗಳಲ್ಲಿ ಶರೀರದ ಹೊರಗೆ ಮತ್ತು ಒಳಗೆ ಬಾಧಿಸುವ ನುಸಿಗಳ ಹಾವಳಿಗೆ ತುತ್ತಾಗುತ್ತವೆ. ಜೇನುನೊಣಗಳನ್ನು ಪೀಡಿಸುವ ಒಳ ನುಸಿಗಳಲ್ಲಿ ಆಕ್ಯಾರಾಪಿಸ್ ಊಡಿ ಮುಖ್ಯವಾದರೆ ಹೊರ ನುಸಿಗಳಲ್ಲಿ ಟ್ರೋಪಿಲಿಲ್ಯಾಪ್ಸ್ ಕ್ಲಾರಿಯೇ ಮತ್ತು ವ್ಯರೋವ ಡಿಸ್ಟ್ರಕ್ಟರ್‌ಗಳು ಮುಖ್ಯವಾದುವು. ಇವು ಅನೇಕ ಬಗೆಯ ರೋಗಾಣುಗಳ ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆಂದು ಪರಿಗಣಿಸಲಾಗಿದೆ. ನುಸಿಗಳು ಸೂಕ್ಷ್ಮ ಅಥವಾ ಬರಿಗಣ್ಣಿಗೆ ಕಾಣಬಹುದಾದ ರೆಕ್ಕೆ ರಹಿತ ಪ್ರಾಣಿಗಳಾಗಿದ್ದು ನಾಲ್ಕು ಜೊತೆ ಕಾಲುಗಳನ್ನು ಹೊಂದಿರುತ್ತವೆ. ಜೇನು ಕುಟುಂಬಗಳನ್ನು ಕಾಡುವ ವಿವಿಧ ರೀತಿಯ ನುಸಿಗಳ ವಿವರಣೆ ಮುಂದಿನಂತಿದೆ.

ಆಶ್ರಯದಾತ ನುಸಿಗಳು :  ಈ ನುಸಿಗಳು ಸಾಮಾನ್ಯವಾಗಿ ಹೂಗಳಲ್ಲಿನ ಪರಾಗವನ್ನು ತಿಂದು ಜೀವಿಸುತ್ತವೆ. ಹೂಗಳಿಂದ ಪರಾಗ ಮತ್ತು ಮಕರಂದ ಶೇಖರಿಸುವ ಸಮಯದಲ್ಲಿ ಜೇನುನೊಣಗಳಿಗೆ ಅಂಟಿಕೊಂಡು ಗೂಡನ್ನು ಪ್ರವೇಶಿಸಿ ತೊಂದರೆ ನೀಡುತ್ತವೆ. ಇವು ಜೇನು ಕುಟುಂಬಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲವಾದರೂ ಜೇನುನೊಣಗಳ ಆಹಾರ ಶೇಖರಣೆಯ ಮೇಲೆ ಪರಿಣಾಮ ಬೀರುವುದಲ್ಲದೆ ಅವುಗಳ ದೈನಂದಿನ ಕಾರ್ಯಗಳಿಗೆ ಅಡಚಣೆ ಮಾಡುತ್ತವೆ.

ಪರಾವಲಂಬಿ ನುಸಿಗಳು :  ಪರಾವಲಂಬಿ ನುಸಿಗಳು ಜೇನು ಕುಟುಂಬಗಳನ್ನು ಪೀಡಿಸುವ ಪ್ರಮುಖ ನುಸಿಗಳಾಗಿದ್ದು ಮುಖ್ಯವಾಗಿ ಜೇನು ಮರಿಗಳನ್ನು ಪೀಡಿಸುವುವಲ್ಲದೆ ಅನೇಕ ರೀತಿಯ ರೋಗಾಣುಗಳನ್ನು ಹರಡಲು ಕಾರಣವಾಗಿವೆ. ಜೇನು ಕುಟುಂಬಗಳ ನಾಲ್ಕು ಮುಖ್ಯ ಪರಾವಲಂಬಿ ನುಸಿಗಳೆಂದರೆ. ಯೂರೋಪಿಯನ್ ಜೇನು ಕುಟುಂಬಗಳನ್ನು ಪೀಡಿಸುವ ವ್ಯರೋವ ಡಿಸ್ಟ್ರಕ್ಟರ್, ತುಡುವೆ ಜೇನು ಕುಟುಂಬಗಳನ್ನು ಪೀಡಿಸುವ ವ್ಯರೋವ ಜೆಕೋಬ್ಸೋನಿ, ಯೂರೋಪಿಯನ್ ಜೇನು ಕುಟುಂಬ ಮತ್ತು ಹೆಜ್ಜೇನು ಗೂಡುಗಳನ್ನು ಪೀಡಿಸುವ ಟ್ರೋಪಿಲೀಲ್ಯಾಪ್ಸ್ ಕ್ಲಾರಿಯ ಗಳಾಗಿವೆ. ಆದರೆ ಅಕ್ಯಾರಾಪಿಸ್ ಊಡಿ ಎಲ್ಲಾ ಪ್ರಭೇದಗಳ ಪ್ರೌಢ ಜೇನುನೊಣಗಳನ್ನು ಪೀಡಿಸುತ್ತದೆ.

ಅಕ್ಯಾರಾಪಿಸ್ ಊಡಿ : ಜೇನುನೊಣಗಳ ಉಸಿರು ನಳಿಕೆಗಳಲ್ಲಿ ಜೀವಿಸುವ ಅಕ್ಯಾರಾಪಿಸ್ ಊಡಿ ಅಕ್ಯಾರಿನ್ ಎಂಬ ರೋಗವನ್ನುಂಟು ಮಾಡುತ್ತದೆ. ಹೆಣ್ಣು ನುಸಿ ಸುಮಾರು ೧೪೩ – ೧೭೪ ಮೈ. ಮೀ., ಗಂಡು ನುಸಿ ೧೨೫ – ೧೩೬  ಮೈ.ಮೀ ಉದ್ದವಿರುತ್ತದೆ. ಇವುಗಳ ದೇಹವು ದುಂಡಾಗಿ ಬಿಳಿ ಅಥವಾ ಹೊಳೆಯುವ ಬಿಳುಪಿನ ಬಣ್ಣದಿಂದ ಕುಡಿ ಹೊರ ಚರ್ಮ ಗಟ್ಟಿಯಾಗಿರುತ್ತದೆ. ಈ ನುಸಿಯ ಬಾಯಿ ಕೊಕ್ಕಿನಂತಹ ಉದ್ದವಾದ ಮತ್ತು ಬ್ಲೇಡಿನಂತೆ ಹರಿತವಾದ ಭಾಗಗಳಿಂದ ಕುಡಿ ಜೇನು ನೊಣದ ರಕ್ತವನ್ನು ಹೀರಲು ಸಹಕಾರಿಯಾಗುತ್ತದೆ (ಚಿತ್ರ ೪೫). ಹೆಣ್ಣು ನುಸಿಗಳು ಜೇನುನೊಣದ ಮೊದಲ ಉಸಿರು ರಂಧ್ರದ ಮೂಲಕ ಒಳಸೇರುತ್ತವೆ. ಈ ನುಸಿ ಸೂಕ್ಷ್ಮ ಗಾತ್ರದಾಗಿದ್ದು ನೊಣಗಳ ಉಸಿರು ನಾಳದಲ್ಲಿನ ರಕ್ತಕಣಗಳನ್ನು ಹೀರಿ ಜೀವಿಸುತ್ತದೆ. ಹೆಣ್ಣು ನುಸಿಗಳು ಜೇನು ನೊಣಗಳ ಉಸಿರು ನಾಳಗಳಲ್ಲಿ ಮೊಟ್ಟೆಗಳನ್ನಿಟ್ಟು ಮರಿಗಳು ಹೊರಬಂದು ರಕ್ತಕಣಗಳನ್ನು ಹೀರುವುದರಿಂದ ಗಾಯಗಳಾಗಿ ಉಸಿರು ನಾಳವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಬಾರಿ ಇವು ಉಸಿರು ನಾಳವನ್ನು ಅಡ್ಡಗಟ್ಟಿ ಜೇನುನೊಣಗಳು ಸಾಯುವ ಸಂಭವವೂ ಇರುತ್ತದೆ. ಇವುಗಳಿಂದ ಎಳೆ ನೊಣಗಳಿಗೆ ಹೆಚ್ಚಿನ ತೊಂದರೆಯಾಗುವುದಲ್ಲರ ಕೆಲವು ರೋಗಾಣುಗಳನ್ನು ಒಂದು ಕುಟುಂಬದಿಂದ ಮತ್ತೊಂದು ಕುಟುಂಬಕ್ಕೆ ಹರಡುತ್ತವೆ. ಅಕ್ಯಾರಾಪಿಸ್ ಡಾರ್ಸಾಲಿಸ್‌ಗಳಾಗಿವೆ.

ಅಕ್ಯಾರಾಪಿಸ್ ಊಡಿ ನುಸಿ

 ಅಕ್ಯಾರಿನ್ ರೋಗದ ಚಿಹ್ನೆಗಳು : ಜೇನು ಪೆಟ್ಟಿಗೆಯ ಹತ್ತಿರ ಹೆಚ್ಚು ಜೇನುನೊಣಗಳು ನಿಶ್ಯಕ್ತಿಯಿಂದ ಓಡಾಡುವುದು. ಜೇನುನೊಣಗಳ ರೆಕ್ಕೆಗಳು ಭಾರವಾಗಿ ಮಡಚಿಕೊಳ್ಳುವುದು, ಜೇನುನೊಣಗಳು ಹೆಚ್ಚಾಗಿ ಮಲವಿಸರ್ಜಿಸುವುದರಿಂದ ಹಳದಿ ಚುಕ್ಕೆಗಳ ಜೇನು ಪೆಟ್ಟಿಗೆಯ ಹತ್ತಿರ ಪೆಟ್ಟಿಗೆಯ ಹತ್ತಿರ ಕಾಣಿಸಿಕೊಳ್ಳುವುದು ಮತ್ತು ರೋಗಪೀಡಿತ ಜೇನುನೊಣಗಳ ಉಸಿರಿನ ನಾಳವು ಕಪ್ಪಾಗಿ ಕಾಣುತ್ತದೆ.

ಈ ನುಸಿಯನ್ನು ಮೆಂತಾಲ್ ಮತ್ತು ಫಾರ್ಮಿಕ್ ಆಮ್ಲಗಳ ಧೂಪವನ್ನು ಕೊಡುವುದರಿಂದ ನಿಯಂತ್ರಿಸಬಹುದಾಗಿದೆ. ೨೫ ಗ್ರಾಂ ಮೆಂತಾಲ್ ಪೊಟ್ಟಣವನ್ನು ಎರಿಗಳ ಮೇಲೆ ಇಡುವುದು ಮತ್ತು ಶೇಕಡಾ ೭೦ ರ ಫಾರ್ಮಿಕ್ ಆಮ್ಲವನ್ನು ನೆನೆಸಿದ ಹತ್ತಿಯೊಂದಿಗೆ ಜೇನು ಪೆಟ್ಟಿಗೆಯ ಅಡಿಮಣೆಯ ಮೇಲೆ ವಾರಕ್ಕೊಮ್ಮೆ ಇಡುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು. ಇದರ ಜೊತೆಗೆ ಡೈಕ್ಲೋರೋವಾಸ್, ಬ್ರೋಮೋಪ್ರೋಲೈಟ್, ಡೈಕ್ಲೋರೋಬೆಂಜಿಲೇಟ್‌ಗಳು ಈ ನುಸಿಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ವ್ಯರೋವ ಜಕೋಬಾನಿ / ವ್ಯರೋವ ಡಿಸ್ಟ್ರಕ್ಟರ್ : ವ್ಯರೋವ ನುಸಿ ಜೇನುನೊಣಗಳಿಗೆ ಅತಿ ಹಾನಿಕಾರಕವಾಗಿದ್ದು ಅನೇಕ ಜೇನು ಕುಟುಂಬಗಳು ಇದರ ಹಾನಿಯಿಂದ ನಾಶವಾಗಿರುತ್ತವೆ. ಈ ನುಸಿಯನ್ನು ೧೯೦೪ ರಲ್ಲಿ ಒಡೆಮಾನ್ಸ್ ಎಂಬುವವರು ಜಾವಾದಿಂದ ತುಡುವೆ ಜೇನು ಕುಟುಂಬದಲ್ಲಿ ಮತ್ತು ಡೆಲ್ಪನೆಡೋ ಬೇಕರ್‌ರು ಫಿಲಿಪೈನ್ಸ್‌ನಲ್ಲಿ ಯೂರೋಪಿಯನ್ ಜೇನು ಕುಟುಂಬಗಳಲ್ಲಿ ಮೊಟ್ಟಮೊದಲಿಗೆ ೧೯೬೩ ರಲ್ಲಿ ಗುರುತಿಸಿದರು. ಇತ್ತೀಚಿಗೆ ಇದು ಸುಮಾರು ೫೬ ದೇಶಗಳಲ್ಲಿ ಕಂಡು ಬರುತ್ತಿದ್ದು ಯೂರೋಪಿಯನ್ ಜೇನು ಕುಟುಂಬದಲ್ಲಿ ವಂಶಾಭಿವೃದ್ಧಿ ಹೊಂದುವ ವ್ಯರೋವ ನುಸಿಯನ್ನು ವ್ಯರೋವ ಡಿಸ್ಟ್ರಕ್ಟರ್ ಎಂದು ಮತ್ತು ತುಡುವೆ ಜೇನು ಕುಟುಂಬಗಳಲ್ಲಿ ವಂಶಾಭಿವೃದ್ಧಿ ಹೊಂದುವ ವ್ಯರೋವವನ್ನು ವ್ಯರೋವ ಜಕೋಬ್ಲಾನಿ ಎಂದು ಆಸ್ಟ್ರೇಲಿಯಾದ ಡಾ. ಅಂಡರ್‌ಸನ್‌ಮತ್ತು ಟ್ರೂಮನ್‌ರವರು ೨೦೦೦ ದಲ್ಲಿ ಮರುನಾಮಕರಣ ಮಾಡಿದರು. ಈ ನುಸಿಗಳು ಜೇನು ಕುಟುಂಬಗಳಲ್ಲಿ ರೋಗಗಳನ್ನುಂಟು ಮಾಡಬಲ್ಲ ಕೆಲವು ನಂಜಾಣುಗಳನ್ನು ಹರಡಲು ಕಾರಣವಾಗಿರುತ್ತವೆ. ಬೆಳೆದ ವ್ಯರೋವ ನುಸಿ ಸುಮಾರು ೧ ರಿಂದ ೧.೨ ಮಿ.ಮೀ. ಉದ್ದ ಮತ್ತು ೧.೫ ರಿಂದ ೧.೬ ಮಿ.ಮೀ. ದಪ್ಪ, ಕಣ್ಣಿಗೆ ಕಾಣುತ್ತದೆ (ಚಿತ್ರ ೪೬). ಸಾಮಾನ್ಯವಾಗಿ ನುಸಿಯ ಜೇನುನೊಣಗಳ ತಲೆ. ಎದೆ ಭಾಗ ಮತ್ತು ಹೊಟ್ಟೆಯ ಭಾಗಗಳಲ್ಲಿ ಅಡಗಿಸಿಕೊಂಡಿದ್ದು ಹೊಟ್ಟೆ ಭಾಗದ ತುಂಡುಗಳಿಂದ ರಕ್ತವನ್ನು ಹೀರುತ್ತವೆ. ರಕ್ತ ಹೀರುವುದರಿಂದ ಜೇನುಮರಿಗಳು ಸಾಯುತ್ತವೆ.

ವ್ಯರೋವ ಡಿಸ್ಟ್ರಕ್ಟರ್ ನುಸಿ

 ಹೆಣ್ಣು ನುಸಿಯು ಜೇನುಮರಿಗಳು ಕಣಗಳ ಕವಚ ಹಾಕುವುದಕ್ಕೆ ಸ್ವಲ್ಪ ಮೊದಲು ಜೇನುಮರಿಗಳ ಕಣಗಳನ್ನು ಸೇರಿ ರಕ್ತವನ್ನು ಹೀರಿ, ಕಣಗಳಲ್ಲಿಯೇ ವಂಶಾಭಿವೃದ್ಧಿಯನ್ನು ಪ್ರಾರಂಭಿಸುತ್ತವೆ. ಫಲಿತ ಹೆಣ್ಣು ನುಸಿ ಸುಮಾರು ೧೨ – ೨೧ ಮೊಟ್ಟೆಗಳನ್ನಿಡುತ್ತವೆ. ೪೮ ಗಂಟೆಗಳಲ್ಲಿ ಮರಿಗಳಾಗಿ ಮೊಟ್ಟೆಗಳಿಂದ ಹೊರಬಂದು ಸುಮಾರು ೫ – ೭ ದಿನಗಳಲ್ಲಿ ಪೂರ್ಣವಾಗಿ ಬೆಳೆದು ಜೇನುನೊಣಗಳೊಂದಿಗೆ ಹೊರ ಬರುತ್ತವೆ. ಗಂಡು ನುಸಿಗಳು ಲೈಂಗಿಕ ಸಂಪರ್ಕವಾದ ನಂತರ ಜೇನುಮರಿಯ ಕೋಶದ ಕಣಗಳಲ್ಲಿಯೇ ಸಾಯುತ್ತವೆ.

ವ್ಯರೋವ ನುಸಿಗಳ ಬಾಧೆ ತುಡುವೆ ಮತ್ತು ಯೂರೋಪಿಯನ್ ಜೇನು ಕುಟುಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಕೋಲು ಜೇನು ಮತ್ತು ಹೆಜ್ಜೇನು ಕುಟುಂಬಗಳಲ್ಲಿ ಇವುಗಳ ಬಾಧೆ ತೀರ ವಿರಳವಾಗಿವೆ. ವ್ಯರೋವ ಜಕೋಬ್ಲಾನಿ ಯು ತುಡುವೆ ಜೇನಿನ ಕೆಲಸಗಾರ ಮತ್ತು ಗಂಡು ಜೇನು ಮರಿಗಳೆರಡನ್ನೂ ಪೀಡಿಸಿ ಗಂಡು ಜೇನು ಮರಿಗಳಿಂದ ಕೂಡಿದ ಕಣಗಳಲ್ಲಿ ಹೆಚ್ಚಾಗಿ ವಂಶಾಭಿವೃದ್ಧಿಯಾಗುತ್ತದೆ. ಆದರೆ, ವ್ಯರೋವ ಡಿಸ್ಟ್ರಕ್ಷರ್ ಯೂರೋಪಿಯನ್ ಜೇನು ಕುಟುಂಬದ ಕೆಲಸಗಾರ ಮತ್ತು ಗಂಡು ಜೇನು ಮರಿಗಳೆರಡರಲ್ಲೂ ವಂಶಾಭಿವೃದ್ಧಿಯಾಗಿ ಬೆಳವಣಿಗೆಯಾಗುತ್ತವೆ. ವ್ಯರೋವ ನುಸಿಗಳು ಜೇನು ಸಾಕಣೆಯ ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತದೆ. ಆದರೆ ಇವು ಮುಖ್ಯವಾಗಿ ಜೇನುಮರಿಗಳನ್ನೇ ಅವಲಂಭಿಸಿರುವುದರಿಂದ ಜೇನು ಕುಟುಂಬದಲ್ಲಿ ಜೇನುಮರಿಗಳಿರುವ ಕಾಲದಲ್ಲಿ ಇವುಗಳ ಹಾವಳಿಯು ಹೆಚ್ಚಾಗಿರುತ್ತದೆ.

ವ್ಯರೋವ ನುಸಿ ಹಾವಳಿಯ ಮುಖ್ಯ ಚಿಹ್ನೆಗಳೆಂದರೆ ಜೇನು ಕುಟುಂಬದಲ್ಲಿ  ಮರಿ ಮತ್ತು ಜೇನು ಕೋಶ ಹಂತದ ಮರಿಹುಳುಗಳು ಕಣದಲ್ಲಿಯೇ ಸಾಯುತ್ತಿರುವುದು, ಜೇನುನೊಣಗಳ ರೆಕ್ಕೆಗಳು, ಕಾಲುಗಳು ಮತ್ತು ದೇಹದ ಭಾಗಗಳು ವಕ್ರವಾಗಿರುವುದು. ಜೇನು ಕುಟುಂಬದ ನೊಣಗಳ ಸಂಖ್ಯೆ ಕ್ಷೀಣಿಸುವುದು ಹಾಗೂ ನೊಣಗಳು ಕೋಪದಿಂದ ಕೂಡಿರುವುದು.

ಜೇನು ಕುಟುಂಬಗಳನ್ನು ನುಸಿಗಳಿಂದ ರಕ್ಷಿಸಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಜೇನು ಕುಟುಂಬಗಳನ್ನು ಆಗಾಗ್ಗೆ ಪರೀಕ್ಷಿಸಿ ನುಸಿಗಳ ಚಟುವಟಿಕೆಗಳನ್ನು ಗಮನಿಸಿ ಕೆಲವೇ ನುಸಿಗಳು ಕಂಡು ಬಂದಲ್ಲಿ ಅವುಗಳನ್ನು ಪೀಡಿತ  ಮರಿಗಳ ಸಹಿತ ತೆಗೆದು ಸಾಯಿಸುವುದು. ಜೇನು ಕುಟುಂಬಗಳ ನಡುವೆ ಹೆಚ್ಚಿನ ಅಂತರವಿರಿಸುವುದರಿಂದ ಆಹಾರ ಕದಿಯುವಿಕೆಯನ್ನು ಕಡಿಮೆಮಾಡಬಹುದು.

ಇದೇ ರೀತಿ ವ್ಯರೋವ ನುಸಿ ಹೆಚ್ಚಾಗಿ ಗಂಡು ಜೇನುಮರಿಗಳನ್ನು ಪೀಡಿಸುವುದರಿಂದ ಅವುಗಳು ಕೋಶದ ಹಂತ ತಲುಪಿದಾಗ ನಾಶ ಮಾಡುವುದು. ರಾಣಿಯನ್ನು ಪಂಜರದಲ್ಲಿಟ್ಟು ಕೆಲ ದಿನಗಳವರೆಗೆ ಜೇನು ಮರಿಗಳಿಲ್ಲದಂತೆ ಮಾಡುವುದರೊಂದಿಗೆ ನುಸಿಗಳನ್ನು ಆಹಾರವಿಲ್ಲದೇ ಸಾಯಿಸುವುದು. ಜೇನು ಕುಟುಂಬಗಳಲ್ಲಿ ಬಳಸಲು  ಸೂಕ್ತ ನುಸಿ ನಾಶಕಗಳಾದ ಬ್ರೋಮೊಪ್ರೋಪೈಲೇಟ್, ಕ್ಲೋರೋಬೆಂಜಿಲೇಟ್‌ಗಳನ್ನು ಧೂಪದ ರೂಪದಲ್ಲಿ ತಿಂಗಳಿಗೆ ೨ – ೩ ಸಾರಿ ಉಪಯೋಗಿಸುವುದರಿಂದ ನಿಯಂತ್ರಿಸಬಹುದು. ಥಿಯೋಫೀನೈಲ್ ಅಮೈನ್‌ಗಳು, ಪ್ಲೂವಾಲಿನೇಟ್ (ಎಪಿಸ್ಷಾನ್) ಮತ್ತು ಅಮಿಟ್ರಾಜ್ ಎಂಬ ಸಂಪರ್ಕ ನುಸಿನಾಶಕಗಳನ್ನು ಬತ್ತಿಯ ರೂಪದಲ್ಲಿ ಜೇನು ಕುಟುಂಬಗಳಲ್ಲಿಟ್ಟು ನುಸಿಗಳನ್ನು ಸಾಯಿಸಬಹುದು.

ಟ್ರೋಲಿಲೀಲ್ಯಾಪ್ಸ್ ಕ್ಲಾರಿಯೆ ನುಸಿ : ಇವು ಜೇನು ಕುಟುಂಬಗಳಲ್ಲಿ ಬೆಳವಣಿಗೆಯ ಹಂತದ ಜೇನುಮರಿಗಳ ರಕ್ತವನ್ನು ಹೀರುತ್ತವೆ. ಈ ನುಸಿ ವ್ಯರೋವ ದಂತೆ ಬರಿಗಣ್ಣಿಗೆ ಕಾಣುತ್ತದೆ. ಕೆಂಪು ಮಿಶ್ರಿತ ಬೂದು ಬಣ್ಣದಿಂದ ಕೂಡಿರುವ ಇವು ಸುಮಾರು ೧ ಮಿ.ಮೀ. ಉದ್ದ ಮತ್ತು ೦.೫ ಮಿ.ಮೀ. ಅಗಲವಿರುತ್ತವೆ (ಚಿತ್ರ ೪೭). ಏಷ್ಯಾ ಖಂಡದಾದ್ಯಂತ ಜೇನು ಕುಟುಂಬಗಳಲ್ಲಿ ಕಂಡುಬರುವ ಇವು ಯೂರೋಪಿಯನ್‌ಜೇನು ಕುಟುಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಭಾರತದ ತುಡುವೆ ಜೇನುನೊಣಗಳ ನಿರೋಧಕತೆಯ ಮೂಲಕ  ಇವುಗಳ ಹಾವಳಿಯನ್ನು ತಡೆಗಟ್ಟಿವೆ. ಈ ನುಸಿಯನ್ನು ಮೊಟ್ಟ ಮೊದಲಿಗೆ ೧೯೬೧ ರಲ್ಲಿ ಫಿಲಿಫೈನ್ಸ್‌ನಲ್ಲಿ ಇಲಿಗಳ ಮೇಲೆ ಗುರುತಿಸಲಾಯಿತು. ಮೊದಲು ನುಸಿಯನ್ನು ಹೆಜ್ಜೇನು ಕುಟುಂಬಗಳಲ್ಲಿ ನಂತರ ತುಡುವೆ ಜೇನು ಕುಟುಂಬಗಳಲ್ಲಿ ಗುರುತಿಸಲಾದರೂ ಇತ್ತೀಚಿನ ದಿನಗಳಲ್ಲಿ ಇವುಗಳ ಹಾವಳಿ ಇತ್ತೀಚಿಗೆ ಪರಿಚಯಿಸಿರುವ ಯೂರೋಪಿಯನ್ ಜೇನು ಕುಟುಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಟ್ರೋಪಿಲೀಲ್ಯಾಪ್ಸ್  ಕ್ಲಾರಿಯೆ :  ನುಸಿಗಳು ಯೂರೋಪಿಯನ್ ಜೇನು ಕುಟುಂಬದ ಕೆಲಸಗಾರ ಮತ್ತು ಗಂಡು ಜೇನುನೊಣಗಳ ಹೊಟ್ಟೆಯ ಪದರಗಳಿಗೆ ಆಶ್ರಯಕ್ಕಾಗಿ ಅಂಟಿಕೊಂಡು ವ್ಯರೋವದಂತೆ ಬೆಳೆಯುತ್ತಿರುವ ಜೇನು ಮರಿಗಳು ಕೋಶದ ಹಂತಕ್ಕೆ ಬರುವ ಮೊದಲೇ ಜೇನುಮರಿಗಳ ಕಣಗಳನ್ನು ಸೇರುತ್ತವೆ. ಜೇನುಮರಿಗಳ ರಕ್ತವನ್ನು ಹೀರುವುದರ ಮೂಲಕ ಬೆಳೆದು ಜೇನುಮರಿಗಳ ಕೋಶಗಳಲ್ಲಿಯೇ ವಂಶಾಭಿವೃದ್ಧಿಯಾಗುತ್ತದೆ. ವಿವಿಧ ಹಂತಗಳಲ್ಲಿ ಬೆಳೆಯುವ ಇವು ಸುಮಾರು ೭ – ೮ ದಿನಗಳೊಳಗಾಗಿ ಪೂರ್ಣವಾಗಿ ಬೆಳೆದು ಜೇನುನೊಣಗಳೊಂದಿಗೆ ಹೊರಬರುತ್ತವೆ ಸಾಮಾನ್ಯವಾಗಿ ಗಂಡು ನುಸಿಗಳು ವಂಶಾಭಿವೃದ್ಧಿಯ ನಂತರ ಕಣದಲ್ಲಿಯೇ ಸಾಯುತ್ತವೆ. ಇವು ಕೇವಲ ಜೇನು ಮರಿಗಳನ್ನೇ ಜೀವನಕ್ಕಾಗಿ ಅವಲಂಭಿಸುವುದರಿಂದ ಜೇನುಮರಿಗಳು ಬೆಳೆಯುವ ಹಂತದಲ್ಲಿ ಇವುಗಳ ಹಾವಳಿ ಹೆಚ್ಚಾಗಿರುತ್ತದೆ. ಈ ನುಸಿಯ ಹಾವಳಿಯಿಮದ ಜೇನುಕುಟುಂಬಗಳು ವ್ಯರೋವ ನುಸಿಯ ಹಾವಳಿಗೊಳಗಾದ ಚಿಹ್ನೆಗಳನ್ನೇ ಹೋಲುತ್ತವೆ.

ಟ್ರೋಪಿಲೀಲ್ಯಾಪ್ಸ್ ಕ್ಲಾರಿಯೆ ನುಸಿ

ಜೇನು ಕುಟುಂಬಗಳನ್ನು ನುಸಿಗಳಿಂದ ರಕ್ಷಿಸಲು ಕೆಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬಹುದು. ಜೇನು ಕುಟುಂಬದಲ್ಲಿ ಜೇನುಮರಿ ಬೆಳೆಸುವುದನ್ನು ಕೆಲಕಾಲ ನಿಲ್ಲಿಸುವುದು ಮತ್ತು ನುಸಿ ನಾಶಕಗಳಾದ ಕ್ಲೋರೋಬೆಂಜಿಲೇಟ್ (ಪೋಲ್ಬಾಕ್ಸ್) ಮತ್ತು ಗಂಧಕದ ಪುಡಿಗಳನ್ನು ನಿಗದಿತ ಪ್ರಮಾಣದಲ್ಲಿ ಉಪಯೋಗಿಸಿ ನಿಯಂತ್ರಿಸಬಹುದಾಗಿದೆ. ಇದರ ಜೊತೆಗೆ ಶೇಕಡಾ ೬೦ ರ ಫಾರ್ಮಿಕ್ ಆಮ್ಲವನ್ನು ಜೇನು ಕುಟುಂಬದಲ್ಲಿಟ್ಟು ಆವಿ ಮಾಡುವುದು, ಶೇಕಡಾ ೧೫ ರ ಲ್ಯಾಕ್ಟಿಕ್ ಆಮ್ಲವನ್ನು ಜೇನುನೊಣಗಳ ಮೇಲೆ ಚಿಮುಕಿಸುವುದರಿಂದ ನೊಣಗಳಿಗೆ ಅಂಟಿಕೊಂಡಿರುವ ನುಸಿಗಳನ್ನು ಸಾಯಿಸಬಹುದು.

ಜೇನುನೊಣಗಳ ರೋಗಗಳು

ಸ್ವಾಭಾವಿಕವಾಗಿ ಜೇನುನೊಣಗಳು ತಮ್ಮ ಕುಟುಂಬಗಳನ್ನು ಯಾವಾಗಲೂ ಶುಚಿಯಾಗಿಡುತ್ತವೆ. ಶತ್ರುಗಳು ಗೂಡಿನೊಳಗಡೆ ಬರದಂತೆ ಮೇಣದ ಅಂಟಿನಿಂದ ಭದ್ರಪಡಿಸಿಕೊಂಡಿದ್ದರೂ ಜೇನುನೊಣಗಳು ಅನೇಕ ಬಗೆಯ ರೋಗಗಳಿಗೆ ತುತ್ತಾಗುತ್ತವೆ.ಜೇನುನೊಣಗಳನ್ನು ಸೋಂಕುವ ರೋಗಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು-ಜೇನುನೊಣದ ಮರಿ ರೋಗಗಳು ಮತ್ತು ಪ್ರೌಢ ಜೇನುನೊಣದ ರೋಗಗಳು.

ಜೇನುನೊಣದ ಮರಿ ರೋಗಗಳು

ಜೇನುನೊಣಗಳು ಬೆಳವಣಿಗೆಯ ಹಂತಗಳಲ್ಲಿ ಅನೇಕ ಬಗೆಯ ರೋಗಗಳಿಗೆ ತುತ್ತಾಗುತ್ತವೆ.ಜೇನುನೊಣಗಳ ಮರಿಗಳನ್ನು ಸೋಂಕುವ ರೋಗಾಣುಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ, ಬ್ಯಾಕ್ಟಿರಿಯಾ, ವೈರಸ್ ಮತ್ತು ಶಿಲೀಂಧ್ರಗಳಿಂದುಂಟಾಗುವ ರೋಗಗಳು.

ಬ್ಯಾಕ್ಟೀರಿಯಾಗಳಿಂದಾಗುವ  ಸೋಂಕು ರೋಗಗಳು

ಅಮೇರಿಕನ್ ಫೌಲ್ ಬೂ‌ಡ್  ರೋಗ:ಈ ರೋಗವು ಬ್ಯಾಸಿಲಸ್ ಲಾರ್ವೆ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ರೋಗಾಣು ಸರಪಳಿಯಾಕಾರದಳಿಲ್ಲಿ ಉದ್ದವಾಗಿದ್ದು ತುದಿಗಳು ದುಂಡಾಗಿರುತ್ತವೆ. ಇದು ಸುಮಾರು ೨.೫-೫.೦ ಮಿ. ಮೀ. ಉದ್ದವಿದ್ದು೦.೫ ಮಿ. ಮೀ ದಪ್ಪವಿರುತ್ತದೆ. ಇದರ ಬೀಜಾಣುಗಳು ದುಂಡಾಗಿದ್ದು ಉದ್ದವು ಹೆಚ್ಚು ಕಡಿಮೆ ದಪ್ಪದ ಎರಡರಪ್ಟಿರುತ್ತವೆ. ಉತ್ತರ ಪ್ರದೇಶದ ನೈನಿತಾಲ್ ನಲ್ಲಿ ಈ ರೋಗವು ಮೊಟ್ಟ ಮೊದಲಿಗೆ ತುಡುವೆ ಜೇನು ಕುಟುಂಬಗಳಲ್ಲಿ ಕಾಣಿಸಿಕೊಂಡರೂ ಇದರ ಹಾನಿಯ ಬಗ್ಗೆ ಭಾರತದಲ್ಲಿ ಹೆಚ್ಚಿನ ವರದಿಯಾಗಿಲ್ಲ. ರೋಗದ ಸೋಂಕು ಪ್ರಪಂಚದ ಅನೇಕ ರಾಷ್ಟಗಳಲ್ಲಿ ಕಂಡುಬಂದರೂ ಬ್ಯಾಕ್ಟೀರಿಯಾದ ಬೀಜಾಣುಗಳು ಹೆಚ್ಚಿನ ಶಾಖವನ್ನು ತಡೆಯುವ ಶಕ್ತಿ ಹೊಂದಿರುವುದರಿಂದ ಹೆಚ್ಚು ಕಾಲ ರೋಗದ ಸೋಂಕನ್ನು ಹೊರಸೂಸುವ ಗುಣವನ್ನು ಪಡೆದಿರುತ್ತವೆ. ಅಮೇರಿಕನ್ ಫೌಲ್ ಬ್ರೂ‌ಡ್ ರೋಗವು ವರ್ಷವಿಡೀ ಸೋಂಕುವ ಗುಣವನ್ನು ಪಡೆದಿದ್ದು ಸೋಂಕು ಹೆಚ್ಚಾದಾಗ ಇಡೀ ಕುಟುಂಬವೇ ನಾಶವಾಗುತ್ತದೆ. ಎಳೆ ಮರಿಗಳನ್ನು ಹೆಚ್ಚಾಗಿ ಸೋಂಕುವ ರೋಗಾಣು ಸಾಮಾನ್ಯವಾಗಿ ಶುಚಿಗೊಳಿಸುವ ಜೇನುನೊಣಗಳ ಮೂಲಕ ಹರಡುತ್ತದೆ.

ರೋಗಪೀಡಿತ ಜೇನುಮರಿಗಳು ಮೊದಲು ಹೊಳಪಿನ ಬಿಳಿ ಬಣ್ಣದಿಂದಿದ್ದು ನಂತರ ಬೂದಿಬಣ್ಣಕ್ಕೆ ತಿರುಗಿ ಕಪ್ಪು ಮಿಶ್ರಿತ ಬೂದಿಬಣ್ಣದಿಂದ ಎರಿಯ ಕಣದ ತಳದಲ್ಲಿ ಹುದುಗಿಕೊಳ್ಳುತ್ತವೆ. ಇವುಗಳ ಕಣಗಳ ಮುಚ್ಚಳ ಮೃದುವಾಗಿ ಕಪ್ಪು ಬಣ್ಣಕ್ಕೆ ತಿರುಗಿ ರಂಧೃಗಳಿಂದ ಕೂಡಿದ್ದು ರೋಗಪೀಡಿತ ಜೇನುಮರಿಯನ್ನು ಮೇಲೆತ್ತಿದಾಗ ದೃವವು ನೂಲಿನ ಎಳೆಯ ರೂಪದಲ್ಲಿ ಕಾಣುತ್ತದೆ.

ರೋಗಪೀಡಿತ ಜೇನು ಕುಟುಂಬಗಳನ್ನು ನಾಶಪಡಿಸುವುದು, ಸೋಡಿಯಂ ಸಲ್ಪೋಥಿಯೋಜೋಲ್ ಎಂಬ ರಾಸಾಯನವನ್ನು ೦.೫-೧.೫ ಗ್ರಾಂ.ಪ್ರಮಾಣದಲ್ಲಿ ೫-೧೫ ಲೀಟರ್ ಸಕ್ಕರೆಯ ಪಾಕದಲ್ಲಿ ಜೇನು ಕುಟುಂಬಗಳಿಗೆ ನೀಡುವುದು ಮತ್ತು ಆಕ್ಸಿಟೆಟ್ರಾ ಸೈಕ್ಲಿನನ್ನು ೦.೨೫-೦.೪ ಗ್ರಾಂ ಪ್ರಮಾಣದಲ್ಲಿ ೫ ಲೀಟರ್ ಸಕ್ಕರೆ ಪಾಕದಲ್ಲಿ ಬೆರೆಸಿ ಕೊಡುವುದರಿಂದ ನಿಯಂತ್ರಿಸಬಹುದಾಗಿದೆ.

ಯೊರೋಪಿಯನ್ ಫೌಲ್ ಬ್ರೂಡ್ ರೋಗ:ಈ ರೋಗವು ಮೆಲಿಸ್ಸೂಕಾಕಸ್ ಪ್ಲೂಟಾನ್ ಎಂಬ ಪ್ರಾಣಿ ನಿಶ್ಚಿತ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ರೋಗಾಣು ದುಂಡಾಗಿದ್ದು ಒಂಟಿಯಾಗಿ ಮತ್ತು ಸರಪಳಿಯಂತೆ ಗುಂಪುಗಳಲ್ಲಿ ಕಂಡುಬರುತ್ತದೆ. ಈ ರೋಗಾಣು, ಬೀಜಾಣುಗಳನ್ನು ಉಂಟುಮಾಡುವುದಿಲ್ಲವದರೂ ಅನೇಕ ವರ್ಷಗಳ ಕಾಲ ಸೋಂಕನ್ನು ಬೀರುತ್ತದೆ. ಈ ರೋಗವು ಭಾರತದಲ್ಲಿ ಹೆಚ್ಚಿನ ಹಾನಿಯುಂಟು ಮಾಡುತ್ತಿಲ್ಲವಾದರೂ ಯೂರೋಪಿನ್ ಜೇನುನೊಣದ ಸಾಕಣೆಯಲ್ಲಿ ಎಲ್ಲಾ ರಾಷ್ಟ್ರಗಳಲ್ಲಿ ಕಂಡು ಬರುತ್ತದೆ. ಈ ರೋಗಾಣು ಸುಮಾರು ನಾಲ್ಕರಿಂದ ಐದು ದಿನಗಳ ವಯಸ್ಸಿನ ಜೇನುಮರಿಗಳನ್ನು ಹೆಚ್ಚಾಗಿ ಪೀಡಿಸುತ್ತದೆ. ರೋಗಪೀಡಿತ ಮರಿಗಳನ್ನು ಒಂದು ಕುಟುಂಬದಿಂದ ಮತ್ತೂಂದು ಕುಟುಂಬಕ್ಕೆ ಬದಲಾಯಿಸುವುದರಿಂದ ಈ ರೋಗ ಹರಡುತ್ತದೆಯಲ್ಲದೆ, ನೊಣಗಳ ಜೀರ್ಣವ್ಯೂಹದ ಮಧ್ಯ ಕರಳಿನಲ್ಲಿ ವೃದ್ದಿಯಾಗಿ ವಿಸರ್ಜನೆಯ ಮೊಲಕವೂ ಹರಡುತ್ತದೆ.

ಜೇನು ಕುಟುಂಬದಲ್ಲಿ ಅಧಿಕ ಸಂಖ್ಯೆಯಲ್ಲಿ ಮರಿಗಳು ಬೆಳೆಯುವ ಕಾಲದಲ್ಲಿ ಇದರ ಸೋಂಕು ಹೆಚ್ಚಾಗಿದ್ದು ಮರಿಗಳ ಕಣಗಳಲ್ಲಿಯೇ ಸಾಯುತ್ತಿರುತ್ತವೆ. ರೋಗಪೀಡಿತ ಮರಿಗಳು ಒಣಗಿ ಪುಡಿಯಾಗಿ ಶಲ್ಕಗಳು ಗಟ್ಟಿಯಾಗಿರುತ್ತವೆ. ಈ ರೋಗವನ್ನು ೦.೫ ಗ್ರಾಂ ಆಕ್ಸಿಟೆಟ್ರಾ ಸೈಕ್ಲಿನ್ನನ್ನು ೫೦೦ ಮಿ. ಲೀ. ಸಕ್ಕರೆ ಪಾಕದಲ್ಲಿ ಮಿಶ್ರಮಾಡಿ ನೀಡುವುದರಿಂದ ನಿಯಂತ್ರಿಸಬಹುದಾಗಿದೆ.

ಬ್ಯಾಸಿಲಸ್ ಪ್ಯಾರ ಆಲಿ ಎಂಬ ರೋಗಾಣು ಪ್ಯಾರ ಫೌಲ್ ಬ್ರೂಡ್ ಎಂಬ ರೋಗವನ್ನು ಉಂಟು ಮಾಡಿದರೂ ಈ ರೋಗ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿರುವುದಿಲ್ಲ.ಬ್ಯಾಸಿಲಸ್ ಆಲ್ವಿ ಬ್ಯಾಸಿಲಸ್ ಟಿಟ್ರೋಸ್ಟೋರಸ್ ಮತ್ತು ಸ್ಟೆ‌ಪ್ಟೋಕಾಕಸ ಏಪಿಸ್ ಗಳುಇತರ ರೋಗಾಣುಗಳಾಗಿದ್ದು ಯೂರೋಪಿನ್ ಫೌಲ್ ಬ್ರೂಡ್  ರೋಗದ ಗುಣಗಳನ್ನು ಪಡೆದಿವೆ.

ವೈರಸ್ ಗಳಿಂದ ಉಂಟಾಗುವ ರೋಗಗಳು

ವೈರಸ್ ಗಳು ಬ್ಯಾಕ್ಟೀರಿಯಾಗಳಂತೆ ಸ್ವತಂತ್ರವಾಗಿ ದ್ವಿಗುಣಗೊಳ್ಳುವ ಅತಿ ಸೂಕ್ಷ್ಮಾಣುಗಳು. ಇವು ಜೀವಿಗಳ ಕಣಗಳನ್ನು ತಲುಪಿದಾಗ ಕಣ ವಿಭಜನೆಗೊಳ್ಳುತ್ತವೆ. ಸೋಂಕಿತ ಜೇನುಮರಿ ಕಣಗಳಲ್ಲಿ ವೈರಸ್ ವೃದ್ಧಿಯಾಗಿ ಕೋಶಾವಸ್ಥೆಯ ಮತ್ತು ನೊಣಗಳು ಸೋಂಕಿಗೆ ಆಹುತಿಯಾಗುತ್ತವೆ.

ಯೂರೋಪಿಯನ್ ಜೇನುನೊಣ, ಎಪಿಸ್ ಮೆಲ್ಲಿಫೆರಾದಲ್ಲಿ ೧೩ ವಿವಿಧ ವೈರಸ್ ಗಳು ಸೋಂಕನ್ನುಂಟು ಮಾಡಿದರೆ ತುಡುವೆ ಜೇನುನೊಣ ಎಪಿಸ್ ಸೆರಾನಾ ದಲ್ಲಿ ಕೇವಲ ಮೂರು ಬಗೆಯ ವೈರಸ್ ಗಳು ಸೋಂಕನ್ನುಂಟು ಮಾಡುತ್ತವೆ.ಎಪಿಸ್ ಮೆಲ್ಲಿಫೆರಾ ದಲ್ಲಿ ಸೋಂಕನ್ನುಂಟು ಮಾಡುವ ವೈರಸ್ ರೋಗಾಣುಗಳು ತುಡುವೆ ವೇರಸ್ ಸೋಂಕನ್ನೇ ಹೋಲುತ್ತವೆ ಆದರೆ ಕೆಲವು ಜೈವಿಕ ಗುಣಗಳಲ್ಲಿ ವ್ಯತ್ಯಾಸಗೊಳ್ಳುತ್ತವೆ.

ಅಕ್ಯೂಟ್ ಬೀ ಪ್ಯಾರಾಲಿಸಿಸ್ ವೈರಸ್: ಈ ವೈರಸ್‌ಅನ್ನು ಎಪಿಸ್ ಮೆಲ್ಲಿಫೆರಾ ನೊಣಗಳಲ್ಲಿ ಬ್ರಿಟನ್, ಯೂರೋಪ್, ಆಸ್ಟ್ರೇಲಿಯಾ, ಬೆಲ್ಜಿಯಂ, ರಷ್ಯಾ ಮತ್ತು ನ್ಯೂಜಿಲ್ಯಾಂಡ್ ರಾಷ್ಟ್ರಗಳಲ್ಲಿ ಗುರುತಿಸಲಾಗಿದೆ.ಈ ರೋಗಾಣು ಮರಿ, ಕೋಶ ಮತ್ತು ಪ್ರೌಢ ಜೇನುನೊಣಗಳಲ್ಲಿ ಸೋಂಕನ್ನುಂಟು ಮಾಡುತ್ತದೆ. ಪರಾವಲಂಬಿ ನುಸಿ ವ್ಯರೋವ ಡಿಸ್ಟ್ರಕ್ಟರ್ ಈ ಸೋಂಕನ್ನು ಹರಡುತ್ತದೆ ಎಂದು ತಿಳಿಯಲಾಗಿದೆ.

ಅರ್ಕನಾಸ್ ಬೀ ವೈರಸ್ ಮತ್ತು ಈಜಿಪ್ಟ್ ಬೀ ವೈರಸ್: ಅರ್ಕನಾಸ್ ಬೀ ವೈರಸನ್ನು ಮೊಟ್ಟಮೊಲಿಗೆ ಅಮೇರಿಕಾದಲ್ಲಿ ಗುರುತಿಸಲಾಗಿದ್ದು ಕ್ಯಾಲಿಪೋರ್ನಿಯಾದ ಜೇನು ಕುಟುಂಬಗಳಲ್ಲಿ ಇದರ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಈಜಿಪ್ಟ್ ಬೀ ವೈರಸ್ ಸೋಂಕನ್ನು ಈಜಿಪ್ಟ್ನ ಜೇನುನೊಣಗಳಲ್ಲಿ ಮಾತ್ರ ಗುರುತಿಸಲಾಗಿದೆ.

ಬ್ಲಾಕ್ ಕ್ವೀನ್ ಸೆಲ್ ವೈರಸ್: ಈ ವೈರಸನ್ನು ಬ್ರಿಟನ್,ಉತ್ತರ ಅಮೇರಿಕಾ, ಬೆಲ್ಜಿಯಂ, ಆಸ್ಟ್ರೇಲಿಯಾ, ಫಿಜಿ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಪತ್ತೆ ಹಚ್ಚಲಾಗಿದೆ.ಇದು ಬೇಸಿಗೆ ಕಾಲದಲ್ಲಿ ನೊಸಿಮಾ ಎಪಿಸ್ ರೋಗ ಸೋಂಕಿತ ಕುಟುಂಬಗಳಲ್ಲಿ ಕಂಡುಬಂದಿದೆ.ಈ ರೋಗಾಣು ಪ್ರಮುಖವಾಗಿ ರಾಣಿ ಮರಿಯಲ್ಲಿ ಕೋಶದ ಹಂತದಲ್ಲಿ ಸೋಂಕುಂಟು ಮಾಡುತ್ತದೆ.ಆಸ್ಟ್ರೇಲಿಯಾದಲ್ಲಿ ಇದರ ಸೋಂಕು ಕೆಲಸಗಾರ ನೊಣ ಮರಿಗಳ ಕೋಶದ ಹಂತ ಮತ್ತು ಪ್ರೌಢ ಜೇನುನೊಣಗಳಲ್ಲಿ ಕಂಡುಬರುತ್ತದೆ.

ಕಾಶ್ಮೀರ್ ಬೀ ವೈರಸ್: ಈ ರೋಗಾಣುವನ್ನು ಕಾಶ್ಮೀರದಲ್ಲಿ ತುಡುವೆ ಜೇನುನೊಣಗಳೊಡನೆ ಜೈವಿಕವಾಗಿ ಬೆರೆತ ಯೂರೋಪಿಯನ್ ಜೈನುನೊಣಗಳ ಕೋಶದ ಹಂತದ ಮರಿಗಳಲ್ಲಿ ಗುರುತಿಸಲಾಗಿದೆ.ಈ ವೈರಸ್ ಏಷ್ಯಾ ಮತ್ತು ಆಸ್ಟ್ರೇಲಿಯಾದ ಮುಜಂಟಿ ಜೇನು ನೊಣಗಳ ಮೂಲಕ ತುಡುವೆ ಜೇನು ಕುಟುಂಬಗಳಿಗೆ ಹರಡಿರಬಹುದೆಂದು ಶಂಕಿಸಲಾಗಿದೆ. ಫಿಜಿ, ನ್ಯೂಜಿಲ್ಯಾಂಡ್ ಮತ್ತು ಕೆನಡಾ ದೇಶಗಳಲ್ಲಿ ಈ ವೈರಸನ್ನು ಗುರುತಿಸಲಾಗಿದ್ದು ಇವು ನೊಣಗಳ ಜೀರ್ಣನಾಳದಲ್ಲಿ ಜೀವಿಸುತ್ತವೆ. ನೋಸಿಮಾ ಎಪಿಸ್ ಮತ್ತು ಯುರೋಪಿಯನ್ ಫೌಲ್ ಬ್ರೂಡ್ ಸೋಂಕಿತ ಜೇನು ಕುಟುಂಬಗಳಲ್ಲಿ ಇದು ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.

ಸ್ಯಾಕ್ ಬ್ರೂಡ್ ವೈರಸ್: ಈ ರೋಗಾಣುವು ಯೂರೋಪಿಯನ್ ಜೇನುನೊಣಗಳಲ್ಲಿ ಮೊದಲು ಗುರುತಿಸಲಾಗಿದ್ದು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತದೆ. ಸ್ಯಾಕ್ ಬ್ರೂಡ್ ಎಂಬ ರೋಗವನ್ನು ಉಂಟುಮಾಡುವ ಇದು ಎಳೆಯ ವಯಸ್ಸಿನ ಜೇನುಮರಿಗಳಲ್ಲಿ ಸೋಂಕನ್ನುಂಟು ಮಾಡುತ್ತದೆ. ಈ ರೋಗಕ್ಕೊಳಗಾದಗಾದ ಜೇನುಮರಿಗಳ ಚರ್ಮವು ತೆಳ್ಳಗಾಗಿ, ದೇಹವು ಹೊಳೆಯುವ ಬಿಳಿಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ರೋಗಪೀಡಿತ ಮರಿಗಳು ತಲೆಯನ್ನು ಮೇಲಕ್ಕೆತ್ತಿಕೊಂಡಿದ್ದು ಮರಿಗಳನ್ನು ಬೆಂಕಿಕಡ್ಡಿಯ ಅಥವಾ ಸೂಜಿಯ ಮೊನೆಯಿಂದ ಮೇಲೆತ್ತಿದಾಗ ಅವು ಚೀಲದ ಆಕಾರದಲ್ಲಿ ಕಂಡುಬರುವುದರಿಂದ ಈ ರೋಗವನ್ನು ಸ್ಯಾಕ ಬ್ರೂಡ್ ರೋಗವೆಂದು ಕರೆಯಲಾಗಿದೆ.

ಈ ರೋಗಾಣು ಮರಿಗಳಲ್ಲಿ ತ್ವರಿತಗತಿಯಲ್ಲಿ ಬೆಳವಣಿಗೆಯಾಗುವುದರಿಂದ ಒಂದು ಸೋಂಕಿತ ಮರಿಯ ಕಣಗಳು ಒಂದು ಸಾವಿರ ಜೇನು ಮರಿಗಳನ್ನು ಸಾಯಿಸಲು ಸಾದ್ಯವಾಗುತ್ತದೆ ಎಂದು ನಂಬಲಾಗಿದೆ ಈ ವೈರಸ್ ಜೇನುನೊಣಗಳಲ್ಲಿ ದೀರ್ಘ ಕಾಲ ಸುಪ್ತವಾಗಿ ಉಳಿದು ರೋಗದ ಚಿಹ್ನೆಗಳನ್ನು ಪ್ರದರ್ಶಿಸದೆ ಇರುತ್ತದೆ. ಗಂಡು ಜೇನುನೊಣ ಹಾಗೂ ಆಹಾರ ಕದಿಯುವ ಕೆಲಸಗಾರ ನೊಣಗಳು ಈ ರೋಗವನ್ನು ಹರಡುತ್ತವೆ.

ತುಡುವೆ ಜೇನು ಕುಟುಂಬವನ್ನು ಸೋಂಕುವ ವೈರಸ್ ಗಳು

ಎಪಿಸ್ ಇರಿಡೆಸೆಂಟ್ ವೈರಸ್:ಈ ವೈರಸ್ ಉತ್ತರ ಭಾರತದ ತುಡುವೆ ಜೇನುನೊಣಗಳಲ್ಲಿ ಕಂಡು ಬರುತ್ತದೆ. ರೋಗಪೀಡಿತ ನೊಣಗಳು ಚಟುವಟಿಕೆಯಿಂದಿರದೆ ಜೇನು ಪೆಟ್ಟಿಗೆಯ ಹೊರಗಡೆ, ಎರಿಗಳಲ್ಲಿ ಮತ್ತು ಅಡಿ ಮಣೆಯ ಮೇಲೆ ಕೂಡಿರುತ್ತವೆ. ಅವು ಹಾರಲು ಸಾಧ್ಯವಾಗದೆ ಜೇನು ಪೆಟ್ಟಿಗೆಯ ಸುತ್ತಲೂ ಓಡಾಡುತ್ತಿರುತ್ತವೆ.ಈ ವೈರಸ್ ದೇಹದ ಕೊಬ್ಬಿನ ಮತ್ತು ಅಂಡಾಶಯಗಳ ಭಾಗಗಳಲ್ಲಿ ಹಸಿರು ಬಣ್ಣದಿಂದ ಕೂಡಿದ್ದು ಉಸಿರುನಾಳದ  ನುಸಿ ಅಕ್ಯಾರ್ಯಾಪಿಸ್ ಊಡಿ ಯೊಂದಿಗೆ ಹರಡುತ್ತದೆ.

ಥಾಯ್ ಸ್ಯಾಕ್ ಬ್ರೂಡ್ ವೈರಸ್ ರೋಗ: ತುಡುವೆ ಜೇನು ಕುಟುಂಬಗಳಲ್ಲಿ  ಥಾಯ್‌ಸ್ಯಾಕ್‌ಬ್ರೂಡ್ ವೈರಸ್‌ರೋಗವನ್ನು ೧೯೭೬ ರಲ್ಲಿ ಮೊಟ್ಟ ಮೊದಲಿಗೆ ಥಾಯ್‌ಲ್ಯಾಂಡ್ ದೇಶದಲ್ಲಿ ಗುರುತಿಸಿದ್ದರಿಂದ ಇದನ್ನು ಥಾಯ್‌ಲ್ಯಾಂಡ್‌ ಬ್ರೂಡ್‌ರೋಗವೆಂದು ಕರೆಯಲಾಯಿತು. ಭಾರತದ ಮೇಘಾಲಯ, ಆಸ್ಸಾಂ, ಸಿಕ್ಕಿಂ, ಬಿಹಾರ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ೧೯೮೨ – ೮೫ ರಲ್ಲಿ ಕಾಣಿಸಿಕೊಂಡ ಈ ರೋಗವು ದಕ್ಷಿಣ ಭಾರತಕ್ಕೆ ೧೯೯೧ ರಲ್ಲಿ ಹರಡಿತು. ಎಳೆಯ ಜೇನುಮರಿಗಳನ್ನು ವೈರಸ್‌ಸೋಂಕುವುದರಿಂದ ಈ ರೋಗವನ್ನು ಸ್ಯಾಕಬ್ರೂಡ್ ರೋಗವೆಂದು ಕರೆಯಲಾಗುತ್ತದೆ. ಇದರ ರೋಗಾಣುವು ಯೂರೋಪಿಯನ್‌ಜೇನು ನೊಣ ಎಪಿಸ್‌ಮೆಲ್ಲಿಫೆರಾ ವನ್ನು ಸೋಂಕುವ ಸ್ಯಾಕ್‌ಬ್ರೂಡ್ ನಂಜನ್ನು ಹೋಲುತ್ತಿದ್ದು ಕೆಲವು ಗುಣಗಳಲ್ಲಿ ವ್ಯತ್ಯಾಸಗೊಳ್ಳುತ್ತವೆ. ಈ ರೋಗವು ಭಾರತದಾದ್ಯಂತ ಹರಡಿದ್ದು ೧೯೯೧ – ೯೯ ರಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು ಶೇ. ೮೦ – ೯೫ ರಷ್ಟು ತುಡುವೆ ಜೇನು ಕುಟುಂಬಗಳನ್ನು ನಾಶಪಡಿಸಿರುತ್ತದೆಂದು ಸಂಶೋಧನಾ ಮೂಲಗಳು ತಿಳಿಸಿವೆ.

ಥಾಯ್ ಸ್ಯಾಕ್ ಬ್ರೂಡ್ ರೋಗ ಪೀಡಿತ ಮರಿಹುಳು ಮತ್ತು ಕಣಗಳಲ್ಲಿ ಸತ್ತು ಶಲ್ಯಗಳಂತೆ ಕಾಣುವ ಮರಿಹುಳುಗಳು

ಜೇನು ಕುಟುಂಬಗಳಲ್ಲಿ ಎಳೆ ಮರಿಹುಳುಗಳು ಸಾಯುತ್ತಿರುತ್ತಿದ್ದು ಸಾಯುವ ಮೊದಲು ಮರಿಹುಳುಗಳು ನಸು ಹಳದಿ ಬಣ್ಣಕ್ಕೆ ತಿರುಗಿ ಕಣಗಳಲ್ಲಿ ತಲೆಯನ್ನು ಮೇಲಕ್ಕೆ ಎತ್ತಿಕೊಂಡಿರುತ್ತವೆ. ಸತ್ತ ಮರಿಗಳನ್ನು ಸೂಜಿ ಮೊನೆಯಿಂದ ಎತ್ತಿ ಹಿಡಿದಾಗ ದ್ರವದಿಂದ ತುಂಬಿದ ನೇತಾಡುವ ಚೀಲದಂತೆ ಕಾಣುತ್ತದೆ. (ಚಿತ್ರ ೪೮) ಬೆಳೆದ ಮರಿ ಹುಳುಗಳು ಕೋಶಾವಸ್ಥೆಯಲ್ಲಿ ಸತ್ತಾಗ ಕಣದ ಮುಚ್ಚಳಗಳು ರಂಧ್ರಗಳಿಂದ ಕೂಡಿರುತ್ತವೆ. ಎರಿಗಳಲ್ಲಿ ಪರಾಗ ಶೇಖರಣೆ. ಮೊಟ್ಟೆ ಮತ್ತು ಮರಿಗಳ ಸಂಖ್ಯೆ ಕಡಿಮೇಯಾಗಿ ಕುಟುಂಬವು ದುರ್ಬಲಗೊಳ್ಳುತ್ತದೆ. ಪ್ರಾರಂಭದಲ್ಲಿ ರೋಗದಿಂದ ಸತ್ತ ಮರಿಗಳನ್ನು ಕೆಲಸಗಾರ ನೊಣಗಳು ಹೊರ ಹಾಕುತ್ತಿರುತ್ತವೆ. ಜೇನು ಕುಟುಂಬದಲ್ಲಿ ಜೇನುನೊಣಗಳ ಸಮಖ್ಯೆ ಕ್ರಮೇಣವಾಗಿ ಕ್ಷೀಣಿಸುತ್ತದೆ. ಆಹಾರ ತರುವ ಜೇನುನೊಣಗಳ ಸಂಖ್ಯೆ ಕಡಿಮೆಯಾಗಿ ಜೇನು ನೊಣಗಳು ಅತಿ ಕೋಪದಿಂದ  ಕೂಡಿರುತ್ತವೆ. ರೋಗವು ಹೆಚ್ಚಾದಾಗ ಜೇನು ಕುಟುಂಬಗಳು ಪಲಾಯನಗೊಳ್ಳುತ್ತವೆ.

ರೋಗಪಿಡಿತ ಪ್ರದೇಶಗಳಿಂದ ಜೇನು ಕುಟುಂಬಗಳನ್ನು ತರುವುದು, ನೊಣಗಳು ರೋಗ ಪೀಡಿತ ಕುಟುಂಬದಿಂದ ಆಹಾರವನ್ನು ಕದ್ದು ತರುವುದು, ರೋಗಪೀಡಿತ ಎರಿಗಳ ವಿನಿಮಯ ಮತ್ತು ರೋಗ ಸೋಂಕಿತ ಜೇನುಪೆಟ್ಟಗೆಯಲ್ಲಿ ಹೊಸ ಕುಟುಂಬವನ್ನು ಸಾಕಣೆಮಾಡುವುದು ಮುಂತಾದ ವಿಧಾನಗಳಿಂದ ಈ ರೋಗವು ಹರಡಲ್ಪಡುತ್ತದೆ.

ನಿಯಂತ್ರಣ :  ಈ ರೋಗವು ನಿಯಂತ್ರಣಕ್ಕೆ ರೋಗಪೀಡಿತ ಕುಟುಂಬಗಳ ಎರಿಗಳನ್ನು ಮರಿಗಳ ಸಹಿತ ಸುಟ್ಟು ನಾಶ ಪಡಿಸಬೇಕು. ರೋಗ ಸೋಂಕಿತ ಪೆಟ್ಟಿಗೆಯ ಭಾಗಗಳನ್ನು ಶೇಕಡ ೩ ರ ಫಾರ್ಮಲಿನ್ ದ್ರಾವಣದಿಂದ ತೊಳೆದು ಶುದ್ಧಗೊಳಿಸಬೇಕು. ಆರೋಗ್ಯವಂತ ಕುಟುಂಬಗಳನ್ನು ರೋಗಪೀಡಿತ ಕುಟುಂಬಗಳಿಂದ ಪ್ರತ್ಯೇಕಗೊಳಿಸಬೇಕು. ರೋಗ ನಿರೋಧಿತ ಜೇನು ಕುಟುಂಬಗಳನ್ನು ಗುರುತಿಸಿ ಅವಿಗಳಿಂದ ಮರಿ ಕುಟುಂಬಗಳನ್ನು ಪಡೆಯಬೇಕು. ರೋಗಪೀಡಿತ ಜೇನು ಕುಟುಂಬಗಳಲ್ಲಿ ಬಳಸಿದ ಉಪಕರಣಗಳನ್ನು ಸ್ವಚ್ಛಗೊಳಿಸಿದ ನಂತರವೇ ರೋಗವಿಲ್ಲದ ಕುಟುಂಬಗಳನ್ನು ಬಳೆಸಬೇಕು. ಜೇನು ಕುಟುಂಬದಲ್ಲಿ ಹಳೆಯ ಕಪ್ಪು ಬಣ್ಣಕ್ಕೆ ತಿರುಗಿದ ಎರಿಗಳನ್ನು ಹೊರತೆಗೆದು ಹೊಸ ಎರಿಗಳನ್ನು ಒದಗಿಸಬೇಕು. ರೋಗಪೀಡಿತ ಕುಟುಂಬಗಳನ್ನು ಪ್ರಕೃತಿಯಲ್ಲಿ ಹೆಚ್ಚಿನ ಆಹಾರವಿರುವ ಕಡೆ ಸ್ಥಳಾಂತರಿಸುವುದರಿಂದ ರೋಗದ ಒತ್ತಡದಿಂದ ಪುನಃ ಚೇತರಿಸಿಕೊಳ್ಲುವ ಸಾಧ್ಯತೆ ಇರುತ್ತದೆ.

ರೋಗವು ಪ್ರಾರಂಭದ ಹಂತದಲ್ಲಿದ್ದಾಗ ೧೦೦ ಮಿ. ಗ್ರಾಂ. ಜೋವಿರಾಕ್ಸ್ ಗುಳಿಗೆಯನ್ನು ೧೦೦ ಮೀ. ಲೀ ಸಕ್ಕರೆ ಪಾಕದಲ್ಲಿ ಕರಗಿಸಿ ಒಂದು ತಿಂಗಳಿಗೆ ಕನಿಷ್ಟ ನಾಲ್ಕು ಬಾರಿ ನೀಡುವುದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ರಿಬಾ ವೈರಿನ್ (ವೈರಜೈಡ್) ಕೂಡ ವೈರಸ್ ರೋಗವನ್ನು ನಿಯಂತ್ರಿಸುವ ಔಷಧಿಯಾಗಿದ್ದು ಒಂದು ಮಿ.ಲೀ  ಔಷಧಿಯನ್ನು ೧೦೦ ಮಿ.ಲೀ ಸಕ್ಕರೆ ಪಾಕದಲ್ಲಿ ಬೆರೆಸಿ ರೋಗಪೀಡಿತ ಕುಟುಂಬಗಳಿಗೆ ವಾರಕ್ಕೆ ಒಂದು ಬಾರಿಯಂತೆ ನಾಲ್ಕು ಬಾರಿ ಕೊಡುವುದರಿಂದ ಈ ರೋಗದ ತೀವ್ರತೆ ಕಡಿಮೆಯಾಗುತ್ತದೆ. ನಂತರ ಹದಿನೈದು ದಿನಗಳಿಗೊಮ್ಮೆ ಈ ಔಷಧಿಯನ್ನು ರೋಗ ಮುಕ್ತವಾಗುವವರೆಗೂ ಕೊಡಬೇಕು. ರೋಗಸೋಂಕಿತ ಕುಟುಂಬಗಳ ರಾಣಿ ಮತ್ತು ಕೆಲಸಗಾರ ನೊಣಗಳನ್ನು ಹೊಸ ಪೆಟ್ಟಿಗೆಗಳಿಗೆ ವರ್ಗಾಯಿಸಿ ಸಾಕಣೆ ಮಾಡುವುದರಿಂದ ರೋಗವನ್ನು ನಿಯಂತ್ರಿಸಬಹುದು. ರೋಗದ ತೀವ್ರತೆ ಹೆಚ್ಚಾದಾಗ ಔಷಧಿಗಳ ಉಪಯೋಗ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ.

ಜೇನುನೊಣಗಳ ಪಾರ್ಶ್ವವಾಯು :  ಜೇನುನೊಣಗಳಲ್ಲಿನ ಪಾರ್ಶ್ವವಾಯು ಕ್ರಾನಿಕ್ ಬೀ ಪ್ಯಾರಾಲಿಸಿಸ್ ಎಂಬ ವೈರಸ್‌ನಿಂದ ಉಂಟಾಗುತ್ತದೆ. ಈ ರೋಗವು ವರ್ಷದ ಯಾವುದೇ ಕಾಲದಲ್ಲಿಯಾದರೂ ಕಾಣಿಸಿಕೊಳ್ಳುವ ಸಂಭವವಿದ್ದು ಹೆಚ್ಚಾಗಿ ಉಷ್ಣ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತದೆ.

ಜೇನುನೊಣಗಳು ಚೌಕಟ್ಟಿನ ಮೇಲೆ ಓಡಾಡುತ್ತಿರುವುದು, ಸುಸ್ತಿನಿಂದ ಕೂಡಿರುವುದು, ಹಾರಲು ನಿಶ್ಯಕ್ತವಾಗಿರುವುದು, ರೋಗಪೀಡಿತ ನೊಣಗಳನ್ನು ಗೂಡಿನಿಂದ ಹೊರಹಾಕಲು ಪ್ರಯತ್ನಿಸುವುದು, ಜೇನುನೊಣಗಳು ರೆಕ್ಕೆ ಮತ್ತು ಕಾಲುಗಳ ಸ್ವಾಧೀನ ತಪ್ಪಿದಂತಿರುವುದು ಮತ್ತು ರೋಗಪೀಡಿತ ಜೇನುನೊಣಗಳ ಹೊಟ್ಟೆ ಕಪ್ಪಾಗಿದ್ದು, ಹೊಳೆಯುವ ಬಣ್ಣದಿಂದ ಕೂಡಿರುತ್ತದೆ. ಈ ರೋಗ ಆಹಾರ ಕದಿಯುವಿಕೆಯ ಮೂಲಕ ಹರಡುತ್ತವೆ.

ಈ ರೋಗವನ್ನು ಜೇನು ಕುಟುಂಬಗಳ ನೈರ್ಮಲ್ಯ, ಸೂಕ್ತ ನಿರ್ವಹಣೆ ಹಾಗೂ ರೋಗ ನಿರೋಧಿತ ರಾಣಿಗಳನ್ನು ಉಪಯೋಗಿಸುವುದರಿಂದ ತಡೆಗಟ್ಟಬಹುದಾಗಿವೆ.

ಶಿಲೀಂಧ್ರಗಳಿಂದುಂಟಾಗುವ ರೋಗಗಳು

ಚಾಕ್ ಬ್ರೂಡ್ : ಈ ರೋಗವು ಅಸ್ಕೋಸ್ಪೋರ ಏಪಿಸ್ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಈ ರೋಗಕ್ಕೆ ಆಹುತಿಯಾದ ಜೇನುಮರಿಗಳು ಕೋಶದ ಹಂತ ತಲುಪಿದಾಗ ಸಾಯುತ್ತವೆ. ಈ ರೋಗವು ಬೆಲ್ಜಿಯಂ. ಬಲ್ಗೇರಿಯಾ, ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್‌, ದಕ್ಷಿಣ ಅಮೇರಿಕಾದ ಕೆಲವು ಭಾಗಗಳು, ಸೆಂಟ್ರಲ್‌ಮೇನ್‌ಲ್ಯಾಂಡ್‌ಗಳು ಸೇರಿದಂತೆ ಉತ್ತರ ಅಮೇರಿಕಾ ಮತ್ತು ಏಷ್ಯಾಗಳ ದೇಶಗಳನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ಕಂಡು ಬರುತ್ತದೆ. ಭಾರತದಲ್ಲೂ ಈ ರೋಗವನ್ನು ಗುರುತಿಸಲಾಗಿದೆ. ಶಿಲೀಂಧ್ರವು ಕೇವಲ ಕೋಶದ ಹಂತದಲ್ಲಿನ ಜೇನುಮರಿಗಳನ್ನು ಮಾತ್ರ ಪೀಡಿಸುವುದರಿಂದ ಸತ್ತ ಕೋಶದ ಹಂತವು ಹಸಿರು ಬಣ್ಣಕ್ಕೆ ತಿರುಗಿ ಸೀಮೆ ಸುಣ್ಣದಂತೆ ಗಟ್ಟಿಯಾಗುತ್ತದೆ ಹಾಗೂ ಯಾವುದೇ ಅಹಿತಕರ ವಾಸನೆಯನ್ನುಂಟು ಮಾಡುವುದಿಲ್ಲ.

ಶೇಕಡ ೦.೭ ರ ಥೈಮಾಲ್‌ಈ ಶಿಲೀಂಧ್ರದ ಬೆಳವಣಿಗೆಯನ್ನು ಕುಂದಿಸುವ ಗುಣವನ್ನು ಪಡೆದಿದ್ದು ಅಂಟಿಮೈಕೊಟಿಕ್ ಎಂಬ ಪ್ರತಿಜೈವಿಕಗಳನ್ನು ಈ ರೋಗ ನಿಯಂತ್ರಣದಲ್ಲಿ ಉಪಯೋಗಿಸಲಾಗುತ್ತದೆ.

ಸ್ಟೋನ್‌ಬ್ರೂಡ್ :  ಈ ರೋಗವು ಆಸ್ಪರ್ಜಿಲಸ್ ಫ್ಲಾವನ್ಸ್ ಮತ್ತು ಆಸ್ಪರ್ಜಿಲಸ್ ಫ್ಯೂಮಿಗೇಟಸ್ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಈ ಶಿಲೀಂಧ್ರಗಳು ಧೀರ್ಘಕಾಲ ಸೋಂಕುವ ಗುಣ ಹೊಂದಿದ್ದು ಜೇನುನೊಣಗಳು ಮತ್ತು ವಿವಿಧ ಕೀಟಗಳು, ಸೇರಿದಂತೆ ಪಕ್ಷಿಗಳು ಮತ್ತು ಸಸ್ತನಿಗಳನ್ನು ಪೀಡಿಸುತ್ತವೆ. ಮೊದಲ ಹಂತಗಳಲ್ಲಿಯೇ ಈ ಶಿಲೀಂದ್ರವು ತೀಕ್ಷ್ಣವಾಗಿ ಬೆಳೆದು ಜೇನು ಮರಿಯ ತಲೆಯ ಸುತ್ತಲೂ ಬಿಳಿಮಿಶ್ರಿತ ಹಳದಿ ಬಣ್ಣದ ಉಂಗುರಾಕಾರವನ್ನುಂಟು ಮಾಡುತ್ತದೆ. ರೋಗದಿಂದ ಸತ್ತ ಮರಿಗಳು ಗಟ್ಟಿಯಾಗಿ ಪುಡಿ ಮಾಡಲು ಸಾಧ್ಯವಾಗದಿರುವುದರಿಂದ ಈ ರೋಗವನ್ನು ‘ಸ್ಟೋನ್ ಬ್ರೂಡ್ ರೋಗ’ ವೆಂದು ಕರೆಯಲಾಗುತ್ತದೆ. ಈ ರೋಗವು ಭಾರತದಲ್ಲಿ ವಿರಳವಾದರೂ ಯೂರೋಪಿನ ಅನೇಕ ಭಾಗಗಳು, ಉತ್ತರ ಅಮೆರಿಕಾ, ಇರಾನ್ ಮುಂತಾದ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಜೇನುನೊಣಗಳನ್ನು ಸೋಂಕುವ ಇತರ ರೋಗಗಳು

ಏಕಕೋಶಿಯ ಜೀವಿಗಳಿಂದ ಉಂಟಾಗುವ ರೋಗಗಳು :  ನೋಸಿಯಾ ರೋಗವು ನೋಸಿಯಾ ಎಪಿಸ್ ಎಂಬ ರೋಗಾಣುವಿನಿಂದ ಉಂಟಾಗುತ್ತದೆ. ಈ ರೋಗವು ತುಡುವೆ ಮತ್ತು  ಯೂರೋಪಿಯನ್‌ಜೇನು ಕುಟುಂಬಗಳಲ್ಲಿ ಶೀತವಲಯದ ದೇಶಗಳು ಸೇರಿದಂತೆ ಭಾರತದಲ್ಲೂ ಕಂಡು ಬರುತ್ತದೆ. ಈ ರೋಗದಿಂದ ರಾಣಿನೊಣದ ಮೊಟ್ಟೆ ಇಡುವ ಗುಣವು ಕ್ಷೀಣಿಸುತ್ತದೆ. ಈ ರೋಗವು ಎಳೆವಯಸ್ಸಿನ ಜೇನುನೊಣಗಳಿಂದ ಹರಡುತ್ತದೆ.

ಈ ರೋಗವನ್ನು ಆಸ್ಟರ್‌ಜಿಲ್ಲಸ್‌ಪ್ಯೂಮಿಗೇಟಸ್‌ಎಂಬ ಶಿಲೀಂಧ್ರದಿಂದ ಪಡೆದ ಪ್ಯೂಮಗಿಲ್ಲನೆ ಎಂಬ ಜೀವನಿರೋಧಕದಿಂದ ನಿಯಂತ್ರಿಸಬಹುದಾಗಿದೆ.

ಅಮೀಬ ರೋಗ :  ಈ ರೋಗವು ಮಾಲ್ಪಿಜಿ ಅಮೀಬಾ ಮೆಲ್ಲಿಪಿಕೆ  ಎಂಬ ಏಕಕೋಶಿಯ ರೋಗಾಣುವಿನಿಂದ ಉಂಟಾಗುತ್ತದೆ. ಈ ರೋಗದ ಹಾವಳಿ ಪ್ರಪಂಚದ ವಿವಿಧ ಭಾಗಗಳಲ್ಲಿ ವರದಿಯಾಗಿದ್ದರೂ ಭಾರತದಲ್ಲಿ ವರದಿಯಾಗಿಲ್ಲ. ಈ ರೋಗಾಣು ಜೇನುನೊಣಗಳ ವಿಸರ್ಜನಾ ನಳಿಕೆಗಳನ್ನು ಸೋಂಕುತ್ತದೆ. ಈ ರೋಗವನ್ನು ಜೇನು ಕುಟುಂಬಗಳನ್ನು ಬಲಿಯುತವಾಗಿಡುವುದರ ಮೂಲಕ ನಿಯಂತ್ರಿಸಬಹುದಾಗಿದೆ.