ಜೇನುನೊಣಗಳು ಪ್ರಮುಖವಾಗಿ ಹೂಗಳಿಂದ ಮಕರಂದವನ್ನು ಹೀರಲು ಅವಶ್ಯಕವಾದ ಬಾಯಿಯ ಭಾಗಗಳು, ಪರಾಗದ ಶೇಖರಣೆಗೆ ಕಾಲುಗಳಲ್ಲಿ ಪರಾಗ ಬುಟ್ಟಿಗಳು, ಸುಲಭವಾಗಿ ಹಾರಾಡಲು ಹಗುರವಾದ ದೇಹ, ಎರಡು ಜೊತೆ ಪಾರದರ್ಶಕ ರೆಕ್ಕೆಗಳು ಹಾಗೂ ಓಡಾಡಲು ಮೂರು ಕಾಲುಗಳನ್ನು ಹೊಂದಿವೆ (ಚಿತ್ರ ೯).

ಜೇನುನೊಣದ ಶರೀರದ ಮುಖ್ಯ ಭಾಗಗಳು

ದೇಹದ ಹೊರರಚನೆ : ಜೇನುನೊಣದ ಶರೀರ ಕೂದಲುಗಳನ್ನು ಹೊಂದಿದ್ದು ಕ್ಯುಟಿಕಲ್ ಹೊರಚರ್ಮ ಗಟ್ಟಿಯಾದ ‘ಕೈಟಿನ್’ ಎಂಬ ರಾಸಾಯನಿಕದಿಂದ ಕೂಡಿದೆ. ಈ ರಚನೆಯನ್ನು ಬಾಹ್ಯ ಅಸ್ಥಿಪಂಜರವೆಂದು ಕರೆಯುವುದೂ  ರೂಢಿಯಲ್ಲಿದೆ. ಇದು ಸ್ನಾಯುಗಳು, ನರಗಳು, ಹಾಗೂ ಇತರೆ ಒಳ ಅಂಗಾಗಳನ್ನು ಯಾವುದೇ ಅಪಾಯವಾಗದಂತೆ ರಕ್ಷಸುತ್ತದೆ. ಅಸ್ಥಿಪಂಜರದ ಹೊರ ಪೊರೆ ತೆಳುವಾದ ಪದರುಗಳಿಂದ ಕೂಡಿದೆ. ಶರೀರದ ಹೊರ ರಚನೆ ‘ಸಲ್ಸಿ’ ಎಂಬ ಭಾಗಗಳಿಂದ ಬೇರ್ಪಟ್ಟಿದೆ. ಶರೀರದ ಹೊರ ರಚನೆಯ ಕವಚವಾಗಿ ಮಾರ್ಪಾಡಾಗಿರುವ ಕೈಟನ್ನಿನ ಭಾಗವನ್ನು ಎಪೋಡಿಮ್ಸ್ ಎಂದು ಕರೆಯಲಾಗುತ್ತದೆ. ಇದು ಹೊರ ಚರ್ಮವನ್ನು ಗಟ್ಟಿ ಗೊಳಿಸುವುದಲ್ಲದೆ ಸ್ನಾಯುಗಳಿಗೆ ಅಂಟಿಕೊಳ್ಳಲು ಸಹಾಯಕವಾಗುತ್ತದೆ.

ಜೇನುನೊಣದ ಶರೀರವನ್ನು ಮೂರು ಮುಖ್ಯ ಭಾಗಗಳಾಗಿ  ವಿಂಗಡಿಸಲಾಗಿದೆ. ಅವುಗಳೆಂದರೆ ಬಾಯಿಯ ಭಾಗಗಳು, ಕಣ್ಣುಗಳು ಮತ್ತು ಕುಡಿ ಮೀಸೆಗಳನ್ನು  ಒಳಗೊಂಡಿರುವ ತಲೆ, ಕಾಲುಗಳು ಮತ್ತು ರೆಕ್ಕೆಗಳನ್ನು  ಹೊಂದಿರುವ ಎದೆ ಮತ್ತು ಜೀರ್ಣಾಂಗದ ಹೆಚ್ಚಿನ ಭಾಗಗಳನ್ನು ಹೊಂದಿರುವ ಹೊಟ್ಟೆ, ತಲೆಯ ಅಲುಗಾಡುವಿಕೆ ಎದೆಯ ಭಾಗ ಮತ್ತು ತಲೆಯ ಕೆಳ ಭಾಗದಲ್ಲಿ ಐದು ಜೊತೆ ಸ್ನಾಯುಗಳನ್ನು ಅವಲಂಭಿಸಿರುತ್ತದೆ. ಎದೆಯ ಭಾಗ ಮೂರು ತುಂಡುಗಳಿಂದ  ಕೂಡಿದೆ. ಹೊಟ್ಟೆಯಲ್ಲಿ ೧೦ ತುಂಡುಗಳಿದ್ದು ಮೊದಲ ಹೊಟ್ಟೆಯ ತುಂಡು ಎದೆಯೊಂದಿಗೆ ಸೇರಿ ಪ್ರೊಪೋಡಿಯಂ ಆಗಿ ಮಾರ್ಪಾಡಾಗಿದೆ. ರೆಕ್ಕೆಗಳನ್ನು ಒಳಗೊಂಡಿರುವ ಎದೆಯ ಭಾಗ ಮತ್ತು ಪ್ರೊಪ್ರೋಡಿಯಂ ಅನ್ನು ಒಟ್ಟಾಗಿ ಆಲಿಟ್ರಂಕ್ ಭಾಗ ಎಂದು ಕರೆಯಲಾಗುತ್ತದೆ (ಚಿತ್ರ ೯).

ತಲೆ

ಕಣ್ಣು : ಜೇನುನೊಣಗಳಲ್ಲಿ ಎರಡು ಬಗೆಯ ಕಣ್ಣುಗಳನ್ನು ಕಾಣಬಹುದು – ಕೂಡು ಕಣ್ಣುಗಳು ಮತ್ತು ಸರಳ ಕಣ್ಣುಗಳು. ಕೆಲಸಗಾರ ನೊಣಗಳ ಕೂಡು ಕಣ್ಣುಗಳಲ್ಲಿ ೪೦೦೦ – ೫೦೦೦, ರಾಣಿನೊಣದ ಕಣ್ಣುಗಳಲ್ಲಿ ೩೦೦೦ – ೪೦೦೦ ಮತ್ತು ಗಂಡು ನೊಣದ ಕಣ್ಣುಗಳಲ್ಲಿ ೮೦೦೦ ಕ್ಕೂ ಹೆಚ್ಚು ಏಕಾಂಶ ಒಮಾಟಿಡಿಯಾ ಎಂಬ ರಚನೆಗಳಿರುತ್ತವೆ. ಪ್ರತಿ ಏಕಾಂಶವು ಹೊರಭಾಗದಲ್ಲಿ ಪಾರದರ್ಶಕ ಪಟಲ, ಶಂಕು ಮತ್ತು ದಿಂಡುಗಳನ್ನು ಹೊಂದಿರುತ್ತದೆ. ದೃಷ್ಟಿಕೋನ ಎಂಟು ಅಕ್ಷಿಪಟಲ ಕೋಶಗಳಿಂದ ಸುತ್ತುವರಿದಿರುತ್ತದೆ. ಸ್ಫಟಿಕದ ಶಂಕುವಿನ ಹಿಂಬದಿಯು ಪಾರದರ್ಶಕ ಪಟಲದ ವರ್ಣಕೋಶಗಳಿಂದ ಕೂಡಿದೆ. ಜೇನು ನೊಣಗಳು ತಮ್ಮ ಕೂಡು ಕಣ್ಣುಗಳಲ್ಲಿ ಅಸಂಖ್ಯಾತ ಮಸೂರಗಳಿದ್ದು ಅತಿ ದೂರ ಮತ್ತು ಸೂಕ್ಷ್ಮವಾದ ಚಲನವಲನಗಳನ್ನು ತಿಳಿಯಲು ಸಹಾಯಕವಾದರೆ ಸರಳ ಕಣ್ಣುಗಳಲ್ಲಿ ಒಂದೊಂದು ಮಸೂರವಿದ್ದು ಸಮೀಪವಿರುವ ವಸ್ತುಗಳನ್ನು ಮತ್ತು ಬೆಳಕಿನ ತೀವ್ರತೆಯನ್ನು ಗುರುತಿಸಲು ನೆರವಾಗುತ್ತವೆ.

ಕುಡಿ ಮೀಸೆ : ಕುಡಿಮೀಸೆಯಲ್ಲಿ ಮೂರು ವಿಭಾಗಗಳು – ಬುಡ, ವೃಂತ ಮತ್ತು ಕಶಾಂಗ, ಬುಡ ಮತ್ತು ವೃಂತ ಒಂದೊಂದು ತುಂಡಿನ ಭಾಗವಾಗಿ ಕಶಾಂಗ ಅನೇಕ ತುಂಡುಗಳಿಂದ ಕೂಡಿರುತ್ತದೆ. ಕುಡಿಮೀಸೆಗಳು ಉದ್ದವಾಗಿದ್ದು ರಾಣಿನೊಣ ಮತ್ತು ಕೆಲಸಗಾರ ನೊಣಗಳಲ್ಲಿ ೧೧ ಮತ್ತು ಗಂಡು ನೊಣಗಳಲ್ಲಿ ೧೨ ತುಂಡುಗಳಿರುತ್ತವೆ. ತಲೆಗೆ ಅಂಟಿಕೊಂಡಿರುವ ನಾಲ್ಕು ಸ್ನಾಯುಗಳು ಕುಡಿ ಮೀಸೆ ಅಲುಗಾಡಿಸುವಿಕೆಯನ್ನು ನಿಯಂತ್ರಣದಲ್ಲಿಡುತ್ತವೆ. ಕೆಲಸಗಾರ ನೊಣಗಳು ತಮ್ಮ ಕುಡಿಮೀಸೆಗಳನ್ನು ಇತರೆ ನೊಣಗಳೊಂದಿಗೆ ಸ್ಪರ್ಶಿಸುವುದರ ಮೂಲಕ ಸಂವಹನ ಕ್ರಿಯೆಯನ್ನು ನಡೆಸುತ್ತವೆ. ಈ ಕುಡಿಮೀಸೆಗಳ ರಚನೆಗಳಿಂದ ರುಚಿ, ಹೂಗಳ ಸುವಾಸನೆ, ಶತ್ರುಗಳಿಂದ ರಕ್ಷಣೆ, ಗಾಳಿ ಬೀಸುವ ದಿಕ್ಕು, ಶಬ್ದ, ಉಷ್ಣತೆ, ತೇವಾಂಶ ಮುಂತಾದವುಗಳನ್ನು ತಿಳಿಯಲು ಸಾಧ್ಯವಾಗುತ್ತದೆ.

ಬಾಯಿಯ ಭಾಗಗಳು : ಜೇನುನೊಣಗಳ ಬಾಯಿಯ ಭಾಗಗಳು ಅಗಿದು ನೆಕ್ಕುವ ಬಗೆಯದಾಗಿವೆ. ಅವು ಘನ ಪದಾರ್ಥಗಳನ್ನು ದ್ರವಪದಾರ್ಥಗಳನ್ನಾಗಿ ಪರಿವರ್ತಿಸಿ ನೆಕ್ಕುತ್ತವೆ. ತಲೆಯ ಇಕ್ಕೆಲಗಳಿಗೂ ಅಂಟಿಕೊಂಡಿರುವ ಒಂದು ಜೊತೆ ಮೇಲ್ದವಡೆಗಳು, ಕೆಳದವಡೆ ಮತ್ತು ಕೆಳತುಟಿಗಳಿಂದ ಕೂಡಿರುವ ನಾಲಗೆ ಇರುತ್ತದೆ. ದವಡೆಗಳು ಗಟ್ಟಿಯಾಗಿದ್ದು ಬಲಯುತ ಸ್ನಾಯುಗಳಿಂದ ತಲೆಯಭಾಗಕ್ಕೆ ಅಂಟಿಕೊಂಡಿರುತ್ತವೆ. ಕೆಲಸಗಾರ ನೊಣಗಳ ದವಡೆಗಳು ಆಹಾರವನ್ನು ಅಗಿಯಲು, ಮೇಣ ಮತ್ತು ಜೇನು ಅಂಟನ್ನು ಬೇಕಾದ ಆಕಾರಕ್ಕೆ ಪರಿವರ್ತಿಸಲು ಮರಿಹುಳು ಮತ್ತು ರಾಣಿಗೆ ಆಹಾರವನ್ನು ತಿನ್ನಿಸಲು, ಕುಟುಂಬದ ಸ್ವಚ್ಛತೆಯನ್ನು ಕಾಪಾಡಲು ಮತ್ತು ಶತ್ರುಗಳನ್ನು ಎದುರಿಸಲು ಸಶಕ್ತವಾಗಿರುತ್ತವೆ.

ಕೆಲಸಗಾರಜೇನುನೊಣದ ತಲೆಯ ಭಾಗಗಳು

 ನಾಲಗೆಯು ದ್ರಪದಾರ್ಥಗಳಿಂದ ಕೂಡಿದ ಮಕರಂದ, ಜೇನುತುಪ್ಪ ಮತ್ತು ನೀರನ್ನು ಶರೀರದೊಳಗೆ ತೆಗೆದುಕೊಳ್ಳಲು ಸಹಾಯಕವಾಗುತ್ತದೆ. ಇದು ವಿವಿಧ ಜಾತಿಯ ನೊಣಗಳೊಂದಿಗೆ ಆಹಾರವನ್ನು ವಿನಿಮಯ ಮಾಡಿಕೊಳ್ಳಲು, ಚೋದಕ ರಾಸಾಯನಿಕಗಳನ್ನು ನೆಕ್ಕುವ ಮೂಲಕ ಗೂಡಿನಲ್ಲಿ ಹರಡಲು ಸಹಾಯವಾಗುತ್ತದೆ. ಕೆಳದವಡೆಯ ಗೇಲಿಯಾ ಮತ್ತು ಕೆಳತುಟಿಯ ತುಂಡುಗಳು ಸೇರಿ ನಾಲಿಗೆಯ ಸುತ್ತಲು ನಳಿಕೆಯಾಕಾರದಲ್ಲಿ ಜಿಹ್ವೆಯಾಗಿ ಮಾರ್ಪಟ್ಟಿವೆ. ಜಿಹ್ವೆಯು ಹೆಚ್ಚು ಕೂದಲುಗಳಿಂದ ಕೂಡಿದ ನಾಲಗೆಯಾಗಿದ್ದು ಗಟ್ಟಿಯಾದ ಫಲಕಗಳಿಂದ ಕುಡಿದೆ. ಇದರ ತುಟಿಯಲ್ಲಿನ ಕಶಾಂಗದಿಂದ ದ್ರಪದಾರ್ಥಗಳನ್ನು ನೆಕ್ಕಿ ಬಾಯಿಯ ಭಾಗಕ್ಕೆ ಬಿಡುತ್ತದೆ. ಜಿಹ್ವೆಯ ಬುಡದಲ್ಲಿ ಸ್ನಾಯುಗಳಿಂದ ಕುಡಿದ ಟೊಳ್ಳಾದ ಸೈಬೇರಿಯಂ ಎಂಬ ಭಾಗವು ದ್ರವಪದಾರ್ಥಗಳನ್ನು ಎಳೆಯಲು ಸಹಾಯಕವಾಗುತ್ತದೆ. ದ್ರವಪದಾರ್ಥಗಳ ಚಲನೆಯು ಜಿಹ್ವೆಯ ಚಲನೆಯನ್ನು ಅವಲಂಭಿಸಿದ್ದು ಸ್ನಾಯುಗಳ ಶಕ್ತಿಯಿಂದ ದ್ರವಪದಾರ್ಥಗಳನ್ನು ನೆಕ್ಕುತ್ತವೆ (ಚಿತ್ರ ೧೦).

ಎದೆ : ಎದೆಯು ಜೇನುನೊಣದ ದೇಹದ ಎರಡನೇ ಭಾಗವಾಗಿದ್ದು ಮುರು ತುಂಡುಗಳಿಂದ ಕೂಡಿರುತ್ತದೆ. ಎದೆಯ ಮೊದಲನೆ ತುಂಡನ್ನು ಮುನ್ನೆದೆ ಎಂದು ಕರೆಯಲಾಗಿದ್ದು ಮೊದಲನೆ ಜೊತೆ ಕಾಲುಗಳನ್ನು ಹೊಂದಿರುತ್ತದೆ. ಎರಡನೆ ತುಂಡನ್ನು ಮಧ್ಯದ ಎದೆ ಎಂದು ಕರೆಯಲಾಗಿದ್ದು ಎರಡನೆ ಜೊತೆ ಕಾಲುಗಳನ್ನು ಮತ್ತು ಮುಂದಿನ ರೆಕ್ಕೆಗಳನ್ನು ಹೊಂದಿರುತ್ತದೆ. ಮೂರನೇ ತುಂಡನ್ನು ಹಿನ್ನೆದೆ ಎಂದು ಕರೆಯಲಾಗಿದ್ದು ಮೂರನೆ ಜೊತೆ ಕಾಲುಗಳನ್ನು ಮತ್ತು ಹಿಂದಿನ ರೆಕ್ಕೆಗಳನ್ನು ಹೊಂದಿರುತ್ತದೆ. ಹಿನ್ನೆದೆಯು ಹೊಟ್ಟೆಯ ಮೊದಲ ತುಂಡಿನೊಂದಿಗೆ ಅಂಟಿಕೊಂಡಿದ್ದು ಅದನ್ನು ಪ್ರೊಪ್ರೊಡಿಯಂ ಎಂದು ಕರೆಯಲಾಗುತ್ತದೆ. ಪ್ರೊಪ್ರೊಡಿಯಂ ಜೇನುನೊಣಗಳ ಪ್ರಧಾನ ಲಕ್ಷಣವಾಗಿದ್ದು ದೇಹವು ಮುಕ್ತವಾಗಿ ಚಲಿಸಲು ಸಹಾಯಕವಾಗುತ್ತದೆ. ಎದೆಯು ಕೆಲಸಗಾರ ನೊಣಗಳಲ್ಲಿ ಹೆಚ್ಚಿನ ಕೂದಲುಗಳಿಂದ ಕೂಡಿದ್ದರೆ ಗಂಡುನೊಣಗಳಲ್ಲಿ ಕಡಿಮೆ ಕೂದಲು ಮತ್ತು ರಾಣಿನೊಣದ ಎದೆ ಕೂದಲು ರಹಿತವಾಗಿರುತ್ತದೆ.

ಕಾಳುಗಳು : ಜೇನುನೊಣಗಳಲ್ಲಿ ಮೂರು ಜೊತೆ ಕಾಲುಗಳಿದ್ದು ಒಂದೊಂದು ಜೊತೆ ಮುನ್ನೆದೆ, ಮಧ್ಯದ ಎದೆ ಮತ್ತು ಹಿನ್ನೆದೆ ಪಕ್ಕಗಳಲ್ಲಿ ಕಂಡು ಬರುತ್ತವೆ. ಪ್ರತಿ ಕಾಲು ಸೊಂಟ, ತೊಡೆಯ ಗುಬುಟು, ತೊಡೆ, ಮೊಣಕಾಲು, ಪಾದ ಮತ್ತು ಮುಂದಿನ ಪಾದಗಳೆಂಬ ಆರು ಪ್ರಮುಖ ಭಾಗಗಳಿಂದ ಕೂಡಿವೆ (ಚಿತ್ರ ೧೧). ಪಾದವು ಅನೇಕ ಚಿಕ್ಕ ಭಾಗಗಳಾಗಿ ವಿಂಗಡನೆಯಾಗಿರುತ್ತದೆ. ಮುಂದಿನ ಪಾದವು ಚಿಕ್ಕ ಭಾಗವಾಗಿದ್ದು ಒಂದು ಜೊತೆ ಪಕ್ಕದ ಉಗುರುಗಳನ್ನು ಮಧ್ಯ ಭಾಗದಲ್ಲಿ ಆರೋಲಿಯಂ ಎಂಬ ರಚನೆಯನ್ನು ಹೊಂದಿರುತ್ತದೆ, ಕಾಲಿನ ಕೊನೆಯ ಭಾಗಗಳು ಸುಲಭವಾಗಿ ನಡೆಯಲು ಮತ್ತು ಉಗುರುಗಳು ಸಮಾನಾಂತರ ವಸ್ತುಗಳ ಮೇಲೆ ನಡೆಯಲು ಸಹಾಯಕವಾಗುತ್ತವೆ. ಎರಿಯನ್ನು ಕಟ್ಟುವಾಗ ಮೇಣವನ್ನು ಅರೆಯಲು ಈ ಉಗುರುಗಳನ್ನು ಉಪಯೋಗಿಸುತ್ತವೆ. ಜೇನುನೊಣಗಳ ಕಾಲುಗಳು ಸೂಕ್ತ ರಚನೆಗಳನ್ನು ಹೊಂದಿದ್ದು ನಿಗದಿತ ಕಾರ್ಯದಲ್ಲಿ ಬಳಕೆಯಾಗುತ್ತವೆ. ಮುಂದಿನ ಕಾಲುಗಳ ಕೂದಲಿನಿಂದ ಕೂಡಿದ ಕುಂಚವನ್ನು ತಲೆಯ ಭಾಗದಿಂದ ಧೂಳು, ಪರಾಗ ಮತ್ತು ಅನಗತ್ಯ ಪದಾರ್ಥಗಳನ್ನು ಶುಚಿಗೊಳಿಸಲು ಬಳಸುತ್ತವೆ. ಮುಂಗಾಲುಗಳಲ್ಲಿ ಪಾದದ ಮಾರ್ಪಾಡಿದ್ದು ಇದು ಕುಡಿ ಮೀಸೆಗೆ ಯಾವುದೇ ಪದಾರ್ಥವು ಅಂಟಿಕೊಂಡಲ್ಲಿ ಶುಚಿಗೊಳಿಸಲು ಸಹಾಯಕವಾಗುತ್ತದೆ. ಮಧ್ಯದ ಕಾಲುಗಳು ಕೂದಲಿನಿಂದ ಕೂಡಿದ್ದು ಅದರ ಮೊಣಕಾಲಿನ ಮೇಲಿನ ಮುಳ್ಳು ಎರಿಯಲ್ಲಿನ ಮೇಣದ ಕಣಗಳನ್ನು ರಚಿಸುವಲ್ಲಿ ಉಪಯೋಗಿಸಲಾಗುತ್ತದೆ. ಹಿಂದಿನ ಕಾಲುಗಳಲ್ಲಿ ಪರಾಗ ಬುಟ್ಟಿಯ ರಚನೆಯಿದ್ದು ಪರಾಗವನ್ನು ತರಲು ಅಗತ್ಯವಾಗಿರುತ್ತದೆ. ಕೆಲಸಗಾರ ಜೇನುನೊಣಗಳ ಕಾಲುಗಳಲ್ಲಿನ ಮಾರ್ಪಾಡು ರಾಣಿ ಮತ್ತು ಗಂಡು ನೊಣಗಳಲ್ಲಿರುವುದಿಲ್ಲ. 

ಕೆಲಸಗಾರ ಜೇನುನೊಣದ ಮಧ್ಯದ ಕಾಲು ಮತ್ತು ಹಿಂಗಾಲಿನ ರಚನೆ

ರೆಕ್ಕೆಗಳು : ರೆಕ್ಕೆಗಳು ತೆಳುವಾದ ಪಾರದರ್ಶಕ ಪೊರೆಯಿಂದ ಕೂಡಿ ದೇಹವನ್ನು ಮುಚ್ಚಿರುತ್ತವೆ. ಜೇನು ನೊಣಗಳ ಎರಡು ಜೊತೆ ರೆಕ್ಕೆಗಳಲ್ಲಿ ಮುಂದಿನ ಜೊತೆ ದೊಡ್ಡವಾಗಿದ್ದು ತ್ರಿಭುಜಾಕೃತಿಯಲ್ಲಿ ಹೊರ ಮೇಲ್ಮೈ ಹೊಂದಿರುತ್ತವೆ (ಚಿತ್ರ ೧೨). ಹಿಂದಿನ ರೆಕ್ಕೆಗಳು ಗಾತ್ರದಲ್ಲಿ ಚಿಕ್ಕವಾಗಿದ್ದು ಇದರ ಹೊರ ಭಾಗದಲ್ಲಿ ಹ್ಯಾಮುಲೈ ಎಂಬ ಕೊಂಡಿಯಂತಹ ರಚನೆಯು ಮುಂದಿನ ರೆಕ್ಕೆಯೊಂದಿಗೆ ಕೂಡಿಕೊಳ್ಳಲು ಸಹಾಯಕವಾಗುತ್ತದೆ. ಇದನ್ನು ರೆಕ್ಕೆ ಜೋಡಿಸುವಿಕೆಯ ಯಾಂತ್ರಿಕ ಕ್ರಮವೆಂದು ಕರೆಯಲಾಗಿದ್ದು ವಿಶೇಷವಾಗಿ ಜೇನುನೊಣಗಳಲ್ಲಿ ಮಾತ್ರ ಕಂಡು ಬರುತ್ತದೆ.

ಕೆಲಸಗಾರ ಜೇನುನೊಣದ ಮುಂದಿನ ಮತ್ತು ಹಿಂದಿನ ರೆಕ್ಕೆಯ ಸ್ನಾಯುಗಳು

ರೆಕ್ಕೆಗಳು ಬಲಿಷ್ಠ ಜೇನುನೊಣಗಳು ವೇಗದಿಂದ ಹಾರಲು ಶಕ್ತವಾಗಿವೆ ಹಾಗೂ ಗೂಡನ್ನು ಸೇರುವಾಗ ರೆಕ್ಕೆಗಳನ್ನು ಮಡಚಿಕೊಂಡು ಒಳಗೆಹೋಗುತ್ತವೆ. ಜೇನುನೊಣಗಳಲ್ಲಿ ಬಲವುಳ್ಳ ಸ್ನಾಯುಗಳು ಎದೆಯ ಭಾಗದಲ್ಲಿರುವುದರಿಂದ ನೊಣಗಳು ವೇಗದಿಂದ ಹಾರಲು ಸಮರ್ಥವಾಗಿವೆ. ಒಂದು ಜೊತೆ ಸ್ನಾಯುಗಳು ಮುಂದೂಡಲು ಸಹಕಾರಿಯಾದರೆ ಇನ್ನೊಂದು ಜೊತೆ ಹಿಂದೂಡಲು ಸಹಕಾರಿಯಾಗುತ್ತವೆ. ಇವು ಎಷ್ಟು ವೇಗದಿಂದ ಹಾರುತ್ತಿದ್ದರೂ ತಕ್ಷಣವೇ ನಿಲ್ಲುವುದು ಹಾಗೂ ತಕ್ಷಣವೇ ಅತಿ ವೇಗದಲ್ಲಿ ಹಾರುವುದು ಜೇನುನೊಣಗಳಿಗೆ ಸಾಮಾನ್ಯ. ಗಂಡು ನೊಣಗಳು ಕೆಲಸಗಾರ ನೊಣಗಳಿಗಿಂತ ಸ್ವಲ್ಪ ಮಟ್ಟಿಗೆ ದೊಡ್ಡವಾಗಿದ್ದರೂ ದವಡೆಯಲ್ಲಿ ಕಚ್ಚಿಕೊಂಡು ದೂರ ಹಾರಿ ಬಿಸಾಡುವುದನ್ನು ನೊಣಗಳಲ್ಲಿರುವ ಸ್ನಾಯುಗಳ ಶಕ್ತಿಯನ್ನು ತೋರಿಸುತ್ತದೆ.

ಹೊಟ್ಟೆ : ಜೇನುನೊಣದ ಹೊಟ್ಟೆ ೧೦ ತುಂಡುಗಳಿಂದ ಕೂಡಿ, ಮೊದಲ ತುಂಡು ಎದೆಯ ಭಾಗದೊಂದಿಗೆ ಸೇರಿಕೊಂಡಿದೆ. ಕೆಲಸಗಾರ ಮತ್ತು ರಾಣಿನೊಣದ ಹೊಟ್ಟೆಯಲ್ಲಿನ ಆರು ತುಂಡುಗಳು ಸ್ಪಷ್ಟವಾಗಿ ಕಂಡುಬಂದರೆ ಉಳಿದ ತುಂಡುಗಳು ಕೊನೆಯ ತುಂಡಿನೊಂದಿಗೆ ಹೊಂದಿಕೊಂಡಿರುತ್ತವೆ. ಆದರೆ ಗಂಡುಜೇನುನೊಣಗಳಲ್ಲಿ ಏಳು ತುಂಡುಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಹೊಟ್ಟೆಯ ಭಾಗದಲ್ಲಿ ನಾಲ್ಕು ಜೊತೆ ಮೇಣದ ಗ್ರಂಥಿಗಳು, ಸುವಾಸನಾ ಗ್ರಂಥಿಗಳು ಹಾಗೂ ಕೆಲಸಗಾರ ಮತ್ತು ರಾಣಿನೊಣಗಳಲ್ಲಿ ಮುಳ್ಳಿನಕೊಂಡಿಗಳಿರುತ್ತವೆ.

ವಿಷದ ಕೊಂಡಿ : ವಿಷದ ಕೊಂಡಿ ಉದ್ದವಾಗಿ ಮೊಟ್ಟೆ ಇಡುವಂತಹ ಅವಯವದ ರಚನೆಯಾಗಿದ್ದು ಕುಟುಂಬದ ರಕ್ಷಣಾ ಆಯುಧವಾಗಿ ಮಾರ್ಪಾಡಾಗಿದೆ. ವಿಷದ ಕೊಂಡಿ ಹೊಟ್ಟೆಯ ಏಳನೆ ತುಂಡಿನ ಮೇಲ್ಭಾಗದ ಕೋಣೆಯಲ್ಲಿದ್ದು ಮತ್ತು ಕೆಳಭಾಗದ ಫಲಕಗಳ ನಡುವೆ ಕಂಡುಬರುತ್ತದೆ. ವಿಷದ ಕೊಂಡಿ ಏಳು ಜೊತೆ ಫಲಕಗಳಿಂದ ಕೂಡಿ ಕೊಂಡಿಯ ಭಾಗಕ್ಕೆ ಅಂಟಿಕೊಂಡಿರುವ ಚಲನೆಯ ಹಾಗೂ ಉದ್ದವಾದ ತೂರಿಸುವ ಎರಡೂ ಭಾಗಗಳು ಒಂದಕ್ಕೊಂದು ಪರಸ್ಪರ ಹೊಂದಿಕೊಂಡಿವೆ.

ವಿಷದ ಕೊಂಡಿಯಲ್ಲಿ ಸೂಜಿಯಂತಹ ಒಂದು ಸ್ಟೈಲೆಟ್ ಮತ್ತು ಎರಡು ಈಟಿಗಳಿರುತ್ತವೆ. ಸ್ಟೈಲೆಟ್ ಅಡಿಭಾಗವು ಉಬ್ಬಿಕೊಂಡಿದ್ದು ಇದಕ್ಕೆ ಒಂದು ಜೊತೆ ಚೂಪಾದ ಕಾಂಡೈಲುಗಳಿರುತ್ತವೆ. ಪ್ರತಿ ಈಟಿಗೆ ಒಂದು ಮೇಲಿನ ಜಾಡಿ ಇರುತ್ತದೆ. ಸ್ಟೈಲೆಟ್ ಮತ್ತು ಈಟಿಗಳು ವಿಷ ಕೊಳವೆಯಾಗಿ ಮಾರ್ಪಾಡಾಗಿ ವಿಷಚೀಲದಿಂದ ವಿಷವು ಕೊಂಡಿಗೆ ಹರಿಯುತ್ತದೆ. ಈಟಿಗಳು ಗಟ್ಟಿಯಾಗಿದ್ದು ಕೆಲಸಗಾರ ನೊಣಗಳಲ್ಲಿ ಚೆನ್ನಾಗಿ ವೃದ್ಧಿಯಾಗಿರುತ್ತವೆ. ರಾಣಿನೊಣದ ಕೊಂಡಿಯಮುಳ್ಳು ಚೂಪಾಗಿರುವುದರಿಂದ ಅದರ ವಿಷ ಕೊಂಡಿ ಸುಲಭವಾಗಿ ಕಳಚಿಕೊಳ್ಳುವುದಿಲ್ಲ. ಆದರೆ ಕೆಲಸಗಾರ ನೊಣಗಳಲ್ಲಿ ವಿಷ ಕೊಂಡಿ ಬಗ್ಗಿರುವ ಮುಳ್ಳು ಕೊಕ್ಕೆಗಳಿಂದ ಕೂಡಿರುವುದರಿಂದ ಚುಚ್ಚಿದಾಗ ಸುಲಭವಾಗಿ ಕಳಚಿಕೊಳ್ಳುತ್ತದೆ. ವಿಷದ ಕೊಂಡಿಗೆ ಮೂರು ಜೊತೆ ತಟ್ಟೆಗಳು ಅಂಟಿಕೊಂಡಿದ್ದು ಕೊಂಡಿಯ ಸ್ರರ್ಶಾಂಗವು ವಿಷಜಾಲ, ವಿಷಗ್ರಂಥಿ ಮತ್ತು ಕ್ಷಾರೀಯ ಗ್ರಂಥಿಗಳಿಂದ ಕೂಡಿರುತ್ತವೆ. ಈ ಎಲ್ಲಾ ಅಂಗಾಂಗಗಳು ಚುಚ್ಚುವ ಕ್ರಿಯೆಯಲ್ಲಿ ಪಾಲ್ಗೊಂಡು ಸ್ನಾಯುಗಳ ಕ್ರಿಯೆಯಿಂದಾಗಿ ಕೊಂಡಿ ಮುಖಾಂತರ ವಿಷ ಶತ್ರುವಿನ ಚರ್ಮದೊಳಗೆ ತೂರುತ್ತದೆ (ಚಿತ್ರ ೧೩).

ವಿಷಕೊಂಡಿಯ ರಚನೆ

ಜೇನುನೊಣದ ಗ್ರಂಥಿಗಳು :  ಗ್ರಂಥಿಗಳು ಸ್ರವಿಸುವ ಅಂಗಗಳಾಗಿದ್ದು ಕಣಗಳಿಂದ ಕೂಡಿರುತ್ತವೆ. ನಿರ್ನಾಳ ಗ್ರಂಥಿಗಳು ಸ್ರವಿಕೆಯನ್ನು ರಕ್ತಕ್ಕೆ ನೇರವಾಗಿ ಸೇರಿಸುತ್ತವೆ. ಜೇನುನೊಣಗಳಲ್ಲಿ ಮುಖ್ಯವಾಗಿ ಜುವೆನೈಲ್ ಹಾರ್ಮೋನ್ ಕಾರ್ಪೊರಾ ಅಲ್ಲೇಟ ಗ್ರಂಥಿಯಿಂದಲೂ ಮತ್ತು ಎಕ್‌ಡೈಸೋನ ಹಾರ್ಮೋನ್ ಮುನ್ನೆದೆಯ ಗ್ರಂಥಿಗಳಿಂದ ಸ್ರವಿಸಲ್ಪಡುತ್ತವೆ (ಜೇನುನೊಣಗಳ ವಿವಿಧ ಗ್ರಂಥಿಗಳನ್ನು ಚಿತ್ರ ೧೪ ರಲ್ಲಿ ತೋರಿಸಲಾಗಿದೆ). ನಾಳಗ್ರಂಥಿಗಳು ನಾಳದ ಮುಲಕ ಸ್ರವಿಕೆಯನ್ನು ಹೊರ ಸೂಸುತ್ತವೆ. ಕೆಲಸಗಾರ ನೊಣಗಳಲ್ಲಿ ಗ್ರಂಥಿಗಳು ಅನೇಕ ಸ್ರವಿಕೆಯನ್ನು ಸ್ರವಿಸುವುದರಿಂದ ಕುಟುಂಬದ ಕಾರ್ಯಚಟುವಟಿಕೆಗಳಿಗೆ ಬಳಸುತ್ತವೆ.

ದವಡೆ ಗ್ರಂಥಿಗಳು : ಒಂದು ಜೊತೆ ದವಡೆ ಗ್ರಂಥಿಗಳು ತಲೆಯ ಎರಡು ಕಡೆ ದವಡೆಗಳಿಗೆ ನಾಳದಿಂದ ಅಂಟಿಕೊಂಡಿರುತ್ತವೆ. ಇವು ಯುವ ಕೆಲಸಗಾರ ನೊಣಗಳಲ್ಲಿ ೧೦ ಹೈಡ್ರಾಕ್ಸಿ ೨ – ಡೆಸಿನೋಯಿಕ್ ಆಮ್ಲ, ಆಕ್ಟನೋಯಿಕ್ ಆಮ್ಲ ಮತ್ತು ಇತರೇ ಆವಿಯಾಗುವ ಆಮ್ಲಗಳನ್ನು ಹೊಂದಿದ್ದು ಮರಿಗಳ ಆಹಾರವನ್ನು ಸ್ರವಿಸಿದರೆ, ವಯಸ್ಸಾದ ನೊಣಗಳಲ್ಲಿ ಎಚ್ಚರಿಕೆಯ ಪದಾರ್ಥವಾದ ೨ – ಹೆಪ್ಟ್ರೋನೋನ್ ಸ್ರವಿತವಾಗುತ್ತದೆ. ರಾಣಿಯಲ್ಲಿ ದವಡೆ ಗ್ರಂಥಿಗಳು ಚೆನ್ನಾಗಿ ಬೆಳವಣಿಗೆಯಾಗಿದ್ದು ಅದರ ಸ್ರವಿಕೆ ೯ – ಕೀಟೋ – ೨ ಡೆಸಿನೋಯಿಕ್ ಆಮ್ಲ ಮತ್ತು ೯ ಹೈಡ್ರಾಕ್ಸಿ ೨ – ಡೆಸಿನೋಯಿಕ್ ಆಮ್ಲಗಳನ್ನು ಹೊಂದಿರುತ್ತದೆ. ಈ ಸ್ರವಿಕೆಗಳು ಕೆಲಸಗಾರ ನೊಣಗಳು ರಾಣಿ ಬೆಳೆಸುವುದನ್ನು ಸ್ಥಗಿತಗೊಳಿಸುವುದು, ಕೆಲಸಗಾರ ನೊಣಗಳ ಮೊಟ್ಟೆ ಇಡುವುದನ್ನು ತಪ್ಪಿಸುವುದು, ಗಂಡು ನೊಣಗಳನ್ನು ಜೋಡಿಯಾಗಲು ಆಕರ್ಷಿಸುವುದು ಮುಂತಾದ ಕಾರ್ಯಗಳಲ್ಲಿ ಭಾಗವಹಿಸುತ್ತವೆ.

ಕೆಲಸಗಾರ ಜೇನುನೊಣದಲ್ಲಿನ ವಿಶೇಷ ಗ್ರಂಥಿಗಳ ವ್ಯೂಹ

 ಹೈಪೋಪೆರೆಂಜಿಯಲ್ ಗ್ರಂಥಿಗಳು :  ಈ ಗ್ರಂಥಿಗಳು ಮುಂದಿನ ತಲೆಯ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಅವು ಕೆಲಸಗಾರ ನೊಣಗಳಲ್ಲಿ ಮತ್ತು ರಾಣಿ ನೊಣದಲ್ಲಿ ಚೆನ್ನಾಗಿ ಬೆಳವಣಿಗೆಯಾಗಿದ್ದರೆ ಗಂಡುನೊಣಗಳಲ್ಲಿ ಬೆಳೆದಿರುವುದಿಲ್ಲ. ಈ ಗ್ರಂಥಿಗಳಿಂದ ಹಾಲಿನಂತಹ ಸ್ರವಿಕೆಯಾದ ರಾಜಶಾಹಿರಸವು ಸ್ರವಿತವಾಗಿ ಮೊದಲ ಮೂರುದಿನಗಳವರೆಗಿನ ಎಲ್ಲ ಜಾತಿಯ ಮರಿಗಳೂ ಮತ್ತು ರಾಣಿ ಮರಿಯ ಪೂರ್ಣಾವಸ್ಥೆಯುದ್ದಕ್ಕೂ ತಿನ್ನಿಸುತ್ತವೆ. ಆದರೆ  ಬೆಳೆದಿರುವ ಕೆಲಸಗಾರ ನೊಣಗಳಲ್ಲಿ ಮುಖ್ಯವಾಗಿ ಇನ್ವ್‌ರ್ಟೆಸ್ ಎಂಬ ಕಿಣ್ವವು ತಯಾರಾಗಿ ಮಕರಂದವನ್ನು ಜೇನುತುಪ್ಪವನ್ನಾಗಿ ಪರಿವರ್ತಿಸಲು ಸಹಾಯಕವಾಗುತ್ತದೆ. ಈ ಗ್ರಂಥಿಗಳು ಮರಿಗಳ ಆಹಾರವಾದ ೧೦ – ಹೈಡ್ರಾಕ್ಸಿ ೨ – ಡೆಸಿನೋಯಿಕ್ ಆಮ್ಲವನ್ನು ಸಹ ಸ್ರವಿಸುತ್ತವೆ.

ಲಾಲಾ ರಸಗ್ರಂಥಿಗಳು : ಈ ಗ್ರಂಥಿಗಳು ನಾಲಿಗೆಯ ಛಾವಣಿಯಲ್ಲಿ ಕಂಡುಬರುತ್ತಿದ್ದು ಲಾಲಾ ರಸವನ್ನು ಸ್ರವಿಸುತ್ತವೆ. ಈ ಸ್ರವಿಕೆಯು ಸಕ್ಕರೆಗಳನ್ನು ಜೀರ್ಣಿಸಲು ಮತ್ತು ಆಹಾರವನ್ನು ಮೆದು ಮಾಡಲು ಉಪಯೋಗಿಸುತ್ತವೆ.

ಮೇಣದ ಗ್ರಂಥಿಗಳು : ಕೆಲಸಗಾರ ಜೇನುನೊಣಗಳಲ್ಲಿ ನಾಲ್ಕು ಜೊತೆ ಮೇಣದ ಗ್ರಂಥಿಗಳು ಹೊಟ್ಟೆಯ ನಾಲ್ಕರಿಂದ ಏಳನೆ ತುಂಡುಗಳ ಕೆಳಭಾಗದ ಗಾಜಿನಂತಹ ಭಾಗಗಳ ಮೇಲೆ ಕಂಡು ಬರುತ್ತವೆ. ಮೇಣ ಮೊದಲು ದ್ರವರೂಪದಲ್ಲಿ ಸ್ರವಿತವಾಗಿ ತಟ್ಟೆಯಾಕಾರದಲ್ಲಿ ಗಟ್ಟಿಯಾಗುತ್ತದೆ. ಗಟ್ಟಿಯಾದ ಮೇಣವನ್ನು ನೊಣಗಳು ತಮ್ಮ ಬಾಯಿ ಹಾಗೂ ಕಾಲುಗಳ ಸಹಾಯದಿಮದ ಎರಿಗಳನ್ನು ಕಟ್ಟಲು ಉಪಯೋಗಿಸುತ್ತವೆ.

ಸುವಾಸನಾ / ನೆಸೊನೋವ್ ಗ್ರಂಥಿ :  ಕೆಲಸಗಾರ ನೊಣಗಳ ಹೊಟ್ಟೆಯ ಏಳನೇ ತುಂಡಿನ ಮೇಲ್ಭಾಗದಲ್ಲಿ ಸುವಾಸನಾ ಗ್ರಂಥಿಗಳು ಕಂಡು ಬರುತ್ತವೆ. ರಾಣಿನೊಣದ ಸುವಾಸನಾ ಗ್ರಂಥಿಗಳು ಕೆಲಸಗಾರ ನೊಣದ ಸುವಾಸನಾ ಗ್ರಂಥಿಗಳಿಗಿಂತ ದೊಡ್ಡವಾಗಿರುತ್ತವೆ. ಈ ಗ್ರಂಥಿಗಳ ಸ್ರವಿಕೆ ಜೆರೇನಿಯಾಲ್, ನೆರೋಲಿಕ್ ಆಮ್ಲ, ಜೆರೇನಿಕ್ ಆಮ್ಲ, ನೆರೇಲ್ ಮುಂತಾದ ಏಳು ರೀತಿಯ ರಾಸಾಯನಿಕಗಳಿಂದ ಕೂಡಿದ್ದು ಮುಖ್ಯವಾಗಿ ಗೂಡಿನ ದಿಕ್ಕು, ಹೂಗಳು ಮತ್ತು ನೀರಿನ ಸ್ಥಳಗಳನ್ನು ಗುರುತಿಸಲು ಉಪಯೋಗಿಸುತ್ತವೆ.

ವಿಷ ಗ್ರಂಥಿಗಳು : ವಿಷಗ್ರಂಥಿಯ ಕಣಗಳು ವಿಷವನ್ನು ಸ್ರವಿಸಿ ವಿಷ ಚೀಲದಲ್ಲಿ ಕೂಡಿಡುತ್ತವೆ. ಇವು ಸ್ನಾಯುಗಳಿಂದ ಕುಡಿದ್ದು ವಿಷವನ್ನು ಕೊಂಡಿಯ ಮೂಲಕ ಹೊರಸೂಸುತ್ತವೆ. ವಿಷದ ಕೊಂಡಿಯ ಭಾಗಕ್ಕೆ ಹೊಂದಿಕೊಂಡಿರುವ ಮತ್ತೊಂದು ಗ್ರಂಥಿ ಎಂದರೆ ಡ್ಯೂಪರ್ಸನ್ ಗ್ರಂಥಿ. ಈ ಗ್ರಂಥಿಯ ಸ್ರವಿಕೆಯಿಂದ ಕೊಂಡಿ ಶತ್ರುವಿನ ದೇಹದೊಳಗೆ ಸುಲಭವಾಗಿ ತೂರಲು ಅನುವುಮಾಡಿಕೊಡುವುದಲ್ಲದೆ ಮೊಟ್ಟೆಗಳು ಎರಿಯ ಕಣಗಳಿಗೆ ಅಂಟಿಕೊಳ್ಳಲು ಸಹಕಾರಿಯಾಗುತ್ತದೆ.

ದೇಹದಒಳರಚನೆ :

ಜೀರ್ಣವ್ಯೂಹ : ಜೇನುನೊಣಗಳ ಜೀರ್ಣನಾಳವನ್ನು ಮುಂಗರಳು, ಮಧ್ಯ ಕರುಳು ಹಾಗೂ ಹಿಂಗರಳುಗಳಾಗಿ ವಿಂಗಡಿಸಲಾಗಿದೆ (ಚಿತ್ರ ೧೫). ಮುಂಗರಳು ಬಾಯಿಯಿಂದ ಪ್ರಾರಂಭವಾಗಿ ಗಂಟಲನಾಳ ಮತ್ತು ಅನ್ನನಾಳಗಳ ಮೂಲಕ ಜಠರವನ್ನು ಸೇರಿ ಮಕರಂದಚೀಲ ಅಥವಾ ಜೇನು ಹೊಟ್ಟೆಯ ಮೂಲಕ ಮುಂದುವರಿಯುತ್ತದೆ. ಮಕರಂದ ಚೀಲದ ನಂತರದ ಭಾಗವು ಪ್ರೊವೆಂಟ್ರಿಕ್ಯುಲಸ್ ಆಗಿದ್ದು ಮಕರಂದವು ಸ್ವಲ್ಪ ಕಾಲ ಮಕರಂದ ಚೀಲದಲ್ಲಿ ಉಳಿಯುವಂತೆ ಮಾಡುತ್ತದೆ. ಇದು ತ್ರಿಭುಜಾಕೃತಿಯ ಪ್ರೊವೆಂಟ್ರಿಕ್ಯುಲಸ್ ಕವಾಟವನ್ನು ಹೊಂದಿ ಮಧ್ಯಕರುಳಿಗೆ ಹೋಗುವ ಆಹಾರವನ್ನು ನಿಯಂತ್ರಿಸುತ್ತದೆ. ಇದು ಪರಾಗ ಮತ್ತು ಇತರ ಅನಗತ್ಯ ವಸ್ತುಗಳನ್ನು ಸೋಸುತ್ತದೆ.

ಮಧ್ಯಕರುಳಿನ ಹೊರರಚನೆ ಅನೇಕ ಪದರುಗಳಿಂದ ಕೂಡಿರುವುದರಿಂದ ಅಂಗಾಂಗದ ಬಲಿಷ್ಠತೆ  ಮತ್ತು ಜೀರ್ಣಕ್ರಿಯೆ ಹೆಚ್ಚಾಗಿರುತ್ತದೆ. ಮಧ್ಯಕರುಳು ಉದ್ದ ಮತ್ತು ವರ್ತುಳಾಕಾರದ ಸ್ನಾಯುಗಳನ್ನು ಹೊಂದಿ ಈ ಸ್ನಾಯುಗಳು ದಪ್ಪದಾದ ಹೊರಪೊರೆಯ ಮತ್ತು ತೆಳುವಾದ ಪರಿಪುಷ್ಟಿಯ ಪದರಗಳನ್ನು ಹೊಮದಿರುತ್ತವೆ. ಆಹಾರ ಜೀರ್ಣವಾಗುವ ಸಮಯದಲ್ಲಿ ಹೊರಪೊರೆಯು ಕಿಣ್ವಗಳಿಂದ ಕೂಡಿದ ಜೀರ್ಣದ್ರವ ಕಿಣ್ವಗಳನ್ನು ಸ್ರವಿಸಿದರೆ ಜೀರ್ಣವಾದ ವಸ್ತುಗಳು ಪರಿಪುಷ್ಟಿಯ (ಪೆರಿಟ್ರೋಪಿಕ್) ಪದರ ಮತ್ತು ಮಧ್ಯ ಕರುಳಿನ ರಕ್ತವನ್ನು ಸೇರುತ್ತದೆ. ಹಿಂಗರಳು ವಿಸರ್ಜನಾಂಗಗಳಾದ ಮ್ಯಾಲ್ಫಿಜಿಯನ್ ನಾಳಗಳು ಸೇರಿರುವ ಕಡೆಯಿಂದ ಪ್ರಾರಂಭವಾಗಿ ಹೆಚ್ಚಿನ ನೀರು, ಲವಣ ಮತ್ತು ಇತರೆ ಉಪಯುಕ್ತ ವಸ್ತುಗಳನ್ನು ಮತ್ತೆ ಹೀರಿ ಗುದದ್ವಾರದ ಮುಖಾಂತರ ಕಲ್ಮಶಗಳನ್ನು ಹೊರಹಾಕುತ್ತದೆ.

ಕೆಲಸಗಾರ ಜೇನುನೊಣದ ಜೀರ್ಣವ್ಯೂಹ

ವಿಸರ್ಜನಾ ವ್ಯೂಹ : ವಿಸರ್ಜನಾ ಕಾರ್ಯವು ಶರೀರದಲ್ಲಿ ಸಾರಜನಕದಿಂದ ಕೂಡಿದ ನಿರುಪಯೋಗಿ ವಸ್ತುಗಳನ್ನು ವಿಸರ್ಜಿಸಿ, ನೀರು ಮತ್ತು ವಿದ್ಯುದ್ವಾಹಿ ಕಣಗಳ ಸಮತೆಯನ್ನು ಕ್ರಮಗೊಳಿಸುವುದಾಗಿದೆ. ಜೇನುನೊಣಗಳ ವಿಸರ್ಜನೆಯಲ್ಲಿ ಮೂತ್ರಾಮ್ಲವು ಪ್ರಧಾನವಾಗಿರುತ್ತದೆ. ಜೇನು ನೊಣಗಳು ಕಲ್ಮಶಗಳನ್ನು ಮುಖ್ಯವಾಗಿ ಮೂತ್ರನಾಳಗಳ (ಮಾಲ್ಫೀಜಿಯನ್) ಮೂಲಕ ಹೊರಹಾಕಿದರೆ ಇಂಗಾಲದ ಡೈ ಆಕ್ಸೈಡ್ ಮತ್ತು ಸ್ವಲ್ಪ ನೀರನ್ನು ಉಸಿರು ನಾಳ ಹಾಗೂ ಕೆಲವು ಬಾರಿ ಮೂತ್ರ ಕೋಶಗಳ ಮೂಲಕವೂ ಹೊರಹಾಕುತ್ತವೆ.

ಮೂತ್ರನಾಳಗಳು ಸೂಕ್ಷ್ಮವಾದ ಕೂದಲಿನಾಕಾರದ ರಚನೆಗಳಾಗಿ ಹೊಟ್ಟೆಯ ಉದ್ದಕ್ಕೂ ಹಾದು ಹೋಗುತ್ತವೆ. ಇವುಗಳ ಸಂಖ್ಯೆ ಸುಮಾರು ೧೦೦ ಎಂದು ತಿಳಿಯಲಾಗಿದೆ. ಈ ರಚನೆಗಳು ರಕ್ತದಿಂದ ಕಲ್ಮಶಗಳನ್ನು ಹೊರತೆಗೆದು ಜೀರ್ಣನಾಳದ ಮಧ್ಯದ ಮತ್ತು ಹಿಂಗರಳುಗಳ ನಡುವೆ ಸೇರಿಸಿ ಗುದದ್ವಾರದ ಮೂಲಕ ವಿಸರ್ಜನೆಯಾಗುತ್ತವೆ (ಚಿತ್ರ ೧೫).

ನರವ್ಯೂಹ : ಇತರೆ ಪ್ರಾಣಿಗಳಂತೆ ಕೀಟಗಳ ನರಮಂಡಲದ ಮೂಲ ನರಜೀವಕಣಗಳು. ಜೇನುನೊಣಗಳ ನರಮಂಡಲದಲ್ಲಿ ಕೇಂದ್ರ ನರವ್ಯೂಹ, ಅಂತರ ಅವಯವಗಳ ಅಥವಾ ಅನುಕಂಪನ ನರವ್ಯೂಹ, ಮತ್ತು ಹೊರಮೈ ನರವ್ಯೂಹ ಎಂಬ ಮೂರು ಭಾಗಗಳಿವೆ.

ಕೇಂದ್ರೀಯ ನರವ್ಯೂಹದಲ್ಲಿ ಮೆದುಳು ಮತ್ತು ನರಗಂಟುಗಳ ಶ್ರೇಣಿ ದ್ವಂದ್ವ ನರಹುರಿಯಿಂದ ಅಂಟಿಕೊಂಡಿರುತ್ತವೆ. ತಲೆಯಲ್ಲಿ ಮೆದುಳು ಮತ್ತು ಉಪಗಂಟಲುನಾಳದ ನರಗಂಟುಗಳಿದ್ದು. ಎರಡೂ ನರಗಂಟುಗಳು ಸೇರಿ ಸಂಯುಕ್ತ ನರಗಂಟಾಗಿರುತ್ತವೆ.

ಮೆದುಳು ಜೇನುನೊಣದ ಅತಿದೊಡ್ಡ ನರಗಂಟಾಗಿದ್ದು ಇಂದ್ರಿಯಗಳ ಪ್ರವರ್ತನೆಯನ್ನು ಶರೀರದ ಇತರ ಭಾಗಗಳ ಪ್ರತಿಕ್ರಿಯೆಗಳೊಂದಿಗೆ ಸೇರಿಸಿ ಕೀಟದ ವರ್ತನೆಯನ್ನು ಕ್ರಮಗೊಳಿಸುವ ಮುಖ್ಯ ಕೇಂದ್ರವಾಗಿದೆ. ಇದು ಮೊದಲ ಮೂರು ತುಂಡುಗಳಾಗಿ ದೃಷ್ಟಿ ಭಾಗದ ಪ್ರಮಸ್ತಿಷ್ಕ. ಕುಡಿಮೀಸೆ ಭಾಗದ ದ್ವೈಮಸ್ತಿಷ್ಕ ಮತ್ತು ಮೇಲಿನ ತುಟಿಯ ಹಾಗೂ ಗಂಟಲಿನ ಭಾಗದ ತ್ರೈಮಸ್ತಿಷ್ಕಗಳು ಸೇರಿ ನರಗಂಟುಗಳಾಗಿವೆ. ಪ್ರಮಸ್ತಿಷ್ಕದಲ್ಲಿ ಅಣಬೆಯಾಕಾರದ ಕಾರ್ಪೋರ ಪೆಡಂಕ್ಯುಲೇಟ, ದೃಷ್ಟಿ ಹಾಲೆಗಳು, ಸಂಯುಕ್ತ ಕಣ್ಣುಗಳ ಸಂಬಂಧ ಕೇಂದ್ರಗಳು ಇರುತ್ತವೆ. ದ್ವೈಮಸ್ತಿಷ್ಕದಲ್ಲಿ ಘ್ರಾಣೇಂದ್ರಿಯಗಳ ಹಾಲೆಗಳಿವೆ. ಆದುದರಿಂದ ಕುಡಿಮೀಸೆಯಿಂದ ಜ್ಞಾನವಾಹಕ ಮತ್ತು ಚಾಲಕನರಗಳು ಹೊರಡುತ್ತವೆ. ತ್ರೈಮಸ್ತಷ್ಕದ ಹಿಂದೆ ಮೆದುಳು ಮತ್ತು ಅನ್ನ ನಾಳದ ಕೆಳಗಿನ ನರಗಂಟನ್ನು ಸೇರಿಸುವ ಗಂಟಲು ಕುಹರದ ಸಂಬಂಧಕಗಳಿವೆ. ಈ ನರಗಂಟುಗಳಲ್ಲಿ ಕೆಳ ದವಡೆ, ಮೇಲು ದವಡೆ ಮತ್ತು ಕೆಳತುಟಿಯ ನರಗಂಟುಗಳು ಐಕ್ಯವಾಗಿವೆ. ಉಳಿದ ನರಗಂಟುಗಳು ನಿರ್ದಿಷ್ಟ ತುಂಡಿನ ಅನುಬಂಧಗಳ ಚಲನೆಯನ್ನೂ ಕ್ರಮಗೊಳಿಸುತ್ತವೆ. ಆದರೆ ಜಟಿಲವಾಗಿ ನಿರ್ದಿಷ್ಟ ಕ್ರಿಯೆಗಳನ್ನು ಅನೇಕ ನರಗಂಟು ಕ್ರಮಗೊಳಿಸುತ್ತವೆ.

ಕೆಲಸಗಾರ ಜೇನುನೊಣದ ನರವ್ಯೂಹ

ನರಹುರಿಯ ಏಳು ನರಗಂಟುಗಳನ್ನು ಹೊಂದಿದ್ದು ಮೊದಲ ನರಗಂಟು ಮುನ್ನೆದೆಯಲ್ಲಿದ್ದು ಮೊದಲ ಜೊತೆ ಕಾಲುಗಳಿವೆ ನರಗಳ ಸಂಬಂಧ ಕಲ್ಪಿಸುತ್ತದೆ. ಎರಡನೆ ನರಗಂಟು ಸಂಯುಕ್ತ ನರಗಂಟಾಗಿದ್ದು ಮಧ್ಯದ ಮತ್ತು ಹಿನ್ನೆದೆಗಳಿಗೂ, ಹೊಟ್ಟೆಯ ಮೊದಲು ಮತ್ತು ಎರಡನೆ ತುಂಡುಗಳಿಗೆ ನರಗಳನ್ನು ಒದಗಿಸುತ್ತದೆ. ಹೊಟ್ಟೆಯ ಭಾಗದಲ್ಲಿ ಐದು ನರಗಂಟುಗಳಿದ್ದು ಅವು ಹೊಟ್ಟೆಯ ೩ – ೭ ನೇ ತುಂಡಿನ ಅಂಗಗಳಿಗೆ ನರಗಳನ್ನು ಒದಗಿಸುತ್ತವೆ. ಇತರ ಕೀಟಗಳಂತೆ ಜೇನು ನೊಣಗಳಲ್ಲಿ ದೇಹದ ಕಾರ್ಯ ನಿರ್ವಹಣೆ ಪೂರ್ಣವಾಗಿ ಮೆದುಳನ್ನು ಅವಲಂಬಿಸಿಲ್ಲದೆ ಪ್ರತಿಯೊಂದು ನರಗಂಟಿಗೂ ಸ್ವತಂತ್ರ ನಿಯಂತ್ರಣವಿದ್ದು ನರವ್ಯೂಹದ ಕಾರ್ಯನಿರ್ವಹಿಸುತ್ತದೆ (ಚಿತ್ರ ೧೬).

ರಕ್ತ ಪರಿಚಲನಾ ವ್ಯೂಹ : ಜೇನುನೊಣದ ರಕ್ತವು ತಿಳಿಹಳದಿ ಬಣ್ಣದಿಂದ ಕೂಡಿದೆ. ಇದು ದ್ರವರೂಪದಿಂದ ಕೂಡಿ ಅನೇಕ ರಕ್ತಕಣಗಳು ಸೇರಿವೆ. ಇವು ಕಶೇರುಕಗಳ ಬಿಳಿರಕ್ತ ಕಣಗಳನ್ನು ಹೋಲುತ್ತವೆ. ರಕ್ತದ ಮುಖ್ಯ ಕೆಲಸವು ಜೀರ್ಣವಾದ ಆಹಾರವನ್ನು ಸಾಗಿಸುವುದು ಮತ್ತು ಕಲ್ಮಶ ವಸ್ತುಗಳನ್ನು ದೇಹದ ವಿವಿಧ ಭಾಗಗಳಿಂದ ಸಾಗಿಸುವುದು ಮತ್ತು ಕಲ್ಮಶ ವಸ್ತುಗಳನ್ನು ದೇಹದ ವಿವಿಧ ಭಾಗಗಳಿಂದ ಹೊರಹಾಕುವುದು. ಜೇನು ನೊಣದಲ್ಲಿ ಇತರ ಕಶೇರುಕಳಂತೆ ಆಮ್ಲಜನಕವನ್ನು ರಕ್ತದ ಕಣಗಳು ಸಾಗಿಸುವುದಿಲ್ಲ. ಕೀಟಗಳಲ್ಲಿ ರಕ್ತಪರಿಚಲನೆ ಮುಖ್ಯವಾಗಿ ಅಂಗಾಗಗಳ ರಾಸಾಯನಿಕ ಬದಲಾವಣೆಗಳ ಮಾಧ್ಯಮ. ಜೇನು ನೊಣಗಳಲ್ಲಿ ರಕ್ತಪರಿಚಲನಾ ವ್ಯೂಹ ಮಿಡಿಯುವ ಅಂಗವಾದ ಹೃದಯ ಮತ್ತು ಮಹಾಪದಮನಿಯನ್ನು ಹೊಂದಿದ್ದು ಹೊಟ್ಟೆಯ ಚಾವಣಿಯ ಸೂಕ್ಷ್ಮ ಚರ್ಮದ ಪೊರೆಗೆ ಅಂಟಿಕೊಂಡಿರುತ್ತದೆ. ಹೃದಯವು ಕೋಣೆಗಳಿಂದ ಕೂಡಿ ಪ್ರತಿ ಕೋಣೆಯಲ್ಲಿ ಒಂದೊಂದು ಜೊತೆ ರಂಧ್ರಗಳಿದ್ದು ರಕ್ತವನ್ನು ಹೃದಯದೊಳಗೆ ಚಲಿಸಲು ಸಹಕಾರಿಯಾಗುತ್ತವೆ. ರಂಧ್ರಗಳ ತುದಿಗಳು ರಕ್ತವು ಹಿಂದೆ ಬರದಂತೆ ತಡೆಗಟ್ಟಿ ಕವಾಟಗಳಂತೆ ವರ್ತಿಸುತ್ತವೆ. ಮಹಾಪದಮನಿಯು ಹೃದಯದಿಂದ ಹೊರಹೋಗುವ ನಳಿಕೆಯಾಗಿದ್ದು ಎದೆಯ ಮೂಲಕ ಹಾದುಹೋಗಿ ತಲೆಯನ್ನು ತಲುಪಿ ಕವಲುಗಳಾಗಿ ಮೆದುಳಿನ ಕೆಳಗಡೆ ತೆರೆದುಕೊಂಡಿರುತ್ತದೆ (ಚಿತ್ರ ೧೭). ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ರಕ್ತದ ಹರಿಯುವಿಕೆ, ಹೃದಯದ ಸ್ನಾಯುಗಳ ಸಂಕುಚನೆ ಮತ್ತು ವಿಕಸನೆಯಿಂದಾಗುತ್ತದೆ. ರಕ್ತವು ಹೃದಯದಿಂದ ಮಹಾಪದಮನಿಯ ಮೂಲಕ ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳಿಗೆ ಪರಿಚಲಿತವಾಗುತ್ತದೆ. ಚರ್ಮದ ಪೊರೆಯ ಮಿಡಿತದಿಂದ ರಕ್ತವು ಹಿಂದಕ್ಕೆ ಪರಿಚಲಿಸಿ ಮೇಲ್ಭಾಗದ ಭಾಗಗಳಿಗೆ ಹರಿಯುತ್ತದೆ.

ಕೆಲಸಗಾರ ಜೇನುನೊಣದಲ್ಲಿ ರಕ್ತಪರಿಚಲನಾ ಕ್ರಮ

ಉಸಿರಾಟ ವ್ಯೂಹ : ಜೇನುನೊಣಗಳು ಇತರೆ ಪ್ರಾಣಿಗಳಂತೆ ವಾತಾವರಣದಿಂದ ಆಮ್ಲಜನಕವನ್ನು ಪಡೆದು ಇಂಗಾಲದ ಡೈ ಆಕ್ಸೈಡನ್ನು ಹೊರಬಿಡುತ್ತವೆ. ಇವುಗಳ ಉಸಿರಾಟ ವ್ಯೂಹ ಉದ್ದವಾದ ನಳಿಕೆಯಾಕಾರದ ಕವಲುಗಳಿಂದ ಕೂಡಿ ಶ್ವಾಸನಾಳಗಳನ್ನೊಳಗೊಂಡಿದೆ. ಗಾಳಿಯನ್ನು ದೇಹದಲ್ಲಿರುವ ೧೦ ಜೊತೆ ಶ್ವಾಸ ರಂಧ್ರಗಳ ಮೂಲಕ ಪಡೆದು ಗಾಳಿಯ ಚೀಲದಲ್ಲಿ ಶೇಖರಿಸಿ ಅವುಗಳಿಂದ ಶ್ವಾಸನಾಳ ಮತ್ತು ಅದರ ಉಪನಾಳಗಳ ಮೂಲಕ ಜೀವ ಕೋಶಗಳಿಗೆ ಸಾಗಿಸುತ್ತವೆ (ಚಿತ್ರ ೧೭). ಉಪನಾಳಗಳಲ್ಲಿ ಆಮ್ಲಜನಕವನ್ನು ಹೀರಿಕೊಂಡು ಇಂಗಾಲದ ಡೈ ಆಕ್ಸೈಡ್ ಮತ್ತು ಸಾರಜನಕ ಪ್ರಧಾನವಾದ ಕಲ್ಮಶಗಳನ್ನು ಹೊರಹಾಕುತ್ತವೆ. ಅನಿಲಗಳ ಬದಲಾವಣೆ ಜೇನು ನೊಣದ ಕ್ರಿಯಾ ನಡವಳಿಕೆಗಳನ್ನು ಅವಲಂಬಿಸಿದ್ದು ಚುರುಕುರಹಿತ ಜೇನು ನೊಣಗಳಲ್ಲಿ ಉಚ್ಛ್ವಾಸ ಮತ್ತು ನಿಶ್ವಾಸ ಮುನ್ನೆದೆಯ ಉಸಿರು ರಂಧ್ರಗಳ ಮೂಲಕ ಚುರುಕಾಗಿರುವ ಜೇನುನೊಣಗಳಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಉಚ್ವಾಸವು ಮುಂದಿನ ಎದೆಯ ಮತ್ತು ಹೊಟ್ಟೆಯ ಉಸಿರುರಂಧ್ರಗಳ ಮೂಲಕ ಹಾಗೂ ನಿಶ್ವಾಸ ಹೊಟ್ಟೆಯ ಮೊದಲ ಶ್ವಾಸ ರಂಧ್ರಗಳ ಮೂಲಕ ನಡೆಯುತ್ತದೆ.

ಕೆಲಸಗಾರ ಜೇನುನೊಣದ ಉಸಿರಾಟ ವ್ಯೂಹ

ಸಂತಾನೋತ್ಪತ್ತಿ ವ್ಯೂಹ : ಸಂತಾನೋತ್ಪತ್ತಿ ವ್ಯೂಹದಲ್ಲಿ ಸಂಬಂಧಪಟ್ಟ ಅಂಗಾಂಗಗಳು ವೀರ್ಯ ಮತ್ತು ತತ್ತಿಗಳನ್ನು ಕ್ರಮವಾಗಿ ಉತ್ಪತ್ತಿ ಮಾಡಿ ಮುಂದಿನ ಪೀಳಿಗೆಯು ಬೆಳವಣಿಗೆಯಾಗಲು ಅನುಕೂಲವಾಗುತ್ತದೆ. ರಾಣಿನೊಣದಲ್ಲಿ ಅಂಡಾಶಯಗಳು ಚೆನ್ನಾಗಿ ಅಭಿವೃದ್ಧಿಯಾಗಿ ಮೊಟ್ಟೆಗಳನ್ನಿಡುತ್ತದೆ. ಕೆಲಸಗಾರ ನೊಣಗಳಲ್ಲಿ ರಾಣಿಯು ಚೋದಕ ರಾಸಾಯನಿಕಗಳಿಂದಾಗಿ ಅಂಡಾಶಯಗಳ ಬೆಳವಣಿಗೆ ಸ್ಥಗಿತಗೊಂಡಿರುತ್ತದೆ. ಕುಟುಂಬದಲ್ಲಿ ರಾಣಿನೊಣ ಆಕಸ್ಮಿಕವಾಗಿ ಸತ್ತಲ್ಲಿ ಕೆಲಸಗಾರನೊಣಗಳಲ್ಲಿ ಅಂಡಾಶಯಗಳು ಬೆಳೆದು ಫಲರಹಿತ ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿ ಅವುಗಳಿಂದ ಗಂಡು ಜೇನು ಮರಿಗಳು ಉತ್ಪತ್ತಿಯಾಗುತ್ತವೆ (ಚಿತ್ರ ೧೮).

ಜೇನುನೊಣಗಳಲ್ಲಿ ಅಂಡಾಶಯಗಳ ಮಾರ್ಪಾಡು

ರಾಣಿ ನೊಣದ ಸಂತಾನೋತ್ಪತ್ತಿ ಕ್ರಮ : ರಾಣಿನೊಣದ ಸಂತಾನೋತ್ಪತ್ತಿ ವ್ಯೂಹವು ಒಂದು ಜೊತೆ ಅಂಡಾಶಯಗಳಿಂದ ಕೂಡಿ ಅಂಡಾಶಯವು ಸುಮಾರು ೧೬೦ ರಿಂದ ೧೮೦ ಅಂಡಕಗಳನ್ನು ಹೊಂದಿ ಅವುಗಳಲ್ಲಿ ಅಸಂಖ್ಯಾತ ಮೊಟ್ಟೆಗಳು ಉತ್ಪತ್ತಿಯಾಗುತ್ತವೆ. ಅಂಡಾಶಯಗಳನ್ನು ಹೊಂದಿರುವ ಅಂಡನಾಳಗಳು ಒಂದುಗೂಡಿ ಯೋನಿಯ ಕೆಳಗೆ ತೆರೆಯುವ ಸಂಬಂಧಕ ಚೀಲವನ್ನು (ಬರ್ಸ ಕೊಪ್ಯಲಾಕ್ಟ್ರಿಕ್ಸ್‌ನ್ನು) ಸೇರುತ್ತದೆ. ವೀರ್ಯಾಣು ಚೀಲವು ನಾಳದ ಮೂಲಕ ಗರ್ಭಧಾರಣೆ ಸಮಯದಲ್ಲಿ ವೀರ್ಯಾಣುಗಳನ್ನು ಸಂಗ್ರಹಿಸಿದರೆ, ರೇತಸ್ಸು ಗ್ರಂಥಿಯ ಸ್ರವಿಕೆಯು ವೀರ್ಯಾಣು ಚೀಲದಲ್ಲಿ ವೀರ್ಯಗಳು ಫಲಿತವಾಗಿರುವಂತೆ ಪೋಷಿಸುತ್ತದೆ (ವಿತ್ರ ೧೯). ಇದರಿಂದಾಗಿ ವೀರ್ಯಾಣುಗಳು ಅನೇಕ ವರ್ಷಗಳವರೆಗೆ ರಾಣಿನೊಣದ ವೀರ್ಯಾಣು ಚೀಲದಲ್ಲಿ ಜೀವಂತವಾಗಿ ಫಲವತ್ತತೆಯನ್ನು ಕಾಪಾಡುತ್ತವೆ. ವೀರ್ಯಾಣು ಚೀಲ ಸುಮಾರು ೪ – ೭ ಮಿಲಿಯನ್ ವೀರ್ಯಾಣುಗಳನ್ನು ಶೇಖರಿಸುವ ಸಾಮರ್ಥ್ಯವನ್ನು ಪಡೆದಿವೆ. ಮೊಟ್ಟೆಯು ಪೋಷಕ ಕಣಗಳನ್ನು ಹೊಂದಿದ್ದು ಪೂರ್ಣ ಬೆಳವಣಿಗೆಯಾದಾಗ, ಅಂಡಾಶಯ ಕೂಪಗಳು ತೆಳುವಾದ ಪೊರೆಯನ್ನು ಸ್ರವಿಸಿ ಮೊಟ್ಟೆಯ ಬೀಜರಂಧ್ರದ ಭಾಗವನ್ನು ಬಿಟ್ಟು ಇಡಿ ಮೊಟ್ಟೆಯನ್ನು ಸುತ್ತುವರೆದು ರಕ್ಷಿಸುತ್ತವೆ. ಈ ಬೀಜ ರಂಧ್ರವು ವೀರ್ಯಾಣುಗಳು ಮೊಟ್ಟೆಯೊಂದಿಗೆ ಫಲವತ್ತಾಗಲು ಅವಶ್ಯಕವಾಗಿರುತ್ತದೆ.

ರಾಣಿ ಜೇನುನೊಣದ ಸಂತಾನೋತ್ಪತ್ತಿ ವ್ಯೂಹ

 ಗಂಡು ನೊಣದ ಸಂತಾನೋತ್ಪತ್ತಿ ಕ್ರಮ : ಗಂಡು ಜೇನುನೊಣದ ಬೀಜಾಶಯಗಳು ಮೂತ್ರ ಪಿಂಡದ ಆಕಾರವನ್ನು ಹೊಂದಿರುತ್ತವೆ. ಬೀಜಾಶಯದಲ್ಲಿ ಬೀಜಾಶಯ ಕೂಪಗಳಿದ್ದು ಅವುಗಳಿಂದ ವೀರ್ಯಾಣುಗಳು ಬೆಳವಣಿಗೆಯಾಗುತ್ತವೆ. ಕೂಪಗಳು ರೇತ್ರನಾಳಗಳಲ್ಲಿ ತೆರೆದಿದ್ದು ಅಭಿವೃದ್ಧಿಯಾದ ವೀರ್ಯಾಣುಗಳು ರೇತಸ್ಸಿನ ಕಣದಲ್ಲಿ ಸ್ವಲ್ಪ ಸಮು ಉಳಿದು ಗಂಡು ಜನನಾಂಗಕ್ಕೆ ಹರಿಯುತ್ತವೆ. ರೇತಸ್ಸಿನ ಕೋಶಕ್ಕೆ ಅಂಟಿಕೊಂಡಿರುವ ಒಮದು ಜೊತೆ ಲೋಳೆಯ ಗ್ರಂಥಿಗಳಿಂದ ಚಿಮ್ಮು ನಾಳವು ಹೊರಟು ಗಂಡು ಜನನಾಂಗವನ್ನು ಸೇರುತ್ತದೆ (ಚಿತ್ರ ೨೦).

ಗಂಡು ಜೇನುನೊಣದ ಸಂತಾನೋತ್ಪತ್ತಿ ವ್ಯೂಹ

ಜೋಡಿಯಾಗುವ ಸಮಯದಲ್ಲಿ ಗಂಡುನೊಣದ ಜನನಾಂಗವು ರಾಣಿಯ ಯೋನಿಯೊಳಕ್ಕೆ ಸೇರಿದಾಗ, ವೀರ್ಯಾಣುಗಳು ಬಿಡುಗಡೆಯಾಗಿ ವೀರ್ಯಾಣು ಚೀಲಕ್ಕೆ ಸೇರುತ್ತವೆ. ಆ ಸಮಯದಲ್ಲಿ ಗಂಡು ನೊಣದ ಜನನಾಂಗ ಸೇರಿದಂತೆ ಜೀರ್ಣನಾಳದ ಹಿಂಗರುಳಿನ ಕೆಲವು ಭಾಗಗಳು ದೇಹದಿಂದ ಕಿತ್ತುಬರುವುದರಿಂದ ಗಂಡುನೊಣವು ಜೋಡಿಯಾದ ಸ್ವಲ್ಪ ಸಮಯದ ನಂತರ ಸಾಯುತ್ತದೆ.