ಜೇನುನೊಣಗಳು ಪುರಾತನ ಕಾಲದಿಂದಲೂ ಮಾನವನಿಂದ ಗಮನೀಯ ಮನ್ನಣೆ ಪಡೆದಿದ್ದು ಅವುಗಳಿಂದ ದೊರೆಯುವ  ನೈಸರ್ಗಿಕ ಸಿಹಿಯಾದ, ಪ್ರಕೃತಿಯ ದ್ರವ ಬಂಗಾರವೆಂದೇ ಪ್ರಸಿದ್ಧಿ ಪಡೆದಿರುವ ಜೇನುತುಪ್ಪ ಪೌಷ್ಠಿಕ ಆಹಾರವಲ್ಲದೆ ಸರ್ವವ್ಯಾಧಿ ನಿವಾರಕ ಗುಣಗಳನ್ನು ಪಡೆದಿದೆ. ಈ ಉತ್ಪನ್ನವು ಸಸ್ಯ ಹೂಗಳಲ್ಲಿರುವ ಮಕರಂದದ ಉತ್ಪಾದನೆಯಾಗಿದೆ. ದಿನನಿತ್ಯ ಒಂದೆರಡು ಚಮಚದಷ್ಟು ಜೇನು ತುಪ್ಪದ ಸೇವನೆಯಿಂದ ಹಸಿವು ಹೆಚ್ಚಾಗಿ, ಜೀರ್ಣಕ್ರಿಯೆ ವ್ಯವಸ್ಥಿತಗೊಂಡು ಆರೋಗ್ಯ ಉತ್ತಮಗೊಳ್ಳುತ್ತದೆ. ಜೇನುನೊಣಗಳಿಂದ ದೊರೆಯುವ ಮತ್ತೊಂದು ಬಹು ಉಪಯೋಗಿ ವಸ್ತುವೆಂದರೆ ಜೇನುಮೇಣ. ಇದನ್ನು ಮೇಣದ ಬತ್ತಿ, ಸೌಂದರ್ಯ ವರ್ಧಕಗಳು, ಬಣ್ಣದ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು ಜೇನು ಸಾಕಾಣಿಕೆಗೆ ಬೇಕಾಗುವ ಮೇಣದ ಹಾಳೆಗಳನ್ನು ತಯಾರಿಸಲು ಸಹ ಅತ್ಯಾವಶ್ಯಕ. ಜೇನುನೊಣಗಳಿಂದ ಸಿಗುವ ಇತರ ಉತ್ಪನ್ನಗಳೆಂದರೆ ಜೇನುಅಂಟು, ಜೇನುವಿಷ, ಪರಾಗ ಮತ್ತು ರಾಜಶಾಹಿರಸ. ಇವುಗಳೆಲ್ಲವೂ ಜೈವಿಕವಾಗಿ ಕ್ರಿಯಾಶೀಲವಾಗಿರುವುದರ ಪರಿಣಾಮಕಾರಿ ಔಷಧಿಯ ಗುಣಗಳನ್ನು ಹೊಂದಿವೆ. ಪ್ರಾಚೀನ ಕಾಲದಲ್ಲಿಯೇ ಜೇನುಗೂಡು ಗಾಯಗಳನ್ನು ಗುಣಪಡಿಸುವಲ್ಲಿ. ಬಳಕೆಯಲ್ಲಿತ್ತೆಂದು ಪುರಾತನ ವೈಧಿಕ ಗ್ರಂಥಗಳು ತಿಳಿಸುತ್ತವೆ. ಜೀವರಾಸಾಯನ ಶಾಸ್ತ್ರಜ್ಞರು ಮತ್ತು  ವೈದ್ಯಕೀಯ ತಜ್ಞರು ಇದರಲ್ಲಿ ಜೀವ ನಿರೋಧಕ ಶಕ್ತಿಯ ಗುಣಗಳಿರುವುದನ್ನು ಗುರುತಿಸುವುದರಿಂದ ಅನೇಕ ಬಾಹ್ಯ ಮತ್ತು ಆಂತರಿಕ  ರೋಗಗಳನ್ನು ನಿಯಂತ್ರಿಸುವಲ್ಲಿ ಬಳಕೆಯಲ್ಲಿದೆ. ರಾಜಶಾಹಿರಸ ಎಳೆ ವಯಸ್ಸಿನ ಜೇನು ನೊಣಗಳಿಂದ ಸ್ರವಿಸಲ್ಪಟ್ಟು ಮರಿ ಹುಳುಗಳಿಗೆ ಮತ್ತು ರಾಣಿನೊಣಕ್ಕೆ ಆಹಾರವಾಗಿ ಉಪಯೋಗಿಸಲ್ಪಡುತ್ತದೆ. ಸಸಾರಜನಕ, ಕೊಬ್ಬು, ಜೀವಸತ್ವಗಳು, ಕಣಿಜಗಳು ಇತ್ಯಾದಿಗಳನ್ನು ಒಳಗೊಂಡಿದ್ದು ಮಾನವನ ಆರೋಗ್ಯ ಮತ್ತು ಆಯುಷ್ಯನ್ನು ವರ್ಧಿಸುತ್ತದೆಂದು ಸಂಶೋಧನಾ ಮೂಲಗಳು ತಿಳಿಸಿವೆ. ಜೇನು ನೊಣಗಳು ಹೂಗಳಿಂದ ಸಂಗ್ರಹಿಸಿ ಮರಿಗಳಿಗೆ ಆಹಾರವಾಗಿ ಉಪಯೋಗಿಸುವ ಪರಾಗವು ಸಸಾರಜನಕ, ಜೀವಸತ್ವಗಳು ಮತ್ತು ಲಘು ಪೋಷಕಾಂಶಗಳನ್ನು ಒಳಗೊಂಡಿದ್ದು ಮಾನವನ ದೇಹಕ್ಕೆ ಅತ್ಯಂತ ಅವಶ್ಯಕವಾಗಿದೆ.

ಜೇನು ನೊಣಗಳು ಸಸ್ಯಗಳ ನೈಸರ್ಗಿಕ ಪರಾಗಸ್ಪರ್ಶಗಳು. ಇವು ಪರಕೀಯ ಪರಾಗಸ್ಪರ್ಶದ ಮೂಲಕ ಬೆಳೆಗಳ ತಳಿ ಸುಧಾರಣೆ ಮತ್ತು ಹೊಸ ಸಂಕರಣ ತಳಿಗಳ ಉತ್ಪಾದನೆಗೆ ಕಾರಣವಾಗಿ ಪ್ರಕೃತಿದತ್ತ ತಳಿ ಸಂವರ್ಧಕಗಳಾಗಿವೆ. ಇವುಗಳಿಂದಾಗಿ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿ ಆಹಾರ ಉತ್ಪದಾನೆಯಲ್ಲಿ ಗಮನೀಯ ಪಾತ್ರ ವಹಿಸುತ್ತವೆ. ಪ್ರಖ್ಯಾತ ಕೃಷಿ ವಿಜ್ಞಾನಿ ಡಾ. ಎಂ. ಎಸ್. ಸ್ವಾಮಿನಾಥನ್‌ರವರು ಜೇನುನೊಣವು ಅತ್ಯಂತ ಉಪಕಾರಿ ಕೀಟವಾಗಿದ್ದು ಬೆಳೆಗಳ ಇಳುವರಿಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುವುದರಿಂದ ಇದರ ಸಾಕಾಣೆ ಭಾರತದ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಅತ್ಯಗತ್ಯವೆಂದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಕಟಿಸಿರುವ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

ಜೇನು ನೊಣಗಳು ಅತ್ಯುನ್ನತ ಸಾಮಾಜಿಕ ಜೀವನ ನಡೆಸುವ ಕೀಟಗಳು. ಅವುಗಳ ಕುಟುಂಬ ಜೀವನ, ಸಾಮಾಜಿಕ ವ್ಯವಸ್ಥೆ, ವಯಸ್ಸಿಗೆ ತಕ್ಕಂತ ಕಾರ್ಯಗಳು, ಗೂಡುನಲ್ಲಿನ ಶುಚಿತ್ವ, ಅವಿಶ್ರಾಂತ ದುಡಿಮೆ, ಕುಟುಂಬದ ರಕ್ಷಣೆಗಾಗಿ ಪ್ರಾಣ ತ್ಯಾಗ, ಗೂಡು ನಿರ್ಮಿಸುವಲ್ಲಿನ ನಿಪುಣತೆ, ಮೀಗಿಲಾಗಿ ಅವುಗಳ ಸಂವಹನ ನೃತ್ಯಗಳು ಅಮೋಘ.  ಇತರೆ ಯಾವುದೇ ಕೃಷಿ ಉದ್ದಿಮೆಗಳಿಗಿಂತ ಜೇನುಕೃಷಿ ಅನೇಕ ರೀತಿಗಳಲ್ಲಿ ಮೀಗಿಲಾಗಿದ್ದು ಇದಕ್ಕೆ ಹೆಚ್ಚಿನ ಬಂಡವಾಳ, ಭೂಮಿ ಮಾಲಿಕತ್ವ, ಹೆಚ್ಚಿನ ಮಾನವ ಶಕ್ತಿ, ವಯಸ್ಸಿನ ನಿರ್ಬಂಧತೆ ಮುಂತಾದವುಗಳ ಅವಶ್ಯಕತೆ ಇರುವುದಿಲ್ಲ. ಈ ಕೃಷಿಯನ್ನು ಸ್ತ್ರೀಯರು ಸೇರಿದಂತೆ ಎಲ್ಲಾ ವಯಸ್ಸಿನವರು ಮಾಡಬಹುದಾದ ಕಸಬಾಗಿದ್ದು ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಆದಾಯವನ್ನು  ನೀಡುವಂತ ಉದ್ದಿಮೆ.

ಈ ಗುಣಗಳಿಂದ ಜೇನುನೊಣಗಳ ಸಂರಕ್ಷಣೆ ಮತ್ತು ಸಾಕಾಣಿಕೆ ಬಹಳ ಹಿಂದೆಯೇ ಪ್ರಾರಂಭವಾಯಿತು. ಕಳೆದ ೨ -೩ ಶತಮಾನಗಳಿಂದ ವೈಜ್ಞಾನಿಕ ರೀತಿಯ ಜೇನು ಸಾಕಾಣೆ ಪ್ರಪಂಚದಾದ್ಯಂತ ಬಹು ಜನರ ಉದ್ಯೋಗ ಮತ್ತು ಹವ್ಯಾಸವಾಗಿದ್ದು ಇತ್ತೀಚಿಗೆ ಜೇನು ಸಾಕಾಣಿಕೆ ಕೃಷಿವಿಜ್ಞಾನದಲ್ಲಿ ಒಂದು ಪ್ರಧಾನ ಅಂಗವಾಗಿದೆ. ಪ್ರಾಣಿಗಳನ್ನು ಸಾಕುವ ಆಸಕ್ತಿ ಇದ್ದಂತೆ, ಜೇನುನೊಣಗಳೊಡನೆ ಒಡನಾಟ ಆನಂದವನ್ನು ನೀಡುತ್ತದೆ. ಪರಿಶುದ್ಧವಾದ ಹವಾಗುಣ ಹೂ ಮತ್ತು ಜೇನಿನ ಸುಹಾಸನೆಯಿಂದ ಕೂಡಿದ ಜೇನು ಧಾಮಗಳಲ್ಲಿ ಕೆಲಸ ಮಾಡುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ದೈಹಿಕ ಶಕ್ತಿಯನ್ನು ಅಧಿಕಗೊಳಿಸುತ್ತದೆ. ವಿದ್ಯಾರ್ಥಿಗಳು ಮತ್ತು ಗ್ರಹಿಣಿಯರು ಸೇರಿದಂತೆ ಯಾರು ಬೇಕಾದರೂ ಮಾಡಬಹುದಾದ ಈ ಕೃಷಿಗೆ ಮೂಲಭೂತ ಅವಶ್ಯಕತೆಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಜೇನು ಸಾಕಾಣೆದಾರರು ಜೇನುನೊಣಗಳ ಜೀವನಕ್ರಮದ ಬಗ್ಗೆ ಸಂಪೂರ್ಣ ತಿಳಿದು ಕೊಂಡಿರುವುದು ಜೇನು ಸಾಕಾಣಿಕೆಯ ಯಶಸ್ಸು, ಜೇನು ಸಾಕಾಣೆದಾರರು ಜೇನು ನೊಣಗಳ ಬಗ್ಗೆ ಹೊಂದಿರುವ ಜ್ಞಾನ ಹಾಗೂ ಅವುಗಳನ್ನು ಜೇನು ಕುಟುಂಬಗಳ ನಿರ್ವಹಣೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸುವುದರ ಮೇಲೆ ಸಂಪೂರ್ಣವಾಗಿ ಅವಲಂಭಿಸಿದೆ.

ಪ್ರತಿ ಜೇನು ಸಾಕಾಣೆದಾರರು ಅಥವಾ ಹೊಸತಾಗಿ ಜೇನುಕೃಷಿ ಆರಂಭಿಸುವವರು ಜೇನುಕೃಷಿ ಬಗ್ಗೆ ಅಧ್ಯಯನ ಮಾಡುವುದರ ಜೊತೆಗೆ ಪ್ರಾಯೋಗಿಕವಾಗಿ ತರಬೇತಿ ಪಡೆದು ಆರಂಭಿಸಿದಲ್ಲಿ ಜೇನುಕೃಷಿಯನ್ನು ಸಫಲವಾಗಿ ಮಾಡಲು ಸುಲಭವಾಗುತ್ತದೆ.