ಜೇನುತುಪ್ಪ ಮನುಷ್ಯನ ಅತ್ಯಂತ ಪ್ರಿಯವಾದ ತಿನಿಸುಗಳಲ್ಲೊಂದು. ಮನುಷ್ಯ ಬೇಸಾಯದ ಬದುಕು ಪ್ರಾರಂಭಿಸುವ ಮೊದಲಿನಿಂದಲೇ ಜೇನನ್ನು ಬಳಸುತ್ತಿದ್ದಾನೆ. ೮೦೦೦ ವರ್ಷಗಳ ಹಿಂದಿನ ಸ್ಪೇನ್ ದೇಶದ ಶಿಲಾಚಿತ್ರಗಳಲ್ಲಿ ಜೇನು ಸಂಗ್ರಹಿಸುತ್ತಿರುವ ಉಲ್ಲೇಖಗಳಿವೆ. ಭಾರತದ ಮಧ್ಯಪ್ರದೇಶದಲ್ಲಿನ ಭೀಂಬೇಟ್ಕ ಎಂಬಲ್ಲಿನ ಹಳೇಶಿಲಾಯುಗದ ಗುಹೆಗಳಲ್ಲಿನ ಶಿಲಾಚಿತ್ರಗಳಲ್ಲಿ ಮನುಷ್ಯರು ಹೆಜ್ಜೇನು ಬಿಡಿಸುತ್ತಿರುವ ಚಿತ್ರಗಳಿವೆ. ವೇದ, ಉಪನಿಷತ್ತು ಹಾಗೂ ರಾಮಾಯಣ ಮತ್ತು ಮಹಾಭಾರತ ಪುರಾಣಕಾವ್ಯಗಳಲ್ಲಿ ಜೇನಿನ ಉಲ್ಲೇಖಗಳಿವೆ.

ಜೇನುನೊಣಗಳು ನಮಗೆ ಜೇನುತುಪ್ಪ ಮತ್ತು ಮೇಣ ಕೊಡುವುದಷ್ಟೇ ಅಲ್ಲ ಕೃಷಿಯ ಉತ್ಪಾದನೆ ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಜೇನುನೊಣಗಳ ಕಾಲುಗಳಲ್ಲಿ ಪರಾಗವನ್ನು ಕೊಂಡೊಯ್ಯಲು ಪರಾಗದ ಬುಟ್ಟಿಗಳಿದ್ದು ಇವುಗಳ ಪೂರ್ಣ ಶರೀರ ಹಾಗೂ ಕಾಲುಗಳು ರೋಮದಿಂದ ಆವೃತವಾಗಿರುವುದರಿಂದ ಅಧಿಕ ಸಂಖ್ಯೆಯ ಪರಾಗರೇಣುಗಳನ್ನು ಹೂವಿನಿಂದ ಹೂವಿಗೆ ವರ್ಗಾಯಿಸಬಲ್ಲವು. ಪರಾಗ, ಮಕರಂದಗಳಿಗಾಗಿ ಜೇನುನೊಣಗಳು ಒಂದು ಬೆಳೆಯನ್ನು ಸಂದರ್ಶಿಸಿದರೆ, ಆ ಬೆಳೆಯಲ್ಲಿ ಅವುಗಳ ಸಂಗ್ರಹಣೆ ಮುಗಿಯುವ ತನಕ ಅದೇ ಬೆಳೆಯನ್ನು ಸಂದರ್ಶಿಸುತ್ತಿರುತ್ತವೆ. ಹಾಗಾಗಿ ಆಯಾ ಬೆಳೆಗಳಲ್ಲಿ ಪರಾಗಸ್ಪರ್ಶಕ್ರಿಯೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತವೆ. ಸುಮಾರು ಐವತ್ತು ದಶಲಕ್ಷ ವರ್ಷಗಳ ಹಿಂದೆಯೇ ಭೂಮಿಯ ಮೇಲೆ ಕಾಣಿಸಿಕೊಂಡ ಜೇನುನೊಣಗಳು ಶಿಸ್ತಿನ, ನಿಷ್ಠೆಯ ಹಾಗೂ ದಕ್ಷತೆಯ ಶ್ರಮಜೀವಿಗಳು. ಮನುಷ್ಯ ಅವುಗಳಿಂದ ಕಲಿಯಬೇಕಾದ್ದು ಬಹಳಷ್ಟಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ (ಸ್ನಾತಕೋತ್ತರ) ರಾದ ಡಾ. ಡಿ. ರಾಜಗೋಪಾಲ್ ಮತ್ತು ಜೇನುಸಾಕಣೆ ವಿಭಾಗದ ಸಹ ಸಂಶೋಧಕರಾದ ಡಾ. ಎನ್. ನಾಗರಾಜರವರು ಬರೆದಿರುವ ಈ ಪುಸ್ತಕವು ಜೇನುಕೃಷಿಯ ಇತಿಹಾಸ, ಜೇನುನೊಣಗಳ ವಿಂಗಡಣೆ, ಶರೀರ ರಚನೆ, ಕುಟುಂಬ ವ್ಯವಸ್ಥೆ. ಜೀವನ ಚರಿತ್ರೆ ಅವುಗಳಿಂದಾಗುವ ಪರಾಗಸ್ಪರ್ಶಕ್ರಿಯೆ, ಜೇನುನೊಣಗಳ ರೋಗಗಳು ಮತ್ತು ಸ್ವಾಭಾವಿಕ ಶತ್ರುಗಳು, ಜೇನುಸಾಕಣೆಯ ತಾಂತ್ರಿಕತೆ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಅದರ ಪಾತ್ರ ಇತ್ಯಾದಿ ವಿವರಗಳನ್ನೊಳಗೊಂಡಿದೆ.

ಈ ಪುಸ್ತಕವು ಎಲ್ಲಾ ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು, ರೈತರು ಹಾಗೂ ಇತರ ಆಸಕ್ತರಿಗೆ ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ. ಬಿ. ಎಸ್. ಸಿದ್ಧರಾಮಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳು

ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ, ಬೆಂಗಳೂರು – ೨೪