ಪ್ರಥಮ ತೀರ್ಥಂಕರ ವೃಷಭನಿಂದ ಆರಂಭವಾದ ಜೈನಧರ್ಮ ತರುವಾಯದ ೨೩ ತೀರ್ಥಂಕರರಿಂದ ಇಂದಿಗೂ ಪ್ರಮುಖ ಧರ್ಮಗಳಲ್ಲಿ ಒಂದಾಗಿದೆ. ಶ್ವೇತಾಂಬರ. ದಿಗಂಬರ ಎಂಬ ಎರಡು ಪಂಥಗಳಲ್ಲಿ ಅಸ್ತಿತ್ವದಲ್ಲಿರುವ ಜೈನ ಧರ್ಮಕ್ಕೆ ಕರ್ನಾಟಕದಲ್ಲಿ ಕ್ರಿ.ಶ. ಪೂ. ೩ – ೪ನೇ ಶತಮಾನಗಳ ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕೆ ಕಾವ್ಯಮಹೋನ್ನತಿಯ ದೃಷ್ಟಿಯಿಂದ ಉತ್ತಮ ಕಾವ್ಯಗಳನ್ನು ನೀಡಿದ ಜೈನರು ಬಸದಿ, ವಾಸ್ತುಶಿಲ್ಪ, ಕಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಧರ್ಮೀಯರ ಸಂಸ್ಕೃತಿಯ ಸಮಗ್ರ ಹಾಗೂ ವಸ್ತುನಿಷ್ಠ ಚರಿತ್ರೆಯನ್ನು ಬಲ್ದೋಟ “ಜೈನ ಅಧ್ಯಯನ ಪೀಠ” ಅಸ್ತಿತ್ವಕ್ಕೆ ಬಂದಿದೆ.

ಶ್ರೀ ಅಭಯರಾಜ್ ಬಲ್ದೋಟ ಅವರು ಹೊಸಪೇಟೆಯ ಗಣ್ಯ ಉದ್ದಿಮಿಗಳು. ಸಾರ್ವಜನಿಕವಾಗಿ ಅವರದು ಎದ್ದು ಕಾಣುವ ವ್ಯಕ್ತಿತ್ವ. ತಮ್ಮ ಧರ್ಮದ ಸಂಸ್ಕೃತಿಯ ಅಧ್ಯಯನ ಹಾಗೂ ಪ್ರಸಾರಕ್ಕಾಗಿ ಜೈನಪೀಠದ ಸ್ಥಾಪನೆಗೆ ದತ್ತಿಯನ್ನು ತೊಡಗಿಸಿದ್ದಾರೆ. ಅವರ ದತ್ತಿ ನಿಧಿಯಿಂದ ಸ್ಥಾಪನೆಗೊಂಡ ಜೈನ ಅಧ್ಯಯನ ಪೀಠ ಹಲವಾರು ಶೈಕ್ಷಣಿಕ ಯೋಜನೆಗಳನ್ನು ರೂಪಿಸಿಕೊಂಡಿದೆ.

ಸಂಶೋಧನೆ

ಜೈನ ಸಂಸ್ಕೃತಿ ಕುರಿತಂತೆ ತಲಸ್ಪರ್ಶಿ ಮತ್ತು ಬಹುಶಾಸ್ತ್ರೀಯ ಅಧ್ಯಯನ ನಡೆಸುವುದು. ಕನ್ನಡ ಜೈನ ಕಾವ್ಯಗಳನ್ನು ಕುರಿತು ಇದುವರೆಗೆ ಅನೇಕ ಅಧ್ಯಯನಗಳು ನಡೆದಿವೆ. ಹೀಗಿದ್ದರೂ ಪ್ರಸ್ತುತ ಜೈನ ಕಾವ್ಯಗಳು ಕರ್ನಾಟಕ ಸಂಸ್ಕೃತಿಯ ಅನಾವರಣದಲ್ಲಿ ವಹಿಸಿದ ಪಾಲು ಪಾತ್ರಗಳನ್ನು ಶೋಧಿಸಬೇಕಾಗಿದೆ. ಲೌಕಿಕ ಕಾವ್ಯಗಳಿಗೆ ಬಂದರೆ ಕನ್ನಡದ ಅರಸರನ್ನು ಪೌರಾಣಿಕ ಪಾತ್ರಗಳೊಂದಿಗೆ ಸಮೀಕರಿಸುವ ಮತ್ತು ಆಗಮಿಕ ಕಾವ್ಯಗಳಿಗೆ ಹೋದರೆ ಉತ್ತರದ ತೀರ್ಥಂಕರರನ್ನು ಚಿತ್ರಿಸುವ ಇವರ ಕೃತಿಗಳನ್ನು ಇದುವರೆಗೆ ಕಾವ್ಯ ಪ್ರೀತಿಯಿಂದ ಬಹುತೇಕ ವಿದ್ವಾಂಸರು ಗಮನಿಸಿದ್ದಾರೆ. ಚಾರಿತ್ರಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಕನ್ನಡ ನಿಷ್ಠ ಆಲೋಚನೆಗಳನ್ನು ಜೈನ ಕಾವ್ಯ – ಪುರಾಣ – ಶಾಸ್ತ್ರ ಕೃತಿಗಳಲ್ಲಿ ನೋಡುವ, ದಾಖಲಿಸುವ ಉದ್ದೇಶವನ್ನು ಜೈನ ಅಧ್ಯಯನ ಪೀಠ ಕಲ್ಪಿಸಿಕೊಂಡಿದೆ.

ದಾಖಲೀಕರಣ ಮತ್ತು ವಿಶ್ಲೇಷಣೆ

ಜೈನರು ವಸ್ತು ಸಾಮಗ್ರಿ ಆಕರಗಳನ್ನು ಹೇರಳವಾಗಿ ಬಿಟ್ಟು ಹೋಗಿದ್ದಾರೆ. ಬಸದಿಗಳು, ಶಾಸನಗಳು, ಮೂರ್ತಿಶಿಲ್ಪಗಳು, ಮಾನಸ್ತಂಭಗಳು ಇತ್ಯಾದಿ ಪುರಾತತ್ತ್ವ ಆಕರಗಳ ದಾಖಲೀಕರಣ ಮತ್ತು ಅವುಗಳ ವಿಶ್ಲೇಷಣೆಯನ್ನು ಮಾಡುವುದಕ್ಕೆ ಜೈನ ಅಧ್ಯಯನ ಪೀಠ ಅನುವು ಮಾಡಿಕೊಡುತ್ತದೆ.

ವಿಚಾರ ಸಂಕಿರಣಉಪನ್ಯಾಸ ಮಾಲೆಕಮ್ಮಟಗಳು

ಜೈನ ಸಂಸ್ಕೃತಿ ಕುರಿತಂತೆ ಕರ್ನಾಟಕ ಜೈನ ಕ್ಷೇತ್ರಗಳು, ಜೈನ ಬಸದಿಗಳು, ಜೈನ ಶಾಸನಗಳು, ಜೈನ ದಿಗಂಬರ ಮತ್ತು ಶ್ವೇತಾಂಬರ ಸಮಾಜಗಳ ಅಧ್ಯಯನ, ಜೈನ ಗಣ – ಗಚ್ಚ ಪಂಥಗಳು, ಜೈನ ಹಾಡುಗಳು, ಜೈನ ಮುನಿ ಸಂಪ್ರದಾಯ, ಗುರುಪರಂಪರೆ ಮುಂತಾದ ವಿಷಯಗಳ ಮೇಲೆ ಬೆಳಕು ಚಚೆಲ್ಲುವ ಅಗತ್ಯವನ್ನು ಪೂರೈಸುವಲ್ಲಿ ಜೈನ ಅಧ್ಯಯನ ಪೀಠ ವಿಚಾರ ಸಂಕಿರಣ ಹಾಗೂ ಉಪನ್ಯಾಸ ಮಾಲೆಗಳನ್ನು ಏರ್ಪಡಿಸುತ್ತಲಿದೆ.

ಅನುವಾದ ಯೋಜನೆ

ಕರ್ನಾಟಕ ದಿಗಂಬರ ಜೈನ ಸಾಹಿತ್ಯ ಮೇಲೆ ಆದಷ್ಟು ಕೆಲಸ ಶ್ವೇತಾಂಬರ ಸಾಹಿತ್ಯದ ಮೇಲೆ ಆಗಿಲ್ಲ. ಅವುಗಳ ಅಧ್ಯಯನ ಉಪೇಕ್ಷೆಗೆ ಒಳಗಾಗಿದೆ. ಈ ಆಲೋಚನೆಯಿಂದ ಶ್ವೇತಾಂಬರ ಜೈನ ಗ್ರಂಥಗಳ ಕನ್ನಡ ಅನುವಾದ ಯೋಜನೆಯನ್ನು ಜೈನ ಅಧ್ಯಯನ ಪೀಠ ಕೈಗೆತ್ತಿಕೊಂಡಿದೆ. ೪೫ಕ್ಕೂ ಹೆಚ್ಚು ಶ್ವೇತಾಂಬರ ಆಗಮ ಗ್ರಂಥಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಅವುಗಳನ್ನು ಅಂಗಗಳು, ಪ್ರಕೀರ್ಣಗಳು, ಮೂಲಸೂತ್ರಗಳು, ಛೇದ ಸೂತ್ರಗಳು ಎಂದು ವರ್ಗೀಕರಿಸಲಾಗಿದೆ. ಶ್ವೇತಾಂಬರ ಸಾಹಿತ್ಯದ ದರ್ಶನ, ಭಾಷೆ, ಸಾಹಿತ್ಯ, ಜಾನಪದ ಅಂಶಗಳನ್ನು ಪರಿಚಯಿಸುವ ಉದ್ದೇಶದಿಂದ ಕಾಲಕ್ರಮದಂತೆ ಅನುವಾದ ಮಾಡುವ ಯೋಜನೆಯನ್ನು ಪೀಠದ ವತಿಯಿಂದ ಅಸ್ತಿತ್ವಕ್ಕೆ ತರಲಾಗಿದೆ.

ಪ್ರಕಟಣೆಗಳು

ಹಂಪಿ ಕನ್ನಡ ವಿಶ್ವವಿದ್ಯಾಲಯ ಈಗಾಗಲೇ ೨೦ ಜೈನ ಕಾವ್ಯ ಸಂಪುಟಗಳನ್ನು ಪ್ರಸಾರಾಂಗದಿಂದ ಪ್ರಕಟಿಸಿದೆ. ಇದರ ಎರಡನೆಯ ಭಾಗವಾಗಿ ಜೈನ ಅಧ್ಯಯನ ಪೀಠ ಕಾವ್ಯಪುರಾಣ ೧೦, ಲೌಕಿಕ ಶಾಸ್ತ್ರ ಕೃತಿಗಳು ೧೦, ಆಗಮಿಕ ಶಾಸ್ತ್ರ ಕೃತಿಗಳು ೧೦ರಂತೆ ೩೦ ಸಂಪುಟಗಳನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ನೆರವಿನಿಂದ ಪ್ರಕಟಿಸಲು ಯೋಜನೆ ರೂಪಿಸಿದೆ. ವಿದ್ವಾಂಸರಿಂದ ಜೈನ ಸಂಸ್ಕೃತಿಗೆ ಸಂಬಂಧಿಸಿದಂತೆ ಚಾರಿತ್ರಿಕ ಕೃತಿಗಳನ್ನು ಬರೆಸುವುದು. ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ದುಡಿದ ಜೈನ ಪುಣ್ಯ ಪುರುಷರ ಮಾಲೆಗಳನ್ನಲ್ಲದೆ, ಶ್ರೀ ಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಆಚಾರ್ಯರ ಕುರಿತು ಗ್ರಂಥಗಳನ್ನು ಹೊರತರಲಾಗಿದೆ.

ಹೀಗೆ ಜೈನ ಸಂಸ್ಕೃತಿ ಅಧ್ಯಯನ, ದಾಖಲೀಕರಣ, ವಿಶ್ಲೇಷಣೆ, ಅನುವಾದ, ಪ್ರಸಾರ, ಪ್ರಕಟಣೆಗಳ ಉದ್ದೇಶದಿಂದ ಅಭಯರಾಜ್ ಬಲ್ದೋಟ ಜೈನ ಅಧ್ಯಯನ ಪೀಠ ಸ್ಥಾಪನೆಯಾಗಿದೆ. ಈ ಪೀಠದ ಮೊದಲ ಕೃತಿಯಾಗಿ ಪ್ರಕಟವಾಗುತ್ತಿದೆ. ಜೈನ ಟೀಕಾ ಸಾಹಿತ್ಯ. ಕನ್ನಡ ಸಂಸ್ಕೃತಿಯ ಆರಂಭ ಘಟ್ಟದಲ್ಲಿ ದುಡಿದ ಜೈನಧರ್ಮೀಯರ ಶಾಸ್ತ್ರ ಸಾಹಿತ್ಯ ಕ್ಷೇತ್ರಕ್ಕೆ ಇವರ ಟೀಕಾ ಕೃತಿಗಳು ಮಹತ್ವದ ಕೊಡುಗೆಗಳಾಗಿವೆ. ಅಂಥ ಶಾಸ್ತ್ರ ಸಾಹಿತ್ಯದ ಒಂದು ಮಗ್ಗುಲಾದ ಜೈನ ಟೀಕಾ ಕೃತಿಗಳ ಪರಿಚಯದ ಕೃತಿಯನ್ನು ವಿದ್ವಾಂಸರು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆಂಬ ಆಶಯ ನಮ್ಮದು.

ಡಾ. ಕೆ.ರವೀಂದ್ರನಾಥ
ಸಂಚಾಲಕರು