ಕಾವ್ಯಸೃಷ್ಟಿಯ ಬೆನ್ನ ಹಿಂದೆಯೇ ಹುಟ್ಟಿಕೊಂಡ ಕಾವ್ಯಮೀಮಾಂಸೆ, ವಿಮರ್ಶೆಗಳ ಗುಂಪಿಗೆ ಸೇರುವ ಮತ್ತೊಂದು ಪ್ರಕಾರ, ಟೀಕಾಸಾಹಿತ್ಯ. “ತನ್ನ ಹಿಂದಣ ಕಾವ್ಯಸೃಷ್ಟಿಗೆ ಸಾಕ್ಷಿದರ್ಪಣವಾಗಿ ಅದರ ಓರೆಕೋರೆಗಳನ್ನು ಎತ್ತಿ ತೋರಿಸುವುದರ ಮೂಲಕ ಮುಂದಣ ಸಾಹಿತ್ಯಕ್ಕೆ ಓರಣವನ್ನು ಒದಗಿಸುವುದು ಕಾವ್ಯಮೀಮಾಂಸೆಯ ಕರ್ತವ್ಯವಾಗಿದೆ.” (ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಡಾ. ಎಂ.ಎಂ. ಕಲಬುರ್ಗಿ, ಪು.೫) ಇದಕ್ಕೆ ಸ್ವಲ್ಪ ಭಿನ್ನವಾಗಿ ಆ ಸಾಹಿತ್ಯದ ಅರ್ಥ – ಭಾವಗಳನ್ನು ಬಿಚ್ಚಿ ತೋರಿಸುವುದು ವಿಮರ್ಶಾ ಸಾಹಿತ್ಯವಾಗಿದೆ. ಇಲ್ಲಿ ಮೀಮಾಂಸೆಯ ರಸ – ಧ್ವನಿ – ಔಚಿತ್ಯ – ಗುಣ ಮುಂತಾದ ಪ್ರಸ್ಥಾನಗಳನ್ನು ಪ್ರಮಾಣೀಕರಿಸುವದರ ಜೊತೆಗೆ, ಒಂದು ಸಾಹಿತ್ಯ ಕೃತಿಯ ಶಬ್ದಾರ್ಥ ಹಾಗೂ ಭಾವಾರ್ಥ ಪಾತಳಿಗಳನ್ನು ತಡಕಿನೋಡುವ ವಿಮರ್ಶಾದೃಷ್ಟಿಯನ್ನು ತನ್ನ ತೆಕ್ಕೆಯಲ್ಲಿ ಅವುಚಿಕೊಂಡುಇ ಬೆಳೆಯುತ್ತದೆ, ಟೀಕಾಸಾಹಿತ್ಯ.

ಭಾರತೀಯ ಸಾಹಿತ್ಯದಲ್ಲಿ ಟೀಕೆ, ವ್ಯಾಖ್ಯಾನ, ಭಾಷ್ಯ, ಟಿಪ್ಪಣಿ, ವೃತ್ತಿ, ವಿವರಣೆ ಎಂದು ಮುಂತಾದ ಅಧ್ಯಯನ ರೂಪಗಳು ಕಂಡುಬರುತ್ತವೆ. ಇನ್ನೂ ಮುಂದೆ ಹೋಗಿ ಪ್ರಾಕೃತ ಜೈನಾಗಮಗ್ರಂಥಗಳಿಗೆ ಬಿಡಿಸಿದ ಗದ್ಯರೂಪದ ಚೂರ್ಣಿ. ಆ ಧರ್ಮದ ಪಾರಿಭಾಷಿಕ ಶಬ್ದಗಳ ವಿವರಣೆಗೆ ಬರೆದ ನಿರ್ಯುಕ್ತಿ. ವಿವರಣಾತ್ಮಕ ವ್ಯಾಖ್ಯಾನ ರೂಪವಾದ ಪದ್ಧತಿ, ಲಘುಭಾಷ್ಯ, ಸೂಪಾಜ್ಞಟೀಕೆ, ಟುಪ್ ಟೀಕಾ ಎಂಬಂತಹ ಒಳಪ್ರಬೇಧಗಳನ್ನು ಗಮನಿಸಿದರೆ, ಟೀಕಾಸಾಹಿತ್ಯದ ಸ್ವರೂಪ, ವ್ಯಾಪ್ತಿ ಹಾಗೂ ಮಹತ್ವಗಳು ಮನವರಿಕೆಯಾಗುತ್ತವೆ. ಈ ಕಾರಣವಾಗಿ ಟೀಕಾಸಾಹಿತ್ಯಪ್ರಕಾರ ಒಂದು ಸ್ವತಂತ್ರ ಅಧ್ಯಯನಕ್ಕೆ ವಸ್ತುವಾಗಬಲ್ಲದು.

ಕನ್ನಡದಲ್ಲಿ ಮೊದಲಿನಿಂದಲೂ ಜೈನ, ವೀರಶೈವ, ವೈದಿಕ ಸಾಹಿತ್ಯಕ್ಕೆ ಟೀಕೆ ವ್ಯಾಖ್ಯಾನಗಳು ರಚನೆಯಾಗಿವೆ. ಇದಕ್ಕೂ ಪೂರ್ವದಲ್ಲಿ ಸಂಸ್ಕೃತ – ಪಾಕೃತ ಕೃತಿಗಳಾದ ಪತಂಜಲಿಯ ಮಹಾಭಾಷ್ಯ, ಸಮಂತಭದ್ರರ ಗಂಧಹಸ್ತಿಭಾಷ್ಯ, ಮಲ್ಲಿನಾಥನ ಕಾಳಿದಾಸ ಕೃತಿಪಂಚಿಕ ಟೀಕೆಗಳು ರಚನೆಯಾಗಿರುವುದನ್ನು ನೋಡಬಹುದು. ಹಾಗೆಯೇ ಭಗವದ್ಗೀತೆಯನ್ನು ಕುರಿತ ಶ್ರೀ ಶಂಕರಭಗವತ್ಪಾದರ ಭಾಷ್ಯ, ವೈಶೇಷಿಕ ಸೂತ್ರಗಳಿಗೆ ಪ್ರಶಸ್ತಪಾದ ಬರೆದ ಭಾಷ್ಯಗಳು, ವಾತ್ಸ್ಯಾಯನನ ನ್ಯಾಯಸೂತ್ರ ಭಾಷ್ಯ, ಮೀಮಾಂಸಾದಾರ್ಶನ ಸೂತ್ರಗಳಿಗೆ ಶಬರಿಸ್ವಾಮಿಗಳವರು ಬರೆದ ಭಾಷ್ಯ, ವೇದಾಂತ ಸೂತ್ರಗಳಿಗೆ ಶಂಕರರ ಶಾರೀರಕಭಾಷ್ಯ, ಭಾಸ್ಕರರ ಭಾಸ್ಕರಭಾಷ್ಯ, ರಾಮಾನುಜರ ಶ್ರೀಭಾಷ್ಯ, ಮಾಧ್ವರ ಪೂರ್ಣಪ್ರಜ್ಞಾ ಭಾಷ್ಯ, ವಿಜ್ಞಾನಭಿಕ್ಷುಗಳ ವಿಜ್ಞಾನಾಮೃತ ಭಾಷ್ಯ, ಹಾಗೆಯೇ ಅದ್ವೈತ ದರ್ಶಿಗಳಾದ ಶಂಕರರ ಶಂಕರಭಾಷ್ಯ, ವಿದ್ಯಾರಣ್ಯರ ವಾಕ್ಯಸುಧೆಗೆ ಬರೆದ ರಾಮಬ್ರಹ್ಮಾನಂದರ ವ್ಯಾಖ್ಯಾನ, ಯೋಗವಾಶಿಷ್ಯಕ್ಕೆ ಭಾಗವತ ಕೃಷ್ಣಸ್ವಾಮಿಯವರು ಬರೆದ ಜ್ಞಾನಯೋಗ ತರಂಗಿಣಿ ಟೀಕೆ, ವಿಶಿಷ್ಟಾದ್ವೈತ ದರ್ಶಿಗಳಾದ ಭಗವದ್ರಾಮಾನುಜರ ತತ್ತ್ವಗಳನ್ನು ಒಳಗೊಂಡ ಕೃತಿಗಳಿಗೆ ಬರೆದ ಟೀಕೆಗಳು, ಹಾಗೆಯೇ ಭಾರವಿ, ಕಾಳಿದಾಸ ಮುಂತಾದವರ ಸಾಹಿತ್ಯ ಕೃತಿಗಳಿಗೆ ಸಮೃದ್ಧವಾದ ಟೀಕೆಗಳು ರಚನೆಗೊಂಡಿದೆ. ಶಠಗೋಪುರವೆಂಬ ತಮಿಳು ದಿವ್ಯಪ್ರಬಂಧಕ್ಕೆ ತಿರುವಾಯ್ ಮೊಳಿಯೆಂಬುವವರು ಬರೆದ ಕನ್ನಡ ಟೀಕೆ, ದ್ವೈತದರ್ಶಿಗಳಾದ ಶ್ರೀ ಮಾಧ್ವರ ಶ್ರೀ ಮಹಾಭಾರತ ತಾತ್ಪರ್ಯನಿರ್ಣಯ, ಭಾಗವತ ತಾತ್ಪರ್ಯನಿರ್ಣಯ, ಬ್ರಹ್ಮಸೂತ್ರಭಾಷ್ಯ, ನಿಂಬಾರ್ಕಾಚಾರ್ಯರಿಂದ ಪ್ರಣೀತವಾದ ದ್ವೈತಾದ್ವೈತ ದರ್ಶನವನ್ನು ಪ್ರತಿಪಾದಿಸುವ ವೇದಾಂತ ಪಾರಿಜಾತ ಸೌರಭ ಭಾಷ್ಯ, ಶ್ರೀ ವಲ್ಲಭಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶುದ್ಧಾದ್ವೈತದರ್ಶನ ಗ್ರಂಥಗಳಿಗೆ ಅವರ ಮಗ ವಿಠ್ಠಲದಾಸರು ಬರೆದ ವ್ಯಾಖ್ಯಾನಗಳನ್ನು ಹಾಗೂ ಚೈತನ್ಯಪಂಥ, ವೀರಶೈವದರ್ಶನ, ಜೈನದರ್ಶನಗಳಿಗೆ ಬರೆದ ವ್ಯಾಖ್ಯಾನಗಳನ್ನು ಗಮನಿಸಿದರೆ, ಒಂದು ಅಂದಾಜಿನ ಪ್ರಕಾರ ಒಂದು ನೂರು ಕೃತಿಗಳಿಗೆ ಐವತ್ತರಷ್ಟು ಟೀಕು ವ್ಯಾಖ್ಯಾನಗಳನ್ನು ಬರೆದಿರುವ ಸಾಧ್ಯತೆಯಿದೆ. ಅದರಲ್ಲೂ ಒಂದೊಂದು ಆಗಮಿಕ ಕೃತಿಗಳಿಗೆ ನಾಲ್ಕಾರು ಟೀಕಾಗ್ರಂಥಗಳು ರಚನೆಯಾಗಿರುವುದನ್ನು ನೋಡಿದರೆ ಪ್ರಾಚೀನ ಕಾಲದಲ್ಲಿ ಇದು ವಿಮರ್ಶಾಕೇಂದ್ರಿತವಾದ ಸ್ವತಂತ್ರ ಅಧ್ಯಯನವಾಗಿ ಬೆಳೆದುಬಂದಂತೆ ತೋರುತ್ತದೆ.

ಟೀಕಾಸಾಹಿತ್ಯ ಸೃಜನಾತ್ಮಕವಾದ ಸಾಹಿತ್ಯಗುಣಗಳಿಂದ, ಲೋಕಾನುಭವಗಳಿಂದ, ವ್ಯಾವಹಾರಿಕ ಜ್ಞಾನಗಳಿಂದ ಪುಷ್ಠಿಗೊಂಡಿರುವುದನ್ನು ಅಲ್ಲಗಳೆಯುಂತಿಲ್ಲ. ಹೀಗಾಗಿ ಟೀಕಾಕಾರರ ಬಹುಭಾಷಾ ಪಾಂಡಿತ್ಯ, ವಿದ್ವತ್ತು, ಆಧ್ಯಾತ್ಮಿಕ ಅನುಸಂಧಾನಗಳಲ್ಲದೆ ಪುರಾಣೀತಿಹಾಸಗಳ ಜ್ಞಾನವನ್ನು ತಿಳಿದುಕೊಳ್ಳುಬಹುದಾಗಿದೆ. ಕರ್ನಾಟಕದಲ್ಲಿ ಹಲವಾರು ಟೀಕಿನ ಮಠಗಳು , ಟೀಕಾಚಾರ್ಯರು ಆಗಿಹೋಗಿದ್ದು ಶಾಸ್ತ್ರ, ವೇದಾದ್ಯಯಗಳಂತೆ ಅವೆಲ್ಲವುಗಳನ್ನೊಳಗೊಂಡ ಟೀಕಾಸಾಹಿತ್ಯಧ್ಯಯನವು ಪ್ರಾಚೀನ ಕರ್ನಾಟಕದ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಭಾಗವಾಗಿ ಬೆಳೆದುಕೊಂಡು ಬಂದಿದೆ. ಟೀಕಾಸಾಹಿತ್ಯವನ್ನು ಸ್ಥೂಲವಾಗಿ ಅರ್ಥ, ಭಾವ ಮತ್ತು ಉದ್ದೇಶಗಳನ್ನು ಹೇಳುವುದಕ್ಕಾಗಿ ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಕೆಳಗಿನಂತೆ ಪರ್ಯಾಯ ಹೆಸರುಗಳಿಂದ ಕರೆಯಲಾಗುತ್ತದೆ.

ಟೀಕಾಸಾಹಿತ್ಯದ ಪರ್ಯಾಯ ಹೆಸರುಗಳು

ಪ್ರಾಕೃತ ಸಾಹಿತ್ಯ ಸಂಸ್ಕೃತ ಸಾಹಿತ್ಯ ಕನ್ನಡ ಸಾಹಿತ್ಯ
ಚೂರ್ಣಿ (ಚುಣ್ಣಿ) ವ್ಯಾಖ್ಯಾನ ಸಾರ
ನಿರ್ಯುಕ್ತಿ (ನಿಜ್ಜುತ್ತಿ) ವಾರ್ತಿಕ ಸಾರಾರ್ಥ
ಭಾಸ (ಭಾಷ್ಯ) ಅಧಿಕರಣ ಸಾರಾಮೃತ
ಪಂಚಿಕೆ (ಪದ್ಧತಿ) ಕೃತಕ ವ್ಯಾಖ್ಯಾನ
ತಾತ್ಪರ್ಯ ಟಿಪ್ಪಣಿ
ನಿರ್ಣಯ ವಚನಾರ್ಥ
ನ್ಯಾಸ ನುಡಿ
ಭಾಷ್ಯ ವಚನಾಗಮ
ಸಟೀಕು ಭಾವಾರ್ಥ
ವೃತ್ತಿ ಪ್ರವಚನ
ಸಂಕಲನ
ನಿರ್ವಚನ
ವಿವೇಚನ
ಅನ್ವಯ
ದೃಷ್ಟ

ಟೀಕುವಿನ ಸ್ವರೂಪ ಇಲ್ಲವೆ ಗಾತ್ರವನ್ನು ಅನುಲಕ್ಷಿಸಿ ಸೋಪಾಜ್ಞಟೀಕು, ಉಪನ್ಯಾಸ ಮಾಲಾಟೀಕು, ಟುಪ್ಪೀಕೆ ಎಂತಲೂ, ಭಾಷ್ಯಗಳಲ್ಲಿ ಅಘುಭಾಷ್ಯ, ಮಹಾಭಾಷ್ಯ ಎಂತಲೂ, ವೃತ್ತಿಯಲ್ಲಿ ಅರ್ಥವೃತ್ತಿ, ಅನ್ವಯವೃತ್ತಿ, ಲಘುವೃತ್ತಿ, ಬೃಹತ್ ವೃತ್ತಿ ಎಂತಲೂ, ವ್ಯಾಖ್ಯಾನದಲಿ ತಾತ್ವಿಕಾರ್ಥ.ಾತ್ಪರ್ಯಾರ್ಥ, ಪ್ರತಿಪದಾರ್ಥ ಎಂಬ ಭಿನ್ನ ಸ್ವರೂಪದ ಟೀಕು ರಚನೆಯಾಗಿರುವುದು ಕಂಡುಬರುತ್ತದೆ.