. ಅರ್ಥಉಗಮ

ಸ್ವತಂತ್ರ ಸಾಹಿತ್ಯಪ್ರಕಾರವಾಗಿ ಕನ್ನಡದಲ್ಲಿ ಬೆಳೆದುಬಂದ ಟೀಕಾಸಾಹಿತ್ಯಕ್ಕೆ ಸುಮಾರು ೭ನೇ ಶತಮಾನದಿಂದ ೧೯ನೇ ಶತಮಾನದ ವರೆಗೆ ಇತಿಹಾಸವಿದೆ. ಇದು ಕನ್ನಡ ಸಾಹಿತ್ಯದ ವಿಸ್ತಾರವನ್ನು, ವಿಮರ್ಶಾಮುಖವನ್ನು ಹೆಚ್ಚಿಸಿತೆಂದು ಹೇಳಬಹುದು. ಒಂದು ಕಾಲದ ಶೈಕ್ಷಣಿಕ ವಿಷಯವಾಗಿದ್ದ ಟೀಕಾಸಾಹಿತ್ಯ ಸೃಜನಾತ್ಮಕವಾಗಿ ಬೆಳೆದು ವಿದ್ವತ್ತು, ಪಾಂಡಿತ್ಯ, ತರ್ಕಜ್ಞಾನ, ಲೋಕಾನುಭವ, ಶಬ್ದಸಂಪತ್ತುಗಳ ಅಪೂರ್ವತೆಯಿಂದ ಮೂಲಸಾಹಿತ್ಯದ ಬೆಲೆಯನ್ನು ಹೆಚ್ಚಿಸಿದೆ.

ಒಂದುಕಾಲದ ಸಂಸ್ಕೃತ, ಪ್ರಾಕೃತ ಮೂಲದ ಧಾರ್ಮಿಕ ಗ್ರಂಥಗಳನ್ನು, ಅವುಗಳ ಕೈಪಿಡಿಯಂತಿರುವ ಇತಿಹಾಸ ಪುರಾಣಗಳಾದ ರಾಮಾಯಣ ಮಹಾಭಾರತಗಳಂತಹ ಕಾವ್ಯಗಳನ್ನು ಕನ್ನಡೀಕರಿಸಿದ ಪ್ರಾಚೀನ ಸಾಹಿತ್ಯಕ್ಕಿಂತಲೂ, ಇತ್ತೀಚಿನ ಆಧುನಿಕ ಅನುವಾದ ಕಲೆಗಿಂತಲೂ ಭಿನ್ನವಾಗಿ ಟೀಕಾ ಸಾಹಿತ್ಯ ಸೃಷ್ಟಿಯಾಗಿದೆ. ಇತ್ತ ಭಾಷಾಂತರವೂ ಅಲ್ಲದ, ಅತ್ತ ಅನುವಾದವೂ ಆಗದ ಇದು ಒಂದು ಕಾವ್ಯವನ್ನು ವಿವರಣ, ಹಾಗೂ ವಿವೇಚನೆ ಮುಖಗಳನ್ನು ಜೋಡಿಸಿ ಶಬ್ದಾರ್ಥ – ಭಾವರ್ಥಗಳಿಂದ ವಿಶ್ಲೇಷಿಸುವ ಒಂದು ಪ್ರಕಾರ, ವಿದ್ವಾಂಸರು ಟೀಕೆಯನ್ನು ಆಧುನಿಕ ಸಾಹಿತ್ಯ ಪ್ರಕಾರವಾದ ವಿಮರ್ಶೆಗೆ ಹೋಲಿಸುತ್ತಾರೆ. ಬಹಳವೆಂದರೆ ವಿಮರ್ಶೆಯು ಸಾರವತ್ತಾದ ಮಾತು, ವಿವರಣೆ, ನಿರೂಪಣೆಯ ಹಂತಕ್ಕೆ ತಲುಪಬಹುದು. ಇಲ್ಲವೇ ವಸ್ತುನಿಷ್ಠತೆಗೆ ವಿಮುಖವಾಗಿ ವ್ಯಕ್ತಿನಿಷ್ಠ ನೆಲೆಯಲ್ಲಿ ಉಳಿದುಬಿಡಬಹುದು. ಆದರೆ ಟೀಕಾಸಾಹಿತ್ಯ ವಿಮರ್ಶೆಯಂತೆ(criticism) ಗುಣದೋಷಗಳ ಮೌಲ್ಯ ಮಾಪನವಾಗದೆ ಒಂದು ಕಾವ್ಯದ commentary ಆಗುತ್ತದೆ. ಹೀಗಾಗಿ ವಿಮರ್ಶೆ ಮನೋಧರ್ಮ ಕಾಲದಿಂದ ಕಾಲಕ್ಕೆ, ಜನಾಂಗದಿಂದ ಜನಾಂಗಕ್ಕೆ ಭಿನ್ನವಾಗುವುದರಿಂದ ಒಂದು ಕೃತಿಯ ಗುಣದೋಷಗಳ ವಿಮರ್ಶೆ, ಸಾಹಿತ್ಯವಲಯದಿಂದ ಹೊರಬಂದು ಆ ಕೃತಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಪ್ರತಿಪಾದಿಸಬಹುದಾದ ಪ್ರಸ್ತುತತೆಯನ್ನು ಅಪೇಕ್ಷಿಸುತ್ತದೆ. ಆದರೆ ಈ ಅಪೇಕ್ಷೆಯನ್ನು ಪ್ರಾಚೀನ ತಾತ್ವಿಕ ಗ್ರಂಥಗಳಿಗೆ ಬರೆದ ಟೀಕೆಗಳಲ್ಲಿ ಬಯಸುವಂತಿಲ್ಲ. ಇದಕೆ ಟೀಕಾಸಾಹಿತ್ಯ ಸೃಷ್ಟಿಯಾದ ಪರಿಸರ ಪ್ರಮುಖ ಕಾರಣ. ಅಂದರೆ ಒಂದು ಧರ್ಮವು ಮತೀಯತೆ, ಪಂಥ ಹಾಗೂ ಜಾತಿಯತೆಯ ಅರ್ಥದಲ್ಲಿ ಸಂಕುಚಿತಗೊಂಡು ವ್ಯವಹರಿಸುವ ಸಂದರ್ಭದಲ್ಲಿ ಆ ಧರ್ಮದ ತಾತ್ವಿಕ ವಿಚಾರಗಳಿಗೆ ಬರೆದ ಟೀಕಾಕೃತಿಗಳು ಒಂದರ್ಥದಲ್ಲಿ ವ್ಯಕ್ತಿನಿಷ್ಠ ವಿಮರ್ಶೆಗಳಾಗಿಬಿಡುತ್ತವೆ.

ಟೀಕಾ, ವ್ಯಾಖ್ಯಾನ ಕೃತಿಗಳು ಪ್ರಾಚೀನ ಕಾಲದ ಅಧ್ಯಯನಗಳು, ಶಾಸ್ತ್ರ ವೇದಾಧ್ಯಾಯನಗಳಂತೆ ಇದೂ ಅಂದು ಅಧ್ಯಯನದ ಶಿಸ್ತಾಗಿ ಬೆಳೆದು ಬಂದಿರುವುದಕ್ಕೆ ಪ್ರಾಚೀನ ವಿದ್ಯಾಕೇಂದ್ರಗಳಲ್ಲಿಯ ಪಠ್ಯಕ್ರಮದ ವಿಷಯಗಳಿಂದ ತಿಳಿದುಬರುತ್ತದೆ. ೧೦ನೇ ಶತಮಾನದಲ್ಲಿ ಪ್ರಸಿದ್ಧವಾಗಿದ್ದ ಕಾಡಿಯೂರಿನ ಅಗ್ರಹಾರದಲ್ಲಿ

            ವ್ಯಾಕರಣಮರ್ಥಶಾಸ್ತ್ರಾ
          ನೀಕಂ ಸಾಹಿತ್ಯ ವಿದ್ಯೆಯಿತಿಹಾಸಂ ಮಿ |
ಕ್ಕೇಕಾಕ್ಷರಮಿನಿತರ್ಕ
          ಟೀಕಾ ಬರೆಯಲ್ ಸಮಗ್ರರಭ್ಯಾಸಿಸುವರ್ ||

ಎನ್ನುವಲ್ಲಿ ಹಾಗೂ ಕೋಡಿಮಠವು “ಶಬ್ದಾನುಶಾಸನಾದಿ ವ್ಯಾಕರಣ ವ್ಯಾಖ್ಯಾನ ಸ್ಥಾನಮುಂ….” “….ಷಡುದರ್ಶನ ವ್ಯಾಖ್ಯಾನ ಸ್ಥಾನಮುಂ…” “….ಪಾತಂಜಳಾದಿ ಯೋಗಶಾಸ್ತ್ರ ವ್ಯಾಖ್ಯಾನ ಸ್ಥಾನಮುಂ…” (ಶಿಕಾರಿಪುರ ಶಾಸನ, ೧೦೨) ಆಗಿತ್ತೆಂಬ ಉಲ್ಲೇಖವನ್ನು ಗಮನಿಸಿದರೆ ಇವು ವ್ಯಾಕರಣ, ಷಡುದರ್ಶನ ಹಾಗೂ ಪಾತಂಜಳೀ ಯೋಗಶಾಸ್ತ್ರಗಳ ಮೇಲೆ ಮಾಡಿದ ಅಧ್ಯಯನಗಳೇ ಆಗಿವೆ. ಈ ಹೊತ್ತು ಪಂಪಭಾರತ ಒಂದು ಅಧ್ಯಯನ, ವಚನಸಾಹಿತ್ಯ ಸಾಂಸ್ಕೃತಿಕ ಅಧ್ಯಯನ ಎಂಬಂತೆ ಆಗ ಟೀಕಾಕಾರರು, ವ್ಯಾಖ್ಯಾನಕಾರರು ಮಾಡಿದ ಸಾಹಿತ್ಯ ಕೃತಿಗಳ ಅಧ್ಯಯನವಾಗಿದೆ; “ಟೀಕಾಸಾಹಿತ್ಯ.”

‘ಟೀಕೆ’ಯನ್ನು ವ್ಯಾಖ್ಯಾನ, ಟಿಪ್ಪಣಿ, ಭಾವಾರ್ಥ, ಭಾಷ್ಯ, ವೃತ್ತಿ, ನ್ಯಾಸ, ಸಾರ ಎಂದು ಕರೆದಂತೆ ಪಂಚಿಕೆ ಚೂರ್ಣಿ, ನಿರ್ಯುಕ್ತಿ, ನಿರ್ವಚನ ಎಂದು ಮುಂತಾಗಿ ಕರೆದಿರುವುದು ಇದು ಶಬ್ದಾರ್ಥ – ಭಾವಾರ್ಥಗಳ ವಿವರಣೆಯೆಂಬುದು ಸ್ಪಷ್ಟವಾಗುತ್ತದೆ.

. ಟೀಕು

ಅರ್ಥವಿವರಣೆ. ಅದು ಶಬ್ದರ್ಥ ಇಲ್ಲವೇ ಭಾವಾರ್ಥ ವಿವರಣೆ ಆಗಿರಬಹುದು ಎಂಬ ವಿಚಾರ ಪ್ರಾಚೀನ ಕೃತಿಗಳಲ್ಲಿ ದೊರೆಯುತ್ತದೆ. ಶಾಸ್ತ್ರ ಸಾಹಿತ್ಯಕ್ಕೆ ಬರೆದ ವಿವರಣೆಯನ್ನು ಟೀಕು ಎಂದು ಕರೆದಂತಿದೆ.

ಲೋಕಕ್ಕಿದರರ್ಥಶಾಸ್ತ್ರದ ಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ
“…..ಟೀಕುವೇಳ್ಪುದನೆ ಪೇಳ್ವವನುಂ ಕವಿಯೆಂಬ ಲೆಕ್ಕಮೇ

ಎಂಬ ಕಾವ್ಯಾವಲೋಕನದ ಮಾತು ಕವಿ ಸೃಜನಶೀಲ ವ್ಯಕ್ತಿ, ಕಾವ್ಯ ಆತನ ಸೃಜನಶೀಲ ಅಭಿವ್ಯಕ್ತಿ. ಹೀಗಾಗಿ ಟೀಕಾಕಾರ ಹೇಳಿದ್ದನ್ನೇ ಹೇಳುವವನನ್ನು ಕವಿಯೆನ್ನಲಾಗದು ಎನ್ನುವಲ್ಲಿ ಕವಿಸಾಹಿತ್ಯದ ತಿರುಳನ್ನು, ಅರ್ಥವನ್ನು ವಿವರಿಸುವುದು ಟೀಕಾಕಾರನ ಕೆಲಸವೆಂಬುದು ಈ ಮಾತಿನ ಅರ್ಥ. ಈ ಟೀಕೆಗಳಲ್ಲಿ ಸೋಪಾಜ್ಞ ಟೀಕೆ, ಟುಪ್ಟೀಕೆ ಎಂಬ ಪ್ರಬೇಧಗಳಿವೆ. ಉನ್ನತಮಟ್ಟದ ಟೀಕೆ ಸೋಪಾಜ್ಞಟೀಕೆಯೆನಿಸಿದರೆ, ಟುಪ್ಟೀಕೆಯೆಂಬುದು ಬಹು ಸಂಕ್ಷೇಪವಾದ ವ್ಯಾಖ್ಯಾನವಾಗಿದೆ. ಶಾಬರಭಾಷ್ಯದ ಮೇಲೆ ವ್ಯಾಖ್ಯಾನ ಬರೆದ ಕುಮಾರಿಲಭಟ್ಟ ಟುಪ್ಟೀಕೆ ರಚಿಸಿದ್ದಾನೆ. ಟೀಕೆಯ ರೂಪವನ್ನು ಹೇಳುವ ಬಂಕನಾಥ – ಎಂಬುದೀಗ ದೃಷ್ಟ, ವಚನಾನ್ವಯ, ನಿರ್ವಚನ, ಎಂಬುದೀವಚನ ತಾತ್ಪರ್ಯ ಎನ್ನುವಲ್ಲಿ ಟೀಕೆಗೆ ದೃಷ್ಟ, ಅನ್ವಯ, ನಿರ್ವಚನ, ತಾತ್ಪರ್ಯ ಎಂಬ ವೈವಿಧ್ಯ ಪದಪುಂಜಗಳನ್ನು ಪ್ರಯೋಗಿಸಿದ್ದಾನೆ.

. ಟಿಪ್ಪಣಿ

ವಿವರಣೆ, ವ್ಯಾಖ್ಯಾನ ಎಂಬಂತಹ ಅರ್ಥಗಳಿದ್ದರೂ ಈ ವಿಶಾಲವಾದ ಅರ್ಥ ಇಂದು ಈ ಶಬ್ದಕ್ಕೆ ಹೊಂದಿಕೆಯಾಗುವುದಿಲ್ಲ. ಇಂದು ಟಿಪ್ಪಣಿ ಮಾಡಿಕೊಳ್ಳು ಎನ್ನುವುದಕ್ಕೆ ನೋಟ್ಸ್ (Notes) ಮಾಡಿಕೊಳ್ಳು ಎಂದೇ ಅರ್ಥ. ಅಂದರೆ ವಿಶೇಷ ಸಂದರ್ಭಗಳಲ್ಲಿ ಮುಖ್ಯ ವಿಷಯಗಳನ್ನು ಮಾತ್ರ ನೆನಪಿಗಾಗಿ ಗುರುತು ಮಾಡಿಕೊಂಡ ಬರವಣಿಗೆ ಎನ್ನಬಹುದು.

. ವ್ಯಾಖ್ಯಾನ

ವಿಸ್ತಾರವಾಗಿ ಹೇಳುವುದು, ಕೂಲಂಕಷವಾದ ವರ್ಣನೆ, ವಿವರಣೆ ಎಂದರ್ಥವಾಗುತ್ತದೆ. ಮೀಮಾಂಸೆ ಹಿನ್ನೆಲೆಯಲ್ಲಿ ವಿವರಿಸುವುದಕ್ಕೆ ವ್ಯಾಖ್ಯಾನವೆಂದು ಕರೆದಂತಿದೆ. ಪೊನ್ನನು

ಸಾರತರೋಕ್ತಿಗೆ ನೆಲ್ಲುಂ
ಮೋರುಂಗೋದಂತೆ ನೇರಿ ಕಲ್ತಾರ್ಪರವ ||
ರ್ಗೋರೆನಿಬಂಧನ ಟೀಕಾ
ಕಾರಂಗಲ್ಲದೆ ಪೆರರಿಂಗೆ ಕೋಳ್ವೋದಪುದೇ ||
(ಶಾಂತಿಪುರಾಣ ೧೦ – ೧೮೨)

ಎಂಬ ಪದ್ಯದಲ್ಲಿ ತಾವು ಕಲಿತು ಪಂಡಿತರೆಂದುಕೊಂಡವರು ಭತ್ತ ಮೊಸರು ಕಲಿಸಿದಂತೆ ಸ್ವತಃ ಅರ್ಥ ಪ್ರಸನ್ನತೆಯಿರುವ ಮಾತಿಗೆ ವ್ಯಾಖ್ಯಾನ ಟೀಕೆಗಳನ್ನು ಬರೆಯುವರು ಎಂದಿದ್ದಾನೆ. ಇದರಿಂದ ಅರ್ಥವಾಗದ ಬೆಡಗಿನಿಂದ ಕೂಡಿದ ಗೂಡಾರ್ಥ ಸಾಹಿತ್ಯಕ್ಕೆ ವಿವರ ಬರೆಯುವುದು ವ್ಯಾಖ್ಯಾನವೆನಿಸುತ್ತದೆ. ಇದು ಶಬ್ದಾರ್ಥ, ಸಂದರ್ಭ, ವಿಶೇಷ ವಿವರಣೆಯನ್ನೊಳಗೊಂಡಿರುತ್ತದೆ.

. ಭಾಷ್ಯ

ವ್ಯಾಕರಣ, ವೇದಾಂತ ಮೊದಲಾದ ಶಾಸ್ತ್ರಗಳ ಮೂಲಭೂತವಾದ ಸೂತ್ರಗಳ ಅರ್ಥವನ್ನು ವಿವರಿಸುವ ಕೃತಿ ಉದಾಹರಣೆಗೆ ಶ್ರೀಕರಭಾಷ್ಯ, ಶಂಕರಭಾಷ್ಯಗಳೂ, ಶಾಸ್ತ್ರಸಮ್ಮತವಾದ ವೇದಾಂತಭಾಷ್ಯ ಗ್ರಂಥಗಳು. ಅಲ್ಲದೆ ಸೂತ್ರಾನುಸಾರವಾದ ಪದಗಳಿಂದ ಸೂತ್ರಾರ್ಥವನ್ನು ವಿವರಿಸುವ ಹಾಗೂ ವಿವರಣೆಗಾಗಿ ಕೊಟ್ಟ ಪದಗಳನ್ನು ಮತ್ತೆ ವಿಸ್ತಾರವಾಗಿ ವಿವರಿಸುವ ಸೂತ್ರ ವ್ಯಾಖ್ಯಾನಗಳು ಭಾಷ್ಯಗಳು. ಯಾವುದೇ ಗಹನವಾದ ಮೂಲಗ್ರಂಥದ ವಿವರಣಾತ್ಮಕ ಪ್ರೌಢ ವ್ಯಾಖ್ಯಾನಗಳೇ ಭಾಷ್ಯಗಳು.

ಈ ಭಾಷ್ಯಗಳಲ್ಲಿ ಲಘುಭಾಷ್ಯ, ಮಹಾರಾಷ್ಟ್ರ, ಎಂದು ಎರಡು ವಿಧ. ಜೈನ ಪರಿಭಾಷೆಯಲ್ಲಿ ಭಾಸ ಎಂದು ಕರೆಯಲಾಗಿದೆ. ಜೈನ ಕಥಾಸಾಹಿತ್ಯ ಮೈತುಂಬಿಕೊಂಡು ಬಂದಿರುವುದು ಈ ಭಾಷ್ಯಗಳಲ್ಲಿ, ಜೈನರಲ್ಲಿ ೪ – ೫ನೆಯ ಶತಮಾನಕ್ಕೆ ಸೇರಿದ ಭಾಷ್ಯಗಳಲ್ಲಿ ಸಮಾಜೋ – ಧಾರ್ಮಿಕ, ಸಮಾಜೋ – ಸಾಂಸ್ಕೃತಿಕ ಸಾಮಾಗ್ರಿ ಹೇರಳವಾಗಿ ದೊರೆಯುತ್ತದೆ. ವಿಶೇಷವೆಂದರೆ “ವಿಶೇಷಾವಶ್ಯಕಭಾಷ್ಯ, ನಿಶಿಥಭಾಷ್ಯ, ಬೃಹತ್ ಕಲ್ಪಭಾಷ್ಯ, ವ್ಯವಹಾರಭಾಷ್ಯಗಳಲ್ಲಿ ಐತಿಹ್ಯಗಳಿವೆ. ನೀತಿಬೋಧಕ ಕಥಾನಕಗಳಿವೆ. ರಿಷಿಚರಿತೆಗಳಿವೆ ಮತ್ತು ಮಿಗಿಲಾದ ಜನಪದ ಕಥೆಗಳಿವೆ.” (ಜೈನಕಥಾಕೋಶ ಸಂ : ಹಂಪನಾ, ಪ್ರಸ್ತಾವನೆ ಪು.೧೦) ಎಂಬುದನ್ನು ಗಮನಿಸಿದಾಗ ಭಾಷ್ಯಗಳು ಶಾಸ್ತ್ರ, ಲಕ್ಷಣ ಕೃತಿಗಳಂತೆ ರಚನೆಯಾದ ಒಂದು ಪ್ರಕಾರ. ಈ ಪ್ರಕಾರದಂತೆ ಸೇರಿದ ಜಿನಭದ್ರಸೂರಿಯ ೩೬೦೦ ಗಾಥಾಗಳ ವಿಶೇಷಾವಶ್ಯಕ ಭಾಷ್ಯಕ್ಕೆ ಸೋಪಾಜ್ಞಟೀಕಾವನ್ನು ಬರೆಯಲಾಗಿದೆ. ಸಂಕ್ಷಿಪ್ತ ಪದಾರ್ಥ, ಸೂತ್ರದ ವಿವರಣೆಯನ್ನು ಭಾಷ್ಯ ಒಳಗೊಂಡಿರುತ್ತದೆ.

. ವೃತ್ತಿ

ಸೂತ್ರ ರೂಪದಲ್ಲಿರುವ ಮೂಲಗ್ರಂಥಕ್ಕೆ ಭಾಷ್ಯ ಬರೆಯುವುದಕ್ಕೆ ವೃತ್ತಿ ಎನ್ನುತ್ತಾರೆ. ಅಂದರೆ ಸೂತ್ರದ ಅರ್ಥ ವಿವರಣೆ. ಪಂಪಭಾರತದ “ಸೂತ್ರಿಸಿದ ಸೂತ್ರ(ದ) ವೃತ್ತಿ ನಿಜಾತ್ಮವೃತ್ತಿಮೋಲ್ ಪರಿಣಮಿಸಿತ್ತು” (ಪಂಪಭಾರತ ೨ – ೨೪) ಎಂಬ ಮಾತಾಗಲಿ, ತತ್ತ್ವಪ್ರಕಾಶದ “ಅಲ್ಪಾಕ್ಷರಮುಂ ಅಸಂದೇಹಮುಂ ಸಾರವುಳ್ಳದಂ… ಅರ್ಥೋತ್ಪತ್ತಿ ನಿಮಿತ್ತಮುಂ ಅಪ್ಪುದು ಸೂತ್ರವೆಂಬುದು ಅದಂ ವಿವರಿಸುವುದು ವೃತ್ತಿ ಗ್ರಂಥಂ…..” (ತತ್ತ್ವಪ್ರಕಾಶ – ೩) ಅಂದರೆ ಸಂಕ್ಷೇಪದಿಂದ ಕೂಡಿದ್ದು, ಅರ್ಥವನ್ನು ಗರ್ಭೀಕರಿಸಿಕೊಂಡಿದ್ದು, ಕೆಲವೇ ಅಕ್ಷರಗಳ ಸಮೂಹ ಹೊಂದಿದ್ದು, ಸೂತ್ರ. ಅಂತಹ ಸೂತ್ರವನ್ನು ವಿವರಿಸುವುದು ವೃತ್ತಿ. ಈ ವೃತ್ತಿಗಳಲ್ಲಿ ಅರ್ಥವೃತ್ತಿ, ಅನ್ವಯಿಕವೃತ್ತಿ, ಲಘುವೃತ್ತಿ(ಸುಖಬೋಧಾ), ಬೃಹದ್ ವೃತ್ತಿ (ಶಿಷ್ಯಾರಹಿತಾ)ಗಳೆಂದು ಭಿನ್ನ ಸ್ವರೂಪಗಳಿವೆ. ಉದಾಹರಣೆಗೆ ನೇಮಿಂದ್ರ ಬರೆದ ಉತ್ತರಧ್ಯಾಯನ ಸುಖಭೋಧಾ ವೃತ್ತಿ (ಲಘುವೃತ್ತಿ) ಶಾಂತಿಸೂರಿ ವಿರಚಿತ ಉತ್ತರಾಧ್ಯಯನದ ಶಿಷ್ಯರಹಿತಾ(ಬೃಹದ್ ವೃತ್ತಿ) ವೃತ್ತಿಗಳನ್ನು ಹೆದರಿಸಬಹುದು. ಹಾಗೆಯೇ ಕೇಶಿರಾಜನು ಶಬ್ದಮಣಿದರ್ಪಣಕ್ಕೆ ಬರೆದ ವೃತ್ತಿ ಅನ್ವಯಿಕ ವೃತ್ತಿಯಾಗಿದೆ. ಉಳಿದಂತೆ ಕನ್ನಡದಲ್ಲಿ ಅರ್ಥವೃತ್ತಿಗಳು ಹೇರಳವಾಗಿವೆ.

. ಚೂರ್ಣಿ

ಜೈನರಲ್ಲಿ ಗದ್ಯಾತ್ಮಕ ಟೀಕೆಗಳನ್ನು ಚೂರ್ಣಿ (ಚುಣ್ಣಿ) ಎಂದು ಕರೆಯುತ್ತಾರೆ. ಇವು ಅವರ ಆಗಮಗ್ರಂಥಗಳಿಗೆ ಸಂಬಂಧಿಸಿದವು. “ಚೂರ್ಣಿಕೆ ಲತಿಕೆ… ಚಿತ್ರಮೆಂಬ ಗದ್ಯಬಂಧದೊಳಂ” (ಅನಂತನಾಥಪುರಾಣ ೧೦ – ೨೮) ಎಂಬ ಜನ್ನನ ಹೇಳಿಕೆ ಸುಲಭಶೈಲಿಯ ಒಂದು ಗದ್ಯ ಪ್ರಕಾರ. ಜೈನರ ಪ್ರಾಕೃತ ಗದ್ಯರೂಪದಲ್ಲಿ ಚೂರ್ಣಿಗಳು ರಚನೆಯಾಗಿದ್ದು. ಲೋಕಜ್ಞಾನ, ಹಾಸ್ಯಪ್ರವೃತ್ತಿ ಸಾರುವ ಕಥಾಚಕ್ರವೇ ಚೂರ್ಣಿಗಳಲ್ಲಿ ಹೆಣೆದುಕೊಂಡಿವೆ. ಸಾಮಾಜಿಕ ಮತ್ತು ಐತಿಹಾಸಿಕ ದೃಷ್ಟಿಯಿಂದ ಈ ಚೂರ್ಣಿಗಳು ಉಪಯುಕ್ತವಾಗಿವೆ.

. ನಿರ್ಯುಕ್ತಿ

ಜೈನರಲ್ಲಿ ಪದ್ಯಾತ್ಮಕ ಟೀಕೆಗೆ ನಿರ್ಯುಕ್ತಿ ಎಂದು ಕರೆಯುತ್ತಾರೆ. ಜೈನಾಗಮ ಗ್ರಂಥಗಳ ಪಾರಿಭಾಷಿಕ ಶಬ್ದವಿವರಣೆಗಾಗಿ ನಿರ್ಯುಕ್ತಿಗಳನ್ನು ಬರೆಯುವ ರೂಢಿ ಬೆಳೆದುಬಂದಿತು. ಸಂಸ್ಕೃತದ ಪದ ನಿರ್ಯುಕ್ತಿಯ ಪ್ರಾಕೃತ ರೂಪ ನಿಜ್ಜುಕ್ತಿ. ಅನುಯೋಗದ್ವಾರ ಮುಂತಾದವುಗಳ ಮೇಲೆ ಬರೆದ ವ್ಯಾಖ್ಯಾನದಂತೆ ಇರುವ ಕೃತಿಗಳೇ ನಿರ್ಯುಕ್ತಿಗಳು. ಜೈನಧರ್ಮದ ದಶಾಗಮಗ್ರಂಥಗಳಲ್ಲದೆ ಪಿಂಡ ಹಾಗೂ ಓಘ ಎಂಬೆರಡು ಆಗಮಗಳಿಗೆ ನಿರ್ಯುಕ್ತಿಗಳಿವೆ.

. ಪದ್ಧತಿ

ಜೈನ ವ್ಯಾಖ್ಯಾನ ಪ್ರಕಾರವಾಗಿದೆ. ಇದನ್ನು ಪಂಜಿಕೆ, ಪಂಚಿಕೆ ಎಂತಲೂ ಕರೆಯುತ್ತಾರೆ. “ಆ ಕೃತಿಗೆ ಪಂಚಿಕೆ ವೇಳ್ಪುದದರ್ಕೆ ಟಿಪ್ಪಣಿ ಬೇಳ್ಪುದು, ಟೀಕು ವೇಳ್ಪುದೆನೆ ಪೇಳ್ಪವನುಂ ಕಚಿಯೆಂಬ ಲೆಕ್ಕಮೇ” ಎಂಬ ಕಾವ್ಯಾವಲೋಕನದ (೨೯೯) ದ ಮಾತು “….ಪ್ರಾಕೃತ ಸಂಸ್ಕೃತ ಕರ್ಣಾಟಭಾಷಾಯಾ ಪದ್ಧತಿ: ಪರಾ ರಚಿತಾ (ಶ್ರುತಾವತಾರ ೧೬೪) ಎಂಬ ಇಂದ್ರನಂದಿಯ ಮಾತುಗಳಿಂದ ಇದು ವ್ಯಾಖ್ಯಾನ ಪ್ರಬೇಧ. ಜಿನಸೇನಾಚಾರ್ಯರ ಜಯಧವಲಾ ಗ್ರಂಥದ ಪ್ರಕಾರ ಇದರ ಲಕ್ಷಣ “ವೃತ್ತಿ ಸೂತ್ರ ವಿಸಮ ಪಯಾಭಂಜಿ ಏ ವಿವರಣಾವ ಪದ ಇ ವವೇಸಾದೋ” ಈ ವಾಕ್ಯಕ್ಕೆ “ವೃತ್ತಿ ಸೂತ್ರಕ್ಕೇ ವಿಷಮ ಪದೋಂ ಕ ಭಂಜನ ಅರ್ಥಾತ್ ವಿಶ್ಲೇಷಣಾತ್ಮಕ ವಿವರಣಕೋ ಪದ್ಧತಿ ಕಹತೇಹೈಂ” ಎಂದು ಹೀರಾಲಾಲ್ ಜೈನರು ವಿವರಣೆ ನೀಡಿದ್ದಾರೆ. ಇದರಿಂದ ಪದ್ಧತಿ, ಪಂಜಿಕೆ, ಪಂಚಿಕೆಗಳೆಂದರೆ ವೃತ್ತಿಸೂತ್ರದ ಕ್ಲಿಷ್ಟಪದಗಳಿಗೆ ಬರೆದ ವಿವರಣಾ ರೂಪದ ವ್ಯಾಖ್ಯಾನ ಎಂದಾಗುತ್ತದೆ. “ನಿನ್ನ ಪದ್ಯಕ್ಕೆ ಸದ್ಯಕ್ಕೆ ಟೀಕು, ಟಿಪ್ಪಣಿ, ಪಂಚಿಕೆ ಎಲ್ಲವೂ ಬೇಕು” (ಕ.ಸಾ.ಪ. ಕನ್ನಡ ನಿಘಂಟು ಸಂ.೪ ಪು.೫೦೫೪) ಎನ್ನುವಲ್ಲಿ ಮೇಲಿನ ಅರ್ಥ ಇನ್ನು ಅಧಿಕೃತವೆನಿಸುತ್ತದೆ.

. ನ್ಯಾಸ

ವ್ಯಾಖ್ಯಾನವೆಂತಲೂ ಭಾಷ್ಯ, ಟೀಕೆಯೆಂತಲೂ ಹೆಸರು. “ಭಟ್ಟಾದರ್ಶನ, ನ್ಯಾಸ, ಪ್ರಭಾಕರ ವ್ಯಾಖ್ಯಾತೃಗಳ್ಮೂವರ್ಗ್ಗ ಸರ್ವನಮಸ್ಯಮಾಗಿ ಕೊಟ್ಟ ಕೆಯ್ಮಾಣಿಕೇಶ್ವರದಗಳೆಂಬ ಮತ್ತರು ೧೦೦೦….. ಭಟ್ಟಾದರ್ಶನ ವ್ಯಾಖ್ಯಾತೃಗೆ ಮತ್ತರು ೩೫ ನ್ಯಾಸ ವ್ಯಾಖ್ಯಾತೃಗೆ ಮತ್ತರು ೩೦….” (ನಾಗಾವಿ ಶಾಸನ ಕ್ರಿ.ಸ. ೧೦೫೮) ಎಂಬ ಉಲ್ಲೇಖದಿಂದ ಹಾಗೂ ಈ ನುಡಿ ನಿನಗಲ್ಲದೆ ದಿವಿಜಾನೀಕಕ್ಕಮರದವರ ವಚನಂ ಜಡ ಸಂಸ್ಥಾನ ಮ ವಿಜ್ಞೇಯಮದರ್ಕೆ ನಾನುಂ ನ್ಯಾಸಕಾರರಂ ತರವೇಳ್ಕುಂ….” (ಶಾಂತಿಪುರಾಣ ೧೦ – ೧೮) ಎನ್ನುವಲ್ಲಿ ವ್ಯಾಖ್ಯಾನ ಎಂಬ ಅರ್ಥ ಪ್ರಾಪ್ತವಾಗುತ್ತದೆ. ನ್ಯಾಸವೆಂದರೆ ಸಂಗೀತದ ಒಂದು ಸ್ವರ ಪ್ರಬೇಧವೂ ಹೌದು. ಹೀಗಾಗಿ ಭಟ್ಟದರ್ಶನವನ್ನು ಗೇಯಾತ್ಮಕವಾಗಿ, ಪದ್ಯಾತ್ಮಕವಾಗಿ ವ್ಯಾಖ್ಯಾನ ಮಾಡುತ್ತಿದ್ದರೆನಿಸುತ್ತದೆ.

೧೦. ಸಾರ ಹಾಗೂ ಪ್ರವಚನ

ತಿರುಳು, ತಾತ್ಪರ್ಯ ಎಂದು ಸಾರ ಎಂಬುದಕ್ಕೆ ಅರ್ಥವಿದ್ದರೆ, ಪ್ರವಚನಕ್ಕೆ ವ್ಯಾಖ್ಯಾನ ವಿವರಣೆ ಎಂಬರ್ಥವಿದೆ. ಹೀಗಾಗಿ ಮರುಳದೇವರ ಕಂದಸಾರ, ಪಟುಸ್ಥಲಜ್ಞಾನ ಸಾರಾಮೃತ, ಕೈವಲ್ಯಸಾರ, ಅಕ್ಕನ ವಚನಗಳ ಪ್ರವಚನ ಇತ್ಯಾದಿ ಕೃತಿಗಳು ಈ ವರ್ಗಕ್ಕೆ ಸೇರಿದವು. ಈ ಗುಂಪಿಗೆ ಪರಾಮರ್ಶೆ ಕೃತಿಗಳು ಸೇರುತ್ತವೆ.

ಒಟ್ಟಿನಲ್ಲಿ ಟೀಕಾಸಾಹಿತ್ಯಕ್ಕೆ ಪರ್ಯಾಯವಾಗಿ ಟಿಪ್ಪಣಿ, ವ್ಯಾಖ್ಯಾನ, ಭಾಷ್ಯ, ನ್ಯಾಸ, ವೃತ್ತಿ, ಪದ್ಧತಿ, ಚೂರ್ಣಿ, ನಿರ್ಯುಕ್ತಿ, ಸಾರ, ಪ್ರವಚನ, ಪರಾಮರ್ಶೆಗಳೆಂಬ ಹೆಸರು ಬಳಕೆಗೊಂಡಿದ್ದರೂ ಒಂದು ಕೃತಿಯ ಅಂತರಂಗವನ್ನು ಭಾವಾರ್ಥರೂಪದಲ್ಲಿ ಇಲ್ಲವೇ ಶಬ್ದಾರ್ಥ ಸ್ವರೂಪದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ರಚಿಸಿದ ವಿವರಣಾ ಸಾಹಿತ್ಯ ಎಂದು ಹೇಳಬಹುದು.

ಟೀಕುವು ನಿಜ್ಜುತ್ತಿ(ನಿರ್ಯುಕ್ತಿ), ಭಾಸ(ಭಾಷ್ಯ), ಚುಣ್ಣಿ(ಚೂರ್ಣಿ) ಎಂದು ಪ್ರಾಕೃತ ಪರಂಪರೆಯಲ್ಲಿ, ಟೀಕೆ, ವ್ಯಾಖ್ಯಾನ, ವಿವರಣ, ವೃತ್ತಿ ಎಂದು ಸಂಸ್ಕೃತದಲ್ಲಿ ಹಾಗೂ ಸಾರ, ಪ್ರವಚನ, ಭಾವಾರ್ಥ ಎಂದು ಕನ್ನಡ ಪರಂಪರೆಯಲ್ಲಿ ಬಳಕೆಯಾಗುತ್ತಿದೆ.

ಸಾಹಿತ್ಯೋದಯಕಾಲದಿಂದ ಸುಮಾರು ೧೨ನೆಯ ಶತಮಾನದವರೆಗೆ ಜೈನರು, ೧೨ನೆಯ ಶತಮಾನದಿಂದ ೧೬ನೆಯ ಶತಮಾನದ ಕೊನೆಯ ಭಾಗದವರೆಗೆ ಲಿಂಗಾಯತರು, ೧೬ನೆಯ ಶತಮಾನದಿಂದ ಬ್ರಾಹ್ಮಣರೂ ಕನ್ನಡದಲ್ಲಿ ಟೀಕು ರಚಿಸಲು ಮುಂದಾದರು. ಈ ಸಾಹಿತ್ಯದ ಉಗಮಕ್ಕೆ ಕಾರಣ ಒಂದು ಧರ್ಮದ ತಿಳುವಳಿಕೆಯನ್ನು ಶ್ರೀ ಸಾಮಾನ್ಯರಲ್ಲಿ ದೇಶೀಯ ಭಾಷೆಯ ಮೂಲಕ ಪ್ರಸಾರಮಾಡುವುದು. ಸ್ವತಂತ್ರ ಕೃತಿರಚನೆಯ ಜೊತೆಗೆ ಆ ಧರ್ಮದ ಮೂಲ ಸಾಹಿತ್ಯದ ತಿರುಳನ್ನು ಪ್ರಸಾರಗೊಳಿಸುವ ಉದ್ದೇಶದಿಂದ ವ್ಯಾಖ್ಯಾನ ರಚನೆಯಾದವು. ಈ ಆಶಯವನ್ನು ಬಹುತೇಕ ಟೀಕಾಕಾರರು ತಮ್ಮ ಗ್ರಂಥದಲ್ಲಿ ಸ್ಪಷ್ಟಪಡಿಸಿದ್ದಾರೆ.

ತತ್ವಾರ್ಥಸೂತ್ರವೃತ್ತಿ ಬರೆದ ದಿವಾಕರಣಂದಿಯು “ಜಡರಂ ಬಾಳಕರುಂ ಬುಧಪ್ರಕರಮುಂ ತತ್ವಾರ್ಥಮಂ ಕಲ್ಪಘಂ | ಕಿಡೆ ಸಮ್ಯಕ್ತ್ವಮನೈದಿ ಸಪ್ತಪರಮಸ್ಥಾನಾಪ್ರಿಯಂ ನಿಶ್ಚಯಂ | ಪಡೆಯಲ್ ಮಾಡಿದರ್…” (ನಗರದ ಶಾಸನ ೫೭) ಎಂದೂ, ಪದಾರ್ಥ ಸಾರಕ್ಕೆ ಟೀಕು ಬರೆದ ಮಾಘಣಂದಿಯು “ಕರ್ನಾಟಕ ದೇಶದ ಜನಂಗಳವಂತಾಗಿ ಜಡಮತಿಗಳಂ ಕುರಿತು ವ್ಯಕ್ತಾರ್ಥಮಾಗಿ” ಬರೆದುದಾಗಿ ಹೇಳಿಕೊಂಡಿರುವುದನ್ನು ನೋಡಬಹುದು, ವೃತ್ತಿವಿಳಾಸನ ಧರ್ಮಪರೀಕ್ಷೆಯನ್ನು “ಶಾಸ್ತ್ರಜ್ಞರಿಗಲ್ಲದೆ ಸರ್ವ ಜನಕ್ಕೂ ಅರ್ಥವಾಗದ ಕಾರಣದಿ, ಬೆಳಗುಳದ (ಬೆಳ್ಗೊಳ) ಶ್ರಾವಕರು ಕನ್ನಡ ವ್ಯಾಖ್ಯಾನದಲ್ಲಿ ಮಾಡಿಸಿಕೊಡಿ”ಯೆಂಬುದಾಗಿ ಶ್ರೀ ಚಾರುಕೀರ್ತಿಪಂಡಿತಾಚಾರ್ಯಸ್ವಾಮಿಗಳನ್ನು ಪ್ರಾರ್ಥಿಸಿದ್ದರಿಂದ ಕ್ರಿ.ಶ. ೧೮೪೫ರಲ್ಲಿ ಕನ್ನಡ ಗದ್ಯಕ್ಕೆ ರೂಪಾಂತರಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಶಾಂತಯೋಗಿಯ ಇಷ್ಟಾನುಸಾರವಾಗಿ ಯಜುರ್ವೇದ ಭಾಷ್ಯಕ್ಕೆ ಗುರುನಂಜ ಟೀಕೆ ಬರೆದರೆ, ಸೋಸಲೆ ರೇವಾಣಾಚಾರ್ಯನು ಬರೆದ ಮಹಿಮ್ನಾಸ್ತವ ಟೀಕೆ ಅರಸನೊಬ್ಬನ ಸಂತೋಷಾರ್ಥವಾಗಿ ಸೋಮಶೇಖರ ಶಿವಯೋಗಿ ಬರೆಸಿದುದಾಗಿದೆ.

ಕೆಲವು ಜನ ಟೀಕಾಕಾರರು ಅನ್ಯರ ಪ್ರೇರಣೆ, ಆಜ್ಞೆ, ಪ್ರತಿಬೋಧನೆಯಿಂದ ವ್ಯಾಖ್ಯಾನಕ್ಕೆ ಕೈ ಹಾಕಿರುವುದು ತಿಳಿದುಬರುತ್ತದೆ. ಉದಾಹರಣೆಗೆ ಕ್ರಿ.ಶ. ೧೧೭೦ರಲ್ಲಿದ್ದ ಬಾಲಚಂದ್ರನು ಬರೆದ ‘ತತ್ವರತ್ನ ಪ್ರದೀಪಿಕೆ’, ‘ಪಂಚಾಸ್ತಿಕಾಯ’ ಹಾಗೂ ಪ್ರಾಭೃತಶಾಸ್ತ್ರ ಟೀಕೆಗಳು ರಚನೆಯಾಗಿರುವುದು ಶಿಷ್ಯ ಪ್ರತಿಬೋಧನಾರ್ಥ ನಿಮಿತ್ಯವಾಗಿ. ಹಾಗೆಯೇ ಕ್ರಿ.ಶ. ೧೩೦೦ರ ಪ್ರಭಾಚಂದ್ರ ಮಲಧಾರಿ ಲಲತಕೀರ್ತಿಯ ಶಿಷ್ಯ ಕಲ್ಯಾಣಕೀರ್ತಿಗೋಸ್ಕರ ಚಾರಿತ್ರಸಾರ ಟೀಕೆ ಬರೆದಿರುವುದು ತಿಳಿದುಬರುತ್ತದೆ. ಕ್ರಿ.ಶ. ೧೩೫೯ರಲ್ಲಿದ್ದ ಕೇಶವರ್ಣಿಯು ತನ್ನ ಗೊಮ್ಮಟಸಾರ ವ್ಯಾಖ್ಯಾನವನ್ನು

            ಪೊಣರ್ದಿ ಧೂರ್ತ ಜನೋಪಸರ್ಗಮನಿಶಂ ಬೆಂಬತ್ತ ಬೆಂಬೀವಿದಾ
          ನೊಣರ್ದೆ ಗೊಮ್ಮಟಸಾರವೃತ್ತಿಯನಿದಂ ಕರ್ಣಾಟ ವಾಕ್ಯಂಗಳಿಂ
          ಪ್ರಣುತರ್ ಧೀಧನರುಂ ಬಹುಶ್ರುತರಿದಂ ತಿರ್ದಿ ಬುಧರ್ ಧರ್ಮಭೂ
          ಷಣ ಭಟ್ಟರಕದೇವರಾಜ್ಞೆಯಿನಿದಂ ಸಂಪೂರ್ಣಮಂ ಮಾಡಿದೆಂ||

ಎನ್ನುವಲ್ಲಿ ಧರ್ಮಭೂಷಣಭಟ್ಟಾರಕನ ಆಜ್ಞೆಯ ಮೇರೆಗೆ ಗೊಮ್ಮಟಸಾರ ವ್ಯಾಖ್ಯಾನ ಬರೆದಿರುವುದು ಕಂಡುಬರುತ್ತದೆ. ಕ್ರಿ.ಶ. ೧೮೦೮ರಲ್ಲಿದ್ದ ರಾಮಕೃಷ್ಣಶಾಸ್ತ್ರಿಗಳವರ ಭುವನಪ್ರದೀಪಿಕೆಯೆಂಬ ಸಂಸ್ಕೃತ ಗ್ರಂಥಕ್ಕೆ ಮೈಸೂರಿನ ಅರಸನಾದ ಮುಮ್ಮಡಿ ಕೃಷ್ಣರಾಜನ ಸಂತೋಷಾರ್ಥವಾಗಿ ಟೀಕು ಬರೆಯಲ್ಪಟ್ಟಿದೆ. ಹೀಗೆ ತತ್ವಪ್ರಸಾರ. ಸಾಹಿತ್ಯಪ್ರಸಾರವಲ್ಲದೆ ಅಯರ ಅಪೇಕ್ಷೆ, ಆಜ್ಞಾನುಸಾರ ಬರೆದ ವ್ಯಾಖ್ಯಾನಗಳಿವೆ.

ವ್ಯಾಖ್ಯಾನಗಳು ಈ ಹಿಂದೆ ಹೇಳಿದಂತೆ ಅವು ಸ್ವತಂತ್ರ ಅಧ್ಯಯನಗಳು. ಸೃಜನಸಾಹಿತ್ಯದಂತೆ ಜೀವನವಿಡೀ ವ್ಯಾಖ್ಯಾನ ಸಾಹಿತ್ಯ ಸೃಷ್ಟಿಸಿ ಸಾಹಿತ್ಯ ಪ್ರಕಾರವಾದ ಗದ್ಯದ ಬೆಳವಣಿಗೆಯನ್ನು, ಭಾಷೆಯ ಅನುಸಂಧಾನವನ್ನು, ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸಲು ಟೀಕಾಸಾಹಿತ್ಯ ಉಗಮಗೊಳ್ಳಲು ಪ್ರಮುಖ ಕಾರಣಗಲಿವೆ. ಯಾಕೆಂದರೆ ಟೀಕಾಕಾರರು ಬಹುಭಾಷಿಕರು, ಶಾಸ್ತ್ರಜ್ಞರು, ಪಂಡಿತರು ಆಗಿದ್ದಂತೆ ಮಠಾಧಿಪತಿಗಳೂ, ಯತುಗಳೂ ಆಗಿದ್ದರಿಂದ ವ್ಯಾಖ್ಯಾನಕಾರರ ಬಹುಶ್ರುತತೆ, ಬಹುಜ್ಞಾನ ಇಂತಹ ಸಾಹಿತ್ಯ ಉಗಮಕ್ಕೆ ಮುಂದಾಗಿರಬೇಕು. ಇದಕ್ಕೂ ಮಿಗಿಲಾಗಿ ಕೇವಲ ಪ್ರಾಕೃತ – ಸಂಸ್ಕೃತ ಭಾಷೆಯ ವೇದೋಪನಿಷತ್ತುಗಳಿಗೆ ವ್ಯಾಖ್ಯಾನ ಮಾಡುವ ಪ್ರಯಾಸವನ್ನು ಕಂಡು ದೇಶಭಾಷೆ ಹಾಗೂ ಆ ಭಾಷೆಯ ಸಾಹಿತ್ಯವನ್ನು ಗೌರವಿಸುವ, ಅರ್ಥೈಯಿಸುವ ಸತ್ವರಂಪರೆಯ ಅನುಷ್ಠಾನಕ್ಕಾಗಿ ಕನ್ನಡ ಟೀಕಾಸಾಹಿತ್ಯದ ಉಗಮಕ್ಕೆ ನಾಂದಿ ಹಾಡಿರಬೇಕು.

. ಲಕ್ಷಣಸ್ವರೂಪ

ಟೀಕಾಚಾರ್ಯರು ಬಹುಶಾಸ್ತ್ರಗಳಲ್ಲಿ ಪಂಡಿತರಾಗಿದ್ದರು. ಅವರಲ್ಲಿ “ತತ್ಪಾರ್ಥಸೂತ್ರ ವೃತ್ತಿಕಾರ ದಿವಾಕರಣಂದಿಯನ್ನು (ಸು.ಕ್ರಿ.ಶ. ೧೦೬೭) ಶಾಸನದಲ್ಲಿ ‘ಉಭಯಸಿದ್ಧಾಂತ ರತ್ನಾಕರ’ ಎಂದು ಕರೆದಿದೆ. ಪ್ರತಿಷ್ಠಾಕಲ್ಪದ ಟಿಪ್ಪಣಿ ಕರ್ತೃವಾದ ಕುಮುದಚಂದ್ರನು (ಕ್ರಿ.ಶ. ಸು.೧೧೦೦) ತನ್ನನ್ನು ‘ಚತುರ್ವಿಧ ಪಾಂಡಿತ್ಯ ಚಕ್ರವರ್ತಿ ಎಂದೂ, ಶುಭಚಂದ್ರನು (ಕ್ರಿ.ಶ. ಸು.೧೨೦೦) ತನ್ನನ್ನು ‘ಷಡ್ಬಾಷಾ ಕವಿಚಕ್ರವರ್ತಿ’ ಎಂದೂ ವಿಶ್ಲೇಷಿಸಿಕೊಂಡಿದ್ದಾರೆ. ಮಾಘಣಂದಿ (ಕ್ರಿ.ಶ. ಸು.೧೨೫೩) ತನ್ನನ್ನು ‘ಚತುರನು ಯೋಗಕುಶಲ’ನೆಂದೂ, ‘ಸಿದ್ಧಾಂತವರ್ಧನ ಸುಧಾಕರ’ ನೆಂದೂ ಕರೆದುಕೊಂಡಿದ್ದಾನೆ. ಗುರುನಂಜನೆಂಬ ವೀರಶೈವ ಟೀಕಾಕಾರನು ‘ಸ್ಮೃತಿಪುರಾಣಶಾಸ್ತ್ರಾರ್ಥ ದರ್ಶನ ನಿರಂಜನಸಿದ್ಧ’ ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಬಸವಾರಾಧ್ಯನೆಂಬುವವನು (ಕ್ರಿ.ಶ. ೧೭೦೦) ಶ್ರೀ ಮದ್ವೇದ ವೇದಾಂತಾಗಮ ಪುರಾಣಸ್ಮೃತೀತಿಹಾಸ ಪ್ರತಿಪಾದಿತ ಶ್ರೀ ವೀರಶೈವ ಮಾರ್ಗ ಸ್ಥಾಪನಾಚಾರ್ಯ ಎಂದು ಹೇಳಿಕೊಂಡಿದ್ದಾನೆ. ಬ್ರಾಹ್ಮಣ ವ್ಯಾಖ್ಯಾನಕಾರರಲ್ಲಿ ಅಮರಕೋಶದ ಟೀಕಾ ಕರ್ತೃ ಕವಿ ವಿಠ್ಠಲನನ್ನು (ಕ್ರಿ.ಶ. ಸು.೧೬೦೦) ಅಮರಸಿಂಹನ ಮತ್ತು ಸರಸ್ವತಿಯ ಅಪರಾವತಾರನೆಂದು ಸ್ತುತಿಸಿದೆ. ಚಿಕ್ಕದೇವರಾಜನು ‘ಸಾಹಿತ್ಯ ವಿದ್ಯಾನಿಕಷ ಪ್ರಸ್ತರಂ’ ಎಂಬುದಾಗಿಯೂ, ಆತನ ಆಶ್ರಯದ ಕವಿಶ್ರೇಷ್ಠ ಚಕುಪಾಧ್ಯಾಯನು ‘ಅಧೀಶ ಸಕಲ ವೇದಶಾಸ್ತ್ರ ಪುರಾಣ ಮುಖ್ಯ ನಾನಾವಿಧ ವಿದ್ಯನು’ ಎಂಬುದಾಗಿಯೂ ಕೀರ್ತಿತರಾಗಿದ್ದಾರೆ. ಮುಮ್ಮಡಿ ಕೃಷ್ಣರಾಜನು ‘ಉಭಯಕವಿತಾ ಲಕ್ಷಣ ವಿಚಕ್ಷಣ’ ಎಂದು ತನ್ನನ್ನು ವಿಶ್ಲೇಷಿಸಿಕೊಂಡಿದ್ದಾನೆ.”(ಶಾಸ್ತ್ರಿಯ ಸಂ.೩, ಪಿ.೬೭) ಟೀಕಾಕಾರರ ಈ ಪಾಂಡಿತ್ಯ ಪ್ರತಿಭೆಗಳಿಂದ ಅವರಿಂದ ರಚಿತವಾದ ಟೀಕಾಗ್ರಂಥಗಳಿಗೆ ವಿಶೇಷತೆ ಪ್ರಾಪ್ತವಾಗಿರುತ್ತದೆ. ಈ ವಿಶೇಷತೆಗಳನ್ನು ವ್ಯಾಖ್ಯಾನ ಕೃತಿಗಳ ಲಕ್ಷಣಗಳೆಂದು ಭಾವಿಸಬಹುದು. ಭಾಷೆ, ಗದ್ಯ, ಶ್ಲೋಕಾರ್ಥ, ಔಚಿತ್ಯ, ಗೇಯತೆ, ಸಿದ್ಧಾಂತದ ಆಳ, ಉಪಮೆ – ರೂಪಕಗಳ, ರಸ – ಶೈಲಿಗಳ ವೈವಿಧ್ಯತೆಯಿಂದ ವಿನೂತನ ಲಕ್ಷಣಗಳನ್ನು ಈ ಸಾಹಿತ್ಯ ಒಳಗೊಂಡಿರುತ್ತದೆ. ಅವುಗಳನ್ನಿಲ್ಲಿ ಹೀಗೆ ಚರ್ಚಿಸಬಹುದು.

೧. ಟೀಕೆಗಳ ಲಕ್ಷಣಗಳಲ್ಲಿ ಲೌಕಿಕತೆಗಿಂತ ಅಲೌಕಿಕತೆ ಇಲ್ಲವೇ ತಾತ್ವಿಕತೆ ಪ್ರಧಾನವಾಗಿರುತ್ತದೆ. ಹೀಗಾಗಿ ಆಯಾ ಧರ್ಮದ ಟೀಕಾಕೃತಿಗಳಲ್ಲಿ ಆ ಧರ್ಮದ ತಾತ್ವಿಕಮುಖ ಮಾತ್ರ ಕಂಡುಬರುತ್ತದೆ. ಪ್ರಾಯಶಃ ಇದು ಜೈನ ಆಗಮಿಕ, ಲಿಂಗಾಯತ ವಚನ ಹಾಗೂ ಬ್ರಾಹ್ಮಣ ಕೀರ್ತನೆಗಳಿಗೆ ಅನ್ವಯಿಸಿ ಹೇಳುವ ಮಾತು. ಕ್ಷೇತ್ರಗಣಿತ ವೈದ್ಯಶಾಸ್ತ್ರಗಳಂತಹ ಗ್ರಂಥಗಳಿಗೆ ಈ ಮಾತು ಅನ್ವಯವಾಗುವುದು ಕಷ್ಟ.

೨. ಸಾಸುವೆಯಲ್ಲಿ ಅಡಗಿದ ಸಾಗರದ ವಿಸ್ತಾರವನ್ನು ಟೀಕೆಗಳು ಬಿಚ್ಚಿಡುತ್ತವೆ. ಉದಾಹರಣೆಗೆ

            ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ
          ಬೀಜದೊಳಗಣ ವೃಕ್ಷದಂತೆ ಶಬ್ದದೊಳಗನ ನಿಶ್ಯಬ್ದದಂತೆ
          ಗೊಹೇಶ್ವರಾ ನಿಮ್ಮ ಶರಣರ ಸಂಬಂಧ

ಎಂಬ ಅಲ್ಲಮಪ್ರಭುಗಳ ಈ ವಚನಕ್ಕೆ ಬರೆದ ವ್ಯಾಖ್ಯಾನ ಬೀಜದೊಳಗಣ ಮರದಂತೆ ಬಹು ವಿಸ್ತಾರವಾಗಿ ಬೆಳೆಯುತ್ತಾ ಹೋಗುತ್ತದೆ. ಕೇವಲ ಮೂರು ಸಾಲುಗಳ ಮೇಲಿನ ವಚನಕ್ಕೆ ಮಹಲಿಂಗದೇವರು ಬರೆದಿರುವರೆನ್ನಲಾದ ಟೀಕುವಿನ ವಿಸ್ತಾರ ವರ್ಧಿಸಿದ ರೀತಿಯನ್ನು ಇಲ್ಲಿ ನೋಡಬಹುದು.

ಟೀಕು || ಶಿಲೆಯೊಳಗಿರ್ಪ ಅಗ್ನಿ ಮೈದೋರದ ಹಾಂಗೆ ಪರಬ್ರಹ್ಮವು ಪಿಂಡಸ್ಥವಾಗಿರ್ದು ಕಾಣಿಸದೆಂಬುದೀಗ ಶಿಲಿಯೊಳಗಣಪಾವಕದಂತೆ ಎಂಬ ಶಬ್ದಕ್ಕರ್ಥ.

ಆವುದಾನೊಂದು ಪ್ರತಿಬಿಂಬ ವುದಕದೊಳಗಿರ್ದು ಆ ಉದಕದ ಗುಣಧರ್ಮ ಕರ್ಮದ ಹೊದ್ದದಹಾಂಗೆ ಆ ಪರಬ್ರಹ್ಮವು ಪಿಂಡಸ್ಥವಾಗಿರ್ದು, ಆ ಪಿಂಡದ ಗುಣಧರ್ಮ ಕರ್ಮವ ಹೊಂದದಿರ್ಪುದೀಗ ಉದಕದೊಳಗಣ ಪ್ರತಿಬಿಂಬದಂತೆ ಎಂಬ ಶಬ್ದಕ್ಕರ್ಥ.

ಬೀಜದೊಳಗಿರ್ಪ ವೃಕ್ಷದ ಹಾಂಗೆ ಆ ಪರಬ್ರಹ್ಮವು ಪಿಂಡಮಧ್ಯದಲಿ ಗೂಢವಾಗಿರ್ಪುದೆಂಬುದೀಗ ಬೀಜದೊಳಗಣ ವೃಕ್ಷದಂತೆ ಎಂಬ ಶಬ್ದಕ್ಕರ್ಥ.

ಶಬ್ದದೊಳಗೆ ನಿಶ್ಯಬ್ದವಾಗಿರ್ದುದನು ಭೇದಿಸಬಾರದ ಹಾಂಗೆ ಆ ಪರಬ್ರಹ್ಮವು ಪಿಂಡಸ್ಥವಾಗಿರ್ದು ಅಭೇಧ್ಯವಾಗಿರ್ಪುದೆಂಬುದೀಗ ಶಬ್ದದೊಳಗಣ ನಿಶ್ಯಬ್ದದಂತೆ ಎಂಬ ಶಬ್ದಕ್ಕರ್ಥ. ಇದು ಪಿಂಡಸಂಭವ ನಿರ್ವಚನ.

ಹೀಗೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ, ಪರಿಭಾವಿಸಿದಷ್ಟು ಅರ್ಥ ವಿಸ್ತಾರವಾಗುತ್ತಾ ಹೋಗುವ ಅನುರಣನ ಧ್ವನಿಯ ಲಕ್ಷಣವನ್ನು ಭಾವಾರ್ಥ ಟೀಕಾಸಾಹಿತ್ಯ ಪಡೆದುಕೊಂಡಿದೆ.

೩. ಟೀಕಾಸಾಹಿತ್ಯಕ್ಕೆ ಹೊರಮೈ ಹಾಗೂ ಒಳಮೈ ಎಂಬ ಎರಡು ಮಗ್ಗಲುಗಳಿವೆ. ಕೆಲ ವ್ಯಾಖ್ಯಾನಗಳು ಹೊರಮೈ ಲಕ್ಷಣವಾದ ಶಬ್ದಾರ್ಥ ನೆಲೆಯಲ್ಲಿ ರಚನೆಗೊಂಡಿದ್ದರೆ, ಇನ್ನೂ ಕೆಲವು ಒಳಮೈ ಲಕ್ಷಣವಾದ ಭಾವಾರ್ಥ ನೆಲೆಯಲ್ಲಿ ಸೃಷ್ಟಿಯಾಗಿವೆ. ಮತ್ತು ಕೆಲವು ಎರಡೂ ನೆಲೆಯಲ್ಲಿ ಸಂರಚನೆಗೊಂಡಿವೆ. ಇದನ್ನೇ ಡಾ. ಬಿ.ಆರ್. ಹಿರೇಮಠ ಅವರು ವಚನಗಳಿಗೆ ಬರೆದ ಟೀಕಾಸಾಹಿತ್ಯದ ಸ್ವರೂಪವನ್ನು ಹೀಗೆ ವರ್ಗೀಕರಿಸಿದ್ದಾರೆ. (ಗೌರವ, ಸಂ.ಡಾ. ಬಿ.ವ್ಹಿ.ಶಿರೂರ, ಪು.೫೬೪ – ೫೬೭)

. ಏಕಾರ್ಥದ ಟೀಕುವಿನ ವಿವಿಧ ರೀತಿಗಳು

೧. ಶುದ್ಧ ವಾಚ್ಯಾರ್ಥದಲ್ಲಿಯ ಪ್ರತಿಪದಾರ್ಥ

೨. ವಾಚ್ಯಾರ್ಥದಲ್ಲಿರುವ ವಿವರಣರೂಪದ ಪ್ರತಿಪಾದಾರ್ಥ

೩. ವಾಕ್ಯವನ್ನು ಹಿಮ್ಮೆಟ್ಟಿಸಿ ಬರೆದ ತಾತ್ವಿಕಾರ್ಥ

೪. ಸಾರ ಇಲ್ಲವೇ ಸಂಗ್ರಹ ರೂಪದ ತಾತ್ಪರ್ಯಾರ್ಥ

೫. ಪ್ರತಿಪದಾರ್ಥ ಹಾಗೂ ವಾಕ್ಯವನ್ನು ಹಿಮ್ಮೆಟ್ಟಿಸಿ ಬರೆದ ತಾತ್ವಿಕಾರ್ಥ

೬. ಕೆಲವೊಂದು ಪದಗಳಿಗೆ ಮಾತ್ರ ಬರೆದ ಅರ್ಥ

೭. ಕೆಲವು ವಿಶಿಷ್ಟ ಪದಗಳಿಗೆ ಮಾತ್ರ ಬರೆದ ಅರ್ಥ

ಇವುಗಳನ್ನು ಹೊರತುಪಡಿಸಿದರೆ ಬಹುತೇಕ ಕಾವ್ಯಗಳಿಗೆ, ಶಾಸ್ತ್ರಕೃತಿಗಳಿಗೆ ಪ್ರತಿಪದಾರ್ಥ ರೂಪದ ವ್ಯಾಖ್ಯಾನ ಬರೆದಿರುವುದೇ ಹೆಚ್ಚು ಕಂಡುಬರುತ್ತದೆ.

. ಶುದ್ಧ ವಾಚಾರ್ಥದಲ್ಲಿಯ ಪ್ರತಿಪದಾರ್ಥ

ಇದು ನಿಘಂಟು ಸ್ವರೂಪದ್ದು, ಉದಾ : ದೇವಲೋಕ = ಕೈಲಾಸ ಲೋಕವು, ಕೇವಲಜ್ಞಾನ = ಮೋಕ್ಷ ಹೊಂದುವುದು, ವೃಂದಾವನ = ವೈದಿಕ ಯತಿಗಳ ಸಮಾಧಿಸ್ಥಳ

. ವಾಚ್ಯರ್ಥದಲ್ಲಿರುವ ವಿವರಣರೂಪದ ಪ್ರತಿಪದಾರ್ಥ

ಈ ವ್ಯಾಖ್ಯಾನ ನಿಘಂಟುಸ್ವರೂಪದಲ್ಲಿದ್ದರೂ ವಿವರಣೆ ನೀಡಿ ಅರ್ಥ ಸ್ಪುಟಪಡಿಸುವುದಾಗಿದೆ. ಉದಾ : ಷಡ್ಗುಣ = ರಾಜನೀತಿಯ ಆರು ಗುಣಗಳು. ಅವುಗಳಲ್ಲಿ ಸಂಧಿ = ವಸ್ತುವಾಹನಗಳನ್ನು ಕೊಟ್ಟು ಶತ್ರುಗಳನ್ನು ಸಂಧಾನಗೊಳಿಸುವುದು, ಅದೇ ರೀತಿ ವಿಗ್ರಹ, ಯಾನ, ಆಸನ, ದೈವೀಭಾವ, ಎಂಬುವುಗಳಿಗೆ ವಿವರಣಾತ್ಮಕ ಅರ್ಥ ಕೊಡುವುದು.

. ವಾಕ್ಯವನ್ನು ಹಿಮ್ಮೇತಿಸಿ ಬರೆದ ತಾತ್ವಿಕಾರ್ಥ

ಇಲ್ಲಿ ತಾತ್ವಿಕಾರ್ಥ ಪ್ರಧಾನ, ಶಬ್ದಾರ್ಥ ಅಪ್ರಧಾನ. ನುಡಿಗಟ್ಟುಗಳಂತೆ ಇಲ್ಲಿಯ ಬಾವ. ಉದಾ : ಮುಖ ಕಪ್ಪಾಗು = ಅಪಮಾನದಿಂದ ಕಳೆಗುಂದು, ಕೈ ಬಿಸಿಮಾಡು = ಲಂಚಕೊಡು, ಮೂಗಿಗೆ ತುಪ್ಪಹಚ್ಚು = ಆಸೆ ತೋರಿಸು.

. ಸಾರವತ್ತಾದ ಹಾಗೂ ಸಂಗ್ರಹರೂಪದ ತಾತ್ಪರ್ಯಾರ್ಥ

ಇದು ವ್ಯಾಖ್ಯಾನ ಲಘವೃತ್ತಿ, ಲಘಭಾಷ್ಯ ಹಾಗೂ ಟುಪ್ ಟೀಕೆಯ ರೂಪದ್ದು. ಹತ್ತು ಕಟ್ಟುವ ಕಡೆಗೆ ಮುತ್ತುಕಟ್ಟುವ ಪ್ರಯತ್ನ ಇಲ್ಲಿದೆ. ತಾತ್ವಿಕಾರ್ಥವನ್ನು ಹೇಳುವ ಬದಲು ಸಂಕ್ಷೀಪ್ತವಾಗಿ ಅದರ ಸಾರಾಂಶವನ್ನು ಸಂಗ್ರಹಿಸಿಕೊಡುವ ಶಬ್ದಾರ್ಥತತ್ಪಾರ್ಯ ಇದಾಗಿದೆ. ಉದಾ

            ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೊ
            ಹೊಸ್ತಿಲಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
            ಮನೆಯೊಳಗೆ ಮನೆಯೊಡೆಯನಿಲ್ಲಾ |

ಎಂಬುದಕ್ಕೆ ಮನುಷ್ಯ ಸಹಜವಾದ ದೌರ್ಬಲ್ಯಗಳನ್ನು ಬಿಡಲಾಗದ ದೇಹಿ ಜೀವಾತ್ಮನ ಕುರುಹುವನ್ನರಿಯಲಾಗದು. ಕಾರಣ ತನುವೆಂಬ ಮನೆಯಲ್ಲಿ ಆತ್ಮನೆಂಬ ಯಜಮಾನ ಇದಂತಿಲ್ಲವೆಂಬುದು ಇಲ್ಲಿಯ ಅರ್ಥ.

. ಪ್ರತಿಪದಾರ್ಥ ಹಾಗೂ ವಾಕ್ಯವನ್ನು ಹಿಮ್ಮೆಟಿಸಿ ಬರೆದ ತಾತ್ವಿಕಾರ್ಥ

ಇಲ್ಲಿ ವ್ಯಾಖ್ಯಾನಕಾರ ಶಬ್ದಾರ್ಥ ಇಲ್ಲವೇ ವಾಕ್ಯದ ತಾತ್ಪರ್ಯಾರ್ಥಕ್ಕೆ ಕಟ್ಟುಬೀಳದೆ ಒಟ್ಟು ವಿಷಯದ ತಾತ್ವಿಕತೆಯನ್ನು ಚರ್ಚಿಸುತ್ತಾನೆ. ಉದಾ : ಕುಂಬಳದ ಕಾಯಿಗೆ ಕಬ್ಬುನದ ಕಟ್ಟು ಕೊಟ್ಟಡೆ ಕೊಳೆವುದಲ್ಲದೆ ಬಲುಹಾಗಬಲ್ಲದೆ? ಎಂಬುದಕ್ಕೆ ವ್ಯಾಖ್ಯಾನಕಾರ ಬರೆಯುವ ಟೀಕು “ಪ್ರಪಂಚಿನಿಂದ ಅದೃಢವಾದಾತ್ಮನಿಗೆ ಗುರುಪದೇಶದಿಂದಂಗದಮೇಲೆ ಲಿಂಗಸಂಬಂಧವ ಮಾಡಲು ವೇಷಾಡಂಬರವಳಡುವುದಲ್ಲದೆ ಲಿಂಗಭಕ್ತಿಯಲ್ಲಿ ದೃಢವಂಕುರಿಗೊಳ್ಳಲರಿಯದು.” ಇಲ್ಲಿ ಲೌಕಿಕ ವಸ್ತುವಿನ ಮೂಲಕ ತಾತ್ವಿಕಾರ್ಥದ ಅಲೌಕಿಕವಾದ ಗೂಡಾರ್ಥವು ಬಿಚ್ಚಿಕೊಳ್ಳುತ್ತದೆ.

. ಕೆಲವೊಂದು ಪದಗಳಿಗೆ ಮಾತ್ರ ಬರೆದ ಅರ್ಥ

ಒಂದು ಕಾವ್ಯದ ಕೆಲವು ಪದ್ಯಗಳಿಗೆ ಅವುಗಳಲ್ಲಿಯ ಕೆಲವು ಪದಗಳಿಗೆ ಅರ್ಥ ಬರೆದಿರುವುದು ಕಂಡುಬರುತ್ತದೆ. ಉದಾ : ರಾಜಶೇಖರವಿಳಾಸದ ಗಟ್ಟಿಗಟ್ಟಿ ನುಡಿಗಳ ಅರ್ಥ, ಭಾವಚಿಂತಾರತ್ನದ ಗಟ್ಟಿನುಡಿಗಳು, ಇತ್ಯಾದಿಯಾಗಿ ಇಡಿಯಾದ ಕಾವ್ಯಕ್ಕೆ ಶಬ್ದಾರ್ಥ ಬರೆಯದೆ ಕಠಿಣ ಪದಗಳಿಗೆ ಅರ್ಥ ನೀಡುವುದು.

. ಕೆಲವು ವಿಶಿಷ್ಟ ಪದಗಳಿಗೆ ಮಾತ್ರ ಬರೆದ ಅರ್ಥ

ಕಾವ್ಯಗಳಲ್ಲಿ ಆಚರಣೆ, ಧರ್ಮ, ಸಂಪ್ರದಾಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಕೆಲವು ಗಮನಾರ್ಹ ಪರಿಭಾಷೆಗಳಿರುತ್ತವೆ. ಅವುಗಳಿಗೆ ಮಾತ್ರ ಅರ್ಥ ಬರೆಯುವ ಪರಿಪಾಠವಿದೆ. ಉದಾ : ಚಿಂತಾತ್ಮ = ಶಿವ ಸ್ಮರಣೆಯುಳ್ಳಾತ್ಮ, ಗಗನಮಂಟಪ = ಆತ್ಮಾನುಭವ, ಮಹಾಮನೆ = ಅನುಭವಮಂಟಪ, ಇತ್ಯಾದಿ.

. ಉಭಯಾರ್ಥ ಟೀಕುವಿನ ವಿವಿಧ ರೀತಿಗಳು

೧. ಪ್ರತಿಪದಾರ್ಥ ಹಾಗೂ ವಾಚ್ಯಾರ್ಥ ಹಾಗೂ ತಾತ್ವಿಕಾರ್ಥ

೨. ಪ್ರತಿಪದಾರ್ಥ ಹಾಗೂ ಸಾರರೂಪದ ತಾತ್ವಿಕಾರ್ಥ

ಉದಾ : ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ ಪ್ರಣವಮಂತ್ರವನೋದಿ ಮಂತ್ರಾರ್ಥವನರಿಯರು ಎಂಬುದಕ್ಕೆ ಪ್ರತಿಪದಾರ್ಥದ ವಾಚ್ಯಾರ್ಥ ಹಾಗೂ ಸಾರರೂಪದ ವ್ಯಾಖ್ಯಾನವನ್ನು ಹೀಗೆ ಮಾಡಲಾಗಿದೆ.

ಟೀಕು : ಪ್ರಣವನುಚ್ಚರಿಸುವ : ಪ್ರಣವ = ಗಾಯತ್ರಿ ಪ್ರಣವವನ್ನು ಉಚ್ಚರಿಸುವ = ಜಪಿಸುವ, ಅಪ್ರಮಾಣಿಕರೆಲ್ಲರೂ = ಪ್ರಮಾಣಹೀನರಾದ, ವಿಪ್ರರೆಲ್ಲರೂ, ಪ್ರಣವ = ಗಾಯತ್ರಿ ಪ್ರವಣದ ಮಂತ್ರವ, ಓದಿ = ಜಪಿಸಿ, ಮಂತ್ರಾರ್ಥವನರಿಯರು = ಗಾಯತ್ರಿಮಮ್ತ್ರದ ಅನ್ವಯಂಗಳನು ತಿಳಿಯರು. ಇದು ಪ್ರತಿಪದಾರ್ಥ ರೂಪದ ವಾಚ್ಯಾರ್ಥ.

ದೇವನೊಚಿಸುವ ಪ್ರಮಾಣ ಹೀನರೆಲ್ಲರೂ ತಾರಕಮಂತ್ರವನು ಪಠಿಸಿ ಪ್ರಣವ ಸಂಚತಕ್ರೀಯನು ತಿಳಿಯರು ಎಂಬುದು ಪ್ರತಿಪದಾರ್ಥದ ಸಾರರೂಪ.

ಹೀಗೆ ಟೀಕಾಕಾರರು ಒಂದು ಕೃತಿಯಲ್ಲಿ ಏಕಾರ್ಥ ರೂಪ ಮತ್ತು ಉಭಯಾರ್ಥ ರೂಪದ ಟೀಕುಗಳನ್ನು ಬರೆದಿರುವುದು ಟೀಕಾಸಾಹಿತ್ಯದ ಸ್ವರೂಪದಿಂದ ಗಮನಾರ್ಹವೆನಿಸುತ್ತದೆ.

೪. ಕೆಲವು ವ್ಯಾಖ್ಯಾನಗಳ ರಚನೆಯಲ್ಲಿ ವಿಶಿಷ್ಟವಾದ ಶಿಲ್ಪ (ಆಕಾರ) ಕಂಡುಬರುತ್ತದೆ. ಆರಂಭದಲ್ಲಿ ಮುಂದಿನ ವಿಷಯ ಪ್ರಸ್ತಾವನೆಯ ಕನ್ನಡ ಆವತರಣಿಕೆ ಕೊಟ್ಟು, ಆಮೇಲೆ ಸಂಸ್ಕೃತ ಶ್ಲೋಕಗಳನ್ನು ಉದಾಹರಿಸಿ ಆ ಶ್ಲೋಕಗಳಿಗೆ ಟೀಕು ಬರೆದು, ಇಂತೀ ಪುರಾಣ, ವಾಕ್ಯಂಗಳನ್ನು ಶ್ರೀಗುರು ಪುರಾತನರಿಗೆ ಉಪದೇಶವಿತ್ತ ಠಾವು ಎಂದು ಮುಗಿಸಿ ಇನ್ನು ಈ ಪುರಾತನರು ಗುರುವಾಕ್ಯ ತಪ್ಪದೇ ನಡೆದು ನುಡಿದ ವಚನಂಗಳೆಂದು ಕನ್ನಡ ವಚನಗಳನ್ನು ಉದಾಹರಿಸಿ ಟೀಕು ಮುಗಿಸುತ್ತಾರೆ. ಉದಾ : ಕ್ರಿ.ಶ. ೧೪೭೦ರಲ್ಲಿದ್ದ ಗುಬ್ಬಿಯ ಮಲ್ಲಣಾರ್ಯನು ಗಣಭಾಷ್ಯಮಾಲೆಯಲ್ಲಿ ಬರೆದ ಕಳವು ನಿರಸನ ಸ್ಥಲವನ್ನು ನೋಡಬಹುದು.

“ಇಂತೀ ಪ್ರಕಾರದಿಂ ಶಿವಭಕ್ತರು ತಮ್ಮ ಸ್ವಸ್ತ್ರೀಯರ ಸಂಗವಲ್ಲದೆ ಅನ್ಯ ಸ್ತ್ರೀಯರ ಸಂಗವ ಮಾಡಲಾಗದೆಂಬುದಂ ಪ್ರತಿಷ್ಠೆಯಂ ಮಾಡಿ ನುಡಿದರ್ ಮಹಾಪುರಾತನರ್, ಇಂಥ ಪರದಾಮಂ ಬಿಟ್ಟು ಲಿಂಗಸಾಹಿತ್ಯವಾದೇನೆಂಬಾತಂಗೆ ಕಳವು ಶೌಚ್ಯಮಂ ಕೆಡಿಸುವುದೆಂಬುದನರಿದು ಇನ್ನು ಕಳವ ಶಿವಭಕ್ತರು ಬಿಡಬೇಕೆಂಬುದಂ ಪ್ರತಿಷ್ಠೆಯಂ ಮಾಡಿ ನುಡಿದ ವಚನಂಗಳಿಂ ಮುಂದೆ ಕಳವು ನಿರಸನ ಸ್ಥಲವಾದುದು.

ಶಿವಧರ್ಮೇ :      ತೃಣಂ ವಾಯದಿವಾಕಾಶಂ ಮೃದಂ ವಾಜಲಮೇವಚ |
ಪರಸ್ಯಾ ಪಹರೇಜ್ಜಂ ತುರ್ನರಕಂ ಪ್ರಪದ್ಯತೇ ||

ಟೀಕೆ :   ಹುಲ್ಲುಕಡ್ಡಿಯಷ್ಟಾದೊಡಂ, ಆಕಾಶದಷ್ಟಾದೊಡಂ ಒಂಪಿಡಿ
ಮಣ್ಣಾದೊಡಂ ಒಕ್ಕುಡಿತೆ ಉದಕವಾದೊಡಂ ಲೋಗರ ಸೊಮ್ಮುಕಾಣಲೀಯದೆ
ಬಲುಹಿಂದೆ ಕೊಂಡವಂಗೆ ಎಂದೂ ಕೇಡಿಲ್ಲದ ನರಕವಹುದು.

ಇಂತೀ ಪುರಾಣ ವಾಕ್ಯಂಗಳನು ಶ್ರೀಗುರು ಪುರಾತನರಿಗೆ ಉಪದೇಶವಿತ್ತ ಠಾವು. ಇನ್ನು ಈ ಪುರಾತನರು ಗುರುವಾಕ್ಯ ತಪ್ಪದೆ ನಡೆದ ನುಡಿದ ವಚನಂಗಳು

೧. ಕುಳಿತು ಲಿಂಗವ ಪೂಜಿಸಿ ಅಲ್ಲದಾಟನಾಡುವರಯ್ಯಾ ಬೆಳ್ಳತ್ತಿನ ಮರೆಯಲ್ಲಿ ಹುಲ್ಲೆಗಂಬ ತೊಡಚಿವಂತೆ ಲೋಗರರ್ಥವ         ಕಳುವ ಕಲ್ಲರ ಕೈಯ್ಯ ಪೂಜೆಯನೊಲ್ಲ ನೋಡಾ ನಮ್ಮ ಕೂಡಲಸಂಗಮದೇವಾ

ಹೀಗೆ ಪ್ರಸ್ತಾವನೆಯ ಆವತರಣಿಕೆ, ಶ್ಲೋಕ, ಆ ಶ್ಲೋಕಕ್ಕೆ ಟೀಕು, ಅದರರ್ಥನ್ವಯ ವಚನದ ಉಲ್ಲೇಖ ನೀಡಿರುವುದು ವಿಶೇಷವೆನಿಸುತ್ತದೆ.

೫. ಟೀಕಾಸಾಹಿತ್ಯ ಗದ್ಯದಲ್ಲಿರುವುದರಿಂದ ‘ವ್ಯಾಖ್ಯಾನಗದ್ಯ’ವೆಮ್ಬ ವಿಶಿಷ್ಟ ಪ್ರಕಾರವೇ ಸೃಷ್ಟಿಯಾಯಿತು. ಇದರಿಂದ ಬೇರೆ ಬೇರೆ ಕಾಲದಲ್ಲಿ ಬರೆದ ಟೀಕಾಕೃತಿಗಳಿಂದ ಆಯಾಕಾಲದ ಕನ್ನಡ ಗದ್ಯದ ಸ್ವರೂಪವನ್ನರಿಯಲು ಸಹಾಯವಾಗಿದೆ.

೬. ಟೀಕೆಯ ಲಕ್ಷಣಗಳಲ್ಲಿ ಒಂದೇ ಬಗೆಯ ವಾಕ್ಯ ಪುನರಾವರ್ತನೆಯನ್ನು ಡಾ. ಎಂ.ಎಂ. ಕಲಬುರ್ಗಿಯವರು ಗುರುತಿಸುತ್ತಾರೆ. (ಬಸವಣ್ಣನವರ ಟೀಕಿನ ವಚನಗಳು, ಪ್ರಸ್ತಾವನೆ XV) ಉದಾಹರಣೆಗೆ “….ಗಜದ ಹಿಂಡಿನೊಳಗೆ ಕಂಠೀರವ ಹೊಕ್ಕಹಾಂಗೆ, ಹುಲ್ಲೆ ಹಿಂಡಿನೊಳಗೆ ಹುಲಿ ಹೊಕ್ಕಹಾಂಗೆ, ಕುರಿ ಹಿಂಡಿನೊಳಗೆ ತೋಳ ಹೊಕ್ಕಹಾಂಗೆ….” ಎಂಬಂತಹ ವಾಕ್ಯ ರಚನೆಗಳನ್ನು ನೋಡಬಹುದು.

೭.ಶುದ್ಧ ದೇಶೀಯ ವಚನಗಳಿಗೆ ಬರೆದ ಟೀಕಾಕೃತಿಕಾರರದಲ್ಲಿ ಏಕನಾತೆಯ ವ್ಯಾಖ್ಯಾನ ರೀತಿ ಬೆಳೆದುಬಂದಿದೆ. ಉದಾಹರಣೆಗೆ ಸ್ಥಲ ನಿರ್ದೇಶನ, ಆ ಸ್ಥಲಕ್ಕೆ ಸಂಬಂಧಿಸಿದ ವಚನಗಳು, ಆ ವಚನಗಳಿಗೆ ಪ್ರತಿಪದದ ಟೀಕು ರಚನೆಯಾಗಿರುವುದನ್ನು ಬಂಕನಾಥನ ಪ್ರಭುದೇವವ ವಚನ ವ್ಯಾಖ್ಯಾನಗಳಲ್ಲಿ ಕಾಣಬಹುದು. ಅಂದರೆ ಒಂದು ಸ್ಥಲ ಕುರಿತು ಪ್ರಶ್ನಾರ್ಥಕವಾಗಿ ಕೇಳುವ ವಚನಗಳು, ಅಂಥ ವಚನಗಳಿಗೆ ಸ್ಥಲನಿರ್ದೇಶನ ಮಾಡುವ ವಚನಗಳು, ಅದಕ್ಕೆ ಶಬ್ದಾರ್ಥ – ಬಾವಾರ್ಥಗಳು ಹೀಗೆ ಸ್ಥಲಕಟ್ಟಿಗನು ಗುಣವಾಗಿ ವಿಂಗಡಣೆ, ಅವುಗಳ ಭಾವನಿರೂಪಣೆ ಇಲ್ಲಿಯ ವಿಶೇಷವಾಗಿದೆ.

೮. ಟೀಕಾ ಸಾಹಿತ್ಯ ಹಾಡು, ಪದಗಳಿಗೆ ಅಂದರೆ ಮಂತ್ರಗೋಪ್ಯ, ಸಾಹಿತ್ಯಕ್ಕೆ ಬೆಡಗು – ಬಿನ್ನಾಣಗಳಿಂದ ಕೂಡಿದ ವಚನಗಳಿಗೆ, ಸಿದ್ಧಾಂತ ವೇದಾಂತಗಳಾದ ಆಗಮ ಪುರಾಣಗಳು, ಶ್ಲೋಕ – ಸ್ತೋತ್ರಶಾಸ್ತ್ರಸಾಹಿತ್ಯ ಪ್ರಕಾರಗಳಿಗೆ ಬರೆದ ಕಾರಣವಾಗಿ ಅವುಗಳ ಅಂತರಂಗದ ಹೊಳಹುಗಳನ್ನು ಪ್ರಕಟಿಸುವುದರ ಮೂಲಕ ಇದು ಸೃಜನಸಾಹಿತ್ಯ ಪ್ರಕಾರವಾಗಿರುವುದು ಅಷ್ಟೇ ನಿಜ.

೯. ಅಮರಕೋಶದಂತಹ ನಿಘಂಟುವಿಗೆ ವ್ಯಾಖ್ಯಾನ ರಚನೆಯಾಗುವುದೆಂದರೆ ಈ ಸಾಹಿತ್ಯ ಅರ್ಥಕೋಶದ ಅರ್ಥಕೋಶ. ಹಾಗೆಯೇ ಸಾಹಿತ್ಯೇತರ ಕೃತಿಗಳಾದ ವ್ಯವಹಾರಗಣಿತ, ಬೇಹಾರಗಣಿತಗಳಿಗೆ ಟೀಕುಗಳು ರಚನೆಯಾಗಿರುವುದನ್ನು ಗಮನಿಸಿದರೆ ಈ ವ್ಯಾಖ್ಯಾನ ಲೋಕೋಪಯೋಗಿಯಾದ ಹೊರಗಿನ ಜ್ಞಾನವನ್ನು ಕನ್ನಡದಲ್ಲಿ ಪೃಥಕ್ಕರಣಗೊಳಿಸಿವೆ.

೧೦. ಒಂದು ಸಾಹಿತ್ಯ ಕೃತಿಗೆ ಹಲವು ಟೀಕಾಗ್ರಂಥಗಳೂ ರಚನೆಗೊಂಡಿವೆ. ಉದಾಹರಣೆಗೆ ಬಸವಣ್ಣನವರ ವಚನಗಳಿಗೆ ೫ ಟೀಕುಗಳು, ತೋಂಟದ ಸಿದ್ಧಲಿಂಗಯತಿಗಳ ಷಟ್‍ಸ್ಥಲಜ್ಞಾನಸಾರಾಮೃತಕ್ಕೆ ೩ ಟೀಕುಗಳು ರಚನೆಯಾಗಿವೆ. ಕರ್ನಾಟಕದಲ್ಲಿ ಸಂಗ್ರಹವಾಗಿರುವ ಹಸ್ತಪ್ರತಿಗಳಲ್ಲಿ ಒಂದೇ ಕೃತಿಯ ಹಲವು ಟೀಕಾಗ್ರಂಥಗಳನ್ನು ಒಬ್ಬನೇ ವ್ಯಾಖ್ಯಾನಕಾರ ಬರೆದಿರುವುದಿಲ್ಲವೆಂಬುದು ಇಲ್ಲಿಯ ಸಂಗತಿ.

ಹೀಗೆ ಸಾಹಿತ್ಯದ ತಿರುಳನ್ನು ಹೊತ್ತು ಶಬ್ದಾರ್ಥ, ಭಾವಾರ್ಥ ರೂಪದಲ್ಲಿ ಗದ್ಯಮಾರ್ಗವನ್ನು, ಶಬ್ದ ಸಂಪತ್ತನ್ನು, ಆಗಮಿಕ – ಲೌಕಿಕ ಅನುಸಂಧಾನಗಳನ್ನು ಹುಟ್ಟು ಹಾಕುತ್ತಲೇ ವಿಶೇಷ ಲಕ್ಷಣ ಹಾಗೂ ಸ್ವರೂಪಗಳಲ್ಲಿ ಕನ್ನಡ ಟೀಕಾಸಾಹಿತ್ಯ ಕಾಣಿಸಿಕೊಂಡಿದೆ.