ಸೃಜನ, ಸಂಕಲನ, ಸಂಪಾದನ ಪ್ರಕಾರಗಳಲ್ಲಿ ಸಾಹಿತ್ಯ ಪ್ರಸಾರಗೊಂಡಂತೆ ಟೀಕಾಸಾಹಿತ್ಯದ ರೂಪದಲ್ಲಿಯೂ ಪರಿಚಲನೆಗೊಂಡಿದೆ. ಈ ಮೇಲಿನ ಪ್ರಕಾರಗಳಿಗೆ ನಾಡಿನ ಅರಮನೆ – ಗುರುಮನೆಗಳು ಆಶ್ರಯ ನೀಡಿದಂತೆ; ಟೀಕಾಸಾಹಿತ್ಯ ಪ್ರಕಾಶನಕ್ಕೂ ರಾಜಾಶ್ರಯ – ಧರ್ಮಾಶ್ರಯಗಳು ಪ್ರೇರಣೆ ನೀಡಿದವು. ಈ ಹಿನ್ನೆಲೆಯಲ್ಲಿ ಸಂಪಾದನೆಯ ಮಠಗಳಂತೆ ಟೀಕಿನ ಮಠಗಳು, ಸಂಪಾದನಾಕಾರರಂತೆ ಟೀಕಾಚಾರ್ಯ ಕಂಡುಬರುತ್ತಾರೆ. ವೃತ್ತಿಶಿಕ್ಷಣ ನೀಡುವ ಸಾಲಿಮಠಗಳಲ್ಲಿ ಕಂಬಳಿ, ಕಥೆ, ವಿಭೂತಿ, ತಯಾರಿಸುವ ಉದ್ಯೋಗದ ಜೊತೆಗೆ ಪುರಾಣವಾಚನಾಭ್ಯಾಸ, ಟೀಕುಗಳ ಲೇಖನಾಭ್ಯಾಸಗಳ ಪರಿಣಿತಿಯನ್ನು ನೀಡುತ್ತಿದ್ದಂತೆ ತೋರುತ್ತದೆ. ಸಂಪೂರ್ಣವಾಗಿ ಈ ಕಾರ್ಯಗಳಲ್ಲಿ ತೊಡಗಿದ ನಿಮಿತ್ತವಾಗಿ ಪುರಾಣಿಕಮಠ, ಟೀಕಿನಮಠ ಎಂಬ ಅನ್ವರ್ಥಕ ಹೆಸರುಗಳನ್ನು ಪಡೆದುಕೊಂಡಿರಬೇಕು. ವ್ಯಾಕರಣ, ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಇತಿಹಾಸ ಇತ್ಯಾದಿ ವಿಷಯಗಳಂತೆ ಟೀಕು ಬರೆಯಲು ಸಮರ್ಥರಾಗಿದ್ದ ಕಾಡಿಯೂರಿನ ಅಗ್ರಹಾರದ ವಿದ್ಯಾರ್ಥಿಮಾಣಿಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಬಳ್ಳಿಗಾವೆಯ ಕೋಡಿಮಠ ಕಥಕ, ಗಾಯಕ, ವಾದಕ, ವಾಂಶಿಕ, ನರ್ತಕ, ಮುಂತಾದ ವಿದ್ವಾಂಸರ ಜೊತೆಗೆ ಕೌಮಾರಪಾಣಿನಿಯ, ಶಾಕಟಾಯನ, ಶಬ್ದಾನುಶಾಸನಾದಿ, ವ್ಯಾಕರಣ ವ್ಯಾಖ್ಯಾನಸ್ಥಾನವಾಗಿ, ನ್ಯಾಯ ವೈಶೇಷಿಕ, ಮೀಮಾಂಸೆ, ಸಾಂಖ್ಯ ಮುಂತಾದ ಷಡುದರ್ಶನ, ವ್ಯಾಖ್ಯಾನಸ್ಥಾನವಾಗಿ ಹೆಸರು ಮಾಡಿರುವುದು ಟೀಕಿನ ಮಠಗಳ ಇತಿಹಾಸದಲ್ಲಿ ಇದರ ಸಾಧನೆ ಪರಮಾವಧಿ ನಿದರ್ಶನವಾಗಿದೆ.

ವಿಜಯನಗರ ಕಾಲದ ಸಂಕಲನಯುಗದಲ್ಲಿ ಬಹುತೇಕ ಮಠಾಧಿಪತಿಗಳು ಟೀಕಾಚಾರ್ಯರಾಗಿರುವಂತೆ ತೋರುತ್ತದೆ. ಶಿವಶರಣರ ವಚನಗಳಿಗೆ ಆಗಮಸಾಹಿತ್ಯದ ತಾತ್ವಿಕ ಸ್ವರೂಪವನ್ನು ಟೀಕೆಗಳ ಮೂಲಕ ಆರೋಪಿಸದಂತೆ ಕಾಣುತ್ತದೆ. ಪ್ರಭುದೇವರ ಷಟ್ಸ್ಥಲಜ್ಞಾನಚಾರಿತ್ರದ ಟೀಕು ಬರೆದ ಮಹಾಲಿಂಗದೇವ, ಲಿಂಗಲೀಲಾವಿಲಾಸ ಚಾರಿತ್ರದ ಕರ್ತೃ ಕಲ್ಲುಮಠದ ಪ್ರಭುದೇವ, ಏಕೋತ್ತರಶತಸ್ಥಲ ಟೀಕು ಗಿರೀಂದ್ರ, ಪ್ರಭುದೇವರ ವಚನಟೀಕು ಬರೆದ ಕುಮಾರಬಂಕನಾಥ, ಭಾವಚಿಂತಾರತ್ನ ಟೀಕು ಬರೆದ ಗುಬ್ಬಿ ಮಲ್ಲಣಾರ್ಯ, ಮುಕ್ತಾಂಗನೆಯ ಕಂಠಮಾಲೆಗೆ ವ್ಯಾಖ್ಯಾನ ಬರೆದ ಸ್ವತಂತ್ರ ಸಿದ್ಧಲಿಂಗೇಶ್ವರರು, ಕರಣಹಸುಗೆಟೀಕು ಬರೆದ ಇಮ್ಮಡಿಗುರುಸಿದ್ಧ, ವಿರಕ್ತತೋಂಟದಾರ್ಯ ಮುಂತಾದವರು ಈ ಕಾಲದ ಮಠಾಶ್ರಿತ ಟೀಕಾಚಾರ್ಯರಾಗಿದ್ದಾರೆ.

ವಿಶೇಷವಾಗಿ ಬಾಗಲಕೋಟೆಯ ಈಗಿನ ತೆಂಗಿನಮಠದ ನಿಜನಾಮ ಟೀಕಿನಮಠ. ಈ ಮಠದಲ್ಲಿ ಶರಣರ ವಚನಗಳಿಗೆ ಟೀಕು ಬರೆದ ಹೇರಳ ಹಸ್ತಪ್ರತಿಗಳು ಇದ್ದ ಬಗ್ಗೆ ಮಾಹಿತಿಯಿದೆ. ಶ್ರೀ ರೇವಣಸಿದ್ದೇಶ್ವರರೆಂಬ ಸ್ವಾಮಿಗಳು ಅನೇಕ ಕೃತಿಗಳಿಗೆ ಟೀಕು ಬರೆದು ಟೀಕಾಕಾರ ರೇವಣಸಿದ್ದೇಶ್ವರರೆಂದು ಪ್ರತೀತಿ ಹೊಂದಿದ್ದರು. ನರಗುಂದದ ವಿರಕ್ತಮಠವು ಟೀಕಿನಮಠವಾಗಿತ್ತೆಂಬ ಜನವದಂತಿಯಿದೆ. ಆರೂಢ ಸಂಪ್ರದಾಯದ ಬಿಜಾಪುರದ ಷಣ್ಮುಖಸ್ವಾಮಿಗಳ ಮಠದಲ್ಲಿ ತಾಡೋಲೆ – ಕೋರಿಕಾಗದ – ಹಸ್ತಪ್ರತಿಗಳ ಸಂಗ್ರಹವಿದೆ. ಅವುಗಳಲ್ಲಿ ನಿಜದೀಪಿಕಾರತ್ನಟೀಕೆ, ಶ್ರೀವೇದಾಂತ ಪಂಚದಶಿಗೆ ವ್ಯಾಖ್ಯಾನ, ವೀರಶೈವಮಹಾಪುರಾಣದ ತಾತ್ಪರ್ಯ ಕೃತಿಗಳು ಸಂಗ್ರಹಗೊಂಡಿದ್ದು ಪ್ರಾಯಶಃ ಇದುಕೂಡ ಟೀಕಿನ ಮಠವಾಗಿರಬೇಕೆಂದು ಊಹಿಸಲಾವಕಾಶವಿದೆ.

ಸವದತ್ತಿ ತಾಲೂಕಿನ ಹಳ್ಳೂರಿನಲ್ಲಿ ಕಪ್ಪಿನನಂಜಯ್ಯನ ನಾಂದ್ಯದನುಡಿ, ಗಿರಿಜಾಕಲ್ಯಾಣದ ನುಡಿ, ಚೇರಮಾಂಕನ ಕಾವ್ಯದ ನಾಂದ್ಯದನುಡಿ, ದೇವಿನಾಂದ್ಯದ ನುಡಿ, ಪ್ರಭುದೇವರಪುರಾಣದನಾಂದ್ಯದನುಡಿ, ಭಾವಚಿಂತಾರತ್ನದೊಳಗಣ ಗಟ್ಟಿಗಟ್ಟಿ ಪದಗಳ ನುಡಿ, ಭಿಕ್ಷಾಟನಾ ಕಾವ್ಯದನುಡಿ, ಹಮ್ಮೀರಕಾವ್ಯದ ನುಡಿ, ಭೈರವೇಶ್ವರ ಕಾವ್ಯದ ನುಡಿ ಹೀಗೆ ೨೦ಕ್ಕೂ ಹೆಚ್ಚು ಕೃತಿಗಳಿಗೆ ನುಡಿ(ಟೀಕು) ಬರೆದ ಪ್ರತಿಗಳು ಒಂದೆಡೆ ಲಭ್ಯವಾಗಿವೆ. ಹೀಗಾಗಿ ಹಳ್ಳೂರಿನಲ್ಲಿ ಟೀಕಿನಮಠ ಅಸ್ತಿತ್ವದಲ್ಲಿದ್ದಿರಬೇಕು. ಶ್ರೀ ಚನ್ನಬಸವೇಶ್ವರನ ವಚನದ ಪುಸ್ತಕವನ್ನು ಪ್ರತಿಮಾಡಿದವನು ಟೀಕಿನಮಠದ ಸಂತತಿ ಅರ್ಚಲೇರಿ ವಿರಕ್ತಮಠದ ಸಿದ್ಧರಾಮಪ್ಪ ಎಂಬ ಹಸ್ತಪ್ರತಿಯಲ್ಲಿನ ಉಲ್ಲೇಖ ಕರ್ನಾಟಕದಲ್ಲಿ ಟೀಕಿನ ಮಠದ ವಂಶಸ್ಥರಿರುವುದು ಸಾಬೀತಾಗುತ್ತದೆ. ಹಾಗೆಯೇ ಅನುಭವ ಸೂತ್ರಕ್ಕೆ ಚನ್ನಮಲ್ಲಿಕಾರ್ಜುನ ದೇವರೆಂಬ ಶಿವಾಚಾರ್ಯನಿಂದ ಕರ್ನಾಟಕ ಭಾಷೆಯಿಂ ಟೀಕಾ ವಿರಚಿತವಾಗಿತ್ತು. ಆ ಟೀಕಾಕೃತಿ ಪಾಠಕರಿಗೆ ಸುಗಮವಾಗಬೇಕೆಂದು ಮತ್ತೇ ತಾತ್ಪರ್ಯ ಬರೆದಿರುವುದು ಕಂಡುಬರುತ್ತದೆ. ಹೀಗಾಗಿ ಟೀಕಾಸಾಹಿತ್ಯವನ್ನೇ ಗುರಿಯಿಟ್ಟು ಪ್ರತಿಗೊಳಿಸುವ ಉಪಕ್ರಮಗಳು ನಡೆದಿರುವುದು ತಿಳಿದುಬರುತ್ತದೆ.

ಟೀಕಾಸಾಹಿತ್ಯ ರಚನೆಗೆ ತೊಡಗಿರುವುದಲ್ಲದೆ ಅನೇಕ ಜನ ಮಠಾಧಿಪತಿಗಳು ಆ ಸಾಹಿತ್ಯ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವುದು ಕೆಲವು ಹಸ್ತಪ್ರತಿಗಳಲ್ಲಿ ಉಲ್ಲೇಖಗೊಂಡಿವೆ. ಉದಾಹರಣೆಗೆ “ಕರಣಹಸುಗೆ ವ್ಯಾಖ್ಯಾನ ಸಹ….. ಈ ಪುಸ್ತಕವನ್ನು ನಿರಂಜನ ದೇವರು ಬರೆಸಿದನು” “ಚನ್ನವಿರ ಶಿವಾಚಾರ್ಯರಿಗೆ ಶಿಷ್ಯರುಗಳಾದಂಥ ಪಂಚಾಕ್ಷರಿದೇವರಿಗೆ ಕರಿಬಸವರಾಜ ದೇವರು ಲೇಖನವ ಮಾಡಿದ ಎಲ್ಲ ಪುರಾತನರ ಬೆಡಗಿನ ವಚನದ ವ್ಯಾಖ್ಯಾನಂ” ಎಂಬಂತಹ ಅನೇಕ ನಿದರ್ಶನಗಳಿವೆ.

ಕನ್ನಡದಲ್ಲಿ ಸ್ವತಂತ್ರ ಕೃತಿಗಳು ರಚನೆಯಾಗುವ ಪೂರ್ವದಲ್ಲಿ ಪ್ರಾಕೃತ – ಸಂಸ್ಕೃತ ಭಾಷೆಗಳಿಗೆ ಕನ್ನಡಟೀಕು ಬರೆಯುವ ಜಾಯಾಮಾನವಿರಬೇಕು ಎಂಬುದಕ್ಕೆ ಉಭಯಸಿದ್ಧಾಂತಗಳಿಗೆ ಶಾಮಕುಂದಾಚಾರ್ಯ, ತಂಬಲೂರಾಚಾರ್ಯರಿಂದ ವ್ಯಾಖ್ಯಾನ, ಅನಾಮಧೇಯನಿಂದ ಚೂಡಾಮಣಿ ವ್ಯಾಖ್ಯಾನ, ಆರಾಧನಾ ಸಾಹಿತ್ಯಕ್ಕೆ ಆರಾಧನಾ ಕರ್ನಾಟಕ ಟೀಕಾ ಬರೆದುದ್ದೆಲ್ಲ ಸೃಜನಶೀಲ ಸಾಹಿತ್ಯಕ್ಕೆ ಪೂರ್ವಭಾವಿಯಾಗಿ ನಡೆದ ಪ್ರಯತ್ನಗಳೆಂದು ಡಾ. ಎಂ.ಎಂ. ಕಲಬುರ್ಗಿಯವರು ಅಭಿಪ್ರಾಯ ಪಡುತ್ತಾರೆ. (ಮಾರ್ಗ – ೩, ಪು.೩೭೮)

            ಸಂಸ್ಕೃತ ಪ್ರಾಕೃತದಾಳವ ತಾನರಿಯದ ಸಂಸಾರಮಗ್ನ ಜೀವರಿಗೆ
            ಸಂಶಯವಿಲ್ಲದೆ ತಿಳಿವಂತು ಪೇಳ್ದನಾಂ ಸಂಸೇವ್ಯ ಕನ್ನಡದಲ್ಲಿ

ಎಂದು ಜಿನಸೇನದೇಶವ್ರತಿಯ (ಕ್ರಿ.ಶ. ೧೬೦೦) ಮಾತು ಕನ್ನಡದ ಆಯ್ಕೆ, ಆ ಆಯ್ಕೆಯನ್ನು ತಾತ್ಪರ್ಯ ರೂಪದಲ್ಲಿ ಕೂಡಮಾಡಿರಬಹುದೆಂಬುದಕ್ಕೆ ಪುಷ್ಠಿದೊರೆಯುತ್ತದೆ.

ಮಹಾಭಾರತ ತಾತ್ಪರ್ಯ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ, ಬ್ರಹ್ಮಸೂತ್ರ ಭಾಷ್ಯ ಬರೆದ ಶ್ರೀಮಾಧ್ವಚಾರ್ಯರು, ಈ ಮಾಧ್ವರ ಕೃತಿಗಳಿಗೆ ಉನ್ನತ ಮಟ್ಟದ ವ್ಯಾಖ್ಯಾನ ಬರೆದ ಶ್ರೀವಿಜಯತೀರ್ಥರು, ೧೩ನೆಯ ಶತಮಾನದಲ್ಲಿ ರಚನೆಗೊಂಡ ದ್ವೈತ ಸಿದ್ಧಾಂತದ ಮೂಲ ಕೃತಿಗಳಿಗೆ ಟೀಕು – ಟಿಪ್ಪಣಿಗಳನ್ನು ಬರೆದ ಅನೇಕ ಜನ ಆಚಾರ್ಯರಿದ್ದಾರೆ.

ಇನ್ನು ರಾಜಶ್ರಯಕ್ಕೆ ನಿದರ್ಶನವಾಗಿ ‘ಚಿಕನಾಯಕಪುರದ ಅರಸ ಮುದಿನಾಯಕನ ಸಂತೋಷಾರ್ಥವಾಗಿ ಸೋಮಶೇಖರಶಿವಯೋಗಿ ಮಹಿಮ್ನಾಸ್ತವ ಸಟೀಕುವನ್ನು ಬರೆಸಿದನೆಂತಲೂ, ಮುದಿಗೆರೆ ರಘುವಪ್ಪನಾಯಕನು ಸೋಸಲೆ ರೇವಣಾರಾಧ್ಯರಿಂದ ಶಿವಾಧಿಕ್ಯ ಶಿಖಾಮಣಿ ಟೀಕು ಕೃತಿಯನ್ನು ಬರೆಸಿದನೆಂತಲೂ, ಮೈಸೂರಿನ ದೊಡ್ಡ ಕೃಷ್ಣರಾಜರ ಮಹಿಷಿ ಚಲುವಾಂಬೆ ತಲಕಾವೇರಿಮಾಹಾತ್ಮ್ಯೆ ಹಾಗೂ ಕೃಷ್ಣಕರ್ಣಾಮೃತ ಕೃತಿಗಳಿಗೆ ಟೀಕು ರಚಿಸಿದ್ದಾಳೆ. ಮೈಸೂರ ದಳವಾಯಿದೊಡ್ಡಯ್ಯನವರ ಪೌತ್ರರಾದ ಕಳಲೆ ವೀರರಾಜಯ್ಯನವರ ಪುತ್ರರಾದ ನಂಜರಾಜಯ್ಯನವರು ವಾಣಿವಿಲಾಸಟೀಕೆಯನ್ನು ರಚಿಸಿದ್ದಾನೆ. ಕ್ರಿ.ಶ. ೧೮೦೮ರಲ್ಲಿದ್ದ ರಾಮಕೃಷ್ಣಶಾಸ್ತ್ರಿ, ಭುವನಪ್ರದೀಪಿಕೆ ಕೃತಿಗೆ ಮೈಸೂರು ಅರಸ ಮುಮ್ಮಡಿ ಕೃಷ್ಣರಾಜರ ಸಂತೋಷಾರ್ಥವಾಗಿ “ಕೃಷ್ಣರಾಜ ಗುಣರತ್ನ” ಹೆಸರಿನ ಟೀಕುವನ್ನು ರಚಿಸಿದ್ದಾನೆ. ಸ್ವತಃ ಮುಮ್ಮಡಿ ಕೃಷ್ಣರಾಜ ಒಡೆಯರೇ ಜಾತಕ ಸಾಮ್ರಾಜ್ಯಟೀಕೆ, ಜೈಮಿನಿಯ ಅಶ್ವಮೇಧ ಪರ್ವಕ್ಕೆ ಟೀಕು, ದೇವಿಭಾಗವತ ತಾತ್ಪರ್ಯ ಟೀಕು ಇತ್ಯಾದಿ ಟೀಕಾಕೃತಿಗಳನ್ನು ರಚಿಸಿದ್ದಾರೆ. ಚಿಕ್ಕದೇವರಾಜರು ಸಂಸ್ಕೃತ ಭಾಗವತಕ್ಕೆ ಗದ್ಯರೂಪದ ಟೀಕು ರಚನೆ ಮಾಡಿದ್ದಾರೆ. ವಿಜಯನಗರದ ಜಕ್ಕಣಾರ್ಯ ದಂಡನಾಯಕನು ಏಕೋತ್ತರ ಶತಸ್ಥಲ (ನೂರೊಂದು ಸ್ಥಲ) ಟೀಕು ಬರೆದಿದ್ದಾನೆ. ೧೫೭೦ರಲ್ಲಿ ಸಿಗುವ ವೈದ್ಯಸಾರ ಸಂಗ್ರಹದ ಟೀಕುವನ್ನು ಎಳಂದೂರು (ಬಾಲಚಂದ್ರಪುರದ) ದೊರೆ ಹದಿನಾಡು ಅರಸ ಚನ್ನರಾಜ ಬರೆದಿರುವುದು. ಆ ಕೃತಿಗೆ ಸಂಬಂಧಿಸಿದ ಎರಡು ಕೃತಿಗಳು ಲಭ್ಯವಿದ್ದು ಒಂದರಲ್ಲಿ ಬಾಲಚಂದ್ರಪುರಾಧೀಶ್ವರ ಚನ್ನರಾಜಭೂಪಾಲ ವಿರಚಿತಮಪ್ಪ ಸರ್ವಲೋಕೋಪಕಾರಕ ಕರ್ನಾಟಕ ಭಾಷಾ ವಿಶದೀಕೃತ ವೈದ್ಯಸಾರ ಸಂಗ್ರಹವೇ” ಎಂದಿದೆ. ಇನ್ನೊಂದರಲ್ಲಿ “ಬಾಲಚಂದ್ರ ಪುರಸ್ಥಿತ ಸರ್ವವಿದ್ಯಾವಿಶಾರದ ನಾರಸಿಂಹಶಾಸ್ತ್ರಿವರ್ಯ ವಿರಚಿತ ಸರ್ವಲೋಕೋಪಕಾರಕ ಕರ್ನಾಟಕ ಭಾಷಾ ವಿಶದೀಕೃತ ವೈದ್ಯಸಾರ ಸಂಗ್ರಹೇ” ಎಂದಿದೆ. ಇದರಿಂದ ಸ್ವತಃ ಹದಿನಾಡು ದೊರೆ ಚೆನ್ನರಾಜರೇ ಈ ಕೃತಿ ರಚಿಸಿರಬೇಕು. ಇಲ್ಲವೇ ನರಸಿಂಹಭಟ್ಟರು ಬರೆದು ಅರಸನ ಅಂಕಿತದಲ್ಲಿ ಪ್ರಕಟಿಸಿರಬೇಕು. ಒಟ್ಟಿನಲ್ಲಿ ರಾಜಾಶ್ರಯದ ಪರಿಸರದಲ್ಲಿ ಹುರ‍್ರ‍ಿಬಂದ ಕೃತಿಯಾಗಿದೆ. ೧೯ನೆಯ ಶತಮಾನದಲ್ಲಂತು ಕನ್ನಡ ಟೀಕಾಸಾಹಿತ್ಯದ ಸುಗ್ಗಿಯ ಕಾಲ.

ಹೀಗೆ ಟೀಕಾಸಾಹಿತ್ಯ ನೆಲೆಗಳನ್ನು ಲಭ್ಯವಿದ್ದ ಆಕರಗಳಿಂದ ಗುರುತಿಸಲು ಸಾಧ್ಯವಿದೆ. ಕರ್ನಾಟಕದಾದ್ಯಂತ ಕ್ಷೇತ್ರಕಾರ್ಯ ಕೈಗೊಳ್ಳುವುದರ ಮೂಲಕ ಮತ್ತು ಅಮೂಲಾಗ್ರವಾಗಿ ಟೀಕಾಕೃತಿಗಳ ಹಸ್ತಪ್ರತಿಗಳನ್ನು ಪರಿಶೋಧಿಸುವುದರ ಮೂಲಕ ಈ ಸಾಹಿತ್ಯದ ಭೌಗೋಳಿಕ ಪ್ರಸಾರ ಮತ್ತು ಪರಿಸರವನ್ನು ಅಧಿಕೃತವಾಗಿ ಅಧ್ಯಯನ ಮಾಡಲು ಸಾಕಷ್ಟು ಅವಕಾಶವಿದೆ.