ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ – ಪ್ರಾಕೃತ ಗ್ರಂಥಗಲಿಗೆ ಬರೆದಂತೆ ಕನ್ನಡದಲ್ಲಿ ಸ್ರುಜನ ಹಾಗೂ ಸಂಕಲನ ಸಾಹಿತ್ಯದ ಜೊತೆಗೆ ಟೀಕಾಸಾಹಿತ್ಯ ಸಮೃದ್ಧವಾಗಿ ರಚನೆಯಾಗಿದೆ. ಹೀಗಾಗಿ ಈ ಸಾಹಿತ್ಯ ಪ್ರಕಾರಕ್ಕೆ ಒಂದು ಐತಿಹಾಸಿಕವಾದ ಪರಂಪರೆ ಪ್ರಾಪ್ತವಾಗಿದೆ. “ಯಾವುದೇ ಭಾಷೆಯ ಸಾಹಿತ್ಯ ಮೊದಲು ಅನುವಾದ – ಟೀಕೆಗಳಮೂಲಕ ಇನ್ನೊಂದು ಭಾಷೆಯಲ್ಲಿ ಪ್ರವೇಶ ಪದೆದು, ಆ ಮೇಲೆ ಆ ಭಾಷೆಯಲ್ಲಿ ಸ್ವತಂತ್ರ ಸಾಹಿತ್ಯ ಸೃಷ್ಟಿಗೆ ನೆಲೆಯನ್ನು ಮಾಡಿಕೊಳ್ಳುತ್ತದೆ. ಈ ಮೇರೆಗೆ ಕನ್ನಡದಲ್ಲಿ ಸ್ವತಂತ್ರ ಸಾಹಿತ್ಯ ನಿರ್ನಾಮವಾಗುವುದಕ್ಕೆ ಮೊದಲು, ಪ್ರಾಕೃತ ಸಂಸ್ಕೃತ ಭಾಷೆಗಳಲ್ಲಿರುವ ಜೈನಸಾಹಿತ್ಯಕ್ಕೆ ಕನ್ನಡ ಟೀಕೆ ಬರೆಯುವ ಕಾರ್ಯವೇ ನಡೆದಿರಬೇಕು” ಎಂಬ ಡಾ. ಎಂ.ಎಂ.ಕಲಬುರ್ಗಿಯವರ ಹೇಳಿಕೆಯನ್ನು (ಬಸವಣ್ಣನವರ ಟೀಕಿನ ವಚನಗಳು, ಪ್ರಸ್ತಾವನೆ, ಪು.ii – iv) ಗಮನಿಸದರೆ ಸೃಜನಸಾಹಿತ್ಯದ ಸರಿದೊರೆಯಾಗಿ ಟೀಕಾ ಸಾಹಿತ್ಯದ ಕೃಷಿ ಕನ್ನಡದಲ್ಲಿ ಆಗಿದೆಯೆಂಬುದನ್ನು ತಿಳಿಯಬಹುದು. ಕರ್ನಾಟಕ ಜೈನ, ವೀರಶೈವ, ಬ್ರಾಹ್ಮಣ ಜನಾಂಗ ತಮ್ಮ ತಮ್ಮ ಧರ್ಮ – ತತ್ವ – ಸಿದ್ಧಾಂತಗಳ ಬೆಳವಣಿಗೆಯ ದೃಷ್ಟಿಯಿಂದ ಪ್ರಾಚೀನರೂ ಪ್ರಸಿದ್ಧರೂ ಆದ ಆಚಾರ್ಯನುಭಾವಿ ಸಿದ್ಧಪುರುಷರ ಸೈದ್ಧಾಂತಿಕ ಗ್ರಂಥಗಳಿಗೆ ವೃತ್ತಿ – ವ್ಯಾಖ್ಯಾನ ರಚನೆಯಲ್ಲಿ ತೊಡಗಿರುವುದನ್ನು ಸಾಹಿತ್ಯ ಚರಿತ್ರೆಯಲ್ಲಿ ಕಾಣುತ್ತೇವೆ. ಸುಮಾರು ೭ – ೮ನೆಯ ಶತಮಾನದಿಂದ ೧೯ನೆಯ ಶತಮಾನದವರೆಗೆ ಕನ್ನಡ ಟೀಕಾಸಾಹಿತ್ಯ ರಚನೆಗೊಂಡಿದೆ. ಹೀಗಾಗಿ ಟೀಕೆ – ವ್ಯಾಖ್ಯಾನಗಳ ಗ್ರಂಥ ಸಮುದಾಯ ಕನ್ನಡದಲ್ಲಿ ಗಮನಾರ್ಹ ಪ್ರಮಾಣದಲ್ಲಿರುವುದನ್ನು ನೋಡಬಹುದು.

ಬಸವಣ್ಣನವರು ಟೀಕಿನ ವಚನಗಳನ್ನು ಸಂಪಾದಿಸಿದ ಡಾ. ಎಂ.ಎಂ. ಕಲಬುರ್ಗಿ ಅವರು ಪ್ರಸ್ತಾವನೆಯಲ್ಲಿ ಕನ್ನಡ ಟೀಕಾಸಾಹಿತ್ಯ ಪರಂಪರೆ ಎರಡು ವಿಧದಲ್ಲಿ ಬೆಳೆದುಬಮ್ದಿರುವುದನ್ನು ಗುರುತಿಸುತ್ತಾರೆ. ಒಂದು ಅನ್ಯಭಾಷಾ ಸಾಹಿತ್ಯಕ್ಕೆ ಬರೆದ ಕನ್ನಡ ಟೀಕೆ, ಇನ್ನೊಂದು ಕನ್ನಡ ಭಾಷಾ ಸಾಹಿತ್ಯಕ್ಕೆ ಬರೆದ ಕನ್ನಡ ಟೀಕೆ. ಅನ್ಯಭಾಷೆಗಳಾದ ಸಂಸ್ಕೃತ – ಪ್ರಾಕೃತ ಸಾಹಿತ್ಯದ ಆಗಮಾದಿಗಳಿಗೆ ಉಭಯಭಾಷಾ ಪ್ರವೀಣರಾದ ವ್ಯಾಖ್ಯಾನಕಾರರಿಂದ ಟೀಕು ಬೆಳೆದುಬಂದರೆ ಹಳಗನ್ನಡದ ಕಾವ್ಯ, ವ್ಯಾಕರಣ, ಶಾಸ್ತ್ರಗ್ರಂಥಗಳಲ್ಲದೆ ಶಿವಶರಣರ ಬೆಡಗಿನ ವಚನಗಳಿಗೆ, ವೀರಶೈವ ಕವಿಗಳ ಪುರಾಣಗಳಿಗೆ ಟೀಕು ಬರೆದಿರುವುದನ್ನು ಕಾಣಬಹುದು. ಅನ್ಯಭಾಷೆಗೆ ಬರೆದ ಟೀಕೆಗಳಿಗೆ ಭಾಷಾ ಪ್ರಭೇದ, ಅರ್ಥ ಜಟಿಲತೆಗಳು ಕಾರಣವಾದರೆ, ಕನ್ನಡ ಭಾಷೆಗೆ ಬರೆದ ಟೀಕೆಗಳಿಗೆ ಅವಸ್ಥಾಭೇದ, ಪ್ರಾಂತಭೇದಗಳು ಕಾರಣವಾಗಿವೆ. ಈ ಟೀಕಾಸಾಹಿತ್ಯ ಪರಂಪರೆಯನ್ನು

೧. ಜೈನ ಟೀಕಾಸಾಹಿತ್ಯ
೨. ಲಿಂಗಾಯತ ಟೀಕಾಸಾಹಿತ್ಯ
೩. ಬ್ರಾಹ್ಮಣ ಟೀಕಾಸಾಹಿತ್ಯ

ಎಂದು ವರ್ಗೀಕರಿಸಿಕೊಂಡು ಅಧ್ಯಯನ ಮಾಡಬಹುದಾಗಿದೆ.

ಕನ್ನಡ ಟೀಕಾ ಸಾಹಿತ್ಯಕ್ಕೆ ಜೈನರು ಆದ್ಯರು; ವೀರಶೈವರು ಬಾಧ್ಯರು. ಕನ್ನಡ ಸಾಹಿತ್ಯ ಪ್ರಾಕೃತ ಭಾಷಾಸಾಹಿತ್ಯದೊಂದಿಗೆಬ್ ಸಂಬಂಧ ಬೆಳೆಸಿದಾಗಿನಿಂದ ಕನ್ನಡದಲ್ಲಿ ಟೀಕಾಸಾಹಿತ್ಯ ಬೆಳೆದುಬಂದಿದೆ. ಪ್ರಾಕೃತದಲ್ಲಿದ್ದ ತಮ್ಮ ಧಾರ್ಮಿಕ ಸಿದ್ಧಾಂತಗಳನ್ನು ದೇಶಿಯರಿಗೆ ತಿಳಿಸಲು ಆಯಾ ಪ್ರಾಂತೀಯ ಭಾಷೆಯಲ್ಲಿ ಬರೆಯುವುದು ಅಗತ್ಯವಾಯಿತು. ಈ ಕಾರಣವಾಗಿ ಕನ್ನಡದಲ್ಲಿ ಟೀಕೆ, ವ್ಯಾಖ್ಯಾನಗಳನ್ನು ಬರೆದುದು ಕಂಡುಬರುತ್ತದೆ. ಅರ್ಧಮಾಗಧೀ ಆಗಮಗಳ ಮೇಲೆ ಪ್ರಾಚೀನ ಟೀಕಾಗ್ರಂಥಗಳು ಪ್ರಾಕೃತ ಭಾಷೆಯಲ್ಲಿ ರಚನೆಯಾಗಿದ್ದವು. ಅದೇರೀತಿ ಬೌದ್ಧರ ತ್ರಿಪಿಟಕಗಳಿಗೆ ಪಾಲೀಭಾಷೆಯಲ್ಲಿ ವ್ಯಾಖ್ಯಾನ ಬರೆದಿರುವುದು ತಿಳಿದುಬರುತ್ತದೆ.

ಜೈನರಲ್ಲಿ ೮ನೆಯ ಶತಮಾನದಲ್ಲಿ ಆಗಮಗಳಿಗೆ ಸಂಸ್ಕೃತ ಟೀಕಾಗ್ರಂಥಗಳು ರಚನೆಯಾದವು. ಇದಕ್ಕೂ ಪೂರ್ವದಲ್ಲಿ ಕ್ರಿ.ಶ. ೬ – ೭ನೆಯ ಶತಮಾನ ಪ್ರಾಕೃತ ಟೀಕಾ ಸಾಹಿತ್ಯ ಸೃಷ್ಟಿಯಾಗಿತ್ತೆಂಬುದಕ್ಕೆ ಜೈನರ ಭಗವತೀ ಆರಾಧನಾ ಎಂಬ ೨೧೭೦ ಗಾಥೆಯುಳ್ಳ ಕೃಷಿಗೆ ಪ್ರಾಕೃತ ವ್ಯಾಖ್ಯಾನ ಕೃತಿಗಳು ಹುಟ್ಟಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಭೂತಬಲಿ ಆಚಾರ್ಯ ವಿರಚಿತಜೀವಟ್ಠಾಣದ ಕೃತಿಗೆ ‘ಜೀವಸಿದ್ದಿ’ ಎಂಬ ಸಂಸ್ಕೃತ ಟೀಕಾಕೃತಿ ರಚನೆಯಾಗಿತ್ತು. ಇದರ ಕಾಲ ಸುಮಾರು ೮ನೆಯ ಶತಮಾನ. ಅದೇ ರೀತಿ ಸುಮಂತಭದ್ರರು ಬರೆದ ‘ಗಂಧಹಸ್ತಿಮಹಾಭಾಷ್ಯಯೆಂಬುದು ಉಮಾಸ್ವಾಮಿಯ ಸಂಸ್ಕೃತ ತತ್ವಾರ್ಥ ಸೂತ್ರಕ್ಕೆ ಬರೆದ ಟೀಕಾಗ್ರಂಥವಾಗಿದೆ. ಅಕಲಂಕನು ತತ್ವಾರ್ಥದ ರಾಜವಾರ್ತಿಕಕ್ಕೆ ಟೀಕು ಬರೆದಿದ್ದಾನೆ. ಜೈನೇಂದ್ರ ವ್ಯಾಕರಣಕ್ಕೆ ನ್ಯಾಸ, ವೃತ್ತಿ ಭಾಷ್ಯ ಹಾಗೂ ಟೀಕು ಬರೆದಿರುವ ಸಂಗತಿ ‘ಪಂಚವಸ್ತು’ ಕೃತಿಯಿಂದ ತಿಳಿದುಬರುತ್ತದೆ. ಹಾಗೆಯೇ ಪೂಜ್ಯಪಾದನೆಂಬುವವನು “ತನ್ನ ವ್ಯಾಕರಣವಾದ ಜೈನೇಂದ್ರಕ್ಕೆ ‘ಸಂಜ್ಞಕ’ನ್ಯಾಸವನ್ನು, ಪಾಣಿಯ ವ್ಯಾಕರಣಕ್ಕೆ ‘ಶಬ್ದಾವತಾರ’ ಎಂಬ ನ್ಯಾಸವನ್ನು ಬರೆದಿದ್ದಾನೆಂಬುದು ಶಿವಮೊಗ್ಗ ಜಿಲ್ಲೆಯ ೪೬ನೆಯ ಶಾಸನದಿಂದ ತಿಳಿದುಬರುತ್ತದೆ. (ನಂ.೪೯೦, ಎ ಹಾಗೂ ಆರ್ ಸನ್ ೧೮೭೫ – ೭೬ನೇ ರಿಪೋರ್ಟ್) ಪೂಜ್ಯಪಾದರ ಈ ವ್ಯಾಕರಣಕ್ಕೆ ೧೧ನೆಯ ಶತಮಾನದ ಪೂರ್ವದಲ್ಲಿದ್ದ ಅಭಯನಂದಿಯ ಮಹಾವೃತ್ತಿ ಪ್ರಭಾಚಂದ್ರರ ಶಬ್ದಾಂಬೋಜಭಾಸ್ಕರನ್ಯಾಸ, ಆರ್ಯಶೃತಕೀರ್ತಿಯ ಪಂಚವಸ್ತು ಪ್ರಕ್ರಿಯಾ ಹಾಗೂ ೧೯ನೆಯ ಶತಮಾನದ ಮಹಾಚಂದ್ರನ ಲಘುಜೈನೇಂದ್ರ ಹೆಸರಿನ ನಾಲ್ಕು ಟೀಕಾಗ್ರಂಥಗಳು ಉಪಲಬ್ದವಿದೆ. ಕ್ರಿ.ಶ. ೮೧೪ – ೮೭೭ರಲ್ಲಿಯ ವೀರಸೇನನು ಪುಷ್ಪದಂತ ಮತ್ತು ಭೂತಬಲಿ ಆಚಾರ್ಯರ ‘ಷಟ್‍ಖಂಡಾಗಮ’ದ ಮೊದಲ ೫ ಖಂಡಗಳಿಗೆ ಧವಲಟೀಕೆ ಹೆಸರಿನ ಗ್ರಂಥ ಬರೆದಿದ್ದಾನೆ. ಹಾಗೆಯೇ ಗುಣಾಧರಮುನಿಯ ಕಷಾಯ ಪ್ರಾಭೃತಕ್ಕೆ ಜಯಧವಲ ಹೆಸರಿನ ೨೦ ಸಾವಿರ ಶ್ಲೋಕಗಳ ಟೀಕಾ ಗ್ರಂಥವನ್ನು ಬರೆದು ಮರಣಹೊಂದಲು ಇವರ ಶಿಷ್ಯ ಜಿನಸೇನನು ಉಳಿದ ೪೦ ಸಾವಿರ ಶ್ಲೋಕಗಳಿಗೆ ಟೀಕೆ ಬರೆದು ಅದನ್ನು ಪೂರ್ಣಗೊಳಿಸಿದನು. ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ‘ಸಿದ್ಧ – ಭೂಪದ್ಧತಿಟೀಕಾ’ ಎಂಬುದು ವೀರಸೇನನ ಮತ್ತೊಂದು ವ್ಯಾಖ್ಯಾನ ಕೃತಿ.

ಇಂದ್ರನಂದಿಯ ಶ್ರುತಾವತಾರದ ಹೇಳಿಕೆಯಂತೆ ಷಡ್ಬಂಡಾಗಮಕ್ಕೆ ಕನ್ನಡ ಟೀಕು ಬರೆದವರೆಂದರೆ ಶಾಮಕುಂದಾಚಾರ್ಯರು. ಕರ್ಮಪ್ರಾಭೃತ ಮತ್ತು ಕಷಾಯ ಪ್ರಾಭೃತಗಳಾದ ಅಗಮದ್ವಯಗಳನ್ನು ಬಲ್ಲ. ಶಾಮಕಂದಾಚಾರ್ಯರು ಷಡ್ಬಂಡಾಗಮನ ಕೊನೆಯ ಖಂಡವನ್ನು ಹೊರತುಪಡಿಸಿ ಉಳಿದ ೫ ಖಂಡಗಳಿಗೂ ಹಾಗೂ ಕಷಾಯ ಪ್ರಾಭೃತಕ್ಕೂ ೧೨,೦೦೦ ಗ್ರಂಥ ಪ್ರಮಾಣದ ಪ್ರಾಕೃತ, ಸಂಸ್ಕೃತ ಹಾಗೂ ಕನ್ನಡ ಭಾಷೆಯ ಟೀಕು ಬರೆದಿದ್ದಾರೆ. ಈ ‘ಟೀಕಾ ಪ್ರಕಾರಕ್ಕೆ ‘ಪದ್ಧತಿ’ಯೆಂದು ತಿಳಿದುಬರುತ್ತದೆ. ವೃತ್ತಿ – ಸೂತ್ರಗಳನ್ನೊಳಗೊಂಡ ವಿಷಯ ಪದಗಳ ವಿಭಗನೆಯೊಡನೆ ವಿಶ್ಲೇಷಣಾತ್ಮಕ ವಿವರಣೆ ಇರುವ ಟೀಕು ಸ್ವರೂಪಕ್ಕೆ ‘ಪದ್ಧತಿ’ಯೆಂದು ಪ್ರಾಕೃತಸಾಹಿತ್ಯ ಪರಿಭಾಷೆಯಲ್ಲಿ ಕರೆಯಲಾಗುತ್ತಿದೆ.

ಭ್ರಾಜಿಷ್ಣು ‘ಭಗವತೀ ಆರಾಧನೆ’ಗೆ ಬರೆದ ‘ಆರಾಧನಾ ಕರ್ನಾಟ ಟೀಕಾ’ ಗ್ರಂಥವಾಗಿದೆ. ಸುಮಾರು ದಶಕಗಳ ಕಾಲ ‘ಆರಾಧನ ಕರ್ನಾಟ ಟೀಕಾ’ ಗ್ರಂಥವು ಶಿವಕೋಟಾಚಾರ್ಯನ ವಡ್ಡಾರಾಧನೆಯೆಂದೇ ಪ್ರಚಾರದಲ್ಲಿದ್ದುದು ತಿಳಿದ ವಿಷಯ. ಆದರೆ ಇದರ ಕರ್ತೃ, ಕೃತಿಯ ಶೀರ್ಷಿಕೆ, ಕಾಲದ ವಿಚಾರಗಳಲ್ಲಿ ವಿದ್ವಾಂಸರಲ್ಲಿ ಹಲವು ಗೊಂದಲಗಳಿದ್ದುದು ತಿಳಿದವಿಷಯವಾಗಿದೆ.

ಡಾ. ಎ.ಎನ್. ಉಪಾಧೈಯವರು ಇದನ್ನು ‘ಉಪಸರ್ಗಕೇವಲಿಗಳ ಕಥೆ’ ಯೆಂದು, ಡಿ.ಎಲ್. ನರಸಿಂಹಾಚಾರ್ ರವರು ಇದನ್ನು ವಡ್ಡಾರಾಧನೆಯೆಂದು, ಕತೃ ಶಿವಕೋಟಾಚಾರ್ಯನೆಂದು ಪ್ರಚಲಿತಕ್ಕೆ ತಂದರು. ಡಾ. ಎಂ.ಎಂ. ಕಲಬುರ್ಗಿಯವರು ವಡ್ದಾರಾಧನೆಯನ್ನು ಕುರಿತು ಸಾದ್ಯಾಂತವಾಗಿ ಅಧ್ಯಯನ ಮಾಡಿ “ಇನ್ನು ಮುಂದೆ ಕನ್ನಡ ಕೃತಿಯ ಹೆಸರು ವಡ್ಡಾರಾಧನೆಯಲ್ಲ. ‘ಆರಾಧನಾ ಕರ್ನಾಟ ಟೀಕೆ’ ಎಂದು, ಕರ್ತೃವಿನ ಹೆಸರು ಶಿವಕೋಟಾಚಾರ್ಯನಲ್ಲ, ಭ್ರಾಜಿಷ್ಣು ಎಂದು ಕರೆಯಬೇಕೆನಿಸುತ್ತದೆ” ಎಂಬ ಒಂದು ಸೂಚನೆಯನ್ನು ಕೊಟ್ಟಿದ್ದರು. (ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಪು.೨೩೪) ಹಂಪನಾರವರ ಇತ್ತೀಚಿನ ಸಂಶೋಶನೆಗಳಿಂದ ಕೃತಿಯ ಕರ್ತೃ ಭ್ರಾಜಿಷ್ಣುವೆಂದು, ಕೃತಿಯ ಶೀರ್ಷಿಕೆ ‘ಆರಾಧನಾ ಕರ್ನಾಟ ಟೀಕಾ’ ಎಂದು, ಬೀದರ ಜಿಲ್ಲೆಯ ಈಗಿನ ಹಳ್ಳಿಖೇಡವೇ (ಹಿಂದಿನ ಪಳ್ಳಿಖೇಡ) ಅವನ ಪ್ರಾಂತವಾಗಿದ್ದಿತೆಂದು ನಿರ್ಧರಿಸಿದ್ದಾರೆ. ಇವನು ಆರಾಧನಾ ಕರ್ನಾಟ ಟೀಕಾವನ್ನು ರಾಷ್ಟ್ರಕೂಟರ ೩ನೆಯ ಗೋವಿಂದನ ಕಾಲಕ್ಕೆ (೭೯೩ – ೮೧೪) ಮಾನ್ಯಖೇಟದಲ್ಲಿದ್ದು ಬರೆದಿರಬೇಕೆಂದು ಡಾ. ನೇಗಿನಹಾಳರು ಅಭಿಪ್ರಾಯ ಪಡುತ್ತಾರೆ.

ಏಕಾಂಗ ಶ್ರುತಧರರಲ್ಲಿ ಕೊನೆಯವನಾದ ಲೋಹಾಚಾರ್ಯನು ೮೪,೦೦೦ ಶ್ಲೋಕಗಳ ಅರಾಧನೆಯನ್ನು ಬರೆದಿದ್ದು, ಈ ಪರಂಪರೆಯನ್ನು ಅನುಸರಿಸಿಯೇ ಶಿವಕೋಟಾಚಾರ್ಯನು (ಸಮಂತಭದ್ರನ ಶಿಷ್ಯ) ಮೂಲಾರಾಧನವನ್ನು ಬರೆದನು. ಇದಕ್ಕೆ ಭಗವತೀ ಆರಾಧನಾ, ಬೃಹಥಾರಾಧನಾ ಎಂಬ ಪರ್ಯಾಯ ನಾಮಗಳು ಚಾಲ್ತಿಯಲ್ಲಿವೆ. ಈ ಆರಾಧನ ಗ್ರಂಥ ಪ್ರಾಕೃತದಲ್ಲಿದ್ದು ೨೧೭೦ ಗಾಥೆಗಳನ್ನು ಒಳಗೊಂಡಿದೆ. ಆರಾಧನೆಗೆ ಅಪರಾಜಿತ ಸೂರಿಯು (ಕ್ರಿ.ಶ. ೮ ರಿಂದ ೧೧ನೇ. ಶ.) ವಿಜಯೋದಯಾ ವ್ಯಾಖ್ಯಾನವೆಂಬ ಸಂಸ್ಕೃತ ಟೀಕೆಯನು ಬರೆದಿರುವನು. ಮತ್ತು ೧೩ನೆಯ ಶತಮಾನದಲ್ಲಿದ್ದ ಪಂಡಿತ ಆಶಾಧರ ಸೂರಿಯ ‘ಮೂಲಾರಾಧನ ದರ್ಪಣ’ ಎಂಬ ಟೀಕೆಯನ್ನು ಬರೆದಂತೆ ತಿಳಿದುಬರುತ್ತದೆ. ಕಾಲದ ದೃಷ್ಟಿಯಿಂದ ವಡ್ಡಾರಾಧನೆಯೇ ಅತಿ ಪ್ರಾಚೀನ ಟೀಕೆಯಾಗಿದೆ.

೪೦ ಅಧಿಕಾರಗಳು, ೪೦ ಶೀರ್ಷಿಕೆಗಳಿರುವ ಆರಾಧನಾ ಗ್ರಂಥದಲ್ಲಿ ೩೫ನೆಯ ಅಧಿಕಾರ ಕವಚಾಧಿಕಾರ. ಈ ‘ಕವಚ’ವೆಂಬ ಅಧಿಕಾರದಿಂದ ಹತ್ತೊಂಬತ್ತು ಕಥೆಗಳನ್ನು ತೆಗೆದುಕೊಂಡು “ಈ ಪೇಳ್ದ ಪತ್ತೊಂಬತ್ತು ಕಥೆಗಳ್ ಶಿವಕೋಟಾಚಾರ್ಯರ್ ಪೇಳ್ದ ವೊಡ್ಡಾರಾಧನೆಯ ಕವಚ” ವೆಂಬುದಾಗಿ ಟೀಕಾಕಾರ ಕೃತಿಯ ಸ್ಚರೂಪ ಮತ್ತು ಹಿನ್ನೆಲೆಯನ್ನು ಸೂಚಿಸುತ್ತಾನೆ. ಆರಾಧನೆಯು ಚಾರಿತ್ರ ಪ್ರಧಾನವಾದ ಗ್ರಂಥವಾಗಿದ್ದು, ಇದು ಜಿನಮುನಿಗಳಿಗೂ, ಶ್ರಾವಕ, ಶ್ರಾವಕಿಯರಿಗೂ ಅನ್ವಯವಾಗುತ್ತದೆ. ಆರಾಧನೆಯೆಂಬುದು ತಪಸ್ಸು, ರತ್ನತ್ರಯಗಳ ಮೋಕ್ಷದ ಚಿಂತನ ಮಂಥನವಾಗಿದೆ. ಇಲ್ಲಿ ಹೇಳಿರುವ ೧೯ ಕಥೆಗಳು ಧರ್ಮವೀರರು ದಯಾವೀರರೂ, ಆದವರ ಚರಿತ್ರೆಯನ್ನು ಒಳಗೊಂಡಿವೆ. ಅವರು ೨೨ ಪರಿಷಹಗಳನ್ನು ೪ ಬಗೆಯ ಉಪಸರ್ಗಗಳನ್ನು ಜಯಿಸಿ ಮೋಕ್ಷಕ್ಕೆ ಸಂದ ರೀತಿಯನ್ನು ವಿವರಿಸಲಾಗಿದೆ. ಕವಚವು ಯೋಧನನ್ನು ಶತ್ರುಗಳಿಂದ ಹೆಗೆ ರಕ್ಷಿಸುವುದೋ ಹಾಗೆ ಈ ವಡ್ಡಾರಾದ್ಜನೆಯ ಕವಚನಗಳು ಆತ್ಮಕಲ್ಯಾಣವನ್ನು ಸಾಧಿಸಬಯಸುವವನಿಗೆ ಸ್ಥೈರ್ಯವನ್ನು, ಮನೋಬಲವನ್ನು ಕೊಡುವಂತಹವು.

ಅಮೋಘವರ್ಷನೆಂದು ಬಿರುದಾಂಕಿತನಾದ ನೃಪತುಂಗನ ಆಶಯದ ಮೇರೆಗೆ ಶಬ್ದಾನುಶಾಸನ ಬರೆದ ಶಕಟಾಯನನೇ ‘ಅಮೋಘವೃತ್ತಿ’ಯನ್ನು ರಚಿಸಿರುವುದಾಗಿ ತಿಳಿದುಬರುತ್ತದೆ. ಹಾಗೆಯೇ ಈ ಅಮೋಘವೃತ್ತಿಗೆ ಪ್ರಭಾಚಂದ್ರಾಚಾರ್ಯ ಶಾಕಟಾಯನನ್ಯಾಸವನ್ನು ಬರೆದಿದ್ದಾನೆ. ಈ ವೃತ್ತಿಯ ಸಂಗ್ರಹರೂಪ ಯಕ್ಷವರ್ಮನ ‘ಚಿಂತಾಮಣಿ ಟೀಕೆ’. ಈ ಚಿಂತಾಮಣಿಟೀಕೆಗೆ ಅಜಿತಸೇನನು ಮಣೀಪ್ರಕಾಶೀಕೆಯೆಂಬ ಟೀಕಾ ಗ್ರಂಥವನ್ನು ಬರೆದಿದ್ದಾನೆ. ಭಾವಸೇನತ್ರೈವಿದ್ಯಾದೇವನ ‘ಶಾಕಾಟಾಯನ ಟೀಕಾ’, ದಯಾಪಾಲನಮುನಿಯ ‘ರೂಪಸಿದ್ಧಿ’ ಕೃತಿಗಳು ಶಬ್ದಾನುಶಾಸನದ ಮೇಲೆ ರಚನೆಗೊಂಡ ವ್ಯಾಖ್ಯಾನಗಳಾಗಿವೆ. ಅದೇ ರೀತಿ ಅಭಯಚಂದ್ರನ ಪ್ರಕ್ರಿಯಾ ಸಂಗ್ರಹ ಕೃತಿಯು ಪಾಣಿನಿಯ ಸಿದ್ಧಕೌಮುದಿಯ ಮಾದರಿಯಲ್ಲಿ ರಚನೆಯಾದ ಪ್ರಕ್ರಿಯಾ ಟೀಕೆಯಾಗಿರಬೇಕೆಂದು ವಿದ್ವಾಂಸರ ಅಭಿಪ್ರಾಯವಾಗಿದೆ. ೯ನೆಯ ಶತಮಾನದ ಧನಂಜಯ ಕವಿಯ ರಾಮಚರಿತೆ, ಕೃಷ್ಣಚರಿತೆ ಹೇಳುವ ರಾಘವಪಾಂಡವೀಯ (ದ್ವಿಸಂಧಾನ) ಮಹಾಕಾವ್ಯಕ್ಕೆ ನೇಮಿಚಂದ್ರನ ‘ಪದಕೌಮುದಿ’ ಮತ್ತು ಕವಿದೇವನ ‘ರಾಘವ ಪಾಂಡವೀಯ ಪ್ರಕಾಶಿಕಾ’ ಹೆಸರಿನ ಎರಡು ಟೀಕಾ ಕೃತಿಗಳು ಲಭ್ಯವಿದ್ದು ಇವುಗಳನ್ನು ಆರಾದ ಜೈನಸಿದ್ಧಾಂತ ಭವನದಲ್ಲಿ ಸಂರಕ್ಷಿಸಲಾಗಿದೆ. ಈತನ ಜಿನಸ್ತ್ರೋತ್ರ ಕೃತಿಯಾದ ಇಂದ್ರಜಾಲವೃತ್ತಕ್ಕೆ ೧೬ನೆಯ ಶತಮಾನದ ನಾಗಚಂದ್ರ ಸಂಸ್ಕೃತದಲ್ಲಿ ಟೀಕು ಬರೆದಿದ್ದಾನೆ.

೧೦ನೆಯ ಶತಮಾನದ ಕೊನೆಯ ಪಾದದಲ್ಲಿದ್ದ ಮಾಧವಚಂದ್ರತ್ರೈವಿದ್ಯದೇವ ನೇಮಿಚಂದ್ರನ ಶಿಷ್ಯ. ಈತನು ತ್ರಿಲೋಕಸಾರ ಕೃತಿಗೆ ವ್ಯಾಖ್ಯಾನ ಬರೆದಿದ್ದಾನೆ. ಕ್ರಿ.ಶ. ೯೯೩ರ ವಸುನಂದಿ ಒಬ್ಬ ಟೀಕಾಕಾರನಾಗಿದ್ದು ಈತನು ಸಮಂತ ಭದ್ರರ ‘ಜಿನಶತಕ’ ‘ಸ್ತುತಿವಿರ್ಯಾ’ ಕೃತಿಗಳಿಗೆ ಸಂಸ್ಕೃತದಲ್ಲಿ ಟೀಕೆಯನ್ನು ರಚಿಸಿದ್ದಾನೆ. ೨೦ ಸಾವಿರ ಶ್ಲೋಕಗಳ ‘ನ್ಯಾಯವಿನಿಶ್ಚಯ’ ಕೃತಿಯ ಕರ್ತೃ ಭಟ್ಟಾಕಲಂಕ. ಇದಕ್ಕೆ ೧೦೨೫ರಲ್ಲಿದ್ದ ವಾದಿರಾಜಸೂರಿಯು ನ್ಯಾಯವಿನಿಶ್ಚಯವಿವರಣವು ಹೆಸರಿನ ಭಾಷ್ಯ ಬರೆದಿದ್ದಾನೆ. ಕ್ರಿ.ಶ. ೧೦೪೭ರ ಮಲ್ಲಿಷೇಣನ ಪ್ರವಚನಸಾರಟೀಕಾ, ಪಂಚಾಸ್ತಿಕಾಯಟೀಕಾ ಕೃತಿಗಳಲ್ಲದೆ ೧೧ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಶ್ರೀಚಂದ್ರ ಹಾಗೂ ಪ್ರಭಾಚಂದ್ರರು ಪುಷ್ಪದಂತನ ಮಹಾಪುರಾಣದ ಮೇಲೆ ಟಿಪ್ಪಣಿಗಳನ್ನು ರಚಿಸಿದ್ದಾರೆ. ರವಿಷೇಣಾಚಾರ್ಯರ ಪದ್ಮಪುರಾಣಕ್ಕೆ ಶ್ರೀಚಂದ್ರ ಬರೆದ ವ್ಯಾಖ್ಯಾನ ಕೃತಿಯನ್ನು ಮುಂಬಯಿಯ ಸರಸ್ವತಿಭವನದಲ್ಲಿ (ನಂ. ೪೬೩) ಸಂರಕ್ಷಿಸಲಾಗಿದೆ. ಈತನೇ ಬರೆದನೆನ್ನಲಾದ ಉತ್ತರ ಪುರಾಣದ ಟಿಪ್ಪಣಿಯ ಪ್ರತಿಯು ಜಯಪುರದ ಪಾಟೋರಿಯಾ ಮಂದಿರದ ಗ್ರಂಥ ಭಂಡಾರದಲ್ಲಿದೆ. ಹಾಗೆಯೇ ಪ್ರಭಾಚಂದ್ರ ಬರೆದ ಟಿಪ್ಪಣಿಯ ಉತ್ತರಪುರಾಣದ ಭಾಗಶಃ ಪ್ರತಿಯು ಆಗ್ರಾದ ಮೋತಿಕಟರಾ ಮಂದಿರದಲ್ಲಿದೆ. ಈತನಿಂದ ‘ರತ್ನಕರಂಡಟೀಕಾ’, ‘ಕ್ರಿಯಾಕಲಾಪಟೀಕಾ’, ‘ಸಮಾಧಿತಂತ್ರಟೀಕಾ’, ‘ಸರ್ವಾರ್ಥಸಿದ್ಧಿ ಟಿಪ್ಪಣ’, ‘ಸಮಯಸಾರ ಟೀಕಾ’, ‘ಆರಾಧನಾಟೀಕಾ’ ಮುಂತಾದ ವ್ಯಾಖ್ಯಾನ ಗ್ರಂಥಗಳು ರಚನೆಯಾಗಿವೆಂಬುದು ವಿದ್ವಾಂಸರ ನಿಲುವು.

೧೧ನೆಯ ಶತಮಾನದ ಹೇಮಚಂದ್ರನೆಂಬ ಮೀಮಾಂಸಕ ತನ್ನ ‘ಕಾವ್ಯಾನುಸಾರ’ ಎಂಬ ಅಲಂಕಾರ ಗ್ರಂಥಕ್ಕೆ ‘ಅಲಂಕಾರ ಚೂಡಾಮಣಿ’ ಎಂಬ ಪರಿಷ್ಕೃತ ಟೀಕು ಬರೆದನಲ್ಲದೆ ‘ವಿವೇಕ’ ಎಂಬ ಹೆಸರಿನ ಟಿಪ್ಪಣಿಯನ್ನು ಕೂಡಿಸಿದ್ದಾನೆ. ಕ್ರಿ.ಶ. ೧೨೪೩ರಲ್ಲಿ ಆಶಾಧರನು ‘ಅಣಗಾರ ಧರ್ಮಾಮೃತ ಟೀಕಾ’ ಕೃತಿಯನ್ನು, ಶಿವಾರ್ಯನ ಪ್ರಾಕೃತ ಆರಾಧನಾಗ್ರಂಥಕ್ಕೆ ಸಂಸ್ಕೃತದಲ್ಲಿ ಮೂಲಾರಾಧನಾಟೀಕಾವನ್ನು, ಅದೇರೀತಿ ‘ಇಷ್ಟೋಪದೇಶ ಟೀಕಾ’, ‘ಸಹಸ್ರನಾಮಸ್ತವನಟೀಕಾ’, ‘ಜಿನಯಜ್ಞಕಲ್ಪಸಟೀಕಾ’, ‘ತ್ರಿಪಷ್ಠಿಸ್ಮೃತಿಶಾಸ್ತ್ರಸಟೀಕಾ’, ‘ಅಮರಕೋಶಾಟೀಕಾ’, ‘ಕಾವ್ಯಲಂಕಾರಟೀಕೆ’ ಮುಂತಾದವುಗಳನ್ನು ರಚಿಸಿದ್ದಾನೆ. ಈತನ ಕೆಲವು ಟೀಕಾ ಕೃತಿಗಳು ಮುಂಬಯಿಯ ಐ.ಪನ್ನಾಲಾಲ್ ಸರಸ್ವತಿ ಭಂಡಾರದಲ್ಲಿರುವುದಾಗಿ ತಿಳಿದುಬರುತ್ತದೆ.

ಹೀಗೆ ಜೈನಸಾಹಿತ್ಯದಲ್ಲಿ ಪ್ರಾಕೃತ ಕೃತಿಗಳ ಸಂಸ್ಕೃತಭಾಷೆಯ ಟೀಕೆಗಳು, ಸಂಸ್ಕೃತ ಕೃತಿಗಳಿಗೆ ಪ್ರಾಕೃತ ಭಾಷೆಯ ಟೀಕೆಗಳು ರಚನೆಗೊಂಡಿರುವುದನ್ನು ಗಮನಿಸಿದರೆ ಜೈನ ಟೀಕಾಸಾಹಿತ್ಯಪರಂಪರೆಯ ಪ್ರಾಚೀನತೆ ಮನವರಿಕೆಯಾಗುತ್ತದೆ. ಇದರಿಂದಾಗಿ ಮುಂದೆ ಕನ್ನಡ ಭಾಷೆಗೆ ಕನ್ನಡದಲಿ ವ್ಯಾಖ್ಯಾನ ಬರೆಯುವುದರಲ್ಲಿಯೂ ಈ ಧರ್ಮೀಯರು ಆಸಕ್ತಿ ತೋರಿದರು. ವ್ಯಾಖ್ಯಾನಸಾಹಿತ್ಯ ಕ್ಷೇತ್ರದಲ್ಲಿ ಮೊದಲ ವ್ಯವಸಾಯಗಾರರು ಜೈನರೇ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೈನ ಟೀಕಾಸಾಹಿತ್ಯ ಕೃತಿಗಳನ್ನು ೧. ಆಗಮಗಳು ಸಿದ್ಧಾಂತ ಗ್ರಂಥಗಳು ೨. ತಾತ್ವಿಕ ಗ್ರಂಥಗಳು ೩. ವ್ಯಕ್ತಿ ಚಿತ್ರಗಳು ೪. ನಿಘಂಟು ಮುಂತಾದ ಶಾಸ್ತ್ರಗ್ರಂಥಗಳು ಹಾಗೂ ೫ ಆಚರಣೆ ಗ್ರಂಥಗಳೆಂದು ವರ್ಗೀಕರಿಸಬಹುದಾಗಿದೆ. ಹತ್ತಾರುಜನ ಟೀಕಾಕಾರರು ಸಮರ್ಥವಾಗಿ ಈ ಕ್ಷೇತ್ರದಲ್ಲಿ ದುಡಿದಿರುವುದನ್ನು ಪ್ರಾಚೀನ ಸಾಹಿತ್ಯ – ಶಾಸನಧಾರಗಳು ಉಲ್ಲೇಖಿಸುತ್ತವೆ. ಕ್ರಿ.ಶ. ಸುಮಾರು ೪೦೦ರಲ್ಲಿದ್ದ ಸಮಂತಭದ್ರನ ಸಂಸ್ಕೃತ ಹಾಗೂ ಪ್ರಾಕೃತ ಗ್ರಂಥಗಳಿಗೆ ಹಳಗನ್ನಡದಲ್ಲಿ ವ್ಯಾಖ್ಯಾನಗಳಿರುವುದು ತಿಳಿದುಬರುತ್ತದೆ. ಕ್ರಿ.ಶ. ೬೦೦ರಲ್ಲಿ ಜೀವಿಸಿದ್ದ ಪೂಜ್ಯಪಾದರನ್ನು ವೃತ್ತವಿಲಾಸನು(ಕ್ರಿ.ಶ. ೧೧೬೨) ಹೀಗೆ ಬಣ್ಣಿಸುತ್ತಾನೆ.

            ಭರದಿಂ ಜೈನೇಂದ್ರಿಮಂ ಭಾಸುರಮೆನಲೊರೆದಂ ಪಾಣಿನೀಯಕ್ಕೆ ಟೀಕಂ |
            ಬರೆದಂ ತತ್ತ್ವಾರ್ಥಮಂ ಟಿಪ್ಪಣದಿನರುಪಿದಂ ಯಂತ್ರ ಮಂತ್ರಾದಿ ಶಾಸ್ತ್ರೋ
            ತ್ಕರಮಂ ಭೂರಕ್ಷಣಾರ್ಥ ವಿರಚಿಸಿ ಜಸಮಂ ತಾಳ್ದಿದಂ ವಿಶ್ವವಿದ್ಯಾ
            ಭರಣಂ ದೇವಾಂಗನಾರಾಧಿತಪದಕಮಳ ಪೂಜ್ಯಾಪಾದ ವ್ರತೀಂದ್ರಂ ||

ಅದೇ ರೀತಿ ಬಹುಭಾಷಾ ಪಂಡಿತನಾಗಿದ್ದ ಕ್ರಿ.ಶ. ೬೫೦ರಲ್ಲಿಯ ಶ್ರೀವರ್ಧದೇವನನ್ನು (ತುಂಬುಲೂರಾಚಾರ್ಯ) ದೇವಚಂದ್ರ ತನ್ನ ರಾಜಾವಳಿ ಕಥೆಯಲ್ಲಿ ಸ್ತುತಿಸಿದ್ದಾನೆ.

“….ಮತ್ತಂ ತುಂಬೂಲೂರಲ್ಲಿ ಪುಟ್ಟಿದ ತುಂಬುಲೂರು ನಾಮಾಚಾರ್ಯರ್ ಪ್ರಾಕೃತ, ಸಂಸ್ಕೃತ, ಕರ್ಣಾಟಾದಿ ಭಾಷೆಗಳಿಂ ಸಿದ್ಧಾಂತಪ್ರಬಂಧ ಕರ್ತೃಗಳ್ ಚೂಡಾಮಣಿ ವ್ಯಾಖ್ಯಾನ ಚತುರರಿತಿಹಾ ಗ್ರಂಥ ರಚನೆಯಂ ಮಾಡಿದರ್ ಮತ್ತು ತುಂಬುಲೂರು ನಾಮಾಚಾರ್ಯರ್ ಎಂಬತ್ತುನಾಲ್ಕು ಸಾಸಿರ ಗ್ರಂಥಕರ್ತೃಗಳಾಗಿ ಕರ್ಣಾಟಕ ಭಾಷೆಯಿಂ ಚೂಡಾಮಣಿ ವ್ಯಾಖ್ಯಾನಮಂ ಮಾಡಿದರ್ …” ಎಂಬಂತಹ ಹೇಳಿಕೆಗಳಿಂದ ತುಂಬುಲೂರಾಚಾರ್ಯರು ಸಮರ್ಥ ವ್ಯಾಖ್ಯಾನಕಾರರಾಗಿದ್ದರೆಂಬುದು ತಿಳಿದುಬರುತ್ತದೆ. ಆದರೆ ಚೂಡಾಮಣಿ ಎಂಬ ವ್ಯಾಖ್ಯಾನ ಕೃತಿಯ ಸಂಖ್ಯಾನಿರ್ಣಯ ಹಾಗೂ ವ್ಯಾಖ್ಯಾನಕಾರರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ. ಎಂ.ಎಂ. ಕಲಬುರ್ಗಿಯವರು ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಎಂಬ ಮಹಾಪ್ರಬಂಧದಲ್ಲಿ ಚೂಡಾಮಣೀತ್ರಯ (ಒಂದು ತೊಡಕು) ಎಂಬ ಶೀರ್ಷಿಕೆಯಡಿ ಬಿ.ಎಲ್. ರೈಸ್, ಆರ್. ನರಸಿಂಹಾಚಾರ್, ಗೋವಿಂದಪೈ, ಎ. ವೆಂಕಟಸುಬ್ಬಯ್ಯನವರ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಎರಡು ನಿರ್ಧಾರಗಳಿಗೆ ಬರುತ್ತಾರೆ. ೧. ತುಂಬಳೂರಾಚಾರ್ಯನದು ಷಡ್ಬಂಡಾಗಮ ಮತ್ತು ಕಷಾಯ ಪಾಹುಡಗಳಿಗೆ ಬರೆದ ಚೂಡಾಮಣಿ ಹೆಸರಿನ ವ್ಯಾಖ್ಯಾನ ಕೃತಿ. ಭಟ್ಟಾಕಳಂಕ ಹೇಳುವ ಚೂಡಾಮಣಿ ತತ್ವಾರ್ಥಸೂತ್ರಕ್ಕೆ ಬರೆದ ಬೇರೊಂದು ವ್ಯಾಖ್ಯಾನಕೃತಿ. (ಕರ್ತೃ ಗೊತ್ತಿಲ್ಲ) ಶ್ರೀವರ್ಧದೇವನ ಚೂಡಾಮಣಿ ವ್ಯಾಖ್ಯಾನವಲ್ಲದ ಕೃತಿ. ೨. ಷಡ್ಬಂಡಾಗಮ – ಕಷಾಯಷಾಹುಡಹಳಿಗೆ ಬರೆದ ಚೂಡಾಮಣಿ ಹೆಸರಿನ ವ್ಯಾಖ್ಯಾನ ಮತ್ತು ತತ್ಪಾರ್ಥ ಸೂತ್ರಕ್ಕೆ ಬರೆದ ಚೂಡಾಮಣಿ ಹೆಸರಿನ ವ್ಯಾಖ್ಯಾನಗಳ ಭಾಷೆ ಕನ್ನಡವೆಂಬುದು ಖಚಿತ. ಆದರೆ ಶ್ರೀವರ್ಧದೇವಕೃತ ಚೂಡಾಮಣಿ ಕಾವ್ಯದ ಭಾಷೆ ಸಂಸ್ಕೃತ – ಪ್ರಾಕೃತ ಇಲ್ಲವೇ ಕನ್ನಡ ಎಂದು ಹೇಳಬಹುದು” ಎಂದಿದ್ದಾರೆ.

ಕ್ರಿ.ಶ. ೬೦೦ರಲ್ಲಿದ್ದ ದುರ್ವಿನೀತನು ವ್ಯಾಖ್ಯಾನಕಾರನಾಗಿದ್ದಂತೆ ತೋರುತ್ತದೆ. ಇದಕ್ಕೆ ಪುರಾವೆಗಳಾಗಿ ಕೆಲವು ತಾಮ್ರ ಶಾಸನಗಳಲ್ಲಿ “ಶಬ್ದಾವತಾರಕಾರ” “ದೇವಭಾರತೀ ನಿಬದ್ಧ ಬೃಹತ್ಕಥಃ” “ಕಿರಾತಾರ್ಜುನೀಯ ಪಂಚದಶಸ್ವರ್ಗ ಟೀಕಾಕಾರ” ಎಂಬ ವಿಶೇಷಣಗಳನ್ನು ಗಮನಿಸಿದರೆ ಭಾರವೀಕೃತ ಕಿರಾರ್ಜುನೀಯದ ೧೫ನೆಯ ಸ್ವರ್ಗಕ್ಕೆ ಈತ ಟೀಕೆಯನ್ನು ಬರೆದಿರುವುದಾಗಿ ತಿಳಿದುಬರುತ್ತದೆ.

ಕ್ರಿ.ಶ. ೧೦೬೭ರಲ್ಲಿದ್ದ ದಿವಾಕರಣಂದಿಯು ತತ್ತಾರ್ಥಸೂತ್ರಕ್ಕೆ ಕನ್ನಡ ವೃತ್ತಿಯನ್ನು ಬರೆದಿರುವುದಾಗಿ ನಗರದ ೫೭ನೇ ಶಾಸನದ ಈ ಪದ್ಯದಿಂದ ತಿಳಿದುಬರುತ್ತದೆ. (ಎ.ಕ.VIII ನಗರ, ೫೭ ಹುಮ್ಮಚ)

            ಜಡರುಂ ಬಾಳಕರುಂ ಬುಧಪ್ರಕರಮುಂ ತತ್ತ್ವಾರ್ಥಮಂ ಕಲ್ತಘಂ
            ಕಿಡೆ ಸಮ್ಯಕ್ತ್ವಮನೆಯ್ದಿ ಸಪ್ತ ಪರಮಸ್ಥಾನಾಪ್ತಿಯಂ ನಿಶ್ಚಯಂ |
            ಪೆಡೆಯಲ್ ಮಾಡಿದರೊಪ್ಪೆ ಯಾ ದಿವಾಕರರ್ ತತ್ವಾರ್ಥಸೂತ್ರಕ್ಕೆ
            ನ್ನಡದಿಂ ವೃತ್ತಿಯನೆಲ್ಲಿಗಂ ನೆಗರ್ವೆನಂ ಸಿದ್ಧಾಂತ ರತ್ನಾಕರರ್ ||

ಎಂದು ಕನ್ನಡ ವೃತ್ತಿಯನ್ನು ಬರೆಯುವಲ್ಲಿ ಕಾರಣವನ್ನು ಕೊಡಲಾಗಿದೆ. ಸೂಳ್ತೆ ಬಸ್ತಿಯ ಶಾಸನದ ಭಾಗದಲ್ಲಿಯೂ “ವಸ್ತು ಸ್ವರೂಪ ನಿರೂಪಣಾ ಪ್ರವೀಣರುಂ” ಎಂಬ ವಾಕ್ಯವು ಇವರ ವೃತ್ತಿಯನ್ನು ನೆನಪಿಸುತ್ತದೆ. ದಿವಾಕರಣದಿಂದ ತನ್ನ ಕನ್ನಡವೃತ್ತಿಯನ್ನು

            ನತ್ಪಾ ಜಿನೇಶ್ವರಂ ವೀರಂ ವಕ್ಪ್ಯೇ ಕರ್ಣಾಟ ಭಾಷಯಾ |
            ತತ್ವಾರ್ಥ ಸೂತ್ರ ಸೂತ್ರಾರ್ಥ ಮಂದ ಬುದ್ಧ್ಯನು ರೋಧತಃ ||

ಎಂದು ಸಂಸ್ಕೃತ ಶ್ಲೋಕದಿಂದ ಆರಂಭಿಸಿದ್ದಾನೆ. ವೃತ್ತಿಯ ಕಡೆಯಲ್ಲಿ “ಇದು ಸಕಲಾಗಮ ಸಂಪನ್ನ ಶ್ರೀ ಮಚ್ಚಂದ್ರಕೀರ್ತಿ ಭಟ್ಟಾರಕ ಪದ್ಮನಂದಿ ಸಿದ್ಧಾಂತಿದೇವ ಶ್ರೀಪಾದ ಪ್ರಸಾದಾಸಾದಿತ ಸಮಸ್ತ ಸಿದ್ಧಾಂತಾಮೃತ ಪಾರಾವಾರ ಶ್ರೀಮದ್ದಿವಾಕರಣಂದಿ ಭಟ್ಟಾರಕ ಮುನೀಂದ್ರನ್ ವಿರಚಿತ ತತ್ವಾರ್ಥಸೂತ್ರಾನುಗತ ಕರ್ಣಾಟಕ ಲಘುವೃತ್ತಿಯೋಳ್” ಎಂದಿರುವುದರಿಂದ ಸಂಕ್ಷಿಪ್ತವಾಗಿ ಬರೆದ ವ್ಯಾಖ್ಯಾನಗಳಿಗೆ ಲಘುವೃತ್ತಿಯೆಂದು ಕರೆದಂತಿದೆ.

ಪ್ರಾಭೃತತ್ರಯ ವ್ಯಾಖ್ಯಾನದ ಕರ್ತೃ ಬಾಲಚಂದ್ರ ಕ್ರಿ.ಶ. ೧೧೪೮ರಲ್ಲಿದ್ದ ಮೇಘ ಚಂದ್ರನೆಂಬ ಆಚಾರ್ಯನು ಪೂಜ್ಯಪಾದ ‘ಸಮಾಧಿಶತಕ’ಕ್ಕೆ ಕನ್ನಡ ವ್ಯಾಖ್ಯಾನವನ್ನು ಬರೆದಿದ್ದಾನೆ. ಈ ವ್ಯಾಖ್ಯಾನವನ್ನು “ವಿಕಸ ಯಶೋನಿಧಿ ಪಂಪನ ಸುತಂಗೆ ತಿಳಿವಂತು ಪೊಚ್ಚ ಪೊಸಗನ್ನಡದಿಂ” ಬರೆದಂತೆ ಹೇಳಿಕೊಂಡಿದ್ದಾನೆ. ಚಾವುಂಡರಾಯ ತನ್ನ ಗುರು ನೇಮಿಚಂದ್ರರಿಂದ ರಚಿತವಾದ ಗೊಮ್ಮಟಸಾರಕ್ಕೆ ಮೀರಮಾರ್ತಾಂಡ ಎಂಬ ಕನ್ನಡ ವೃತ್ತಿಯನ್ನು ಬರೆದಂತೆ ಕಂಡುಬರುತ್ತದೆ. ಕ್ರಿ.ಶ. ೧೧೭೦ರಲ್ಲಿ ಉಮಾಸ್ವಾತಿಯ ತತ್ವಾರ್ಥ ಸೂತ್ರಕ್ಕೆ ಬಾಲಚಂದ್ರ ಕನ್ನಡದಲ್ಲಿ ವ್ಯಾಖ್ಯಾನ ಬರೆದಿದ್ದಾನೆ. “ತತ್ತ್ವರತ್ನದೀಪಿಕಾ” ಎಂಬ ಹೆಸರಿನ ಈ ಕೃತಿಯಲ್ಲಿ ತಾತ್ಪರ್ಯವೃತ್ತಿಯನ್ನು ಕುಮುದಚಂದ್ರ ಭಟ್ಟಾರಕನ ಪ್ರತಿಬೋಧನಾರ್ಥವಾಗಿ ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ಕುಮುದುಚಂದ್ರ ಬೇರೆಯಾರು ಅಲ್ಲ ಕುಮುದೇಂದ್ರ ರಾಮಾಯಣದ ಕರ್ತೃ. ಈತನಿಗೆ ವಾದಿಕುಮುದಚಂದ್ರನೆಂಬ ಬಿರುದಿದ್ದು. ‘ಜಿನಸಂಹಿತೆ’ ಎಂಬ ಹೆಸರಿನಿಂದ ಪ್ರತಿಷ್ಠಾಕಲ್ಪಕ್ಕೆ ಕನ್ನಡ ವ್ಯಾಖ್ಯಾನವನ್ನು ಬರೆದಿದ್ದಾನೆ. ಇದಕ್ಕೆ ‘ಪೂಜಾಸಾರ ಸಮುಚ್ಚಯ’ ವೆಂಬ ಮತ್ತೊಂದು ಹೆಸರಿದೆ. ವಾದಿಕುಮುದಚಂದ್ರನ ಗುರುವು ಮಾಘಣಂದಿ ಎಂಬುದನ್ನು ಈಗಾಗಲೇ ತಿಳಿಸಿದೆ. ಈ ಮಾಘಣಂದಿಯ ಬರೆದ ‘ಪ್ರತಿಷ್ಠಾಕಲ್ಪ’ವೊಂದಿದ್ದು ಬಹುಶಃ ಗುರುವಿನ ‘ಪ್ರತಿಷ್ಠಾಕಲ್ಪ’ಕ್ಕೆ ‘ಪ್ರತಿಷ್ಠಾಕಲ್ಪ ಟಿಪ್ಪಣ’ ಬರೆದಿರುವ ಸಾಧ್ಯತೆಯಿದೆ. ಕಾರಣ ವ್ಯಾಖ್ಯಾನದ ಆರಂಭದಲ್ಲಿ

ಶೀಮಾಘಣಂದಿ ಸಿದ್ಧಾಂತ ಚಕ್ರವರ್ತಿ ತನೂಭವಃ |
ಕುಮುದೇಂದು ರಹಂ ವಚ್ಮಿ | ಪ್ರತಿಷ್ಠಾಕಲ್ಪ ಟಿಪ್ಪಣಂ ||

ಎಂಬ ಶ್ಲೋಕವಿದ್ದು ಅಂತ್ಯದಲ್ಲಿ “ಇತಿ ಶ್ರೀ ಮಾಘಣಂದಿ ಸಿದ್ಧಾಂತ ಚಕ್ರವರ್ತಿ ಸುತ ಚತುರ್ವಿಧ ಪಾಂಡಿತ್ಯ ಚಕ್ರವರ್ತಿ ಶ್ರೀ ವಾದಿಕುಮುದಚಂದ್ರ ಪಂಡಿತದೇವ ವಿರಚಿತೇ ಪ್ರತಿಷ್ಠಾಕಲ್ಪ ಟಿಪ್ಪಣೇ” ಎಂಬ ಗದ್ಯವಿದೆ.

“ಈ ಪ್ರತಿಷ್ಠಾಕಲ್ಪದಲ್ಲಿ ಜೈನ ಸಂಪ್ರದಾಯದ ವಿಗ್ರಹ ಪ್ರತಿಷ್ಠಾಪನೆಯ ವಿಧಿವಿಧಾನಗಳನ್ನು ಹೇಳಲಾಗಿದೆ. ಜೈನ ಮಂದಿರಕ್ಕೆ ಯೋಗ್ಯ ನಿವೇಶನವನ್ನು ಆಯ್ಕೆ ಮಾಡುವುದರಿಂದ ಹಿಡಿದು ವಿಗ್ರಹಪ್ರತಿಷ್ಠಾಪನೆ, ಪೂಜಾ ವಿಧಾನಗಳವರೆಗೆ ಅನುಸರಿಸಬೇಕಾದ ಎಲ್ಲ ಕ್ರಮಗಳನ್ನೂ ಇಲ್ಲಿ ವಿವರಿಸಲಾಗಿದೆ. ಪೂಜಾಫಲ ಪ್ರತಿಪಾದನ, ತ್ರೈವರ್ಣೀಕಾಚಾರ, ಸಕಲೀಕರಣ, ಧ್ವಜಾರೋಹಣ ಘೋಷಣಬಲಿ, ಅಂಕುರಾರ್ಪಣ, ಹೋಮ, ವೇದಿಕಾ ವಿಧಾನ” ಮೊದಲಾದವುಗಳನ್ನು ತಿಳಿಸುವ ಶಾಸ್ತ್ರಸಮುಚ್ಚಯ ಕೃತಿಯಾಗಿದೆ.

ಕ್ರಿ.ಶ. ೧೧೫೦ರಲ್ಲಿ ಚಾವುಂಡರಾಯನ ಲೋಕೋಪಕಾರಕ್ಕೆ ಕನ್ನಡ ವ್ಯಾಖ್ಯಾನವೊಂದು ಇರುವುದಾಗಿ ಕವಿಚಿರಿತೆಕಾರರಾದ ಡಾ. ಆರ್. ನರಸಿಂಹಾಚಾರ್ (ಕರ್ಣಾಟಕ ಕವಿಚರಿತೆ ಭಾಗ – ೧, ಪು.೧೮೭) ತಿಳಿಸುತ್ತಾರೆ. ಕ್ರಿ.ಶ. ೧೧೫೩ರ ವೀರಣಂದಿ ಎಂಬ ವ್ಯಾಖ್ಯಾನಕಾರ ತನ್ನದೇ ಕೃತಿಯಾದ ಆಚಾರಸಾರಕ್ಕೆ ಕನ್ನಡ ವ್ಯಾಖ್ಯಾನ ಬರೆದುದಾಗಿ ಹೀಗೆ ಹೇಳಿಕೊಂಡಿದ್ದಾನೆ : “ಸ್ವಸ್ತಿಶ್ರೀ ಮನ್ಮೇಘಚಂದ್ರತ್ರೈವಿದ್ಯದೇವರ ಶ್ರೀಪಾದ ಪ್ರಸಾದಾಸಾದಿತಾತ್ಮಪ್ರಭಾವ ಸಮಸ್ತ ವಿದ್ಯಾಪ್ರಭಾವ ಸಕಲ ದಿಗ್ವರ್ತಿಕೀರ್ತಿ ಶ್ರೀಮದ್ವೀರಣಂದಿಸಿದ್ಧಾಂತ ಚಕ್ರವರ್ತಿಗಳ್ ಶಕವರ್ಷ ೧೦೭೬ ಶ್ರೀ ಮುಖನಾಮ ಸಂವತ್ಸರದ ಜೇಷ್ಠ ಶುಕ್ಲ ೧ ಸೋಮವಾರದೊಂದು ತಾವು ಮಾಡಿದಾಚಾರಸಾರಕ್ಕೆ ಕರ್ನಾಟಕ ವೃತ್ತಿಯಂ ಮಾಡಿದಪರ್” (ಇಂಡಿಯನ್ ಎಂಟಿಕ್ವರಿ XLI ೮೮)

ಉಮಾಸ್ವಾತಿಯ ತತ್ವಾರ್ಥ ಸೂತ್ರಕ್ಕೆ ಶ್ವೇತಾಂಬರ ದಿಗಂಬರ ಎರಡೂ ಪರಂಪರೆಯಲ್ಲಿ ಅನೇಕ ವ್ಯಾಖ್ಯಾನಗಳು ಬಂದಿವೆ. ಇಲ್ಲಿ ‘ತತ್ತ್ವರತ್ನ ಪ್ರದೀಪಿಕೆ’ ಎಂಬ ತಾತ್ಪರ್ಯ ವೃತ್ತಿಯನ್ನು ಬರೆದ ಬಾಳಚಂದ್ರನಿಗೆ (ಕ್ರಿ.ಶ. ೧೧೭೧) ಆಧ್ಯಾತ್ಮ ಬಾಳಚಂದ್ರನೆಂಬ ವಿಶೇಷಣವಿರುವುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಈತನು ನಯಕೀರ್ತಿ ಸಿದ್ಧಾಂತ ಚಕ್ರವರ್ತಿಯ ಶಿಷ್ಯ, ಸಮಕಾಲೀನ ಜೈನಸಮಾಜದಲ್ಲಿ ಈತನಿಗಿದ್ದ ಅಪಾರ ಗೌರವಗಳನ್ನು ಶ್ರವಣಬೆಳಗೊಳದ ಶಾಸನಗಳು ಬಣ್ಣಿಸುತ್ತವೆ. ಬಾಳಚಂದ್ರನಿಂದ ಕುಂದಕುಂದರ ಪ್ರವಚನಸಾರ, ಪಂಚಾಸ್ತಿಕಾಯ, ಸಮಯಾಸಾರಗಳಿಗೆ ಕ್ರಮವಾಗಿ ‘ಪ್ರವಚನಸಾರ ಫಾಭೃತ ತಾತ್ಪರ್ಯ ವೃತ್ತಿ’, ‘ಪಂಚಾಸ್ತಿಕಾಯ ಫಾಭೃತಶಾಸ್ತ್ರ ತಾತ್ಪರಾರ್ಥ ವೃತ್ತಿ’ ಹಾಗೂ ‘ಸಮಯಾಸಾರ ತಾತ್ಪರ್ಯವೃತ್ತಿ’ ಹೆಸರಿನ ವೃತ್ತಿಗಳನ್ನು ಬರೆದು ಪ್ರಾಭೃತತ್ರಯ ವ್ಯಾಖ್ಯಾನಕಾರರೆನಿಸಿದ್ದಾನೆ. ತಾನು ರಚಿಸಿದ ವೃತ್ತಿಗಳ ಕುರಿತು ಹೀಗೆ ಪ್ರಸ್ತಾಪಿಸಿದ್ದಾನೆ.

“ಇದು ಸಮಸ್ತ ಸೈದ್ಧಾಂತಿಕ ಚಕ್ರವರ್ತಿ ಶ್ರೀನಯಕೀರ್ತಿ ದೇವಾನಂದ ವಿನಯ ಜನಾನಂದನ ನಿಜರುಚಿ ಸಾಗರನಂದಿ ಪರಮಾತ್ಮ ದೇವರ ಸೇವಾಸಾಧಿತಾತ್ಮ ಸ್ವಭಾವ ನಿತ್ಯಾನಂದ ಬಾಳಚಂದ್ರದೇವ ವಿರಚಿತ “ಸಮಯಸಾರ ಪ್ರಾಭೃತ ಸೂತ್ರಾನುಗತ ತಾತ್ಪರ್ಯ ವೃತ್ತಿ” ಎಂಬ ಸಮಯಸಾರ ಪ್ರಾಭೃತ ವ್ಯಾಖ್ಯಾನ ಹೇಳಿಕೆಯಿಂದ ಮತ್ತು

            ಸುಖಕರ ರತ್ನತ್ರಯ ಸಾ
            ದಕ ನಿತ್ಯಾನಮ್ದ ಕುಂದಕುಂದಾಚಾರ್ಯ ||
            ಪ್ರಕಟೀಕೃತ ಸತ್ಪ್ರಾಭೃತ
            ಕೆಕಂ ಕರ್ಣಾಟಕವೃತ್ತಿಯಂ ವಿರಚಿಸುವೆಂ ||

ಎಂಬಂತಹ ಪಂಚಾಸ್ತಿಕಾಯ ಪ್ರಾಭೃತ ವೃತ್ತಿಯ ಹೇಳಿಕೆಯಿಂದ ಹಾಗೂ

            ಭುವನಾರಾಧ್ಯ ತಪಶ್ರ್ಯಿ |
            ಧವ ನಿರ್ಮದ ಪದ್ಮನಂದಿಮುನಿರಾಜ ಕೃತ ||
            ಪ್ರವಚನಸಾರದ ತಾತ್ಪ |
            ರ್ಯವೃತ್ತಿಯಂ ಚಿನ್ಮಯದಿಂ ವಿರಚಿಸುವೆಂ ||

ಎಂಬಂತಹ ಪ್ರವಚಸಾರ ಪ್ರಾಭೃತ ತಾತ್ಪರ್ಯ ಕೃತಿಗಳ ಹೇಳಿಕೆಯಿಂದ ಸಮಯಸಾರ ಪ್ರಾಭೃತ, ಪಂಚಾಸ್ತಿಕಾಯಪ್ರಾಭೃತ ಹಾಗೂ ಪ್ರವಚನಸಾರಪ್ರಾಭೃತಗಳೆಂಬ ಪ್ರಾಭೃತತ್ರಯಗಳಿಗೆ ವ್ಯಾಖ್ಯಾನ ಬರೆದಿರುವುದು ತಿಳಿದುಬರುತ್ತದೆ.

ಕ್ರಿ.ಶ. ೧೧೯೦ರಲ್ಲಿ ರಾಜಾದಿತ್ಯ ರಚಿಸಿದ ವ್ಯವಹಾರಗಣಿತ ಪದ್ಯರೂಪದ ಸೂತ್ರಗಳ ಜೊತೆಗೆ ಟೀಕೆಯನ್ನು ಒಳಗೊಂಡ ಕೃತಿಯಾಗಿದೆ. ಗಣಿತಶಾಸ್ತ್ರಜ್ಞನಾದ ಈತನಿಂದ ‘ಜೈನಗಣಿತ ಟೀಕೋದಾಹರಣ’ ರಚನೆಯಾಗಿದೆ. ಕ್ರಿ.ಶ. ೧೨೦೦ರಲ್ಲಿದ್ದ ಶುಭಚಂದ್ರನು “ಕಾರ್ತಿಕೇಯಾನುಪ್ರೇಕ್ಷೆ” ಎಂಬ ಟೀಕಾಗ್ರಂಥವನ್ನು ರಚಿಸಿದ್ದಾನೆ.

ಕ್ರಿ.ಶ. ೧೨೬೫ರಲ್ಲಿದ್ದ ಮೂಲಸಂಘ ಬಲತ್ಕಾರಗಣದ ಕುಮುದಚಂದ್ರನ ಶಿಷ್ಯ ಮಾಘಣಂದಿ ಶಾಸ್ತ್ರಸಮುಚ್ಚ ಹಾಗೂ ಪದಾರ್ಥಸಾರಗಳಿಗೆ ಟೀಕು ಬರೆದಿದ್ದಾನೆ. ಈ ಕೃತಿಯಿಲ್ಲದೆ ಸಿದ್ಧಾಂತ ಸಾರ ಮತ್ತು ಶ್ರಾವಕಾಚಾರ ಕೃತಿಗಳನ್ನು ಈತನೇ ರಚಿಸಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ತನ್ನ ಗುರುಪರಂಪರೆಯನ್ನು ಹೀಗೆ ಹೇಳಿದ್ದಾನೆ.

“…..ಜಿನಚಂದ್ರನ ಶಿಷ್ಯ ವರ್ಧಮಾನ, ಶಿಷ್ಯ ಶ್ರೀಧರ, ಶಿಷ್ಯ ವಾಸುಪೂಜ್ಯ, ಶಿಷ್ಯ ಉದಯಚಂದ್ರ, ಶಿಷ್ಯ ಕುಮುದಚಂದ್ರ, ಶಿಷ್ಯ ಮಾಘಣಂದಿ” ಎಂಬುದಾಗಿಯೂ ಈತನ ವ್ಯಕ್ತಿತ್ವವನ್ನು ಗುರುವಾದ ಕುಮುದಚಂದ್ರರು ‘ಸಿದ್ಧಾಂತತ್ರಯ ಚಕ್ರಶ್ವೇರಂ ಅವನತ ಹೊಯ್ಸಳ ರಾಜ ಮಕುಟಮಣಿಗಣ ಕಿರಣಂ’ ಎಂದು ಹೊಗಳಿದ್ದಾರೆ. ಕ್ರಿ.ಶ. ೧೨೮೬ರ ಶ್ರವಣ ಬೆಳಗೊಳದ ೩೩೪ನೆಯ ಮತ್ತು ಬೆಣ್ಣೆಗುಡ್ಡದ ಶಾಸನಗಳು ಈತನಿಂದ ರಚಿತವಾದ ಸಿದ್ಧಾಂತಸಾರ, ಶ್ರಾವಕಾಚಾರ, ಪದಾರ್ಥಸಾರ, ಶಾಸ್ತ್ರಸಾರಗಳೆಂಬ ನಾಲ್ಕು ಕೃತಿಗಳಿಂದಾಗಿ ‘ಅಭಿನವಸಾರಚತುಷ್ಟಾಯ’ ಎಂದು ಬಣ್ಣಿಸಿವೆ. ವೀರನರಸಿಂಹನಿಂದ ಕ್ರಿ.ಶ. ೧೨೬೫ರಲ್ಲಿ ಕಲುಕಣಿ ನಾಡಿನ ೧೪ ಉಪಗ್ರಾಮಗಳನ್ನು ದತ್ತಿಯಾಗಿ ಪಡೆಯುತ್ತಾನೆ.

ಜೈನಸಾಸ್ತ್ರಸಾರವನ್ನೆಲ್ಲ ಶಾಸ್ತ್ರಸಾರ ಸಮುಚ್ಚಯದಲ್ಲಿ ನಿರೂಪಿಸಿದ ಮಾಘಣಂದಿಯ ಈ ಕೃತಿಗೆ ಮಹತ್ವದ ಸ್ಥಾನವಿದೆ. ಈ ಗ್ರಂಥ ಪ್ರಥಮಾನುಯೋಗ, ಕರುಣಾನುಯೋಗ, ಚರುಣಾನುಯೋಗ ಮತ್ತು ದ್ರವ್ಯಾನುಯೋಗ ಎಂದು ನಾಲ್ಕು ಅಧ್ಯಾಯಗಳನ್ನು ಒಳಗೊಂಡಿದೆ. ಇದಕ್ಕೆ ಚತುರಾನುಯೋಗ ಎಂಬ ಮತ್ತೊಂದು ಹೆಸರಿನಿಂದ ಕರೆದಿರಬಹುದು ಎಂಬುದಕ್ಕೆ ದ್ರವ್ಯಾನುಯೋಗದ ವೃತ್ತಿಯ ಕೊನೆಯಲ್ಲಿ ಹೀಗೆ ತಿಳಿಸುತ್ತಾನೆ.

ಇದು ಪರಮಾಗಮಮಾಧ್ಯಾತ್ಮ ವೇದಿಗಳುಂ ನಿಜಾತ್ಮೋತ್ಥ ಸುಖ ಸಂವಾದಿಗಳುಂ ಶ್ರೀಕುಮುದಚಂದ್ರಭಟ್ಟಾರಕ ಪ್ರಿಯ ಶಿಷ್ಯರುಂ ಚತುರನುಯೋಗ ಕುಶಲರುಂ, ಸಿದ್ಧಾಂತಾಭಿವರ್ಧನ ಸುಧಾಕರರುಂ ಅಪ್ಪ ಶ್ರೀಮಾಘನಂದಿ ಸಿದ್ಧಾಂತದೇವರಿಂ ವಿರಚಿಸಲುಪಟ್ಟ ಚತುರಾನುಯೋಗಮೆಂಬ ೨ನೆಯ ಪೆಸರುಳ್ಳ ಶಾಸ್ತ್ರಸಾರ ಸಮುಚ್ಚಯದ ೪ನೆಯ ದ್ರವ್ಯಾನುಯೋಗದ ಕರ್ನಾಟಕವೃತ್ತಿ ಸಮಾಪ್ತಂ”

“ಶಾಸ್ತ್ರಸಾರಸಮುಚ್ಚಯದ ಪ್ರಥಮಾನುಯೋಗದಲ್ಲಿ ೨೨ ಸೂತ್ರಗಳಿದ್ದು ಕಾಲಗಳು, ಮನುಗಳು, ಚತುರ್ವಿಂಶತಿ ತೀರ್ಥಕರರು ಮೊದಲಾದ ವಿವರಣೆಯಿದೆ. ಕರುಣಾನುಯೋಗದಲ್ಲಿ ೧೫ ಸೂತ್ರಗಳಿದ್ದು, ಅಧೋಲೋಕ, ಮಧ್ಯಲೋಕ, ಪಂಚಮಂದರಗಿರಿಗಳು ಮುಂತಾದವುಗಳು ಸ್ವರೂಪವನ್ನು ಕುರಿತು ವಿವರಿಸಲಾಗಿದೆ. ಚರಣಾನುಯೋಗ ೭೦ ಸೂತ್ರಗಳನ್ನು ಒಳಗೊಂಡಿದ್ದು ಸಮ್ಯಕ್ತ್ವ. ಶ್ರಾವಕಾಚಾರ, ದ್ವಾದಶತಪಸ್ಸು, ಋದ್ಧಿಗಳು, ಆಚಾರ್ಯರ ಲಕ್ಷಣ ಇತ್ಯಾದಿಗಳ ವಿವರಣೆಯಿದೆ. ಕೊನೆಯ ದ್ರವ್ಯಾನುಯೋಗದಲ್ಲಿ ೬೬ ಸುತ್ರಗಳಿದ್ದು ಷಡ್ದ್ರವ್ಯ, ಪಂಚಾಸ್ತಿಕಾಯ, ಸಪ್ತತತ್ತ್ವ, ಚತುರ್ವಿಧ ಧಾನ್ಯಗಳ ಕುರಿತ ವಿಚಾರಗಳಿವೆ. ಹೀಗೆ ಒಟ್ಟು ೧೭೩ ಸೂತ್ರಗಳನ್ನೊಳಗೊಂಡ ಶಾಸ್ತ್ರಸಾರ ಸಮುಚ್ಛಯದಲ್ಲಿ ಮೊದಲು ಸೂತ್ರಗಳನ್ನು ತಿಳಿಸಿ ನಂತರ ವ್ಯಾಖ್ಯಾನಿಸಲಾಗಿದೆ. ವ್ಯಾಖ್ಯಾನದ ನಂತರ ಅದಕ್ಕೆ ಅಗತ್ಯವೆನಿಸುವ ವಿವರಣೆಯನ್ನು ನೀಡಿದೆ. ಈ ವಿವರಣೆಗೆ ಪೂರ್ವಾಚಾರ್ಯರ ಪ್ರಾಕೃತ ಸಂಸ್ಕೃತ ಗಾಹೆಗಳನ್ನೂ ಕನ್ನಡದ ಕಂದವೃತ್ತಗಳನ್ನೂ ಬಳಸಲಾಗಿದೆ.

ಶಾಸ್ತ್ರಸಾರ ಸಮುಚ್ಚಯದ ಪ್ರತಿ ಅಧ್ಯಾಯದ ಆರಂಭದಲ್ಲಿಯೂ

            ಸುರನರಕಿನ್ನರನುತನಂ
            ಪರಮಶ್ರೀ ವೀರನಾಥನಂ ನೆನದೊಲವಿಂ
            ವರಭವ್ಯತತಿಗೆ ಪೇಳ್ವೇಂ
            ನಿರಪಮ ಪ್ರಥಮಾನುಯೋಗಮಂ ಕನ್ನಡದಿಂ || ಎಂದಿದೆ.

ಶಾಸ್ತ್ರಸಾರದ ಮಹತ್ವವನ್ನು ಕುರಿತು ಹೇಳುತ್ತಾ

            ತೂರ್ಯಾಧ್ಯಯನ ಸಂಪನ್ನೇ ಶಾಸ್ತ್ರಸಾರಸಮುಚ್ಛಯೇ
            ಪಠಿತೇತ್ರೋಪವಾಸಾರ್ಥಂ ಫಲಂ ಸ್ಯಾನ್ಮುನಿಭಾಷಿತಂ ||
            ಚತುರಧ್ಯಾಯ ಸಂಶದ್ಧೇ ಶಾಸ್ತ್ರಸಾರಸಮುಚ್ಛಯೇ
            ಪಠಿತೇನಂತ ಸೌಖ್ಯಂ ಸ್ಯಾದ್ಫಾಷಿತಂ ಮುನಿಪುಂಗವೈಃ ||

ಎಂದು ಈ ಕೃತಿಯನ್ನು ಓದಿದವರಿಗೆ ಒದಗುವ ಫಲಪ್ರಾಪ್ತಿಯನ್ನು ವಿವರಿಸುತ್ತಾನೆ. ಈ ‘ಶಾಸ್ತ್ರಸಮುಚ್ಚಯ’ವೆಂಬ ಶಾಸ್ತ್ರವನ್ನು ಮಹಾವೀರ ಗಣಧರರ ಗುರುಪರಂಪರಾ ಕ್ರಮದಿಂದ ಬಂದು ಪ್ರಾಕೃತ ಸಂಸ್ಕೃತ ಭೇದದಿಂದ ಅನೇಕ ವಿಧವಾಗಿರುವುದನ್ನು ಕರ್ನಾಟಕದ ಜನರು ತಿಳಿದುಕೊಳ್ಳುವುದಕ್ಕಾಗಿ ಜಡಮತಿಗಳನ್ನು ಕುರಿತು ಸಂಧಿ, ಸಮಾಸ ಕ್ರಿಯಾಕಾರಕ, ವಿಶೇಷ ವಿಶೇಷಣ ವಾಕ್ಯಪರಿಸಮಾಪ್ತಿ, ಪುನರುತ್ತ್ಯಾದಿಯಾಗಿದ್ದ ದೋಷಗಳನ್ನು ವಿಚಾರ ಮಾಡದೆ….. ಭೇದಾಭೇಧ ರತ್ನತ್ರಯ ಭಾವನಾಪ್ರಿಯರೂ, ನಿರ್ಮತ್ಸರರೂ ಬಹುಶ್ರುತ ಜ್ಞಾನಿಗಳಾದವರು ಆದ ಭವ್ಯರು ಈ ಗ್ರಂಥವನ್ನು ಅಧ್ಯಯನ ಮಾಡಬೇಕೆಂದು ಅಪೇಕ್ಷಿಸುತ್ತಾನೆ. ಕೆಳವರ್ಗದವರು ಪೂಜಿಸುವ ಸ್ಥಳೀಯ ದೈವಗಳೂ, ಶಿಷ್ಟವರ್ಗದ ಪೌರಾಣಿಕ ದೇವತೆಗಳ ಅಸ್ಥಿತ್ವವನ್ನು ಪ್ರಶ್ನಿಸುವಲ್ಲಿ, ದಶಾವತಾರಗಳನ್ನು ಛೇಡಿಸುವಲ್ಲಿ “ಮತ್ತಜ್ಞಾನಿಗಳಿಟ್ಟ ಮರಂಗಳನೊಟ್ಟಿಸಿದ ಕಲ್ಲುಗಳುಮಂ ನೆಟ್ಟ ಕಲ್ಲುಗಳುಮಂ ದೈವಮೆಂದವರ್ಕೊಂಡು ಪೆಸರನಿಟ್ಟು ಕೊಂಡಾಡಿ….” ಎಂದು ಅನ್ಯಧರ್ಮಗಳನ್ನು ದೂಷಿಸುವಲ್ಲಿ ಆ ಕಾಲದ ಧಾರ್ಮಿಕ ಏರುಪೇರುಗಳು, ತನ್ನವರು ಇತರ ಧರ್ಮಗಳ ಆಡಂಬರಕ್ಕೆ ಆಕರ್ಷಿತರಾದರೆಂಬ ಕಳವಳ ಇವನ ಕೃತಿಯಲ್ಲಿ ಕಂಡುಬರುತ್ತದೆ.

ಮಾಘಣಂದಿಯ ಮತ್ತೊಂದು ಬೃಹತ್ ಗ್ರಂಥ ಪದಾರ್ಥಸಾರವು. ಇಲ್ಲಿ ಪದಾರ್ಥವೆಂದರೆ ಜ್ಞಾನದಿಂ ಪರಿಚ್ಛೇದಿಸಲ್ಪಡುವ ವಸ್ತುವಿಂಗೆ ಪದಾರ್ಥವೆಂದು ಹೆಸರು ಜೈನರಲಿ ಜೀವ, ಅಜೀವ, ಅಸ್ರವ, ಪುಣ್ಯ, ಪಾಪ, ಬಂಧ, ಸಂದರ, ನಿರ್ಜರಾ, ಮೋಕ್ಷಗಳೆಂಬ ನವಪದಾರ್ಥಗಳು. ಆದರೆ ಈ ಟೀಕಾಕೃತಿ ಇವಿಷ್ಟಕ್ಕೆ ಮೀಸಲಾಗಿರದೆ ಸಪ್ತತತ್ತ್ವ, ಷಡ್ದ್ರವ್ಯ, ಪಂಚಾಸ್ತಿಕಾಯ, ನಯ, ನಿಕ್ಷೇಪ, ಪ್ರಮಾಣ, ಸಪ್ತಭಂಗಿ, ಪಂಚಭಾವ, ರತ್ನತ್ರಯ, ಗುಣಸ್ಥಾನಗಳನ್ನು ಕುರಿತಾದ ವಿವೇಚನೆಯನ್ನು ಮಾಡಲಾಗಿದೆ. ೫೧೫ ಕನ್ನಡ, ೪೯೦ ಸಂಸ್ಕೃತ ಮತ್ತು ೬೪೭ ಪ್ರಾಕೃತ ಪದ್ಯಗಳಲ್ಲದೆ ಗದ್ಯಭಾಗದಿಂದ ಕಾವ್ಯ ವಿಸ್ತಾರಗೊಂಡಿದೆ.

ಕ್ರಿ.ಶ. ೧೨೭೩ರಲ್ಲಿದ್ದ ಮತ್ತೊಬ್ಬ ಬಾಳಚಂದ್ರ ಪಂಡಿತನಿಗೆ ನೇಮಿಚಂದ್ರ ಭಟ್ಟಾರಕರು ದೀಕ್ಷಾ ಗುರುಗಳಾಗಿದ್ದು, ಶ್ರುತ ಗುರುಗಳು ಅಭಯಚಂದ್ರಸಿದ್ಧಾಂತ ಚಕ್ರವರ್ತಿಗಳೆಂದು ಬಸ್ತಿಹಳ್ಳಿಯ ೧೩೧ನೆಯ ಶಾಸನದಿಂದ ತಿಳಿದುಬರುತ್ತದೆ. ಈ ಬಾಳಚಂದ್ರ ಪಂಡಿತರು ‘ಪಂಚಪರಮೇಷ್ಠಿಗಳ ಬೊಲ್ಲಿ’ಯ ಜೊತೆಗೆ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳ ಪ್ರಾಕೃತ ಗ್ರಂಥ ‘ದ್ರವ್ಯಸಂಗ್ರಹ’ಕ್ಕೆ “ಸೂತ್ರಾನುಗತ ಕರ್ಣಾಟ ಲಘುವೃತ್ತಿ” ಎಂಬ ವೃತ್ತಿಯನ್ನು ಕನ್ನಡದಲ್ಲಿ ಬರೆದಿದ್ದಾನೆ.

            ಪಸರಿಸೆ ನಿಜಕೀರ್ತಿ ದ್ರ
            ವ್ಯಸಂಗ್ರಹದ ವೃತ್ತಿಯಂ ಸುಲಕ್ಷಣಯುತಮಂ ||
            ಮಿಸುಗುವ ಕನ್ನಡದಿಂ ನಿ
            ಮಿರ್ಸಿದಂ ಭವ್ಯಕ ಹಿತಮನಾರ್ಯಸ್ತುತಮಂ ||

“ಇದು ಸಕಲಾಗಮ ಸಂಯಮ ಶ್ರೀಮನ್ನೇಮಿಚಂದ್ರಭಟ್ಟಾಕಾಭಯಚಂದ್ರ ಸಿದ್ಧಾಂತದೇವ ಶ್ರೀಪಾದ ಪದ್ಮ ಪ್ರಸಾದಾಸಾದಿತ ಸಕಲಾಗಮ ಸಂಯಮಸಂಪನ್ನ ಶ್ರೀ ಬಾಳಚಂದ್ರಪಂಡಿತದೇವಾಗಮ ವಿರುದ್ಧಮಾಗದಂತು ದ್ರವ್ಯಸಂಗ್ರಹ ಸೂತ್ರಾನುಗತ ಕರ್ಣಾಟಕ ಲಘುವೃತ್ತಿಯಂ ವಿರಚಿಸಿದರ್” ಎಂದು ಹೇಳಿಕೊಂಡಿದ್ದಾನೆ. ಬಹುಶಃ ಕವಿಚರಿತೆಕಾರರು ಸು.೧೩೫೦ರಲ್ಲಿ “ದ್ರವ್ಯಸಂಗ್ರಹಾಗಮ ಟೀಕೆ” ಎಂಬ ಕೃತಿಯ ರಚನೆಯಾಗಿರುವುದನ್ನು ತಿಳಿಸುತ್ತಾರೆ. ಇದು ನೇಮಿಚಂದ್ರ ಸಿದ್ಧಾಂತಿಯ ಕೃತಿ. ಆದರೆ ಟೀಕಾಕಾರನ ಹೆಸರಾಗಲೀ, ಕಾಲದೇಶಗಳಿಗೆ ಸಂಬಂಧಿಸಿದ ವಿಚಾರಗಳಾಗಲೀ ಉಕ್ತವಾಗಿಲ್ಲ. ಆದರೆ ಟೀಕುವಿನ ಉದ್ಘೃತ ಭಾಗ ಹೀಗಿದೆ.

“ಶ್ರೀಮನ್ ನೇಮಿಚಂದ್ರ ಸಿದ್ಧಾಂತ ವೇದಿಗಳ್ ಸ್ವಾತ್ಮಾನುಭವಜನಿತಾನಶ್ವರಾನಂತ ಸುಖಸುಧಾರಸ ಪಿತಾಸಿತರಪ್ಪ ಭವ್ಯಜನಂಗಳ್ಗೆ ತತ್ಸುಖಪ್ರಾಪ್ತಿ ಕಾರಣ ಭೂತ, ಪಂಚಾಸ್ತಿಕಾಯ ಷಡ್ದ್ರವ್ಯ ಸಪ್ತತತ್ತ್ವ ನವಪದಾರ್ಥ ಸಂಸಾರ ಮೋಕ್ಷ ಕಾರಣ ಪರಿಜ್ಞಾನಾರ್ಥಮಾಗಿ ಸಕಲಾಗಮಂಗಳ ಸಾರಮಂ ಸಂಗ್ರಹಿಸಿ ದ್ರವ್ಯ ಸಂಗ್ರಮಂ ಪೇಳುತ್ತಾ…” ಎಂಬ ಉಲ್ಲೇಖದಿಂದ ಮೇಲೆ ಹೇಳಿದ ಬಾಳಚಂದ್ರ ಬರೆದ ದ್ರವ್ಯ ಸಂಗ್ರಹ ಸೂತ್ರಾನುಗತ ಕರ್ನಾಟಕ ಲಘುವೃತ್ತಿಯೇ ದ್ರವ್ಯ ಸಂಗ್ರಹಾಗಮ ಟೀಕೆಯಾಗಿರಬೇಕು. ಬೇಲೂರಿನ ೧೩೧ ಹಾಗೂ ೧೩೨ನೆಯ ಶಾಸನಗಳು ಈತನನ್ನು ಸ್ತುತಿ ಮಾಡಿರುವುದನ್ನು ಗಮನಿಸಿದರೆ ಪಂಡಿತನಾದ ಈತನಿಂದ ಜೈನಸಿದ್ಧಾಂತ ಕೃತಿಗಳಿಗೆ ವ್ಯಾಖ್ಯಾನದ ಕಾರ್ಯ ವ್ಯಾಪಕವಾಗಿ ನಡೆದಿರುವುದು ತಿಳಿದುಬರುತ್ತದೆ.

ಕ್ರಿ.ಶ. ೧೦೪೨ರ ನಾಗವರ್ಮನ ಅಭಿದಾನ ವಸ್ತುಕೋಶವು ವಿಶೇಷವಾಗಿ ಅಭಿದಾನ ರತ್ನಮಾಲೆಯ ಆಧಾರದಿಂದಲೇ ಬರೆಯಲ್ಪಟ್ಟಿರುವುದು. ಅಲ್ಲದೆ ಅಭಿದಾನವೆಂಬ ನಾಮೈಕ ದೇಶ ಸಾಮ್ಯವೂ ಈ ಎರಡರಲ್ಲಿಯೂ ಕಂಡುಬರುತ್ತದೆ. ಅಭಿದಾನರತ್ನ ಮಾಲೆಯ ಟೀಕೆಯಲ್ಲಿ ದೊರಕುವ ಹಲವು ದೇಶ್ಯ ಶಬ್ದಗಳು ಅಭಿದಾನ ವಸ್ತುಕೋಶದಲ್ಲಿ ದೊರೆಯುವುವು. ಅಭಿದಾನ ವಸ್ತುಕೋಶವು ಈ ಹಲಾಯುಧ ಟೀಕೆಯೂ ಆರಾ ಲೈಬ್ರರಿಯಲ್ಲಿರುವ ಒಂದೇ ಪ್ರತಿಯಲ್ಲಿ ಬರೆಯಲ್ಪಟ್ಟಿರುವುವು. ಈ ಕಾರಣಗಳಿಂದ ಈ ಎರಡನೇ ನಾಗವರ್ಮನೇ ಅಭಿದಾನ ರತ್ನಮಾಲಾ ಟೀಕೆಯನ್ನು ಬರೆದಿರುವನೆಂದು ಊಹಿಸಲು ಅವಕಾಶ ಉಂಟು (ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು ವಿ.ವಿ., ಸಂಪುಟ ೩, ಪು.೭೩೬). ಇದರಿಂದ ಕವಿ ನಾಗವರ್ಮ ‍ಟೀಕಾಕಾರನು ಆಗುತ್ತಾನೆ.

ಕ್ರಿ.ಶ. ೧೩೦೦ರಲ್ಲಿದ್ದ ನಾಚಿರಾಜನು ಅಮರಕೋಶ ಇಲ್ಲವೇ ನಾಮಲಿಂಗನುಶಾಸನ ಎಂಬುದಕ್ಕೆ ನಾಚಿರಾಜೀಯ ಹೆಸರಿನ ಕನ್ನಡ ವ್ಯಾಖ್ಯಾನವನ್ನು ರಚಿಸಿದ್ದಾನೆ. ಶ್ರವಣ ಬೆಳ್ಗೊಳದ ಭಂಡಾರದಲ್ಲಿರುವ ಅಮರಕೋಶ ಪ್ರತಿಯ ಕೊನೆಯಲ್ಲಿ “ಶಕ ೧೩೧೮ನೆಯ ಯುವದಲ್ಲಿ (ಕ್ರಿ.ಶ. ೧೩೯೫)ರಾಯರಾಜಗುರು ಮಂಡಲಾಚಾರ್ಯ ರಾಯವಾದಿಪಿತಾಮಹಾ ಸಕಲ ವಿದ್ವಜ್ಜನ ಚಕ್ರವರ್ತಿ ನಿಖಿಳಶಾಸ್ತ್ರವ್ಯಾಖ್ಯಾನ ವಿಶಾರದ ಶ್ರಿಮಲಧಾರಿ ನಾಗಚಂದ್ರ ಭಟ್ಟಾರಕರ ಶಿಷ್ಯರಪ್ಪ ಶ್ರೀ ಧರ್ಮಭೂಷಣ ಶ್ರೀ ಅಭಯಚಂದ್ರ ಸೈದ್ಧಾಂತಿಕ ದೇವರು ಬರೆದ ಶ್ರೀ ಪಂಚಮಪರಮೇಷ್ಠಿಗಳ ಸ್ವರೂಪ ಯೋಗಾಮೃತ, ಅಮರಸಿಂಹದ ವೃತ್ತಿ, ನಾಚಿರಾಜ, ಕೌಮಾರವ್ಯಾಕರಣ” ಎಂಬ ಉಲ್ಲೇಖದಿಂದ ತಿಳಿದುಬರುತ್ತದೆ. ಇದೇ ಕಾಲದ ಪದ್ಮಪ್ರಭಕವಿ ವಿಂಶತೀಪ್ರರೂಪಣಿಯೆಂಬ ಟೀಕೆ ಬರೆದಿರುವುದು ಇಂಡಿಯನ್ ಎಂಟಿಕ್ವರಿಯಿಂದ ತಿಳಿದುಬರುತ್ತದೆ. ಮಲಧಾರಿ ಲಲಿತಕೀರ್ತಿಯ ಶಿಷ್ಯನಾದ ಕಲ್ಯಾಣಕೀರ್ತಿಯ ಸಲುವಾಗಿ ಕ್ರಿ.ಶ. ೧೩೦೦ರಲ್ಲಿ ಪ್ರಭಾಚಂದ್ರಚಾರಿತ್ರಸಾರದ ಟೀಕೆ ಬರೆದರೆ, ಕನಕಚಂದ್ರನೆಂಬ ಕವಿ ಕುಂದಕುಂದಾಚಾರ್ಯರ “ಮೋಕ್ಷಪ್ರಾಭೃತ” ಇಲ್ಲವೇ “ಸಹಜಾತ ಪ್ರಕಾಶ” ಕೃತಿಗೆ ವ್ಯಾಖ್ಯಾನ ರಚಿಸಿದ್ದಾನೆ.

ಅಭಯಸೂರಿ ಸಿದ್ಧಾಂತ ಚಕ್ರವರ್ತಿಯ ಶಿಷ್ಯನಾದ ಕೇಶವವರ್ಣಿ (ಕ್ರಿ.ಶ. ೧೩೫೯) ಧರ್ಮಭೂಷಣ ಭಟ್ಟಾರಕರ ಆಜ್ಞೆಯ ಮೇರಿಗೆ ಗೊಮ್ಮಟಸಾರ ಕೃತಿಗೆ ಕನ್ನಡ ವೃತ್ತಿಯನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾನೆ.

            ಪೊಣದಿ ಧೂರ್ತ ಜನೋಪಸರ್ಗಮನಿಶಂ ಬೆಂಬತ್ತೆಬೆಂಬೀವಿದಾ
            ನೊಣರ್ದೆ ಗೊಮ್ಮಟಸಾರ ವೃತ್ತಿಯನಿದಂ ಕರ್ಣಾಟಕ ವಾಕ್ಯಗಳಿಂ
            ಪ್ರಣುತರ್ ಧೀಧನರುಂ ಬಹುಶ್ರುತರಿದಂ ತಿರ್ದಿ ಬುಧರ್ ಧರ್ಮಭೂ
            ಷಣಭಟ್ಟಾರಕದೇವರಾಜ್ಞೆಯಿನಿದಂ ಸಂಪೂರ್ಣಮಂ ಮಾಡಿದೆಂ ||

ಈ ವೃತ್ತಿಯಿಂದ ಗೊಮ್ಮಟಸಾರ ಜೀವಕಾಂಡ, ಕರ್ಮಕಾಂಡಗಳೆಂಬ ಎರಡು ಭಾಗಗಳಿದ್ದು ಕೇಶವವರ್ಣಿ ಜೀವಕಾಂಡಕ್ಕೆ ಮಾತ್ರ ಟೀಕು ಬರೆದಿರುವುದು “ಶ್ರೀಮದಭಯಸೂರಿ ಸಿದ್ಧಾಂತಚಕ್ರವರ್ತಿ ಶ್ರೀಪಾದ ಪಂಕಜಜೋರಂಜಿತ ಲಲಾಟ ಪಟ್ಟಂಶ್ರೀಕೇಶವ ವಿರಚಿತ ಗೊಮ್ಮಟಸಾರ ಕರ್ಣಾಟವೃತ್ತಿ ಜೀವನತತ್ತ್ವ ಪ್ರದೀಪಿಕೆಯೋಳ್” ಎಂಬ ಮಾತಿನಿಂದ ಮನವರಿಕೆಯಾಗುತ್ತದೆ. ಈತನಿಂದ ೧೫ ಪರಿಚ್ಛೇದಗಳ ಅಮಿತಗತಿ ಶ್ರಾವಕಾಚಾರ ವೃತ್ತಿ, ಸಾರತ್ರಯ ಮತ್ತು ಜಿನೇಂದ್ರಮಾಲೆಗಳೆಂಬ ವ್ಯಾಖ್ಯಾನ ಕೃತಿಗಳು ರಚನೆಯಾಗಿವೆ. ಗೊಮ್ಮಟಸಾರದ ವೃತ್ತಿಗೆ ‘ಜೀವತತ್ತ್ವ ಪ್ರದೀಪಿಕೆ’ ಎಂದು ಕರೆದಿದ್ದಾನೆ. ಈ ಕನ್ನಡದಲ್ಲಿಯ ಅನುವಾದಿಸಿದ್ದಾನೆ. ನೇಮಿಚಂದ್ರನ ಈ ಸಂಸ್ಕೃತ ವೃತ್ತಿಗೂ ‘ಜೀವತತ್ತ್ವ ಪ್ರದೀಪಿಕಾ’ ಎಂದು ಕರೆಯಲಾಗಿದೆ. “ಶ್ರೀ ಮದಭಯಚಂದ್ರ ಸೈದ್ಧಾಂತ ಚಕ್ರವರ್ತಿ ವಿಹಿತ ವ್ಯಾಖ್ಯಾನಂ ವಿಶ್ರಾಂತ ಮಿತಿ ಕರ್ನಾಟಕವೃತ್ತ್ಯನುರೂಪ ಮಯಮನು ವದತಿ” ಎಂಬುದಾಗಿ ಕವಿ ಹೇಳಿರುವುದರಿಂದ ಅಭಯಚಂದ್ರರ ವ್ಯಾಖ್ಯೆಯ ನಂತರವೇ ಕೆಶವವರ್ಣಿ ಕನ್ನಡ ವೃತ್ತಿಯನ್ನು ಅನುವಾದಿಸಿರಬಹುದು. ಈ ನೇಮಿಚಂದ್ರನ ಕಾಲ ಕ್ರಿ.ಶ. ೧೬ನೆಯ ಶತಮಾನವಾಗಿದ್ದು, ಸಾಳುವ ಮನೆತನದ ಮಲ್ಲಿರಾಯನೆಂಬ ದೊರೆಯ ಸಮಕಾಲೀನನೆಂಬುದಾಗಿ ಎ.ಎನ್. ಉಪಾಧ್ಯೆ ಅಭಿಪ್ರಾಯಪಟ್ಟಿದ್ದಾರೆ. ಇವನೇ ಬರೆದ ಅಮಿತಗತಿಯ ಶ್ರಾವಕಾಚಾರದ ಕರ್ನಾಟಕವೃತ್ತಿ ೧೫ ಪರಿಚ್ಛೇದಗಳಲ್ಲಿರುವಂತೆ ತಿಳಿದುಬರುತ್ತದೆ. ಇವನು ಸಾರತ್ರಯಕ್ಕೂ ಕನ್ನಡ ವ್ಯಾಖ್ಯಾನಗಳನ್ನು ಬರೆದಿರುವಂತೆ ದೇವಚಂದ್ರನ ರಾಜಾವಳೀ ಕಥೆಯಿಂದ ತಿಳಿದುಬರುತ್ತದೆ. ಮಂಗರಸನು ಇವನನ್ನು ಸಾರತ್ರಯವೇದಿ ಎಂದು ಕರೆದಿರುವುದು, ಮತ್ತು ಸ್ವತಃ ಕವಿಯೂ ಸಾರತ್ರಯವೇದಿ ಎಂದು ಹೇಳಿಕೊಂಡಿರುವುದನ್ನು ನೋಡಿದರೆ ಇವನು ಸಾರತ್ರಯಕ್ಕೆ ವ್ಯಾಖ್ಯಾನ ಬರೆದಿರುವ ಸಾಧ್ಯತೆಯಿದೆ.

ಕ್ರಿ.ಶ. ೧೫೬೫ರಲ್ಲಿದ್ದ ಶ್ರುತಮುನಿಯು ಸಜ್ಜನ ಚಿತ್ತವಲ್ಲಭಕ್ಕೆ ಕನ್ನಡ ವ್ಯಾಖ್ಯಾನ ಬರೆದಿರುವ ಸಂಗತಿ ಮದ್ರಾಸ್ ಪ್ರಾಚ್ಯಸಂಶೋಧನಾಲಯದ ಕ್ರಿ.ಶ. ೧೪೩೯ರ ಅವಧಿಯ ಹಸ್ತಪ್ರತಿಯ ಕೊನೆಯಲ್ಲಿಯ “ಕರ್ನಾಟಕವ್ಯಾಖ್ಯಾ ಚಂದ್ರಕೀರ್ತಿಯತಿನ ಶಿಷ್ಯೇಣ ಪುಣ್ಯಾತ್ಮನಾ” “ಅಭಿನವ ಶ್ರುತ ಮುನಿವಾ ಕೃತಾ” ಎಂಬ ಹೇಳಿಕೆಗಳಿಂದ ತಿಳಿದುಬರುತ್ತದೆ. ಕ್ರಿ.ಶ. ೧೫೦೦ರ ಯಶಕೀರ್ತಿಯು ಧರ್ಮಶರ್ಮಾಭ್ಯುದಯಕ್ಕೆ ‘ಸಂದೇಹಧ್ವಾಂತ ದೀಪಿಕೆ’ ಹೆಸರಿನ ಟೀಕೆಯನ್ನು ಬರೆದಿದ್ದಾನೆ. ಕ್ರಿ.ಶ. ೧೫೦೦ರಲ್ಲಿ ಸಂಸ್ಕೃತ ಶ್ಲೋಕಗಳುಳ್ಳ ವೈದ್ಯಶಾಸ್ತ್ರ ಕೃತಿಗೆ ಕನ್ನಡಟೀಕೆ ಬರೆಯಲಾಗಿದೆಯೆಂದೂ ಕವಿಯ ಹೆಸರು ತಿಳಿದುಬಂದಿಲ್ಲವೆಂದೂ ಕವಿಚರಿತೆಕಾರರು ಅಭಿಪ್ರಾಯಪಡುತ್ತಾರೆ. (ಕರ್ನಾಟಕ ಕವಿಚರಿತೆ ಸಂಪುಟ ೨) ಪ್ರಾಯಶಃ ಶಾಸ್ತ್ರಕೃತಿಗಳ ನಿರ್ಮಾಪಕರು, ಟೀಕಾಕಾರರು ಜೈನರೇ ಆಗಿರುವ ಕಾರಣ ಈ ಕೃತಿ ಜೈನ ವ್ಯಾಖ್ಯಾನಕಾರನದಾಗಿರಬಹುದೆಂದು ಊಹಿಸಬಹುದು. ಅದೇರೀತಿ ಈ ಮತದವರು ರಚಿಸಿರಬಹುದಾದ ಸಿದ್ಧಸ್ತ್ರೋತ್ರಟೀಕು ಹಾಗೂ ಪಂಚಕಲ್ಯಾಣಸ್ತ್ರೋತ್ರ ಕೃತಿಗಳು ಲಭ್ಯವಿವೆ. ಕ್ರಿ.ಶ. ೧೭೫೫ರಲ್ಲಿದ್ದ ಶಾಂತಿಕೀರ್ತಿಯು ದೇವಸೇನನ ಆರಾಧನಾಸಾರಕ್ಕೆ ಟೀಕು ಬರೆದಿದ್ದಾನೆ. ಪಂಚಪರಮೇಷ್ಠಿ ಕೃತಿಗೆ ಹಳೇಬೀಡಿನ ಅನಂತರಾಜಯ್ಯನಿಂದ ವ್ಯಾಖ್ಯಾನ ರಚನೆಯಾಗಿದೆ.

ಹೀಗೆ ಕ್ರಿ.ಶ. ಸುಮಾರು ೪೦೦ ರಿಂದ ೧೭೫೫ರವರೆಗೆ ಜೈನ ಕೃತಿಗಳಿಗೆ ಕನ್ನಡದಲ್ಲಿ ವ್ಯಾಖ್ಯಾನ ಬರೆದಿರುವುದು ತಿಳಿದುಬರುತ್ತದೆ. ಇಂದ್ರನಂದಿಯ ಶ್ರುತಾವತಾರದಿಂದ ಶ್ಯಾಮಕುಂದಾಚಾರ್ಯ ಪ್ರಾಭೃತವನ್ನು ಕನ್ನಡದಲ್ಲಿ ಬರೆದನೆಂಬ ಅಭಿಪ್ರಾಯದಲ್ಲಿ ಇವನೊಬ್ಬ ಸುಪ್ರಸಿದ್ಧ ವ್ಯಾಖ್ಯಾನಕಾರನಾಗಿದ್ದನೆಂಬುದು ಗಮನಾರ್ಹವಾದ ಸಂಗತಿ. ಓವನಿಗೆ ಹಾಗೂ ಒನಕೆವಾಡು ರೂಪದಲ್ಲಿದ್ದ ಗಜಾಷ್ಟಕ (ಕ್ರಿ.ಶ. ೮೦೦)ವನ್ನು ಕರೇಣುಭೂಯತಿಗಳು ವ್ಯಾಖ್ಯಾನ ರೀತಿಯಲ್ಲಿ ಬರೆದ ಕಾರಣ ಇದು ವ್ಯಾಖ್ಯಾನ ಗ್ರಂಥವೆಂಬುದು ವಿದ್ವಾಂಸರ ನಿಲುವಾಗಿದೆ. ಆದರೆ ಈಗಿನಮಟ್ಟಿಗೆ ತುಂಬಲೂರಾಚಾರ್ಯರು ಅಥವಾ ಶ್ರೀ ವರ್ಧದೇವನಿಂದ ರಚಿತವಾದ ಚೂಡಾಮಣಿ ತತ್ತಾರ್ಥಶಾಸ್ತ್ರಕ್ಕೆ ಬರೆದ ಮೊದಲ ವ್ಯಾಖ್ಯಾನ ಗ್ರಂಥವೆಂದು ನಿರ್ಣಯಿಸಬಹುದಾಗಿದೆ. ಒಟ್ಟಾರೆ ಜೈನ ಟೀಕಾ ಸಾಹಿತ್ಯದ ವಸ್ತು – ಧೋರಣೆ ಕುರಿತು ಡಾ. ಬಿ.ಕೆ. ಖಡಬಡಿ (ಶ್ರಾವಕಾಚಾರ – ೨೦) ಅವರ ಈ ಕೆಳಗಿನ ಮಾತುಗಳು ಗಮನಾರ್ಹವಾಗಿವೆ.

My cursery scrutiny of the kannada prantiya tadapatriya grantha suchi drew my attention to some interesting tittles of menuscripts of the sarvakacara works preserved in the kannada script in the shatra bandara of the jaina mathas at mudabidari and karkala. The following are some of the tittles of manuscripts in sanskrit upasaka samakara of padmanandi daana shasana by vasupujya, sajjana chittavallabha by mallisena bhavyananda sastra by pandu bhupati etc. some of these are endowed with commentaries in kannada. Some are also found with the concerned stories added to them. The following are some of the tittles of manuscripts in the kannada language. Bhavyajana chinatabharana by abhaya chandra, daanasara by prabhachandra chikka sravakacara by unknown. Anuvruthi antaraya by unknown, prayachitta vidana by unknown etc.