ಭಾರತೀಯ ಸಾಹಿತ್ಯ ಮೀಮಾಂಸೆ, ಸಿದ್ಧಾಂತ ಹಾಗೂ ತತ್ತ್ವಗಳು ಶ್ಲೋಕ ಪ್ರಧಾನವಾದ ಸಂಸ್ಕೃತದಲ್ಲಿ, ಗಾಹೆ ಪ್ರಧಾನವಾದ ಪ್ರಾಕೃತದಲ್ಲಿ ರಚನೆಯಾಗಿವೆ. ಸೂತ್ರರೂಪದ ಇವು ಸಾಗರೋಪಾದಿಯ ವಿಷಯ ವಿಸ್ತಾರವನ್ನು ಕರಿಯಕನ್ನಡಿಯಲ್ಲಡಿಗಿಸಿ ಕೊಂಡಂತೆ ತಮ್ಮೊಡಲಲ್ಲಿ ಇಟ್ಟುಕೊಂಡಿವೆ. ಅವುಗಳ ಪ್ರಭಾವದಿಂದ ದೇಶಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯವೂ ದಾರ್ಶನಿಕ ಸಿದ್ಧಾಂತ ಪ್ರಧಾನವಾದ ಶಾಸ್ತ್ರೀಯ ಚೌಕಟ್ಟನ್ನು ಮೈಗೂಡಿಸಿಕೊಂಡು ರಚನೆಯಾಗಿದೆ. ಇಂತಹ ಪಂಡಿತಸಮ್ಮುಖ ಸಾಹಿತ್ಯ ಜನಸಮ್ಮುಖವಾಗಿ ಗುರುತಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಇವುಗಳಿಗೆ ಟೀಕು, ವ್ಯಾಖ್ಯಾನ, ಭಾಷ್ಯ, ವೃತ್ತಿಗಳು ಸೃಷ್ಟಿಯಾದವು. ಬಹುಮುಖ್ಯ ಸಂಗತಿಯೆಂದರೆ ಮೂಲಸಾಹಿತ್ಯದ ತಿರುಳನ್ನು ತಿಳಿಸಿಕೊಡುವ ಉದ್ದೇಶದಿಂದ ಟೀಕಾಸಾಹಿತ್ಯ ಸೃಷ್ಟಿಯಾಗಿದ್ದರೂ ಒಮ್ಮೊಮ್ಮೆ ಮೂಲಕ್ಕಿಂತಲೂ ಹೆಚ್ಚಿನದಾದ ಮರ್ಮಭೇದಕತೆಯನ್ನು ನಿರ್ಮಿಸುವ ಶಕ್ತಿ ಟೀಕಾಸಾಹಿತ್ಯಕ್ಕೆ – ಟೀಕಾಕಾರರಿಗೆ ಇರುತ್ತದೆ. ಈ ದೃಷ್ಟಿಯಿಂದ ಸ್ವತಂತ್ರ ಸಾಹಿತ್ಯ ಪ್ರಕಾರವಾಗಿ ಟೀಕಾಸಾಹಿತ್ಯ ರೂಪಗೊಂಡಿದೆ.

ಟೀಕು ಇಲ್ಲವೇ ವ್ಯಾಖ್ಯಾನ ಪದಾರ್ಥದ ನೆಲೆಯಲ್ಲಿ ಇಲ್ಲವೇ ತಾತ್ವಿಕಾರ್ಥದ ನೆಲೆಯಲ್ಲಿ ನಡೆಯುವ ಕ್ರಿಯೆ ಮಾತ್ರವಲ್ಲ; ಒಂದು ಸಾಹಿತ್ಯವನ್ನು ಪರಿಸರನಿಷ್ಠವಾಗಿ ವಿಶ್ಲೇಷಣೆಗೆ ಒಳಪಡಿಸುವ ಕಾರ್ಯವನ್ನು ಟೀಕಾಸಾಹಿತ್ಯ ಪೂರೈಯಿಸುತ್ತದೆ. ಕಲೆಗಾಗಿ ಕಲೆಯನ್ನು, ಸಾಹಿತ್ಯಕ್ಕಾಗಿ ಸಾಹಿತ್ಯವನ್ನು ಸೃಷ್ಟಿಸುವ, ಅಧ್ಯಯನ ಮಾಡುವ ಕಾಲವೊಂದಿತ್ತು. ಆದರೆ ಇಂದು ಕಲೆ, ಸಾಹಿತ್ಯ ಬದುಕಿಗಾಗಿ ಎಂಬ ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದೆ. “ಯಾವುದಾದರೂ ವ್ಯಕ್ತಿಗತ ಅಥವಾ ಕಾಲಖಂಡದ (period) ಸಾಹಿತ್ಯವನ್ನು ಕುರಿತ ವಿವೇಚನೆ ಅಥವಾ ವಿಮರ್ಶೆಯ ಹಿನ್ನೆಲೆಯಲ್ಲಿ ಎರಡು ಅಂಶಗಳು ಮುಖ್ಯ. ಒಂದು ಸಂವಹನ (Communication) ಮತ್ತೊಂದು ಮೌಲ್ಯ (Value). ಒಂದು ಅಭಿವ್ಯಕ್ತಿ ಮತ್ತೊಂದು ಅನುಭೂತಿ, ಒಂದು ದೇಹ ಮತ್ತೊಂದು ಆತ್ಮ. ಅಲಂಕಾರ, ರೀತಿ, ಗುಣ, ಛಂದಸ್ಸು, ಚಮತ್ಕಾರಗಳು ಬಾಹ್ಯ ಪರಿಕರಗಳು, ರಸ, ಅನುಭವ, ಅನುಭಾವ, ಆನಂದ ಮೊದಲಾದವು ಆಂತರಿಕ ಶೋಭೆಗಳು ಇವೆರಡರ ಸಾಹಿತ್ಯದಿಂದ ಶೇಷ್ಠ ಸಾಹಿತ್ಯ ನಿರ್ಮಾಣವಾಗುತ್ತದೆ. ಅನುಭವವಿಲ್ಲದ ಸಾಹಿತ್ಯ ಬಂಜೆಗೋವಿನ ಕೆಚ್ಚಲು. ಅದೇರೀತಿ ಅನುಭಾವವಿಲ್ಲದ ರಚನೆ ತಳವಿಲ್ಲದ ತೇಲುಬುಟ್ಟಿ. ಕಾವ್ಯ ಸತ್ಯಪ್ರಕಾಶದ ನಿದರ್ಶನವಾದರೆ; ಅನುಭಾವ ಅದರಲ್ಲಿಯ ದರ್ಶನವಾಗುತ್ತದೆ. ಆನಂದ ಅದು ಪ್ರಧಾನಗೈಯುವ ನೈಜಮೌಲ್ಯ (ಕೆಳದಿ ಸಂಸ್ಥಾನ : ಸಮಗ್ರ ಅಧ್ಯಯನ ಸಂ. ಡಾ. ಎಂ.ಎಂ.ಕಲಬುರ್ಗಿ, ಬಿ.ಎಸ್. ರಾಮಭಟ್ಟ, ಪು.೪೧೨) ಈ ಮೌಲ್ಯವನ್ನು ಬೆಲೆಕಟ್ಟುವ, ತೂಗಿನೋಡುವ, ಒರೆಹಚ್ಚುವ ಮಾನದಂಡವೇ ‘ಟೀಕಾಸಾಹಿತ್ಯ’.

ಟೀಕಾಸಾಹಿತ್ಯ ಶಬ್ದಾರ್ಥ – ಭಾವರ್ಥಗಳ ಸಾರಾಮೃತವಾಗಿದ್ದರೂ ಇದು ಶಾಸ್ತ್ರಸಮ್ಮತವಾದ ಪಾಂಡಿತ್ಯದ ಮನ್ನಣೆ ಪಡೆದಿದೆ. ಈ ಕಾರಣವಾಗಿ ಇದು ಲೋಕೋಪಯೋಗಿ. ಹೊರಗಿನ ವಿಷಯ ಜ್ಞಾನವನ್ನು ಪೃಥಕ್ಕರಣ ಮಾಡುತ್ತದೆ. ಹೀಗಾಗಿ ಕೇವಲ ಸಾಹಿತ್ಯ ಪರಿಧಿಗೆ ಸೀಮಿತವಾಗಿ ಟೀಕು ರಚನೆಯಾಗದೆ ಕ್ಷೇತ್ರಗಣಿತ, ವ್ಯವಹಾರಗಣಿತ, ಬೇಹಾರಗಣಿತ, ವೈದ್ಯಗ್ರಂಥಗಳು, ಅಷ್ಟೇ ಏಕೆ ಶಬ್ದಾರ್ಥ ತಿಳಿಸುವ ನಿಘಂಟುಗಳಿಗೂ ವ್ಯಾಖ್ಯಾನಗಳು ಸೃಷ್ಟಿಯಾಗಿರುವುದು ಈ ಸಾಹಿತ್ಯಕ್ಕಿರುವ ಮಹತ್ವ.

ಲಿಂಗಾಯುತ ಹಾಗೂ ಬ್ರಾಹ್ಮಣ ವ್ಯಾಖ್ಯಾನಕಾರರು ಹೆಚ್ಚಾಗಿ ದಾರ್ಶನಿಕ ಗ್ರಂಥಗಳಿಗೆ, ಶಾಸ್ತ್ರಸಾಹಿತ್ಯಕ್ಕೆ ಟೀಕು ಬರೆದರೆ, ಜೈನ ವ್ಯಾಖ್ಯಾನಕಾರರ ಟೀಕಾಕೃತಿಗಳು ವೈವಿಧ್ಯಮಯದಿಂದ ಕೂಡಿವೆ. ನಿದರ್ಶನಕ್ಕೆ ೧೧೯೦ರಲ್ಲಿದ್ದ ರಾಜಾಧಿತ್ಯನ ವ್ಯವಹಾರಗಣಿತ ಟೀಕಾಕೃತಿಯನ್ನು ಇಲ್ಲಿ ನೋಡಬಹುದು. ದಾಳಿಂಬ ಬೀಜವನ್ನರಿಯುವುದಕ್ಕೆ ಸೂತ್ರವೊಂದನ್ನು ಹೀಗೆ ಹೇಳುತ್ತಾನೆ.

            ಎಸವಿನಿರೆದೆತ್ತುನಯದಿಂ |
            ರಸಕೃತಿಯಿಂ ಬೀಜಮಕ್ಕುಮವು ದಾಳಿಂಬ ||
            ಕೈಸುಗು ಗುಣಿತ ಕ್ರಮದಿಂ |
            ವಸುಮತಿಗರುವಂತೆ ಪೇರಿಗಣಿತವಿಳಾಸ ||
            ದಾಳಿಂಬದ ಕಾಯ್ ೧ಕ್ಕೆ ಎಸಳ್ ೫ಕ್ಕೆ ಲಬ್ದ ಬೀಜ ೩೬೦

ಟೀಕು || ಎಸಳ್ ೫ನ್ನು ೨ರುಂ ಗುಣಿಸಿದೊಡೆ – ೧೦. ರಸಕೃತಿಯಿಂದ ವರ್ಗಗೊಳಲು ೩೬

            ಇದಂ ೧೦ರುಂ ಗುಣಿಸಲು ೩೬೦
            ಇಪ್ಪತ್ತು ಹೊನ್ನು ತೂಕ ದೊ
            ಳೊಪ್ಪಿರೆ ಹನ್ನೆರಡುವರೆಯ ಮೊಗಲ್ ಮತ್ತಂ
            ಒಪ್ಪಿರಲರುವತ್ತು ತೂಕಕೆ
            ತಪ್ಪದೆ ಹದಿಮೂರುವರೆಯ ಕರಗಿಸಲೇನೋ

ಟೀಕು || ಬಣ್ಣಗಳನ್ನು ಹಾಗವ ಮಾಡಿ ತಮ್ಮತಮ್ಮ ತೂಕದಿಂ ಗುಮಿಸಲ್ ಮೊದಲ ರಾಶಿಯ ಬಣ್ಣವನ್ನು ನಾಲ್ಕು (ಹಾಗಾದಿಂ) ಗುಣಿಸಿ ೨ ಹಾಗವನು ಕೂಡಿ ೫೦ ಅದನ್ನು ತೂಕ ೨೦ ರಿಂ ಗುಣಿಸಲು ೧೦೦೦ ಬಣ್ಣ ೧೩ ಹಾಗ ಮಾಡಿ ತೂಕ ೬೦ ಗುಣಿಸಿ ೩೨೪೦ ಎರಡು ರಾಶಿಯನ್ನು ಕೂಡೆ ೪೨೪೦ ಇದನ್ನು ಪ್ರತಿಯನಿಟ್ಟು ಎರಡು ರಾಶಿಯ ತೂಕವನು ಕೂಡಲು (೮೦) ಇದರಿಂ ಭಾಗಿಸಲು ೫೩ ಇದನು ಬಣ್ಣಕ್ಕೆ ನಾಲ್ಕು ಹಾಗವೆಂದು ಭಾಗಿಸಲು ಲಬ್ದಮುಕ್ಕುಂ

            ಪತಿಸತಿಯು ಮುನಿದು ಪೋಗಲ್
            ಸತತಂ ಗಾವುದವ ಸಪ್ತದಿವಸಾಂತರದಿಂ
            ಪತಿ ಗಾವುದರೆಯ ನನುದಿನ
            ಗತಿ ವಡೆಯಲ್ ಸತಿಯನೆಂದು ಪತಿಯೆಯ್ದುಗುಮೋ

ಟೀಕು || ದಿನ ೧೨ನೂ ಧ್ರುವಗತಿ ೫ರಿಂ ಗುಣಿಸಲ್ ೬೦ ಇದನು ಪ್ರತಿಯಿಟ್ಟು ಧ್ರವಗತಿ ೫ಲಿ ಆಕ್ಷೇಪಗತಿ ೮ ಕಳೆಯಲು ಶೇಷ ೩ ರಿಂ ಮನ್ನಿನ ೬೦ನೂ ಭಾಗಿಸಲು ಸಂಯೋಗ ದಿನವಕ್ಕುಂ. ಈ ದಿನವ ಆಕ್ಷೇಪಗತಿ ೮ ರಿಂ ಗುಣಿಸಲು ಸಮಾನ ಯೋಜನ ಮಕ್ಕುಂ ಹೀಗೆ ರಾಜಾದಿತ್ಯನು ಗಣಿತಶಾಸ್ತ್ರಕ್ಕೆ ಬರೆದ ಕೃತಿಗಳನ್ನು ಗಮನಿಸಿದರೆ ಜೈನ ಟೀಕಾ ಸಾಹಿತ್ಯದ ಮಹತ್ವದ ಹಿನ್ನೆಲೆಯಲ್ಲಿ ಟೀಕಾಕಾರನಿಗೆ ಅಗ್ರಸ್ಥಾನ ಸಲ್ಲುತ್ತದೆ.

ಈ ಮೇಲಿನ ಎರಡು ನಿದರ್ಶನಗಳನ್ನು ಗಮನಿಸಿದರೆ ಟೀಕಾಸಾಹಿತ್ಯ ಕೇವಲ ಅಲೌಕಿಕ ತತ್ತ್ವವಿವೇಚನೆಯನ್ನು ಬೋಧಿಸುವುದಿಲ್ಲ. ಲೋಕಜ್ಞಾನ ತಿಳಿಸುವ ಗಣಿತಶಾಸ್ತ್ರವನ್ನು ಶ್ರೀಸಾಮಾನ್ಯರಿಗೆ ಪರಿಚಯಿಸುತ್ತವೆ. ಜನಪದ ಒಗಟಿನ ರೂಪದ ಲೆಕ್ಕಗಳಂತೆ ಒಂದುಕಡೆ ಕಂಡಬಂದರೂ; ಅಧುನಿಕ ಗಣಿತಶಾಸ್ತ್ರದಲ್ಲಿರುವಂತೆ ಒಂದು ಸಮಸ್ಯೆ (problem) ಇದೆ. ಅದಕ್ಕೆ ಪರಿಹಾರ (Solve) ಇದೆ. ಇನ್ನೂ ರೋಮಾಂಚನವೆಂದರೆ ಪ್ರಾಚೀನ ಕರ್ಣಾಟಕದಲ್ಲಿ ಅಸ್ತಿತ್ವದಲ್ಲಿದ್ದ ಅಳತೆ ಮಾಪನಗಳನ್ನು ಪರಿಚಯಿಸುವ ಕ್ರಿ.ಶ. ೧೭೦೦ರ ತಿಮ್ಮರಸ ಕವಿಯ ಕ್ಷೇತ್ರಗಣಿತ. ಒಂದೊಂದು ದೇಶಕ್ಕೆ ಒಂದೊಂದು ಪ್ರಕಾರದ ಅಳತೆಯ ಗಳೆಗಳಿರುವುದಾಗಿ ತಿಳಿಸುತ್ತದೆ ಈ ಕೃತಿ. ಕರ್ನಾಟಕ ಶಾಸನಗಳಲ್ಲಿ ಕಂಡುಬರುವ, ಕೋಲು, ಗಳೆ, ಗಡಿಂಬ, ಗೇಣು ಇತ್ಯಾದಿ ಭೂಮಾಪನಗಳ ತೌಲನಿಕ ಅಧ್ಯಯನಕ್ಕೆ ಸ್ಪಷ್ಟತೆಯನ್ನು ನೀಡುತ್ತದೆ. ಉದಾಹರಣೆಗೆ

            ಅಂಗುಲಮುವತ್ತೆರಡುಂ
            ಸಂಗತಮಾಗೊಂದು ಹಸ್ತಹಸ್ತಗಳೆಂಟುಂ ||
            ಹಿಂಗದೆ ಗಳೆ ತಾನಕ್ಕುಂ
            ತುಂಗಭುಜಾ ಪೇಳೆನಲ್ಕೆ ಗಣಿತಕ್ರಮದಿಂ ||

ಟೀಕು || ಅಂಗುಲ ೩೨ ಒಂದು ಹಸ್ತ, ಅಂತಹ ಹಸ್ತ ೮ ಗಳೆಯೆಂದೆನಿಸುವುದು. ಇದು ಕ್ಷೇತ್ರಗಳನಳೆಯುವ ಶಾಸ್ತ್ರದ ಕಟ್ಟಳೆಯ ಗಳೆಯಕ್ಕುಂ. ಇವುಗಳಲ್ದೆ ಇನ್ನುಗಳೆಗಳುಂಟು.

ಇಲ್ಲೆಲ್ಲ ಟೀಕಾಕಾರರಿಗಿರಬೇಕಾದ ಗಣಿತಶಾಸ್ತ್ರ ಕ್ಷೇತ್ರಗಣಿತ ತಿಳುವಳಿಕೆಯನ್ನು ಗಮನಿಸಿದರೆ ಸಾವಿರಾರು ಶಾಸನಗಳು ಉಲ್ಲೇಖಿಸುವ ದಾನ – ದತ್ತಿ ಭೂವ್ಯಾಪ್ತಿಯನ್ನು ಲೆಕ್ಕಾಚಾರ ಮಾಡಲು ಸಹಕಾರಿಯಾಗುತ್ತವೆ; ಇಂತಹ ಟೀಕಾಗ್ರಂಥಗಳು.

ಸಮಕಾಲೀನ ಜೀವನನಾನುಭವ, ಲೋಕಾನುಭವವನ್ನು ವ್ಯಾಖ್ಯಾನ ಕೃತಿಗಳು ದೃಶ್ಯರೂಪಗಳಲ್ಲಿ ತೆರೆದಿಡುತ್ತವೆ. ಉದಾಹರಣೆಗೆ . “ಸೊಂಡಿಲು ಮುಂದಡೆ ಗಜವೇನು ಬಾತೇ? : ಸಿಂಹಳದ್ವೀಪದ ಆನೆಯ ಕೋರೆಗೆ ಕತ್ತಿಯನ್ನು ಕಟ್ಟಿ ಸೊಂಡಿಲಿಗೆ ಸರಪಳಿಯನ್ನು ಕೊಟ್ಟು ಅರಿಬಲಕ್ಕೆ ಯುದ್ಧಕ್ಕೆ ಬಿಟ್ಟಲ್ಲ ತನ್ನ ಬಲವನ್ನು ಬಿಟ್ಟು ಅರಿಯಬಲವನ್ನು ಸಂಹರಿಸುವಂಥ; ವಿಪ್ರರು ಸತ್ತಿದ್ದಲ್ಲಿ ಒಂಟಿ ಕಳ್ಳಿಯ ಬಡಿಗೆಯ ಮೇಲೆ ಕಟ್ಟಿಕೊಂಡು ಹಳ್ಳದ ಕೊರಕಲು ಇದ್ದಲ್ಲಿ ಹೊತ್ತುಕೊಂಡು ಹೋಗಿ ಕಿಚ್ಚನ್ನು ಒಟ್ಟಿ ಅದರೊಳಗೆ ಹಾಕಿ ಸುಟ್ಟು ಬಿಡುವರು; . ಬತ್ತಲೆಯಿಪ್ಪುದ : ತಟ್ಟನ್ನು ಉಟ್ಟುಕೊಂಡು ತಲೆಯನ್ನು ತರಿಸಿಕೊಂಡು ಹಸಿರುಗಿಡವನ್ನು ಬೊಗ್ಗಿಸಿ ಮಲಮೂತ್ರಂಗಳ ವಿಸರ್ಜನೆಯ ಮಾಡುತ್ತ ಹೊರಗೈಲಿ ಅನ್ನವನ್ನು ಭುಂಜಿಸುತ್ತ ದಿಗಂಬರದಲ್ಲಿ ವಿನೋದಿಸುವಂಥದನ್ನು; . ನಾಯಾಗಿ ಬೊಗಳುವುದು : ಕುತ್ತಿಗೆಗೆ ಹಗ್ಗವನ್ನು ಹಾಕಿ ಕೊರಳಿಗೆ ಕವಡೆಯನ್ನು ಕಟ್ಟಿಸಿ ಮರದ ದೋಣಿಯಲ್ಲಿ ಮಣ್ಣಪಿನ್ನೆಯಲ್ಲಿ ಅಂಬಲಿಯನ್ನು ಕುಡಿವುತ್ತ ನಾಯಾಗಿ ಬೊಗಳುವುದನ್ನು . ಕುದಿರೆಯಾಗಿ ಕಟ್ಟಿಸನೆ : ಲಾಯದಲ್ಲಿ ಕುದುರೆಯಾಗಿ ಕಟ್ಟಿಸಿ ಕುತ್ತಿಗೆಗೆ ಕಣ್ಣಿಯನ್ನು ಕಟ್ಟಿಸಿ ಹಿಂದಕ್ಕೆ ಎರಡು ಕಾಲುಗಳನ್ನು ಬಿಗಿದು ಕಟ್ಟಿಸಿ ತೊಗಲು ತೋಬರಿಯೊಳಗೆ ದಾಣಿಯನ್ನು ತಿನ್ನಿಸುತ್ತ ಇದು ಮೈಲಾರನ ಕುದುರೆಯೆಂದು ಚಬುಕು ಚಬುಕಿನಲಿ ಹೊಡೆಯಿಸದೆ ಬಿಟ್ಟಾನೆ? . ಟಂಬರ ಮೈಲಾರಂಗ : ಟಂಬರ ಕ್ಷೇತ್ರದಲ್ಲಿರುವ ಮಣ್ಣು ಮೈಲಾರನಿಗೆ. . ಮೇಳವಾಡುತ್ತಿದ್ದ ಕಾಣಾ ತ್ರೈಜಗದೊಳಗೆ : ಸ್ವರ್ಗ, ಮರ್ತ್ಯ ಪಾತದೊಳಗೆ ಮೇಳವಾಡುತ್ತಿರ್ದು…. . ತೋರಲು ಬಾರದು : ಒಬ್ಬಾನೊಬ್ಬ ಪುರುಷನು ರಣಮಂಡಲಕ್ಕೆ ಹೋಗಿ ಕಡಿದಾಡಿ ಮಡಿದಲ್ಲಿ ಅವರ ಸ್ತ್ರೀಯಳು ಎಣ್ಣೆ ಅರಿಷಿಣವನ್ನು ಹಚ್ಚಿಕೊಂಡು, ಹೂವನ್ನು ಮುದುಡಿಕೊಂಡು ಮನೆಮನೆಗೆ ಕೋರೂಟವನ್ನು ಉಂಬುತ್ತಾ ಇಪ್ಪತ್ತೇಳುದಿವಸ ಮಾಸ್ತಿಯಾಗಿ ಮೆರೆವಪರಿಯಂತರ ಪರಿಣಾಮವಾಗಿರುವುದು. ಕಡೆಯಲ್ಲಿ ಸತಿಕಲ್ಲ ಮೇಲೆನಿಂತುಕೊಂಡು ಕೈಯಲ್ಲಿ ನಿಂಬಿಹಣ್ಣನ್ನು ಹಿಡಿದುಕೊಂಡು ಕಿಚ್ಚಿನಲ್ಲಿ ಬಿದ್ದು ಪತಿವ್ರತೆಯರ ಭಾವದ ಪರೀಕ್ಷೆಯನ್ನು ಕಾಣಿಸಿಹೆನೆಂದರೆ ಅಶಕ್ಯವಾಗಿರ್ಪುದು” (ಬಸವಣ್ಣನವರ ಟೀಕಿನ ವಚನಗಳು, ಸಂಪುಟ – ೨, ಸಂ: ಡಾ. ಎಂ.ಎಂ. ಕಲಬುರ್ಗಿ, ಪು. xv) ಎನ್ನುವಲ್ಲಿ ಬಸವಣ್ಣನವರ ವಚನಗಳಿಗೆ ಟೀಕು ಬರೆದ ವ್ಯಾಖ್ಯಾನಕಾರನು ಸಾಂಸ್ಕೃತಿಕ ಹಬ್ಬ ಆಚರಣೆಗಳ ಮತ್ತು ಐತಿಹಾಸಿಕ ದಾಖಲೆಗಳಾಗಿ ನಿಂತಿರುವ ಮಾಸ್ತಿಕಲ್ಲುಗಳ ಹಿಂದಿರುವ ಬದುಕಿನ ಸತ್ಯವನ್ನು ಬಿಚ್ಚಿ ಹೇಳುವಲ್ಲಿ ಟೀಕಾಸಾಹಿತ್ಯದ ಬಹುಶಿಸ್ತ್ರೀಯ ಅಧ್ಯಯನ ವ್ಯಾಪ್ತಿಯನ್ನು ಮನದಟ್ಟಾಗಿಸುತ್ತಾನೆ.

ಒಂದು ಕಾಲದ ಜನರ ಮನೋವ್ಯಾಪಾರವನ್ನು ಚಿತ್ರಿಸುವ ವಚನಗೌ ಶರಣರಿಂದ ಸಾಕಷ್ಟು ರಚನೆಯಾಗಿವೆ. ಮೇಲುನೋಟಕ್ಕೆ ಸಾಮಾನ್ಯ ಓದುಗನಿಗೂ ಅವು ಅರ್ಥವಾಗುತ್ತವೆ. ಅಂತಹ ವಚನಗಳಿಗೆ ವ್ಯಾಖ್ಯಾನ ಬರೆಯುವುದರ ಮೂಲಕ ತಮ್ಮ ಕಾಲದ ನಂಬುಗೆ ಆಚಾರ ವಿಚಾರಗಳನ್ನು ಶುದ್ಧ ಜಾನಪದೀಯವಾದ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಉದಾಹರಣೆಗೆ ಬಸವಣ್ಣನವರ ಒಂದು ವಚನ.

            ಮಡಿಕೆ ದೈವ, ಮೊರ ದೈವ ಬೀದಿಯಕಲ್ಲು ದೈವ
            ಹಣಿಗೆ ದೈವ ಬಿಲ್ಲನಾರಿ ದೈವ ಕಾಣಿರೋ
            ಕೊಳಗ ದೈವ ಕೋಲು ದೈವ ಗಿಣಿಲು ದೈವ ಕಾಣಿರೋ
            ದೈವದೈವವೆಂದು ಕಾಲಿಡಲಿಂಬಿಲ್ಲ
            ದೈವನೊಬ್ಬನೇ ಕೂಡಲ ಸಂಗಮದೇವಾ |

ಟೀಕು || ಮಡಿಕೆ ದೈವ = ಭುವನಕೋಶದಲ್ಲಿ ಸಮಸ್ತ ದೈವವಾಗಿಪ್ಪುದು ಎಂಬಲ್ಲಿ, ಲೋಕದಲ್ಲಿ ಆತ್ಮರುಗಳು ಭಾಂಡಂಗಳಲ್ಲಿ ಪಾಕಪ್ರಯತ್ನಗ್ಂಗಳನ್ನು ಮಾಡಿ ನಿಮ್ಮಲ್ಲಿ ಹೊತ್ತು ಪರಿಯಂತರ ಅಡಿಗೆ ಮಾಡಿದೆವೆಂದು ಹೆಗಲು ತೊಳೆದು ಬೂದಿಯ ಕಟ್ಟನ್ನು ಬರೆದು ನಮ್ಮ ಕಾಲುತಗುಲಿದವು, ಕೈತಗುಲಿದವೆಂದು ನಮಸ್ಕರಿಸಿ ಒತ್ತಟ್ಟಿಗೆ ಮಡುಗುತ್ತಿಹರು. ಅದಲ್ಲದೆ ಐರಾನಿಗಡಿಗೆ, ಜಕ್ಕಣಿಯರಗಡಿಗೆ ಮೊದಲಾದವನ್ನು ದೇವರೆಂದು ಆರಾಧಿಸಿ ನಮಸ್ಕರಿಸುತ್ತಿಹರು.

ಮೊರ ದೈವ = ಹದಿನೆಂಟು ಧಾನ್ಯಂಗಳನ್ನು ಆರಾಧಿಸಿ ನಮಸ್ಕರಿಸುತ್ತಿಹರು. ಕೇರೋತನಕ ಕೇರಿ ಕಡೆಯಲ್ಲಿ ಇಷ್ಟುಹೊತ್ತು ತನಕ ಕುಟ್ಟಿಬೀಸಿ ಕೇರುವಾಗ ಕಾಲು ತಗುಲಿದವು, ಕೈತಗುಲಿದವೆಂದು ನಮಸ್ಕರಿಸಿ ದೇವರೆಂದು ಭಾವಿಸಿ ಒತ್ತಟ್ಟಿಗೆ ಮಡುಗುತ್ತಿಹರು.

ಬೀದಿಯಕಲ್ಲು ದೈವ = ಗ್ರಾಮದ ಮಧ್ಯದಲ್ಲಿರುವಂಥ ಕುರುಹುಗಳನ್ನು ಹತ್ತೆಂಟು ಕೊಡ ಉದಕವ ನೀಡಿ ಅದನ್ನು ದೇವರೆಂದಾರಾಧಿಸಿ ನಮಸ್ಕರಿಸುತ್ತಿಹರು.

ಹಣಿಗೆ ದೈವ = ಜಾಡದ ನೇಯ್ವಂಥ ಹಣಿಗೆಯನ್ನೂ ಕೆಚ್ಚೋತನಕ ಕೆಚ್ಚಿ ಕಡೆಯಲ್ಲಿ ಇಷ್ಟು ಹೊತ್ತು ಪರಿಯಂತರ ಕಾಲಲ್ಲಿ ಮೆಟ್ಟಿ ಉಗುಳಹಚ್ಚಿ ಹೊಳಚಿದೆವೆಯೆಂದು ಅದನ್ನು ದೇವರೆಂದು ಭಾವಿಸಿ ನಮಸ್ಕರಿಸುತ್ತಿಹರು.

ಬಿಲ್ಲನಾರಿ ದೈವ = ಕಿರಾತರುಗಳೇನಾದರೂ ಮಿಟ್ಟೆ ಅಂಬನ್ನು ಕಾಲಲ್ಲಿ ತುಳಿದು ಕೈಯಲಿ ಬಗ್ಗಿಸಿ ಹೆದೆಯನ್ನು ಹೇರಿಸಿ ನಮಸ್ಕಾರವನ್ನು ಮಾಡಿ ಕೈಯಲ್ಲಿ ಪಿಡಿದುಕೊಂಬುತ್ತಿಹರು.

ಕೊಳಗ ದೈವ = ಹದಿನೆಂಟು ಧಾನ್ಯಗಳನು ಅಳೆವಲ್ಲಿ ನಮ್ಮ ಕಾಲುತಗುಲಿದವು, ಕೈತಗುಲಿದವೆಂದು ನಮಸ್ಕರಿಸಿ ದೇವರೆಂದು ಭಾವಿಸುತ್ತಿಹರು.

ಕೋಲು ದೈವ ಗಿಣಿಲು ದೈವ = ಚರಂತಿ ದೇವರು, ಅತೀತದೆವರು, ಅರಾಧ್ಯದೇವರು ಮೊದಲಾದವರು ದಂಡಗಿಣಿಲು ಶಂಖವನ್ನು ಒಂದು ಗರ್ದುಗೆಯ ಮೇಲೆ ಮಡಗಿ ಅದಕ್ಕೂ ಪುತ್ರಪುಷ್ಪಾದಿಗಳಿಂದಾರಾಧಿಸಿ ಅದನ್ನು ದೇವರೆಂದು ಭಾವಿಸುತ್ತಿಹರು” (ಬಸವಣ್ಣನವರ ಟೀಕಿನ ವಚನಗಳು ಸಂ.೨, ಸಂ:ಡಾ. ಎಂ.ಎಂ.ಕಲಬುರ್ಗಿ ಪು.VI) ಇಂಥ ವಿವರಣಾರೂಪದ ಟೀಕೆಗಳಲ್ಲಿ ಜನಪದ ಬದುಕಿನ ನೈಜಚಿತ್ರಣವನ್ನು ಕಾಣಬಹುದು.

ಬೆಡಗಿನವಚನಗಳಿಗೆ ಟೀಕು ಬರೆಯುವಾಗಲೂ ಅದೆಷ್ಟೋ ಲೌಕಿಕ ಉದಾಹರಣೆಗಳನ್ನು ನೋಡುತ್ತೇವೆ. ಆದರೆ ಬಹುತೇಕ ಟೀಕಾಕಾರರು ವಿರಮಿಸುವುದು ಪಾರಮಾರ್ಥದ ನೆಲೆಯಲ್ಲಿ. ಯಾಕೆಂದರೆ ಬೆಡಗು ಕಾವ್ಯಕ್ಕೂ ಮಿಗಿಲಾದ ಒಂದು ಸಾಂಕೇತಿಕ ದ್ವಿಭಾಷಾ ಪ್ರಯೋಗ. ಇದು ಕೇವಲ ಶಬ್ದ ಚಮತ್ಕೃತಿಯಲ್ಲ, ಆಳವಾದ ದರ್ಶನವನ್ನು ಧ್ವನಿಪೂರ್ಣವಾಗಿ ಲೋಕಸಾದೃಶ್ಯ ಉಪಮೆಗಳಿಂದ ಅಭಿವ್ಯಕ್ತಿಸುವ ವಾಗ್ಲಹರಿ. ಬೆಡಗು ಕೇವಲ ರೂಪಕ (Poetic Fancy) ಅಲ್ಲ. ಅಮೂರ್ತವಾದುದಕ್ಕೆ ಮೂರ್ತರೂಪ ನೀಡುವ ಕಾವ್ಯಪ್ರತಿಮೆಯಾಗಿದೆ(Poetic Image). ಉದಾಹರಣೆಗೆ ಪ್ರಭುದೇವರ ಬೆಡಗಿನವಚನಗಳಿಗೆ ಟೀಕು ಬರೆದ ಬಂಕನಾಥ ವಚನಕಾರನ ಅಂತರಾತ್ಮದ ಅಭಿಪ್ಸೆಗೆ ಹತ್ತಿರವಾಗುತ್ತಾನೆ. ಉದಾಹರಣೆಗೆ

            ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದ ಗಿಡ ಹುಟ್ಟಿತ್ತು

ಟೀಕು || ನೀರೆಂದರೆ ಮನಸ್ಸು, ನೆರಳೆಂದರೆ ಮಾಯೆ, ಬೇರೆಂದರೆ ಮನಃಪ್ರಕೃತಿ
            ಹೀಗೆ ಮನಃ, ಮಾಯೆ, ಅಹಂಕಾರ ತ್ರಯರಹಿತವಾದ ವಿವೇಕವೇ ಗಿಡ

ಎಂಬುದು ಇಲ್ಲಿಯ ತಾತ್ವಿಕಾರ್ಥ. ಇಂಥ ವಚನಗಳನ್ನು ಶುಷ್ಕವಾದ ಶಾಸ್ತ್ರ ಪರಿಭಾಷೆಗೆ ಅಳವಡಿಸಿ ಶಬ್ದಸೂತಕಿಗಳಾಗುವುದಲ್ಲವೆಂಬುದನ್ನು ಟೀಕಾಕಾರು ತೋರಿಸಿಕೊಟ್ಟಿದ್ದಾರೆ.

ಶರಣರ ವಚನಗಳನ್ನು ರಾಗತಾಳಯುಕ್ತವಾದ ಸ್ವರವಚನಗಳಲ್ಲಿ ಪರಿವರ್ತಿಸಿ, ಸಂಗೀತದ ಮಾಧುರ್ಯವನ್ನು ಸಾಹಿತ್ಯದಲ್ಲಿ ಬೆರೆಸುವ ಪ್ರಯತ್ನ ವ್ಯಾಖ್ಯಾನಕಾರರಿಂದ ನೆರವೇರಿತು. ೧೪೩೦ರಲ್ಲಿ ಶ್ರೀ ಗಿರೀಂದ್ರ ಸ್ವರವಚನಗಳಿಗೆ ಬರೆದ ನೂರೊಂದು ಸ್ಥಲ ಟೀಕೆಯನ್ನು ಪಾರಿಭಾಷಿಕ ಪದಕೋಶವೆಂದು ಕರೆಯಲಾಗಿದೆ. ಅವನು ಸ್ವರವಚನಗಳ ಲಕ್ಷಣವನ್ನು ತನ್ನ ವ್ಯಾಖ್ಯಾನದಲ್ಲಿ ವಿವರಿಸುವುದರ ಮೂಲಕ ಕರ್ನಾಟಕ ಸಂಗೀತ ಶಾಸ್ತ್ರ ನಿರೂಪಿಸಿದವರಲ್ಲಿ ಮೊದಲಿಗನಾಗಿದ್ದಾನೆ. ಪಲ್ಲವಿಯೆಂದರೇನು? ಎಂಬುದಕ್ಕೆ ಗಿರೀಂದ್ರ ಕೊಡುವ ವ್ಯಾಖ್ಯೆ “ಮುಂದೆ ಬಹಪದಂಗಳ ಅರ್ಥಾಭಿಪ್ರಾಯಗಳನ್ನು ಪದಾಂತ ಪರಿಯಂತರ ಸೂಚನಾರ್ಥವಾಗಿವೊಳಕೊಂಡಿಪ್ಪುವದೀಗ ಪಲ್ಲವ” ಎಂದಿದೆ. ಹಾಗೆಯೇ ಸ್ವರವಚನವೆಂದರೆ ನಾಲ್ನುಡಿಗಳಿಂದ ಒಪ್ಪಲ್ಪಟ್ಟ ವಚನಗಳೆಂದು ತಿಳಿಸುತ್ತಾನೆ.

ಟೀಕಾಸಾಹಿತ್ಯ ಕನ್ನಡ ಗದ್ಯಪ್ರಕಾರಕ್ಕೆ ವಿಶೇಷವಾದ ‘ವ್ಯಾಖ್ಯಾನ ಗದ್ಯ’ ಎಂಬ ಮಾದರಿಯನ್ನೇ ಹಾಕಿಕೊಟ್ಟಿತು. ಬೇರೆ ಬೇರೆ ಕಾಲಕ್ಕೆ ಬರೆದ ಟೀಕೆಗಳು ಆಯಾ ಕಾಲದ ಕನ್ನಡದ ಗದ್ಯರೂಪವನ್ನು ತಿಳಿಯಲು ಸಹಾಯವಾಗಿವೆ. ಸರಳವಾಕ್ಯ, ಸುಂದರವಾಕ್ಯ, ವಾಕ್ಯಪುಂಜಗಳಿಂದ ವ್ಯಾಖ್ಯಾನಗದ್ಯ ಪರಿಪುಷ್ಠಗೊಂಡಿದೆ. ವಿಶೇಷವಾಗಿ ವೃತ್ತಿಗಳಲ್ಲಿ ಶಾಸ್ತ್ರೀಯವಾದ ಗದ್ಯಶೈಲಿಯನ್ನು ಕಾಣಬಹುದು. ಕೇಶಿರಾಜ ತನ್ನ ಶಬ್ದಮಣಿ ದರ್ಪಣಕ್ಕೆ ವೃತ್ತಿಯನ್ನು ಬರೆದಿದ್ದಾನೆ. ಛಂದೋನಿಯಮಗಳಿಗೆ ಅನ್ವಯಿಸಿ ಪದಗಳನ್ನು ಹೊಂದಿಸುವಾಗ ಅವು ಹಿಂದುಮುಂದಾಗುವುದು ಸಹಜ. ಇದರಿಂದ ಒಂದು ಸೂತ್ರದ ಅರ್ಥ ಸ್ಪಷ್ಟಾವಾಗದೇ ಹೋಗುವ ಸಂಭವ ಹೆಚ್ಚು. ಕಾರಣ ಅರ್ಥವೃತ್ತಿ ಹುಟ್ಟಿಕೊಂಡಿತು. ಶಬ್ದಸ್ಮೃತಿಯಲ್ಲಿ ಕಂಡುಬಾರದ ಅರ್ಥವೃತ್ತಿ ಕೇಶಿರಾಜನಿಂದ ರಚನೆಗೊಂಡಿತು. ಇದರಿಂದ ಸೂತ್ರ – ವೃತ್ತಿ – ಪ್ರಯೋಗಗಳೆಂಬ ಮೂರುನೆಲೆಯಲ್ಲಿ ಶಬ್ದಮಣಿದರ್ಪಣವನ್ನು ಗಮನಿಸುತ್ತ ಸೂತ್ರಾರ್ಥ ಸ್ಪಷ್ಟತೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಸೂತ್ರದಲ್ಲಿಯ ಅದೆಷ್ಟೋ ಸಮುಚ್ಚಯ ಶಬ್ದಗಳಾದ ಉಂ, ಅಂ, ಅದಂ, ಇದಂ, ಉದಂ ಎಂಬಿತ್ಯಾದಿಗಳಿಗೆ ವೃತ್ತಿಯಲ್ಲಿ ವಿವರಿಸುವ ಅವಕಾಶ ದೊರೆಯಿತು.

೧೦ನೇ ಶತಮಾನದ ಜೈನಕಾವ್ಯಗಳಾದ ತತ್ವಾರ್ಥಸೂತ್ರ, ಪರಮಾರ್ಥಪ್ರಕಾಶಿಕೆ, (೧೧೭೦), ಕಾರ್ತಿಕೇಯಾನುಪ್ರೇಕ್ಷ (೧೨೦೦), ಶಾಸ್ತ್ರಸಾರ ಸಮುಚ್ಚಯ, ಪದಾರ್ಥಸಾರ (೧೨೫೩), ದ್ರವ್ಯಸಂಗ್ರಹಸೂತ್ರ (೧೨೭೩) ಇತ್ಯಾದಿ ಗ್ರಂಥಗಳಿಗೆ ನಂತರದ ವಚನಗಳಿಗೆ ಬರೆದ ವ್ಯಾಖ್ಯಾನಗದ್ಯ ಮತ್ತು ಅರುಣೋದಯ ಕಾಲದಲ್ಲಿಯ ಮೈಸೂರು ಅರಸರ ಆಶ್ರಯದಲ್ಲಿ ಸೃಷ್ಟಿಯಾದ ಟೀಕಾಗದ್ಯಗಳು ಗದ್ಯಪ್ರಕಾರದ ಐತಿಹಾಸಿಕ ಬೆಳವಣಿಗೆಗೆ ಮಾದರಿಗಳಾಗಿವೆ. ಶಾಸನಗಳಲ್ಲಿ ಜನರಿಗೆ ಸಂವಹನಗೊಳಿಸುವ ಕಾರಣದಿಂದ ದಾನನೀಡಿದ ಭೂಮಿಯ ಗಡಿಗಳನ್ನು ಹಾಗೂ ದಾನಮಾಡಿದ ವ್ಯಕ್ತಿವಿವರಗಳನ್ನು ಗದ್ಯದಲ್ಲಿ ಕಂಡರಿಸುವಂತೆ; ವ್ಯಾಖ್ಯಾನಕಾರರು ಜನರಿಗೆ ಅರ್ಥವಾಗುವ ಸಲುವಾಗಿ ಗದ್ಯಪ್ರಕಾರವನ್ನು ಜಾರಿಗೆ ತಂದರು. ಈ ಹಿನ್ನೆಲೆಯಲ್ಲಿ ಉದ್ಧರಣೆ ಸಾಹಿತ್ಯಕ್ಕೆ ವಾಚ್ಯಬರೆಯುವ ಪ್ರೇರಣೆಯೂ ಅಗಿರಬಹುದು. ಹಾಗೆಯೇ ವಡ್ಡಾರಾಧನೆಯ ಬಗ್ಗೆ ಎದ್ದ ಜಿಜ್ಞಾಸೆಗಳಲ್ಲಿ ಅರಾಧನಾ, ಭಗವತೀ ಅರಾಧನಾ ಮೂಲರಾಧನಾ ಹಾಗೂ ವಡ್ಡಾರಾಧನ ಎಂಬ ಗೌರವಸೂಚಕ ಪರ್ಯಾಯ ಹೆಸರುಗಳು ಪ್ರಾಪ್ತವಾಗಿರುವುದನ್ನು ದೃಢೀಕರಿಸಿಕೊಳ್ಳಲು ನಾವು ವ್ಯಾಖ್ಯಾನ ಗದ್ಯವನ್ನೇ ಅವಲಂಬಿಸಬೇಕಾಗುತ್ತದೆ. ಉದಾಹರಣೆಗೆ ರಾಮಚಂದ್ರಮುಮುಕ್ಷುವು ಪುಣ್ಯಾಸ್ರವಕಥಾ ಕೋಶವನ್ನು ಬ್ರಾಜಿಷ್ಣುವಿನ ಅರಾಧನ ವ್ಯಾಖ್ಯಾನ ಕ್ರಮದಂತೆ ಉಲ್ಲೇಖಿಸಿದ್ದೇನೆಂದು ಹೇಳಿದ್ದಾನೆ. ಹೀಗಾಗಿ ಮತೀಯ ಕೃತಿಯಾದ ಆಚಾರ ಸಂಪ್ರದಾಯ ತತ್ತ್ವನಿಷ್ಟವಾದ ಕಾವ್ಯವನ್ನು ಓದುಗರ ಮನಂಬುಗುವಂತೆ ವಿವರಿಸುವಲ್ಲಿ “ವರ್ಣನಾವಿರಹಿತವಾದ, ಅಭರಣ ವಿಮುಕ್ತವಾದ ನಿರ್ಭಾವಯುಕ್ತವಾದ ಯಜುಗತಿಯ ಶೈಲಿ ಈ ಗದ್ಯದ ಲಕ್ಷಣವಾಗಿದೆ.” (ಕನ್ನಡ ಸಾಹಿತ್ಯಚರಿತ್ರೆ ಸಂ.೪, ಭಾಗ – ೨, ಮೈಸೂರು ವಿ.ವಿ. ಪು.೧೭೬೫) ಹೀಗಾಗಿ ಆರಂಭದ ಗದ್ಯಕಾರರಾದ ಶಿವಕೋಟಿ, ದುರ್ಗಸಿಂಹ ಮುಂತಾದವರಿಗೆ ಆ ಕಾಲದಲ್ಲಿ ಸೃಷ್ಟಿಯಾಗಿದ್ದ ವ್ಯಾಖ್ಯಾನಗದ್ಯ ಮಾದರಿಗಳು ಕಥಾಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿರಬೇಕು. ಏಕೆಂದರೆ ಜೈನಕಥಾಸಾಹಿತ್ಯ ಮೈತೆರೆದು ವಿಹರಿಸಿದ್ದು ಜೈನರ ಚೂರ್ಣಿ, (ಚುಣ್ಣಿ), ನಿರ್ಯುಕ್ತಿ, ಭಾಷ್ಯಗಳಲ್ಲಿ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಶಿವಶರಣರ ತತ್ವೋಪದೇಶ ಸಂರಚನೆಯ ಸುದೀರ್ಘವಾದ ವ್ಯಾಖ್ಯ್ತಾನಗಳಲ್ಲಿಯ ಸಂಭಾಷಣೆಯುಕ್ತ ಮಾತುಗಳು ಮುಂದೆ ಶೂನ್ಯಸಂಪಾದನಾ ರಚನೆಗೆ ಸುಳುಹು ನೀಡಿದಂತಿದೆ. ಉದಾಹರಣೆಗೆ ಕಲ್ಲುಮಠದ ಪ್ರಭುದೇವರಲ್ಲಿ ಬರುವ ಪ್ರಭು. ಸಿದ್ಧರಾಮರ ಧ್ಯಾನಯೋಗ, ಧಾರುಣಯೋಗ, ಸಮಾಧಿಯೋಗಗಳನ್ನು ತಿಳಿಸಿಕೊಡುವ ಗುರುಕರಣಸ್ಥಲ ಶೂನ್ಯಸಂಪಾದನೆಯಲ್ಲಿನ ಪ್ರಭುದೇವ ಸಿದ್ಧರಾಮಯ್ಯನ ಪ್ರಸಂಗಗಳಿಗೆ ಆದಿಯಾಗಿರಬೇಕು. ನಿಜಗುಣ ಶಿವಯೋಗಿಗಳ ಪರಮಾರ್ಥಪ್ರಕಾಶಿಕೆಯು ಚನ್ನಸದಾಶಿವಯೋಗಿಯ ಸಂಸ್ಕೃತ ಶಿವಯೋಗ ಪ್ರದೀಪಿಕೆ ಎಂಬ ಯೋಗಶಾಸ್ತ್ರದ ಕನ್ನಡ ಭಾಷಾಂತರ. ಇಲ್ಲಿಯ ಮಾಲಾಟೀಕೆಯು ಕನ್ನಡಗದ್ಯ ಸಾಹಿತ್ಯದಲ್ಲಿ ಭಾಷಾಂತರ ಶೈಲಿಯ ನವೀನ ಪ್ರಯೋಗವಾಗಿದೆ. ಇದರಿಂದ ಸೂತ್ರಪ್ರಾಯವಾದ ವಾಕ್ಯಗಳಿಗೆ ಗದ್ಯದಲ್ಲಿ ಅರ್ಥವಿವರಣೆ ನೀಡಿ ಜೊತೆಗೆ ಅಭಿಪ್ರಾಯ ವಿಶದತೆಗೆ ಕನ್ನಡ ಕಾವ್ಯ – ಪುರಾಣ – ಮೀಮಾಂಸಾಧಾರಗಳನ್ನು ಕೊಡುವುದು. ಆ ಮೂಲಕ ಶಾಸ್ತ್ರಗ್ರಂಥಗಳಿಗೆ ಸರಿಸಮನಾದ ಶಾಸ್ತ್ರ ಮರ್ಯಾದೆಯನ್ನು ಇತರೆ ಸಾಹಿತ್ಯ ಗ್ರಂಥಗಳಿಗೂ ಸಲ್ಲುವಂತೆ ಮಾಡಿದ ಕೀರ್ತಿ ವ್ಯಾಖ್ಯಾನಕಾರರಿಗೆ ಸಲ್ಲುತ್ತವೆ.

ಟೀಕಾಕಾರರ ಬಂಡವಾಳ ಶಬ್ದ – ಪದಪ್ರಯೋಗ. ಹೀಗೆಂದಾಕ್ಷಣ ಇಲ್ಲಿಯ ಶಬ್ದಗಳು, ಗುಡುಗಿನ ಮೊಳಗು ಅಲ್ಲ. ಅರ್ಥವತ್ತಾದ ಧ್ವನಿಮಾಗಳು. ಹೀಗೆ ಕನ್ನಡ ಸಾಹಿತ್ಯದಲ್ಲಿ ರಚನೆಯಾದ ವ್ಯಾಖ್ಯಾನಗಳನ್ನೆಲ್ಲ ಸಂಗ್ರಹಿಸಿ ಆಯಾ ಧರ್ಮಗಳಲ್ಲಿ ವರ್ಗೀಕರಿಸಿ ಅವುಗಳ ಪರಿಭಾಷಾ ನಿಘಂಟನ್ನು ರಚಿಸುವಷ್ಟು ಟೀಕಾಸಾಹಿತ್ಯ ಶಬ್ದಾರ್ಥ ಸಂಪತ್ತು ಲಭ್ಯವಿದೆ. ಪರಿಭಾಷೆಯ ಶಬ್ದಾರ್ಥಗಳನ್ನು ಬಿಟ್ಟರೂ ಪ್ರಾದೇಶಿಕವಾದ ಸಹಜ – ಸರಳ ಶಬ್ದಾರ್ಥಗಳು ಸೂರೆಯಾಗಿವೆ. ಇದರಿಂದ ದೇಸಿ ಸೊಗಡನ್ನು ಅಧ್ಯಯನಕ್ಕೊಳಪಡಿಸಲು ಸಾಧ್ಯವಿದೆ. ಉದಾಹರಣೆಗೆ ಬಸವಣ್ಣನವರ ಟೀಕಿನವಚನಗಳಲ್ಲಿ ಕಂಡುಬರುವ ಕೇಣಸರ, ಎಡೆಗೋಲು, ಮುದ್ದಿ(ಸಿಂಬಿ), ಐರಾಣಿ, ಹಾಸ, ಅಡ್ಡ(ನಾಣ್ಯ) ಕೋರೂಟ, ಹೀರೆಕುಲ, ಬುಗ್ಗಿ ಇತ್ಯಾದಿ ಪದಗಳನ್ನು ನೋಡಬಹುದು. ಹಾಗೆಯೇ ನುಡಿಗಟ್ಟುಗಳೂ, ಲೋಕೋಕ್ತಿಗಳನ್ನು ಟೀಕಾಕಾರರು ಸಂದರ್ಭ ಸಿಕ್ಕಲ್ಲಿ ಬಳಸುತ್ತಾ ಜನಸಾಮಾನ್ಯರ ಮಾತುಗಳಿಗೆ ಕಾವ್ಯಮರ್ಯಾದೆಯ ದೀಕ್ಷೆಯನ್ನು ನೀಡಿದ್ದಾರೆ. ಅಲ್ಲದೆ ಕಾವ್ಯಗಳನ್ನು ಅವರ ಮಾತುಗಳಲ್ಲಿ ಅರ್ಥವಾಗುವಂತೆ ವಿಶ್ಲೇಷಿಸಿದ್ದಾರೆ.

ವಿಶೇಷವಾಗಿ ಕುಮಾರಿಯೆಂದರೆ = ಹನ್ನೆರಡು ವರುಷದ ಬಾಲಕುಮಾರಿಯರು, ಕೊಡುಗೂಸುಯೆಂದರೆ = ಏಳುವರ್ಷದ ಕೂಸೆಂದು, ಆಸೆಯೆಂದರೆ = ಅನ್ನಾಚ್ಛಾದನ ಹೊನ್ನುಹೆಣ್ಣು ಮಣ್ಣಾಗಬೇಕೆಂಬ ಅಪೇಕ್ಷೆ ಇದು ಸಹಜಕ್ರಿಯೆ. ಮಾನವನಿಗೆ ಆಸೆ ಇರಬೇಕು. ಆದರೆ ಆಮಿಷಯೆಂಬುದಕ್ಕೆ ವ್ಯಾಖ್ಯಾನಕಾರನ ವಿವರಣೆ ನೋದಿದರೆ ಆಮಿಷಕ್ಕೆ ಒಳಗಾಗಬಾರದೆಂಬ ನೀತಿ ಮನವರಿಕೆಯಾಗುತ್ತದೆ. ಅಂದರೆ ಹೊನ್ನಾಗುವುದು ಆಸೆಯಾದರೆ, ಹೊನ್ನಾಗಿಯೂ ಹೊನ್ನಾಗಬೇಕೆಂಬ ಅಧಿಕ ವ್ಯಾಮೋಹ ಅಮೀಷ. ಅಂದರೆ ಆಸೆಯೊಳಗಣ ಅತಿಕಾಂಕ್ಷೆಯೇ ಆಮಿಷ. ಹಾಗೆಯೇ ಮಾರಿ ಅಂದರೆ ಗ್ರಾಮಮಧ್ಯ ಗುಡಿಕಟ್ಟಿಕೊಂಡು ಪೂಜೆಗೊಳ್ಳುವ ದೇವತೆಯೆಂರ್ಥ, ಮಸಣಿ ಅಂದರೆ ಸುಡುಗಾಡಲ್ಲಿ ಗುಡಿಕಟ್ಟಿಕೊಂಡು ಪೂಜೆಗೊಳ್ಳುವ ದೇವತೆಯೆಂದರ್ಥ, ಭಾಂಡ ಅಂದರೆ ಹಿತ್ತಾಳೆ, ತಾಮ್ರದಿಂದ ಮಾಡಿದ ಚರಿಗೆ ಕೊಡಪಾನಗಳು, ಭಾಜನ ಅಂದರೆ ಕಂಚಿನಲ್ಲಿ ಮಾಡಿದ ತಾಮ್ರದಿಂದ ಮಾಡಿದ ಚರಿಗೆ ಕೊಡಪಾನಗಳು, ಭಾಜನ ಅಂದರೆ ಕಂಚಿನಲ್ಲಿ ಮಾಡಿದ ಗಂಗಾಳ ಬಟ್ಟಲುಗಳು. ಇಲ್ಲೆಲ್ಲ ಟೀಕಾಕಾರರ ಅರ್ಥವ್ಯತ್ಯಾಸದ ಸೂಕ್ಷ್ಮತೆಯನ್ನು ಗಮನಿಸಬೇಕು.

ಈ ಮೇಲಿನ ನಿದರ್ಶನಗಳನ್ನು ನೋಡಿದರೆ ವಿಷಯಗಳನ್ನು ಗ್ರಹಣ ಮಾಡಿಕೊಳ್ಳುವಲ್ಲಿ ಆಜ್ಞಾಪ್ರಧಾನ – ಪರೀಕ್ಷಾಪ್ರಧಾನವೆಂಬ ಎರಡು ರೀತಿಯ ಪಂಡಿತವರ್ಗವಿರುವುದನ್ನು ಕಾಣಬಹುದು. ಯಾವುದೇ ವಿಷಯವನ್ನು ವಿಮರ್ಶಿಸದೆ ಶಾಸ್ತ್ರ ಮುಖ್ಯವೆಂದು ಭಾವಿಸುವವರು ಆಜ್ಞಾಪ್ರಧಾನ ವಿದ್ವಾಂಸರು. ಆದರೆ ವಿಷಯವನ್ನು ತರ್ಕಕ್ಕೆ ಒಡ್ಡಿ ಪ್ರಸ್ತುತವಾದುದನ್ನು ಸ್ವೀಕರಿಸುವವರು ಪರೀಕ್ಷಾಪ್ರಧಾನ ವಿದ್ವಾಂಸರು. ಟೀಕಾಸಾಹಿತ್ಯದಲ್ಲಿ ಎರಡೂ ವರ್ಗದ ವಿದ್ವಾಂಸರು ಕಂಡುಬರುತ್ತಾರೆ. ಹೀಗಾಗಿ ಮಹತ್ವದ ದೃಷ್ಟಿಯಿಂದ ಟೀಕಾಸಾಹಿತ್ಯದ ಗುಣಧರ್ಮಗಳಿಗೆ ಕಾರಣರಾದವರು ಪರೀಕ್ಷಾಪ್ರಧಾನ ವ್ಯಾಖ್ಯಾನಕಾರರಾದರೆ, ಅದರ ದೋಷಗಳಿಗೆ ಕಾರಣರಾದವರು ಆಜ್ಞಾಪ್ರಧಾನ ವ್ಯಾಖ್ಯಾನಕಾರರು. ಇಲ್ಲಿಯೂ ಹಸ್ತಪ್ರತಿ ಲಿಪಿಕಾರರಂತೆ ಅಜ್ಞಾನ, ಅನ್ಯಥಾಜ್ಞಾನಗಳು ಎಡೆಪಡೆದಿವೆ. ಇದನ್ನು ಟೀಕಾಸಾಹಿತ್ಯದ ಇತಿಮಿತಿಗಳಾಗಿ ಅಧ್ಯಯನಕ್ಕೆ ಬಳಸಿಕೊಳ್ಳಬೇಕು. ಉದಾಹರಣೆಗೆ ವೈದ್ಯಶಾಸ್ತ್ರದಂತಹ ಔಷಧಿಸೇವನಾ ನಿಯಮದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಹರಣವಾಗುವಲ್ಲಿ ಟೀಕಾಕಾರರ ಅನ್ಯಥಾಜ್ಞಾನ, ಅಜ್ಞಾನಗಳು ಅಪಾಯಕಾರಿ ಗಂಡಾಂತರವನ್ನೇ ತಂದೊಡ್ಡುತ್ತವೆ. ಹೀಗಾಗಿ ವ್ಯಾಖ್ಯಾನಕಾರ್ಯ ಅದೊಂದು ಸಾಮಾಜಿಕ ಜವಾಬ್ದಾರಿ. ಸಮಾಜದ ಸ್ವಾಸ್ಥ್ಯದ ಕಡೆಗೆ ಟೀಕಾಕಾರರು ಗಮನಹರಿಸಬೇಕಾಗುತ್ತದೆ.

ಮತಿಯುತವಾದ ಅತಿರೇಕತೆಯಿಂದ ಕೋಮುಸುಹಾರ್ದತೆಗೆ ಭಂಗಬರುವ ಸಾಧ್ಯತೆಗಳು ಇವೆ. ಅಂದರೆ ವ್ಯಾಖ್ಯಾನಕಾರನ ವ್ಯಾಖ್ಯಾನಧರ್ಮ ವಾಸ್ತವಧರ್ಮವನ್ನು ಮರೆಮಾಡಿ ಎಲ್ಲ ಪಂಥಗಳೂ ಭೌದ್ಧಿಕವಾಗಿ ತಮ್ಮ ತಮ್ಮ ಮತ – ಪಂಥಗಳನ್ನು ಸಮರ್ಥಿಸಲು ತೀವ್ರವಾದ ಸ್ಪರ್ಧೆಗೆ ಇಳಿದು ವಿದ್ವತ್ ವಾದಕ್ಕೆ, ವಾಕ್ಯಾರ್ಥಕ್ಕೆ ಜೋತುಬಿದ್ದಕಾರಣ ಸಂಘರ್ಷಣೆಯ ಅತಿರೇಕತೆಯಲ್ಲಿಯೂ ವ್ಯಾಖ್ಯಾನಗಳು ಸೃಷ್ಟಿಯಾಗಿರಬೇಕು. ಹೀಗಾಗಿ ಕಾಲದಿಂದ ಕಾಲಕ್ಕೆ ಭಿನ್ನವಾಗಿ ಒಂದೊಂದು ಕೃತಿಗೆ ಒಂದಕ್ಕಿಂತ ಹೆಚ್ಚು ವ್ಯಾಖ್ಯಾನ ಕೃತಿಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಬಸವಣ್ಣನವರ ಟೀಕಿನ ವಚನಗಳು “ಶ್ರೀಗುರು ಬಸವರಾಜದೇವರು ನಿರೂಪಿಸಿದ ಷಟ್ಸ್ಥಲದವಚನವ್ಯಾಖ್ಯಾನ” “ಶ್ರೀ ಬಸವೇಶ್ವರ ವಚನದೊಳಗೆ ಕಠಿಣವಾದ ಸಂಕ್ಷೇಪವಚನಕ್ಕೆ ಟಿಪ್ಪಣಮಾಡಿ…” ಎಂಬ ಸಮಾಪ್ತಿ ಉಲ್ಲೇಖಿತ ಕೃತಿನಾಮವಿಲ್ಲದ ಟೀಕು, “ಬಸವರಾಜದೇವರ ಷಟ್ಸ್ಥಲದವಚನದ ಬೆಡಗಿನ ಟೀಕು” (ಸೋಮಶೇಖರ ಶಿವಯೋಗಿ), “ಬಸವ ವಚನಸಾರಾಮೃತ” (ಗುರುಬಸವರಾಜದೇವ)ಮತ್ತು “ಬಸವರೇಶ್ವರದೇವರ ವಚನಸಾರಾರ್ಥ” (ಪರ್ವತ ಶಿವಯೋಗಿ) ಹೆಸರಿನ ೫ ಕೃತಿಗಳು ದೊರೆತಿವೆ. ಹಾಗೆಯೇ ತೋಂಟದ ಸಿದ್ಧಲಿಂಗಯತಿಗಳ ಷಟ್ಸ್ಥಲ ಸಾರಾಮೃತ ಟೀಕಾಕೃತಿಗಳನ್ನು ೩ ಜನ ವ್ಯಾಖ್ಯಾನಕಾರರು ರಚಿಸಿದ್ದಾರೆ. ಅವರಲ್ಲಿ “ತೋಟದ ಸಿದ್ಧಲಿಂಗೇಶ್ವರ ಷಟ್ಸ್ಥಲ ಜ್ಞಾನಸಾರಾಮೃತದ ಬೆಡಗಿನ ವಚನದ ಟೀಕೆ (ಸೋಮಶೇಖರ ಶಿವಯೋಗಿ)”, ತೋಂಟದಾರ್ಯವಚನ ವ್ಯಾಖ್ಯಾ (ಹುಮನಾಬಾದ್ ನಿರಂಜನಸ್ವಾಮಿ), “ಷಟ್ಸ್ಥಲ ಜ್ಞಾನಸಾರಾಮೃತ ಟೀಕೆ (ಅಜ್ಞಾನ ಟೀಕಾಕಾರ). ಹೀಗೆ ಒಂದು ಕೃತಿಯ ಮೇಲೆ ಹಲವು ವ್ಯಾಖ್ಯಾನಗಳು ಸೃಷ್ಟಿಯಾಗುವಲ್ಲಿ ವ್ಯಕ್ತಿಭಿನ್ನತೆ, ವಿಚಾರಭಿನ್ನತೆ, ಕಾಲಭಿನ್ನತೆಗಳಿಂದ ಒಂದು ಕೃತಿಯ ವೈವಿಧ್ಯಮಯ ಮಗ್ಗುಲುಗಳು ಗೋಚರವಾಗುತ್ತವೆ. ಹೀಗಾಗಿ ಹಲವು ಟೀಕಾಕೃತಿಗಳ ತುಲನಾತ್ಮಕ ಅಧ್ಯಯನ ಮಾಡಲು ಒಳ್ಳೆಯ ಅವಕಾಶವಿದೆ. ಇಲ್ಲೆಲ್ಲ ತರ್ಜುಮೆ ಮಾಡುವ ಅನುಕರಣಶೀಲ ಪ್ರಯತ್ನಕ್ಕಿಂತ ತಾತ್ವಿಕ ಚರ್ಚೆ ಮಾಡುವ ವಿಶ್ಲೇಷಣಾಶೀಲ ಪ್ರಯತ್ನವನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಪ್ರಯತ್ನದಿಂದಲೇ ಕರ್ನಾಟಕದಲ್ಲಿ ಟೀಕಿನಮಠಗಳು, ಟೀಕಾಚಾರ್ಯರು ಶ್ರದ್ಧೆ, ನಿಷ್ಠೆಯಿಂದ ದುಡಿದು ನೂರಾರು ಕೃತಿಗಳನ್ನು ಜೀವಂತವಾಗಿರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಟೀಕಾಚಾರ್ಯರು ಪಾಠ ಸಂಗ್ರಹ ಮಾಡುವಲ್ಲಿ ಕುಶಲಮತಿಗಳಾಗಿರುತ್ತಾರೆ. ಲಿಪಿಕಾರ, ಪಾಠಕ – ವಾಚಕರಿಂದ ಕುಲಗೆಟ್ಟುಹೋಗಿದ್ದ ಒಂದು ಕೃತಿಯ ಭಿನ್ನ ಪಾಠವನ್ನು ಹುಡುಕಿ ಅವಲೋಕಿಸುವ ಜವಾಬ್ದಾರಿ ಕವಿಗಳಿಗಿಂತಲೂ ಇವರ ಮೇಲೆ ಹೆಚ್ಚಿರುತ್ತದೆ. ಅ ಕೆಲಸವನ್ನು ಪ್ರಮಾಣಿಕವಾಗಿ ಪೂರೈಸಿಕೊಡುವುದರ ಮೂಲಕ ಹಸ್ತಪ್ರತಿಗಳ ವಂಶಾವಳಿ ಅಧ್ಯಯನಕ್ಕೆ ಈತ ನೆರವಾಗುತ್ತಾನೆ. ನಿದರ್ಶನಕ್ಕೆ ದೇವರಾಜಯಜ್ಜನು ಯಾಸ್ಕನ ನಿಘಂಟುವಿಗೆ ವ್ಯಾಖ್ಯಾನವನ್ನು ಬರೆಯುತ್ತಾ “ವೆಂಕಟಾಚಾರ್ಯರ ಮಗ ಮಾಧವನು ಭಾಷ್ಯ ಬರೆಯುವಾಗ ನಾಮ, ಅಖ್ಯಾತ, ಸ್ವರ, ನಿಪಾತ, ನಿಬಂಧ, ಇವುಗಳ ಅನುಕ್ರಮಣಿಕೆಯನ್ನು ಸಿದ್ಧಗೊಳಿಸುವಲ್ಲಿ ಬೇರೆ ಬೇರೆ ಪ್ರಾಂತಗಳ ಹಸ್ತಪ್ರತಿಗಳನ್ನು ಸರಿಯಾಗಿ ಸಮಾಲೋಚಿಸಿ, ಅನೇಕ ಕೋಶಗಳಿಂದ ಪರೀಕ್ಷಿಸಿ, ಶುದ್ಧವಾದ ಪಾಠವನ್ನು ಸಂಶೋಧಿಸಿದನು.” ಇದೇರೀತಿ “ಮಹಾಭಾರತಕ್ಕೆ ‘ಭಾರತ ಭಾವದೀಪ’ ಹೆಸರಿನ ವ್ಯಾಖ್ಯಾನವನ್ನು ಬರೆದ ನೀಲಕಂಠನೆಂಬ ವ್ಯಾಖ್ಯಾನಕಾರ ಬೇರೆ ಬೇರೆ ಪ್ರಾಂತಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅನೇಕ ಕೋಶಗಳ ಸಹಾಯದಿಂದ ಪಾಠಗಳನ್ನು ನಿಶ್ಚಯಿಸಿರುವುದಾಗಿ ತಿಳಿಸುತ್ತಾನೆ.” (ಕನ್ನಡ ಗ್ರಂಥಸಂಪಾದನ ಶಾಸ್ತ್ರ ಡಾ. ಎಂ.ಎಂ. ಕಲಬುರ್ಗಿ, ಪು.೧೮)

ಟೀಕಾಕಾರರು ತಮ್ಮ ಇತಿವೃತ್ತ ಹಾಗೂ ಗುರುಪರಂಪರೆಯನ್ನು ತಿಳಿಸುವುದರ ಮೂಲಕ ಒಂದು ಟೀಕಾಕೃತಿ ಮೈವೆತ್ತಿ ಬಂದಿರುವ ಪರಿಸರವನ್ನು ಪರಿಚಯಿಸುತ್ತಾರೆ. ಕ್ರಿ.ಶ. ೧೬೭೦ರಲ್ಲಿ ಸಂಪಾದನೆಯ ಗುರುಲಿಂಗದೇವ ಶೀಲವಂತಯ್ಯ ತ್ರಿವಿಧಿಗೆ ವ್ಯಾಖ್ಯಾನ ಬರೆದಿದ್ದಾನೆ. ಆತನು “ಶ್ರೀಮತ್ಸಚ್ಛಿದಾನಂದ ನಿತ್ಯ ಪರಿಪೂರ್ಣ, ನಿರಂಜನ ಪರಂಜ್ಯೋತಿ, ಸ್ವರೂಪರಾದ ತೋಂಟದಸಿದ್ಧಲಿಂಗ ಪ್ರಭುವೆಂಬಾಚಾರ್ಯರು, ಅವರ ನಿಜದರು ವಿನಾಚರಣೆಯನುಭವೆಯೆ ಬೋಳಬಸವೇಶ್ವರನು, ಅವರ ನಿಜದರುವಿನಾಚರಣೆಯನು ಭವಿಯೆ ಹರತಾಳಚೆನ್ನಂಜೆದೇವರು, ಅವರ ಭಕ್ತಿಜ್ಞಾನವೈರಾಗ್ಯದ ಸಮರಸಾನಂದಾನು ಭಾವಿಯೆ ಸಂಪಾದನೆಯ ಸಿದ್ಧವೀರಾಣಾಚಾರ್ಯರು, ಅವರಂಗಲಿಂಗದನುಭಾವದಾಚರಣೆಯ ನುಜದ ನಿರಿಗೆವಿಡಿದು ಸ್ವಲೀಲಾನಂದದಲ್ಲಾಚರಿಸಿದವರೇ ಸಂಪಾದನೆಯ ಬೋಳಬಸವ ದೇವರು, ಅವರ ಲಿಂಗಾಂಗ ಸಂಗಸಮರಸದುರುವಿನ ಪ್ರಸಾದಪರಿಪೂರಿತ ಹೃದಯರಾದ ಸಂಪಾದನೆಯ ಗುರುಲಿಂಗದೇವರು, ಲಿಂಗಾಂಗ ಪ್ರಣವಸಂಯೋಗವೆಂಬ ಶಾಸ್ತ್ರದ ಗರ್ಭಗರ್ಭೀಕೃತಮಾಗಿರ್ದ ಮಂತ್ರಾರ್ಥವನು ಕರ್ನಾಟ ಭಾಷೆಯಿಂದ ಟೀಕಿಸಿದರು” ಎನ್ನುವಲ್ಲಿ ಸಂಪಾದನಾ ಸಮಯದ ಶಿಷ್ಯ – ಪ್ರಶಿಷ್ಯರ ಸಾಲಿನಲ್ಲಿ ಟೀಕಾಕಾರರು ಇರುವುದನ್ನು ಗಮನಿಸಬಹುದು.

ಬಹುಮುಖ್ಯವಾದ ಸಂಗತಿಯೆಂದರೆ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಇತರ ಭಾಷೆಗಳ ಸಾಹಿತ್ಯಕೃತಿಗಳು ಬೀರಿರುವ ಪ್ರಭಾವ, ನೀಡಿರುವ ಪುಷ್ಠಿ ಎಷ್ಟೆಂಬುದನ್ನು ತಿಳಿಯುವುದಕ್ಕೂ ಜೊತೆಗೆ ಆ ಭಾಷೆಯ ಕೃತಿಗಳು ಅನುವಾದ ರೂಪದಲ್ಲಿ ಕನ್ನಡೀಕರಣಗೊಳ್ಳುವುದಕ್ಕೆ ಒಂದು ವೇದಿಕೆಯನ್ನು ಸಿದ್ಧಗೊಳಿಸಿಕೊಡುವುದಕ್ಕೂ ಟೀಕಾಸಾಹಿತ್ಯ ಪ್ರೇರಣೆಯೊದಗಿಸಿತು. ಹೀಗಾಗಿ ಭಾಷಿಕ ಹಾಗೂ ದ್ವಿಭಾಷಾ ನೆಲೆಯಲ್ಲಿ ನಡೆಯುವ ‘ಸಾಂಸ್ಕೃತಿಕ ವಿನಿಮಯ ರಾಯಭಾರತ್ವ’ಕ್ಕೆ ಟೀಕು ಪ್ರಕಾರ ಆದಿಯಾಯಿತು.

ಹೀಗೆ ಒಂದೇ ಭಾಷೆಯ ಹಲವು ಕೃತಿಗಳಿಗೆ, ಹಲವು ಭಾಷೆಯ ಹಲವು ಕೃತಿಗಳಿಗೆ ಟೀಕು ರಚನೆಗೊಳ್ಳುವುದಲ್ಲದೆ, ಒಂದೇ ಕೃತಿಗೆ ಹಲವು ಟೀಕುಗಳು ರಚನೆಗೊಂಡಿವೆ. ಮೊದಮೊದಲು ಕನ್ನಡ ಸಾಹಿತ್ಯದ ಅಪ್ರಬುದ್ಧ ಸ್ಥಿತಿಯಾಗಿಯೂ, ವಿದ್ವಾಂಸರ ಮತ್ತು ಶ್ರೀಸಾಮಾನ್ಯರ ಅಭಿರುಚಿ – ಆಕಾಂಕ್ಷೆಗಳ ಒತ್ತಾಸೆಯಾಗಿಯೂ ರಚನೆಗೊಂಡ ಟೀಕಾಸಾಹಿತ್ಯ ಇಂದು ಸ್ವತಂತ್ರಸಾಹಿತ್ಯ ಪ್ರಕಾರವಾಗಿ ಬೆಳೆದು ನಿಂತಿರುವುದು ಇದರ ಪ್ರಯೋಜನ ಮುಖಿ ನಿಲುವಿನಿಂದ ಎಂದು ನಿಸ್ಸಂದೇಹವಾಗಿ ಹೇಳಬಹುದು.