ಕನ್ನಡದಲ್ಲಿ ವಿಶಿಷ್ಟ ಪ್ರಕಾರವಾಗಿ ಟೀಕಾಸಾಹಿತ್ಯ ಬೆಳೆದುಬಂದಿದೆ. ಪದ್ಯಾತ್ಮಕ, ಗದ್ಯಾತ್ಮಕ, ಸಂಕ್ಷಿಪ್ತ, ವಿವರಾತ್ಮಕ, ತಾತ್ವಿಕಾರ್ಥ ಹಾಗೂ ತಾತ್ಪರ್ಯಾರ್ಥ ಸ್ವರೂಪದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದರಿಂದಾಗಿ ವ್ಯಾಖ್ಯಾನ, ಭಾಷ್ಯ, ವೃತ್ತಿ, ಚೂರ್ಣಿ, ನಿರ್ಯುಕ್ತಿ, ಸಾರಮೃತ, ನುಡಿ, ವಾರ್ತಿಕ ಇತ್ಯಾದಿ ಹೆಸರುಗಳಿಂದ ಗುರುತಿಸಿ ಕೊಂಡಿದೆ. ಒಂದು ಕೃತಿಯನ್ನು ಶಬ್ದಾರ್ಥ, ಭಾವಾರ್ಥ ಮತ್ತು ತಾತ್ವಿಕಾರ್ಥವೆಂಬ ಬಹುಶಿಸ್ತೀಯ ಮಾದರಿಯಲ್ಲಿ ಟೀಕಾಸಾಹಿತ್ಯ ಅಧ್ಯಯನ ಮಾಡಿದೆ.

ಟೀಕಾಸಾಹಿತ್ಯ ಒಂದು ಕೃತಿಗೆ ಬರೆದ ಪರಿಭಾಷಿಕ ಪದಕೋಶ. ಶಬ್ದಗಳ ಅಂತರಂಗ ಬಹಿರಂಗ ಶುದ್ದಿಯನ್ನು ಸೋಸಿ, ಸಂಸ್ಕರಿಸಿ ಚಲಾವಣೆಗೆ ತರುವ ಪದಪ್ರಯೋಗ ಶಾಲೆ. ಅಸೆ – ಆಮಿಷ, ಮಾರಿ – ಮಸಣೆ, ಭಾಂಡ – ಭಾಜನ ಎಂಬ ನಿತ್ಯ ವ್ಯವಹಾರಿಸುವ ಪದಗಳಲ್ಲಿ ಪೂರ್ವರ್ಧನ ಪದಕ್ಕೆ ಅರ್ಥವಿದ್ದು, ಉತ್ತರಾರ್ಧದ ಪದ ಅಭಿವ್ಯಕ್ತಿಯ ಸೌಲಭ್ಯಕ್ಕಾಗಿ ರೂಪಿತಗೊಂಡಿದ್ದೆಂದು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಎರಡೂ ಘಟಕಗಳು ತಮ್ಮತಮ್ಮ ಮಿತಿಯಲ್ಲಿ ಅರ್ಥವ್ಯಾಪ್ತಿ ಹೊಂದಿರುವುದಿಲ್ಲದೆ, ವಿರುದ್ಧಾರ್ಥವನ್ನು ಸ್ಪುರಿಸುತ್ತವೆ. ಆಸೆಯೆಂದರೆ ಒಳ್ಳೆಯದನ್ನೆಲ್ಲ ಪಡೆಯುವ ಅಪೇಕ್ಷೆ, ಆಮಿಷವೆಂದರೆ ಆಸೆ ಪೂರೈಸಿಕೊಂಡರೂ ಇನ್ನೂ ಬೇಕೆಂಬ ಅಧಿಕ ವ್ಯಾಮೋಹ. ಮಾರಿ = ಗ್ರಾಮದಲ್ಲಿರುವ ದೇವತೆ, ಮಸಣೆ = ಸ್ಮಶಾಸನದಲ್ಲಿ ದೇವತೆ, ಭಾಂಡ = ಹಿತ್ತಾಳೆ, ತಾಮ್ರಗಳಿಂದ ಮಾಡಿದ ಸಲಕರಣೆಗಳು, ಭಾಜನ ಕಂಚಿನಿಂದ ತಯಾರಿಸಿದ ಸಲಕರಣೆಗಳು. ಹೀಗೆ ಟೀಕಾಚಾರ್ಯರು ಶಬ್ದಪಾರಮಾರ್ಗಕಾರರಾಗಿದ್ದಾರೆ.

ಮೊದಮೊದಲು ಟೀಕೆಗಳು ಬರೆಯುವ ಉದ್ದೇಶ ಮೂಲಕೃತಿಯ ಆಶಯ ಸಂವಹನಗೊಳ್ಳಬೇಕೆಂಬುದಾಗಿತ್ತು. ಆದರೆ ಶರಣರ ವಚನಗಳಿಗೆ ಧಾರ್ಮಿಕ ಕೃತಿಗಳಿಗೆ ಬರೆದ ವ್ಯಾಖ್ಯಾನಗಳನ್ನು ನೋಡಿದರೆ ಇವುಗಳ ಗ್ರಹಿಕೆಗೆ ಮತ್ತೊಂದು ನಿಘಂಟು ರಚನೆಯಾಗಬೇಕೆನ್ನುವಷ್ಟು ಗಡಸುತನದಿಂದ ಕೂಡಿವೆ. ವಿಜಯನಗರದ ಸಂಕಲನಕಾರರ ವ್ಯಾಖ್ಯಾನ ಗ್ರಂಥಗಳು ಶರಣರ ಸಾಮಾಜಿಕ ಆಶಯಗಳಿಂದ ದೂರವಾಗಿ ಅಲೌಕಿಕ ನೆಲೆಯಲ್ಲಿ ವ್ಯವಹರಿಸಿವೆ. ವಿಶೇಷವೆಂದರೆ ವಚನ, ಸ್ವರವಚನ, ಗದ್ಯ, ಶ್ಲೋಕ, ವೃತ್ತ ಇತ್ಯಾದಿ ಪ್ರಕಾರಗಳ ಒಟ್ಟು ಮೊತ್ತವೆಂಬಂತೆ ಜಕ್ಕಣಾಚಾರ್ಯನಾದಿಯಾಗಿ ಈ ಕಾಲದ ಇತರೆ ವ್ಯಾಖ್ಯಾನಕಾರರು ಟೀಕಾಸಾಹಿತ್ಯಕ್ಕೆ ವ್ಯಾಪಕಾರ್ಥವನ್ನು ತಂದುಕೊಟ್ಟರು. ಶಾಸ್ತ್ರ, ಸಾಹಿತ್ಯ, ಸಂಗೀತ, ಮೀಮಾಂಸೆ, ಇತಿಹಾಸ, ಭಾಷೆ, ಹೀಗೆ ಹಲವು ಶಿಸ್ತುಗಳ ಅಧ್ಯಯನಕ್ಕೆ ಟೀಕಾಸಾಹಿತ್ಯ ದಾರಿಮಾಡಿಕೊಡುತ್ತದೆ.

ಟೀಕುಗಳ ಸ್ವರೂಪದಲ್ಲಿ ಸೋಪಜ್ಞ ಟೀಕು, ಟುಪ್ ಟೀಕಾ, ಉಪನ್ಯಾಸಮಾಲಾ ಟೀಕು ಲಘುಭಾಷ್ಯ, ಮಹಾಭಾಷ್ಯ, ಲಘುವೃತ್ತಿ, ಮಹಾವೃತ್ತಿ, ಸುಖಭೋಗವೃತ್ತಿ, ಶಿಷ್ಯರಹಿತವೃತ್ತಿ, ಸಂಜ್ಞಕನ್ಯಾಸ, ಶಬ್ದಾವತಾರನ್ಯಾಸ ಎಂಬಿತ್ಯಾದಿ ಒಳಪ್ರಭೇದಗಳ ವಿಶೇಷಗಳಿಂದ ಈ ಸಾಹಿತ್ಯ ಸಮೃದ್ಧವಾಗಿದೆ.

ಪ್ರಸ್ತುತ ಕೃತಿಯಲ್ಲಿ ಜೈನ ಕನ್ನಡ ಟೀಕಾ ಕೃತಿಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.