ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರಿಗೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಧರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ಭರತ ಖಂಡದ ಬರಹರಾಶಿಯನ್ನು ಸಾಂಪ್ರದಾಯಕವಾಗಿ ಸಾಹಿತ್ಯ ಮತ್ತು ಸಾಹಿತ್ಯೇತರ ಎಂಬ ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಾಹಿತ್ಯ ಸೃಜನಶೀಲ ಮನಸ್ಸಿನ ಪ್ರತಿಭಾಪೂರ್ಣ ಹೊರಹುಳಗಳನ್ನು ಭಾಷೆಯ ಮೂಲಕ ವೈವಿಧ್ಯಮಯವಾಗಿ ಹಿಡಿದಿಟ್ಟಿರುವ, ಕಲ್ಪನಾಶೀಲವಾದ, ಮನೋರಂಜಕವಾದ ಮತ್ತು ಬುದ್ಧಿ ಮತ್ತು ಹೃದಯಗಳನ್ನು ಆಮೂಲಾಗ್ರವಾಗಿ ಆವರಿಸುವ, ಪರಿವರ್ತಿಸುವ ಮುಖ್ಯ ಅಂಶಗಳನ್ನು ಒಳಗೊಂಡಿದ್ದಾರೆ, ಸಾಹಿತ್ಯೇತರ ಬರಹ ಹೃದಯ, ಮನಸ್ಸುಗಳಿಗಿಂತ ಮತ್ತು ಆನಂದ, ಆಹ್ಲಾದಗಳಿಗಿಂತ ಮನುಷ್ಯನ ಆರೋಗ್ಯಪೂರ್ಣ ಬದುಕಿಗೆ, ಪ್ರಗತಿಗೆ ಅನುವು ಮಾಡಿಕೊಡುವ ವಿವಿಧ ಚಿಂತನೆ ಧಾರೆಗಳನ್ನು, ಇಹದ ಬದುಕನ್ನು ಸಹ್ಯವಾಗಿಸಲು, ಪಟುವಾಗಿಸಲು ಅಗತ್ಯವಾದ ಜ್ಞಾನ, ವಿಜ್ಞಾನಗಳನ್ನು ಒಳಗೊಳ್ಳುತ್ತದೆ. ಪ್ರತಿಭಾಪೂರ್ಣರೂ, ಚಿಂತನಶೀಲರೂ ಸತತ ಪ್ರಯೋಗಮತಿಗಳೂ ಆದ ಭಾರತೀಯ ಪರಂಪರೆಯ ಮಹಾ ಮೇದಾವಿಗಳು ಸಹಸ್ರ ಸಹಸ್ರ ವರ್ಷಗಳ ತಮ್ಮ ಜೀವಾನುಭವ, ಪ್ರಾಕೃತಿಕ ಮತ್ತು ಅಭೌತಿಕ ಲೋಕದ ಅರಿವು, ಚಿಂತನೆ, ಜಿಜ್ಞಾಸೆಗಳಿಂದ ಹಾಗೂ ಮನುಷ್ಯ ಜೀವನದ ವಿಶೇಷ ಸಮಸ್ಯೆಗಳು ಮತ್ತು ಶಕ್ತಿಗಳ ವಿಕಾಸಕ್ಕಾಗಿ ತಮ್ಮ ಅದ್ಭುತ ಶೋಧನಾಸಾಮರ್ಥ್ಯ, ದಣಿವರಿಯದ ಕುತೂಹಲ, ಅನ್ವೇಷಣಾ ಮಾತೃ ವಿಶ್ಲೇಷಣಾ ಶಕ್ತಿ, ಪ್ರಯೋಗಗಳಿಂದ ಪ್ರಯೋಗಗಳಿಗೆ ಜಿಗಿಯುವ ವೈನತೇಯ ಚೇತನಗಳಿಂದಾಗಿ ಲೋಕಾಶ್ವರ್ಯಕರವಾದ ತಮ್ಮ ವಿಶೇಷ ಜ್ಞಾನಗಳ ಪರಿಣತಿಯು ಫಲವಾಗಿ ವೈವಿಧ್ಯಮಯವಾದ ಶಾಸ್ತ್ರ ಗ್ರಂಥಗಳನ್ನು ರಚಿಸಿದ್ದಾರೆ. ಈ ಶಾಸ್ತ್ರ ಗ್ರಂಥಗಳ ಅಂತಃಸತ್ವ ಇಂದಿಗೂ ಚಿಂತನಶೀಲರ ವಿಜ್ಞಾನಮತಿಗಳ ಆಸಕ್ತಿ, ಕುತೂಹಲ ಮತ್ತು ಪ್ರಯೋಗಗಳಿಗೆ ಹೊಸ ಹೊಸ ಮತ್ತು ವಿಷಯಗಳನ್ನು ನಿಶಿತ ವಿಚಾರಧಾರೆಯನ್ನು ಒದಗಿಸುತ್ತ ಆಧುನಿಕ ವಿಜ್ಞಾನಿಗಳಿಗೂ ಸ್ಫೂರ್ತಿಯನ್ನು ಸತ್ಪ್ರೇರಣೆಯನ್ನು ತುಂಬುತ್ತಿವೆ ಎಂಬುದು ಇವುಗಳ ಘನ ಸತ್ವಕ್ಕೆ ಮತ್ತು ತತ್ವಕ್ಕೆ ಸಾಕ್ಷಿಯಾಗಿದೆ. ಮನುಷ್ಯನ ಮೂಲಭೂತ ಪ್ರವೃತ್ತಿಯಾದ ಕಾಮವನ್ನು ಕುರಿತ ಶಾಸ್ತ್ರೀಯ ವಿವೇಚನೆಯಿಂದ ಹಿಡಿದು ಅಂತರಿಕ್ಷ ಶಾಸ್ತ್ರದವರೆಗೆ ನಮ್ಮ ಪರಂಪರೆಯ ಮಹಾ ಬುದ್ಧಿಮತಿಗಳ ವಿಚಾರಧಾರೆ ಸತ್ವಪೂರ್ಣವಾಗಿ ವಿದ್ವತ್‌ಪೂರ್ಣವಾಗಿ ಹರಿದಿದೆ ಎಂಬುದು ಗಮನಾರ್ಹ ಸಂಗತಿ. ಇಂತಹ ಲೋಕೋಪಯೋಗಿ ಶಾಸ್ತ್ರಗಳನ್ನು ನಿರ್ಮಾನ ಮಾಡಿದ ಭಾರತೀಯರಲ್ಲಿ ಜೈನಾ ಚಾರ್ಯರಿಗೆ ಒಂದು ಅಗ್ರಸ್ಥಾನ ಸಲ್ಲುತ್ತದೆ. ಜಾನಾಚಾರ್ಯರಿಗಿಂತ ಹಿಂದಿನ ಚರಕ, ಶುಶ್ರುತ ಮುಂತಾದ ಪ್ರಖರ ವಿಜ್ಞಾನಮತಿಗಳಿಗೆ ಸಮಸ್ಯೆಯಾಗಿ ನಿಲ್ಲುವ ಪೂಜ್ಯಪಾದ ಸಮಂತಭದ್ರ ಜಿನಸೇನ, ಗುಣಭದ್ರ ಮುಂತಾದ ಜೈನಾಚಾರ್ಯರ ಲೋಕಕುತೂಹಲ, ಮಾನವ ಜೀವನವನ್ನು ಮಹೋನ್ನತಿಯ ಪೀಠದಲ್ಲಿ ಕೂರಿಸುವ ಮಹತ್ವಾಕಾಂಕ್ಷೆಯ ಫಲವಾದ ತೀಕ್ಷ್ಣ ಸಂಶೋಧನಾ ಪ್ರವೃತ್ತಿಗಳು ಅವರ ಬಗೆ ಬಗೆಯ ಸಾಹಿತ್ಯೇತರ ಕೃತಿಗಳಲ್ಲಿ ಬಿಚ್ಚಿಕೊಂಡಿವೆ. ಭಾರತೀಯ ಪರಂಪರೆಯಲ್ಲಿ ಇಂತಹ ಎಷ್ಟೋ ಶಾಸ್ತ್ರಗ್ರಂಥಗಳು ಕಾಲಗರ್ಭದಲ್ಲಿ ಲೀನವಾಗಿರುವುದು ವಿಷಾದದ ಸಂಗತಿ. ಉಪಲಬ್ಧವಿರುವ ಹಲವು ಮಹತ್ವದ ಗ್ರಂಥಗಳು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಹೊಸ ಪ್ರೇರಣೆಯನ್ನು, ಅಂತಃ ಚಕ್ಷುವನ್ನು ನೀಡುವ ಮಹೋನ್ನತ ಜ್ಞಾನವನ್ನು ಹುದುಗಿಸಿಕೊಂಡಿರುವುದ ವಿಜ್ಞಾಣದ ಸಾಧನೆ ಮುಂದುವರಿದಂತೆಲ್ಲ ನಮ್ಮ ಗಮನ, ಗೌರವಗಳಿಗೆ ಪಾತ್ರವಾಗುತ್ತಿರುವುದು ಐತಿಹಾಸಿಕ ಸತ್ಯವಾಗಿದೆ.

ಮಾನವ ಜೀವನದ ಮತ್ತು ದೇಹದ ಸುಸೂಕ್ಷ್ಮ ಅಂಗೋಪಾಂಗಗಳ ಕಾರ್ಯವಿಧಾನಗಳನ್ನು, ಅವುಗಳ ಬಹುಬಳಕೆಯಿಂದಾಗಿ ಅಥವಾ ಅವುಗಳ ಬಗ್ಗೆ ನಿರಂತರ ಗಮನ ಕೊಡದ ಕಾರಣದಿಂದಾಗಿ ಅವುಗಳಿಗೆ ಬಂದೊದಗುವ ವಿವಿಧ ಬಗೆಯ ನ್ಯೂನತೆಗಳನ್ನು ಮತ್ತು ಅವುಗಳ ಪರಿಹಾರ ಕ್ರಮಗಳನ್ನು ಅದ್ಭುತವಾಗಿ ವಿಶ್ಲೇಷಿಸುವ ವೈದ್ಯಕೀಯವನ್ನು ಕುರಿತ ವಿಸ್ತಾರ ಗ್ರಂಥರಾಶಿಯಲ್ಲಿ ಜೈನ ವೈದ್ಯಕೀಯ ಪರಂಪರೆಗೆ ಸಂಬಂಧಿಸಿದ ಒಂದು ಮುಖ್ಯ ಗ್ರಂಥ ಇದು. ಗ್ರಂಥದ ಹೆಸರು ಜೈನ ವೈದ್ಯಕೀಯ ಪರಂಪರೆ. ಗ್ರಂಥಕರ್ತರು ಡಾ. ಧನ್ಯಕುಮಾರ ಇಜಾರಿ ಅವರು. ತಮ್ಮ ವಿಸ್ತಾರವಾದ ಅಧ್ಯಯನ ಮತ್ತು ಪ್ರಯೋಗಗಳ ಫಲವಾಗಿ ಹಾಗೂ ಈ ಕ್ಷೇತ್ರದ ತಮ್ಮ ಶ್ರೀಮಂತ ಅನುಭವದಿಂದಾಗಿ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ. ಆರಂಭದ ಅಧ್ಯಾಯಗಳು ಜೈನ ಪರಂಪರೆಯ ಆಯುರ್ವೇದ ಪದ್ಧತಿ ಹುಟ್ಟಿದ ಬಗೆಗಿನ ಸಂಶೋಧನಾತ್ಮಕವಾದ ಇತಿಹಾಸ; ಭಾರತೀಯ ಮಾತ್ರವಲ್ಲದೆ ಜಗತ್ತಿನ ವೈದ್ಯಕೀಯ ಶಾಸ್ತ್ರಕ್ಕೆ ಜೈನ ಧನ್ವಂತರಿಗಳು ಕೊಟ್ಟ ಕೊಡುಗೆಗಳನ್ನು ಮತ್ತು ಹಿಂದೂ ಪರಂಪರೆಗಿಂತ ಭಿನ್ನವಾಗಿ ಜೈನರು ಆಯುರ್ವೇದ ಕ್ಷೇತ್ರದಲ್ಲಿ ಸಾಧಿಸಿದ ವೈಶಿಷ್ಟ್ಯಗಳನ್ನು ಆರಂಭದ ಅಧ್ಯಾಯಗಳು ವಿವರಿಸುತ್ತವೆ. ಅನಂತರ ಕಲ್ಯಾಣಕಾರಕ, ಖಗೇಂದ್ರಮಣಿದರ್ಪಣ ಮುಂತಾದ ಜೈನ ಆಯುರ್ವೇದ ಪರಂಪರೆಯ ಪ್ರಮುಖ ಗ್ರಂಥಗಳನ್ನು ವಿಶ್ಲೇಷಿಸುವ ಮೂಲಕ ನಮ್ಮ ಪ್ರಾಚೀನರು ಕೇವಲ ಧ್ಯಾನ, ತಪಸ್ಸು, ಅಧ್ಯಯನ, ಮೋಕ್ಷ ಮುಂತಾದ ಅಲೌಕಿಕ ವಿಷಯಗಳಲ್ಲಿ ಮುಳುಗಿಹೋಗದೆ ಅಖಂಡ ಮಾನವ ಕೋಟಿಯ ಬದುಕು ಸತ್ವಪೂರ್ಣವೂ, ಆರೋಗ್ಯಕರವೂ ವಿಶಿಷ್ಟವೂ ಆಗುವಂತೆ ಮಾಡುವ ವಿನೂತನ ಅಧ್ಯಯನ ಮತ್ತು ಪ್ರಯೋಗಗಳಲ್ಲಿ ಅವರು ಹೇಗೆ ನಿರತರಾಗಿದ್ದರು ಎಂಬ ವಿವರಗಳನ್ನು ಈ ಕೃತಿಗಳ ಅಧ್ಯಯನಗಳು ಸ್ಪಷ್ಟಪಡಿಸುತ್ತವೆ. ಮನುಷ್ಯ ಶರೀರ ರಚನೆಯಿಂದ ಹಿಡಿದು ರೋಗರಹಿತ ಬದುಕನ್ನು ನಡೆಸುವ ಬಗೆಗಿನ ವಿವರಗಳು ಇಲ್ಲಿ ಉಲ್ಲೇಖಿತವಾಗಿವೆ. ಶಿಶುಗಳ ಪಾಲನೆ, ಪೋಷಣೆ, ಸ್ತ್ರೀಯರ ಋತುಚಯೇ ಮುಂತಾದವುಗಳ ಕುತೂಹಲಕರ ವಿವರಗಳು ಜೈನಾಚಾರ್ಯರು ಎಷ್ಟು ಸುಸೂಕ್ಷ್ಮವಾಗಿ ಬದುಕನ್ನು ಕಂಡಿದ್ದರು ಮತ್ತು ಅದರ ಬಗ್ಗೆ ಚಿಂತಿಸಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿವೆ. ದ್ರವ್ಯಗಳು, ದ್ರವ್ಯಗುಣಗಳನ್ನು, ಔಷಧ ತಯಾರಿಕೆ, ಪಥ್ಯ ಮತ್ತು ಅನುಪಾನಗಳು ರಸೌಷಧಗಳು, ಹೆಚ್ಚು ವೆಚ್ಚವಿಲ್ಲದೆ ವೈದ್ಯಾವಲಂಬಿಯಾಗದೆ ಮನೆಯಲ್ಲಿಯೇ ಮಾಡಿಕೊಲ್ಳಬಹುದಾದ ಮನೆಮದ್ದುಗಳು, ರೋಗಕಾರಣ ಹಾಗೂ ರೋಗ ನಿದಾನದ ರೋಚಕ ವಿವರಗಳು ಇಲ್ಲಿವೆ. ಕೊನೆಯಲ್ಲಿ ಪ್ರತಿಯೊಂದಕ್ಕೂ ನಿಷ್ಣಾತ ವೈದ್ಯರನ್ನೇ ಅವಲಂಬಿಸದೆ ಮತ್ತು ಪ್ರತಿ ಪರಿಣಾಮವಿಲ್ಲದ ಸುಲಭ ಚಿಕಿತ್ಸೆಗಳನ್ನು ಸ್ವಂತವಾಗಿಯೇ ಮಾಡಿಕೊಳ್ಳಬಹುದಾದ ಸೂಚನೆ ಮತ್ತು ವಿಧಾನಗಳನ್ನು ಇಲ್ಲಿ ವಿಶ್ಲೇಷಣೆಗೆ ಒಡ್ಡಲಾಗಿದೆ. ಹೀಗೆ ಹತ್ತೊಂಬತ್ತು ಅಧ್ಯಾಯಗಳ್ಲಿ ಹರಡಿಕೊಂಡಿರುವ ಈ ಆಯುರ್ವೇದ ಗ್ರಂಥ ಲೇಖಕರ ಅನುಭವ ಮತ್ತು ಅಧ್ಯಯನ ದ್ರವ್ಯಗಳೆರಡರ ಸಮರಸ ಸಂಗಮವಾಗಿದೆ. ಸಾಹಿತ್ಯ ರಂಗದಲ್ಲಿ ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ಭಾರತೀಯರು ಮಾಡಿದ ಅನನ್ಯ ಸಾಧನೆಯ ಧನಾಂಶಗಳು ಈ ಕೃತಿಯಲ್ಲಿ ಮೈದೋರಿವೆ. ದೇಶಿ ಪರಂಪರೆಯ ಮೇಲೆ ಜಾಗತೀಕರಣ ದಾಳಿ ಮಾಡುತ್ತಿರುವ ಈ ಸಂದರ್ಭದಲ್ಲಿ ಈ ಪ್ರವೃತ್ತಿಯಿಂದ ನಾವು ಕಳೆದುಕೊಳ್ಳುತ್ತಿರುವ ನಮ್ಮ ಸ್ವಂತ ಸಂಪನ್ಮೂಲಗಳ ಮತ್ತು ಮಹತ್ವ ಮತ್ತು ಮೌಲ್ಯಗಳು ಎಷ್ಟು ನಿತ್ಯೋಪಯೋಗಿಯಾಗಿವೆ ಮತ್ತು ಇಂದಿಗೂ ಅರ್ಥಪೂರ್ಣವಾಗಿವೆ ಎಂಬುದರತ್ತ ಈ ಕೃತಿ ಬೆರಳು ಮಾಡುತ್ತದೆ. ಇಂಥದೊಂದು ಕೃತಿಯನ್ನು ವಿಶ್ವವಿದ್ಯಾಲಯಕ್ಕಾಗಿ ರಚಿಸಿಕೊಟ್ಟಿರುವ ಡಾ. ಧನ್ಯಕುಮಾರ ಇಜಾರಿ ಅವರಿಗೆ ಅಭಿನಂದನೆಗಳು.

ಡಾ. ಎಚ್.ಜೆ.ಲಕ್ಕಪ್ಪಗೌಡ
ಕುಲಪತಿಯವರು