ಗರ್ಭಾವಕ್ರಾಂತಿ

ಗರ್ಭಧಾರಣವಾದ ೧೦ನೇ ದಿವಸ ಗರ್ಭವು ಕಲಲ ರೂಪದಲ್ಲಿರುವುದು. ಮುಂದಿನ ಹತ್ತು ದಿವಸಗಳಲ್ಲಿ ಅದು ಸ್ಥಿರವಾಗುವುದು. ಮುಂದಿನ ಒಂದು ತಿಂಗಳಿನಲ್ಲಿ ಹನಿ-ಹನಿ ಸೇರಿ ಗಟ್ಟಿಯಾಗುತ್ತ ಹೋಗುವುದು. ಈ ಪ್ರಕಾರ ತನ್ನ ಕಾರ್ಯಾನುಸಾರ ಕ್ರಮವಾಗಿ ಬೆಳೆದು ಐದನೆಯ ತಿಂಗಳಿನಲ್ಲಿ ಮಾಂಸಪೇಶಿಗಳು ವಿಶಾಲವಾಗುವುವು. ಆರನೆಯ ತಿಂಗಳಿನಲ್ಲಿ ಪ್ರತ್ಯೇಕ ಅವಯವಗಳ ರಚನೆ ಆಗುವುದು. ಏಳನೆಯ ತಿಂಗಳಿನಲ್ಲಿ ಚರ್ಮ, ಉಗುರು, ಕೂದಲುಗಳು ಹುಟ್ಟುವುವು. ತದನಂತರ ಎಂಟನೆಯ ತಿಂಗಳಿನಲ್ಲಿ ಮಸ್ತಕ ಭಾಗದ ರಂಧ್ರವು ಸರಿಯಾಗಿ ವ್ಯಕ್ತವಾಗುತ್ತ ಸ್ಫುರಣಗೊಳ್ಳತೊಡಗುವುದು. ೯-೧೦ನೇ ತಿಂಗಳಿನಲ್ಲಿ ಮಗು ಹೆರಿಗೆಯಾಗಿ ತಾಯಿಯಿಂದ ಹೊರಬರುವುದು. ಈ ಅವಧಿಯಾದ ಬಳಕವೂ ಮಗು ಹೊರಬರದಿದ್ದರೆ ಅದಕ್ಕೆನೋ ವಿಕಾರವಾಗಿದೆ ಎಂದು ತಿಳಿಯಬೇಕೆಂದು ಆಚಾರ್ಯರು ಹೇಳಿದ್ದಾರೆ.(ಕಲ್ಯಾಣಕಾರಕ ಅಧ್ಯಾಯ -೨, ಶ್ಲೋಕ ೫೩-೫೪) ಆಯುರ್ವೇದದಲ್ಲಿ ಮಕ್ಕಳ ಶೈಶವಸ್ಥಾಯನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

೧. ಗರ್ಭಸ್ಥ ಶಿಶು- ತಾಯಂದಿರಿಂದ ಪೋಷಣೆ.

೨. ಕ್ಷೀರಾದ – ಮಗುವು ಕೇವಲ ತಾಯಿಯ ಹಾಲನ್ನು ಸೇವಿಸುವ ಆರು ತಿಂಗಳವರೆಗಿನ ಹಂತ.

೩. ಕ್ಷೀರಾದ – ಹಾಲು ಹಾಲು ಇತರ ಆಹಾರ ಪದಾರ್ಥಗಳನ್ನು ತಿನ್ನುವ ಆರು ತಿಂಗಳುಗಳಿಂದ ೨ ವರ್ಷಗಳ ವರೆಗಿನ ಹಂತ.

೪. ಅನ್ನಾದ- ಮುಖ್ಯವಾಗಿ ಹಾಲವನ್ನು ಬಿಟ್ಟು ಇತರ ಆಹಾರ ಪದಾರ್ಥಗಳ ಮೇಲೆಯೇ ಅವಲಂಬಿತವಾಗುವ ಹಂತ – ಎರಡು ವರ್ಷಗಳಿಂದ ೧೬ ವರ್ಷಗಳವರೆಗೆ

ಎರಡರಿಂದ ೫ ವರ್ಷಗಳ ವರೆಗಿನ ಅವಧಿಯನ್ನು ಬಾಲ್ಯಾವಸ್ಥೆ (preschool age) ಎಂದೂ ೬ ರಿಂದ ೧೬ ವರ್ಷಗಳ ಅವಧಿಯನ್ನು ಕುಮಾರಾವಸ್ಥೆ ಎಂದೂ ವಿಭಾಗಿಸಲಾಗಿದೆ.

ಆಯುರ್ವೇದ ಶಾಸ್ತ್ರದಲ್ಲಿ ಮಕ್ಕಳ ಆರೋಗ್ಯದ ಕುರಿತು ಪ್ರತ್ಯೇಕ ಶಾಸ್ತ್ರಗಳಿಲ್ಲ. ಜೈನಾಚಾರ್ಯರು ಮಕ್ಕಳ ಆರೋಗ್ಯದ ಬಗೆಗೆ ಪ್ರತ್ಯೇಕ ಗ್ರಂಥ ರಚಿಸಿರುವ ವಿಷಯ ದೊರಕುತ್ತದಾದರೂ ಗ್ರಂಥ ಲಭ್ಯವಿಲ್ಲ. ಇದು ಪ್ರತ್ಯೇಕ ವಿಷಯವಾಗಿ ಬೆಳೆದಿರದೇ ಪ್ರಸೂತಿ ತಂತ್ರ (obsetrics) ದೊಡನೆ ಬೆಳೆದು ಬಂದಿದೆ. ಮಗುವಿನ ಜನ್ಮ ಗರ್ಭಧಾರಣೆಯೊಂದಿಗೆ ತಾಯಿಯ ಗರ್ಭದಲ್ಲಿ ಪ್ರಾರಂಭವಾಗುವುದು. ಆದ್ದರಿಂದ ಗರ್ಭಸ್ಥ ಶಿಶುವಿನ ಆರೈಕೆಯು ತಾಯಿಯ ಆರೋಗ್ಯವನ್ನೂ ರೂಪಿಸುವುದರೊಂದಿಗೆ ಪ್ರಾರಂಭವಾಗುವುದು. ಏಕೆಂದರೆ ಗರ್ಭದಲ್ಲಿಯೇ ಜೀವಂತ ವ್ಯಕ್ತಿಯ ಅನೇಕ ಜೈವಿಕ ವ್ಯಾಪಾರಗಳು ಗರ್ಭಸ್ಥ ಪಿಂಡದಲ್ಲಿ ನಡೆಯುತ್ತಿರುತ್ತದೆ. ಹೃದಯ ಬಡಿತ, ಕೈ ಕಾಲುಗಳು ಅಲುಗಾಡುವುದು, ಪ್ರಚೋದನೆಗೆ ಭ್ರೂಣ ಪ್ರತಿಕ್ರಿಮಿಸುವುದು, ರಕ್ತ ಪರಿಚಲನೆ, ಈ ಎಲ್ಲ ಕ್ರಿಯೆಗಳು ನಡೆಯುತ್ತವೆ.

ಮಕ್ಕಳ ಆರೋಗ್ಯ ಕುರಿತಾಗಿ ಹೇಳುವ ಕೌಮಾರ ಭೃತ್ಯದಲ್ಲಿ ಈ ಕೆಳಕಂಡ ವಿಷಯಗಳ ಬಗೆಗೆ ಚರ್ಚಿಸಲಾಗಿದೆ.

೧. ಕುಮಾರಭರಣ: ಶಿಶು ಹುಟ್ಟಿದಾರಭ್ಯ ಅದರ ಪಾಲನೆ ಪೋಷಣೆಯನ್ನು ಯಾವ ಪ್ರಕಾರ ಮಾಡಬೇಕೆನ್ನುವುದರ ಕುರಿತು.

೨. ಧಾತ್ರಿ, ಶಿಶುವಿನ ಪಾಲನೆ ಮಾಡುವ ತಾಯಿ(ಧಾತ್ರೀ) ತಾಯಿಗೆ ಎದೆ ಹಾಲು ಇಲ್ಲದಾಗ ಬೇರೊಬ್ಬ ತಾಯಿಯ ಈ ಕೆಲಸಕ್ಕೆ ನಿಯಮಿಸಿದಾಗ ಅವಳು ‘ಧಾತ್ರಿ’ ಎನಿಸುತ್ತಾಳೆ. ಇವಳ ಗುಣ ದೋಷಗಳು ಹಾಗೂ ಎಂತಹ ಧಾತ್ರಿಯನ್ನು ಈ ಕೆಲಸಕ್ಕೆ ನಿಯಮಿಸಿಕೊಳ್ಳಬೇಕೆಂಬ ವಿಚಾರ.

೩.ಕ್ಷೀರದೋಷ ಸಂಶೋಧನ: ಧಾತ್ರಿಯ ಎದೆ ಹಾಲಿನಲ್ಲಿ ಇಲ್ಲವೆ ಇತರ ಸಸ್ತನಿ ಪ್ರಾಣಿಗಳಿಂದ ಕೊಡಬಹುದಾದ ಹಾಲಿನಲ್ಲಿ ಎಂತಹ ದೋಷಗಳು ಸೇರಿರಬಹುದು ಹಾಗೂ ಅವುಗಳ ನಿವಾರಣಾರ್ಥ ಏನು ಕ್ರಮ ತೆಗೆದುಕೊಳ್ಳಬೇಕೆಂಬ ವಿಚಾರ.

೪. ಅಶುದ್ಧ ಹಾಲಿನಿಂದ ಉದ್ಭವಿಸುವ ರೋಗಗಳು : ಅಶುದ್ಧ ಹಾಲು, ನೀರು, ಆಹಾರಗಳಿಂದ ಹುಟ್ಟುವ ರೋಗಗಳ ವಿಚಾರ ಹಾಗೂ ಅವುಗಳ ನಿವಾರಣೋಪಾಯಗಳು.

೫. ಗ್ರಹದೋಷಗಳಿಂದ ಬರುವ ರೋಗಗಳು (ಮನೋರೋಗಗಳು: ಗ್ರಹ ದೋಷ ಹಾಗೂ ಉಪಸರ್ಗಗಳಿಂದ ಬರುವ ಮನೋ ವ್ಯಾಧಿಗಳು ಹಾಗೂ ಅವುಗಳ ನಿವಾರಣೋಪಾಯಗಳು.

ಇಚ್ಛಿತ ಮಗು

ಆಯುರ್ವೇದದಲ್ಲಿ ಯೋಜಿತ ರೀತಿಯಲ್ಲಿ ಮಗುವನ್ನು ಪಡೆಯುವ ಅನೇಕ ವಿಚಾರಗಳನ್ನೂ ಹೇಳಲಾಗಿದೆ. ಕೇಲವ ಲೈಂಗಿಕ ತೃಷೆಯಿಂದ ಆಕಸ್ಮಿಕವೆಂಬಂತೆ ಮಗುವಾಗುವುದನ್ನು ಮಾತ್ರ ಈ ಶಾಸ್ತ್ರ ಖಂಡಿಸುತ್ತದೆ. ಮಗುವಿನ ಜನನವೆಂಬುದು ಒಂದು ಘಟನೆ ಎನಿಸಿರಬಹುದು. ಆದರೆ ದೈಹಿಕ, ಮಾನಸಿಕವಾಗಿ ಆರೋಗ್ಯವಂತನಾದ ಮಗುವಿನ ಹುಟ್ಟು ಹಾಗೂ ವೆಳವಣಿಗೆಗಳಲ್ಲದೇ ಅದಕ್ಕೆ ಮುಂದೆ ತನ್ನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯ ಹಾಗೂ ಸಮಯೋಚಿತ ಬುದ್ಧಿಯಿಂದ ನಗುನಗುತ್ತ ಪರಿಹರಿಸಿಕೊಳ್ಳವಂತಹ ಪ್ರೇರಣಾ ಶಕ್ತಿಯನ್ನು ನಾವು ತುಂಬಬೇಕಾಗುತ್ತದೆ.

ಒಳ್ಳೇ ಮಗುವನ್ನೇ ಹೆರಬೇಕೆಂದು ಎಲ್ಲ ತಾಯಂದಿರು ಇಚ್ಚೆಪಡುವುದು ಸಹಜವಲ್ಲವೇ? ಆದರೆ ಇದಕ್ಕೆ ಪೂರ್ವಸಿದ್ಧತೆ ಮಾಡಬೇಕಾಗುತ್ತದೆ. ಈ ಶಾಸ್ತ್ರದಲ್ಲಿ ವಧು ವರರು ಒಂದೇ ಕುಟುಂಬಕ್ಕೆ ಸೇರಿದವರಾಗಿರಬಾರದು. ಅವರ ವಂಶ, ಗೋತ್ರಗಳು ಬೇರೆ ಬೇರೆಯಾಗಿರಬೇಕು ಎಂದು ಹೇಳಿದ್ದಾರೆ. ಇನ್ನೂ ಒಂದು ಮಹತ್ವದ ಅಂಶವೆಂದರೆ ಏಳು ಸಂಗತಿಗಳಿಂದ ಹೆಣ್ಣು-ಗಂಡುಗಳು ಪರಸ್ಪರ ಸಂಬಂಧಿಗಳಾಗಿರಬಾರದು ಎಂದು ಅಭಿಪ್ರಾಯಪಡಲಾಗಿದೆ. ಇವರ ಪ್ರಕೃತಿಭೇದಗಳು ಕೂಡ ಬೇರೆ ಬೇರೆಯಾಗಿರಬೇಕು. ನಿಮಗೆ ಬೇಕೆಂದ ಗಂಡು ಇಲ್ಲವೇ ಹೆಣ್ಣು ಮಗುವನ್ನು ಪಡೆಯುವ ಯೋಜನೆಗಳಿವೆ. ನಿಮಗೆ ಅತೀ ಬುದ್ಧಿವಂತ, ವಿದ್ಯಾವಂತ ಮಗುವು ಬೇಕೆ? ಸುಂದರ ಮಗು ಬೇಕೆ? ಇವೆಲ್ಲಕ್ಕೆ ಈ ಶಾಸ್ತ್ರದಲ್ಲಿ ಉತ್ತರವಿದೆ. ಪುಂಸವನ ವಿಧಿ(ಐಚ್ಛಿಕ ಮಗುವನ್ನು ಪಡೆಯುವ ಬಗೆ)ಯನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ವಿಧಾನವು ಪೂರ್ವಕಾಲದಲ್ಲಿ ತುಂಬ ಪ್ರಚಲಿತವಾಗಿದ್ದಿತು. ಪುಂಸವನ ವಿಧಿಯನ್ನು ಒಮ್ಮೆ ಮಾತ್ರ ಪ್ರಯೋಗಿಸಬೇಕೆಂದು ಆಚಾರ್ಯರು ಹೇಳಿದ್ದಾರೆ.

ಗರ್ಭಿಣಿ ಸೇವಿಸುವ ಅನ್ನ-ಪಾನಗಳಿಗನುಸರಿಸಿ ರಸ ಧಾತುವಿನ ಅಂಶಗಳು ಉತ್ಪನ್ನವಾಗುತ್ತವೆ. ಈ ರೀತಿಯಲ್ಲಿ ಉತ್ಪನ್ನವಾದ ರಸಧಾತುವಿನಿಂದ ಮಾತ್ರ ಪುಷ್ಟಿಯೂ, ಗರ್ಭಪುಷ್ಟಿಯೂ, ಸ್ತನಪುಷ್ಟಿ(ಒಳ್ಳೆಯ ಎದೆಹಾಲು)ಯು ಉಂಟಾಗಿ ಗರ್ಭ ಪೋಷಣೆ ಆಗಬೇಕು. ಗರ್ಭಸ್ಥ ಶಿಶುವಿಗೆ ತಾಯಿಯಿಂದ ಸಕಾಲಕ್ಕೆ ಪೌಷ್ಟಿಕ ಆಹಾರಗಳು ದೊರಕದಿದ್ದಲ್ಲಿ ಅದರ ಬೆಳವಣಿಗೆ ಸರಿಯಾಗಿ ಆಗುವುದಿಲ್ಲವೆಂದೂ ಉಪವಿಷ್ಟಕ, ಉಪಶುಷ್ಕಲ, ಲೀನಗರ್ಭ ಮೊದಲಾದ ವಿಕೃತಿಗಳುಂಟಾಗುವುವು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಅದೇ ಜನಿಸಿದ ಮಗು: ಅದೇ ಆಗ ಜನಿಸಿದ ಮಗುವಿಗೆ ಈ ಪ್ರಪಂಚ ಒಂದು ಹೊಸ ಅನುಭವ. ಅದೊಂದು ಪೂರ್ಣವಾಗಿ ಬೆಳೆದ ಚಿಕ್ಕ ಮಾನವ ಜೀವಿಯಾದರು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ೩-೪ ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈವರೆಗೆ ಅದಕ್ಕೆ ಉಸಿರಾಟದ ಅವಶ್ಯಕತೆಯೇ ಇಲ್ಲದಿದ್ದುದರಿಂದ ತಾಯಿಯಿಂದ ನೇರವಾಗಿ ರಕ್ತದೊಡನೆ ಆಮ್ಲಜನಕ ದೊರಕುತ್ತಿದ್ದುದರಿಂದ ಆ ಅಂಗಗಳು ಆಹಾರ ಸೇವನೆಯೇ ಇಲ್ಲದಿದ್ದುದರಿಂದ ಪಾಚಕಾಂಗಗಳು ಹಾಗೂ ವಿಸರ್ಜಕಾಂಗಗಳು ಕೆಲಸವಿಲ್ಲದೇ ಕುಳಿತುಕೊಂಡಿದ್ದವು. ಆಗ ಅದು ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳಬೇಕಾಗುತ್ತದೆ. ಹೊರಗೆ ಬಂದೊಡನೆ ಪರಿಸರದ ಉಷ್ಣತೆ ಹಾಗೂ ಗಾಳಿಯಿಂದ ಉತ್ತೇಜನಗೊಳ್ಳುವುದರಿಂದ ಅದರ ಸಂವೇದನೆ ಮೆದುಳಿಗೆ ತಲುಪಿ ಉಸಿರೆಳೆದುಕೊಳ್ಳುವುದಕ್ಕೆ ಕಾರಣವಾಗುವುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇದರಂತೆ ಮಗುವನ್ನು ಪರಿಚಾರಿಕೆಯರು ಇಲ್ಲವೇ ವೈದ್ಯರು ಹೆರಿಗೆ ಆಗುವಾಗ ಹಿಡಿದುಕೊಳ್ಳುವುದರಿಂದ ಚರ್ಮವು ಉತ್ತೇಜಿತಗೊಂಡು ಮೆದುಳಿಗೆ ಸಂವೇದನೆ ತಲುಪಿ ನಿಃಶ್ವಾಸಕ್ಕೆ ಕಾರಣವಾಗಿ ಒಟ್ಟಾರೆ ಉಸಿರಾಟವು ಪ್ರಾರಂಭವಾಗುವುದು.

ಮಗುವಿನ ಸುವರ್ಣ ಪ್ರಾಶನವಿಧಿ

ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಗೆ ನಾವು ಕೊಡುವ ಆಹಾರ – ಔಷಧಿಗಳಲ್ಲಿ ಪೋಷಕಾಂಶಗಳಿರಬೇಕು. ಅದಕ್ಕಾಗಿ ನಮ್ಮ ಹಿರಿಯ ಆಚಾರ್ಯರು ಈ ಬಗ್ಗೆ ಯೋಚಿಸಿ ಮಗು ಚಿಕ್ಕಿದಿರುವಾಗಲೇ ಅದಕ್ಕೆ ‘ಸುವರ್ಣ ಪ್ರಾಶವಿಧಿ’ಯನ್ನು ಯೋಜಿಸಿದ್ದಾರೆ. ಸುವರ್ಣ ಪತ್ರವನ್ನು ಬಜೆ, ಬ್ರಾಹ್ಮಿ, ಶಂಕಪುಷ್ಟಿ, ಶತಾವರಿ, ಅನಂತಮೂಲ, ತ್ರಿಫಲಾ, ಬಲಾ, ಹಿಪ್ಪಲಿ, ಜೀವಂತಿ ಮೊದಲಾದವುಗಳೊಡನೆ ಕೊಟ್ಟರೆ ಮಗುವಿನ ದೈಹಿಕ-ಮಾನಸಿಕ ಬೆಳವಣಿಗೆಗಳು ಸರಿಯಾಗಿ ಆಗುವುದಲ್ಲದೇ ರೋಗ ನಿರೋಧಕ ಶಕ್ತಿಯೂ ಬರುವುದೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ತಾಯಿಯ ಹಾಲು: ಆಯುರ್ವೇದದ ಪ್ರಕಾರ ತಾಯಿಯ ಹಾಲು ರಸಧಾತುವಿನಿಂದಲೇ ಹುಟ್ಟುವುದು. ತಾಯಿ ತೆಗೆದುಕೊಳ್ಳುವ ಆಹಾರ ಜೀರ್ಣವಾಗಿ ಧಾತುಗತವಾಗುವ ಮೊದಲ ಹಂತದಲ್ಲೇ ‘ರಸಧಾತು’ವಾಗುವುದು ಹಾಗೂ ಇಡೀ ದೇಹದ ತುಂಬ ಸಂಚರಿಸುವುದು. ಆಗ ಸ್ತನಗಳ ಭಾಗದಲ್ಲಿ ಬಂದಾಗ ಅಲ್ಲಿಯ ಎಂಜೈಮುಗಳು ಅದನ್ನು ಹಾಲನ್ನಾಗಿ ಪರಿವರ್ತಿಸುವವು. ಆದ್ದರಿಂದ ಹಾಲು ರಸ ಧಾತುವಿನ ಉಪಧಾತುವಾಗಿದೆ. ಕಾರಣ ತಾಯಿ ಸೇವಿಸುವ ಆಹಾರ ಪಾನೀಯಗಳು ವೇಗವಾಗಿ ಹಾಲಿನ ಉತ್ಪತ್ತಿಗೆ ಕಾರಣವಾಗುವುವು.

“ಮಾತು ರೇವ ಪಿಬೇತ್ ಸ್ತನ್ಯಂ ತತ್ಪರಂ ದೇಹವೃದ್ಧಯೋ” ಎಂದರೆ ಮಗುವಿನ ದೈಹಿಕ ಬೆಳವಣಿಗೆಯು ಚೆನ್ನಾಗಿ ಆಗಲು ಕೇವಲ ತಾಯಿಯ ಹಾಲನ್ನೇ ಕೊಡಬೇಕೆಂದು ಹಾಗೂ ಅದೇ ಹಾಲು ಶ್ರೇಷ್ಠ ಆಹಾರವೆಂದು ಹೇಳಲಾಗಿದೆ.

ಯಾವ ಹಾಲನ್ನು ಕುಡಿಸಿದರೆ ಶಿಶುವು ರೋಗವಿಲ್ಲದೆ ಬಲ, ದೇಹ, ಆಯಷ್ಯಗಳ ವೃದ್ಧಿ ಹೊಂದಿ ಶಿಶುವಿಗೂ, ತಾಯಿ ಇಲ್ಲವೇ ಧಾತ್ರಿಗೂ ಯಾವ ತೊಂದರೆಗಳು ಉಂಟಾಗುವುದಿಲ್ಲವೋ ಆ ಹಾಲು ಪೂರ್ಣ ಶುದ್ಧವೆಂದು ತಿಳಿಯಬೇಕೆಂದು ಹೇಳಿದ್ದಾರೆ.

ಆಯುರ್ವೇದದ ಪ್ರಕಾರ ತಾಯಿಯ ಹಾಲು ಮಾತ್ರ ಮಗುವಿಗೆ ತುಂಬ ಒಳ್ಳೆಯದು. ಹಾಲಿನಲ್ಲಿ ಈ ಕೆಳಕಂಡ ಗುಣಗಳು ಕಂಡುಬರುತ್ತಿರುವುದರಿಂದ ಅದೇ ಹಾಲು ಶ್ರೇಷ್ಠವೆಂದು ಅಭಿಪ್ರಾಯಪಡಲಾಗಿದೆ.

೧. ಜೀವನ (Life)

೨. ಬೃಂಹಣ (Roborant)

೩. ಸಾರ್ತ್ಯ(Assimable)

೪. ಸ್ನೇಹನ (Rich in Fat)

೫. ಸ್ಥೈರ್ಯಕರ (Stabilising)

೬. ಶೀತಲ (Cool)

೭. ಕಣ್ಣುಗಳಿಗೆ ಹಿತಕರವಾದದ್ದು

೮. ಬಲವರ್ಧಕ(Energesic)

೯. ಲಘು (Light in Digestion)

೧೦. ದೀಪನಕರ (Digestive)

೧೧. ಪಥ್ಯ (Fit for Babies)

೧೨. ಪಾಚಕ ಹಾಗೂ ರೋಚಕ(Appetiser)

ಈ ಎಲ್ಲ ಉತ್ತಮ ಗುಣಗಳು ತಾಯಿಯ ಎದೆಯ ಹಾಲಿನಲ್ಲಿವೆ ಎಂಬುದು ಆಯುರ್ವೇದದ ಅಭಿಪ್ರಾಯ

ಎದೆಯ ಹಾಲು ಏಕೆ ಕಡಿಮೆ ಆಗುವುವು?: ಕೋಧ, ಶೋಕ, ಮಗುವಿನಲ್ಲಿ ಪ್ರೀತಿ ಇಲ್ಲದಿರುವಿಕೆ, ಒಣಗಿದ- ಪೌಷ್ಠಿಕಾಂಶಗಳಿಲ್ಲದ ಆಹಾರ – ಪಾನೀಯಗಳ ಸೇವನೆ ಅಪತರ್ಪಣ, ಕಾಮ, ಉಪವಾಸವಿರುವುದು, ಆಯಾಸ, ಭಯ, ಪುನಃ ಗರ್ಭಧರಿಸುವಿಕೆ ಈ ಮೊದಲಾದ ಕಾರಣಗಳಿಂದ ‘ತಾಯಿ’ಯ ಎದೆ ಹಾಲು ಕಡಿಮೆ ಆಗುವುವು.

ಈ ಮೇಲ್ಕಂಡ ಕಾರಣಗಳಿಲ್ಲದೆ ಮೊಲೆಗಳಲ್ಲಿ ವಿದ್ರಧಿ (Mummary Abscess)ಯಾಗುವುದು, ಮೊಲೆಯ ತೊಟ್ಟುಗಳು ಸೀಳುವುದು, ತಾಯಿಯಲ್ಲಿನ ಅತಿಯಾದ ಅಶಕ್ತತನ, ಹೆರಿಗೆಯಾದ ಬಳಿಕ ಮಗು ೮-೧೦ ದಿವಸಗಳಾದರೂ ಮೇಲೆ ಹಾಲನ್ನು ಚೀಪದಿದ್ದರೆ, ಈ ಕಾರಣಗಳಿಂದಲೂ ಎದೆ ಹಾಲು ಕಡಿಮೆ ಆಗುವುವು.

ಎದೆ ಹಾಲು ಹೆಚ್ಚು ಮಾಡುವ ಕ್ರಮ

 • ಮನಸ್ಸನ್ನು ಸಿಟ್ಟು, ಶೋಕ, ಭಯ, ಆಯಾಸಗಳಿಂದ ದೂರಮಾಡಿ ಶಾಂತಚಿತ್ತದಿಂದ ಇರುವುದು.
 • ಹಾಳು, ಹಸಿ ಕಾಯಿಪಲ್ಯ, ಬೇಳೆ, ಕಾಳು, ಹಣ್ಣು ಹಂಪಲುಗಳನ್ನು ಆಹಾರದಲ್ಲಿ ವಿಶೇಷವಾಗಿ ಸೇವಿಸುವುದು.
 • ತಾಯಿಯು ಮಗುವಿಗೆ ವೇಳೆಗೆ ಸರಿಯಾಗಿ ಮೊಲೆಗಳು ಪೂರ್ತಿ ಖಾಲಿ ಆಗುವಂತೆ ಹಾಲನ್ನು ಕುಡಿಸಬೇಕು. ಇದರಿಂದ ಹಾಲು ಸರಿಯಾಗಿ ಉತ್ಪತ್ತಿಯಾಗಲು ಕಾರಣವಾಗುವುದು.
 • ಆಹಾರದಲ್ಲಿ ಎಳ್ಳ ಚಿಗಳಿ, ತಾವರೆದಂಟು, ನೆಲಗುಂಬಳ, ಜೇಷ್ಠಮಧು, ಶತಾವರಿ, ಸೊರೆಕಾಯಿ, ಕರಿಬೇವುಗಳನ್ನು ವಿಶೇಷವಾಗಿ ತೆಗೆದುಕೊಳ್ಳಬೇಕು.
 • ಮೆಂತೆಗಳನ್ನು ನೆನೆಸಿ, ರುಬ್ಬಿ ಹಾಲನ್ನು ತೆಗೆದು ಕುಡಿಸುವುದು, ಇಲ್ಲವೆ ಮೆಂತೆಗಳನ್ನು ಅನ್ನದಲ್ಲಿ ಹಾಕಿ ಕೊಡುವುದು. ಇಲ್ಲವೆ ಮೆಂತೆ ಹಾಕಿದ ಉಂಡಿಗಳನ್ನೂ ತಯಾರಿಸಿ ನಿತ್ಯ ತಿನ್ನಲು ಕೊಡುವುದರಿಂದ ಎದೆ ಹಾಲು ಚೆನ್ನಾಗಿ ಬರುವುವು.
 • ಇದೇ ರೀತಿ ಹತ್ತಿಕಾಳುಗಳನ್ನು ನೆನೆಸಿ, ರುಬ್ಬಿಕೊಂಡು ಹಾಲನ್ನು ಕುಡಿದರೂ ಎದೆ ಹಾಲು ಹೆಚ್ಚಾಗಿ ಬರುವುವು. ಇವುಗಳಲ್ಲಿ ವಾಜೀಕರಣ ದ್ರವ್ಯಗಳು, ವಟಾದಿ ಪಂಚವಲ್ಕಗಳಿಂದ ಸೇರಿಸಿ ಪಾಕ ಮಾಡಿದ ಹಾಲು ಇಲ್ಲವೇ ಷಷ್ಠಿಕ ಶಾಲಿ, ದರ್ಬೆ, ಕುಶ, ಕಬ್ಬುಗಳ ಬೇರು, ಸೊಗದೆ ಬೇರು, ಲಾವಂಚ ಇವುಗಳ ಕಷಾಯದೊಡನೆ ಹಾಲನ್ನು ಸೇರಿಸಿ ಪಾಕ ಮಾಡಿದ ಹಾಲನ್ನು ಕುಡಿಯುವುದರಿಂದ ಸ್ವಾಭಾವಿಕವಾಗಿ ಕಡಿಮೆಗೊಂಡ ಎದೆ ಹಾಲು ಹೆಚ್ಚುವುವು.

ಒಟ್ಟಾರೆ ತಾಯಿಗೆ ಎದೆ ಹಾಲು ಬರದಿದ್ದರೆ: ಇದೀಗ ತಾಯಿಗೆ ಎದೆ ಹಾಲು ಇರದಿದ್ದರೆ ಕಡಿಮೆ ಇದ್ದರೆ ನೇರವಾಗಿ ಆಕಳ ಹಾಲು ಇಲ್ಲವೇ ಎಮ್ಮೆ ಹಾಲನ್ನು ಇಲ್ಲವೆ ಪುಡಿ ಹಾಲನ್ನು ಸಿದ್ದಪಡಿಸಿ ಮಗುವಿಗೆ ಕುಡಿಸುವುದು ವಾಡಿಕೆ. ಇದರಿಂದ ಮಗುವಿಗೆ ಅನೇಕ ತೊಂದರೆಗಳು ಕಾಣಿಸಿಕೊಳ್ಳವುದು ಕಂಡುಬಂದಿದೆ. ಈ ಸಮಸ್ಯೆಗಳು ಉದ್ಭವಿಸದಂತೆ ಆಯುರ್ವೇದದಲ್ಲಿ ಒಂದು ಒಳ್ಳೇ ಪರಿಹಾರವನ್ನು ಕಂಡುಹಿಡಿಯಲಾಗಿದೆ. ಅದೇನೆಂದರೆ ಮಗುವಿಗೆ ಹಾಲನ್ನು ಕುಡಿಸಲು ಇನ್ನೊಬ್ಬ ಎದೆ ಹಾಲು ಇರುವ ತಾಯಿಯನ್ನು ನಿಯಮಿಸಿಕೊಳ್ಳುವುದು. ಇಂಥವಳಿಗೆ ‘ಧಾತ್ರಿ’ ಎಂದು ಕರೆಯಲಾಗಿದೆ.

ಮಗುವಿನ ಬಗ್ಗೆ ಪ್ರೀತಿ ಹೊಂದಿದ, ಪತಿ ಸಂಗವನ್ನು ಬಿಟ್ಟ, ಸಮಾನ ಪ್ರಕೃತಿವುಳ್ಳ, ಪಥ್ಯದ, ಆಹಾರ ತೆಗೆದುಕೊಳ್ಳುತ್ತಿರುವ, ಸಮದೇಹದವಳೂ, ರೋಗರಹಿತಳೂ, ಸದಾಚಾರಿಯೂ ಆದ, ಮೊಲೆ ತುಂಬುಗಳು ಮಗುವಿನ ಹಿಡಿಯಲು ಅನುಕೂಲವಾಗಿರುವಂತಹ ‘ಧಾತ್ರಿ’ಯನ್ನೇ ನಿಯಮಿಸಿಕೊಳ್ಳಬೇಕೆಂದು ಆಚಾರ್ಯರು ಹೇಳಿದ್ದಾರೆ.

ಅಶುದ್ಧವಾದ ಎದೆ ಹಾಲು: ಅಜೀರ್ಣ, ಅಸಾತ್ಮ್ಯ, ಭೋಜನ, ವಿಷಮ ಭೋಜನ, ಅಭಷ್ಯಂದಿ ಆಹಾರ, ಮಿಥ್ಯಾಹಾರ, ಶಾರೀರಿಕ ವೇಗಗಳನ್ನು ತಡೆಹಿಡಿಯುವುದು ಇಲ್ಲವೇ ಒತ್ತಾಯದಿಂದ ಹೊರಹಾಕುವುದು. ಅತಿಯದ ಶ್ರಮ, ಪೆಟ್ಟು ಇಲ್ಲವೇ ಆಘಾತಗಳು, ಕ್ರೋಧ, ಮನಃ ಸಂತಾಪ, ಅನಿದ್ರೆ, ಚಿಂತೆ, ಸಿಟ್ಟು, ಅನ್ಯಮನಸ್ಕತೆ – ಈ ಮೊದಲಾದ ಶಾರೀರಿಕ – ಮಾನಸಿಕ ಕಾರಣಗಳಿಂದ ಎದೆ ಹಾಲು ದೂಷಿತಗೊಳ್ಳುವುದು. ಇಂತಹ ಹಾಲನ್ನು ಮಗು ಕುಡಿಯುವುದಿಲ್ಲ. ಕುಡಿದರೆ ಅದರ ಆರೋಗ್ಯವೂ ಕೆಡುವುದು.

ಇಂಥ ದೋಷ ಹೊಂದಿದ ಹಾಲು ವಿವರ್ಣತ್ವ (Dis Colouration)ದ ವಿಗಂಧತ್ವ (Sink) ವಿರಸತಾ (Dis Taste) ಪಿಚ್ಚಿಲತಾ (Slinunen)ಛೇನ ಸಂಘಾತ (Frothiness) ರೂಕ್ಷ (Dry/Less Fat Content) ಗೌರವ (Highion Specipic Gravity) ಅತೀ ಸ್ನಿಗ್ಧಿತಾ (Excessive Fat), ಈ ಲಕ್ಷಣಗಳನ್ನು ಹೊಂದಿರುವುದು. ಈ ತಾಯಿಗೆ ಅವಶ್ಯಕತೆಗನುಸರಿಸಿ ಪಂಚಕರ್ಮ ಚಿಕಿತ್ಸೆ ಕೊಟ್ಟು, ದೇಹ ಶುದ್ಧಿಮಾಡಿ ಅವಶ್ಯಕ ಚಿಕಿತ್ಸೆ ಕೊಡಬೇಕಾಗುವುದು.

ಇತರ ಹಾಲುಗಳು: ಒಂದು ವೇಳೆ ಮೇಲ್ಕಂಡ ಯಾವ ಪ್ರಯತ್ನಗಳು ಫಲಿಸದಿದ್ದ ಪಕ್ಷಕ್ಕೆ ಮಗುವಿಗೆ ಆಡು, ಆಕಳುಗಳ ಹಾಲನ್ನು ಕೊಡಬೇಕೆಂದು ಆಚಾರ್ಯರು ಹೇಳಿದ್ದಾರೆ. ಇವೆರಡು ಮಾತ್ರ ತಾಯಿಯ ಹಾಲಿನಂತೆ ಮಗುವಿಗೆ ಯೋಗ್ಯವಾಗಿದೆ. ಇನ್ನಿತರ ಹಾಲುಗಳಲ್ಲಿ ಬೇರೆ ಬೇರೆ ದೋಷಗಳಿರುವುದರಿಂದ ಅವು ಒಳಿತಲ್ಲವೆಂದು ಹೇಳಲಾಗಿದೆ.

ಹಲ್ಲುಗಳು ಹುಟ್ಟುವುದು: ಮಗು ಸೇವಿಸುವ ಆಹಾರ ಪದಾರ್ಥಗಳು ಪಚನಕ್ಕೆ ಸುಲಭವಾಗುವಂತೆ ಸಣ್ಣ ಸಣ್ಣ ಕಣಗಳನ್ನಾಗಿಸಲು ಬಾಯಿಯಲ್ಲಿ ಹಲ್ಲುಗಳು ಅವಶ್ಯ. ಮಗು ಸ್ವಲ್ಪ ಸ್ವಲ್ಪವಾಗಿ ಗಟ್ಟಿ ಆಹಾರಗಳನ್ನು ಸೇವಿಸುತ್ತಿದ್ದಂತೆ ಮಗುವಿಗೆ ೭ ರಿಂದ ೮ನೇ ತಿಂಗಳಿನಲ್ಲಿ ಹಲ್ಲುಗಳು ಹುಟ್ಟಿ ಬರಲಾರಂಭಿಸುತ್ತವೆ. ೨೦ ರಿಂದ ೨೪ ತಿಂಗಳುಗಳ ಅವಧಿಯಲ್ಲಿ ಎಲ್ಲ ಹಾಲು ಹಲ್ಲುಗಳು ಬರುವುವು. ಶಾಶ್ವತವಾದ ಹಲ್ಲುಗಳು ೬-೭ ವರ್ಷಗಳಿಂದ ಬರಲಾರಂಭಿಸಿ ಎಲ್ಲ ಹಲ್ಲುಗಳು ಬರಬೇಕಾದರೆ ೧೭ ರಿಂದ ೨೧ ವರ್ಷಬೇಕು.

ದಂತ ಸಂಪತ್ : (ಆರೋಗ್ಯಕರ ಹಲ್ಲುಗಳ ಲಕ್ಷಣಗಳು)

ಹಲ್ಲುಗಳು ಪೂರ್ಣವಾಗಿರುತ್ತವೆ.

ಹಲ್ಲುಗಳು ನೇರವಾಗಿರುತ್ತವೆ.

ಹಲ್ಲುಗಳು ದಪ್ಪವಾಗಿರುತ್ತವೆ.

ಹಲ್ಲುಗಳು ಬೆಳ್ಳಗಾಗಿರುತ್ತವೆ.

ಹಲ್ಲುಗಳು ಮಿಂಚುತ್ತಿರುತ್ತವೆ ಹಾಗೂ ನುಣುಪಾಗಿರುತ್ತವೆ.

ಹಲ್ಲುಗಳು ಕೊಳೆರೋಗದಿಂದ ಕೂಡಿರುವುದಿಲ್ಲ.

ಹಲ್ಲುಗಳು ಸ್ವಲ್ಪ ಮೇಲಕ್ಕೊತ್ತಿಕೊಂಡಿರುತ್ತವೆ.

ಒಸಡುಗಳು ಸಮವಾಗಿಯೂ, ಕೆಂಪಗಾಗಿಯೂ, ಜಿಡ್ಡುಳ್ಳದದ್ದಾಗಿಯೂ, ಒಸಡು ಚಪ್ಪಗಾಗಿಯೂ, ಬಿಗಿದಾಗಿಯೂ ಇರುತ್ತವೆ.

ಇವುಗಳಿಗೆ ಹೊರತಾಗಿರುವ ಹಲ್ಲುಗಳು ಆರೋಗ್ಯಪೂರ್ಣವಾಗಿಲ್ಲವೆಂದೂ ತಿಳಿಯಬೇಕು. ಅವುಗಳ ಲಕ್ಷಣಗಳನ್ನೂ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ.

ಹಲ್ಲುಗಳು ಹುಟ್ಟುವಾಗ್ಗೆ ಮಗುವಿಗಾಗುವ ತೊಂದರೆಗಳು: ಮಕ್ಕಳಿಗೆ ಹಲ್ಲುಗಳು ಹುಟ್ಟುವ ಕಾಲದಲ್ಲಿ ಜ್ವರ, ಅತಿಸಾರ, ಕೆಮ್ಮು, ವಾಂತಿ, ತಲೆ ನೋವು, ಮೈ ಅದರುವುದು, ಕಣ್ಣು ಬೇನೆಗಳು ಹಾಗೂ ವಿಸರ್ಪರೋಗ ವಿಶೇಷವಾಗಿ ಕಾಣಿಸಿಕೊಳ್ಳುವುವು. ಇವು ಸ್ವಾಭಾವಿಕವಾಗಿ ಕಂಡುಬರುವ ತೊಂದರೆಗಳು ಹಾಗೂ ವಿಶೇಷ ಚಿಕಿತ್ಸೆ ಅವಶ್ಯಕತೆಯು ಇರುವುದಿಲ್ಲ. ಹೀಗೆಂದು ಅಲಕ್ಷಿಸಬಾರದು.

ಮಗುವಿಗೆ ಸಾಮಾನ್ಯವಾಗಿ ಹಲ್ಲುಗಳು ಬರುವಾಗ ಇನ್ನೂ ಕೆಲ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಗು ಹಗಲು – ರಾತ್ರಿ ಎನ್ನದೆ ಮೇಲಿಂದ ಮೇಲೆ ಅಳಲಾರಂಭಿಸುತ್ತದೆ. ಕೈಗೆ ಸಿಕ್ಕದ ಯಾವುದೇ ವಸ್ತುಗಳನ್ನು ಬಾಯಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಒಮ್ಮೊಮ್ಮೆ ಮಗುವನ್ನು ಎತ್ತಿಕೊಂಡವರ ಬೆರಳುಗಳನ್ನಾಗಲಿ ಇಲ್ಲವೆ ತನ್ನ ಬೆರಳುಗಳನ್ನಾಗಲೀ ಅಥವಾ ತಾಯಿಯ ಮೊಲೆ ತೊಟ್ಟುನ್ನಾಗಲೀ ಕಚ್ಚಬಹುದು. ಇದಕ್ಕೆ ಒಸಡುಗಳಲ್ಲಿ ಹಲ್ಲುಗಳು ಬರುವ ಮುನ್ನ ಕಂಡುಬರುವ ಒಂದು ವಿಧ ಉಬ್ಬು ಹಾಗೆ ಒತ್ತುವಿಕೆಗಳು ಕಾರಣ. ಮೊಲೆಯನ್ನೂ ಚೀಪುವಾಗ ಮಗುವಿಗೆ ವಸಡುಗಳಲ್ಲಿ ನೋವು ಕಂಡುಬರುವುದರಿಂದ ಅದು ಚೆನ್ನಾಗಿ ಹಾಲನ್ನು ಕುಡಿಯುವುದಿಲ್ಲ. ಹೀಗಾಗಿ ಮೇಲಿಂದ ಮೇಲೆ ಅದಕ್ಕೆ ಹಸಿವಾಗಿ ಅಳತೊಡಗುವುದು. ಒಮ್ಮೊಮ್ಮೆ ಮಗುವಿನ ಮೈ ಬಿಸಿಯಾದಂತೆ ತೋರುತ್ತದೆ. ಆದರೆ ಉಷ್ಣಮಾಪಕವನ್ನು ಹಚ್ಚಿ ನೋಡಿದರೆ ಜ್ವರ ಹೆಚ್ಚಾಗಿರುವುದಿಲ್ಲ.

ಹಲ್ಲುಗಳು ಬರುವಾಗ ಮಗುವಿಗೆ ಕಚ್ಚಿ ಹಿಡಿಯಲು ಅನುಕೂಲವಾದಂತಹ ಜಿಲ್ಲಿಬಲ್ಲಿ, ಕರಗದಿರುವ, ಚೂರು-ಚೂರಾದ, ಚೂಪಾಗಿರದ ರಬ್ಬರ್, ಪ್ಲಾಸ್ಟಿಕ್ ಅಟಿಕೆ ಸಾಮಾನುಗಳನ್ನು ಕೊಡಬೇಕು.

ಹಲ್ಲುಗಳು ಹುಟ್ಟುವ ಕಾಲದಲ್ಲಿ ಕಾಣಿಸಿಕೊಳ್ಳುವ ವಿಕಾರಗಳಿಗೆ ಅತಿಯಾದ ಔಷಧೋಪಚಾರಗಳ ಅವಶ್ಯಕತೆ ಇರುವುದಿಲ್ಲ. ಇವುಗಳು ತಮ್ಮಷ್ಟಕ್ಕೆ ತಾವೇ ಉಪಶಮನ ಹೊಂದುತ್ತವೆ ಎಂದು ಆಚಾರ್ಯರು ಹೇಳಿದ್ದಾರೆ. ಅವರು ಈ ಕಾಲಕ್ಕೆ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಹಿಪ್ಪಲಿ ಪುಡಿ, ನೆಲ್ಲಿಕಾಯಿಯ ಪುಡಿಯನ್ನು ತುಪ್ಪದಲ್ಲಿ ಸೇರಿಸಿ ನಿತ್ಯ ೨-೩ ಸಾರೆ ವಸಡುಗಳಿಗೆ ಹಚ್ಚಿ ಮೃದುವಾಗಿ ತಿಕ್ಕಬೇಕು. ಬಜೆ, ಬೃಹತಿ, ಅಗಳು ಶುಂಠಿ, ಅತಿ ವಿಷ, ಮುಸ್ತಾ ಹಾಗು ಮಧುರ ಗಣದ ಔಷಧಿಗಳನ್ನು ಹಾಕಿ ಸಿದ್ಧಪಡಿಸಿದ ಘೃತವನ್ನು ಮಕ್ಕಳಿಗೆ ಕೊಡುವುದರಿಂದ ಯಾವ ತೊಂದರೆಗಳು ಉಂಟಾಗುವುದಿಲ್ಲ. ಇದರೊಡನೆ ಪ್ರವಾಳ ಪಂಚಾಮೃತ, ಮುಕ್ತಾಶಕ್ತಿ, ಕಪ್ಪೆಚಿಪ್ಪು ಮೊದಲಾದ ಭಸ್ಮಗಳನ್ನು ಸುಣ್ಣದ ತಿಳಿನೀರು ಕೊಡುವುದರಿಂದ ನೈಸರ್ಗಿಕ ಸುಣ್ಣದಂಶ ದೊರಕಿದಂತಾಗಿ ಹಲ್ಲುಗಳು ಚೆನ್ನಾಗಿ ಬರಲು ಸಾಧ್ಯವಾಗುವುದು.

ಸ್ತನಪಾನ ನಿಲ್ಲಿಸಿ: ಮಗುವಿಗೆ ಹಲ್ಲುಗಳು ಬಹುತೇಕ ಬಂದ ಬಳಿದ ಎಂದರೆ ೧೮ ತಿಂಗಳುಗಳಾದ ಮೇಲೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿ ಸಂಪೂರ್ಣ ಮೇಲಿನ ಆಹಾರ, ಹಾಲು, ಹಣ್ಣುಗಳನ್ನು ಕೊಡಬೇಕು. ಹಾಲು ಕೊಡುವುದನ್ನು ಬಿಡಿಸಿದ ನಂತರ ಮಕ್ಕಳಿಗೆ ಪೌಷ್ಟಿಕವಾದ ಕೆಲ ಯೋಗಗಳನ್ನು ಶಾಸ್ತ್ರದಲ್ಲಿ ಹೀಗೆ ಹೇಳಿದ್ದಾರೆ.

 • ಪ್ರಿಯಲ ಮಜ್ಜು (ಜಾರುಸೊಪ್ಪು),ಜೇಷ್ಠ ಮಧುಮ ಅರಳ ಹಿಟ್ಟು, ಸಕ್ಕರೆ, ತುಪ್ಪಗಳನ್ನು ಸೇರಿಸಿ ತಯಾರಿಸಿದ ಕಡಬುಗಳು.
 • ಬಿಲಪತ್ರಿಯ ಹೀಚು, ಏಲಕ್ಕಿ, ಸಕ್ಕರೆ, ಅರಳು ಹಿಟ್ಟುಗಳಿಂದ ಕಡಬುಗಳನ್ನು ತಯಾರಿಸಿ ಮಕ್ಕಳಿಗೆ ಕೊಡುವುದರಿಂದ ಮಕ್ಕಳಿಗೆ ಅಗ್ನಿದೀಪ್ತಿ ಉಂಟಾಗುವುದು.
 • ಧಾತಕೀ ಕುಸುಮ, ಸಕ್ಕರೆ ಅರಳು ಹಿಟ್ಟು ಹಾಕಿ ಸಿದ್ಧಪಡಿಸಿದ ಮೇದಿಕ ತಿನ್ನಿಸಿದರೆ ಸುಲಭವಾಗಿ ಪಚನವಾಗುವುದಲ್ಲದೇ ಮಲಮೂತ್ರಗಳು ಸರಿಯಾಗಿ ಹೋಗುವುವು.
 • ಬೆಳಿಗ್ಗೆ ಬೇಗನೆ ಎಬ್ಬಿಸಿರಿ.
 • ನಂತರ ನಿಮ್ಮ ಇಷ್ಟ ದೇವತೆಗಳ ದರ್ಶನ ಮಾಡಿಸಿರಿ.
 • ಬಚ್ಚಲು ಕಕ್ಕಸುಗಳಿಗೆ ಕರೆದುಕೊಂಡು ಹೋಗಿ ಮಲಮೂತ್ರ ವಿಸರ್ಜನೆ, ಹಲ್ಲು ತೊಳೆಯುವುದು, ಮುಖಮಾರ್ಜನ ಮುಂತಾದವುಗಳನ್ನು ಮಾಡಿಸಿರಿ.
 • ಮಗುವಿಗೆ ಅದು ಹುಟ್ಟಿದಾರಭ್ಯ ೮-೧೦ ವಾರಗಳವರೆಗೆ ಮೈ ಕೈಗಳಿಗೆ ಎಣ್ಣೆ ಹಚ್ಚಿ ತಿಕ್ಕುವುದೇ ಸಾಕಷ್ಟು ವ್ಯಾಯಾಮವಾಗುವುದು. ಎದೆ, ಹೊಟ್ಟೆ, ಬಾಹುಗಳು, ಕುತ್ತಿಗೆ ಮೊದಲಾದ ಭಾಗಗಳಿಗೂ ಚೆನ್ನಾಗಿ ಎಣ್ಣೆ ಹಚ್ಚಿ ತಿಕ್ಕಬೇಕು. ಮಗು ಬೆಳೆಯುತ್ತ ಹೋದಂತೆ ಕೆಲ ವಿಧ ವ್ಯಾಯಾಮಗಳನ್ನು ಸೌಮ್ಯವಾಗಿ ಮಾಡುತ್ತಿರಬೇಕು.

ಸ್ನಾನ : ಸ್ನಾನವು ಶರೀರದ ದಾಹ, ಶ್ರಮ, ಬೆವರು, ಮೈ ಕೆರೆತ ಹಾಗೂ ಬಾಯಾರಿಕೆಗಳನ್ನೂ ಕಡಿಮೆ ಮಾಡುವುದು. ಹೃದಯವನ್ನು ಪ್ರಸನ್ನವಾಗಿಸಿ ಕೊಳೆ, ಇಂದ್ರಿಯಗಳ ಶೋಧನೆ ಮಾಡುವುದು. ರಕ್ತ ಶುದ್ಧಿ ಹಾಗೂ ಅಗ್ನಿದೀಪ್ತಿಯನ್ನುಂಟು ಮಾಡುವುದು. ಇದು ಪವಿತ್ರವಾದದಾದ್ದರಿಂದ ನಿತ್ಯ ಮಾಡಿಸಬೇಕು.

ಅಭ್ಯಂಗ: ಆಯುರ್ವೇದದಲ್ಲಿ ಕೇವಲ ಸ್ನಾನಕ್ಕಿಂತ ಎಣ್ಣೆ ಸ್ನಾನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಮಗುವಿನ ತಲೆ , ಮೈ ಕೈ ಅಂಗಾಂಗಗಳಿಗೆಲ್ಲ ತೈಲ (ಎಳ್ಳೆಣ್ಣೆ, ಕೊಬ್ಬರಿಎಣ್ಣೆ ತುಪ್ಪ) ಲೇಪಿಸಿ, ಮೈಗೆಲ್ಲ ಪಸರಿಸುವಂತೆ ಚೆನ್ನಾಗಿ ಉಜ್ಜಿ ನಂತರ ಹೆಚ್ಚು ಬಿಸಿ ಇಲ್ಲದ ನೀರಿನಿಂದ ತಲೆ ಮೇಲೆ ಸ್ನಾನ ಮಾಡಿಸಬೇಕು.

ನಿತ್ಯವೂ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದರಿಂದ ವಯಃ ಸ್ಥಾಪನವಾಗುವುದು. ಬಳಲಿಕೆ, ವಾತ ವಿಕಾರಗಳಾಗುವುದಿಲ್ಲ ದೃಷ್ಟಿ ಶಕ್ತಿ ಬಲಗೊಳ್ಳುವುದು. ಶರೀರ ಬಲವುಳ್ಳದ್ದಾಗುವುದೆಂದು ಆಚಾರ್ಯರು ಹೇಳಿದ್ದಾರೆ.

ತಲೆಗೆ ಅತಿ ಬಿಸಿಯಾದ ಎಣ್ಣೆ ಹಚ್ಚಬಾರದು. ಅಲ್ಲದೆ ಅತಿ ಬಿಸಿಯಾದ ನೀರನ್ನು ಹಾಕಬಾರದು.

ಅನುಲೇಪನ:ಸ್ನಾನವಾದ ಬಳಿಕ ಮಗುವಿನ ಮೈಯನ್ನು ಮೃದುವಾದ ಅರಳಿಯ ಬಟ್ಟೆಯಿಂದ ಒರೆಸಿಕೊಂಡು ನಂತರ ಕರ್ಪುರ, ಚಂದನ, ಅಗರು, ಕೇಶರ ಮೊದಲಾದ ದ್ರವ್ಯಗಳನ್ನು ಸೇರಿಸಿದ ಪುಡಿಯನ್ನು ಮೈಗೆಲ್ಲ ಧೂಳಿಸಬೇಕು. ಇವು ಸುವಾಸನೆಯನ್ನು ಕೊಡುವುದರೊಡನೆ ಪ್ರೀತಿ, ತೇಜಸ್ಸುಗಳನ್ನು ಹೆಚ್ಚಿಸಿ ಚರ್ಮದ ವರ್ಣವಿಕಾವಾಗದಂತೆ ನೋಡಿಕೊಂಡು ಶರೀರದ ಶ್ರಮವನ್ನು ಪರಿಹರಿಸುವವು ಎಂದಿದ್ದಾರೆ.

ಕಣ್ಣಗಳಿಗೆ ಅಂಜನ: ಕಣ್ಣುಗಳಿಗೆ ಔಷಧಿ ದ್ರವ್ಯಗಳನ್ನು ಪ್ರಯೋಗಿಸುವುದಕ್ಕೆ ‘ಅಂಜನ’ ಎನ್ನುವರು. ಕಣ್ಣುಗಳು ಆಯುರ್ವೇದ ಪ್ರಕಾರ ಆಲೋಚಕ ಪಿತ್ತದಿಂದ ದೃಷ್ಟಿಶಕ್ತಿಯನ್ನು ಹೊಂದಿರುತ್ತದೆ. ಕಣ್ಣುಗಳಲ್ಲಿ ಕಫ ದೋಷಗಳು ಹೆಚ್ಚಾದರೆ ಆಲೋಚಕ ಪಿತ್ತವು ದುರ್ಬಲವಾಗಿ ದೃಷ್ಟಿ ರೋಗಗಳು ಹುಟ್ಟಿಕೊಳ್ಳುವುವು. ಆದ್ದರಿಂದ ಕಣ್ಣುಗಳಿಗೆ ಈ ತೊಂದರೆ ಆಗಬಾರದೆಂದು ಅಂಜನವನ್ನು ಹಾಕಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ನಿತ್ಯ ಸ್ರೋತಾಂಜನವನ್ನು, ವಾರಕ್ಕೊಮ್ಮೆ ರಸಾಂಜನವನ್ನು ಹಾಕಬೇಕು. ಕಣ್ಣು ಶುದ್ಧಿಗೊಳಿಸಿದ ಬಳಿಕ ಚಿನ್ನ, ಬೆಳ್ಳಿ, ತಾಮ್ರದಿಂದ ತಯಾರಿಸಿದ ಶಲಾಕೆಗಳಿಂದ ಅಂಜನವನ್ನು ಹಚ್ಚಬೇಕು. ಶಲಾಕೆಗೆ ಅಂಜನವನ್ನು ಹಚ್ಚಿ ನಂತರ ಅದನ್ನು ಎರಡು ರೆಪ್ಪೆಗಳ ಮಧ್ಯೆ ಇಟ್ಟು ಕಣ್ಣು ಮುಚ್ಚಿ ಶಲಾಕೆಯನ್ನು ಈಚೆಗೆ ತೆಗೆದುಕೊಳ್ಳಬೇಕು.

ಆಹಾರ: ನಾವು ಬದುಕಲು ಗಾಳೀ ನೀರುಗಳು ಅವಶ್ಯವಾಗಿರುವಂತೆ ಆಹಾರವೂ ಅಷ್ಟೇ ಅವಶ್ಯವಾಗಿದೆ. ನಮ್ಮ ದೇಹದಲ್ಲಿಯ ಶರೀರೇಂದ್ರಿಯ ಸತ್ವಗಳು ಸತತವಾಗಿ ಕ್ರೀಯಾಶೀಲವಾಗಿರುತ್ತವೆ. ಆದ್ದರಿಂದ ಎಲ್ಲೆಡೆಗೂ ಘರ್ಷಣೆ ನಡೆದು ತನ್ಮೂಲಕ ಶಾಖ ಉತ್ಪತ್ತಿಯಾಗಿ ಕ್ರಿಯೆಯು ನಡೆಯುವುದು. ಮಗು ಹೆಚ್ಚು ಹೆಚ್ಚು ಕ್ರಿಯಾಶೀಲವಾದಂತೆ ಕ್ಷಯಿಸುವ ಪ್ರಮಾಣವೂ ಹೆಚ್ಚುತ್ತಲಿರುವುದು. ಈ ಕ್ರಿಯೆಯು ಹಗಲು ರಾತ್ರಿ ಒಂದೇ ಸಮನೆ ದೇಹದಲ್ಲಿ ನಡೆಯುತ್ತಿರುವುದು. ಈ ಕ್ಷಯಿಸುವಿಕೆಯನ್ನು ತುಂಬಲು ಹಾಗೂ ಮಗುವಿನ ಬೆಳವಣಿಗೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಯೋಜಿಸಬೇಕಾಗುತ್ತದೆ.

ಶರೀರದ ಬಣ್ಣ, ಪ್ರಸನ್ನಭಾವ, ಜೀವಂತತನ, ಪ್ರತಿಭೆ, ಸುಖ, ತುಷ್ಟಿ, ಪುಷ್ಟಿ, ಬಲ, ಬುದ್ಧಿ, ಶಕ್ತಿಗಳೆಲ್ಲ ಆಹಾರವನ್ನೇ ಅವಲಂಬಿಸಿವೆ. ಆಹಾರವು ಜೀವಿಗಳಿಗೆ ಸರಿಯಾಗಿ ಪೂರೈಸಲ್ಪಡದಿದ್ದರೆ ಈ ಅಂಶಗಳಲ್ಲಿ ಹೀನಮಯವಾಗಿ ಜೀವಿಸುವುದೇ ಅಸಾಧ್ಯವಾಗುವುದು. ಕಾರಣ ಮಗುವಿನ ಬೆಳವಣಿಗೆಯನ್ನು ಗಮನಿಸುತ್ತ ಈ ಮೊದಲು ಕೊಟ್ಟಂತೆ ಕೇವಲ ಹಾಲನ್ನು ಅಷ್ಟೇ ಕೊಡದೇ ಗಟ್ಟಿ೯ ಆಹಾರಗಳನ್ನು ತರಕಾರಿಗಳು, ಹಣ್ಣು ಹಂಪಲುಗಳನ್ನು ಕೊಡಬೇಕಾಗುತ್ತದೆ. ಇವುಗಳ ದ್ರವಾಹಾರಗಳನ್ನು ಬಾಟಲಿಗೆ ಹಾಕಿ ಕುಡಿಸದೇ ಒಳಲಿಯಿಂದ ಇಲ್ಲವೇ ಚಮಚದಿಂದ ಹಾಕಬೇಕು. ಮಗು ಆರು ತಿಂಗಳಾದ ಬಳಿಕ ಮೇಲಿನ ಹಾಲಿನ ನೀರನ್ನು ಸೇರಿಸದೇ ಕೊಡಬೇಕು. ಮೊದಮೊದಲು ಗಂಜಿಯನ್ನು ಕುಡಿಸುತ್ತ ಕ್ರಮೇಣ ಗಟ್ಟಿ ಆಹಾರವನ್ನು ರೂಢಿ ಮಾಡಿಸಬೇಕು. ಇದಕ್ಕೊಂದು ನಿಯಮಿತ ವೇಳೆಯನ್ನಿಟ್ಟುಕೊಳ್ಳಬೇಕು. ಮೇಲಿಂದ ಮೇಲೆ ಆಹಾರ ಇಲ್ಲವೇ ಹಾಲುಗಳನ್ನು ಕೊಡುವುದರಿಂದ ಅಜೀರ್ಣ ವಿಕಾರಗಳು ಕಂಡುಬರುವುವು. ಮೊದಲು ಚೆನ್ನಾಗಿ ಬೇಯಿಸಿದ, ಮೆತ್ತಗಿರುವ ಧಾನ್ಯದ ಆಹಾರವನ್ನು ಸ್ವಲ್ಪ ಹಾಲಿನ ಜೊತೆ ಕಲಿಸಿ ಕೊಡಬೇಕು. ಮೆಂತೆ ಪಲ್ಯ, ಕಿರಕಸಾಲಿ, ಹೀರೆಕಾಯಿ, ಸವತೆಕಾಯಿ, ಬೀನ್ಸ್, ಬೇಳೆಕಟ್ಟು, ಟೋಮ್ಯಾಟೋರಸಗಳನ್ನು ಮೆತ್ತನ್ನ ಅನ್ನಕ್ಕೆ ತುಪ್ಪ ಹಾಲು ಸೇರಿಸಿ ಕೊಡಬೇಕು.

ಮಗು ದೊಡ್ಡದಾಗುತ್ತ ಹೋದಂತೆ ಮನೆಯಲ್ಲಿ ನಿತ್ಯ ತಯಾರಿಸಿದ ಆಹಾರ ಪದಾರ್ಥಗಳನ್ನೇ, ಕೊಡುತ್ತ ಹೋಗಬೇಕು. ಆದರೆ ಬೆಳೆಯುವ ಮಕ್ಕಳಿಗೆ ಪೌಷ್ಠಿಕ ಆಹಾರಗಳೂ ಬೇಕು. ಜೋಳದ ರವೆ ಉಪ್ಪಿಟ್ಟು, ಮೊಳಕೆಯೊಡೆದ ಕಾಳುಗಳು, ಕಿಚಡಿ, ತರಕಾರಿಗಳನ್ನು ಹಾಕಿ ಸಿದ್ಧಪಡಿಸಿದ ರೊಟ್ಟಿ, ಅನ್ನ, ಗೋಧಿ ಹಲ್ವ, ಗೋಧಿ ಉಂಡೆ ಮುಂತಾದವುಗಳನ್ನು ಕೊಡಬೇಕು. ಮನೆಯಲ್ಲಿ ಬಡತನವಿದ್ದರೂ ರಾಗಿ ಹಿಟ್ಟಿನ ಸಜ್ಜಿಗೆ, ಕಾಯಿಪಲ್ಲೆಗಳ ಕಟ್ಟು, ಹೆಸರು ಬೇಳೆ, ಗೋಧಿ ಸೇರಿಸಿದ ಅಕ್ಕಿ ಗಂಜಿ, ಹಸಿಪಲ್ಲೆ, ಸಾರು, ಗೋಧಿ ಹಿಟ್ಟಿನ ಬಿಸ್ಕತ್, ಹೆಸರು ಬೇಳೆ ಪಾಯಸ, ಗೋಧಿ ಅನ್ನ, ರಾಗಿ ಅಂಬಲಿ, ರಾಗಿ ಮಾಲ್ಟ, ಜೋಳದ ಇಡ್ಲಿ ಮುಂತಾದವುಗಳನ್ನು ಸಿದ್ದಪಡಿಸಿಕೊಡಬಹುದು. ಸಿರಿವಂತರ ಮಕ್ಕಳೂ ಸಹ ಸರಿಯಾದ ಆಹಾರ ಯೋಜನೆ ಇಲ್ಲದೇ ಆಹಾರ ಕೊರತೆಯಿಂದ ಬಳಲುತ್ತಿರುತ್ತಾರೆ ಎಂಬಂಶವನ್ನೂ ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು.

ನಿದ್ರೆ: ನಮ್ಮ ದಿನನಿತ್ಯದ ಕೆಲಸಗಳಿಂದ ಮನಸ್ಸು ಹಾಗೂ ಕರ್ಮೆದ್ರಿಯಗಳು ಬಳಲಿ, ಸೋತು ಬಂದಾಗ ಅವುಗಳಿಗೆ ವಿಶ್ರಾಂತಿ ದೊರಕಲೆಂದು ಪ್ರಕೃತಿಯು ಬರಿಸುವುದು. ಸುಖವಾದ ನಿದ್ರೆಯಿಂದ ಆರೋಗ್ಯ ಶಕ್ತಿ, ಪುಷ್ಟಿ, ಜ್ಞಾನ ವೀರ್ಯವಂತಿಕೆಗಳು ಲಭಿಸುವುವು. ನಿದ್ರೆ ಇರದಿದ್ದರೆ ದುಃಖ(ನೋವು)ಸೊರಗುವಿಕೆ, ದೌರ್ಬಲ್ಯ, ವೀರ್ಯಹೀನತೆ, ಅಜ್ಞಾನಗಳುಂಟಾಗುವುವು. ಮುಖ್ಯವಾಗಿ ಪೂರ್ಣಆರೋಗ್ಯದ ಸುಖಾನುಭವವು ಸುಖವಾದ ನಿದ್ರೆಯಿಂದ ಮಾತ್ರ ಸಾಧ್ಯ. ಈ ಮಾತಿಗೆ ಮಕ್ಕಳು ಹೊರತಾಗಿಲ್ಲ.

ನಿದ್ರೆ ಚಿಕ್ಕಮಕ್ಕಳಿಗೆ ವಯಸ್ಸಿಗನುಸಾರ ಕಫದ ಪ್ರಾಮುಖ್ಯತೆ ಹೆಚ್ಚಾಗಿರುವುದರಿಂದ ಹೆಚ್ಚು ಹೊತ್ತ ಮಲಗಿಕೊಳ್ಳುವರು. ಸಾಮಾನ್ಯವಾಗಿ ಮಗುವಿಗೆ ಒಂದು ತಿಂಗಳಾಗುವ ಹೊತ್ತಿಗೆ ಸುಮಾರು ೨೨ ತಾಸುಗಳ ಕಾಲ ನಿದ್ರೆ ಇರುತ್ತದೆ. ಮಗು ಬೆಳೆಯುತ್ತ ಹೋದಂತೆಲ್ಲ ಇದರ ಪ್ರಮಾಣವು ಕಡಿಮೆಯಾಗುತ್ತ ಹೋಗುವುದು. ಅದಕ್ಕೆ ಆರು ತಿಂಗಳುಗಳಾದಾಗ ೨೦ ಗಂಟೆಗಳಿದ್ದು, ಕ್ರಮೇಣ ಒಂದು ವರ್ಷದ ವೇಳೆಗೆ ೧೬ ಗಂಟೆಗಳಿಗೆ ನಿಲ್ಲುವುದು. ಮಗು ಬೆಳೆಯುತ್ತ ಹೋದಂತೆ ಬೆಳಿಗ್ಗೆ ಹಾಗೂ ಸಾಯಂಕಾಲ ಒಂದೆರಡು ಗಂಟೆಗಳಷ್ಟು ಮಲಗಿಕೊಳ್ಳುವುದು.

ಮಗುವನ್ನು ಚೆನ್ನಾಗಿ ಗಾಳಿ ಬೆಳಕುಗಳು ಬರುವ ಕೋಣೆಯಲ್ಲಿ ಮಲಗಿಸಬೇಕು. ಆದರೆ ಗಾಳಿ ಹೆಚ್ಚಿ ಬೀಸುತ್ತಿರಬಾರದು. ಮಗುವಿಗೆ ಭಾರವಾದ ಕಂಬಳಿ ರಗ್ಗುಗಳನ್ನು ಹೊದ್ದಿಸಬಾರದು, ಉಸುರು ಕಟ್ಟುವಂತೆ ಹೊದ್ದಿಸಬಾರದು. ಸೊಳ್ಳೆ ಪರದೆ ಹಾಕಬೇಕು. ಗಲಾಟೆ ಆಗದಂತೆ ನೋಡಿಕೊಳ್ಳಬೇಕು. ತೊಟ್ಟಿಲು ಇಲ್ಲವೆ ಜೋಳಿಗೆಯಲ್ಲಿ ಮಗುವನ್ನು ಮಲಗಿಸಬೇಕು. ನಿದ್ರೆಬಾರದಿರುವ ಮಗುವನ್ನು ಒತ್ತಾಯದಿಂದ ಮಲಗಿಸಬಾರದು. ಹಾಗೆನೇ ನಿದ್ರೆ ಮಾಡುತ್ತಿದ್ದ ಮಗುವನ್ನು ಎಚ್ಚರಿಸಬಾರದು.

ಮಕ್ಕಳ ಗ್ರಹಬಾಧೆಗಳು

ಮಕ್ಕಳ ಆಕಾರ ಮತ್ತು ಶರೀರ ಚೇಷ್ಟೆಗಳನ್ನು ನೋಡಿಕೊಂಡು ಮತ್ತು ಅದರ ವಿಷಯದಲ್ಲಿ ಸರಿಯಾಗಿ ಕೇಳಿಕೊಂಡು ಬಾಲಗ್ರಹ ಇಲ್ಲವೆ ಭೂತಚೇಷ್ಟೆಯನ್ನು ಪರೀಕ್ಷೆ ಮಾಡಬೇಕು. ಒಂದು ವೇಳೆ ಇದು ಬಾಲಗ್ರಹವೇ ಆಗಿದ್ದರೆ ಅದಕ್ಕೆ ಹೋಮ, ಧೂಮಬಲಿ (ಪ್ರಾಣಿಬಲಿ ಅಲ್ಲ) ಮಂಡಲ, ಯಂತ್ರ, ಹಾಗೂ ಭೂತ ತಂತ್ರೋಕ್ತ ಭೂತವಿಕಾರಗಳನ್ನು ದೂರಮಾಡುವ ಔಷಧಗಳಿಂದ ಉಪಶಮನ ಮಾಡಬೇಕೆಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ. (.೧೨, ಶ್ಲೋಕ.೭೯,೮೦)

ಮನೆಯಲ್ಲಿರುವವರು ಮಕ್ಕಳು ಹಟ ಮಾಡಿದಾಗಲೆಲ್ಲ ಹೆದರಿಸುವುದು (ಭೂತದ ಕೈಗೆ ಕೊಡುತ್ತೇನೆ ಇತ್ಯಾದಿ) ಹೊಡೆಯುವುದು, ಕಷ್ಟಕೊಡುವುದ ಹಾಗೂ ಅಸ್ವಚ್ಛವಾದ, ಶೂನ್ಯಮನೆಯಲ್ಲಿ (ಹೆದರಿಕೆಯಾಗುವ, ಯಾರೂ ವಾಸಿಸದಿರುವ) ಇರುವುದು ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳಿಗೆ ಗ್ರಹಗಳು ಕಷ್ಟವನ್ನುಂಟು ಮಾಡುತ್ತವೆ. (..೧೮, ಶ್ಲೋಕ೬೯)

ಶಾಸ್ತ್ರದಲ್ಲಿ ಕಿನ್ನರ ಗ್ರಹ, ಕಿಂಪುರುಷ ಗ್ರಹ, ಗರುಡ ಗ್ರಹಮ, ಗಂಧರ್ವಗ್ರಹ, ರೇವತಿಗ್ರಹ, ಪೂನತಾಗ್ರಹ, ಅನುಪೂತನಾಗ್ರಹ, ಶೀತಪೂತನಾಗ್ರಹ, ಪಿಶಾಚಗ್ರಹ, ರಾಕ್ಷಸಗ್ರಹ – ಹೀಗೆ ಹತ್ತು ವಿಧ ಗ್ರಹದೋಷಗಳು ಮಕ್ಕಳನ್ನು ಪೀಡಿಸುತ್ತವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಕಂಡುಬರುವ ಲಕ್ಷಣಗಳನ್ನು ವಿಶ್ಲೇಷಿಸಿದಾಗ ಆಹಾರ-ವಿಹಾರಗಳಲ್ಲಿ ಕಂಡುಬರುವ ದೋಷಗಳಿಂದಾಗುವ ಅಜೀರ್ಣ, ಜ್ವರ, ಬಿಕ್ಕು, ವಾಂತಿ, ಭೇದಿ, ಕಾಮಾಲೆ, ಶರೀರ ಕ್ಷೀಣತೆ, ಮೈಯಲ್ಲಿ ಹುಣ್ಣು, ಪಾಂಡುವಿಕಾರ, ಅಪಸ್ಮಾರ, ಜಂತುವಿಕಾರ, ಭಯ-ಹೆದರಿಕೆಗಳಿಂದಾಗುವ ಮಾನಸಿಕ ವಿಕಾರಗಳು – ಇವೇ ಮುಖ್ಯವಾಗಿವೆ. ಜ್ವರ ಹೆಚ್ಚಿಗೆ ಬಂದಾಗ ಕಂಡುಬರುವ ಮಿದುಳಿನ ಬಾವು ಇತ್ಯಾದಿಗಳೆಲ್ಲ ಇವಕ್ಕೆ ಮಾಡುವ ವಿಧಾನಗಳೊಡನೆ ರೋಗಕ್ಕೆ ಅವಶ್ಯಕ ಔಷಧಿ ಚಿಕಿತ್ಸೆಯನ್ನು ಮಾಡಬೇಕು. ಮನೆಯಲ್ಲಿರುವ ದೇವರಿಗೆ ನಿತ್ಯ ಗಂಧ, ಪುಷ್ಟ, ನೈವೇದ್ಯಗಳಿಂದ ಪೂಜೆ ಮಾಡುತ್ತಲಿದ್ದರೆ ಇಂತಹ ಗ್ರಹ ದೋಷಗಳಿಂದ ಮಕ್ಕಳಿಗೆ ರಕ್ಷಣೆ ದೊರಕುತ್ತದೆ ಎಂದು ಅಧ್ಯಾಯದ ಕೊನೆಗೆ ಹೇಳಿದ್ದಾರೆ. (ಕ.ಅ.೧೮, ಶ್ಲೋಕ-೧೧೪)