ತ್ರಿದೋಷಗಳು

ಎಲ್ಲ ಶಾಸ್ತ್ರಗಳು ತಮ್ಮ ತಮ್ಮ ಧೋರಣೆಗಳನ್ನು ಸಹಾಯಕವಾಗುವಂತೆ ಕೆಲವು ತತ್ವಗಳನ್ನು ಮೂಲವಾಗಿಟ್ಟುಕೊಂಡು ತನ್ಮೂಲಕ ಅನೇಕ ವಿಷಯಗಳನ್ನು ಮಂಡಿಸುತ್ತ ಹೋಗುತ್ತವೆ. ಆಯುರ್ವೇದವು ‘ತ್ರಿದೋಷ ಸಿದ್ಧಾಂತ’ವನ್ನೇ ಮೂಲವನ್ನಾಗಿಸಿಕೊಂಡಿದೆ. ಚಂದ್ರ, ಸೂರ್ಯ, ಅನಿಲರು ಈ ವಿಶ್ವವನ್ನು ವಿಸರ್ಗ, ಅದಾನ, ವಿಪೇಕ್ಷಗಳಿಂದ ರಕ್ಷಿಸುವಂತೆ ಕಫ, ಪಿತ್,ತ ಹಾಗೂ ವಾತಗಳು ನಮ್ಮ ಶರೀರವನ್ನು ರಕ್ಷಿಸುತ್ತವೆ.

ಮಾನವ ಪ್ರಕೃತಿ

ಸಾಮಾನ್ಯವಾಗಿ ಪ್ರಕೃತಿ ಎಂದರೆ ನಮ್ಮ ಶರೀರಗುಣವೆಂದು ಅಭಿಪ್ರಾಯಪಡುತ್ತೇವೆ. ಸ್ಥೂಲವಾಗಿ ನೋಡಿದರೆ ಇದೇ ಮಾತು ಸತ್ಯವೆನಿಸುತ್ತದೆ. ಈ ಪ್ರಕೃತಿಯನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆಹಾರ, ವಿಹಾರ ಔಷಧಿಗಳಿಂದಲೂ ಸಹ ಕೃಶಪ್ರಕೃತಿಯವನಿಗೆ ಅದೆಷ್ಟು ಊಟ, ಹಾಲು, ಹಣ್ಣು ಹಂಪಲು, ಔಷಧಿಕ, ರಸಾಯನಗಳನ್ನು ಕೊಟ್ಟರೂ ಅವನು ದಪ್ಪನಾಗುವುದಿಲ್ಲ. ಹಾಗೆನೇ ಸ್ಥೂಲ ಪ್ರಕೃತಿಯವರನ್ನು ಕೆಲ ದಿವಸ ಉಪವಾಸ ಹಾಕಿದರೂ (ಕೇವಲ ನೀರಿನ ಮೇಲಿಟ್ಟು) ಅವರ ತೂಕ ಬೇಗನೇ ಇಳಿಯುವುದಿಲ್ಲ. ದಂಪತಿಗಳಿಗೆ ಹುಟ್ಟಿದ ಕೆಲ ಮಕ್ಕಳಲ್ಲಿ ಎಲ್ಲರೂ ಒಂದೇ ರೂಪ, ನಡೆ, ನುಡಿ, ಸ್ವಭಾವ ಇತ್ಯಾದಿ ಅಂಶಗಳನ್ನು ಹೊಂದಿರುವುದಿಲ್ಲ. ಒಬ್ಬನಿಗೆ ಒಂದು ಪದಾರ್ಥ ಇಷ್ಟವಾದರೆ ಇನ್ನೊಬ್ಬನಿಗೆ ಅದು ಆಗುವುದಿಲ್ಲ. ಒಬ್ಬನಿಗೆ ಚಳಿ ಇಷ್ಟವಾದರೆ ಇನ್ನೊಬ್ಬನು ಒಳಗೆ ಹೋಗಿ ಬೆಚ್ಚಗೆ ಮಲಗಿಬಿಡುತ್ತಾನೆ. ಊಟದಲ್ಲೂ ಹೀಗೆ, ಆಟದಲ್ಲೂ ಹೀಗೆ, ಪಾಠದಲ್ಲೂ ಹೀಗೆ. ಇದಕ್ಕೆಲ್ಲ ಅವರವರ ಪ್ರಕೃತಿ ಗುಣವೇ ಕಾರಣ.

ಪ್ರಕೃತಿ ಹುಟ್ಟುವಿಕೆ: ಗರ್ಭಾಶಯದಲ್ಲಿ ಢಿಂಬಾಣು-ವೀರ್ಯಾಣುಗಳು ಅದೆ ಸಮ್ಮಿಳಿತವಾಗಿ ಗರ್ಭಧಾರಣೆಯಾದಾಗ ಅದಕ್ಕೆ ಆತ್ಮ ಸೇರಿ ಜೀವಸಂಚಾರ ಪ್ರಾರಂಭವಾಗುವುದು. ಅದೇ ಕಾಲದಲ್ಲಿ ಆ ಪಿಂಡದಲ್ಲಿ ಸೇರಿದ ವಾತ, ಪಿತ್ತ, ಕಫಾದಿ ಗುಣಗಳ ಮೇಲೆ ಪ್ರಕೃತಿ ಹುಟ್ಟಿಕೊಳ್ಳುವುದು. ವಾತದೋಷ ಪ್ರಧಾನವಾಗಿದ್ದರೆ ವಾತಪ್ರಕೃತಿ, ಪಿತ್ತದೋಷ ಪ್ರಧಾನವಾಗಿದ್ದರೆ ಪಿತ್ತ ಪ್ರಕೃತಿ-ಹೀಗೆ ತ್ರಿದೋಷಗಳೂ ಸಮವಾಗಿದ್ದರೆ ‘ಸಮಪ್ರಕೃತಿ’ ಎನಿಸುವುದು. ಮುಂದೆ ಆಯಾ ಪ್ರಕೃತಿಯವರಿಗೆ ಜನಿಸುವ ಮಕ್ಕಳು ಸಹ ಅದೇ ಪ್ರಕೃತಿಯ್ನನು ಪಡೆಯುತ್ತಾರೆ.

ಸ್ಥೂಲಕೃಶ ಶರೀರಗಳು

ಶರೀರದಲ್ಲಿ ಕೃಶ -ಸ್ಥೂಲ ಹಾಗೂ ಮಧ್ಯಮಗಳೆಂದು ಮೂರು ವಿಧ. ಇದರಲ್ಲಿ ಮಧ್ಯಮ ಶರೀರವೇ ಪ್ರಧಾನವೆನಿಸಿದೆ. ಸ್ಥೂಲ ಹಾಗೂ ಕೃಶ ಇವೆರಡು ಶರೀರ ಅತಿಯಾದ ಕೆಲಸ, ವಾಹನ ಸವಾರಿ ಇತ್ಯಾದಿ ಎಲ್ಲ ಕೆಲಸಗಳಲ್ಲಿ ಉಪಯೋಗವಿಲ್ಲದವೆನಿಸಿವೆ. ಆದ್ದರಿಂದ ಸರ್ವದೃಷ್ಟಿಯಿಂದ ನೋಡಿದರೂ ಮಧ್ಯಮ ಶರೀರವೇ ಯೋಗ್ಯವೆನಿಸಿದೆ.

ಸ್ಥೂಲನಾದವನಿಗೆ ಯಾವಾಗಲೂ ಒಣ ಔಷಧಿ, ಆಹಾರವನ್ನು ಕೊಟ್ಟು ಕೃಶನನ್ನಾಗಿ ಮಾಡಬೇಕು. ಕೃಶನಾದವನಿಗೆ ಸ್ನಿಗ್ದವಾದ ಔಷಧಿ, ಆಹಾರ, ಅನ್ನಗಳನ್ನು ಕೊಟ್ಟು ಮಧ್ಯಮ ಶರೀರ ಆಗುವ ಹಾಗೆ ಯತ್ನಿಸುತ್ತಿರಬೇಕು. ಮಧ್ಯಮ ಶರೀರಿಯಾದವನು ಸದಾ ಪಥ್ಯವನ್ನೆ ಮಾಡುತ್ತ ದೇಹ ಕೃಶ ಇಲ್ಲವೆ ದಪ್ಪವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.

ಕೃಶ ಶರೀರದಲ್ಲಿ ದೋಷಗಳಿಂದಾದ ಹಾಗೂ ಸ್ವಾಭಾವಿಕ ಕೃಶನಾದ ಎಂದು ಎರಡು ಭೇದವಿದೆ. ದೋಷಗಳಿಂದ ಕೃಶನಾದವನನ್ನು ಮತ್ತೆ ಸರಿಪಡಿಸಬಹುದು. ಆದರೆ ಪ್ರಕೃತಿಯಿಂದಲೇ ಸ್ವಾಭಾವಿಕವಾಗಿ ಕೃಶನಾದವನನ್ನು ಮಧ್ಯಮ ಶರೀರಿಯನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ.

ಸ್ಥೂಲ ಶರೀರಿಯಾದವರಿಗೆ ಕೃಶತೆ ಉಂಟಾಗಲು ನಾನಾ ಪ್ರಕಾರಗಳ ವಿರೇಚನ ಯೋಗಗಳನ್ನು, ರೂಕ್ಷ, ಕಷಾಯ, ಕಟು ಔಷಧಿ-ಆಹಾರಗಳನ್ನು ಸದಾ ಕೊಡುತ್ತಿರಬೇಕು.

ಮಧ್ಯಮ ಶರೀರವನ್ನು ಸದಾ ರಕ್ಷಿಸಿಕೊಳ್ಳಲು ವಸಂತ ಋತು ಕಾಲದಲ್ಲಿ ವಾಂತಿ ಪ್ರಯೋಗ, ವರ್ಷಾ ಋತುವಿನಲ್ಲಿ ಬಸ್ತಿ ಪ್ರಯೋಗ ಹಾಗೂ ಶರತ್ಕಾಲದಲ್ಲಿ ವಿರೇಚನದಲ್ಲಿ ಕೊಡಬೇಕು. ಇದರಿಂದ ಮಧ್ಯಮ ಶರೀರದವರ ಸ್ವಾಸ್ಥ್ಯವು ಚೆನ್ನಾಗಿ ರಕ್ಷಿಸಲ್ಪಡುವುದು. (ಕ.ಅ-೩, ಶ್ಲೋಕ. ೩೯-೪೫)

ಸಾತ್ಮ್ಯ ವಿಚಾರ

ಯಾವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಾನವನಿಗೆ ಸುಖ, ಸಮಾಧಾನಗಳೆನಿಸುವವೋ ಅಂತಹ ಔಷಧಿ, ಸಾಧಾರಣ ದೇಶ(ಪ್ರದೇಶ)ನೀರು,ರೋಗ, ಶರೀರ ಹಾಗೂ ಸುಖಕಾರಕ ಪದಾರ್ಥಗಳೆ ಸಾತ್ಮ್ಯವೆನಿಸಿಕೊಳ್ಳುತ್ತವೆ. ಇವುಗಳ ವಿರುದ್ದ ಆಚರಣೆಯಿಂದ ದುಃಖ ಅಥವಾ ಕಷ್ಟವೆನಿಸುತ್ತದೆ., ಅಂಥವಕ್ಕೆ ಅಸಾತ್ಮ್ಯಗಳು ಎನ್ನುತ್ತಾರೆ.

ಪ್ರತಿದಿನ ಸ್ವಲ್ಪ-ಸ್ವಲ್ಪವಾಗಿ ಸೇವಿಸಿದ ವಿಷವು ಕೂಡ ಮನುಷ್ಯನಿಗೆ ಪಚನವಾಗಿ ಒಗ್ಗಿಕೊಳ್ಳುತ್ತದೆ. ಇಂಥ ವಿಷದ ದುಷ್ಟರಿಣಾಮವಾಗುವುದಿಲ್ಲ. ಇದೇ ರೀತಿ ಸ್ವಲ್ಪ-ಸ್ವಲ್ಪವಾಗಿ ಸೇವಿಸಿದ ಯಾವುದೇ ಪದಾರ್ಥ ಅಪಾಯವನ್ನುಂಟು ಮಾಡುವುದಿಲ್ಲ. ಯಾವುದೇ ಪದಾರ್ಥವನ್ನು ಒಂದು ವಾರದವರೆಗೆ ನಿತ್ಯ ಸೇವಿಸುತ್ತಿದ್ದರೆ ಅದು ಶರೀರಕ್ಕೆ ಒಗ್ಗಿ ಹೋಗುತ್ತದೆ ಎಂದರೆ ಸಾತ್ಮ್ಯವಾಗುತ್ತದೆ. (ಕ.ಅ-೨, ಶ್ಲೋಕ. ೩೯-೪೦)

ತ್ರಿಧಾತುಗಳು: ಈ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಪಂಚಮಹಾಭೂತಳು ಕಾರಣವಾಗಿರುವಂತೆ ಸಂಗ್ರಹ, ಸಾತ್ಮೀಕರಣ ಹಾಗೂ ಮಲವಿಸರ್ಜನ ಕ್ರಿಯೆಗಳಿಗೂ ಇವೇ ಕಾರಣವಾಗಿವೆ. ಹೀಗೆಂದರೆ ಪ್ರಥ್ವಿ, ಅಪ್‌ತತ್ವಗಳು, ಘಟಕಗಳು ಸಂಗ್ರಹ ಹಾಗೂ ಧಾರಣಕ್ಕೆ ಕಾರಣಗಳಾಗಿ ಸೃಷ್ಟಿಗೆ ಕಾರಣವೆನಿಸುತ್ತವೆ. ತೇಜಸ್ ತತ್ವವು ಸಂಗ್ರಹಿತ ಘಟಕಗಳನ್ನು ಪಾಕ ಮಾಡಿ ಸಾರಭಾಗವನ್ನು ಶರೀರೇಂದ್ರಿಯ ಸತ್ವಗಳ ಸ್ವರೂಪಕ್ಕೆ ಪರಿವರ್ತಿಸುವ ಕೆಲಸವನ್ನು ಮಾಡುತ್ತದೆ. ಹೀಗೆ ಸಾತ್ಮೀಕರಣ ಕ್ರಿಯೆ ನಡೆಯುತ್ತದೆ. ವಾಯು ಆಕಾಶ ತತ್ವಗಳು ಆಸಾರವಾದ ಅಂಶಗಳನ್ನು ಶರೀರೇಂದ್ರಿಯ ಸತ್ವಗಳಿಂದ ಬೇರ್ಪಡಿಸಿ ಹೊರಹಾಕುವ ಕೆಲಸಕ್ಕೆ (ಮಲವಿಸರ್ಜನೆ ಕ್ರಿಯೆಗೆ) ಸಹಾಯಕವಾಗುತ್ತವೆ. ಇವೇ ಶರೀರದಲ್ಲಿ ಕಫ, ಪಿತ್ತ ಹಾಗೂ ವಾತಗಳನ್ನಾಗಿ ಮಾಡಿದ್ದಾರೆ. ಇವು ದೇಹ ಧಾರಣೆ ಮಾಡುವುದರಿಂದ ‘ಧಾತು’ ಎನ್ನಲಾಗಿದೆ.

ತ್ರಿದೋಷಗಳು: ಆಯುರ್ವೇದದಲ್ಲಿ ವಾತ, ಪಿತ್ತ ಹಾಗೂ ಕಫಗಳಿಗೆ ಧಾತುಗಳೆಂದು ಕರೆದಿದ್ದರೂ ಅವುಗಳು ನಾವು ಸೇವಿಸುವ ಆಹಾರ ವಿಹಾರ ಕ್ರಮಗಳಿಂದ ದೂಷಿತಗೊಂಡಾಗ ರೋಗಗಳಿಗೆ ಕಾರಣವಾಗುತ್ತವಾದ್ದರಿಂದ ‘ದೋಷಗಳು’ ಎಂದು ಕರೆದಿದ್ದಾರೆ. ಜೀವನ ಕ್ರಿಯೆಯಲ್ಲಿ ಶರೀರೇಂದ್ರಿಯಗಳ ಒಳಗೂ-ಹೊರಗೂ ಸದಾ ಕಾಲ ಘರ್ಷಣ ಕ್ರಿಯೆ ನಡೆದಿರುವುದರಿಂದ ದೇಹಸ್ಥವಾದ ಈ ವಾತ ಪಿತ್ತ ಕಫಗಳ ಮೇಲೆಯೂ ಅದರ ಪರಿಣಾಮವಾಗಿ ಅವು ಶರೀರಕ್ಕೆ ಅಪಾಯವನ್ನುಂಟು ಮಾಡುವ ಹಂತಕ್ಕೆ ತಿರುಗುತ್ತವೆ. ಆದ್ದರಿಂದ ಇವು ದೋಷಗಳೇ ಶರೀರದಲ್ಲಿರುವ ಸಪ್ತ ಧಾತುಗಳಿಗೂ ಧಾತುಗಳೆಂದು ವಾತ, ಪಿತ್ತ, ಕಫಗಳಿಗೂ ಧಾತುಗಳೆಂದು ಕರೆದರೆ ಸಮಂಜಸವಾಗಲಿಕ್ಕಿಲ್ಲವೆಂದು ಹಾಗೂ ಕೆಲ ವೇಳೆ ಓದುಗರಿಗೆ ಕೆಲ ಸಂದರ್ಭಗಳಲ್ಲಿ ಅಪಾರ್ಥವಾಗಬಾರದೆಂದೂ ಅವುಗಳಿಗೆ ‘ತ್ರಿದೋಷ’ಗಳೆಂದು ಕರೆದಿದ್ದಾರೆ.

ಮಾನವನಿಗೆ ಬರುವ ಸಕಲ ರೋಗಗಳಿಗೂ ಈ ದೂಷಿತ ತ್ರಿದೋಷಗಳೇ ಕಾರಣವೆಂದೂ, ಈ ದೋಷಗಳ ಸಾಮ್ಯಾವಸ್ಥೆಯೇ ಆರೋಗ್ಯಕ್ಕೆ ಕಾರಣವೆನ್ನಲಾಗಿದೆ. ಆರೋಗ್ಯ ಹಾಗೂ ಅನಾರೋಗ್ಯಗಳಿಗೆ ಈ ತ್ರಿದೋಷಗಳೇ ಕಾರಣವಾಗುತ್ತವೆ ಎಂದ ಮೇಲೆ ಆಯುರ್ವೇದ ಶಾಸ್ತ್ರವನ್ನು ಅಭ್ಯಸಿಸುವಾಗ ಇವುಗಳ ಸೂಕ್ಷ್ಮ ತಿಳುವಳಿಕೆ ಮಾಡಿಕೊಳ್ಳಬೇಕಾದುದು ತುಂಬ ಅವಶ್ಯವೆನಿಸಿದೆ.

ವಾತ ದೋಷ: ಶರೀರದಲ್ಲಿ ಈ ವಾತವು ಶರೀರೇಂದ್ರಿಯ ಸತ್ವಗಳ ಸರ್ವ ವಿಧ ಚೇಷ್ಟೆಗಳಿಗೂ ಮುಖ್ಯವಾಗಿದ್ದು ಶರೀರದ ಸರ್ವಕ್ರಿಯೆಗಳು ನಡೆಯಲು ಒಂದು ಪ್ರೇರಕ ಶಕ್ತಿಯಂತೆ ಕೆಲಸ ಮಾಡುವುದರಿಂದ ಇದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ದೇಹದಲ್ಲಿ ವಾತವು ಸರ್ವ ವ್ಯಾಪ್ತಿಯಾಗಿದ್ದರೂ ನಡ, ಗುದ ಭಾಗಗಳಲ್ಲಿ (ಹೊಕ್ಕುಳದ ಕೆಲಭಾಗದಲ್ಲಿ)ವಿಶೇಷವಾಗಿ ಸ್ಥಾನ ಪಡೆದಿರುತ್ತದೆ.

ಈ ವಾತವು ಒಣಸ್ವಭಾವದ್ದು, ಹಗುರವಾದದ್ದು, ತಂಪುಗುಣವುಳ್ಳದ್ದು, ಒರಟಾಗಿರುವುದು ಹಾಗೂ ತುಂಬ ಸೂಕ್ಷ್ಮವಾಗಿದ್ದು ಗತಿಯುಳ್ಳದ್ದಾಗಿದೆ.

ವಾತದೋಷದ ಅಧಿಕ್ಯತೆಯಿಂದ ಒಬ್ಬನ ಪ್ರಕೃತಿ ಹುಟ್ಟಕೊಂಡರೆ ಅವನಲ್ಲಿ ವಿಶೇಷ ವಾತದ ಸ್ವಭಾವ ಗುಣಗಳು ಕಂಡುಬರುತ್ತವೆ. ವಾತದಿಂದ ಶರೀರದಲ್ಲಿ ರೂಕ್ಷತೆಯು ಉಂಟಾದುದರ ಪರಿಣಾಮವಾಗಿ ಧಾತುಗಳಿಗೆ ಪೋಷಣೆ ಕಡಿಮೆ ಆಗಿ ರೋಗ ನಿರೋಧಕ ಶಕ್ತಿಯು ಕುಗ್ಗುತ್ತದೆ. ಅದೇ ರೂಕ್ಷತೆಯು ಮನಸ್ಸಿನಲ್ಲಿ ಸ್ನೇಹದ ಅಭಾವವನ್ನುಂಟು ಮಾಡುತ್ತದೆ. ವ್ಯಕ್ತಿಯು ಸಂಕುಚಿತ ಭಾವನೆ, ಕಲಾದೃಷ್ಟಿ ಹೀನತೆಯನ್ನೂ ಹೊಂದಿರುತ್ತಾನೆ. ವಾತದ ಲಘುಗುಣದಿಂದ ದೇಹದಲ್ಲಿ ಒಲವು ಇಲ್ಲದಾಗಿ ಮನಸ್ಸಿನಲ್ಲಿ ಅಸ್ಥಿರತೆಯು ಕಂಡುಬರುವುದು. ಶೀತಗುಣದಿಂದ ದೇಹದಲ್ಲಿ ಚಳಿಯನ್ನು ಸಹಿಸುವ ಶಕ್ತಿಯು ಇಲ್ಲದಾಗುವುದು. ಮನಸ್ಸಿನಲ್ಲಿ ಔದಾರ್ಯಹೀನತೆ ಉಂಟಾಗುವುದು. ಒರಟು ಗುಣದಿಂದ ದೇಹ, ಮನಸ್ಸುಗಳಲ್ಲಿ ಒರಟುತನ ಬರುವುದು. ಸೂಕ್ಷ್ಮ ಗುಣದಿಂದ ದೇಹವು ಸುಲಭವಾಗಿ ರೋಗಕ್ಕೆ ಬಲಿ ಬೀಳುವುದು. ಮನಸ್ಸಿನಲ್ಲಿ ಜಿಪುಣತನ ಉಂಟಾಗುವುದು. ಚಲ ಗುಣದಿಂದ ಶರೀರವು ತೂಕ ತಪ್ಪಿ ಚಲಿಸುವುದು, ಮನಸ್ಸಿನಲ್ಲಿ ಚಾಂಚಲ್ಯವುಂಟಾಗುವುದು. ಈತನು ಗಿಡ್ಡಾಗಿ, ತೆಳ್ಳಗೆ, ಕಪ್ಪಾಗಿರುವನು. ನಿದ್ರೆ ಹೆಚ್ಚುಬಾರದು. ಮಲಗಿದಾಗ್ಗೆ ಹಾರಿ ಹೋದಂತೆ ಎನಿಸುವುದು. ಕನಸುಗಳು ಹೆಚ್ಚು. ಚಾಂಚಲ್ಯ ಸ್ವಭಾವದವ ಹಾಗೂ ಅಸಂಬದ್ಧ ವಿಚಾರಿ. ಮಿತಾಹಾರಿ, ಕಷಾಯ, ಕಟು, ತಿಕ್ತ ರಸಗಳಲ್ಲಿ ಹೆಚ್ಚು ಆಸಕ್ತನಾಗಿರುವುದಿಲ್ಲ. ವಿಷಮಾಗ್ನಿ ಇರುತ್ತದೆ. ಆದ್ದರಿಂದ ಇವನದು ‘ಹೀನ ಪ್ರಕೃತಿ’ (ಕಲ್ಯಾಣಕಾರಕಎಂಟನೆಯ ಅಧ್ಯಾಯವಾತರೋಗಾಧಿಕಾರ)

ವಾತದ ಕಾರ್ಯಗಳು: ಸ್ವಸ್ಥವಾಗಿರುವ ವಾತವು ತನು ಮನಗಳ ಉತ್ಸಾಹ, ಉಚ್ಚಾಸ -ನಿಶ್ವಾಸ, ತನು ಮನಗಳ ಚಲನವಲನ, ಮಲ ಮೂತ್ರ ಸ್ವೇದಾದಿ ಮಲಗಳನ್ನು ಪ್ರೇರೇಪಿಸುವ ಕಾರ್ಯ, ಸಪ್ತಧಾತುಗಳು ಸಮರ್ಪಕ ರೀತಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಪ್ರೇರೇಪಿಸುವಿಕೆ, ಇಂದ್ರಿಯಗಳಲ್ಲಿ ಚುರುಕನ್ನುಂಟು ಮಾಡುವುದು- ಇತ್ಯಾದಿ ಕೆಲಸಗಳನ್ನು ಮಾಡುತ್ತದೆ.

ವಾತದ ಭೇದಗಳು: ಶರೀರದಲ್ಲಿ ಎಲ್ಲ ಕ್ರಿಯೆಗಳು ಸಮರ್ಪಕವಾಗಿ ನಡೆದುಕೊಂಡು ಹೋಗಲು ಐದು ಭೇದಗಳನ್ನು ಮಾಡಿಕೊಂಡಿದೆ. ಇವುಗಳು ತಮ್ಮ ಸ್ಥಾನದಲ್ಲಿದ್ದುಕೊಂಡು ಶರೀರವನ್ನು ರಕ್ಷಿಸುತ್ತವೆ.

. ಪ್ರಾಣ ವಾಯು : ಅಶುದ್ಧಮಯವಾಗಿ ಪುಪ್ಪುಸಕ್ಕೆ ಬರುವ ರಕ್ತದಲ್ಲಿ ಹೊರಗಿನ ಶುದ್ಧ ಹವೆಯು ಶ್ವಾಸನಲಿಕೆಗಳ ಮೂಲಕ ಪ್ರವಹಿಸಿ ಬಂದು ಈ ರಕ್ತವನ್ನು ಶುದ್ಧ ಮಾಡಿ  ಅಶುದ್ದಾಂಶವನ್ನು ಮರಳಿ ಹೊರಗೆ ಹಾಕುವ ಕೆಲಸವನ್ನು ಈ ಪ್ರಾಣವಾಯು ಮಾಡುವುದು. ಇದು ತಲೆಯಲ್ಲಿದ್ದುಕೊಂಡು ಎದೆ, ಕಂಠಗಳಲ್ಲಿ ಸಂಚಾರ ಮಾಡುತ್ತದೆ. ಬುದ್ಧಿ, ಹೃದಯ, ಪಂಚೇಂದ್ರಿಯಗಳು ಮತ್ತು ಚಿತ್ತ ಶಕ್ತಿಗಳ ಮೇಲೆ ತನ್ನ ಅಧಿಕಾರವನ್ನು ನಡೆಸುತ್ತದೆ. ಉಗುಳುವುದು, ಶೀನುವುದು, ತೇಗುವುದು, ಉಸಿರಾಡಿಸುವುದು, ಆಹಾರ ಸೇವನೆ, ನುಂಗುವುದು, ಮೊದಲಾದ ಕೆಲಸಗಳನ್ನು ಮಾಡುವುದು. ಪ್ರಾಣವಾಯು ಸ್ವಸ್ಥವಾದಾಗ ಈ ಮೇಲ್ಕಂಡ ಎಲ್ಲ ಕೆಲಸಗಳನ್ನು ಮಾಡಲು ಸಮರ್ಥವಾದರೆ ಅಶುದ್ಧವಾದಾಗ ಬಿಕ್ಕಳಿಕೆ, ದಮ್ಮು ರೋಗಗಳನ್ನುಂಟು ಮಾಡುವುದು.

. ಉದಾನ ವಾಯು: ಇದು ಎದೆಯಲ್ಲಿದ್ದು ಕೊಂಡು ಮೂಗು, ನಾಭಿ ಕುತ್ತಿಗೆಗಳಲ್ಲಿ ಸಂಚಾರ ಮಾಡುತ್ತದೆ. ಮುಖ್ಯವಾಗಿ ವಾಕ್ ಪ್ರವೃತ್ತಿಗೆ ಸಹಾಯಕವಾಗಿದ್ದುಕೊಂಡು ಪ್ರಯತ್ನ, ಉತ್ಸಾಹ, ಬಲ ವರ್ಣಗಳಿಗೆ ಕಾರಣವಾಗುವುದು. ಇದು ದೂಷಿತವಾದರೆ ಕುತ್ತಿಗೆ ಮೇಲ್ಭಾಗದ ರೋಗಗಳು ಬರುವುವು.

. ಸಮಾನ ವಾಯು: ಇದು ಪಾಚಕಾಗ್ನಿಯ ಪ್ರದೇಶದಲ್ಲಿದ್ದುಕೊಂಡು ಪಾಚಕಾಂಗಗಳಾದ ಜಠರ, ಸಣ್ಣಕರುಳು ಮೊದಲಾದೆಡೆಗಳಲ್ಲೆಲ್ಲ ಓಡಾಡುವುದು. ಆಹಾರವನ್ನು ತೆಗೆದುಕೊಳ್ಳುವುದು, ಒಟ್ಟು ಕಲೆ ಹಾಕುವುದು ಹಾಗೂ ಪಚಿಸುವುದು ಇದರ ಕೆಲಸ ಅನಂತರ ಉಳಿದ ಅಸಾರಾಂಶಗಳನ್ನೂ ಹೊರಕ್ಕೆ ತಳ್ಳುವ ಕೆಲಸ ಮಾಡುವುದು ಇದು ದೋಷಿತವಾದರೆ ಅಗ್ನಿಮಾಂದ್ಯ, ಗುಲ್ಮ ಅತಿಸಾರ ವಿಕಾರಗಳುಂಟಾಗುತ್ತವೆ.

. ಅಪಾನವಾಯು: ಇದು ಗುದ ಪ್ರದೇಶದಲ್ಲಿದ್ದುಕೊಂಡು ಶ್ರೋಣಿ, ಬಸ್ತಿ, ಜನನೇಂದ್ರಿಯ, ತೊಡೆ ಮೊದಲಾದ ಅಂಗಗಳಲ್ಲಿ ವ್ಯಕ್ತವಾಗುವುದು ಹಾಗೂ ಚಲನಶಕ್ತಿಯುಳ್ಳದ್ದಾಗಿದೆ. ಶುಕ್ರಾರ್ತವಗಳನ್ನು, ಮಲಮೂತ್ರ, ಗರ್ಭಗಳನ್ನೂ ಕಾಲಕಾಲಕ್ಕೆ ಹೊರಹಾಕುವ ಕೆಲಸ ಮಾಡುತ್ತದೆ.

ಇದು ದೂಷಿತಗೊಂಡರೆ ಬಸ್ತಿ ಹಾಗು ಗುದ ಪ್ರದೇಶಗಳಲ್ಲಿ ಭೀಕರ ರೋಗಗಳನ್ನುಂಟು ಮಾಡುವುದು.

. ವ್ಯಾನ ವಾಯು: ಇದು ಹೃದಯದಲ್ಲಿದ್ದುಕೊಂಡು ಸಮಗ್ರ ಶರೀರದಲ್ಲಿ ಸಂಚರಿಸುತ್ತದೆ. ತೀವ್ರ ವೇಗವುಳ್ಳದ್ದಾಗಿದೆ. ಶರೀರದ ಗತಿ, ಅಂಗಾಂಗಗಳ ಅಲುಗಾಟ ಮತ್ತು ನೆಗೆದಾಟ, ರೆಪ್ಪೆಗಳನ್ನು ಮುಚ್ಚುವುದು, ತೆಗೆಯುವುದು ಮೊದಲಾದ ಶರೀರದ ಎಲ್ಲ ಕ್ರಿಯೆಗಳು ಸ್ವಸ್ಥವಾದ ವ್ಯಾನವಾಯುವಿನಿಂದಲೇ ಸಾಧ್ಯವಾಗುತ್ತವೆ. ಅಲ್ಲದೆ ರಸ-ರಕ್ತಾದಿಗಳ ಪರಿಚಲನ, ಸ್ವೇದಾದಿ ಮಲಗಳ ಸ್ರಾವಕ್ಕೂ ಕಾರಣವೆನಿಸುತ್ತದೆ. ಇದು ದೂಷಿತಗೊಂಡರೆ ಸರ್ವಶರೀರವ್ಯಾಪ್ತ ರೋಗಗಳನ್ನುಂಟು ಮಾಡುವುದು.

ಈ ಮೇಲ್ಕಂಡ ಪಂಚವಿಧ ವಾತ ಸ್ವರೂಪಗಳು ಶರೀರದಲ್ಲಿರುವ ಅನೇಕ ಮುಖ್ಯ ಕ್ರಿಯೆಗಳಿಗೆ ಸಹಾಯಕವಾಗಿರುವುದರಿಂದ ಇದಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ನಮ್ಮ ದೇಹದಲ್ಲಿ ಅನುಗಾಲವೂ ನಡೆವ ಉಸಿರಾಟ, ಮಾತು, ಜೀರ್ಣಕ್ರಿಯೆ, ಮಲಮೂತ್ರ, ವಿಸರ್ಜನ, ರಕ್ತ ಸಂಚಲನ ಮೊದಲಾದ ಕ್ರಿಯೆಗಳನ್ನು ಮಾಡುವುದು. ಅನೇಕ ವೇಳೆ ನಮ್ಮ ನರಮಂಡಳ ಮಾಡದಂತಹ ಕೆಲಸಗಳನ್ನೂ ಈ ವಾತ ನಮ್ಮ ಶರೀರದಲ್ಲಿ ಮಾಡುತ್ತದೆ.

ವಾತ ಕ್ಷಯ : ದೇಹದಲ್ಲಿಯ ವಾತದ ಪ್ರಮಾಣ ಕ್ಷಯಿಸಿದರೆ ಅಂಗಾಂಗಗಳಲ್ಲಿ ಆಯಾಸ, ದಣಿವು, ಸ್ಪರ್ಷಜ್ಞಾನವಾಗದಿರುವುದು, ಎಚ್ಚರ ತಪ್ಪುವುದು ಈ ಲಕ್ಷಣಗಳುಂಟಾಗುವುವಲ್ಲದೇ ಕಫ ವೃದ್ಧಿಯ ಅಗ್ನಿ ಮಾಂದ್ಯ, ಜೊಲ್ಲು ಹೆಚ್ಚಾಗಿ ಬೀಳುವುದು, ಅಲಸ್ಯ, ಮೈ ಭಾರ, ಶರೀರವು ಬಳುಚುವಿಕೆ, ಛಳಿ, ಅವಯವಗಳು ಸಡಿಲಾಗುವುದು, ಉಬ್ಬುಸ, ಕೆಮ್ಮು, ಅತಿನಿದ್ರೆ – ಈ ಮೊದಲಾದ ಲಕ್ಷಣಗಳುಂಟಾಗುವುವು.

ವಾತಪ್ರಕೋಪದ ಲಕ್ಷಣಗಳು: ಇದು ಪ್ರಕೋಪಗೊಂಡರೆ ಅಂಗಾಂಗಗಳು ಸ್ಥಾನಚ್ಯುತವಾಗುವುದು, ಸೆಳೆತ, ಚುಚ್ಚುವಿಕೆ, ಜೋಮು ಹಿಡಿಯವುದು, ಕೈಕಾಲುಗಳು, ಸೋತು ಬರುವುದು, ನೋವು, ದೇಹದಲ್ಲಿ ಕತ್ತರಿಸಿದಂತೆ ಚುಚ್ಚಿದಂತೆ ನೋವು, ಮಲಮೂತ್ರ ಬದ್ಧತೆ, ಗುದ್ದಿದಂತೆ ನೋವು, ಸಂಕೋಚತೆ, ರೋಮಾಂಚನ, ಬಾಯಾರಿಕೆ, ನಡುಕ, ವರಟುತನ, ರಂಧ್ರ ಬೀಳುವುದು, ಸೊರಗುವಿಕೆ, ನಡುಕ ಹಿಡಿದಂತಾಗುವಿಕೆ, ಶರೀರ ಮುದ್ದೆಯಾದಂತೆ ಅನುಭವ, ಸೆಟೆಯುವಿಕೆ, ಬಾಯಿಯಲ್ಲಿ ಒಗರು ರುಚಿ, ಕಪ್ಪು ಮತ್ತು ನಸುಗೆಂಪು ಬಣ್ಣ ಮೊದಲಾದ ಲಕ್ಷಣಗಳು ತೋರಿ ಬರುವವು.

ವಾತ ಪ್ರಕೋಪಕ್ಕೆ ಕಾರಣ: ಬಲವಂತರೊಡನೆ ಗುದ್ದಾಟ, ಅತಿಯಾದ ದೇಹದಣಿಕೆ, ಮೈಥುನ, ಅಧ್ಯಯನ, ಬೀಳುವುದು, ಓಟ ಪೀಡಿಸುವುದು, ಪೆಟ್ಟು, ಹಾರುವಿಕೆ, ದೂರ ಓಟ, ಈಜು ರಾತ್ರಿ ಜಾಗರಣೆ, ಭಾರ ಹೋಗುವುದು, ವಾಹನ ಸವಾರಿ, ವಾತಕಾರಕ ಪದಾರ್ಥಗಳ ಅತಿಯಾದ ಸೇವನೆ, ಹಸಿವೆ ತಡೆಯುವುದು, ವಿಷಮವಾದ ಊಟ, ಅತಿಯಾದ ಊಟ, ಅಪಾನವಾತ, ಮಲ-ಮೂತ್ರ-ಶುಕ್ರ-ವಾಂತಿ-ಬಿಕ್ಕಳಿಕೆ-ತೇಗು-ಕಣ್ಣೀರು- ಅಳುಗಳನ್ನು ತಡೆಯುವುದು ಈ ಮೊದಲಾದ ಕಾರಣಗಳಿಂದ ವಾತವು ಪ್ರಕೋಪಗೊಳ್ಳುವುದು.

ವಾತ ಪ್ರಕೋಪ ಕಾಲ: ಹವೆಯು ಶೀತವಾದಾಗ್ಗೆ, ಮೋಡ ಮುಸುಕಿದಾಗ, ವಿಶೇಷವಾಗಿ ಗಾಳಿ ಬೀಸುವ ಸಮಯದಲ್ಲಿ, ಸೆಕೆ ಕಾಲದ ಅಂತ್ಯದಲ್ಲಿ ರಾತ್ರಿಯ ಕಡೆ ಜಾವದಲ್ಲಿ, ಅಪರಾಹ್ನ, ಅನ್ನವು ಜೀರ್ನವಾದಾಗ್ಗೆ ವಾಯು ಪ್ರಕೋಪಗೊಳ್ಳುವುದು.

ವಾತದ ರೋಗಗಳು : ೮೦ ವಿಧ

೮೦ ವಿಧ ವಾತ ರೋಗಗಳು

ಸಂಪೂರ್ಣ ಶರೀರವನ್ನು ಮೇಲಿಂದ ಮೇಲೆ ಕಂಪನಕ್ಕೊಳಪಡಿಸುವ ಆಕ್ಷೇಪ ವಾತ, ಚಂಚಲ ಸ್ವಭಾವದ ಅಪತಾನಕ, ಅರ್ಥಮುಖವನ್ನೇ ಸೊಟ್ಟು ಮಾಡುವ ಅರ್ದಿತವಾತ, ಇಡೀ ಶರೀರದ ಅರ್ಧಭಾಗವನ್ನು ಚೇಷ್ಟಾಹೀನಗೊಳಿಸುವ ಪಕ್ಷಾಘಾತ, ಗೃಧ್ರಸೀ, ಕಲಾಯ ಖಂಡ, ಪಂಗು, ಉರುಸ್ತಂಭ, ವಾತಕಂಟಕ, ಪಾದ ಹರ್ಷ, ಆಕ್ಷೇಪಕ, ಗುದಭ್ರಂಶ, ಉದಾವರ್ತ, ಕುಬ್ಜತ್ವ, ತ್ರಿಕಗ್ರಹ, ಪಾರ್ಶ್ವಾವರ್ಮರ್ದ, ಹೃದ್ದ್ರವ, ಗ್ರೀವಾ ಸ್ಥಂಭ, ಮನ್ನಾಸ್ತಂಭ, ಹನುಸ್ತಂಭ, ಮುಖಶೋಷ, ಕರ್ಣಶೂಲ, ಘ್ರಾಣನಾಶ, ಬಾಧಿರ್ಯ, ಸರ್ವಾಂಗ ರೋಗಕ, ಅತಿ ಪ್ರಲಾಪ, ಗ್ಲಾನಿ, ಅಸ್ಪಪ್ನ ಮೊದಲಾದ ೮೦ ವೀದ ವಿಕಾರಗಳು ವಾತದೋಷ ಪ್ರಕೋಪದಿಂದ ಉಂಟಾಗುತ್ತವೆ. ಇವುಗಳಲ್ಲಿ ಕೆಲ ಮಗತ್ವದ ವಾತವಿಕಾರಗಳ ಬಗೆಗೆ ೧೮ ನೇ ವಾತರೋಗಧಿಕಾರ ಅಧ್ಯಾಯದಲ್ಲಿ ವಿವರಿಸಿದ್ದಾರೆ.

ವಾತಕಾರಕ ದ್ರವ್ಯಗಳು: ತಿಕ್ತ, ಕಟು, ಕಷಾಯರಸ ಪ್ರಧಾನವುಳ್ಳ ದ್ರವ್ಯಗಳನ್ನು ಸೇವಿಸುವುದರಿಂದ ಶರೀರಸ್ಥವಾದ ವಾಯುವು ತನ್ನ ಪ್ರಮಾಣದಲ್ಲಿ ಹೆಚ್ಚಳವನ್ನು ತೋರುತ್ತದೆ. ಅವು ಯಾವುವೆಂದರೆ, ಕಹಿಪಡವಲ, ಲಾಮಂಚ, ಶ್ರೀಗಂಧ, ನೆಲಬೇವು, ಕಟುಕರೋಹಿಣಿ, ಅರಿಷಿಣ, ಮರದರಿಷಿಣ, ಅಡುಸೊಗೆ, ಅಮೃತಬಳ್ಳಿ, ಬಜೆ, ಹಿಂಗು, ಮೆಣಸು, ವಾಯುವಿಡಂಗ, ಕಾಮಕಸ್ತೂರಿ, ಈಚಲು, ನೈದಿಲೆ, ಲೋಧ್ರ, ತಾರೆ, ಬಾರೆ ಮೊದಲಾದವುಗಳು.

ವಾತವನ್ನು ಕಡಿಮೆ ಮಾಡುವ ದ್ರವ್ಯಗಳು: ಸ್ವಾದು, ಆಮ್ಲ, ಲವಣ ರಸ ಪ್ರಧಾನವಾದ ದ್ರವ್ಯ ಸೇವಿಸುವುದರಿಂದ ವಾತವು ಕಡಿಮೆ ಆಗುವುದು. ತುಪ್ಪ, ಬಾಳೇಹಣ್ಣು, ಕಾಡ ಖರ್ಜೂರ, ಜೇಷ್ಠ ಮಧು , ಕಬ್ಬು, ದ್ರಾಕ್ಷಿ, ನೆಲ್ಲಿಕಾಯಿ, ಹುಣಸೆಹಣ್ಣು, ಮಜ್ಜಿಗೆ ಮಾವು, ಬೇಲ, ಸೈಂಧವ ಲವಣ, ಯುವಕ್ಷಾರ, ಟಂಕಣ ಮುಂತಾದವುಗಳು.

ಈ ಮೇಲ್ಕಂಡ ವಾತಕಾರಕ, ವಾತಕಾರಕ ದ್ರವ್ಯಗಳನ್ನು ತಿಳಿಯುವುದರಿಂದ ಚಿಕಿತ್ಸೆಗೆ ತುಂಬ ಅನುಕೂಲವಾಗುವುದು. ಶರೀರದಲ್ಲಿ ವಾತದೋಷಗಳು ಹೆಚ್ಚಾದರೆ ವಾತಹರ ದ್ರವ್ಯಗಳ ಸೇವನೆಯಿಂದ ಕಡಿಮೆಯಾಗಿ ರೋಗವು ಗುಣವಾಗುವುದು. ಇದರಂತೆ ದೇಹದಲ್ಲಿ ವಾತವು ಕಡಿಮೆಯಾದಾಗ ಅದನ್ನು ಮತ್ತೆ ಸಮಸ್ಥಿತಿಗೆ ತರಲು ವಾತಕಾರಕ ದ್ರವ್ಯಗಳನ್ನು ಸೇವಿಸಬೇಕಾಗುತ್ತದೆ.

ವಾತರೋಗಗಳ ಚಿಕಿತ್ಸಾ ಸೂತ್ರ: ತ್ರಿದೋಷಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ರೋಗಗಳು ಈ ವಾತದಿಂದಾಗುತ್ತವೆ ಎಂದು ಈಗಾಗಲೇ ತಿಳಿದಿದ್ದೇವೆ. ಇವಕ್ಕೆ ಸಾಮಾನ್ಯವಾಗಿ ತೈಲ ಪ್ರಯೋಗವೇ ಹೆಚ್ಚು ಪ್ರಯೋಜನಕಾರಿ ಎನಿಸಿದೆ. ಬಸ್ತಿ ಮೂಲಕ ತಯಲ ಪ್ರಯೋಗ ಮಾಡಿದರೆ ಹೆಚ್ಚು ಉಪಯುಕ್ತ. ಈ ವಿಕಾರಗಳಿಗೆ ಸಿಹಿ, ಹುಳಿ, ಉಪ್ಪು, ಸ್ನಿಗ್ಧ, ಉಷ್ಣವಾದ ಉಪಚಾರಗಳಿಂದ ಉಪಚರಿಸಬೇಕಾಗುತ್ತದೆ. ಬೆವರಿಸುವುದು, ಸ್ನೇಹನ ಆಸ್ಥಾಪನ ಅನುವಾಸಗಳೆಂಬ ಬಸ್ತಿ ವಿಧಾನಗಳನ್ನು ಅನುಸರಿಸುವುದು, ನಸ್ಯ ಕರ್ಮ ಭೋಜನ, ಅಭ್ಯಂಗ, ತಿಕ್ಕುವುದು, ಸ್ನಾನ ಮೊದಲಾದ ಆಹಾರ-ವಿಹಾರ ಕರ್ಮಗಳನ್ನು ಪ್ರಮಾಣ ಹಾಗು ಕಾಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿಕತ್ಸೆ ಮಾಡಬೇಕಾಗುತ್ತದೆ.

ಪಿತ್ತದೋಷ

ಪಿತ್ತ ಧಾತುವು ‘ತೇಜಸ್’ ಪ್ರಧಾನವಾಗಿದೆ. ತೇಜಸ್ ಎಂದರೆ ಪ್ರಖರತೆ, ಉಷ್ಣತೆ, ಅಗ್ನಿ ಎಂದು ಅರ್ಥವಾಗುತ್ತದೆ. ಈ ಅಂಶಗಳಿಂದ ಕೂಡಿದ ಅಂಶಕ್ಕೇನೇ ‘ಪಿತ್ತ’ ಎನ್ನುತ್ತಾರೆ. ಶರೀರೇಂದ್ರಿಯ ಸತ್ವಗಳ ರಚನೆಯಲ್ಲಿ ಪಿತ್ತವು ಒಂದು ಮಹತ್ವವಾದ ಪಾತ್ರವಹಿಸುತ್ತದೆ. ಹಾಗೂ ಅದು ಸಾತ್ಮೀಕರಣ ಕ್ರಿಯೆಗೆ ಅಧಪತಿಯಾಗಿದೆ.

ಪಿತ್ತವು ಜಿಡ್ಡುವುಳ್ಳದ್ದು, ಉಗ್ರ ಪರಿಣಾಮಕಾರಿ, ಉಷ್ಣ, ಲಘು, ದುರ್ಗಂಧ ವಾಸನೆಯುಳ್ಳದ್ದು. ಮಲವಿಸರ್ಜಕ ಗುಣವುಳ್ಳದ್ದು ಹಾಗೂ ನೀರಿನಂತಿರುವುದು. ಈ ಸ್ವಭಾವಗಳನ್ನು ಹೊಂದಿದೆ. ಸಾಮಾನ್ಯ ಜನ ತಿಳಿದಿರುವಂತೆ ಹಸಿರು ಹಳದಿ ವರ್ಣದ ವಾಂತಿಯಾಗುವ ಪಿತ್ತವಲ್ಲ.

ಸ್ಥಾನ: ಶರೀರದಲ್ಲಿ ಪಿತ್ತವು ಮಧ್ಯಭಾಗದಲ್ಲಿರುತ್ತದೆ. ಇದರ ಮುಖ್ಯ ಕಾರ್ಯವು ಜೀರ್ಣತೆ ಹಾಗು ಆಹಾರಾಂಶಗಳ ಸಾರಾಸಾರ ವಿಭಜನೆ ಎಂದ ಬಳಿಕ ಜಠರ, ಸಣ್ಣ ಕರುಳು, ಯಕೃತ್, ಪ್ಲೀಹ, ಹೃದಯ, ದೃಷ್ಟಿ, ಚರ್ಮ, ಸ್ವಾದುಗ್ರಂಥಿ- ಜಠರಾಮ್ಲ ಸ್ವರೂಪ ಜೀರ್ಣರಸ ಮೊದಲಾದ ಭಾಗದಲ್ಲಿರುವುದು ಎಂದರ್ಥವಾಗುವುದು.

ಪಿತ್ತ ಪ್ರಕೃತಿ ಲಕ್ಷಣಗಳು: ಪಿತ್ತದ ಸ್ನೇಹಗುಣದಿಂದ ಶರೀರದಲ್ಲಿರುವ ಮೃದುತನ, ಎಣ್ಣೆಯ ಜಿಡ್ಡಿನಂತಹ ಗುಣ, ಮನಸ್ಸಿನಲ್ಲಲಿ ಸ್ನೇಹ ಸಂಪಾದಿಸುವ ಸ್ವಭಾವಗಳಿರುತ್ತವೆ. ತೀಕ್ಷ್ಣ ಗುಣದಿಂದ ಕಣ್ಣಿನಲ್ಲಿ ತೇಜಸ್ಸು, ಪಾಚಾಕಾಗ್ನಿಯ ಪ್ರಖರತೆಗಳುಂಟಾಗುತ್ತವೆ. ಮನಸ್ಸಿನಲ್ಲಿ ಆಳವಾಗಿ ಯೋಚಿಸುವ ಶಕ್ತಿಯು, ದೂರದರ್ಶಿತ್ವ ಗುಣವು ಬರುತ್ತದೆ. ಉಷ್ಣಗುಣದಿಂದ ಶರೀರದ ಪರಿಚಲನಾತ್ಮಕ ದ್ರವ್ಯಗಳು ತಕ್ಕಷ್ಟು ಉಷ್ಣವಾಗಿದ್ದು ಅವುಗಳ ಹರಿದಾಟಕ್ಕೆ ಅನುಕೂಲವಾಗುವುದು. ಶರೀರದ ನೈಜೋಷ್ಣವು ಪಿತ್ತದಿಂದಲೇ ಸಮಪ್ರಮಾಣದಲ್ಲಿರಲು ಸಾಧ್ಯವಾಗುವುದು. ಮನಸ್ಸಿನಲ್ಲಿಲ ಧಾರಾಳತನವಿರುವುದು. ಲಘು ಗುಣದಿಂದ ಶರೀರವು ಹಗುರವಾಗಿಯೂ, ಕರ್ಮ ಪ್ರವೃತ್ತವೂ ಆಗಿರುವುದು. ಮನಸ್ಸಿನಲ್ಲಿ ವಿಚಾರ ಮತ್ತು ಗ್ರಹಣ ಶಕ್ತಿಗಳು ತೀವ್ರವಾಗಿರುವುವು. ವಿಪ್ರ ಎಂದರೆ ದುರ್ಗಂಧ ಗುಣದಿಂದ ಶರೀರದಲ್ಲಿರವು ಸ್ವೇದ ಮೊದಲಾದ ವಿಸರ್ಜನಗಳು ಸ್ವಲ್ಪ ದುರ್ಗಂಧವಾಗಿರುವುವು. ಮನಸ್ಸಿನಲ್ಲಿ ಅಸಹನ ಸ್ವಭಾವವುಂಟಾಗುವುದು. ಸರಗುಣದಿಂದ ಪಾಚಕ ರಸಗಳ ಮತ್ತು ಮಲಗಳ ವಿಸರ್ಜನೆ ಸುಲಭವಾಗಿ ಆಗುವುದು. ಮನಸ್ಸಿನಲ್ಲೆ ಕಾರ್ಯದ ಪ್ರವೃತ್ತಿಯು ಸಕಾಲದಲ್ಲಿ ಆಗುವುದು. ದ್ರುವಗುಣದಿಂದ ದೇಹದ, ಜಲರೂಪದಲ್ಲಿರುವ ಸಾಮಗ್ರಿಗಳು ದ್ರವರೂಪದಲ್ಲಿ ಉಳಿಯಲು ಸಹಾಯವಾಗುವುದು. ಮನಸ್ಸಿನಲ್ಲಲಿ ದಯಾಗುಣವೂ, ಸಹಾನುಭೂತಿಯೂ ಹುಟ್ಟುವುವು. (ಕಲ್ಯಾಣಕಾರಕ ೯ನೇ ಅಧ್ಯಾಯಪಿತ್ತರೋಗಾಧಿಕಾರ)

ಪಿತ್ತ ಪ್ರಕೃತಿಯ ಮನುಷ್ಯನು ಗೌರವರ್ಣವುಳ್ಳವನೂ, ತೇಜಸ್ವಿಯೂ ದೂರದೃಷ್ಟಿಯುಳ್ಳವನೂ, ಮೇಧಾವಿಯೂ, ಆಗಿರುವನು. ಅವನಿಗೆ ಹಸಿವು ಹೆಚ್ಚು, ಆಹಾರವು ಹೆಚ್ಚು ಬೇಕಾಗುವುದು. ಜೀರ್ಣಶಕ್ತಿಯು ಅಧಿಕವಾಗಿರುವುದು. ಸುಲಭವಾದ ವಿರೇಚನೌಷಧಗಳಿಂದಲೂ ಸದಹ ಭೇದಿ ಆಗುವುದು ಎಂದರೆ ಹಾಲು, ದ್ರಾಕ್ಷಿ, ಬಾಳೇಹಣ್ಣು, ಕರಿದ ಪದಾರ್ಥಗಳು, ಹೆಚ್ಚು ಕಾರದ ಪದಾರ್ಥಗಳನ್ನು ತಿನ್ನುವುದರಿಂದ ಒಂದೆರಡು ಸಾರೆ ಮಲವಿಸರ್ಜನೆ ಆಗುವುದು. ಅವನ ಚರ್ಮವು ಮೃದುವಾಗಿರುವುದು. ಇವರಿಗೆ ಕೂದಲುಗಳು ಬೇಗನೆ ಬಿಳುಪಾಗುವುವು. ಇವನಿಗೆ ಉಷ್ಣ ಜನಕಗಳಾದ ಆಹಾರ ಪಾನೀಯಗಳನ್ನು ವಿಶೇಷ ಆಸಕ್ತಿ ಇರುವುದಿಲ್ಲ. ತಂಪು ಆಹಾರ ಪಾನೀಯ ವಿಹಾರಗಳಲ್ಲಿ ವಿಶೇಷ ಆಸಕ್ತಿ ಇರುವುದು. ಶರೀರದ ಗಾತ್ರವೂ ಅಷ್ಟೊಂದು ಎತ್ತರವೂ ಗಡುತರವೂ ತೆಳ್ಳಗೂ, ಅನ್ನಿಸದ ಮಧ್ಯಮವಾಗಿರುತ್ತದೆ. ಈಗನಿಗೆ ಅಗ್ನಿ ತೀಕ್ಷವಾಗಿರುತ್ತದೆ.

ಪಿತ್ತದ ಕಾರ್ಯಗಳು:ಪಿತ್ತವು ಸ್ವಸ್ಥವಾಗಿದ್ದಾಗ ಪಚನಕ್ರಿಯೆಯನ್ನು ಸರಿಯಾಗಿ ಮಾಡಿಸುತ್ತದೆ. ಧಾತ್ವಗ್ನಿಗಳು ಉಜ್ವಲವಾಗಿರುತ್ತವೆ. ಶರೀರದ ಸಹಜೋಷ್ಣತೆ ಸರಿಯಾಗಿರುತ್ತದೆ. ದೃಷ್ಟಿ ಚೆನ್ನಾಗಿರುತ್ತದೆ. ಹಸಿವು ಚೆನ್ನಾಗಿರುವಂತೆ ಮಾಡಿ ಬಾಯಾರಿಕೆಯನ್ನು ಹುಟ್ಟಿಸುತ್ತದೆ. ಶರೀರಕ್ಕೆ ಕಾಂತಿ, ತೇಜಸ್ಸುಗಳನ್ನು ಕೊಡುವುದು. ಗಹನವಾಗಿ ಯೋಚಿಸತಕ್ಕ ಶಕ್ತಿ ಕೊಡುವುದು. ಯೋಗ್ಯಾಯೋಗ್ಯಾ ವಿವೇಚನ ಶಕ್ತಿಯನ್ನು ತನು ಮನುಗಳಲ್ಲಿ ಶೌರ್ಯವನ್ನು ಹುಟ್ಟಿಸುವುದು. ಶರೀರದಲ್ಲಿ ಅದರಲ್ಲಿಯೂ ವಿಶೇಷವಾಗಿ ಚರ್ಮ, ಕೂದಲುಗಳನ್ನು ಮೃದುವಾಗಿಸುವುದು.

ಪ್ರಕೋಪಕಾಲ: ಬಿಸಿಪದಾರ್ಥ, ಉಷ್ಣಕಾಲ, ಶರದೃತು, ಮಧ್ಯಾಹ್ನ, ಅರ್ಧರಾತ್ರಿ, ಅನ್ನ ಜೀರ್ಣವಾಗುವಾಗ್ಗೆ ಪ್ರಕೋಪಗೊಳ್ಳುವುದು. ಯೌವನ ಕಾಲ, ಮಧ್ಯಾಹ್ನ ಪಿತ್ತಕಾಲಗಳು.

ಪಿತ್ತದ ಭೇದಗಳು : ವಿಧ

. ಪಾಚಕ ಪಿತ್ತ: ಪಕ್ವಾಶಯ-ಅಮಾಶಯಗಳ ನಡುವೆ ಇರುವುದು ಇದು ಆಹಾರ ಪಚನಕ್ಕೆ ಕಾರಣವಾಗಿದೆ. ಆಹಾರದ ಸಾರಾ ಸಾರ ವಿಭಜನೆ ಮಾಡಿ ಸಾರಾಂಶವನ್ನು ದೇಹದ ಸಪ್ತ ಧಾತುಗಳಿಗೂ, ಆಸಾರವಾದುದನ್ನು ಶರೀರದ ಹೊರಗೂ ಕಳುಹಿಸುವ ಕೆಲಸ ಮಾಡುತ್ತದೆ. ಅಲ್ಲದೇ ಸಾರವಾದ ಭಾಗವು ಸಪ್ತಧಾತುಗಳಾಗಿ ಪರಿಣಮಿಸಬೇಕಾದರೆ ಅವಶ್ಯವಿರುವ ಸಪ್ತ ಧಾತ್ವಗ್ನಿಗಳ ಸ್ವರೂಪವೂ ಈ ಪಾಚಕ ಪಿತ್ತವೇ ಆಗಿದೆ.

. ಸಾಧಕ ಪಿತ್ತ: ಹೃದಯದಲ್ಲಿದ್ದ ಬುದ್ಧಿ, ಗಹನ, ವಿಚಾರ, ಅಭಿಮಾನ ಮೊದಲಾದ ಗುಣ ವಿಶೇಷಗಳಿಂದ ಧ್ಯೇಯವನ್ನು ಸಾಧಿಸಲು ಅನುಕೂಲವಾಗಿದ್ದಕ್ಕೆ ಇದಕ್ಕೆ ಈ ಹೆಸರು.

. ರಂಜಕ ಪಿತ್ತ: ಯಕೃತ ಮತ್ತು ಪ್ಲೀಹಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾದರು ಅದು ಅಮಾಶಯ ಪ್ರದೇಶ(ಗೃಹಣಿ ಸ್ಥಾನ ಸಹಿತ)ದಲ್ಲಿ ನಾಭಿಯಿಂದ ಎದೆಯವರೆಗಿನ ಹೃದಯ ಪ್ರದೇಶದಲ್ಲಿ ತನ್ನ ಕೆಲಸವನ್ನು ಮಾಡುತ್ತದೆ. ರಂಜಕ ಪಿತ್ತದ ಕೆಲಸವೇನೆಂದರೆ ಕೋಷ್ಟಕದಲ್ಲಿ ಜೀರ್ಣವಾದ ಆಹಾರವು ರಸಧಾತುವಿಗೆ ರಕ್ತ ಸ್ವರೂಪವನ್ನು ಕೊಡುವುದಾಗಿದೆ. ಇದರ ಸಹಾಯದಿಂದಲೇ ಅದು ಕೆಂಪು ಬಣ್ಣಕ್ಕೆ ತಿರುಗಲು ಸಾಧ್ಯವಾಗುವುದು.

. ಆಲೋಚಕ ಶಕ್ತಿ: ಕಣ್ಣುಗಳಲ್ಲಿದ್ದು ವ್ಯಕ್ತಿಯು ನೋಡುವುದಕ್ಕೆ ಸಹಕಾರಿಯಾಗಿದೆ. ವಸ್ತುವಿನ ಮೇಲೆ ಪ್ರಕಾಶಬಿದ್ದು ಪ್ರತಿಫಲಿತವಾಗಿ ನಯನೇಂದ್ರಿಯಕ್ಕೆ ತಲುಪಿದರೆ ಮಾತ್ರ ರೂಪ ಗ್ರಹಣವೂ ಸಾಧ್ಯವಾಗುವುದು.

. ಭ್ರಾಜಕ ಪಿತ್ತ: ಇದು ಚರ್ಮದಲ್ಲಿರುವುದು. ಚರ್ಮಕ್ಕೆ ಕಾಂತಿಯನ್ನು, ತೇಜಸ್ಸನ್ನು ಕೊಡುತ್ತದೆ. ಚರ್ಮದಲ್ಲಿರುವ ಭ್ರಾಜಕ ಪಿತ್ತವು ಅಭ್ಯಂಗ, ಸ್ನಾಲೇಪಾದಿಗಳಿಂದ, ಪಡೆದ ದ್ರವ್ಯಗಳನ್ನು ಜೀರ್ಣಿಸಿ ಚರ್ಮಕ್ಕೆ ಬಣ್ಣವನ್ನು ಕೊಡುವುದು. ಇದರಿಂದ ಸ್ವೇದ ಗ್ರಂಥಿಗಳು ಉದ್ದೀಪಿತವಾಗಿ ಹೆಚ್ಚು ಬೆವರನ್ನುಂಟು ಮಾಡುವುದು. ಬೆವರು ಹೊರ ಹೋಗುವುದರಿಂದ ಶರೀರದ ಉಷ್ಣತೆಯು ಶಮನವಾಗುವುದು. ಇದು ಚರ್ಮದ ಹೊರಪದರಿನಲ್ಲಿ ತೀವ್ರವಾದ ರಕ್ತಪರಿಚಲನೆಗೆ ಕಾರಣವಾಗುವುದರಿಂದ ತತ್ವರಿಣಾಮವಾಗಿ ಚರ್ಮಕ್ಕೆ ಬಣ್ಣವನ್ನು ಕೊಡುವ ವಿಶಿಷ್ಟ ಅಂಶಗಳು ಸಂಗ್ರಹವಾಗುತ್ತವೆ. ಹೀಗಾಗಿ ಭ್ರಾಜಕ ಪಿತ್ತವು ಚರ್ಮಕ್ಕೆ ಕಾಂತಿಯನ್ನು ಕೊಡಲು ಸಮರ್ಥವಾಗುವುದು.

ಪಿತ್ತವೃದ್ಧಿಯ ಲಕ್ಷಣಗಳು: ಪಿತ್ತವು ತನ್ನ ನೈಜ ಪ್ರಮಾಣಕ್ಕಿಂತ ಹೆಚ್ಚಾದಾಗ ಮಲ, ಮೂತ್ರ, ಕಣ್ಣು ಚರ್ಮಗಳು ನಸು ಹಳದಿ ವರ್ಣಕ್ಕೆ ತಿರುಗುವುವು. ಅತಿಯಾಗಿ ಹಸಿವೆ, ಬಾಯಾರಿಕೆ, ನಿದ್ರೆ ಕಡಿಮೆ ಆಗ ಹತ್ತುವುವು.

ಪಿತ್ತ ಕ್ಷಯದ ಲಕ್ಷಣಗಳು: ಪಿತ್ತವು ಕ್ಷಯಿಸಿದರೆ ಅಗ್ನಿಮಾಂದ್ಯ ಶರೀರದಲ್ಲಿ ಶೀತವೃದ್ಧಿ, ಕಾಂತಿಹೀನತೆಗಳುಂಟಾಗುವುವು.

ಪಿತ್ತ ಪ್ರಕೋಪದ ಲಕ್ಷಣಗಳು: ಪಿತ್ತವು ಪ್ರಕೋಪಗೊಂಡರೆ ಉರಿ, ಕೆಂಪು ಬಣ್ಣದಿಂದ ಕೂಡಿದ ನೋವುಳ್ಳ ಬಾವು, ಬಿಸಿತನ, ಹುಣ್ಣಾಗುವಿಕೆ, ಬೆವರು, ಸ್ನಿಗ್ಧತೆ, ಸ್ರಾವಗಳು, ಕೊಳೆಯುವಿಕೆ, ನಿಃಶಕ್ತಿ, ಮೂರ್ಛೆ, ಅರೆ ಎಚ್ಚರಿಕೆ, ಸಿಹಿ ಹುಳಿಕಾರಗಳ ರುಚಿ, ಬಿಳಿ ಮತ್ತು ನಸುಗೆಂಪು ಬಣ್ಣಗಳ ಹೊರತಾಗಿ ಬಣ್ಣಗಳು ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುವುವು.

ಪಿತ್ತದ ರೋಗಗಳು: ೪೦ ವಿಧ ರೋಗಗಳಾಗುವುವು. ಮೈ ಸುಡುವುದು, ಜ್ವಾಲೆ, ಹೆಚ್ಚು ಬೆವರು, ಮೈ ವಾಸನೆ, ರಕ್ತ ನೀರಾಗುವುದು, ಮಾಂಸ ಕರಗುವುದು, ಚರ್ಮದ ಉರಿ, ರಕ್ತಪಿತ್ತ, ಕಾಮಾಲೆ, ಹೆಚ್ಚು ಬಾಯಾರಿಕೆ, ಬಾಯಿಹುಣ್ಣು, ಗಂಟಲ ಹುಣ್ಣು, ಕಣ್ಣುಗಳಿಗೆ ಕತ್ತಲುಗೂಡಿಸಿದಂತಾಗುವುದು, ಹಳದಿ ವರ್ಣದ ಮೂತ್ರ, ಕಣ್ಣು ಮೊದಲಾದ ವಿಕಾರಗಳನ್ನುಂಟು ಮಾಡುತ್ತದೆ.

ಪಿತ್ತ ವಿಕಾರಗಳಿಗೆ ಚಿಕತ್ಸೆ: ಸಿಹಿ, ಕಹಿ, ಒಗರು, ಶೀತವಾದ ಔಷಧೋಪಚಾರ, ಸ್ನೇಹನ ವಿರೇಚನ, ಲೇಪನ, ಪರಿಷೇಕ, ಅಭ್ಯಂಗ, ಸ್ನಾನ ಮೊದಲಾದ ಕ್ರಮಗಳಿಗಿಂತ ಪಿತ್ತಕ್ಕೆ ವಿರೇಚನಕ್ಕೆ ಶ್ರೇಷ್ಠವೆಂದು ಅಭಿಪ್ರಾಯವಾಗಿದೆ.

ಹಾಲು, ಅತಿಮಧುರ, ಕಬ್ಬು, ದ್ರಾಕ್ಷಿ, ಎಳೆತೆಂಗು, ಖರ್ಜೂರ, ಬಾಳೆಹಣ್ಣು, ತುಪ್ಪ, ಬೆಲ್ಲ, ಜೀವಕ ಮೊದಲಾದ ಸಿಹಿ ವರ್ಗದ ದ್ರವ್ಯಗಳು, ಅರಿಷಿಣ, ಮರದರಶೀನ, ಅಮೃತ ಬಳ್ಳಿ, ಶ್ರೀಗಂಧ, ಬೇವು, ಕಟುಕರೋಹಿಣಿ, ಲಾಮಂಚ, ಕಹಿ ಪಡವಲು, ಕೊಡಸೀಗೆ ಬೇಲದ ಕಾಯಿ, ಲೋಧ್ರ ಮೊದಲಾದ ಕಷಾಯ ವರ್ಗದ ದ್ರವ್ಯಗಳನ್ನು ಉಪಯೋಗಿಸುವುದರಿಂದ ಪಿತ್ತವಿಕಾರಗಳು ಗುಣವಾಗುತ್ತವೆ.

ಇವೆಲ್ಲವಗಳಲ್ಲಿ ತುಪ್ಪವನ್ನು ವಿಶೇಷವಾಗಿ ಉಪಯೋಗಿಸುವುದರಿಂದ ಪಿತ್ತವಿಕಾರಗಳು ಬೇಗನೇ ಹತೋಟಿಗೆ ಬರುವುವು.