ಕಫ ದೋಷ

ಪ್ರಕೃತಿಯಲ್ಲಿ ಪೃಥ್ವಿ + ಅಪ್ ತತ್ವಗಳು ಸೇರಿ ಆಗಿರುವ ಅಂಶಕ್ಕೆ ‘ಕಪದೋಷ’ ಎನ್ನುತ್ತಾರೆಂದೂ ಇವೇ ತತ್ವಗಳು ಸಂಗ್ರಹಣ ಕ್ರಿಯೆಗೆ, ತನ್ಮೂಲಕ ಸೃಷ್ಟಿಗೆ ಕಾಣರವಾಗುತ್ತವೆಂದೂ ಈಗಾಗಲೇ ತಿಳಿದಿದ್ದೇವೆ. ಕಫ ದೋಷವು ತುಂಬ ಸೌಮ್ಯ ಸ್ವಾಭಾವುಳ್ಳದ್ದಾಗಿದೆ. ಸಮಾಧಾನ ಗುಣವನ್ನು ಹೊಂದಿದೆ. ಇದು ಶರೀರೇಂದ್ರಿಯ ಸತ್ವಾತ್ಮಗಳೊಡನೆ ಸಮರಸವಾಗಿ ಹೊಂದಿಕೊಂಡಿದ್ದರೂ ಇವರ ಪ್ರಾಬಲ್ಯವನ್ನು ಜೀವಿತದ ಶೈಶವಸ್ಥಾಯಲ್ಲಿ ಎಂದರೆ ಬಾಲ್ಯಾವಸ್ಥೆಯಲ್ಲಿ ಹೆಚ್ಚು ಆಹಾರದ ಪ್ರಥಮ ಹಂತ ಹಾಗೂ ಮುಂಜಾವಿನ ವೇಳೆ ಇವು ಕಥಾಧಿಕ್ಯವಿರುವ ಕಾಲಗಳು. ಜನ ಸಾಮಾನ್ಯರು ತಿಳಿದಂತೆ ಕೆಮ್ಮು ಬಂದು ಕೇಕರಿಸಿ ಉಗುಳುವುದು ಕಫ ಅಲ್ಲ.

ಕಫದ ಸ್ವಭಾವ: ಸ್ನಿಗ್ಧ, ಶೀತ, ಗುರು, ಮಂದ, ನುಣುಪು ಹಾಗೂ ಜಾರುವ ಸ್ವಭಾವವುಳ್ಳದ್ದು. ಕರಣಿ-ಕರಣೀಯವಾಗಿರುವುದು. ಸ್ಥಿರಗುಣವುಳ್ಳದ್ದಾಗಿದೆ. ಇದು ತನ್ನ ಸಂಪರ್ಕದಲ್ಲಿ ಬರುವ ಇನ್ನಿತರ ಧಾತು, ಮಲ, ಇಂದ್ರಿಯಗಳಿಗೆ ಶೈತ್ಯ, ಜಡತ್ವ, ಸ್ಥಿರತ್ವಗಳನ್ನು ಕೊಡುವುದು.

ಸ್ಥಾನ: ಕಫವು ವಿಶೇಷವಾಗಿ ಎದೆ, ಗಂಟಲು ಕುತ್ತಿಗೆ, ಭಾಗಗಳಲ್ಲಿರುತ್ತದೆ.

ಕಫ ಪ್ರಕೃತಿಯ ಲಕ್ಷಣಗಳು: ಕಫದ ಸ್ನಿಗ್ಧಗುಣದಿಂದ ಶರೀರದಲ್ಲಿ ಜಿಗಟು, ಮಾರ್ದವತೆ, ಮನಸ್ಸಿನಲ್ಲಿ ದಯಾಭಾವ, ಅನುಕಂಪ ಈ ಗುಣಗಳು ಬರುತ್ತವೆ. ಶೀತಗುಣದಿಂದ ಶರೀರದಲ್ಲಿ ಉಷ್ಣತೆ ಉಷ್ಣವಾದ ಆಹಾರ-ವಿಹಾರಗಳ ಬಯಕೆ, ಕಟು, ತಿಕ್ತ, ಕಷಾಯ ರಸಗಳಲ್ಲಿ ಅಭಿರುಚಿ ಉಂಟಾಗಿ ಮನಸ್ಸಿನಲ್ಲಿ ಶಾಂತಿ ಸಮಾಧಾನಗಳಿರುತ್ತವೆ. ಗುರುಗುಣದಿಂದ ಶರೀರದ ತೂಕವು ಹೆಚ್ಚಾಗಿ ಮನಸ್ಸಿನಲ್ಲಿ ಭದ್ರವಾದ ಗಂಭೀರವಾದ ವಿಚಾರಗಳು ಹುಟ್ಟಿಕೊಳ್ಳುವುವು. ಮಂದ ಗುಣದಿಂದ ಶರೀರದಲ್ಲಿ ಮಂದಗತಿ, ಮನಃಕ್ಷೇತ್ರದಲ್ಲಿ ವಿಚಾರ ಮಾಂ‌ದ್ಯಗಳುಂಟಾಗುತ್ತವೆ. ಮಂದಾಗ್ನಿ ಇರುತ್ತದೆ. ಶ್ಲಕ್ಷ ಗುಣದಿಂದ ಶರೀರದ ಚರ್ಮ, ಕೇಶಗಳು ನುಣಪಾಗಿಯೂ, ಸಂಧಗಳು ಸುಲಭವಾಗಿ ಕೆಲಸ ಮಾಡುವಂಥವೂ, ಮನಸ್ಸು ವಿಘ್ನವಿದ್ದಾಗಲೂ ದಿಕ್ಕುಗೆಡದೆ ಸರಳವಾದ ಮಾರ್ಗವನ್ನು ಅನುಸರಿಸುವಂತಹದೂ, ತಾನು ತಿಳಿದ ವಿಚಾರಗಳನ್ನೂ ಚೆನ್ನಾಗಿ ಹೇಳುವ ಗುಣವೂ ಬರುವುದು. ಮೃತ್ಸ್ನ ಗುಣದಿಂದ (ಕರಣಿಗಟ್ಟುವ) ಶರೀರಕ್ಕೆ ಪ್ರಮಾಣಬದ್ದವಾದ ರೂಪವೂ, ಮನಸ್ಸಿನಲ್ಲಿ ನಿಷ್ಕ್ರಷ್ಟವಾದ ವಿಚಾರಗಳು ಬರುವುವು. ಸ್ಥಿರ ಗುಣದಿಂದ ಶರೀರದ ಕಾರ್ಯಗಳಲ್ಲಿ ಸ್ಥೈರ್ಯವೂ, ಮನಸ್ಸಿನ ಧ್ಯೇಯ ವಿಚಾರಗಳಲ್ಲಿ ಸಾತತ್ಯ, ಸ್ಥಿರತೆ ಹಾಗೂ ಒಳ್ಳೆ ನೆನಪಿನ ಶಕ್ತಿಗಳುಂಟಾಗುವುವು. (ಕಲ್ಯಾಣಕಾರಕ ೧೦ನೇ ಅಧ್ಯಾಯಕಫರೋಗಾಧಿಕಾರ)

ಈ ಪ್ರಕೃತಿವುಳ್ಳವನು ವಿಶೇಷವಾಗಿ ಬಿಳಿ ವರ್ಣದವನೂ, ಸ್ಥೂಲಶರೀರಿಯೂ, ತನುಮನಗಳಲ್ಲಿ ಮಂದಗತಿವುಳ್ಳವನೂ, ಕಷಾಯ-ಕಟು-ತಿಕ್ತರಸಗಳಲ್ಲಿ ಆಸಕ್ತಿವುಳ್ಳವನೂ, ಶಾಂತಸ್ವಭಾವದವನೂ, ಬಹುಮಟ್ಟಿಗೆ ನಿರೋಗಿಯೂ ಆಗತಿರುವನು.

ಮಂದಾಗ್ನಿ: ಇವರಲ್ಲಿ ಮಂದಾಗ್ನಿ ಇರುವುದರಿಂದ ಹಸಿವು, ಪಚನ ಶಕ್ತಿಗಳು ಮಂದವಾಗಿರುತ್ತವೆ. ಇವನು ಸ್ವಭಾವತಹ ಅಲ್ಪ ಆಹಾರ ಸೇವಿಸುವನು. ಅದು ತೃಪ್ತಿಕರವಾಗಿ ಜೀರ್ಣವಾಗುವುದು, ತತ್ಪರಿಣಾಮವಾಗಿ ಮಂದಾಗ್ನಿ ಕಫವುಳ್ಳ ಪ್ರಕೃತಿಯವರು ‘ಉತ್ತಮ’ ಪ್ರಕೃತಿ ಪುರುಷರೆನಿಸಿಕೊಳ್ಳುತ್ತಾರೆ. ಇವರಲ್ಲಿ ಲಯ ಕ್ರಿಯೆಯೂ ಮಂದವಾಗಿರುವುದರಿಂದ ದೀರ್ಘಾಯುಷಿಗಳಾಗಿರುತ್ತಾರೆ.

ಮಧ್ಯಕೋಷ್ಠ: ಕಫ ಪ್ರಕೃತಿಯಿಂದ ಕೋಷ್ಠವು ತನ್ನ ಕಾರ್ಯದಲ್ಲಿ ಸ್ಥಿರವಾಗಿ ಆದರು ಮಂದವಾಗಿ ಕೆಲಸ ಮಾಡುವುದು. ತತ್ಪರಿಣಾಮವಾಗಿ ಮಲ ಘನರೂಪವಾಗಿ ತೊಂದರೆ ಇಲ್ಲದೆ ಆಗುವುದು. ಆದ್ದರಿಂದ ಇದಕ್ಕೆ ‘ಮಧ್ಯಕೋಷ್ಠ’ ಎನ್ನುವರು.

ಸಾಮಾನ್ಯ ಕರ್ಮಗಳು: ಸ್ವಸ್ಥಸ್ಥಿತಿಯಲ್ಲಿದ್ದಾಗ ಶರೀರಕ್ಕೆ ಸ್ನಿಗ್ಧತೆ, ಮನಸ್ಸಿಗೆ ಸ್ನೇಹ ಪೂರ್ಣತೆಗಳನ್ನುಂಟು ಮಾಡುವುದು. ಶರೀರದ ಮೂಳೆಗಳು ಪರಸ್ಪರ ಸಂಧಿಸುವ ಸ್ಥಾನದಲ್ಲಿರುವ ಸ್ನಾಯುವಿನ ಕಟ್ಟುಗಳನ್ನು ಭದ್ರವಾಗಿರಿಸುವುದು. ಶರೀರದ ಆಂತರಿಕ ಅಥವಾ ಬೌದ್ಧಿಕ ಅಘಾತಗಳನ್ನು ಸಹಿಸುವಂತಹ ಶಕ್ತಿ ಕೊಡುವುದು. ಇದೇ ಗುಣದಿಂದ ಮನಃಶಾಂತಿ, ಶರೀರ-ಮನಗಳಲ್ಲಿ ಸ್ಥಿರತೆಗಳುಂಟಾಗುವುವು.

ಪ್ರಕೋಪತೆ: ಕಫವು ಪ್ರಕೋಪಗೊಂಡಾಗ ಎದೆಯಲ್ಲಿದ್ದರೂ ಕಂಠ, ತಲೆ, ಕ್ಲೋಮ(ಬಾಯಾರಿಕೆಯ ಸ್ಥಾನ) ಸಂದುಗಳು, ಅಮಾಶಯ, ರಸ, ಮೇದಸ್ಸು, ಮೂಗು, ನಾಲಗೆ, ಈ ಸ್ಥಾನಗಳಲ್ಲಿ ವಿಶೇಷವಾಗಿ ಪ್ರಕಟಗೊಳ್ಳುತ್ತದೆ.

ಕಫದ ಭೇದಗಳು: ಇದರಲ್ಲಿ ೫ ಭೇದಗಳಿವೆ.

. ಅವಲಂಬಕ ಕಫ : ಇದು ಎದೆಯ ಪ್ರದೇಶದಲ್ಲಿದ್ದು ಆಹಾರ ರಸದಿಂದ ಉಂಟಾಗುವುದು. ಇಲ್ಲಿದ್ದುಕೊಂಡು ಬೆನ್ನು ಹುರಿಯ ಸಂಧಿ, ಹೃದಯ ಪುಪ್ಪುಸಾವರಣಗಳಲ್ಲಿ ನೈಸರ್ಗಿಕ ಜಲಸ್ರಾವಗಳನ್ನುಂಟು ಮಾಡಿ ಈ ಪ್ರದೇಶದ ಅಂಗಗಳಿಗೆ ಅವಲಂಬನವನ್ನು ಎಂದರೆ ಕಾರ್ಯ ಸಾಮರ್ಥ್ಯವನ್ನು ಕೊಡುವುದು. ಇದರ ಸಹಾದಿಂದಲೇ ಈ ಅಂಗಾಂಗಗಳು ಅಕುಂಚನ – ಪ್ರಸರಣ ಹೊಂದಲು ಸಹಾಯಕವಾಗುವುದು. ಈ ಅವಲಂಬಕ ಕಫವು ತನ್ನ ಸ್ಥಾನದಲ್ಲಿಟ್ಟುಕೊಂಡೇ ಇನ್ನುಳಿದ ನಾಲ್ಕು ಕಫ ಭೇದಗಳಿಗೆ ಕಾರ್ಯ ಶಕ್ತಿಯನ್ನುಂಟು ಮಾಡುವುದು.

. ಕ್ಲೇದಕ ಕಫ: ನಾವು ಸೇವಿಸಿದ ಆಹಾರವನ್ನು ಪಚನಕ್ಕೆ ಅನುಕೂಲವಾಗುವಷ್ಟರ ಮಟ್ಟಿಗೆ ದ್ರವೀಕರಣವನ್ನು ಈ ಕ್ಲೇದಕ ಕಫ ಮಾಡುವುದು. ಪಿತ್ತರಸಕ್ಕೆ ಅನ್ನದ್ರವ್ಯದ ಅಣು-ಅಣುಗಳಲ್ಲಿಯೂ ಪ್ರವೇಶಿಸಲು ಅನುಕೂಲವನ್ನುಂಟು ಮಾಡಿ ಜೀರ್ಣ ಕ್ರಿಯೆಯು ಸರಳವಾಗಿ ನಡೆಯುವಂತೆ ಮಾಡುವುದು.

. ಬೋಧಕ ಕಫ: ಆಹಾರ ರುಚಿ ಗ್ರಹಿಸಲು, ಸಹಾಯಕವಾದ ಕಫಾಂಶಕ್ಕೆ ಬೋಧಕ ಕಫವೆಂದು ಹೆಸರು. ಇದು ನಾಲಿಗೆಯಲ್ಲಿರುತ್ತದೆ. ಇದರಿಂದ ಆಹಾರ ಪದಾರ್ಥದ ರುಚಿ ಗೊತ್ತಾಗುವುದು.

. ತರ್ಪಕ ಕಫ: ಇಂದ್ರಿಯಗಳು ತರ್ಪಣ, ಆರೋಗ್ಯ ಮತ್ತು ಕ್ರಿಯಾಶೀಲತೆಗೆ ಕಾರಣವಾಗಿದೆ. ತರ್ಪಕ ಕಫವು ತಲೆಯಲ್ಲಿದ್ದುಕೊಂಡು ಪಂಚೇಂದ್ರಿಯಗಳಿಗೆ ಕ್ರಿಯಾಸತ್ವವನ್ನು ಸುಖವನ್ನು ಕೊಡುತ್ತದೆ.

. ಶ್ಲೇಷಕ ಫಲ: ಶರೀರದ ಸಂಧಿಗಳಲ್ಲಿ ಬಿಗುವನ್ನು, ಸುಲಭ ಕ್ರಿಯಾಶೀಲತೆಗಳನ್ನು ಕೊಡುವುದು. ಇದು ಶರೀರದ ಸಕಲ ಸಂದುಗಳಲ್ಲಿ ಇರುತ್ತದೆ. ಇದು ಸ್ನಿಗ್ಧಗುಣವುಳ್ಳದ್ದಾದ್ದರಿಂದ ಚಲನೆಗೆ ಎಣ್ಣೆಯಂತೆ ಕೆಲಸ ಮಾಡುತ್ತದೆ.

ಕಫ ವೃದ್ಧಿಯ ಲಕ್ಷಣ: ಕಫವು ತನ್ನ ನೈಜ ಪ್ರಮಾಣಕ್ಕಿಂತ ವೃದ್ಧಿಯಾದರೆ ಅಗ್ನಿಮಾಂದ್ಯ ಜೊಲ್ಲು ಹೆಚ್ಚಾಗುವಿಕೆ, ಅಲಸ್ಯ, ಮೈಭಾರ, ಶರೀರ ಬಿಳಿದಾಗುವಿಕೆ, ಛಳಿ, ಅವಯಗಳು ಸಡಿಲಾದಂತೆ ಎನಿಸತೊಡಗುವುವು. ಉಬ್ಬುಸ, ಕೆಮ್ಮು, ಅತಿ ನಿದ್ರೆ ಮೊದಲಾದ ವಿಕಾರಗಳುಂಟಾಗುವುವು.

ಕಫ ಕ್ಷಯದ ಲಕ್ಷಣಗಳು: ಕಫವು ಕ್ಷಯಿಸಿದರೆ ಭ್ರಮೆ ಮತ್ತು ಕಫ ಸ್ಥಾನಗಳಲ್ಲಿ ಶೂನ್ಯತ್ವ, ಹೃದಯವು ಹೆಚ್ಚು ಬಡಿದುಕೊಳ್ಳುವಂತೆ ಎನ್ನಿಸುವುದು. ಈ ಲಕ್ಷಣಗಳು ಕಾಣಸಿಕೊಳ್ಳುವುವು.

ಕಫ ಪ್ರಕೋಪ ಕಾಲ: ಕಫವು ಶೀತವಾದ ದ್ರವ್ಯ, ಶೀತಕಾಲ ಮುಖ್ಯವಾಗಿ ವಸಂತ ಋತುವಿನಲ್ಲಿ ಹಗಲಿನಲ್ಲಿ ಪೂರ್ವಾಹ್ನದಲ್ಲಿಯೂ, ರಾತ್ರಿಯಲ್ಲಿ ಪ್ರದೋಷ ಕಾಲದಲ್ಲಿಯೂ, ಊಟ ಮಾಡಿದ ಮೇಲೆಯೂ ಪ್ರಕೋಪಗೊಳ್ಳುತ್ತದೆ.

ಕಫ ಪ್ರಕೋಪದ ಲಕ್ಷಣಗಳು: ಕಫ ಪ್ರಕೋಪಗೊಂಡರೆ ಅಂಗಾಂಗಗಳಲ್ಲಿ ಸ್ನಿಗ್ಧತೆ, ಬಿರುಸತನ, ನವೆ, ಛಳಿ, ತಂಪು, ಭಾರ, ಸ್ರೋತಸ್ಸುಗಳ ತಡೆ, ಜಿಗುಟತನ, ನಿಶ್ಚಿಲತೆ, ಬಾವು, ಅಜೀರ್ಣ, ಅತಿ ನಿದ್ರೆ, ಬಿಳಿವರ್ಣ, ಬಾಯಿಯಲ್ಲಿ ಸಿಹಿ-ಉ‌ಪ್ಪುಗಳ ರುಚಿ – ಈ ಲಕ್ಷಣಗಳು ಇರುವುದಲ್ಲದೇ ರೋಗಗಳು ವಿಧಾನವಾಗಿ ಬೆಳೆದು ರೋಗಿಯನ್ನು ತುಂಬ ದಿವಸಗಳವರೆಗೆ ಸತಾಯಿಸುವವು.

ಕಫ ರೋಗಗಳು: ಕಫದ ಒಟ್ಟು ರೋಗಗಳು ಕೇವಲ ೨೦ ಮಾತ್ರ.

ತೃಪ್ತಿ, ನಿಃಚೈತನ್ಯ, ಅತಿನಿದ್ರೆ, ಜಡತೆ, ಭಾರವಾದ ಶರೀರ,ಮ ಅಲಸ್ಯ, ಬಾಯಿ ಸಿಹಿ ಎನಿಸುವುದು. ಬಾಯಿಯಲ್ಲಿ ನೀರೂರುವುದು, ತೇಗು, ಬಾಯಿಯಲ್ಲಿ ಕಫ ಬರುವುದು, ಹೆಚ್ಚು ಪ್ರಮಾಣದಲ್ಲಿ ಮಲಾಂಶ ಕಂಡಲ್ಲಿ ಲೇಪಗೊಂಡಿರುವುದು, ಕಫ, ಹೃದಯದಲ್ಲಿ ಲೇಪ, ಧಮನಿಗಳ ಬಂಧ, ಗಲಗಂಡ, ಅತಿಸ್ಥೂಲತೆ, ಶೀತಾಗ್ನಿ, ಉದರ್ದ, ಶರೀರ ವರ್ಣ-ಮೂತ್ರ-ಕಣ್ಣು-ಚರ್ಮಗಳೆಲ್ಲವೂ ಬಿಳಿಯ ಬಣ್ಣಕ್ಕೆ ತಿರುಗುವುದು – ಇವುಕ ಒಟ್ಟು ೨೦ ವಿಕಾರಗಳು.

ಕಫ ರೋಗಗಳಿಗೆ ಸಾಮಾನ್ಯ ಉಪಚಾರ ಕ್ರಮ: ಕಾರ, ಕಹಿ, ಒಗರು, ತೀಕ್ಷ್ಣ, ಉಷ್ಣ ರೂಪಗುಣವುಳ್ಳವುಗಳಾದ ಉಪಚಾರಗಳಿಂದಲೂ, ಸ್ವೇದನ, ವಮನ, ಶಿರೋವಿರೇಚನ, ವ್ಯಾಯಾಮ, ಮೊದಲಾದ ಕಫ ಹರವಾದ ಕ್ರಮಗಳಿಂದಲೂ ಚಿಕಿತ್ಸಿಸಬೇಕು. ಇದಕ್ಕೆ ವಾಂತಿಯೇ ಶ್ರೇಷ್ಠ. ಇದರಿಂದ ಅಮಾಶಯದಲ್ಲಿ ಸಂಗ್ರಹವಾದ ಕಫವು ಹೊರಹೋಗಿ ಬೇಗ ಗುಣವಾಗುವುದು.

ಕಹಿಪಡವಲ, ಮುಡಿವಾಳ, ಲಾಮಂಚ, ಶ್ರೀಗಂಧ, ಬೇವು, ನೆಲಬೇವು, ಅರಿಷಿಣ, ಅಡಸಾಲ, ಅಮೃತಬಳ್ಳಿ, ಬಜೆ, ಮೆಣಸು, ವಿಡಂಗ, ಪಂಚಕೋಲ, ಕಾಮಕಸ್ತೂರಿ, ಗೋರೋಚನ, ನೈದಿಲೆ, ಲೋಧ್ರ ಮೊದಲಾದ ಕಹಿ, ಕಾರ, ಒಗರು ರಸ ಪ್ರಧಾನ ದ್ರವ್ಯಗಳನ್ನು ಔಷಧ ರೂಪವಾಗಿ ಕೊಡುವುದರಿಂದ ಕಫದ ವಿಕಾರಗಳು ದೂರವಾಗುತ್ತವೆ.

ಜಠರಾಗ್ನಿಗಳು

ಚಿಕಿತ್ಸೆ ಮಾಡುವಾಗ ರೋಗಿಯ ಅಗ್ನಿಬಲವನ್ನು ನೋಡಬೇಕಾಗುತ್ತದೆ. ವಾತದೋಷ ಪ್ರಕೋಪದಿಂದ ವಿಷಮಾಗ್ನಿ. (ಯೋಗ್ಯ ಪ್ರಮಾಣದಲ್ಲಿ ಹಿಂದೆ ಆಹಾರವು ಒಮ್ಮೆ ಪಚನವಾದರೆ ಇನ್ನೊಮ್ಮೆ ಪಚನವಾಗುವುದಿಲ್ಲ) ಪಿತ್ತದೋಷ ಪ್ರಕೋಪದಿಂದ ತೀಕ್ಷ್ಣಾಗ್ನಿ (ಹೆಚ್ಚಿನ ಪ್ರಮಾಣದಲ್ಲಿ ತಿಂದ ಆಹಾರವು ಕೂಡ ಬೇಗನೆ ಪಚನವಾಗಿ ಬಿಡುವುದು) ಹಾಗೂ ಮಂದಾಗ್ನಿ ಕಫದೋಷ ಪ್ರಕೋಪದಿಂದ (ಅಲ್ಪ ಪ್ರಮಾಣದಲ್ಲಿ ಸೇವಿಸಿದ ಆಹಾರ ಕೂಡ ಸರಿಯಾಗಿ ಪಚನವಾಗದು) ಮೂರು ವಿಧ ಅಗ್ನಿಗಳು ಇರುತ್ತವೆ. ಇವು ಮೂರು ಕೂಡ ಶ್ರೇಷ್ಠವಲ್ಲ. ಇದನ್ನು ವಾತದೋಷವನ್ನು ಬಸ್ತಿಕರ್ಮದಿಂದ, ಪಿತ್ತದೋಷವನ್ನು ವಿರೇಚನದಿಂದ ಹಾಗೂ ಕಫ ದೋಷವನ್ನು ವಮನ ಮಾಡಿಸಿ ಸರಿಪಡಿಸಬೇಕು. ಋತು ಕಾಲಕ್ಕನುಸರಿಸಿ ಆಯಾ ಕಾಲಕ್ಕೆ ಸಂಚಿತವಾದ ದೋಷಗಳನ್ನು ಹೊರಹಾಕುತ್ತ ಆಹಾರ-ವಿಹಾರ ಕ್ರಮಗಳನ್ನನುಸರಿಸಿದರೆ ‘ಸಮಾಗ್ನಿ’ ಇರುವುದು. ಇದನ್ನು ಆರೋಗ್ಯಕ್ಕಾಗಿ ರಕ್ಷಿಸಿಕೊಳ್ಳಬೇಕು. (.., ಶ್ಲೋಕ ೧೧೧೪)

ಸಪ್ತ ಧಾತುಗಳು

ತ್ರಿದೋಷಗಳು ಶರೀರಧಾರಣೆಗಾಗಿ ನಡೆಸುವ ಸಂಗ್ರಹಣ, ಸಾತ್ಮೀಕರಣ ಕ್ರಿಯೆಗಳ ಮೂಲಕ ಶರೀರದಲ್ಲಿ ಅನೇಕ ಘಟಕಗಳು ಹುಟ್ಟಿಕೊಳ್ಳುತ್ತವೆ. ಶರೀರದ ಗಾತ್ರ, ತೂಕ, ಚಲನಶೀಲತೆ ಮೊದಲಾದ ಕ್ರಿಯೆಗಳಿಗೆ ಕೆಲ ಅಂಗಗಳನ್ನೂ ತ್ರಿದೋಷಗಳು ಸೃಷ್ಟಿಸಿ ಅವುಗಳ ಕೆಲಸಗಳಿಗನುಸಾರವಾಗಿ ಅವನ್ನು ಏಳು ವಿಭಾಗಗಳನ್ನಾಗಿ ಎಂದರೆ ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜ, ಶುಕ್ರ ಎಂಬ ಸಪ್ತ ಧಾತುಗಳನ್ನು ಹುಟ್ಟಿಸಿದೆ. ಈ ಏಳು ಅಂಗಗಳು ಶರೀರ ಧಾರಣೆಗೆ ಅವಶ್ಯವಾಗಿರುವುದರಿಂದ ಇವುಗಳಿಗೆ ‘ಧಾತು’ ಗಳೆಂದು ಕರೆದಿದ್ದಾರೆ.

ನಾವು ಸೇವಿಸಿದ ಆಹಾರದಿಂದ ಆಹಾರ ರಸ – ಆ ಆಹಾರ ರಸದಿಂದಲೇ ಈ ಸಪ್ತ ಧಾತುಗಳ ಪೋಷಣೆ ಆಗುತ್ತದೆ. ಅದಕ್ಕೆ ಆಯಾ ಧಾತ್ವಗ್ನಿಗಳು ಆಹಾರ ರಸದಿಂದ ತಮ್ಮ ತಮ್ಮ ಅಂಶಗಳನ್ನು ತೆಗೆದುಕೊಂಡು ಆಯಾ ಧಾತುಗಳನ್ನು ಪೋಷಿಸಿಕೊಳ್ಳುತ್ತವೆ.

. ರಸ ಧಾತು: ಇದು ಶರೀರದಲ್ಲಿ ಸ್ವಸ್ಥ ಸ್ಥಿತಿಯಲ್ಲಿದ್ದಾಗ ಶರೀರೇಂದ್ರಿಯಗಳಲ್ಲಿ ಪ್ರೀಣನವನ್ನು ಎಂದರೆ ಸಮಾಧಾನ, ಸಂತೋಷ, ತೃಪ್ತಿಗಳನ್ನುಂಟು ಮಾಡುವುದು. ಮಾನಸ ಕ್ಷೇತ್ರವು ಕೂಡ ರಸಭರಿತವಾಗಿರುವುದು. ಅಲ್ಲದೇ ಇದು ಮುಂದಿನ ಧಾತುವಾದ ರಕ್ಕಕ್ಕೆ ಪುಷ್ಟಿಕೊಡುವುದು.

ಇದು ತನ್ನ ಪ್ರಮಾಣಕ್ಕಿಂತ ಹೆಚ್ಚಾದರೆ ಕಫ ವೃದ್ಧಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಗ್ನಿಮಾಂದ್ಯ, ಜೊಲ್ಲು ಸುರಿಯುವುದು, ಅಲಸ್ಯ, ಮೈಭಾರ ಶರೀರವು ಬಿಳಿದಾಗುವಿಕೆ, ಛಳಿ, ಅವಯಗಳು ಸಡಿಲಗೊಳ್ಳುವುದು, ದಮ್ಮು, ಕೆಮ್ಮು, ಅತಿನಿದ್ರೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುವುವು.

. ರಕ್ತ ಧಾತು: ಶರೀರದಲ್ಲಿ ಪುಷ್ಟಿ ಹಾಗೂ ಸತ್ವಗಳು ಸಾಕಷ್ಟು ಪ್ರಮಾಣದಲ್ಲಿರುವಂತೆ ಮಾಡುವ ಕೆಲಸವನ್ನು ಈ ರಕ್ತ ಧಾತುವು ಮಾಡುತ್ತದೆ. ಸಮಗ್ರ ಶರೀರಕ್ಕೆ ಬೇಕಾಗುವ ಪೋಷಕಾಂಶಗಳು ಈ ರಕ್ತ ಧಾತುವಿನ ಮೂಲಕವೇ ತಲುಪುವುದು. ಶುದ್ಧ ರಕ್ತವು ಜೀವನವೆನಿಸಿಕೊಳ್ಳುವುದು. ಇದರಲ್ಲಿರುವ ಆಮ್ಲಜನಕದ ಅಂಶದಿಂದಲೇ ಪ್ರತಿಯೊಂದು ಜೀವಧಾತುಗಳು ಬದುಕಲು ಸಾಧ್ಯವಾದ್ದರಿಂದ ಪರಿಚಲನ ಕ್ರಿಯೆಯು ಸದಾ ನಡೆಯುತ್ತಲೇ ಇರಬೇಕಾದುದು. ಜೀವನಿರ್ವಹಣೆಗೆ ಅನಿವಾರ್ಯ. ದೇಹದಿಂದ ಸ್ವಲ್ಪ ರಕ್ತ ಹೋದಾಗ ನಮಗೆ ತಲೆಗೆ ಚಕ್ಕರ ಬರುವುದು. ಆದ್ದರಿಂದಲೇ ಇದಕ್ಕೆ ‘ಜೀವ’ ಎನ್ನುವರು. ರಕ್ತದಲ್ಲಿ ರಕ್ತ ಗೋಲಕ, ರಕ್ತ, ರಕ್ತದ್ರವ, ಲೋಹಾಂಶಗಳಿರುತ್ತವೆ. ಆಹಾರ ರಸದಲ್ಲಿಯ ರಸಾಂಶವು ಯಕೃತ್-ಪ್ಲೀಹಗಳಲ್ಲಿ ಹರಿದು ಬರುವಾಗ ಅದಕ್ಕೆ ವರ್ಣ ಬಂದು ರಕ್ತವೆನಿಸುವುದು ಎಂದು ಕೆಲವರು ಆಹಾರ ರಸದಲ್ಲಿಯ ರಕ್ತಧಾತ್ವಾಂಶವನ್ನು ರಕ್ತಧಾತ್ವಗ್ನಿಯು ಹೀರಿಕೊಂಡು ಮುಂದಿನ ಧಾತುವಾದ ಮಾಂಸಕ್ಕೆ ಪುಷ್ಠಿಯನ್ನೀಯಲು ಸಹಕರಿಸುತ್ತದೆ ಎನ್ನುವರು.

ದೇಹದಲ್ಲಿ ರಕ್ತಧಾತು ಹೆಚ್ಚಾದರೆ ವಿಸರ್ಪ, ಪ್ಲೀಹವೃದ್ಧಿ, ಕುರುಗಳು, ಚರ್ಮ ರೋಗಗಳು, ವಾತರಕ್ತ, ರಕ್ತಪಿತ್ತ, ಗುಲ್ಮ, ಉಪಕುಶವೆಂಬ ದಂತರೋಗ, ಬಂಗು, ಅಗ್ನಿನಾಶ, ಮಂಕುತನ, ಕಾಮಣಿ, ಅಲ್ಲದೆ ಕಣ್ಣು, ಮೂತ್ರ ತ್ವಚೆಗಳೂ ಆರಕ್ತವಾಗುವಿಕೆ ಈ ಮೊದಲಾದ ಲಕ್ಷಣಗಳು ಕಂಡುಬರುತ್ತವೆ.

ರಕ್ತಧಾತುವು ಕ್ಷಯಿಸಿದರೆ ಆಮ್ಲರಸದಲ್ಲಿ ಅಭಿರುಚಿ, ನಾಡಿಗಳಲ್ಲಿ ಶಿಥಿಲತೆ, ರೂಕ್ಷತೆ ಮತ್ತು ತಂಪಿನ ಆಶೆಗಳುಂಟಾಗುತ್ತವೆ.

. ಮಾಂಸಧಾತು: ಸ್ವಸ್ಥವಾಗಿರುವ ಮಾಂಸ ಧಾತು ಶರೀರದಲ್ಲಿರುವ ಅಂಗಾಂಗಗಳನ್ನು, ಧಾತುಗಳನ್ನು ಆಶಯಾದಿಗಳನ್ನು ಒಂದಕ್ಕೊಂದು ಅಂಟಿಸುವ ಕೆಲಸವನ್ನು ಮತ್ತು ಪ್ರಾಮುಖ್ಯವಾಗಿ ಎಲುಬುಗಳನ್ನು ಅಂಟಿಕೊಂಡು ಸಂಚಲನ ಮಾಡುವ ಕೆಲಸವನ್ನು ಮಾಡುವುದು. ಇದರಿಂದಲೇ ಮಾನವನಿಗೆ ಒಂದು ಸ್ಥಿತಿಯೂ, ರೂಪವೂ, ಬರುವುವು. ಅಂಗಾಂಗಗಳಿಗೆಲ್ಲ ಒಂದು ರೀತಿಯ ಬಿಗುವು ಒಂದು ಅವು ಸಡಿಲಾಗದಂತೆ ಆಗುವುದು. ಇದು ಆಹಾರ ರಸದಿಂದ ಮಾಂಸ ಧಾತ್ವಗ್ನಿಯ ಮೂಲಕ ಸ್ವೀಕೃತಗೊಂಡು ತನ್ನ ಮುಂದಿನ ಧಾತುವಾದ ಮೇದೋ ಧಾತುವಿಗೆ ಪುಷ್ಟಿ ಕೊಡುವುದು.

ಈ ಧಾತು ಶರೀರದಲ್ಲಿ ವೃದ್ಧಿಗೊಂಡರೆ ಗಂಡಮಾಲೆ, ಕುರುಗಳು, ಗಂಟುಗಳು, ಕೆನ್ನೆ ತೊಡೆ ಹೊಟ್ಟೆಗಳ ಬಾವು; ಕುತ್ತಿಗೆ, ಗುದದ್ವಾರ, ಮೂಗು ಮೊದಲಾದ ಭಾಗಗಳಲ್ಲಿ ಮಾಂಸದ ಬೆಳವಣಿಗೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುವುದು.

ಮಾಂಸಧಾತುವು ಕ್ಷಯಿಸಿದರೆ ಇಂದ್ರಿಯಗಳಿಗೆ ಬೇಗ ದಣಿವಾಗುವಿಕೆ, ಶರೀರಸ್ಥ ಮಾಂಸಭಾಗಗಳು ಒಣಗುವಿಕೆ, ಸಂಧಿಗಳಲ್ಲಿ ನೋವು- ಈ ಲಕ್ಷಣಗಳು ಕಂಡುಬರುವುವು.

. ಮೇದೋ ಧಾತು: ಇದು ಸ್ವಸ್ಥವಾಗಿರುವಾಗ ಶರೀರದ ಅಂಗಾಂಗಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಸ್ನಿಗ್ಧತೆಯನ್ನುಂಟು ಮಾಡುವುದು ಮತ್ತು ಅಸ್ಥಿಗಳ ಸಂಯೋಜನೆಯಿಂದ ಮೊನಮೊನಚಾಗಿ ಕಾಣಬಹುದಾದ ಶರೀರಕ್ಕೆ ಒಂದು ಸುಂದರವಾದ ಆಕಾರವನ್ನು ಕೊಡುವುದು. ಸ್ವೇದಗ್ರಂಥಿಗಳಿಗೆ ಜೈತನ್ಯಕೊಟ್ಟು ಮುಂದಿನ ಧಾತುವಾದ ಅಸ್ಥಿಧಾತುವಿಗೆ ಪುಷ್ಟಿಯನ್ನೀಯುವುದು.

ಮೇದಸ್ಸು ಶರೀರದಲ್ಲಿ ತನ್ನ ಪ್ರಮಾಣಕ್ಕಿಂತ ವೃದ್ಧಿಗೊಂಡರೆ ಸ್ವಲ್ಪ ಕೆಲಸ ಮಾಡಿದರೂ ಉಬ್ಬುಸ, ಹೊಟ್ಟೆ, ನಿತಂಬ, ಎದೆ ಭಾಗಗಳಲ್ಲಿ ವಿಶೇಷ ಕೊಬ್ಬು ಶೇಖರಣೆ ಹಾಗೂ ನೇತಾಡಿದಂತಾಗುವಿಕೆ ಈ ಲಕ್ಷಣಗಳು ಕಂಡುಬರುವುವು. ಮೇದೋಧಾತ್ವಗ್ನಿಯು ದುಷ್ಟಗೊಂಡು ಆಹಾರದಲ್ಲಿಯ ಹೆಚ್ಚು ಅಂಶವನ್ನು ತಾನೆ ತೆಗೆದುಕೊಂಡು ಮೇದಸ್ಸಿನ ಬೆಳವಣಗೆಗೆ ಕಾರಣವಾಗುವುದರಿಂದ ಸ್ಥೂಲತ್ವ ಬರುವುದೆಂದು ಶಾಸ್ತ್ರವು ಹೇಳುತ್ತದೆ. ಶರೀರ ಲಿಂಗ, ವಯಸ್ಸು, ಅನುವಂಶಿಕತೆ, ಅಂತಃಸ್ರಾವಿ ಗ್ರಂಥಿಗಳು , ಹವಾಮಾನ, ಪ್ರದೇಶ ಹಾಗೂ ಪರಿಸರ, ಸಿರಿವಂತಿಕೆಗಳೂ ಸ್ಥೂಲತೆ ಬರಲು ಕಾರಣವಾಗುತ್ತವೆ.

ಮೇದಸ್ಸು ಕ್ಷಯಿಸಿದರೆ ದೇಹ ಸೊರಗುವುದು. ಪ್ಲೀಹವು ವೃದ್ಧಿಯಾಗುವುದು. ಸೊಂಟ ಪ್ರದೇಶದಲ್ಲಿ ಸ್ಪರ್ಷಜ್ಞಾನಿವಿಲ್ಲದಿರುವುದು – ಈ ಲಕ್ಷಣಗಳು ಕಂಡು ಬರುವುವು.

. ಅಸ್ಥಿಧಾತು: ಇದು ಸ್ವಸ್ಥವಾಗಿರುವಾಗ ಶರೀರಕ್ಕೆ ಸದೃಢತೆ, ಸ್ಥಿರತೆ ಕೊಡುವುದಲ್ಲದೇ ತನ್ನ ಮುಂದಿನ ಮಜ್ಜಾಧಾತುವಿಗೆ ಪುಷ್ಟಿ ಕೊಡುವುವು.

ಅಸ್ಥಿ ಧಾತುವು ವೃದ್ಧಿಗೊಂಡರೆ ಮೂಳೆಯ ಮೇಲೆ ಮೂಳೆಯೂ, ಹಲ್ಲಿನ ಮೇಲೆ ಹಲ್ಲೂ ಬೆಳೆಯುವವಲ್ಲದೇ ಅಸ್ಥಿಗಳು ಪ್ರಮಾಣ ಮೀರಿ ಬೆಳೆಯುವುವು. ಅಸ್ಥಿ ಧಾತುವು ಕ್ಷಯಿಸಿದರೆ ದೇಹವು ಸೊರಗುವುದು. ಪ್ಲೀಹವು ವೃದ್ಧಿಯಾಗುವುದು. ಸೊಂಟದ ಪ್ರದೇಶದಲ್ಲಿ ಸ್ಪರ್ಷಜ್ಞಾನವಿಲ್ಲದಿರುವುದು. ಈ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುವುವು.

. ಮಜ್ಜಾಧಾತು: ಇದು ಸ್ವಸ್ಥವಾಗಿರುವಾಗ ಅಸ್ಥಿರಂಧ್ರಗಳನ್ನು ತುಂಬುವ ಕೆಲಸವನ್ನು ಮಾಡುತ್ತದೆ. ಅಲ್ಲದೇ ಸ್ವಸ್ಥಾನದಲ್ಲಿದ್ದುಕೊಂಡು ಸಮಗ್ರ ಶರೀರದ ಸ್ನಿಗ್ಧತೆಗೂ ಬಲಕ್ಕೂ ಸಹಾಯಕವಾಗುತ್ತದೆ. ಅಲ್ಲದೇ ತನ್ನ ಮುಂದಿನ ಧಾತುವಾದ ಶುಕ್ರಧಾತುವಿಗೆ ಪುಷ್ಟಿಯನ್ನು ಕೊಡುತ್ತದೆ.

ಮಜ್ಜಾಧಾತುವು ವೃದ್ಧಿಗೊಂಡರೆ ಕಣ್ಣುಗಳ ಕಾರ್ಯದಲ್ಲಿ ಮತ್ತು ಸರ್ವಾಂಗಗಳ ಚಲನ-ವಲನಗಳಲ್ಲಿ ಜಡತೆಯ ಅನುಭವವಾಗುವುದು. ಸಂದುಗಳಲ್ಲಿ ಅಗಲವಾದ ಬುಡವಿರುವ ತೀಕ್ಷ್ಣವಾದ ಗುಳ್ಳೆಗಳು ಉಂಟಾಗುವುವು.

ಮಜ್ಜಾಧಾತು ಶರೀರದಲ್ಲಿ ಕ್ಷಯಿಸಿದರೆ ಅಸ್ಥಿಗಳಲ್ಲಿ ರಂಧ್ರವುಂಟಾಗುವಿಕೆ, ಬುದ್ಧಿಯ ಮಂಕುತನ, ಕಣ್ಣು ಕತ್ತಲುಗೂಡುವಿಕೆ – ಈ ಲಕ್ಷಣಗಳುಂಟಾಗುವುವು.

. ಶುಕ್ರಧಾತು: ಇದು ಸ್ವಸ್ಥವಾಗಿರುವಾಗ ಗರ್ಭೋತ್ಪಾದನೆಗೆ ಕಾರಣವಾದ ಸ್ತ್ರೀಯರ ರಜಸ್ಸನ್ನು ಪುರುಷರ ವೀರ್ಯವನ್ನು ಸರಿಯಾದ ಪ್ರಮಾಣದಲ್ಲಿ, ನಿರ್ಮಲ ರೀತಿಯಲ್ಲಿ ಉತ್ಪಾದಿಸುವುದಕ್ಕೆ ಕಾರಣವಾಗುವುದು. ಇದರ ಪರಿಣಾಮವಾಗಿ ಸ್ತ್ರೀ-ಪುರಷರಲ್ಲಿ ರಜೋ-ವೀರ್ಯಗಳು ಸಮ ಪ್ರಮಾಣದಲ್ಲಿ ಹುಟ್ಟಿಕೊಂಡು ಗರ್ಭ ಸ್ಥಾಪನೆಗೆ ಕಾರಣವಾಗುವುದು.

ಶುಕ್ರಧಾತು ಕ್ಷಯಿಸಿದರೆ ವೀರ್ಯ, ರಜಸ್ಸುಗಳ ಸ್ರಾವವು ಕಡಿಮೆ ಆಗುವುವು. ಎರಡು ಸ್ರಾವಗಳ ನಡುವಿನ ಅಂತರ ಹೆಚ್ಚಬಹುದು. ತೀರ ಕ್ಷಯಿಸಿದಾಗ ಇವುಗಳ ಬದಲಾಗಿ ರಕ್ತಸ್ರಾವವಾಗಬಹುದು.

ಶುಕ್ರಧಾತು ವೃದ್ಧಿಗೊಂಡರೆ ಸ್ತ್ರೀ-ಪುರಷರಲ್ಲಿ ಮಿರಿಮೀರಿದ ಪರಸ್ಪರ ಕಾಮಾಕರ್ಷಣೆ ಆಗುವುದಲ್ಲದೇ ಪುರುಷರಲ್ಲಿ ಶುಕ್ರಾಶ್ಮರಿ, ಸ್ತ್ರೀಯರಲ್ಲಿ ರಜಸ್ರಾವಕ್ಕೆ ತಡೆ, ತೊಂದರೆಗಳುಂಟಾಗುವುವು.

ಓಜಸ್ಸು: ಇದು ಸಪ್ತಧಾತುಗಳ ಸಾರಸ್ವರೂಪದ್ದಾಗಿದೆ. ಮುಖದಲ್ಲಿ ಕಾಂತಿ ಅಥವಾ ಕಳೆ ಕಾಣಿಸುವುದಕ್ಕೆ ‘ಓಜಸ್ಸು’ ಎನ್ನಬಹುದು. ಇದು ಸೋಮಾತ್ಮಕವಾಗಿದ್ದು ಸ್ನಿಗ್ಧ, ಶೀತಗುಣವುಳ್ಳದ್ದಾಗಿ ತನು ಮನಗಳ ಸ್ಥೈರ್ಯಕ್ಕೆ ಕಾರಣವುಳ್ಳದ್ದಾಗಿ ಪ್ರಾಣಕ್ಕೆ ಆಧಾರವಾಗಿದೆ. ಇದು ಕೂಡ ಶುಕ್ರಧಾತುವು ಪಾಕಗೊಂಡು ಉಂಟಾಗುವುದು. ಓಜಸ್ಸನ್ನು ಕೆಲವರು ಪರ ಹಾಗೂ ಅಪರಗಳೆಂದು ಎರಡು ಭಾಗಗಳಾಗಿ ವಿಂಗಡಿಸಿರುತ್ತಾರೆ. ಹೃದಯದಲ್ಲಿದ್ದುಕೊಂಡು ಜೈತನಕ್ಕೆ ಕಾರಣವಾದ ಓಜಸ್ಸು ಪರವೆಂತಲೂ, ಶುಕ್ರಧಾತುವಿನ ಪಾಕಸ್ವರೂಪವಾದ ಓಜಸ್ಸಿಗೆ ‘ಓಜಸ್ಸು’ ಎಂತಲೂ ಕರೆಯುತ್ತಾರೆ.

ಓಜಸ್ಸು ಸಪ್ತಧಾತುಗಳ ಸಾರಸ್ವರೂಪವಾದುದರಿಂದ ಎಲ್ಲ ಧಾತುಗಳಿಗೂ ಜೈತನ್ಯ ಹಾಗೂ ಸ್ಥೈರ್ಯಗಳನ್ನು ಕೊಡುವುದು. ಜೀವಧಾರಣೆಗೆ ಸಪ್ತಧಾತುಗಳು , ತ್ರಿದೋಷಗಳು ಮುಖ್ಯ ಕಾರಣಗಳಾಗಿದ್ದರೂ ಅವೆಲ್ಲಕ್ಕೂ ಪ್ರಚೋದನೆಯನ್ನು ಓಜಸ್ಸೇ ಕೊಡುವುದು.

ಮಲಗಳು

ತ್ರಿದೋಷಗಳು ಸಪ್ತಧಾತುಗಳ ಮೂಲಕ ಜೀವನ ಧಾರಣೆಯ ಕಾರ್ಯವನ್ನು ಮುನ್ನಡೆಸುತ್ತಿರುವಾಗ ಆಯಾ ಧಾತುಗಳ ಸ್ಥಾನಗಳಲ್ಲಿ ಸವಕಳಿ ಉಂಟಾಗುವುದರಿಂದ ಶರೀರಕ್ಕೆ ಬೇಡವಾದ ಕೆಲ ದ್ರವ್ಯಗಳು ಹುಟ್ಟಿಕೊಳ್ಳುವುವು. ಇವೊಂದು ನಿರ್ದಿಷ್ಟ ಪ್ರಮಾಣದಲ್ಲಿ ಶರೀರದಲ್ಲಿದ್ದರೆ ಅಪಾಯ ಮಾಡವು. ಆದರೆ ಪ್ರಮಾಣ ಮೀರಿದರೆ ಅಪಾಯ ಖಂಡಿತ. ಆದ್ದರಿಂದ ಅವನ್ನು ಕಾಲಕಾಲಕ್ಕೆ ಹೊರಹಾಕಬೇಕಾಗುತ್ತದೆ. ಇವಕ್ಕೆನೇ ‘ಮಲ’ಗಳೆನ್ನುತ್ತಾರೆ. ಇದು ಸ್ವೇದ, ಮೂತ್ರ ಮಲಗಳಲ್ಲದೇ ಕಣ್ಣೀರು, ಸಿಂಬಳ, ಕೂಕಣಿ, ಪಿಚ್ಚು ಮೊದಲಾದ ಇನ್ನಿತರ ಮಲಗಳು ಇವೆ. ಆದರೆ ಸ್ವೇದ, ಮೂತ್ರ ಹಾಗೂ ಮಲಗಳಿಗೆ ಮಾತ್ರ ‘ಮಲ’ ಗಳೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ಮಲಗಳು ಸ್ವಸ್ಥ ಪ್ರಮಾಣದಲ್ಲಿ ಶರೀರದಲ್ಲಿದ್ದರೆ ಧಾರಣತೆಯನ್ನು ಮಾಡುತ್ತದೆ. ಮೂತ್ರವು ಶರೀರದಲ್ಲಿಯ ಮಿರಿಮೀರಿದ ಜಲಾಂಶವನ್ನು ಹೊರಹಾಕುವುದು. ಸ್ವೇದವು ಶರೀರಕ್ಕೆ ಅತ್ಯವಶ್ಯವಾದ ಜಲಾಂಶ ಪ್ರಮಾಣದಲ್ಲಿ ಆಯಾ ಅಂಗಾಂಗಗಳಲ್ಲಿ ಹಿಡಿದಿಡುವುದು. ಅತಿ ಮೂತ್ರ ವಿಸರ್ಜನೆ ಇಲ್ಲವೆ ಅತಿಯಾಗಿ ಬೆವರು ಬಂದರೆ ದೈಹಿಕ ಸತ್ವಗಳು ಕದಡಲ್ಪಡುವುವು. ಅದರಂತೆ ಮಲಾಂಶವು ಕೂಡ ಹೆಚ್ಚಿಗೆ ಹೊರಹೋಗ ತೊಡಗಿದರೆ ಕೈಕಾಲುಗಳು ಸೋತು ಬರುವುವು. ಸುಸ್ತು ಅನುಭವಕ್ಕೆ ಬರುವುದು. ಆದ್ದರಿಂದ ಶರೀರಧಾರಣೆಗೆ ಈ ಮಲಗಳು ಶರೀರಕ್ಕೆ ಅವಶ್ಯವೆಂದು ನಮ್ಮ ಆಚಾರ್ಯರು ಕಂಡುಕೊಂಡು ಅವನ್ನು ‘ಧಾತು’ ಗಳೆಂದು ಕರೆಯುತ್ತಾರೆ.

ಶರೀರದಲ್ಲಿ ಮಲವು ಸಹಜ ಪ್ರಮಾಣಕ್ಕಿಂತ ಹೆಚ್ಚಾದರೆ ಹೊಟ್ಟೆಯುಬ್ಬರ, ಶಬ್ದ, ಭಾರ, ತಲೆನೋವುಗಳುಂಟಾಗುವುವು. ಮೂತ್ರವು ಹೆಚ್ಚಾದರೆ ಮೂತ್ರಾಶಯ, ಕಟೀ ಪ್ರದೇಶಗಳಲ್ಲಿ ನೋವುಂಟಾಗುವುದು. ಅಲ್ಲದೇ ಮೂತ್ರ ಮಾಡಿದರೂ ಇನ್ನೂ ಮೂತ್ರವಿದ್ದಂತೆ ಭಾಸವಾಗುವುದು. ಸ್ವೇದವು ಹೆಚ್ಚಾದರೆ ಅತಿಯಾಗಿ ಬೆವರುವಿಕೆ, ಮಯಗೆ ದುರ್ಗಂಧ, ತುರಿಕೆಗಳುಂಟಾಗುವುವು.

ಮಲೋತ್ಪತ್ತಿ: ಆಹಾರ ಪಚನಕ್ರಿಯೆಯು ಕೋಷ್ಠ ಭಾಗದಲ್ಲೆಲ್ಲ ಸಾಗುತ್ತಿರುವಾಗ ಅದರಿಂದ ಬೇರ್ಪಟ್ಟ ಅಸಾರ ಭಾಗವು ಸಮಾನಾವಾಯುವಿನಿಂದ ಘನಾಂಶ ದ್ರವಾಂಶವೆಂದು ಎರಡು ಭಾಗಗಳಲ್ಲಿ ವಿಂಗಡಿಸಲ್ಪಟ್ಟು ಘನಾಂಶವು ದೊಡ್ಡ ಕರುಳಿನ ಕೊನೆಯ ಭಾಗಕ್ಕೆ ತಳ್ಳಲ್ಪಟ್ಟು ಅಲ್ಲೆ ಪುಷ್ಟವಾಗಿ ಮಲರೂಪವಾಗಿ ಹೊರಹೋಗುವುದು. ಇನ್ನುಳಿದ ಅಸಾರಾಂಶವು ಅಪಾನವಾಯುವಾಗಿ ಹೊರಕ್ಕೆ ಹೋಗುವುದು.

ಅಸಾರಭಾಗದ ದ್ರವಾಂಶವು ಸ್ರೋತ್ರಸ್ಸುಗಳಿಂದ ಹೀರಲ್ಪಟ್ಟು ಸ್ವೇದಾಂಗ ಹಾಗೂ ಮೂತ್ರಾಂಶಗಳಿಗೆ ಹೋಗಿ ಅದರಲ್ಲಿಯ ಧಾತ್ವಂಶಗಳು ಶೋಧಿಸಲ್ಪಟ್ಟು ಇನ್ನುಳಿದ ಮಲಾಂಶಗಳು ಸ್ವೇದ ಹಾಗೂ ಮೂತ್ರಗಳಾಗಿ ಹೊರ ಹೋಗುವುವು.

ಮೂತ್ರೋತ್ಪತ್ತಿ: ಅಮಾಶಯದ ಸಮೀಪದಲ್ಲಿರುವ ಪ್ರೋತಸ್ಸುಗಳಿಂದ ಆಹಾರಕ್ಕಿಟ್ಟದ ಜಲಾಂಶವು ಹೀರಲ್ಪಟ್ಟು ಮೂತ್ರ ಪಿಂಡಗಳಿಗೆ ಸಾಗಿಸಲ್ಪಡುವುದು. ಅಲ್ಲಿ ಲೆಕ್ಕವಿಲ್ಲದಷ್ಟು ಹರಡಿರುವ ಮೂತ್ರಜನಕನಾಡಿಗಳಲ್ಲಿ ಆ ಜಲಾಂಶದಲ್ಲಿಯ ತ್ಯಾಜ್ಯಭಾಗವು ಮೂತ್ರ ರೂಪಕ್ಕೆ ಪರಿವರ್ತಿಸಲ್ಪಡುತ್ತದೆ. ಪ್ರತಿಯೊಂದು ವೃಕ್ಕದಿಂದ ಒಂದೋಂದು ಗವೀನೀ ಎಂಬ ಹೆಸರಿನ ಮೂತ್ರನಾಳವು ಹೊರಟು ಪಕ್ವಾಶಯದ ಸಮೀಪಸ್ಥವಾದ ಮೂತ್ರಾಶಯಕ್ಕೆ ತಲುಪುತ್ತದೆ. ಮೂತ್ರಪಿಂಡಗಳಲ್ಲಿ ಸಿದ್ಧವಾದ ಮೂತ್ರವು ಗವೀನೀಗಳ ಮೂಲಕ ಕ್ಷಣ ಕ್ಷಣಕ್ಕೂ ಬಿಂದು ಬಿಂದುಗಳಾಗಿ ಬಂದು ಮೂತ್ರಾಶಯದಲ್ಲಿ ಸಂಚಿತಗೊಳ್ಳುತ್ತಿರುತ್ತದೆ. ಇದು ತುಂಬಿದ ಬಳಿಕ ಅಪಾನವಾಯುವಿನ ಪ್ರೇರಣೆಯಿಂದ ಮೂತ್ರ ಮಾರ್ಗದ ಮೂಲಕ ಮೂತ್ರವು ವಿಸರ್ಜಿಸಲ್ಪಡುತ್ತದೆ. ದಿನಕ್ಕೆ ಸಾಮಾನ್ಯವಾಗಿ ಆಯಾ ವ್ಯಕ್ತಿಯು ತನ್ನ ನಾಲ್ಕು ಬೊಗಸೆಗಳಷ್ಟು ಮೂತ್ರ ವಿಸರ್ಜನೆ ಮಾಡುತ್ತಾನೆ.

ಸ್ವೇದೋತ್ಪತ್ತಿ: ಸ್ವೇದವಹ ಸ್ರೋತಸ್ಸುಗಳೆಂದರೆ ರಸ, ರಕ್ತಾದಿ ಧಾತುಗಳಲ್ಲಿರುವ ಜಲಸ್ವರೂಪಕ್ಕೆ ಪರಿವರ್ತಿಸಲು ತೆಗೆದುಕೊಂಡು ಹೋಗುವ ಸ್ರೋತಸ್ಸುಗಳಾಗಿವೆ. ಈ ಸ್ವೇದದಲ್ಲಿ ಈ ಜಲಾಂಶ ಮೆದಸ್ಸಿನ ಅಂಶಗಳೂ ಸೇರಿರುತ್ತವೆ. ಈ ಸ್ವೇದವು ಶರೀರದಲ್ಲಿಯ ಕ್ಲೇದಾಂಶವನ್ನು ಹೊರಗೆ ಹಾಕಲು, ಚರ್ಮಕ್ಕೆ ಮಾರ್ದವತೆ ಕೊಡಲು ಸಹಾಯವಾಗುತ್ತದೆ.

ಆರೋಗ್ಯ ಸಾಧನೆ ಹಾಗೂ ರೊಗ ಚಿಕಿತ್ಸೆಯಲ್ಲಿ ಈ ಮಲಗಳ ಮಾತ್ರ ತುಂಬ ಮಹತ್ವದ್ದಾಗಿದೆ. ಆದ್ದರಿಂದಲೇ ಚಿಕಿತ್ಸೆಗೆ ಮೊಲದು ಈ ವಿಷಯದ ಕಡೆಗೆ ಗಮನ ಹರಿಸಬೇಕಾಗುವುದು. ಆಯುರ್ವೇದವು ಚಿಕಿತ್ಸೆಗೆ ಮೊದಲು ಶರೀರ ಶುದ್ಧಿ ಹೇಳುತ್ತದೆ. ಇದರಲ್ಲಿ ಶರೀರಕ್ಕೆ ಅನವಶ್ಯವಾದ ಈ ಅಂಶಗಳನ್ನು ಹೊರಹಾಕಲಾಗುತ್ತದೆ. ಪಂಚಕರ್ಮ ಎಂದು ಪ್ರಸಿದ್ಧವಾದ ಈ ಚಿಕಿತ್ಸಾ ವಿಧಾನದಲ್ಲಿ ಸ್ವೇದನ (ಬೆವರಿಸುವುದು) ವಿರೇಚನ (ಭೇದಿ ಮಾಡಿಸುವುದು) ಈ ಮಲಗಳಿಗೆ ಸಂಬಂಧಿಸಿವೆ.

ಆಧಾರ

೧. ನಿರ್ದಿಶ್ಯ ಜಾತಿಸ್ಮರಣ ಲಕ್ಷಣತ್ವಂ ವಕ್ಷ್ಯಾಮಹೆ ಸತ್ಪ್ರಕೃತಿಂ ಯಥಾಕ್ರಮಂ ರಕ್ತಾನ್ವಿತೇ ರೇತಸಿ ಜೀವಸಂಚರೆ ದೋಷೋತ್ಕಟೋತ್ಥಾ ಪ್ರಕೃತಿನೃಣೌಂಭಿವೇತ್ || (.., ಶ್ಲೋಕ.೧೭)

೨.ಕಲ್ಯಾಣಕಾರಕ ಅ. ೩, ಶ್ಲೋಕಗಳು ೧೮-೨೭

೩. ಕಲ್ಯಾಣಕಾರಕ ಅ.೩, ಶ್ಲೋಕಗಳು, ೪೭-೬೯

೪. ಕಲ್ಯಾಣಕಾರಕ ಅ.೨೦, ಶ್ಲೋಕ-೨