ರಸಗಳು

‘ರಸ’ವೆಂದರೆ ನಾವು ಯಾವುದಾದರೊಂದು ದ್ರವ್ಯವನ್ನು ನಾಲಗೆಯ ಮೇಲೆ ಇಟ್ಟುಕೊಂಡಾಗ ಅಲ್ಲಿಯ ದ್ರವಾಂಶದ ಮೂಲಕ ಅದರ ಅಂಶಗಳು ಹೀರಲ್ಪಟ್ಟು ಯಾವುದೊಂದು ರುಚಿಯ ಅನುಭವವಾಗುವುದೋ ಅದಕ್ಕೆ ‘ರಸ’ ಎನ್ನುತ್ತೇವೆ. ಇದು ಪಂಚಮಹಾಭೂತಗಳಲ್ಲಿಯ ಜಲಕ್ಕೆ ಸಂಬಂಧಿಸಿದುದ್ದಾಗಿದೆ. ಇದು ಮೋಡಗಳ ಘರ್ಷಣೆಯಿಂದ ಭೂಮಿಯ ಮೇಲೆ ನೀರು ಬೀಳುತ್ತಿರುವಾಗ ಪಂಚಭೂತಾತ್ಮಕವಾದ ಸ್ಥಾವರ ಜಂಗಮ ವಸ್ತುಗಳ ಮೇಲೆ ಬಿದ್ದು, ಆಯಾ ದ್ರವ್ಯಗಳ ಗುಣಗಳಿಗೆ ತಕ್ಕಂತೆ ರೂಪಾಂತರಹೊಂದಿ ಆರು ವಿಧವಾಗಿ ಪರಿಣಾಮ ಹೊಂದುತ್ತವೆ. ಸ್ವಾಭಾವಿಕವಾಗಿ ನೀರಿಗೆ ಯಾವುದೇ ರುಚಿ ಇರುವುದಿಲ್ಲ. ಆದ್ದರಿಂದ ಅದರ ಸಂಪರ್ಕಕ್ಕೆ ಬರುವ ವಸ್ತುವಿನ ರಸಗುಣಗಳೇ ನೀರಿಗೆ ಬಂದು, ವಸ್ತುವಿಗು ಅದರ ರುಚಿಯು ಬರುವುದು.

ಇಂತಹ ರಸಗಳು ಒಟ್ಟು ಆರು. ಸಿಹಿ, ಹುಳಿ, ಉಪ್ಪು, ಕಹಿ, ಕಾರ ಹಾಗೂ ಒಗರುಗಳೆಂದು.

ಈ ರಸಗಳ ಪ್ರಾಮುಖ್ಯತೆಯು ಚಿಕಿತ್ಸೆಯಲ್ಲಿ ತುಂಬ ಮಹತ್ವದ ಪಾತ್ರವಹಿಸುತ್ತದೆ. ನಾವು ಚಿಕಿತ್ಸೆಗಾಗಿ ಯಾವುದೇ ಒಂದು ದ್ರವ್ಯವನ್ನು ಆರಿಸಿಕೊಳ್ಳುವಾಗ ಅದರ ರಸವನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಅದರ ರಸದ ಮೂಲಕ ಅದನ್ನು ಯಾವರೋಗಕ್ಕೆ ಯೋಜಿಸಬಹುದು ಎಂದು ಗೊತ್ತಾಗುತ್ತದೆ. ಹಿಂದಿನ ಋಷಿಮುನಿಗಳು ಅರಣ್ಯದಲ್ಲಿ ಹೀಗೆಯೇ ಪರೀಕ್ಷಿಸಿ ರೋಗಿಗಳ ಚಿಕಿತ್ಸೆ ಮಾಡುತ್ತಿದ್ದರು.

ಈ ರಸಗಳಿಗೆ ಅಪ್ ಮೂಲ ಕಾರಣವಾದರು ಇವೂ ಪಂಚಭೌತಿಕಗಳೇ.

ಪ್ರಥ್ವಿ + ಆಪ್ – ಸಹಿರಸ ವಾತನಾಶಕಗಳೂ, ಕಫವನ್ನು ಬೆಳೆಸುವುವು
ಪ್ರಥ್ವಿ + ಅಗ್ನಿ – ಹುಳಿರಸ
ಜಲ + ಅಗ್ನಿ – ಉಪ್ಪುರಸ
ವಾಯು + ಅಗ್ನಿ – ಕಾರರಸ ಕಫ ನಾಶಕಗಳೂ, ವಾತವನು ಬೆಳೆಸುವುವು
ವಾಯು + ಆಕಾಶ – ಕಹಿ ರಸ
ಪ್ರಥ್ವಿ + ವಾಯು – ಒಗರು ರಸ

ಕಹಿ, ಒಗರು, ಸಿಹಿರಸಗಳು – ಪಿತ್ತಹರಗರ
ಹುಳಿ, ಉಪ್ಪು, ಕಾರಗಳು – ಪಿತ್ತಕರಗಳು.

ಚಿಕಿತ್ಸೆಗಾಗಿ ನಾವು ಯಾವುದೋ ದ್ರವ್ಯವನ್ನು ಆರಿಸಿಕೊಳ್ಳುವಾಗ ರಸಗಳನ್ನು ನೋಡುವಂತೆ ಆ ದ್ರವ್ಯ ಹೊಂದಿರುವ ಗುಣಗಳನ್ನು ಲಕ್ಷಿಸಬೇಕಾಗುತ್ತದೆ. ಏಕೆಂದರೆ ಪಿತ್ತಹರಗಳಾದ ಕಷಾಯ, ತಿಕ್ತ, ಮಧುರ ರಸಗಳು ತೀಕ್ಷ್ಣ, ಲಘು ಗುಣಾಧಿಕ್ಯ ಹೊಂದಿದ್ದರೆ ಅವು ಪಿತ್ತಕಾರಕವೆನಿಸುತ್ತವೆ. ಕಫ ಹರಗಳಾದ ತಿಕ್ತ, ಕಟು, ಕಷಾಯ ರಸಗಳಲ್ಲಿ ಸ್ನೇಹ, ಗುರುತ್ವ ಶೈತ್ಯಾದಿ ಗುಣಗಳು ಸಮಾವೇಶಗೊಂಡಿದ್ದರೆ ಅವು ಕಫಕಾರಕಗಳಾಗಿ ಪರಿಣಾಮವೆನಿಸುತ್ತವೆ.

ರಸಗಳನ್ನು ತಿಳಿಯುವ ಬಗೆ

೧. ಯಾವ ರಸವು ಸಂತೋಷ, ಆನಂದ, ತೃಪ್ತಿ, ಜೀವನ, ಬಾಯಿಯಲ್ಲಿ ಒಂದು ವಿಧದ ಲೇಪನವನ್ನುಂಟು ಮಾಡುವುದೋ ಹಾಗೂ ಕಫಕರವಾಗಿದೆಯೋ ಅದು ಸಿಹಿ.

೨. ಹಲ್ಲುಗಳು ಜುಮ್ಮು ಹಿಡಿದು ಬಾಯಿಯಲ್ಲಿ ನೀರುತರುವಂತೆ ಮಾಡಿ ರುಚಿಯನ್ನುಂಟು ಮಾಡುವುದೋ ಅದು ಹುಳಿ.

೩. ಯಾವ ರಸವು ಆಹಾರ ರುಚಿಯನ್ನುಂಟು ಮಾಡಿ, ಕಫ ಸುರಿಯುವ ಹಾಗೆ ಮಾಡಿ ಬಾಯಿಯನ್ನು ಮೃದುಗೊಳಿಸುವುದೋ ಅದು ಉಪ್ಪು.

೪. ಯಾವುದು ನಾಲಗೆಯ ತುದಿಯನ್ನು ಬಾಧಿಸಿ ಅಸಂತೋಷ, ಅಮಲೇರುವಿಕೆ, ಮೂಗಿನಲ್ಲಿ ದ್ರವ ಸುರಿಯುವಂತೆ, ಮೈಯಲ್ಲಿ ಉರಿಯಾದಂತೆ, ತಲೆಗೇರಿದಂತೆ ಮಾಡುವುದೋ ಅದು ಕಾರ.

೫. ಗಂಟಲನ್ನು ಒಣಗಿಸುವ, ಬಾಯಲ್ಲಿ ರುಚಿಯನ್ನುಂಟು ಮಾಡುವ ಆಹಾರವು ರುಚಿಯಾಗುವಂತೆ ಸಹಕರಿಸುವುದು ಕಹಿ ರಸ.

೬. ಯಾವುದು ಬಾಯಿಯನ್ನು ಒಣಗಿಸಿ, ನಾಲಿಗೆಯನ್ನು ಜಡಮಾಡಿಸಿ ಕಂಠವನ್ನು ಕಟ್ಟಿಸಿ, ಹೃದಯವನ್ನು ಸೆಳೆದು ಪೀಡಿಸುವುದೋ ಅದು ಒಗರು.

. ಮಧುರ ರಸ: ಇದು ಎಲ್ಲರಿಗೂ ಜನ್ಮಧಾರಭ್ಯಸಾತ್ಮ್ಯವಾಗಿರುವುದರಿಂದ ರಸಾದಿ ಧಾತುಗಳಿಗೆ ಬಲದಾಯಕವಾಗಿರುತ್ತದೆ. ಬಾಲಕರು, ವೃದ್ಧರು, ಕ್ಷತ ಕ್ಷೀಣರಿಗೆ ಹಿತಕಾರವಾಗಿದೆ. ಶರೀರದ ವರ್ಣ, ತಲೆಗೂದಲು, ಇಂದ್ರಿಯಗಳು, ಓಜಸ್ಸುಗಳ ವೃದ್ಧಿಗೆ, ಸ್ಥೂಲತ್ವಕ್ಕೆ, ಕಂಠಮಾಧುರ್ಯಕ್ಕೆ, ಸ್ತನ್ಯ ವೃದ್ಧಿಗೆ ಸಹಾಯಕವಾಗಿದೆ. ಸ್ನಿಗ್ಧ ಹಾಗೂ ಗುರುವುಳ್ಳ ಇದು ದೀರ್ಘಾಯುಷ್ಯಕ್ಕೆ ಪಿತ್ತ, ವಾಯು ಹಾಗೂ ವಿಷಹರಣಕ್ಕೆ ಕಾರಣವಾಗುತ್ತದೆ. ಬಾಯಾರಿಕೆ, ಮೂರ್ಛೆ, ಉರಿ, ತಾಪಗಳನ್ನು ದೂರ ಮಾಡಿ ಪಂಚೇದ್ರಿಯಗಳನ್ನು ಶುದ್ಧಿ ಮಾಡುವ ಗುಣವುಳ್ಳದ್ದಾಗಿದೆ.

ಮಧುರ ರಸವನ್ನು ಅತಿಯಾಗಿ ಸೇವಿಸಿದರೆ ಕೆಮ್ಮು, ಉಬ್ಬುಸ, ಹೊಟ್ಟೆಯುಬ್ಬರ, ವಾಂತಿ, ಬಾಯಿ ಸಿಹಿಯಾಗುವಿಕೆ, ಸ್ವರಬೀಳುವುದು, ಕ್ರಿಮಿ, ಗಲಗಂಡಿ – ಈ ಲಕ್ಷಣಗಳುಂಟಾಗುವುವು. ಹಾಗೆಯೇ ಅರ್ಬುದ, ಆನೇಕಾಲು ರೋಗಗಳನ್ನು ಮತ್ತು ಬಸ್ತಿ, ಗುದಭಾಗಗಳಲ್ಲಿ ಮಲಲೇಪ ಮತ್ತು ಸ್ರಾವವನ್ನುಂಟು ಮಾಡುವುದು.

ದ್ರವ್ಯಗಳು – ತುಪ್ಪ, ಬೆಲ್ಲ, ಆಕ್ರೋಟ, ಬಾಳೇಹಣ್ಣು, ಕಾಡ ಖರ್ಜೂರ, ಅಷಾಡೀ ಬೇರು, ಕಾಕೋಳಿ, ಹಲಸಿನ ಹಣ್ಣು, ಎಳೆ ತೆಂಗಿನ ತಿರುಳು, ಕಳ್ಳಂಗಡಲೆ, ಒಂದೆಲೆ ಹೊನ್ನೆ, ಹೆಗ್ಗುಳ್ಳ, ನೆಲಗುಳ್ಳ, ಸಿಹಿಹಾಲೆ, ಜೀವಕ, ಜೇಷ್ಠ ಮಧು, ನೆಲಗುಂಬಳ, ಬಿದುರುಪ್ಪು, ಶಿವನಿಹಣ್ಣು, ಕಾಡುಉದ್ದು, ಕಾಡಹೆಸರು, ಕಬ್ಬು, ನೆಗ್ಗಿಲು, ದ್ರಾಕ್ಷಿ, ಸಿಹಿ ದಾಳಿಂಬೆ, ತಾವರೆ ಬೀಜ, ಅಶ್ವಗಂಧ, ಖರ್ಜೂರ, ಸೇಬು ಹಣ್ಣು , ತಾಳೆ ಹಣ್ಣು -ಇವುಗಳಲ್ಲಿ ವಿಶೇಷವಾಗಿ ಸಿಹಿ ರಸವಿರುತ್ತದೆ.

. ಹುಳಿರಸ: ಅಗ್ನಿ ದೀಪನಕಾರಿ, ಸ್ನಿಗ್ಧ, ಗುಣವುಳ್ಳದ್ದು, ಹೃದಯಕ್ಕೆ ಹಿತವಾದದ್ದು, ಅನುಪಾಚಕವು, ರುಚಿಕಾರಿ, ಉಷ್ಣ ವೀರ್ಯವುಳ್ಳದ್ದು, ಸ್ಪರ್ಷಕ್ಕೆ ಶೀತಲವಾದದ್ದು, ತೃಪ್ತಕರವು, ಗಟ್ಟಿಯಾದ ಮಲವನ್ನು ಭೇದಿಸುವಂತಹದು, ಲಘುಗುಣವುಳ್ಳದ್ದು, ಕಫ, ಪಿತ್ತ, ರಕ್ತರೋಗಗಳನ್ನುಂಟು ಮಾಡುತ್ತದೆ. ಹೊಟ್ಟೆಯುಬ್ಬರವನ್ನು ಅನುಲೋಮನ ಮಾಡಿಸುವುದು. ಅತಿಯಾಗಿ ಸೇವಿಸಿದರೆ ಅಂಗ ಶೈಥಿಲ್ಯ, ತಿಮಿರ ಎಂಬ ನೇತ್ರ ರೋಗ, ಭ್ರಾಂತಿ, ನವೆ, ಬಿಳುಪು, ಬಾವು, ಮೈಮೇಲೆ ದಪ್ಪವಾದ ಗುಳ್ಳೆಗಳೇಳುವುದು, ನೀರಡಿಕೆ, ಜ್ವರ ಮೊದಲಾದ ವಿಕಾರಗಳುಂಟಾಗುತ್ತದೆ.

ದ್ರವ್ಯಗಳು- ನೆಲ್ಲಿಕಾಯಿ, ಹುಣಸೇಹಣ್ಣು, ಮಾದಳ ಹಣ್ಣು, ಹುಳಿ, ಹುಳಿದಾಳಿಂಬೆ, ಬೆಳ್ಳಿ, ಮಜ್ಜಿಗೆ, ಮೊಸರು, ಮಾವು, ಅಮಟಿ, ಬೇಲ, ಬಾರೆಹಣ್ಣು, ಕಿರುನೆಲ್ಲಿ, ಕಲಗಚ್ಚು ಮುಂತಾದವುಗಳು ಹುಳಿ ರಸ ಪ್ರಧಾನ ದ್ರವ್ಯಗಳಾಗಿವೆ. ಇವುಗಳಲ್ಲಿ ದಾಳಿಂಬ ಮತ್ತು ನೆಲ್ಲಿಕಾಯಿಗಲ ಹೊರತಾಗಿ ವಿಶೇಷವಾಗಿ ಪಿತ್ತವನ್ನುಂಟು ಮಾಡುತ್ತವೆ.

. ಉಪ್ಪು ರಸ: ಅಗ್ನಿವರ್ಧಕವಾಗಿದ್ದು ಮೈ ಬಿಗಿತ, ಮಲ ಮೂತ್ರಾದಿಗಳ ತಡೆಯನ್ನು ನಿವಾರಿಸುವುದು. ಸ್ನೇಹನ-ಸ್ವೇದಕಲ ಗುಣವುಳ್ಳದ್ದು ರುಚಕರವಾಗಿದೆ. ಸ್ರೋತೋರೋಧವನ್ನು ದೂರ ಮಾಡುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ವಾತರಕ್ತ, ಬೋಳು ತಲೆ, ಕೂದಲ ನರೆ, ಚರ್ಮದ ಸುಕ್ಕು, ಬಾಯಾರಿಕೆ, ಕುಷ್ಠ, ವಿಷದೋಷ, ವಿಸರ್ಪ, ಶಕ್ತಿ ಹಾನಿಯನ್ನುಂಟು ಮಾಡುತ್ತದೆ.

ದ್ರವ್ಯಗಳು – ಸೈಂಧವ, ಸೌವರ್ಚಲ, ಕೃಷ್ಣಲವಣ, ಬಿಡ, ಸಮುದ್ರ ಉದ್ಭವ, ಗೋಮಕ, ಸೌಳುಪ್ಪು, ಸೀಸ ಸರ್ಜಕ್ಷಾರ, ಯವಕ್ಷಾರ, ಟಂಕಣ ಕ್ಷಾರ – ಇವು ಉಪ್ಪು ರಸ ಪ್ರಧಾನವುಳ್ಳ ದ್ರವ್ಯಗಳಾಗಿವೆ. ಇವುಗಳಲ್ಲಿ ಸೈಂಧವ ಲವಣವೇ ಉತ್ತಮವಾದ್ದು. ಕಣ್ಣುಗಳಿಗೆ ಹಿತಕರವಾಗಿದೆ. ಇನ್ನುಳಿದವುಗಳು ಕಣ್ಣುಗಳಿಗೆ ಅಹಿತವನ್ನುಂಟು ಮಾಡುತ್ತವೆ.

. ಕಹಿರಸ: ಅಹಿತರುಚಿವುಳ್ಳದ್ದಾದರೂ ಅರೋಚಕತೆಯನ್ನೂ, ಕ್ರಿಮಿ, ನೀರಡಿಕೆ, ವಿಷ ದೋಷ, ಕುಷ್ಠ, ಮೂರ್ಛೆ, ಜ್ವರ, ಬಾಯಿಯಲ್ಲಿ ನೀರು ಸುರಿಯುವುದು, ಉರಿ, ಪಿತ್ತ, ಕಫಗಳ ಪ್ರಕೋಪಾದಿಗಳನ್ನು ನಿವಾರಿಸುತ್ತದೆ. ಮೈಯಿಂದ ದ್ರವಜಿನುಗುವುದನ್ನೂ ಮೇದಸ್ಸು, ವಸೆ, ಮಚ್ಚೆ, ಮಲಮೂತ್ರಗಳನ್ನೂ ಒಣಗಿಸುತ್ತದೆ. ಲಘುವಾಗಿದ್ದ ಬುದ್ಧಿ ಚುರುಕನ್ನುಂಟು ಮಾಡುವುದು. ಶೀತ ವೀರ್ಯವಾಗಿದ್ದು ಸ್ತನ್ಯ ಶುದ್ದಿ, ಸ್ವರಶುದ್ಧಿಗಳನ್ನುಂಟು ಮಾಡುವುದು ಒಣ ಸ್ವಭಾವದ್ದಾಗಿದೆ. ಈ ರಸವನ್ನು ವಿಶೇಷವಾಗಿ ಸೇವಿಸಿದರೆ ಧಾತು ಕ್ಷೀಣಿತೆ, ವಾತ ರೋಗಗಳನ್ನುಂಟು ಮಾಡುತ್ತದೆ. ಗಾತ್ರ ಸ್ತಂಭತೆ, ಮನ್ಯಾಸ್ತಂಭ, ನಡುಕ, ಅರೆ ತಲೆ ನೋವು, ತಲೆ ಶೂಲೆ, ಭ್ರಮೆ, ನೋವು, ಮೈ ಒಡೆತ, ತುಂಡಾಗುವಿಕೆ, ಬಾಯಿ ರುಚಿ ಕೆಡುವುದು – ಈ ಲಕ್ಷಣಗಳನ್ನುಂಟು ಮಾಡುತ್ತದೆ.

ದ್ರವ್ಯಗಳು : ಕಹಿಪಡವಲ, ಮುಡಿವಾಳ, ಲಾಮಂಚ, ಶ್ರೀಗಂಧ, ನೆಲಬೇವು, ಕಟುಕ ರೋಹಿಣಿ, ಗ್ರಂಥಗತಗರ, ಅಗಿಲು, ಗಂಧ, ಕೊಡಸೀಗೆ ತೊಗಟೆ, ಹೊಂಗೆ, ಅರಿಷಿಣ, ಮರದರಿಶನ, ಅಡಸಾಲ, ಉತ್ತರಾಣಿ, ಕಂಚು ಕಬ್ಬಿಣ, ಅಮೃತಬಳ್ಳಿ, ಮಹಾಪಂಚಮೂಲ, ಹೆಗ್ಗುಳ್ಳ, ನೆಲಗುಳ್ಳ, ಮೆಕ್ಕೆ, ಅತಿ ಬಜೆ ಮುಂತಾದವುಗಳು ತಿಕ್ತ ಪ್ರಧಾನ ದ್ರವ್ಯಗಳಾಗಿವೆ. ಇವುಗಳಲ್ಲಿ ಅಮೃತಬಳ್ಳಿ, ಕಹಿಪಡವಲಗಳ ಹೊರತಾಗಿ ಇನ್ನುಳಿದ ದ್ರವ್ಯಗಳು ವಾತಪ್ರಕೋಪವನ್ನುಂಟು ಮಾಡುವುವು.

. ಕಾರ ರಸ: ಇದು ಗಳರೋಗ, ಪಿತ್ತ ಗಂಧ, ಕುಷ್ಠರೋಗ, ಅಲಸಕವೆಂಬ ಅಜೀರ್ಣ ವಿಕಾರ, ಮೈಬಾವುಗಳನ್ನಿಳಿಸುತ್ತದೆ. ವ್ರಣಗಳನ್ನು ಮಾಯಿಸುತ್ತದೆ. ಸ್ನೇಹ, ಮೇದಸ್ಸು, ಧಾತು. ಸ್ರಾವಾದಿಗಳನ್ನು ಒಣಗಿಸುತ್ತದೆ. ಅಗ್ನಿದೀಪನ, ಅಮರಸಪಾಚನವನ್ನುಂಟು, ಮಾಡಿ ನಾಲಗೆಗೆ ರುಚಿಯನ್ನು ಕೊಟ್ಟು ಮುಖಶೋಧನೆಯನ್ನುಮಟು ಮಾಡುತ್ತದೆ. ಅನ್ನಶೋಷನೇ ಮಾಡುತ್ತದೆ. ಸ್ರೋತೋಮುಖಗಳನ್ನು ಅಗಲಿಸುತ್ತದೆ. ಕಫಹರವಾಗಿದೆ. ಕಟುರಸವನ್ನು ಅತಿಯಾಗಿ ಸೇವಿಸಿದರೆ ನೀರಡಿಕೆ, ಶುಕ್ರ-ಬಲಗಳ ಕ್ಷಯ, ಮೂರ್ಛೆ, ಅವಯವಗಳ ಸೆಳೆದುಕೊಳ್ಳುವಿಕೆ, ನಡುಕ, ಸೊಂಟ, ಬೆನ್ನುಗಳಲ್ಲಿ ನೋವುಗಳುಂಟಾಗುತ್ತವೆ.

ದ್ರವ್ಯಗಳು: ಹಿಂಗು, ಮೆಣಸು, ವಿಡಂಗ, ಪಂಚಕೋಲ, ಕಾಮಕಸ್ತೂರಿ, ಗೋರೋಚನ, ಕೇರು, ಮನಃಶಿಲೆ, ಸಾಸಿವೆ, ಚಂಗಲ್ಕೋಷ್ಠ ಮೊದಲಾದವುಗಳು ಕಾರರಸ ಪ್ರಧಾನವಾಗಿವೆ. ಹಿಪ್ಪಲಿ ಹೊರತಾಗಿ ಇನ್ನಿರತ ಕಾರದ್ರವ್ಯಗಳು ಸಂತಾನಶಕ್ತಿಯನ್ನು ಕಡಿಮೆ ಮಾಡುವವು.

. ಕಷಾಯ ರಸ: ಗುರು, ಶೀತವೀರ್ಯ, ಸಿಹಿ ಮತ್ತು ರೂಪ ಗುಣವುಳ್ಳದ್ದು, ಪಿತ್ತ ಕಫ ಹರವಾಗಿದ್ದು ರಕ್ತಶುದ್ಧಿಯನ್ನುಂಟು ಮಾಡುವುದು. ಪೀಡನ ಕಾರಿ. ವ್ರಣ ರೋಪಕಗುಣವುಳ್ಳದ್ದು, ಕಫ-ಮೇದಸ್ಸುಗಳನ್ನು ಒಣಗಿಸುತ್ತದೆ. ಆಮರಸವನ್ನು ಮುಂದೆ ಹೋಗದಂತೆ ತಡೆಯುತ್ತದೆ. ಚರ್ಮದ ಕೊಳೆಯನ್ನು ಹೋಗಲಾಡಿಸಿ ಹೊಳಪನ್ನುಂಟು ಮಾಡುವುದು. ಕಷಾಯ ರಸವನ್ನು ಹೆಚ್ಚಾಗಿ ಸೇವಿಸಿದರೆ ಮಲ ಮೂತ್ರಗಳ ತಡೆ, ಹೊಟ್ಟೆಯುಬ್ಬರ, ಎದೆನೋವು, ನೀರಡಿಕೆ, ಕೃಶತ್ವ, ಶುಕ್ರನಾಶ, ಸ್ರೋತೋಮುಖಗಳ ಬಂಧನವನ್ನುಂಟು ಮಾಡುತ್ತದೆ. ಕ್ಷಯ ರೋಗ, ಮಾತಿನ ತಡೆ, ಕುತ್ತಿಗೆ ನೋವು, ಶರೀರದಲ್ಲಿ ಸಿಡಿತ, ಚುಮುಗುಟ್ಟುವುದು, ನಡುಕ, ಮುದುರುವಿಕೆ ಮೊದಲಾದ ವಿಕಾರಗಳುಂಟಾಗುತ್ತವೆ.

ದ್ರವ್ಯಗಳು: ಈಚಲು, ತಾರೆ, ಬಾಗೆ, ಕಗ್ಗಲಿ, ಮುತ್ತು, ಹವಳ, ಸ್ರೋತೊಂಜನ, ಕಾವಿ, ಎಳೆಯ ಬೇಲದ ಕಾಯಿ, ಖರ್ಜೂರ, ತಾವರೆಯದಂಟು, ನೈದಿಲೆ, ಪ್ರಿಯಂಗು, ಲೋಧ್ರ, ಹೆಮ್ಮರ ಮುಂತಾದವುಗಳು ಕಷಾಯ ರಸ ಪ್ರಧಾನ ದ್ರವ್ಯಗಳಾಗಿವೆ.

ವೀರ್ಯ

ಕೆಲವು ದ್ರವ್ಯಗಳು ರಸದ ಬಲದಿಂದ, ಕೆಲ ದ್ರವ್ಯಗಳು ರಸದ ವಿಪಾಕ ವಿಶೇಷದಿಂದ ಕೆಲವು ವೀರ್ಯ ವಿಶೇಷದಿಂದ ಇನ್ನೂ ಕೆಲವು ಪ್ರಭಾವದಿಂದ ಕಾರ್ಯ ಮಾಡುತ್ತವೆ. ದ್ರವ್ಯಗಳಲ್ಲಿರುವ ರಸಾದಿಗಳಲ್ಲಿ ಯಾವುದು ಬಲವಾಗಿರುವುದೋ ಅದು ಇತರ ಗುಣಳನ್ನು ಜಯಿಸಿ ಕೆಲಸ ಮಾಡುವ ಶಕ್ತಿಯುಳ್ಳದ್ದಾಗಿದೆ.

ಯಾವುದೊಂದು ಕೆಲಸವು ಯಾವುದರಿಂದ ಮಾಡಲ್ಪಡುವುದೋ ಅದೇ ವೀರ್ಯ. ಈ ವೀರ್ಯ ಗುಣವಿಲ್ಲದೇ ಯಾವ ಕಾರ್ಯವೂ ಸಾಧಿಸುವುದಿಲ್ಲ. ಈ ಜಗತ್ತನ್ನು ಅಗ್ನಿ ಮತ್ತು ಚಂದ್ರಗಳ ವಿಶೇಷ ಪ್ರಭಾವದಿಂದ ಕೂಡಿದೆಯಾದ್ದರಿಂದ ವೀರ್ಯಗಳು ಉಷ್ಣ ಶೀತಗಳೆಂದು ಎರಡು ಭೇದ.

ಉಷ್ಣ ವೀರ್ಯವುಳ್ಳ ದ್ರವ್ಯಗಳ ಸೇವನೆಯಿಂದ ಶೀರೋಭ್ರಮಣ, ಜ್ಞಾನನಾಶ, ನೀರಡಿಕೆ, ಮೈ ಬೆವರುವುದು, ಮೈ ಉರಿಯುವುದು, ಶೀಘ್ರ ಕಾಲದಲ್ಲಿ ಆಹಾರವು ಪಾಕವಾಗದಿರುವಿಕೆ. ಶೀತವೀರ್ಯ ದ್ರವ್ಯಗಳನ್ನು ಸೇವಿಸಿದರೆ ಮನಸ್ಸಿಗೆ ಆಹ್ಲಾದಕತೆ, ಜೀವನ, ಜೈತನ್ಯವೃದ್ಧಿ, ಸ್ಥೈರ್ಯ ಪ್ರಕುಪಿತ ರಕ್ತ-ಪಿತ್ತಗಳ ಶಮನವುಂಟಾಗುವುದು.

ವಿಪಾಕ

ನಾವು ಸೇವಿಸಿದ ಯಾವುದೇ ರಸ ಪ್ರಧಾನವಾದ ದ್ರವ್ಯಗಳಾಗಿರಲಿ ಅವು ಜೀರ್ಣವಾದ ಮೇಲೆ ಮತ್ತೊಂದು ತರಹದ ಪಾಕವಾಗಿ ಬೇರೊಂದು ರೀತಿಯ ಗುಣವನ್ನು ಹೊಂದುವುದಕ್ಕೆ ‘ವಿಪಾಕ’ ಎನ್ನುತ್ತಾರೆ. ವಿಶ್ವದಲ್ಲಿರುವ ಪಂಚಭೂತಾತ್ಮಕವಾದ ದ್ರವ್ಯಗಳಲ್ಲಿ ಗುರುತ್ವ ಹಾಗೂ ಲಘೂತ್ವ ಎಂಬ ಎರಡೇ ಗುಣಗಳು ಪ್ರಧಾನವಾಗಿರುತ್ತವೆ. ಅದರಲ್ಲಿ ಮಧುರ ರಸವು ಗುರುವಾಗಿದ್ದರೆ ಕಾರವು ಹಗರುವಾಗಿದೆ. ಮಿಕ್ಕ ತೇಜಸ್ಸು, ವಾಯು, ಆಕಾಶ ತತ್ವಗಳು ಲಘುವಾಗಿವೆ. ಆದ್ದರಿಂದ ವಿಪಾಕಗಳು ಮಧುರ ಹಾಗೂ ಕಾರಗಳೆಂದು ಎರಡು ವಿಧ.

ಪ್ರಭಾವ

ಸಮಾನವಾದ ರಸ, ವೀರ್ಯ, ವಿಪಾಕವುಳ್ಳ ವಸ್ತುಗಳು ತಮ್ಮ ಸ್ವಭಾವಗುಣಗಳಲ್ಲದೇ ಬೇರೆ ರೀತಿಯ ವಿಶೇಷ ಕಾರ್ಯಗಳನ್ನು ಶರೀರದಲ್ಲಿ ವ್ಯಕ್ತಗೊಳಿಸುವ ಗುಣಾಂಶಕ್ಕೆ ‘ಪ್ರಭಾವ’ ಎನ್ನುತ್ತಾರೆ. ಉದಾ: ಚಿತ್ರ ಮೂಲವು ಕಾರರಸವುಳ್ಳದ್ದು, ವಿಪಾಕವೂ ಕಾರ, ವೀರ್ಯವೂ ಉಷ್ಣವಾದರೂ ವೀರೇಚಕ ಗುಣವನ್ನು ಹೊಂದಿಲ್ಲ. ಆದರೆ ದಂಡಿಯಲ್ಲಿ ಅವೇ ಗುಣಗಳಿದ್ದರೂ ಅದು ವಿರೇಚಕ ಗುಣವನ್ನು ಹೊಂದಿದೆ. ಹೀಗೆ ದ್ರವ್ಯಗಳು ತಮ್ಮ ಪ್ರಭಾವ ಗುಣ ವಿಶೇಷಗಳಿಂದ ಅನೇಕ ವಿಧದ ಅನ್ಯಕಾರ್ಯಗಳನ್ನುಂಟು ಮಾಡಲು ಸಮರ್ಥವಾಗುತ್ತವೆ.

ಒಂದು ದ್ರವ್ಯದಲ್ಲಿ ಅನೇಕ ರಸಗಳು ಕೂಡಿರುವುದರಿಂದ ಪ್ರಧಾನ ರಸವೇ ಮೊದಲು ವ್ಯಕ್ತವಾಗುವುದು. ಅದರಲ್ಲಿಯೇ ದ್ರಾಕ್ಷಿ, ಹಾಲು, ಕಬ್ಬಿನ ರಸಗಳು ಮಧುರವಾಗಿದ್ದರೂ ಅವುಗಳ ರುಚಿಗಳು ಭಿನ್ನವಾಗಿವೆ. ಅದರಂತೆಯೇ ನೆಲ್ಲಿಕಾಯಿ, ಹುಣಸೆ ಹಣ್ಣು, ದಾಳಿಂಬೆಗಳು, ಹುಳಿ ರಸದವುಗಳಾದರೂ ಅಸ್ವಾದನೆಯಲ್ಲಿ ಅವು ಒಂದೊಂದು ರೀತಿಯ ರುಚಿಯನ್ನು ಕೊಡುತ್ತವೆ. ದ್ರವ್ಯಗಳು ಅನೇಕ ಭೂತಗಳ ಸಂಘಾತದಿಂದ ಉತ್ಪನ್ನವಾಗುವುದರಿಂದ ಅನೇಕ ರಸಗಳಿಂದ ಕೂಡಿರುವ ಹಾಗೆ ರೋಗಗಳು ಒಂದೇ ದೋಷದಿಂದ ಉಂಟಾಗುವುದಿಲ್ಲ. ಈ ದ್ರವ್ಯಾಶ್ರಿತ ರಸಗಳಲ್ಲಿ ಅಧಿಕ ಪ್ರಮಾಣವುಳ್ಳ ರಸಕ್ಕೆ ತಕ್ಕಂತೆ ದ್ರವ್ಯವನ್ನೂ ವಿಂಗಡಿಸುತ್ತಾರಲ್ಲದೆ ಅಸ್ಪಷ್ಟವಾಗಿ, ಕೊನೆ ಕೊನೆಗೆ ತೋರುವ ರಸಕ್ಕೆ ‘ಅನುರಸ’ ಎಂದು ಕರೆಯುತ್ತಾರೆ.

ದ್ರವ್ಯಗಳು ರಸಗಳಿಗೆ ಆಶ್ರಯವಿತ್ತರುವಂತೆ ಗುರು-ಲಘ್ವಾದಿ ಗುಣಗಳೂ ದ್ರವ್ಯಗಳನ್ನೇ ಆಶ್ರಯಿಸಿರುತ್ತದೆ. ಒಂದು ದ್ರವ್ಯದಲ್ಲಿ ಮಧುರ ರಸ ಪ್ರಧಾನವಾಗಿದ್ದರೆ ಅದರೊಡನೆ ಗುರು ಗುಣವೂ ಸೇರಿಕೊಂಡಿರುತ್ತದೆ. ಆದ್ದರಿಂದ ಮಧುರ ರಸದಲ್ಲಿ ಗುರು ಗುಣವೂ ಹಾಸು ಹೊಕ್ಕಾಗಿ ಕೂಡಿಕೊಂಡಿರುತ್ತದೆ. ಆದರೆ ಮಧುರ ರಸದಲ್ಲಿ ಪಾರಿಮಾರ್ಥಿಕ ದೃಷ್ಟಿಯಿಂದ ನೋಡುವುದಾದರೆ ಗುರು ಆದಿಗುಣಗಳಿರುವುದಿಲ್ಲ.

ದ್ರವ್ಯಗಳಲ್ಲಿ ಒಟ್ಟು ೨೦ ಗುಣಗಳು ಆಶ್ರಯ ಹೊಂದಿರುತ್ತವೆ. ಗುರು, ಲಘು, ಮಂದ, ತೀಕ್ಷ್ಣ, ಹಿಮ, ಉಷ್ಣ, ಸ್ನಿಗ್ಧ, ರೂಕ್ಷ, ಶ್ಲಕ್ಷ್ಣ, ಖರ, ಸಾಂದ್ರ, ದ್ರವ, ಮೃದು, ಕಠಿಣ, ಸ್ಥಿರ – ಸರ, ಸೂಕ್ಷ್ಮ, ಸ್ಥೂಲ, ವಿಶದ, ಪಿಚ್ಚಲ, ಈ ಇಪ್ಪತ್ತು ಗುಣಗಳು ಪರಸ್ಪರ ವಿರುದ್ಧವಾಗಿವೆ. ಉದಾ: ಗುರು ಲಘು, ಹಿಮ-ಉಷ್ಣ ಹೀಗೆ.

ಈ ವರೆಗೆ ನಾವು ತಿಳಿದ ರಸ, ವೀರ್ಯ, ವಿಪಾಕ, ಪ್ರಭಾವ ಗುಣಗಳು ವಿಚಾರಗಳು ರೋಗಿ ಚಿಕತ್ಸೆಗಾಗಿ ಔಷಧಿ ಆಯ್ಕೆ ಮಾಡುವಾಗ್ಗೆ ಪ್ರಯೋಜನಕ್ಕೆ ಬರುತ್ತವೆ.

(ಆಧಾರಕಲ್ಯಾಣಕಾರಕ, ಅಧ್ಯಾಯ, ಶ್ಲೋಕ.)