. ಅಶ್ವಗಂಧ (Withania Somnifra (Linn) Dunal)

ನರ, ಮಾಂಸಖಂಡಗಳಿಗೆ ಶಕ್ತಿಯನ್ನೀಯುವು ಈ ಅಶ್ವಗಂಧವು ಭಾರತದ ಜಿನಸಿಂಗ್ ಎಂದೇ ಪ್ರಸಿದ್ಧವಾಗಿದೆ. ಇತ್ತೀಚೆಗೆ ಈ ದ್ರವ್ಯದ ಬಗ್ಗೆ ಸಾಕಷ್ಟು ಸಂಶೋಧನೆಗಳಾಗಿದ್ದು ಇದು ಬಲ್ಯಕಾರಕವಾಗಿ, ರಸಾಯನವಾಗಿ ಸೌಮ್ಯ ಮನಃಶಾಂತಿಕಾರಕವಾಗಿ, ನಿದ್ರೆಯನ್ನುಂಟು ಮಾಡುವ, ಸಂದು ವಿಕಾರಗಳನ್ನು ನಿವಾರಿಸುವ ಒಳ್ಳೆಯ ಔಷಧಿ ಎನಿಸಿದೆ.

ಇದು ಭಾರತದ ಪಶ್ಚಿಮೋತ್ತರ ಭಾಗ, ಮಹಾರಾಷ್ಟ್ರ, ಗುಜರಾತ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ ಮುಂತಾದ ಭಾಗಗಳೆಲ್ಲಲ್ಲ ವಿಶೇಷವಾಗಿ ಬೆಳೆಯುತ್ತದೆ. ಇದರಲ್ಲಿ ಮುಖ್ಯವಾಗಿ ಐದು ನಮೂನೆಗಳಿವೆ. ಇದು ಗಂಟು-ಗಂಟಾಗಿ ನಾರುಳ್ಳದ್ದಾಗಿ ಒಂದರಿಂದ ಐದು ಅಡಿಗಳವರೆಗೆ ಬೆಳೆಯುವುದು, ಇದರ ಬೇರುಗಳೇ ಔಷಧಕ್ಕಾಗಿ ಮಹತ್ವವೆನಿಸಿದೆ. ಈ ಬೇರುಗಳು ಒಳಗೆ ಬೆಳ್ಳಗೆ ಗಟ್ಟಿಯಾಗಿರುವುವು ಹಾಗೂ ಬೆರಳಿನಷ್ಟು ಗಾತ್ರದ್ದಿರುವುವು. ಭೂಮಿಯಲ್ಲಿ ೧ ರಿಂದ ೧ ೧/೨ ಅಡಿಗಳವರೆಗೆ ಇದ್ದು ಇದರಿಂದ ಕುದುರೆಯ ವಾಸನೆ ಬರುವುದರಿಂದ ಇದಕ್ಕೆ “ಅಶ್ವಗಂಧ” ಎಂದು ಹೆಸರು ಬಂದಿದೆ.

ಗುಣ : ಲಘು, ಸ್ನಿಗ್ಧ
ರಸ: ತಿಕ್ತಿ, ಕಟು, ಮಧುರ
ವಿಪಾಕ : ಮಧುರ
ವೀರ್ಯ: ಉಷ್ಣ

ಇದು ಮುಖ್ಯವಾಗಿ ಕಫ, ವಾತ ಶಾಮಕವೆನಿಸಿದೆ. ಶೋಫ, ವೇದನಾ ಶಾಮಕ, ರಕ್ತಭಾರಶಾಮಕ, ಗರ್ಭಾಶಯಶೋಥಹರ, ಮೂತ್ರ, ಬಲ್ಯ, ಬೃಂಹಣ, ರಸಾಯನವೆನಿಸಿದೆ.

ಕೆಲ ಪ್ರಯೋಗಗಳು

 • ಸಣ್ಣ ಸಂದುಗತವಾತ (Rheumotoid Arthritis)ವೃದ್ಧರಲ್ಲಿ ಕಂಡಬರುವ ಅಸ್ಥಿಗತ ಸಂದುವಾತ (Osteo Arthritis) ಗಳಲ್ಲಿ ಅಶ್ವಗಂಧವನ್ನು ನಿತ್ಯ ಮೂರು ತಿಂಗಲವರೆಗೆ ಕೊಟ್ಟರೆ ಗುಣ ಕಂಡುಬರುವುದು.
 • ಶಕ್ತಿ ವರ್ಧನೆಗಾಗಿ ನಪುಂಸಕತೆ ಹೋಗಲಾಡಿಸಲು ಅಶ್ವಗಂಧ ಚೂರ್ಣವನ್ನು ನಿತ್ಯ ಬೆಳಿಗ್ಗೆ – ರಾತ್ರಿ ಹಾಲು – ಸಕ್ಕರೆಗಳೊಡನೆ ಕೊಡಬೇಕು.
 • ಗರ್ಭಿಣ್ಯಾವಸ್ಥೆಯಲ್ಲಿ ಅಶ್ವಗಂಧವು ಒಳ್ಳೆ ಶಕ್ತಿದಾಯವೆನಿಸಿದೆ. ಹೆರಿಗೆ ಆದ ಬಳಿಕವೂ ನಿತ್ಯ ಅಶ್ವಗಂಧವನ್ನು ಕೊಡುತ್ತಿದ್ದರೆ ಎದೆ ಹಾಲು ಚೆನ್ನಾಗಿ ಬರುವುವು.
 • ಸಣ್ಣ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಗರ್ಭಾಶಯವು ಸರಿಯಾಗಿ ಬೆಳವಣಿಗೆ ಆಗದಿದ್ದಾಗ ನಿತ್ಯ ಇದರ ಚೂರ್ಣ ಇಲ್ಲವೆ ರಸಾಯವನ್ನು ೨-೩ ತಿಂಗಳವರೆಗೆ ಕೊಡಬೇಕು.
 • ಕೃಶರಾದ ಮಕ್ಕಳೀಗೆ ನಿತ್ಯ ಅಶ್ವಗಂಧ ರಸಾಯನವನ್ನು ಕೊಟ್ಟರೆ ಮೈತೂಕ ಹೆಚ್ಚುವುದು.
 • ರಕ್ತದೊತ್ತಡ, ಸೌಮ್ಯಮನೋವಿಕಾರಗಳಲ್ಲಿ ಅಶ್ವಗಂಧವು ತುಂಬ ಉಪಯುಕ್ತವೆನಿಸಿದೆ.

ವಿಶಿಷ್ಟ ಯೋಗಗಳು: ಅಶ್ವಗಂಧಾದಿ ಚೂರ್ಣ, ಅಶ್ವಗಂಧ ರಸಾಯನ ಅಶ್ವಗಂಧಾದಿ ಘೃತ, ಬಲಾಶಚಗಂಧಾದಿ ತೈಲ, ಅಶ್ವಗಂಧಾರಿಷ್ಟ, ಅಶ್ವಗಂಧ ಕ್ಯಾಪ್ಯೂಲುಗಳು.

ಪ್ರಮಾಣ: ೧ ರಿಂದ ೨ ಗ್ರಾಂ
ಕ್ಷೀರ: ೧ ರಿಂದ ೨ ಗ್ರಾಂ
ರಸಾಯನ : ೧ ರಿಂದ ೨ ಚಮಚ ನಿತ್ಯ ೨ ಸಾರೆ
ಅಶ್ವಗಂಧಾರಿಷ್ಟ :೨ ಚಮಚ ನಿತ್ಯ ೨ ಸಾರೆ
ಕ್ಯಾಪ್ಸೂಲುಗಳು: ೩೦೦ ಮಿ.ಗ್ರಾಂ. ನಿತ್ಯ ೨ ಸಾರೆ

. ಅಳಲೆಕಾಯಿ (ಹರೀತಕಿ)(Terminalia Chebula Retz)

ಅಳಲೆಕಾಯಿಯ “ತ್ರಿಫಲಾ”ದಲ್ಲಿಯ ಒಂದು ದ್ರವ್ಯವಾಗಿದೆ. ಇದು ಭಾರತದಲ್ಲಿ ಎಲ್ಲೆಡೆ ಬೆಳೆಯುವುದಾದರೂ ಹಿಮಾಚಲ ಪ್ರದೇಶದ ಕೆಳಭಾಗ, ಆಸಾಮ್, ಪಶ್ಚಿಮ ಬಂಗಾಲಗಳಲ್ಲಿ ವಿಶೇಷವಾಗಿ ಬೆಳೆಯುವುದು. ಇದರ ಗಿಡವು ೫೦ ರಿಂದ ೮೦ ಅಡಿಗಳವರೆಗೆ ಬೆಳೆಯುವುದು. ಇದರ ಹಣ್ಣುಗಳೇ ವಿಶೇಷವಾಗಿ ಔಷಧರೂಪವಾಗಿ ಉಪಯುಕ್ತವೆನಿಸಿವೆ. ಹಣ್ಣು ೧ ರಿಂದ ೨ ಚಮಚಗಳವರೆಗೆ ಉದ್ದವಾಗಿದ್ದು ದುಂಡಗಿರುವುವು. ಹಾಗೂ ಗಟ್ಟಿಯಾಗಿರುವವು. ಇವುಗಳ ಬೆನ್ನು ಭಾಗದಲ್ಲಿ ಐದು ಗೆರೆಗಳಿರುವುವು. ಇವು ಕಾಯಿ ಇದ್ದಾಗ ಹಸಿರು ವರ್ಣದವಾಗಿ ಹಾಗೂ ಪಕ್ವಾದ ಮೇಲೆ ಹಳದಿ ವರ್ಣದ್ದಾಗಿರುವವು. ಈ ಅಳಲೆಕಾಯಿಗಳಲ್ಲಿ ಏಲು ನಮೂನೆಗಳಿವೆ ಎಂದು ಭಾವಪ್ರಕಾಶರು ಹೇಳಿದ್ದಾರೆ. ಹಣ್ಣಿನಲ್ಲಿ ೨೪.೬ ರಿಂದ ೩೨.೮% ಗಳಷ್ಟು ಟೆನಿನ್ ಅಂಶವಿದೆ. ಬೀಜದಲ್ಲಿ ೩೬.೪ ಹಳದಿ ತೈಲಾಂಶವಿದೆ.

ಗುಣ : ಲಘು, ರೂಕ್ಷ
ರಸ : ಲವಣ ಹೊರತಾಗಿ ಇನ್ನುಳಿದ ಐದು ರಸಗಳು ಕಷಾಯ ಪ್ರಧಾನ
ವಿಪಾಕ : ಮಧುರ
ವೀರ್ಯ : ಉಷ್ಣ
ಪ್ರಭಾವ : ತ್ರಿದೋಷಹರ

ಅಳಲೆಕಾಯಿಯು ತ್ರಿದೋಷಹಾರಕವಾಗಿದೆ. ಮಧುರ, ತಿಕ್ತ, ಕಷಾಯ ರಸಗಳಿಂದ ಪಿತ್ತವನ್ನು, ಕಟು – ತಿಕ್ತ ಕಷಾಯವಿರುವುದರಿಂದ ಕಫವನ್ನು ಹಾಗೂ ಆಮ್ಲ-ಮಧುರವಿರುವುದರಿಂದ ವಾತವನ್ನು ಶಮನ ಮಾಡುವುದು. ಇದು ವಿಶೇಷವಾಗಿ ವಾತಶಾಮಕವೆನಿಸಿದೆ. ಮೃದು ವಿರೇಚಕವೆನಿಸಿದೆ. ಕಣ್ಣುಗಳಿಗೆ ಹಿತಕರವೆನಿಸಿದೆ.

ಬಾಲಹರೀತಕಿ ಅಥವಾ ಬಾಲಹರಡವು ಮಕ್ಕಳಿಗೆ ಅಜೀರ್ಣದಿಂದಾಗುವ ಭೇದಿ, ಹಳೆಯ ಅತಿಸಾರ, ಪ್ಲೀಹ-ಗುಲ್ಮಗಳನ್ನು, ಮೂಲವ್ಯಾಧಿಯನ್ನು ಕಡಿಮೆ ಮಾಡುವುದು. ಸ್ರೋತೋಶೋಧನ ಕಾರ್ಯಕ್ಕಾಗಿ ಹರೀತಕಿಯು ಸರ್ವ ಶ್ರೇಷ್ಠವೆನಿಸಿದೆ.

ಕಫದ ತೊಂದರೆಗೆ ಸೈಂಧವ ಲವಣದೊಂದಿಗೆ, ಪಿತ್ತ ವಿಕಾರಗಳೀಗೆ ಸಕ್ಕರೆಯೊಡನೆ, ವಾತವಿಕಾರಗಳಿಗೆ ತುಪ್ಪದೊಡನೆ ಅಳಲೆಕಾಯಿಯ ಚೂರ್ಣವನ್ನು ಕೊಡಬೇಕು. ಬೆಲ್ಲದೊಡನೆ ಚೂರ್ಣವನ್ನು ಸೇರಿಸಿ ತೆಗೆದುಕೊಂಡರೆ ಎಲ್ಲ ವಿಧಡ ದೋಷಗಳು ನಿವಾರಣೆ ಆಗುತ್ತವೆ.

ನಿತ್ಯ ಆಹಾರದೊಂದಿಗೆ ಅಳಲೆಕಾಯಿ ಪುಡಿಯನ್ನು ತೆಗೆದುಕೊಂಡರೆ ಬುದ್ಧಿ, ಇಂದ್ರಿಯ ಬಲವರ್ಧನೆ ಹಾಗೂ ಮಲ-ಮೂತ್ರಗಳ ವಿಸರ್ಜನೆ ಸರಿ ಆಗುವುದು.

ಶುಕ್ಲಪಕ್ಷದ ಮೊದಲನೆಯ ದಿನ ಒಂದು ಸಣ್ಣ ಅಳಲೆಕಾಯಿ ತಿರುಳಿನ ಪುಡಿಯನ್ನು ಹಾಲಿನಲ್ಲಿ ಸೇವಿಸುತ್ತ ಹುಣ್ಣಿಮೆಯ ದಿನಕ್ಕೆ ೧೫ರಷ್ಟನ್ನು ಸೇವಿಸಬೇಕು. ನಂತರ ೧೬ನೇ ದಿವಸದಿಂದ ನಿತ್ಯ ಒಂದೊಂದು ಕಾಯಿಯನ್ನು ಕಡಿಮೆ ಮಾಡುತ್ತ ಅಮವಾಸ್ಯ ದಿವಸ ಕೊನೆಯ ಒಂದು ಕಾಯಿಯನ್ನು ಮಾತ್ರ ಸೇವಿಸಿ ನಿಲ್ಲಿಸಬೇಕು. ಇದರಿಂದ ಒಳ್ಳೆಯ ಆರೋಗ್ಯ ಹಾಗು ದೀರ್ಘಾಯುಷ್ಯವನ್ನು ಹೊಂದಬಹುದು.

ಪ್ರಮಾಣ : ೩ ರಿಂದ ೬ ಗ್ರಾಂ

ವಿಶಿಷ್ಟ ಯೋಗಗಳು: ಅಭಯಾಮೋದಕ, ಅಭಯಾರಿಷ್ಟ, ಹರೀತಕಿ ಖಂಡ, ಅಗಸ್ತ್ಯ ಹರೀತಕಿ.

. ಕಾಡಿಗ್ಗರಗು (ಭೃಂಗರಾಜ) Eclipta Alba/husk

ಇದೊಂದು ಜನಸಾಮಾನ್ಯರಿಗೂ ಗೊತ್ತಿದ್ದ ಔಷಧಿ, ಕೂದಲುಗಳು ಬೆಳ್ಳಗಾಗುವುದನ್ನು ತಡೆಯಲು ಹಾಗೂ ಬೆಳ್ಳಗಾದವುಗಳನ್ನು ಕಪ್ಪು ಮಾಡಲು ಉಪಯೋಗಿಸುವ ಭೃಂಗರಾಜ ತೈಲ, ಭೃಂಗಾಮಲಕ ತೈಲಗಳಲ್ಲಿ ಇದಂದು ಮುಖ್ಯ ಔಷಧಿ.

ಕಾಡಿಗ್ಗರಗು ಭಾರತಾದ್ಯಂತ ಬೆಳೆಯುತ್ತದೆ. ಇದು ಚಿಕ್ಕ ಪೊದೆಯಾ ಕಾರದಲ್ಲಿ ೧೦ ರಿಂದ ೧೨ ಅಂಗುಲಗಳಷ್ಟು ಎತ್ತರವಾಗಿದ್ದು ಭೂಮಿಯ ಮೇಲೆ ಹರಡಿಕೊಂಡಿರುವುದು. ಅನೇಕ ಶಾಖೆಗಳುಳ್ಳ, ಕಪ್ಪಾದ ರೋಮಗಳಿರುವ, ಕಾಂಡವು ಗಂಟು ಗಂಟಾಗಿರುವುದು. ಎಲೆಗಳು ೧ ರಿಂದ ೪ ಅಂಗುಲ ಉದ್ದ ೧/೨ ದಿಂದ ೧ ಅಂಗುಲ ಅಗಲವಾಗಿದ್ದು, ಆಯಾತಾಕಾರವಿದ್ದು, ಅಭಿಮುಖವಾಗಿರುತ್ತವೆ. ಇದಕ್ಕೆ ಬಿಳಿ, ಹಳದಿ ಹಾಗೂ ನೀಲಿ ಹೂವುಗಳಿರುತ್ತವೆ. ಬಿಳಿ ಹೂವುಗಳುಳ್ಳ ಕಾಡಿಗ್ಗರಗಿನ ವಿವರಣೆಯನ್ನು ವಿಶೇಷವಾಗಿ ದ್ರವ್ಯಗುಣ ವಿಜ್ಞಾನದಲ್ಲಿ ಮಾಡಲಾಗಿದೆ. ಔಷಧಕ್ಕಾಗಿ ಇದರ ಪಂಚಾಂಗಗಳನ್ನು ಬೀಜಗಳನ್ನು ಉಪಯೋಗಿಸಲಾಗುತ್ತದೆ.

ಈ ಕಾಡಿಗ್ಗರಗಿನಲ್ಲಿ ರಾಸಾಯನಿಕ ರಾಳ ಹಾಗು ಇಕ್ಲೆಪ್ಟಿನ್ ಎಂಬ ಕ್ಷೀರ ವಿಶೇಷವಾಗಿರುತ್ತದೆ.

ಗುಣ : ಕಟು, ಲಘು
ರಸ : ಕಟು, ತಿಕ್ತ
ವಿಪಾಕ: ಕಟು
ವೀರ್ಯ : ಉಷ್ಣ

ದೋಷಕರ್ಮ: ರೂಕ್ಷ, ಲಘು, ಕಟು, ತಿಕ್ತ ಹಾಗೂ ಉಷ್ಣವಾಗಿರುವುದರಿಂದ ಇದು ಕಫ ಹಾಗೂ ಉಷ್ಣವಿರುವುದರಿಂದ ವಾತ ದೋಷಗಳನ್ನು ಶಮನ ಮಾಡುವುದು.

ಶರೀರದ ಹೊರಗಿನಿಂದ ಉಪಯೋಗಿಸಿದಾಗ ಬಾವು, ನೋವುಗಳನ್ನು ಕಡಿಮೆ ಮಾಡುವುದು, ವ್ರಣಶೋಧನೆ- ರೋಪಣ ಮಾಡುವುದು ಕಣ್ಣುಗಳಿಗೆ ಹಿತಕರವಾಗಿದೆ. ಕೂದಲುಗಳನ್ನು ರಕ್ಷಿಸುವುದು ಹಾಗು ಬೆಳೆಸುವುದು. ಕಾಡಿಗ್ಗರಗು ಮುಖ್ಯವಾಗಿ ಯಕೃತ್ತಿನ ಸ್ರಾವ ಮಾಡಿಸುವ ಗುಣ ಹೊಂದಿರುವುದರಿಂದ ಯಕೃತ್ತಿನ ವಿಕಾರಗಳಲ್ಲಿ ಹಾಗೂ ಕಾಮಣಿ ರೋಗದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸರಿಯಾಗಿ ಸಾಸಿವೆ ಆಗದೆ ಊಟ ಹೋಗದೆ ಅಶಕ್ತತನ ಬಂದಿರುವ ರೋಗಿಗಳಿಗೆ ವಿಶೇಷವಾಗಿ ಮಕ್ಕಳಿಗೆ ಕೆಲ ದಿಸವಗಳವರೆಗೆ ನಿತ್ಯ ಭೃಂಗರಾಜ ರಸವನ್ನು ಕೊಡುತ್ತಿದ್ದರೆ ಹಸಿವು ಪಚನಗಳು ಸುಧಾರಿಸುವುವಲ್ಲದೆ, ಇದು ರಸಾಯನವೆಂದು ಕೆಲಸ ಮಾಡುವುದರಿಂದ ಆರೋಗ್ಯವೂ ಸುಧಾರಿಸಿ ಮೈ ತೂಕವೂ ಏರುವುದು. ಭೃಂಗರಾಜಸ್ವರಸವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅದು ಮುಖ್ಯವಾಗಿ ಸೇರಿದ ಯಕೃತ್ ಪ್ರಚೋದಕ ಆಯುರ್ವೇದದ ಮಾತ್ರೆ ಇಲ್ಲವೆ ಸಿರಪುಗಳನ್ನು ತೆಗೆದುಕೊಳ್ಳಬಹುದು.

ಪ್ರಮಾಣ:

ಸ್ವರಸ ೫ ರಿಂದ ೧೦ ಮಿ.ಲಿ
ಯೋಗ : ಭೃಂಗರಾಜ ತೈಲ, ಷಡ್ ಬಿಂದು ತೈಲ, ಭೃಂಗರಾಜಾದಿ ಚೂರ್ಣ, ಭೃಂಗರಾಜ ಘೃತ.

೧೦. ಕುಟಜ (ಕೊಡಸೀಗೆ) (Holarrhena Antidysentrica Wall)

ಇದು ವಿಶೇಷವಾಗಿ ಹಿಮಾಲಯ ತಪ್ಪಲ ಪ್ರದೇಶಗಳಾದ ಹರಿದ್ವಾರ, ಡೆಹರಾಡೂನ, ಸಹಾರನಪುರಗಳ ಅಡವಿಗಳಲ್ಲಿ ಬೆಳೆಯುವುದು. ೧೫ ರಿಂದ ೨೦ ಅಡಿಗಳವರೆಗೆ ಎತ್ತರ ಬೆಳೆಯುವುದು. ಇವುಗಳಲ್ಲಿ ೨-೩ ಭೇದಗಳಿವೆ. ಕರಿ ಕುಟಜದ ಬೀಜಗಳು (ಇಂದ್ರಯವ) ಸಿಹಿಯಾಗಿವೆ, ಬೀಜಗಳು ಯಾವಾಕಾರವಾಗಿ ಐದು ಅಂಗುಲ ಉದ್ಧ, ರೇಖಾಕಾರ, ಆಯತಾಕಾರವಾಗಿದ್ದು ರೋಮಗುಚ್ಚಗಳಿಂದ ಕೂಡಿರುತ್ತವೆ. ಇವು ಕಾರವಾಗಿರುತ್ತವೆ. ಔಷಧಕ್ಕಾಗಿ ಚಕ್ಕೆ-ಬೀಜಗಳನ್ನು ಉಪಯೋಗಿಸಬೇಕು.

ಕುಟುಜದ ಚಕ್ಕೆ ಹಾಗೂ ಬೀಜಗಳು ಕ್ಷಾರೀಯವಾಗಿರುತ್ತವೆ. ಕೊನೆಸಾಯಿನ್, ಕುರ್ಚಿನ್, ಕುರ್ಚಿಸಿನ್, ಹೊಲೆರ್ಹನಾಯಿನ್ ಅಂಶಗಳು ಪ್ರಮುಖವಾಗಿರುತ್ತವೆ.

ಗುಣ: ರೂಕ್ಷ, ಲಘು
ರಸ – ಕಟು, ತಿಕ್ತ
ವಿಪಾಕ-ಕಟು
ವೀರ್ಯ- ಶೀತ

ಪ್ರಯೋಗಗಳು: ಕುಟಜವು ಮುಖ್ಯವಾಗಿ ರಕ್ತಾತಿಸಾರ, ಸಂಗ್ರಹಣಿ ಪ್ರವಾಹಿಕಾ, ಜ್ವರಾತಿಸಾರ, ಜೀರ್ಣಜ್ವರ, ಪಚನವಿಕಾರ, ಶ್ವಾಸ ಹಾಗೂ ವೃಕ್ಕ ಶೂಲಗಳಲ್ಲಿ ವಿಶೇಷವಾಗಿ ಪರಿಣಾಮಕಾರಿ ಎನಿಸಿದೆ.

 • ಎಲ್ಲ ನಮೂನೆಯ ಅತಿಸಾರ ವಿಕಾರಗಳಲ್ಲಿ ಇದರ ಪ್ರವಾಹಸತ್ವ (Liguid Extract) ವನ್ನು ಸ್ವತಂತ್ರವಾಗಿ ಉಪಯೋಗಿಸಬಹುದು. ಇಲ್ಲವೆ ಇಸಬಗೋಲ್, ಏರಂಡ, ತೈಲ, ಇಂದ್ರಿಯವಗಳನ್ನು ಸೇರಿಸಿ ಕೊಡಬಹುದು.
 • ಹೆರಿಗೆಯಾದ ಬಳಿಕ ಯೋನಿಮಾರ್ಗವು ಶಿಥಿಲಗೊಳ್ಳಬಾರದೆಂದು ಕುಟಜವನ್ನು ಕೊಡಬಹುದು. ಕುಟುಜ ಚೆಕ್ಕೆಯ ಕಷಾಯದಿಂದ ಯೋನಿ ಬಸ್ತಿಯನ್ನು ಕೊಡಬೇಕು.
 • ಹಲ್ಲು ನೋವಿನಲ್ಲಿ ಇದರ ಕಷಾಯವನ್ನು ಮುಕ್ಕಳಿಸಬೇಕು.

ಪ್ರಮಾಣ:

ತ್ವಕ್ ಚೂರ್ಣ – ೨೫೦ ರಿಂದ ೫೦೦ ಮಿ.ಗ್ರಾಂ
ಕಷಾಯ – ೨ ರಿಂದ ೮ ಚಮಚೆಗಳು

ವಿಶಿಷ್ಟ ಯೋಗ: ಕುಟಜಾರಿಷ್ಟ, ಕುಟಜಾವಲೇಹ, ಕುಟಜ ಪರ್ಪಟಿ

೧೧. ತುಳಸಿ (Ocimum Santum Linn/Holy Basil)

ಹಿಂದುಗಳು ದೇವರೆಂದು ನಿತ್ಯ ಬೆಳಿಗ್ಗೆ ಪೂಜಿಸುವ ತುಳಸಿಯು ಅನೇಕ ರೋಗಗಳ ಚಿಕಿತ್ಸೆಗೆ ಉಪಯುಕ್ತವಾಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ತುಳಸಿಯು ಭಾರತಾದ್ಯಂತ ಬೆಳೆಯುತ್ತದೆ. ಹಿಮಾಲಯದಂತಹ ಆರು ಸಾವಿರ ಅಡಿ ಎತ್ತರ ಪ್ರದೇಶಗಳಲ್ಲಿಯೂ ಇದು ಬೆಳೆಯುವುದು. ಮನೆ ಅಂಗಳ ಕುಂಡಲೆಗಳಲ್ಲಿ ಹಾಕಿ ಇದನ್ನು ಬೆಳೆಸಬಹುದು. ಹೆಚ್ಚಿನ ಶ್ರಮವಿಲ್ಲದೆ ಪ್ರತಿಮನೆಯಲ್ಲಿಯೂ ತುಳಸಿಯನ್ನು ಬೆಳೆಸುವ ಪರಿಪಾಠ ಬಹು ಹಿಂದಿನ ಕಾಲದಿಂದಲೂ ಬೆಳೆದುಬಂದಿದ್ದು. ಬಹುಶಃ ಅದು ವಾತಾವರಣವನ್ನು ಶುದ್ಧಗೊಳಿಸುವುದಕ್ಕೆಂದೇ ಇರಬೇಕು. ಇತ್ತೀಚೆಗೆ ಸಂಶೋಧನೆಗಳಿಂದ ಈ ಅಂಶ ಕೂಡ ದೃಢಪಟ್ಟಿದೆ.

ತುಳಸಿಯಲ್ಲಿ ಕಪ್ಪು ಬಿಳುಪು ಕಾಡ ತುಳಸಿಗಳೆಂಬ ಪ್ರಕಾರಗಳಿವೆ. ಇವುಗಳಲ್ಲಿ ವಿಶೇಷವಾಗಿ ವ್ಯತ್ಯಾಸ ಕಂಡಬರದಿದ್ದರೂ ಕಪ್ಪು ತುಳಸಿಯು ಹೆಚ್ಚು ಉಷ್ಣವೆಂದು ಕಂಡಬಂದಿದೆ. ಆದ್ದರಿಂದ ಕಫ-ವಾತವಿಕಾರಗಳಲ್ಲಿ ಈ ತುಳಸಿಯನ್ನು ವಿಶೇಷವಾಗಿ ಉಪಯೋಗಿಸಲಾಗುತ್ತಿದೆ.

ತುಳಸೀ ಲಘುರುಷ್ಣಾ ರೂಕ್ಷಾ ಕಫನಾಶೀನೀ |
ಕ್ರಿಮಿ ದೋಷಂ ನಿಹಂ ತ್ಯೇಷಾ ರುಚಿಕೃದ್ವ ದೀಪನಿ ||

ಅಂದರೆ ತುಳಸಿಯು ಜೀರ್ಣಕ್ಕೆ ಲಘು, ಉಷ್ಣ, ಒಣಗಿಸುವ ಗುಣವುಳ್ಳುದು, ಕಫನಾಶಕ, ದೇಃದ ಒಳ-ಹೊರಗಿನ ಕ್ರಿಮಿಗಳನ್ನು ನಾಶಮಾಡುವಂತಹುದು. ಆಹಾರದಲ್ಲಿ ರುಚಿಯನ್ನು ಹುಟ್ಟಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದೆಂದು ಧನ್ವಂತರಿ ನಿಘಂಟುವಿನಲ್ಲಿ ಹೇಳಲಾಗಿದೆ.

ತುಲಸೀ ಕಟುತಿಕ್ತಾ ಹೃದ್ಯೋಷ್ಣಾದಾಹ ಪಿತ್ತಕೃತ್ |
ದೀಪನೀ ಕುಷ್ಠಕೃಛಾಸ್ರಪಾರ್ಶ್ವರುಕ್ ಕಫವಾತಜಿತ್ ||

ಎಂದರೆ – ತುಳಸಿಯು ಕಾರ ಕಹಿರಸವುಳ್ಳದಾಗಿದೆ. ಹೃದಯ ರೋಗಗಳನ್ನು ಕಡಿಮೆ ಮಾಡುವುದು. ಉಷ್ಣಕಾರಿಯಾಗಿದ್ದು ಉರಿ-ಪಿತ್ತಗಳನ್ನುಂಟು ಮಾಡುವುದಾಗಿದೆ. ಅಗ್ನಿ ದೀಪಕವೂ, ಕುಷ್ಠ (ಚರ್ಮ ರೋಗಗಳು) ಮೂತ್ರಕೃಚ್ಛ್ರ, ರಕ್ತದೋಷ, ಪಕ್ಕೆಗಳ ನೋವು ಮತ್ತು ಕಫವಾತ ರೋಗಗಳ ನಾಶಕವೂ ಆಗಿದೆಯೆಂದು ಮದನಪಾಲ ನಿಂಘಟುವಿನಲ್ಲಿ ಹೇಳಲಾಗಿದೆ.

ಈಗ ಆಧುನಿಕ ವೈದ್ಯ ಸಂಶೋಧನೆಗಳಿಂದಲೂ ತುಳಸಿಯು ಒಂದು ಅಪೂರ್ವವಾದ ಔಷಧಿ ಎಂದು ಕಂಡುಬಂದಿದ್ದು ಕೆಮ್ಮು, ದಮ್ಮು, ರಕ್ತ ಶುದ್ಧಿ, ಧ್ವನಿವಿಕಾರ ಹಾಗೂ ಮಧುಮೇಹ, ರೋಗದಲ್ಲಿಯೂ ಉಪಯುಕ್ತವೆಂದು ಕಂಡುಬಂದಿದೆ. ಮಹಿಳೆಯರ ಸೌಂದರ್ಯ ಸಾಧನಗಳಲ್ಲಿಯೂ ತುಳಸಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮುಖದ ಕಾಂತಿಯನ್ನು ಹೆಚ್ಚಿಸಲು ತುಳಸಿ ರಸಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಉಜ್ಜಿಕೊಳ್ಳಬೇಕು.

ತುಳಸಿಯಲ್ಲಿ ಮನಸ್ಸಿನ ಒತ್ತಡವನ್ನು ನಿವಾರಿಸುವ ಗುಣವಿದೆ ಎಂದು ಕಂಡುಹಿಡಿಯಲಾಗಿದೆ.

ಎಲೆಗಳ ರಸವು ಸುಕ್ಷ್ಮಾಣು ಜೀವನಾಶಕವೆನಿಸಿದೆ. ವೈರಲ್ ಜ್ವರಗಳಲ್ಲಿ ತುಂಬ ಉಪಯುಕ್ತವೆನಿಸಿದೆ. ಇತ್ತೀಚೆಗೆ ಕಂಡುಬಂದ ತುಂಬ ಆಪತ್ಕಾರಿಯಾದ ಸಾರ್ಸ ರೋಗಕ್ಕೂ ಕರಿ ತುಳಸಿ ಪರಿಣಾಮಕಾರಿ ಎಂದು ಸಂಶೋಧನೆಗಳಿಂದ ಕಂಡುಬಂದಿದೆ.

ಕೆಲ ಪ್ರಯೋಗಗಳು: ಉಬ್ಬುಸಕ್ಕೆ ತುಳಸಿ ೨೬೦ ಗ್ರಾಂ, ಜೇಷ್ಠ ಮಧು ೧೬೦ ಗ್ರಾಂ, ಲವಂಗ ೩೦ ಗ್ರಾಂ, ಕಲ್ಲು ಸಕ್ಕರೆ ೪೦ ಗ್ರಾಂ, ನೀರು ೯೪ ಗ್ರಾಂ.

ಮೊದಲು ಮೊದಲಿನ ನಾಲ್ಕು ಪದಾರ್ಥಗಳನ್ನು ಚೂರ್ಣಿಸಿಕೊಂಡು ಆಮೇಲೆ ನೀರಿನಲ್ಲಿ ಹಾಕಿ ೧/೪ ಪ್ರಮಾಣಕ್ಕೆ ಬರುವವರೆಗೆ ಕಾಯಿಸಿಕೊಳ್ಳಬೇಕು. ಅದನ್ನು ಸೋಸಿಟ್ಟುಕೊಂಡಿ ದಿನಕ್ಕೆ ೪ ರಿಂದ ೬ ಸಾರೆ ಒಂದೊಂದು ಚಮಚದಂತೆ ತೆಗೆದುಕೊಂಡರೆ ಉಬ್ಬಸ ವಿಕಾರವು ಕಡಿಮೆ ಆಗುವುದು. ಉಬ್ಬುಸ ಬರುವ ಮುನ್ನವೆ ಬೆಳಿಗ್ಗೆ ರಾತ್ರಿ ಒಂದೊಂದು ಚಮಚ ಕುಡಿಯುವುದರಿಂದ ದಮ್ಮಿನ ನಿಯಂತ್ರಣ ಸಾಧ್ಯ.

ಮೈ ಕೆರೆತಕ್ಕೆ: ಕಜ್ಜಿ ಮುಂತಾದ ಮೈಕೆರೆತ ವಿಕಾರಗಳಿಗೆ ತುಳಸಿ ಸ್ವರಸಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಹಾಗೂ ಉಳ್ಳಾಗಡ್ಡಿ ರಸ ಸೇರಿಸಿ ಮೈಗೆ ತಿಕ್ಕಿಕೊಂಡು ಒಂದು ತಾಸಿನ ನಂತರ ಸ್ನಾನ ಮಾಡಬೇಕು.

ರಕ್ತ ಶುದ್ಧಿಗಾಗಿ: ನಿತ್ಯ ಬೆಳಿಗ್ಗೆ ೮ ಚಮಚದಷ್ಟು ಬಿಳಿತುಳಸಿ ರಸಕ್ಕೆ ಸಮಪ್ರಮಾಣ ಮಜ್ಜಿಗೆ ಸೇರಿಸಿ ೧೫ ದಿವಸಗಳವರೆಗೆ ಕುಡಿದರೆ ಚರ್ಮ ವಿಕಾರಗಳು ಗುಣವಾಗುವುವು.

ಚಳಿಜ್ವರಕ್ಕೆ :

ತುಳಸಿ ರಸ ೮ ಚಮಚ
ಅಜವಾನಪುಡಿ ೧/೨ ಚಮಚ
ಜೇಷ್ಠ ಮಧು ೧/೨ ಚಮಚ
ನೀರು ೨೦೦ ಮಿ.ಲಿ

೧೫ ನಿಮಿಷಗಳವರೆಗೆ ಕುದಿಸಿಕೊಂಡು ಆರಿದ ನಂತರ ಸೋಸಿಕೊಂಡು ನಿತ್ಯ ನಾಲ್ಕು ಸಾರೆ ನಾಲ್ಕು ಚಮಚಗಳಂತೆ ಕೊಡಬೇಕು. ಮಲೇರಿಯಾ ಜ್ವರದ ಉಪದ್ರವಗಳನ್ನು ಕೂಡು ಇದು ಕಡಿಮೆ ಮಾಡುವುದು.

ವಾಂತಿಗೆ: ತುಳಸಿ ರಸದಲ್ಲಿ ೨ ಗ್ರಾಂ ಏಲಕ್ಕಿ ಪುಡಿಯನ್ನು ಹಾಕಿ ತೆಗೆದುಕೊಂಡರೆ ವಾಂತಿ ನಿಲ್ಲುವುದು.

ಮಕ್ಕಳಿಗೆ: ನಿತ್ಯ ಅರ್ಧ ಚಮಚದಷ್ಟು ತುಳಸಿ ರಸವನ್ನು ಕಲ್ಲುಸಕ್ಕರೆಯೊಡನೆ ಕುದಿಸಿದರೆ ನೆಗಡಿ, ಕಫ, ಗಂಡಲು ನೋವು, ಕೆಮ್ಮಿನ ವಿಕಾರಗಳು ದೂರವಾಗುವುವು. ಪಚನಶಕ್ತಿಯೂ ಸುಧಾರಿಸುವುದಲ್ಲದೆ ಕ್ರಿಮಿವಿಕಾರಗಳಾಗುವುದಿಲ್ಲ.

ತುಳಸಿ ರಸಕ್ಕೆ ಶುಂಠಿಚೂರ್ಣವನ್ನು ಸೇರಿಸಿಕೊಟ್ಟರೆ ಮಕ್ಕಳ ಜೀರ್ಣ ವಿಕಾರಗಳು ದೂರವಾಗುವುವು.

ಮಕ್ಕಳಿಗೆ ಬರುವ ಬಾಲಗ್ರಹ ವಿಕಾರಕ್ಕೆ ಬಜೆಯನ್ನು ತುಳಸಿ ರಸದಲ್ಲಿ ತೇಯ್ದು ಕುಡಿಸಬೇಕು.

ಬಾಯಿ ದುರ್ಗಂಧಕ್ಕೆ: ತುಳಸಿ ಎಲೆಗಳನ್ನು ನಿತ್ಯ ಬೆಳಿಗ್ಗೆ ತಿನ್ನುತ್ತಿದ್ದರೆ ಬಾಯಿ ದುರ್ಗಂಧ ದೂರವಾಗುವುದಲ್ಲದೆ ಬಾಯಿಯಲ್ಲಿಯ ವ್ರಣ, ಗಂಟಲು ನೋವುಗಳು ದೂರವಾಗುತ್ತವೆ.

ತುಳಸೀ ಚಹಾ: ಚಹದಂತೆಯೇ ನೀರನ್ನು ಕಾಸಿ ಅದರಲ್ಲಿ ತುಳಸೀ ಎಲೆ, ಹಸಿಶುಂಠಿ, ಕರಿಮೆಣಸು ಹಾಗೂ ಏಲಕ್ಕಿಗಳನ್ನು ಅವಶ್ಯಕ ಪ್ರಮಾಣದಲ್ಲಿ ಸೇರಿಸಿ ಬೆಲ್ಲ ಸಕ್ಕರೆ ಹಾಕಿ ಕುದಿಸಿ ಸೋಸಿಕೊಂಡು ಹಾಲು ಹಾಕಿ ಕುಡಿಯಬೇಕು.

ಸೊಳ್ಳೆಗಳ ನಾಶಕ್ಕೆ : ಮನೆ ಅಂಗಳದಲ್ಲಿ ತುಳಸಿ ಗಿಡ ಇದ್ದರೆ ಅದರ ವಾಸನೆಗೆ ಸೊಳ್ಳೆಗಳು ದೂರವಾಗುವುವು. ತುಳಸಿ ಎಲೆಗಳನ್ನು ಒಣಗಿಸಿ ರಾತ್ರಿ ವೇಳೆ ಹೊಗೆ ಹಾಕಿದರೆ ಸೊಳ್ಳೆಗಳು ಓಡಿ ಹೋಗುವುವು.

ಪ್ರಮಾಣ :

ಚೂರ್ಣ ೧ ರಿಂದ ೩ ಗ್ರಾಂ
ಸ್ವರಸ ೫ ರಿಂದ ೧೦ ಮಿ.ಲಿ

೧೨. ತಾರೀಕಾಯಿ (ವಿಭೀತ) (Terminalia Bellirica Roxb)

ತಾರೀಕಾಯಿಯು ಆಯುರ್ವೇದದ ಪ್ರಸಿದ್ಧ ತ್ರಿಫಲಾಗಳಲ್ಲಿ ಒಂದಾಗಿದೆ. ಇದು ಜ್ವರ ಹಾಗೂ ಶ್ವಾಸಕಾಂಗಗಳ ಮೇಲೆ ಕಾರ್ಯ ಮಾಡುವ ಪ್ರಮುಖ ದ್ರವ್ಯವಾಗಿದೆ. ತಾರೀಕಾಯಿ ಮರಗಳು ಭಾರತಾದ್ಯಂತ ಬೆಳೆಯುವುವಾದರೂ ಪರ್ವತ ಪ್ರದೇಶಗಳಲ್ಲಿ ವಿಶೇಷವಾಗಿ ಬೆಳೆಯುವುವು. ಈ ಗಿಡಗಳು ೬೦ ರಿಂದ ೮೦ ಅಡಿಗಳಷ್ಟು ಎತ್ತವಾಗಿ ಸಬಳವಾಗಿ ಬೆಳೆಯುವುವು ಹಾಗೂ ಗಟ್ಟಿಯಾಗಿರುವುವು. ಇವುಗಳಲ್ಲಿ ವಸಂತಕಾಲದಲ್ಲಿ ಬಿಳಿ-ಹಳದಿ ಹೂವುಗಳಾಗಿ ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ೧/೨ ರಿಂದ ೩/೪ ಅಂಗುಲಕ ವ್ಯಾಸವಿರುವ, ದುಂಡಗಿನ, ಧೂಳ ರ್ವಣದ. ಹಗುರವಾದ, ಐದು ಕೋನಗಳಿಂದ ಕೂಡಿರುವ ಹಣ್ಣುಗಳಾಗುವುವು. ಇದರ ಒಳಗೊಂದು ಬೀಜವಿರುವುದು.

ತಾರೀಕಾಯಿನಲ್ಲಿ ಮುಖ್ಯವಾಗಿ ಟೈನಿನ್ ಅಂಶವು ೨೧.೪% ಇರುವುದು ಬೀಜಗಳಲ್ಲಿ ೭೮.೮೭% ಹಳದಿ ವರ್ಣದ ಹೊಳೆಯುವ ತೈಲಾಂಶವಿರುವುದು.

ಗುಣ: ರೂಕ್ಷ, ಲಘು
ರಸ: ಕಷಾಯ
ವಿಷಾಕ: ಮಧುರ
ವಿರ್ಯ: ಉಷ್ಣ

ದೋಷಕರ್ಮ: ತಾರೀಕಾಯಿಯು ಒಣ, ಲಘು ಕಷಾಯುವುಳ್ಳದ್ದಾಗಿರುವುದರಿಂದ ಕಫವನ್ನು, ಕಷಾಯ-ಮಧುರವುಳ್ಳದ್ದಾಗಿರುವುದರಿಂದ ಪಿತ್ತವನ್ನು ಹಾಗೂ ಉಷ್ಣವಾಗಿರುವುದರಿಂದ ವಾತವನ್ನು ಶಮನ ಮಾಡುತ್ತದೆ. ಹೀಗೆ ಇದು ತ್ರಿದೋಷ ಹರವಾದರೂ ವಿಶೇಷವಾಗಿ ಕಫದ ಮೇಲೆ ಕಾರ್ಯ ಮಾಡುತ್ತದೆ.

ಪ್ರಯೋಗಗಳು: ತಾರೀಕಾಯಿ + ಜೇಷ್ಠಮಧು + ಕಲ್ಲುಸಕ್ಕರೆಗಳ ಕಷಾಯವನ್ನು ತೆಗೆದುಕೊಂಡರೆ ಗಂಟಲು ನೋವು ಕಡಿಮೆ ಆಗುವುದು.

 • ಕೆಮ್ಮು ವಿಶೇಷವಾದಾಗ ತಾರೀಕಾಯಿಯ ತುಣುಕು ಹಾಗು ಕಲ್ಲು ಸಕ್ಕರೆಗಳನ್ನು ಬಾಯಿಯಲ್ಲಿ ಹಾಕಿಕೊಂಡು ರಸ ನುಂಗುತ್ತಿದ್ದರೆ ಕಫವು ಕರಗುವುದು ಹಾಗೂ ಕೆಮ್ಮು ಕಡಿಮೆಯಾಗುವುದು.
 • ಬಾಯಿ-ನೋವುಗಳಿದ್ದ ಭಾಗಕ್ಕೆ ತಾರೀಕಾಯಿಯನ್ನು ತೇಯ್ದು ರಸ ಇಲ್ಲವೆ ತೈಲ ಹಚ್ಚುವುದರಿಂದ ಗುಣಕಂಡುಬರುವುದು.
 • ಚರ್ಮ ರೋಗಗಳಿಗೆ ತೈಲವನ್ನು ಹಚ್ಚಬಹುದು ಹಾಗು ಈ ತೈಲವು ಬಿಳುಪು, ತಲೆಬೋಳುಗಳಿಗೂ ಉಪಯುಕ್ತವೆನಿಸಿದೆ.
 • ಅಗ್ನಿಮಾಂದ್ಯ, ಹೊಟ್ಟಯುಬ್ಬರ, ನೀರಡಿಕೆ, ವಾಂತಿ,; ಅರ್ಶಸ್ಸು ಹಾಗು ಕ್ರಿಮಿವಿಕಾರಗಳಲ್ಲಿ ಪ್ರಯೋಜನಕಾರಿಯಾಗಿದೆ.
 • ರಕ್ತಸ್ತಂಭನ ಗುಣವಿರುವುದರಿಂದ ರಕ್ತಸ್ರವಗಳಲ್ಲಿ ಉಪಯುಕ್ತವೆನಿಸಿದೆ.
 • ನೇತ್ರ ರೋಗಗಳಲ್ಲಿ ಹೊಟ್ಟೆಗೆ ತೆಗೆದುಕೊಳ್ಳಲು ಹಾಗು ತ್ರಿಫಲಾ ಕಷಾಯದಿಂದ ಕಣ್ಣುಗಳನ್ನು ತೊಳೆಯಲು ಬರುವುದು.

ಎಚ್ಚರಿಕೆ: ಇದು ಮದಕಾರಿಯಾಗಿರುವುದರಿಂದ ಹೆಚ್ಚಿಗೆ ಸೇವಿಸಬಾರದು.

ಪ್ರಮಾಣ: ಚೂರ್ಣ ೩ ರಿಂದ ೬ ಗ್ರಾಂ

ಯೋಗಗಳು: ವಿಭೀತಕ ತೈಲ, ತ್ರಿಫಲಾ ಚೂರ್ಣ, ತಾಲೀಸಾದಿ ಚೂರ್ಣ, ಲವಂಗಾದಿ ವಟಿ.

೧೩. ದಾಳಿಂಬ ಹಣ್ಣು (Punica Garnatum Linn)

ದಾಳಿಂಬರ ಹಣ್ಣು ಭಾರತದಾದ್ಯಂತ ಬೆಳೆಯುತ್ತದೆ. ಜಮ್ಮು ಭಾಗದಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಅಫಘಾನಿಸ್ಥಾನ, ಬಲುಚಿಸ್ಥಾನ ಹಾಗು ಇರಾಣದಲ್ಲಿ ಹೆಚ್ಚಾಗಿ ಬೆಳೆಯುವುದು. ತಮಿಳುನಾಡಿನ ಕೊಡೈಕೆನಾಲ್‌ಪ್ರದೇಶದಲ್ಲಿ ಬೆಳೆಯುವ ದಾಳಿಂಬರ ಹಣ್ಣುಗಳು ತುಂಬ ದೊಡ್ಡವು ಹಾಗು ಸಿಹಿಯಾಗಿರುತ್ತವೆ. ರಸಗಳಿಗನುಸಾರ ಇವುಗಳಲ್ಲಿ ಮೂರು ಭೇದಗಳನ್ನು ಮಾಡುತ್ತಾರೆ. ಸಿಹಿ, ಸಿಹಿಹುಳಿ ಹಾಗೂ ಹುಳಿಗಳೆಂದು. ಇವುಗಳಲ್ಲಿ ಅನೇಕ ಜಾತಿ ಭೇದಗಳಿವೆ. ಈ ದಾಳಿಂಬರದಲ್ಲಿ ಒಳ್ಳೆ ಪೌಷ್ಠಿಕಾಂಶಗಳಿವೆ. ತುಂಬ ಪುರಾತನ ಕಾಲದಿಂದಲೂ ಈ ದಾಳಿಂಬರವನ್ನು ಔಷಧಕ್ಕಾಗಿ ಉಪಯೋಗಿಸುತ್ತ ಬರಲಾಗಿದೆ.

ಗುಣ: ಲಘು, ಸ್ನಿಗ್ಧ
ರಸ: ಮಧುರ, ಕಷಾಯ, ಆಮ್ಲ
ವಿಷಾಕ: ಮಧುರ (ಸಿಹಿ ಜಾತಿಯದು), ಹುಳಿ(ಹುಳಿ ಜಾತಿಯದು)
ವೀರ್ಯ: ಅನುಷ್ಣ

ದೋಷ ಕರ್ಮ: ಸಿಹಿಯಾದ ದಾಳಿಂಬರವು ತ್ರಿದೋಷಗಳನ್ನು ಸರಿಪಡಿಸುವುದು. ಇದು ಸಿಹಿ ಹಾಗು ಹುಳಿಗಳಿರುವುದರಿಂದ ಪಿತ್ತವನ್ನು ಹಾಗು ಉಷ್ಣ ವೀರ್ಯವಿರುವುದರಿಂದ ಪಿತ್ತದೋಷವನ್ನು ಕಡಿಮೆ ಮಾಡುವುದು. ಹುಳಿಹಣ್ಣು ಕಫವಾತಗಳನ್ನು ಕಡಿಮೆ ಮಾಡುವುದು ಹಾಗೂ ಪಿತ್ತಕಾರಿಯಾಗಿದೆ.

ಪ್ರಯೋಗಗಳು: ದಾಳಿಂಬವು ಕರುಳಿನ ಶಿಥಿಲತೆಯಲ್ಲಿ, ಕರುಳಿನಿಂದ ರಕ್ತವು ಸ್ರವಿಸುವಾಗ ಅತಿಸಾರ, ಸಂಗ್ರಹಣಿ, ಆಮಾಂಶ ವಿಕಾರಗಳಲ್ಲಿ ವಿಶೇಷ ಗುಣಕಾರಿ ಎನಿಸಿದೆ.

 • ದಾಳಿಂಬ ಚೆಕ್ಕೆಯ ಕಷಾಯ ತಯಾರಿಸಿ ಗಾಯಗಳನ್ನು ತೊಳೆಯಲು ಉಪಯೋಗಿಸಬಹುದು. ಹಾಗು ಬಾಯಿನೋವುಗಳಲ್ಲಿ ಮುಕ್ಕಳಿಸಲೂ ಒಳ್ಳೆಯದು.
 • ಅರುಚಿ, ಅಗ್ನಿಮಾಂದ್ಯ, ನೀರಡಿಕೆ, ಆಮ್ಲಪಿತ್ತ, ಪಿತ್ತವಿಕಾರಗಳಲ್ಲಿ ಉಪಯುಕ್ತವೆನಿಸಿದೆ.
 • ಚಿಕ್ಕಮಕ್ಕಳ ಅತಿಸಾರಕ್ಕೆ ಇದರ ಚೆಕ್ಕೆಯನ್ನು ಆಡಿನ ಹಾಲಿನಲ್ಲಿ ತೇಯ್ದು ಹಾಕಲಾಗುತ್ತದೆ.
 • ಚಿಕ್ಕಮಕ್ಕಳ ಕೆಮ್ಮಿಗೆ ದಾಳಿಂಬ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕೊಡಬೇಕು.
 • ಕ್ರಿಮಿದೋಷದಲ್ಲಿ ೧೦ ರಿಂದ ೨೦ ಗ್ರಾಂ. ಚೆಕ್ಕೆಯ ಕಷಾಯವನ್ನು ಬರಿ ಹೊಟ್ಟೆಯಲ್ಲಿ ಕೊಟ್ಟು ರಾತ್ರಿ ಮಲಗುವಾಗ್ಗೆ ವಿರೇಚನ ಕೊಟ್ಟರೆ ಜಂತುಗಳು ಬೀಳುವುವು.
 • ಸಾಮಾನ್ಯ ಬಳಲಿಕೆ, ನಃಶಕ್ತಿ ಗರ್ಭಿಣಿ ವಾಂತಿ, ರಕ್ತ ಹೀನತೆಗಳಲ್ಲಿ ದಾಳಿಂಬರ ರಸವನ್ನು ನಿತ್ಯ ಕುಡಿಯಬೇಕು.

ಪ್ರಮಾಣ:

ಹಣ್ಣಿನ ರಸ ೨೦ ರಿಂದ ೫೦ ಮಿ.ಲಿ
ತೊಗಟೆ ಕಷಾಯ ೪೦ ರಿಂದ ೮೦ ಮಿ.ಲಿ

ಯೋಗಗಳು: ದಾಡಿಮಾಷ್ಟಕ, ದಾಡಿಮಾದಿ ಚೂರ್ಣ, ದಾಡಿಮದ್ಯಾಘೃತ, ದಾಡಿಮಾದಿ ತೈಲ.