೨೧. ನೆಗ್ಗಿಲ ಮುಳ್ಳು (ಗೋಕ್ಷುರ) (Tribulus Terrestris Linn)

ನೆಗ್ಗಿಲಮುಳ್ಳು ಚುಚ್ಚಿದಾಗ ನೋವಾಗುವುದಾದರೂ ಇದೊಂದು ಒಳ್ಳೆಯ ಮೂತ್ರಲ ಔಷಧವೆನಿಸಿದೆ. ಶರೀರದಲ್ಲಿಯ ಅನವಶ್ಯಕ ಬಾವನ್ನಿಳಿಸಲು ಈ ನೆಗ್ಗಿಲ ಮುಳ್ಳನ್ನು ಸಹಸ್ರಾರು ವರ್ಷಗಳಿಂದ ಉಪಯೋಗಿಸುತ್ತ ಬರಲಾಗಿದೆ. ಭೂಮಿಯ ಮೇಲೆ ಹರಡಿಕೊಳ್ಳುವ ಸ್ವಭಾವದ ಈ ಸಸ್ಯದ ಹಣ್ಣುಗಳಿಗೆ ತೀಕ್ಷ್ಣವಾದ ಮುಳ್ಳುಗಳಿವೆ. ಭಾರತಾದ್ಯಂತ ಈ ಸಸ್ಯವು ಬೆಳೆಯುವುದು. ನೆಗ್ಗಿಲ ದಶಮೂಲಗಳಲ್ಲಿ ಒಂದಾಗಿದೆ.

ಗುಣ : ಗುರು, ಸ್ನಿಗ್ಧ
ರಸ: ಮಧುರ
ವಿಪಾಕ : ಮಧುರ
ವೀರ್ಯ: ಶೀತ

ದೋಷಕರ್ಮ: ನೆಗ್ಗಿಲವು ವಾತ-ಪಿತ್ತ ಶಾಮಕವೆನಿಸಿದೆ.

ಮೂತ್ರಕೋಶ, ಮೂತ್ರನಾಳಗಳು, ಮೂತ್ರಪಿಂಡಗಳಲ್ಲಿ ಹರಳುಗಳಾದಾಗ ನೆಗ್ಗಿಲ ಮುಳ್ಳಿನ ಕಷಾಯವನ್ನು ನಿತ್ಯ ಎರಡು ಸಾರೆಯಂತೆ ೨ ರಿಂದ ೩ ತಿಂಗಳುವರೆಗೆ ಕೊಟ್ಟರೆ ಹರಳುಗಳು ಒಡೆದು ಮೂತ್ರದಲ್ಲಿ ಹೊರಬರುವುವು. ಗೋಕ್ಷುರಾದಿ ಗುಗ್ಗುಳ ಒಂದು ಒಳ್ಳ ಮೂತ್ರಲೌಷಧಿ ಎನಿಸಿದೆ. ಆಧುನಿಕ ಮೂತ್ರಲೌಷಧಿಗಳನ್ನು ಕೊಟ್ಟಾಗ ರೋಗಿಯಲ್ಲಿ ಪೋಟ್ಯಾಶಿಯಂ ಕೊರತೆ ಕಂಡು ಬಂದು ದೌರ್ಬಲ್ಯವಾಗುವುದು. ಕ್ರಮೇಣ ಮೂತ್ರಾಂಗಗಳಲ್ಲಿ ಮೂತ್ರ ಉತ್ಪಾದಿಸುವ ಸಾಮರ್ಥ್ಯ ಕಡಿಮೆ ಆಗುವುದು. ಆದರೆ ನೆಗ್ಗಿಲದಿಂದ ಈ ರೀತಿ ದೌರ್ಬಲ್ಯಬಾರದೆ ಮೂತ್ರಾಂಗಗಳಿಗೆ ಶಕ್ತಿ ದೊರಕುವುದು.

 • ಮುಷ್ಠಿ ಮೈಥುನ (masturbation)ದಿಂದ ಲೈಂಗಿಕ ದೌರ್ಬಲ್ಯ ಕಂಡುಬಂದಾಗ ಆನೆನೆಗ್ಗಿಲ ಮುಳ್ಳು+ಎಳ್ಳುಗಳನ್ನು ಸಮಭಾಗ ತೆಗೆದುಕೊಂಡು ಕಷಾಯ ಮಾಡಿ ಹಾಲಿನೊಡನೆ ನಿತ್ಯ ಕೊಡಬೇಕು.
 • ಚಿಕ್ಕ ಮಕ್ಕಳ ಮೂತ್ರದಲ್ಲಿ ಬಿಳಿಪದಾರ್ಥ (Phosphate) ಹೋಗುತ್ತಿದ್ದರೆ ನೆಗ್ಗಿಮುಳ್ಳಿನ ಅಷ್ಠಮಾಂಶ ಕಷಾಯದಲ್ಲಿ ಕಲ್ಲುಸಕ್ಕರೆ ಹಾಕಿ ನಿತ್ಯ ಕುಡಿಸಬೇಕು.

ಸೂಚನೆ: ಔಷಧಕ್ಕಾಗಿ ಸಣ್ಣ ನೆಗ್ಗಿಲ ಮುಳ್ಳುಗಳನ್ನೇ ಉಪಯೋಗಿಸಬೇಕು. ಆನೆ ನೆಗ್ಗಿಲ ಅಷ್ಟೊಂದು ಉಪಯುಕ್ತವೆನಿಸದು.

ಪ್ರಮಾಣ: ಮುಳ್ಳಿನ ಚೂರ್ಣ ೩ ರಿಂದ ೬ ಗ್ರಾಂ

ಕಷಾಯ: ೫೦ ರಿಂದ ೧೦೦ ಮಿ.ಲಿ

ಯೋಗಗಳು: ಗೋಕ್ಷುರಾದಿ ಚೂರ್ಣ, ಗೋಕ್ಷುರಾದಿ, ಗುಗ್ಗುಳ, ದಶಮೂಲಾರಿಷ್ಟ.

೨೨. ಬಸಳೆಸೊಪ್ಪು

ಇದೊಂದು ಬಳ್ಳಿ ಸ್ವರೂಪದಲ್ಲಿ ಬೆಳೆಯುವಂಥದ್ದು, ಕೆಂಪು ಹಾಗೂ ಬಿಳಿ ಎಂಬ ಎರಡು ವಿಧಗಳಲ್ಲಿ ಬಿಳಿಯದೆ ಹೆಚ್ಚು ಜನಪ್ರಿಯ ಮತ್ತು ಉಪಯುಕ್ತವೆನಿಸಿದೆ. ತಂಪಾದ ಪ್ರದೇಶಗಳಲ್ಲಿ ಬಲಿತ ಕಾಂಡವನ್ನು ನೆಡುವುದರಿಂದ ಬೇಗನೆ ಹುಟ್ಟಿಕೊಂಡು ೩-೪ ತಿಂಗಳಗಳಲ್ಲಿ ಬೆಳೆಯುವುದು. ಅಚ್ಚ ಹಸಿರು ಎಲೆ ಹಾಗೂ ಬಿಳಿ ಕಾಂಡಗಳನ್ನು ಆಹಾರದಲ್ಲಿ ಬಳಸಬಹುದು.

ಬಸಳೆಯು ರುಚಿಯಲ್ಲಿ ಸ್ವಲ್ಪ ಸಿಹಿಯಾಗಿದೆ. ಅಂಟು ಸ್ವಭಾವವನ್ನು ಹೊಂದಿದೆ. ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗು ಜೀವಸತ್ವ, ಎ.ಬಿ೧.ಬಿ೨ಗಳು, ಪ್ರೋಟಿನ್, ಪೋಲಿಕ್ ಆಮ್ಲಗಳಿಗೆ. ಮಕ್ಕಳು ಹಾಗೂ ಗರ್ಭಿಣಿಯರಿಗೆ ಹೆಚ್ಚು ಉಪಯುಕ್ತ. ಇಂತಹ ಅತ್ಯುತ್ತಮ ಹಸಿರು ತರಕಾರಿಯು ಶರೀರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುವ ವಾತವನ್ನು ಸಂಗ್ರಹಿಸುವ ಮಲಬದ್ಧತೆಯನ್ನು ನಿವಾರಿಸುವ, ಎದೆ ಉರಿತ ಹಾಗೂ ಬಾಯಿ ಹುಣ್ಣುಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಹೆಸರು ಇಲ್ಲವೆ ತೊಗರೆಬೇಳೆ ಹಾಕಿ ಉಸುಲಿ ಇಲ್ಲವೆ ಸಾರನ್ನು ತಯಾರಿಸುವಾಗ ಈ ಎಲೆಗಳನ್ನು ಹಾಕಬೇಕು ವಾರಕ್ಕೆ ೨-೩ ಸಾರೆಯಾದರೂ ಈ ಅಡಿಗೆ ಮಾಡಬೇಕು. ಇದರ ಎಲೆಳಗಳನ್ನು ಹೆಚ್ಚಿ ದೋಸೆಗಳನ್ನು ಕೂಡ ಮಾಡಬಹುದು.

ಉಪಯೋಗಗಳು

ಮಕ್ಕಳಿಗೆ ಕಂಡುಬರುವ ಪೌಷ್ಟಿಕಾಂಶದ ಕೊರತೆ ಅದರಲ್ಲೂ ಫೋಲಿಕ್ ಆಮ್ಲದ ಕೊರತೆಯಿಂದಾಗಿ ಕಂಡುಬರುವ ಅಶಕ್ತತೆ, ಮೇಲಿಂದ ಮೇಲಾಗುವ – ಎಲೆಯ ರಸವನ್ನು ಎರಡು ಚಮಚದಷ್ಟು ದಿನಕ್ಕೆ ೨-೩ ಸಾರೆ ಕೊಡಬೇಕು. ಇದರಿಂದ ಹೊಟ್ಟೆ ತೊಂದರೆಗಳು ಕಡಿಮೆ ಆಗಿ ರಕ್ತದಲ್ಲಿ ಹೀಮೋಗ್ಲೋಬಿನ್ ಹೆಚ್ಚುತ್ತದೆ.

ಬಾಯಿ ಹುಣ್ಣಿಗೆ ಒಂದೆರಡು ಬಸಳೆ ಎಲೆಗಳನ್ನು ಉಪ್ಪಿನ ಹರಳೊಂದಿಗೆ ಸೇರಿಸಿ ಅಗಿದು ತಿನ್ನಬೇಕು.

೨೩. ಬೇವು (ನಿಂಬ)(Azadirachta India/Margo-Neem)

ಬೇವಿನ ಗಿಡಗಳನ್ನು ನಾವು ಎಲ್ಲೆಂದರಲ್ಲೇ ಕಾಣುತ್ತೇವೆ. ಬೇಸಿಗೆಯ ಬಿಸಿಲಿನ ಬೇಗೆಯಿಂದ ಬೆಂದು ಈ ಗಿಡದ ನೆರಳನ್ನು ಆಶ್ರಯಿಸಿದರೆ ತುಂಬ ಸಮಾಧಾನವೆನಿಸುವುದು. ಬೇವಿನ ಗಿಡಗಳಿರುವ ರಸ್ತೆಗಳಲ್ಲಿ ಓಡಾಡಿದರು ತುಂಬಾ ಆರೋಗ್ಯಕರವೆಂಬ ಭಾವನೆ ಅನೇಕರಲ್ಲಿದೆ. ಬೇವು ನಾಲಿಗೆಗೆ ಕಹಿ ಎನಿಸಿದರೂ ಹೊಟ್ಟೆಗೆ ಸಿಹಿಯಾಗಿದೆ ಎನ್ನಬಹುದು. ಇದನ್ನು ಪಡೆಯಲು ಬೆಲೆಯನ್ನು ಕೊಡಬೇಕಾಗಿಲ್ಲ. ಪ್ರತಿವರ್ಷ ಯುಗಾದಿ ಹಬ್ಬದಲ್ಲಿ ಅದೇ ಆಗ ವಸಂತಕಾಲ ಪ್ರಾರಂಭವಾಗಿ ಹೊಸ ಹೂ-ಚಿಗುರುಗಳಾದಾಗ ಅದನ್ನು ಬೆಲ್ಲದೊಡನೆ ಸೇರಿಸಿ ತಿನ್ನುವ ಬೇವು-ಬೆಲ್ಲ ಪದ್ಧತಿಯು ಬಹು ಹಿಂದಿನ ಕಾಲದಿಂದಲೂ ಬೆಳೆದುಬಂದಿದೆ.

ಭಾರತದಲ್ಲಿ ಬೇವಿನ ಗಿಡಗಳನ್ನು ಸರ್ವತ್ರ ಕಾಣುತ್ತಿದ್ದರೂ ಇವು ವಿಶೇಷವಾಗಿ ಬೆಳೆಯುತ್ತಿರುವುದು ಪಶ್ಚಿಮೋತ್ತರ ಭಾಗಗಳಲ್ಲಿ.

ಬೇವಿನ ಚಕ್ಕೆಯಲ್ಲಿ ನಿಂಬಿನ್, ನಿಂಬಿನಿನ್, ನಿಂಬಿಡಿನ್, ನಿಂಬೊಸ್ಟ್ರಾಲ, ತೈಲಾಂಶ, ಟೆನಿನ್ ಹಾಗು ಮಾರ್ಗೊಸಿನ್ ಎಂಬ ಹೆಸರಿನ ತಿಕ್ತ ಅಂಶವಿದೆ. ಬೀಜಗಳಲ್ಲಿ ಗಂಧಕ, ಕ್ಷಾರ, ರಾಳ, ಗ್ಲಾಯಿಕೋಸಾಯಿಡದ ಹಾಗೂ ವಸಾಮ್ಲಗಳಿಗೆ ಹಾಗೂ ಇವುಗಳಲ್ಲಿ ೪೫% ತೈಲಾಂಶವಿರುತ್ತದೆ.

ಗುಣ : ಲಘು
ರಸ: ತಿಕ್ತ, ಕಷಾಯ
ವಿಪಾಕ : ಕಟು
ವೀರ್ಯ: ಶೀತ

ಬೇವು ಕಹಿ ಇರುವುದರಿಂದ ಕಫ ಮತ್ತು ಪಿತ್ತ ವಿಕಾರಗಳನ್ನು ನಿವಾರಿಸುವುದು. ಬೇವಿನ ಎಲೆಗಳು ಚಕ್ಕೆ ಕ್ರಿಮಿಗಳನ್ನು ನಾಶಪಡಿಸುವ ಗುಣವನ್ನು ಹೊಂದಿವೆ. ಗಾಯವನ್ನು ಮಾಯಿಸುವ, ಕೀವನ್ನು ನಿವಾರಿಸುವ ದಾಹವನ್ನು ಕಡಿಮೆ ಮಾಡುವ ಮೈಕೆರೆತವನ್ನು ಕಡಿಮೆ ಮಾಡುವ ಗುಣ ಹೊಂದಿವೆ. ತೈಲವು ವ್ರಣರೋಪಣ, ವಿಕಾರಗಳನ್ನು ಕಡಿಮೆ ಮಾಡುವ ಹಾಗೂ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ.

 • ಸೋರಿಯಾಸಿಸ್ ಚರ್ಮರೋಗಕ್ಕೆ ಬೇವಿನ ಎಣ್ಣೆ ತುಂಬ ಉಪಯುಕ್ತವಾಗಿರುವುದು ಕಂಡು ಬಂದಿದೆ. ಮೈಗೆಲ್ಲ ಎಣ್ಣೆಯನ್ನು ಚೆನ್ನಾಗಿ ಹಚ್ಚಿಕೊಂಡು ೧೫-೨೦ ನಿಮಿಷಗಳವರೆಗೆ ಎಲೆ ಬಿಸಿಲಿನಲ್ಲಿ ಕಾಯಿಸಿಕೊಂಡು ನಂತರ ಸ್ನಾನ ಮಾಡಬೇಕು ಹಾಗೂ ಇದರ ತೈಲವನ್ನು (ನಿಂಬೋಲಾ ಮಾತ್ರೆ) ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
 • ಏಡ್ಸ ರೋಗಕ್ಕೆ ಈ ಬೇವಿನ ಎಲೆಗಳ ರಸವನ್ನು ನಿತ್ಯ ಬೆಳಿಗ್ಗೆ ಸೇವಿಸಬೇಕು. ತುಂಬ ಪರಿಣಾಮಕಾರಿ ಎಂದು ಕಂಡುಬಂದಿದ್ದು ಸಂಶೋಧನೆಗಳು ಮುಂದುವರಿದಿವೆ.
 • ಮಧುಮೇಹ ರೋಗ ನಿಯಂತ್ರಣದಲ್ಲೂ ಈ ಬೇವು ಸಾಕಷ್ಟು ಪರಿಣಾಮಕಾರಿ ಎನಿಸಿದೆ.
 • ಜಠರ ವ್ರಣ ಚಿಕಿತ್ಸೆಯಲ್ಲೂ ಬೇವಿನ ರಸವನ್ನು ಸುಮಾರು ಒಂದುವರೆ ತಿಂಗಳುಗಳವರೆಗೆ ಕೊಟ್ಟರೆ ಗುಣಕಾರಿ ಎನಿಸಿದೆ. ಸಂಶೋಧನೆ ನಡೆದಿದೆ.
 • ಬೇವನ್ನು ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ರೋಚನ, ಗ್ರಾಹಿ, ಕ್ಷಮಿಘ್ನ, ಯಕೃತ್ತೇಜಕವೆನಿಸಿದೆ. ಆಮ್ಲ ಪಿತ್ತ ವಿಕಾರದಲ್ಲಿಯೂ ಉಪಯುಕ್ತವೆನಿಸಿದೆ. ಇದರ ಬೀಜಗಳು ಗರ್ಭಾಶಯ ಉತ್ತೇಜನಗೊಳಿಸುವುವು. ಸಂತತಿ ನಿರೋಧಕ್ಕೆ ಕೂಡ ಈ ಬೇವಿನ ಎಣ್ಣೆಯನ್ನು ಉಪಯೋಗಿಸುವುದು ಬಹು ವರ್ಷಗಳಿಂದ ಪ್ರಚಲಿತವಿದೆ, ವಾತ್ಸಾಯನನ ಸೂತ್ರದಲ್ಲಿಯೂ ಇವನ್ನು ಉಲ್ಲೇಖಿಸಲಾಗಿದೆ. ಇತ್ತೀಚೆಗೆ ನಡೆದ ಸಂಶೋಧನೆಯಿಂದ ಈ ಅಂಶವು ಇನ್ನು ನಿಚ್ಚಳವಾಗಿದ್ದು ಸಂತತಿ ನಿರೋಧಕ ವ್ಯಾಕ್ಸೀನ ತಯಾರಿಕೆಯಲ್ಲಿ ಈ ಬೇವು ಮಹತ್ತರ ಪಾತ್ರವಹಿಸಲಿದೆ.
 • ಬೇವಿನ ಕಡ್ಡಿಗಳನ್ನು ಕಚ್ಚಿ-ಕಚ್ಚಿ ಕುಂಚಗಳಂತೆ ಮಾಡಿಕೊಂಡು ನಿತ್ಯ ಬೆಳಿಗ್ಗೆ ಹಲ್ಲುಗಳನ್ನುಜ್ಜಿಕೊಂಡರೆ ಹಲ್ಲುಗಳು, ಒಸಡುಗಳು-ನಾಲಿಗೆಗಳು, ಸ್ವಚ್ಛವಾಗುವುದಲ್ಲದೆ ಪಯೋರಿಯಾ ಮುಂತಾದ ರೋಗಗಳೂ ನಿವಾರಿಸಲ್ಪಡುವುವು.
 • ಬೇವಿನ ಎಲಗಳನ್ನು ನಿಯಮಿತವಾಗಿ ನಿತ್ಯ ಬೆಳಿಗ್ಗೆ ತಿನ್ನುತ್ತಿದ್ದರೆ ರೋಗ ನಿರೋಧಕ ಶಕ್ತಿ ಬೆಳೆದು ರೋಗಗಳು ಬರುವುದು ಅಪರೂಪ ಎಂಬ ಮಾತು ಪ್ರಚಲಿತವಿದೆ. ಮೈ ತೂಕ ಇಳಿಸಲು ಕೂಡ ಬೇವಿನ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕೊಡಲಾಗುತ್ತಿದೆ.
 • ಬೇವು ಯಕೃತ ಉತ್ತೇಜಕವಾಗಿದೆ. ಬೇವಿನ ರಸಕ್ಕೆ ಶುಂಠಿಚೂರ್ಣ ಬೆರಸಿಕೊಟ್ಟರೆ ಕಾಮಿಣಿ ರೋಗವನ್ನು ಗುಣಪಡಿಸುವುದು. ಇದರಿಂದ ಹಸಿವೆ ಪಚನ ಶಕ್ತಿಗಳು ಚೆನ್ನಾಗಿ ಆಗುವುವು. ಹೊಟ್ಟೆಯೊಗಿನ ಕ್ರಿಮಿಗಳು ನಾಶವಾಗುವುವು.
 • ಚಳಿ‌ಜ್ವರಕ್ಕೆ ಬೇವು ಒಂದು ಉತ್ತಮವಾದ ಔಷಧಿ ಎನಿಸಿದೆ.

ಪ್ರಮಾಣ: ಚೆಕ್ಕೆ ಚೂರ್ಣ ೨ ರಿಂದ ೪ ಗ್ರಾಂ

ಪತ್ರ ಸ್ವರಸ: ೧೦ ರಿಂದ ೨೦ ಮಿ.ಲಿ

ತೈಲ : ೫ ರಿಂದ ೧೦ ಹನಿಗಳು

ಯೋಗ : ನಿಂಬಾದಿಚೂರ್ಣ, ನಿಂಬಾರಿಷ್ಟ, ಎಂಬ ಹರಿದ್ರಾಖಂಡ

೨೪. ಭೂನಿಂಬ (ನೆಲಬೇವು) (Swertia chirayita Karst Roxb Exflem)

ನೆಲಬೇವು ೪೦೦೦ ಅಡಿಯಿಂದ ೧೦,೦೦೦ ಅಡಿ ಎತ್ತರದ ಪ್ರದೇಶಗಳಲ್ಲೇ ವಿಶೇಷವಾಗಿ ಬೆಳೆಯುವುದು, ಭಾರತದಲ್ಲಿ ಹಿಮಾಚಲ ಪ್ರದೇಶ, ಕಾಶ್ಮೀರ, ಭೂತಾನ, ಮಧ್ಯಪ್ರದೇಶ ಹಾಗೂ ದಕ್ಷಿಣ ಭಾರತದ ಕೆಲಭಾಗಗಳಲ್ಲಿ ಬೆಳೆಯುವುದು. ಇದರಲ್ಲಿ ಅನೇಕ ನಮೂನೆಯ ನೆಲಬೇಬುಗಳಿದ್ದು ಅವುಗಳಲ್ಲಿಯ ಕಹಿ ಅಂಶವು ಕೂಡ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಇದು ೨ ರಿಂದ ೪ ಅಡಿಗಳಷ್ಟು ಎತ್ತರ ಬೆಳೆಯುವುದು. ಎಲೆಗಳು ಮೇಲ್ಭಾಗಕ್ಕೆ ಸಣ್ಣ ಎಲೆಗಳಿರುವುವು. ಇದಕ್ಕೂ ಹೂವುಗಳೂ ಹಣ್ಣುಗಳು ಆಗುವುವು. ಮಳೆಗಾಲದಲ್ಲಿ ಹಣ್ಣುಗಳಾಗುವುವು. ಹಾಗೂ ಅವನ್ನು ಆಗ ಸಂಗ್ರಹಿಸಿಡುವರು. ನೆಲಬೇವಿನ ಪಂಚಾಂಗಗಳು ಔಷಧೋಪಯೋಗಿಯಾಗಿವೆ.

ಗುಣ : ಲಘು ರೂಕ್ಷ
ರಸ : ತಿಕ್ತ
ವಿಪಾಕ:ಕಟು
ವೀರ್ಯ: ಉಷ್ಣ

ನೆಲಬೇವು ಕಹಿಯಾಗಿರುವುದರಿಂದ ಕಫ-ಪಿತ್ತ ವಿಕಾರಗಳನ್ನು ಉಷ್ಣ ವೀರ್ಯವಿರುವುದರಿಂದ ವಾತವನ್ನು ಕಡಿಮೆ ಮಾಡುವುದು. ಹೀಗೆ ತ್ರಿದೋಷಗಳನ್ನು ಕಡಿಮೆ ಮಾಡುವುದಾದರೂ ವಿಶೇಷವಾಗಿ ಕಫ ಪಿತ್ತ ಶಾಮಕವೆನಿಸಿದೆ. ಹಾಗು ವ್ರಣಶೋಧಕವಾಗಿದೆ. ಸ್ತನ್ಯ ಶೋಧಕ ಹಾಗೂ ಜ್ವರಘ್ನವಾಗಿದೆ. ದೀಪಕ ಪಾಚಕವೆನಿಸಿದೆ. ಇದರ ಸೇವನೆಯಿಂದ ನಾಲಿಗೆ ಸ್ವಚ್ಛವಾಗಿ ರುಚಿ ಬರುವುದು. ಮಲಪ್ರವೃತ್ತಿ ಸರಿ ಆಗುವುದು.

ಉಪಯೋಗಗಳು : ನೆಲಬೇವಿನ ಕಷಾಯ ತಯಾರಿಸಿಕೊಂಡು ವ್ರಣಗಳನ್ನು ಶೋಧಿಸಲು ಉಪಯೋಗಿಸುವರು.

 • ೨೫ ಗ್ರಾಂ. ನೆಲಬೇವು + ೧ ಗ್ರಾಂ. ಶುಂಠಿಗಳನ್ನು ಕಷಾಯ ಸಿದ್ಧಪಡಿಸಿಕೊಂಡು ಜ್ವರದಲ್ಲಿ ದಿನಕ್ಕೆ ೩ ಸಾರೆ ಕೊಡಬೇಕು. ಜೀರ್ಣಜ್ವರ, ವಿಷಮಜ್ವರದಲ್ಲಿ ಇದು ವಿಶೇಷವಾಗಿ ಕೆಲಸ ಮಾಡುವುದು. ಇದರಿಂದ ಜ್ವರ, ದಾಹಗಳು ಕಡಿಮೆ ಆಗುವುದಲ್ಲದೆ ಯಕೃತ, ಪ್ಲೀಹಗಳು ಶಾಂತವಾಗುವುವು. ಹಾಗೂ ರೋಗಿಯ ಅಶಕ್ತತನವು ದೂರವಾಗುವುದು. ಜ್ವರದಲ್ಲಿ ಇದರ ಕಾಢೆಯು ಅತಿ ಪ್ರಸಿದ್ಧವೆನಿಸಿದೆ.
 • ನೆಲಬೇವಿನ ರಸವನ್ನು ೧ ರಿಂದ ೨ ಚಮಚೆಯಷ್ಟು ಎಳೆನೀರಿನಲ್ಲಿ ಕೊಡುವುದರಿಂದ ಕಾಮಿಣೀ, ಯಕೃತ್ ತೊಂದರೆಗಳಿಗೆ ಉಪಯುಕ್ತವೆನಿಸಿದೆ.
 • ಜೀರಿಗೆ, ಬಡೆಸೊಪ್ಪು, ಏಲಕ್ಕಿಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸಣ್ಣ ಸಣ್ಣ ಗುಳಿಗೆಗಳನ್ನು ಮಾಡಿಕೊಂಡು ನೆರಳಿನಲ್ಲಿ ಒಣಗಿಸಿಟ್ಟು ಕೊಳ್ಳಬೇಕು. ಮಾತ್ರೆಯನ್ನು ಎದೆಹಾಲಿನಲ್ಲಿ ತೇಯ್ದು ಮಕ್ಕಳಿಗೆ ಕುಡಿಸಿದರೆ ಹೊಟ್ಟೆ ಸಂಬಂಧ ತೊಂದರೆಗಳು ದೂರವಾಗುವುವು.
 • ಇದರ ಕಷಾಯವನ್ನು ೩೦ ರಿಂದ ೬೦ ಮಿ.ಲಿ.ರಷ್ಟು ಕಲ್ಲುಸಕ್ಕರೆಯೊಡೆನ ಕೊಟ್ಟರೆ ವಿಷಮಜ್ವರ, ಛಳಿಜ್ವರ, ನೆಗಡಿ, ಕಾಮಿಣಿಗಳು ಗುಣವಾಗುವುವು.
 • ಕಷಾಯವನ್ನು ಅರಿಶಿನಪುಡಿ, ಕಲ್ಲುಸಕ್ಕರೆ ಸೇರಿಸಿ ತೆಗೆದುಕೊಂಡರೆ ಚರ್ಮರೋಗಗಳು ಗುಣವಾಗುವುವು.

ಪ್ರಮಾಣ : ಕಷಾಯ ೫೦ ರಿಂದ ೧೦೦ ಮಿ.ಲಿ.

ಚೂರ್ಣ: ೧ ರಿಂದ ೩ ಗ್ರಾಂ

ಯೋಗ : ಸುದರ್ಶನ ಚೂರ್ಣ, ಕಿರಾತಾದಿ ಕಷಾಯ

೨೫. ಬಿಲಪತ್ರಿ (ಬಿಲ್ವ) (Aegl Mormelos Corr/ Bael)

ಈ ಬಿಲಪತ್ರಿ ಗಿಡಗಳು ಇಡೀ ಭಾರತದಲ್ಲಿ ವಿಶೇಷವಾಗಿ ಗುಡ್ಡಗಳಲ್ಲಿ ಹಾಗೂ ೪೦೦೦ ಅಡಿ ಎತ್ತರವಿರುವ ಪ್ರದೇಶಗಳಲ್ಲೆಲ್ಲ ಬೆಳೆಯುವುವು. ಈ ಗಿಡಗಳು ೨೫-೩೦ ಅಡಿ ಎತ್ತರ ೩-೪ ಅಡಿ ದಪ್ಪಗಿದ್ದು ನೇರವಾಗಿ ಬೆಳೆಯುವವು. ಮುಳ್ಳುಗಳಿಂದ ಕೂಡಿರುವುವು. ಇದಕ್ಕೆ ೨ ರಿಂದ ೪ ಅಂಗುಲದ ನಷ್ಟು ದುಂಡಗಿನ ಇಲ್ಲವೆ ಅಂಡಾಕಾರವಾಗಿರುವ ಹಣ್ಣುಗಳಾಗುವುವು. ಇದರ ತೊಗಟೆ ದಪ್ಪಗಿದ್ದು ಸುಗಂಧಿತವಾಗಿರುವುದು. ಒಳಗಿನ ಅಂಶವು ಹಳದಿ ವರ್ಣದ್ದಿದ್ದು ಸಿಹಿ ಹಾಗೂ ಸುಗಂಧಿತವಾಗಿರುವುದು. ಮೇ- ಜೂನ್ ತಿಂಗಳುಗಳಲ್ಲಿ ಈ ಹಣ್ಣುಗಳು ಪಕ್ವಗೊಳ್ಳುವುವು.

ಈ ಹಣ್ಣಿನಲ್ಲಿ (ಒಳಭಾಗ) ಮ್ಯುಸಿಲೇಜ, ಪೆಕ್ವಿನ್, ಸ್ಕ್ಕರೆ, ಟೆನಿನ್, ತೈಲಾಂಶ, ತಿಕ್ತಾಂಶಗಳಿರುವುವು.

ಬಿಲಪತ್ರಿಗೆ ಒಂದು ಪೂಜ್ಯಸ್ಥಾನವಿದೆ. ಆದ್ದರಿಂದ ಇದನ್ನು ಪೂಜಿಸುತ್ತಾರೆ. ಇದು ದಶಮೂಲಗಳಲ್ಲಿ ಒಂದಾಗಿದೆ.

ಬೇಲದ ಹಣ್ಣು ಸಿಹಿಯಾಗಿದ್ದು ಶರೀರದಲ್ಲಿ ಶೀತವನ್ನುಂಟು ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಇದರ ಪಾನಕವನ್ನು ತೆಗೆದುಕೊಳ್ಳುವ ರೂಢಿಯು ಅನೇಕ ಪ್ರದೇಶಗಳಲ್ಲಿದೆ. ಕರುಳಿನ ವಿಕಾರಗಳಲ್ಲಿ ಈ ಹಣ್ಣಿನ ರಸ ಉಪಯುಕ್ತವೆನಿಸಿದೆ.

ಗುಣ : ಲಘು, ರೂಕ್ಷ
ರಸ: ಕಷಾಯ ತಿಕ್ತ
ವಿಷಾಕ: ಕಟು
ವೀರ್ಯ: ಉಷ್ಣ

ಇದು ರೂಕ್ಷ, ಲಘು, ಕಷಾಯ ಹಾಗೂ ತಿಕ್ತವಾಗಿರುವುದರಿಂದ ಕಫವನ್ನು ಉಷ್ಣವಾಗಿರುವುದರಿಂದ ವಾತವನ್ನು ಶಮನಗೊಳಿಸುವುದು. ಇದರ ಎಲೆಯು ಬಾವವನ್ನು ಇಳಿಸುವುದು. ಹಾಗೂ ವೇದನೆಯನ್ನು ಕಡಿಮೆ ಮಾಡುವುದು. ಇದರ ಹಸಿ ಕಾಯಿಯು ದೀಪಕ, ಪಾಚಕ, ಗ್ರಹಿ ಹಾಗೂ ಕ್ರಿಮಿಘ್ನವೆನಿಸಿದೆ. ಪಕ್ವವಾದ ಹಣ್ಣು ಕಹಿ, ಮಧುರ ಹಾಗೂ ಮೃದು ವಿರೇಚಕವೆನಿಸಿದೆ.

ಹೆಚ್ಚಾಗಿ ಸೇವಿಸಿದರೆ ಮಲಬದ್ಧತೆಯನ್ನುಂಟು ಮಾಡುವುದು. ಎಲಗಳ ಸ್ವರಸವು ಯಕೃತ್ತನ್ನು ಉತ್ತೇಜಿಸುವುದು. ಹಾಗೂ ಪಿತ್ತಸಾರಕವೆನಿಸಿದೆ.

 • ಅಪಕ್ವಕಾಯಿಯ ಕಷಾಯವು ರಕ್ತಮಿಶ್ರಿತ ಅಮಾಂಶದಲ್ಲಿ ಅತಿಸಾರದಲ್ಲಿ ಉಪಯೋಗವಾಗುತ್ತದೆ. ಅತಿಸಾರದಲ್ಲಿ ಬಿಲಪತ್ರಿಯ ತಿಳಲನ್ನು ೩ ಗ್ರಾಂ ರಷ್ಟು ಸಕ್ಕರೆಯೊಡನೆ ಕೊಡಬೇಕು.
 • ಬಿಲ್ವದ ಕಾಯಿಗಳನ್ನು ಒಣಗಿಸಿ ನಂತರ ಕಾಯಿ ಒಡೆದು ಒಳಗಿನ ಮಜ್ಜಾ ಭಾವನ್ನು ಚೂರ್ಣ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಸಮಭಾಗ ಶುಂಠಿ+ಸಕ್ಕರೆಗಳನ್ನು ಸೇರಿಸಿ ೧ ರಿಂದ ೨ ಗ್ರಾಂ. ಗಳಷ್ಟು ಕೊಡುವುದರಿಂದ ಅತಿಸಾರ ಸಂಗ್ರಹಣಿಗಳು ಕಡಿಮೆ ಆಗುವುವು.
 • ಬಹುಮೂತ್ರ (Polyria) ವಿಕಾರಕ್ಕೆ ಒಂದು ಭಾಗ ಬಿಲಪತ್ರಿ ಅರ್ಧ ಭಾಗ ಶುಂಠಿ ಸೇರಿಸಿ ಕಷಾಯ ಮಾಡಿ ಒಂದು ವಾರದವರೆಗೆ ಕೊಡಬೇಕು.
 • ಬಿಲ್ವಪತ್ರಿಯ ಕಷಾಯವು ಜ್ವರಹರವಾಗಿದೆ. ಸಾಮಾನ್ಯ ಜ್ವರಗಳಲ್ಲಿ ಇದನ್ನು ಕೊಡಬಹುದು. ಮೈಯಲ್ಲಿ ಉಷ್ಣತೆ ಎನಿಸುತ್ತಿದ್ದರೆ, (ಅಂಗೈ, ಅಂಗಾಲು, ಕಣ್ಣು, ಮೂತ್ರಗಳ ಉರಿ) ಬಿಲಪತ್ರಿಯ ಕಷಾಯ ತಯಾರಿಸಿ ಅದಕ್ಕೆ ಕಲ್ಲುಸಕ್ಕರೆ ಹಾಕಿ ತೆಗೆದುಕೊಳ್ಳಬೇಕು.
 • ಬಿಲ್ವಲೇಹ್ಯ: ಬಿಲ್ವಕಾಯಿಯೊಳಗಿದ್ದ ತಿಳಿಲನ್ನು ತೆಗೆದುಕೊಂಡು ಅದನ್ನು ಉಗಿಯ ಮೇಲೆ ಬೇಯಿಸಿಕೊಂಡು ನಂತರ ಸಕ್ಕರೆಯ ಎಳೆಪಾಕಿನಲ್ಲಿ ಹಾಕಿ ಎರಡು ತಿಂಗಳವರೆಗೆ ತೆಗೆದಿಡಬೇಕು. ನಂತರ ಅದಕ್ಕೆ ಜಾಜಿಕಾಯಿ ಕೇಶರಗಳನ್ನು ಹಾಕಬೇಕು. ಇದನ್ನು ಚಿರಕಾರಿ ಅಮಾಂಶ ಅತಿಸಾರಗಳಿಗೆ ಉಪಯೋಗಿಸಬಹುದು. ಪ್ರಮಾಣ ಅರ್ಧದಿಂದ ಒಂದು ಚಮಚದಷ್ಟು.

ಪ್ರಮಾಣ :

ಚೂರ್ಣ ೩ ರಿಂದ ೬ ಗ್ರಾಂ
ಸ್ವರಸ – ೧೦ ರಿಂದ ೨೦ ಮಿ.ಲೀ

ಪಾನಕ : ೨೦ ರಿಂದ ೪೦ ಮಿ.ಲೀ

ಯೋಗ – ಬಿಲ್ವಪತ್ರಿಯ ಕಷಾಯ, ಬಿಲ್ವಾದಿ ಚೂರ್ಣ, ಬಿಲ್ವಾದಿ ಘೃತ, ಬಿಲ್ವತೈಲ, ಬಿಲ್ವ ಮೂಲಾದಿ ಗುಟಿಕೆ.

೨೬. ಮಧುನಾಶಿನಿ

ಮಧುನಾಶಿನಿ ಎಲೆಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿದು ನಂತರ ಬಾಯಿಯಲ್ಲಿ ಬೆಲ್ಲ – ಸಕ್ಕರೆ ಎಲ್ಲವೆ ಸಿಹಿ ಪದಾರ್ಥಗಳನ್ನು ಹಾಕಿಕೊಂಡರು ರುಚಿಹೀನವಾಗಿರುತ್ತವೆ. ಅದಕ್ಕೆಂದೇ ಇದಕ್ಕೆ ‘ಮಧುನಾಶಿನಿ’ ಎಂದು ಕರೆದಿದ್ದಾರೆ.

ಮಧುನಾಶಿನಿ ಲಘು, ರೂಕ್ಷ, ಕಷಾಯ, ಕಟು, ವಿಷಾಕದಲ್ಲಿಯೂ, ಕಟುವೇ ಆಗಿದ್ದು ಉಷ್ಣ ವೀರ್ಯವುಳ್ಳದ್ದಾಗಿದೆ. ಇದು ಕಫ-ವಾತನಾಶಕ, ದೀಪಕ, ಯಕೃತ, ಹೃದಯ ಮತ್ತು ಗರ್ಭಾಂಶಯಗಳ ಉತ್ತೇಜಕವೆನಿಸಿದೆ. ಕಫಘ್ನ, ಮೂತ್ರಲ, ವಿಷಮಜ್ವರ ಕಡಿಮೆ ಮಾಡುವುದು.

ಅಶ್ಮರಿ, ಹೃದ್ರೋಗ, ಅರ್ಶಸ್ಸು, ದಾಹ, ಕಾಮಲಾ ಹಾಗೂ ನೇತ್ರ ರೋಗಗಳಲ್ಲಿ ಉಪಯುಕ್ತವೆನಿಸಿದೆ. ಅಧಿಕ ಪ್ರಮಾಣದಲ್ಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ವಾಕರಿಕೆಯನ್ನುಂಟು ಮಾಡುವುದು.

ಮಧುನಾಶಿನಿಯು ಮಧುಮೇಹ-ಇಕ್ಷುಮೇಹಾದಿಗಳ ಮೇಲೆ ಒಳ್ಳೆ ಪರಿಣಾಮ ಮಾಡುವುದೆಂದು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.

೨೭. ಮೆಣಸು (ಮರಿಚ) (Black pepper/piper Nigrum Linn)

ಮೆಣಸಿನ ಕಾಳುಗಳನ್ನು ನಾವು ವಿಶೇಷವಾಗಿ ಮಸಾಲೆ ಪದಾರ್ಥಗಳಲ್ಲಿ ಉಪಯೋಗಿಸುತ್ತೇವೆ. ಕೆಲವೇಳೇ ಥಂಡಿಜ್ವರ ನೆಗಡಿ ಕಫಗಳಾದಾಗ ಕಷಾಯ ಮಾಡಿ ಕುಡಿಯುವುದುಂಟು. ಈ ಮೆಣಸಿನ ಕಾಳುಗಳು ವಿಶೇಷವಾಗಿ ಉಷ್ಣಪ್ರದೇಶಗಳಲ್ಲಿ ಬೆಳೆಯುತ್ತವೆ. ಭಾರತ, ಮಲೇಶಿಯಾ, ಇಂಡೋನೇಶಿಯಾ ಹಾಗೂ ಶ್ರೀಲಂಕಾಗಳಲ್ಲಿ ಇವುಗಳ ಕೃಷಿ ಹೆಚ್ಚಾಗಿ ಆಗುವುದು. ಇದು ಬಳ್ಳಿಯಂತೆ ಬೆಳೆಯುವುದು. ಒಳ್ಳೆಯ ಆಧಾರ, ಗೊಬ್ಬರ, ನೀರು, ಕೆಂಪುಮಣ್ಣನ್ನು ಕೊಟ್ಟರೆ ೩-೪ ವರ್ಷಗಳಲ್ಲಿ ಗೊಂಚಲು ಗೊಂಚಲುಗಳಾಗಿ ಕಾಳುಗಳನ್ನು ಬಿಡುವುದು. ಒಂದು ಬಳ್ಳಿಯು ೨೫ ರಿಂದ ೩೦ ವರ್ಷಗಳವರೆಗೆ ಒಳ್ಳೆ ಕಾಳುಗಳನ್ನು ಕೊಡಬಲ್ಲದು. ಸಾಮಾನ್ಯವಾಗಿ ಈ ಕಾಳುಗಳು ಜೂನವರೆಗೆ ಬರುವುವು. ಅವನ್ನೇ ಒಣಗಿಸಿಕೊಂಡು ತೆಗೆದಿಡಲಾಗುತ್ತದೆ.

ಈ ಕಾಳುಗಳಲ್ಲಿ ಜಿಗುಟಾದ ಭಾರವಾದ ಗುಣವುಳ್ಳ ಪೈಪೆರಿನ್ ಎಂಬ ರಸಾಯನ, ಶೀಘ್ರವಾಗಿ ಆವಿಯಾಗುವ ಸುವಾಸನೆಯುಳ್ಳ ತೈಲಾಂಶ ಹಾಗೂ ಸಿ-ಜೀವಸತ್ವಗಳಿದ್ದು ಒಳ್ಳೆ ಉತ್ತೇಜಕಾರಿಯಾಗಿದ್ದು, ವಾತಹರ, ಜೀರ್ಣಕಾರಿ ಎನಿಸಿದ್ದು ನರಗಳ ದೌರ್ಬಲ್ಯಕ್ಕೆ ಪರಿಣಾಮಕಾರಿ ಎನಿಸಿದೆ. ಆಯುರ್ವೇದದ ಪ್ರಸಿದ್ಧ ತ್ರಿಕಟುಗಳಲ್ಲಿ ಸೇರಿದೆ.

ಗುಣ : ಲಘು, ತೀಕ್ಷ್ಣ
ರಸ : ಕಟು
ವಿಪಾಕ : ಕಟು
ವೀರ್ಯ: ಉಷ್ಣ

ಬಿಳಿಮೆಣಸು ವೀರ್ಯದಲ್ಲಿ ಅತಿ ಶೀತವಾಗಲಿ, ಅತ್ಯುಷ್ಣವಾಗಲಿ ಅಲ್ಲದ್ದು. ವಿಶೇಷವಾಗಿ ಕಣ್ಣುಗಳಿಗೆ ಹಿತಕರವೆನಿಸಿದೆ. ಕಪ್ಪು ಮೆಣಸಿಗಿಂತ ಒಳ್ಳೆಯದೆಂದು ಹೇಳಲಾಗಿದೆ.

ಹಸಿಯಾದ ಮೆಣಸಿನ ಹಣ್ಣು (ಕಾಳು) ಮಾತ್ರ ಗುರು, ಮಧುರ ವಿಪಾಕವುಳ್ಳದಾಗಿದೆ. ಹಾಗೂ ಇಷ್ಟೊಂದು ಉಷ್ಣಕಾರಿ ಎನಿಸುವುದಿಲ್ಲ.

ದೋಷ ಕರ್ಮ: ಇದು ಉಷ್ಣವೀರ್ಯವರಿವುದರಿಂದ ವಾತವನ್ನು ಕಟು, ರೂಕ್ಷ ಹಾಗೂ ತೀಕ್ಷ್ಣವಾಗಿರುವುದರಿಂದ ಕಫವನ್ನು ಶಮನ ಮಾಡುವುದು. ಯಕೃತ್ ಉತ್ತೇಜಕವೆನಿಸಿದೆ. ಕ್ರಿಮಿಗಳನ್ನು ಹರಣ ಮಾಡುವುದು.

ಪ್ರಯೋಗಗಳು: ಅಪಚನ ಮತ್ತು ಹೊಟ್ಟೆಯುಬ್ಬರ ವಿಕಾರಗಳಲ್ಲಿ ಮೆಣಸು ಉಪಯುಕ್ತವೆನಿಸಿದೆ. ಹಸಿವೆ ಚೆನ್ನಾಗಿ ಆಗದಿದ್ದರೆ ಮೆಣಸಿನ ಪುಡಿಯನ್ನು ತುಪ್ಪದಲ್ಲಿ ದಿನಕ್ಕೆರಡು ಸಾರೆ ಊಟದ ಮೊದಲು ಒಂದೆರಡು ವಾರಗಳವರೆಗೆ ತೆಗೆದುಕೊಳ್ಳಬೇಕು.

 • ಶೀತದ ಜ್ವರ ಕೆಮ್ಮುಗಳಿಗೆ ಮೆಣಸಿನ ಪುಡಿಯನ್ನು ಬಿಸಿನೀರಿನಲ್ಲಿ ತೆಗೆದುಕೊಳ್ಳಬೇಕು. ಉಬ್ಬಸಕ್ಕೆ ಮೆಣಸಿನ ಪುಡಿಯನ್ನು ತುಪ್ಪದೊಡನೆ ತೆಗೆದುಕೊಳ್ಳಬೇಕು.
 • ಹೊಟ್ಟೆ ಶೂಲೆಗೆ ಶುಂಠಿಪುಡಿ+ನಿಂಬೆರಸದಲ್ಲಿ ಮೆಣಸಿನ ಪುಡಿಯನ್ನು ತೆಗೆದುಕೊಳ್ಳಬೇಕು.
 • ಎಚ್ಚರತಪ್ಪಿದಾಗ ಮೆಣಸಿನ ಪುಡಿಯನ್ನು ನಸ್ಯದಂತೆ ಕೊಟ್ಟರೆ ಬೇಗನೆ ಎಚ್ಚರಿಕೆ ಬರುವುದು.
 • ನಾಡೀ ದೌರ್ಬಲ್ಯ ಹಾಗೂ ವಾತವಿಕಾರಗಳಲ್ಲಿ ಮೆಣಸು ಉಪಯುಕ್ತವೆನಿಸಿದೆ.
 • ಕಾಲು ಚಮಚ ಮೆಣಸಿನ ಪುಡಿಗೆ ಸ್ವಲ್ಪ ಹುರಿದ ಇಂಗು ಸೇರಿಸಿ ಮಜ್ಜಿಗೆಯೊಡನೆ ದಿನಕ್ಕೆ ಎರಡು ಸಾರೆ ಸೇವಿಸುತ್ತ ಹೋದರೆ ದೀರ್ಘಕಾಲದ ಭೇದಿಯು ನಿಲ್ಲುವುದು.
 • ಮೆಣಸಿನಪುಡಿ, ಉಪ್ಪಿನ ಹರಳುಗಳನ್ನು ವೀಳ್ಯೆದೆಲೆಯೊಡನೆ ಬಾಯಿಯಲ್ಲಿಟ್ಟುಕೊಂಡು ರಸ ನುಂಗುತ್ತಿದ್ದರೆ ಗಂಟಲು ಕೆರೆತ, ಕೆಮ್ಮು, ದಮ್ಮುಗಳು ಕಡಿಮೆ ಆಗುತ್ತವೆ.
 • ನೆಗಡಿ, ತಲೆಭಾರ, ಜ್ವರದಲ್ಲಿ ಅರ್ಧಚಮಚ ಮೆಣಸಿನಪುಡಿಯನ್ನು ಒಂದು ಲೋಟ ಹಾಲಿಗೆ ಸೇರಿಸಿ ಕಾಯಿಸಿ, ಶೋಧಿಸಿ, ಸಕ್ಕರೆ ಸೇರಿಸಿ ರಾತ್ರಿ ಕುಡಿಯಬೇಕು.
 • ಮೆಣಸಿನ ಪುಡಿಯನ್ನು ತುಪ್ಪದಲ್ಲಿ ಸೇರಿಸಿ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ನವೆ ಮತ್ತು ನೋವು ಕಡಿಮೆ ಆಗುತ್ತವೆ.

ಪ್ರಮಾಣ : ಅರ್ಧದಿಂದ ಒಂದು ಗ್ರಾಂ

ಯೋಗಗಳು: ಮರಿಚಾದಿ, ಗುಟಿಕಾ, ಮರಿಚಾದಿ ತೈಲ, ಮರಿಚಾದಿ ಚೂರ್ಣ, ಮರಿಚಾದ್ಯ ತೈಲ (ಚರ್ಮವಿಕಾರಗಳಿಗೆ)

೨೮. ಮೆಂಥೆ (Trigonella Foenu-Graecum Linn)

ಮೆಂಥೆಯನ್ನು ವಿಶೇಷವಾಗಿ ಆಹಾರ ಪದಾರ್ಥಗಳಲ್ಲಿ ಸೇರಿಸಿ ಸೇವಿಸಲಾಗುತ್ತದೆ. ಹಸಿಯಾದ ಮೆಂಥೆ ಪಲ್ಲೆಯನ್ನು ಎಲ್ಲರೂ ತಿನ್ನುತ್ತಾರೆ. ಬೇಳೆ ಕಾಳುಗಳಲ್ಲಿ ಸೇರಿಸಿ ಬೇಯಿಸಿ ಪಲ್ಯ-ಸಾರುಗಳನ್ನು ಸಿದ್ಧಪಡಿಸಿ ಊಟ ಮಾಡುತ್ತಾರೆ. ಮೆಂಥೆಯ ಚಟ್ನಿ, ಮೆಂಥೆಯ ಉಸುಲಿಯನ್ನು ಕೂಡ ತಿನ್ನುವರು. ಬಾಣಂತಿಯರಿಗೆ ಅನ್ನದಲ್ಲಿ ಮೆಂಥೆ ಹಾಕಿ ಬೇಯಿಸಿಕೊಡುವರು ಹಾಗೂ ಉಂಡಿಯಲ್ಲಿ ಮೆಂಥೆ ಸೇರಿಸಿ ಕೊಡುವರು. ಇದರಿಂದ ತಾಯಂದಿರಿಗೆ ಎದೆ ಹಾಲು ವಿಶೇಷವಾಗಿ ಬರುವುದು.

ಈ ಮೆಂಥೆಯನ್ನು ವರ್ಷದಾದ್ಯಂತ ಬೆಳೆಯಬಹುದು. ಮನೆ ಅಂಗಳದಲ್ಲಿಯೇ ಮಡಿ ಮಾಡಿ ಬೀಜಗಳನ್ನು ಹಾಕಿ ಬೇಕಾದಾಗ ಬೆಳೆದುಕೊಳ್ಳಬಹುದು. ಇದರಲ್ಲಿ ಪ್ರೋಟಿನ ೨೬.೨% ಕಾರ್ಬೊಹೈಡ್ರೆಟ್ ೪೪.೧% ಕ್ಯಾಲ್ಸಿಯಂ, ಫಾಸ್ಪೋರಸ್, ಲೋಹ, ಸೋಡಿಯಂ ಪೋಟಾಶಿಯಂಗಳಿವೆ. ಬೀಜಗಳಲ್ಲಿ ೬ ರಿಂದ ೮ % ತೈಲಾಂಶ ಕೂಡ ಇದೆ.

ಗುಣ : ಲಘು ಸ್ನಿಗ್ಧ
ರಸ : ಕಟು
ವಿಪಾಕ : ಕಟು
ವೀರ್ಯ: ಉಷ್ಣ

 • ಮಧುಮೇಹರೋಗಿಗಳು ನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ೧/೨ದಿಂದ ಒಂದು ಚಮಚದಷ್ಟು ಮೆಂಥೆ ಪುಡಿಯನ್ನು ಊಟಕ್ಕೆ ಮೊದಲು ತೆಗೆದುಕೊಂಡರೆ ರೋಗವು ನಿಯಂತ್ರಣದಲ್ಲಿರುವುದು.
 • ಬೆಣ್ಣೆ ಕಾಯಿಸುವಾಗ ಹುರಿದ ಮೆಂಥ್ಯದ ಕಾಳು ಸ್ವಲ್ಪ ಅರಿಶಿನಪುಡಿಯನ್ನು ಸೇರಿಸಿದರೆ ತುಪ್ಪದ ರುಚಿ ಹೆಚ್ಚುತ್ತದೆ. ಸುಗಂಧ ಪರಿಮಳ ಬರುತ್ತದೆ. ಈ ತುಪ್ಪವನ್ನು ತಿಂದರೆ ದೇಹದಲ್ಲಿ ಕೊಬ್ಬು ಅಷ್ಟೊಂದು ಹೆಚ್ಚಾಗುವುದಿಲ್ಲ.
 • ಜೋಳ, ರಾಗಿ, ಗೋದಿ ಹಿಟ್ಟನ್ನು ಮಾಡಿಸುವಾಗ ಅದಕ್ಕೆ ಹುರಿದ ಮೆಂಥೆ ಕಾಳುಗಳನ್ನು ಬೆರೆಸಿದರೆ ಅವುಗಳ ರೊಟ್ಟಿ ಅಥವಾ ಮುದ್ದೆಗೆ ಸುವಾಸನೆ – ರುಚಿಗಳು ಹೆಚ್ಚುವುವು.
 • ಹೆಸರು – ಕಡಲೇಬೇಳೆ ಹಿಟ್ಟಿಗೆ ಮೆಂಥೆ ಪುಡಿ ಸೇರಿಸಿ ಸ್ನಾನ ಮಾಡುವಾಗ ಹಚ್ಚಿಕೊಂಡರೆ ಚರ್ಮ ಮೃದುವಾಗುತ್ತದೆ.
 • ತಲೆಗೆ ನೆನೆಸಿ ರುಬ್ಬಿಕೊಂಡು ಮೆಂತೆ ಹಚ್ಚಿಕೊಂಡು ತಲೆಸ್ನಾನ ಮಾಡಿದರೆ ತಲೆ ಹೊಟ್ಟು ಕಡಿಮೆ ಆಗಿ ಕೂದಲುಗಳು ಮೃದುವಾಗಿ ಬೆಳೆಯುತ್ತವೆ.

ದೋಷ ಕರ್ಮ : ಸ್ನಿಗ್ಧ, ಉಷ್ಣವಾಗಿರುವುದರಿಂದ ವಿಶೇಷವಾಗಿ ವಾತವನ್ನು ಕಡಿಮೆ ಮಾಡುವುದು, ದೇಹದ ಹೊರಕ್ಕೆ ಉಪಯೋಗಿಸಿದರೆ ನೋವು, ಬಾವುಗಳನ್ನು ಕಡಿಮೆ ಮಾಡುವುದು ಮುಖ್ಯವಾಗಿ ದೀಪಕ, ಪಾಚಕ, ಅನುಲೋಮಕವೆನಿಸಿದೆ. ಸ್ತನ್ಯಜನಕವೆನಿಸಿದೆ.

ಪ್ರಮಾಣ : ಬೀಜಚೂರ್ಣ ೧ ರಿಂದ ೩ ಗ್ರಾಂ

೨೯. ಲವಂಗ (Syzygium Aromaticum Linn/Clove)

ಲವಂಗವನ್ನು ವೀಳ್ಯದೆಲೆಯೊಡನೆ ಹಾಕಿಕೊಳ್ಳುವ ರೂಢಿ ಇದೆ. ಕೆಲವರು ಲವಂಗವೊಂದನ್ನೇ ಬಾಯಿಯಲ್ಲಿ ಹಾಕಿಕೊಳ್ಳುವರು. ಈ ಲವಂಗವನ್ನು ಮಸಾಲೆ ಪದಾರ್ಥಗಳಲ್ಲಿಯೂ ಉಪಯೋಗಿಸಲಾಗುತ್ತದೆ. ಕೆಲ ಔಷಧಿಗಳಲ್ಲಿಯೂ ಸೇರಿಸಲಾಗುತ್ತದೆ. ಹೀಗಾಗಿ ಇದು ಸುಲಭವಾಗಿ ಲಭ್ಯವಾಗುತ್ತಿದೆ. ಹಾಗೂ ಎಲ್ಲರಿಗೂ ಗೊತ್ತಿರುವ ಪದಾರ್ಥವೆನಿಸಿದೆ.

ಈ ಲವಂಗದ ಮರಗಳನ್ನು ಭಾರತದಲ್ಲಿ ತಮಿಳುನಾಡು ಹಾಗೂ ಕೇರಳಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ವಿಶೇಷವಾಗಿ ಶ್ರೀಲಂಕಾ, ಮಲೇಶಿಯಾ, ಪೆನಾಂಗ, ಮಾರಿಶಸ್, ಸಿಂಗಾಪುರ ದೇಶಗಳಲ್ಲಿ ಈ ಲವಂಗವು ಬೆಳೆಯುತ್ತಿದ್ದು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಈ ಮರಗಳು ೩೦ ರಿಂದ ೪೦ ಅಡಿ ಎತ್ತರ ಬೆಳೆಯುತ್ತವೆ. ಅವುಗಳಲ್ಲಿ ಸುಗಂಧಿತವಾದ ಬದನೆ ಬಣ್ಣದ ಹೂವುಗಳಾಗುತ್ತವೆ. ಹಣ್ಣುಗಳು ಲವಂಗ ಸ್ವರೂಪದಲ್ಲಿ ಕಂಡುಬರುತ್ತವೆ. ಇವನ್ನು ಕಿತ್ತಿ ತೆಗೆದು ಒಣಗಿಸಲಾಗುತ್ತದೆ. ಈ ಲವಂಗಗಳಲ್ಲಿ ಕ್ಲೋವ್ ಬಡ್ ಆಯಿಲ್ ೧೪.೨೩% ಇರುತ್ತದೆ. ಇದರಲ್ಲಿ ಯುಜಿನೈಲ್ ಹಾಗೂ ಕೆರಿಯೊಫಿನ್ ರಸಾಯನಿಕಗಳು ಮುಖ್ಯವಾಗಿ ದೊರಕುತ್ತವೆ.

ಗುಣ : ಲಘು, ಸ್ನಿಗ್ಧ
ರಸ : ತಿಕ್ತ, ಕಟು
ವಿಪಾಕ : ಕಟು
ವೀರ್ಯ : ಶೀತ

ದೋಷ ಕರ್ಮ: ಲವಂಗವು ತಿಕ್ತ, ಕಟುವಾಗಿರುವುದರಿಂದ ಕಫವನ್ನು, ಶೀತವಾಗಿರುವುದರಿಂದ ಪಿತ್ತವನ್ನು ಶಮನ ಮಾಡುವುದು. ಲವಂಗವು ಕಟು, ಸಿಹಿ, ಲಘು, ತಂಪು, ದೀಪನಕಾರಿ, ಪಾಚನಕಾರಿ, ರುಚಿಕರವಾಗಿದ್ದು ಕಫ ಮತ್ತು ಪಿತ್ತ ರಕ್ತದೋಷಗಳನ್ನು ನಾಶಪಡಿಸುವುದು. ಬಾಯಾರಿಕೆ, ವಾಂತಿ, ಹೊಟ್ಟೆಯುಬ್ಬರ ಮತ್ತು ಶೂಲೆಗಳನ್ನು ಬೇಗನೆ ಗುಣಪಡಿಸುವುದು. ಮತ್ತು ಕೆಮ್ಮು ಉಬ್ಬಸ, ಬಿಕ್ಕು, ಕ್ಷಯಗಳನ್ನು ಕಡಿಮೆ ಮಾಡುವುದು ಎಂದು ಭಾವಪ್ರಕಾಶರು ಹೇಳಿದ್ದಾರೆ.

 • ಸಾಧಾರಣ ಕೆಮ್ಮಿನಲ್ಲಿ ಒಂದು ಕಲ್ಲುಸಕ್ಕರೆಯ ಹರಳಿನೊಡನೆ ಒಂದೆರಡು ಲವಂಗಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ರಸ ನುಂಗುತ್ತಿರಬೇಕು.
 • ಗರ್ಭಿಣಿಯರಿಗೆ ವಾಂತಿಯಾಗುತ್ತಿದ್ದಾಗ ಲವಂಗದ ಚೂರ್ಣವನ್ನು ದಾಳಿಂಬರ ರಸದಲ್ಲಿ ಕೊಡಬೇಕು.
 • ಹಲ್ಲುನೋವಿಗೆ ಲವಂಗವನ್ನಾಗಲಿ, ಲವಂಗ ಎಣ್ಣೆಯನ್ನಾಗಲಿ ಆ ಜಾಗದಲ್ಲಿ ಹಿಡಿದುಕೊಳ್ಳಬೇಕು.
 • ಲವಂಗದ ಎಣ್ಣೆಯನ್ನು ತಲೆನೋವು, ಸಂದು ನೋವುಗಳಿದ್ದ ಭಾಗಕ್ಕೆ ಹಚ್ಚಬಹುದು. ನೋವು ಕಡಿಮೆ ಆಗುವುದು.
 • ಅರುಚಿ, ಅಗ್ನಿಮಾಂದ್ಯ, ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು, ಆಮ್ಲಪಿತ್ತ ವಾಂತಿ, ನೀರಡಿಕೆ ಮೊದಲಾದ ವಿಕಾರಗಳಲ್ಲಿ ಲವಂಗವನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಯಕೃತ್ ವಿಕಾರ ಹಾಗೂ ಗ್ರಹಿಣಿ ರೋಗಗಳಲ್ಲಿಯೂ ಉಪಯುಕ್ತವೆನಿಸಿದೆ.

ಪ್ರಮಾಣ :

೧/೨ ರಿಂದ ೧ ಗ್ರಾಂ
ತೈಲ ೧ ರಿಂದ ೩ ಹನಿಗಳು

ಯೋಗಗಳು : ಲವಂಗಾದಿ ಚೂರ್ಣ, ಲವಂಗ ವಟಿ, ಅವಿಪತ್ತಿಕರ ಚೂರ್ಣ.