೩೦. ವಾಯು ವಿಡಂಗ (Embelia Ribes Burm)

ಅಜ್ಜಿಮದ್ದುಗಳಲ್ಲಿ ವಾಯುವಿಡಂಗಕ್ಕೆ ಒಂದು ಮುಖ್ಯಸ್ಥಾನವಿದೆ. ಅಜೀರ್ಣ, ಅತಿಸಾರ, ಕ್ರಿಮಿದೋಷಗಳಿಗೆ ವಾಯುವಿಡಂಗವು ಒಂದು ಉತ್ತಮ ಔಷಧಿಯಾಗಿದೆ. ಇದು ಭಾರತದ ಪೌರ್ವಾತ್ಯ ಪ್ರದೇಶಗಳು, ಮೇಘಾಲಯ, ಉತ್ತರ ಪೂರ್ವ ಪ್ರದೇಶ ಹೀಗೆ ಸುಮಾರು ಐದು ಸಾವಿರ ಅಡಿ ಎತ್ತರ ಪ್ರದೇಶಗಳಲ್ಲಿ ಬೆಳೆಯುವುದು. ಇದು ಮೃದು ಟೊಂಗೆಗಳಿದ್ದು ಪೊದೆಯಂತೆ ಬೆಳೆಯುವುದು.

ವಾಯುವಿಡಂಗದಲ್ಲಿ ೨.೫೩% ತೈಲಾಂಶ ಟೈನಿನ್, ರಾಳ, ಕ್ರಿಸ್ಟೆಂಬನ್ ಎಂಬ ಕ್ಷಾರಾಂಶ, ವಸೆಯಂತಹ ಪದಾರ್ಥ ೫.೨% ಗಳಿರುವುವು.

ಗುಣ : ಲಘು, ರೂಕ್ಷ, ತೀಕ್ಷ್ಣ
ರಸ: ಕಟು, ಕಷಾಯ
ವಿಪಾಕ : ಕಟು
ವೀರ್ಯ : ಉಷ್ಣ

ಇದೊಂದು ಒಳ್ಳೆಯ ಕೃಮಿಘ್ನ ಔಷಧಿ ಎನ್ನಿಸಿದೆ. ಉಷ್ಣವೀರ್ಯವಿದ್ದುದರಿಂದ ಕಫ -ವಾತಗಳನ್ನು ನಾಶಪಡಿಸುವುದು. ದೀಪಕ, ಪಾಚಕ, ಅನುಲೋಮಕವೆನಿಸಿದೆ.

ವಾಯು ವಿಡಂಗಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿಕೊಂಡು ಬಟ್ಟೆಯಲ್ಲಿ ಸೋಸಿಟ್ಟುಕೊಳ್ಳಬೇಕು. ಹಾಗೂ ಹವೆಯಾಡದಂತೆ ಬಾಟಲಿನಲ್ಲಿ ಹಾಕಿಟ್ಟುಕೊಳ್ಳಬೇಕು. ಬೇಕಾದಾಗ ಉಪಯೋಗಿಸಲು ಬರುತ್ತದೆ. ಇದನ್ನು ಬಿಸಿನೀರು, ಮಜ್ಜಿಗೆ, ನಿಂಬೆರಸ, ಅನುಪಾನದಲ್ಲಿ ತೆಗೆದುಕೊಳ್ಳಬಹುದು. ಇದರ ಕಷಾಯ ಸಿದ್ಧಪಡಿಸುವುದಿದ್ದರೆ ಎರಡು ಚಮಚ ಪುಡಿಯನ್ನು ನಾಲ್ಕು ಕಪ್ ನೀರಿನಲ್ಲಿ ಹಾಕಿ ಕುದಿಸಿ ಒಂದು ಕಪ್ಪಿಗೆ ಇಳಿಸಿಕೊಳ್ಳಬೇಕು. ಅದನ್ನೇ ಬೆಳಿಗ್ಗೆ ರಾತ್ರಿ ಅರ್ಧದಷ್ಟು ತೆಗೆದುಕೊಳ್ಳಬಹುದು.

ವಾಯು ವಿಡಂಗವು ಒಣಗಿರುವುದರಿಂದ ಶರೀರದಲ್ಲಿ ಸ್ನಿಗ್ಧತೆಯಿಂದುಂಟಾಗುವ ರೋಗಗಳಲ್ಲಿ ಒಳ್ಳೆಯದು. ಉಷ್ಣವಾಗಿರುವುದರಿಂದ ಶರೀರವನ್ನು ಹಗುರಗೊಳಿಸುವ ಮತ್ತು ವಾತ ಕಫ ರೋಗಗಳನ್ನು ಪರಿಹರಿಸುವ ಗುಣ ಇದರಲ್ಲಿದೆ. ಕಹಿ ರಸವು ಶರೀರವನ್ನು ನಿರ್ವಿಷಗೊಳಿಸಲು ಸಹಾಯಕವೆನಿಸಿದೆ ಮತ್ತು ಶರೀರದ ಅಂತರ್ಬಾಹ್ಯ ಕ್ರಿಮಿಗಳನ್ನು ಪರಿಹರಿಸುವುದು ಎಂದು ಧನ್ವಂತರಿ ನಿಘಂಟುವಿನಲ್ಲಿ ಹೇಳಲಾಗಿದೆ.

“ವಹ್ನಿಕರಂ……ಶೂಲಾಧ್ಮಾನೋದರಶ್ಲೇಷ್ಮಕ್ರಿಮಿ ವಾತ ವಿಬಂಧನುತ್(ಶಾರಂಗಧರ) ಎಂದರೆ ವಾಯುವಿಂಡಗವು ಜೀರ್ಣ ಶಕ್ತಿಯನ್ನು ಹೆಚ್ಚಿಸುವದು ಹೊಟ್ಟೆನೋವು, ಹೊಟ್ಟೆಯುಬ್ಬರ, ಕಫ, ಕ್ರಿಮಿ ವಾಯುವಿಕಾರ ಹಾಗೂ ಮಲಬದ್ಧತೆಯನ್ನು ಪರಿಹರಿಸುವುದು.”

 • ಜಂತುಗಳಿಗೆ ವಾಯುವಿಡಂಗದ ಪುಡಿಯನ್ನು ೭ ದಿವಸಗಳವರೆಗೆ ಬರಿಹೊಟ್ಟೆಯಲ್ಲಿ ಬೆಳಿಗ್ಗೆ ಹಾಗು ಸಾಯಂಕಾಲ ೫ ರಿಂದ ೧೦ ಗ್ರಾಂ. ಪ್ರಮಾಣದಲ್ಲಿ ಕೊಡುವುದರಿಂದ ಎಲ್ಲ ವಿಧದ ಕ್ರಿಮಿಗಳು ಯಾವುದೇ ವಿರೇಚನೌಷಧಿ ಇಲ್ಲದೆ ತಮ್ಮಷ್ಟಕ್ಕೆ ತಾವೇ ಹೊರಬೀಳುವುವು ಎಂದು ಪ್ರಯೋಗಗಳಿಂದ ಸಿದ್ಧವಾಗಿದೆ.
 • ಕಿಲಬಿ ಹುಳಗಳಿಗೆ ವಾಯುವಿಡಂಗ ಕಷಾಯವನ್ನು ಬಸ್ತಿ (Enema)ಮೂಲಕ ಕೊಡುವುದರಿಂದ ಅವು ಮಲದೊಡನೆ ಹೊರಬಿದ್ದುದನ್ನು ಕೂಡ ಕಂಡುಕೊಳ್ಳಲಾಗಿದೆ.
 • ಮಕ್ಕಳಲ್ಲಿ ನೆಗಡಿ, ಕೆಮ್ಮು, ಅಜೀರ್ಣ, ಸಣ್ಣದಾಗಿ ಜ್ವರ, ಹೊಟ್ಟೆನೋವು ಇತ್ಯಾದಿ ವಿಕಾರಗಳು ಕಾಡಿಸುತ್ತಿದ್ದಾರ ಬೆಳಿಗ್ಗೆ ಹಾಗೂ ರಾತ್ರಿ ವಿಡಂಗ ಚೂರ್ಣವನ್ನು ಬಿಸಿನೀರಿನಲ್ಲಿ ಕೊಡುವುದರಿಂದ ಒಳ್ಳೆ ಗುಣ ಕಾಣುವುದು.

ಪ್ರಮಾಣ : ೫ ರಿಂದ ೧೦ ಗ್ರಾಂ.

ಯೋಗಗಳು : ವಿಡಂಗಾದಿ ಚೂರ್ಣ, ವಿಡಂಗ ತೈಲ, ವಿಡಂಗಾರಿಷ್ಟ

೩೧. ಹಿಪ್ಪಲಿ (ಪಿಪ್ಪಲಿ)(Piper Longum Linn)

ಹಿಪ್ಪಲಿಯೊಂದು ಉತ್ತಮವಾದ ಅಜ್ಜಿ ಔಷಧಿ ಎಂದೇ ಪ್ರಸಿದ್ಧವಾದುದು. ಭಾರತದ ಉಷ್ಣಪ್ರದೇಶಗಳಲ್ಲಿ ಬೆಳೆಯುವುದು. ಹಿಪ್ಪಲಿಯನ್ನು ನಮ್ಮ ಭಾಗದ ಪಶ್ಚಿಮಘಾಟದಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ಇದು ಬಳ್ಳಿ ಸ್ವರೂಪದಲ್ಲಿ ಬೆಳೆದು ಇತರ ಗಿಡಗಳನ್ನು ಆಶ್ರಯಿಸಿ ಬೆಳೆಯುವುದು.

ಈ ಬಳ್ಳಿಗಳಲ್ಲಿ ಮಳೆಗಾಲದಲ್ಲಿ ಹೂವುಗಳಾಗಿ ಶರತ್ಕಾಲದಲ್ಲಿ ಹಣ್ಣುಗಳನ್ನು ಕೊಡುವುದು. ಇದು ಉದ್ದವಾಗಿ ಅರ್ಧ ಇಂಚಿನಿಂದ ಒಂದು ಇಂಚಿನವರೆಗೆ ಕೆಂಪಗಾಗಿ ಇರುವವು. ಒಣಗಿದ ಮೇಲೆ ಕಪ್ಪಾಗಿ ಧೂಳಿ ಬಣ್ಣದ್ದಾಗಿರುವುವು. ಇದರಲ್ಲಿ ನಾಲ್ಕು ಭೇದಗಳಿವೆ. ಹಿಪ್ಪಲಿ, ಗಜಪಿಪ್ಪಲಿ, ಸೌಹಲಿ, ವನಪಿಪ್ಪಲಿಗಳೆಂದು.

ಗುಣ : ಲಘು, ಸ್ನಿಗ್ಧ, ತೀಕ್ಷ್ಣ
ರಸ: ಕಟು
ವಿಪಾಕ : ಮಧುರ
ವೀರ್ಯ: ಅನುಷ್ಣಶೀತ

ಇದರ ಹಸಿಯಾದ ಹಣ್ಣು, ಗುರು , ಮಧುರ ರಸ ಹಾಗೂ ಶೀತವೀರ್ಯದ್ದಾಗಿರುತ್ತದೆ.

ಹಿಪ್ಪಲಿಯು ಉಷ್ಣ, ವಾತನಾಶಕ, ಶ್ವಾಸಹರ ಅಗ್ನಿದೀಪಕವಿದ್ದು ಗರ್ಭಾಶಯ ಸಂಕೋಚಗೊಳಿಸುವ ಗುಣವುಳ್ಳದ್ದಾಗಿದೆ. ಇದರ ಕ್ರಿಯೆಯು ಮುಖ್ಯವಾಗಿ ಪುಪ್ಪುಸ ಗರ್ಭಾಶಯಗಳ ಮೇಲೆ ಆಗುವುದು.

 • ಸೂತಿಕಾಜ್ವರ, ಚಳಿಜ್ವರ, ಆಮವಾತಗಳಿಗೆ ಹಿಪ್ಪಲಿ ಪುಡಿಯನ್ನು ಬಿಸಿನೀರಿನ ಜೊತೆ ಕೊಡಬೇಕು.
 • ಕೆಮ್ಮು – ದಮ್ಮುಗಳಿಗೆ ವಿಶೇಷ ಉಪಯುಕ್ತವೆನಿಸಿದೆ.
 • ಅಪಚನದಿಂದಾಗಿ ಹೊಟ್ಟೆಯುಬ್ಬರವಾಗಿದ್ದರೆ ಹಿಪ್ಪಲಿಪುಡಿ+ಸೈಂಧವ ಲವಣಗಳನ್ನು ಅರ್ಧ ಕಪ್ಪು ಮಜ್ಜಿಗೆಯಲ್ಲಿ ಹಾಕಿ ಅರ್ಧ ತಾಸಿಗೊಮ್ಮೆ ಸ್ವಲ್ಪ ಸ್ವಲ್ಪವಾಗಿ ಕೊಡುತ್ತಿದ್ದರೆ ಗುಣ ಕಂಡುಬರುವುದು.
 • ಯಾವುದೇ ಕಾರಣಗಳಿಂದ ಮೈತಣ್ಣಗಾಗಿದ್ದರೆ ಹಿಪ್ಪಲಿ ಪುಡಿಯನ್ನು ಹಸಿಶುಂಠಿ ರಸ ಮತ್ತು ಬಿಸಿನೀರಿನಲ್ಲಿ ಕೊಡಬೇಕು.
 • ದಮ್ಮಿನ ವಿಕಾರಕ್ಕೆ “ವರ್ಧಮಾನ ಹಿಪ್ಪಲಿ” ಪ್ರಯೋಗ ತುಂಬಾ ಪ್ರಯೋಜನಕಾರಿ ಎನಿಸಿದೆ. ಇದರ‍ಲ್ಲಿ ನಿತ್ಯ ಒಂದೊಂದರಂತೆ ೨೧ ದಿವಸಗಳವರೆಗೆ ಪಿಪ್ಪಲಿಯನ್ನು ಹೆಚ್ಚಿಸುತ್ತ ಹೋಗಿ ಮತ್ತೆ ಅದರಂತೆಯೇ ಇಳಿಸಲಾಗುವುದು. ಇದು ರಸಾಯನವಾಗಿಯೂ ಪರಿಣಾಮಕಾರಿ ಎನಿಸಿದೆ.

ಪ್ರಮಾಣ : ಅರ್ಧದಿಂದ ಒಂದು ಗ್ರಾಂ.ವರೆಗೆ

ಯೋಗ : ಗುಡಿಹಿಪ್ಪಲಿ, ಪಿಪ್ಪಲಿ ಖಂಡ, ಪಿಪ್ಪಲ್ಯಾಸವ

ಎಚ್ಚರಿಕೆ : ಪಿಪ್ಪಲಿಯನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ಪಿತ್ತ ಪ್ರಕೃತಿಯವರು ವಿಶೇಷವಾಗಿ ತೆಗೆದುಕೊಳ್ಳಬಾರದು.

೩೨. ಶತಾವರಿ (ಅಷಾಡಿ ಬೇರು) (Asparagus Racemosus)

ಶತಾವರಿಯೊಂದು ಆಯುರ್ವೇದದಲ್ಲಿ ಶ್ರೇಷ್ಠ ಬಲ್ಯ ಹಾಗೂ ವಯಃಸ್ಥಾಪನಕಾರಿ ಔಷಧಿ ಎನಿಸಿದೆ. ಇದು ವಿಶೇಷವಾಗಿ ಹಿಮಾಲಯದಲ್ಲಿ ಬೆಳೆಯುವುದು.

ಗುಣ : ಗುರು, ಸ್ನಿಗ್ಧ
ರಸ : ಮಧುರ, ತಿಕ್ತ
ವಿಪಾಕ: ಮಧುರ
ವೀರ್ಯ:ಶೀತ

ಇದು ಮುಖ್ಯವಾಗಿ ವಾತ-ಪಿತ್ತ ಶಾಮಕವಾಗಿದೆ. ಒಳ್ಳೆ ಮೂತ್ರಲ ಹಾಗೂ ಪೌಷ್ಠಿಕವೆನಿಸಿದೆ.

 • ಶತಾವರಿಯ ರಸವನ್ನು ನಿತ್ಯ ಬೆಳಿಗ್ಗೆ ಹಾಗು ಸಾಯಂಕಾಲ ತೆಗೆದುಕೊಳ್ಳವುದರಿಂದ ಆಶ್ಮರಿ ರೋಗವು ಗುಣವಾಗುವುದು.
 • ಶತಾವರಿಯ ರಸವೇ ಶ್ರೇಷ್ಠ ಲಭ್ಯವಿಲ್ಲದಲ್ಲಿ ಅದರ ಗಡ್ಡೆಯ ಚೂರ್ಣವನ್ನು ನೀರಿನಲ್ಲಿ ೧೨ ತಾಸುಗಳವರೆಗೆ ನೆನೆಸಿ ನಂತರ ಅದನ್ನು ಕುದಿಸಿಕೊಂಡು ಅದಕ್ಕೆ ಸಕ್ಕರೆ ಹಾಲು ಸೇರಿಸಿ ತೆಗೆದುಕೊಳ್ಳಬೇಕು. ಇದು ಬಾಣಂತಿಯರಿಗೆ ಒಳ್ಳೆ ಎದೆಹಾಲನ್ನು ಬರಿಸುವುದು.
 • ಈ ಬೇರಿನಲ್ಲಿ ಎದೆ ಉರಿ, ಆಮ್ಲಪಿತ್ತ, ಜಠರವ್ರಣಗಳನ್ನು ಕಡಿಮೆ ಮಾಡುವ ಗುಣವಿದೆ ಎಂದು ಕಂಡುಬಂದಿದೆ.
 • ಇದರ ಪುಡಿಯನ್ನು ಹಾಲು-ಸಕ್ಕರೆಯೊಡನೆ ನಿತ್ಯ ಬೆಳಿಗ್ಗೆ ಸೇವಿಸಿದರೆ ಪೌಷ್ಟಿಕವಾಗಿ ಪರಿಣಮಿಸುವುದು. ಗರ್ಭಿಣಿಯರಿಗೆ ಉತ್ತಮ ಸಂತಾನ ಪ್ರಾಪ್ತಿಯಾಗುವುದು.
 • ಹೃದ್ರೋಗ, ರಕ್ತಪಿತ್ತ(ರಕ್ತದೊತ್ತಡ) ವಿಕಾರಗಳಲ್ಲಿ ಶತಾವರಿಯು ಶ್ರೇಷ್ಠವೆನಿಸಿದೆ.
 • ಶುಕ್ರಧಾತು ಕ್ಷೀಣತೆಯಲ್ಲಿ ಒಳ್ಳೆಯದು.
 • ಸ್ತ್ರೀಯರಲ್ಲಿ ರಕ್ತಪ್ರದರ, ಗರ್ಭಸ್ರಾವ ಮುಂತಾದ ವಿಕಾರಗಳಲ್ಲಿ ಚೆನ್ನಾಗಿ ಕೆಲಸ ಮಾಡುವುದು.

ಪ್ರಮಾಣ :

ರಸ ೧೦ ರಿಂದ ೨೦ ಮಿ.ಲೀ
ಕಷಾಯ ೫೦ ರಿಂದ ೧೦೦ ಮಿ.ಲೀ
ಚೂರ್ಣ ೩ ರಿಂದ ೬ ಗ್ರಾಂ

ಯೋಗಗಳು: ಶತಾವರಿ ಘೃತ, ನಾರಾಯಣ ತೈಲ, ಶತಾವರಿ ರಸಾಯನ, ಶತಾವರೆಕ್ಸ ಪುಡಿ.

೩೩. ಶುಂಠಿ (ವಿಶ್ವಭೇಷಜ)( Zingiber Offic, Nale Rosc)

ಪ್ರತಿ ಅಡಿಗೆ ಮನೆಯಲ್ಲೂ ಶುಂಠಿ ಇದ್ದೇ ಇರುತ್ತದೆ. ನೆಗಡಿ, ಕೆಮ್ಮುಗಳಾದಾಗ ಶುಂಠಿ ಕಷಾಯ ಮಾಡಿಕೊಂಡು ಕುಡಿಯುವ ರೂಢಿ ಇದೆ.

ಶುಂಠಿಯು ಏಕದಳ ಸಸ್ಯ ಕುಟುಂಬಕ್ಕೆ ಸೇರಿದೆ. ಸಸಿಯು ಬಹುವಾರ್ಷಿಕ ಮಾದರಿಯದು. ಶುಂಠಿಯ ಕಾಂಡವನ್ನು ಮಳೆಗಾಲದಲ್ಲಿ ಭೂಮಿಯಲ್ಲಿ ನೆಟ್ಟರೆ ಚೆನ್ನಾಗಿ ಬೆಳೆಯುವುದು. ಇದು ಉಷ್ಣ ಹಾಗೂ ಅರ್ದ್ರ ಹವಾಮಾನಗಳಲ್ಲಿ ವಿಶೇಷವಾಗಿ ಬೆಳೆಯುವುದು. ಕೇರಳದಲ್ಲಿ ಈ ಶುಂಠಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಈ ಶುಂಠಿಯಲ್ಲಿ ಜಿಂಜಿರಾಲ್ ಎಂಬ ಕಾರದ ಜಾತಿಯ ರಸಾಯನವಿದೆ. ಇದರಿಂದ ತೈಲವನ್ನು ತೆಗೆಯುತ್ತಾರೆ.

ಒಣ ಶುಂಠಿಯು ಕಾರ, ವಿಪಾಕದಲ್ಲಿ ಸಹಿ, ಉಷ್ಣ, ರುಚಿಕರ, ಮನೋಹರವಾದದ್ದು, ವೃಷ್ಯ, ಕಫವಾತಹರ , ಸ್ನೇಹವುಳ್ಳದ್ದು, ಲಘುವಾಗಿದ್ದು, ಅಗ್ನಿದೀಪನಕಾರಿಯಾಗಿದೆ.

ಹಸಿಶುಂಠಿಯಲ್ಲಿ ಈ ಮೇಲ್ಕಂಡ ಅಂಶಗಳು ಇರುವುವಲ್ಲದೆ ಸ್ವರ ಕೊಡುವ ಗುಣಿವೆ. ಇದು ಮಲಬದ್ಧತೆ, ಅನಾಹ ಹಾಗೂ ಹೊಟ್ಟೆನೋವನ್ನು ಕಡಿಮೆ ಮಾಡುವುದು.

 • ಶುಂಠಿಯು ಬಾಯಿಗೆ ರುಚಿಯನ್ನು ಕೊಡುವುದು. ಆಮವಾತವು ಇದರ ಸೇವನೆಯಿಂದ ಕಡಿಮೆ ಆಗುತ್ತದೆ. ಅನ್ನವನ್ನು ಜೀರ್ಣ ಮಾಡಿ ಅಗ್ನಿದೀಪನ ಮಾಡುವ ಗುಣವು ಶುಂಠಿಗಿದೆ.
 • ವಾಂತಿ, ದಮ್ಮು, ಕೆಮ್ಮು, ಹೊಟ್ಟೆನೋವು, ಹೃದ್ರೋಗ, ಬಾವು, ಹೊಟ್ಟೆಯುಬ್ಬರಗಳಲ್ಲಿ ಶುಂಠಿಯು ಒಳ್ಳೆ ಉಪಯುಕ್ತವೆನಿಸಿದೆ.
 • ಹಸಿಶುಂಠಿಯನ್ನು ಆಹಾರ ಪದಾರ್ಥಗಳಲ್ಲಿ ಸೇರಿರುವ ರೂಢಿ ಇದೆ. ಚಹದಲ್ಲಿಯೂ ಹಸಿಶುಂಠಿಯನ್ನು ಹಾಕುವ ಪದ್ಧತಿ ವಿಶೇಷವಾಗಿ ಉತ್ತರ ಭಾರತದಲ್ಲಿದೆ. ಶುಂಠಿ ಕಷಾಯವನ್ನು ಸಕ್ಕರೆ ಹಾಲು ಸೇರಿಸಿ ತಲೆತಿರುಗು, ಪಿತ್ತ ವಿಕಾರಗಳಾದಾಗ ಸೇವಿಸುವ ರೂಢಿ ಇದೆ. ಶುಂಠಿ ಪಾಕವನ್ನು ಮಾಡಿ ಕೆಮ್ಮು-ನೆಗಡಿಗಳಿಗೆ ಉಪಯೋಗಿಸಬಹುದು. ಇದನ್ನು ಮಕ್ಕಳಿಗೆ ತಿನ್ನಲು ಕೊಡಬಹುದು.
 • ತಲೆನೋವಿಗೆ ಶುಂಠಿಯನ್ನು ತೇಯ್ದು ಹಣೆಗೆ ಲೇಪಿಸಿಕೊಳ್ಳಬಹುದು. ಇದರಂತೆ ಆಮವಾತ, ಸಂದು ವಾತಗಳಿಗೂ ಮೇಲೆ ಲೇಪಿಸಬಹುದು. ಶೈತ್ಯ ವಿಕಾರದಲ್ಲಿ ಶುಂಠಿ ಚೂರ್ಣವನ್ನು ಎಣ್ಣೆಯಲ್ಲಿ ಸೇರಿಸಿ ಅಭ್ಯಂಗ ಮಾಡಿಸುವರು. ಬಾವಿಗೆ ಇದರ ಚೂರ್ಣವನ್ನು ಹಾಕು ಉದ್ಘರ್ಷಣ ಮಾಡುವರು.
 • ಹಸಿಶುಂಠಿ ರಸಕ್ಕೆ ( ಒಂಚು ಚಮಚ) ಅಷ್ಟೆ ಭಾಗ ಜೇನು ಸೇರಿಸಿ ಬೆಳಗಿನ ಹೊತ್ತು ನಿತ್ಯ ತೆಗೆದುಕೊಂಡರೆ ಅಮವಾತ, ಅಜೀರ್ಣ, ಶೀತ, ನೆಗಡಿಗಳು ದೂರವಾಗುವುವು.
 • ಒಣಶುಂಠಿ, ಅಮೃತಬಳ್ಳಿ ಮತ್ತು ಜೇಷ್ಠಮಧುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗಿ ಕಷಾಯ ಮಾಡಿಕೊಂಡು ಅದಕ್ಕೆ ಬೆಲ್ಲ ಸೇರಿಸಿ ನಿತ್ಯ ಬೆಳಿಗ್ಗೆ ಹಾಗು ಸಂಜೆ ತೆಗೆದುಕೊಂಡರೆ ಅಮವಾತ ಗುಣವಾಗುತ್ತದೆ.
 • ಬೆಣ್ಣೆ ತೆಗೆದ ಮಜ್ಜಿಗೆಗೆ ೨ ಚಮಚೆ ಹಸಿಶುಂಠಿ ರಸ ಮತ್ತು ಸೈಂಧವ ಲವಣ ಸೇರಿಸಿ ನಿತ್ಯ ತೆಗೆದುಕೊಂಡರೆ ದೇಹದಲ್ಲಿ ಕೊಬ್ಬಿನಂಶವು ಕಡಿಮೆ ಆಗುವುದು. ಜೀರ್ಣ, ಅಪಾನವಾಯು, ವಿಕಾರಗಳು ದೂರವಾಗುವುವು.
 • ಒಂದು ತುಂಡು ಶುಂಠಿ, ಒಂದು ಲವಂಗ, ಹರಳು ಉಪ್ಪು ಇವುಗಳನ್ನು ಬಾಯಿಯಲ್ಲಿಟ್ಟುಕೊಂಡು ಚಪ್ಪರಿಸುವುದರಿಂದ ಕೆಮ್ಮು, ಗಂಟಲು ಕೆರೆತ ಹೋಗುವುವು.

ಪ್ರಮಾಣ : ಹಸಿಶುಂಠಿ ಸ್ವರಸ ೫ ರಿಂದ ೧೦ ಮಿ.ಲೀ

ಶುಂಠಿಚೂರ್ಣ: ೧ ರಿಂದ ೨ ಗ್ರಾಂ

ಯೋಗ : ಆರ್ದ್ರಕ ಖಂಡ, ಸೌಭಾಗ್ಯ ಶುಂಠಿ ರಸಾಯನ, ಶುಂಠಿಪಾನಕ

ಸೂಚನೆ : ಜೈನಧರ್ಮದವರಿಗೆ ಹಸಿಶುಂಠಿ ಬಳಕೆಸಲ್ಲದು, ಒಣಶುಂಠಿ ಉಪಯೋಗಿಸಬಹುದು.

೩೪. ಸರ್ಪಗಂಧ (Rauwolfia Serpintina)

ಸರ್ಪಗಂಧವು ವಿಶೇಷವಾಗಿ ಎತ್ತರ ಪ್ರದೇಶಗಳಲ್ಲಿ ಗುಡ್ಡಗಾಡುಗಳಲ್ಲಿ ಬೆಳೆಯುವುದು. ಡೆಹರಾಡೂನ, ಶಿವಾಲಿಕ, ಅಸಾಮ, ಬಿಹಾರ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಇದರ ಕೃಷಿ ಮಾಡುವರು ಈ ಸುಂದರವಾದ ಚಿಕ್ಕ ಗಿಡ ತಿಳುವಾದ ದೇಟಿನೊಡನೆ ಹಾವಿನಂತೆ ಬೆಳೆಯುವುದು ಹಾಗು ಇದಕ್ಕೆ ಹಾವಿನ ವಾಸನೆ ಇರುವುದು. ಎಲೆಗಳು ೩ ರಿಂದ ೮ ಅಂಗುಲ ಉದ್ದ ಹಾಗೂ ೧.೫ ರಿಂದ ೨.೫ ಅಂಗುಲ ಅಗಲವಾಗಿರುವುವು. ಗುಲಾಬಿ ಇಲ್ಲವೆ ಬಿಳಿಬಣ್ಣದ ಹೂವುಗಳು ಗುಚ್ಛ-ಗುಚ್ಛವಾಗಿರುವುವು. ಚೆಕ್ಕೆಯು ಹಳದಿ ಧೂಳಿವರ್ಣವಾಗಿದ್ದು ಒಳಗಿನ ಕಾಷ್ಠವು ಬಿಳಿದಾಗಿರುವುದು. ರುಚಿಯಲ್ಲಿ ಅತಿ ಕಹಿ ಹಾಗು ವಾಸನೆರಹಿತವಾಗಿರುವುದು. ಬೇರನ್ನು ಮಾತ್ರ ಔಷಧವಾಗಿ ಉಪಯೋಗಿಸುತ್ತಾರೆ.

ಇದರ ಬೇರಿನಲ್ಲಿ ಒಂದು ವಿಧದ ಎಣ್ಣೆಯಂತಹ ರಾಳ ಹಾಗೂ ಸರ್ಪೆಂಟಾಯಿನ್, ಸರ್ಪೆಂಟಿನಾಯಿನ್ ಮೊದಲಾದ ಕ್ಷಾರಗಳಿರುತ್ತವೆ.

ಗುಣ : ರೂಕ್ಷ
ರಸ : ತಿಕ್ತ
ವಿಪಾಕ : ಕಟು
ವೀರ್ಯ: ಉಷ್ಣ

ಪ್ರಯೋಗಗಳು

 • ರಕ್ತದೊತ್ತಡ, ಹುಚ್ಚು, ಅನಿದ್ರೆ ಮೊದಲಾದ ಮಾನಸಿಕ ವಿಕಾರಗಳಿಗೆ ಇದೊಂದು ಅತ್ಯುತ್ತಮ ಔಷಧಿ ಎನಿಸಿದೆ.
 • ಜ್ವರ, ವಿಷನಾಶಕ, ಅತಿಸಾರ, ಉದರಶೂಲ, ವಿಷಮ ಜ್ವರ ಹಾಗೂ ಹೆರಿಗೆ ಕಾಲದಲ್ಲಾಗುವ ತೊಂದರೆಗಳಿಗೆ ಉಪಯುಕ್ತ.
 • ಹಾವು ಕಡಿದಾಗ ಇದರ ಮೂಲದ ರಸವನ್ನು ೨ ರಿಂದ ೪ ಚಮಚಗಳಷ್ಟು ಹೊಟ್ಟೆಯಲ್ಲಿ ಕೊಟ್ಟು ಮೇಲ್ಭಾಗಕ್ಕೂ ಹಚ್ಚಲು ಕೊಡಬೇಕು.
 • ಉನ್ಮಾದ(ಹುಚ್ಚು) ವಿಕಾರಕ್ಕೆ ಇದೊಂದು ಉತ್ತಮ ಔಷಧಿ ಎನಿಸಿದ್ದು, ಬಿಹಾರದಲ್ಲಿ ಇದನ್ನು ‘ಹುಚ್ಚಿನ ಬೇರು’ ಎಂದು ವಿಶೇಷವಾಗಿ ಬಳಸುತ್ತಾರೆ.

ಪ್ರಮಾಣ : ೧ ರಿಂದ ೨ ಗ್ರಾಂ

ವಿಶಿಷ್ಟ ಯೋಗ : ಸರ್ಪಗಂಧಾದಿ ಚೂರ್ಣ, ಸರ್ಪಗಂಧ ಯೋಗ, ಸರ್ಪಗಂಧ ವಟಿ.

೩೫. ತಾಲೀಸ ಪತ್ರ (Abies Webbiana Linn/Himalayam Silwar)

ಇದು ವಿಶೇಷವಾಗಿ ಉತ್ತರ ಪ್ರದೇಶಗಳಲ್ಲಿ ಬೆಳೆಯುವುದು. ಕಾಶ್ಮೀರ, ಪಂಜಾಬ, ಬೆಟ್ಟ ಪ್ರದೇಶಗಳು. ಬರ್ಮಾ, ಅಫಘಾನಿಸ್ಥಾನಗಳಲ್ಲಿ ೧೫೦ ಅಡಿಗಳ ಎತ್ತರ ಬೆಳೆಯುವುದು. ೧೦ ರಿಂದ ೧೨ ಅಡಿಗಳಷ್ಟು ದಪ್ಪಗಿರುವುದು ಹಾಗು ಬಿರುಸಾಗಿರುವುದು. ಚೆಕ್ಕೆಯು ತಿಳುವಾಗಿದ್ದು ಕೆಂಪು, ಖಾಕಿ ಬಣ್ಣದಿರುವುದು. ಕಪ್ಪು ಹಣ್ಣು ಬಣ್ಣದವಿದ್ದು ಗುಚ್ಛವಾಗಿದ್ದು ಒಂದರಿಂದ ಒಂದುವರೆ ಇಂಚು ಉದ್ದವಾಗಿ, ತಿಳುವಾಗಿ, ಚಪ್ಪಟೆಯಾಗಿರುವುವು. ಹೂವು ಚಿಕ್ಕವಾಗಿರುತ್ತವೆ. ಹಣ್ಣು ಬಿರುಸಾಗಿದ್ದು ಹಣ್ಣಾದ ಮೇಲೆ ಬೂದಿ ಬಣ್ಣಕ್ಕೆ ತಿರುಗುವುವು. ಒಣಗಿದ ಎಲೆಗಳನ್ನೇ ಔಷಧಕ್ಕಾಗಿ ಉಪಯೋಗಿಸುತ್ತಾರೆ. ಇದರಲ್ಲಿ ತೈಲಾಂಶವಿದೆ.

ಗುಣ : ಲಘು, ತೀಕ್ಷ್ಣ
ರಸ : ತಿಕ್ತ
ವಿಪಾಕ : ಮಧುರ
ವೀರ್ಯ : ಉಷ್ಣ

ಪ್ರಯೋಗ

 • ಇದರ ಉಪಯೋಗವು ಹಳೆದಾದ ಕೆಮ್ಮು, ಕ್ಷಯ, ಅಗ್ನಿಮಾಂದ್ಯ , ಅರುಚಿಗಳಲ್ಲಿ ವಿಶೇಷವಾಗಿ ಆಗುವುದು.
 • ಎಲೆಪುಡಿಯನ್ನು ಕಲ್ಲುಸಕ್ಕರೆ ಹಾಗೂ ಅಡಸಾಲ ಸ್ವರಸದೊಡನೆ ತೆಗೆದುಕೊಂಡರೆ ಕೆಮ್ಮು, ದಮ್ಮು , ಉಗುಳಿನಲ್ಲಿ ರಕ್ತ ಬರುವಿಕೆಗಳು ನಿಲ್ಲುತ್ತವೆ.

ಪ್ರಮಾಣ : ಚೂರ್ಣ ೧ ರಿಂದ ೨ ಗ್ರಾಂ

ವಿಶಿಷ್ಟ ಯೋಗ : ತಾಲೀಸಾದಿ ಚೂರ್ಣ, ತಾಲಿಸಾದಿ ವಟಿ.

೩೬. ಲಾಮಂಚ (ಉಶೀರ)(Vetiveria Zizanioi Descl)Nash

ಹುಲ್ಲಿನ ಜಾತಿಗೆ ಸೇರಿದ, ದಪ್ಪ ದರ್ಭೆಯಂತೆ ಕಾಣುವ ಬಹುವಾರ್ಷಿಕ ಸಸ್ಯ. ನಸುಹಳದಿಯ ಉದ್ದವಾದ ಬೇರಿಗೆ ತುಂಬ ಸುವಾಸನೆ ಇರುತ್ತದೆ. ಇದನ್ನು ವಿಶೇಷವಾಗಿ ಮಣ್ಣಿನ ಸವಕಳಿಯನ್ನು ತಡೆಯಲು ದಂಡೆಗುಂಡ ಬೆಳೆಯುತ್ತಾರೆ. ಬೀಜ ಇಲ್ಲವೆ ಸಣ್ಣ ಗಿಡಗಳನ್ನು ನೆಡುವುದರ ಮೂಲಕ ಇಲ್ಲವೆ ಕುಂಡಲೆಗಳಲ್ಲೂ ಇದನ್ನು ಬೆಳಸಬಹುದು. ಹಾಕಿದ ವರ್ಷದ ನಂತರ ಬೇರು ದಪ್ಪನಾಗಿ ಔಷಧಕ್ಕೆ ಉಪಯೋಗಿಸಲು ಬರುತ್ತದೆ. ಚಾಪೆಯನ್ನು ತಯಾರಿಸಲು ಹುಲ್ಲನ್ನು ಉಪಯೋಗಿಸುತ್ತಾರೆ. ಈ ಹುಲ್ಲಿಗೆ ನೀರನ್ನು ಸಿಂಪಡಿಸುತ್ತಿದ್ದರೆ ಕೋಣೆಯಲ್ಲಿ ತಂಪು ಹಾಗೂ ಒಳ್ಳೆ ಸುವಾಸನೆ ಇರುತ್ತದೆ.

ಇದು ಉತ್ತಮ ಪಿತ್ತಶಾಮಕವೆನಿಸಿದೆ. ಬಾಯಾರಿಕೆ, ಜ್ವರ, ಮೈಉರಿ, ಬೆವರಿನ ವಾಸನೆಯನ್ನು ಹೋಗಲಾಡಿಸುವುದಲ್ಲದೆ, ರಕ್ತ ಶುದ್ಧಿಕಾರಕವೂ ಹೌದು. ಬೇರನ್ನು ಮಾತ್ರ ಔಷಧಕ್ಕಾಗಿ ಬಳಸಬೇಕು.

ಉಪಯೋಗಗಳು

೧. ಒಂದು ತಂಬಿಗೆ ನೀರಿನಲ್ಲಿ ೩-೪ ಚಮಚೆ ಒಣಗಿಸಿದ ಬೇರಿನ ಪುಡಿಯನ್ನು ಹಾಕಿ ೨-೩ ತಾಸುಗಳು ಬಿಟ್ಟು ೧೦ ಚಮಚೆಗಳಷ್ಟು ಕುಡಿದರೆ ರಕ್ತ ಮೂತ್ರತೆ, ಬಾಯಾರಿಕೆಗಳು ಕಡಿಮೆ ಆಗುತ್ತವೆ. ಈ ನೀರನ್ನು ಸರ್ಪಹುಣ್ಣು, ಗೊಬ್ಬರ(Measles)ಗಳಿಗೆ ಆಗಾಗ ಮೈಗೆ ಸಿಂಪಡಿಸುವುದರಿಂದ ಉರಿ ಕಡಿಮೆ ಆಗುತ್ತದೆ.

೨. ನುಣ್ಣಗಿನ ಪುಡಿಯನ್ನು ಶ್ರೀಗಂಧದೊಂದಿಗೆ ಅರೆದು ಬರುವ ಗಂಧವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ಕಡಿಮೆ ಆಗಿ ಕಾಂತಿ ಹೆಚ್ಚುತ್ತದೆ.

೩. ಲಾಮಂಚ ಶರಬತ್ತು – ಒಂದು ಲೋಟ ನೀರಿಗೆ ಒಂದೆರಡು ಚಮಚೆ ಪುಡಿಯನ್ನು ಹಾಕಿ ಅರ್ಧಕ್ಕೆ ಬರುವಂತೆ ಕುದಿಸಿಕೊಂಡು, ೧೫ ನಿಮಿಷ ಹಾಗೆ ಇಟ್ಟು ಆರಿದ ಬಳೀಕ ಸಕ್ಕರೆ ಸೇರಿಸಿ ದಿನಕ್ಕೆ ೩-೪ ಸರೆ ಕುಡಿದರೆ ಜ್ವರದ ತಾಪ, ಬಾಯಾರಿಕೆ, ಗಂಟಲು ಉರಿ, ಬಳಲಿಕೆ, ಹೊಟ್ಟೆಯಲ್ಲಿನ ಸಂಕಟ ಮುಂತಾದವುಗಳು ಕಡಿಮೆ ಆಗುತ್ತವೆ.

೪. ಬೇರಿನ ಚೂರ್ಣ, ಎಳ್ಳಣ್ಣೆ ಹಾಕಿ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡರೆ ಕೂದಲುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಹಾಗೂ ಕಣ್ಣುಗಳಿಗೂ ತಂಪಾಗುತ್ತದೆ. ಈ ಎಣ್ಣೆ ಸುವಾಸನೆಯುಕ್ತವಾಗಿರುತ್ತದೆ.

೩೭. ಮಂಜಿಷ್ಠ (Rubia Cordifolia Linn)

ಭಾರತದ ಪರ್ವತ ಪ್ರದೇಶ, ಪಶ್ಚಿಮೋತ್ತರ ಭಾಗ, ಪೂರ್ವ ನೀಲಗಿರಿ ಬೆಟ್ಟಗಳು, ನೇಪಾಳ, ಸಿಲೋನ, ಮಲೇಸಿಯಾ ಮೊದಲಾದ ಪ್ರದೇಶಗಳಲ್ಲೆಲ್ಲ ಹರಡಿರುವ ಬಳ್ಳಿ ಸ್ವರೂಪದ ಸಸ್ಯವಿದು. ಭೂಮಿಯಲ್ಲಿ ಇದರ ಬೇರುಗಳು ದೂರದವರೆಗೆ ಹರಡಿರುವುವು. ಚೆಕ್ಕೆಯು ಮೇಲ್ಭಾಗಕ್ಕೆ ಬಿಳಿ ಹಾಗೂ ಒಳಭಾಗಗಳಲ್ಲಿ ಕೆಂಪು ಇರುವುದು. ಇದು ಅನೇಕ ಶಾಖೆಗಳಾಗಿ ಗಿಡದ ಮೇಲೆಲ್ಲ ಹರಡುವುದು. ಬಿಳಿ ವರ್ಣದ ಗುಚ್ಚು-ಗುಚ್ಚಾಗಿ ಹೂವುಗಳಾಗಿವುವು. ಹಣ್ಣು ಕಪ್ಪಾಗಿ ಕಡ್ಲಿ, ಕಾಳಿನಂತಿರುವುದು. ಬೇರನ್ನು ಮಾತ್ರ ಔಷಧಕ್ಕಾಗಿ ಉಪಯೋಗಿಸುತ್ತಾರೆ. ಮೂಲದಲ್ಲಿ ರಾಳ, ಅಂಟು, ಸಕ್ಕರೆ, ಕ್ಯಾಲ್ಸಿಯಂ ಹಾಗು ರಂಜಕಾಂಶಗಳಿವೆ. ರಂಜಕ ದ್ರವ್ಯದಲ್ಲಿ ಪರ್ಪುರಿನ್, ಮಂಜಿಷ್ಟಿನ್, ಗರಾನ್ಸಿನ್, ಅಲಝರಿನ್ ಹಾಗು ಝಂಥಿನ್ ಅಂಶಗಳು ಇವೆ.

ಗುಣ : ಗುರು, ರೂಕ್ಷ
ರಸ: ತಿಕ್ತ, ಕಷಾಯ, ಮಧುರ
ವೀರ್ಯ : ಉಷ್ಣ
ವಿಪಾಕ: ಕಟು

ಪ್ರಯೋಗಗಳು

 • ಇದು ಮುಖ್ಯವಾಗಿ ರಕ್ತ ಶೋಧಕ, ಗ್ರಾಹಿ, ಪೌಷ್ಟಿಕ, ಬಾವನ್ನಿಳಿಸುವುದು, ಗರ್ಭಾಶಯ ಸಂಕೋಚ ಮಾಡುವುದು, ಚರ್ಮರೋಗಗಳನ್ನು ನಿವಾರಿಸುವುದು, ನೋವನ್ನು ಕಡಿಮೆ ಮಾಡುವುದು. ಮೂತ್ರ ಮತ್ತು ಭೇದಿಗಳನ್ನುಂಟು ಮಾಡುವುದು ಹೀಗೆ- ಅನೇಕ ವಿಧ ಕೆಲಸ ಮಾಡುವುದು. ವಿಶೇಷವಾಗಿ ಇದನ್ನು ಎಲ್ಲ ವಿಧ ಚರ್ಮ ರೋಗಗಳಲ್ಲಿ ಉಪಯೋಗ ಮಾಡುತ್ತಾರೆ.
 • ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಸರಿಯಾಗಿ ಆಗುತ್ತಿಲ್ಲವಾದರೆ ಇದರ ಅಷ್ಟಮಾಂಶ ಕಷಾಯ ಸಿದ್ಧಪಡಿಸಿ ಕುಡಿಸಬೇಕು.
 • ಹೊಲಸು ವಾಸನೆಯ ಮೂತ್ರ ಬರುತ್ತಿದ್ದರೆ ಮಂಜಿಷ್ಟದೊಡನೆ ಚಂದನ ಸೇರಿಸಿ ಕಷಾಯ ಮಾಡಿಕೊಂಡಬೇಕು.
 • ಎಲುಬು ಮುರಿದಾಗ ಮಂಜಿಷ್ಠ+ಜೇಷ್ಠಮಧುವಿನ ಚೂರ್ಣಗಳನ್ನು ನೀರಿನಲ್ಲಿ ಕಲಿಸಿ ಮೇಲ್ಭಾಗಕ್ಕೆ ಹಚ್ಚಬೇಕು.
 • ಸುಟ್ಟ ಗಾಯದಲ್ಲಿ ಮಂಜಿಷ್ಠಾದಿ ಘೃತವನ್ನು ಹಚ್ಚಿದರೆ ವ್ರಣವು ಬೇಗನೆ ಕಡಿಮೆ ಆಗುವುದು ಹಾಗು ಗಾಯದ ಕಲೆ ಬೀಳುವುದಿಲ್ಲ.

ಪ್ರಮಾಣ :

ಚೂರ್ಣ :೨೫೦ ರಿಂದ ೫೦೦ ಮಿಲಿ.ಗ್ರಾಂ
ಕಷಾಯ: ೪ ರಿಂದ ೬ ಚಮಚೆಗಳು

ವಿಶಿಷ್ಟ ಯೋಗ: ಮಹಾಮಂಜಿಷ್ಟಾದಿ ಕಾಢಾ/ರಿಷ್ಟ, ಮಂಜಿಷ್ಠಾದಿ ಚೂರ್ಣ

೩೮. ಚಿರಾಯಿತ (Swertia Chirata/Chiretta)

ಇದಕ್ಕೆ ಕಿರಾತ ತಿಕ್ತ ಎಂತಲೂ ಕರೆಯುವರು ಇದು ಛಳಿಜ್ವರಕ್ಕೊಂದು ಉತ್ತಮ ಔಷಧಿ ಎನಿಸಿದೆ. ಹಿಮಾಲಯ ಭಾಗದ ಉಷ್ಣ ಪ್ರದೇಶಲಗಳಲ್ಲೆ ಬೆಳೆಯುವುದು. ಇದರಲ್ಲಿ ಸುಮಾರು ೧೮೦ ಪ್ರಭೇದಗಳಿವೆ. ಭಾರತದಲ್ಲಿ ೩೭ ನಮೂನೆಗಳು ಲಭ್ಯವಿದೆ. ಇದು ಒಂದು ವರ್ಷ ಮಾತ್ರ ಬದುಕಿರುವುದು. ೨ ರಿಂದ ೫ ಅಡಿಗಳವರೆಗೆ ಎತ್ತರವಾಗಿ ಪೊದೆಯಂತೆ ಬೆಳೆಯುವುದು. ಕಾಂಡವು ಕಿತ್ತಳೆ ಇಲ್ಲವೆ ನೇರಳೆ ಬಣ್ಣದ್ದಾಗಿರುವುದು. ಅನೇಕ ಟೊಂಗೆಗಳಿರುವುವು. ಎಲೆಗಳು ಬೇವಿನೆಲೆಯಂತೆ ಹಸಿರು ವರ್ಣವಾಗಿದ್ದು ೩ ರಿಂದ ೪ ಅಂಗುಲದಷ್ಟು ಉದ್ದವಾಗಿರುವುವು. ಹೂವುಗಳು ಹಸಿರು ಹಳದಿ ಬಣ್ಣದ್ದಿರುವುವು. ಬೀಜಗಳು ಅತಿ ಸಣ್ಣವಿರುವುವು. ಚಿರಾಯಿತದ ಪಂಚಾಂಗಗಳು ಔಷಧಕ್ಕೆ ಉಪಯುಕ್ತವೆನಿಸಿವೆ.

ಚಿರಾಯಿತದಲ್ಲಿ ಒಫೇಲಿಕ್ ಆಮ್ಲ, ಯವಕ್ಷಾರ, ಕ್ಯಾಲ್ಸಿಯಂ, ರಾಳ ಮುಂತಾದ ರಾಸಾಯನಿಕ ಪದಾರ್ಥಗಳಿರುತ್ತವೆ.

ಗುಣ : ಲಘು, ರೂಕ್ಷ
ರಸ: ಕಟು, ತಿಕ್ತ
ವಿಪಾಕ : ಕಟು
ವೀರ್ಯ : ಶೀತ

ಪ್ರಯೋಗ : ಚಿರಾಯಿತವು ದೀಪಕ, ಪಾಚಕ, ಜ್ವರಹರ, ದಾಹ ಪ್ರಶಮಕ, ಪಿತ್ತ ವಿರೇಚಕ ಹಾಗೂ ಕೃಮಿಘ್ನವೆನಿಸಿದೆ. ಇದರ ಪ್ರಯೋಗದಿಂದ ಹಸಿರು ಹೆಚ್ಚುತ್ತದೆ ಹಾಗೂ ಮಲವಿಸರ್ಜನೆ ಸರಿ ಆಗುತ್ತದೆ. ಹಾಗೂ ಜ್ವರ, ಛಳಿಗಳು ಬೇಗನೆ ಇಳಿಯುತ್ತವೆ. ಜೀರ್ಣ ಜ್ವರಗಳಲ್ಲಿ ಹೆಚ್ಚು ಉಪಯುಕ್ತ.

 • ಚಿರಾಯಿತ ಕಷಾಯವು ಮಲೇರಿಯಾ ಜ್ವರಗಳಲ್ಲಿ ಪರಿಣಾಮಕಾರಿ ಎನಿಸಿದೆ.
 • ಮಕ್ಕಳ ಯಕೃತ್ ತೊಂದರೆಗಳಿಗೆ ಚಿರಾಯಿತದ ಸ್ವರಸವನ್ನು ೧ ರಿಂದ ೨ ಚಮಚಗಳಷ್ಟು ಬೆಳಿಗ್ಗೆ-ರಾತ್ರಿ ಕೊಡಬೇಕು.
 • ಕಾಮಿಣಿ ರೋಗದಲ್ಲಿ ಚಿರಾಯಿತ, ದ್ರಾಕ್ಷಿ ಹಾಗೂ ಹರೀತಕಿಗಳ ಕಷಾಯ ಉಪಯುಕ್ತವೆನಿಸಿದೆ.
 • ಮೈ ಉರಿಯುವಂತಾಗಿದ್ದರೆ ಚಿರಾಯಿತ ಕಷಾಯವನ್ನು ನಿತ್ಯ ೧೫-೩೦ ಮಿ.ಲೀ. ಎರಡು ಸಾರೆ ತೆಗೆದುಕೊಳ್ಳಬೇಕು.

ಪ್ರಮಾಣ :

ಚೂರ್ಣ ೨.೫ ಗ್ರಾಂ ದಿಂದ ೫ ಗ್ರಾಂ
ಕಷಾಯ ೫೦ ರಿಂದ ೧೦೦ಮಿ.ಲೀ

ವಿಶಿಷ್ಟ ಯೋಗ: ಸುದರ್ಶನ ಚೂರ್ಣ, ಕಿರಾತಾದಿ ಕ್ವಾಥ

೩೯. ಪುನರ್ನವಾ (Beorhaavia Diffusa Linn)

ಕನ್ನಡದಲ್ಲಿ ಇದಕ್ಕೆ ಕೊಮ್ಮೆ ಗಿಡ ಎನ್ನುತ್ತಾರೆ. ಸಾಮಾನ್ಯವಾಗಿ ಹೊಲ, ಗದ್ದೆ, ಬಯಲು ಪ್ರದೇಶಗಳಲ್ಲಿ ಕಂಡುಬರುವ ನೆಲದಲ್ಲಿಯೇ ಹರಡುವ ಗಿಡ. ಬಹುವರ್ಷಾಲು ಸಸ್ಯ. ಮಳೆಗಾಲದಲ್ಲಿ ಚಿಗರಿ ಚನ್ನಾಗಿ ಬೆಳೆದು ಬೇಸಿಗೆಯಲ್ಲಿ ಮುರುಟಿ ಹೋಗುವ ಗಿಡ. ಬೀಜ ಹಾಕಿ ಕುಂಡಲೆಗಳಲ್ಲೂ ಬೆಳೆಸಬಹುದು. ರೋಗಗಳನ್ನು ಹೊರ ಹಾಕಿ, ಶಕ್ತಿ ಪುಷ್ಟಿಗಳನ್ನು ಹೆಚ್ಚಿಸಿ ಶರೀರವನ್ನು ಪುನಃ ಹೊಸದನ್ನಾಗಿ ಮಾಡುವುದರಿಂದ ಇದಕ್ಕೆ “ಪುನರ್ನವಾ” ಎಂದು ಸಂಸ್ಕೃತದಲ್ಲಿ ಕರೆದಿದ್ದಾರೆ. ಇದು ಮುಖ್ಯವಾಗಿ ಮೈಯಲ್ಲಿಯ ಬಾವನ್ನು ಇಳಿಸುವುದು. ಶರೀರದಲ್ಲಿ ಹಲವಾರು ಕಾರಣಗಳಿಂದ ನೀರಿನಂಶ ಹೆಚ್ಚಾಗಿ ಬಾವು ಬಂದಾಗ ಅದನ್ನು ಇಳಿಸುವುದು.

ಇದರಲ್ಲಿ ಪುರ್ವವಿನ್ ಎಂಬ ಕ್ಷಾರ, ಪೋಟ್ಯಾಶಿಯಂ ನೈಟ್ರೇಟ್, ಸಲ್ಫೇಟ್ ಕ್ಲೋರಾಯ್ಡ ಹಾಗೂ ತೈಲಾಂಶಗಳಿರುತ್ತವೆ.

ಗುಣ : ರೂಕ್ಷ, ಲಘು
ರಸ: ಮಧುರ, ತಿಕ್ತ, ಕಷಾಯ
ವಿಪಾಕ : ಮಧುರ
ವೀರ್ಯ : ಉಷ್ಣ

ಪ್ರಯೋಗಗಳು: ಇದರ ಉಪಯೋಗವು ವಿಶೇಷವಾಗಿ ಶರೀರದ ಸರ್ವಾಂಗ ಬಾವು, ಕೆಲ ಭಾಗಗಳಲ್ಲಿ ಮಾತ್ರ ಬಾವು, ಉದರದಲ್ಲಿ ನೀರು ತುಂಬುವುದು, ಕಾಮಿಣಿ, ಮೂತ್ರದ ಪ್ರಮಾಣ ಕಡಿಮೆ ಆಗುವುದು, ಪಾಂಡುರೋಗ, ಹೃದಯರೋಗ(ಹೃದಯ ಬಾವು) ದಮ್ಮು, ಎದೆಗೆ ಪೆಟ್ಟು, ವಿಷ ವಿಕಾರಗಳು ಹಾಗು ಕೆಲ ನೇತ್ರ ರೋಗಗಳಲ್ಲಿ ಉಪಯೋಗವಾಗುತ್ತದೆ.

 • ಶುದ್ಧಿ ಮಾಡಿದ ಬೆರಳಿನಷ್ಟು ದಪ್ಪನಾದ ಬೇರನ್ನು ಜಜ್ಜಿರಸ ತೆಗೆಯಬೇಕು. ಈ ರಸವನ್ನು ೨-೩ ಚಮಚೆಗಳಷ್ಟು ಊಟಕ್ಕೆ ಮೊದಲು ದಿನಾಲು ೨-೩ ಸಾರೆ ತೆಗೆದುಕೊಳ್ಳುವದರಿಂದ ಬಾವು ಇಳಿಯುವುದು. ಇದರಿಂದ ಮೂತ್ರ ಪಿಂಡಗಳ ಮೇಲೆ ಯಾವುದೇ ಒತ್ತಡ ಅಥವಾ ಅಪಾಯವಾಗುವುದಿಲ್ಲ. ಹಸಿ ಬೇರು ಇಲ್ಲದಿದ್ದಾಗ ಒಣ ಬೇರನ್ನು ಪುಡಿ ಮಾಡಿ ಉಪಯೋಗಿಸಬಹುದು.
 • ಜಠರ ಹುಣ್ಣುಗಳನ್ನು ಮಾಯಿಸಲು ಇದೊಂದು ಉತ್ತಮ ಔಷಧಿ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಮೇಲಿನಂತೆ ಬೇರನ್ನೇ ತೆಗೆದುಕೊಳ್ಳಬೇಕು.
 • ಎರಡು ಚಮಚೆ ರಸಕ್ಕೆ ಅರ್ಧ ಚಮಚೆ ಶುಂಠಿ ರಸ ಸೇರಿಸಿ ತೆಗೆದುಕೊಂಡರೆ ಕೆಮ್ಮು-ದಮ್ಮುಗಳಲ್ಲಿ ಉಪಯುಕ್ತ.
 • ಬೇರಿನ ೨ ಚಮಚೆ ರಸಕ್ಕೆ ಸಕ್ಕರೆ ಸೇರಿಸಿ ತೆಗೆದುಕೊಳ್ಳವುದರಿಂದ ರಕ್ತ ವೃದ್ಧಿಯಾಗುತ್ತದೆ. ಶರೀರದ ಬಲ-ಪುಷ್ಟಿಗಳು ಹೆಚ್ಚುತ್ತವೆ.

ಸೂಚನೆ : ಗರ್ಭಿಣಿಯರಿಗೆ ಪುನರ್ನವಾಸವವನ್ನು ಕೊಡಬಾರದು.

ಪ್ರಮಾಣ :

ಮೂಲ ಸ್ವರಸ ೨ ಚಮಚೆಗಳು
ಪತ್ರ ಸ್ವರಸ ೧೦ ರಿಂದ ೨೦ ಮಿ.ಲೀ

ವಿಶಿಷ್ಟ ಯೋಗ : ಪುನರ್ನವಾಸವ, ಪುನರ್ನವಾಮಂಡೂರ.

೪೦. ಜಟಾಮಾಂಸಿ (Nardostachys Jata Mansi D.C)

ಇದು ಹಿಮಾಚಲ ಹಾಗೂ ಭೂತಾನ ಪ್ರದೇಶಗಳಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಪೊದೆಗಿಡ ಬಹುವರ್ಷಾಯುವಾಗಿದೆ. ಇದರ ಕಾಂಡ ಗಟ್ಟಿಯಾಗಿರುವುದು ಹಾಗೂ ಅನೇಕ ಟೊಂಗೆಗಳಿದ್ದು ಅವುಗಳು ೬ ರಿಂದ ೮ ಅಂಗುಲ ದಪ್ಪವಾದ ರೋಮಗಳಿಂದ ತುಂಬಿರುವುವು. ಅದಕ್ಕೆ ಇದಕ್ಕೆ ‘ಜಟಾಮಾಂಸಿ’ ಎಂದು ಹೆಸರು ಬಂದಿದೆ. ಇದರಲ್ಲಿ ಬಿಳಿ ಇಲ್ಲವೆ ಗುಲಾಬಿ ಬಣ್ಣದ ಹೂವುಗಳಾಗುವುವು. ಈ ಸಸ್ಯ ಸುವಾಸಿತವಾಗಿರುವುದು. ಮನೋವಿಕಾರಗಳಲ್ಲಿ ತುಂಬ ಪರಿಣಾಮಕಾರಿ ಎನಿಸಿದೆ. ಇದರಲ್ಲಿ ಕರ್ಪೂರದ ವಾಸನೆಯಂತಹ ಎಣ್ಣೆ ಇರುವುದು. ಇದರಲ್ಲಿ ಈಸ್ಟರ್, ಆಲ್ಕೋಹಾಲ್, ಸೆಸ್ಕೀಟರ್ಪೇನ್, ಹೈಡ್ರೊಕಾರ್ಬನ್, ಇವುಗಳಲ್ಲದೆ ಅಮ್ಲೀಯದ್ರವ್ಯ ಹಾಗೂ ರಾಳಗಳು ಇರುತ್ತವೆ.

ಗುಣ : ಲಘು, ತೀಕ್ಷ್ಣ, ಸ್ನಿಗ್ಧ
ರಸ : ತಿಕ್ತ, ಕಷಾಯ, ಮಧುರ
ವಿಪಾಕ: ಕಟು
ವೀರ್ಯ: ಶೀತ

ಪ್ರಭಾವ : ಮನೋರೋಗ ಶಾಮಕ

ಪ್ರಯೋಗಗಳು

 • ತಲೆನೋವು ಅಪತಂತ್ರಕ (Hysteria) ಮಾನಸಿಕ ಆಘಾತಗಳು, ಎದೆ ಬಡಿತ ಹೆಚ್ಚಾಗುವಿಕೆ, ಅಪಸ್ಮಾರ ಹಾಗೂ ಆಕ್ಷೇಪಗಳಲ್ಲಿ ಇದರ ಫಾಂಟವನ್ನು ಉಪಯೋಗಿಸುವುದರಿಂದ ತುಂಬ ಲಾಭವಾಗುತ್ತದೆ.
 • ಆಧ್ಮಾನ, ಉದರಶೂಲ ಹಾಗೂ ಅಮಾಶಯ ಸಂಬಂಧಿತ ನೋವುಗಳಲ್ಲಿ ಜಟಾಮಾಂಸಿ ೪ ಗ್ರಾಂ, ದಾಲಚಿನ್ನಿ ೧ ಗ್ರಾಂ, ಚೀನಿ ಸಕ್ಕರೆ ೧ ಗ್ರಾಂ, ಬಡೆಸೊಪ್ಪು ೧ ಗ್ರಾಂ, ಮಿಶ್ರಿ ೮ ಗ್ರಾಂ ಇವುಗಳನ್ನು ಚೆನ್ನಾಗಿ ಚೂರ್ಣಸಿಕೊಂಡು ೩ ರಿಂದ ೮ ಗ್ರಾಂ.ದಷ್ಟು ತೆಗೆದುಕೊಂಡರೆ ಗುಣವಾಗುವುದು.
 • ಸ್ತ್ರೀಯರ ಋತುಕಾಲದಲ್ಲಾಗುವ ಹೊಟ್ಟೆನೋವು ಇದರ ಸೇವನೆಯಿಂದ ಕಡಿಮೆ ಆಗುವುದು.
 • ತುಂಬ ಉರಿ, ನೋವುಗಳಿಗೆ ಮೇಲೆ ಎಲೆಯ ಕಲ್ಕದ ಲೇಪ ಹಾಕಿದರೆ ಗುಣವಾಗುವುದು.
 • ಬೆವರು ಹೆಚ್ಚಿಗೆ ಬರುತ್ತಿದ್ದರೆ ಇದರ ಚೂರ್ಣವನ್ನು ಪೌಡರಿನಂತೆ ಮೈಮೇಲೆ ಧೂಳಿಸಿ ಕೊಳ್ಳಬಹುದು.

ಪ್ರಯೋಗ : ಅಂಗ – ಬೇರು

ಪ್ರಮಾಣ : ೫೦೦ ಮಿ.ಲಿ.ಗ್ರಾಂ – ೧ ಗ್ರಾಂ.

ವಿಶಿಷ್ಟ ಯೋಗ: ಮಾಂಸ್ಯಾದಿ ಕ್ವಾಥ, ರಸೋಘ್ನ ಘೃತ, ಸರ್ಪಾಷಧಿ ಸ್ನಾನ (ಮನಃ ಸಮಾಧಾನಕರ, ಬುದ್ಧಿವರ್ಧಕೌಷಧಿಗಳೆಲ್ಲೆಲ್ಲ ಸಾಮಾನ್ಯವಾಗಿ ಜಟಮಾಂಸಿ ಸೇರಿರುತ್ತದೆ.)