೧೪. ಚಂದನ (ಶ್ರೀಗಂಧ)(Santalum Album Linn)

ಶ್ರೀಗಂಧ, ಗಂಧವೆಂದೇ ಈ ಚಂದನವು ಪ್ರಸಿದ್ಧವಿದ್ದು ಒಳ್ಳೆ ಸುವಾಸನೆಗೆ ಕಟ್ಟಡ, ಮೂರ್ತಿಗಳ ವಿನ್ಯಾಸಕ್ಕೆ, ಔಷಧಿಗೆ ದೇವರಿಗೆ ಗಂಧ ಲೇಪಿಸಲು – ಹೀಗೆ ಬಹು ಉಪಯುಕ್ತವೆನಿಸಿದೆ. ಕರ್ನಾಟಕ, ತಮಿಳುನಾಡು, ಮಲಬಾರಗಳಲ್ಲಿ ವಿಶೇಷವಾಗಿ ಬೆಳೆಯುವುದು. ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧ ಮರದಲ್ಲಿ ಹೆಚ್ಚಾಗಿ ತೈಲಾಂಶವು ದೊರಕುವುದು. ಇವುಗಳಲ್ಲಿ ರಕ್ತ ಚಂದನ – ಬಿಳಿಚಂದನ ಎಂದು ಎರಡು ನಮುನೆಗಳಿವೆ.

ಶ್ರೀಗಂಧ ಗಿಡವು ಸುಮಾರು ೩೦ ರಿಂದ ೪೦ ಅಡಿ ಎತ್ತರದವರೆಗೆ ಬೆಳೆಯುವುದು. ಇದರ ಕಾಂಡದಲ್ಲಿ ೧೦%ವರೆಗೆ ಎಣ್ಣೆ ಸಿಕ್ಕುವುದು. ಒಂದು ಕಿಲೋ ಶ್ರೀಗಂಧದ ಕಟ್ಟಿಗೆಯಲ್ಲಿ ೧೦೦ ಮಿ.ಲಿ ಎಣ್ಣೆ ಬರುವುದು. ತೈಲಾಂಶವು ಹಳದಿ ವರ್ಣವುಳ್ಳದಾಗಿದ್ದು, ಗಟ್ಟಿಯಾಗಿ, ತೀಕ್ಷ್ಣ ವಾಸನೆಯುಳ್ಳದ್ದಾಗಿದೆ. ರುಚಿಯಲ್ಲಿ ಕಾರ-ಕಹಿಯಾಗಿರುವುದು. ಈ ತೈಲದಲ್ಲಿ ಸೆಂಟಲಾಲ್ ಎಂಬ ಅಂಶವು ೯೦% ಇರುವುದು. ಬೀಜಗಳಲ್ಲಿ ೫೦ ರಿಂದ ೫೫% ಕೆಂಪು ವರ್ಣದ ಗಟ್ಟಿಯಾದ ತೈಲ ದೊರಕುವುದು.

ಗುಣ: ಲಘು, ರೂಕ್ಷ
ರಸ: ತಿಕ್ತ, ಮಧುರ
ವಿಪಾಕ:ಕಟು ವೀರ್ಯ: ಶೀತ
ದೋಷಕರ್ಮ : ಕಫ, ಪಿತ್ತನಾಶಕವೆನಿಸಿದೆ.

ಶ್ರೀಗಂಧವು ದೇಹದಲ್ಲಿ ಉರಿಯನ್ನು ಕಡಿಮೆ ಮಾಡಲು, ಮೈ-ಕೈಗಳ ನೋವನ್ನು ಕಡಿಮೆ ಮಾಡಲು, ನೀರಡಿಕೆಯನ್ನು ಕಡಿಮೆ ಮಾಡಲು, ದೇಹಕ್ಕೆ ಒಳ್ಳೆಕಾಂತಿ – ಬಣ್ಣವನ್ನು ಕೊಡಲು, ಮೈ ಕೆರೆತವನ್ನು ಕಡಿಮೆ ಮಾಡಲು, ವಿಷ ದೋಷವನ್ನು ಹರಣ ಮಾಡಲು ಉಪಯುಕ್ತವೆನಿಸಿದೆ. ಮಿದುಳಿಗೆ ಹೃದಯಕ್ಕೆ ಶಕ್ತಿಯನ್ನು ಕೊಡುವುದು. ರಕ್ತಶೋಧಕ, ಪಿತ್ತಶಾಮಕವೆನಿಸಿದೆ.

ಪ್ರಯೋಗಗಳು: ಶ್ರೀಗಂಧವನ್ನು ಲೇಪಿಸಿಕೊಳ್ಳುವುದರಿಂದ ಪಿತ್ತ ಸಂಬಂಧಿತ ತಲೆನೋವು, ದಾಹ, ವಿಸರ್ಪ ಹಾಗೂ ಇತರ ಚರ್ಮವಿಕಾರಗಳು, ಬಣ್ಣ ಬದಲಾವಣೆ ಶರೀರದಿಂದ ಹೊರಸೂಸುತ್ತಿರುವ ದುರ್ಗಂಧ ಇವು ದೂರವಾಗುವುವು.

 • ಮೂತ್ರ ಸರಿಯಾಗಿ ಹೋಗದಿರುವುದು. ಮೂತ್ರದಲ್ಲಿ ಕೀವು ಹೋಗುವಿಕೆಗಳನ್ನು ಕಡಿಮೆ ಮಾಡುವುದು.
 • ಹಳೆಯ ಕೆಮ್ಮಿನಲ್ಲಿ ಉಪಯುಕ್ತವೆನಿಸಿದೆ. ಇದರಿಂದ ಕಫವು ಸರಳವಾಗಿ ಹೊರಹೋಗುವುದಲ್ಲದೆ ಇದರೊಡನೆ ಬರುವ ರಕ್ತ-ಕೀವುಗಳು ನಿಲ್ಲುವುದು.
 • ದೇಹದಲ್ಲಿ ದುರ್ಗಂಧ ವಾಸನೆ ಇದ್ದರೂ ಅದು ಕೂಡ ಕಡಿಮೆ ಆಗುವುದು.
 • ಸ್ತ್ರೀಯರಲ್ಲಿ ರಕ್ತ ಪ್ರದರ, ಬಿಳಿಮು‌ಟ್ಟುಗಳಿಗೂ ಉಪಯುಕ್ತವೆನಿಸಿದೆ.

ಪ್ರಮಾಣ:

ಚೂರ್ಣ ೩ ರಿಂದ ೬ ಗ್ರಾಂ
ತೈಲ ೫ ರಿಂದ ೨೦ ಹನಿಗಳು.

ಯೋಗ: ಚಂದನಾದಿ ಚೂರ್ಣ, ಚಂದನಾದಿವಟಿ, ಚಂದನಾಸವ.

೧೫. ಚಿತ್ರಕ (Plumbago Zayanica Linne)

ಈ ಚಿತ್ರಕ ಬಳ್ಳಿ, ಕಾಮಿಣಿ ರೋಗಕ್ಕೆ ತುಂಬ ಪ್ರಸಿದ್ಧವಾಗಿದೆ. ತುಂಬ ಮೃದುವಾಗಿರುವ ಈ ಬಳ್ಳಿಯು ೨ ರಿಂದ ೪ ಅಡಿಗಳವರೆಗೆ ಬೆಳೆಯುವುದು, ಇದರ ಬಡ್ಡೆಯು ಅಂಗುಷ್ಟದಷ್ಟು ದಪ್ಪಗಿದ್ದು ಹೊರಗಿನ ಮೈ ಕಪ್ಪಾಗಿದ್ದರೂ ಒಳಗೆ ಬೆಳ್ಳಗಿರುತ್ತದೆ. ಇದರಲ್ಲಿ ಬಿಳಿ ಹಾಗೂ ಕೆಂಪುಗಳೆಂದು ಎರಡು ಭೇದಗಳಿವೆ. ತುದಿಯಲ್ಲಿ ಸುಂದರವಾದ ಬಳಿ ಅಥವಾ ಕೆಂಪು ಗೊಂಚಲು ಹೂವುಗಳನ್ನು ಬಿಡುವುದು. ಕೆಲವರು ನೀಲಿಬಣ್ಣದ ಚಿತ್ರಕ ಬಳ್ಳಿ ಇದೆ ಎಂದು ವರ್ಣಿಸಿದ್ದಾರೆ. ಇದು ದಕ್ಷಿಣ ಆಫ್ರಿಕ ಮೂಲದ್ದು ಈ ಚಿತ್ರಕ ಬಳ್ಳಿಯು ಭಾರತಾದ್ಯಂತ ಬೆಳೆಯುವುದಾದರೂ ವಿಶೇಷವಾಗಿ ಬಂಗಾಲ, ಉತ್ತರ ಪ್ರದೇಶ, ದಕ್ಷಿಣ ಭಾರತಗಳಲ್ಲಿ ಬೆಳೆಯುವುದು.

ಚಿತ್ರಕ ಬಳ್ಳಿಯ ಎಲ್ಲ ಅಂಗಗಳೂ ಔಷಧಿಯ ಮೌಲ್ಯ ಹೊಂದಿದೆ. ಇದರಲ್ಲಿ ಪ್ಲಂಬೆಗಿನ್ ಅಂಶವಿದೆ. ಕ್ರಿಮಿನಾಶಕ ಗುಣ ಹೊಂದಿದೆ. ಗಿಡವು ಹೆಚ್ಚು ಬಲಿತಂತೆ ಬೇರಿನಲ್ಲಿ ಔಷಧದ ಪ್ರಮಾಣ ಹೆಚ್ಚಾಗಿರುವುದು.

ಇದು ಔಷಧಕ್ಕೆ ಮಾತ್ರವಲ್ಲದೆ ಅಲಂಕಾರಿಕವಾಗಿಯೂ ಉಪಯುಕ್ತವೆನಿಸಿದೆ. ಮನೆಯ ಹೂತೋಟದಲ್ಲಿ ಬೆಳೆಸಬಹುದು.

ಗುಣ : ಲಘು, ರೂಕ್ಷ, ತೀಕ್ಷ್ಣ
ರಸ: ಕಟು
ವಿಪಾಕ : ಕಟು
ವೀರ್ಯ : ಉಷ್ಣ

ದೋಷ ಕರ್ಮ: ಇದು ಉಷ್ಣ ಹಾಗೂ ತೀಕ್ಷ್ಣವಾಗಿರುವುದರಿಂದ ಕಫ-ವಾತಗಳನ್ನು ಕಡಿಮೆ ಮಾಡುವುದು ಹಾಗೂ ಪಿತ್ತವನ್ನು ಬೆಳೆಸುವುದು, ಚರ್ಮಕ್ಕೆ ಸುಟ್ಟ ಗುಳ್ಳೆಯಂತೆ ಗುಳ್ಳೆಗಳೇವವು.

ಚಿತ್ರಕವು ಕಾರ, ಉಷ್ಣ ಹಾಗು ತೀಕ್ಷ್ಣವಾಗಿರುವುದರಿಂದ ದೀಪನ ಪಾಚನ, ಪಿತ್ತಸಾರಕ, ಗ್ರಾಹಿ ಹಾಗೂ ಕ್ರಿಮಿಘ್ನವೆನಿಸಿದೆ.

ಇದು ವಿಶೇಷವಾಗಿ ಗರ್ಭಾಶಯವನ್ನು ಸಂಕೋಚಗೊಳಿಸಿ ರಕ್ತಸ್ರಾವವನ್ನುಂಟು ಮಾಡುವುದು.

ಇದು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಮಾನಸಿಕ ಉತ್ತೇಜನ ದೊರಕುವುದು. ಇದು ನರಗಳ ನೋವನ್ನು ಕಡಿಮೆ ಮಾಡುವುದು. ಮೈ ಬೆವರುವ ಹಾಗೆ ಮಾಡಿ ಜ್ವರವನ್ನಿಳಿಸುವುದು. ಮೂತ್ರವರ್ಧಕವೆನಿಸಿದೆ. ಮೂಲವ್ಯಾಧಿಯನ್ನು ಕಡಿಮೆ ಮಾಡುವುದು. ಈ ಚಿತ್ರಕವನ್ನು ಗರ್ಭಿಣಿಯರಿಗೆ ಕೊಡಬಾರದು. ಹಾಗೂ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು.

ಪ್ರಯೋಗಗಳು: ಕಾಮಿಣೀ ರೋಗವಾದಾಗ ಇದರ ಬಳ್ಳಿಯನ್ನು ಎಡಗೈ ತೋಳಿಗೆ ಸುತ್ತುವರು. ಇದರ ಪ್ರಭಾವದಿಂದ ಕಾಮಿಣಿ ರೋಗವು ಬೇಗನೆ ಗುಣವಾಗುವುದು.

 • ಸೂತಿಕಾ ಜ್ವರದಲ್ಲಿ ಇದು ಉತ್ತಮ ಔಷಧಿಯಾಗಿದ್ದು ಜ್ವರವನ್ನು ಕಡಿಮೆ ಮಾಡಿ ಗರ್ಭಾಶಯದೊಳಗಿನ ದೂಷಿತ ರಕ್ತವನ್ನು ಹೊರಗೆ ಹಾಕುತ್ತದೆ.
 • ಅಗ್ನಿಮಾಂದ್ಯ, ಅಜೀರ್ಣ, ಹೊಟ್ಟೆನೋವು, ಯಕೃತವಿಕಾರ, ಗ್ರಹಿಣಿ ಹಾಗೂ ಕ್ರಿಮಿರೋಗಗಳಲ್ಲಿ ಉಪಯುಕ್ತವೆನಿಸಿದೆ.
 • ಅರ್ಬುದ(ಕ್ಯಾನ್ಸರ್) ರೋಗದ ಮೇಲೆ ಚಿತ್ರ ಮೂಲದ ಪ್ರಭಾವವನ್ನು ಮದ್ರಾಸಿನ ಕ್ಯಾಪ್ಟನ್ ಶ್ರೀನಿವಾಸಮೂರ್ತಿ ಔಷಧ ಸಂಶೋಧನೆ ಸಂಸ್ಥೆಯು ಕಂಡುಹಿಡಿದಿದೆ. ಇದರ ಬೇರಿನ ಸತ್ವವು ಅರ್ಬುದ ಗಡ್ಡೆಯ ಬೆಳವಣಿಗೆಯನ್ನು ೭೦% ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಅರ್ಬುದ ರೋಗಕ್ಕೆ ಸುಮಾರು ೨೫ ಸಸ್ಯಗಳು ವಿವಿಧ ರಾಸಾಯನಿಕ ಸತ್ವಗಳಿಗಿಂತ ಚಿತ್ರಕ ಮೂಲದ ಬೇರಿನ ಮಿಶ್ರಣವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಗಳಿಂದ ಗೊತ್ತಾಗಿದ್ದು ಇನ್ನೂ ಈ ಕೆಲಸ ಮುಂದುವರಿದಿದೆ.
 • ಬೇರನ್ನು ತೇಯ್ದು ಚರ್ಮದ ಮೇಲೆ ಹಚ್ಚಿದರೆ ಅಣೆ(Corn),ಬಂಗುಗಳು ಗುಣವಾಗುತ್ತವೆ.

ಚಿತ್ರಕ ತೈಲ : ಚಿತ್ರಕ ಬಳ್ಳಿಯ ಸ್ವರಸ ತೆಗೆದು ಎಳ್ಳಿನ ಎಣ್ಣೆಯಲ್ಲಿ ಹಾಕಿ ತೈಲ ಪದ್ಧತಿಯಂತೆ ಕುದಿಸಿಕೊಂಡು(ಸ್ವರಸದ ಅಂಶವು ಕೈ ಬೆರಳುಗಳಿಗೆ ಅಂಟದಿರುವವರೆಗೆ) ಸೋಸಿಕೊಳ್ಳಬೇಕು. ಈ ತೈಲವನ್ನು ಸಂಧಿವಾತದಲ್ಲಿ ಹಚ್ಚಿ ಮೃದುವಾಗಿ ತಿಕ್ಕಿದರೆ ನೋವು ಕಡಿಮೆ ಆಗುವುದು. ಅಲ್ಲದೆ ಶರೀರದ ಯಾವುದೇ ಭಾಗ ಸಂಜ್ಞಾಹೀನವಾಗಿದ್ದರೆ ಈ ತೈಲವನ್ನು ಹಚ್ಚುತ್ತಾ ಹೋದಂತೆ ಅಲ್ಲಿ ಕ್ರಮೇಣ ಸಂಜ್ಞೆ ಬರುವುದು. ಈ ಕಾರ್ಯವು ಚಿತ್ರಕದ ತೀಕ್ಷ್ಣ ಹಾಗೂ ಸೂಕ್ಷ್ಮ ಗುಣಗಳಿಂದ ಸಾಧ್ಯವಾಗುವುದು.

ಯೋಗಗಳು: ಚಿತ್ರಕಾದಿ ಗುಟಿಕಾ, ಚಿತ್ರಕ ಹರೀತಕಿ, ಚಿತ್ರಕ ಘೃತ, ಚಿತ್ರಕಾದಿ ಚೂರ್ಣ.

ಪ್ರಮಾಣ :೧ ರಿಂದ ೨ ಗ್ರಾಂ.

೧೬. ಜೇಷ್ಠಮಧು(ಅತಿ ಮಧುರ) (Glycyrrhiza Glabra)

ಇದು ಬಹುವರ್ಷ ಬಾಳುವ ಒಂದು ಪೊದೆಗಿಡ ೨ ರಿಂದ ೪ ಅಡಿಗಳವರೆಗೆ ಎತ್ತರವಾಗಿ ಬೆಳೆಯುವುದು. ಇದರ ಎಲೆಗಳು ಸಂಯುಕ್ತ ಜೋಡಣೆಯಿಂದ ಕೂಡಿದ್ದು ೪ ರಿಂದ ೭ ಉಪಪತ್ರಗಳನ್ನು ಹೊಂದಿರುವುವು. ಬೇರುಗಳು ಉದ್ದವಿದ್ದು ಕೆಂಪು ಅಥವಾ ಹಳದಿ ಮಿಶ್ರಿತ ಕೆಂಪು ಬಣ್ಣ ಹೊಂದಿರುವುವು. ಈ ಬೇರಿನಲ್ಲಿ ಗ್ಲಿಸರೆಜಿನ್ ಎಂಬ ಹಳದಿವಸ್ತು, ಅಸ್ಪರಾಜಿನ್, ಸಕ್ಕರೆ, ಪಿಷ್ಠ, ಅಂಟು ಮತ್ತು ಮೆಗ್ನೀಶಿಯಂ ಲವಣಗಳಿರುವುವು. ಈ ಜೇಷ್ಠ ಮಧುವಿನಲ್ಲಿ ಮುಖ್ಯವಾಗಿ ಮೂರು ಜಾತಿಯವುಗಳನ್ನು ನೋಡಬಹುದು. ಭಾರತದಲ್ಲಿ ವಿಶೇಷವಾಗಿ ಜಮ್ಮು-ಕಾಶ್ಮೀರ, ಡೆಹರಾಡುನ ಮತ್ತು ದಿಲ್ಲಿ ಪ್ರದೇಶಗಳಲ್ಲಿ ಬೆಳೆಯುವುವು.

ಇದು ಸುಲಭದಲ್ಲಿ ದೊರಕುವ ಉತ್ತಮ ಔಷಧಿ ಎನಿಸಿದೆ. ಇದರ ಉಪಯೋಗದ ಬಗ್ಗೆ ಸಾಕಷ್ಟು ಸಂಶೋಧನೆಗಳು ದೇಶ-ವಿದೇಶಗಳಲ್ಲಿ ಆಗಿದ್ದು ಇದು ಜಠರ ವ್ರಣ (Gastric Ulcer)ಕ್ಕೆ ಒಂದು ಶ್ರೇಷ್ಠ ಔಷಧಿ ಎಂದು ಗೊತ್ತಾಗಿ ಇತ್ತೀಚೆಗೆ ಜೇಷ್ಠ ಮಧುವನ್ನು ಸೇರಿಸಿ ಜಠರ ವ್ರಣಕ್ಕೆ ಚಿಕಿತ್ಸೆ ಕೊಡಲಾಗುತ್ತಿದೆ.

ಗುಣ : ಗುರು, ಸ್ನಿಗ್ಧ
ರಸ: ಮಧುರ(ಸಿಹಿ)
ವಿಪಾಕ: ಸಿಹಿ
ವೀರ್ಯ: ಶೀತ

ದೋಷ ಕರ್ಮ: ಇದು ಗುರು, ಸ್ನಿಗ್ಧ ಹಾಗು ಆಧಾರ ಸಿಹಿಯಾಗಿರುವುದರಿಂದ ವಾತವನ್ನು, ಸಿಹಿ ಶೀತವಾಗಿರುವುದರಿಂದ ಪಿತ್ತವನ್ನು ಕಡಿಮೆ ಮಾಡುವುದು.

ಇದನ್ನು ದೇಹದ ಹೊರಗಿನಿಂದ ಬಳಸಿದಾಗ ದಾಹವನ್ನು ಕಡಿಮೆ ಮಾಡುವುದು. ನೋವು ಹಾಗೂ ಬಾವುಗಳನ್ನು ಇಳಿಸುವುದು. ಕೂದಲುಗಳನ್ನು ಬೆಳೆಸುವುದು.

ಹೊಟ್ಟೆಯಲ್ಲಿ ತೆಗೆದುಕೊಂಡಾಗ ವಾಂತಿಯನ್ನು ನಿಲ್ಲಿಸುವುದು, ನೀರಡಿಕೆಯನ್ನು ಕಡಿಮೆ ಮಾಡುವುದು. ವಾತವನ್ನು ಅನುಲೋಮಗೊಳಿಸುವುದು. ಹಾಗು ಮೃದು ವಿರೇಜಕವೆನಿಸಿದೆ. ಅಮಾಶಯ ಭಾಗದಲ್ಲಿ ಆಮ್ಲತೆ (Acidity)ಯನ್ನು ಕಡಿಮೆಗೊಳಿಸಿ ಅಲ್ಲಿ ವ್ರಣಗಳಿದ್ದರೆ ಮಾಯಿಸುವುದು. ಕಫವನ್ನು ಹೊರಹಾಕವುದು. ಒಳ್ಳೆ ಧ್ವನಿಯನ್ನು ಕೊಡುವುದು, ಮಿದುಳಿಗೆ ಬಲದಾಯಕ ಹಾಗು ರಸಾಯನವಾಗಿದೆ.

ಪ್ರಯೋಗಗಳು: ಜಠರ ವ್ರಣಗಳಿಗೆ ಒಂದು ಬಟ್ಟಲು ಹಾಲಿಗೆ ಒಂದು ಚಮಚದಷ್ಟು ಜೇಷ್ಠಮಧು ಚೂರ್ಣವನ್ನು ಹಾಕಿ ಕುದಿಸಿ, ಆರಿಸಿ ಬರಿ ಹೊಟ್ಟೆಯಲ್ಲಿ ದಿನಕ್ಕೆ ೨-೩ ಸಾರೆ ಒಂದೆರಡು ತಿಂಗಳುಗಳವರೆಗೆ ಕೊಟ್ಟರೆ ಒಳ್ಳೆ ಗುಣ ಕಂಡುಬರುವುದು.

 • ಮೈಯಲ್ಲಿ ದಾಹ, ಉರಿಪು, ಸಂಕಟ, ನೀರಡಿಕೆಗಳಿಗೆ ಇದರ ಕಷಾಯವನ್ನು(ಇದನ್ನು ಕಷಾಯದಂತೆ ೧/೪ಕ್ಕೆ ಇಳಿಸುವ ಅಗತ್ಯವಿಲ್ಲ) ತಣ್ಣಗಾದ ಬಳಿಕ ಮೇಲಿಂದ ಮೇಲೆ ಕೊಡುತ್ತಿರಬೇಕು. ಇಲ್ಲವೆ ಒಂದು ಬಟ್ಟಲು ನೀರಿನಲ್ಲಿ ಒಂದು ಚಮಚ ಪುಡಿಯನ್ನು ಕಲಿಸಿ ಹಾಗೆ ರಾತ್ರಿ ತೆಗೆದಿಟ್ಟು ಬೆಳಿಗ್ಗೆ ನೀರನ್ನು ಸೋಸಿಕೊಂಡು ಕುಡಿಯಬಹುದು. ಪಿತ್ತಶಮನವಾಗುತ್ತದೆ.
 • ಒಣಕೆಮ್ಮಿಗೆ, ಜೇಷ್ಠ ಮಧುಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಕೊಡಬೇಕು. ಇಲ್ಲವೆ ಜೇಷ್ಠ ಮಧುವಿನ ಬೇರಿನ ಸಣ್ಣ ತುಂಡುಗಳನ್ನು ಬಾಯಿಯಲ್ಲಿ ಹಿಡಿದು ರಸ ನುಂಗುತ್ತಿರಬೇಕು. ಇದರಿಂದ ಗಂಟಲಿನ ಕೆರೆತ ಕಡಿಮೆ ಆಗುವುದು, ಧ್ವನಿ ಒಡೆತ, ಧ್ವನಿ ಕುಗ್ಗುವಿಕೆಗೆ ಕೂಡ ಇದೇ ರೀತಿ ತೆಗೆದುಕೊಳ್ಳಲು ಹೇಳಬೇಕು. ಸಂಗೀತಗಾರರು, ನಾಟಕಗಳಲ್ಲಿ ಪಾತ್ರವಹಿಸುವವರು ಉಪನ್ಯಾಸಕರು, ರಾಜಕಾರಣಗಳಿಗೆ ಧ್ವನಿ ಒಡೆತ ಸಾಮಾನ್ಯ. ಹೀಗಾಗದಂತೆ ಇವರು ಜೇಷ್ಠ ಮಧು ಬೇರಿನ ತುಂಡುಗಳನ್ನು ಬಾಯಿಯಲ್ಲಿಟ್ಟುಕೊಂಡು ಜಗಿಯುತ್ತ ರಸ ನುಂಗುತ್ತಿದ್ದರೆ ಈ ತೊಂದರೆ ಆಗುವುದಿಲ್ಲ.
 • ಉಬ್ಬುಸಕ್ಕೆ ಪುಷ್ಪಸಗಳಲ್ಲಿ ಕಫವು ಗಟ್ಟಿಯಾಗಿ ಉಸಿರಾಟಕ್ಕೆ ತೊಂದರೆಯಾದಾಗ ಜೇಷ್ಠ ಮಧುಹಿಪ್ಪಲಿಯ ಕಷಾಯಕ್ಕೆ (೧/೪ಕ್ಕೆ ಇಳಿಸಿದ್ದು ಅರ್ಧ ಗಂಟೆಗಳಿಗೊಮ್ಮೆ ೨ ರಿಂದ ೪ ಚಮಚಗಳಷ್ಟು ಕೊಡುತ್ತಿದ್ದರೆ ಮೇಲಿಂದ ಮೇಲೆ ಬರುವ ತೀವ್ರ ಸ್ವರೂಪದ ದಮ್ಮು (Status Asthmaticus)ಕೂಡ ನಿಯಂತ್ರಣಕ್ಕೆ ಬರುವುದೆಂದು ಕಂಡುಬಂದಿದೆ.
 • ಸಂದುವಾತ, ನೋವು, ಬಾವುಗಳಿಗೆ ಉಪಯೋಗಿಸಲ್ಪಡುವ “ಪಿಂಡತೈಲ” ದಲ್ಲಿ ಜೇಷ್ಠ ಮಧುವೇ ಮುಖ್ಯ ದ್ರವ್ಯವಾಗಿದೆ. ಇತ್ತೀಚಿನ ಪ್ರಯೋಗದಲ್ಲಿ ಈ ಜೇಷ್ಠ ಮಧುವಿನಲ್ಲಿ ಆಧುನಿಕ ಚಮತ್ಕಾರಿಕ ಔಷಧಿಯಾದ ಕಾರ್ಟಿಸೋನನ್ನು ಹೋಲುವ ಗುಣಾಂಶಗಳಿವೆ ಎಂದು ಬಂದಿದೆ.
 • ಯಾವುದೇ ಸ್ವರೂಪದ ರಕ್ತ ಸ್ರಾವಕ್ಕೆ ಜೇಷ್ಠಮಧುವು ಒಂದು ಉತ್ತಮ ಔಷಧಿ ಎನಿಸಿದೆ. ಇದರ ಕಷಾಯವನ್ನು ಮೇಲಿಂದ ಮೇಲೆ ಕುಡಿಸುತ್ತಿದ್ದರೆ ಹೊಟ್ಟೆಯಲ್ಲಿ ಸಮಾಧಾನವಾಗುವುದಲ್ಲದೆ ರಕ್ತ ಸ್ತಂಭನ ಕಾರ್ಯವೂ ಆಗುವುದು.

ಪ್ರಮಾಣ : ೩ ರಿಂದ ೫ ಗ್ರಾಂ

ಯಾಗ : ಯಷ್ಟ್ಯಾದಿ ಚೂರ್ಣ, ಯಷ್ಟ್ಯಾದಿ, ಯಷ್ಟಯಧ್ವಾದ ತೈಲ.

೧೭. ಜೀರಿಗೆ (Cuminum Cyminum linn)

ಜೀರಿಗೆಯು ನಿತ್ಯ ಅಡಿಗೆಯಲ್ಲಿ ಮಸಾಲೆ ಪದಾರ್ಥವಾಗಿ ಉಪಯೋಗಿಸುವ ವಸ್ತು. ಭಾರತಾದ್ಯಂತ ಬೆಳೆಯುತ್ತದೆ. ವಿಶೇಷವಾಗಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬಗಳಲ್ಲಿ ಬೆಳೆಯುವುದುಂಟು.

ಈ ಜೀರಿಗೆಯಲ್ಲಿ ಸಿಹಿ ಹಾಗೂ ಸುಗಂಧವಾದ ತೈಲಾಂಶವು ೨ ರಿಂದ ೪ ೫% ಇರುತ್ತದೆ. ಇದಲ್ಲದೆ ೨೦ ರಿಂದ ೪೦% ಕ್ಯುಮೆಲ್ಡೆಹೈಡ್ ಅಂಶವಿದ್ದು ಪ್ರೋಟೀನ್, ಕಾರ್ಬೋಹೈಡ್ರೇಟ್ ಹಾಗೂ ಖನಿಜಾಂಶಗಳಿವೆ. ಜೀವಸತ್ವ ಎ ಹಾಗೂ ಸಿ ಅಂಶಗಳಿವೆ.

ಗುಣ : ಲಘು
ರಸ: ಕಾರ
ವಿಪಾಕ:ಕಾರ
ವೀರ್ಯ:ಉಷ್ಣ

ದೋಷಕರ್ಮ: ಜೀರಿಗೆಯು ಉಷ್ಣವಿರುವುದರಿಂದ ಕಫ ವಾತಗಳನ್ನು ಕಡಿಮೆ ಮಾಡುವುದು ಹಾಗೂ ಪಿತ್ತವನ್ನು ಹೆಚ್ಚಿಸುವುದು.

ಇದನ್ನು ಮೇಲೆ ಹಚ್ಚುವುದರಿಂದ ಕೆರೆತವನ್ನುಂಟು (ಲೇಖನ ಕರ್ಮ) ಮಾಡಿ ಬಾವನ್ನು ಇಳಿಸುವುದು ಹಾಗೂ ನೋವನ್ನು ಕಡಿಮೆ ಮಾಡುವುದು.

ಇದು ಒಳ್ಳೆ ದೀಪಕ-ಪಾಚಕವಾಗಿದೆ. ವಾತಾನುಲೋಮನ ಮಾಡುವುದು. ಹೊಟ್ಟೆ ನೋವನ್ನು ಕಡಿಮೆ ಮಾಡುವುದು. ಗ್ರಾಹಿ ಹಾಗೂ ಕ್ರಿಮಿಘ್ನವೆನಿಸಿದೆ.

ಪ್ರಯೋಗಗಳು: ಹೊಟ್ಟೆಯುಬ್ಬರ, ವಾಂತಿ, ಭೇದಿ, ಸಂಗ್ರಹಣೆ, ಅಪಚನ ವಿಕಾರಗಳಲ್ಲಿ ಜೀರಿಗೆಯು ಉಪಯುಕ್ತವಾಗಿದೆ.

 • ಚಿಕ್ಕಮಕ್ಕಳಿಗೆ ಜೀರಿಗೆಯ ಕಷಾಯವನ್ನು ನಿತ್ಯ ಕೊಡುತ್ತಿದ್ದರೆ ಪಾಚಕಾಂಗಗಳ ವಿಕಾರಗಳು ಹುಟ್ಟುಕೊಳ್ಳುವುದಿಲ್ಲ.
 • ಆಮ್ಲ ಪಿತ್ತವಿಕಾರಕ್ಕೆ ಜೀರಿಗೆ+ಸಕ್ಕರೆ ಕೊಡಬೇಕು.
 • ಬಾಯಿಯಲ್ಲಿ ವ್ರಣಗಳಾಗಿ ಉರಿಯುತ್ತಿದ್ದರೆ ಜೀರಿಗೆಗಳನ್ನು ಬಾಯಿಯಲ್ಲಿ ಹಾಕಿಕೊಂಡು ತಿನ್ನುತ್ತಿದ್ದರೆ ಬೇಗನೆ ಕಡಿಮೆ ಆಗುವುವು. ಆಯುರ್ವೇದ ಪ್ರಕಾರ ಬಾಯಿಯಲ್ಲಿ ಗುಳ್ಳೆಗಳಾಗುವುದು ಪಾಚಾಕಾಂಗ ದೋಷಗಳಿಂದ ಎಂದಿದೆ.
 • ಬಾಣಂತಿಯರಿಗೆ ಎದೆಹಾಲು ಬರಲು ಕರಿ ಜೀರಿಗೆಯನ್ನು ನಿತ್ಯ ಎರಡು ಸಾರೆ ಕೊಡಬೇಕು.
 • ಜೀರಿಗೆಯ ಕಷಾಯಕ್ಕೆ ಸಕ್ಕರೆ ಹಾಲು ಸೇರಿಸಿಕೊಂಡು ನಿತ್ಯಕಾಫಿಯಂತೆ ಬಳಸಬಹುದು.
 • ಹೇರಿಗೆಯಾದ ಬಳಿಕ ತಾಯಂದಿರಿಗೆ ಗರ್ಭಾಶಯ ಶೋಧನೆಗೊಳ್ಳಲು, ಎದೆಹಾಲು ಚೆನ್ನಾಗಿ ಬರಲು, ಶಕ್ತಿಬರಲು, ಜೀರಿಗೆ ಕಷಾಯವನ್ನು ನಿತ್ಯ ಕುಡಿಯಲು ಕೊಡಬೇಕು. ಬಿಳಿಮುಟ್ಟಿಗೂ ಈ ಜೀರಿಗೆ ಉಪಯುಕ್ತವಾಗಿದೆ.

ಪ್ರಮಾಣ : ೩ ರಿಂದ ೬ ಗ್ರಾಂ

ಯೋಗಗಳು: ಜೀರಕಾದಿ ಮೋದಕ, ಜೀರಕಾದ್ಯ ಚೂರ್ಣ, ಜೀರಕಾದ್ಯ ತೈಲ, ಜೀರಕಾದ್ಯಾರಿಷ್ಠ, ಜೀರಕಾದಿ ಲೇಹ್ಯ

೧೮. ನಿಂಬೆಹಣ್ಣು (ನಿಂಬೂಕ)

ನಿಂಬೆಹಣ್ಣನ್ನು ಆಹಾರ, ಔಷಧಿ ಹಾಗೂ ಸೌಂದರ್ಯ ವರ್ಧನೆಗಾಗಿ ನೂರಾರು ವರ್ಷಗಳಿಂದ ಭಾರತದಲ್ಲಿ ಉಪಯೋಗಿಸುತ್ತ ಬರಲಾಗಿದೆ. ಇದನ್ನು ಮನೆ ಅಂಗಳ ಹಾಗೂ ತೋಟಗಳಲ್ಲಿ ಬೆಳೆಸಲಾಗುತ್ತಿದೆ. ದಿನನಿತ್ಯದ ಬೇಡಿಕೆ ವಸ್ತುವಾದ್ದರಿಂದ ಸಾಕಷ್ಟು ಜನ ಕೃಷಿ ಮಾಡುತ್ತಾರೆ. ವೇದಗಳ ಕಾಲದಿಂದಲು ಪ್ರಸಿದ್ಧಿ ಪಡೆದಿರುವ ಈ ಹಣ್ಣನ್ನು ಪೂಜೆ ಪುನಸ್ಕಾರ ಇತ್ಯಾದಿ ಶುಭಸಂದರ್ಭಗಳಲ್ಲೂ ಉಪಯೋಗಿಸಲಾಗುತ್ತದೆ. ೪-೫ ಅಡಿಗಳವರೆಗೆ ಬೆಳೆಯುವ ಈ ಗಿಡದ ಎಲೆಗಳು ಸಹ ಸುವಾಸಿತವಾಗಿರುತ್ತವೆ. ಇದು ರುಚಿಯಲ್ಲಿ ಹುಳಿ, ಸಿಹಿ ಮಿಶ್ರಿತವಾದದ್ದು ‘ಸಿ’ ಜೀವಸತ್ವದ ಖಣಿ ಆಗಿದೆ.

ನಿಂಬೆಹಣ್ಣಿನಲ್ಲಿ ಔಷಧಿ ಗುಣಗಳು ಕೂಡ ಇರುತ್ತವೆ. ಇದು ಹಸಿವನ್ನು ಹೆಚ್ಚಿಸುವುದು. ಮೈಯಲ್ಲಿ ರಕ್ತವನ್ನು ಹೆಚ್ಚಿಸುವುದು. ಕೊಬ್ಬನ್ನು ಕರಗಿಸುವುದು. ದೇಹದ ಎಲ್ಲ ವ್ಯವಸ್ಥೆಗಳ ಮೇಲೆ ಕಾರ್ಯ ಮಾಡುವುದು. ಸೌಂದರ್ಯ ವರ್ಧನೆಯಲ್ಲೂ ಇದನ್ನು ಬಳಸುವರು. ಬಾಯಾರಿಕೆ, ಅತಿಥಿ ಸತ್ಕಾರದಲ್ಲೂ ನಿಂಬೆ ಪಾನಕ ಉಪಯುಕ್ತ. ನಿಂಬೆರಸವನ್ನು ನೋವಿದ್ದ ಜಾಗಕ್ಕೆ ಹಚ್ಚಿ ತಿಕ್ಕಲೂ ಬರುವುದು.

ಉಪಯೋಗಗಳು

ಕೊಬ್ಬನ್ನು ಕರಿಗಿಸುವ ಸಾಮರ್ಥ್ಯ ಈ ನಿಂಬೆ ಹಣ್ಣಿಗಿದೆ. ನಿಂಬೆರಸವನ್ನು ಒಂದು ಗ್ಲಾಸು ನೀರಿನಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಬ್ಬು ಕರಗಿ ದೇಹ ಪ್ರಮಾಣ ಬದಲಾಗುತ್ತದೆ ಹಾಗು ಮೈಯಲ್ಲಿ ಕೊಬ್ಬು ಬೆಳೆಯುವುದರಿಂದಾಗುವ ವಿಕಾರಗಳು ನಿಯಂತ್ರಿಸಲ್ಪಡುತ್ತವೆ.

 • ತಲೆಗೆ ಸ್ನಾನ ಮಾಡುವಾಗ ನೀರಿಗೆ ನಿಂಬೆರಸ ಸೇರಿಸಿದರೆ ಕೂದಲುಗಳ ಹೊಳಪು ಹೆಚ್ಚುತ್ತದೆ.
 • ಒಂದು ಚಮಚ ನಿಂಬೆರಸಕ್ಕೆ ಒಂದು ಚಮಚೆ ಹಾಲಿನ ಕೆನೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಮೃದುವಾಗಿ ಹೊಳಪು ಬರುತ್ತದೆ.
 • ನಿಂಬೆಯ ಎಲೆಗೆ ಸ್ವಲ್ಪ ಅರಿಶಿನ ಪುಡಿ ಸೇರಿಸಿ ಅರೆದು ಮುಖಕ್ಕೆ ಹಚ್ಚಿಕೊಂಡರೆ ಮೊಡವೆಗಳು ಕಡಿಮೆ ಆಗುತ್ತವೆ.
 • ಬೇಡವಾದ ಕೂದಲುಗಳನ್ನು ತೆಗೆಯಲು ನಿಂಬೆರಸಕ್ಕೆ ಕರಗಿದ ಸಕ್ಕರೆಯನ್ನು ಸೇರಿಸಿ ಆ ಜಾಗಕ್ಕೆ ಹಚ್ಚಿಕೊಂಡರೆ ಅವು ಉದುರುತ್ತವೆ.
 • ನಿಂಬೆಹಣ್ಣು, ಸಕ್ಕರೆ, ನೀರು ಸೇರಿಸಿದ ನಿಂಬೆ ಪಾನಕಕ್ಕೆ ಜೀರಿಗೆ ಹಾಗೂ ಕರಿಮೆಣಸಿನ ಪುಡಿಗಳನ್ನು ರುಚಿಗೆ ತಕ್ಕಷ್ಟು ಸೇರಿಸಿ ಕುಡಿದರೆ ಬಾಯಾರಿಕೆ ದೂರವಾಗುವುದಲ್ಲದೆ ಬಾಯಿರುಚಿ ಹೆಚ್ಚುವುದು, ಹಸಿವೆಯೂ ಆಗುವುದು.
 • ನಿಂಬೆಹಣ್ಣು ಕಣ್ಣಿನರೋಗಗಳಿಗೂ ಹಿತಕರವಾಗಿದೆ. ಕೆಮ್ಮು ಮತ್ತು ಕಫದಿಂದ ಗಂಟಲು ಕಟ್ಟಿದವರಿಗೆ ಒಳ್ಳೆಯದು, ಪ್ರವಾಸದಲ್ಲಿ ಈ ಹುಣ್ಣನ್ನು ಮೂಸಿಸುತ್ತಿದ್ದರೆ ವಾಂತಿ ಆಗುವುದಿಲ್ಲ.
 • ಹೊ‌ಟ್ಟೆಯಲ್ಲಿನ ಗುಲ್ಮ(ಗಂಟು)ಗಳು ಹಾಗು ಆಮವಾತಕ್ಕೆ ಒಳ್ಳೆಯದು.

೧೯. ನೆಲ್ಲಿಕಾಯಿ (Emblica Officinalis Gaertn)

ನೆಲ್ಲಿಕಾಯಿಯು ಬಡಬಗ್ಗರಿಗೆ ಸುಲಭ ಬೆಲೆಯಲ್ಲಿ ದೊರಕುವ ಒಂದು ಉತ್ತಮ ಔಷಧಿ ಎನಿಸಿದೆ. ಭಾರತಾದ್ಯಂತ ೪೫೦೦ ಅಡಿ ಎತ್ತರದ ಪ್ರದೇಶಗಳೆಲ್ಲೆಲ್ಲ ಬೆಳೆಯುತ್ತದೆ. ೨೦ ರಿಂದ ೨೫ ಅಡಿಗಳವರೆಗೆ ಬೆಳೆಯುವ ಈ ಗಿಡದಲ್ಲಿ ಅಕ್ಟೋಬರ್ ದಿಂದ ಏಪ್ರಿಲ್ ವರೆಗೆ ನೆಲ್ಲಿಕಾಯಿಗಳಾಗುತ್ತವೆ. ಈ ನೆಲ್ಲಿಕಾಯಿಗಳಲ್ಲಿ ಕೆಲ ಭೇದಗಳನ್ನು ಕಾಣಬಹುದು. ಮುಖ್ಯವಾಗಿ ಊರುಗಳಲ್ಲಿ ಬೆಳೆಯುವ ಹಾಗು ಕಾಡುಗಳಲ್ಲಿ ಬೆಳೆಯುವ ನೆಲ್ಲಿಕಾಯಿಗಳೆಂದು ಭೇದಗಳನ್ನು ಮಾಡಲಾಗಿದೆ. ಕಾಡಿನಲ್ಲಿ ಬೆಳೆಯುವ ನೆಲ್ಲಿಕಾಯಿಗಳು ಸಣ್ಣಗೆ ಹಾಗೂ ಬಿರುಸಾಗಿರುತ್ತವೆ. ಊರಿನಲ್ಲಿ ಬೆಳೆಯುವ ನೆಲ್ಲಿಕಾಯಿಗಳು ದೊಡ್ಡವು ಹಾಗು ಮೃದುವಾಗಿರುತ್ತವೆ. ಕಾಡಿನಲ್ಲಿ ನೆಲ್ಲಿಕಾಯಿಗಳನ್ನು ಮಾತ್ರ ಔಷಧಕ್ಕಾಗಿ ಉಪಯೋಗಿಸಲಾಗುವುದು.

ಈ ನೆಲ್ಲಿಕಾಯಿಯಲ್ಲಿ ಗೈಲಿಕ್ – ಟೈನಿಕ್ ಆಮ್ಲಾಂಶಗಳು, ಶರ್ಕರಾಂಶ ಅಲ್ಬುಮಿನ್, ಸೆಲ್ಯುಲೋಸ್ ಹಾಗು ಖನಿಜಾಂಶ(ಕ್ಯಾಲ್ಸಿಯಂ)ಗಳಿವೆ. “ಸಿ” ಜೀವಸತ್ವವು ನೆಲ್ಲಿಕಾಯಿಗಳಲ್ಲಿ ವಿಶೇಷವಾಗಿ ದೊರಕುತ್ತದೆ. ಕಿತ್ತಲೆ ಹಣ್ಣಗಿಂತ ೨೦ ಪಟ್ಟು ಹೆಚ್ಚು “ಸಿ” ಜೀವಸತ್ವವೂ ಈ ನೆಲ್ಲಿಕಾಯಿಗಳಲ್ಲಿದೆ.

ಗುಣ : ಗುರು, ರೂಕ್ಷ, ಶೀತ
ರಸ : ಆಮ್ಲಪ್ರಧಾನವಾಗಿದ್ದು ಉಪ್ಪಿನ ಹೊರತಾಗಿ ಎಲ್ಲ ರಸಗಳಿವೆ.
ವಿಪಾಕ : ಮಧುರ
ವೀರ್ಯ:ಶೀತ

ದೋಷಕರ್ಮ: ಇದು ತ್ರಿದೋಷಹರವೆನಿಸಿದೆ. ಹುಳಿಯಿಂದ ವಾತವನ್ನು, ಸಿಹಿ ಹಾಗು ಶೀತಗುಣಗಳಿಂದ ಪಿತ್ತವನ್ನು ಹಾಗೂ ಒಣ ಮತ್ತು ಕಷಾಯಗಳಿಂದ ಕಫವನ್ನು ಶಮನಗೊಳಿಸುವುದು. ವಿಶೇಷವಾಗಿ ಪಿತ್ತ ಶಾಮಕವೆನಿಸಿದೆ.

ನೆಲ್ಲಿಕಾಯಿಯು ಮೈಉರಿ, ಕಣ್ಣು ಉರಿ ಹಾಗೂ ದಾಹಗಳನ್ನು ಕಡಿಮೆ ಮಾಡುವುದು. ಕಣ್ಣುಗಳಿಗೆ ಶಕ್ತಿದಾಯಕವಾಗಿದೆ. ಕೂದಲುಗಳು ಬೆಳೆಯುವಂತೆ ಮಾಡುತ್ತದೆ. ಬುದ್ಧಿಶಕ್ತಿಯನ್ನು ಹೆಚ್ಚಿಸುವುದು, ನಾಡಿಗಳು-ಸ್ನಾಯುಗಳು ಹೃದಯಕ್ಕೆ ಬಲ್ಯವೆನಿಸಿದೆ. ರಸಾಯನವಾಗಿದೆ.

ಪ್ರಯೋಗಗಳು: ದಾಹ, ಪಿತ್ತದಿಂದಾದ ತಲೆನೋವು ಹಾಗೂ ಮೂತ್ರಾವರೋಧಗಳಿಗೆ ನೆಲ್ಲಿಕಾಯಯ ಲೇಪವನ್ನು ಹಾಕಿದರೆ ಗುಣ ಕಾಣಿಸುವುದು.

 • ನೆಲ್ಲಿ ಪುಡಿಯೊಡನೆ ಸಮಭಾಗ ಅರಿಸಿನ, ಅಮೃತಬಳ್ಳಿ ಪುಡಿಗಳನ್ನು ಸೇರಿಸಿ ಜೇನು ಇಲ್ಲವೆ ನೀರಿನೊಡನೆ ಮಧುಮೇಹಕ್ಕೆ ಕೊಡಬೇಕು.
 • ತಲೆಯಲ್ಲಿ ಕೂದಲುಗಳು ಉದರಬಾರದೆಂದು ಇದರ ಸ್ವರಸವನ್ನು ಹಚ್ಚಿಕೊಂಡು ಅಭ್ಯಂಗ ಮಾಡುತ್ತಾರೆ. ರಸವನ್ನು ನಿತ್ಯ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
 • ಅರುಚಿ, ಅಗ್ನಿಮಾಂದ್ಯ, ಯಕೃತ್ ವಿಕಾರ, ಆಮ್ಲಪಿತ್ತ, ಪೈತ್ತಿಕ, ಪ್ರಮೇಹ, ಪರಿಣಾಮ ಶೂಲ, ಮೂಲವ್ಯಾಧಿಗಳಲ್ಲಿ ಉಪಯುಕ್ತವೆನಿಸಿದೆ.
 • ಗರ್ಭಾಶಯ ದೌರ್ಬಲ್ಯದಲ್ಲಿ ಪ್ರಯೋಜನಕಾರಿಯಾಗಿದೆ.
 • ಹೃದ್ರೋಗ, ರಕ್ತಪಿತ್ತ, ಶ್ವಾಸ-ಕಾಸ-ಕ್ಷಯರೋಗಗಳಲ್ಲಿ ನೆಲ್ಲಿಕಾಯಿಯನ್ನು ವಿಶೇಷವಾಗಿ ಬಳಸಲಾಗುತ್ತದೆ.
 • ನೆಲ್ಲಿಕಾಯಿಯ ರಸಕ್ಕೆ ಸ್ವರ್ಣಪತ್ರ, ತುಪ್ಪದೊಡನೆ ಅದೇ ಆಗ ಜನಿಸಿದ ಮಗುವಿಗೆ ಕೊಟ್ಟರೆ ಒಳ್ಳೆ ಆರೋಗ್ಯ ದೊರಕಿ ರೋಗ ನಿರೋಧಕ ಶಕ್ತಿ ಬರುವುದು.

ಪ್ರಮಾಣ :

ಸ್ವರಸ ೧೦ ರಿಂದ ೨೦ ಮಿ.ಲಿ
ಚೂರ್ಣ ೩ ರಿಂದ ೬ ಗ್ರಾಂ

ಯೋಗಗಳು : ಚ್ಯವನ ಪ್ರಾಶ, ಅಮಲಕಿ ರಸಾಯನ, ಧಾತ್ರಲೋಹ ಭೃಂಗಾಮಲಕ ತೈಲ, ಮುರಬ್ಬಾ, ಬ್ರಾಹ್ಮಿ ಆಮ್ಲಾತೈಲ.

೨೦. ನುಗ್ಗಿ (ಶಿಗ್ರು) (Voringa Olefera Lam/Drumstick)

ಆಹಾರದಲ್ಲಿ ಬಳಸಲ್ಪಡುವ ನುಗ್ಗಿಕಾಯಿಯು ಕಫ-ವಾತ ದೋಷಗಳನ್ನು ಕಡಿಮೆ ಮಾಡುವುದು. ಭಾರತಾದ್ಯಂತ ನುಗ್ಗೆಯನ್ನು ಬೆಳೆಯುತ್ತಾರೆ. ಮೃದು ಜಾತಿಯ ಈ ಗಿಡವು ೨೮-೩೦ ಅಡಿಗಳಷ್ಟು ಮಧ್ಯಮ ಪ್ರಮಾಣದಲ್ಲಿ ಬೆಳೆಯುವುದು. ಇದಕ್ಕೆ ೬ ರಿಂದ ೧೮ ಅಂಗುಲದಷ್ಟು ಉದ್ದದ, ಧೂಳಿ ಬಣ್ಣದ ನುಗ್ಗೆಕಾಯಿಗಳಿ ಏಪ್ರಿಲ್ ನಿಂದ ಜೂನ್ ವರೆಗೆ ಬಿಡುವುವು.

ನಾಡೀ ಸಂಸ್ಥಾನದ ಮೇಲೆ ಕಾರ್ಯಮಾಡುವ ಮೊರಿಂಜಿನ್ ಕ್ಷಾರಾಂಶವು ಈ ನುಗ್ಗೆ ಬೇರಿನಲ್ಲಿದೆ. ಇದಲ್ಲದೆ ಈ ಬೇರಿನಲ್ಲಿ ಜೀವಾಣು ರೋಧಕ ಟೆರಿಗೋಸ್ಟರ್ಮಿನ್ ಕೂಡ ಇದೆ ಎಂದು ಕಂಡುಬಂದಿದೆ. ಇವಲ್ಲದೆ ಬೇರುಗಳಲ್ಲಿ ಹೆಚ್ಚು ಕಾರ ಹಾಗೂ ದುರ್ಗಂಧಯುಕ್ತವಾದ ತೈಲಾಂಶವಿದೆ. ಇದರ ಬೀಜಗಳಿಂದ ಅಂಜನವನ್ನು ಸಿದ್ಧಪಡಿಸಿ ನೇತ್ರ ರೋಗಗಳಲ್ಲಿ ಬಳಸುತ್ತಾರೆ.

ರಾಸಾಯನಿಕವಾಗಿ ನುಗ್ಗೆ ಬೀಜದಲ್ಲಿ ‘ಬೆನ್ ಆಯಿಲ್’ ಎಂಬ ಎಣ್ಣೆಯು ದೊರೆಯುತ್ತದೆ. ಇದನ್ನು ಜೀವಾಣುರೋಧಕ ಪದಾರ್ಥವಿದೆ ಈ ಸತ್ವಗಳು ಸ್ಟ್ರೆಪ್ಟೋಕಾಕಲ್ ಮತ್ತು ಸ್ಟಾಫಿಲೋಕಾಕಾಲ್ ಎಂಬ ರೋಗಕಾರಕ ಜೀವಾಣುಗಳನ್ನು ನಾಶಪಡಿಸುತ್ತವೆ. ಮೊದಲು ನೋವನ್ನು ಪರಿಹರಿಸುವ ಗುಣವಿದೆ. ಎರಡನೇ ಸತ್ವವು ಚರ್ಮದ ಮಳೆ ಶೆಲೆತಕ್ಕೆ ಕಾರಣವಾಗುವ ಫಂಗಸ್ ಜಾತಿಯ ಕ್ರಿಮಿಗಳ ಬೆಳವಣಿಗೆಯನ್ನು ತಡೆಯುವುದೆಂದು ಕಂಡುಬಂದಿದೆ.

ನುಗ್ಗೆಯು ಪೌಷ್ಟಿಕಾಂಶಗಳ ತವರು ಎನಿಸಿದೆ. ಮಕ್ಕಳ ಬೆಳವಣಿಗೆಗೆ ಬೇಕಾದ ಎ ಮತ್ತು ಸಿ ಜೀವಸತ್ವಗಳು ಹಾಗೂ ಕ್ಯಾಲ್ಸಿಯಂಗಳು ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿದೆ. ಇದನ್ನು ಆಹಾರದಲ್ಲಿ ನಿತ್ಯ ತರಕಾರಿಯಂತೆ ಸೇವಿಸುವುದರಿಂದ ಇರುಳುಗಣ್ಣು (Night Blindness) ನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

ಗುಣ : ಲಘು, ರೂಕ್ಷ, ತೀಕ್ಷ್ಣ
ರಸ: ಕಟು, ತಿಕ್ತ
ವಿಷಾಕ: ಕಟು
ವೀರ್ಯ: ಉಷ್ಣ

ದೋಷಕರ್ಮ: ನುಗ್ಗೆಯು ಲಘು, ರೂಕ್ಷ, ತೀಕ್ಷ್ಣ ಮತ್ತು ಕಾರವಾಗಿರುವುದರಿಂದ ಕಫವಿಕಾರಗಳನ್ನು ಉಷ್ಣವಾಗಿರುವುದರಿಂದ ವಾತ ವಿಕಾರಗಳನ್ನು ಕಡಿಮೆ ಮಾಡಲು ಸಮರ್ಥವಾಗಿದೆ.

 • ನುಗ್ಗೆಯು ಚಕ್ಕೆ ಹಾಗೂ ಎಲೆಗಳ ಲೇಪನ ಹಾಕಿದರೆ ಕುರುಗಳು ಬೇಗನೆ ಹಣ್ಣಾಗುವುವು. ನುಗ್ಗೆ ಬೀಜಗಳ ಚೂರ್ಣವನ್ನು ನಶ್ಯಮಾಡಿದರೆ ಶಿರೋವಿರೇಚನವಾಗಿ ತಲೆ ಹಗುರಾಗುವುದು. ಬೀಜದ ತೈಲವು ಸಂದು ನೋವನ್ನು ಕಡಿಮೆ ಮಾಡುವುದಲ್ಲದೆ ಬಾವನ್ನು ಕೂಡ ಇಳಿಸುವುದು.
 • ಅಗ್ನಿಮಾಂದ್ಯ, ಅಪಚನ, ಹೊಟ್ಟೆಯುಬ್ಬರ, ಹೊಟ್ಟೆನೋವು, ಹೃದ್ರೋಗಗಳಿಗೆ ನುಗ್ಗೆಯು ಉಪಯುಕ್ತವೆನಿಸಿದೆ. ಅಗ್ನಿ ಮಾಂದ್ಯವಿದ್ದವರು ನಿತ್ಯ ನುಗ್ಗೆಕಾಯಿಯ ಪಲ್ಯ, ಸಾರು ಊಟ ಮಾಡಿದರೆ ಪಚನಶಕ್ತಿಯು ಹೆಚ್ಚುವುದು.
 • ಕೆಮ್ಮು, ಉಬ್ಬುಸ ವಿಕಾರಗಳಲ್ಲಿ ನುಗ್ಗೆಯು ಪರಿಣಾಮಕಾರಿಯಾಗಿದೆ.
 • ಅರ್ಧಾಂಗ ವಾತದಲ್ಲಿ ನುಗ್ಗೆ+ಔಡಲ ಬೇರಿನಲ್ಲಿ ಕಷಾಯವನ್ನು ಸಿದ್ಧಪಡಿಸಿ ಕೊಡುತ್ತಾರೆ.
 • ನುಗ್ಗೆಯು ನಾಡೀ ಸಂಸ್ಥಾನದ ಮೇಲೆ ಉತ್ತೇಜಕ ಕೆಲಸ ಮಾಡುವುದರಿಂದ ಇಡೀ ದೇಹದ ಮೇಲೆ ಪರಿಣಾಮಕಾರಿ ಎನಿಸಿದೆ. ರಕ್ತದೊತ್ತಡವನ್ನು ಹೆಚ್ಚಿಸುವ, ಹೃದಯಗತಿಯನ್ನು ಏರಿಸುವ, ರಕ್ತವಾಹಿನಿಗಳನ್ನು ಸಂಕೋಚಗೊಳಿಸುವ ಗುಣ ಇದಕ್ಕಿದೆ. ಆದ್ದರಿಂದ ನಾಡೀ ದೌರ್ಬಲ್ಯ, ಅರ್ಧಾಂಗವಾತ,ಮ ಅರ್ದಿತವಾತ ವಿಕಾರಗಳಲ್ಲಿ ನುಗ್ಗೆಯನ್ನು ವಿಶೇಷವಾಗಿ ಬಳಸಲಾಗುತ್ತದೆ.
 • ನುಗ್ಗೆಯು ಎಳೆಯ ಕಾಯಿಗಳನ್ನು ಹೆಚ್ಚಾಗಿ ಉಪಯೋಗಿಸಿದರೆ ಜಂತುಹುಳು ಹಾಗೂ ಕಿಲಬಿಹುಳಗಳನ್ನ ತಡೆಗಟ್ಟಬಹುದು.
 • ನುಗ್ಗೆ ಎಲೆಗಳ ರಸವನ್ನು ಮೃದುವಾದ ಅಗ್ನಿಯಲ್ಲಿ ಬಿಸಿಮಾಡಿ ಅದಕ್ಕೆ ಸ್ವಲ್ಪ ಸಕ್ಕರೆ ಹಾಲು ಸೇರಿಸಿ ನಿತ್ಯ ಬೆಳಿಗ್ಗೆ ಮಕ್ಕಳಿಗೆ ಕೊಟ್ಟರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಪ್ರಮಾಣ:

ಮೂಲ ಚಕ್ಕೆಯು ಸ್ವರಸ ೧೦ ರಿಂದ ೨೦ ಮಿ.ಲೀ
ಬೀಜಚೂರ್ಣ ೧ ರಿಂದ ೩ ಗ್ರಾಂ

ಯೋಗ : ಶೋಭಾಂಜನಾದಿ ಲೇಪ

ಎಚ್ಚರಿಕೆ: ಪಿತ್ತವಿಕಾರಗಳಿದ್ದವರು ನುಗ್ಗೆಯನ್ನು ವಿಶೇಷವಾಗಿ ಉಪಯೋಗಿಸಬಾರದು.