. ಅಮೃತಬಳ್ಳಿ (ಗುಡೂಚಿ) (Tinespora cordifolia)

ಆಯುರ್ವೇದದಲ್ಲಿ ‘ಅಮೃತ’ ಎನ್ನುವ ಹೆಸರನ್ನು ಹಲವಾರು ಮೂಲಿಕೆಗಳಿಗೆ ಬಳಸಿದ್ದಾಗಿದ್ದರೂ ವಿಶೇವಾಗಿ ಆ ಹೆಸರನ್ನು ವತ್ಸನಾಭ ಹಾಗೂ ಅಮೃತ ಬಳ್ಳಿಗಳಿಗೆ ಬಳಸಲಾಗಿದೆ. ವತ್ಸನಾಭಿ ಒಂದು ವಿಷಪದಾರ್ಥವಾಗಿದ್ದು ಅದರ ಬಳಕೆಯು ಕಡಿಮೆ ಇರುವುದರಿಂದ ಅಮೃತ ಬಳ್ಳಿಗೆ “ಅಮೃತ” ವೆಂದು ಕರೆಯುವುದು ಸೂಕ್ತವೆನಿಸುತ್ತದೆ. ಕನ್ನಡದಲ್ಲಿ ಇದಕ್ಕೆ ಕಪಿಹಂಬು, ಕಪಿ ಉಡಿದಾರವೆಂದೂ ಕರೆಯುತ್ತಾರೆ. ಅಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾಗಿದ್ದು ಸಾಮಾನ್ಯ ರೋಗಗಳಿಗೆ ಸಂಜೀವಿನಿ ಎನಿಸಿದೆ.

ಅಮೃತಬಳ್ಳಿಯು ದೊಡ್ಡದಾಗಿ ಹರಡುವುದು. ಆಲದ ಮರದಲ್ಲಿ ಕಂಡುಬರುವಂತೆ ಇದರಲ್ಲು ಬಿಳಿಲು ಬಿಟ್ಟಿರುತ್ತವೆ. ಕಾಂಡಗಳು ಬಿಳಿದಾದ ಗ್ರಂಥಿಗಳಿಂದ ತುಂಬಿರುತ್ತವೆ. ಎಲೆಗಳು ಹಸಿರಾಗಿದ್ದು ೫ ರಿಂದ ೧೦ ಸೆಂಟಿ ಮೀಟರ್ ಉದ್ದವಾಗಿದ್ದು ೭ ರಿಂದ ೯ ನರಗಳಿಂದ ಕೂಡಿರುತ್ತವೆ. ಹೃದಯದ ಆಕಾರದಂತಿರುತ್ತವೆ ಹೂವುಗಳು ಸಣ್ಣಗಿರುತ್ತವೆ. ಕಾಯಿಗಳು ಕೆಂಪು ಬಣ್ಣವಾಗಿದ್ದು, ಕಡಲೇಕಾಳಿನ ಗಾತ್ರವಿರುವುವು. ಇದರ ಕಾಂಡವನ್ನು ಮಾತ್ರ ಔಷಧಕ್ಕಾಗಿ ಉಪಯೋಗಿಸುತ್ತಾರೆ. ಹಸಿ ಇದ್ದಾಗಲೇ ಉಪಯೋಗಿಸಬೇಕು.

ಭಾರತದ ಉಷ್ಣ ಪ್ರದೇಶದಲ್ಲಿ ಸಮುದ್ರ ಮಟ್ಟಕ್ಕಿಂತ ೧೦೦೦ ಅಡಿ ಎತ್ತರ ಪ್ರದೇಶಗಳಲ್ಲಿ ಹಾಗೂ ಅಂಡಮಾನ ದ್ವೀಪಗಳಲ್ಲಿ ಅಮೃತಬಳ್ಳಿಯು ವಿಶೇಷವಾಗಿ ಬೆಳೆಯುವುದು. ಇದು ಕರ್ನಾಟದಕಲ್ಲಿಯೂ ಹೆಚ್ಚಾಗಿ ಬೆಳೆಯುವುದು. ಬಳ್ಳಿಯನ್ನು ಸಿಂಬೆಸುತ್ತಿ ಮಣ್ಣಿನಲ್ಲಿ ಹೂರು ನೀರು ಹಾಕುತ್ತಿದ್ದರೆ ಹುಲುಸಾಗಿ ಬೆಳೆಯುವುದು.

ಆಯುರ್ವೇದದಲ್ಲಿ ಅಮೃತಬಳ್ಳಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದ್ದು, ಇದು ಆಯುಷ್ಯವನ್ನು ಹೆಚ್ಚಿಸುವುದರಿಂದ ಹಾಗೂ ಅಮೃತ ಸಮಾನವಾದ ಗುಣಗಳನ್ನು ಹೊಂದಿರುವುದರಿಂದ ಇದಕ್ಕೆ “ಅಮೃತಬಳ್ಳಿ” ಎಂದು ಹೆಸರಿಸಲಾಗಿದೆ. ಇದು ಸ್ವರಸ, ಕಷಾಯ, ಸತ್ವಗಳನ್ನು ಔಷಧಿ ರೂಪದಲ್ಲಿ ಉಪಯೋಗಿಸಲಾಗುತ್ತದೆ.

ಗುಣ – ಗುರು, ಸ್ನಿಗ್ಧ
ರಸ-ತಿಕ್ತ, ಕಷಾಯ
ವಿಷಾಕ-ಮಧುರ
ವೀರ್ಯ-ಉಷ್ಣ

ಇದು ಮುಖ್ಯವಾಗಿ ತ್ರಿದೋಷನಾಶಕವೆನಿಸಿದೆ. ತುಪ್ಪದೊಡನೆ ಹಿಪ್ಪಲಿ ಕೊಡುವುದರಿಂದ ವಾತವನ್ನು, ಸಕ್ಕರೆಯೊಡನೆ ಕೊಡುವುದರಿಂದ ಪಿತ್ತವನ್ನು ಹಾಗೂ ಶುಂಠಿಯೊಡನೆ ಕೊಡುವುದರಿಂದ ಕಫವನ್ನು ಕಡಿಮೆ ಮಾಡುವುದು. ಸ್ನಿಗ್ಧ- ಉಷ್ಣವಿರುವುದರಿಂದ ವಾತ, ತಿಕ್ತ – ಕಷಾಯ ರಸಗಳಿರುವುದರಿಂದ ಕಫ ಹಾಗೂ ಪಿತ್ತಗಳನ್ನ ಶಮನಗೊಳಿಸುವುದು. ನೀರಡಿಕೆಯನ್ನು ಕಡಿಮೆ ಮಾಡುವುದು, ವಾಂತಿಯನ್ನು ನಿಲ್ಲಿಸುವುದು. ದೀಪಕ-ಪಾಚಕವಾಗಿದೆ. ಆಮ್ಲಪಿತ್ತವನ್ನು ಮಾಡುವುದು. ಕ್ರಿಮಿದೋಷವನ್ನು ನಿವಾರಿಸುವುದು, ವಿಕಾರಗಳಲ್ಲಿ ಇದನ್ನು ವಿಶೇಷವಾಗಿ ಪ್ರಯೋಗಿಸಲಾಗುವುದು. ಇದರ ಪಿಷ್ಟ ಪದಾರ್ಥವು ಅತಿಸಾರ, ಆಮಶಂಕೆ ರೋಗಗಳಲ್ಲಿ ಗುಣಕಾರಿಯಾಗಿದೆ. ದೌರ್ಬಲ್ಯ, ಕ್ಷಯ, ಕ್ಷೀಣತೆಗಳಲ್ಲಿ ಇದು ರಸಾಯನವಾಗಿ ಉಪಯೋಗವಾಗುವುದು.

ಇತ್ತೀಚೆಗೆ ನಡೆದ ಸಂಶೋಧನೆಗಳಿಂದ ಇದು ಜೀವಾಣು ಸಾಂಕರ್ಯ ರೋಗಗಳನ್ನು ನಿವಾರಿಸುವುದು ಎಂದು ಕಂಡುಬಂದಿದೆ.

ಯೋಗಗಳು

 • ಪುಡಿಯನ್ನು ಬಿಸಿನೀರಿನೊಡನೆ ತೆಗೆದುಕೊಂಡರೆ ಹಳನೆಗಡಿ, ಗಂಟಲು ಬಾವು, ಕೆಮ್ಮುಗಳು ಗುಣವಾಗುತ್ತವೆ.
 • ಅಮವಾತಕ್ಕೆ ಶುಂಠಿಯೊಡನೆ ಸೇವಿಸಿದರೆ ಉತ್ತಮ ಗುಣಕೊಡುವುದು.
 • ಕೆಂಪು ಕಲ್ಲುಸಕ್ಕರೆ ಪುಡಿಯೊಡನೆ ತಗೆದುಕೊಂಡರೆ ತಲೆಸುತ್ತುವಿಕೆ, ವಾಂತಿ, ಹೊಟ್ಟೆಯಲ್ಲಿ ಸಂಕಟಗಳು ದೂರವಾಗುತ್ತವೆ.
 • ಜಠರವ್ರಣ, ಸಣ್ಣ ಹಾಗೂ ದೊಡ್ಡ ಕರುಳಿನ ವ್ರಣಗಳಿಗೆ ಇದೊಂದು ಪರಿಣಾಮಕಾರಿ ಔಷಧಿ ಎನಿಸಿದೆ. ಪಥ್ಯದೊಡನೆ ಒಂದುವರೆಯಿಂದ ಎರಡು ತಿಂಗಳು ತೆಗೆದುಕೊಳ್ಳಬೇಕು.
 • ಇದರ ಸೇವನೆಯಿಂದ ರಕ್ತದಲ್ಲಿನ ಕೆಂಪು ಜೀವಾಣುಗಳು ಬೆಳೆಯುವುದಾದ್ದರಿಂದ ಪಾಂಡು ರೋಗದಲ್ಲಿ ಉಪಯುಕ್ತವೆನಿಸಿದೆ.

ಪ್ರಮಾಣ:

ಕಷಾಯ ೫೦ ರಿಂದ ೧೦೦ ಮಿ.ಲಿ
ಚೂರ್ಣ- ೩ ರಿಂದ ೬ ಗ್ರಾಂ. ಸತ್ವ -೧/೨ ರಿಂದ ೧ ಗ್ರಾಮು

ವಿಶಿಷ್ಟ ಯೋಗಗಳು – ಗುಡುಚ್ಯಾದಿ ಚೂರ್ಣ, ಗುಡುಚ್ಯಾದಿ ಕ್ವಾಥ, ಅಮೃತಾರಿಷ್ಟ, ಅಮೃತ ಸತ್ವ, ಅಮೃತ ತೈಲ, ಅಮೃತ್ಯಾದಿ ಘೃತ, ಅಮೃತ ಹರೀತಕಿ

. ಅಡಸಾಲ (Adhatoda Vasica Nees)

ಇದಕ್ಕೆ ವಾಸಾ, ವಾಸಕ, ವಾಸಿಕಾ ಎಂತಲೂ ಕರೆಯುತ್ತಾರೆ. ಇದನ್ನು ಕೆಮ್ಮಿನ ಔಷಧಿಗಳಲ್ಲೆಲ್ಲ ವಿಶೇಷವಾಗಿ ಬಳಸಲಾಗುತ್ತಿದೆ. ಕಫನಾಶಕ ಗುಣವು ಅಡಸಾಲಕ್ಕಿದೆ. ಹೊಲ-ತೋಟಗಳ ದಂಡೆಗುಂಟ ವಿಪುಲವಾಗಿ ಬೆಳೆಯುವ ಈ ಅಡಸಾಲದ ಮಹತ್ವ ಈಗ ದೇಶ-ವಿದೇಶಗಳಿಗೆ ಹಬ್ಬಿದೆ. ಇತ್ತೀಚೆಗೆ ಇದರಿಂದ ಹೊರತಂದ ಸತ್ವ “ಬ್ರೋಮೋಗ್ಜಿನ್”ವು ಅತ್ಯುತ್ತಮ ಕೆಮ್ಮಿನ ಔಷಧವೆನಿಸಿದೆ. ಕಫವನ್ನು ನೀರು ಮಾಡಿ ಕೆಮ್ಮಿನ ವೇಗವನ್ನು ಕಡಿಮೆ ಮಾಡುವ ಗುಣವು ಇದರಲ್ಲಿದೆ.

ಈ ಸಸ್ಯವು ಮೂಲತಃ ಚೈನಾ ದೇಶದ್ದಾಗಿದ್ದು ಭಾರತದಲ್ಲೆಲ್ಲಾ ಬೇಲಿಯ ಗಿಡ ಅಥವಾ ಸಣ್ಣ ಮರಂದತೆ ಬೆಳೆಯುತ್ತಿದ್ದ ಇದರ ಎಲೆ, ಬೇರು, ಚಿಗುರುಗಳೆಲ್ಲ ಉಪಯುಕ್ತವೆನಿಸಿದೆ. ೩ ರಿಂದ ೫ ಅಡಿ ಎತ್ತರ ಬೆಳೆಯುವ ಈ ಗಿಡದ ಎಲೆಗಳು ಅಗಲ ಹಾಗೂ ಮೊನಚಾಗಿದ್ದು ಹೂಗಳು ಹಳದಿ ಇಲ್ಲವೆ ಬಿಳಿಯಾಗಿರುತ್ತವೆ. ಇದರಲ್ಲಿ ವಿಶಿಷ್ಟ ತೈಲಾಂಶಗಳ ವಾಸನೆಯಿಂದ ರೋಗಾಣುಗಳು ನಾಶಗೊಂಡು ರೋಗ ಪ್ರಸಾರವನ್ನು ತಡೆಯಲು ಶಕ್ಯವಾಗುವುದು.

ಗುಣ – ರೂಕ್ಷ, ಲಘು
ರಸ – ತಿಕ್ತ, ಕಷಾಯ
ವಿಪಾಕ – ಕಟು
ವೀರ್ಯ- ಶೀತ

ಅಡಸಾಲವು ಕಫ, ಶೀತ ಹಾಗೂ ಪಿತ್ತವಿಕಾರಗಳನ್ನು ನಾಶಪಡಿಸುವುದು, ಇದರ ಎಲೆಗಲ ಲೇಪನದಿಂದ ಬಾವು ನೋವುಗಳು ಕಡಿಮೆಯಾಗುವವಲ್ಲದೆ ಕ್ರಿಮಿಘ್ನಗುಣ ಕೂಡ ಇದಕ್ಕಿದೆ. ರಕ್ತಶೋಧಕ -ಸ್ತಂಭಕ ಗುಣಗಳೂ ಇವೆ. ಕಫಹರಣ ಮಾಡಿ ಕೆಮ್ಮು ಕಡಿಮೆ ಮಾಡುವುದರೊಡನೆ ಒಡೆದ ಧ್ವನಿಯನ್ನು ಸರಿಪಡಿಸುವುದು ಹಾಗೂ ದಮ್ಮನ್ನು ಕೂಡ ಕಡಿಮೆ ಮಾಡುವುದು.

ಕೆಲ ಪ್ರಯೋಗಗಳು: ಆ ಕೆಮ್ಮಿಗೆ ಅಡಸಾಲದ ಹಣ್ಣೆಲೆಗಳನ್ನು ತೆಗೆದುಕೊಂಡು ಸ್ವಲ್ಪ ಬೆಚ್ಚಗೆ ಮಾಡಿ ಜಜ್ಜಿ ರಸ ತೆಗೆದು ಅದಕ್ಕೆ ಕಲ್ಲುಸಕ್ಕರೆ ಸೇರಿಸಿ ತೆಗೆದುಕೊಳ್ಳಬೇಕು. ಇದಕ್ಕೆ ೧೨೫ ರಿಂದ ೨೫೦ ಮಿಲಿಗ್ರಾಂ ಹಿಪ್ಪಲಿ ಪುಡಿಯನ್ನು ಸೇರಿಸಿ ತೆಗೆದುಕೊಂಡರೆ ಹೆಚ್ಚು ಉಪಯುಕ್ತ.

 • ಹಳೆಯ ಕೆಮ್ಮು, ದಮ್ಮು, ಕ್ಷಯಕ ಕೆಮ್ಮಿನ ರೋಗಿಗಳು ಒಣಗಿದ ಅಡಸಾಲ ಹಾಗು ಮದಗುಣಿಕೆಯ ಎಲೆಗಳನ್ನು ಪುಡಿಮಾಡಿ ಚಿಲುಮೆಯಲ್ಲಿ ಹಾಕಿ ಸೇದುವರಿಂದ ಕೆಮ್ಮಿನ ವೇಗ ಕಡಿಮೆ ಆಗಿ ಕಫ ಕರಗಿ ಹೊರಬರಲು ಸಹಾಯಕವಾಗುತ್ತದೆ.
 • ಚಿಕ್ಕ ಮಕ್ಕಳ ಕೆಮ್ಮಿಗೆ ಕೂಡ ಇದು ತುಂಬ ಒಳ್ಳೆಯ ಔಷಧಿ. ಅಡಸಾಲದ ರಸಕ್ಕೆ ಕೆಲ್ಲುಸಕ್ಕರೆ ಸೇರಿಸಿ ಕೊಟ್ಟರೆ ಮಕ್ಕಳಿಗೆ ತೆಗೆದು ಕೊಳ್ಳಲು ಅನುಕೂಲವಾಗುವುದು.
 • ಕಫದ ಜೊತೆ ರಕ್ತ ಬೀಳುತ್ತಿದ್ದರೆ ರಕ್ತ ಮಿಶ್ರಿತ ಆಮಶಂಕೆ, ಸ್ತ್ರೀಯರಲ್ಲಿ ರಕ್ತಪ್ರದರ, ಅತ್ಯಾರ್ತವ ವಿಕಾರಗಳಲ್ಲಿ ಅಡಸಾಲದ ಸ್ವರಸವನ್ನು ನಿತ್ಯ ಬೆಳಿಗ್ಗೆ – ರಾತ್ರಿ ತೆಗೆದುಕೊಳ್ಳುವುದರಿಂದ ರಕ್ತಸ್ರಾವ ನಿಲ್ಲುವುದು.
 • ಹುರುಕು, ಕಜ್ಜಿ, ಗಜಕರ್ಣ, ಇಸಬು ಮೊದಲಾದ ಚರ್ಮ ವಿಕಾರಗಳಲ್ಲಿ ಉಪಯುಕ್ತವೆನಿಸಿದೆ.
 • ಮಲೇಸಿಯಾದಲ್ಲಿ ಅಡಸಾಲವನ್ನು ಮತಿಭ್ರಮಣೆ ತಡೆಯಲು, ನಿತ್ರಾಣ ಕಡಿಮೆ ಮಾಡಲು ವಿಷಪ್ರಾಣಿ ಕಡಿತದ ವಿಷವನ್ನು ಕಡಿಮೆ ಮಾಡಲು ಉಪಯೋಗಿಸುವರು.

ಪ್ರಮಾಣ :

ಎಲೆಸ್ವರಸ ೧೦ ರಿಂದ ೨೦ ಮಿ.ಲಿ.
ಮೂಲ ಕಷಾಯ ೪೦ ರಿಂದ ೫೦ ಮಿ.ಲಿ.

ವಿಶಿಷ್ಟ ಯೋಗ: ವಾಸಾವಲೇಹ್ಯ, ವಾಸಾರಿಷ್ಟ, ವಾಸಾಚಂದನಾದಿ ತೈಲ.

. ಅರಿಷಣ (Curcuma Long-Termeric)

ಅರಿಷಣವು ನಿತ್ಯ ಅಡಿಗೆಯಲ್ಲಿ ಉಪಯೋಗವಾಗುವ ಸಾಂಬಾರ ಪದಾರ್ಥ. ಅದರೊಡನೆ ಸೌಂದರ್ಯ ಸಾಧನವೆಂದೂ – ಔಷಧಿ ಎಂದೂ ಪ್ರಯೋಜಕವೆನಿಸಿದೆ. ಹಿಂದೂ ಸಂಪ್ರದಾಯದಲ್ಲಿ ಇದು ಸೌಭಾಗ್ಯ ಸಂಕೇತವೆನಿಸಿದೆ.

ಇದರ ಗಿಡವು ೨ ರಿಂದ ೩ ಪುಟ ಬೆಳೆಯುವುದು, ಪೆರಿನ್ನಿಯಲ್ ಗುಂಪಿಗೆ ಸೇರಿದೆ. ಚಿಕ್ಕ ಕಾಂಡ ಹಾಗು ಗೊಂಚಲುಗಳನ್ನು ಹೊಂದಿದೆ. ಹಳದಿ ವರ್ಣವು ವಿಶೇಷವಾಗಿ ಗಡ್ಡೆಗಳಲ್ಲಿರುತ್ತದೆ. ಗಡ್ಡೆಗಳಲ್ಲಿ ಚಿಕ್ಕವು ದೊಡ್ಡವುಗಳೆಂದು ಎರಡು ನಮೂನೆಗಳಿವೆ. ಅರಿಷಣವು ಎಲ್ಲ ಹವಾಮಾನಗಳಲ್ಲಿಯು ಬೆಳೆಯುತ್ತದೆ. ಭಾರತ, ಚೀನ, ಈಸ್ಟ ಇಂಡೀಸ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಅರಿಷಣವನ್ನು ಬೆಳೆಯುತ್ತಾರೆ. ಇದರಲ್ಲಿ ೫% ರಿಂದ ೮% ಹಾರಿ ಹೋಗುವ ತೈಲಾಂಶ ಹಾಗೂ ಕುರ್ಕುಮಿನ್ ಎಂಬ ಹಳದಿ ರಂಜಕ ದ್ರವ್ಯಗಳು ವಿಶೇಷವಾಗಿವೆ.

ಗುಣ – ರೂಕ್ಷ, ಲಘು
ರಸ – ತಿಕ್ತ, ಕಟು
ವಿಷಾಕ- ಕಟು
ವೀರ್ಯ – ಉಷ್ಣ

ಅರಿಷಣವು ಉಷ್ಣವೀರ್ಯವಾಗಿರುವುದರಿಂದ ಕಫವಾತ ಶಾಮಕ, ಪಿತ್ತರೇಚಕನವೆನಿಸಿದೆ. ತಿಕ್ತ ರಸವಿರುವುದರಿಂದ ಪಿತ್ತ ಶಾಮಕವೆನಿಸಿದೆ. ಶೋಥವನ್ನು ಕಡಿಮೆ ಮಾಡುವುದು, ದೀಪಕವೆನಿಸಿದೆ. ಚರ್ಮವಿಕಾರಗಳನ್ನು ದೂರಗೊಳಿಸಿ ಚರ್ಮಕ್ಕೆ ಒಳ್ಳೆ ಕಾಂತಿಯನ್ನು ಕೊಡುವುದು. ವ್ರಣಶೋಧಕ-ರೋಪಕವಾಗಿದೆ. ಇದಲ್ಲದೆ ಸ್ತನ್ಯಶೋಧನ ಗುಣವನ್ನು ಇದು ಹೊಂದಿದೆ. ಪ್ರಮೇಹ ರೋಗಕ್ಕೆ ಇದು ಉಪಯುಕ್ತವೆನಿಸಿದೆ.

ಕೆಲ ಪ್ರಯೋಗಗಳು

 • ಅರಿಷಣವು ಕೆಮ್ಮು-ನೆಗಡಿಗಳಿಗೆ ಒಂದು ಒಳ್ಳೆಯ ಔಷಧಿ ಎನಿಸಿದೆ. ನೆಗಡಿ ಬಂದಾಗ ಆಗುವುದು. ಅಲ್ಲದೇ ಬಿಸಿಹಾಲಿಗೆ ಅರಿಷಿಣ ಪುಡಿ, ಬೆಲ್ಲ, ಮೆಣಸುಗಳನ್ನು ಕೂಡಿಸಿ ಕುಡಿಯಬಹುದು. ಕೆಮ್ಮಿಗೂ ಇದು ಒಳ್ಳೆಯ ಔಷಧಿ ಎನಿಸಿದೆ.
 • ಮೇಹ ರೋಗಗಳಲ್ಲಿ ಮೂತ್ರವು ಸರಿಯಾಗಿ ಹೋಗದೆ ಉರಿಯುತ್ತಿದ್ದರೆ ಅರಿಷಿಣ ನೆಲ್ಲಿಕಾಯಿ ಚೂರ್ಣದ ಕಷಾಯವನ್ನು ಮಾಡಿ ಕುಡಿಯಲು ಕೊಟ್ಟರೆ ಉರಪು ಕಡಿಮೆ ಆಗುವುದಲ್ಲದೆ ಮೂತ್ರವು ಸರಿಯಾಗಿ ಹೋಗುವುದು. ಮಧುಮೇಹಕ್ಕೆ -ನೆಲ್ಲಿಕಾಯಿ ಚೂರ್ಣಕ್ಕೆ ನಾಲ್ಕು ಪಟ್ಟು ಅರಿಷಿನ ಸೇರಿಸಿ ಒಣಗಿಸಿಟ್ಟುಕೊಂಡು ಬೆಳಿಗ್ಗೆ-ರಾತ್ರಿ ಊಟಕ್ಕೆ ಮೊದಲು ಸೇವಿಸಬೇಕು.
 • ಕಾಮಾಲೆ ರೋಗಕ್ಕೆ ೧೦ ಗ್ರಾಂ ಅರಿಷಿಣ ಪುಡಿಯನ್ನು ಕೆನೆ ಇಲ್ಲವೆ ಮೊಸರಿನಲ್ಲಿ ಕದಡಿಕೊಂಡು ೮-೧೦ ದಿವಸಗಳವರೆಗೆ ನಿತ್ಯ ಸಾಯಂಕಾಲ ಸೇವಿಸಿದರೆ ರೋಗವು ಬೇಗನೆ ನಿಯಂತ್ರಣಕ್ಕೆ ಬರುವುದು.
 • ಒಂದು ಅಂಗುಲದಷ್ಟು ಅರಿಷಿಣ ಬೇರನ್ನು ಪುರಿಮಾಡಿಕೊಂಡು ಮಜ್ಜಿಗೆಯಲ್ಲಿ ಹಾಕಿ ಒಂದು ವಾರದವರೆಗೆ ಕುಡಿದರೆ ಮೂಲವ್ಯಾದಿ, ಸಂಧಿವಾತ, ಅತಿಸಾರ ಹಾಗು ಹಳೆಯ ಚರ್ಮರೋಗಗಳು ಗುಣವಾಗುವುವು.
 • ಮೈಕಾಂತಿ – ಸೌಂದರ್ಯ ಹೆಚ್ಚಲು ಅರಿಷಿಣಪುಡಿ + ಚಂದನಗಳನ್ನು ಎಣ್ಣೆಯಲ್ಲಿ ಬೆರಿಸಿ ಮೈಗೆಲ್ಲ ಹೆಚ್ಚಿಕೊಂಡ ನಂತರ ಸ್ನಾನ-ಅಭ್ಯಂಗ ಮಾಡುವ ರೂಢಿ ಇದೆ. ಇದು ಚರ್ಮ ರೋಗಗಳನ್ನು ನಿರೋಧಿಸುವುದಲ್ಲದೆ ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ಕೊಡುವುದು.
 • ಮುಖದ ಮೇಲೆ ಮಡಿಬೊಕ್ಕೆಗಳಾಗಿ ಕಪ್ಪು ಕಲೆ ಕುಳಿತಿರುವವರಿಗೆ ಇದನ್ನು ನಿತ್ಯ ರಾತ್ರಿ ಮಲಗುವಾಗ್ಗೆ ಬೆಣ್ಣೆಯಲ್ಲಿ ಅರಿಷಣದ ತಿಳು ಬಟ್ಟೆಯಲ್ಲಿ ಶೋಧಿಸಿಕೊಂಡ ಪುಡಿಯನ್ನು ಸೇರಿಸಿ, ಕಲಿಸಿಕೊಂಡು ಮುಖ ತೊಳೆದುಕೊಂಡ ನಂತರ ಹಚ್ಚುತ್ತ ಹೋದರೆ ಒಂದೆರಡು ತಿಂಗಳುಗಳಲ್ಲಿ ಆ ಕಲೆಗಳು ಹೋಗಿ ಮುಖ ಸೌಂದರ್ಯ ಕೂಡ ಹೆಚ್ಚುವುದು.

ಇದಕ್ಕೆ ಕ್ರಿಮಿನಾಶಕ ಗುಣವಿದೆ. ಆದ್ದರಿಂದ ಗಾಯಗಳಿಗೆ ಉಪಯೋಗಿಸಬಹುದು. ಹೋಮ-ಹವನಗಳಲ್ಲಿ ಬಳಸಿದ ಅರಿಷಿಣದಿಂದ ಪರಿಸರ ಶುದ್ಧಿಯಾಗುತ್ತದೆ. ಆಹಾರದಲ್ಲಿ ಬಳಸಿದ ಅರಿಷಿಣದಿಂದ ಕ್ರಿಮಿಗಳು ನಾಶವಾಗುತ್ತವೆ.

ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ರೋಗವ್ನನು ನಿಯಂತ್ರಣದಲ್ಲಿಡುವ ಗುಣ ಈ ಅರಿಷಿನಕ್ಕೆ ಇದೆ ಎಂದು ಸಂಶೋಧನೆಯಿಂದ ಕಂಡುಬಂದಿದ್ದು ಈ ಕಾರ್ಯ ಇನ್ನೂ ಮುಂದುವರೆದಿದೆ. ಬಾಣಂತಿಯರು ನಿತ್ಯ ಸೇವಿಸಿದರೆ ಅವರ ಎದೆಹಾಲು ಶುದ್ಧವಾಗಿ ಅದನ್ನು ಕುಡಿದ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಅರಿಷಿನ ಪುಡಿ, ಉಪ್ಪುಗಳನ್ನು ನಿಂಬೆ ರಸದಲ್ಲಿ ಸೇರಿಸಿ ಲೇಪ ಹಾಕದರೆ ಪೆಟ್ಟು ಹಾಗು ಸಂದು ಉಳುಕುಗಳು ನೋವು ಕಡಿಮೆ ಆಗುತ್ತದೆ. ಹೊಟ್ಟೆಯಲ್ಲಿ ನೋವಿದ್ದರೆ ಅರಿಷಿನ ಪುಡಿ ಹಾಲನ್ನು ತೆಗೆದುಕೊಂಡರೆ ನೋವು ಕಡಿಮೆ ಆಗುವುದು.

ಎಚ್ಚರಿಕೆ : ನೀವು ಈ ಅರಿಷಿಣವನ್ನು ಅಡಿಗೆ, ಔಷಧಿಯಾಗಿ ಇಲ್ಲವೆ ಸೌಂದರ್ಯ ಸಾಧನೆಗಾಗಿ ಉಪಯೋಗಿಸುವುದಿದ್ದಾಗ ಪೇಟೆಯಲ್ಲಿ ದೊರಕುವ ಪುಡಿಯನ್ನು ತೆಗೆದುಕೊಳ್ಳದ ಮನೆಯಲ್ಲಿಯೇ ಬೇರನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು. ಹಾಗು ಅದನ್ನೇ ಉಪಯೋಗಿಸಬೇಕು.

ಪ್ರಮಾಣ: ೧ ರಿಂದ ೩ ಗ್ರಾಂ.

ವಿಶಿಷ್ಟ ಯೋಗ: ಹರಿದ್ರಾಖಂಡ, ನಿಶಾಮಲಕಿ, ಹರಿದ್ರಾಮಲಕಿ

. ಅಜವಾನ (ಒಮ)(Trachyspermum Ammlinn)

ಮನೆ ಔಷಧಿಗಳಲ್ಲಿ ಅಜವಾನಕ್ಕೊಂದು ತುಂಬ ಮಹತ್ವವಾದ ಸ್ಥಾನವಿದೆ. “ಅಜೀರ್ಣಕ್ಕೆ ಅಜವಾನ” ಎಂಬ ಮಾತೇ ಜನಜನಿತವಾಗಿದೆ. ಇದು ಟೊಂಗ ಟೊಂಗೆಗಾಗಿ, ಮೃದುವಾಗಿ ರೋಮುಗಳುಳ್ಳದ್ದಾಗಿ, ಎಲೆಮಯವಾಗಿ ೧ ರಿಂದ ೩ ಅಡಿಗಳವರೆಗೆ ಬೆಳೆಯುವುದು. ಇದು ಭಾರತಾದ್ಯಂತ ಬೆಳೆಯುವುದಾದರೂ ಇಂದೋರ, ಉಜ್ಜೈನಿ, ಗ್ವಾಲಿಯರುಗಳಲ್ಲಿ ಬೆಳೆಯುವ ಅಜವಾನಗಳು ಶ್ರೇಷ್ಠವೆನಿಸಿವೆ. ಇವು ಚಿಕ್ಕ ಹಾಗೂ ದೊಡ್ಡ ಪ್ರಮಾಣಗಳಲ್ಲಿ ಸಿಕ್ಕುತ್ತವೆ.

ಅಜವಾನಗಳಲ್ಲಿ ಸುಗಂಧಿತ ತೈಲಾಂಶವು ೨% ರಿಂದ ೪% ಇದ್ದು ಮುಖ್ಯವಾಗಿ ೩೫ ರಿಂದ ೬೫% ಥೈಮಾಲ್ ಇದೆ.

ಗುಣ : ಲಘು, ರೂಕ್ಷ, ತೀಕ್ಷ್ಣ
ರಸ: ಕಟು, ತಿಕ್ತ
ವಿಪಾಕ : ಕಟು
ವೀರ್ಯ: ಉಷ್ಣ

ಅಜವಾನವು ತೀಕ್ಷ್ಣ ಉಷ್ಣವಿರುವುದರಿಂದ ಕಫವಾತಶಾಮಕ ಹಾಗು ಪಿತ್ತ ವರ್ಧಕವೆನಿಸಿದೆ.

ಕೆಲ ಪ್ರಯೋಗಗಳು

೧. ಅಜೀರ್ಣ, ಅಪಾನ ವಾಯುಗಳಿಂದ ಹೊಟ್ಟೆ ನೋವು ಪ್ರಾರಂಭವಾಗಿದ್ದರೆ, ಅರ್ಧ ಚಮಚದಷ್ಟು ಅಜವಾನ ಪುಡಿಗೆ ೧-೨ಚಮಚ ಸೈಂಧವ ಲವಣವನ್ನು ಸೇರಿಸಿ ನೀರಿನಲ್ಲಿ ಹಾಕಿ ಕಲಿಸಿ ಕುಡಿಯಬೇಕು. ಅಲ್ಲದೇ ಮೇಲಿಮದ ಮೇಲೆ ಅಜೀರ್ಣ ವಾಯು ವಿಕಾರದವರು ನಿತ್ಯ ಊಟವಾದ ಬಳಿಕ ಅಜವಾನದ ಪುಡಿಯನ್ನು ತಿನ್ನುವುದೊಳಿತು.

೨. ಅಜೀರ್ಣ ಮೂಲದಿಂದ ವಾಂತಿ-ಭೇದಿ ವಿಕಾರದವರಿಗೆ ಅಜವಾನ ಕಷಾಯಕಕ್‌ಎ ಒಂದು ಗ್ರಾಂ ಪಚ್ಚಕರ್ಪೂರ ಸೇರಿಸಿ ಮೇಲಿಂದ ಮೇಲೆ ಕೊಡುತ್ತಿದ್ದರೆ ಗುಣ ಕಾಣುವುದು. ದೀಪನ-ಪಾಚನ ಕ್ರಿಯೆ ಆಗಿ ಹೊಟ್ಟೆ ಭಾರವೂ ಕಡಿಮೆ ಆಗುವುದು.

೩. ಅಮ, ರಕ್ತ ಮತ್ತು ಹೊಟ್ಟೆ ಮುರಿತಗಳಿಂದ ಆಮಶಂಕೆ ಭೇದಿ ಆಗುತ್ತಿರುವಾಗ ಅಜವಾನ+ಸೈಂಧವ ಲವಣ+ಜೇಷ್ಠ ಮಧಗಳ ಪ್ರಮಾಣಕ್ಕೆ ಮಜ್ಜಿಗೆಯೊಡನೆ ಮೇಲಿಂದ ಮೇಲೆ ಕೊಡುತ್ತಿದ್ದರೆ ತೊಂದರೆಗಳು ದೂರಾಗುವುವು.

೪. ಬಿಕ್ಕಳಿಕೆಗಳಿಗೆ ಒಂದು ಚಮಚೆ ಅಜವಾನದ ಪುಡಿಯನ್ನು ಬಿಸಿನೀರಿನಲ್ಲಿ ಹಾಕಿ ಮೇಲಿಂದ ಮೇಲೆ ತೆಗೆದುಕೊಳ್ಳುತ್ತಿರಬೇಕು.

೫. ಅಜಮೋದ ಯೋಗ:
ಹುರಿದ ಅಜವಾನ ೪ ಭಾಗ
ಶುಂಠಿ ಕಾಲು ಭಾಗ
ಸೈಂಧವ ಲವಣ ೧ ಭಾಗ
ಜಾಜಿಕಾಯಿ ಕಾಲು ಭಾಗ

ಈ ಔಷಧಿಯನ್ನು ಮನೆಯಲ್ಲಿಯೇ ಸಿದ್ಧಪಡಿಸಿಟ್ಟುಕೊಳ್ಳಬಹುದು. ಇದನ್ನು ಚಿಕ್ಕಮಕ್ಕಳಿಗೆ ದೊಡ್ಡವರಿಗೆ ಕೂಡ ಉಪಯೋಗಿಸಬಹುದು. ಇದು ಮೇಲಿಂದ ಮೇಲೆ ಮಕ್ಕಳಿಗಾಗುವ ಅಜೀರ್ಣ, ವಾಂತಿ, ಭೇದಿ, ವಿಕಾರ, ಹಲ್ಲು ಬರುವಾಗಿನ ತೊಂದರೆಗಳನ್ನು ನಿವಾರಿಸುವುದು.

೬. ಅಜವಾನ + ವಾಯುವಿಡಂಗ ಸಮಭಾಗ ಚೂರ್ಣವು ಕ್ರಿಮಿವಿಕಾರಗಳಲ್ಲಿ ಒಳ್ಳೆಯದು.

೭. ಅಜವಾನದಿಮದ ತಯಾರಿಸಿದ ತೈಲವನ್ನು ಸಂದಿಗೆ ಹಚ್ಚಿಕೊಂಡು ತಿಕ್ಕಿಕೊಂಡರೆ ಅಮವಾತವು ಕಡಿಮೆ ಆಗುತ್ತದೆ.

೮. ಹೆಚ್ಚಿನ ಪ್ರಮಾಣದಲ್ಲಿ ಅಜವಾನದ ಪುಡಿಯನ್ನು ತೆಗೆದುಕೊಳ್ಳಲು ಇಷ್ಟಡದವರಿಗೆ ಇದರ ಅರ್ಕವನ್ನು ಕೊಡಬಹುದು. ಇದು ಪೇಟೆಯಲ್ಲಿ ದೊರಕುವುದು.

ಪ್ರಮಾಣ:

ಚೂರ್ಣ : ೧ ರಿಂದ ೩ ಗ್ರಾಂ.
ತೈಲ : ೧ ರಿಂದ ೩ ಹನಿಗಳು
ಸತ್ವ: ೩೦ ರಿಂದ ೧೨೦ ಮಿಲಿ ಗ್ರಾಂ
ಅರ್ಕ ೨೦ ರಿಂದ ೪೦ ಮಿ.ಲಿ.

. ಅಶೋಕ (Saraca Asoca (Roxb) Dewilde)

ಮನೆ, ಅಂಗಳ, ತೋಟಗಳಲ್ಲಿ ಈ ಅಶೋಕ ಗಿಡಗಳು ಸಾಮಾನ್ಯವಾಗಿ ಬೆಳೆಯುವುದರಿಂದ ನಾವು ನೋಡುತ್ತೇವೆ. ಇವುಗಳಲ್ಲಿ ದುಂಡಗೆ, ಹಗುರವಾಗಿ ಗಿಡ್ಡವಾಗಿ ಬೆಳೆಯುವ ಜಾತಿ ಒಂದಾದರೆ ತಿಳುವಾಗಿ, ಎತ್ತರವಾಗಿ ಬೆಳೆಯುವ ಜಾತಿ ಇನ್ನೊಂದು ಇವೆರಡೂ ಗುಣಗಳಲ್ಲಿ ಒಂದೇ ತೆರನ. ಈ ಗಿಡಗಳು ಮಧ್ಯ ಹಾಗೂ ಪೂರ್ವ ಹಿಮಾಲಯ ಪ್ರದೇಶಗಳಲ್ಲಿ ವಿಶೇಷವಾಗಿ ಬೆಳೆಯುವುದು ಕಂಡುಬರುತ್ತದೆ.

ಗುಣ : ಲಘು, ರೂಕ್ಷ
ರಸ : ಕಷಾಯ, ತಿಕ್ತ
ವಿಷಾಕ : ಕಟು
ವೀರ್ಯ:ಶೀತ

ಅಶೋಕ ಗಿಡದ ಚೆಕ್ಕೆ, ಬೀಜ ಹಾಗೂ ಹೂವುಗಳು ಔಷಧಕ್ಕಾಗಿ ಉಪಯೋಗವಾಗುತ್ತವೆ.

ಅಶೋಕವು ಮುಖ್ಯವಾಗಿ ಸ್ತ್ರೀರೋಗಗಳಿಗೆ ಒಂದು ಅತ್ಯುಪಯುಕ್ತವಾದ ಔಷಧಿ ಎನಿಸಿದೆ. ಗರ್ಭಾಶಯ, ಢಿಂಬಾಶಯ ಸ್ನಾಯುಗಳಿಗೆ ಶಕ್ತಿಯನ್ನೀಯುವುದು, ಗರ್ಭಾಶಯ ಶೈಥಿಲ್ಯವನ್ನು ಹೋಗಲಾಡಿಸುವುದು. ವಿಶೇಷವಾಗಿ ಕಷ್ಟಾರ್ತವ, ಅಲ್ಪಾರ್ತವ, ರಕ್ತಪ್ರದರ, ಬಿಳಿಮುಟ್ಟು ಮುಂತಾದ ವಿಕಾರಗಳಲ್ಲಿ ಹೆಚ್ಚು ಉಪಯುಕ್ತವೆನಿಸಿದೆ. ಈ ಮೇಲ್ಕಂಡ ಕಾರಣಗಳಿಂದಾದ ಬಂಜೆತನವನ್ನು ಹೋಗಲಾಡಿಸುವುದು. ಸ್ತ್ರೀಯರ ಈ ಮೇಲ್ಕಾಣಿಸಿದ ಎಲ್ಲ ವಿಕಾರಗಳಲ್ಲಿ ಮುಖ್ಯವಾಗಿ ಅಂತಃಸ್ರಾವಿ ಗ್ರಂಥಿಗಳ ರಸ (Hormone) ಗಳನ್ನು ಬಳಸಲಾಗುತ್ತಿದೆ. ಅನೇಕ ವೇಳೆ ಈ ರಸಗಳು ಅಪಾಯವನ್ನುಂಟು ಮಾಡುವವು ಎಂಬ ಮಾತನ್ನು ಮರೆಯುವಂತಿಲ್ಲ. ಆದರೆ “ಅಶೋಕ” ದಂತಹ ದ್ರವ್ಯವು ಯಾವ ಅಪಾಯವನ್ನುಂಟು ಮಾಡದೆ ಒಳ್ಳೆ ಗುಣವನ್ನು ಕೊಡುವುದಂತಹುದಾಗಿದೆ ಎಂಬ ಮಾತನ್ನು ಮರೆಯಬಾರದು.

ಅಶೋಕ ಚಿಕ್ಕೆಯ ಕಷಾಯವನ್ನು ನಿತ್ಯ ಸೇವಿಸಿದರೆ ಸ್ತ್ರೀಯರಲ್ಲಾಗುವ ಅಧಿಕ ರಕ್ತಸ್ರಾವ, ಸರಿ ಇಲ್ಲದ ಋತುಸ್ರಾವ, ಹೊಟ್ಟೆನೋವುಗಳು ದೂರವಾಗುವುವು. ಈ ಕಷಾಯವು ಗಂಟಲ ನೋವಿಗೂ ಉಪಯುಕ್ತವಾಗಿದೆ ಎಂದು ಕಂಡುಬಂದಿದೆ.

ಅಶೋಕ ಹೂವುಗಳಿಂದ ಎಣ್ಣೆ ತಯಾರಿಸಿ ಮಕ್ಕಳ ಚರ್ಮರೋಗಗಳಲ್ಲಿ ಉಪಯೋಗಿಸಬಹುದು.

೨ ಚಮಚೆ ಹೂವುಗಳಿಗೆ ೩೨ ಚಮಚೆ ನೀರನ್ನು ಹಾಕಿ ೧೦-೧೫ ನಿಮಿಷಗಳವರೆಗೆ ಕುದಿಸಿದ ಕಷಾಯವು ರಕ್ತ ಭೇದಿ, ಅಮಶಂಕೆಗಳಿಗೆ ಉಪಯುಕ್ತವಾಗಿದೆ.

ವಿಶಿಷ್ಟ ಯೋಗ : ಅಶೋಕಾರಿಷ್ಟ, ಅಶೋಕ ಘೃತ.

ಪ್ರಮಾಣ: ಚೆಕ್ಕೆಯ ಕಷಾಯ : ೪೦ ಮಿ.ಲಿ

ಬೀಜಚೂರ್ಣ : ೩ ರಿಂದ ೬ ಗ್ರಾಂ.

ಹೂವಿನ ಚೂರ್ಣ : ೩ ರಿಂದ ೬ ಗ್ರಾಂ.

. ಅರ್ಜುನ (ಮತ್ತಿಗಿಡ) (Terminallia Arjun)

ಇದೊಂದು ಭಾರತಾದ್ಯಂತ ಅರಣ್ಯಗಳಲ್ಲಿ ಬೆಳೆಯುವ ಮರ, ೬೦ ರಿಂದ ೮೦ ಅಡಿಗಳಷ್ಟು ಎತ್ತರ ಬೆಳೆಯುವುದು. ಇದರ ಚಕ್ಕೆ ತುಂಬ ಮೃದು ಹಾಗೂ ಗುಲಾಬಿ ಇಲ್ಲವೆ ಧೂಳಿ-ಬಿಳಿ ಬಣ್ಣದ್ದಿರುವುದು ಹಾಗೂ ತಮ್ಮಷ್ಟಕ್ಕೆ ತಾವೇ ಉದುರಿ ಬೀಳುತ್ತಿರುತ್ತವೆ. ಇವೇ ಚಕ್ಕೆಗಳು ಔಷಧೋಪಯುಕ್ತವಾಗಿವೆ. ಇದರ ಕಷಾಯ ಹೃದಯ ರೋಗಗಳಿಗೆ ಸಂಜೀವಿನಿ ಎನಿಸಿದೆ.

ಚಕ್ಕೆಯಲ್ಲಿ ಕ್ಯಾಲ್ಸಿಯಂ ೨೫% ಟೆನಿಸ್ ೧೫.೮% ಅರ್ಜುನಾಯಿನ್, ಸಕ್ಕರೆ, ಮ್ಯಾಗ್ನಿಶಿಯಂ ಮುಂತಾದ ರಸಾಯನ ಸಂಘಟಕಗಳಿವೆ.

ಗುಣ – ಲಘು, ರೂಕ್ಷ
ರಸ-ಕಷಾಯ
ವೀರ್ಯ – ಶೀತ
ವಿಪಾಕ – ಕಟು

ಪ್ರಯೋಗಗಳು

ಹೃದಯ ವಿಕಾರ, ಎದೆಗಾದ ಪೆಟ್ಟು, ಕ್ಷಯ ರೋಗಗಳಲ್ಲಿ ಇದರ ಉಪಯೋಗ ವಿಶೇಷವಾಗಿ ಆಗುವುದು, ಹೃದಯಕ್ಕೆ ಸಂಬಂಧಿತ ಎಲ್ಲ ರೋಗಗಳಲ್ಲಿ ಇದರ ಚಕ್ಕೆಯ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಒಳ್ಳೆ ಪರಿಣಾಮ ಆಗುವುದು.

ಅರ್ಜುನ ಮೂಲ ಚೂರ್ಣವನ್ನು ತೆಗೆದುಕೊಳ್ಳುವುದರಿಂದ ಮುರಿದ ಎಲುಬುಗಳು ಬೇಗನೆ ಕೂಡಿಕೊಳ್ಳುತ್ತವೆ. ಅಲ್ಲದೆ ಮೇಲ್ಬಾಗಕ್ಕೆ ಹಚ್ಚುವುದರಿಂದ ಪೆಟ್ಟಾದ ಭಾಗದಲ್ಲಿ ಸಂಗ್ರಹವಾದ ರಕ್ತವು ಕೂಡ ಕರಗಿ ಹೋಗುವುದು. ಎಲಬು ಮುರಿದ ಭಾಗದಲ್ಲಿ ಇದರ ಚೂರ್ಣವನ್ನು ತುಪ್ಪದಲ್ಲಿ ಕಲಿಸಿ ಲೇಪ ಹಾಕಿ ಬಿಗಿದಾಗಿ ಪಟ್ಟಿಕಟ್ಟಬೇಕು. ಅಲ್ಲದೆ ಚೂರ್ಣವನ್ನು ಸಕ್ಕರೆ ತುಪ್ಪಗಳೊಡನೆ ಸೇರಿಸಿ ಆಕಳ ಹಾಲಿನಲ್ಲಿ ಹಾಕಿಕೊಂಡು ಬೆಳಿಗ್ಗೆ ರಾತ್ರಿ ಒಂದು ಚಮಚದಷ್ಟು ತೆಗೆದುಕೊಳ್ಳಬೇಕು.

ಕಷಾಯವನ್ನು ಕುಡಿಯುವುದರಿಂದ ಜ್ವರ, ಮೂತ್ರಾವರೋಧಗಳು ದೂರವಾಗುವುವು.

ಚೂರ್ಣವನ್ನು ತಣ್ಣೀರಿನಲ್ಲಿ ಹಾಕಿ ಕುಡಿಯವುದರಿಂದ ಪಿತ್ತ ವಿಕಾರಗಳು ಶಮನವಾಗುವುವು.

ಪ್ರಮಾಣ : ಚೂರ್ಣ ೧ ರಿಂದ ೩ ಗ್ರಾಂ

ಸ್ವರಸ : ೧೦ ರಿಂದ ೨೦ ಮಿ.ಲೀ

ಕ್ಷೀರಪಾಕ: ೫ ರಿಂದ ೧೦ ಮಿ.ಲೀ

ವಿಶಿಷ್ಟಯೋಗಗಳು: ಅರ್ಜುನಾರಿಷ್ಟ, ಅರ್ಜನ ಘೃತ, ಕಕುಭಾದಿ ಚೂರ್ಣ.