ಈವರೆಗೆ ಮುಖ್ಯವಾದ ಗುಣವುಳ್ಳ ದ್ರವ್ಯಗಳನ್ನು ಒಂದೊಂದು ಗುಂಪಿನಲ್ಲಿ ಸೇರಿಸಿ ೫೦ ವಿಧಗಳಾಗಿ ವಿಂಗಡಿಸಿ ವಿವರಿಸಲಾಗಿದೆ. ನಾವು ಬೇಕಾದ ಒಂದು ದ್ರವ್ಯವನ್ನು ಆಯಾ ರಸ, ಗುಣ, ವೀರ್ಯ, ವಿಪಾಕ, ವಿಶೇಷಗಳಿಂದ ಅದರ ಗುಣಧರ್ಮವನ್ನು ಕಂಡುಕೊಂಡು ವಿಶಿಷ್ಟ ಗುಂಪುಗಳಿಗೆ ಸೇರಿಸಬಹುದಾಗಿದೆ. ಔಷಧ ಗುಣಗಳಲ್ಲಿ ಉಲ್ಲೇಖಿಸಲ್ಪಟ್ಟ ಮೂಲಿಕೆಗಳಲ್ಲಿ ರೋಗಿಗೆ ಅನವಶ್ಯಕವೆಂದು ಕಂಡುಬಂದ ಮೂಲಿಕೆಗಳನ್ನು ಬಿಟ್ಟು ರೋಗಕ್ಕೆ ಉಪಯುಕ್ತವಾದ ವಸ್ತುಗಳು ಗಣದಲ್ಲಿ ಹೇಳಲ್ಪಡದಿದ್ದರೂ ಅವುಗಳನ್ನು ಔಷಧದಲ್ಲಿ ಸೇರಿಸಲು ಶಾಸ್ತ್ರ ಮತ್ತು ರೋಗಗಳ ವಿಷಯದಲ್ಲಿ ಅನುಭವವಿರುವ ವೈದ್ಯರಿಗೆ ಅಧಿಕಾರವಿದೆ ಎಂದು ಶಾರಂಗಧರರು ಹೇಳಿದ್ದಾರೆ.

ಔಷಧಿಗಳ ಯೋಗ್ಯಾಯೋಗ್ಯ ವಿಚಾರ

ಔಷಧದಲ್ಲಿ ಉಪಯೋಗಿಸುವ ಪದಾರ್ಥಗಳೆಲ್ಲವೂ ಹೊಸತೇ ಇರಬೇಕು. ಅದರ ವಾಯುವಿಡಂಗ, ಹಿಪ್ಪಲಿ, ಬೆಲ್ಲ, ಕೊತ್ತಂಬರಿ (ಹವೀಜ) ತುಪ್ಪ, ಇವುಗಳ ಮಾತ್ರ ಒಂದು ವರ್ಷದಷ್ಟು ಹಳೆಯವಾಗಿದ್ದರೆ ಒಳ್ಳೆಯದು. ಅಮೃತಬಳ್ಳಿ, ಕುಟುಜ, ಅಡುಸೊಗೆ, ಕುಂಬಳಕಾಯಿ, ಹಲವು ಮಕ್ಕಳಬೇರು, ಹಿರೇಮದ್ದಿನಬೇರು, ಗೋರಂಟಿ, ಶತಪುಷ್ಪ, ಪ್ರಸಾರಣಿ ಈ ದ್ರವ್ಯಗಳನ್ನು ಹಸಿಯಾಗಿಯೇ ಉಪಯೋಗಿಸಬೇಕು. ಔಷಧಗಳಲ್ಲಿ ಒಣಗಿದ ವಸ್ತುಗಳನ್ನು ಉಪಯೋಗಿಸುವಾಗ ಹೊಸತಾಗಿರುವುದನ್ನೇ ಉಪಯೋಗಿಸಬೇಕು. ಅವುಗಳ ಜೊತೆಗೆ ಹಸಿಯಾದವುಗಳನ್ನು ಸೇರಿಸಬೇಕಾಗಿದ್ದಲ್ಲಿ ಒಣಗಿರುವುದರ ಎರಡು ಪಟ್ಟು ಸೇರಿಸಬೇಕು.

ಔಷಧಕ್ಕಾಗಿ ಉಪಯೋಗಿಸುವ ಮೂಲಿಕೆಗಳಗಳಲ್ಲಿ ಇಂತಹ ಭಾಗವನ್ನೇ ಉಪಯೋಗಿಸುವ ಮೂಲಿಕೆಗಳಲ್ಲಿ ಇಂತಹ ಭಾಗವನ್ನೇ ಉಪಯೋಗಿಸಿ ಎಂದು ನಿರ್ದಿಷ್ಟ ಸೂಚನೆಯು ಇರದಿದ್ದರೆ ಅದರ ಬೇರನ್ನು ಉಪಯೋಗಿಸಬೇಕು. ಮೂಲಿಕೆಗಳ ಪ್ರಮಾಣವು ಇಂತಿಷ್ಟು ಎಂದು ಸೂಚಿಸದಿದ್ದಾಗ ಸಮಪ್ರಮಾಣ ತೆಗೆದುಕೊಳ್ಳಬೇಕು. ಔಷಧ ಯೋಗದಲ್ಲಿ ಒಂದೇ ವಸ್ತುವನ್ನು ಎರಡುಸಾರೆ ಹೇಳಿದ್ದರೆ ಎರಡು ಪಟ್ಟು ಹಾಕಬೇಕೆಂದು ಅರ್ಥಮಾಡಿಕೊಳ್ಳಬೇಕು. ಇಂತಹದೇ ಪಾತ್ರೆಯಲ್ಲಿ ಔಷಧಿಯನ್ನು ತಯಾರಿಸಬೇಕೆಂದು ಹೇಳದಿರುವಾಗ ಮಣ್ಣಿನ ಪಾತ್ರೆಯನ್ನು, ಇಂತಹದೇ ದ್ರವಪದಾರ್ಥ ಎಂದು ಹೇಳದಿದ್ದಲ್ಲಿ ನೀರನ್ನೂ, ಔಷಧಿಗಳಿಗೆ ಎಣ್ಣೆಯನ್ನು ಸೇರಿಸುವುದಿದ್ದಾಗ ವಿಶಿಷ್ಟ ಎಣ್ಣೆಯ ಹೆಸರು ಹೇಳಿರದಿದ್ದರೂ ಎಳ್ಳಣ್ಣೆಯನ್ನು ಸೇರಿಸಬೇಕು.

ಔಷಧ ಸಿದ್ಧಪಡಿಸುವುದಕ್ಕಾಗಿ ಯಾವುದಾದರೊಂದು ಮೂಲಿಕೆಯನ್ನು ತಂದು ಹಾಗೆಯೇ ಇಟ್ಟಲ್ಲಿ ಅದು ಒಂದು ವರ್ಷದವರೆಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಚೂರ್ಣಗಳು ತಯಾರಿಸಿದ ವೇಳೆಯಿಂದ ಎರಡು ತಿಂಗಳವರೆಗೆ ಮಾತ್ರ ಹಾಗೂ ಲೇಹ್ಯಗಳು ಒಂದು ವರ್ಷದವರೆಗೆ, ಘೃತ ಹಾಗೂ ತೈಲಗಳು ನಾಲ್ಕು ತಿಂಗಳುವರೆಗೆ ವೀರ್ಯಶಕ್ತಿಯನ್ನು ಪಡೆದಿರುತ್ತದೆ. ಅನಂತರ ಅವು ತಮ್ಮ ಗುಣಶಕ್ತಿಯನ್ನು ಕಳೆದುಕೊಂಡು ಔಷಧಿಗಾಗಿ ಉಪಯೋಗಿಸಲು ಅನರ್ಹವಾಗುತ್ತವೆ. ಆದ್ದರಿಂದ ವೈದ್ಯರು ಈ ವಿಷಯವಾಗಿ ಹೆಚ್ಚು ಗಮನ ಕೊಡಬೇಕು. ಅಸವ-ಅರಿಷ್ಟಗಳು, ಔಷಧೋಪಯೋಗಿ ಮದ್ಯಗಳು, ಪದಾರಸಯುಕ್ತ ವಸಂತಕುಸುಮಾಕರಾದಿ ರಸೌಷಧಿಗಳು ದಿನ ಹೋದಂತೆ ಹೆಚ್ಚಿನ ಗುಣಮೌಲ್ಯವನ್ನು ಹೊಂದುತ್ತ ಹೋಗುತ್ತವೆಯಾದ್ದರಿಂದ ಅವು ಹಳೆತಾದಷ್ಟು ಒಳ್ಳೆಯದು. (ಆಯುರ್ವೇದ ನಿರ್ದೇಶಿಸುವ ಯೋಗಗಳನ್ನು ತಯಾರಿಸುವ ಔಷಧ ಕಂಪನಿಗಳು ಈ ವಿಷಯದ ಬಗ್ಗೆ ಆಧುನಿಕ ಕಂಪನಿಗಳಂತೆ ನಿರ್ದಿಷ್ಟವಾದ ಔಷಧ ನಿರ್ಮಾಣದ ಕಾಲ ಹಾಗೂ ಅದರ ವಿರ್ಯತ್ವದ ಅವಧಿಯ ಬಗ್ಗೆ ವಿವರಣೆ ಕೊಡುವುದು ಒಳ್ಳೆಯದು. ಇಲ್ಲದಿದ್ದರೆ ನಾವು ವಿಶಿಷ್ಟವಾದ ಒಂದು ರೋಗಕ್ಕೆ ಯೋಗಿಸುವ ಯೋಗವು ಗುಣ ಕೊಡದಿದ್ದಾಗ್ಗೆ ಆಯುರ್ವೇದವನ್ನೇ ಹಳೆಯುತ್ತ ಕೂಡ್ರುವುದು ಒಳ್ಳೆಯದಲ್ಲ. ಪೂರ್ವ ಕಾಲದಕಂತೆ ಈಗಿನ ವೈದ್ಯರಿಗೆ ಸರ್ವ ಮೂಲಿಕೆ ದ್ರವ್ಯಗಳನ್ನು ಸಂಗ್ರಹಿಸಿ, ರಸಾಗಾರವನ್ನು ನಿರ್ಮಿಸಿ ಔಷಧಿಗಳನ್ನು ಸ್ವತಃ ತಯಾರಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಹೊಣೆಯನ್ನು ಹೊತ್ತ ಔಷಧ ಕಂಪನಿಗಳು ಯೋಗ್ಯ ಔಷಧಗಳನ್ನು ಶಾಸ್ತ್ರದಲ್ಲಿ ವಿವರಿಸಿದಂತೆ ನಿರ್ಮಿಸಿ ಕೊಡುವುದು ಶ್ರೇಯಸ್ಕರ.)

ಶುಭ ದಿನದಲ್ಲಿ ಶುಚಿರ್ಭೂನಾಗಿ ನಿರ್ಮಿಸಿ ಪರಿಶುದ್ಧ ಮನಸ್ಸಿನಿಂದ ದೇವರ ಧ್ಯಾನ ಮಾಡುತ್ತ ಸೂರ್ಯಾಭಿಮುಖವಾಗಿ ಮೂಲಿಕೆಯ ಉತ್ತರ ದಿಗ್ಭಾಗದಲ್ಲಿರುವ, ತನಗೆ ಬೇಕಾದ ಬೇರನ್ನೋ ಚಕ್ಕೆಯನ್ನೋ ವೈದ್ಯನು ಸಂಗ್ರಹಿಸಬೇಕು. ಆದರೆ ಹುತ್ತ, ತಿಪ್ಪೆ, ಪಾಯಖಾನೆ, ಜವಳುಭೂಮಿ, ಸ್ಮಶಾನ, ಚೌಳುಭೂಮಿ ಇವುಗಳಲ್ಲಿ ಹುಟ್ಟಿದ ಮೂಲಿಕೆಗಳನ್ನು ಕೆಟ್ಟ, ಬೆಂಕಿಯಿಂದ ಸುಟ್ಟು, ಮಂಜಿನಿಂದ ವ್ಯಾಪಿಸಲ್ಪಟ್ಟ ಮೂಲಿಕೆಗಳು ಔಷಧೋಪಯೋಗಕ್ಕೆ ಅರ್ಹವಾಗಿರುವುದಿಲ್ಲದ. ಏಕೆಂದರೆ ಇವುಗಳು ವೀರ್ಯಹೀನವಾಗಿರುತ್ತವೆ.

ಔಷಧಗಳನ್ನು ಶರದೃತುವಿನಲ್ಲಿಯೇ ವಿಶೇಷವಾಗಿ ಸಂಗ್ರಹಿಸಬೇಕು. ಏಕೆಂದರೆ, ಅವು ಆಗ ತುಂಬ ವೀರ್ಯಯುಕ್ತವಾಗಿರುತ್ತವೆ. ಆದರೆ ವಿರೇಚನ ಮತ್ತು ವಮನೌಷಧಿಗಳನ್ನು ಮಾತ್ರ ವಸಂತ ಋತುವಿನ ಕೊನೆಯ ದಿನಗಳಲ್ಲಿ ಸಂಗ್ರಹಿಸಬೇಕು.

ಅಲ್ಲವಾದರೂ ಒಳ್ಳೆಯ ರೂಪ ಹೊಂದಿರುವ, ರಸಭರಿತವಾದ, ಸುಖಕಾರಕವೆನಿಸಿದ, ಸ್ವಾದಿಷ್ಟವಾದ, ಪಥ್ಯರೂಪವೆನಿಸಿದ, ಶುದ್ಧವಾದ, ಗುಣಕಾರಕವೆನಿಸಿದ ದ್ರವ್ಯವು ಮಾತ್ರ ಒಳ್ಳೆಯ ಔಷಧವೆನಿಸುತ್ತದೆ. ಇಂಥವನ್ನು ಮಾತ್ರ ಸಂಗ್ರಹಿಸಿ ಚಿಕಿತ್ಸೆಯಲ್ಲಿ ಬಳಸಬೇಕು. ಇವು ಸಮಶೀತೋಷ್ಣ ಪ್ರದೇಶದಲ್ಲಿ ಬೆಳೆದವರಾಗಿರಬೇಕು. ಈ ಸಸ್ಯಗಳಿಗೆ ದಾವಾನಲ, ಅತಿ ಬಿಸಿಲು, ನೀರು, ಶಿಡ್ಲು ಇಲ್ಲವೆ ಕ್ರಿಮಿಬಾಧೆ ಬಾಧಿಸಿರಬಾರದು.

ಯಾವುದೇ ದ್ರವ್ಯವು ರೋಗಿಗಳ ಮೇಲೆ ಪ್ರಯೋಗಿಸಿದಾಗ ಅವರ ಪೀಡೆ ಕಡಿಮೆ ಆಗಿ ಆರೋಗ್ಯವನ್ನುಂಟು ಮಾಡತಕ್ಕ ಸಾಮರ್ಥ್ಯವುಳ್ಳದ್ದೇ ಶ್ರೇಷ್ಠ ಔಷಧವಾಗಿರುತ್ತದೆ.

ಅತಿ ದಪ್ಪವಾದ ಬೇರುಗಳುಳ್ಳ ಮೂಲಿಕೆಗಳ ಬೇರಿನ ತೊಗಟೆಯನ್ನು, ಸೂಕ್ಷ್ಮವಾದ ಬೇರುಳ್ಳ ಮೂಲಿಕೆಗಳ ಸರ್ವಭಾಗವನ್ನೂ, ನ್ಯಗ್ರೋಧಾದಿಗಣದಲ್ಲಿ ಹೇಳಿರುವ ಮೂಲಿಕೆಗಳ ತೊಗಟೆಯನ್ನು, ಬೀಜಕಾದಿ ಗಣದಲ್ಲಿ ಹೇಳಿರುವ ಮೂಲಿಕೆಗಳ ಚೆಕ್ಕೆಯನ್ನು, ತಾಳೀಸಾದಿ ಗಣದಲ್ಲಿಯ ಎಲೆಗಳನ್ನೂ ಸ್ನುಹ್ನಾದಿ  ಗಣದಲ್ಲಿಯ ವನಸ್ಪತಿಗಳ ಹಾಲನ್ನೂ, ಧಾತಕ್ಯಾದಿ ಗಣದಲ್ಲಿ ಹೇಳಿರುವ ಮೂಲಿಕೆಗಳ ಪುಷ್ಪಗಳನ್ನು ಮತ್ತು ತ್ರಿಫಲಾದಿಗಳಲ್ಲಿ ಹೇಳಿರುವ ಫಲಗಳನ್ನು ಉಪಯೋಗಿಸುವುದು ಒಳಿತೆಂದು ಶಾರಂಗಧರರು ಹೇಳುತ್ತಾರೆ.

ಔಷಧ ತಯಾರಿಕೆ

ಸಾಮಾನ್ಯವಾಗಿ ಮೂಲಿಕೆಗಳಿಂದ ಐದು ವಿಧಗಳಾದ ಕಷಾಯಗಳನ್ನು ತಯಾರಿಸುವ ಪದ್ಧತಿ ಇದೆ. ಅವು ಯಾವುವೆಂದರೆ-

೧. ಸ್ವರಸ – ಎಂದರೆ ಹಸಿ ಮೂಲಿಕೆಗಳಿಂದ ರಸ ತೆಗೆಯುವುದು.

೨. ಕಲ್ಕ- ಎಂದರೆ ಒಣಮೂಲಿಕೆಯನ್ನು ನೀರಿನಲ್ಲಿ ನೆನೆಯಿಸಿ ಅದನ್ನು ಕಲ್ಲಿನಿಂದ ಅರಿಯುವುದು.

೩. ಕ್ವಾಥ – ಎಂದರೆ ಪದಾರ್ಥಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಸಾಪೇಕ್ಷ್ಯ ವಿಶಿಷ್ಟ ಪ್ರಮಾಣಕ್ಕೆ ಬತ್ತಿಸಿಕೊಳ್ಳುವಿಕೆ.

೪. ಹಿಮ – ಎಂದರೆ ತಣ್ಣೀರಿನಲ್ಲಿ ಮೂಲಿಕೆಯನ್ನು ನೆನೆಸಿ ಕುಟ್ಟಿ ತಯಾರಿಸುವುದು.

೫. ಫಾಂಟ – ಎಂದರೆ ಔಷಧ ದ್ರವ್ಯವನ್ನು ಜಜ್ಜಿ ಚೂರ್ಣ ಮಾಡಿ ನೀರಿನಲ್ಲಿ ಹಾಕಿ ತಯಾರಿಸುವ ಕ್ರಮ – ಹೀಗೆ ಕಷಾಯಗಳು ಐದು ವಿಧವಾಗಿವೆ. ಇವು ಒಂದಕ್ಕಿಂತ ಎಂದರೆ ಸ್ವರಸಕ್ಕಿಂತ ಕಲ್ಕ, ಕಲ್ಕಕ್ಕಿಂತ ಕ್ವಾಥ ಈ ರೀತಿಯಾಗಿ ವಚನಕ್ಕೆ ಸುಲಭವಾಗಿವೆ. ಇವುಗಳನ್ನು ಇನ್ನು ಒಂದೊಂದಾಗಿ ತಿಳಿಯೋಣ.

೧. ಸ್ವರಸ: ಒಳ್ಳೆ ಮೂಲಿಕೆಯನ್ನುದ ಆಗ ತಾನೇ ತಂದು ಬಾಡಿ ಹೋಗುವುದಕ್ಕೆ ಮುಂಚಿತವಾಗಿ ಕುಟ್ಟಿ, ಅರಿವೆಯಿಂದ ಹಿಂಡಿ ತೆಗೆಯುವ ರಸಕ್ಕೆ ‘ಸ್ವರಸ’ವೆನ್ನುವರು. ೧೬ ತೊಲೆ ಒಣಗಿದ ಮೂಲಿಕೆಯನ್ನು ಕುಟ್ಟಿ ಅದರ ಎರಡು ಪಟ್ಟು ಎಂದರೆ ೩೨ ತೊಲೆ ನೀರಿನಲ್ಲಿ ೨೪ ತಾಸುಗಳವರೆಗೆ ನೆನೆಯಿಟ್ಟು ಮೂರನೆಯ ದಿವಸ ರಸ ತೆಗೆದರೂ, ಅದು ಕೂಡ ಸ್ವರಸವೆನಿಸಿಕೊಳ್ಳುತ್ತದೆ. ಹಸಿ ಮೂಲಿಕೆಯ ದೊರಕದಿದ್ದಾಗ ಒಣ ಮೂಲಿಕೆಯನ್ನು ಉಪಯೋಗಿಸಿ ಈ ರೀತಿ ಸ್ವರಸವನ್ನು ತಯಾರಿಸಿದಾಗ ಅರ್ಧಪಲ ಎಂದರೆ ಸುಮಾರು ಎರಡು ತೊಲಿಯಷ್ಟನ್ನು ಮಾತ್ರ ಕೊಡಬೇಕು. ರಾತ್ರಿಯಲ್ಲಿ ಎರಡು ತೊಲ ಔಷಧವನ್ನು ನೆನೆ ಹಾಕಿ ಬೆಳಿಗ್ಗೆ ಅದರ ಕಷಾಯ ತಯಾರಿಸಿದಲ್ಲಿ ನಾಲ್ಕು ತೊಲಿ ಕೊಡಬೇಕು. ಇದರಲ್ಲಿ ಸಕ್ಕರೆ, ಬೆಲ್ಲ, ಕ್ಷಾರಗಳು, ಜೀರಿಗೆ, ಉಪ್ಪು, ತುಪ್ಪ, ತೈಲ, ಚೂರ್ಣ – ಇವುಗಳನ್ನು ಸೇರಿಸಬೇಕಾದಲ್ಲಿ ಪ್ರತಿಯೊಂದನ್ನು ಒಂದೊಂದು ತೊಲದಷ್ಟು ಹಾಕಬೇಕು.

೨. ಕಲ್ಕ: ಹಸಿ ಅಥವಾ ಒಣ ಮೂಲಿಕೆಯನ್ನು ನೀರಿನಲ್ಲಿ ನೆನೆ ಹಾಕಿ ಅರೆದು ತಯಾರಿಸುವ ದ್ರವ್ಯಕ್ಕೆ ‘ಕಲ್ಕ’ವೆಂದು ಹೆಸರು. ಕಲ್ಕಕ್ಕೆ ತುಪ್ಪ, ತೈಲಗಳನ್ನು ಕೂಡಿಸುವುದಾದರೆ ದರಡರಷ್ಟನ್ನು ಹಾಕಬೇಕು. ಸಕ್ಕರೆ ಅಥವಾ ಬೆಲ್ಲವನ್ನು ಕೂಡಸುವುದಿದ್ದಾಗ ಸರಿಪಾಲು ಹಾಗೂ ದ್ರವ್ಯ ಪದಾರ್ಥಗಳನ್ನು ಸೇರಿಸುವಲ್ಲಿ ನಾಲ್ಕು ಪಾಲಿನಷ್ಟು ಕೂಡಿಸಬೇಕು. ಇದರ ಸೇವನೆಯ ಪ್ರಮಾಣ ಕಾಲು ಪಲ. (ಒಂದು ಚಮಚದಷ್ಟು).

೩. ಕಷಾಯ: ಔಷಧ ದ್ವವ್ಯಗಳನ್ನು ಚೆನ್ನಾಗಿ ಕುಟ್ಟಿ ಅವುಗಳ ಹದಿನಾರು ಪಟ್ಟು ನೀರಿನಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಗ್ನಿಕೊಟ್ಟು ಕುದುಸಿ ಎಂಟರಲ್ಲಿ ಒಂದು ಪಾಲು ಉಳಿಸಿ ಇನ್ನೂ ಬಿಸಿಯಾಗಿರುವಾಗಲೇ ಕುಡಿಯಬೇಕು. ಮೃದು ದ್ರವ್ಯಗಳಿಂದ ಕಷಾಯವನ್ನು ತಯಾರಿಸುವುದಿದ್ದಾಗ ನಾಲ್ಕು ಪಟ್ಟು ನೀರನ್ನು, ಮಧ್ಯಮ ದ್ರವ್ಯಗಳಿಗೆ ಎಂಟು ಪಟ್ಟಿನಷ್ಟು ನೀರನ್ನೂ ಹಾಗೂ ಕಠಿನ ದ್ರವ್ಯಕ್ಕೆ ಹದಿನಾರು ಪಟ್ಟು ನೀರನ್ನೂ ಸೇರಿಸಬೇಕು. ಪಾಚನ ಹಾಗೂ ಶೋಧನಗಳಿಗೆ ಕಷಾಯ ತಯಾರಿಸುವಾಗ ಚತುರ್ಥಾಂಶಕ್ಕಿಳಿಸಿಕೊಡಬೇಕು. ಆಹಾರವು ಚೆನ್ನಾಗಿ ಜೀರ್ಣವಾಗಿರುವಾಗ ಎರಡು ಸಲ ಕುಡಿಯಬೇಕು. ವಾತಪ್ರಕೋಪದಲ್ಲಿ ನಾಲ್ಕನೆಯ ಒಂದು ಭಾಗ, ಪಿತ್ತದಲ್ಲಿ ಎಂಟನೆಯ ಒಂದು ಭಾಗ ಹಾಗು ಕಫದಲ್ಲಿ ಹದಿನಾರನೆಯ ಒಂದು ಭಾಗದಷ್ಟು ಸಕ್ಕರೆಯನ್ನು ಸೇರಿಸಬೇಕು. ಜೇಷ್ಠ ಮಧುವಾದರೆ ಕ್ರಮವಾಗಿ ೧/೧೬, ೧/೮ ಹಾಗೂ ೧/೪ ಸೇರಿಸಬೇಕು. ಕಷಾಯದಲ್ಲಿ ಜೀರಿಗೆ ಪುಡಿ, ಗುಗ್ಗುಳ, ಕ್ಷಾರ, ಲವಣಗಳು, ಶಿಲಾಜಿತು, ಇಂಗು, ತ್ರಿಕಟು ಚೂರ್ಣ, ಇವುಗಳನ್ನು ಸೇರಿಸುವುದಾದರೆ ನಾಲ್ಕು ಮಾಸಿ (ಗ್ರಾಂ)ಯಷ್ಟು ಸೇರಿಸಬೇಕು. ಹಾಲು, ತುಪ್ಪ, ಎಣ್ಣೆ, ಮೂತ್ರ (ಗೋಮೂತ್ರ) ಕಲ್ಕ, ಚೂರ್ಣಗಳನ್ನೂ ಸೇರಿಸುವಾಗ ಒಂದು ತೊಲೆಯಷ್ಟು ಸೇರಿಸಬೇಕು. ಕಷಾಯವನ್ನು ತಯಾರಿಸುವಾಗ ಪಾತ್ರೆಯ ಬಾಯಿಯನ್ನು ಮುಚ್ಚಕೂಡದೆಂದು ನಿಯಮವಿದೆ.

. ಹಿಮ : ಒಂದು ಪಲ ದ್ರವ್ಯವನ್ನು ಚೂರ್ಣಮಾಡಿ ಇದಕ್ಕೆ ಆರುಪಾಲು ನೀರನ್ನು ಹಾಕಿ, ಚೆನ್ನಾಗಿ ಪುಡಿ ಹನ್ನೆರಡು ಗಂಟೆಗಳವರೆಗೆ ಹಾಗೆಯೇ ಇರಿಸಿ, ನಂತರ ಶೋಧಿಸಿ ತೆಗೆದ ರಸವು ‘ಹಿಮ’ ಅಥವಾ ‘ಶೀತ ಕಷಾಯ’ ಎನಿಸುವುದು.

. ಮಂಥ : ಇದು ಕೂಡಾ ಘಾಂಟ ಕಷಾಯದ ಒಂದು ಭೇದವಾಗಿರುತ್ತದೆ. ಒಂದು ಪಲ ಔಷಧದ್ರವ್ಯವನ್ನು ನುಣ್ಣಗೆ ಜೀರ್ಣ ಮಾಡಿ ಅದಕ್ಕೆ ನಾಲ್ಕು ಪಲ ತಣ್ಣೀರನ್ನು ಕೂಡಿಸಿ ಮಣ್ಣಿನ ಗಡಿಗೆಯಲ್ಲಿ ಚೆನ್ನಾಗಿ ಕಟೆದು ತಯಾರಿಸಿದುದು. ‘ಮಂಥ’ ಎನ್ನಿಸಿಕೊಳ್ಳಲ್ಪಡುವುದು. ಮಾತ್ರಾ ಎರಡು ಪಲ.

ಚೂರ್ಣ: ಅತ್ಯಂತ ಒಣಗಿದ ದ್ರವ್ಯಗಳನ್ನು ಚೆನ್ನಾಗಿ ಕುಟ್ಟಿ ವಸ್ತ್ರ ಗಾಲಿತ ಮಾಡಿದಲ್ಲಿ ಸಿಕ್ಕುವ ನುಣ್ಣಗಿನ ಚೂರ್ಣದ ಧೂಳುವಿಗೆ ‘ಚೂರ್ಣ’ ಎನ್ನುವರು. ಇದರ ಪ್ರಮಾಣವು ಒಂದು ಕರ್ಷ ಎಂದರೆ ಮುಕ್ಕಾಲು ತೊಲೆ. ಚೂರ್ಣಕ್ಕೆ ಬೆಲ್ಲ ಕೂಡಿಸಿಕೊಳ್ಳುವಲ್ಲಿ ಸರಿಪಾಲಿನಷ್ಟು ಸಕ್ಕರೆಯನ್ನಾದರೆ ಎರಡು ಪಟ್ಟು ಸೇರಿಸಬೇಕು. ತುಪ್ಪ ಮೊದಲಾದ ದ್ರವ್ಯ ಪದಾರ್ಥಗಳಿಂದ ನೆಕ್ಕುವ ಸಂಗತಿಯಲ್ಲಿ ಅಂತಹ ದ್ರವ್ಯವನ್ನು ಎರಡು ಪಾಲಿನಷ್ಟು ಕೂಡಿಸಿಕೊಳ್ಳಬೇಕು. ಇತರ ದ್ರವ್ಯಗಳಲ್ಲಿ ಕದಕಿ ಕುಡಿಯುವುದಾದರೆ ಅಂತಹ ದ್ರವವನ್ನು ನಾಲ್ಕು ಪಾಲಷ್ಟು ಉಪಯೋಗಿಸಬೇಕು.

ಚೂರ್ಣ, ಲೇಹ್ಯ, ಗುಳಿಗೆ ಅಥವಾ ಕಲ್ಕವನ್ನು ಸೇವಿಸಿದ ಕೂಡಲೇ ಕಷಾಯ, ನೀರು ಮೊದಲಾದ ಅನುಪಾನವನ್ನು ಪಿತ್ತದಲ್ಲಿ ಮೂರು ಪಲದಷ್ಟು, ವಾತದಲ್ಲಿ ಎರಡು ಪಲದಷ್ಟು ಮತ್ತು ಕಫ ದೋಷದಲ್ಲಿ ಒಂದು ಪಲದಷ್ಟು ಕುಡಿಯಬೇಕು. ಇದರಿಂದ ಆಯಾ ದೋಷಗಳಿಗನುಸಾರವಾಗಿ ಔಷಧಿ ದ್ರವ್ಯವು ಶರೀರದಲ್ಲಿ ವ್ಯಾಪಿಸಲು ಅನುಕೂಲವಾಗುವುದು.

ಚೂರ್ಣಗಳನ್ನು ರಸಗಳಲ್ಲಿ ಭಾವನೆ ಮಾಡುವಾಗ ಪೂರ್ಣ ಚೂರ್ಣವು ಚೆನ್ನಾಗಿ ಒದ್ದೆಯಾಗಿ ಮುಳುಗುವಷ್ಟು ಕೂಡಿಸಬೇಕು.

ವಟಿಕ (Tablet): ವಟಿಕಕ್ಕೆ ಗುಟಿಕಾ ವಟೀ, ಮೋದಕ, ವಟಿಕಾ, ಪಿಂಡೀ, ಗುಡ, ವರ್ತೀ ಎಂತಲೂ ಕರೆಯುತ್ತಾರೆ. ತಯಾರಿಸುವ ಕ್ರಮ – ಬೆಲ್ಲ ಸಕ್ಕರೆ ಅಥವಾ ಗುಗ್ಗುಳವನ್ನು ಅಗ್ನಿಯಿಂದ ಕರಗಿಸಿ ಲೇಹ್ಯದಂತೆ ಮಾಡಿಕೊಂಡು ಅದಕ್ಕೆ ಚೂರ್ಣವನ್ನು ಕೂಡಿಸಿ ವಟಕಗಳನ್ನು ಮಾಡುವುದು. ಕೆಲವು ವೇಳೆ ಉರಿಯನ್ನು ತಾಗಿಸದೇ ಗುಗ್ಗುಳ ಮತ್ತು ದ್ರವವನ್ನು ಕೂಡಿಸಿ ಅರೆದು ನಮಗೆ ಬೇಕಾದ ಪ್ರಮಾಣದ ಗುಳಿಗೆಗಳನ್ನು ತಯಾರಿಸಬಹುದು. ಸಕ್ಕರೆಯನ್ನು ಸೇರಿಸುವುದಾದರೆ ಚೂರ್ಣದ ನಾಲ್ಕು ಪಟ್ಟು, ಬೆಲ್ಲವನ್ನು ಚೂರ್ಣದ ಎರಡು ಪಟ್ಟು ಗುಗ್ಗಳವನ್ನು ಚೂರ್ಣಕ್ಕೆ ಸರಿಸಮಾನವಾಗಿ ಸೇರಿಸಬೇಕು.

ಲೇಹ್ಯ: ಕಷಾಯಾದಿಗಳ ಪುನಃ ಪಾಕದಿಂದ ದಪ್ಪವಾದ ಹಾಗೂ ರಸಯುಕ್ತವಾದ ಅಂಶಕ್ಕೆ ಅವಲೇಹ ಹಾಗು ಲೇಹ್ಯವೆಂತಲೂ ಕರೆಯುವರು. ಅದರ ಮಾತ್ರೆಯು ಒಂದು ಪಲದಷ್ಟು, ಅದನ್ನು ತಯಾರಿಸುವುದಕ್ಕೆ ಸಕ್ಕೆಯನ್ನು ಚೂರ್ಣದ ನಾಲ್ಕರಷ್ಟು, ಬೆಲ್ಲವಾದರೆ ಎರಡರಷ್ಟು, ದ್ರವವನ್ನು ನಾಲ್ಕರಷ್ಟು ಸೇರಿಸಬೇಕು. ಅದು ಸರಿಯಾಗಿ ಪಾಕಗೊಂಡಿದ್ದನ್ನು ಅದು ಎಳೆಯಂತೆ ಬರುವುದರಿಂದ ತಿಳಿಯಬಹುದು. ಅದನ್ನು ನೀರಿನಲ್ಲಿ ಹಾಕಿದರೆ ಮುಳುಗುವುದು: ಮುದ್ದೆಯಂತೆ ಮಾಡಲು ಬರುವುದು, ಬೆರಳುಗಳನ್ನು ಒತ್ತಿ ನೋಡಿದರೆ ಆದರೆ ಮೇಲೆ ಗೆರೆಗಳು ಮೂಡುವುವು. ಮತ್ತು ಸರಿಯಾದ ಪರಿಮಳ, ವರ್ಣ ಹಾಗೂ ರಸಗಳು ಉಂಟಾಗುವುವು. ಹೀಗೆ ಸಿದ್ಧಪಡಿಸಿದ ಲೇಹ್ಯವನ್ನು ಸೇವಸಿದನಂತರ ಅನುಪಾನವಾಗಿ ಹಾಲು, ಕಬ್ಬಿನ ರಸ, ಯೂಷ, ಪಂಚಮೂಲಗಳ ಕಷಾಯ ಅಡುಸೊಗೆ ಕಷಾಯ ಇವುಗಳಲ್ಲಿ ಯಾವುದಾದರೊಂದನ್ನು ಯಥಾವತ್ತಾಗಿ ಸೇವಿಸಬಹುದು.

ಘೃತ ಮತ್ತು ತೈಲ ವಿಧ: ಘೃತ ಅಥವಾ ತೈಲವನ್ನು ತಯಾರಿಸುವುದಿದ್ದಾಗ ಅದರ ಕಾಲಾಂಶದಷ್ಟು ಕಲ್ಕ ಮತ್ತು ನಾಲ್ಕರಷ್ಟು ದ್ರವವನ್ನು ಕೂಡಿಸಿ, ನೀರಿನ ಪ್ರಮಾಣವು ಪೂರ್ತಿಯಾಗಿ ಆವಿಯಾಗುವವರೆಗೆ ಕುದಿಸಿ ಅನಂತರ ಸೋಸಿಕೊಂಡಾಗ ವಿಶಿಷ್ಟ ಘೃತ ಅಥವಾ ತೈಲಗಳು ತಯಾರಾಗುವುವು. ಇದರ ಪ್ರಮಾಣವು ಒಂದು ಫಲವಾಗಿರುತ್ತದೆ.

ಅಸವಾರಿಷ್ಟಗಳು: ಔಷಧ ದ್ರವ್ಯಗಳನ್ನು ದ್ರವಪದಾರ್ಥಗಳಲ್ಲಿ ಹೆಚ್ಚು ಕಾಲದವರೆಗೆ ಇರಿಸಿ ಹುಳಿ ಬರುವಂತೆ ಮಾಡಿ ಮದ್ಯದಂತೆ ತಯಾರಿಸಿದ ಅಸವ ಹಾಗೂ ಅರಿಷ್ಟಗಳು ತುಂಬ ಉಪಯುಕ್ತವಾಗಿವೆ. ಅವುಗಳಲ್ಲಿ ಔಷಧವನ್ನು ಪಕ್ವ ಮಾಡದೇ ತಣ್ಣೀರನ್ನು ಕೂಡಿಸಿ ಮಾಡಿದ ಮದ್ಯವು ‘ಅಸವ’ವೆಂತಲೂ ಔಷಧವನ್ನು ನೀರಿನಲ್ಲಿ ಹಾಕಿ ಕುದಿಸಿದ ಕಷಾಯದಿಂದ ತಯಾರಿಸಿದ ಮದ್ಯವು ‘ಅರಿಷ್ಟ’ವೆಂತಲೂ ತಿಳಿಯಬೇಕು. ಮಾತ್ರ ಪ್ರಮಾಣ ಅವೆರಡರದ್ದು ಒಂದು ಫಲವಾಗಿರುತ್ತದೆ.

ಅಸವಾರಿಷ್ಟಗಳ ವಿಚಾರದಲ್ಲಿ ಪದಾರ್ಥಗಳ ಹೆಸರು ಹೇಳಿದ ಅಳತೆಯನ್ನು ನಿರ್ದಿಷ್ಟವಾಗಿ ಹೇಳಿರದಿದ್ದರೆ ಅಂತಹ ಸಂದರ್ಭದಲ್ಲಿ ಒಂದು ದ್ರೋಣ ದ್ರವಪದಾರ್ಥಕ್ಕೆ ನೂರು ಪಲಗಳಷ್ಟು ಬೆಲ್ಲ, ಐವತ್ತು ಪಲ ಜೇಷ್ಠ ಮಧು ಇನ್ನಿತರ ಪದಾರ್ಥಗಳನ್ನು ಹತ್ತು ಫಲಗಳಂತೆ ಸೇರಿಸಬೇಕು.

ಜೈನಾಚಾರ್ಯರು ಆಸವ-ಅರಿಷ್ಟಗಳನ್ನು ತಯಾರಿಸುವಾಗ ಅನೇಕ ತ್ರಸಜೀವಿಗಳು ನಾಶವಾಗುವಾದ್ದರಿಂದ ಇವುಗಳನ್ನು ವಿವರಿಸಿಲ್ಲ. ಆದರೆ ಆ ಔಷಧ ವಿಧಾನ ಆಯುರ್ವೇದದಲ್ಲಿ ಬಳಕೆಯಲ್ಲಿದೆ.

ಈವರೆಗೆ ನಾವು ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಮುಖ್ಯವಾದ ಔಷಧಿಗಳನ್ನು ತಯಾರಿಸುವ ಕ್ರಮಗಳನ್ನು ತಿಳಿದಿದ್ದೇವೆ. ಇವಲ್ಲದೆ ಇನ್ನೂ ಅನೇಕ ವಿಧಗಳಾದ ವಿಧಿ-ವಿಧಾನಗಳನ್ನು ಮುಖ್ಯವಾಗಿ ಶಾರಂಗಧರ ಸಹಿತೆ ಹಾಗೂ ಭಾವ ಪ್ರಕಾಶದಲ್ಲಿ ವಿವರಿಸಲಾಗಿದೆ.

ಪ್ರತಿಯೊಂದು ಪದ್ಧತಿಗೂ ಅನೇಕ ವಿಧಗಳಾದ ಕಷಾಯ, ಚೂರ್ಣ, ಆಸವ, ಅರಿಷ್ಟ, ಲೇಹ್ಯ, ಘೃತ, ತೈಲ ತಯಾರಿಕೆ ಹಾಗೂ ಅವುಗಳ ಗುಣಗಳನ್ನು ತಿಳಿಸಲಾಗಿದೆ. ಅವೆಲ್ಲವನ್ನಾಗಲಿ ಅಥವಾ ಅವುಗಳಲ್ಲಿ ಕೆಲವನ್ನಾಗಲೀ ವಿವರಿಸುತ್ತ ಹೋದರೂ ಈ ಹೊತ್ತಿಗೆಯು ತುಂಬ ಬೆಳೆಯುವುದಾದ್ದರಿಂದ ಇಲ್ಲಿ ವಿವರಿಸಲಾಗಿಲ್ಲ.

ಔಷಧಿ ಸೇವನೆ ಕಾಲ

ಆಯುರ್ವೇದದಲ್ಲಿ ಔಷಧಿಯನ್ನು ಕೊಡುವ ವೇಳೆಗೂ ಒಂದು ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಔಷಧಿಯನ್ನು ಬೆಳಗಿನ ಹೊತ್ತಿನಲ್ಲಿಯೇ ಕೊಡುವ ರೂಢಿ ಇದೆ. ಸ್ವರಸ ಕ್ವಾಥಗಳೆಂಬ ಐದು ವಿಧಗಳಾದ ಕಷಾಯಗಳನ್ನು ಕುಡಿಸುವಾಗಲೂ ಖಂಡಿತವಾಗಿಯೂ ಬೆಳಗಿನ ವೇಳೇಯೇ ಪ್ರಶಸ್ತವಾದದ್ದು. ಇದಲ್ಲದೆ ಬೇರೆ – ಬೇರೆ ಕಾಲಗಳಲ್ಲಿ ದೋಷಗಳಿಗನುಸಾರವಾಗಿ ಔಷಧಿಗಳನ್ನು ಕೊಡುವ ಕ್ರಮವೂ ಜಾರಿಯಲ್ಲದೆ. ಸೂರ್ಯೋದಯ ಕಾಲ, ಹಗಲು ಭೋಜನ ಕಾಲ, ಸಾಯಂಕಾಲ ಭೋಜನ ಕಾಲ, ರಾತ್ರಿಯಲ್ಲಿ, ದಿವಸದಲ್ಲಿ ಅನೇಕ ಸಲ ಭೋಜನ ಕಾಲ, ಸಾಯಂಕಾಲ ಭೋಜನ ರೂಢಿ ಇದೆ.

. ಪ್ರಥಮ ಕಾಲ: ಪಿತ್ತ-ಕಫಗಳೂ ಪ್ರಕೋಪವಾಗಿರುವಾಗ ವಿರೇಚನ ಹಾಗು ವಮನಕ್ಕಾಗಿ ಔಷಧವನ್ನು, ಸ್ಥೌಲ್ಯತೆಯ ನಿವಾರಣೆಗಾಗಿ ಕೊಡುವ ಲೇಕನೌಷಧಿಗಳನ್ನು ಬೆಳಗಿನ ವೇಳೆಯಲ್ಲಿಯೇ ಕೊಡಬೇಕು.

. ದ್ವಿತೀಯ ಕಾಲ: ಅಪಾನವಾಯುವು ಪ್ರಕೋಪವಾಗಿದ್ದರೆ ಭೋಜನದ ಪೂರ್ವದಲ್ಲಿ ಔಷಧಿ ಕೊಡಬೇಕು. ಅರುಚಿ ಎಂದರೆ ಅನ್ನ ದ್ವೇಷವಿರುವಾಗ ಔಷಧಿಯನ್ನು ಪ್ರತ್ಯೇಕವಾಗಿ ಕೊಡದೇ ರೋಗಿಗೆ ರುಚಿಸುವಂತೆ ನಾನಾ ರೀತಿಯಿಂದ ತಯಾರಿಸಿ ಆಹಾರದೊಡನೆ ಕೊಡಬೇಕು. ಸಮಾನ ವಾಯುವು ಪ್ರಕೋಪವಾಗಿ ಅಗ್ನಿ ಮಾಂದ್ಯತೆ ಇದ್ದಾಗ ಜಠರಾಗ್ನಿ ದೀಪ್ತಿಕರವಾದ ಔಷಧವನ್ನು ಭೋಜನ ಮಧ್ಯಕಾಲದಲ್ಲಿ ಪ್ರಯೋಗಿಸಬೇಕು. ಸರ್ವ ಶರೀರಗತವಾದ ವ್ಯಾನವಾಯುವು ಪ್ರಕೋಪವಾದಾಗ ಭೋಜನದ ಕೊನೆಯಲ್ಲಿ ಔಷಧವನ್ನು ಕೊಡಬೇಕು. ಬಿಕ್ಕಳಿಕೆ ಹಾಗೂ ಅಕ್ಷೇಪಕ, ಕಂಪವಾತ ರೋಗಗಳಲ್ಲಿ, ಭೋಜನದ ಪೂರ್ವದಲ್ಲಿ ಹಾಗೂ ಕೊನೆಯಲ್ಲಿ ಕೊಡಬೇಕು.

. ತೃತೀಯ ಕಾಲ: ಕಂಠಸ್ಥಾನಗತವಾದ ವಾಯುವು ಪ್ರಕೋಪವಾಗಿ ಸ್ವರಭಂಗವಾಗಿರುವಾಗ ಸಾಯಂಕಾಲದ ಊಟದ ಸಮಯದಲ್ಲಿ ಒಂದೊಂದು ತುತ್ತಿನೊಡನೆ ಔಷಧಿಯನ್ನು ಕೊಡಬೇಕು. ಪ್ರಾಣಾವಾಯುವು ಪ್ರಕೋಪವಾದಾಗ ಸಾಯಂಕಾಳದ ಊಟದ ನಂತರ ಸಾಮಾನ್ಯವಾಗಿ ಔಷಧಿ ಕೊಡಬೇಕಾಗುವುದು.

. ಚತುರ್ಥ ಕಾಲ: ಬಾಯಾರಿಕೆ, ವಮನ, ಬಿಕ್ಕಳಿಕೆ, ಉಬ್ಬುಸ, ವಿಷ ಪ್ರಯೋಗದಿಂದ ಉಂಟಾದ ವಿಕಾರಗಳು , ಇವುಗಳಲ್ಲಿ ಮೇಲಿಂದ ಮೇಲೆ ಅನ್ನದ ಕೊನೆಯಲ್ಲಿ ಔಷಧವನ್ನು ಕೊಡಬೇಕು. ಒಂದೇ ಸಾರೆ ಔಷಧವವನ್ನಾಗಲೀ, ಅನ್ನವನ್ನಾಗಲೀ, ಕೊಟ್ಟರೆ ರೋಗಗಳು ಅತಿಯಾಗಿ ಹೆಚ್ಚುವುದುಂಟು.

. ಪಂಚಮಕಾಲ: ಕಣ್ಣು, ಕಿವಿ, ಮೂಗು, ಬಾಯಿ, ತಲೆ ಮೊದಲಾದ ಊರ್ಧ್ವಾಂಗಗಳ ಸಂಬಂಧಪಟ್ಟ ರೋಗಗಳಲ್ಲಿ ಲೇಕನೌಷಧಿ-ಬೃಂಹಣೌಷಧಿಗಳನ್ನು ಶರೀರದಲ್ಲಿ ವ್ಯಾಪ್ತಿಸುತ್ತಿರುವ ದೋಷಗಳ ಪಚನಕ್ಕಾಗಿ ಭೋಜನಾಂತರದಲ್ಲಿ ಕೊಡಬೇಕು.

ಕಲ್ಯಾಣಕಾರಕ ಗ್ರಂಥದಲ್ಲಿ ಉಗ್ರದಿತ್ಯಾಚಾರ್ಯರು ೧೦ ವಿಧ ಔಷಧ ಕಾಲಗಳನ್ನು ಸೂಚಿಸಿದ್ದಾರೆ. ನಿರ್ಭಕ್ತ, ಪ್ರಾಗ್ಭಕ್ತ, ಊರ್ಧ್ವಭಕ್ತ, ಮಧ್ಯಭಕ್ತ, ಅಂತರಾಭಕ್ತ, ಸಭಕ್ತ, ಸಾಮುದ್ಗ, ಮಹುರ್ಮುಹು, ಗ್ರಾಸ, ಗ್ರಾಸಾಂತರಗಳೆಂದು.

ಹತ್ತು ಔಷಧ ಸೇವನ ಕಾಲಗಳು

೧. ನಿರ್ಭಕ್ತ – ಬೆಳಗಿನ ಜಾವ ಬರಿ ಹೊಟ್ಟೆಯಲ್ಲಿ ಔಷಧವನ್ನು ಬಲವಂತರಿಗೆ ಕೊಡಬೇಕು. ಇದು ಉತ್ತಮ ಪರಿಣಾಮವನ್ನುಂಟು ಮಾಡುವುದು.

೨. ಪ್ರಾಗ್ಭಕ್ತ – ಊಟದ ಮೊದಲು ಕೊಡುವ ಔಷಧಿ, ಬೇಗನೆ ಪಚನವಾಗಿ ಶೀಘ್ರ ಕಾರ್ಯ ಮಾಡುವುದು.

೩. ಊರ್ಧ್ವಭಕ್ತ – ಊಟದ ನಂತರ ತೆಗೆದುಕೊಳ್ಳುವ ಔಷಧಿಯು ಶರೀರದ ಊರ್ಧ್ವಭಾಗದ ವಿಕಾರಗಳನ್ನು ದೂರ ಮಾಡುವುದು.

೪. ಮಧ್ಯಭಕ್ತ – ಊಟದ ಮಧ್ಯೆ ತೆಗೆದುಕೊಳ್ಳುವ ಔಷಧಿಯು ಶರೀರದ ಮಧ್ಯಭಾಗದ ರೋಗಗಳನ್ನು ದೂರಮಾಡುವುದು.

೫. ಅಂತರ್ಭಕ್ತ – ಎರಡು ಊಟಗಳ ನಡುವೆ, ದಿನದ ಮಧ್ಯ ಸಮಯದಲ್ಲಿ ತೆಗೆದುಕೊಳ್ಳುವ ಔಷಧಿ ಅಗ್ನಿಯನ್ನು ಪ್ರಬಲಗೊಳಿಸುವುದು.

೬. ಸಭಕ್ತ – ಔಷಧಿದ್ರವ್ಯಗಳನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿ ಕೊಡಲ್ಪಡುವ ಔಷಧಿಯು ಬಾಲಕ, ಕೃಶ, ವೃದ್ಧ ಹಾಗೂ ಸ್ತ್ರೀಯರಿಗೆ ಕೊಡಲು ಯೋಗ್ಯವಾದದ್ದು, ಔಷಧಿಯನ್ನು ತೆಗೆದುಕೊಳ್ಳಲು ಇಷ್ಟಪಡದವರಿಗೆ ಹೀಗೆ ಕೊಡಬೇಕು.

೭. ಸಾಮುದ್ಗ – ಆಹಾರದ ಮೊದಲು ಹಾಗೂ ನಂತರ ತೆಗೆದುಕೊಳ್ಳುವ ಔಷಧಿಯು ಪ್ರಕುಪಿತ ದೋಷಗಳನ್ನು ಶಾಂತಗೊಳಿಸುವುದು.

೮. ಮುಹುರ್ಮುಹು – ದಮ್ಮು, ಬಿಕ್ಕು, ತೀವ್ರ ಡೇಕರಿಕೆ ಮುಂತಾದ ವಿಕಾರಗಳಲ್ಲಿ ಔಷಧಿಗಳನ್ನು ಮೇಲಿಂದ ಮೇಲೆ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ‘ಮುಹುರ್ಮುಹು’ ಎನ್ನುತ್ತಾರೆ.

೯. ಗ್ರಾಸ – ಔಷಧಿಗಳನ್ನು ಕವಲದ ಜೊತೆ ಸೇರಿಸಿ ಕೊಡುವ ವಿಧಾನ, ಅಗ್ನಿಶಕ್ತಿ ದುರ್ಬಲನಾದವ, ಕ್ಷೀಣ, ದುರ್ಬಗಲ ವ್ಯಕ್ತಿಗೆ ದೀಪನ, ಬೃಂಹಣ, ವಾಜೀಕರಣ ಔಷಧಿಗಳನ್ನು ಗ್ರಾಸದೊಡನೆ ಕೊಡಬೇಕು.

೧೦. ಗ್ರಾಸಾಂತರ – ದಮ್ಮು, ವಾಂತಿ ಮುಂತಾದ ವಿಕಾರಗಳಲ್ಲಿ ಎರ‍ಡು ಗ್ರಾಸಗಳ ಮಧ್ಯೆ ಔಷಧಿ ಪ್ರಯೋಗಿಸಬೇಕು.

(..೨೦, ಶ್ಲೋಕ ೧೮೨೧)

ಕೆಲವು ರೂಢ ಅನುಪಾನಗಳು

. ತಂಪು ಆಗುವಂತೆ: ತಾಜಾ ಹಸುವಿನ ಬೆಣ್ಣೆ ಅಥವಾ ತುಪ್ಪ, ಕಲ್ಲು ಸಕ್ಕರೆ, ಮಜ್ಜಿಗೆ, ಪನ್ನೀರು, ಗುಲಕುಂದ, ಅಕ್ಕೀಗಚ್ಚು, ಅನಾನಸ್ ಹಣ್ಣಿನ ರಸ, ಕಿತ್ತಳೆ ಹಣ್ಣಿನ ರಸ, ಎಳೆನೀರು, ದನಿಯಾ(ಹವೀಜ) ಅಲಬುಖಾರಾ.

. ಉಷ್ಣವಾಗುವಂತೆ : ಗೇರು, ಶುಂಠಿ, ಚೂರ್ಣ ಅಥವಾ ಕಷಾಯ, ತ್ರಿಕಟು, ಬಜೆ, ಸದಾಪು, ತುಳಸಿ, ತುಂಬೆ, ಗಜಗ.

. ವಾತಕ್ಕೆ : ಔಡಲೆಣ್ಣೆ, ರಾಶ್ಮೆ, ನೀರಗುಡಿ(ಲೆಕ್ಕಿ), ಜೀರಿಗೆ, ಸೈಂಧವ, ತುಪ್ಪ.

. ಪಿತ್ತಕ್ಕೆ: ಅಕ್ಕಿಗಚ್ಚು, ಕಲ್ಲುಸಕ್ಕರೆ, ಮಾದಳ ಹಣ್ಣು, ದಾಳಿಂಬ, ದ್ರಾಕ್ಷಿ, ಕಿತ್ತಳೆಹಣ್ಣು, ಏಲಕ್ಕಿ ಹೊಟ್ಟು ( ಸುಟ್ಟದ್ದು) ಗುಲಕುಂದ, ದನಿಯಾ, ಪನ್ನೀರು, ಅನಾನಸ್ ಹಣ್ಣು, ಅಮೃತಬಳ್ಳಿ, ನಿಂಬೆರಸ, ಲಾವಂಚ, ತುಂಗಮುಷ್ಟಿ ಇತ್ಯಾದಿಗಳು.

. ಕಫಕ್ಕೆ : ಶುಂಠಿ, ಜೇಷ್ಠ ಮಧು, ಅಡುಸೋಗೆ, ತಾರೆಕಾಯಿ, ಸದಾಪು, ಹಿಪ್ಪಲಿ ಇತ್ಯಾದಿಗಳು.

. ರಕ್ತಸ್ರಾವಕ್ಕೆ: ನಾಗಕೇಸರಿ, ವಾಸಕ, ಲಾವಂಚ, ಬೆಣ್ಣೆ, ಕಲ್ಲುಸಕ್ಕರೆ, ನೆಲ್ಲಕಾಯಿ, ಅಕ್ಕಿಗಚ್ಚು, ಮುರಬ್ಬಾ, ಗುಲಕುಂದ, ಪನ್ನೀರು, ದನಿಯಾ ಮೊದಲಾದವು.

. ಭೇದಿಗೆ: ತುಂಗಮುಷ್ಟಿಯ ರಸ ಇಲ್ಲವೆ ಚೂರ್ಣ, ನೆಲ್ಲಿಕಾಯಿ ದಾಳಿಂಬಕಾಯಿ, ವಾಸಕ, ಗಸಗಸೆ, ಜೀರಿಗೆ, ಯೋಗ್ಯ ಹಾಗೂ ಅವಶ್ಯಕತೆ ಇದ್ದಾಗ ಮಾತ್ರ ಅಫೀಮನ್ನು ಕೊಡಬಹುದು.

. ವಾಂತಿಗೆ : ಕಚೋರ, ಏಲಕ್ಕಿ ಸಿಪ್ಪೆ(ಸುಟ್ಟದ್ದು), ಲವಂಗ (ಸ್ವಲ್ಪ ಹುರಿದದ್ದು), ದ್ರಾಕ್ಷಿ, ಕಿತ್ತಳೆರಸ, ನಿಂಬೆರಸ.

. ಸನ್ನಿಪಾತಜ್ವರಗಳಿಗೆ : ಹಸಿಶುಂಠಿ, ತುಳಸಿ, ಭೃಂಗರಾಜ(ಕಾಡಿಗ್ಗರಗು)

ಸಕಲ ರೋಗಗಳಿಗೂ ಸಾಮಾನ್ಯ ಪಥ್ಯಕ್ರಮ

ಔಷಧದ ಜೊತೆಗೆ ಅನುಪಾನವಿರುವಂತೆ ಇದರ ಜೊತೆಗೆ ಪಥ್ಯವೂ ಅವಶ್ಯವಾಗಿದೆ. ನಾವು ರೋಗಕ್ಕೆ ತಕ್ಕಂತೆ ಅದರೆ ಚಿಕಿತ್ಸೆಗೆ ಅನುಕೂಲವಾಗುವಂತೆ ಕೆಲ ಆಹಾರ-ವಿಹಾರ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ರೀತಿಯ ಕ್ರಮವು ಬಹು ಹಿಂದಿನಿಂದಲೂ ಬಂದುದಾಗಿದೆ. ಆದರೆ ಇತ್ತಿಚೆಗೆ, ಆಧುನಿಕ ವೈದ್ಯಕದ ಬೆಳ್ಳನೆ ಬೆಳಕು ಚೆಲ್ಲಿದ ಈ ದಿವಸಗಳಲ್ಲಿ ಪಥ್ಯವೆಂದರೇನು ಎಂದು ಕೇಳುವಂತಾಗಿದೆ. ಆದರೂ ಕೂಡ ಕೆಲ ರೋಗಳಿಗಾದರೂ ಪಥ್ಯವನ್ನು ವಿಧಿಸುತ್ತಾರೆ. ಈಗ ಹೆಚ್ಚು ಶಕ್ತಿಯುತವಾದ ಔಷಧಿಗಳು ಬಂದಿರುವುದೂ ಇದಕ್ಕೊಂದು ಕಾರಣವಿರಬಹುದು. ಏಕೆಂದರೆ ಪುರಾತನ ಕಾಲದಲ್ಲಿ ಅಷ್ಟೊಂದು ಶಕ್ತಿಯುತವಾದ ಔಷಧಿಗಳಿರಲಿಲ್ಲ. ಆದ್ದರಿಂದ ಆ ಔಷಧಿಗಳಿಗೆ ಪೂರಕವಾಗುವಂತೆ ಅನುಪಾನ – ಪಥ್ಯಕ್ರಮಗಳನ್ನೂ ರೋಗಿಯು ಅನುಸರಿಸಬೇಕಾಗುತ್ತಿತ್ತು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಅದು ಏನೇ ಇರಲಿ, ರೋಗಿಗಳು ಸಾಮಾನ್ಯವಾಗಿ ಈ ಕೆಳಕಂಡ ಕ್ರಮಗಳನ್ನು ಪಾಲಿಸುವುದು ತಮ್ಮ ವೈಯಕ್ತಿಕ ದೃಷ್ಟಿಯಿಂದ ಕ್ಷೇಮಕರ.

೧. ಎರಡು ಸಲದ ಊಟದ ಹೊರತಾಗಿ ಮಧ್ಯೆ ಏನನ್ನೂ ಸೇವಿಸಬಾರದು. ಹಸಿವು ತಡೆಯಲಾಗದಿದ್ದರೆ ಮಧ್ಯದಲ್ಲಿ ಒಂದು ಸಲ ಹಾಲು, ಮಜ್ಜಿಗೆ ಅಥವಾ ಹಣ್ಣು-ಹಂಪಲಗಳನ್ನು ಸೇವಿಸಬಹುದು. ನೀರನ್ನು ಕಾಲಕಾಲಕ್ಕೆ ಧಾರಾಳವಾಗಿ ಕುಡಿಯಬಹುದು.

೨. ಚಹಾ, ಕಫ, ಬೀಡಿ, ಸಿಗರೇಟ, ನಸ್ಯ ತಂಬಾಕುಗಳನ್ನು ಪೂರ್ಣವಾಗಿ ವರ್ಜಿಸಬೇಕು. ಉಪ್ಪು, ಕಾರ, ಹುಳಿ, ಮಸಾಲೆ, ಕರಿದ ತಿನಿಸು, ಮಿಠಾಯಿಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಬೇಕು.

೩. ಆಹಾರವನ್ನು ಸೇವಿಸುವಾಗ ಪ್ರತಿಯೊಂದು ತುತ್ತನ್ನೂ ಕನಿಷ್ಟ ಪಕ್ಷ ೩೦-೪೦ ಸಲ ಕಚ್ಚಿ ನುರಿಸಿ ನುಂಗಬೇಕು. ಹಣ್ಣು, ಹಾಲು, ಅನ್ನ ಮೊದಲಾದ ಮೃದು ಪದಾರ್ಥಗಳನ್ನು ಕೂಡಾ ಚೆನ್ನಾಗಿ ಬಾಯಾಡಿಸದೇ ನುಂಗಬಾರದು.

೪. ದಿನಾಲು ಚೆನ್ನಾಗಿ ಮೈ ಬೆವರುವಂತೆ ತಕ್ಕಷ್ಟು ವ್ಯಾಯಾಮ, ಆಟ ಅಥವಾ ವೇಗದಿಂದ ೨-೩ ಮೈಲಿಗಳಷ್ಟಾದರೂ ತಿರುಗಾಟವನ್ನು ಮಾಡಬೇಕು ಹಾಗೆಯೇ ಕುಳಿತಲ್ಲಿಯೇ ಕೂಡ್ರಬಾರದು.

೫.ಯೋಗ್ಯವಾದದ್ದು : ಹೊತ್ತಿಗೆ ಸರಿಯಾಗಿ ಆಹಾರ ವಿಹಾರ, ಬಲದಾಯಕ ಮತ್ತು ಬೇಗನೆ ಜೀರ್ಣವಾಗುವಂತಹ ತಾಜಾ ಆಹಾರ, ಅಕ್ಕಿ(ಮನೆಯಲ್ಲಿಯೇ ಕುಟ್ಟಿದ್ದು, ಗೋದಿಹಿಟ್ಟು ಮನೆಯಲ್ಲಿಯೇ ಬೀಸಿದ್ದು) ಹೆಸರುಬೇಳೆ, ಜೋಳ, ಸಜ್ಜಿ, ರಾಗಿ, ತೊಗರಿಬೇಳೆಯ ಕಟ್ಟು, ಎಳೇಬದನೆಕಾಯಿ, ಪಡುವಲಕಾಯಿ, ಬಾಳೆಯ ಹೂ, ಕಾಯಿ, ದಿಂಡುಗಳು, ಸೊಪ್ಪುಗಳು, ಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿ, ಬೀಜ, ಅರಿಷಿಣ, ಹಾಲು, ತುಪ್ಪ, ತಾಜಾ ಮಜ್ಜಿಗೆ, ಕೆನೆ, ನಿಂಬೇಕಾಯಿ, ದ್ರಾಕ್ಷಿ, ಕಿತ್ತಳೆ, ದಾಳಿಂಬ, ಮೋಸಂಬಿ, ಟೊಮೆಟೊ ಹಣ್ಣು, ಬೆಚ್ಚಗಾದ ನೀರಿನಸ್ನಾನ, ಕುಡಿಯಲು ಚೆನ್ನಾಗಿ ಕಾದು ಆರಿದ ನೀರು-ಬಾವಿಯ ಸಿಹಿಯಾದ ತಣ್ಣೀರು ಹಿತಕರ.

೬. ವರ್ಜ್ಯವಾದವುಗಳು: ನಿದ್ದೆಗೆಡಬಾರದು, ಹೊಟ್ಟೆಯನ್ನು ಬಹಳ ತುಂಬಿಸಬಾರದು. ಅರ್ಧಹೊಟ್ಟೆ ಊಟ, ಕಾಲುಭಾಗ ನೀರು, ಬಾಕಿಯದು ಹಾಗೆಯೇ ಖಾಲಿಯಾಗಿಟ್ಟುಕೊಳ್ಳುವುದು ಎಲ್ಲರಿಗೂ ಹಿತಕಾರಿ, ಚಹಾ, ಕಾಫಿ, ಕೋಕೋ, ಸರಾಯಿ, ಬ್ರಾಂದಿ, ಅಫೀಮು, ಹೊಗೆಸೊಪ್ಪು, ಹುಳಿಮೊಸರು, ಮೆಣಸಿನ ಕಾಯಿ, ಹುಣಸೆ ಹುಳಿ, ಕುಂಬಳಕಾಯಿ, ಸಾಸಿವೆ, ಗಡ್ಡೆ ಗೆಣಸುಗಳು ಮತ್ತು ಕಾಮಭೋಗ ಇವನ್ನೆಲ್ಲ ವೈದ್ಯರ ಅನುಮತಿ ಸಿಕ್ಕುವವರೆಗೆ ಬಿಡಬೇಕು.

ಈ ಮೇಲ್ಕಂಡ ಪಥ್ಯದ ಸಾಮಾನ್ಯ ನಿಯಮಗಳನ್ನು ಪೂರ್ಣವಾಗಿ ಪಾಲಿಸಲಾರದವರು ತಮಗೆ ಸಾಧ್ಯವಿದ್ದಷ್ಟಾದರೂ, ಪಥ್ಯವನ್ನು ಮಾಡಲೆತ್ನಿಸಬೇಕು. ಪಥ್ಯವನ್ನು ಎಷ್ಟೂ ಮಾಡಲಾಗದವರು ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ಅಪಾಯಗಳು ಆಗವು ಎಂದು ತಿಳಿದುಕೊಳ್ಳಬೇಕು.