ಚಿಕಿತ್ಸೆಯಲ್ಲಿ ಪ್ರಪ್ರಥಮವಾಗಿ ರಸೌಷಧಿಗಳನ್ನು ಬಳಕೆಯಲ್ಲಿ ತಂದವರೆಂದರೆ ಜೈನಾಚಾರ್ಯರು ಹಾಗೂ ಬೌದ್ಧ ಭಿಕ್ಷುಗಳು. ಆಗಿನ ಕಾಲದಲ್ಲಿ ರಸ ಚಿಕಿತ್ಸೆಯೊಂದು ಕ್ರಾಂತಿದಾಯಕ ಹೆಜ್ಜೆ ಎನಿಸಿದ್ದಿತು. ‘ರಸ’ವೆಂದರೆ ಪಾದರಸ. ಈ ಚಿಕಿತ್ಸೆಗೆ ‘ದೈವೀ ಚಿಕಿತ್ಸೆ’ ಎಂತೂ ಕರೆದಿದ್ದಾರೆ. ಈ ಚಿಕಿತ್ಸಾ ಕ್ರಮವು ಭಾರತದಲ್ಲಿ ತುಂಬ ಪೂರ್ವ ಕಾಲದಿಂದ ಜಾರಿಯಲ್ಲಿ ಬಂದಿದೆ. ಪೂಜ್ಯಪಾದಾಚಾರ್ಯರು ತಾವು ವಾಸವಾಗಿದ್ದ ಬೆಟ್ಟ ಪ್ರದೇಶದಲ್ಲಿ ಅತಿಯಾದ ಬರಗಾಲ – ತೀವ್ರ ಬಡತನ ಬಂದಾಗ್ಗೆ ಅಲ್ಲಿ ಲಭ್ಯವಿದ್ದ ಗಿಡಮೂಲಿಕೆಗಳಿಂದ ಬಂಗಾರವನ್ನು ಸಿದ್ಧಪಡಿಸಿ ಜನರಿಗೆ ಹಂಚುತ್ತಿದ್ದರೆಂದೂ ಅದಕ್ಕೆನೇಲ ಅವರಿದ್ದ ಗುಡ್ಡಕ್ಕೆ ‘ಕನಕಗಿರಿ’ ಎಂದು ಹೆಸರು ಬಂದಿದೆ ಎಂದು ತಿಳಿಯುತ್ತದೆ. (ಈ ಕನಕಗಿರಿಯು ಚಾಮರಾಜನಗರದ ಹತ್ತಿರ ಇದೆ) ಇಂತಹ ವಿದ್ವಾಂಸರು ಆಗ ಇದ್ದರು ಹಾಗೂ ಅವರಿಗೆ ಇಂತಹ ಅದ್ಬುತವಾದ ವಿದ್ಯೆಗಳು ಗೊತ್ತಿದ್ದವು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಕಲ್ಯಾಣಕಾರಕದ ೨೪ನೇ ಅಧ್ಯಾಯದಲ್ಲಿ ‘ರಸ’ದ ವಿಶೇಷ ವರ್ಣನೆ ಇದೆ.

ಶಾಸ್ತ್ರದಲ್ಲಿ ಪಾದರಸವಲ್ಲದೇ ಮಹಾರಸಗಳು, ಉಪರಸಗಳು, ಸಾಧಾರಣ ರಸಗಳು, ರತ್ನಗಳು, ವಿಷಗಳು, ಉಪವಿಷಗಳು, ಲೋಹಗಳು ಇವನ್ನೆಲ್ಲ ಶುದ್ಧೀಕರಿಸಿ ಚಿಕಿತ್ಸೆಯಲ್ಲಿ ಬಳಸಿಕೊಳ್ಳುತ್ತಿದ್ದರು ಎಂಬ ವಿವರಣೆ ಇದೆ.

ರಸೌಷಧಿಗಳ ವೈಶಿಷ್ಟ್ಯ: ಅನೇಕ ಸಸ್ಯಮೂಲಿಕೆಗಳು ಸರ್ವ ಕಾಲದಲ್ಲಿಯೂ ಚಿಕಿತ್ಸೆಗಾಗಿ ದೊರಕುವುದು ಅದೂ ಎಲ್ಲ ಕಡೆಗೆ-ಸಾಧ್ಯವಿರುವುದಿಲ್ಲ. ಅಲ್ಲದೇ ಸಿಕ್ಕಾಗ ಅವನ್ನು ತಂದು ಬಹಳ ದಿವಸಗಳವರೆಗೆ ಇಡಲೂ ಸಾಧ್ಯವಿಲ್ಲ. ಇಟ್ಟರೆ ಅವು ಒಣಗಿ ತಮ್ಮ ವೀರ್ಯವಂತಿಕೆಯನ್ನು ಕಳೆದುಕೊಳ್ಳುವುವು. ಅವುಗಳಿಂದ ತಯಾರಿಸಿದ ಚೂರ್ಣ, ತೈಲ, ಘೃತ, ಅವಲೇಹಗಳು ಕೂಡ ಬಹಳ ದಿವಸಗಳವರೆಗೆ ಅರ್ಹ ರೀತಿಯಲ್ಲಿ ಇರಲಾರವು. ಅಲ್ಲದೇ ರೋಗಿ ತೆಗೆದುಕೊಳ್ಳಬೇಕಾದ ಪ್ರಮಾಣ ಕೂಡ ಹೆಚ್ಚು. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೂ ಅದ್ಭುತ ಶೀಘ್ರ ಪರಿಣಾಮಕಾರಿಗಳಾದ, ರುಚಿ ಇಲ್ಲದ, ಕೆಡದ, ಎಲ್ಲ ಕಾಲಕ್ಕೂ ದೊರಕುವ ಈ ರಸೌಷಧಿಗಳು ಬಳಕೆಗೆ ಬಂದವು. ಅವನ್ನು ಸರಿಯಾಗಿ ಶಾಸ್ತ್ರದಲ್ಲಿ ಹೇಳಿದಂತೆ ಶುದ್ಧೀಕರಿಸಿ ಉಪಯೋಗಿಸಿದರೆ ಯಾವುದೇ ಅಡ್ಡ ಪರಿಣಾಮ ಇಲ್ಲವೆ ಅಪಾಯ ತಂದೊಡ್ಡದೇ ಶೀಘ್ರವಾಗಿ ಗುಣ ಮಾಡುವುವು. ಹೀಗಾಗಿ ರಸೌಷಧಿಗಳ ಚಿಕಿತ್ಸೆಗೆ ಆಗ ತುಂಬ ಮಹತ್ವ ಬಂದಿತೆನ್ನಬಹುದು.

. ರಸ : ಪಾದರಸ.

. ಮಹಾರಸಗಳು: ಅಭ್ರಕ, ವೈಕ್ರಾಂತ, ಮಾಕ್ಷಿಕ, ವಿಮಲಾ, ಶಿಲಾಜಿತು, ಶುತ್ಥ, ಚಪಲಾ, ಖರ್ಪೂರ – ಇವು ಎಂಟು.

. ಉಪರಸಗಳು: ಗಂಧಕ, ಗೈರಿಕ, ಹಿರಾರಸ, ಪಟಕ, ಹರತಾಳ, ಮನಶ್ಶಿಲಾ, ಸುರಮಾ, ಕಂಕಷ್ಠ – ಇವು ಎಂಟು.

. ಸಾಧಾರಣ ರಸಗಳು : ಗೌರೀ ಪಾಷಾಣ, ಕಪಿಲಾ, ನವಸಾಗರ, ಲವಣಗಳು, ಶಂಖ, ಶಿಂಪು, ಕವಡಿ, ಪ್ರವಾಳ, ಮುತ್ತು, ಅಗ್ನಿ ಜಾರ, ಕಸ್ತೂರಿ, ಗಿರಿಸಿಂಧೂರ, ಇಂಗಳಿಕ, ಮೃದಾರು-ಶೃಂಗಿ, ರಾಜಾವರ್ತ, ಸಿಂಧೂರ, ಬಳಿಗಾರ, ಸುಣ್ಣ, ಸಮುದ್ರ ನೊರೆ, ಬೋಳ, ಗುಗ್ಗಳು – ಇವು ೨೧ ಸಾಧಾರಣ ರಸಗಳು.

. ರತ್ನಗಳು : ವಜ್ರ, ವೈಢೂರ್ಯ, ಪಚ್ಚ, ಗೋಮೇಧ, ಮಾಣಿಕ್ಯ, ಇಂದ್ರನೀಲ, ಪುಷ್ಪರಾಜ, ಪ್ರವಾಳ, ಮುತ್ತು – ಇವು ೯ ಇವಕ್ಕೆ ನವರತ್ನಗಳೆನ್ನುತ್ತಾರೆ.

. ವಿಷಗಳು : ಬಚನಾಗ (ವತ್ಸನಾಭ), ಹಾರಿದ್ರಿಕ, ಸುಕ್ತುಕ, ಪ್ರದೀಪನ, ಸೌರಿಷ್ಟ್ರಿಕ, ಶೃಂಗಕ, ಕಾಲಕೂಟ, ಹಾಲಾಹಲ, ಬ್ರಹ್ಮಪುತ್ರ – ಇವು ೯ ವಿಷಗಳು.

. ಉಪವಿಷಗಳು: ಸ್ನುಹೀ, ಅರ್ಕ, ಲಾಂಗುಲಿ, ಗುಲಗಂಜಿ, ಕಣಿಗಿಲ, ಹೆಮ್ಮುಷ್ಟಿ, ಜೇಪಾಳ, ಮದಗುಣಿಕೆ, ಅಫು, ಭಂಗಿ, ಗಾಂಜಾ – ಇವು ೧೧ ಉಪವಿಷಗಳು.

. ಲೋಹಗಳು : ಸುವರ್ಣ, ರಜತ, ತಾಮ್ರ, ಕಬ್ಬಿಣ, ಸೀಸ, ತವರು, ಸತುವು, ಹಿತ್ತಾಳೆ, ಕಂಚು, ಬೀಡು – ಇವು ಹತ್ತು ಲೋಹಗಳು.

ಇವುಗಳನ್ನೆಲ್ಲ ಶುದ್ಧಮಾಡಿ ಅವುಗಳ ನಿರೀಂದ್ರಿಯತ್ವಗಳನ್ನು ದೂರಗೊಳಿಸಿ, ಸೇಂದ್ರಿಯ ವಸ್ತುಗಳೊಡನೆ ತಾದಾತ್ಮ್ಯ ಹೊಂದುವಂತೆ ಭಸ್ಮಗಳು, ಮಾತ್ರೆಗಳು, ಗುಟಕ, ವಟಿಕೆ ಮೊದಲಾದ ಸಿದ್ಧೌಷಧಗಳನ್ನಾಗಿ ತಯಾರಿಸುವುದೇ ‘ರಸಾಯನ ಶಾಸ್ತ್ರ’ ವೆನಿಸಿದೆ. ಮೇಲ್ಕಾಣಿಸಿದ ರಸಪದಾರ್ಥ ಗುಣಗಳಿಗನುಸಾರವಾಗಿ ಶುದ್ಧೀಕರಣ ಸಂಸ್ಕಾರ, ಮಾರಣ ಸಂಸ್ಕಾರ, ಭಸ್ಮೀಕರಣ ಸಂಸ್ಕಾರ, ಗುಣ ವೃದ್ಧೀಕರಣ ಸಂಸ್ಕಾರ – ಹೀಗೆಲ್ಲ ಮಾಡಿಯೇ ಉಪಯೋಗಿಸುವುದುಂಟು.(ಈಗ ಲಭ್ಯವಿರುವ ರಸಶಾಸ್ತ್ರ, ರಸರತ್ನ ಸಮುಚ್ಚಯ, ರಸಚಂಡಾಂಶು ಮೊದಲಾದ ಗ್ರಂಥಗಳಲ್ಲಿ ಈ ರಸೌಷಧಿಗಳ ಕುರಿತು ತುಂಬ ವಿವರವಾದ ವರ್ಣನೆ ಇದೆ. – ಅಸಕ್ತರು ಓದಿಕೊಳ್ಳಬೇಕು)

ಮಿಶ್ರ ಧಾತುಗಳು

ಕಂಚು: ಕಂಚಿನಲ್ಲಿ ಪುಷ್ಟಕ, ತೈಲಗಳೆಂಬ ಎರಡು ಭೇದಗಳಲ್ಲಿ ಪುಷ್ಪಕ ಜಾತಿಯದೇ ಶುಭ್ರವಾಗಿದ್ದು ಶ್ರೇಷ್ಠವೂ, ರೋಗನಾಶಕವೂ ಆಗಿದೆ. ಇದು ಲಘು, ಕಹಿ, ಉಷ್ಣ, ಲೇಖನ ಮತ್ತು ಕಣ್ಣುಗಳಿಗೆ ಹಿತಕಾರಿ ಎನಿಸಿದೆ. ಇದರಿಂದ ಕ್ರಿಮಿ, ಕುಷ್ಠ, ವಾತ, ಪಿತ್ತಾದಿ ವಿಕಾರಗಳು ನಾಶ ಹೊಂದುತ್ತವೆ. ಇದು ಅಗ್ನಿದೀಪಕವೂ ಪಥ್ಯಾಕಾರಿಯೂ ಆಗಿದೆ.

ಹಿತ್ತಾಳೆ: ಇದರಲ್ಲಿ ರಾಜನೀತಿ ಹಾಗೂ ಕಾಕತುಂಡಿಗಳೆಂಬ ಎರಡು ಜಾತಿಗಳಿದ್ದು ಮೊದಲನೆಯದು ಶ್ರೇಷ್ಠವಾಗಿದೆ. ಇದನ್ನು ಕೂಡ ಶೋಧನ ಮಾಡಿಯೇ ಉಪಯೋಗಿಸಬೇಕಾಗುತ್ತದೆ. ಇದು ಕಹಿ, ಉಷ್ಣ, ಜಂತುನಾಶ, ರೂಕ್ಷ ಇತ್ಯಾದಿ ಗುಣಗಳಿಂದ ಕೂಡಿದ್ದು ರಕ್ತ, ಪಿತ್ತ, ಕ್ರಿಮಿ, ಕುಷ್ಠ ಇತ್ಯಾದಿ ರೋಗಗಳನ್ನು ನಾಶಪಡಿಸುತ್ತದೆ. ಶೀತಗುಣವುಳ್ಳದ್ದು.

ಬಟ್ಟ ಲೋಹ : ಪಂಚರಸಧಾತು ಕಂಚು, ತಾಮ್ರ, ಹಿತ್ತಾಳಿ, ಕಬ್ಬಿಣ, ಸೀಸ ಧಾತುಗಳ ಮಿಶ್ರಣದಿಂದ ತಯಾರಾದ ಈ ಲೋಹಕ್ಕೆ ವರ್ತಲೋಹ, ಜರ್ಮನ್ ಸಿಲ್ವರ್ ಎಂದು ಕರೆಯುವರು. ಇದು ಶೀತ ಕ್ಷಾರ ರೂಕ್ಷ ಇತ್ಯಾದಿ ಗುಣಗಳಿಂದ ಕೂಡಿದ್ದು ರುಚಿಕಾರಕ, ಕಫ ಪಿತ್ತನಾಶ, ತ್ವಚಶುದ್ಧಿಕಾರಕ, ಕ್ರಮಿನಾಶಕ ಹಾಗೂ ಕಣ್ಣುಗಳಿಗೆ ಹಿತಕಾರಿಯಾಗಿದೆ. ಇದರಿಂದ ತ್ರಿದೋಷಗಳ ಶೋಧನವಾಗುತ್ತದೆ. ಇದು ಅಗ್ನಿ ದೀಪಕಮ ಹಾಗೂ ಪಥ್ಯಕರವಾಗಿದೆ.

ಉಪಧಾತುಗಳು: ಈ ಮೇಲ್ಕಂಡ ಧಾತುಗಳಲ್ಲದೆ ಕೆಲ ಉಪಧಾತುಗಳೂ ಇವೆ. ಸುವರ್ಣ ಧಾತುವನಿಂದ ಸುವರ್ಣ ಮಾಕ್ಷಿಕ, ಬೆಳ್ಳಿಯಿಂದ ರೌಪ್ಯ ಮಾಕ್ಷಿಕ, ತಾಮ್ರದಿಂದ ತುಥ್ಯ, ತವರದಿಂದ ಮುಡದಾರ ಶಿಂಗಿ, ಸತುವಿನಿಂದ ಕಲ್ಲುಕಪ್ಪುರ, ಸೀಸದಿಂದ ಸಿಂಧೂರ, ಕಬ್ಬಿಣದಿಂದ ಕಬ್ಬಿಣ ಕಿಟ್ಟ (ಮಂಡೂರ) ಈ ರೀತಿ ಆಯಾ ಧಾತುಗಳಿಂದ ಆಯಾ ಉಪಧಾತುಗಳು ತಯಾರಾಗುತ್ತವೆ. ಅವುಗಳ ಗುಣಗಳು ಮೂಲಧಾತುವಿನಂತೆಯೇ ಇವೆ. ಆದ್ದರಿಂದ ಇಲ್ಲಿ ಪ್ರತ್ಯೇಕವಾಗಿ ವಿವರಿಸಿಲ್ಲ.

ಪಾದರಸ (Mercury) ವಿಶೇಷ ವರ್ಣನೆ

ಶುದ್ಧಪಾದರಸವು ನೀಲವರ್ಣವೂ, ಲಕಲಕನೆ ಹೊಳೆಯುವಂಥದೂ ಆಗಿರುತ್ತದೆ. ಇದರ ಹೊರತಾಗಿಯೂ ಅಶುದ್ಧ ಪಾದರಸವೆಂದು ತಿಳಿಯಬೇಕು. ಪೇಟೆಯಲ್ಲಿ ಶುದ್ಧಪಾರಜವು ಸಿಕ್ಕುವುದು ದುರ್ಲಭ. ಕಾರಣ ಔಷಧಕ್ಕಾಗಿ ಅದನ್ನು ಶುದ್ಧಿ ಮಾಡಿ ಉಪಯೋಗಿಸಬೇಕಾಗುತ್ತದೆ. ಇಲ್ಲದಿದ್ದರೆ ಮಾನವನಲ್ಲಿ ಅನೇಕ ವಿಧ ವಿಕಾರಗಳು ಹುಟ್ಟಿಕೊಳ್ಳುತ್ತವೆ. ಈ ಪಾರಜವು ಆಳವಾದ ಬಾವಿ ಹಾಗೂ ಖನಿಜಗಳಲ್ಲಿ ದೊರಕುತ್ತದೆಯಾದರೂ ವಿಶೇಷವಾಗಿ ಖನಿಜಗಳಲ್ಲಿಯೇ ಸಿಕ್ಕವುದು. ಬಿಳಿ, ಕೆಂಪು, ಹಳದಿ ಹಾಗೂ ಕಪ್ಪು ಹೀಗೆ ನಾಲ್ಕು ವರ್ಣಗಳಿಂದ ಕೂಡಿರುವುದಾದರೂ ಅವುಗಳಲ್ಲಿ ಬಿಳಿ ಬಣ್ಣದ್ದೇ ಒಳ್ಳೆಯ ಪಾದರಸ.

ವಿಪುಲ ಆಯುಷ್ಯ, ಸ್ಮೃತಿಶಕ್ತಿ, ಬುದ್ಧಿ, ಆರೋಗ್ಯ, ತಾರುಣ್ಯ, ಪ್ರಭೆ, ವರ್ಣ, ಸುಸ್ವರ, ಔದಾರ್ಯ, ಇಂದ್ರಿಯಗಳಲ್ಲಿ ಬಲಿಷ್ಠತೆ, ವಾಕ್ಸಿದ್ಧಿ, ಕಾಮೋದ್ಧೀಪನ ಹಾಗೂ ಕಾಂತಿಗಳನ್ನು ಶುದ್ಧ ಪಾದರಸವೂ ರಸಾಯನದಂತೆ ಕೆಲಸಮಾಡಿ ದೇಹಕ್ಕೆ ತಂದುಕೊಡುತ್ತದೆ. ಈ ಎಲ್ಲ ಗುಣಗಳು ಮಾನವನಿಗೆ ದೊರಕಬೇಕಾದರೆ ಪಾರಜವು ಪರಿಪೂರ್ಣ ಶುದ್ಧವಾಗಿರಬೇಕು. ಇದಕ್ಕಾಗಿ ಮೂರ್ಛನ, ಮಾರಣ, ಬಂಧನ -ಮೂರು ವಿಧ ಸಂಸ್ಕಾರ ಮಾಡಬೇಕಾಗುತ್ತದೆ. ಮೂರ್ಛನ ಕ್ರಿಯೆಯಿಂದ ಅನೇಕ ದುಷ್ಟರೋಗಗಳು ನಾಶವಾಗುವವು. ಭಸ್ಮೀಕರಣದಿಂದ (ಮಾರಣ) ಧನ ಧಾನ್ಯ ಸಮೃದ್ಧಿ ಹೊಂದಿ ಸುಖೋಪಭೋಗಗಳು ದೊರಕುವವು. ಬಂಧನ ಕ್ರಿಯೆಯಿಂದ ಇದು ಬದ್ಧರಸವಾಗಿ ಖೇಚರತ್ವ ಎಂದರೆ ಆಕಾಶದಲ್ಲಿ ತಿರುಗಾಡುವ ಶಕ್ತಿ ಹಾಗೂ ಅಜರಾಮರತ್ವ, ರಸಾಯನ, ದೀರ್ಘಾಯುಷ್ಯತ್ವಗಳು ಸಿಕ್ಕುವವೆಂದು ಉತ್ರದಿತ್ಯಾಚಾರ್ಯರು ಅಭಿಪ್ರಾಯಪಡುತ್ತಾರೆ.

ಮೂರ್ಛನ, ಮಾರಣವಿಧಿ: ಪಾದರಸವನ್ನು ಹಳೆಯ ಬೆಲ್ಲದಲ್ಲಿ ಚೆನ್ನಾಗಿ ಕಲಿಸಿ ಮರ್ದನೆ ಮಾಡಬೇಕು. ಇದರಿಂದ ಅದು ಮೂರ್ಛಿತವಾಗುವುದು. ಕಪಿತ್ಥ ಹಣ್ಣಿನ ರಸದಿಂದ ಅದು ಭಸ್ಮವಾಗುವುದು. ಗೋ ಬಂಧನದಿಂದ ಮುತ್ತುಗೆ ಬೀಜದ ಮೆತ್ತನಾದ ರಸದಿಂದ ಜೀರಿಗೆ ಹಾಗೂ ಕೌಂಚ ಬೀಜರಸಗಳಿಂದ ಅದು ಬಹುಬೇಗನೆ ಭಸ್ಮರಾಗುವುದು.

ಮೃತರಸಸೇವನ ವಿಧಿ: ದೋಷಗಳ ಬಲಾಬಲಗಳಿಗನುಸರಿಸಿ ಮೃತರಸವನ್ನು ಸುವರ್ಣ ಭಸ್ಮದಲ್ಲಿ ಸೇರಿಸಿ, ಚೆನ್ನಾಗಿ ಅರೆದುಕೊಂಡು ಚೆನ್ನಾಗಿ ಕಾಯಿಸಿದ ಹಾಲು ಬೆಲ್ಲದೊಡನೆ ರೋಗಿ ನಿತ್ಯ ಸೇವನೆ ಮಾಡಬೇಕು. ತದನಂತರ ಸ್ತ್ರೀಯ ಎದೆಹಾಲಿನಿಂದ ನಸ್ಯ ಮಾಡಬೇಕು. ಆಮೇಲೆ ಸ್ತ್ರೀಯರಿಂದ ಶರೀರ ಮರ್ದನ ಮಾಡಿಸಿಕೊಳ್ಳಬೇಕೆಂದೂ ಆಗ ರಸವು ಸರ್ವತ್ರ ವ್ಯಾಪಿಸಲು ಸಾಧ್ಯವಾಗುವುದೆಂದು ಹೇಳಿದ್ದಾರೆ. ಇದರಲ್ಲಿ ಸುವರ್ಣ ಭಸ್ಮ ಸೇರಿರುವುದರಿಂದ ಹೆಚ್ಚಿನ ವೀರ್ಯಶಕ್ತಿ ಹಾಗೂ ನಿರೋಗತೆ ರೋಗಪ್ರತಿರೋಧಕ, ಶಕ್ತಿಗಳುಂಟಾಗುವವೆಂದಿದ್ದಾರೆ. ಇದಕ್ಕಾಗಿ ನಿತ್ಯ ರಸಾಯನ ವಿಧಾನಗಳನ್ನು ಸಹ ಯೋಜಿಸಿಕೊಳ್ಳಬೇಕೆಂದು ಹೇಳಿದ್ದಾರೆ.

ಶುದ್ಧ ಪಾದರಸದ ಗುಣ ಹಾಗೂ ಕ್ರಿಯೆಗಳು

ಗುಣ – ಗುರು, ಸ್ನಿಗ್ಧ, ಸರ
ರಸ – ಷಡ್ರಸ
ವಿಪಾಕ – ಮಧುರ
ವೀರ್ಯ – ಉಷ್ಣ
ದೋಷಕಾರ್ಯ – ತ್ರಿದೋಷಘ್ನವಾಗಿದೆ.

ಸಂಸ್ಥಾನಿಕ ಕಾರ್ಯ: ಬಾಹ್ಯ ಇದು ಕೀವನ್ನು ನಾಶಗೊಳಿಸುವುದು ಜಂತುಘ್ನವಾಗಿದೆ. ರೋಪಣ-ಮಾಯಿಸುವ ಹಾಗೂ ನೋವು ನಿವಾರಣೆ ಮಾಡುವ ಗುಣ ಹೊಂದಿದೆ.

ಅಭ್ಯಂತರ ಮಿದುಳು ಹಾಗೂ ನಾಡಿಗಳಿಗೆ ಬಲಪ್ರದವಾಗಿದೆ. ಅನುಲೋಮನ, ಯಕೃತ್ತನ್ನು ಉತ್ತೇಜಿಸುವುದು, ಪಿತ್ತಸಾರಕ ಹಾಗೂ ಕ್ರಿಮಿಘ್ನವಾಗಿ, ರಕ್ತವರ್ಧಕ, ಶೋಧಕ ಹಾಗು ಬಾವನ್ನಿಳಿಸುವ ಗುಣ ಹೊಂದಿದೆ. ಕಫವನ್ನು ನಿವಾರಿಸುವುದು. ವೃಷ್ಯ, ಮೂತ್ರಲ, ಚರ್ಮರೋಗಗಳನ್ನು ಜ್ವರವನ್ನು ನಿವಾರಿಸುವ ಶಕ್ತಿ ಹೊಂದಿದೆ. ಬಲ್ಯ, ರಸಾಯನ ಹಾಗೂ ಯೋಗವಾಹಿ ಗುಣ ಹೊಂದಿದೆ. ಉಪದಂಶ ರೋಗದಲ್ಲಿ ಜೀವಾಣುಗಳನ್ನು ನಾಶಪಡಿಸುವ ವಿಶೇಷ ಗುಣವನ್ನು ಹೊಂದಿದೆ.

ಪಥ್ಯ-ಪಾದರಸ ಭಸ್ಮದ ಗುಣಗಳು ದ್ವಿಗುಣವಾಗಿ ಶರೀರಕ್ಕೆ ದೊರಕಬೇಕಾದರೆ ಹಾಲು, ಮೊಸರು, ಕಬ್ಬು, ಸಕ್ಕರೆ, ಶೀತಲುಪಚಾರಗಳನ್ನು ಅನುಸರಿಸಬೇಕು. ರಸಾಯನ ಸೇವನೆಯು ಮುಗಿದ ಬಳಿಕ ಬೆಟ್ಟ ಬದನೆ, ಬದನೆ, ಬಿಲ್ವ ಫಲಗಳನ್ನು ಒಮ್ಮೆ ತಿಂದು ಅನಂತರ ಸಾಧಾರಣ ಆಹಾರ ವಿಹಾರ ಕ್ರಮಗಳನ್ನು ಅನುಸರಿಸಬೇಕಾಗುವುದು. ಹೆಸರು ಬೇಳೆಕಟ್ಟು, ಹಾಲು, ತುಪ್ಪ, ಹಳೆ ಅಕ್ಕಿ ಅನ್ನ, ಹರವಿ ಪಲ್ಲೆ, ಕಿರಕಸಾಲಿ ಪಲ್ಲೆ, ಸೈಂಧವ ಲವಣ, ಹಿಪ್ಪಲಿ, ಜೇಕಿನಗಡ್ಡೆ ಮುಂತಾದವನ್ನು ಸೇವಿಸಬೇಕು.

ಪ್ರಮಾಣ : ೬೨.೫ ರಿಂದ ೧೨೫ ಮಿಲಿಗ್ರಾಂ

ಈ ರಸೌಷಧಿಗಳ ಸಂಯೋಗದಿಂದ ಅನೇಕ ವಿಧ ರಸಾಯನೌಷಧಿಗಳನ್ನು ತಯಾರಿಸಲಾಗುತ್ತದೆ. ಅವುಗಳ ಸಂಖ್ಯೆ ನೂರಾರು ಇದೆ. ಅವುಗಳಲ್ಲಿ ಅಗ್ನಿತುಂಡಿ, ಅಶ್ವರಂಚುಕಿ, ಅರ್ಶಕುಠಾರ, ಆನಂದಭೈರವ, ಆರೋಗ್ಯವರ್ಧಿನಿ, ಅರ್ಶಕುಠಾರ, ಇಚ್ಚಾಭೇದಿ, ಏಕಾಂಗವೀರ, ಕಫ ಕುಠಾರ ರಸ, ಕಾಮಧುಘ, ಶೂತಶೇಖರ, ಗರ್ಭಪಾಲ ರಸ, ಗಂಧಕ ರಸಾಯನ, ಕ್ರಿಮಿಕುಠಾರ, ಚತುರ್ಮುಖ ರಸ, ಚಂದ್ರಕಲಾ, ಚಂದ್ರಪ್ರಭಾ, ಜ್ವರಾಂಕುಶ, ತಾಪ್ಯಾದಿ ಲೋಹ, ತ್ರಿಭುವನ ಕೀರ್ತಿ, ಪ್ರವಾಳ ಪಂಚಾಮೃತ, ಮಹಾ ಮೃತ್ಯಂಜಯ, ಲಕ್ಷ್ಮಿ ವಿಲಾಸ, ಮಹಾವಾತವಿಧ್ವಂಸರಸ, ವಸಂತಕುಸುಮಾಕರ, ಶ್ವಾಸಕುಠಾರ, ಸಮೀರಪನ್ನಗ, ಸ್ಮೃತಿ ಸಾಗರ, ಮಕರಧ್ವಜ ಮುಂತಾದವುಗಳನ್ನು ಹೆಸರಿಸಬಹುದು.