ರೋಗ

ರೋಗವು ಅಸ್ವಸ್ಥ್ಯದ ಲಕ್ಷಣವೆನಿಸುವುದು. ಇದು ಶರೀರ ಅಥವಾ ಮನಸ್ಸುಗಳ ಅಸಹಜವಾದ ಸ್ಥಿತಿ.

ಶಾರೀರಿಕ ತೊಂದರೆಗಳಿರಲಿ ಇಲ್ಲವೆ ಮಾನಸಿಕ ವೇದನೆಗಳಿರಲಿ ಅವೆಲ್ಲ ರೋಗಗಳೇ ಎನಿಸುವುವು.

ರೋಗವು ನೆಗಡಿಯಷ್ಟು ಚಿಕ್ಕದಿರಲಿ, ಇಲ್ಲವೆ ಕ್ಯಾನ್ಸರಿನಷ್ಟು ದೊಡ್ಡದಿರಲಿ ಅದರಲ್ಲಿ ನೋವು ಎನ್ನುವುದು ಸಾಮಾನ್ಯ ಲಕ್ಷಣ.

ಪ್ರಪ್ರಥಮವಾಗಿ ನಮ್ಮ ಪ್ರಕೃತಿಯೇ ರೋಗದ ಎದುರಾಗಿ ಪ್ರತಿಭಟಿಸಿ ಹೊರದೂಡಲು ಪ್ರಯತ್ನಿಸುವುದು. ಆದರೆ ನಾವು ಅದಕ್ಕೆ ಸಹಕರಿಸದೆ ಚಿಕಿತ್ಸೆ ತೆಗೆದುಕೊಳ್ಳಲು ಧಾವಿಸುವೆವು ಹಾಗೂ ಅನೈಸರ್ಗಿಕ ಕ್ರಮಗಳತ್ತ ಒಲಿಯುವೆವು. ಹೀಗಾಗಿ ಪ್ರಕೃತಿಯ ಶುದ್ಧಿ ಸರಿಯಾಗಿ ಆಗದು.

ಒಳ್ಳೆಯ ಆರೋಗ್ಯವಿದ್ದರೆ ರೋಗನಿರೋಧಕ ಶಕ್ತಿ ಶರೀರದಲ್ಲಿ ಚೆನ್ನಾಗಿಯೇ ಇರುವುದು.

ಅಸ್ವಾಸ್ಥ್ಯತೆ ಎಂದರೆ ಮನುಷ್ಯ ಆರೋಗ್ಯದ ಸ್ಥಿತಿಯೊಳಗೆ ಇರದೇ ಬೇರೆಯಾಗಿದ್ದಾನೆ ಎಂದರ್ಥ. ಇದು ಗಾಯ, ಸೋಂಕು, ಗಡ್ಡೆ, ಧೂಮಪಾನ ಮುಂತಾದ ಯಾವುದೇ ಕಾರಣದಿಂದ ಹೀಗಾಗಿರಬಹುದು. ಇದರಲ್ಲಿ ನೋವು ಎನ್ನವುದು ಇದ್ದೇ ಇರುತ್ತದೆ. ಹೀಗಾದಾಗ ಪ್ರತಿಯೊಬ್ಬರಿಗೂ ತನ್ನ ಮೊದಲಿನ ಸ್ಥಿತಿಗೆ ಹೋದರೆ ಸಾಕು ಎನಿಸುತ್ತದೆ. ಇದಕ್ಕೆ ಪ್ರಕೃತಿಯು ತನ್ನಿಂದಾದ ಸಹಕಾರ ಕೊಡುತ್ತದೆ. ಕೆಲ ವೇಳೆ ಔಷಧಿಗಳೂ ಬೇಕಾಗಬಹುದು.

ರೋಗಿಗಳಿಗೆ ಮೂಲ ಕಾರಣ ಮನುಷ್ಯನ ಮನಸ್ಸು ಸತತವಾಗಿ ನೈಸರ್ಗಿಕ ನಿಯಮಗಳನ್ನು ಉಲ್ಲಂಘಿಸುವುದೇ ರೋಗಕ್ಕೆ ಮೂಲ ಕಾರಣ.

ರೋಗ ಕಾರಣಗಳು

ರೋಗೋತ್ಪತ್ತಿಗೆ ಕರ್ಮವೇ ಕಾರಣ.

ರೋಗಗಳಿಗೆ ಮುಖ್ಯವಾಗಿ ಯಾವುದೇ ಗ್ರಹದೋಷ, ತ್ರಿದೋಷಗಳ ಪ್ರಕೋಪತೆ, ಋತುಮಾನ ವ್ಯತ್ಯಾಸ- ಇವೆಲ್ಲ ಕಾರಣಗಳಲ್ಲ. ಇವು ನಿಮಿತ್ತ ಕಾರಣಗಳು ,ಕಾರಣಗಳು ಮಾತ್ರ. ಮುಖ್ಯ ಕಾರಣವೆಂದರೆ ವ್ಯಕ್ತಿ ಪೂರ್ವ ಜನ್ಮದಲ್ಲಿ ಮಾಡಿದ ಪಾಪದ ಕರ್ಮಗಳು.

ಸ್ವಭಾವ, ಕಾಲ, ಗ್ರಹ, ಕರ್ಮ, ದೈವ, ಬ್ರಹ್ಮ, ಪುಷ್ಟ, ಈಶ್ವರ, ಭಾಗ್ಯ, ಪಾಪ, ವಿಧಿ, ಕೃತಾಂತ, ನಿಯತಿ, ಯಮ – ಇವೆಲ್ಲ ಪೂರ್ವಜನ್ಮ ಕೃತ ಕರ್ಮಗಳ ಅಪರನಾಮಗಳೆನಿಸಿವೆ. ಇವುಗಳನ್ನೇ ಮೂಲ ಮಾಡಿ ನಾವು ರೋಗಬಂದಿತೆಂದು ಹೇಳುತ್ತೇವೆ. ಆದರೆ ಇವಕ್ಕೆಲ್ಲ ಪೂರ್ವೋಪಾರ್ಜತ ಕರ್ಮದ ಉದಯವೇ ಮಾನವನಿಗೆ ಸುಖ-ದುಃಖಗಳಿಗೆ ಕಾರಣವೆನಿಸಿವೆ.

ವೈದ್ಯನು ರೋಗಕ್ಕೆ ಚಿಕಿತ್ಸಿಸುವಾಗ ದೋಷಗಳು ಪಾಕವಾಗುವವೇ ಹೊರತು ಹಿಂದಿನ ಕರ್ಮದಿಂದ ಉದಯವಾದ ವಿಕಾರಗಳಿಗೆ ಚಿಕಿತ್ಸಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚಿಕಿತ್ಸೆಗೆ ಇಂತಹ ರೋಗಗಳು ಗುಣವಾಗುವುದಿಲ್ಲ. ಕಾಲಕ್ರಮದಲ್ಲಿ ಕರ್ಮ ಫಲಗಳು ದೂರವಾಗಿ ಗಿಡದಿಂದ ಹಣ್ಣುಗಳು ತಾವೇ ಪಕ್ವವಾಗಿ ಬೀಲುವಂತೆ ಈ ವಿಕಾರಗಳು ದೂರವಾಗುತ್ತವೆ. ಇಲ್ಲವೆ ದೇವರ ಪೂಜೆ, ಪುಣ್ಯದ ಕೆಲಸ, ಧ್ಯಾನ, ತ್ಯಾಗಿಗಳ ಸೇವೆ, ತೀರ್ಥಕ್ಷೇತ್ರ ದರ್ಶನ, ದಾನ-ಧರ್ಮಗಳಿಂದ ಕರ್ಮಗಳನ್ನು ದೂರ ಮಾಡಿಕೊಂಡರೆ ಕಾಲಾಂತರದಲ್ಲಿ ಕರ್ಮಗಳು ಪಾಕಗೊಂಡು ತಮ್ಮಷ್ಟಕ್ಕೆ ತಾವೇ ದೂರವಾಗುವುವು.

(.., ಶ್ಲೋಕ ೧೧೧೭)

ದೈಹಿಕ ವೇಗಗಳು

ಶರೀರದಲ್ಲಿ ಹು‌ಟ್ಟುವ ಸಹಜವಾದ ಕರೆಗಳಿಗೆ “ವೇಗಗಳು” ಎಂದು ಆಯುರ್ವೇದದಲ್ಲಿ ಕರೆಯಲಾಗಿದೆ. ಹೀಗೆ ಬರುವ ಸಹಜವಾದ ವೇಗಗಳನ್ನು ಸಕಾಲದಲ್ಲಿ ನಿರ್ವಹಿಸಬೇಕಾದುದು ಆರೋಗ್ಯ ದೃಷ್ಟಿಯಿಂದ ವಿಹಿತ. ಇಲ್ಲದಿದ್ದರೆ ಅನೇಕ ರೋಗಗಳು ಹುಟ್ಟಿಕೊಳ್ಳುವುವು. ಅದರಂತೆ ವೇಗದ ಕರೆ ಇಲ್ಲದಾಗ ಅದನ್ನು ಒತ್ತಾಯದಿಂದ ಹೊರಹಾಕುವುದು ಕೂಡ ಅಷ್ಟೇ ಅಪಾಯಕಾರಿ. ಅಧೋವಾತ, ವಾತ, ಮೂತ್ರ, ಶೀನು, ಬಾಯಾರಿಕೆ, ಹಸಿವು, ನಿದ್ರೆ, ಕೆಮ್ಮು, ಶ್ರಮಜನಿತ ಶ್ವಾಸ, ಆಕಳಿಕೆ, ಕಣ್ಣೀರು, ವಾಂತಿ, ಶುಕ್ರವೇಗ ಮೊದಲಾದ ವೇಗಗಳು ಉಂಟಾದಾಗ ಅವನ್ನು ತಡೆಯಬಾರದು.

೧. ಅಪಾನ ವಾಯುವಿನ ವೇಗವನ್ನು ತಡೆದರೆ ಗುಲ್ಮ, ಉದಾವರ್ತ, ಹೊಟ್ಟೆನೋವು, ಇಂದ್ರಿಯಾಯಾಸ, ವಾತ ಮೂತ್ರ – ಮಲಗಳು ತಡೆಯಲ್ಪಡುವುವು, ದೃಷ್ಟಿನಾಶ, ಅಗ್ನಿನಾಶ ಹಾಗೂ ಹೃದ್ರೋಗಗಳುಂಟಾಗುತ್ತವೆ.

೨. ಮಲದ ವೇಗವನ್ನು ತಡೆದರೆ ಮೊಣಕಾಲಿನ ಹಿಂದಿರುವ ಮಾಂಸ ಖಂಡಗಳು ಬಿಗಿದು ನೋಯಲಾರಂಭಿಸುತ್ತವೆ. ನೆಗಡಿ, ತಲೆನೋವು, ತೇಗು, ಮೈ ಕತ್ತರಿಸಿದಂತೆ ನೋವು, ಎದೆತಡೆದಂತೆ ನೋವು, ಬಾಯಿಯಿಂದ ಮಲವು ಹೊರಟು ಬರುವಿಕೆ (ಹೊಲಸು ವಾಸನೆ ಬರುವುದು) ಗುಲ್ಮ ಉದಾವರ್ತಾದಿ ವಿಕಾರಗಳು ಹುಟ್ಟಿಕೊಳ್ಳುತ್ತವೆ.

೩. ಮೂತ್ರದ ವೇಗವನ್ನು ತಡೆದರೆ ಮೈ ಕತ್ತರಿಸಿದಂತೆ ನೋವು, ಅಶ್ಮರಿರೋಗ, ಬಸ್ತಿ, ಶಿಶ್ನ ತೊಡೆಯ ಸಂದು ಭಾಗಗಳಲ್ಲಿ ನೋವು ಉಂಟಾಗುತ್ತವೆ. ಹಾಗೂ ಅಪಾನವಾತ ಹಾಗೂ ಮಲನಿರೋಧದಿಂದುಂಟಾದ ವಿಕಾರಗಳು ಹುಟ್ಟಿಕೊಳ್ಳುತ್ತವೆ.

೪. ತೇಗು ಬರುವುದನ್ನು ತಡೆದರೆ ಅರುಚಿ, ಮೈನಡುಕ, ಹೃದಯ – ಎದೆಗಳು ಹಿಡಿದುಕೊಂಡಂತೆ ನೋವು, ಹೊಟ್ಟೆಯುಬ್ಬರ, ಕೆಮ್ಮು ಬಿಕ್ಕಳಿಕೆಗಳುಂಟಾಗುತ್ತವೆ.

೫. ಶೀನನ್ನು ತಡೆದರೆ ತಲೆನೋವು, ಇಂದ್ರಿಯಗಳು ತಮ್ಮ ಕಾರ್ಯದಲ್ಲಿ ಅಸಮರ್ಥವೆನಿಸುವುದು, ದೃಷ್ಟಿಮಾಂದ್ಯ, ಗೋಣು ಹಿಡಿದುಕೊಳ್ಳುವಿಕೆ, ಅರ್ದಿತವಾತ ಈ ವಿಕಾರಗಳುಕ ಹುಟ್ಟಿಕೊಳ್ಳುತ್ತವೆ.

೬. ನೀರಡಿಕೆಯನ್ನು ತಡೆದರೆ ಕ್ಷಯರೋಗ, ದೇಹಕಾರ್ಶ್ಯತೆ, ಕಿವುಡು ತನ್ನ, ಅಜ್ಞಾನ, ಶಿರೋಭ್ರಮಣೆ, ಹೃದಯಶೂಲೆಗಳುಂಟಾಗುತ್ತವೆ.

೭. ಹಸಿವೆಯನ್ನು ತಡೆದರೆ ಮೈ ಕತ್ತರಿಸುವುದು, ಅರುಚಿ, ಗ್ಲಾನಿ, ಕೃಶತ್ವ, ಹೊಟ್ಟೆ ನೋವು, ತಲೆ ತಿರುಗುವುದು – ಈ ವಿಕಾರಗಳುಂಟಾಗುವುವು.

೮. ನಿದ್ರೆಯನ್ನು ತಡೆದರೆ ಮತ್ತತೆ, ತಲೆ- ಕಣ್ಣುಗಳು ಭಾರವಾಗುವಿಕೆ, ಅಲಸ್ಯ, ಆಕಳೀಕೆ, ಮೈ-ನೋವುಗಳುಂಟಾಗುವುವು.

೯. ಕೆಮ್ಮು ಬಂದಾಗ ತಡೆದರೆ ಹೆಚ್ಚು ಕೆಮ್ಮುಬರುವುದು. ದಮ್ಮು ಅರುಚಿ, ಹೃದ್ರೋಗ, ಕ್ಷಯ, ಬಿಕ್ಕಳಿಕೆಗಳುಂಟಾಗುವುವು.

೧೦. ಆಕಳಿಕೆಯನ್ನು ತಡೆದರೆ ಮೈ ಕತ್ತರಿಸಿದಂತೆ ನೋವು ಹಾಗೂ ಶೀನನ್ನು ತಡೆದಾಗ ಕಂಡುಬರುವ ಇತರ ವಿಕಾರಗಳು ಕಂಡುಬರುವುವು.

೧೧. ಕಣ್ಣೀರು ಬರುವುದನ್ನು ತಡೆದರೆ ನೆಗಡಿ, ಮೂಗಿನಿಂದ ಕಫ ಸ್ರಾವ, ಕಣ್ಣುನೋವು, ಹೃದ್ರೋಗ, ಮನ್ಯಾಸ್ತಂಭ, ಅರುಚಿ, ಶಿರೋಭ್ರಮಣೆ, ಗುಲ್ಮ ವಿಕಾರಗಳುಂಟಾಗುವುವು.

೧೨. ವಾಂತಿ ಬಂದಾಗ ತಡೆದರೆ ವಿಸರ್ಪ, ಪಿತ್ತ ಗಂಧೆ, ಕುಷ್ಠ, ಕಣ್ಣುಗಳಲ್ಲಿ ತಿಂಡಿ, ಪಾಂಡುರೋಗ, ಜ್ವರ, ಕಾಸ, ಬಾಯಿಯಲ್ಲಿ ನೀರೂರಿ ವಾಂತಿ ಬಂದಂತೆ ಆಗುವುದು. ಬಂಗು, ಶ್ವಯಧು ಈ ವಿಕಾರಗಳಾಗುವುವು.

೧೩. ಶುಕ್ರದ ವೇಗವನ್ನು ತಡೆದರೆ ಅಧಿಕ ಪ್ರಮಾಣದಿಂದ ಶುಕ್ರ ಸ್ರಾವ, ವೃಷಣ ಗುದಭಾಗದಲ್ಲಿ ನೋವು ಮತ್ತು ಬಾವು, ಜ್ವರ, ಎದೆನೋವು, ಮೂತ್ರದ ತಡೆ, ಮೈ ಕತ್ತರಿಸಿದಂತಾಗುವಿಕೆ, ಚೇರು ಇಳಿಯುವುದು(Hernia),ಆಶ್ಮರಿ, ನಪುಂಸಕತೆ – ಈ ವಿಕಾರಗಳಾಗುವುವು.

ಮನೋವೇಗಗಳ ನಿಯಂತ್ರಣ

ಮನಸ್ಸಿನ ಸಂಬಂಧವಾದ ಲೋಭ, ಈರ್ಷೆ, ದ್ವೇಷ, ಮತ್ಸರ, ಅತ್ಯಾಶಕ್ತಿ ಮೊದಲಾದ ವೇಗಗಳನ್ನು ತನ್ನ ಹಾಗೂ ಪರಹಿತಕ್ಕಾಗಿ ನಿಗ್ರಹಿಸಬೇಕು. ತನ್ನ ಹಾಗೂ ಪರರ ಸುಖ ಶಾಂತಿಗಳನ್ನು ಕೆಡಿಸುವ ಈ ಮನೋವೇಗಗಳನ್ನು ಸಂಯಮಿಸುವುದರಿಂದ ಅನೇಕ ಮನೋವಿಕಾರಗಳು ನಿರೋಧಿಸಲ್ಪಡುವುವು.

ತುಂಬಾ ಕಠಿಣವಾದ ಮಾತುಗಳನ್ನಾಡುವುದು, ಚಾಡಿ ಹೇಳುವುದು, ಸುಳ್ಳು ಮಾತನಾಡುವುದು, ಅಪ್ರಸಂಗವಿರುವಾಗ ಮಾತನಾಡುವುದನ್ನು ಬಿಡಬೇಕು.

ನಮ್ಮ ದೈಹಿಕ ಪ್ರವೃತ್ತಿಗಳಿಂದ ಪರರಿಗೆ ಅಪಾಯವಾಗುವಂತಿದ್ದರೆ – ಸ್ತ್ರೀಭೋಗ, ಕಳ್ಳತನ, ಹಿಂಸೆಮಾಡುವುದು, ಹೊಡೆದಾಟ ಇತ್ಯಾದಿಗಳನ್ನು ಬಿಡಬೇಕು.

ಮನಸ್ಸು, ಮಾತುಗಳು ಹಾಗೂ ಶಾರೀರಿಕ ಪಾಪ ಕರ್ಮಗಳಿಂದ ಮಾನವನು ಧರ್ಮ, ಅರ್ಥಗಳನ್ನು ಹೊಂದಿ ಸುಖವಾಗಿರುವನು – ಚರಕ.

ಆರೋಗ್ಯ ನಿಯಮಗಳ ಉಲ್ಲಂಘನ

ಸಾಮಾನ್ಯವಾಗಿ ಹೇಳುವುದಾದರೆ ಆರೋಗ್ಯ ನಿಯಮಗಳನ್ನು ಉಲ್ಲಂಘಿಸುವುದೇ ರೋಗಗಳ ಹುಟ್ಟಿಗೆ ಕಾರಣ. ಆದ್ದರಿಂದ ಈ ಮೊದಲು ನಾವು ದಿನಚರ್ಯೆ ಹಾಗು ಋತುಚರ್ಯೆಗಳಲ್ಲಿ ಅನೇಕ ಆರೋಗ್ಯ ನಿಯಮಗಳನ್ನು ತಿಳಿದಿದ್ದೇವೆ. ಅವುಗಳನ್ನು ಸರಿಯಾಗಿ ಪಾಲಿಸಬೇಕು. ಇದರಿಂದ ದೋಷಗಳು ಸಮಸ್ಥಿತಿಗೆ ಉಳಿದು ರೋಗಗಳು ಹುಟ್ಟಿಕೊಳ್ಳಲು ಅಸ್ಪದವಾಗದು.

ಮಂದಾಗ್ನಿ

ಸರ್ವರೋಗಗಳು ಹುಟ್ಟಲು ಮಂದಾಗ್ನಿಯೇ ಕಾರಣವೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದರಲ್ಲಿ ಆಹಾರವನ್ನು ಪಚನ ಮಾಡುವ ಪಾಚಕಾಗ್ನಿ ಏಳು ಧಾತ್ವಗ್ನಿಗಳು ಹಾಗೂ ಪಂಚಭೂತಾಗ್ನಿಗಳು ಶರೀರದಲ್ಲಿ ಮಂದವಾಗಿದ್ದರೆ ಅವು ತಮ್ಮ ಕಾರ್ಯದಲ್ಲಿ ವಿಮುಖಗೊಂಡು ರೋಗಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಈ ಶರೀರಾಗ್ನಿಗಳನ್ನು ಸಮವಾಗಿಟ್ಟುಕೊಂಡಿರಲು ಬೇಕಾದ ಕ್ರಮಗಳನ್ನು ಅನುಸರಿಸುತ್ತಿರಬೇಕು.

ಕಾಲಾರ್ಥ ಕರ್ಮಗಳು

ಮಳೆಗಾಲ, ಛಳಿಗಾಲ ಹಾಗೂ ಬೇಸಿಗೆ ಕಾಲಗಳಲ್ಲಿ ಕಂಡಬರುವ ಹೀನ, ಮಿಥ್ಯಾ ಹಾಗೂ ಅತಿಯೋಗಗಳು ರೋಗಗಳಿಗೆ ಕಾರಣವಾಗುತ್ತವೆ. ಉದಾ: ಛಳಿಗಾಲದಲ್ಲಿ ಕಡಿಮೆ ಛಳಿ ಇರುವುದು ಅಥವಾ ಮಿತಿಮೀರಿ ಛಳಿ ಇರುವುದು ಇಲ್ಲವೆ ಒಂದು ಕ್ಷಣ ಛಳಿ ಮತ್ತೊಂದು ಕ್ಷನ ಉಷ್ಣತೆ ಇವುಗಳ ಕ್ರಮವಾಗಿ ಚಳಿಗಾಲದ ಹೀನ, ಅತಿ ಹಾಗೂ ಮಿಥ್ಯಾ ಯೋಗಗಳೆನಿಸುವುವು.

ಪಂಚೇಂದ್ರಯಾರ್ಥಗಳ ಬಗೆಗೆ ಹೇಳುವುದಾದರೆ – ಉದಾ: ಕಣ್ಣುಗಳಿಗೆ ಕೆಲಸವನ್ನು ಕೊಡದಿರುವಿಕೆ, ಕಣ್ಣುಗಳನ್ನು ಸದಾ ಮುಚ್ಚಿಕೊಂಡೇ ಇರುವುದು ಇಲ್ಲವೇ ಒಮ್ಮೆ ಅತಿ ಪ್ರಕಾಶವನ್ನು ಮಗದೊಮ್ಮೆ ಗಾಡಾಂಧಕಾರಗಳನ್ನು ಕಾಣುವುದು, ಕಣ್ಣುಗಳ ಹೀನ, ಮಿಥ್ಯಾ ಅತಿಯೋಗಗಳೆನಿಸುತ್ತವೆ. (ಇದರಂತೆ ಇತರ ಇಂದ್ರಿಯಗಳ ಬಗೆಗೂ ತಿಳಿದುಕೊಳ್ಳಬೇಕು)

ಕಾಲ, ಅರ್ಥ ಹಾಗೂ ಕರ್ಮಗಳ ಸರಿಯಾದ ಸಂಯೋಗವೇ ಒಳ್ಳೆಯ ಆರೋಗ್ಯವನ್ನು ದಯಪಾಲಿಸುವುದು.

ನಮ್ಮ ಶರೀರವನ್ನು ನಾವು ಅತಿಯಾಗಿ ಹಿಂಸಿಸದೇ, ದುಡಿಸದೆಯೂ ಇರದೇ ಒಂದು ಸಮಪ್ರಮಾಣದ ಸೂತ್ರದಿಂದ ಮುಂದುವರೆಸಿಕೊಂಡು ಹೋಗಬೇಕು.

ಇತರ ಕಾರಣಗಳು

ಸ್ವಾಸ್ಥ್ಯ ಭಾದಕಾಂಶಗಳು

 • ಅತ್ಯಧಿಕವಾಗಿ ಹುಳಿ ಪದಾರ್ಥ, ರೂಕ್ಷ ಪದಾರ್ಥಗಳಿಂದ ಕೂಡಿದ ಊಟ, ಅತಿ ಹೆಚ್ಚು-ಹೆಚ್ಚು ವ್ಯಾಯಾಮ ಮಾಡುವುದು, ಅಧಿಕ ಹವೆ, ಬಿಸಿಲುಗಳಿಗೆ ಮೈ ಒಡ್ಡುವುದು ಅತಿಯಾಗಿ ಮೈಥುನ ಮಾಡುವುದು, ನಿತ್ಯ ಒಂದೇ ರಸದಿಂದ ಕೂಡಿದ ಆಹಾರ ಸೇವಿಸುವುದು – ಇವುಗಳಿಂದ ಶರೀರದಲ್ಲಿ ಅನೇಕ ಪ್ರಕಾರದ ರೋಗಗಳು ಹುಟ್ಟಿಕೊಳ್ಳುವುವು.
 • ಶರೀರಕ್ಕೆ ಆರೋಗ್ಯದಾಯಕ ಆಹಾರದ ಪೂರೈಕೆ ಆಗದಿದ್ದರೆ ಬೆರಿ ಬೆರಿ, ಪೆಲಗ್ರಾ, ಸ್ಕರ್ವಿ, ರಿಕೆಟ್ಸಾ ಮೊದಲಾದ ಕೊರತೆ ರೋಗಗಳು ಹುಟ್ಟಿಕೊಳ್ಳುವುವು. ಸಮತೋಲನ ಆಹಾರ ಸೇವಿಸಿ. ಅವುಗಳ ಕೊರತೆ ದೇಹಕ್ಕೆ ಆಗದಂತೆ ನೋಡಿಕೊಳ್ಳಬೇಕು.
 • ಪರಿಸರ ಮಾಲಿನ್ಯದಿಂದ ಹುಟ್ಟಿಕೊಳ್ಳುವ ಅನೇಕ ವಿಷಯಗಳು ನಮ್ಮ ದೇಹದಲ್ಲಿ ಉಸಿರಾಟ, ನುಂಗುವುದು ಇಲ್ಲವೆ ಚರ್ಮ ಸಂಪರ್ಕ ಮಾಧ್ಯಮ ಸೇರಿಕೊಂಡು ರೋಗಗಳಿಗೆ ಕಾರಣವೆನಿಸುವುವು.
 • ಕಾರಖಾನೆಗಳಲ್ಲಿ ಕೆಲಸ ಮಾಡುವವರಿಗೆ ಆಯಾ ಉದ್ಯಮಕ್ಕೆ ತಕ್ಕಂತೆ ಕೆಲ ವಿಕಾರಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಉದಾ: ಬೆಂಕಿಕಡ್ಡಿಯನ್ನು ತಯಾರಿಸುವ ಉದ್ಯಮದಲ್ಲಿ ತೊಡಗುವವರಿಗೆ ರಂಜಕ ವಿಷವು ಬಾಧಿಸುವುದನ್ನು, ಮುಂಜಾಗ್ರತೆ ಅವಶ್ಯ
 • ಊಟದಲ್ಲಿಯ ಅಕ್ರಮತೆಗಳಿಂದ ಅಜೀರ್ಣ, ಹೊಟ್ಟೆನೋವು, ಅಪಾನವಾಯು, ವಾಂತಿ, ಭೇದಿ, ಮೊದಲಾದ ವಿಕಾರಗಳು ಹುಟ್ಟಿಕೊಳ್ಳುವುವು. ಆಹಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು.
 • ಮಳೆಯಲ್ಲಿ ನೆನೆದು ಬಂದಾಗ ಸೀನು ನೆಗಡಿ, ಕೆಮ್ಮು, ಜ್ವರ, ಉಬ್ಬುಸ, ವಿಕಾರಗಳು ಕಂಡುಬರುವುವು. ಅದರಂತೆ ಬಹಳ ಬಿಸಿಲಿನಲ್ಲಿ ಓಡಾಡಿದರೆ, ಕೆಲಸ ಮಾಡಿದರೆ ಆಯಾಸ, ದಣಿವು, ಅತಿಯಾದ ಬೆವರು, ಕಣ್ಣಿಗೆ ಕತ್ತಲು ಗೂಡಿಸುವುದು, ಬಾಯಾರಿಕೆ, ಕೈಕಾಲುಗಳು ಸೆಳೆತ, ಸಂಕಟಗಳು ಕಾಣಿಸಿಕೊಳ್ಳುವುವು. ಆದ್ದರಿಂದ ಆಯಾ ಕಾಲಗಳಿಗೆ ತಕ್ಕಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಲ್ಲದೇ ‘ಅತಿ’ಯನ್ನು ಎಲ್ಲೆಡೆಗೂ ಬಿಡಬೇಕು.
 • ಅತಿಯಾಗಿ ಧೂಮಪಾನ ಮಾಡುವುದರಿಂದ ಕೆಮ್ಮು ಶ್ವಾಸ, ಕಾಸ, ಪುಪ್ಪುಸ ಕ್ಷಯ, ಪುಪ್ಪುಸ ಕ್ಯಾನ್ಸರ್ ರೋಗವಾಗಬಹುದು. ಆದ್ದರಿಂದ ತಂಬಾಕುವಿನಿಂದ ತಯಾರಿಸಿದ ಧೂಮಪಾನವನ್ನು ಕೂಡ ಆರೋಗ್ಯ ನಿಯಮಗಳಿಗನುಸಾರ ಮಾಡಬೇಕು.
 • ಅತಿಯಾಗಿ ಮದ್ಯಪಾನ ಮಾಡುವುದರಿಂದ ಯಕೃತ ರೋಗಗಳು, ಜಠರದ ವೃಣಗಳು ಹಾಗೂ ನರದೌರ್ಬಲ್ಯ ಮೊದಲಾದ ವಿಕಾರಗಳು ಕಂಡುಬರುವುವು. ಆದ್ದರಿಂದ ಕೂಡದು.
 • ತಂಬಾಕನ್ನು ತಾಂಬೂಲಿನಲ್ಲಿ ಹಾಕಿ ಹೆಚ್ಚಾಗಿ ತಿಂದರೆ ಬಾಯಿ, ಗಂಟಲು, ಅನ್ನ ನಾಳಗಳಲ್ಲಿ ದುಷ್ಟ ವ್ರಣಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಇದರಂತೆ ತಂಬಾಕುವಿನಿಂದ ಕಂಡಬರುವ ಇತರ ವಿಕಾರಗಳೂ ಆಗುವವು. ಆದ್ದರಿಂದ ತಂಬಾಕನ್ನು ಹಾಕಿಕೊಳ್ಳಬಾರದು.
 • ದೈಹಿಕ ಕ್ರಿಯೆಗಳಲ್ಲಿಯ ವ್ಯತ್ಯಾಸ, ರಚನಾತ್ಮಕ ದೋಷಗಳು ಅಂತಃಸ್ರಾವಿ ಗ್ರಂಥಿಗಳ ಕ್ರಿಯೆಯಲ್ಲಿಯ ವೈಷಮ್ಯಗಳು ರೋಗಕ್ಕೆ ಕಾರಣವೆನಿಸುತ್ತವೆ.
 • ತಮ್ಮ ಸೂಕ್ಷ್ಮ ತತ್ತಿಗಳ ಮೂಲಕ ದೇಹ ಪ್ರವೇಶಗೊಂಡು ಅಲ್ಲಿಯೇ ಬೆಳವಣಿಗೆ ಹೊಂದುವ ನಾರುಹುಳ, ದುಂಡುಹುಳ, ಕಿಲಬಿ ಹುಳ, ಪಟ್ಟಿಹುಳ ಇತ್ಯಾದಿ ಕ್ರಿಮಿ ದೋಷಗಳು ರೋಗಕ್ಕೆ ಕಾರಣವಾಗುತ್ತವೆ. ಆದ್ದರಿಂದ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕಲ್ಲದೇ ಯಾವಾಗಲೂ ಶುದ್ಧವಾದ, ಸ್ವಚ್ಛವಾದ, ನಿರ್ವಿಷಗೊಳಿಸಿದ ನೀರನ್ನೇ ಕುಡಿಯಬೇಕು.
 • ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸರಿಯಾಗಿರದಿದ್ದರೆ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳಲು ಕಾರಣವಾಗುವುವು.
 • ಕೆಲ ಅನುವಂಶಿಕ ಕಾರಣಗಳು ರೋಗಕ್ಕೆ ಕಾರಣವಾಗುತ್ತವೆ.
 • ಪ್ರಾಣಿಗಳ ನಿಕಟ ಸಂಪರ್ಕ ಅಥವಾ ಸಂಪರ್ಕ, ಕಡಿತಗಳ ಕಾರಣಗಳಿಂದ ರೋಗಕಾರಕ ಕ್ರಿಮಿಗಳು ದೇಹದಲ್ಲಿ ಪ್ರವೇಶಿಸಿ ಕೆಲ ರೋಗಗಳನ್ನುಂಟು ಮಾಡುವುವು. ನಾಯಿ ಕಡಿತದಿಂದ ಹುಚ್ಚು, ಇಲಿಗಳಿಂದ ಪ್ಲೇಗ, ಹಂದಿಯಿಂದ ತಂತು ಮೂತ್ರ, ದನಗಳಿಂದ ಕ್ಷಯ ವಿಕಾರ ಹಾಗೂ ದೀರ್ಘಕಾಲದ ಜ್ವರ, ನಾಯಿ ಬೆಕ್ಕುಗಳಿಂದ ಹುಳುಕಜ್ಜಿ, ಮೈಕೆರೆತ, ಮೊದಲಾದ ಚರ್ಮ ಸಂಬಂಧಿಯಾದ ರೋಗಗಳು ಹುಟ್ಟಿಕೊಳ್ಳುವುವು. ಕಾರಣ ಪ್ರಾಣಿಗಳ ಅತಿಯಾದ ಸಂಪರ್ಕ ಕೂಡದು. ಹಾಗೂ ಕಡಿತ ಮೊದಲಾದ ಪ್ರಸಂಗಗಳಿದ್ದಾಗ ಮುನ್ನೆಚ್ಚರಿಕೆ ರೂಪವಾಗಿ ಲಸಿಕೆಯನ್ನು ತೆಗೆದುಕೊಳ್ಳಬೇಕು.

ರೋಗಕಾರಕ ಸೂಕ್ಷ್ಮ ಅಣುಜೀವಿಗಳು

ಈ ಅಣು ಜೀವಿಗಳು ರೋಗಗಳು ವಿಸರ್ಜಿಸುವ ಮಲ-ಮೂತ್ರ, ವಾಂತಿ, ಸಿಂಬಳ, ಕಫ ಮುಂತಾದವುಗಳಿಂದ ಹೊರಬಂದು ಪರಿಸರದಲ್ಲಿ ಅವರ ಸಂಪರ್ಕಕ್ಕೊಳಗಾದ ಆರೋಗ್ಯವಂತ ವ್ಯಕ್ತಿಯ ಉಸಿರು, ಆಹಾರ, ಚರ್ಮದ ಮೇಲಾದ ಗಾಯಗಳು, ಬಿರುಕುಗಳು, ಇಲ್ಲವೇ ದೈಹಿಕ ಸಂಪರ್ಕದ ಮೂಲಕ ದೇಹ ಪ್ರವೇಶಿಸಿ ಅಲ್ಲಿ ವಿಭಜನೆಯಾಗುತ್ತ ಉಷ್ಣತೆ, ಆದ್ರತೆ ಮತ್ತು ಆಹಾರ ದೊರೆಯುವಿಕೆಗಳಿಂದ ತೀವ್ರ ವೇಗದಲ್ಲಿ ಬೆಳೆಯುತ್ತ ಒಂದು ರೋಗೋತ್ಪತ್ತಿಗೆ ಕಾರಣವೆನಿಸುವುವು. ಈ ರೀತಿ ಒಂದು ಜೀವಾಣು ೨೪ ಗಂಟೆಗಳಲ್ಲಿ ಈ ರೀತಿ ಬೆಳೆದು ಸುಮಾರು ಒಂದುವರೆಕೋಟಿಗಳಷ್ಟಾಗುವುವು. ಎಂದರೆ ಇದರ ಮೇಲಿಂದ ಸಾಂಸರ್ಗಿಕ ರೋಗಗಳು ಹೇಗೆ ತೀವ್ರವಾಗಿ ಹರಡುವುವು ಎಂದರ್ಥವಾಗುತ್ತದೆ. ಇವುಗಳು – ಅನೇಕ ಜಾತಿಯವು ಇವೆ – ಬ್ಯಾಕ್ಟೇರಿಯಾ, ಬ್ಯಾಸಿಲಿ, ಪ್ರೊಟೋಝೇನ್, ಹೆಲ್ಮಿಂಥ್ಯ, ಸ್ಟೈರೋಕೀಟ, ಫಂಗಸ್, ವೈರಸ್ ಇತ್ಯಾದಿ. ಆದ್ದರಿಂದ ಒಳ್ಳೆಯ ವಾತಾವರಣ, ರೋಗಿಯ ಸಂಪರ್ಕದಿಂದ ದೂರವಿರುವಿಕೆ ಹಾಗೂ ಮುನ್ನೆಚ್ಚರಿಕೆ ಅನುಸರಿಸುವುದರಿಂದ ಈ ರೋಗಗಳನ್ನು ಪ್ರತಿಬಂಧಿಸಬಹುದು.

ರೋಗ ಪ್ರತಿಕಾರಕ ಶಕ್ತಿ

ನೈಸರ್ಗಿಕವಾಗಿ ಮಾನವನಲ್ಲಿ ರೋಗ ಪ್ರತಿಕಾರಕ ಶಕ್ತಿ ಇದ್ದೇ ಇರುತ್ತದೆ. ತಂದೆ, ತಾಯಿ, ಅನುವಂಶಿಕತೆ, ವಯಸ್ಸು, ಆಹಾರ, ಪರಿಸರ ಮೊದಲಾದ ಅಂಶಗಳು ರೋಗವೊಂದು ವ್ಯಕ್ತಿಯಲ್ಲಿ ಹರಡಲು ಇಲ್ಲವೆ ಹರಡದಿರಲು ಕಾರಣವೆನಿಸುತ್ತವೆ. ಹಾಗೆಯೇ ತಮ್ಮ ಶರೀರದಲ್ಲಿರುವ ಯಕೃತ, ಪ್ಲೀಹ, ರಸಗ್ರಂಥಿಗಳು ಹಾಗೂ ಶ್ವೇತಗೋಲಕಗಳು ಹೊರಗಿನಿಂದ ಬಂದ ರೋಗಕಾರಕ ಜೀವಾಣುಗಳನ್ನು ಎದುರಿಸಿ ಹೋರಾಡುತ್ತವೆ. ಈ ಹೋರಾಟದಲ್ಲಿ ಜೀವಾಣುಗಳ ಸತ್ತರೆ ರೋಗ ಬರುವ ಪ್ರಶ್ನೆಯೇ ಇಲ್ಲ. ಇಲ್ಲವಾದರೆ ರೋಗ ನಿಶ್ಚಿತ. ಕೆಲವು ವೇಳೆ ತೀವ್ರ ಸಾಂಕ್ರಾಮಿಕ ರೋಗಗಳು ಹುಟ್ಟುವ ಸಂದರ್ಭಗಳಲ್ಲಿ ಕೃತ್ರಿಮವಾಗಿ ಸಿದ್ಧಪಡಿಸಿದ ರೋಗಪ್ರತಿಬಂಧಕ ಲಸಿಕೆಗಳನ್ನು ಕೊಡಲಾಗುತ್ತದೆ. ಈ ಲಸಿಕೆಯಲ್ಲಿ ನಿಃಸತ್ವಗೊಳಿಸಲ್ಪಟ್ಟ ವಿಶಿಷ್ಟ ರೋಗ ಜಂತುಗಳೇ ಇರುತ್ತವೆ. ಇವನ್ನು ರೋಗಜಂತುಗಳು ಪ್ರವೇಶಿಸುವುದಕ್ಕಿಂತ ಮೊದಲು ಶರೀರದಲ್ಲಿ ಬಿಟ್ಟರೆ ಅವು ಮುಂಬರುವ ಜೀವಾಣುಗಳನ್ನು ಎದುರಿಸಿ ಅವುಗಳಿಂದ ಶರೀರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ.

ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದಿರಂದ ನೈಸರ್ಗಿಕವಾಗಿ ರೋಗ ಪ್ರತಿಕಾರಕ ಶಕ್ತಿಯು ಬರುವುದು. ಆದ್ದರಿಂದ ನಾವು ನಮ್ಮ ನಿತ್ಯ ಜೀವನದಲ್ಲಿ ಅವಶ್ಯಕತೆಗೆ ತಕ್ಕಂತೆ ವೃಷ್ಯ ಎಂದರೆ ಓಜಸ್ಸನ್ನು ಹೆಚ್ಚಿಸುವ ದ್ರವ್ಯಗಳನ್ನು ಮತ್ತು ವೃದ್ಧಾಪ್ಯ ಹಾಗೂ ವ್ಯಾಧಿಗಳನ್ನು ನಾಶಪಡಿಸುವಂತಹ ರಸಾಯನ ದ್ರವ್ಯಗಳನ್ನು ಸೇವಿಸಬೇಕೆಂದು ಚರಕಾಚಾರ್ಯರು ಹೇಳಿದ್ದಾರೆ? ನಿತ್ಯ ಆಹಾರದಲ್ಲಿ ಹಾಲು, ಹಣ್ಣುಗಳು, ನೆಲ್ಲಿಕಾಯಿ, ತ್ರಿಫಲಾ, ಅಶ್ವಗಂಧ, ಶತಾವರಿ ಇಲ್ಲವೆ ಚ್ಯವನಪ್ರಾಶವನ್ನು ತೆಗೆದುಕೊಳ್ಳಬೇಕು.

ಈ ರಸಾಯನ ಯೋಗಗಳ ಸೇವನೆಯಿಂದ ದೀರ್ಘಾಯುಷ್ಯ, ಸ್ಮೃತಿ, ಬುದ್ಧಿಶಕ್ತಿ, ಆರೋಗ್ಯ, ಯೌವನ, ವರ್ಣ ಹಾಗೂ ಸ್ವರಗಳು ಚೆನ್ನಾಗಿರುವುವು. ಶಾರೀರಿಕ ಹಾಗು ಇಂದ್ರಿಯಗಳು ಬಲವು ಹೆಚ್ಚುವುದು. ವಾಕ್ಸಿದ್ಧಿ ದೊರಕುವುದು. ನಮ್ರತೆ ಹಾಗೂ ಕಾಂತಿಗಳು ಹೆಚ್ಚುವವು. ಸಪ್ತಧಾತುಗಳ ಬೆಳವಣಿಗೆಗೆ ಈ ರಸಾಯನಗಳು ತುಂಬ ಉತ್ತಮವಾದ ಮೌಲ್ಯಗಳನ್ನು ಹೊಂದಿರುತ್ತವೆ. ಆದ್ದರಿಂದ ವಿಧಿಪೂರ್ವಕವಾಗಿ ಈ ರಸಾಯನಗಳನ್ನು ಸೇವಿಸಿದರೆ ದೀರ್ಘಾಯುಷ್ಯ ನಿಶ್ಚಿತವಾಗಿ ದೊರಕುವುದು.

ಆಚಾರ ರಸಾಯನಗಳು

ಸತ್ಯವಾದಿತನ, ಕ್ರೋಧ ಮಾಡಿಕೊಳ್ಳದಿರುವಿಕೆ, ಮದ್ಯ ಹಾಗೂ ಮೈಥುನಗಳಿಂದ ದೂರವಿರುವಿಕೆ, ಅಹಿಂಸಾಚರಣೆ, ಆಯಾಸವನ್ನು ಮಾಡಿಕೊಳ್ಳದಿರುವುದು. ಶಾಂತತನ, ಪ್ರಿಯವಾದಿತನ, ಜಪ ಹಾಗು ಪವಿತ್ರಗಳ ಆಚರಣೆ, ಧೀರತ್ವ, ದಾನಶೀಲತನ, ತಪಸ್ಸು, ದೇವರು-ಆಕಳು-ಬ್ರಾಹ್ಮಣರು-ಆಚಾರ್ಯರು-ಗುರು-ಹಿರಿಯರನ್ನು ಪೂಜಿಸುವುದು. ಕಠೋರ ಮಾತುಗಳನ್ನಾಡದಿರುವುದು, ಪ್ರಾಣಿಗಳನ್ನು ಕರುಣೆಯಿಂದ ನೋಡುವುದು, ಹೊತ್ತಿಗೆ ಸರಿಯಾಗಿ ಮಲಗಿಕೊಳ್ಳುವುದು ಹಾಗೂ ಏಳುವುದನ್ನು ರೂಢಿಸಿಕೊಂಡವರು ನಿತ್ಯವೂ ಹಾಲನ್ನು ಕುಡಿಯುವವರೂ, ದೇಶ-ಕಾಲಗಳಿಗನುಸರಿಸಿ ಆರೋಗ್ಯ ನಿಯಮಗಳನ್ನು ಆಚರಿಸುವವರು, ಯುಕ್ತಿಜ್ಞತೆ, ಅಹಂಕಾರ ರಹಿತತೆ ಹಾಗೂ ಹಿತವಾದ ಆಚರಣೆ ಮಾಡುವವರು, ಉದಾರ ಮನೋಭಾವವುಳ್ಳವರು, ಆಧ್ಯಾತ್ಮಾದಿ ವಿಷಯಗಳನ್ನು ಇಂದ್ರಿಯಾರ್ಥಗಳಿಗೆ ರೂಢಿಸಿಕೊಂಡವರು, ವೃದ್ಧರು ಹಾಗೂ ಅಶಕ್ತ ಜನರನ್ನು ಭಕ್ತಿಯಿಂದ ಕಾಣುವವರು – ಈ ನಡವಳಿಕೆಗಳಿಗೆಲ್ಲ ರಸಾಯನ ಸೇವನೆಯ ಗುಣಗಳನ್ನೇ ಹೊಂದಿವೆ.

ಕಾಯಕಲ್ಪ: ಆಯುರ್ವೇದದ ಮೂಲಪುರುಷ ಚರಕನ ಪ್ರಕಾರ ಔಷಧೋಪಚಾರದಲ್ಲಿ ಮಾನವನಿಗೆ ಬಂದ ರೋಗಗಳನ್ನು ಔಷಧಿ ಕೊಟ್ಟು ಗುಣಪಡಿಸುವುದು ಹಾಗೂ ಉದ್ದೀಪಕೌಷಧಿಗಳಿಂದ ಸ್ವಸ್ಥ ಮಾನವನ ದೇಹ ಮನಸ್ಸುಗಳ ಸಾಮರ್ಥ್ಯವನ್ನು ಹೆಚ್ಚಿಸಿ ರೋಗ ಶರೀರಕ್ಕೆ ತಾಗದಂತೆ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಬೆಳೆಸುವ ಕಾರ್ಯವಲ್ಲದೇ ದೇಹ ಶಕ್ತಿ, ಮೇಧಾಶಕ್ತಿ, ಇಂದ್ರಿಯಶಕ್ತಿ, ಯೌವನ, ಸ್ಫುರದ್ರೂಪ, ಧ್ವನಿ, ಉತ್ಸಾಹಗಳನ್ನೆಲ್ಲ ಹೆಚ್ಚಿಸುವುದು. ಇದರಿಂದ ರೋಗನಿರೋಧತೆ, ಸ್ವಾಸ್ಥದ ಪ್ರಗತಿ ಹಾಗೂ ದೀರ್ಘಾಯುಷ್ಯಗಳು ಸಾಧ್ಯ. ಇವಕ್ಕೇನೇ ರಸಾದಿ ಸಪ್ತಧಾತುಗಳನ್ನು ವೃದ್ಧಿಸುವ ರಸಾಯನ ಚಿಕಿತ್ಸೆ ಎನ್ನಲಾಗಿದೆ.

ಉಗ್ರದಿತ್ಯಾಚಾರ್ಯರು, ಆಯುರ್ವೇದಾಚಾರ್ಯರು ಸ್ವಾಸ್ಥ್ಯವರ್ಧಕ ಅಥವಾ ದೇಹದ ಓಜಸ್ಸನ್ನು ಹೆಚ್ಚಿಸುವ ಅನೇಕ ಗಿಡಮೂಲಿಕೆಗಳನ್ನು ಹೇಳಿದ್ದಾರೆ. ಅವೆಲ್ಲ ದೇಹದ ರೋಗದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬಂಶ ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಈ ರಸಾಯನ ಚಿಕಿತ್ಸೆಯಿಂದ ವಯಸ್ಸಾದಂತೆ ದುರ್ಬಲಗೊಳ್ಳುವ ಧೈಮಸ್ ಗ್ರಂಥಿಯು ಚುರುಕುಗೊಳ್ಳುವುದು ಕಂಡುಬಂದಿದೆ (ವಿಶೇಷ ವಿವರಣೆಗಾಗಿ ಕ.ಅ.-೬ ರಸಾಯನಾಧಿಕಾರ ಹಾಗು ೨೫ನೇ ಅಧ್ಯಾಯ ನೋಡಿರಿ).

ಆಯುರ್ವೇದದ ‌ಪ್ರಕಾರ ಆಹಾರ ಮತ್ತು ಔಷಧಿಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆಹಾರವು ಔಷಧಿ ಗುಣಗಳನ್ನು ಹೊಂದಿರಬಹುದು ಇಲ್ಲವೇ ವನಸ್ಪತಿಗಳನ್ನು ಆಹಾರದಂತೆ ಸೇವಿಸಬಹುದು.

ಈ ಕಾಯಕಲ್ಪ ಚಿಕಿತ್ಸೆಯನ್ನು ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೂ ಮೊದಲು ಶರೀರಶುದ್ಧಿಗಾಗಿ ಪಂಚಕರ್ಮ ಚಿಕಿತ್ಸೆಯೂ ಅವಶ್ಯ. ಅದಕ್ಕಾಗಿ ಸಾಕಷ್ಟು ವೇಳೆ ಹಾಗೂ ಹಣದ ಅವಶ್ಯಕತೆ ಇದೆ. ಈ ಚಿಕಿತ್ಸೆಯನ್ನು ಕೇರಳ, ತಮಿಳುನಾಡಿನ ಕೆಲ ವೈದ್ಯ ಶಾಲೆಗಳಲ್ಲಿ, ಆಯುರ್ವೇದ ಕಾಲೇಜಿನ ಆಸ್ಪತ್ರೆಗಳಲ್ಲಿ ಸಂಶೋಧನಾಲಯ ಹಾಗೂ ಪಂಚಕರ್ಮ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಇದನ್ನೇ ಆಯುರ್ವೇದದಲ್ಲಿ ನಿತ್ಯ ಆಹಾರದಲ್ಲಿ ಆಹಾರದಂತೆ ಸೇವಿಸಬಹುದಾದಂತಹ ದ್ರವ್ಯಗಳನ್ನು ಹೇಳಲಾಗಿದೆ. ಅವುಗಳನ್ನು ನಮ್ಮ ನಿತ್ಯಜೀವನದಲ್ಲಿ ಉಪಯೋಗಿಸುತ್ತ ಹೋದರೆ ಒಳ್ಳೆಯ ಆರೋಗ್ಯ ರಕ್ಷಣೆಯಾಗುವುದಲ್ಲದೇ ದೀರ್ಘಾಯುಷ್ಯತ್ವವೂ ಸಾಧ್ಯ. ನೆಲ್ಲಿಕಾಯಿ, ತ್ರಿಫಲಾ(ಅಳಲೆಕಾಯಿ, ತಾರಿಕಾಯಿ, ನೆಲ್ಲಿಕಾಯಿ) ತುಳಸಿ, ಅಶ್ವಗಂಧ, ಹಿಪ್ಪಲಿ, ಮಂಡೂಕಪರ್ಣಿ, ಶಂಖಪುಷ್ಟಿ, ಪುನರ್ನವ, ವಿಜಯಸರ, ತೇಜಪತ್ರ, ಅಮೃತಬಳ್ಳಿ, ಅರ್ಜುನ ಇತ್ಯಾದಿಗಳನ್ನು ನಿತ್ಯ ಚ್ಯವನಪ್ರಾಶವನ್ನು ಉಪಯೋಗಿಸಬಹುದು. ನಿತ್ಯ ಇವೆಲ್ಲವನ್ನೂ ಸೇವಿಸಬೇಕೆಂದಲ್ಲ. ಸಾಧ್ಯವಾದವುಗಳನ್ನು, ಅವರವರ ಪ್ರಕೃತಿಗೆ ಹೊಂದುವಂತಹವುಗಳನ್ನು ಉಪಯೋಗಿಸಬಹುದು.

ಕೊನೆಯದಾಗಿ: ಆಯುರ್ವೇದ ಹೇಳುವ ಆರೋಗ್ಯ ನಿಯಮಗಳನ್ನು ವಿಧೇಯತೆಯಿಂದ ಪಾಲಿಸಿದರೆ ಅವನು ವಿಶೇಷ ಗೌರವಕ್ಕೊಳಗಾಗುತ್ತಾನೆ. ಆರೋಗ್ಯವಂತನಾಗುತ್ತಾನೆ ಹಾಗೂ ದೀರ್ಘಾಯುಷಿಯಾಗುತ್ತಾನೆ.