ವೈದ್ಯನಾದವನು ಯಾವುದೇ ಒಂದು ರೋಗಚಿಕಿತ್ಸೆಯನ್ನು ಮಾಡುವ ಮೊದಲು ರೋಗದ ನಿದಾನ (Diagnosis)ವನ್ನು ಮಾಡಬೇಕಾಗುತ್ತದೆ. ರೋಗೋತ್ಪತ್ತಿಗೆ ಕಾರಣವಾದ ಹೇತುವಿಗೆ ‘ನಿದಾನ’ ಎನ್ನುತ್ತಾರೆ. ಇದಕ್ಕೆ ನಿಮಿತ್ತ, ಹೇತು, ಆಯತನ, ಪ್ರತ್ಯಯ, ಉತ್ಥಾನ, ಕಾರಣಗಳೆಂಬ ಪರ್ಯಾಯ ಶಬ್ದಗಳು ಆಯುರ್ವೇದದಲ್ಲಿ ಬಳಕೆಯಲ್ಲಿವೆ. ಮಣ್ಣನ್ನು ತಿನ್ನುವುದರಿಂದ ಪಾಂಡುರೋಗವೂ, ಮಿಥ್ಯಾಹಾರ-ವಿಹಾರಗಳಿಂದ ಜ್ವರರೋಗ ಬರುವುದೆಂದರೆ ಆ ಕಾರಣಗಳೇ ‘ನಿದಾನ’ ವೆನಿಸುತ್ತವೆ.

ರೋಗೋತ್ಪತ್ತಿಗೆ ಪೂರ್ವಜನ್ಮಕೃತ ಕರ್ಮವೇ ಪ್ರಧಾನ ಕಾರಣವೆಂದೂ, ಇನ್ನಿತರ ಕಾರಣಗಳು ನಿಮಿತ್ತದವುಗಳೆಂದೂ ಕಲ್ಯಾಣಕಾರಕದಲ್ಲಿ ಹೇಳಲಾಗಿದೆ.

ವೈದ್ಯನು ಮೊಟ್ಟಮೊದಲು ರೋಗಿಯ ಪರೀಕ್ಷೆಯನ್ನು ಮಾಡಿ ನಂತರ ಔಷಧವನ್ನು ಕೊಡಬೇಕಾಗುತ್ತದೆ. ಪರೀಕ್ಷೆಯ ನಂತರ, ನಿದಾನವನ್ನು ಮಾಡಿ ವಿಭಿನ್ನವಾದ ತರ್ಕವಿತರ್ಕಗಳಿಂದ ತಿಳುವಳಿಕೆ ಪೂರ್ವಕವಾಗಿ ಔಷಧ ಪ್ರಯೋಗ ಮಾಡಬೇಕು.

ರೋಗದ ಜ್ಞಾನವು ರೋಗನಿದಾನ, ಪೂರ್ವರೂಪ, ರೂಪ, ಉಪಶಯ ಹಾಗೂ ಸಂಪ್ರಾಪ್ತಿ ಎಂದು ಐದು ವಿಧಗಳಿಂದ ಆಗುವುದು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ರೋಗೋತ್ಪತ್ತಿಯ ಮೊದಲು ಕೆಲಲಕ್ಷಣಗಳು ದೇಹದಲ್ಲಿ ಕಂಡುಬರುವುದಕ್ಕೆ ‘ಪೂರ್ವರೂಪ’ಎನ್ನುತ್ತಾರೆ. ಜ್ವರದ ಪೂರ್ವರೂಪವಾಗಿ ಶ್ರಮ, ಅಲಸ್ಯ, ಆಕಳಿಕೆಗಳು ಬರುವುವು. ‘ರೂಪ’ ದಲ್ಲಿ ರೋಗದ ಲಕ್ಷಣಗಳು ಸಂಪೂರ್ಣವಾಗಿ ಕಂಡುಬರುತ್ತವೆ. ನಾವು ಮಾಡಿದ ನಿದಾನಕ್ಕನುಗುಣವಾಗಿ ರೋಗಿಗೆ ಚಿಕಿತ್ಸೆ ನೀಡಿದಾಗ ರೋಗವು ದೂರವಾದರೆ ಅದು ‘ಉಪಶಯ’ವೆನಿಸುತ್ತದೆ. ‘ಸಂಪ್ರಾಪ್ತಿ’ ಎಂದರೆ ಯಾವ ಕಾರಣಗಳಿಂದ ಶರೀರಸ್ಥ ದೋಷಧಾತು ಮಲಗಳು ದೂಷಿತವಾಗಿ ಯಾವ ಪೂರ್ವರೂಪಗಳನ್ನು ರೂಪಗಳನ್ನು ತೋರಿಸಿ ರೋಗದ ಹುಟ್ಟುವಿಕೆಗೆ ಅವಕಾಶ ಮಾಡಿಕೊಟ್ಟಿತು ಹಾಗೂ ಅದು ಯಾವ ಚಿಕಿತ್ಸಾ ಕ್ರಮಗಳಿಂದ ರೋಗದ ನಿವಾರಣೆಗೆ ಸಯಾಯವಾಯಿತು ಎಂಬುದರ ಮೇಲೆ ರೋಗದ ಸರಿಯಾದ ಜ್ಞಾನವು ನಮಗಾಗುವುದು. ಆಗ ಮಾತ್ರ ದೇಹದಲ್ಲಿ ರೋಗವು ಹೇಗೆ ಪ್ರವೇಶಿಸಿ ಯಾವ ದೋಷ-ಧಾತುಗಳನ್ನು ಕೆಡಿಸಿ ಯಾವ ಅಂಶದಲ್ಲಿ ರೋಗೋತ್ಪತ್ತಿಗೆ ಕಾರಣವಾಯಿತು. ಎಂದು ನಿಶ್ಚಿತವಾಗಿ ಹೇಳುವುದಕ್ಕೆ ‘ಸಂಪ್ರಾಪ್ತಿ’ ಎನ್ನುತ್ತಾರೆ.

ನಾಲ್ಕು ಪ್ರಕಾರಗಳು

. ಸನ್ನಿಕೃಷ್ಟ ಕಾರಣ: (ಸಮೀಪಸ್ಥ ಕಾರಣಗಳು) ಬೆಳಿಗ್ಗೆ ಕಫ ದೋಷದ ಅಧಿಕ್ಯತೆ ಇರುವುದರಿಂದ ಕೆಮ್ಮು-ಉಬ್ಬುಸಗಳು ಹೆಚ್ಚಾಗಿ ಆಗುವುವು. ಅದರಂತೆ ಚಿಕ್ಕ ವಯಸ್ಸಿನಲ್ಲಿ ಕಫದ ದೋಷವೇ ಹೆಚ್ಚಾಗಿರುವುದರಿಂದ ಕಫ ರೋಗಗಳೇ ಹೆಚ್ಚು ಬರುವುವು. ಸ್ವಲ್ಪ ಶೀತ ವಾತಾವರಣದಲ್ಲಿ ಓಡಾಡಿದಾಗ, ನೀರು-ಹವೆ ಬದಲಾವಣೆ ಆದಾಗ ನೆಗಡಿ ಬಂದರೆ ಅದು ಸನ್ನಿಕೃಷ್ಟ ಕಾರಣವೆನಿಸುವುದು.

. ವಿಪ್ರಕೃಷ್ಟ ಕಾರಣ: (ದೂರದ ಕಾರಣಗಳು) ಹೇಮಂತ ಋತುವಿನಲ್ಲಿ ಸಂಚಿತವಾದ ಕಫವು ವಸಂತ ಋತುವಿನಲ್ಲಿ ಪ್ರಕುಪಿತವಾಗಿ ಕಫಜ ರೋಗಗಳನ್ನುಂಟು ಮಾಡುವುದು. ಇದು ದೂರದ ಕಾರಣವೆನಿಸುವುದರಿಂದ ವಿಪ್ರಕೃಷ್ಟ ಕಾರಣವೆನ್ನುತ್ತಾರೆ. ರೋಗವೊಂದರ ಪ್ರಾದುರ್ಭಾವಕ್ಕೆ ಪೂರ್ವವಾಗಿಯೇ ಕಾರಣವೆನಿಸುವ ಹೇತುಗಳಿಗೆ ವಿಪ್ರಕೃಷ್ಣ ಕಾರಣ ಎನ್ನುವರು.

. ವ್ಯಭಿಚಾರಿ ಕಾರಣ: ರೋಗವನ್ನುಂಟು ಮಾಡಲು ಬೇಕಾದ ಶಕ್ತಿ ಇಲ್ಲದ ಕಾರಣಗಳಿಗೆ ವ್ಯಭಿಚಾರಿ ಕಾರಣಗಳೆನ್ನುತ್ತಾರೆ. ಚಿಕ-ಪುಟ್ಟ ಅನೇಕ ಕಾರಣಗಳಿಂದ ದೋಷಗಳೂ ಹೆಚ್ಚು ದುಷ್ಟವಾಗದೆ ಮುಂದೆ ರೋಗಗಳು ಹುಟ್ಟಲು ಆಸ್ಪದವಾಗುವುದಿಲ್ಲ. ಇದರಂತೆ ರೋಗಪ್ರತಿರೋಧ ಶಕ್ತಿ ಇರುವವನಲ್ಲಿ ಸಣ್ಣ ಕಾರಣಗಳು ರೋಗವನ್ನುಂಟು ಮಾಡಲಾರವು. ವಾತಾವರಣವು ಸ್ವಲ್ಪ ಶೀತವಾದಾಗ ಒಬ್ಬ ಬಲಿಷ್ಟ ವ್ಯಕ್ತಿಗೆ ನೆಗಡಿ ಬರಲಾರದು. ಆಗ ಆ ಶೀತವಾತಾವರಣವು ವ್ಯಭಿಚಾರ ಕಾರಣವೆನಿಸುತ್ತದೆ.

. ಪ್ರಧಾನ ಕಾರಣ: ತಮ್ಮ ಉಗ್ರ ಸ್ವಭಾವಗಳಿಂದ ದೋಷಗಳನ್ನು ಪ್ರಕುಪಿತಗೊಳಿಸಿ ರೋಗೋತ್ಪತ್ತಿಗೆ ಕಾರಣವಾಗುವ ಹೇತುಗಳಿಗೆ ಪ್ರಧಾನಕಾರಣವೆನ್ನುತ್ತಾರೆ. ಮಾರಕಗಳಾದ ವಿಷಗಳು, ಹಾವು- ಚೇಳು, ಮೊದಲಾದ ವಿಷ ಜಂತುಗಳ ಕಡಿತ, ನಿದ್ರಾಕರವಾದ ಔಷಧಿಗಳ ಸೇವನೆ ಮೊದಲಾದ ಕಾರಣಗಳು ಪ್ರಧಾನವೆನಿಸುತ್ತವೆ.

ನಿದಾನದಲ್ಲಿ ಮುಖ್ಯವಾಗಿ ಬಾಹ್ಯಹೇತು ಹಾಗೂ ಅಭ್ಯಂತರ ಹೇತುಗಳೆಂದು ಎರಡು ಭೇದಗಳನ್ನು ಮಾಡಬಹುದು.

. ಬಾಹ್ಯಹೇತು: ಆಹಾರ-ವಿಹಾರ, ಕಾಲ, ಜೀವಾಣು, ಅಘಾತ, ದಂಶಕ ಕೀಟಗಳ ವಿಷ, ವಿದ್ಯುದಾಘಾತ, ವಿಷ- ಮೊದಲಾದ ಕಾರಣಗಳು ರೋಗದುತ್ಪತ್ತಿಗೆ ಬಾಹ್ಯಹೇತುಗಳಾಗುತ್ತವೆ. ಇವುಗಳು ತಮ್ಮ ತಮ್ಮ ಗುಣ ವಿಶೇಷಗಳಿಂದ ಸದ್ಯೋಮಾರಕಗುಣ ಅಥವಾ ತಮ್ಮ ಸ್ವಭಾವ ವಿಶೇಷತೆಗಳಿಂದ ದೋಷಗಳನ್ನು ತೀವ್ರವಾಗಿ ಕೆಡಿಸಿ ರೋಗದುತ್ಪತ್ತಿಗೆ ಕಾರಣವಾಗುತ್ತವೆ.

. ಅಭ್ಯಂತರ ಹೇತು: ಶರೀರಸ್ಥವಾದ ದೋಷ ಹಾಗೂ ಸಪ್ತ ಧಾತುಗಳೇ ಅಭ್ಯಂತರ ಹೇತು ಎನಿಸುತ್ತವೆ.

ರೋಗಿಪರೀಕ್ಷೆ

ರೋಗದ ಸಂಪೂರ್ಣ ಜ್ಞಾನಕ್ಕಾಗಿ ವೈದ್ಯರು ರೋಗಿಯನ್ನು ಸ್ವತಃ ಪರೀಕ್ಷಿಸಬೇಕಾಗುತ್ತದೆ. ಇಲ್ಲದಿದ್ದರೆ ರೋಗವಿರುವುದೊಂದು, ಮದ್ದು ಕೊಡುವುದೊಂದು – ಹೀಗಾಗಿ ವೈದ್ಯನು ಚಿಕಿತ್ಸೆಯಲ್ಲಿ ಅಸಫಲನಾಗುವ ಸಂಭವವೇ ಹೆಚ್ಚು. ವೈದ್ಯನಿರುವುದು ರೋಗಿ ಮಾನವಕುಲ ಕೋಟಿಯ ರೋಗಗಳನ್ನು ನಿವಾರಿಸಿ ಅವರಿಗೆ ಮತ್ತೆ ಸ್ವಾಸ್ಥ್ಯವನ್ನುಂಟು ಮಾಡುವುದಕ್ಕಾಗಿಯೇ ಎಂಬ ಮಾತನ್ನು ಮರೆಯಬಾರದು. ಆದ್ದರಿಂದ ವೈದ್ಯನು ರೋಗಿಯನ್ನು ಅನೇಕ ವಿಧದ ಪರೀಕ್ಷೆಗಳಿಂದ ತಪಾಸಣೆ ಮಾಡಿ ರೋಗವನ್ನು ಚೆನ್ನಾಗಿ ತಿಳಿದುಕೊಂಡು ಚಿಕಿತ್ಸಿಸಬೇಕು.

ವೈದ್ಯಕೀಯ ಶಾಸ್ತ್ರಗಳ ಅಧ್ಯಯನ ಹಾಗೂ ಚಿಕಿತ್ಸಾನುಭವ ಹೊಂದಿದ ಚಿಕಿತ್ಸೆಗಾಗಿ ರಾಜಮುದ್ರೆಯನ್ನು ಪಡೆದುಕೊಂಡ ವೈದ್ಯನು ಮಾತ್ರ ರೋಗಿ ಚಿಕಿತ್ಸೆ ಮಾಡಬೇಕು ಎಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ. ಅಜ್ಞಾನಿ ವೈದ್ಯನು ಒಂದು ವೇಳೆ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಅದು ಆಕಸ್ಮಿಕ ಹೊರತು ಪ್ರಶಂಸನೀಯವಲ್ಲ. ಕಾರಣ ರಾಜ(ಸರಕಾರ)ನಿಂದ ಅನುಮೋದಿತ, ಕ್ರಿಯಾಕುಶಲ, ಸುಯೋಗ್ಯನಾದ ವೈದ್ಯನು ಯೋಗ್ಯ ತಿಥಿ, ವಾರ, ನಕ್ಷತ್ರ, ಯೋಗ ಕಾರಣ, ಮುಹೂರ್ತ, ತಾರಾಬಲ, ಚಂದ್ರಬಲ, ಅನುಕೂಲ, ದೂತಲಕ್ಷಣ, ಪ್ರಶಸ್ತ ಶಕುನಗಳನ್ನು ನೋಡಿಕೊಂಡು ಚಿಕಿತ್ಸೆಗೆ ಮುಂದಾಗಬೇಕು.

. ದರ್ಶನ ಪರೀಕ್ಷೆ: ರೋಗಿಯ ಶರೀರದ ಬಣ್ಣ, ಆಕೃತಿ, ವ್ಯಂಜನ, ಲಕ್ಷಣ, ಉಪಚಯ, ಗ್ಲಾನಿ, ಹರ್ಷ, ಸ್ನೇಹ ಮೊದಲಾದ ಅಂಶಗಳು ಕೇವಲ ರೋಗಿಯನ್ನು ನೋಡುವುದರಿಂದ ಗೊತ್ತಾಗುತ್ತವೆ. ಕೇವಲ ಕಣ್ಣುಗಳಿಂದ ಇಲ್ಲವೇ ಯಾವುದಾದರೂ ಉಪಕರಣಗಳ ಸಹಾಯದಿಂದ ರೋಗಿಯನ್ನು ತಪಾಸಿಸುವುದಕ್ಕೆ ‘ದರ್ಶನ’ ಎನ್ನುವರು. ಕ್ಷ-ಕಿರಣ, ಸೂಕ್ಷ್ಮ ದರ್ಶನ ಯಂತ್ರ, ಸೋನೋಗ್ರಾಫಿ – ಮುಂತಾದವೆಲ್ಲ ಇದರಲ್ಲಿಯೇ ಒಳಗೊಳ್ಳುತ್ತವೆ.

. ಸ್ಪರ್ಶನ ಪರೀಕ್ಷೆ: ರೋಗಿಯನ್ನು ಮುಟ್ಟಿ, ವಿವಿಧಾಂಗಗಳ ಪರೀಕ್ಷೆಯನ್ನು ಮಾಡುವುದಕ್ಕೆ ‘ಸ್ಪರ್ಶನ’ ಎನ್ನುತ್ತಾರೆ. ಶರೀರದ ಉಷ್ಣತೆ, ಶೀತತೆ, ಮೃದು – ಕಠಿಣ, ಸ್ನಿಗ್ದ- ರೂಪ, ಲಘು – ಗುರು, ನಾಡೀ ಹೀಗೆಲ್ಲ ಅಂಶಗಳು ಗೊತ್ತಾಗುತ್ತವೆ.

. ಪ್ರಶ್ನ ಪರೀಕ್ಷೆ : ರೋಗ ಸಂಬಂಧವಾದ ಅನೇಕ ವಿಷಯಗಳನ್ನು ನಾವು ಕೇವಲ ದರ್ಶನ ಹಾಗು ಸ್ಪರ್ಶನ ಕ್ರಮಗಳಿಂದ ತಿಳಿಯಲು ಸಾಧ್ಯವಾಗುವುದಿಲ್ಲ. ಅಂತಹ ವಿಷಯಗಳನ್ನು ನಾವು ಅವರ ಬಾಯಿಯಿಂದಲೇ ತಿಳಿಯಬೇಕಾಗುವುದು. ಆದ್ದರಿಂದ ವೈದ್ಯನಾದವನು ರೋಗಿಗೆ ಅನೇಕ ಪ್ರಶ್ನೆಗಳನ್ನು ಹಾಕಿ ಅವನಿಂದ ರೋಗದ ಮಾಹಿತಿ ಸಂಗ್ರಹಿಸಬೇಕು. ರೋಗಿಯನ್ನು ಕೇಳುವುದರಿಂದ ಅತೀತ ವೃತ್ತ, ವೈಯಕ್ತಿಕ ವೃತ್ತ, ಪಾರಿವಾರಿಕ ವೃತ್ತ, ಸಧ್ಯ ವೇದನೆಯ ಸ್ವರೂಪ – ಮುಂತಾದವುಗಳನ್ನು ಕೇಳಿ ತಿಳಿಯುವುದರಿಂದ ಚಿಕಿತ್ಸೆಗೆ ಹೆಚ್ಚು ಅನುಕೂಲವಾಗುವುದು. (ಕ.ಅ.೭, ಶ್ಲೋಕ.೫೪, ೫೫,೫೬)

ವೈದ್ಯನು ರೋಗಿಯ ಭೌತಿಕ ಚಿಹ್ನೆಗಳನ್ನು ಸ್ಪರ್ಶನದಿಂದ ತಿಳಿಯಲು ಸಾಧ್ಯ. ಅದಕ್ಕೆ ವೇದನಾತ್ಮಕವಾದ ಅನುಭವಗಳನ್ನು ಕೇವಲ ರೋಗಿಯಿಂದಲೇ ಕೇಳಬೇಕಾಗುತ್ತದೆ. ಅದಕ್ಕೆ ವೇದನಾತ್ಮಕ ಲಕ್ಷನಗಳೆನ್ನುತ್ತಾರೆ. ಉದಾ: ಒಬ್ಬ ಹೊಟ್ಟೆನೋವಿನ ರೋಗಿಗೆ ನೋವು ಯಾವ ಸ್ಥಾನದಲ್ಲಿ ಹೆಚ್ಚಾಗಿದೆ? ಅದುಮಿದರೆ ನೋವು ಹೆಚ್ಚಾಗುವುದೋ ಹೇಗೆ? ಯಾವ ವೇಳೆಯಲ್ಲಿ ಹೆಚ್ಚಿಗೆ ಎನಿಸುವುದು, ನೋವು ಬಂದಾಗ ವಾಂತಿ ಆಗುವುದೇ, ಊಟವಾದ ಮೇಲೆ ಅಥವಾ ಮೊದಲು ಇಲ್ಲವೇ ಮಧ್ಯದಲ್ಲಿ ನೋವು ಹೆಚ್ಚು ಎನಿಸುವುದೇ? ಯಾವ ಕ್ರಮಗಳನ್ನು ಅನುಸರಿಸುವುದರಿಂದ ನೋವು ಕಡಿಮೆ ಎನಿಸುವುದು?ನೋವು ಎಷ್ಟು ದಿವಸಗಳಿಂದ ಇದೆ? ನೋವು ಯಾವಾಗ ಹೆಚ್ಚು ಇಲ್ಲವೇ ಕಡಿಮೆ ಎನಿಸುವುದು – ಹೀಗೆ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದುಕೊಂಡರೆ ರೋಗದ ನಿಶ್ಚಿತ ಜ್ಞಾನವಾಗುವುದು.

ಅಷ್ಟವಿಧ ಪರೀಕ್ಷೆಗಳು: ರೋಗಿಯ ನಾಡೀ, ಮೂತ್ರ, ಮಲ, ನಾಲಗೆ, ಶಬ್ಧ, ಸ್ಪರ್ಶ, ಆಕೃತಿ, ಕಣ್ಣು – ಹೀಗೆ ಎಂಟು ವಿಧ ಪರೀಕ್ಷೆಗಳನ್ನು ಮಾಡಬೇಕೆಂದು ಆಯುರ್ವೇದ ಹೇಳುತ್ತದೆ.

. ನಾಲಗೆ ಪರೀಕ್ಷೆ : ವಾತದಿಂದ ನಾಲಗೆಯು ಒಣಗಿ ಒಡೆದು ತೆಂಗಿನ ಎಲೆಯಂತೆ ಕಾಣುವುದು, ಪಿತ್ತದಿಂದ ಕೆಂಪು ಇಲ್ಲವೇ ನೀಲಿ ವರ್ಣದ್ದಾಗಿರುವುದು, ಕಫದಿಂದ ಬೆಳ್ಳಗಾಗಿದ್ದು ದ್ರವದಿಂದ ಕೂಡಿರುವುದು, ತ್ರಿದೋಷಗಳು ಅಧಿಕವಾದಾಗ್ಗೆ ಬೆಂದಂತೆಯೂ, ಕಪ್ಪು ವರ್ಣದ್ದಾಗಿಯೂ- ಎರಡು ದೋಷಗಳು ಅಧಿಕವಾದಾಗ್ಗೆ ಅವುಗಳ ಲಕ್ಷಣಗಳಿಂದ ಕೂಡಿರುವುದು.

ನಾಲಗೆಯು ಅತಿ ತೆಳ್ಳಗೆ ಅಥವಾ ಅತಿ ದಪ್ಪವಾಗಿದ್ದರೆ ಯಾವ ವ್ಯಾಧಿಯಾದರೂ ಅಸಾಧ್ಯವಾದ್ದರಿಂದ ಔಷಧಗಳಿಂದ ಹೋಗುವುದಿಲ್ಲವೆಂದು ತಿಳಿಯಬೇಕು.

ನಾಲಿಗೆಯು ಅತಿ ಬಿಸಿಯಾಗಿ ಬಹಳ ಒಣಗಿದ್ದು, ಉರಿಯುಳ್ಳದ್ದಾಗಿದ್ದರೆ ಅಥವಾ ತಣ್ಣಗಾಗಿದ್ದರೆ ಅದು ಮರಣಭಯವನ್ನು ಸೂಚಿಸುತ್ತದೆ.

ಮೂತ್ರ ಪರೀಕ್ಷೆ: ಮೂತ್ರವು ವಾತದಿಂದ ಹಳದಿಮಿಶ್ರ ಬಿಳುಪಾಗಿಯೂ, ಪಿತ್ತದಿಂದ ಕೆಂಪು ಮತ್ತು ನೀಲಿವರ್ಣದ್ದಾಗಿಯೂ, ರಕ್ತದಿಂದ ಕೆಂಪಾಗಿಯೂ, ಕಫದಿಂದ ನೊರೆಕೂಡಿಕೊಂಡು ಸ್ವಸ್ಛವಾಗಿರುವುದು.

ವಿಧಿಪ್ರಕಾರವಾಗಿ ಹಿಡಿದಿಟ್ಟ ಮೂತ್ರದಲ್ಲಿ ಒಂದು ತೈಲಬಿಂದುವನ್ನು ಬಿಟ್ಟರೆ ಅದರಲ್ಲಿ ಗುಳ್ಳೆಗಳು ಉಂಟಾದರೆ ಪಿತ್ತದೋಷವಿದೆ ಎಂತಲೂ, ಮೂತ್ರದ ಮೇಲೆ ಹೊಗೆಯಂತೆ ಕಟ್ಟಿದರೆ ವಾತದೋಷವೆಂತಲೂ, ಬಿಂದುವು ಮೂತ್ರದೊಡನೆ ಸೇರಿಹೋದರೆ ಅದು ಕಫದೋಷವೆಂದು ತಿಳಿಯಬೇಕು. ತೈಲಬಿಂದುವು ಮೂತ್ರದಲ್ಲಿ ಮುಳುಗಿದರೆ ಇಲ್ಲವೆ ತಿರುಗದಿದ್ದರೆ ಅದು ಅನಿಷ್ಟ ಸೂಚನೆ ಎಂದು ತಿಳಿಯಬೇಕು. ಮಧುಮೇಹ ರೋಗಿ ವಿಸರ್ಜಸಿದ ಮೂತ್ರದ ಮೇಲೆ ಇರುವೆಗಳು ಮೆತ್ತಿಕೊಂಡಿರುವುದನ್ನು ಕಂಡು ಅದರಲ್ಲಿ ಸಕ್ಕರೆಯ ಅಂಶವಿದೆ ಎಂದು ಕಂಡು ಹಿಡಿಯಬಹುದು.

ಮುಖಪರೀಕ್ಷೆ: ವಾತಪ್ರಕೋಪಗೊಂಡಾಗ್ಗೆ ಮುಖವು ಒಣಗಿ, ಸ್ತಬ್ಧವಾಗಿ ಮತ್ತು ಪ್ರಭೆಯಿಲ್ಲದ್ದಾಗಿರುವುದು. ಪಿತ್ತ ಪ್ರಕೋಪದಲ್ಲಿ ಮುಖವು ಕೆಂಪು ಅಥವಾ ಅರಿಶಿನ ಬಣ್ಣದ್ದಾಗಿ ಬೆಂದ ಛಾಯೆಯುಳ್ಳದ್ದಾಗಿರುವುದು. ಕಫ ಪ್ರಕೋಪದಲ್ಲಿ ಮುಖವು ಗುರುವಾಗಿ ಸ್ನಿಗ್ಧವಾಗಿದ್ದು ಬಾಡಿಕೊಂಡಿರುವುದು, ತ್ರಿದೋಷದಲ್ಲಿ ಮೂರು ದೋಷಗಳ ಲಕ್ಷಣಗಳುಳ್ಳದ್ದಾಗಿರುವುದು. ದ್ವಂದ್ವ ದೋಷಗಳಲ್ಲಿ ಆ ಎರಡು ದೋಷಗಳ ಲಕ್ಷಣಗಳಿರುವುವು.

ಕಣ್ಣಿನ ಪರೀಕ್ಷೆ: ವಾತರೋಗಿಯ ಕಣ್ಣುಗಳು ರೌದ್ರ, ರೂಕ್ಷ, ಒಳಗೆ ಕಪ್ಪು, ವರ್ಣ, ಹೊರಗೆ ಹೊಗೆಯ ವರ್ಣವಾಗಿ, ಸ್ತಬ್ಧ, ಚಂಚಲವಾಗಿರುವುವು.

ಪಿತ್ತಕಾರದಲ್ಲಿ ಕಣ್ಣುಗಳು ಅರಿಶಿನ, ನೀಲ ಅಥವಾ ಕೆಂಪು ವರ್ಣವಾಗಿಯೂ, ಉರಿಯುಳ್ಳವಾಗಿಯೂ, ದೀಪದ ಬೆಳಕನ್ನು ಸಹನ ಮಾಡದಂತೆಯೂ ಇರುವುವು.

ಕಫವಿಕಾರದಲ್ಲಿ ಕಣ್ಣುಗಳು ಬೆಳ್ಳಗೆ, ನೀರು ತುಂಬಿರುವುವು, ಭಾರವಾಗಿದ್ದು, ಹೀನ ಪ್ರಕಾಶ ಮಂದ ದೃಷ್ಟಿಯುಳ್ಳವಾಗಿರುವುವು.

ತ್ರಿದೋಷವಿಕಾರ ಬಂದಾಗ್ಗೆ ಮೂರು ದೋಷಗಳ ಲಕ್ಷಣಗಳು ಕಣ್ಣಲ್ಲಿ ಕಾಣಿಸುವುವು. ಕೂಡಲೇ ಮುಚ್ಚಿಹೋಗುತ್ತಿದ್ದರೆ ಇಲ್ಲವೆ ಯಾವಾಗಲೂ ತೆರೆದಿದ್ದು ಇಲ್ಲವೇ ಮುಚ್ಚಿದ್ದವಿದ್ದರೆ, ಕರಿ ಅಲೆಯು ಲೋಪವಾಗಿದ್ದರೆ ಅಥವಾ ತಾರೆಯು ತಿರುಗುತ್ತಾ ಧೂಮ್ರವರ್ಣವಾಗಿಯೂ, ಉಗ್ರವಾಗಿಯೂ ಇದ್ದರೆ, ಕಣ್ಣುಗಳು ಬಹುವರ್ಣವಾಗಿ ಅನೇಕ ವಿಕಾರವಾದ ಜೇಷ್ಟೆಗಳುಳ್ಳದ್ದಾಗಿದ್ದರೆ ರೋಗಿಗೆ ಮೃತ್ಯು ಸಮೀಪಿಸಿದೆ ಎಂದು ನಿಶ್ಚಿಯವಾಗಿ ಹೇಳಬಹುದು. ಸೌಮ್ಯವಾದ ದೃಷ್ಟಿಯುಳ್ಳ, ಪ್ರಸನ್ನ ಛಾಯೆಯುಳ್ಳ, ನಿಜಸ್ಥಿತಿಯಲ್ಲಿರುವ ಮತ್ತು ಮನೋಹರವಾದ ಕಣ್ಣುಗಳು ರೋಗಿಯ ರೋಗವು ಶೀಘ್ರವಾಗಿ ಶಾಂತವಾಗುವುದೆಂಬುದರ ಸೂಚನೆಯಾಗಿದೆ.

ಮಲಪರೀಕ್ಷೆ: ವಾತಪ್ರಕೋಪದಿಂದ ಮಲವು ಕಡಿದು, ನೊರೆಕೂಡಿಕೊಂಡು, ರೂಕ್ಷವಾಗಿದ್ದು ಹೊಗೆ ವರ್ಣದ್ದಾಗಿರುವುದು. ಕಫ ವಾತರೋಗದಲ್ಲಿ ಮಲದ ವರ್ಣವು ಕಪ್ಪು ಮಿಶ್ರ ಅರಿಶಿನ ವರ್ಣದ್ದಾಗಿರುವುದು. ಪಿತ್ತವಾಯುವಿನಿಂದ ಮಲವು ಬದ್ಧವಾಗಿ, ಬಹಳವಾಗಿ ಒಡೆದು, ಅರಿಶಿನ ಶ್ಯಾಮ ವರ್ಣದ್ದಾಗಿರುತ್ತದೆ. ಕಫ ಪಿತ್ತದಿಂದ ಮಲ ಅರಿಶಿನ ಮತ್ತು ಶ್ಯಾಮ ಮಿಶ್ರವರ್ಣದ್ದಾಗಿ, ಸ್ವಲ್ಪ ತೆಳ್ಳದಾಗಿ, ಪಿಚ್ಛಿಲವಾಗಿರುವುದು. ತ್ರಿದೋಷದಿಂದ ಮಲವು ಒಡೆದು, ಬದ್ಧವಾಗಿ ವರ್ಣದಲ್ಲಿ ಶ್ಯಾಮ ಸ್ವಲ್ಪ ಅರಿಶಿನ ಮತ್ತು ಬೆಳ್ಳಗಾಗಿರುವುದು.

ಮಲವು ಸಡಿಲಾಗಿ, ದುರ್ಗಂಧವುಳ್ಳದ್ದಾಗಿದ್ದರೆ ಅದು ಅಜೀರ್ಣಜನ್ಯವೆಂದು ತಿಳಿಯಬೇಕು.

ಜಲೋದರದಲ್ಲಿ ಮಲವು ಬಹಳ ದುರ್ವಾಸನೆಯುಳ್ಳದ್ದಾಗಿಯೂ, ಬೆಳ್ಳಗಾಗಿಯೂ ಇರುತ್ತದೆ.

ಕ್ಷಯರೋಗದಲ್ಲಿ ಮಲವು ಕಪ್ಪದಾಗಿರುವುದು.

ಅತಿ ಕಪ್ಪು, ಅತಿ ಬೆಳ್ಳಗೆ, ಅತಿ ಹಳದಿ, ಇಲ್ಲವೇ ಅತಿ ಕೆಂಪು, ಕಪ್ಪು ಮಿಶ್ರಿತ ಮಲ ವಿಸರ್ಜನೆಯಾದರೆ ಅದು ಮರಣಸೂಚಕವೆಂದು ತಿಳಿಯಬೇಕು. ಆದರೆ ಅತಿ ಬಿಸಿಯಾದ ಮಲ ಕಂಡಲ್ಲಿ ಮರಣವುಂಟಾಗುವುದು.

ನಾಡೀ ಪರೀಕ್ಷೆ: ಒಬ್ಬ ವ್ಯಕ್ತಿಯ ಮನೋಕ್ಷೇತ್ರವನ್ನು ಅವನ ಮುಖವು ಪ್ರತಿಬಿಂಬಿಸುತ್ತಿದ್ದರೆ ನಾಲಗೆಯು ಅವನ ಆಂತರಿಕ ಸ್ಥಿತಿಯನ್ನೂ ಸೂಚಿಸುತ್ತದೆ. ಅದರಂತೆ ದೈಹಿಕ ಹಾಗೂ ಮಾನಸಿಕ ಪ್ರಕ್ರಿಯೆಗಳನ್ನು, ರೋಗಗಳ ಪ್ರಾದುರ್ಭಾವ, ರೋಗ, ರೋಗನಿವಾರಣೆ, ರೋಗದ ಸಾಧ್ಯಾಸಾಧ್ಯತೆ, ರೋಗಗಳಲ್ಲಿಯ ತ್ರಿದೋಷಸ್ಥಿತಿಗಳನ್ನು ನಾಡೀ ನೋಡುವುದರಿಂದ ತಿಳಿಯಬಹುದು. ನಾಡೀ ನೋಡಿ ರೋಗಿಯ ಅಂತ್ಯಕಾಲವನ್ನೂ ನಿರ್ಧರಿಸಬಹುದು.

ನಾಡೀಗಳ ಸಂಖ್ಯೆ ಶರೀರದಲ್ಲಿ ತುಂಬ ಇದ್ದರೂ ಪ್ರಮುಖವಾಗಿ ೨೪ ಇವೆ. ಶರೀರ ಮಧ್ಯದಿಂದ ಮೇಲಕ್ಕೆ ೧೦ ನಾಡಿಗಳು, ಕೆಳಗೆ ೧೦ ನಾಡಿಗಳು, ಬಲ ಪಾರ್ಶ್ವಕ್ಕೆ ಎರಡು, ಎಡ ಪಾರ್ಶ್ವಕ್ಕೆ ೨ ಹೀಗೆ ೨೪ ನಾಡೀಗಳು ಪ್ರಮುಖವಾಗಿದೆ. ಸ್ತ್ರೀಯರಿಗೆ ಎಡಗಾಲು, ಎಡಗೈ ಪುರುಷನಿಗೆ ಬಲಗಾಲು, ಬಲಗೈಗಳಲ್ಲಿ ನಾಡಿಗಳು ಪ್ರಮುಖವಾದ್ದರಿಂದ ಅಲ್ಲಿಯೇ ಪರೀಕ್ಷಿಸಬೇಕು. ನಾಡಿಯನ್ನು ಪರೀಕ್ಷಿಸುವಾಗ ರೋಗಿಯ ಅಂಗೈಯನ್ನು ನಮ್ಮ ಕೈಯಲ್ಲಿ ಹೆಬ್ಬೆರಳಿನ ಗುಂಟ ಕೆಳಗೆ ಮಣಿಬಂಧನ ಹತ್ತಿರ ನಮ್ಮ ಬಲಗೈಯ ತರ್ಜನಿ, ಮಾಧ್ಯಮಾ, ಅನಾಮಿಕಾ ಬೆರಳುಗಳನ್ನು ಆ ಭಾಗದಲ್ಲಿ ಹಾರುತ್ತಿರುವ ನಾಡೀ ಮೇಲಿಟ್ಟು (Redial Artery)ಮೃದುವಾಗಿ ಅದುಮಬೇಕು. ಆಗ ಮೊದಲ ಬೆರಳಿಗೆ ವಾತದ ಸ್ಪಂದನವೂ, ಮಧ್ಯದ ಬೆರಳಿಗೆ ಪಿತ್ತಸ್ಪಂದನವೂ ಹಾಗೂ ಕೊನೆಯ ಬೆರಳಿಗೆ ಕಫದ ನಾಡಿಯೂ ಜ್ಞಾತವಾಗುವುದು. ವಾತದ್ದು ಚಂಚಲವಾಗಿ, ಪಿತ್ತದ್ದು ಬಿಸಿಯಾಗಿ, ಕಫದ್ದು ಮಂದವಾಗಿ ಗೋಚರವಾಗುವುದು.

ರೋಗಿಯು ಮರಣಾಸನ್ನನಾದಾಗ ಈ ಕೈಯಲ್ಲಿನ ನಾಡಿಗಳು ಗೋಚರವಾಗದೆ ಹೋಗುವುದರಿಂದ ಪಾದ, ಮೂಗು, ಕಂಠ ಹಾಗೂ ಲಿಂಗ ಭಾಗದಲ್ಲಿಯ ನಾಡಿಗಳನ್ನೂ ಪರೀಕ್ಷಿಸಿ ರೋಗಿಯ ಜೀವನ-ಮರಣಗಳನ್ನು ಖಚಿತಪಡಿಸಿಕೊಳ್ಳಬೇಕು.

ನಾಡಿ ಪರೀಕ್ಷೆಯನ್ನು ಬೆಳಿಗ್ಗೆಯೇ, ಖಾಲಿ ಹೊಟ್ಟೆಯಲ್ಲಿರುವಾಗ ಮಾಡುವುದೊಳಿತು.

ಸ್ವಸ್ಥ ಪುರುಷನಲ್ಲಿ ನಾಡೀ ಗತಿಯು ಹಾವಿನಂತೆ ಧೀರ, ಸ್ಥಿರ ಹಾಗೂ ಚಲನಸ್ಥಿತಿಯಲ್ಲಿರುವುದು. ಆರೋಗ್ಯವಂತನಲ್ಲಿ ಈ ನಾಡಿಯು ಮಂದಗತಿಯಿಂದ ಹರಿಯುತ್ತಿದ್ದರೂ ಶಿಥಿಲವಾಗಿರುವುದಿಲ್ಲ. ಹೀಗಿದ್ದುಕೊಂಡು ಯುವಕನಲ್ಲಿ ಪ್ರತಿನಿಮಿಷಕ್ಕೆ ೭೨ ರಿಂದ ೮೦ ಬಡಿತಗಳು ಸಾಮಾನ್ಯವಾಗಿ ಕಂಡುಬರುವುವು. ಬೆಳಗಿನ ಜಾವದಲ್ಲಿ ಕಫದ ಆಧಿಕ್ಯವಿದ್ದುದರಿಂದ ನಾಡಿಗಳು ಮಂದವಾಗಿಯೂ, ಸಾಯಂಕಾಲ ವಾತಾಧಿಕ್ಯ ಇರುವುದರಿಂದ ಚಂಚಲವಾಗಿಯೂ ಇರುವುವು. ಇದರಂತೆ ಎಳೆವಯಸ್ಸಿನಲ್ಲಿ ಕಫಾಧಿಕ್ಯವೂ, ಮಧ್ಯವಯಸ್ಸಿನಲ್ಲಿ ಪಿತ್ತಾಧಿಕ್ಯವೂ ಹಾಗೂ ಕೊನೆಯಲ್ಲಿ ವಾತಾಧಿಕ್ಯವೂ ಇರುವುದರಿಂದ ನಾಡಿಯಲ್ಲಿಯೂ ಈ ವ್ಯತ್ಯಾಸ ಕಂಡುಬರುವುದು. ಹಾಗೆಯೇ ಭೋಜನ ಪೂರ್ವದಲ್ಲಿ ವಾತ, ಮಧ್ಯದಲ್ಲಿ ಪಿತ್ತ ಹಾಗೂ ಕೊನೆಯಲ್ಲಿ ಕಫಾಧಿಕ್ಯವೂ ಕಂಡುಬರುವುದು.

ಒಂದು ವೇಳೆ ಶರೀರವು ತುಂಬ ಬಿಸಿಯಾಗಿದ್ದ ನಾಡಿಯ ಸ್ಪರ್ಶವು ಶೀತವಾಗಿದ್ದರೆ ಅಥವಾ ಶರೀರವು ಶೀತಲವಾಗಿದ್ದು ನಾಡಿಯು ಉಷ್ಣವಾಗಿದ್ದರೆ ಒಮ್ಮೊಮ್ಮೆ ಒಂದೊಂದು ದೋಷದ ಅಧಿಕ್ಯತೆಯನ್ನು ಸೂಚಿಸುತ್ತಿದ್ದರೆ ರೋಗಿಯು ಮರಣವನ್ನುಪ್ಪುವನೆಂದೇ ತಿಳಿಯಬೇಕು. ಹೀಗೆ ಮರಣಾಸನ್ನವ್ಯಕ್ತಿಯಲ್ಲಿ ನಾನಾ ಬಗೆಯಾಗಿ ಕಂಡುಬರುವ ನಾಡಿಗತಿಗಳನ್ನು ವಿವರವಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ.

ಭಾರಹೊತ್ತುಕೊಂಡಿರುವುದು, ಸ್ಮೃತಿ ತಪ್ಪುವಿಕೆ, ಭಯ, ಶೋಕ, ಮೊದಲಾದ ಅವಸ್ಥೆಗಳಲ್ಲಿ ನಾಡೀಗತಿಯು ಮಂದ ಇಲ್ಲವೇ ತೀವ್ರಸ್ವರೂಪವನ್ನು ತೋರಿದರೆ ಅದು ದುಷ್ಟ ಲಕ್ಷಣವೆಂದು ತಿಳಿಯಬಾರದು. ಎತ್ತರ ಸ್ಥಳದಿಂದ ಜಾರಿ ಬಿದ್ದಾಗ, ಮುರಿದ ಎಲುಬುಗಳನ್ನು ಜೋಡಿಸಿದಾಗ, ಭೇದಿ ಬಹಳವಾದಾಗ ಇಲ್ಲವೆ ವಾಂತಿಯಾದಾಗ, ಶುಕ್ರಧಾತು ಕ್ಷೀಣವಾದಾಗ ನಾಡಿವೇಗವು ಕ್ಷೀಣವಾಗಿರುವುದು. ಇದನ್ನು ಕೂಡ ಮರಣಲಕ್ಷಣವೆಂದು ತಿಳಿಯಬಾರದು. ವ್ಯಕ್ತಿಯು ಭೂತ, ಪ್ರೇತ ಇಲ್ಲವೆ ದೇವಗ್ರಹಗಳಿಂದ ಪೀಡಿತನಾದಾಗ, ಕುದುರೆ ಸವಾರಿ ಮಾಡಿದಾಗ, ಓಡಿದಾಗ, ಧನ ಕನಕಾದಿಗಳು, ನಾಶವಾದಾಗ, ಪ್ರಿಯ ಸಂಬಂಧಿಕರು ಮೃತ್ಯುವನ್ನಪ್ಪಿದ್ದಾಗ ನಾಡೀ ವೇಗದಲ್ಲಿ ಮಾರ್ಪಾಟಾಗಿರುವುದು. ಇಂತಹ ಅನೇಕ ಸಂದರ್ಭಗಳಲ್ಲಿ ವೈದ್ಯನು ಚಾಣಾಕ್ಷತನ ವಹಿಸಿ ನಾಡೀಪರೀಕ್ಷೆ ಮಾಡಬೇಕು.

ಈ ನಾಡೀ ಜ್ಞಾನವನ್ನು ಮಾಡಿಕೊಳ್ಳುವುದು ತುಂಬ ಕಷ್ಟಸಾಧ್ಯವಾಗಿದೆ. ಒಳ್ಳೆಯ ಗುರುವಿನ ವಿನಾ ಹಾಗೆಯೇ ತಿಳಿಯಲಾಗುವುದಿಲ್ಲ. ಆಯುರ್ವೇದದಲ್ಲಿ ಅನೇಕ ವಿಧ ರೋಗಗಳಲ್ಲಿ ಆಯಾ ರೋಗಗಳ ಲಕ್ಷಣ, ದೋಷಾಧಿಕ್ಯತೆಗನುಸಾರವಾಗಿ ನಾಡೀ ಗತಿ ಇರುವುದನ್ನು ವಿವರಿಸಿದ್ದಾರೆ. ವೈದ್ಯನು ಸುಜ್ಞಾನಿಯಾಗಿದ್ದರೆ ಕೇವಲ ನಾಡೀಪರೀಕ್ಷೇ ಮಾತ್ರದಿಂದ ರೋಗ ನಿರ್ಧರಿಸಬಲ್ಲ. ವ್ಯಕ್ತಿ ಸೇವಿಸಿದ ಆಹಾರ-ವಿಹಾರಗಳನ್ನು ನಾಡೀ ಪರೀಕ್ಷೆಯಿಂದ ಹೇಳಲು ಸಾಧ್ಯ. ಗರ್ಭಧರಿಸಿದ್ದು, ಮಗು ಗಂಡೋ, ಹೆಣ್ಣೋ, ಈ ಅಂಶಗಳನ್ನು ಕೂಡ ಅನೇಕ ವೈದ್ಯರು ತುಂಬ ಸರಳವಾಗಿ ಹೇಳುತ್ತಾರೆ.

ಶಬ್ದ ಪರೀಕ್ಷೆ: ರೋಗಿಯ ಧ್ವನಿಯು ವಾತಪ್ರಕೋಪದಲ್ಲಿ ಅತಿ ಸೂಕ್ಷ್ಮವಾಗಿಯೂ, ಪಿತ್ತ ಪ್ರಕೋಪದಲ್ಲಿ ಸ್ಪಷ್ಟವಾದ ಮಾತುಗಳುಳ್ಳದ್ದಾಗಿಯೂ, ಕಫ, ಪ್ರಕೋಪದಲ್ಲಿ ಗುರುವಾಗಿಯೂ, ದ್ವಂದ್ವ ಮತ್ತು ತ್ರಿದೋಷಗಳಲ್ಲಿ ಆಯಾ ದೋಷಗಲ ಲಕ್ಷಣಗಳು ಮಿಶ್ರವಾಗಿರುತ್ತವೆ.

ಸ್ಪರ್ಶ ಪರೀಕ್ಷೆ:ಮೈಯ ಸ್ಪರ್ಶವು ವಾತ ಪ್ರಕೋಪದಲ್ಲಿ ಶೀತವಾಗಿಯೂ, ಕಫದಲ್ಲಿ ಒದ್ದೆಯಾಗಿಯೂ, ಶೀತಲವಾಗಿಯೂ, ಪಿತ್ತದಲ್ಲಿ ಬಿಸಿಯಾಗಿಯೂ, ನೋವುಳ್ಳದ್ದಾಗಿಯೂ, ಇರುತ್ತದೆ. ಮತ್ತು ದ್ವಂದ್ವ ದೋಷಗಳಲ್ಲಿಯೂ, ತ್ರಿದೋಷಗಳಲ್ಲಿಯೂ ಆಯಾ ದೋಷಗಳ ಲಕ್ಷಣಗಳು ಮಿಶ್ರವಾಗಿ ಕಾಣುವುವು. ಯಾವ ರೋಗಿಯ ಮೈಯು ಒಂದು ಕ್ಷಣ ಶೀತ, ಒಂದು ಕ್ಷಣಕ್ಕೆ ಬಿಸಿಯಾಗಿರುತ್ತದೋ ಅಂಥವನ ರೋಗವು ಅಸಾಧ್ಯವೆನಿಸಿದೆ.

ಅಲ್ಪವ್ಯಾದಿಮಹಾವ್ಯಾಧಿಗಳ ಪರೀಕ್ಷೆ: ತಜ್ಞವೈದ್ಯನು ಮಾತ್ರ ತನ್ನ ಅನುಭವದಿಂದ ಇದು ಅಲ್ಪವ್ಯಾಧಿಯೋ, ಮಹಾವ್ಯಾಧಿಯೋ ಎಂದು ಸರಿಯಾಗಿ ತಿಳಿಯಬಲ್ಲ. ಕೆಲ ವೇಳೆ ಸಣ್ಣ-ಪುಟ್ಟ ರೋಗಗಳು ಭಯಂಕರ ರೋಗಗಳಂತೆ ಕಾಣಬಹುದು. ದೊಡ್ಡ ರೋಗಗಳ ಲಕ್ಷಣಗಳು ತುಂಬ ಸಾಮಾನ್ಯವಾಗಿರಬಹುದು. ಚಿಕಿತ್ಸೆಗೆ ಮೊದಲು ವೈದ್ಯನು ಈ ಅಂಶವನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದು ಆಚಾರ್ಯರು ಹೇಳಿದ್ದಾರೆ. (ಕ.ಅ.೭, ಶ್ಲೋಕ.೫೭)

ರೋಗದ ಸಾಧ್ಯಾಸಾಧ್ಯ ವಿಚಾರ: ಆಚಾರ್ಯ ಸಮಂತ ಭದ್ರರು ರೋಗಗಳಲ್ಲಿ ಎರಡು ವಿಧ ಮಾಡಿ ಚಿಕಿತ್ಸೆಗೆ ಸಾಧ್ಯರೋಗಗಳು ಹಾಗೂ ಅಸಾಧ್ಯ ರೋಗಗಳು ಎಂದು ಎರಡು ವಿಭಾಗಗಳನ್ನು ಮಾಡಿ ಹೇಳಿದ್ದಾರೆ. ಸಾಧ್ಯ ರೋಗಗಳಲ್ಲಿ ಸುಸಾಧ್ಯ ಹಾಗೂ ಕೃಚ್ಛ್ರಸಾಧ್ಯವೆಂದೂ ಅಸಾಧ್ಯದಲ್ಲಿ ಯಾಪ್ಯ ಹಾಗೂ ಅಸಾಧ್ಯವೆಂದೂ ಉಗ್ರದಿತ್ಯಾಚಾರ್ಯರು ವಿಂಗಡಿಸಿ ಹೇಳಿದ್ದಾರೆ. (ಕ.ಅ.೭, ಶ್ಲೋಕ.೫೮)

ರೋಗದ ಸಾಧ್ಯಾಸಾಧ್ಯ ವಿಚಾರ:ಆಚಾರ್ಯ ಸಮಂತ ಭದ್ರರು ರೋಗಗಳಲ್ಲಿ ಎರಡು ವಿಧ ಮಾಡಿ ಚಿಕಿತ್ಸೆಗೆ ಸಾಧ್ಯರೋಗಗಲು ಹಾಗೂ ಅಸಾಧ್ಯ ರೋಗಗಳು ಎಂದು ಎರಡು ವಿಭಾಗಗಳನ್ನು ಮಾಡಿ ಹೇಳಿದ್ದಾರೆ. ಸಾಧ್ಯ ರೋಗಗಳಲ್ಲಿ ಸುಸಾಧ್ಯ ಹಾಗೂ ಕೃಚ್ಛ್ರಸಾಧ್ಯವೆಂದೂ ಅಸಾಧ್ಯದಲ್ಲಿ ಯಾಪ್ಯ ಹಾಗೂ ಅಸಾಧ್ಯವೆಂದೂ ಉಗ್ರದಿತ್ಯಾಚಾರ್ಯರ ವಿಂಗಡಿಸಿ ಹೇಳಿದ್ದಾರೆ. (ಕ.ಅ.೭, ಶ್ಲೋಕ.೫೮)

ಉಪೇಕ್ಷಿಸಬೇಡಿ: ರೋಗದ ಲಕ್ಷಣಗಳು ಕಂಡ ಕೂಡಲೇ ಒಳ್ಳೆಯ ಚಿಕಿತ್ಸೆಯನ್ನು ಶಾಸ್ತ್ರೋಕ್ತ ರೀತಿಯಲ್ಲಿ ಕೊಡದಿದ್ದರೆ ಸುಖಸಾಧ್ಯವಾದ ರೋಗಗಳು ಕೂಡ ಕಷ್ಟಸಾಧ್ಯವೆನಿಸುತ್ತವೆ. ಕಷ್ಟಸಾಧ್ಯವಾದವುಗಳು ಯಾಪ್ಯವಾಗುತ್ತವೆ. ಯಾಪ್ಯ ಇದ್ದವುಗಳು ಚಿಕಿತ್ಸೆಗೆ ಅಸಾಧ್ಯವೆನಿಸುತ್ತವೆ. ಆದ್ದರಿಂದ ವೈದ್ಯನಾದವನು ರೋಗಿಯನ್ನು ಉಪೇಕ್ಷಿಸಬಾರದೆಂದು ಹೇಳಿದ್ದಾರೆ. (ಕ.ಅ.೭, ಶ್ಲೋಕ.೬೨)

ಮರಣ ಸೂಚನೆ: ವೈದ್ಯನು ಕೊಡುವ ಅತ್ಯಂತ ಶ್ರೇಷ್ಠವಾದ ಚಿಕಿತ್ಸೆಗು ರೋಗವು ಗುಣಕಾಣದೇ ಹೋದಾಗ ರೋಗಿಯಲ್ಲಿ ಕೆಲ ಅರಿಷ್ಟ ಗುಣಗಳು ಕಾಣಿಸಿಕೊಳ್ಳತೊಡಗುತ್ತವೆ. ಇಂತಹ ಲಕ್ಷಣಗಳನ್ನು ವಿವರವಾಗಿ ಶಾಸ್ತ್ರದಲ್ಲಿ ಹೇಳಿದ್ದಾರೆ. ರೋಗಿಯಲ್ಲಿ ಸದ್ಯೋ ಮರಣದಲ್ಲಿ ಲಕ್ಷಣಗಳು ಕಂಡುಬಂದಾಗ ಚಿಕಿತ್ಸೆ ನಿಲ್ಲಿಸಬೇಕು. (ಕ.ಅ.೨೦)