ನಿರೂಹವಸ್ತಿ : ದೋಷಗಳನ್ನು ಹೊರಗೆ ತೆಗೆದುಬಿಡುವುದರಿಂದ ಹಾಗೂ ರೋಗಗಳನ್ನು ಪರಿಹರಿಸುವುದರಿಂದ ‘ನಿರೂಹ’ವೆಂತಲೂ ಆಯುಷ್ಯವನ್ನು ಸ್ಥಾಪಿಸುವುದರಿಂದ ‘ಅಸ್ಥಾಪನ’ವೆಂತಲೂ ಇದಕ್ಕೆ ಕರೆಯುತ್ತಾರೆ. ಯಾವಾಗಲೂ ಸ್ನೇಹನ ವಸ್ತಿಯನ್ನು ಕೊಡುವುದಕ್ಕೆ ಮೊದಲು ದೋಷಶೋಧನ ಹಾಗೂ ಮಲಾಂಶಗಳನ್ನು ಹೊರಹಾಕುವುದಕ್ಕಾಗಿ ನಿರೂಹವಸ್ತಿ ಕೊಡಬೇಕಾಗುತ್ತದೆ. ಇದರಲ್ಲಿ ಸೈಂಧವ ಲವಣ, ಸ್ನೇಹ ದ್ರವ್ಯಗಳು, ಕಲ್ಕ, ಕಷಾಯ, ಸ್ವರಸ, ಹಾಲು, ಹುಳಿ ಗಂಜಿ, ಗೋಮೂತ್ರ – ಹೀಗೆಲ್ಲ ದ್ರವ್ಯಗಳು ಸೇರಿರುತ್ತವೆ. ಚಿಕ್ಕವರಿಗೆ, ವೃದ್ಧರಿಗೆ – ರೋಗಿ ಹಾಗೂ ರೋಗಸ್ಥಿತಿಗೆ ತಕ್ಕಂತೆ ವೈದ್ಯರು ಇದನ್ನು ಯೋಜಿಸಬೇಕಾಗುತ್ತದೆ. ಈ ನಿರೂಹ ವಸ್ತಿಯನ್ನು ಒಂದರಿಂದ ನಾಲ್ಕು ಸಾರೆಯವರೆಗೆ ಪ್ರಮಾಣ ಕಡಿಮೆ ಮಾಡುತ್ತ ಹೋಗಬೇಕು. ಮಕ್ಕಳಿಗೆ – ವೃದ್ಧರಿಗೆ ಅಲ್ಪ ಪ್ರಮಾಣದಲ್ಲಿ ಕೊಡುವುದೊಳಿತು. ಇದರಿಂದ ಮಲ, ಪಿತ್ತ, ಕಫ ಹಾಗೂ ವಾಯುಗಳು ಕ್ರಮವಾಗಿ ಹೊರಗೆ ಬಂದು ದೇಹ ಹಗುರವಾದಾಗ ನಿರೂಹಬಸ್ತಿಯು ಚೆನ್ನಾಗಿ ಕೆಲಸ ಮಾಡಿತೆಂದು ತಿಳಿಯಬೇಕು. ನಿರೂಹಬಸ್ತಿಯನ್ನು ಕೊಟ್ಟ ಬಳಿಕ ಕೆಲ ವೇಳೆ ರೋಗಿಯನ್ನು ಹಾಗೇನೆ ಮಲಗಿಕೊಂಡಿರುವಂತೆ ಹೇಳಬೇಕು. ನಿರೂಹವು ೪೮ ನಿಮಿಷಗಳಲ್ಲಿ ಹೊರ ಬರುವುದು. ಅನಂತರ ಅವರಿಗೆ ಸ್ನಾನ ಮಾಡಿಸಿ ಪ್ರಕೃತಿಗನುಸರಿಸಿ ಸೌಮ್ಯ ಆಹಾರಗಳನ್ನು ಯೋಜಿಸಬೇಕು. ಪಿತ್ತದೋಷಕ್ಕೆ ಹಾಲು, ಕಫದೋಷಕ್ಕೆ ಸಾರು ಹಾಗೂ ವಾತದೋಷಕ್ಕೆ ಸ್ನಿಗ್ಧ ದ್ರವ್ಯಗಳು ಸೇರಿದ ಖೀರು, ಪಾಯಸಗಳನ್ನು ಕೊಡಬೇಕು.

ಒಂದು ವೇಳೆ ಒಂದು ಮುಹೂರ್ತ ಕಾಲದಲ್ಲಿ ಎಂದರೆ ೪೮ ನಿಮಿಷಗಳಲ್ಲಿ ನಿರೂಹವು ಮರಳಿ ಬಾರದಿದ್ದರೆ ಅದನ್ನು ಶೋಧನ ಕರವಾದ, ತೀಕ್ಷ್ಣವಾದ ಯವಕ್ಷಾರ, ಗೋಮೂತ್ರ, ಹುಳಿಗಂಜಿಗಳಿಂದ ತಯಾರಿಸಿದ ಬೇರೆ ನಿರೂಹಗಳನ್ನು ಕೊಟ್ಟು ಹೊರಗೆ ಹಾಕಬೇಕಾಗುವುದು.

ಅನುವಾಸನಬಸ್ತಿ: ಈ ಬಸ್ತಿಯನ್ನು ಪ್ರತಿದಿನವೂ ಕೊಡಬಹುದು. ಇದರ ಪ್ರಮಾಣ ನಿರೂಹಬಸ್ತಿಯ ಕಾಲಾಂಶ, ಈ ಕ್ರಿಯೆಗೆ ಮೊದಲು ರೋಗಿಯನ್ನು ಸಾರು, ಹಾಲು, ರೋಗಕ್ಕನುಗುಣವಾಗಿ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿ ಅವನು ಸಾಮಾ‌‌ನ್ಯವಾಗಿ ತೆಗೆದುಕೊಳ್ಳುವ ಪ್ರಮಾಣದ ೩/೪ ರಷ್ಟು ಕೊಡಬೇಕು. ಆದರೆ ಹಸಿದವರಿಗೆ ಈ ಬಸ್ತಿಯನ್ನು ಕೊಡಬಾರದು. ಹೀಗೆ ಕೊಟ್ಟರೆ ಸ್ನೇಹ ಮೇಲಕ್ಕೇರುವ ಸಂಭವವಿರುತ್ತದೆ. ಸ್ನೇಹವಸ್ತಿಯನ್ನು ಕೊಟ್ಟ ಬಳಿಕ ರೋಗಿಯನ್ನು ಸುಮಾರು ೫-೧೦ ನಿಮಿಷಗಳವರೆಗೆ ಹಾಗೆಯೇ ಮಲಗಿಸಿರಬೇಕು. ಆಮೇಲಾದರು ಹೆಚ್ಚು ಆಯಾಸ ತೆಗೆದುಕೊಳ್ಳದೆ ಹೆಚ್ಚು ಮಾತನಾಡದೇ ಹಾಸಿಗೆಯ ಮೇಲೆ ಸುಖವಾಗಿ ಹಿತಮಿತವಾದ ಆಹಾರ ವಿಹಾರಗಳನ್ನನುಸರಿಸುತ್ತ ಇರಬೇಕು. ವಾಯು ಹಾಗೂ ಮಲಕೂಡಿಕೊಂಡು ಉರಿ, ಸುಡಿತಗಳಿಲ್ಲದೆ ಶೀಘ್ರದಲ್ಲಿ ಹೊರ ಬಂದರೆ ಅನುವಾಸವನು ಚೆನ್ನಾಗಿ ಆಗಿದೆ ಎಂದು ತಿಳಿಯಬೇಕು.

ಸಾಯಂಕಾಲದಲ್ಲಿ ಸ್ನೇಹವು ಪೂರ್ತಿಯಾಗಿ ಹೊರ ಬಂದು ಊಟ ಮಾಡಿದ ಅನ್ನವು ಜೀರ್ಣವಾಗಿ ಹಸಿವು ಚೆನ್ನಾಗಿ ಉಂಟಾಗಿದ್ದರೆ ಅವನಿಗೆ ಲಘು ಭೋಜನವನ್ನು ಬೇಕಾದಷ್ಟು ಪ್ರಮಾಣದಲ್ಲಿ ಕೊಡಬಹುದು. ಮರುದಿನವೂ ಶುಂಠಿ ಹಾಕಿ ಕಾಯಿಸಿದ ಬಿಸಿನೀರನ್ನು ಕೊಟ್ಟರೆ ಅಗ್ನಿದೀಪ್ತಿ ಉಂಟಾಗಿ ಹಸಿವೆ ಎನಿಸುವುದು. ಒಂದು ವೇಳೆ ವಸ್ತಿಯ ಸ್ನೇಹವು ಮರಳಿಬಾರದೆ ಯಾವುದೇ ರೀತಿಯ ಉಪದ್ರವಗಳನ್ನುಂಟು ಮಾಡದಿದ್ದರೆ ಅದಕ್ಕಾಗಿ ಚಿಂತಿಸುವ ಕಾರಣವಿಲ್ಲ. ಆದರೆ ಅದು ಒಂದು ದಿನದವರೆಗಾದರೂ ಹೊರಬರದಿದ್ದರೆ – ಅದನ್ನು ಸಂಶೋಧನೆ ಕ್ರಮಗಳಿಂದ ಹೊರಹಾಕಬೇಕಾಗುತ್ತದೆ. ಆದರೆ ಮತ್ತೆ ಸ್ನೇಹವನ್ನು ಕೊಡಬಾರದು.

ಸ್ನೇಹ ವಸ್ತಿಯನ್ನು ರೋಗಿ ಹಾಗೂ ರೋಗಕ್ಕನುಸರಿಸಿ ಆರರಿಂದ ಒಂಭತ್ತು ಸಾರೆ ಕೊಡಬಹುದು. ಮಧ್ಯದಲ್ಲಿ ಆಗಾಗ ನರೂಹಣ ಬಸ್ತಿಯನ್ನು ಕೊಡಬಹುದು.

ಉತ್ತರವಸ್ತಿ: ಸ್ತ್ರೀ ಪುರಷರಲ್ಲಿ ಮುತ್ರ ಮಾರ್ಗಗಳಲ್ಲಿ ಹಾಗೂ ಸ್ತ್ರೀಯರ ಪ್ರಜನನಾಂಗಗಳ ದೋಷ ನಿವಾರಣೆಗಾಗಿ ಯೋನಿ ಮಾರ್ಗದಲ್ಲಿ ಕೊಡಲ್ಪಡುವ ಬಸ್ತಿಗೆ ‘ಉತ್ತರವಸ್ತಿ’ ಎನ್ನುವರು. ಇದಕ್ಕಾಗಿ ಉಪಯೋಗಿಸಲ್ಪಡುವ ನಳಿಗೆಯ ಉದ್ದವು ೧೨ ಅಂಗುಲ, ಸ್ತ್ರೀಯರಿಗೆ ೧೦ ಅಂಗುಲ ಇರಬೇಕು. ರಂಧ್ರವು ಸಾಸಿವೆ ಕಾಳಿನಷ್ಟು, ಮುಖ್ಯವು ಜಾಜಿ ಹೂವಿನ ತೊಟ್ಟಿನಷ್ಟು ಇರಬೇಕೆಂದು ಶಾಸ್ತ್ರವು ಹೇಳುತ್ತದೆ. ಆಧುನಿಕ ವೈದ್ಯರಲ್ಲಿ ಪುರುಷರ ಮೂತ್ರ ಹೊರ ತೆಗೆಯಲು ರಬ್ಬರ ಕೊಳವೆ (ಕ್ಯಾಢೆಟರು)ಗಳನ್ನು , ಸ್ತ್ರೀಯರಿಗಾಗಿ ಉಕ್ಕಿನ ಕೊಳವೆಗಳನ್ನು ಉಪಯೋಗಿಸುತ್ತಾರೆ. ಬಸ್ತಿ ಕೊಡುವ ಡಬ್ಬ ಹಾಗೂ ಕೊಳವೆಗಳ ಸಹಾಯದಿಂದಲೇ ಪ್ರತ್ಯೇಕವಾದುದೊಂದು ನಳಿಕೆಯ ಸಹಾಯದಿಂದ ಗರ್ಭಾಶಯಮುಖ, ಯೋನಿದ್ವಾರ, ಯೋನಿ ಭಿತ್ತಿಗಳಲ್ಲಿರುವ ದೋಷಗಳನ್ನು ಹೊರ ಹಾಕಿ ಅಲ್ಲಿ ಶುದ್ಧತೆಯನ್ನು ಕಾಪಾಡಲೋಸುಗ ಉತ್ತರಬಸ್ತಿ (Vaginal Douche)ಯನ್ನು ಕೊಡುವ ಪದ್ಧತಿ ಇದೆ. ಆದರೆ ಆಯುರ್ವೇದ ಶಾಸ್ತ್ರಕಾರರು ಇದಕ್ಕೂ ಮುಂದುವರೆದು ಈ ವಿವಿಧಾಂಗಗಳ ಸ್ವಾಸ್ಥ ರಕ್ಷಣೆಗಾಗಿಯೂ ಈ ಉತ್ತರಬಸ್ತಿಯನ್ನು ಯೋಜಿಸಿದ್ದಾರೆ.

ಪುರುಷರೋಗಿಗೆ ಉತ್ತರವಸ್ತಿ ಕೊಡುವುದಿದ್ದಾಗ ಅವನಿಗೆ ಸ್ನೇಹ, ಸ್ವೇದ ಮಾಡಿಸಿ, ಮಲ ಮೂತ್ರ ವಿಸರ್ಜನೆಯಾದ ಬಳಿಕ ತುಪ್ಪ ಸೇರಿಸಿದ ಅಕ್ಕಿ ಗಂಜಿ ಕುಡಿಸಿ ಸುಮಾರು ಮೊಳಕಾಲಷ್ಟು ಎತ್ತರ ಪ್ರಮಾಣದಲ್ಲಿ ಅವನನ್ನು ಕೂಡ್ರಿಸಿ ಅವನ ಮೂತ್ರನಾಳದ ಮುಂಭಾಗಕ್ಕೆ ಬಿಸಿಯಾದ ತೈಲವನ್ನು ಚೆನ್ನಾಗಿ ಲೇಪಿಸಿ – ಅದಕ್ಕೆ ಮೃದುತ್ವ ತಂದುಕೊಟ್ಟು ಮೂತ್ರ ಮಾರ್ಗವನ್ನು ಉದ್ರೇಕಿಸಬೇಕು. ನಂತರ ಮೊದಲು ಲೋಹದ ಕಡ್ಡಿಯನ್ನು ಸುಮಾರು ೬ ಅಂಗುಲವರೆಗೆ ಹೋಗಿಸಿ ನೋಡಿದ ನಂತರ ಆ ಮೇಲೆ ಉತ್ತರ ವಸ್ತಿಯನ್ನು ಕೊಡಬೇಕು. ಉತ್ತರ ವಸ್ತಿಗಾಗಿ ಅರ್ಧಪಲದಷ್ಟು ಸ್ನೇಹವನ್ನು (ಸುಮಾರು ೧೦ ಮಿ.ಲಿ.ದಷ್ಟು) ಉಪಯೋಗಿಸಬೇಕು. ಒಮ್ಮೆ ಕೊಡ್ಡ ಸ್ನೇಹವು ಹೊರಬಂದ ಬಳಿಕ ಮತ್ತೆ ಮತ್ತೆ -ಹೀಗೆ ೩ ಅಥವಾ ೪ ವಸ್ತಿಗಳನ್ನು ಕೊಡಬಹುದು.

ಸ್ತ್ರೀಯರಿಗೆ ಮಾತ್ರ ಗರ್ಭಾಶಯ ದೋಷಗಳಿಗೆ ಪ್ರತಿ ಕರ್ಮವನ್ನು ಮಾಡುವಾಗ ಅವರು ಮುಟ್ಟಾಗಿರುವಾಗಲೇ ಒಳ್ಳೆಯದು. ಆಗ ಗರ್ಭಾಶಯ ಮುಖವು ತೆರೆದಿದ್ದು ಸ್ನೇಹ ದ್ರವ್ಯವು ಒಳಸೇರಲು ಅನುಕೂಲವಾಗುವುದು. ವಾತ ದೋಷವಿದ್ದರೆ ಅದು ಪರಿಹರಿಸಲ್ಪಟ್ಟು ಗರ್ಭಧಾರಣೆ (Conception)ಗೆ ಅನುಕೂಲವಾಗುವುದು. ಸ್ತ್ರೀಯನ್ನು ಅಂಗಾತವಾಗಿ ಟೇಬಲ್ಲಿನ ಮೇಲೆ ಮಲಗಿಸಿ ಅವಳ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ಕಟ್ಟುವಂತೆ ಮಾಡಿ ವಸ್ತಿಯ ನಳಿಕೆಯನ್ನು ಬೆನ್ನುಹುರಿಗೆ ಅನುಗುಣವಾಗಿ ಮೆಲ್ಲನೆ ಒಳಸೇರಿಸಬೇಕು. ಹೀಗೆ ೩-೪ ಸಾರೆ ಸ್ನೇಹವಸ್ತಿಗಳನ್ನು ಕೊಡಬಹುದು. ವಸ್ತಿಯನ್ನು ಮೂತ್ರ ಮಾರ್ಗದಲ್ಲಿ ಕೊಡುವುದಾದರೆ ಒಂದರ ನಂತರ ಮತ್ತೊಂದು ಕೊಡಬೇಕು.

ಈ ವಸ್ತಿ ಕ್ರಮದ ಬಳಿಕ ಸ್ನೇಹವು ಹೊರಬಂದಿದ್ದನ್ನು ನೋಡಿ ಮಧ್ಯಾಹ್ನ ಕಾಲದಲ್ಲಿ ಪಿತ್ತದೋಷವಿದ್ದರೆ ಹಾಲು, ಕಫದೋಷವಿದ್ದರೆ ಸಾರು ಹಾಗೂ ವಾತದೋಷಕ್ಕೆ ಹೆಚ್ಚು ತುಪ್ಪ ಸೇರಿಸಿದ ಪಾಯಸವನ್ನು ಕೊಡಬೇಕು.

ಶಿರೋವಸ್ತಿ ವಿಧಿ: ಮಿದುಳಿಗೆ ಸಂಬಂಧಿಸಿದ ಬುದ್ಧಿ ಭ್ರಮಣೆ, ಮೂರ್ಛೆ, ಮಲರೋಗ(Epilepsy)ಮುಂತಾದ ಸ್ಥಿತಿಗಳಲ್ಲಿ ಶಿರೋವಸ್ತಿಯನ್ನು ಕೊಡುವ ರೂಢಿಯು ಆಯುರ್ವೇದದಲ್ಲಿದೆ. ಸ್ನೇಹನ ಸ್ವೇದನ ಕರ್ಮಗಳಿಂದ ಸಿದ್ಧಪಡಿಸಿದ ರೋಗಿಯನ್ನು ಸಾಯಂಕಾಲದ ವೇಳೆಯಲ್ಲಿ ಮೊಣಕಾಲಷ್ಟು ಎತ್ತರವಾದ ಸ್ಥಾನದಲ್ಲಿ ಕುಳ್ಳಿರಿಸಿ ಹಣೆಗೆ ಬಿಗುವಾಗಿ ವಸ್ತ್ರ ಇಲ್ಲವೆ ಪ್ಲಾಸ್ಟಿಕ್‌ನ ಪಟ್ಟಿಯನ್ನು ಕಟ್ಟಿ ಕೆಳಗೆ ತೈಲವು ಸೋರದಂತೆ ಉದ್ದಿನ ಹಿಟ್ಟಿನ ಕಲ್ಕವನ್ನು ಚೆನ್ನಾಗಿ ಲೇಪಿಸಿ ನಂತರ ವ್ಯಾಧಿಗೆ ತಕ್ಕಂತೆ ಸ್ವಲ್ಪ ಬಿಸಿಯಾದ ತೈಲವನ್ನು ತಲೆಯ ಮೇಲೆ ೨ ಅಂಗುಲ ನಿಲ್ಲುವಂತೆ ಹಾಕಬೇಕು. ಈ ರೀತಿ ಹಾಕಲ್ಪಟ್ಟ ಸ್ನೇಹವು ಬಾಯಿ, ಮೂಗುಗಳಿಂದ ದ್ರವ ತಿಳಿಯುವವರೆಗೆ ಹಾಗೆಯೇ ಇರಬೇಕು. ಅನಂತರ ಎಣ್ಣೆಯನ್ನು ಹೊರತೆ‌ಗೆದು ತಲೆ, ಕುತ್ತಿಗೆ, ಬೆನ್ನು,ಹಣೆ, ಮುಖಗಳನ್ನು ಚೆನ್ನಾಗಿ ಕೈಯಿಂದ ತಿಕ್ಕಬೇಕು. ಹೀಗೆ ೭ ದಿವಸಗಳವರೆಗೆ ಶಿರೋವಸ್ತಿ ಕೊಡಬೇಕು. ಶಿರೋವಸ್ತಿ ನಂತರ ರೋಗಿಗೆ ಬಿಸಿನೀರಿನಿಂದ ಚೆನ್ನಾಗಿ ಸ್ನಾನ ಮಾಡಿಸಬೇಕು. (ಕ.೨೨ ಹಾಗೂ ೨೩ ನೇ ಪರೀಚ್ಛೇದಗಳು).

ರಕ್ತ ಮೋಕ್ಷಣ: ಶರೀರದಲ್ಲಿರುವ ರಕ್ತಧಾತುವು ದುಷ್ಟವಾದರೆ ಅನೇಕ ವಿಧದ ಚರ್ಮ ರೋಗಗಳನ್ನುಂಟು ಮಾಡಲು ಶಕ್ತವಾಗುತ್ತದೆ. ಪಿತ್ತ ದೋಷವು ರಕ್ತದ ಸಮಾನವಾ ಗುಣವುಳ್ಳದ್ದಾದ್ದರಿಂದ ಪಿತ್ತದುಷ್ಟಿಯೂ ಆಗುವುದು ಸಹಜವಾಗಿದೆ. ಆದ್ದರಿಂದ ಇವೆರಡೂ ದೋಷಗಳ ನಿವಾರಣೆಗಾಗಿ ರಕ್ತಮೋಕ್ಷಣ(ಜಲೂಕಾ ವಿಧಿ) ರಕ್ತಾವಸೇಚನ ವಿಧಿಗಳು ಆಯುರ್ವೇದದಲ್ಲಿ ಹಿಂದಿನ ಕಾಲದಿಂದ ಬಂದಿವೆ. ಇದಕ್ಕೆ ಜೈನಾಚಾರ್ಯರು ಹೊರತಾಗಿಲ್ಲ. ಕಲ್ಯಾಣಕಾರಕ ಗ್ರಂಥದಲ್ಲಿ ವಿಷಯವಾಗಿ ಸಾಕಷ್ಟು ವರ್ಣನೆ ಸಿಕ್ಕುತ್ತದೆ. ದುಷ್ಟರಕ್ತವು ವಿಶಿಷ್ಟ ಪ್ರಮಾಣದಲ್ಲಿ ಶರೀರದಿಂದ ಹೊರಹೋಗಬೇಕಾಗುವುದು ಅತ್ಯವಶ್ಯವೆನಿಸಿದೆ. ರಕ್ತಮೋಕ್ಷಣ ವಿಧಿಗಾಗಿ ಜಿಗಳೆ ಕಚ್ಚಿಸಿ ರಕ್ತ ಹೀರಿಸುವ ವಿಧಾನದ ಹೊರತಾಗಿ ಬೇರೆ ವಿಧಾನಗಳನ್ನು (ಕೋಡು ಸೋರೆಕಾಯಿ) ಅಷ್ಟೊಂದು ಬಳಕೆಗೆ ಬರಲಿಲ್ಲ.

ರಾಜ, ಧನಿಕ, ಬಾಲ, ವೃದ್ಧ, ಸೋಮಾರಿ, ಆಶಕ್ತ, ಸ್ತ್ರೀ, ಸುಕುಮಾರ ಮುಂತಾದ ವರ ಕ್ಷೇಮಕ್ಕಾಗಿ ರಕ್ತಮೋಕ್ಷಣ ಮಾಡಬೇಕಾಗುತ್ತದೆ. ಶರೀರದ ಸ್ವಾಸ್ಥ್ಯಕ್ಕೆ ನೈಜತೆಗಿಂತ ಅಧಿಕವಾದ ರಕ್ತಧಾತುವು ಬೆಳೆಯುವುದು ಕೂಡ ಅಪಾಯಕಾರಿ ಎಂದು ನಾವು ಈಗಾಗಲೇ ತಿಳಿದಿದ್ದೇವೆ. ಆದ್ದರಿಂದ ಮುಂಬರುವ ಉಪದ್ರವಗಳಿಂದ ದೂರವಾಗಲು ರಕ್ತಮೋಕ್ಷಣ ಮಾಡಿಸಿಕೊಳ್ಳವುದು ಯೋಗ್ಯವೆನಿಸುತ್ತದೆ. ಆಧುನಿಕ ವೈದ್ಯರು ಕೂಡ ಅತೀ ಸ್ಥೂಲರಿಗೆ, ಅಧಿಕ ರಕ್ತದೊತ್ತಡವಿರುವವರಿಗೆ ರಕ್ತವನ್ನು ತೆಗೆಯುವ ವಿಷಯವನ್ನು ಅನುಮೋದಿಸುತ್ತಾರೆ.

ಜಿಗಳೆಗಳೊಳಗೆ ಅವು ಹುಟ್ಟಿ ಬೆಳೆಯುವ – ಅಂಶಗಳಿಗನುಸಾರವಾಗಿ ವಿಷಯುಕ್ತವಾದವುಗಳು ಆರು ಹಾಗೂ ನಿರ್ವಿಷವಾದವುಗಳು ಆರು – ಹೀಗೆ ಒಟ್ಟು ೧೨ ನಮೂನೆಗಳಿವೆ. ಕೃಷ್ಣಾ, ಕರ್ಬುರಾ, ಅಲಗರ್ದಾ, ಇಂದ್ರಾಯುಧಾ, ಸಾಮೂದ್ರಿಕಾ ಹಾಗೂ ಗೋಚಂದನಾ ಎಂಬವುಗಳು ವಿಷಜಾತಿಯ ಜಗಳೆಗಳು. ಕಪಿಲಾ, ಪಿಂಗಲಾ, ಶಂಕು, ಮುಖಿ, ಮೂಷಕಾ, ಪುಂಡರೀಕ ಮುಖಿ ಹಾಗು ಸಾವರಿಕಾ – ಇವು ವಿಷವಲ್ಲದ ಜಿಗಳೆಗಳಾಗಿದ್ದು ರಕ್ತಮೋಕ್ಷಣ ಕ್ರಿಯೆಗೆ ಯೋಗ್ಯವಾಗಿದೆ. ಈ ಜಿಗಳೆಗಳ ವಿವರ ಶಾಸ್ತ್ರದಲ್ಲಿ ಸಮರ್ಪಕವಾಗಿ ಮೂಡಿಬಂದಿದೆ(ಕ.೨೧ನೇ ಅಧ್ಯಾಯ).

ನಿರ್ವಿಷವಾದ ಜಿಗಳೆಗಳು ಪದ್ಮ, ಉತ್ಪಲ, ನಲಿನ, ಕುಮದ, ಸೌಗಂಧಿಕ, ಕುವಲಯ, ಪುಂಡರೀಕ ಎಂಬ ತಾವರೆ, ನೈದಿಲೆಗಳ ಸರೋವರ ಹಾಗು ನಿರ್ಮಲ ನೀರಿನಲ್ಲಿ ವಾಸವಾಗಿರುತ್ತವೆ. ಇವು ಸುಗಂಧವುಳ್ಳ ನೀರು ಮತ್ತು ಗದ್ದೆಗಳಲ್ಲಿ ಸಂಚರಿಸುತ್ತವೆ. ಇಂತಹ ಜಿಗಳೆಗಳನ್ನು ಒಂದು ಕೊಡದಲ್ಲಿ ಕಮಲಗಳಿರುವ ಸುಗಂಧಪೂರಿತ ನೀರನ್ನು ಹಾಕಿ ಅದರಲ್ಲಿ ಹಿಡಿದಿಡಬೇಕು. ಅವುಗಳಿಗೆ ತಿನ್ನುವುದಕ್ಕಾಗಿ ಹುಲ್ಲು, ನೀರಿನಲ್ಲಿ ಬೆಳೆದ ಎಲೆ-ಗಡ್ಡೆಗಳ ಪುಡಿ, ಆಟಗಳನ್ನು ಹಾಕಬೇಕು. ೨-೩ ದಿವಸಗಳಿಗೊಮ್ಮೆ ನೀರನ್ನು ಹಾಗೂ ಆಹಾರ ಪದಾರ್ಥಗಳನ್ನು ಹಾಗೂ ವಾರಕ್ಕೊಮ್ಮೆ ಕೊಡವನ್ನು ಬದಲಿಸಬೇಕಾಗುತ್ತದೆ.

ರಕ್ತಮೋಕ್ಷಣ ಮಾಡಿಸಬೇಕಾದ ವ್ಯಕ್ತಿಯನ್ನು ಕೂಡ್ರಿಸಿ ಇಲ್ಲವೆ ಮಲಗಿಸಿ ಜಿಗಳೆ ಹಿಡಿಸಬೇಕಾದ ಸ್ಥಾನವನ್ನು ಶುದ್ಧ ಮಾಡಿರಬೇಕು. ಜಿಗಳೆಗಳ ಶರೀರಕ್ಕೆ ಸಾಸಿವೆ ಹಾಗೂ ಅರಿಷಿಣಗಳ ಚೂರ್ಣವನ್ನು ಲೇಪಿಸಿ ಒಂದು ಮುಹೂರ್ತಕಾಲ ನೀರು ತುಂಬಿದ ಕವಳಿಕೆಯಲ್ಲಿ ಬಿಡಬೇಕು. ಹೀಗೆ ಮಾಡಿದರೆ ಅವುಗಳ ಶ್ರಮವು ಪರಿಹಾರವಾಗುವುದು. ಸೂಕ್ಷ್ಮ ಮತ್ತು ಬಿಳಿದಾದ ಹತ್ತಿ ಅಥವಾ ವಸ್ತ್ರದ ತುಂಡನ್ನು ಒದ್ದೆ ಮಾಡಿ ಅದರಿಂದ ಜಿಗಳೆಯನ್ನು ಹಿಡಿದುಕೊಂಡು ಸ್ಥಾನಕ್ಕೆ ಹಚ್ಚಿಸಬೇಕು. ಆಗ ಅದು ಹಿಡಿಯದಿದ್ದರೆ ಒಂದೆರಡು ಬಿಂದುಗಳಷ್ಟು ಹಾಲನ್ನು ಹಾಕಬೇಕು. ಇದಕ್ಕೂ ಜಿಗಳೆ ಹಿಡಿಯದಿದ್ದರೆ ಅಲ್ಲಿ ಶಸ್ತ್ರದಿಂದ ಗಾಯವನ್ನು ಮಾಡಬೇಕು. ಜಿಗಳೆ ರಕ್ತವನ್ನು ಕುಡಿಯುವುದರಿಂದ ಕೂಡಲೇ ಹಿಡಿಯುವುದು. ಅದು ತನ್ನ ದೇಹವನ್ನೆತ್ತಿಕೊಂಡು, ಬಾಯಿ ಅಗಲ ಮಾಡಿಕೊಂಡು ಹೊಟ್ಟೆಯುಬ್ಬಿಸುವುದೋ ಆಗ ಅದು ರಕ್ತವನ್ನು ಹೀರಿಕೊಳ್ಳುತ್ತಿದೆ ಎಂದರ್ಥ. ಆಗ ಅದರ ಮೇಲೆ ಒದ್ದೆ ಬಟ್ಟೆಯಿಂದ ಹೊದಿಸಿ ಅದರ ಮೇಲೆ ಹನಿ-ಹನಿಯಾಗಿ ನೀರನ್ನು ಬಿಡುತ್ತಿರಬೇಕು. ಗಾಯದಲ್ಲಿ ನೋವು ಹಾಗೂ ತುರಿಕೆಗಳು ಹೋದರೆ ಜಿಗಳೆಯು ಶುದ್ಧವಾದ ರಕ್ತವನ್ನೇ ಹೀರುತ್ತಿದೆ ಎಂದು ತಿಳಿದು ಅದನ್ನು ಸೈಂಧವ ಲವಣದ ನೀರನ್ನೂ ಅದರ ಬಾಯಿಗೆ ಹಾಕುತ್ತ ಬಿಡಿಸಬೇಕು. ನಂತರ ಅದರ ಬಾಯಿಯನ್ನು ಕೆಳಗೆ ಮಾಡಿ ಹೊಟ್ಟೆ ಹಿಸುಕಿ ಅಶುದ್ಧ ರಕ್ತವನ್ನು ಕಕ್ಕಿಸಬೇಕು. ಜಿಗಳೆ ಕಚ್ಚಿದ ಗಾಯಕ್ಕೆ ತ್ರಿಫಲಾ ಘೃತ ಹಚ್ಚಿ ಮೇಲೆ ತಣ್ಣೀರನ್ನು ಹಾಕುತ್ತಿರಬೇಕು. ಇಲ್ಲವೇ ವ್ರಣದಂತೆ ಚಿಕಿತ್ಸಿಸಬೇಕು.

ರೋಗಿಯ ಪ್ರಕೃತಿಯನ್ನು ಗಮನಿಸಿ ಒಂದು ಪ್ರಸ್ಥ, ಅರ್ಧ ಪ್ರಸ್ಥ, ಇಲ್ಲವೇ ಕಾಲು ಪ್ರಸ್ಥದಷ್ಟು ರಕ್ತಮೋಕ್ಷಣ ಮಾಡಿಸಬೇಕು (ಒಂದು ಪ್ರಸ್ಥವೆಂದರೆ ೬೪ ತೊಲಗಳಷ್ಟು).

ಕೃಶರು, ಅತಿ ಮೈಥುನ ಮಾಡುವವರು, ಷಂಢ, ಹೇಡಿ, ಗರ್ಭಿಣಿ, ಬಾಣಂತಿ ಪಾಂಡುರೋಗಿ, ಪಂಚಕರ್ಮಗಳಿಂದ ಶೋಧಿಸಿಕೊಂಡವರು, ಸ್ನೇಹಪಾನ ಮಾಡಿದವರು. ಮೂಲವ್ಯಾಧಿ ಇರುವವರು. ಸರ್ವಾಂಗ ಶೋಥವುಳ್ಳವರು, ಉದರವ್ಯಾಧಿ, ಉಬ್ಬುಸ, ಕೆಮ್ಮು, ವಾಂತಿ, ಅತಿಸಾರ, ಕುಷ್ಠರೋಗ, ಅತಿಯಾಗಿ ಸ್ವೇದನ ಮಾಡಿಸಿಕೊಂಡವರು, ೧೬ ವರ್ಷಕ್ಕೆ ಕಡಿಮೆ ಇರುವವರು, ೭೦ ವರ್ಷ ಮಿಕ್ಕಿದವರು, ಗಾಯವಾಗಿ ರಕ್ತಸ್ರಾವಗೊಂಡಿರುವವರು- ಇಂಥವರಿಗೆ ರಕ್ತಮೋಕ್ಷಣ ಮಾಡಿಸಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ರೋಗದ ಪ್ರಾಬಲ್ಯವಿದ್ದಾಗ ಮಾತ್ರ ಜಿಗಳೆ ಹಿಡಿಸಬಹುದು. ಆದರೆ ವಿಷದೋಷವಿದ್ದಾಗ ಶಿರಾಮೋಕ್ಷಣ (Venisection) ಒಳಿತಲ್ಲ.

೬೦ ವಿಧ ಚಿಕಿತ್ಸಾ ಕ್ರಮಗಳು

ಉಗ್ರದಿತ್ಯಾಚಾರ್ಯರು ಕಲ್ಯಾಣಕಾರಕದ ೨೦ ನೇ ಅಧ್ಯಾಯದಲ್ಲಿ ಒಟ್ಟಾರೆ ರೋಗ ಚಿಕಿತ್ಸೆಯಲ್ಲಿ ಬಳಸಲ್ಪಡುವ ೬೦ ವಿಧ ಚಿಕಿತ್ಸಾ ಕ್ರಮಗಳನ್ನು ವಿವರಿಸಿದ್ದಾರೆ. ಅವುಗಳು ಇಂತಿವೆ.

ಶೋಷಣ, ಲೇಪನ, ಸೇಚನ, ಅಭ್ಯಂಗ, ತಾಪನ, ಬಂಧನ, ಲೇಖನ, ದಾರಣ, ವಿಮ್ಲಾಪನ, ನಸ್ಯ, ಪಾನ, ಕವಲಗ್ರಹಣ, ವ್ಯಧನ, ಸೀವನ, ಸ್ನೇಹನ, ಭೇದನ, ಏಷಣ, ಆಹರಣ, ರಕ್ತಮೋಕ್ಷಣ, ಪೀಡನ, ಶೋಣಿತ ಸ್ಥಾಪನ, ಕಷಾಯ, ಕಲ್ಕ, ಘೃತ, ತೈಲ, ನಿರ್ವಾಷಣ, ಯಂತ್ರ, ವರ್ತಿ, ವಮನ, ವಿರೇಚನ, ಚೂರ್ಣನ, ಧೂಪನ, ರಸಕ್ರಿಯಾ, ಅವಸಾದನ, ಉತ್ಸಾದನ, ಛೇದನ, ಉಪನಾಹ, ಮಿಥುನ, ಘೃತ, ಶಿರೋವಿರೇಚನ, ಪತ್ರದಾನ, ದಾರುಣಕರ್ಮ, ಮೃದುಕರ್ಮ, ಅಗ್ನಿಕರ್ಮ, ಕೃಷ್ಣಕರ್ಮ, ಉತ್ತರಬಸ್ತಿ, ವಿಷಘ್ನ, ಬೃಂಹಣಕರ್ಮ, ಕ್ಷಾರಕರ್ಮ, ಸಿತಕರ್ಮ, ಕ್ರಿಮಿಘ್ನ, ಆಹಾರ, ರಕ್ಷಾವಿಧಾನ – ಈ ೫೩ ಉಪಕ್ರಮಗಳೆನಿಸಿವೆ. ಮೇಲೆ ಹೇಳಿದ ಕಷಾಯ ವರ್ತಿ, ಘೃತ, ತೈಲ, ಕಲ್ಕ, ರಸಕ್ರಿಯಾ ಅವಚೂರ್ಣನ ಈ ೭ ಉಪಕ್ರಮಗಳ ಶೋಧನ, ರೋಪಣ ಕಾರ್ಯಭೇದದಿಂದ ೧೪ ವಿಧಗಳೆನಿಸಿದರೂ ಇವು ಮೂಲದಲ್ಲಿ ಏಳೇ ಇವೆ. ಆದ್ದರಿಂದ ಒಟ್ಟು ೬೦ ವಿಧ ಚಿಕಿತ್ಸಾ ಕ್ರಮಗಳಿವೆ. ಚಿಕಿತ್ಸಕನು ರೋಗಿಯ, ರೋಗದ ಅವಶ್ಯಕತೆಗನುಸರಿಸಿ ಈ ಚಿಕಿತ್ಸಾಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಚತುರ್ವಿಧ ಚಿಕಿತ್ಸಾ ಕ್ರಮಗಳು: ರೋಗಗಳನ್ನು ಸಂಪೂರ್ಣ ಹೋಗಲಾಡಿಸುವುದಕ್ಕಾಗಿ ಅಗ್ನಿಕರ್ಮ, ಶಸ್ತ್ರಕರ್ಮ, ಕ್ಷಾರಕರ್ಮ ಹಾಗೂ ಔಷಧಕರ್ಮ – ಹೀಗೆ ನಾಲ್ಕು ವಿಧ ಚಿಕಿತ್ಸಾಕ್ರಮಗಳನ್ನು ಶಾಸ್ತ್ರದಲ್ಲಿ ಹೇಳಿದ್ದಾರೆ. ಚಿಕಿತ್ಸೆಯಲ್ಲಿ ಪ್ರಥಮ ಪ್ರಾಶಸ್ತ್ಯವನ್ನು ಔಷಧ ಚಿಕಿತ್ಸೆಗೆ ನೀಡಲಾಗಿದೆ. ಇದಕ್ಕೆ ಗುಣವಾಗದ ರೋಗಿಗಳಿಗೆ ಶಸ್ತ್ರಚಿಕಿತ್ಸೆಗೆ ಮುನ್ನ ಕ್ಷಾರಕರ್ಮ-ಅಗ್ನಿಕರ್ಮ ವಿಧಾನಗಳನ್ನು ಮಾಡುತ್ತಿದ್ದರು. ಇವೆರಡೂ ವಿಧ ಚಿಕಿತ್ಸಾಕರ್ಮಗಳಿಗೆ ಗುಣವಾಗದ ರೋಗಿಗಳಿಗೆ ಮಾತ್ರ ಶಸ್ತ್ರ ಚಿಕಿತ್ಸೆಗೊಳಪಡಿಸುತ್ತಿದ್ದರು. ಔಷಧಿ ಚಿಕಿತ್ಸೆಯ ಹೊರತಾಗಿ ಈ ಮೂರು ಚಿಕಿತ್ಸೆಗಳನ್ನು ಶಸ್ತ್ರಚಿಕಿತ್ಸೆ ಎಂದೇ ಹೇಳಲಾಗುತ್ತದೆ.

ಕ್ಷಾರಕರ್ಮ: ಇದರಲ್ಲಿ ಸಬಲವಾದ ಕ್ಷಾರಗಳನ್ನು ಬಳಸಲಾಗುತ್ತದೆ. ಕುಷ್ಠರೋಗ, ಅರ್ಬುದ, ನಾಡೀವ್ರಣ, ಮೂಲವ್ಯಾಧಿ, ಭಗಂಧರ, ಬಾಹ್ಯಕ್ರಿಮಿ, ಬಾಹ್ಯವಿಷ, ಏಳು ವಿಧದ ಬಾಯಿ ರೋಗಗಳು, ಅಧಿಜಿಹ್ವಾ, ಉಪಜಿಹ್ವಾ, ದಂತ, ವೈದರ್ಭ, ಮೇದೋರೋಗ, ಓಷ್ಠ ಪ್ರಕೋಪ, ಮೂರು ವಿಧದ ರೋಹಿಣಿ ಮುಂತಾದ ರೋಗಗಳಲ್ಲಿ ಕ್ಷಾರಕರ್ಮವನ್ನು ಮಾಡಿದರೆ ರೋಗಗಳು ಪೂರ್ತಿ ಗುಣವಾಗುವುದೆಂದೂ, ಇದು ಶಸ್ತ್ರಚಿಕಿತ್ಸೆಗಿಂತ ಉತ್ತಮವಾದದ್ದೆಂದೂ ಶಾಸ್ತ್ರದಲ್ಲಿ ಹೇಳಿದ್ದಾರೆ.

ಕೃತ್ರಿಮ ವಿಷ, ಉದರ ರೋಗ, ಗುಲ್ಮ, ಅಗ್ನಿಮಾಂದ್ಯ, ಅಶ್ಮರಿ, ಶರ್ಕರಾ, ನಾನಾವಿಧ ಗ್ರಂಥಿಗಳು, ಮೂಲವ್ಯಾಧಿ, ವಿಷ ಹಾಗೂ ಕ್ರಿಮಿ ರೋಗಗಳು, ದಮ್ಮು, ಅಜೀರ್ಣ ಮೊದಲಾದ ರೋಗಗಳಲ್ಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದಾದ ಪಾನೀಯ ಕ್ಷಾರಗಳನ್ನು ಕೊಡಬಹುದು. ಈ ಕ್ಷಾರಗಳನ್ನು ಅನುಭವದ ಆಧಾರದ ಮೇಲೆ, ರೋಗಸ್ಥಿತಿ ನೋಡಿಕೊಂಡು ಪ್ರಯೋಗಿಸಬೇಕಾಗುತ್ತದೆ. ಇತ್ತೀಚೆಗೆ ಈ ಕ್ಷಾರಕರ್ಮ ಚಿಕಿತ್ಸೆಯು ಸಂಶೋಧಿತಗೊಂಡು ಶಸ್ತ್ರಚಿಕಿತ್ಸೆಗೆ, ಕೆಲ ಸಂದರ್ಭಗಳಲ್ಲಿ ಸವಾಲೊಡ್ಡುವಂತೆ ಬೆಳೆದುಬರುತ್ತಿದೆ.

ಅಗ್ನಿಕರ್ಮ: ಕ್ಷಾರ ಕರ್ಮಕ್ಕಿಂತಲೂ ಅಗ್ನಿಕರ್ಮವು ಅತ್ಯಧಿಕ ತೀಕ್ಷ್ಣ ಗುಣವುಳ್ಳದ್ದಾಗಿದೆ. ಅಗ್ನಿಯಿಂದ ಸುಡಲ್ಪಡುವ ಭಾಗವು ಸಮೂಲನಾಶವಾಗುತ್ತದೆ. ಈ ಕಾರ್ಯ ಕ್ಷಾರ ಶಸ್ತ್ರಕರ್ಮಗಳಿಂದ ಸಾಧ್ಯವಾಗದು. ಭಾರತದಲ್ಲಿ ‘ಬರೆ ಹಾಕುವ ಪದ್ಧತಿ’ ಬಹುಕಾಲದಿಂದಲೂ ಪ್ರಚಲಿತವಿದೆ. ಅನೇಕರು ಇದನ್ನು ಮೂಢನಂಬಿಕೆ ಎನ್ನುವರು. ಆದರೆ ಇದು ಕೂಡ ಒಂದು ವೈಜ್ಞಾನಿಕ-ಕರ್ಮವೆಂದು ಇದೀಗ ಮನವರಿಕೆಯಾಗಿದೆ. ಇಂದಿನ ಆಧುನಿಕ ಶಸ್ತ್ರಕ್ರಿಯಾ ವಿಧಾನದಲ್ಲಿ ಕೂಡ ಇದಕ್ಕೊಂದು ಮಹತ್ವದ ಸ್ಥಾನವಿದೆ. ವಿದ್ಯುತ್ ಶಕ್ತಿಯಿಂದ ಸುಡುವ (Cauterization)ಕ್ರಿಯೆಯು ಒಂದು ವಿಧದಲ್ಲಿ ಅಗ್ನಿಕರ್ಮವೇ ಆಗಿದೆ. ಈ ವಿಷಯದ ಬಗೆಗೆ ಹೆಚ್ಚಿನ ವಿವರಗಳನ್ನು ಶಾಸ್ತ್ರದಲ್ಲಿ ನೋಡಬಹುದು.

ಶಸ್ತ್ರ ಚಿಕಿತ್ಸೆ: ಭಾರತದಲ್ಲಿ ಈ ಶಸ್ತ್ರಚಿಕಿತ್ಸಾ ಪರಂಪರೆ ಜೈನ-ಬೌದ್ಧರ ಕಾಲದಲ್ಲಿ ಅಹಿಂಸೆಯ ಪರಾಕಾಷ್ಠತೆಯ ಕಾರಣವಾಗಿ ಅವನತಿಗೊಂಡಿತು ಎಂದು ಈಗಲೂ ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಆದರೆ ಆ ಮಾತು ತಪ್ಪು ಎಂದು ಅನೇಕ ಜೈನಾಚಾರ್ಯರು ಶಲ್ಯ (Surgery), ಶಾಲಾಕ್ಯ (ENT, Eye, Dental) ವಿಷಯಗಳ ಬಗೆಗೆ ಪೂಜ್ಯಪಾದರು, ಪಾತ್ರಕೇಸರಿ ಮುಂತಾದವರು ಗ್ರಂಥರಚಿಸಿದುದರ ಬಗೆಗೆ ಈಗಾಗಲೇ ತಿಳಿದಿದ್ದೇವೆ. ಮೂತ್ರಾಶ್ಮರಿ, ಭಗಂದರ (Fistula in-ano), ಆಂತ್ರವೃದ್ಧಿ (Hernia), ಮೂಲವ್ಯಾಧಿ (Heamorrhoids), ವಿದ್ರಧಿ(Abscess), ಅರ್ಬುದ(Tumour), ದುಷ್ಟಾರ್ಬುದ (Malignant tumour)ಮೂಡಗರ್ಭ ಮೊದಲಾದ ವಿಕಾರಗಳಿಗೆ ಅಷ್ಟವಿಧ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರು ಎಂಬುದಾಗಿ ತಿಳಿದುಬರುತ್ತದೆ. ರೋಗಿಯನ್ನು ಅನವರತ ನೋವಿನಿಂದ ಪಾರುಮಾಡಲು ಶಸ್ತ್ರಚಿಕಿತ್ಸೆಯಿಂದ ಸಾಧ್ಯವಾಗಬಹುದಾದರೆ ಅದು ಜೈನಧರ್ಮದ ವಿಚಾರದಿಂದ ಹಿಂಸೆ ಎನಿಸುವುದಿಲ್ಲ.

ಶಸ್ತ್ರಚಿಕಿತ್ಸೆಗಾಗಿ ಬೇಕಾಗುವ ಶಸ್ತ್ರ-ಯಂತ್ರಗಳನ್ನು ಚಿನ್ನ,ಬೆಳ್ಳಿ, ತಾಮ್ರ ಮುಂತಾದ ಲೋಹಗಳಿಂದ ಸಿದ್ಧಪಡಿಸಿಕೊಳ್ಳುವ ರೂಢಿ ಇದ್ದಿತು. ವಿವಿಧ ೨೦ ನಮೂನೆಯ ಶಸ್ತ್ರಗಳು, ಯಂತ್ರಗಳು ೧೦೧ ವಿಧಗಳ ವರ್ಣನೆ ಶಾಸ್ತ್ರದಲ್ಲಿದೆ. ಇವುಗಳಲ್ಲೆಲ್ಲ ವೈದ್ಯನ ‘ಕೈ’ಯೇ ಪ್ರಥಮ ಮಂತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಕೈ ಇಲ್ಲದಿದ್ದರೆ ಶಸ್ತ್ರಚಿಕಿತ್ಸೆಯೇ ಸಾಧ್ಯವಿಲ್ಲ.

ಅಷ್ಟವಿಧ ಶಸ್ತ್ರ ಕರ್ಮಗಳು

೧. ಛೇದ್ಯಂ – ವಿಶೇಷವಾಗಿ ಕತ್ತರಿಸಲ್ಪಡುವ ಮೂಲವ್ಯಾಧಿ ಮೊದಲಾದ ಮಾಂಸಾಂಕುರಗಳಲ್ಲಿ

೨. ಭೇದ್ಯಂ – ಶಸ್ತ್ರದಿಂದ ಕೊರೆದು ಕಿವು, ದುಷ್ಟ ರಕ್ತಾದಿಗಳು ಹೊರಕ್ಕೆ ಸುರಿಯುವಂತೆ ಕಾರ್ಯ – ವಿದ್ರಧಿ (ದೊಡ್ಡ ಕುರು)ಗಳಲ್ಲಿ.

೩. ಲೇಖ್ಯಂ – ರೋಹಿಣ್ಯಾದಿ ಚಿಕಿತ್ಸೆಯಲ್ಲಿ ಲೇಖನ ಕ್ರಿಯೆ(ಕರೆಯುವುದು) ಮಾಡುವುದು.

೪. ವೇದ್ಯಂ – ಸಣ್ಣ ಮೊನೆಯುಳ್ಳ ಶಸ್ತ್ರವನ್ನು ಸಿರೆಗಳಿಗೆ ಚುಚ್ಚಿ ರಕ್ತಸ್ರಾವ ಮಾಡಿಸುವುದು.

೫. ಏಷ್ಯಂ – ನಾಡೀ ವ್ರಣದೊಳಗೆ ನುಗ್ಗಿಸಿ ಅದು ಎಲ್ಲಿಯವರೆಗೆ ಹಬ್ಬಿರುವುದು ಎಂದು ತಿಳಿಯುವ ಬಗೆ.

೬. ಆಹಾರ್ಯಂ – ಅಶ್ಮರೀ, ಶರ್ಕರಾದಿಗಳನ್ನು ಹೊರಕ್ಕೆ ತೆಗೆಯುವ ವಿಧಾನ.

೭. ವಿಸ್ರಾವ್ಯಂ – ವಿದ್ರಧಿ, ಕುಷ್ಠಾದಿ ರೋಗಗಳಲ್ಲಿ ಕೀವು, ಹೊಲಸು ರಕ್ತಗಳನ್ನು ಹೊರಕ್ಕೆ ಸುರಿಯುವಂತೆ ಮಾಡುವ ವಿಧಾನ.

೮. ಸೀವ್ಯಂ- ಮುಖ್ಯ ಶಸ್ತ್ರಚಿಕಿತ್ಸೆಯಾದ ಬಳಿಕ ವ್ರಣವನ್ನು ಶುದ್ಧಗೊಳಿಸಿ ಅದರ ಎರಡೂ ಮುಖಭಾಗಗಳನ್ನು ಹೊಲೆದು ಗಾಯ ಮುಚ್ಚುವ ಕ್ರಿಯೆ.

ಶಸ್ತ್ರಚಿಕಿತ್ಸಕನ ಲಕ್ಷಣಗಳು: ಈತನು ಭಯ ರಹಿತನಾಗಿದ್ದು, ಶೀಘ್ರವಾಗಿ ಕೆಲಸ ಮಾಡುವವನೂ, ಹರಿತವಾದ ಶಸ್ತ್ರಗಳುಳ್ಳವನೂ, ಕೆಲಸ ಮಾಡುವಾಗ ಮೈ ಬೆವರದಿರುವವನೂ, ಮೈ ನಡುಗದಿರುವ ಸ್ವಭಾವದವನೂ ಆಗಿರಬೇಕು. ಈತನು ಯಾವುದೇ ನಿರ್ಣಯವನ್ನು ಸಂಶಯಿತವಾಗಿ ತೆಗೆದುಕೊಳ್ಳಬಾರದುಜ. ಈತನಿಗೆ ಮುಖ್ಯವಾಗಿ ಸಿಂಹದಂತಹ ಹೃದಯಗಾರಿಕೆ ಹಾಗೂ ಸ್ತ್ರೀಯ ಕೋಮಲ ಬೆರಳುಗಳಿರಬೇಕು.

ಶಸ್ತ್ರ ಕರ್ಮದಲ್ಲಿ ವಿಧ: ಪೂರ್ವ ಕರ್ಮ (Pre operative), ಪ್ರಧಾನ ಕರ್ಮ (Main surgery) ಹಾಗೂ ಪಾಶ್ಚಾತ್ ಕರ್ಮ (post operative) ಎಂದು ಮೂರು ವಿಭಾಗಗಳನ್ನು ಈಗಿನಂತೆ ಆಗಲೂ ಮಾಡಿಕೊಂಡಿದ್ದರು. ಪ್ರತಿಯೊಂದು ಹಂತಕ್ಕೂ ವಿಶೇಷ ಮಹತ್ವ ನೀಡಲಾಗುತ್ತಿತ್ತು. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಶಸ್ತ್ರ ಚಿಕಿತ್ಸೆಯಾದ ಬಳಿಕ ಅವರು ಹಚ್ಚುತ್ತಿದ್ದ ತೈಲ, ಮುಲಮುಗಳಿಂದ ಗಾಯವು ಬೇಗನೆ ಮಾಯುವುದರೊಂದಿಗೆ ಅದರ ಕಲೆಯೂ ಉಳಿಯುತ್ತಿರಲಿಲ್ಲ.

ಅರವಳಿಕೆ : ಶಸ್ತ್ರ ಕ್ರಿಯೆಗಳನ್ನು ಮಾಡುವಾಗ ಈಗಿರುವಂತೆ ಆಗ ಅರವಳಿಕೆ ಕೊಡುವ ವಿಧಾನ ಗೊತ್ತಿರಲಿಲ್ಲವೆಂದು ಎಲ್ಲರು ಸಂಶಯ ಪಡುವುದು ಸಹಜ. ರೋಗಿಯು ವೇದನೆಯನ್ನು ತಾಳಿಕೊಳ್ಳುವ ಹಾಗಿದ್ದರೆ ಇಬ್ಬರು-ಮೂವರು ಆತನನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಿದ್ದರು. ಸ್ಥಾನಿಕವಾಗಿ ಸಂವೇದನೆ ಗೊತ್ತಾಗದಂತೆ ಮದಗುಣಿಕೆ ಎಲೆಗಳನ್ನು ಈ ಜಾಗೆಯಲ್ಲಿ ಶಸ್ತ್ರಚಿಕಿತ್ಸೆಗೆ ಮೊದಲು ತಿಕ್ಕುತ್ತಿದ್ದರು. ಇಲ್ಲವೆ ಮಂಜುಗಡ್ಡೆ ಇಟ್ಟು ಸಂಜ್ಞೆ ಗೊತ್ತಾಗದಂತೆ ಮಾಡುತ್ತಿದ್ದರು. (ಪ್ರಮುಖವಾದ ಶಸ್ತ್ರಚಿಕಿತ್ಸೆ ಹಾಗೂ ಬಹಳ ಹೊತ್ತಿನ ಶಸ್ತ್ರ ಚಿಕಿತ್ಸೆಗೆ ಪ್ರಬಲವಾದ ಮದ್ಯ, ಆಸವಾರಿಷ್ಟಗಳನ್ನು ರೋಗಿಗೆ ಮೊದಲು ಕುಡಿಸಿ ಪ್ರಜ್ಞೆ ಹೋದ ಬಳಿಕ ಕಾರ್ಯ ಪ್ರಾರಂಭಿಸುತ್ತಿದ್ದರು. ಶಸ್ತ್ರಕ್ರಿಯೆ ಪೂರ್ಣ ಮುಗಿದ ಬಳಿಕ ರೋಗಿಗೆ ಸಂಜೀವಿನಿ ಎಲೆರಸ ಮೂಸಿಸಿ ಎಚ್ಚರಗೊಳಿಸುತ್ತಿದ್ದರು.)

ಶಸ್ತ್ರಚಿಕಿತ್ಸಾ ಕೊಠಡಿ: ಈ ಕೇಂದ್ರ (operation theatre) ದ ವಿವರಣೆ ಕೂಡ ಶಾಸ್ತ್ರದಲ್ಲಿ ತುಂಬ ಸುಂದರವಾಗಿ ವರ್ಣಿತವಾಗಿದೆ. ಶಸ್ತ್ರ ಚಿಕಿತ್ಸೆಗೆ ಮೊದಲು ವೈದ್ಯನು ಆ ಕೋಠಡಿಯಲ್ಲಿ ಯೋಗ್ಯವಾದ ಔಷಧಿಗಳು, ಶಾಸ್ತ್ರಗಳು, ಯಂತ್ರಗಳು, ತಣ್ಣಗಿನ ಹಾಗೂ ಬಿಸಿಯಾದ ಸ್ವಚ್ಛವಾದ ನೀರು, ಅಗ್ನಿಕರ್ಮದ ವ್ಯವಸ್ಥೆ ಹಾಗು ಸ್ನೇಹಪೂರ್ವಕವಾಗಿ ರೋಗಿಯನ್ನು ನೋಡಿಕೊಳ್ಳುವ ಮೃದು ಸ್ವಭಾವದ ಪರಿಚಾರಕ (nurse)ರು – ಇ ಎಲ್ಲ ಅಂಶಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ನಂತರ ರೋಗಿಯನ್ನು ಸಿದ್ಧಪಡಿಸಿಕೊಂಡು ಶಸ್ತ್ರಚಿಕಿತ್ಸಾ ಕೋಠಡಿಗೆ ಕರೆತರಬೇಕು. (ಕ.ಅ.೨೦, ಶ್ಲೋಕ.೫೬) ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಇಲ್ಲವೇ ಸಿರಾವ್ಯಧ(venisection) ಮಾಡುವಾಗ ಅತಿಯಾಗಿ ರಕ್ತ ಹರಿದು ಹೋಗದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ.

ಈಗಿನಂತೆ ಆ ಕಾಲದಲ್ಲಿ ಸೌಲಭ್ಯಗಳಿರದಿದ್ದರೂ ಲಭ್ಯವಿರುವ ಪರಿಕರಗಳನ್ನು ಒಂದುಗೂಡಿಸಿ ಮೂಢಗರ್ಭ, ದುಷ್ಟಾರ್ಬುದ, ಮೆದುಳಿನಲ್ಲಿನ ಗಡ್ಡೆ, ಸುಲಭವಾಗಿ ಹೆರಿಗೆ ಆಗದಿದ್ದಾಗ ಹೊಟ್ಟೆ ಸೀಳಿ(ಗರ್ಭಾಶಯ) ಮಗುವನ್ನು ಹೊರ ತೆಗೆಯುವ ವಿಧಾನ, ಅನೇಕ ವಿಧ ಪ್ರಸಾಧನ ಶಸ್ತ್ರ ಚಿಕಿತ್ಸೆ (plastic surgery) ಮುಂತಾದವುಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತಿದ್ದಿತು. ಕೋಠಡಿಯಲ್ಲಿ ಕ್ರಿಮಿಹರಣ ವಿಧಾನ (Aseptic)ವೂ ಆಗ ಜಾರಿಯಲ್ಲಿತ್ತು. ಅನೇಕ ವಿಧ ಬಂಧಗಳನ್ನು (Bandages) ಕೂಡ ಗಾಯಗಳಿಗೆ ಹಾಕುತ್ತಿದ್ದರು.

—-

  • ಕಲ್ಯಾಣಕಾರಕ ಅಧ್ಯಾಯ. ೮ ಹಾಗೂ ೨೧.
  • ಅರವಳಿಕೆ ಉಂಟುಮಾಡುವುದರ ಬಗ್ಗೆ ಶಾಸ್ತ್ರದಲ್ಲಿ ಸ್ಪಷ್ಟವಾದ ನಿರ್ದೇಶನವಿಲ್ಲ. ಇಲ್ಲಿ ಹೇಳಿರುವುದು ಆಯುರ್ವೇದದಲ್ಲಿ ರೂಢಿಯಲ್ಲಿದ್ದ ಪದ್ಧತಿ.