ಜೈನ ಸಿದ್ಧಾಂತಗಳಿಗನುಸರಿಸಿ ೧೪ ವಿಧ ಜೀವಗಳನ್ನು ಹೇಳಲಾಗಿದೆ. ಇದರಲ್ಲಿ ಏಕೇಂದ್ರಿಯ, ದ್ವೀಂದ್ರಿಯ, ತ್ರೀಂದ್ರಿಯ, ಚತುರಿಂದ್ರೀಯ, ಪಂಚೇಂದ್ರಿಯಗಳೆಲ್ಲ ಒಳಗೊಳ್ಳುತ್ತವೆ.

ಯಾವಕ್ಕೆ ಆಹಾರ, ಶರೀರ, ಇಂದ್ರಿಯ, ಶ್ವಾಸೋಚ್ಛಾಸ, ಮಾತು ಹಾಗೂ ಮನಸ್ಸು ಈ ಆರು ಅಂಶಗಳು ಪೂರ್ಣವಿದ್ದರೆ ಅವಕ್ಕೆ ಪರ್ಯಾಪ್ತ ಜೀವಿ ಎನ್ನುತ್ತಾರೆ. ಪೂರ್ಣವಾಗಿಲ್ಲದಿದ್ದರೆ ಅವಕ್ಕೆ ಅಪರ್ಯಾಪ್ತ ಜೀವಿ ಎನ್ನುತ್ತಾರೆ. ಇವುಗಳಲ್ಲಿ ಪರ್ಯಾಪ್ತ ಜೀವಿ ಶ್ರೇಷ್ಠವೆನಿಸಿದೆ. ಯಾರಿಗೆ, ಹಿತ, ಅಹಿತ, ಯೋಗ್ಯ-ಅಯೋಗ್ಯ ಗುಣ ದೋಷಾದಿಗಳು ತಿಳುವಳಿಕೆಗೆ ಬಂದಿವೆಯೋ ಅವರಿಗೆ ‘ಸಂಜ್ಞ’ ಎನ್ನುತ್ತಾರೆ. ಇದಿಲ್ಲದಿದ್ದವರಿಗೆ ‘ಅಸಂಜ್ಞ’ ಎನ್ನುತ್ತಾರೆ. ಇವರಲ್ಲಿ ‘ಸಂಜ್ಞ’ಶ್ರೇಷ್ಠವೆನಿಸಿದ್ದಾರೆ. ‘ಪಂಚೇಂದ್ರಿಯ’ ‘ಸಂಜ್ಞ’ಗಳಲ್ಲಿ ಸಕಲ ರೀತಿಯಿಂದ ಧರ್ಮಾಚರಣೆ ಮಾಡಲು ಈ ಧರ್ಮಕ್ಷೇತ್ರದಲ್ಲಿ ಜನ್ಮವೆತ್ತಿದ್ದು ಇಂತಹ ಧಾರ್ಮಿಕ ಮನುಷ್ಯರು ಸರ್ವಶ್ರೇಷ್ಠರೆನಿಸುತ್ತಾರೆ. ಇಂತಹ ಧರ್ಮಾನುರಾಗತಿ ರೋಗಿಗಳ ಆಯುಷ್ಯ, ವಯಸ್ಸು, ಅಗ್ನಿಬಲ, ಶಕ್ತಿ, ದೇಶ, ಅನುಕೂಲತೆ, ಪ್ರಕೃತಿಗಳನ್ನು ಗಮನಿಸಿ ಚಿಕಿತ್ಸೆ ಕೊಡಬೇಕು.

ಚಿಕಿತ್ಸೆಯ ನಾಲ್ಕು ಪಾದಗಳು: ಚಿಕಿತ್ಸೆಗಾಗಿ ವೈದ್ಯ, ಔಷಧಿಗಳು, ಪರಿಚಾರಕ ಹಾಗೂ ರೋಗಿ ಎಂಬ ನಾಲ್ಕು ಪಾದಗಳು ಅತ್ಯವಶ್ಯವೆನಿಸಿದೆ. ಇವುಗಳಲ್ಲಿ ಪ್ರಧಾನ ಪಾತ್ರ ವೈದ್ಯನದು.

. ವೈದ್ಯ: ತತ್ವಸಮೇತನಾಗಿ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದವನೂ, ಪ್ರತ್ಯಕ್ಷ ಅನುಭವವುಳ್ಳವನೂ ರೋಗಗಳನ್ನು ದೂರ ಮಾಡಲು ಸ್ವಶಕ್ತಿಯಿಂದ ಔಷಧ ಕಲ್ಪಗಳನ್ನು ಯೋಜಿಸತಕ್ಕವನೂ, ಶಸ್ತ್ರಕ್ರಿಯೆಯಲ್ಲಿ ಹಸ್ತಲಾಘವವುಳ್ಳವನೂ,ಶುಚಿಯಾಗಿರುವವನೂ, ಶೂರನೂ, ಪ್ರಶಸ್ತವಾದ ಔಷಧಗಳನ್ನು ಹೊಂದಿದವನು, ಚುರುಕಾದ ಆಲೋಚನ ಶಕ್ತಿವುಳ್ಳವನೂ, ವಿಚಾರವಂತನೂ, ಛಲ ಸ್ವಭಾವದವನೂ, ಪಂಡಿತನೂ, ಸತ್ಯ-ಧರ್ಮಗಳಲ್ಲಿ ಆಸಕ್ತಿವುಳ್ಳವನೂ, ಯೋಗ್ಯ ವೈದ್ಯನೆನಿಸುತ್ತಾನೆ. ಈ ರೀತಿ ಗುಣಗಳಿಂದ ಕೂಡಿದ ವೈದ್ಯನು ವ್ಯಾಧಿಯು ತೀವ್ರ ಸ್ವರೂಪದಲ್ಲಿದ್ದಾಗಲೂ ಬೇಗನೆ ಗುಣಪಡಿಸುವ ಶಕ್ತಿ ಹೊಂದಿರುತ್ತಾನೆ.

. ರೋಗಿ: ಅಧಿಕ ಆಯುಷ್ಯವನ್ನು ಹೊಂದಿದವನೂ, ಸಹನ ಶಕ್ತಿಯುಳ್ಳವನೂ, ಸಾಧ್ಯವಾದ(ಚಿಕಿತ್ಸೆಗೆ) ರೋಗ ಲಕ್ಷಣಗಳನ್ನು ಹೊಂದಿದವನೂ, ಗುಣವುಳ್ಳವನೂ, ಧೃತಿವಂತನೂ, ಆಸ್ತಿಕನೂ, ವೈದ್ಯರ ಮಾತುಗಳನ್ನು ಪಾಲಿಸುವವನೂ ಉತ್ತಮ ರೋಗಿ ಎನಿಸುತ್ತಾನೆ.

. ಔಷಧ: ಪ್ರಶಸ್ತವಾದ ಸ್ಥಳದಲ್ಲಿ ಬೆಳೆದು ಒಳ್ಳೆಯ ದಿನದಲ್ಲಿ ಕೀಳಲ್ಪಟ್ಟು ಯುಕ್ತ ಪ್ರಮಾಣದ್ದಾಗಿಯೂ, ಪ್ರಿಯಕರವಾಗಿಯೂ, ಸಹಜವಾದ ಪರಿಮಳ, ವರ್ಣ ಮತ್ತು ರಸದಿಂದ ಕೂಡಿದ್ದಾಗಿಯೂ, ದೋಷನಾಶಕರವಾಗಿಯೂ, ಸಂಕಟವನ್ನುಂಟು ಮಾಡದ್ದೂ, ಚಿಕಿತ್ಸೆಯಲ್ಲೆ ವ್ಯತ್ಯಾಸವಾದಾಗಲೂ ದೋಷವನ್ನುಂಟು ಮಾಡದ್ದೂ, ರೋಗಿಯನ್ನು ಚೆನ್ನಾಗಿ ಪರೀಕ್ಷಿಸಿ ತಕ್ಕ ಕಾಲದಲ್ಲಿ ಕೊಡಲ್ಪಟ್ಟಿದ್ದಾಗಿಯೂ ಇರುವ ಔಷಧವೇ ಶ್ರೇಷ್ಠವೆಂದೂ ತಿಳಿಯಬೇಕು.

. ಪರಿಚಾರಕ(ಕಿ): ರೋಗಿಯಲ್ಲಿ ಅಂತಃಕರಣವುಳ್ಳವನೂ, ರೋಗಿಯನ್ನು ನಿಂದಿಸುವ ಸ್ವಭಾವವಿಲ್ಲದವನೂ, ಬಲವಂತಲೂ, ರೋಗಿಯ ಪಾಲನೆಯಲ್ಲಿ ಆಸಕ್ತನೂ, ವೈದ್ಯನ ಮಾತುಗಳನ್ನು ನಡೆಸತಕ್ಕವನೂ, ಹೆಚ್ಚು ಶ್ರಮವಹಿಸಿದರೂ ದಣಿಯದವನು, ಯೋಗ್ಯ ಪರಿಚಾರಕ ಎನಿಸಿಕೊಳ್ಳುತ್ತಾನೆ. ಪುರಾತನ ಕಾಲದಲ್ಲಿ ಪುರುಷರೇ ಪರಿಚಾರಕರಾಗಿರುತ್ತಿದ್ದರು.ಫ್ಲಾರೆನ್ಸ ನೈಟಿಂಗೇಲಳ ಕಾಲದಿಂದ ಸ್ತ್ರೀಯರು ರೋಗಿಯ ಪರಿಚಾರಕಿಯರಾಗಿರುತ್ತಿದ್ದಾರೆ. ಪುರುಷರಿಗಿಂತಲೂ ಸೂಕ್ಷ್ಮ ಸ್ವಭಾವದವರೂ, ಕರುಣಾಳುಗಳು, ಸ್ತ್ರೀಯರೇ ಆಗಿರುತ್ತಾರೆ. ಆದ್ದರಿಂದ ರೋಗಿ ಉಪಚಾರಕ್ಕೆ ಇವರೇ ಯೋಗ್ಯ ಪರಿಚಾರಕಿಯರೆನಿಸುವರು.

ಚಿಕಿತ್ಸೆಗೆ ಮುನ್ನ: ಯಾವುದೇ ಪ್ರಾಣಿಯಾದರೂ ಅದು ಸಾಯುವ ಮುನ್ನ ಕೆಲ ಮರಣ ಸೂಚಕ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಆದ್ದರಿಂದ ವೈದ್ಯನು ರೋಗಿ ಚಿಕಿತ್ಸೆಗೆ ಮುನ್ನ ಲಕ್ಷಣಗಳನ್ನು ಸರಿಯಾಗಿ ನೋಡಿ ಅರ್ಥ ಮಾಡಿಕೊಳ್ಳಬೇಕು. ಶುಭಾಶುಭ ಶಕುನಗಳನ್ನೂ ನೋಡಿಕೊಳ್ಳಬೇಕು. ಕೆಲ ಸಂದರ್ಭಗಳಲ್ಲಿ ರೋಗಿಯ ಚಾತಕವನ್ನೂ(ಹಸ್ತ ಸಾಮುದ್ರಿಕ) ಪರೀಕ್ಷಿಸಬೇಕಾಗಬಹುದು. ಇವನ್ನೆಲ್ಲ ಗಮನಿಸಿಯೇ ಚಿಕಿತ್ಸೆ ಪ್ರಾರಂಭಿಸಿದರೆ ಯಶಸ್ಸು ತಾನಾಗಿಯೇ ದೊರಕುತ್ತದೆಂದು ಆಚಾರ್ಯರ ಅಭಿಪ್ರಾಯ. ವೈದ್ಯನು ಯಾವಾಗಲೂ ತನ್ನ ಕೀರ್ತಿಯನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದ್ದಾರೆ.

ರೋಗಗಳು: ಜನರಿಗೆ ದುಃಖವನ್ನುಂಟು ಮಾಡುವ ವಿಕಾರಗಳಿಗೆ ವ್ಯಾಧಿಗಳೆನ್ನುತ್ತಾರೆ. ಈ ರೋಗಗಳು ಆಧ್ಯಾತ್ಮಿಕ, ಅದಿಭೌತಿಕ ಹಾಗೂ ಅಧಿದೈವಿಕಗಳೆಂದು ಮೂರು ವಿಧ. ಈ ರೋಗಗಳು ಬರುವುದಕ್ಕೆ ಶರೀರಸ್ಥ ತ್ರಿದೋಷಗಳ ಅಸಾಮ್ಯಾವಸ್ಥೆಯೇ ಕಾರಣವಾಗಿದೆ. ಈ ದುಷ್ಟ ದೋಷಗಳು ನಂತರ ಸಪ್ತ ಧಾತುಗಳನ್ನು ಮಲಗಳನ್ನು ಕೆಡಿಸುತ್ತವೆ.

ರಸದೋಷಜ ವ್ಯಾಧಿಗಳು: ಆಹಾರದಲ್ಲಿ ಉದಾಸೀನತೆ, ಅರುಚಿ, ಅಜೀರ್ಣ, ಮೈ ಒಣಗುವಿಕೆ, ಜ್ವರ, ಬಿಕ್ಕಟ್ಟು, ತೃಪ್ತಿ, ಮೈಭಾರ, ಹೃದಯರೋಗ, ಪಾಂಡುರೋಗ, ದ್ವಾರಗಳ ತಡೆ, ಕೃಶತೆ, ಬಾಯಿ ಒಣಗುವುದು, ಅಂಗಗಳ ಜಾಡ್ಯ, ಕಾಲಕ್ಕೆ ಮೊದಲೇ ನರೆ ಕಾಣುವುದು ರಸದೋಷಜ ವ್ಯಾಧಿಗಳೆನಿಸುತ್ತವೆ.

ರಕ್ತದೋಷಜ ವ್ಯಾಧಿಗಳು: ಕುಷ್ಟ ರೋಗ, ವಿಸರ್ಪ, ಬೊಕ್ಕೆ, ಕರಿ ದದ್ದು, ಕರಿಚಿಬ್ಬು, ತಿಲಕಾಲಕ (ಎಳ್ಳಿನಂತೆ ಕಲೆ) ಮಚ್ಚೆ ಬಂಗು, ಇಂದ್ರಲುಪ್ತ(ಕೂದಲುದುರುವುದು), ಪ್ಲೀಹರೋಗ, ಹುಣ್ಣು, ಗುಲ್ಮ, ವಾತರಕ್ತ, ಮೂಲವ್ಯಾಧಿ, ಅರ್ಬುದ, ಮೈನೋವು, ಅಸೃಗ್ಧರ, ರಕ್ತಪಿತ್ತ ಮುಂತಾದವು ರಕ್ತದೋಷಜ ವ್ಯಾಧಿಗಳಾಗಿವೆ.

ಮಾಂಸದೋಷಜ ವ್ಯಾಧಿ: ಆಸನ, ಬಾಯಿ, ಮೇಢ್ರಗಳು(ಜನನೇಂದ್ರಿಯ) ಬೆಂದು ಹೋಗುವುದು, ಅಧಿಮಾಂಸ, ಅರ್ಬುದ, ಅರ್ಶಸ್ಸು (ಮೂಲವ್ಯಾಧಿ) ಅಧಿಜಿಹ್ವ, ಉಪಜಿಹ್ವ, ಉಪಕುಶ(ದಂತಮೂಲ ರೋಗ) ಗಲಶುಂಡಿಕಾ, ಅಲಜಿ ಎಂಬ ನೇತ್ರರೋಗ, ಮಾಂಸ ಸಂಘಾತ, ತುಟಿರೋಗ, ಗಂಡಮಾಲೆ ಮುಂತಾದವು ಮಾಂಸದೋಷದಿಂದ ಉಂಟಾಗುತ್ತವೆ.

ಮೇದೋದೋಷಜ ವ್ಯಾಧಿಗಳು: ಗ್ರಂಥಿ, ಅಂಡವೃದ್ಧಿ (Hernia) ಗಲಗಂಡ, ಅರ್ಬುದ, ಮೇದಸ್ಸಿನಿಂದ ಉಂಟಾಗುವ ತುಟಿರೋಗ, ಮಧುಮೇಹ, ಅತಿಸ್ಥೂಲತೆ, ಅತಿ ಬೆವರು ಮುಂತಾದವು ಮೇದಸ್ಸಿನ ದೋಷದಿಂದ ಉಂಟಾಗತಕ್ಕ ವಿಕಾರಗಳಾಗಿವೆ.

ಅಸ್ಥಿ ದೋಷಜ ವ್ಯಾಧಿಗಳು: ಅಧಿಕವಾದ ಎಲುಬು, ಹಲ್ಲಿನ ಮೇಲೆ ಹಲ್ಲು ಬರುವುದು, ಎಲುಬಿನ ಸಿಡಿತ ಮತ್ತು ಶೂಲೆ, ಕುನಖ ಎಂಬ ಉಗುರಿಗೆ ಬರುವ ಕ್ಷುದ್ರರೋಗ – ಇವು ಅಸ್ಥಿ ದೋಷದಿಂದ ಬರುವ ರೋಗಗಳು.

ಮಜ್ಜಾ ದೋಷಜ ವ್ಯಾಧಿಗಳು: ಕಣ್ಣು ಕತ್ತಲೆ ಗೂಡಿಸುವುದು, ಮೂರ್ಛೆ, ಭ್ರಮೆ (ತಲೆ ತಿರುಗುವುದು) ಗಂಟುಗಳು ಭಾರವಾಗುವುದು, ತೊಡೆಯ ಮತ್ತು ಮೊಣಕಾಲಿನ ಮೂಲಗಳು ಸ್ಥೂಲವಾಗುವುದು. ಕಣ್ಣಿನಿಂದ ನೀರು ಸುರಿಯುವುದು. ಮುಂತಾದ ವಿಕಾರಗಳು ಮಜ್ಜಾದೋಷದಿಂದ ಬರುತ್ತವೆ.

ಶುಕ್ರದೋಷಜ ವ್ಯಾಧಿಗಳು: ನಪುಂಸಕತ್ವ, ಕಾಮಪ್ರಹರ್ಷವಿಲ್ಲದಿರುವುದು, ಶುಕ್ರಾಶ್ಮರಿ, ಶುಕ್ರಮೂತ್ರ, ಶುಕ್ರ ದೋಷ ಮುಂತಾದವು ಶುಕ್ರ ದೋಷದಿಂದ ಹುಟ್ಟುತ್ತವೆ.

ಮಲಾಯುತನ ವ್ಯಾಧಿಗಳು: ಚರ್ಮರೋಗಗಳು, ಮಲಬದ್ಧತೆ ಇಲ್ಲವೆ ಅತಿಸಾರ ಇವು ಮಲ ದೋಷದಿಂದ ಹುಟ್ಟಿಕೊಳ್ಳುತ್ತವೆ.

ಇಂದ್ರಿಯಾಯತನ ವ್ಯಾಧಿಗಳು: ಇಂದ್ರಿಯಗಳು (ಕರ್ಮೇಂದ್ರಿಯ – ಜ್ಞಾನೇಂದ್ರಿಯಗಳು) ಪ್ರವರ್ತಿಸದಿರುವುದು ಇಲ್ಲವೆ ಕ್ರಮತಪ್ಪಿ ಪ್ರವರ್ತಿಸುವುದು – ಇವು ಇಂದ್ರಿಯ ಸ್ಥಾನ ದೋಷದಿಂದ ಉಂಟಾಗುತ್ತವೆ.

ವ್ಯಾಧಿಗಳು ಅಸಂಖ್ಯೆಯ : ವ್ಯಾಧಿಗಳು ಬಹಳವಿರುವುದರಿಂದ ಅವನ್ನು ಗಣನೆ ಮಾಡಲು ಸಾಧ್ಯವಿರುವುದಿಲ್ಲ. ದೋಷಗಳಾದರೆ ಪರಿಮಿತ ಸಂಖ್ಯೆಯಲ್ಲಿವೆ. ಇಲ್ಲಿ ಮುಖ್ಯವಾಗಿ ರೋಗದ ಹೆಸರು ಇಲ್ಲವೇ ಇಂಥದೇ ರೋಗವೆಂದು ಗೊತ್ತಾಗದಿದ್ದರೂ ಅಲ್ಲಿರುವ ದೋಷ, ದೂಷ್ಯಗಳನ್ನು ಅರಿತುಕೊಂಡು ಚಿಕಿತ್ಸೆ ಮಾಡಬೇಕು.

ಸಾಂಕ್ರಾಮಿಕ ರೋಗಗಳು: ಮೈಥುನ, ಮೈ ಮುಟ್ಟುವುದು, ಹೊರಶ್ವಾಸ, ಒಟ್ಟಿಗೆ ಉಣ್ಣುವುದು, ಒಟ್ಟಿಗೆ ಮಲಗುವುದು, ಒಟ್ಟಿಗೆ೩ ಕುಳಿತುಕೊಳ್ಳುವುದು, ಬಟ್ಟೆ, ಹೂಮಾಲೆ, ಗಂಧಾದಿಲೇಪನ ಮೊದಲಾದ ಕಾರಣಗಳಿಂದ ಕುಷ್ಠವ್ಯಾಧಿ, ಜ್ವರ, ಕ್ಷಯ, ನೀರು ಸುರಿಯುವ ಕಣ್ಣಿನ ರೋಗ ಮತ್ತು ಅದಿದೈವಿಕವಾದ ಮೈಲಿ, ಗೊಬ್ಬರ ಮುಂತಾದ ರೋಗಗಳು ಒಬ್ಬರಿಂದ ಒಬ್ಬರಿಗೆ ಸಂಪರ್ಕ ಮಾಧ್ಯಮದಿಂದ ಅಂಟಿಕೊಳ್ಳುತ್ತವೆ.

ವ್ಯಾಧಿಭೇದಿಗಳು: ವ್ಯಾಧಿಗಳಲ್ಲಿ ಚಿಕಿತ್ಸೆಗೆ ಸಾಧ್ಯ, ಯಾಪ್ಯ ಹಾಗೂ ಅಸಾಧ್ಯಗಳೆಂದು ಮೂರು ಭೇದ. ಇವುಗಳನ್ನೆಲ್ಲ ಪುನಃ ಮೂರು ವಿಧವಾಗಿ ಪರೀಕ್ಷಿಸಬೇಕು. ರೋಗವು ಔಪಸರ್ಗಿಕವೋ, ಪ್ರಥಮ ವ್ಯಾಧಿಯೋ, ಇಲ್ಲವೆ ಅನ್ಯವ್ಯಾಧಿಯೋ ಅಂತ ಅವುಗಳೊಳಗೆ ಔಪಸರ್ಗಿಕ ಎನ್ನುವುದು ಮೊದಲು ಉತ್ಪನ್ನವಾದ ವ್ಯಾಧಿಯನ್ನನುಸರಿಸಿ ಅದರ ಮೂಲವಾಗಿ ಅನಂತರ ಬಂದ ವ್ಯಾಧಿಗೆ ‘ಉಪದ್ರವ’ ಎನ್ನುತ್ತಾರೆ. ಅನ್ಯ ಲಕ್ಷಣವೆನ್ನುವುದು ಅನಂತರ ಬರಲಿಕ್ಕಿರುವ ವ್ಯಾಧಿಯನ್ನು ಪ್ರಕಟಿಸುವ ವ್ಯಾಧಿ. ಇದಕ್ಕೆ ಪೂರ್ವರೂಪ ಎನ್ನತ್ತಾರೆ. ಅನಂತರ ಬರುವ ವ್ಯಾಧಿಯನ್ನು ಪ್ರಕಟಿಸುವುದು ಅನ್ಯಲಕ್ಷಣ. ಇದಕ್ಕೆ ‘ಪೂರ್ವ ರೂಪ’ ವೆಂತಲೂ ಕರೆಯುತ್ತಾರೆ. ಇವುಗಳಿಗೆ ಉಪದ್ರವದಿಂದ ಕೂಡಿದ ವ್ಯಾಧಿಗಳನ್ನು ಪರಸ್ಪರ ವಿರೋಧವಾಗದಂತೆ ಉಪಚರಿಸುವುದಾಗಲಿ, ಉಪದ್ರವವೇ ಬಲವಾಗಿದ್ದರೆ ಅದನ್ನು ಮುಖ್ಯವ್ಯಾಧಿಗೆ ವಿರೋಧವಿಲ್ಲದಂತೆ ಚಿಕಿತ್ಸಿಸುವುದಾಗಲೀ ಪ್ರಕ್ಕೇವಲ ವ್ಯಾಧಿಯಾದರೆ ಅದಕ್ಕೆ ತಕ್ಕ ಔಷಧೋಪಚಾರಗಳನ್ನು ಯೋಜಿಸುವುದಾಗಲೀ, ಅನ್ಯ ಲಕ್ಷಣ ಎಂಬುದಾದಲ್ಲಿ ಉತ್ಪನ್ನವಾದ ವ್ಯಾಧಿಯ ಪರಿಹಾರಕ್ಕೆ ಪ್ರಯತ್ನಿಸುವುದು ಯೋಗ್ಯ ಚಿಕಿತ್ಸೆ ಎನಿಸಲ್ಪಡುವುದು ಎಂದು ಆಯುರ್ವೇದ ಹೇಳುತ್ತದೆ.

ಒಂದು ರೋಗವು ಇನ್ನೊಂದು ರೋಗದ ವೇತವಾಗಿ ಪರಿಣಮಿಸಿದಾಗ ಎಂದರೆ ಜ್ವರದ ಸಂತಾಪದಿಂದ ರಕ್ತಪಿತ್ತ, ರಕ್ತಪಿತ್ತದಿಂದ ಜ್ವರ, ಇವೆರಡಿಂದಲೂ ಉಬ್ಬಸ, ಪ್ಲೀಹ ಬೆಳೆಯುವುದರಿಂದ ಉದರ ವ್ಯಾಧಿ, ಇದರಿಂದ ಶೋಪ(ಬಾವು), ಮೂಲ ವ್ಯಾಧಿಯಿಂದ ಹೊಟ್ಟೆಶೂಲ ಮತ್ತು ಗುಲ್ಮ, ನೆಗಡಿಯಿಂದ ಕೆಮ್ಮು, ಕೆಮ್ಮಿನಿಂದ ಉಬ್ಬಸ-ಕ್ಷಯ ಹೀಗೆ ಆದಾಗ ಮೊಲದನೆ ರೋಗವು ಗುಣವಾದರೂ ಆ ಎರಡನೆ ರೋಗವು ಗುಣವಾಗದೆ ಮತ್ತೊಂದು ರೋಗಕ್ಕೆ ಹೇತು(ಕಾರಣ) ವಾಗುತ್ತದೆ. ಆದ್ದರಿಂದ ಚಿಕತ್ಸೆ ಮಾಡುವಾಗ ಒಂದು ರೋಗವು ಮತ್ತೊಂದು ಹೇತುವಾದರೆ, ಆದರೂ ಇನ್ನೊಂದು ರೋಗವು ಅದರಿಂದ ಉತ್ಪತ್ತಿಯಾಗದಂತೆ ತಡೆ ಮಾಡುವುದೇ ಹಿತವಾದ ಚಿಕಿತ್ಸೆ ಎಂಬ ಮಾತನ್ನು ಲಕ್ಷ್ಯದಲ್ಲಿಡಬೇಕು.

ಚಿಕಿತ್ಸೆ ಮಾಡುವಾಗ ದೋಷಗಳು ಕ್ಷೀಣವಾಗಿದ್ದರೆ ಅದನ್ನು ಪುಷ್ಟಿಪಡಿಸಬೇಕು. ಪ್ರಕೋಪಗೊಂಡವುಗಳನ್ನು ಶಮನ ಮಾಡಬೇಕು. ವೃದ್ಧಿಗೊಂಡವುಗಳನ್ನು ತೆಗೆದುಬಿಡಬೇಕು. ಸಮವಾಗಿರುವ ದೋಷಗಳನ್ನು ಪಾಲಿಸಬೇಕಾದುದು ಒಳ್ಳೆಯ ಚಿಕಿತ್ಸೆ ಎನಿಸುವುದು.

ಚಿಕಿತ್ಸೆಯಲ್ಲಿ ಮುಖ್ಯವಾಗಿ ಸಂತರ್ಪಣ ಹಾಗೂ ಅಪತರ್ಪಣ ಎಂಬ ಎರಡು ಭೇದ. ಸಂತರ್ಪಣ ಚಿಕಿತ್ಸೆಗೆ ‘ಬೃಂಹಣ ಚಿಕಿತ್ಸೆ’ ಎನ್ನಲಾಗಿದ್ದರೆ ಅಪತರ್ಪಣಕ್ಕೆ ‘ಲಂಘನ ಚಿಕತ್ಸೆ’ ಎಂದಿದ್ದಾರೆ. ರೋಗಿಯು ಬೃಂಹಣನಾಗಿದ್ದರೆ ಅವನಿಗೆ ಲಂಘನ ಚಿಕಿತ್ಸೆ ಮಾಡಬೇಕು. ರೋಗಿಯು ಅಪತರ್ಪಣಕ್ಕೊಳಗಾಗಿದ್ದರೆ ಅಬನಿಗೆ ಬೃಂಹಣ (ಸಂತರ್ಪಣ) ಚಿಕತ್ಸೆ ಮಾಡಬೇಕು. ನಾಲ್ಕು ಪ್ರಕಾರದ ದೇಹಶೋಧನೆಗಳು (ವಮನ, ವಿರೇಚನ, ಶಿರೋವಿರೇಚನ, ನಿರೂಬಸ್ತಿ) ಬಾಯಾರಿಕೆ, ಗಾಳಿ, ಬಿಸಿಲು, ಪಾಚನ ದ್ರವ್ಯಗಳು, ಉಪವಾಸ, ವ್ಯಾಯಾಮ – ಇವು ಹತ್ತು ವಿಧ ಲಂಘನ ವಿಧಾನಗಳು – ಬೃಂಹಣ ಯೋಗಗಳಲ್ಲಿ ಸ್ನಾನ, ಮೈ ತಿಕ್ಕುವುದು, ನಿದ್ರೆ, ಮಧುರವಾದ ಸ್ನೇಹವಸ್ತಿಗಳು, ಸಕ್ಕರೆ, ಹಾಲು, ತುಪ್ಪ- ಇವೆಲ್ಲ ಒಳಗೊಳ್ಳುತ್ತವೆ.

ಪಂಚವಿಧ ಶೋಧನೆಗಳು: ದೋಷಗಳನ್ನು ಹೊರಗೆ ಹಾಕುವುದಕ್ಕೆ ೫ ವಿಧಗಳಾದ ಶೋಧನ ಕರ್ಮಗಳನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಚಿಕಿತ್ಸೆಗೆ ಮೊದಲು ಶರೀರದಲ್ಲಿ ಸಂಚಿತವಾದ ದೋಷಗಳನ್ನು ಹೊರ ಹಾಕುವುದರಿಂದ ದೇಹವು ಶುದ್ಧಿಗೊಂಡು ಇನ್ನಿತರ ಔಷಧೋಪಚಾರಗಳಿಗೆ ತಕ್ಕುದಾಗುತ್ತದೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ದೊರಕುತ್ತದೆ.

ಸ್ನೇಹಸ್ವೇದನ: ಪಂಚಶೋಧನ ವಿಧಾನವನ್ನು ಅನುಸರಿಸುವ ಮೊದಲು ರೋಗಿಯಲ್ಲಿನ ದೋಷಗಳನ್ನು ಕೋಷ್ಠಕ್ಕೆ ಒಂದೆಡೆಗೆ ತರುವ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅನಂತರ ಅವನ್ನೆಲ್ಲ ಸಮೂಲ ಹೊರಹಾಕಲು ಅನುಕೂಲವಾಗುತ್ತದೆ. ಚಿಕಿತ್ಸೆಗೆ ಮೊದಲು ರೂಕ್ಷರಾದವರಿಗೆಲ್ಲ ಸ್ನೇಹನ ಕ್ರಮಗಳಿಂದ ರೂಕ್ಷತೆಯನ್ನು ನಿವಾರಿಸುವಂತೆಯೂ, ಅತಿಸ್ನಿಗ್ಧರಾದವರಿಗೆ ರೂಕ್ಷಣ ಉಪಚಾರಗಳಿಂದ ಸ್ವೇದನ ಮಾಡಿಸಿ ಸ್ನಿಗ್ಧರಾದವರಿಗೆ ರೂಕ್ಷ ಉಪಚಾರಗಳಿಂದಲೂ ಸ್ವೇದನ ಮಾಡಿಸಿ ಸ್ನಿಗ್ಧತೆಯನ್ನು ದೂರು ಮಾಡುವಂತೆಯೂ ಯೋಜಿಸಬೇಕಾಗುತ್ತದೆ.

ಸ್ನೇಹನಕ್ಕೆ ಆಕಳತುಪ್ಪ ಹಾಗೂ ಎಳ್ಳೆಣ್ಣೆಗಳು ಶ್ರೇಷ್ಠಗುಣ ಹೊಂದಿವೆ. ಇವನ್ನು ಆಯಾ ಪರಿಸ್ಥಿತಿಗೆ ಅನುಸಾರವಾಗಿ ಪಾನ, ಅನುವಾಸನ, ನೆತ್ತಿಗೆ ಲೇಪಿಸುವುದು, ಶಿರೋಬಸ್ತಿ, ಉತ್ತರ ಬಸ್ತಿ, ನಸ್ಯ, ಕರ್ಣಪೂರಣ, ಅಭ್ಯಂಗ ಹಾಗೂ ಆಹಾರದಲ್ಲಿಯ ಸೇರಿಸುವುದು – ಈ ರೀತಿ ನಾನಾ ವಿಧಗಳಿಂದ ಸ್ನೇಹನ ಮಾಡಿಕೊಳ್ಳಬಹುದು. ಇಲ್ಲಿ ಬೃಂಹಣ ಕ್ರಿಯೆಗೆ, ಸ್ನೇಹನಕ್ಕೆ ಎಳ್ಳೆಣ್ಣೆ ಶ್ರೇಷ್ಠವೆನಿಸಿದರೆ ಔಡಲ ಎಣ್ಣೆ ವಿರೇಚನಕ್ಕೆ ಒಳ್ಳೆಯದು. ಈ ಸ್ನೇಹನ ಕ್ರಿಯೆಯನ್ನು ರೋಗಿಯ ಸ್ಥಿತಿ ನೋಡಿಕೊಂಡು ಪಿತ್ತ ಪ್ರಕೃತಿಯವರಿಗೆ ೩ ದಿವಸ, ಕಫ ಪ್ರಕೃತಿಯವರಿಗೆ ೫ ದಿವಸ, ವಾತಪ್ರಕೃತಿಯವರಿಗೆ ೭ ದಿವಸ ಹೀಗೆ ೩ ರಿಂದ ೭ ದಿವಸಗಳವರೆಗೆ ಮಾಡಿಸಿ ನಂತರ ಸ್ವೇದನ ಕ್ರಿಯೆ ಮಾಡಿಸಬೇಕಾಗುವುದು.

ಅಜೀರ್ಣ, ಉದರ ವ್ಯಾಧಿ, ಜ್ವರ, ದುರ್ಬಲತೆ, ಅರುಚಿ, ಸ್ಥೂಲತೆ, ಮೂರ್ಛೆ, ಮದ, ವಾಂತಿ, ಬಾಯಾರಿಕೆ, ಬಳಲಿಕೆ, ಮದ್ಯಪಾನದ ಆಯಾಸಗಳಿಂದ ಬಳಲುವವರಿಗೆ ವಿರೇಚನ ಮಾಡಿಸಿಕೊಂಡವರಿಗೆ, ವಾಂತಿ ಮಾಡಿಸಿಕೊಂಡವರಿಗೆ ಸ್ನೇಹಪಾನ ಮಾಡಿಸಬಾರದು. ಅಲ್ಲದೇ ಅಕಾಲ, ದಿನ ತುಂಬದೇ ಹೆರಿಗೆಯಾದ ಸ್ತ್ರೀಯರಿಗೆ ಸ್ನೇಹಪಾನ ಮಾಡಿಸಬಾರದು.

ಸ್ವೇದನ : ‘ಸ್ವೇದನ’ ಎಂದರೆ ಬೆವರಿಸುವುದು. ಇಡೀ ಶರೀರವನ್ನು ಬೆವರಿಸುವುದು ‘ಸರ್ವಾಂಗ ಸ್ವೇದ’ ವೆನಿಸುತ್ತದೆ. ಪಂಚಶೋಧಕ್ಕೆ ಇದೇ ಸ್ವೇದ ಕ್ರಿಯೆ ಬೇಕು. ಇನ್ನೊಂದು ಅವಯವ ಸ್ವೇದ – ಇವು ಆಯಾ ಅಂಗಗಳ ಸ್ವೇದ ಕ್ರಿಯೆಗೆ ಮಾತ್ರ ಅನುಕೂಲ. ಅಭ್ಯಂಗ ಸ್ನಾನ ಮಾಡಿಸದೆ ಸ್ವೇದನ ಕ್ರಿಯೆ ಮಾಡಿಸಬಾರದು. ಶರೀರದಲ್ಲಿ ಅಗ್ನಿ ಪ್ರಜ್ವಲವಾಗುತ್ತದೆ. ಶರೀರವು ಮೃದು ಹಾಗೂ ಕಾಂತಿಯುಕ್ತವಾಗುತ್ತದೆ. ಆಹಾರದಲ್ಲಿ ರುಚಿ ಉತ್ಪನ್ನವಾಗುತ್ತದೆ. ಶರೀರದ ಪ್ರತ್ಯೇಕ ಅವಯವಗಳು ತಮ್ಮ ಕೆಲಸಗಳನ್ನು ಯೋಗ್ಯ ರೀತಿಯಿಂದ ಮಾಡಲಾರಂಭಿಸುತ್ತವೆ. ಶರೀರ ಹಗುರವಾಗುತ್ತದೆ. ವಾತದ ಅನುಲೋಮವಾಗಿ ಮಲ-ಮೂತ್ರಗಳು ಸರಿಯಾಗಿ ಹೊರಹೋಗುವುವು. ನಿದ್ರೆಯು ಸರಿಯಾಗಿ ಆಗುವುದೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಸ್ವೇದನ ಕ್ರಿಯೆ: ಅಗಲವಾದ ಬಾಯಿಯುಳ್ಳ ಪಾತ್ರೆಯಲ್ಲಿ ಕುದಿಯುವ ನೀರನ್ನು ಅದರ ಮೇಲೆ ಮನುಷ್ಯರ ಭಾರ ತಡಯಬಲ್ಲ ಬಿದುರಿನ ಪಟ್ಟಿಗಳನ್ನಿಡಬೇಕು. ಮೈ ಮೇಲಿನ ದಪ್ಪವಾದ ಪ್ಲಾಸ್ಟಿಕ್ ಹಾಕಿ ಅಥವಾ ಮಳೆ ಅಂಗಿ (ರೇನಕೋಟ)ಯನ್ನು ಹೊದೆದು ಇಡೀ ದೇಹವನ್ನು ಮುಚ್ಚಿಕೊಳ್ಳಬೇಕು. ಅದರ ಮೇಲೊಂದು ಉಣ್ಣಿಯ ರಗ್ಗು ಹೊದೆದುಕೊಳ್ಳಬೇಕು. ಕುತ್ತಿಗೆಯ ಹತ್ತಿರ ಗಾಳಿ ಸಂಚಾರಕ್ಕೆ ಅವಕಾಶವಿರಬಾರದು. ಡಬರಿಯಲ್ಲಿರುವ ನೀರನಿಂದ ಉಗಿಯಾದ ಹವೆ ಹೊರಟು ದೇಹದಾದ್ಯಂತ ವ್ಯಾಪಿಸುವುದು. ಭಾರೀ ಪ್ರಮಾಣದಿಂದ ದೇಹದಿಂದ ಬೆವರು ಸುರಿದು ಹೋಗುವುದರಿಂದ ದೇಹದಲ್ಲಿ ಸಂಚಿತವಾದ ದ್ರವ ಸ್ವರೂಪದ ಮಲಾಂಶಗಳು ಹೊರಹೋಗುವುದು. ಈ ವಿಧಾನವನ್ನು ಎಲ್ಲರೂ ಮನೆಯಲ್ಲಿ ಮಾಡಲು ಸಾಧ್ಯ.

ಆಸ್ಪತ್ರೆಗಳಲ್ಲಾದರೆ ಇದಕ್ಕಾಗಿ ನಿರ್ಮಿಸಿದ, ಒಳಗೆ ಕೂಡ್ರಲು ಹಾಗೂ ಕುತ್ತಿಗೆಯನ್ನು ಹೊರಹಾಕಿ ಬಾಗಿಲು ಮುಚ್ಚಿಕೊಳ್ಳಲು ಅನುಕೂಲವಾದ ವ್ಯವಸ್ಥೆ ಇರುತ್ತದೆ. ಹೊರಗೆ ಸ್ಟೋವ್ ಇಲ್ಲವೆ ಗ್ಯಾಸಿನ ಮೇಲೆ ಕುಕುರನ್ನಿಟ್ಟು ಈ ಮೇಲ್ಭಾಗಕ್ಕೊಂದು ರಬ್ಬರ ಕೊಳವೆಯನ್ನು ಇಟ್ಟಿದ್ದು ಅದರ ಇನ್ನೊಂದು ಕೊನೆ ಸ್ವೇದ ಡಬ್ಬದೊಳಗಿರುತ್ತದೆ. ನೀರು ಕುದಿಯುತ್ತ ಹೋದಂತೆ ಅದರ ಹವೆಯು ಡಬ್ಬದೊಳಗೆ ಸೇರಿ ಅಲ್ಲಿ ಉಷ್ಣಾಂಶವುಂಟಾಗುತ್ತದೆ. ಇದರಿಂದ ಮೈ ಎಲ್ಲ ಬೆವರಲಾರಂಭಿಸುತ್ತದೆ. ಈ ವಿಧಾನ ಅನುಸರಿಸುವಾಗ ರೋಗಿ ತಲೆಯ ಮೇಲೊಂದು ಒದ್ದೆ ಬಟ್ಟೆಯನ್ನಿಡುತ್ತಾರೆ. ಉಷ್ಣತೆ ಹೆಚ್ಚಾಗುತ್ತ ಹೋದಂತೆ ರೋಗಿಗೆ ಶಕೆ, ಉಷ್ಣತೆಯಾಗತೊಡಗುತ್ತದೆ. ಆಗ ಅವನನ್ನು ಹೊರಗೆ ಕರೆದುಕೊಳ್ಳಬೇಕು.

ಶರೀರದಲ್ಲಿ ಪೆಟ್ಟು ಬಿದ್ದವರಿಗೆ, ಉಷ್ಣ ವಿಕಾರದಿಂದ ಪೀಡಿತರಾದವರಿಗೆ, ಪಾಂಡುರೋಗ, ನೀರಡಿಕೆ ಆದವರಿಗೆ, ಮಧುಮೇಹ, ಉಪವಾಸವಿದ್ದವರಿಗೆ, ರಕ್ತಪಿತ್ತ ವಿಕಾರವಾದವರು, ಅತಿಸಾರ ರೋಗ, ಜಲೋದರ, ವಿಷವಿಕಾರ, ಮೂರ್ಛೆ ರೋಗ ಗರ್ಭಿಣಿಯರಿಗೆ, ಪಿತ್ತ ಪ್ರಕೃತಿಯವರಿಗೆ ಸ್ವೇದನಕ್ರಿಯೆ ಮಾಡಿಸಬಾರದು.

ವಮನವಿಧಿ: ಅಮಾಶಯ ಹಾಗೂ ಮೇಲ್ಭಾಗಕ್ಕೆ ಸಂಚಿತವಾದ ದೋಷಗಳನ್ನು ಹೊರಹಾಕಲು ವಾಂತಿಯೊಂದೇ ಮಾರ್ಗ. ಸ್ನೇಹನ -ಸ್ವೇದನ ಮಾಡಿಸಿಕೊಂಡ ರೋಗಿಗೆ ಮಲಬದ್ಧತೆ ಇಲ್ಲದ್ದನ್ನು ನೋಡಿಕೊಂಡು, ಮರುದಿವಸ ವಮನಕ್ಕೆ ಔಷಧಿಯನ್ನು ಕೊಡುತ್ತೇವೆ ಎಂದು ಮೊದಲೇ ರೋಗಿಗೆ ತಿಳಿಸಿ ಅಭಷ್ಯಂದಿಕರ(ಮಲವಿಸರ್ಜನೆಯನ್ನುಂಟು ಮಾಡುವ) ಗಳಾದ ಆಹಾರದ್ರವ್ಯಗಳನ್ನು ಕೊಟ್ಟು ದೋಷಗಳನ್ನು ಮತ್ತಿಷ್ಟು ಪ್ರಕೋಪಗೊಳ್ಳುವಂತೆ ಮಾಡಬೇಕು. ಮರುದಿವಸ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಮನ ಮಾಡಿಸಬೇಕು. ಸೈಂಧವ ಲವಣ, ಬಜೆ, ಹಿಪ್ಪಲಿ – ಈ ಮೂರರ ಕಲ್ಕವನ್ನು ತ್ರಿಫಲಾ (ಅಳಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ) ಹಾಗೂ ಮದನಫಲವನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ರೋಗಿಯನ್ನು ಸರಿಯಾಗಿ ಕೂಡ್ರಿಸಿಕೊಂಡು ಅವನಿಗೆ ಮೇಲೆ ತಯಾರಿಸಿದ ಆರಿದ ಕಷಾಯವನ್ನು ಕುಡಿಸಬೇಕು. ನಂತರ ರೋಗಿಗೆ ಬಾಯಿಯಲ್ಲಿ ಬೆರಳನ್ನಾಡಿಸುತ್ತ ವಾಂತಿ ಮಾಡುವಂತೆ ಹೇಳಬೇಕು. ನಂತರ ವಾಂತಿ ಪ್ರಾರಂಭವಾಗುವುದು. ಮೊಟ್ಟ ಮೊದಲು ಕುಡಿದ ಕಷಾಯ, ನಂತರ ಕಫ, ಆ ಮೇಲೆ ಪಿತ್ತವು ಬೀಲಲಾರಂಭಿಸಿದರೆ ಚೆನ್ನಾಗಿ ದೋಷನಿರ್ಹರಣೆಯಾಗುತ್ತಿದೆ ಎಂದು ತಿಳಿಯಬೇಕು. ನಂತರ ಈ ರೋಗಿಗೆ ಪೇಯ, ಯೋಗ್ಯ ಅನ್ನಪಾನೀಯಗಳನ್ನು ಕೊಡಬೇಕು.

ವಾಂತಿಯು ಸರಿಯಾಗಿ ಆದರೆ ರೋಗಿಯ ಪ್ರಲಾಪ, ಶರೀರದ ಭಾರ, ಸ್ವರಭೇದ, ಅಧಿಕ ನಿದ್ರೆ, ಬಾಯಿಯಲ್ಲಿಯ ಅರುಚಿ, ಅಗ್ನಿಮಾಂದ್ಯ, ಮುಖ ದುರ್ಗಂಧ, ವಿದಾಹ, ಹೃದಯರೋಗ, ಕಫ, ಕಂಠರೋಧ, ವಿಷೋದ್ರೇಕ ಮೊದಲಾದ ವಿಕಾರಗಳು ದೂರವಾಗುವವೆಂದು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ.

ಗುಲ್ಮರೋಗಿ, ತಿಮಿರವೆಂಬ ನೇತ್ರರೋಗ, ರಕ್ತಪಿತ್ತ, ವಿಕಾರದಿಂದ ಬಳಲುವವ, ಆರ್ದಿತ(ಅರ್ಧಾಂಗವಾತ) ಅಕ್ಷೇಪಕ (Fits) ಪ್ರಮೇಹ, ಹಳೆ ಪಾಂಡುರೋಗ, ಗುದಜಾಂಕುರ, ಕ್ಷತೋದರ, ರೂಕ್ಷನಾದವ, ಗರ್ಭಿಣಿ, ಸ್ತಂಭನಮಾಡಲು ಯೋಗ್ಯ ರೋಗಿ, ಕ್ರಿಮಿರೋಗಿ, ದಂತರೋಗಿ ಹಾಗೂ ಯಾವುದೇ ತೊಂದರೆಗಳಿಲ್ಲದೇ ಅತ್ಯಂತ ಸುಖವಾಗಿದ್ದವರಿಗೆ ವಾಂತಿ ಮಾಡಿಸಬಾರದು.

ಅತಿಯಾಗಿ ವಾಂತಿಯಾದರೆ ಅದರೊಡನೆ ರಕ್ತದ ಅಂಶವೂ ಹೊರಬರುವುದು. ನಾಲಗೆಯ ಹೊರಚಾಚಿ ಕಣ್ಣು ಗುಡ್ಡೆಗಳು ಒಳಸೇರುವುವು. ದವಡೆಗಳು ಬಿಗಿಯಾಗಿ, ಹಿಡಿದುಕೊಳ್ಳುವುವು. ಬಾಯಾರಿಕೆ, ಬಿಕ್ಕಟ್ಟು, ಜ್ವರ, ಪ್ರಜ್ಞೆ ತಪ್ಪುವುದು. ಈ ಉಪದ್ರವಗಳುಂಟಾಗುವುವು. ಇಂಥವರಿಗೆ ಶ್ರೀಗಂಧ ಲಾಮಂಚ, ರಸಾಂಜನ, ಭತ್ತದ ಅರಳಿನ ನೀರು, ಸಕ್ಕರೆ ನೀರು, ಎಳೆ ತೆಂಗಿನ ನೀರು, ಹಣ್ಣಿನ ರಸ, ಹಾಲು,ತುಪ್ಪ+ಸಕ್ಕರೆಗಳನ್ನು ಕೊಟ್ಟು ಉಪಚರಿಸಬೇಕು.

ವಿರೇಚಕ ವಿಧಿ: ವಿರೇಚನವನ್ನು ಸ್ನೇಹನ ಹಾಗೂ ಸ್ವೇದನ ಕರ್ಮವನ್ನು ಮಾಡಿದ ಬಳಿಕವೇ ಮಾಡಿಸಬೇಕು. ವಿರೇಚನವನ್ನು ಮಾಡಿಸುವ ಹಿಂದಿನ ದಿನದಲ್ಲಿ ಲಘುವಾದ ಭೋಜನವನ್ನು ರೋಗಿಗೆ ಮಾಡಿಸಿ, ನಾಳೆ ವಿರೇಚನೌಷಧ ಕೊಡುತ್ತೇವೆಂದು ಹೇಳಿ ಮಾದಳ ಮೊದಲಾದ ಹುಳಿರಸ ಪ್ರಧಾನ ಹಣ್ಣುಗಳನ್ನು ಕೊಟ್ಟು ಬಿಸಿನೀರು ಕುಡಿಸಬೇಕು. ಮರುದಿವಷ ಬೆಳಿಗ್ಗೆ ರೋಗಿ ಕಫವನ್ನು ಹೊರ ತೆಗೆದ ಬಳಿಕ ಯೋಗ್ಯ ಪ್ರಮಾಣದಲ್ಲಿ ವಿರೇಚನಕ್ಕೆ ಔಷಧಿ ಕೊಡಬೇಕು. ಇದಕ್ಕೂ ಮೊದಲು ರೋಗಿಯ ಕೋಷ್ಠವನ್ನು ಗಮನಿಸಬೇಕು.

ರೋಗಿಯು ಪಕ್ವಾಶಯದಲ್ಲಿ ಕುಪಿತ ವಾಯುವಿನಿಂದ ಬಳಲುತ್ತಿದ್ದರೆ ಸ್ನುಹಿ ಹಾಲು, ತ್ರಿಕಟು(ಒಣಶುಂಠಿ, ಮೆಣಸು ಹಾಗೂ ಹಿಪ್ಪಲಿಗಳು ಚೂರ್ಣ, ಆಕಳು ಹಾಲುಗಳಿಂದ ಕಲ್ಕ ತಯಾರಿಸಿ ಹಾಲಿನಲ್ಲಿ ಹಾಕಿ ವಿಶೇಷ ತುಪ್ಪವನ್ನು ಸಿದ್ಧಪಡಿಸಿಕೊಳ್ಳಬೇಕು. ಇದನ್ನು ಬಿಸಿ ನೀರಿನಲ್ಲಿ ಕಲಸಿಕೊಟ್ಟರೆ ವಿರೇಚನವಾಗುವುದು. ಶರೀರಸ್ಥ ವಾತವು ಶಾಂತವಾಗುವುದು.

ವಿರೇಚನವು ಚೆನ್ನಾಗಿ ಆದರೆ ವ್ಯಕ್ತಿಯ ದೃಷ್ಟಿ ತೀಕ್ಷ್ಣವಾಗುವುದು, ಇಂದ್ರಿಯಗಳ ಬಲ ಹೆಚ್ಚಾಗುವುದು. ಬುದ್ಧಿಯು ಚುರುಕಾಗುವುದು ಶಕ್ತಿ ವರ್ಧನೆ ಆಗುವುದು, ಅಗ್ನಿಶಕ್ತಿ ಹೆಚ್ಚುವುದು. ವ್ಯಕ್ತಿ ದೀರ್ಘಾಯು ಆಗುವನು. ಮಲಮೂತ್ರ ದೋಷಗಳಿಂದ ಉತ್ಪನ್ನವಾಗುವ ರೋಗಗಳು, ಕ್ರಿಮಿ ದೋಷಗಳು, ಕುಷ್ಠ ರೋಗ, ಕೋಷ್ಟಗತ ದುಷ್ಟ ವಿಕಾರಗಳು ವಿರೇಚನದಿಂದ ದೂರವಾಗುವುವು.

ಶೋಕ-ಭಯಪೀಡಿತರು, ಅತಿ ಕೃಶರಾದವರು, ಅತಿ ಒಣಗಿದವರು, ಅತ್ಯಂತ ವ್ಯಾಕುಲಗೊಂಡವರು, ಶ್ರಮ, ಕ್ಲಮ, ತೃಷ್ಣಾ, ಅಜೀರ್ಣ, ರಕ್ತಾತಿಸಾರವುಳ್ಳವರಿಗೆ, ಬಾಲಕರು – ವೃದ್ಧರು, ಗರ್ಭಿಣಿಯರು, ಮದ್ಯಪಾನಿಗಳು, ಸ್ನೇಹನ – ಸ್ವೇದನಕ್ರಿಯೆಗೆ ಒಳಗಾದವರಿಗೆ ವಿರೇಚನ ಕೊಡಬಾರದು.

ವಿರೇಚನವು ಹೆಚ್ಚಾಗಿ ಆದರೆ ಮಲದಲ್ಲಿ ಕಫವು (Mucus) ವಿಶೇಷವಾಗಿ ಪ್ರವೃತ್ತವಾಗುವುದಲ್ಲದೆ ಕೊನೆ ಕೊನೆಗೆ ರಕ್ತವೂ ಬೀಳಲಾರಂಭಿಸುವುದು. ಇದರಿಂದ ರೋಗಿಗೆ ಅಶಕ್ತತೆ, ಹೆಚ್ಚಾಗುವುದಲ್ಲದೇ ವಾತಪ್ರಕೋಪವಾಗುವುದು. ಇಂಥವರಿಗೆ ಅತಿ ತಣ್ಣಗಿನ ಅಕ್ಕಿನೀರು (ಅಲಗಚ್ಚು)+ ಜೇಷ್ಠಮಧುವನ್ನು ಕೊಟ್ಟು ವಾಂತಿ ಮಾಡಿಸಬೇಕು. ಗಂಜಿನೀರನ್ನು ವಸ್ತಿ (Enema) ದ್ವಾರವಾಗಿ ಇಲ್ಲವೆ ಹಾಲು – ತುಪ್ಪಗಳ ಅನುವಾಸನ ವಸ್ತಿಕೊಡಬೇಕು. ಇದರಿಂದ ಕರುಳಿಗೆ ಶಕ್ತಿ ಬರುವುದು. ಅನಂತರ ಗಂಜಿ, ಹಾಲು, ಮಜ್ಜಿಗೆ, ಲಿಂಬೆಪಾನಕ ತೆಂಗಿನ ನೀರುಗಳನ್ನು ಕೊಡಬೇಕು.

ಶಾಸ್ತ್ರ ನಿರ್ದೇಶಿಸಿದ ಪ್ರಕಾರ ಈ ವಮನ ವಿರೇಚನವಿಧಿಗಳಾದರೆ ಯಾವ ವಿಧದ ತೊಂದರೆಗಳಾಗುವುದಿಲ್ಲ. ಇಲ್ಲವಾದರೆ ಔಷಧಗಿಳು ಹೊರಹೋಗದೇ ಉಳಿದು ವಾತಶೂಲ, ಅಧ್ಮಾನ, ಪರಿಕರ್ತಿಕಾ, ಪರಿಸ್ರಾವ, ಪ್ರವಾಹಿ, ಹೃದಯ ತೊಂದರೆಗಳು ವಾಂತಿ, ಮೂರ್ಛೆ, ಅಶುದ್ಧ ಡೇಕರಿಕೆಗಳು, ಗುಲ್ಮಗಳ ನೋವು, ಮಲಬದ್ಧತೆ – ಈ ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಆಗ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿ ರೋಗಿಗೆ ಕುಡಿಸಿದರೆ ವಾಂತಿಯಾಗುವುದು. ಎರಡು ಸಾರೆ ವಿರೇಚನೌಷಧಿಕೊಟ್ಟರು ಭೇದಿ ಆಗದಿದ್ದರೆ ಅಂಥವನಿಗೆ ತಪ್ಪ, ರವೆ, ಬೆಲ್ಲಗಳಿಂದ ತಯಾರಿಸಿದ ಪಾಯಸ ಕೊಟ್ಟು ನಂತರ ವಿರೇಚನ ಮಾಡಿಸಬೇಕು.

ಮಸ್ತಿ (ಬಸ್ತಿ) ವಿಧಿ(Enema): ಶರೀರ ಶೋಧನ ವಿಧಿಯಲ್ಲಿ ವಸ್ತಿಗೆ ತುಂಬ ಮಹತ್ವವಿದೆ. ನಾನಾ ವಿಧ ದ್ರವ್ಯಗಳಿಂದ ತಯಾರಿಸಿದ ವಸ್ತಿಯಿಂದ ದೋಷಗಳ ಸಂಶೋಧನ, ಸಂಶಮನ, ಸಂಗ್ರಹಣಕ್ರಿಯೆ ಮಾಡಿಸಬಹುದಾಗಿದೆ. ಇದು ತ್ರಿದೋಷಗಳು ಹಾಗೂ ರಕ್ತ ಸಂಸರ್ಗ ಹಾಗು ಸನ್ನಿಪಾತ ದೋಷಗಳಲ್ಲೂ ಶ್ರೇಷ್ಠ ಗುಣವುಳ್ಳದ್ದಾಗಿದೆ. ಆದ್ದರಿಂದ ಜ್ವರ, ಅತಿಸಾರ, ನೆಗಡಿ, ಶಿರೋರೋಗ, ಅಧಿಮಂಥ, ಅರ್ದಿತ, ಅಕ್ಷೇಪಕ, ಪಕ್ಷಾಘಾತ, ಏಕಾಂಗ, ಸರ್ವಾಂಗ ರೋಗ, ಆಧ್ಮಾನ, ಉದರ, ಶರ್ಕರ, ಶೂಲ, ವೃಷಣವೃದ್ಧಿ, ಉಪದಂಶ, ಆನಾಹ, ಮೂತ್ರ, ಕೃಚ್ಛ್ರ, ಗುಲ್ಮ, ವಾತಶೋಣಿತ, ಮಾತಮೂತ್ರ, ವಾತಪುರೀಷ, ಉದಾವರ್ತ, ಶುಕ್ರನಾಶ, ಆರ್ತವನಾಶ, ಸ್ತನ್ಯನಾಶ, ಹನುಗ್ರಹ, ಮನ್ಯಾಗ್ರಹ, ಅರ್ಶಸ್ಸು, ಆಶ್ಮರಿ, ಮೂಡ ಗರ್ಭ- ಮೊದಲಾದ ರೋಗಗಳಲ್ಲಿ ತುಂಬ ಉಪಯುಕ್ತವೆನಿಸಿದೆ.

ಈಗಿನಂತೆ ಆಗಿನ ಕಾಲದಲ್ಲಿ ಸಲಕರಣೆಗಳ ಸಂಶೋಧನೆ ಆಗಿದ್ದಿಲ್ಲವಾದ ಕಾರಣ ಅವರು ಬಸ್ತಿವಿಧಾನಕ್ಕಾಗಿ ಚಿನ್ನ, ಬೆಳ್ಳಿ, ತಾಮ್ರಗಳಿಂದ, ಮರದ ತಿರುಳು, ಓಟೆ, ಬಿದುರುಗಳಿಂದ ಬಸ್ತಿ ಡಬ್ಬವನ್ನು ತಯಾರಿಸಿಕೊಳ್ಳುತ್ತಿದ್ದರು. ಕೊಳವೆಯು ಅದರಿಂದ ಹನ್ನೆರಡು ಅಂಗುಳಗಳವರೆಗೆ ಉದ್ದವಾಗಿರುತ್ತಿದ್ದಿತು. ಕೊಳವೆಯ ರಂಧ್ರವು ಹೆಸರು – ಕಡಲೆಕಾಳಿನಷ್ಟು ಗಾತ್ರದ ಪ್ರಮಾಣದಷ್ಟು ಅಗಲವಾಗಿರುತ್ತಿತ್ತು. ಆದರೆ ಈಗ ತೈಲ ಪ್ರಯೋಗಕ್ಕೆ ಅನುಕೂಲವಾದ ಸಿರಿಂಜಿನ ರೂಪದಲ್ಲಿರುವ, ಕಷಾಯ – ಬೆಚ್ಚಗಿನ ನೀರು ಇತ್ಯಾದಿಗಳನ್ನು ಬಿಡುವಂತೆ ಡಬ್ಬಗಳೂ ದೊರಕುತ್ತವೆ.

ವಸ್ತಿ ಚಿಕತ್ಸೆ ತೆಗೆದುಕೊಳ್ಳುವವನು ಮೈಗೆ ತೈಲವನ್ನು ಹಚ್ಚಿಕೊಂಡು, ಮಲ-ಮೂತ್ರಗಳ ವಿಸರ್ಜನೆ ಮಾಡಿ, ಹಸಿವಿಲ್ಲದಾಗ, ಅತಿ ಎತ್ತರವಿಲ್ಲದ ಮತ್ತು ಸಮವಾಗಿದ್ದು ತಲೆಭಾಗ ಸ್ವಲ್ಪ ತಿಗ್ಗಿಸಿದ ಹಾಸಿಗೆಯ ಮೇಲೆ ಒಳ್ಳೆ ಬಟ್ಟೆಯನ್ನು ಹಾಕಿಕೊಂಡು ಅಂಗಾತವಾಗಿ ಮಲಗಬೇಕು. ಆನಂತರ ಎಡಭಾಗಕ್ಕೆ ತಿರುಗಿಕೊಂಡು ಎಡಗಾಲನ್ನು ಉದ್ದಕ್ಕೆ ಚಾಚಿ ಬಲಗಾಲನ್ನೂ ಹೊಕ್ಕಳವರೆಗೆ ಬರುವಂತೆ ಮೇಲಕ್ಕೆ ಮಾಡಿಕೊಂಡು ಸರಳವಾಗಿ ಉಸಿರಾಡುತ್ತ ಮಲಗಬೇಕು. ವೈದ್ಯ ಇಲ್ಲವೇ ಪರಿಚಾರಕರು ಬಸ್ತಿ ಡಬ್ಬ ಕೊಳವೆಗಳನ್ನು ಹಿಡಿದುಕೊಂಡು ರೋಗಿಯ ಗುದದ್ವಾರದಲ್ಲಿ ಕೊಳವೆಯ ಕಾಲಾಂಶವು ಹೋಗುವಂತೆ ಇಟ್ಟು ದ್ರವವನ್ನು ಒಳಗೆ ಬಿಡಬೇಕು. ರೋಗಿಗಿಂತಲೂ ಬಸ್ತಿ ಡಬ್ಬವು ೨-೩ ಅಡಿ ಎತ್ತರದಲ್ಲಿದ್ದರೆ ಸಾಕು. ಕೊಳಿವೆಯಲ್ಲಿ ಗಾಳಿ ಸೇರದಂತೆ ಹಾಗೂ ಬಸ್ತಿ ದ್ರವ್ಯವು ಪೂರ್ತಿಯಾಗಿ ಹೋಗುವ ಮೊದಲೇ ಗಾಳಿಯು ಹೊಟ್ಟೆಯೊಳಗೆ ಸೇರದಂತೆ ಎಚ್ಚರವಹಿಸಬೇಕು. ಇದಾದ ಬಳಿಕ ರೋಗಿಯ ಹೊಟ್ಟೆಯ ಮೇಲೆ ಬಲದಿಂದ ಎಡಕ್ಕೆ ಅದುಮುತ್ತಲಿದ್ದು ಅನಂತರ ಅಲ್ಲಿಯೇ ಸ್ವಲ್ಪ ಓಡಾಡಲು ಹೇಳಬೇಕು. ಸ್ವಲ್ಪ ಹೊತ್ತಿನಲ್ಲಿಯೇ ಮಲದ ಬೇಗವು ಬರುವುದು. ಆಗ ಕೂಡಲೇ ರೋಗಿ ಏಳದ ಸ್ಥಿತಿಯಲ್ಲಿದ್ದರೆ ಮಲಡಬ್ಬವನ್ನು ಕೊಡಬೇಕು. ಓಡಾಡುವಂತಿದ್ದರೆ ಶೌಚ(ಕಕ್ಕಸು) ಗೃಹಕ್ಕೆ ಕಳಿಸಬೇಕು.

ಬಸ್ತಿ ಪ್ರಯೋಗಕ್ಕಾಗಿ ತೈಲ, ತುಪ್ಪ, ಹಾಲು, ಮಜ್ಜಿಗೆ, ಮೊಸರು, ಅನ್ನದ ಗಂಜಿ, ನಿಸೋತ, ಮದನಫಲ, ಔಡಲ ಬೀಜ ಇವುಗಳ ಕಷಾಯ ತಯಾರಿಸಿ ಅದಕ್ಕೆ ಗೋಮೂತ್ರ ಸೇರಿಸಬೇಕು. ಇದಕ್ಕೆ ಒಣಶುಂಠಿ, ಮೆಣಸು, ಹಿಪ್ಪಲಿ, ಸೈಂಧವಲವಣ, ಬಜೆ, ದೇವದಾರು, ಕೂಟ, ಹಿಂಗು, ಬಿಡಲವಣ, ಜೀರಿಗೆ, ಏಲಕ್ಕಿ, ನಿಶೋತ್ತರ, ಅಜವಾನ, ಜೇಷ್ಠಮಧು, ಬಿಳಿ-ಕರಿ ಸಾಸಿವೆಗಳು ಪ್ರತಿಯೊಂದನ್ನು ಎರಡು ತೊಲ ಪ್ರಮಾಣದಷ್ಟು ತೆಗೆದುಕೊಂಡು ವಸ್ತ್ರಗಾಳಿತ ಪುಡಿ ಮಾಡಿ ಮೇಲಿನ ದ್ರವದಲ್ಲಿ ಕೂಡಿಸಬೇಕು. ಇದು ಸ್ವಲ್ಪ ಬೆಚ್ಚಗಿರುವಾಗಲೇ ಬಸ್ತಿಗಾಗಿ ಉಪಯೋಗಿಸಬೇಕು ಎಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.