. ವಿಷಮ ಜ್ವರ (Typhoid Fever)

ಆಯುರ್ವೇದದಲ್ಲಿ ಹೇಳಿರುವ ತ್ರಿದೋಷಜ ಅಥವಾ ಸನ್ನಿಪಾತ ಜ್ವರಗಳೆಲ್ಲ ವಿಷಮಜ್ವರವೆನಿಸಿವೆ. ಆಧುನಿಕ ವೈದ್ಯ ಶಾಸ್ತ್ರದ ಪ್ರಕಾರ ಇದೊಂದು ಸಾಂಕರ್ಯ ರೋಗ.

ಲಕ್ಷಣಗಳು: ಈ ರೋಗಿಗೆ ಮೊದಲಿಗೆ ಅಲಸ್ಯ, ತಲೆನೋವು, ಸಣ್ಣದಾಗಿ ಜ್ವರ, ಮೈ ಕೈನೋವು, ಶಕ್ತಿಹೀನತೆ, ಅನಿದ್ರೆ ಈ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತ ೩-೪ ದಿವಸಗಳಲ್ಲಿ ಸಂಪೂರ್ಣವಾಗಿ ವಿಷಮಜ್ವರ ಲಕ್ಷಣಗಳು ಕಂಡುಬರುವುವು. ಆಗ ರೋಗಿ ಹಾಸಿಗೆ ಹಿಡಿಯುವನು. ಜ್ವರವು ಸಾಧಾರಣ ಚಿಕಿತ್ಸೆಗೆ ಬಗ್ಗದೆ ಏರುತ್ತ ಹೋಗುವುದು. ಬೆಳಗಿನ ವೇಳೆ ಜ್ವರ ಸ್ವಲ್ಪ ಕಡಿಮೆ ಎನಿಸಿದರೂ ಪೂರ್ತಿಯಾಗಿ ಸಹಜೋಷ್ಣತೆಗೆ ಬರುವುದಿಲ್ಲ. ಬೇರೆ ಜ್ವರಗಳಲ್ಲಿ ಕಂಡುಬರುವ ವಿಷಮಯತೆ (Toxicity) ಈ ಜ್ವರದಲ್ಲಿ ಇರುವುದು. ಇದರಲ್ಲಿ ನಾಡೀ ಬಡೆತ, ಫ್ಲ್ಯೂ ಜ್ವರದಲ್ಲಿರುವಂತೆ ಹೆಚ್ಚಾಗಿದರೆ ಕಡಿಮೆ ಇರುವುದು. ಇದರೊಡನೆ ಗಂಟಲು ಕೆರೆತ, ಒಣಕೆಮ್ಮು,ಮೂಗಿನಿಂದ ರಕ್ತ ಸುರಿಯುವುದು, ಹೊಟ್ಟೆನೋವು, ಆಹಾರದಲ್ಲಿ ಅನಿಚ್ಛೆ, ಕಣ್ಣುಗಳಿಗೆ ಕತ್ತಲುಗೂಡಿಸುವುದು, ಬಾಯಾರಿಕೆ, ಮಲಬದ್ಧತೆ ಮೊದಲಾದ ಲಕ್ಷಣಗಳಿರುವುವು, ಎಲ್ಲ ರೋಗಿಗಳಲ್ಲೂ ಈ ಎಲ್ಲ ಲಕ್ಷಣಗಳು ಇರುವುವೆಂದಲ್ಲ. ಕೆಲ ಕೆಲವರಲ್ಲಿ ಕೆಲ ಲಕ್ಷಣಗಳು ಕಂಡುಬರುವುವು.

ಈ ಜ್ವರದ ಅವಧಿ ಸುಮಾರು ಮೂರು ವಾರಗಳು, ಕೆಲವರಿಗೆ ಎರಡನೆಯ ವಾರದಲ್ಲಿ ಹೊಟ್ಟೆಯ ಮೇಲೆ ಗುಲಾಬಿ ಕೆಂಪಿನ ಹತ್ತಾರು ಚುಕ್ಕೆಗಳು ಕಂಡುಬರಬಹುದು. ಅಲ್ಲದೆ ಇವು ತೊಂದರೆ ಮಾಡದೆ ಕಡಿಮೆ ಆಗುವುದರಿಂದ ಗಾಬರಿಯಾಗಬೇಕಿಲ್ಲ.

ಜ್ವರದೊಡನೆ ಕಾಣಿಸಿಕೊಂಡ ಶಕ್ತಿಹೀನತೆ ದಿನಕ್ಕೆ ದಿನ ಹೆಚ್ಚಾಗಿ ರೋಗಿಯು ಎರಡನೆ ವಾರದ ಅಂತ್ಯದ ವೇಳೆಗೆ ತುಂಬ ನಿತ್ರಾಣಗೊಂಡು ಏಳಲಿಕ್ಕೂ ಆಗದೆ ಹಾಸಿಗೆ ಹಿಡಿಯುವನು. ಮಾಂಸ ಖಂಡಗಳು ಕರಗಿದಂತಾಗಿ ಅವುಗಳ ಗಾತ್ರ ಕಡಿಮೆ ಆಗುವುದು. ತೀರ ಉತ್ಸಾಹಹೀನ ದೇಹ, ಕಂಗೆಟ್ಟು ಹೋದ ಮುಖದ ಕಳೆ, ಮಬ್ಬಾದ ಮಾನಸಿಕ ಸ್ಥಿತಿ, ರೋಗಿಯು ನಿದ್ರೆಯ ಮಂಪರಿನಲ್ಲೆ ಬಡಬಡಿಸುವುದು – ಈ ಮೊದಲಾದ ಸ್ಥಿತಿಗಳು ರೋಗಿಯಲ್ಲಿ ವಿಷಮ ಸ್ಥಿತಿಯನ್ನುಂಟು ಮಾಡಿ ಮೆದುಳಿನ ಬಾವು, ಪುಪ್ಪುಸಬಾವು ಮೊದಲಾದ ಉಪದ್ರವಗಳನ್ನುಂಟು ಮಾಡಬಹುದು. ಈ ಹಂತದಲ್ಲೂ ಒಳ್ಳೆಯ ಚಿಕಿತ್ಸೆ ದೊರಕದಿದ್ದರೆ ಅನೇಕರು ಸಾವನ್ನಪ್ಪುವರು. ಇನ್ನು ಕೆಲವರು ತುಂಬ ಅಲಕ್ಷ್ಯದಿಂದ ವರ್ತಿಸಿ, ಸರಿಯಾದ ಚಿಕಿತ್ಸೆ, ವಿಶ್ರಾಂತಿ, ಹಗುರ ಆಹಾರ ಸೇವಿಸದೆ ಕರುಳು ರಂಧ್ರವಾಗುವುದರಿಂದ ತಕ್ಷಣ ಶಸ್ತ್ರ ಚಿಕಿತ್ಸೆಗೊಳಗಾಗದಿದ್ದರೆ- ಮರಣವನ್ನಪ್ಪುವ ಸ್ಥಿತಿಯೂ ಸಾಮಾನ್ಯ.

(ಸೂಚನೆ – ಶ್ಲೇಷ್ಮಕ ಸನ್ನಿಪಾತಜ್ವರ, ಛಳಿಜ್ವರ, ವಿಷಮಜ್ವರ – ಇವುಗಳ ವಿವರಗಳು ಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸಿಕ್ಕುವುದಿಲ್ಲ. ಅವೆಲ್ಲ ವಿಷಮ ಜ್ವರದಲ್ಲಿಯೇ ಒಳಗೊಳ್ಳುತ್ತವೆ. ಕಾರಣ ರೂಢಿಯಲ್ಲಿರುವ ಚಿಕಿತ್ಸೆಯನ್ನಿಲ್ಲ ಹೇಳಲಾಗಿದೆ – ಲೇಖಕ.)

ರೋಗಿ ಆರೈಕೆ: ರೋಗಿಯನ್ನು ಗಾಳಿ ಬೆಳಕುಗಳಿಂದ ಪ್ರತ್ಯೇಕವಾದ ಕೋಣೆಯಲ್ಲಿ ಮಲಗಿಸಬೇಕು. ರೋಗಿಗೆ ಕೇವಲ ಗಂಜಿ, ಹಾಲು, ಹಣ್ಣಿನ ರಸ, ಚಹ-ಕಾಫಿ, ಏಳೆ ತೆಂಗಿನನೀರು, ಸಕ್ಕರೆ ನೀರು ಮೊದಲಾದ ದ್ರವಾಹಾರಗಳನ್ನು ಆಗಾಗ ಕೊಡುತ್ತಿರಬೇಕು. ಪೂರ್ತಿ ಜ್ವರ ನಿಂತ ಬಳಿಕ ಬ್ರೆಡ್ಡಿನ ನಡುವಣ ಭಾಗ, ಮೆದುವಾದ ಹುಗ್ಗಿಯಂತಹ ಅನ್ನ, ಬೇಳೆ ಸಾರು, ಹುಳಿ ಇಲ್ಲದ ಮಜ್ಜಿಗೆ, ಬಿಸ್ಕತ್ತು, ಇಡ್ಲಿ, ಹೆಸರು ಬೇಳೆ ಪಾಯಸ, ಹಾಲು ಹಾಕಿ ಸಿದ್ಧಪಡಿಸಿದ ಸಿರಾ, ಸಬ್ಬಕ್ಕಿ ಪಾಯಸ ಮುಂತಾದವುಗಳನ್ನು ಕೊಡಬೇಕು.

ರೋಗಿಗೆ ಬಾಯಿಯನ್ನು ಮೇಲಿಂದ ಮೇಲೆ ಮುಕ್ಕಳಿಸಿ ಸ್ವಚ್ಚ ಇಟ್ಟುಕೊಳ್ಳಲು ಹೇಳಬೇಕು. ಎರಡು ದಿವಸಗಳಿಗೊಮ್ಮೆಯಾದರೂ ಮೈಯನ್ನು ಚೆನ್ನಾಗಿ ಬಿಸಿನೀರಿನಲ್ಲಿ ಅದ್ದಿದ ಬಟ್ಟೆಯಿಂದ ಒರಸಿ ಬೇರೆ ಬಟ್ಟೆ ಹಾಕಬೇಕು. ಬೆಡ್ ಶೀಟ್, ಚದ್ದರುಗಳನ್ನು ಬದಲಿಸಬೇಕು. ಮಲಮೂತ್ರಗಳ ವಿಸರ್ಜನೆಗಾಗಿ ರೋಗಿಯನ್ನು ದೂರ ಕರೆದುಕೊಂಡು ಹೋಗದೇ ಅಲ್ಲಿಯೇ ಮೂತ್ರ ಪಾತ್ರೆ, ಭೇದಿ ಪಾತ್ರೆಗಳನ್ನು ಕೊಟ್ಟು ಉಪಯೋಗಿಸಿದ ನಂತರ ಕ್ರಿಮಿಹರ ದ್ರಾವಕಗಳಿಂದ ಸ್ವಚ್ಛವಾಗಿ ತೊಳೆದು ತೆಗೆದಿಡಬೇಕು. ಹೀಗೆ ಜ್ವರವು ಸಂಪೂರ್ಣವಾಗಿ ನಿಂತು ರೋಗಿ ಚೆನ್ನಾಗಿ ಸುಧಾರಿಸುವವರೆಗೆ ಮಾಡಬೇಕಾಗುವುದು. ಚಿಕತ್ಸೆ ಮಾತ್ರ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿಯೇ ನಡೆಯಬೇಕು.

ಚಿಕಿತ್ಸೆ: ಷಡಂಗ ಪಾನೀಯವನ್ನು ರೋಗಿಗೆ ಮೇಲಿಂದ ಮೇಲೆ ಕೊಡುತ್ತಿರಬೇಕು ರೋಗದ ಮೊದಲನೆ ಹಂತದಲ್ಲಿ ಗೋದಂತಿ ಮಿಶ್ರಣ, ಕಸ್ತೂರಿ ಭೈರವ, ಮಕರ ಧ್ವಜಗಳನ್ನು ಕೊಡಬೇಕು.

ಎರಡನೇ ಹಂತದಲ್ಲಿ ವಸಂತ ಮಾಲತಿ, ಪ್ರವಾಳಭಸ್ಮ, ಅಮೃತ ಸತ್ವಗಳನ್ನು ಕೊಡಬೇಕು.

ಮೂರನೆ ಹಂತದಲ್ಲಿ ವಸಂತ ಮಾಲತಿ, ನವಾಯಸ ಚೂರ್ಣ, ಸೀತೋಪಲಾದಿ ಚೂರ್ಣ, ಅಮೃತಾರಿಷ್ಟ, ದ್ರಾಕ್ಷಾರಸವಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ಕೊಡಬೇಕು.

ಇನ್ನಿತರ ಜ್ವರಗಳು: ಉಪ ವಿಷಮಜ್ವರ, ರೋಮಾಂತಿಕಾ ಜ್ವರ, ಲಘು ಮಸೂರಿಕಾ ಜ್ವರ, ಮಸೂರಿಕಾ ಜ್ವರ, ಮಂಗಬಾವು, ಬಾಲಾರ್ಧಂಗ ರೋಗ, ಮೆದುಳು ಜ್ವರ, ಸಂದುವಾತ ಜ್ವರ, ಕಪ್ಪುಜ್ವರ, ಶ್ಲೀಪದ ಜ್ವರ, ಕೃಷ್ಣ ಮೇಹ ಜ್ವರ, ಅರುಣಜ್ವರ, ಹಳದಿ ಜ್ವರ, ಆಗುಂತಕ ಜ್ವರ, ಗ್ರಂಥಿಕ ಜ್ವರ, ಕ್ಷಯ, ಶೋಷರೋಗಗಳಲ್ಲಿ ಕಂಡುಬರುವ ಜ್ವರ ಹೀಗೆ ಅನೇಕ ರೋಗಗಳಲ್ಲಿ ಜ್ವರವು ಒಂದು ಲಕ್ಷಣವಾಗಿ ಕಾಣಿಸಿಕೊಳ್ಳವುದು. ಇವನ್ನೆಲ್ಲ ಮೇಲ್ಕಂಡ ಚಿಕಿತ್ಸಾ ತಳಹದಿಯ ಮೇಲೆ ಚಿಕಿತ್ಸಿಸಬೇಕಾಗುವುದು.

. ಅರುಚಿ (Anorexia)

ಅನೇಕ ಕಾರಣಗಳಿಂದ ಅರುಚಿಯು ಕಂಡುಬರುವುದು. ಮುಖ್ಯವಾಗಿ ಇದರಲ್ಲಿ ಊಟ ಮಾಡಬೇಕೆಂಬ ಇಚ್ಛೆಯೇ ಇರುವುದಿಲ್ಲ. ಅಗ್ನಿಮಾಂದ್ಯ, ಹಳೆ ಮಲಬದ್ಧತೆ, ಜ್ವರಗಳಲ್ಲಿ ಅರುಚಿ ಇರುವುದು. ಕೆಲ ಮನೋವಿಕೃತಿಗಳಲ್ಲೂ ಅರುಚಿ ಇರುವುದು. ಇದರಲ್ಲಿ ಬಾಯಿಯಲ್ಲಿ ಕಹಿಯಾಗಿರುವುದು, ಏನು ತಿಂದರೂ ಸೇರಿಕೆ ಆಗುವುದಿಲ್ಲ. ರುಚಿ ಎನಿಸುವುದಿಲ್ಲ ಎಂದು ರೋಗಿ ಹೇಳುವನು. ಎದೆ ಭಾಗದಲ್ಲಿ ನೋವಿದ್ದರೆ ವಾತ ದೋಷದಿಂದ ಎಂತಲೂ, ನೀರಡಿಕೆ ಉರುಪುಗಳಿದ್ದರೆ ಪಿತ್ತಜವೆಂತಲೂ, ಬಾಯಿಯಲ್ಲಿ ಉಪ್ಪಿನಂತೆ ರುಚಿ ಹಾಗೂ ಜೊಲ್ಲು ಹೆಚ್ಚಿಗೆ ಬರುತ್ತಿದ್ದರೆ ಕಫಜವೆಂದು ತಿಳಿಯಬೇಕು.

ರೋಗಿಗೆ ಮೊದಲು ವಮನ, ವಿರೇಚನ, ನಿರೂಹವಸ್ತಿಗಳನ್ನು ಕೊಟ್ಟು ನಂತರ ರುಚಿಯಾದ, ದೀಪನಕರಗಳಾದ ಔಷಧಿಗಳನ್ನು ಕೊಡಬೇಕು. ಯವಕ್ಷಾರ, ಸೈಂಧವಲವಣ, ಅಳಲೆಕಾಯಿ, ಶುಂಠಿ, ಹಿಪ್ಪಲಿ, ನೆಲ್ಲಿಕಾಯಿಗಳ ಪುಡಿಯನ್ನು ನಿಂಬೆ ರಸದಲ್ಲಿ ಹಾಕಿ ಕುಡಿಯಲು ಕೊಡಬೇಕು. ಇವೇ ದ್ರವ್ಯಗಳಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕೆಂದು ಹೇಳಿದ್ದಾರೆ (ಕಲ್ಯಾಣಕಾರಕ ೧೬, ಪುಟಗಳು ೩೬೩೩೯೪).

. ಅಜೀರ್ಣ (In digestion)

ಅಜೀರ್ಣಕ್ಕೆ ಮುಖ್ಯವಾಗಿ ಮಂದಾಗ್ನಿಯೇ ಕಾರಣವಾದ್ದರಿಂದ ಅಜೀರ್ಣವಾದಾಗ ನಾವು ಸೇವಿಸುವ ಯಾವುದೇ ಪದಾರ್ಥಗಳು ಅವು ದ್ರವ ಸ್ವರೂಪದಲ್ಲಿದ್ದರೂ ಪಚನವಾಗುವುದಿಲ್ಲ. ಇದು ರೋಗವಲ್ಲ ಪಾಚಕಾಂಗಗಳು ತೋರುವ ಒಂದು ಪ್ರತಿಕ್ರಿಯೆ ಅಷ್ಟೆ, ಅತಿಯಾಗಿ ಇಲ್ಲವೇ ಅನಿಯಮಿತವಾಗಿ ಆಹಾರ ಸೇವಿಸುವುದರಿಂದ ಉಂಟಾಗುವ ಒಂದು ತೊಂದರೆ.

ಕಾರಣಗಳು: ಭಾರವಾದ ಊಟ, ಹಸಿವಿಲ್ಲದಾಗ ಉಣ್ಣುವುದು, ಹೆಚ್ಚು ನುರಿಸದೇ ತಿನ್ನುವುದು, ಅವಸರದಲ್ಲಿಯ ಊಟ. ಸರಿಯಾಗಿ ಬೇಯಿಸದ ಆಹಾರ, ಅಪಾನವಾಯುವನ್ನು ಪ್ರಕೋಟಿಸಿರುವ ಆಹಾರ ಸೇವನೆ, ಮಾನಸಿಕ ಅಶಾಂತಿ, ನಿದ್ರೆಗೆಡುವುದು, ಯಕೃತ್ ವಿಕಾರಗಳು, ಸಾಂಕರ್ಯರೋಗ ಗರ್ಭಿಣ್ಯಾವಸ್ಥೆ. ರಾತ್ರಿ ತಡವಾಗಿ ಊಟಮಾಡಿ ಮಲಗಿಕೊಳ್ಳುವುದು, ವ್ಯಾಯಾಮವಿಲ್ಲದಿರುವುದು, ಮಲಗಿಕೊಂಡೇ ಇರುವುದು, ವೃದ್ಧಾಪ್ಯ ಈ ಮೊದಲಾದ ಕಾರಣಗಳಿಂದ ಅಜೀರ್ಣವಾಗುವುದು.

ಕಫ ದೋಷದಿಂದ ಆಮಾ ಜೀರ್ಣ, ಪಿತ್ತ ದೋಷದಿಂದ ವಿದಗ್ಧಾಜೀರ್ಣ ಹಾಗೂ ವಾತದೋಷದಿಂದ ವಿಷ್ಟಬ್ದಾಜೀರ್ಣಗಳು ಉಂಟಾಗುತ್ತವೆ.

. ಆಮಾಜೀರ್ಣ: ಇದೀಗ ಊಟ ಮಾಡಿದವನಂತೆ ಹೊಟ್ಟೆ ಭಾರ, ಡೇಕರಿಕೆ, ಬಾಯಿಯಲ್ಲಿ ನೀರೂರುವುದು, ವಾಂತಿ ಬಂದಂತೆನಿಸುವುದು, ಮುಖ-ಕಣ್ಣಿನ ಭಾಗಗಳಲ್ಲಿ ಬಾವು, ಮೈಭಾರ ಮೊದಲಾದ ಲಕ್ಷಣಗಳು ತೋರಿಬರುತ್ತವೆ.

ಇದಕ್ಕೆ ಉಪವಾಸವಿರುವುದು ಮೊಟ್ಟ ಮೊದಲ ಚಿಕಿತ್ಸೆ. ಹೊಟ್ಟೆಯು ತುಂಬ ಭಾರವಾಗಿದ್ದರೆ ಉಪ್ಪು ನೀರು ಕುದಿಸಿ ವಾಂತಿ ಮಾಡಿಸುವುದು ಒಳ್ಳೆಯದು ಬಡೇಸೊಪ್ಪು, ಅಜವಾನ, ಹಸಿಶುಂಠಿ, ಒಣಶುಂಠಿ ಮೊದಲಾದವುಗಳೆಲ್ಲ ದೀಪಕ ಪಾಚಕಗಳೆನಿಸಿವೆ. ಹಿಂಗ್ವಾಷ್ಟಕ ಚೂರ್ಣ, ಭಾಸ್ಕರ ಲವಣ, ತ್ರಿಕಟು ಚೂರ್ಣ, ಚಿತ್ರಕಾದಿವಟಿ, ಲವಂಗಾದಿ ವಟಿ, ಅಜಮೋದಾರ್ಕ ಮೊದಲಾದ ಸಿದ್ಧೌಷಧಿಗಳನ್ನು ಅವಶ್ಯಕತೆಗೆ ತಕ್ಕಂತೆ ತೆಗೆದುಕೊಳ್ಳಬೇಕು.

. ವಿದಗ್ಧಾಜೀರ್ಣ: ಅತಿಯಾದ ಕಾರ, ಹುಳಿ, ಮಸಾಲೆ ಪದಾರ್ಥಗಳನ್ನು ಸೇವಿಸುವುದು, ಚಹಾ ಕಾಫಿಗಳನ್ನು ಹೆಚ್ಚಾಗಿ ಕುಡಿಯುವುದು, ಮದ್ಯಪಾನ, ತಂಬಾಕು ಸೇವನೆ ಈ ಮುಂತಾದ ಕಾರಣಗಳಿಂದ ಪಿತ್ತವು ಕೆರಳಿ ‘ವಿದಗ್ಧಾಜೀರ್ಣ’ ವನ್ನುಂಟು ಮಾಡುವುದು. ಇದರಲ್ಲಿ ಹೆಚ್ಚಾಗಿ ಗಂಟಲು, ಎದೆ, ಜಠರದ ಮೇಲ್ಭಾಗದಲ್ಲಿ ಉರಿಯಾಗುವುದು, ತಲೆಯ ಸುತ್ತುವಿಕೆ, ಹುಳಿ, ಡೇಗು, ಓಕರಿಕೆ, ನೀರಡಿಕೆ, ಮೈ ಬೆವರುವುದು ಮೊದಲಾದ ಲಕ್ಷಣಗಳು ಕಂಡುಬರುವುವು.

ಈ ಮೇಲ್ಕಂಡ ಲಕ್ಷಣಗಳು ಅತಿಯಾಗಿದ್ದರೆ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅಡಿಗೆ ಸೋಡಾಪುಡಿ ಸೇರಿಸಿ, ೨-೩ ಲೋಟ ನೀರು ಕುಡಿದು ವಾಂತಿ ಮಾಡುವುದು ಒಳ್ಳೆಯದು. ಇದರಿಂದ ಪಿತ್ತವೆಲ್ಲ ಆಹಾರ ಪದಾರ್ಥಗಳೊಡನೆ ಹೊರಹೋಗುವುದು. ಇದಕ್ಕೆ ಅಷ್ಟಾಂಗ ಲವಣ, ವಟಿಗಳು ಚೆನ್ನಾಗಿ ಕೆಲಸ ಮಾಡುವುವು. ಇದರಲ್ಲಿ ದಾಹದೊಡನೆ ಹುಳಿ ತೇಗುಗಳು ಹೆಚ್ಚಿದಾಗ ಮುಕ್ತಾಶಕ್ತಿ ಭಸ್ಮ ಒಳ್ಳೆಯದು. ವಾಯು, ಹೊಟ್ಟೆನೋವುಗಳು ಹೆಚ್ಚಾಗಿದ್ದರೆ ದಾಹ, ಹುಳಿ ತೇಗುಗಳು ಉಪದ್ರವ ಸ್ವರೂಪವಾಗಿದ್ದರೆ ಶಂಖಭಸ್ಮ + ಹಿಂಗ್ವಾಷ್ಟಕಗಳನ್ನು ತೆಗೆದುಕೊಂಡರೆ ಈ ಲಕ್ಷಣಗಳೆಲ್ಲ ದೂರವಾಗುವುವು.

ವಿಷ್ಟಬ್ಧಾ ಜೀರ್ಣ: ಮೇಲಿಂದ ಮೇಲೆ ಉಪವಾಸ ಮಾಡುವುದು, ಎರಡು ಆಹಾರಗಳ ನಡುವೆ ಹೆಚ್ಚು ವೇಳೆಯ ಅಂತರವಿಡುವುದು, ಚಹಾ, ಕಾಫಿ, ಮದ್ಯ, ಧೂಮಪಾನಗಳನ್ನು ವಿಶೇಷವಾಗಿ ಸೇವಿಸುವುದು, ನಿದ್ರೆಗೆಡುವುದು, ಈ ಮೊದಲಾದ ಕಾರಣಗಳಿಂದ ವಾತ ದುಷ್ಟಗೊಂಡ ವಿಷ್ಟಬ್ಧಾಜೀರ್ಣವಾಗುವುದು. ಇದರಲ್ಲಿಯೂ ಹೊಟ್ಟೆಯುಬ್ಬರ, ತೇಗು, ಹೊಟ್ಟೆನೋವು, ತಲೆನೋವು, ಮಲಬದ್ಧತೆಗಳಿರುವುವು.

ಈ ಅಜೀರ್ಣಕ್ಕೆ ವಿಶ್ರಾಂತಿ, ಮೇಲಿಂದ ಮೇಲೆ ಬಿಸಿ ನೀರಿನಲ್ಲಿ ಸೈಂಧವ ಉಪ್ಪು ಸೇರಿಸಿ ಕುಡಿಯುವುದು, ಅಭ್ಯಂಗ, ಸ್ನಾನ, ಗಂಜಿ, ಪಾಯಸ ಮೊದಲಾದ ದ್ರವಾಹಾರಗಳನ್ನು ಸೇವಿಸಬೇಕು.

ಹಿಂಗ್ವಾಷ್ಟಕ ಚೂರ್ಣವನ್ನು ತೆಗೆದುಕೊಳ್ಳಬೇಕು. ಇದು ಅಜೀರ್ಣದ ವಿಕಾರಗಳನ್ನು ದೂರ ಮಾಡುವುದರ ಜೊತೆಗೆ ಅಗ್ನಿದೀಪ್ತಿಗೊಳಿಸುವುದು, ಅಪಾನವಾಯುವನ್ನು ಶುದ್ಧೀಕರಿಸುತ್ತದೆ. ಉದರವಾಯುವನ್ನು ಹೊರಹಾಕುತ್ತದೆ. ಮಲದ ದುರ್ಗಂಧವನ್ನು ಹೋಗಲಾಡಿಸುತ್ತದೆ.

ಕಲ್ಯಾಣ ಕಾರಕದಲ್ಲಿ ಅಜೀರ್ಣವಿಕಾರಗಳಿಗೆ ಸೈಂಧವ ಉಪ್ಪನ್ನು ಬಿಸಿನೀರಿನಲ್ಲಿ ಹಾಕಿ ತೆಗೆದುಕೊಳ್ಳಲು ಹೇಳಿದ್ದಾರೆ. ಇಲ್ಲವೆ ಸೈಂಧವ ಲವಣ, ಸಾಸಿವೆಗಳನ್ನು (ಪುಡಿಮಾಡಿ) ಬೆಲ್ಲದಲಿ ಸೇರಿಸಿ ತಿನ್ನಲು ಹೇಳಿದ್ದಾರೆ. ಅಥವಾ ತ್ರಿಕಟುಪುಡಿ(ಶುಂಠಿ, ಹಿಪ್ಪಲಿ, ಮೆಣಸು)ಗೆ ಸೈಂಧವ ಹಾಗೂ ಹಿಂಗುಗಳನ್ನು ಬಿಸಿಯಾದ ಹುಳಿಹಣ್ಣಿನ ರಸದೊಡನೆ ಕುಡಿಯಬೇಕೆಂದು ಹೇಳಿದ್ದಾರೆ.

ಅಜೀರ್ಣದಿಂದ ಕಂಡುಬರುವ ಹೃದಯರೋಗಗಳಿಗೆ ಹಿಪ್ಪಲಿ ಪುಡಿಯನ್ನು ಬಿಸಿನೀರಿನಲ್ಲಿ ತೆಗೆದುಕೊಳ್ಳಬೇಕು. ಇಲ್ಲವೆ ಶುಂಠಿ ಕಲ್ಕಕ್ಕೆ ಅಳಲೆಕಾಯಿ, ಸೈಂಧವಗಳನ್ನು ಸೇರಿಸಿ ಬಿಸಿನೀರಿನಲ್ಲಿ ಕುಡಿಯಬೇಕು.

ಅಲಸಕವಿಲಂಬಿಕಾ ವಿಷೂಚಿಕಾ ವಿಕಾರಗಳು: ಯಾವನು ಸತತವಾಗಿ ನಾನಾ ನಮೂನೆಯ ಆಹಾರ ಪದಾರ್ಥಗಳನ್ನು ಪಶುಗಳಂತೆ ತಿನ್ನುತ್ತಿರುತ್ತಾನೋ ಅವನಿಗೆ ಭಯಂಕರವಾದ ಅಜೀರ್ಣವಾಗಿ ತೀವ್ರ ಪೀಡೆಯನ್ನುಂಟು ಮಾಡುವ ಅಲಸಕ, ವಿಲಂಬಿಕ ಹಾಗೂ ವಿಷೂಚಿಕಾ ವಿಕಾರಗಳುಂಟಾಗುತ್ತವೆ.

ಅಲಸಕಗಳಲ್ಲಿ ಹೊಟ್ಟೆ ಅತಿಯಾಗಿ ತುಂಬಿದಂತೆ, ಅತ್ಯಂತ ನಿರುತ್ಸಾಹ, ವಾಂತಿ, ಅಪಾನವಾಯು ತಡೆದು ಮೇಲೆ ಬಂದಂತೆ ಆಗುವುದು, ಮಲಮೂತ್ರಗಳು ತಡೆ ಆಗುವುದು, ಅತಿಯಾದ ಹೊಟ್ಟೆನೋವು ಹಾಗೂ ಅರುಚಿಗಳಿರುವುವು.

ವಿಲಿಂಬಿಕಾದಲ್ಲಿ ಇತ್ತ ವಾಂತಿಯೂ ಆಗದೆ, ಭೇದಿಯೂ ಆಗದೆ ಹೊಟ್ಟೆ ಬಿಗಿಹಿಡಿದು ತುಂಬ ತೊಂದರೆಯನ್ನುಂಟು ಮಾಡುವುದು.

ವಿಷೂಚಿಕಾ ವಿಕಾರದಲ್ಲಿ ವಾಂತಿ, ನೀರಡಿಕೆ, ಭ್ರಮೆ, ನೋವು, ಸುಸ್ತು, ಮೂರ್ಛೆ, ಅತಿಸಾರ, ಕಂಪನ, ಆಕಳಿಕೆ, ದಾಹ, ವಿವರ್ಣತೆ ಹಾಗೂ ಹೃದಯಪೀಡೆಗಳುಂಟಾಗುವವು.

ಚಿಕಿತ್ಸೆ: ಅಲಸಕ, ವಿಲಂಬಿಕ ವಿಕಾರಗಳು ಚಿಕಿತ್ಸೆಗೆ ತುಂಬ ಕಷ್ಟ ಸಾಧ್ಯವೆನಿಸಿವೆ. ವಿಷೂಚಿಕಾವನ್ನು ಅತಿಸಾರ ವಿಕಾರದಂತೆ ಚಿಕಿತ್ಸಿಸಲು ಹೇಳಿದ್ದಾರೆ. ಜೇಷ್ಠಮಧು, ಚಂದನ, ಕಸಗಸಿ, ನಾಗರಮಂಥಾ, ತಾವರೆ, ಬೇವಿನ ಎಲೆಗಳ ಕಷಾಯವನ್ನು ಕುಡಿಸಲು ಹೇಳಿದ್ದಾರೆ. ತ್ರಿಕಟುಕಾದ್ಯಂಜನ, ಅಗ್ನಿಕರ್ಮವಿಧಾನಗಳನ್ನು ಹೇಳಿ ಉಷ್ಣ ಔಷಧಿಗಳನ್ನು ಬಿಸಿನೀರಿನಲ್ಲಿ ಕೊಡಬೇಕೆಂದು ಹೇಳಿದ್ದಾರೆ.

೧೦. ವಾಂತಿ (Vomiting)

ಜಠರದಲ್ಲಿರುವ ದ್ರವ ಹಾಗೂ ಆಹಾರ ಪದಾರ್ಥಗಳು ಶರೀರಕ್ಕೆ ಒಗ್ಗದಿದ್ದಾಗ ವಾತವು ಊರ್ಧ್ವ ಮುಖವಾಗಿ, ವಿಲೋಮಗತಿಯನ್ನು ಹೊಂದಿ ಅದನ್ನೆಲ್ಲ ಹೊರ ಹಾಕುವುದಕ್ಕೆ ‘ವಾಂತಿ'(ಛರ್ದಿ) ಎನ್ನುತ್ತಾರೆ. ಇದು ಸಾಮಾನ್ಯವಾಗಿ ಶರೀರವನ್ನು ರಕ್ಷಿಸುವ ಕಾರ್ಯವಾದರೂ ಕೆಲವೊಮ್ಮೆ ಇತರ ರೋಗಗಳಲ್ಲಿ ಲಕ್ಷಣ ರೂಪವಾಗಿಯೂ, ಸ್ವತಃ ರೋಗವಾಗಿಯೂ ಕಾಣಿಸಿಕೊಳ್ಳಬಹುದು. ಇದರಲ್ಲಿ ಪ್ರಾಣ, ಉದಾನ, ಸ್ವತಃ ರೋಗವಾಗಿಯೂ ಕಾಣಿಸಿಕೊಳ್ಳಬಹುದು. ಇದರಲ್ಲಿ ಪ್ರಾಣ, ಉದಾನ, ಸಮಾನವಾಯುಗಳು ಅಮಾಶಯದಲ್ಲಿರುವ ಶ್ಲೇಷ್ಮಕಲಾವನ್ನು ರಕ್ಷಿಸಿ ವಾಂತಿಯನ್ನುಂಟು ಮಾಡುವುವು.

ಕಾರಣಗಳು: ಅಜೀರ್ಣ, ಜ್ವರ, ಮೂತ್ರಪಿಂಡ ವಿಕಾರ, ಒಗ್ಗದ ಔಷಧಿ ಇಲ್ಲವೆ ವಿಷ ಸೇವನೆ, ಜಠರ ಹಾಗೂ ಕರುಳಿನ ಬಾವು, ಕರುಳಿನಲ್ಲಿಯ ತಡೆ, ಕರುಳು ಬಾಲದ ಬಾವು, ಉದರ ಪೊರೆಯ ಬಾವು, ತೀವ್ರ ಹೊಟ್ಟೆ ನೋವು, ತಲೆಗೆ ಪೆಟ್ಟು ಬೀಳುವುದು, ಕ್ರಿಮಿದೋಷ, ಮೆದುಳಿನ ಬಾವು, ತಲೆ ನೋವು, ಪ್ರಯಾಣ, ಗರ್ಭಿಣ್ಯಾವಸ್ಥೆ, ಒಗ್ಗದಿರುವಿಕೆ(ಅಲರ್ಜಿ) ವಿಕಾರಗಳು, ಯಾವುದಾದರೂ ವಸ್ತು ನೋಡಿ ಹೇಸಿಕೆ ಎನಿಸಿದಾಗ, ಕಾಮಾಲೆ ರೋಗ, ಮದ್ಯಸೇವನೆ.

ಲಕ್ಷಣಗಳು:ಅತಿಯಾಗಿ ವಾಂತಿಯಾಗತೊಡಗಿದರೆ ತಲೆ ತಿರುಗುವಿಕೆ, ಪಕ್ಕಡೆಗಳಲ್ಲಿ ನೋವು, ಎದೆ ಉರಿತ, ಹೊಟ್ಟೆನೋವು, ಅಸ್ವಸ್ಥತೆ, ಬಾಯಾರಿಕೆ ಮೊದಲಾದ ಲಕ್ಷಣಗಳು ಕಂಡುಬರುವುದಾದರೂ, ಆಯಾ ದೋಷ ಪ್ರಧಾನ್ಯತೆಗನುಸರಿಸಿ ಇವು ಸ್ವಲ್ಪ ಭಿನ್ನವಾಗಿರುವುವು.

ವಾತದೋಷ ಪ್ರಾಧಾನ್ಯವಿದ್ದರೆ ಎದೆ ಬಿಗಿತ, ಪಕ್ಕಡೆಗಳಲ್ಲಿ ವಿಶೇಷವಾದ ನೋವು, ಬಾಯಿ ಒಣಗುವಿಕೆ, ಕೆಮ್ಮು, ತೀವ್ರವಾದ ಹೊಟ್ಟೆನೋವು, ಧ್ವನಿ ಒಡೆತ, ಜೋರಾದ ತೇಗಿನ ಶಬ್ದಗಳು, ನೊರೆ-ನೊರೆಯಾದ ವಾಂತಿ, ಅಲ್ಪವಾಂತಿ, ಬಾಯಿ ಒಗರಾಗುವಿಕೆ ಈ ಲಕ್ಷಣಗಳು ಕಂಡುಬರುವುವು.

ಆಧಾರ : (ಕಲ್ಯಾಣಕಾರಕ .೧೬, ಪುಟ.೩೯೧೩೯೩)

ಪಿತ್ತದೋಷದಿಂದ ಕಣ್ಣುಕತ್ತಲೆಗೂಡಿಸುವುದು, ಅತಿಯಾದ ಬಾಯಾರಿಕೆ, ಬಾಯಿಗಂಟಲುಗಳು ಒಣಗುವಿಕೆ, ಹಸಿರು-ಹಳದಿ ಬಣ್ಣದ ವಾಂತಿ, ಗಂಟಲು ಉರಿ ಈ ಲಕ್ಷಣಗಳಿರುವುವು.

ಕಫ ದೋಷದಿಂದ ಕೂಡಿರುವ ವಾಂತಿಯಲ್ಲಿ ತೂಕಡಿಕೆ, ಬಾಯಿಯಲ್ಲಿ ಸಿಹಿ, ನೀರೂರುವಿಕೆ, ಹೊಟ್ಟೆಭಾರ, ಅರುಚಿ, ಮೈಭಾರ, ರೋಮಾಂಚನವಾಗುವುದು, ವಾಂತಿ ಪದಾರ್ಥವು, ಸ್ನಿಗ್ಧ, ಘನ ಮತ್ತು ಬಿಳುಪಾಗಿರುವುದು.

ತ್ರಿದೋಷಜ ವಾಂತಿಯಲ್ಲಿ ಮೇಲ್ಕಂಡ ಮೂರು ದೋಷಗಳ ಕೆಲ ಕೆಲವು ಲಕ್ಷಣಗಳು ತೋರುವುವು.

ಅಗಂತುಜ ವಾಂತಿಯಲ್ಲಿ ಭಯ, ಗರ್ಭಿಣ್ಯಾವಸ್ಥೆ, ಅಮದೋಷ, ಕ್ರಿಮಿದೋಷಗಳು ಪ್ರಧಾನವಾಗಿರುವುವು.

ಅಸಾಧ್ಯ ಲಕ್ಷಣಗಳು: ಮಲಸ್ತಿಕವಾಗಿರುವ ವಾಂತಿ, ಬಾಯಿಯಲ್ಲಿ ಕೀವು-ರಕ್ತಗಳಿದ್ದರೆ, ವಿಷದ ಅಂಶಗಳಿದ್ದರೆ, ಕ್ಷೀಣನಾದವನಿಗೆ ಅತಿಯಾಗಿ ವಾಂತಿಯಾಗುತ್ತಲೇ ಇದ್ದರೆ ಚಿಕಿತ್ಸೆಗೆ ಅಸಾಧ್ಯವೆನಿಸುವುದು.

ಚಿಕಿತ್ಸೆ: ಗರ್ಭಿಣಿ, ಮಲದ ಉತ್ಕಟತೆ, ಕ್ರಿಮಿವಿಕಾರ, ಅತ್ಯಂತ ಭೀಕರ ಪ್ರಸಂಗಗಳ ವೀಕ್ಷಣೆ, ಅಪಥ್ಯ ಆಹಾರ – ಇಂತಹ ಆಗುಂತಜ ವಾಂತಿಗೆ ಅವಕ್ಕೆ ತಕ್ಕ ಹಾಗೆ ಚಿಕಿತ್ಸಿಸಬೇಕು.

 • ವಾಂತಿಗೆ ಪ್ರಬಲದೋಷಗಳು ಕಾರಣವಾಗಿದ್ದರೆ ವಮನ-ವಿರೇಚನಗಳನ್ನು ಮಾಡಿಸಿ ದೇಹಶುದ್ಧಿ ಮಾಡಬೇಕು.
 • ಒಣಗಿದ ಆಹರಗಳು, ಹಗರು ಆಹಾರ, ಹುಳಿ-ಉಪ್ಪುಗಳೊಡನೆ ಬಿಸಿ ಅನ್ನ, ಬಿಸಿ ಹಾಲಿಗೆ ನೀರನ್ನು ಸೇರಿಸಿ ಕುಡಿಯಲು ಕೊಡಬೇಕು.
 • ಸನ್ನಿಪಾತಜ ವಾಂತಿವಿಕಾರಕ್ಕೆ ಜೇಷ್ಠಮಧು ಕಷಾಯದಲ್ಲಿ ಸಕ್ಕರೆ ಸೇರಿಸಿ ಕುಡಿಯಲು ಕೊಡಬೇಕು.
 • ಸಕ್ಕರೆ, ಯಾಲಕ್ಕಿ, ನಾಗಕೇಶರಿ, ಲವಂಗ, ಹಿಪ್ಪಲಿ ಕಷಾಯದಲ್ಲಿ ನೆನೆದ ಭತ್ತದರಳಿನ ನೀರನ್ನು ಮೇಲಿಂದ ಮೇಲೆ ಕುಡಿಸುತ್ತಿದ್ದರೆ ರೋಗಿಗೆ ಅತ್ಯಂತ ಹಿತವೆನಿಸುವುದು.
 • ಬೋರೆಹಣ್ಣು, ನೆಲ್ಲಿಕಾಯಿಗಳನ್ನು ಸಕ್ಕರೆ ಸೇರಿಸಿ ತಿನ್ನಿಸಬೇಕು.
 • ಹಿತಕರವಾದ ಸ್ವಾದಿಷ್ಟವಾದ ಆಹಾರ ಪದಾರ್ಥ, ಪಾನಕ, ಲೇಹ್ಯಗಳನ್ನು ವಿಧಿಪೂರ್ವಕ ಕೊಡಬೇಕು.

೧೧. ಬಿಕ್ಕು (ಹಿಕ್ಕಾ) (Hiccup)

ಆಯುರ್ವೇದದಲ್ಲಿ ಬಿಕ್ಕು ಹಾಗೂ ದಮ್ಮುಗಳ ಕಾರಣ ಹಾಗೂ ಚಿಕಿತ್ಸೆಗಳನ್ನು ಒಂದರಲ್ಲಿಯೇ ಹೇಳಿದ್ದಾರೆ. ಆದರೆ ಇದು ಶ್ವಾಸನಳಿಕೆ, ಅನ್ನನಳಿಕೆ ಹಾಗೂ ಉದರಮಹಾಪೇಶಿಯ (Diaphragm) ಕೆರಳಿಕೆಯಿಂದುಂಟಾದ ಲಕ್ಷಣವಾಗಿದೆ. ಈ ಮಹಾಪೇಶಿಯ ಸಂಕೋಚತೆಯಿಂದ ವಿಶೇಷವಾದ ಬಿಕ್ಕಳಿಕೆಗಳು ಬರುವುವು. ಅನ್ನನಾಳ ಹಾಗೂ ಅನ್ನಾಶಯದಲ್ಲುಂಟಾದ ಕೆರಳಿಕೆಗಳು ಕೂಡ (ಖಾರ, ಉಪ್ಪಿನಕಾಯಿ, ತಂಬಾಕು, ಅತಿಮದ್ಯಪಾನ, ಅಡಿಕೆ ಮುಂತಾದವುಗಳಿಂದ) ಬಿಕ್ಕಳಿಕೆಯನ್ನುಂಟು ಮಾಡಬಲ್ಲವು. ಅನ್ನಾಶಯ ಬಾವು, ಕರುಳಿನ ಬಾವು, ಕರುಳಿನಲ್ಲಿ ತಡೆ, ಹೊಟ್ಟೆಯುಬ್ಬರ ಹಾಗೂ ರೋಗಿಯ ಅತ್ಯಾವಸ್ಥೆಯಲ್ಲಿ ಬಿಕ್ಕಳಿಕೆಗಳುಂಟಾಗುವುವು. ಇವಲ್ಲದೇ ಉನ್ಮಾದ, ಮೆದುಳಿನಲ್ಲಿಯ ಗಂಟು, ಮೆದುಳಿನ ಬಾವು, ಮೆದುಳಿನಲ್ಲಿ ಅತಿಯಾದ ದ್ರವಸಂಗ್ರಹ, ಅಪಸ್ಮಾರ ವಿಕಾರಗಳಲ್ಲಿ ನರಮಂಡಲದ ಮೇಲೆ ದುಷ್ಪರಿಣಾಮವಾಗಿ ಬಿಕ್ಕಳಿಕೆಗಳು ಬರುವುವು.

ಕಲ್ಯಾಣಕಾರಕ ಗ್ರಂಥದಲ್ಲಿ ಬಿಕ್ಕು ರೋಗವನ್ನು ದಮ್ಮು ರೋಗದೊಡನೆ ಸೇರಿಸದೇ ಪ್ರತ್ಯೇಕವಾಗಿ ಹೇಳಿದ್ದಾರೆ. ದೇಹದಲ್ಲಿನ ಪ್ರಕುಪಿತ ವಾತವು (ಪ್ರಾಣವಾಯು) ಪ್ಲೀಹ, ಕರುಳು, ಯಕೃತ್ ಈ ಅಂಗಗಳನ್ನು ಅತ್ಯಧಿಕ ವೇಗದಿಂದ ಪೀಡಿಸುವುದರಿಂದ ಬಿಕ್ಕು ಉಂಟಾಗುತ್ತದೆ. ಇದು ಕೆಲ ವೇಳೆ ಪ್ರಾಣಹರಣಕ್ಕೂ ಕಾರಣವಾಗುವುದು ಎಂದು ಜಿನೇಂದ್ರದೇವನು ಹೇಳಿದ್ದಾನೆ. ಇದರಲ್ಲಿ ೫ ಭೇದಗಳಿವೆ – ಅನ್ನಜಾ, ಯಮಿಕಾ, ಕ್ಷುದ್ರಿಕಾ, ಮಹಾಪ್ರಳಯಾ ಹಾಗೂ ಗಂಭೀರಕಾಗಳೆಂದು.

ಯಾವ ರೋಗಿಯ ಶರೀರವನ್ನು ಉದ್ದವಾಗಿ ಮಾಡುವನು, ದೃಷ್ಟಿಯು ಮೇಲ್ಭಾಗಕ್ಕೆ ಹೋಗುವುದೋ, ಅತ್ಯಂತ ಕ್ಷೀಣನಾಗಿದ್ದರೆ, ವಿಶೇಷವಾಗಿ ಈ ವಿಕಾರದೊಡನೆ ಶೀನುಗಳು ಬರುತ್ತಿದ್ದರೆ, ಅರೋಚಕತೆ ಹಾಗೂ ಎರಡೂ ಪಕ್ಕೆಡೆಗಳಲ್ಲಿ ನೋವು ಇದ್ದರೆ ಇಂತಹ ರೋಗಿ ಚಿಕಿತ್ಸೆಗೆ ಅಸಾಧ್ಯವೆಂದು ಹೇಳಿದ್ದಾರೆ.

ಚಿಕಿತ್ಸೆ: ಪ್ರಾಣಾಯಾಮ, ಹೆದರಿಸುವುದು ಹಾಗೂ ರೋಗಿಯ ಮುಖಕ್ಕೆ ತಣ್ಣೀರನ್ನು ಗೊಜ್ಜುವುದರಿಂದ ರೋಗಿಗೆ ಬೇಗನೆ ಗುಣವಾಗುದೆಂದು ಆಚಾರ್ಯರು ಅಭಿಪ್ರಾಯ ಪಡುತ್ತಾರೆ. ಸಕ್ಕರೆ, ಜೇಷ್ಠಮಧು, ಹಿಪ್ಪಲಿಗಳ ಚೂರ್ಣವನ್ನು ಬಿಸಿನೀರಿನಲ್ಲಿ ತೆಗೆದುಕೊಳ್ಳಬೇಕು. ಇಲ್ಲವೆ ಗೈರಿಕ ಅಥವಾ ಮನಃಶಿಲಾಗಳನ್ನು ತುಪ್ಪದಲ್ಲಿ ನೆಕ್ಕಿಸಬೇಕು.

 • ರೋಗಿಗೆ ಬೆಳಗಿನ ಕಾಲದಲ್ಲಿ ನಿಂಬೆ ಹಣ್ಣಿನ ರಸದಲ್ಲಿ ಸೈಂಧವಲವಣ ಹಾಕಿ, ಸ್ವಲ್ಪ ಬಿಸಿ ಮಾಡಿ ಕುಡಿಸಬೇಕು.
 • ಬಿಸಿ ಹಾಲಿನಲ್ಲಿ ಕ್ಷಾರಗಳ ಚೂರ್ಣವನ್ನು ಹಾಕಿ ಕುಡಿಸುವುದರಿಂದ ಬಿಕ್ಕು ಬೇಗನೆ ಗುಣವಾಗುವುದು.
 • ಕಟುಕ ರೋಹಿಣಿಯನ್ನು ಬೆಲ್ಲದೊಡನೆ ತಿನ್ನಿಸಬೇಕು.
 • ಅತಿ ಹೆಚ್ಚಿನ ಬಿಕ್ಕಿನ ವಿಕಾರದಲ್ಲಿ ಬಸ್ತಿ ಚಿಕಿತ್ಸೆ ಮಾಡಿಸಬೇಕು. ಸೈಂಧವ ಲವಣ ಹಾಗೂ ವಿರೇಚಕಗಳನ್ನು ಕೊಟ್ಟು ಭೇದಿ ಮಾಡಿಸಬೇಕು.
 • ರೋಗಿ ನಿಶ್ವಾಸದಲ್ಲಿ ಬಿಟ್ಟ ಗಾಳಿಯನ್ನೇ ಮತ್ತೆ ಉಸಿರಾಡಿಸುವುದರಿಂದ ಇಂಗಿರಾಮ್ಲ ದೊರೆತು ಬಿಕ್ಕುಗಳು ನಿಲ್ಲುವವು.
 • ತಾಮ್ರಭಸ್ಮ, ಮೌಕ್ತಿಕ ಭಸ್ಮ, ಶಂಕ ಭಸ್ಮ, ಪ್ರವಾಳ ಪಂಚಾಮೃತ, ಲೋಕನಾಥ ರಸ, ಸೂತಶೇಖರ, ಹೇಮಗರ್ಭ ಮುಂತಾದ ಸಿದ್ಧೌಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಂಡರೆ ಬಿಕ್ಕಳಿಕೆಗಳು ಬೇಗನೆ ನಿಲ್ಲುವುವು.

(ಆಧಾರ : ..೧೯ಪುಟಗಳು ೪೦೦ ರಿಂದ ೪೦೩)

೧೨. ಭೇದಿ (ಅತಿಸಾರ)(Diarrhoea)

ನಿತ್ಯ ರೂಢಿಗಿಂತ ಭಿನ್ನವಾಗಿ, ಕ್ರಮ ತಪ್ಪಿ, ಅತಿಯಾಗಿ ಮಲವಿಸರ್ಜನೆಯಾಗ ತೊಡಗಿದರೆ ಅದು ಅತಿಸಾರವೆನಿಸುವುದು. ಅನೇಕ ಸಾರೆ ಆಹಾರದಲ್ಲಿನ ದೋಷಗಳಿಂದ, ಅಪಚನ, ಕೆರಳಿಕೆಯನ್ನುಂಟು ಮಾಡುವ ಆಹಾರ ಪದಾರ್ಥಗಳಿಂದ ೩-೪ ಸಾರೆ ಭೇದಿ ಆಗಿ ತಂತಾನೆ ನಿಲ್ಲುವುದು. ಇಂಥಹದಕ್ಕೆ ಔಷಧಿ ಬೇಕಾಗಿಲ್ಲ. ಹೊಟ್ಟೆಮುರಿತ, ಮೇಲಿಂದ ಮೇಲೆ ಮಲವಿಸರ್ಜನೆಗೆ, ಹೋಗಬೇಕೆಂಬ ಸಂವೇದನೆಗಳಿಂದ ಹಾಗೂ ಅದರಿಂದುಂಟಾಗುವ ತೀವ್ರ ಅಶಕ್ತತನದಿಂದ ಅತಿಸಾರವನ್ನು ನಿದಾನಿಸಬೇಕು.

ಶರೀರದಲ್ಲಿನ ದಗ್ಧ ಪಿತ್ತವು ರಕ್ತ, ಕಫ, ವಾಯುಗಳೊಡನೆ ಮಲಾಶಯ ಪ್ರವೇಶಿಸಿ, ಉದರಾಗ್ನಿಯನ್ನು ಮಂದ ಮಾಡಿ ಅತಿಸಾರವನ್ನುಂಟು ಮಾಡುವುದು. ಇದಕ್ಕೆ ಅಜೀರ್ಣ, ಆಹಾರ ವಿಷಮಯತೆ, ಅಶುದ್ಧ ನೀರು, ಕೆರಳಿಕೆಯನ್ನುಂಟು ಮಾಡುವ ಆಹಾರ, ಕರುಳಿನ ಬಾವು, ಕ್ರಿಮಿದೋಷ ಹಾಗೂ ಸಾಂಕರ್ಯವಿಕಾರಗಳೂ ಕಾರಣವಾಗುತ್ತವೆ.

ಆಯುರ್ವೇದದಲ್ಲಿ ವಾತಜ, ಪಿತ್ತಜ, ಕಫಜ, ಶೋಕಜ ಹಾಗೂ ಅಮಜ ಅತಿಸಾರಗಳೆಂದು ಐದು ಭೇದಗಳನ್ನು ಮಾಡಲಾಗಿದೆ. ಆದರೆ ಕಲ್ಯಾಣಕಾರಕದಲ್ಲಿ ಪ್ರತ್ಯೇಕ ತ್ರಿದೋಷಜಗಳಲ್ಲದೆ ಸನ್ನಿಪಾತಾತಿಸಾರ, ಅಮಾತಿಸಾರ ಹಾಗೂ ಪಕ್ವಾತಿಸಾರಗಳೆಂದು ಆರು ಭೇದಗಳನ್ನು ಹೇಳಿದ್ದಾರೆ.

ವಾತಜ ಅತಿಸಾರದಲ್ಲಿ ಮೇಲಿಂದ ಮೇಲೆ ಭೇದಿಗೆ ಹೋಗುವ ಬಯಕೆ, ಹೊಟ್ಟೆಯಲ್ಲಿ ಶಬ್ದ, ಬುರುಗಿನಂತಾಗುವ ಕಂದುವರ್ಣದ ಭೇದಿ, ಗಂಟಲು ಒಣಗುವುದು, ಮೈ-ಕೈಗಳ ನೋವು ಮೊದಲಾದ ಲಕ್ಷಣಗಳಿರುವುವು. ಇದಕ್ಕೆ ಅಮಾವಸ್ಥೆಯಲ್ಲಿದ್ದಾಗ ಹುಳಿ ಮಜ್ಜಿಗೆಯಲ್ಲಿ ಮೆಣಸು, ಸೈಂಧವ ಲವಣ, ಶುಂಠಿಗಳನ್ನು ತಯಾರಿಸಿದ ಗಂಜಿಯನ್ನು ಕುಡಿಯಬೇಕು. ಪಾಠ್ಯಾದಿಕ್ವಾಥ, ಕನಕಸುಂದರ ರಸ, ಅಗಸ್ತ್ಯ ಸೂತರಾಜ ರಸಗಳನ್ನು ತೆಗೆದುಕೊಳ್ಳಬೇಕು.

ಪಿತ್ತಜಾತಿಸಾರದಲ್ಲಿ ರೋಗಿಯು ನೀರಿನಂತಹ, ವಾಸನೆಯುಕ್ತವಾದ ಹಳದಿ ಕೆಂಪು ಬಣ್ಣದ ಮಲವನ್ನು ಉರಿಯೊಡನೆ ವಿಸರ್ಜಿಸುವನು. ಈತನಿಗೆ ನೀರಡಿಕೆ ಹೆಚ್ಚು. ಗುದಭಾಗದಲ್ಲಿ ಉರುಪು ಹೆಚ್ಚಾಗಿರುವುದು. ಹಾಗೂ ಕೆಲ ವೇಳೆ ಗುದಪಾಕವೂ ಆಗಬಹುದು. ಇದಕ್ಕೆ ಜೇಷ್ಠಮಧು ಕಷಾಯದಲ್ಲಿ ಆಡಿನ ಹಾಲನ್ನು ಹಾಕಿಕೊಂಡು ಕುಡಿಯಬೇಕು. ಇಲ್ಲವೆ ಕುಟಜ, ಬಿಲ್ವಾದಿ ಕ್ವಾಥ, ಅತಿ ವಿಷಾದಿ ಚೂರ್ಣ, ಪ್ರವಾಳ ಪಂಜಾಮೃತ ಹಾಗೂ ಸೂತಶೇಖರಗಳನ್ನು ಅವಶ್ಯಕತೆಗಳಿಗೆ ತಕ್ಕಂತೆ ತೆಗೆದುಕೊಳ್ಳಬೇಕು.

ಕಫಜಾತಿಸಾರದಲ್ಲಿ ಮಲದ ವರ್ಣವು ಬಿಳಿಯಾಗಿರುವುದೂ ಜಾರುವ ಸ್ವಭಾವದ್ದಾಗಿರುವುದು. ಮೇಲಿಂದ ಮೇಲೆ ಮಲ ವಿಸರ್ಜನೆಗೆ ಹೋಗುವ ಬಯಕೆ ಇರದಿದ್ದರೂ ಪ್ರಮಾಣ ಹೆಚ್ಚು. ಹೊಟ್ಟೆ ಮತ್ತು ಗುದಭಾಗಗಳಲ್ಲಿ ಭಾರವೆನಿಸುವುದು. ರೋಗಿಯು ಸೋಮಾರಿಯಾಗಿದ್ದು, ಮಲಗುವನು. ಇವನಿಗೆ ದಾರುಹರಿದ್ರ, ಅರಿಶಿನ, ತ್ರಿಕಟು, ನಾಗರಮೋಥ, ಚಿತ್ರಕಗಳ ಕಲ್ಕವನ್ನು ಬಿಸಿನೀರಿನಲ್ಲಿ ಕೊಡಬೇಕು. ಇಲ್ಲವೆ ಅಗಳುಶುಂಠಿ, ಅಜವಾನ, ಮೆಣಸು, ನೆಲ್ಲಿಕಾಯಿ ಹಾಗೂ ಅಳಲೆಕಾಯಿಗಳ ಕಲ್ಕವನ್ನಾಗಲೀ ಕೊಡಬಹುದು. ಇವೆಲ್ಲ ಸಾಧ್ಯವಾಗದಿದ್ದರೆ ಬಿಸಿನೀರಿನಲ್ಲಿ ಶುಂಠಿ ಅರೆದು ಕುಡಿಯಬೇಕು. ಹಿಂಗ್ವಾದಿ ಚೂರ್ಣ, ಲೋಕನಾಥ ರಸ, ಆನಂದ ಭೈರವ, ಲಕ್ಷ್ಮಿ ವಿಲಾಸ ರಸಗಳು ಹೆಚ್ಚು ಉಪಯುಕ್ತವೆನಿಸುವುವು.

ಅತಿಯಾದ ಭಯ-ಶೋಕಗಳಿಂದ ಆದ ಅತಿಸಾರವು ಅನೇಕ ವೇಳೆ ತನ್ನಷ್ಟಕ್ಕೆ ತಾನೇ ನಿಲ್ಲುವುದು. ಒಂದು ವೇಳೆ ನಿಲ್ಲದಿದ್ದರೆ ವಾತಜ ಅತಿಸಾರದಂತೆ ಚಿಕಿತ್ಸಿಸಬೇಕು.

ಆಮಜಾತಿಸಾರಕ್ಕೆ ಅಮಾಂಶಗಳನ್ನು ಹೊರಹಾಕಲು ವಾಂತಿ ಮಾಡಿಸಬೇಕು. ಲಂಘನ ಮಾಡಿಸಬೇಕು. ಶಿವಕ್ಷಾರ, ಭಾಸ್ಕರ ಲವಣ, ಪಾಠಾದಿ ಚೂರ್ಣಗಳನ್ನು ಅವಶ್ಯಕತೆಗನುಸಾರ ಕೊಡಬೇಕು.

ಅತಿಸಾರವನ್ನು ನಿಲ್ಲಿಸಲು ಒಮ್ಮೆಲೆ ಔಷಧಿಗಳನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲು ಎರಡು ಚಮಚಗಳಷ್ಟು ಔಡಲ ಎಣ್ಣೆಯನ್ನು ತೆಗೆದುಕೊಂಡರೆ ಹೊಟ್ಟೆಯಲ್ಲಿನ ದೋಷಗಳ ಹೊರಹೋಗಲು ಸಾಧ್ಯವಾಗುವುದು.

ಭೇದಿಯು ಅತಿ ತೀವ್ರವಾಗಿದ್ದು ಅದರೊಂದಿಗೆ ನೋವು ವಿಶೇಷವಾಗಿದ್ದರೆ, ಅಗಸ್ತ್ಯಸೂತರಾಜವು ಚೆನ್ನಾಗಿ ಕೆಲಸ ಮಾಡುವುದಲ್ಲದೆ ಗುದಭ್ರಂಶವಾಗದಂತೆ ನೋಡಿಕೊಳ್ಳುವುದು.

ಕನಕಸುಂದರವು ಜ್ವರಾತಿಸಾರ, ಅತಿಸಾರ, ಸಂಗ್ರಹಣಿ ವಿಕಾರಗಳಲ್ಲಿ ಹೆಚ್ಚು ಉಪಯುಕ್ತವೆನಿಸಿದೆ. ಮಕ್ಕಳಿಗೆ ಹಲ್ಲು ಬರುತ್ತಿರುವಾಗ ಕಂಡುಬರುವ ಸ್ವಲ್ಪ ಜ್ವರ ಹಾಗೂ ಅತಿಸಾರಗಳಿಗೆ ಕನಕಸುಂದರವು ಚೆನ್ನಾಗಿ ಕೆಲಸ ಮಾಡುತ್ತದೆ.

ವಮನಯುಕ್ತ ಅತಿಸಾರಕ್ಕೆ ಜಾತಿಫಲಾದಿವಟಿಯನ್ನು ಲಿಂಬೆರಸದೊಂದಿಗೆ ತೆಗೆದುಕೊಂಡರೆ ಹೆಚ್ಚು ಉಪಯುಕ್ತ.

(ಆಧಾರ :ಕಲ್ಯಾಣಕಾರಕ ., ಪು.೧೭೪೧೮೦)

ಪಥ್ಯ: ಅರಿದ ಹಾಲು, ಮಜ್ಜಿಗೆ, ಗಂಜಿ, ಹೆಸರು ಬೇಳೆ ಕಟ್ಟು ಇಲ್ಲವೆ ಅಕ್ಕಿ ಹುಗ್ಗಿ ತೆಗೆದುಕೊಳ್ಳಬೇಕು. ಎಳೆ ತೆಂಗಿನ ನೀರು, ನಿಂಬೆ ಪಾನಕಗಳನ್ನು ಹೆಚ್ಚಾಗಿ ಕುಡಿಯಬೇಕು.

ಅಸಾಧ್ಯ ಲಕ್ಷಣ: ಮಲವು ತುಪ್ಪ, ಎಣ್ಣೆ, ಕೊಳೆತ ಮಾಂಸ, ಬಿಳಿ ಹಳದಿಯಾಗಿದ್ದರೆ ರೋಗಿ ಕೃಶನಾಗಿದ್ದರೆ, ಗುದಭ್ರಂಶ, ಗುದಪಾಕಗಳಾಗಿದ್ದರೆ ಚಿಕಿತ್ಸೆಗೆ ಅಸಾಧ್ಯವೆಂದು ತಿಳಿಯಬೇಕು.