೧೩. ಸೂರ್ಯಾವರ್ತ (ಅರ್ಧ ತಲೆನೋವು) (Maxillary sinusitis)

ಮೂಗಿನ ಎರಡೂ ಹೊರಳೆಗಳ ಮೇಲ್ಭಾಗಗಳ ಎರಡೂ ಬದಿಗಳಲ್ಲಿ ಅತಿ ಸೂಕ್ಷ್ಮವಾದ ರಂಧ್ರಗಳಿರುತ್ತವೆ. ಈ ರಂಧ್ರಗಳಿಗೆ ಕ್ರಿಮಿಗಳ ಸೋಂಕು ತಗಲಿದಾನ(ನೆಗಡಿ ಆದಾಗ) ಅವಕ್ಕೆ ಬಾವು ಬಂದು ಅತಿಯಾದ ತಲೆನೋವು ಬರುವುದು. ಈ ತಲೆನೋವಿನ ವಿಶೇಷತೆ ಎಂದರೆ ಬೆಳಗಿನಿಂದ ಮಧ್ಯಾಹ್ನದವರೆಗೆ ಹೆಚ್ಚಾಗಿದ್ದ ತಲೆನೋವು ಸಾಯಂಕಾಲವಾದಂತೆ ಕಡಿಮೆ ಆಗುತ್ತ ಹೋಗುತ್ತದೆ.

ಮೂಗಿಗೆ ಪೆಟ್ಟು ಬೀಳುವುದು, ಮೂಗಿನ ರಂಧ್ರಗಳು ಹೆಪ್ಪುಗಟ್ಟುವುದು, ವಾತಾವರಣ ಬದಲಾವಣೆಗಳು ನೇರವಾದ ಕಾರಣಗಳಾದರೆ ಬಡತನ, ಹಸಿವು, ಪೌಷ್ಟಿಕ ಆಹಾರದ ಕೊರತೆ, ಜನಸಾಂದ್ರತೆಯಲ್ಲಿ ವಾಸ – ಇವು ಅಪ್ರತ್ಯಕ್ಷ ಕಾರಣಗಳೆನಿಸುತ್ತವೆ. ನೆಗಡಿ ಆದಾಗ ಈಜಾಡುವುದು, ಮುಳುಗುವುದು, ನೀರಿನಲ್ಲಿ ನೆನೆಯುವುದು – ಹೀಗೆ ಶೈತ್ಯ ಮಾಡಿಕೊಳ್ಳುವುದುದರಿಂದ ಈ ವಿಕಾರ ಬೇಗನೆ ಬರುವುದು. ಮೂಗಿನ ಎರಡೂ ಮಗ್ಗಲು ಹಾಗೂ ಹಣೆಯ ಮಧ್ಯಭಾಗಗಳಲ್ಲಿ ಅತಿಯಾದ ನೋವಿನ ಅನುಭವವಾಗುವುದು. ತಲೆಯು ತುಂಬ ಭಾರವಾಗುವುದು. ಗಂಟಲಿನಲ್ಲಿ ಕೆರೆತ, ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆ, ಗಂಟಲಿನಲ್ಲಿ ಸಿಂಬಳ ಇಳಿಯುವುದು, ವಾಸನೆಯಲ್ಲಿ ವ್ಯತ್ಯಾಸ ಇವೆಲ್ಲ ಬೆಳಗಿನಿಂದ ಹೆಚ್ಚಾಗಿದ್ದು ಸಾಯಂಕಾಲವಾದಂತೆ ಕಡಿಮೆ ಆಗುತ್ತಾ ಹೋಗುವುವು. ಇದರ ಉಲ್ಬಣಾವಸ್ಥೆಯಲ್ಲಿ ಜ್ವರ, ಮೈ-ಕೈಗಳ ನೋವು ಉಂಟಾಗಿ ರೋಗಿ ಹಾಸಿಗೆ ಹಿಡಿಯಬಹುದು.

ಚಿಕಿತ್ಸೆ: ಈ ಮೊದಲು ನೆಗಡಿಗೆ ಹೇಳಿದ ಚಿಕಿತ್ಸೆಯೊಡನೆ ಗೋದಂತಿ ಭಸ್ಮವನ್ನು ೧೨೫ ಮಿಲಿಗ್ರಾಂ ನೆಲ್ಲಿಕಾಯಿ ಹಾಗೂ ಇಸಬ ಗೋಲ್‌ಗಳ ಜೊತೆ ಕೊಡಬೇಕು.

 • ಇದರಲ್ಲಿ ಮಿತ ಕಫಗಳ ಪ್ರಧಾನತೆ ಇ‌ದ್ದಾಗ ಅರ್ಧಾವಬೇದಕ ನೆಗಡಿ, ಸ್ವರ ಭೇದಗಳಲ್ಲಿ ಶ್ವಾಸ ಕುಠಾರ ರಸವು ಉಪಯುಕ್ತವೆನಿಸಿದೆ.
 • ಎಕ್ಕದ ಎಲೆಗೆ ತುಪ್ಪಹಚ್ಚಿ ಕೆಂಡದ ಮೇಲೆ ಸ್ವಲ್ಪ ಬಿಸಿ ಮಾಡಿ ಮೂರು ಹನಿಗಳಷ್ಟು ರಸವನ್ನು ಮೂಗಿನ ಹೇಳಿಕೆಗಳಲ್ಲಿ ಹಾಕಿದರೆ ನೋವು ಕಡಿಮೆ ಆಗುವುದು. ಇದರಂತೆ ಕುಂಕುಮ ಘೃತ, ಶುಂಠ್ಯಾದಿ ನಸ್ಯಗಳನ್ನು ನಸ್ಯದಂತೆ ತೆಗೆದುಕೊಂಡರೂ ತಲೆನೋವು ಕಡಿಮೆ ಆಗುವುದು.

೧೪. ಅರ್ಧಾವಭೇದ (Migraine)

ಈ ತರಹದ ತಲೆನೋವಿಗೆ ನಮ್ಮ ದೇಶದ ೧೦% ಜನರಾದರೂ ಬಲಿಯಾಗಿದ್ದಾರೆನ್ನಬಹುದು. ಇದೊಂದು ತೀವ್ರ ಸ್ವರೂಪದ ತಲೆನೋವು ಮೇಲಿಂದ ಮೇಲೆ ಬರುತ್ತಿರುವುದು. ಸಾಮಾನ್ಯವಾಗಿ ತಲೆಯ ಎರಡು ಭಾಗಗಳಲ್ಲಿ ಒಮ್ಮೆಲೇ ಇಲ್ಲವೇ ಕ್ರಮೇಣ ಬರುವುದು. ಸ್ತ್ರೀಯರಲ್ಲಿ ಹೆಚ್ಚು. ವಾರದ ಕೊನೆ, ಋತು ಕಾಲದ ಮೊದಲು, ಮನೋ ಉದ್ವೇಗ ಇಲ್ಲವೇ ಅತಿಯಾದ ದಣಿವಾದಾಗ, ಬಿಸಿಲು, ಅತಿಯಾದ ಸಪ್ಪಳ, ಮನಸ್ಸಿಗೆ ಒಗ್ಗದ ಪ್ರಸಂಗಗಳು ಘಟಿಸಿದಾಗ ಈ ತಲೆನೋವು ಕಂಡುಬರುವುದು. ಒಮ್ಮೊಮ್ಮೆ ನೋವು ಸೌಮ್ಯವಾಗಿರಬಹುದು, ನೋವಿನ ವೇಳೆ ಹಾಗೂ ಮೇಲಿಂದ ಮೇಲೆ ಬರುವಿಕೆಗಳು ಕೂಡ ಒಂದೇ ತೆರನಾಗಿರುವುದಿಲ್ಲ. ನೋವು ಬಂದಾಗ ಕತ್ತಲುಗೂಡಿಸುವುದು, ದೃಷ್ಟಿಮಂದವಾಗುವುದು – ಇವು ತಲೆನೋವು ಬರುವ ೧೫-೩೦ ನಿಮಿಷಗಳ ಮೊದಲು ಕಂಡುಬರುವವು. ತಲೆಯಲ್ಲಿ ಹೊಡೆದಂತೆ ನೋವು ಗಂಟೆಗಟ್ಟಲೆ ಇದ್ದು ಕೆಲವೇಳೆ ಸೌಮ್ಯ ಇಲ್ಲವೆ ಅತ್ಯಲ್ಪ ನೋವು ದಿನಗಟ್ಟಲೆ ಇರುವುದು. ಇದರೊಡನೆ ಉಬ್ಬಳಿಕೆ, ವಾಂತಿಗಳಾಗುವುವು. ತಲೆಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದಾಗ ಇಲ್ಲವೆ ಬಟ್ಟೆಯಿಂದ ಬಿಗಿದಾಗ ಕಟ್ಟಿಕೊಂಡಾಗ ನೋವು ಕಡಿಮೆ ಆಗುವುದು. ತಲೆ ತಿರುಗುವಿಕೆ ಕೆಲವರಲ್ಲಿ ಕಂಡುಬರಬಹುದು. ಮನೋಖಿನ್ನತೆ, ಸಿಟ್ಟು, ಇನ್ನು ಕೆಲವರಲ್ಲಿ ಭಾವನೆಗಳಿಲ್ಲದಿರುವುದು ತೋರಿಬರುವವು ಕಣ್ಣುಗಳು ನೀರೂರುವುದು, ಬೆವರು, ಹಸಿವಿಲ್ಲದಿರುವುದು, ಉಬ್ಬಳಿಕೆ, ವಾಂತಿ, ಹೊಟ್ಟೆಯುಬ್ಬರ, ಭೇದಿಗಳು ತಲೆನೋವು ಹೊರಟು ಹೋದ ಬಳಿಕ ಕಂಡುಬರುವುವು. ಈ ತರಹದ ತಲೆನೋವು ಅನುವಂಶಿಕವಾಗಿಯೂ ಬರಬಹುದು.

ಕಾರಣಗಳು: ಒಣ ಊಟ, ಹೆಚ್ಚು ಊಟ, ಅಧ್ಯಶನ, ಪೂರ್ವ ದಿಕ್ಕಿನ ಗಾಳಿ, ಮೈಥುನ, ವೇಗಧಾರಣ, ಪರಿಶ್ರಮ ಇಲ್ಲವೆ ವ್ಯಾಯಾಮ ಮೊದಲಾದ ಕಾರಣಗಳಿಂದ ಕುಪಿತಗೊಂಡ ವಾಯು ಒಂದೇ ಆಗಲಿ, ಕಫದೊಡನೆ ಸೇರಿ ಆಗಲಿ ತಲೆಯ ಅರ್ಧಭಾಗವನ್ನು ಹಿಡಿದುಕೊಂಡು ಮನ್ಯಾಶಿರ ಹಣೆಯ ಮಧ್ಯಭಾಗ, ಕಿವಿ ಹಿಂಭಾಗ, ಕಿವಿ, ಕಣ್ಣುಗಳು ಮೊದಲಾದ ಭಾಗಗಲ್ಲಿ ಶಸ್ತ್ರದಿಂದ ಕತ್ತರಿಸಿದಂತೆ ಇಲ್ಲವೆ ಬೆಂಕಿಯಿಂದ ಸುಟ್ಟಂತೆ ಇಲ್ಲವೆ ಕಡಗೋಲಿನಿಂದ ಕಡಿದಂತೆ ಅತಿ ಹೆಚ್ಚಿನ ನೋವನ್ನುಂಟು ಮಾಡುವುದು. ಇದಕ್ಕೆನೇ ‘ಅರ್ಧಾವಭೇದ’ ಎನ್ನುವರು. ಇದರಿಂದ ಎಷ್ಟೋ ಸಾರೆ ಕಣ್ಣು ಇಲ್ಲವೇ ಕಿವಿಗಳ ಶಕ್ತಿ ಕೂಡ ನಷ್ಟವಾಗುವ ಸಂಭವವಿದೆ.

ಚಿಕಿತ್ಸೆ: ವೈದ್ಯನು ಈ ವಿಕಾರದಲ್ಲಿಯ ದೋಷಗಳ ಪ್ರಾಧಾನ್ಯತೆ- ಅಪ್ರಾಧಾನ್ಯತೆಗಳನ್ವಯ ಸಿರಾಮೋಕ್ಷಣ, ಶಿರೋವಿರೇಚನ, ತಾಪನ, ಬಂಧನ, ಕವಲಧಾರಣ, ಲೇಪನ ಮುಂತಾದ ವಿಧಾನಗಳಿಂದ ಚಿಕಿತ್ಸಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ(ಕ.ಅ.೧೫, ಶ್ಲೋಕ-೮)

 • ಎಕ್ಕದ ಎಲೆಗೆ ತುಪ್ಪಸವರಿ ಅದನ್ನು ಕೆಂಡದ ಮೇಲೆ ಸ್ವಲ್ಪ ಬಿಸಿ ಮಾಡಿ ಮೂರು ಹನಿಗಳಷ್ಟು ರಸವನ್ನು ಮೂಗಿನಲ್ಲಿ ಹಾಕಿಕೊಂಡರೆ ತಲೆನೋವು ಕಡಿಮೆ ಆಗುವುದು.
 • ಕುಂಕುಮ ಘೃತಕ್ಕೆ ಕೇಸರಿಯನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಂಡು ಮೂಗಿನ ಹೊಳಿಕೆಗಳಲ್ಲಿ ಎರಡೆರಡು ಹನಿಗಳಂತೆ ಹಾಕಿಕೊಂಡರೆ ಅರ್ಧಾವಭೇದವಲ್ಲದೆ ಇನ್ನಿತರ ಮಸ್ತಿಷ್ಕವಿಕಾರಗಳೂ ಕಡಿಮೆ ಆಗುವುವು.
 • ಶುಂಠ್ಯಾದಿ ನಸ್ಯವನ್ನು ನಿತ್ಯ ೨-೩ ಸಾರೆ ಮೂಗಿನಲ್ಲಿ ಏರಿಸಿಕೊಳ್ಳುತ್ತಿದ್ದರೆ ತಲೆನೋವು ಕಡಿಮೆ ಆಗುವುದು.
 • ಹಣೆಗೆ ಸಾಸಿವೆ ಕಲ್ಯದ ಬಿಸಿಪಟ್ಟಿ ಇಲ್ಲವೆ ಶುಂಠಿ ಪುಡಿಯ ಪಟ್ಟಿ(ಶುಂಠಿಪುಡಿಯನ್ನು ನೀರಿನಲ್ಲಿ ಕಲಿಸಿ ಅದನ್ನು ಬಿಸಿಮಾಡಿ ಹಾಕಿಕೊಳ್ಳುವುದು)ಯನ್ನು ಹಾಕಿಕೊಳ್ಳಬೇಕು.
 • ಕೋತಂಬರಿ ಬೀಜ-ಜೀರಿಗೆಗಳ ಕಷಾಯಕ್ಕೆ ಹಾಲು, ಸಕ್ಕರೆ ಸೇರಿಸಿ ನಿತ್ಯ ಕುಡಿಯುತ್ತಲಿದ್ದರೆ ತಲೆನೋವಿಗೆ ಒಳ್ಳೆಯದು.

೧೫. ಜಲೋದರ (Ascitis)

ಉದರ ಭಿತ್ತಿಯಲ್ಲಿ ನೀರು ತುಂಬುವ ರೋಗಕ್ಕೆ ‘ಜಲೋದರ’ ಎನ್ನುತ್ತಾರೆ. ಸ್ನೇಹಪಾನ ಮಾಡಿರುವವನಿಗೆ ಅಗ್ನಿಶಕ್ತಿ ಕಡಿಮೆ ಆಗಿರುವಾಗ ಅತಿ ಕ್ಷೀಣನಾದವ ಇಲ್ಲವೆ ಕೃಶನಾದವನು. ಅತಿಯಾಗಿ ತಣ್ಣೀರು ಕುಡಿಯುವುದರಿಂದ ಅವನ ಕ್ಲೋಮದಲ್ಲಿರುವ ವಾಯುವು ಉದರ ಮೂಲದ ಸ್ರೋತಸ್ಸುಗಳ ಮಾರ್ಗವನ್ನು ಕಫದಿಂದ ತಡೆದು ನೀರನ್ನು ಹಿಂದಕ್ಕೆ ತಳ್ಳುವುದು. ಈ ನೀರಿನಂಶವು ವಿಶೇಷವಾಗಿ ರಸಧಾತುವಿನಲ್ಲಿಯೇ ನಿಂತು ಉದರಭಿತ್ತಿಯಲ್ಲಿ ಸಂಜಯವಾಗುವುದು. ಇದೇ ‘ಜಲರೋಗ’ ವೆನಿಸುವುದು. ಇದೇ ಮಾತನ್ನು ಕಲ್ಯಾಣಕಾರಕದ ಹನ್ನೊಂದನೆಯ ಅಧ್ಯಾಯ ೧೩೬ ನೇ ಶ್ಲೋಕದಲ್ಲಿ ಹೇಳಲಾಗಿದೆ.

ಯಕೃತೋದರ, ಹೃದಯದ ಬಲಹೀನತೆ ಹಾಗೂ ಇನ್ನಿತರ ಹೃದಯ ವಿಕಾರಗಳು, ದೇಹದಲ್ಲಿ ಅಲ್ಬುಮಿನ್ ಅಂಶ ಕಡಿಮೆ ಆಗುವುದು, ಡಿಂಬ ಗ್ರಂಥಿರೋಗ, ಸ್ವಾದು ರಸಗ್ರಂಥಿಯ ಭಾವು, ಉದರಭಿತ್ತಿಯ ಕ್ಷಯ, ದುಷ್ಟಾರ್ಬುದ ಈ ಮೊದಲಾದ ರೋಗಗಳಲ್ಲಿ ಲಕ್ಷಣ ರೂಪವಾಗಿ ಜಲೋದರವು ಕಾಣಿಸಿಕೊಳ್ಳುವುದು.

ಆಹಾರದಲ್ಲಿ ಅಪೇಕ್ಷೆ ಇಲ್ಲದಿರುವುದು, ಬಾಯಾರಿಕೆ, ಗುದದಲ್ಲಿ ಪಿಚ್ಛಲ ಸ್ರಾವ, ಉದರಶೂಲ, ಉಸಿರಾಡುವಾಗ ಉಬ್ಬುಸ ಬಂದಂತಾಗುವುದು, ನೀರಿನಂಶ ಹೆಚ್ಚಾದಂತೆ ಕೆಮ್ಮು ಹಾಗೂ ದೌರ್ಬ‌ಲ್ಯಗಳು, ಹೊಟ್ಟೆಯು ಹೊಳೆಯುತ್ತ ದೊಡ್ಡದಾಗುತ್ತ ಹೋಗುವುದು, ರೋಗಿಯು ಮಲಗಿಕೊಂಡಾಗ ಅತ್ತಿತ್ತ ಹೊರಳಾಡಿದರೆ ನೀರು ಓಡಾಡುವುದು ಹಾಗೂ ಕೆಳಭಾಗಕ್ಕೆ ಭಾರವೆನಿಸುವುದು, ಉದರದ ಮೇಲ್ಭಾಗದಲ್ಲಿ ನೀಲಿವರ್ಣದ ಸಿರೆಗಳು ಸ್ಪಷ್ಟವಾಗಿ ಕಾಣಿಸಿತೊಡಗುವುವು. ಈ ವಿಕಾರವನ್ನು ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸಿಸಿದರೆ ಸಾಧ್ಯವೆನಿಸುವುದು. ಅಲಕ್ಷಿಸಿದಂತೆ ಉಪದ್ರವಗಳು ಹೆಚ್ಚಾಗಿ ರೋಗವು ಯಾಪ್ಯ ಹಾಗೂ ಅಸಾಧ್ಯವೆನಿಸುವುದು.

ವಾಂತಿ, ಅತಿಸಾರ, ಕಣ್ಣು ಕತ್ತಲುಗೂಡಿಸುವುದು, ಬಾಯಾರಿಕೆ, ಶ್ವಾಸ, ಕಾಸ, ಬಿಕ್ಕು, ದೌರ್ಬಲ್ಯ, ಪಕ್ಕಡೆಗಳ ನೋವು, ಅರುಚಿ, ಸ್ವರಭೇದ ಹಾಗೂ ಮೂತ್ರದ ತೊಂದರೆ ಇವೇ ಮೊದಲಾದ ಉಪದ್ರವಗಳಿರುವುದರಿಂದ ಚಿಕಿತ್ಸೆ ಅಸಾಧ್ಯವೆನಿಸುವುದು.

ಚಿಕಿತ್ಸೆ: ಜಲರೋಗಿಗೆ ಎಲ್ಲಕ್ಕೂ ಮೊದಲು ಮೈಗೆಲ್ಲ ತೈಲ ಲೇಪಿಸಿ ಉಗುರು ಬೆಚ್ಚಿಗಿನ ನೀರಿನಿಂದ ಸ್ನಾನ ಮಾಡಿಸಬೇಕು. ಇದಾದ ಬಳಿಕ ಕಟಿ ಪ್ರದೇಶದಲ್ಲಿ ನಾಭಿಪ್ರದೇಶದ ನಾಲ್ಕು ಅಂಗುಲ ಕೆಳಗೆ ಸ್ವಲ್ಪ ಎಡಭಾಗದಲ್ಲಿ ಶಸ್ತ್ರದಿಂದ ಛೇದನ ಮಾಡಬೇಕು. ಅದರಲ್ಲಿ ಒಂದು ಕೊಳವೆಯನ್ನಿರಿಸಿ ಹನಿಹನಿಯಾಗಿ ನೀರು ಹೊರಬರುವಂತೆ ನೋಡಿಕೊಳ್ಳಬೇಕು. ಆದರೆ ಒಮ್ಮೆಲೆ ಅತಿಯಾಗಿ ನೀರನ್ನು ತೆಗೆಯಬಾರದು. ಇದರಿಂದ ನೀರಡಿಕೆ, ಮೂರ್ಛೆ, ಜ್ವರಗಳು ಬರುವುವು. ನಂತರ ಸೈಂಧವ+ ರೋಪಣ ತೈಲ ಹಾಕಿ ಬಟ್ಟೆಯಿಂದ ಬಿಗಿಯಾಗಿ ಬಂಧನ ಹಾಕಬೇಕು. ಹೀಗೆ ನಿತ್ಯ ೧೫ ದಿವಸಗಳವರೆಗೆ ನೀರನ್ನು ಹೊರತೆಗೆಯಬೇಕೆಂದು ಕಲ್ಯಾಣಕಾರಕ (ಅ.೨೧, ಶ್ಲೋಕ ೧೭೪-೧೭೭ಗಳಲ್ಲಿ) ದಲ್ಲಿ ಹೇಳಿದ್ದಾರೆ.

 • ಜಲೋದರ ರೋಗಿಗೆ ಹಾಲನ್ನು ವಿಶೇಷವಾಗಿ ಕೊಡಬೇಕೆಂದು ಹೇಳಿದ್ದಾರೆ. ಏಕೆಂದರೆ ಇದು ರೋಗನಾಶಕ ಔಷಧಿಯುಕ್ತವೂ ಆಗಿದ್ದು ಸಂತಾಪ, ರೋಷ, ನೀರಡಿಕೆ, ರಕ್ತಪಿತ್ತ ಹಾಗೂ ವಾತವಿಕಾರಗಳನ್ನು ನಾಶಪಡಿಸುವುದು. ಪೌಷ್ಟಿವೆನಿಸಿದೆ. ಬಲಪ್ರದವೆನಿಸಿದೆ. ಶೋಧಕವಾಗಿದ್ದು ಸಂಧಾನಕಾರಿಯಾಗಿದೆ.(ಕ.ಅ.೨೧ ಶ್ಲೋಕ ೧೭೮-೧೭೯)
 • ಸ್ವೇದಲ ಹಾಗೂ ಮೂತ್ರಲೌಷಧಿಗಳನ್ನು ಪುನರ್ನವಾಧಿ ಕ್ವಾಧ, ಪುನರ್ನವಾರಿಷ್ಟ, ಜಲೋದರಾರಿ ರಸಗಳನ್ನು ಕೊಡಬೇಕು.
 • ಪುನರ್ನವಾ ಮಂಡೂರವನ್ನು ಬೆಳಿಗ್ಗೆ ರಾತ್ರಿ ಒಂದೊಂದು ಮಾತ್ರೆಯಂತೆ ಕೊಟ್ಟರೆ ಮುತ್ರವೂ ಸರಿ ಆಗುವುದು ಹಾಗೂ ರೋಗಿಗೆ ರಕ್ತವರ್ಧಕವೂ ಎನಿಸುವುದು.
 • ಆರೋಗ್ಯವರ್ಧಿನಿ ಮಾತ್ರೆಯನ್ನು ಬೆಳಿಗ್ಗೆ ಹಾಗೂ ರಾತ್ರಿ ಒಂದೊಂದರಂತೆ ನಿತ್ಯ ಕೊಟ್ಟರೆ ಹಸಿವು ಹೆಚ್ಚುವುದು, ಪಚನ ಸರಿ ಆಗುವುದು, ಯಕೃತ್, ಹೃದಯ, ಮೂತ್ರಪಿಂಡಗಳ ಕ್ರಿಯೆಯೂ ಆಗುವುದು. ಜಲೋದರ ವಿಕಾರವನ್ನು ಕಡಿಮೆ ಮಾಡುವುದು.
 • ರೋಗಿಗೆ ನೀರನ್ನು ಸಾಧ್ಯವಾದಷ್ಟು ಕಡಿಮೆ ಕೊಡಬೇಕು. ಉಪ್ಪನ್ನು ಕೊಡಬಾರದು.

೧೬. ವಿಸರ್ಪ (Herpes Zoster)

ಇದರಲ್ಲಿ ಸಾಮಾನ್ಯ ವಿಸರ್ಪ ಹಾಗೂ ವಿಸರ್ಪಗಳೆಂದು ಎರಡು ಭೇದ. ಸಾಮಾನ್ಯ ವಿಸರ್ಪವು ತುಟಿಗಳ ಕೊನೆಯ ಭಾಗ, ಮೂಗಿನ ಹೊರಳೆಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಆಗ ಎರಡು, ಬಾವುಗಳೊಡನೆ ಅತಿ ಸಣ್ಣ-ಸಣ್ಣ ಗುಳ್ಳೆಗಳೆದ್ದು ನೀರಿನಲ್ಲಿ ಲಸಿಕೆ ತುಂಬಿಕೊಳ್ಳಲಾರಂಭಿಸುತ್ತದೆ. ಸಾಮಾನ್ಯವಾಗಿ ಜ್ವರಬಂದಾಗ ಕೆಲವರಲ್ಲಿ ಈ ವಿಕಾರವು ಕಂಡುಬರುವುದು. ೨-೩ ದಿವಸಗಳಲ್ಲಿ ಕ್ರಮೇಣ ಕಡಿಮೆ ಆಗಿ ಹಕ್ಕಳೆಗಳು ಉದುರಿ ಹೋಗಿ ಅಲ್ಲಿ ಕಲೆಗಳು ಉಳಿಯುವುದಿಲ್ಲ. ಕೆಲವರು ತುರಿಕೆ ತಾಳಲಾರದೆ ಕೆರೆದರೆ ಬಾವು ಬಂದು ಕೀವು ತುಂಬಬಹುದು.

ಮುಖ್ಯವಾದ ವಿಸರ್ಪವು ನರತಂತುವಿನ ಮೇಲೆ ಕಾಣಿಸಿಕೊಳ್ಳುವುದು, ಆ ನರದ ಗುಂಟ ಉರಪು, ಬಾವು ಹಾಗು ರಸಿಕೆಯುಳ್ಳ ಗುಳ್ಳೆಗಳು ಕಾಣಿಸಲಾರಂಭಿಸುವುವು. ಇದಕ್ಕೂ ಮೊದಲು ಸಂಬಂಧಿಸಿದ ನರಗಳಲ್ಲಿ ನೋವು ಉಂಟಾಗುತ್ತದೆ. ನಂತರ ಕೆಂಪುಗುಳ್ಳೆಗಳು ಕಾಣಸಿಕೊಂಡು ಅವುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಇವು ಕೆಲವು ದಿವಸಗಳಲ್ಲಿಯೇ ತಮ್ಮಷ್ಟಕ್ಕೆ ತಾವೇ ಒಣಗಿ ಹೋಗಿ ಗುಣವಾಗುವುವು. ಇಲ್ಲವೇ ಬೇರೆ-ಬೇರೆ ಭಾಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡು ೩ ರಿಂದ ೬ ವಾರಗಳಲ್ಲಿ ಗುಣವಾಗಬಹುದು. ಆಧುನಿಕ ವೈದ್ಯನ ಪ್ರಕಾರ ಇದೊಂದು ವೈರಸ್ ಜಾತಿಯ ರೋಗಾಣುಗಳ ಅಂಟುವಿಕೆಯಿಂದಾದ ರೋಗ.

ವಿಸರ್ಪವು ವಿಶೇಷವಾಗಿ ಎದೆಯಭಾಗದಲ್ಲಿ ಮಧ್ಯದಿಂದ ಪ್ರಾರಂಭವಾಗಿ ಹಿಂದಕ್ಕೆ ಸಾಲಾಗಿ ಕಾಣಿಸಿಕೊಳ್ಳುವುದು. ಮುಖ, ಬಾಯಿ, ಜನನೇಂದ್ರಿಯಗಳು, ಕಣ್ಣು – ಈ ಭಾಗಗಳಲ್ಲಿ ಈ ವಿಕಾರವು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಹೆಣ್ಣು ಮಕ್ಕಳ ಋತುಸ್ರಾವದ ಸಂದರ್ಭದಲ್ಲಿ ಕೆಲವರಲ್ಲಿ ತುಟಿಯ ಮೇಲೆ ವಿಸರ್ಪ ಕಾಣಿಸಿಕೊಳ್ಳುವುದು.

ಕಲ್ಯಾಣಕಾರಕದಲ್ಲಿ ಪಿತ್ತಪ್ರಕೋಪ ಹಾಗೂ ಪೆಟ್ಟುಗಳಿಂದ ವಿಸರ್ಪರೋಗವು ಶೀಘ್ರವಾಗಿ ಹುಟ್ಟಿಕೊಳ್ಳುವುದು ಎಂದೂ ಇದರಲ್ಲಿ ಬಾವು ವಿಶೇಷವಾಗಿರುವುದೆಂದೂ ಇದರ ಪರಿಹಾರಕ್ಕೆ ಶೀತ ಆಹಾರ-ವಿಹಾರ ಔಷಧಗಳ ಪ್ರಯೋಗ ಮಾಡಬೇಕೆಂದು ಹೇಳಿದ್ದಾರೆ. ಅದಕ್ಕೂ ಮೊದಲು ವಮನ, ವಿರೇಚನಗಳನ್ನು ಮಾಡಿಸಿ ದೇಹ ಶುದ್ಧಿಗೊಳಿಸಬೇಕೆಂದಿದ್ದಾರೆ. ಈ ವಿಕಾರಕ್ಕೆ ಜ್ವರ ಹಾಗೂ ವಾತರಕ್ತರೋಗ ಚಿಕಿತ್ಸೆ ಮಾಡಬೇಕಾಗುತ್ತದೆ.

 • ತುಪ್ಪವನ್ನು ನೂರು ಸಾರೆ ನೀರಿನಲ್ಲಿ ತೊಳೆದು ಅದಕ್ಕೆ ಸರ್ಜರಸ, ಜಸದ ಭಸ್ಮವನ್ನು ಸೇರಿಸಿ ಸ್ಥಾನಿಕವಾಗಿ ಹಚ್ಚಬೇಕು.
 • ಮುತ್ತುಗ ಬೀಜಗಳನ್ನು ಸುಟ್ಟು ಅದರ ಬೂದಿಯನ್ನು ನಿಂಬೆರಸದಲ್ಲಿ ಸೇರಿಸಿ ಹಚ್ಚಬೇಕು. ಇಲ್ಲವೆ ಸೊನ್ನಕ್ಯಾವಿ(ಗೈರಿಕ)ವನ್ನು ನಿಂಬೆರಸದಲ್ಲಿ ಸೇರಿಸಿ ಹಚ್ಚಬಹುದು.
 • ಪೇಟೆಯಲ್ಲಿ ದೊರಕುವ ನಿಶಾದಿ ಲೇಪವನ್ನು ಹಚ್ಚಿದರೆ ಉರುಪು, ನೋವುಗಳು ಬೇಗನೆ ಕಡಿಮೆ ಆಗುವುವು.

೧೭. ಆಮವಾತ (Rheumatism)

ಆಮ ಹಾಗೂ ವಾತ ಹೀಗೆ ಎರಡು ಬೇರೆ-ಬೇರೆ ಶಬ್ದಗಳಿಂದ ಕೂಡಿದ, ಆಮದ ಸ್ಥಾನ ಮತ್ತು ಪ್ರಕುಪಿತ ವಾತ ಇವುಗಳ ಗುಣಕರ್ಮಗಳನ್ನು ನಿರ್ದಿಷ್ಟವಾಗಿ ಸೇರಿಸಿ ಹೇಳಿರುವುದರಿಂದ ಇದನ್ನು ಪ್ರತ್ಯೇಕ ರೋಗವೆಂದು ಹೇಳಲಾಗಿದೆ. ಇದರಲ್ಲಿ ಸಂದುವಾತ ಹಾಗೂ ವಾತರಕ್ತಗಳೆಂದು ಎರಡು ವಿಧ. ಪುರುಷರಿಗಿಂತ ವಿಶೇಷವಾಗಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವುದು. ಕೈ-ಕಾಲು, ಸಣ್ಣ ಮೂಳೆಗಳ ಸಂಧಿಗಳಲ್ಲಿ ಪ್ರಾರಂಭಿಸಿ ಕ್ರಮೇಣ ದೊಡ್ಡ ಸಂಧಿಗಳನ್ನು ಪೀಡಿಸುವುದು.

ಕಾರಣಗಳು:ವಿರುದ್ಧ ಆಹಾರ, ವಿಲಕ್ಷಣ ಚೇಷ್ಟೆಗಳು, ಅಗ್ನಿಮಾಂದ್ಯ, ನಿಶ್ಚೇಷ್ಟತೆಯಿಂದ ಒಂದೆಡೆಗೆ ಕೂಡ್ರುವುದು, ಸ್ನಿಗ್ಧ ಭೋಜನ ಮಾಡಿದ ಕೂಡಲೇ ವಿಶ್ರಾಂತಿ/ವ್ಯಾಯಾಮ/ದಣಿವಾಗುವಂತಹ ಕೆಲಸ ಮಾಡುವುದರಿಂದ ಶರೀರದಲ್ಲಿ ಆಮದೋಷವುಂಟಾಗುವುದು. ಆಹಾರ ಸಂಯೋಗ, ಸಂಸ್ಕಾರ ಹಾಗೂ ಪ್ರಮಾಣ ಇತ್ಯಾದಿಗಳಲ್ಲಿ ಕಂಡಬರುವ, ಶರೀರಕ್ಕೆ ಒಗ್ಗದಿರುವ ಅಂಶಗಳಿಂದಲೂ ಆಮೋತ್ಪತ್ತಿ ಆಗುವುದು. ಇದು ಸಂದುಗಳಲ್ಲಿ ಸಂಚಿತವಾಗಿರುವಾಗ ಚಲನ-ವಲನಕ್ಕೆ ತುಂಬ ನೋವುಂಟಾಗುವುದು. ಆಮಾಂಶವು ಪಚನವಾದ ನಂತರವೇ ನೋವು-ಬಾವುಗಳು ಕಡಿಮೆ ಆಗುವುವು. ಇಲ್ಲದಿದ್ದರೆ ನೋವು ಕಾಣಿಸುತ್ತಿರುವುದು.

ಲಕ್ಷಣಗಳು: ಮೈ-ಕೈಗಳಲ್ಲಿ ನೋವು, ಅರುಚಿ, ಬಾಯಾರಿಕೆ, ಅಲಸ್ಯತೆ, ಮೈ ಭಾರ, ಜ್ವರ, ಅಜೀರ್ಣ ಹಾಗೂ ಸಂದುಗಳಲ್ಲಿ ಬಾವು ಕಂಡುಬರುವುದು. ಸ್ನಾಯು ಸಂಕೋಚ, ಬೆರಳುಗಳು ಸಂಕೋಚ, ಕೈಕಿರುಬೆರಳು ಸ್ವಲ್ಪ ತನ್ನ ಸ್ಥಾನದಿಂದ ದೂರವಾದಂತೆನಿಸುವುದು ಬೆರಳುಗಳಲ್ಲಿ ಸ್ವಲ್ಪ/ಹೆಚ್ಚು ಕಾರ್ಯ ಹಾನಿ. ಚರ್ಮದ ಒಳಭಾಗದಲ್ಲಿ ಪೇಶಿ-ಕಂಡರಾಗಳಲ್ಲಿ ಸಣ್ಣ ಸಣ್ಣ ಗಂಟುಗಳಾಗುವುವು. ಒಮ್ಮೊಮ್ಮೆ ಈ ರೋಗದ ಲಕ್ಷಣಗಳು ತಮ್ಮಷ್ಟಕ್ಕೆ ತಾವೇ ಹೋಗಿ ಮತ್ತೆ ಮರುಕಳಿಸಬಹುದು.

ಚಿಕಿತ್ಸೆ: ಲಂಘನ, ವಿರೇಚನ ಮಾಡಿಸಬೇಕು. ಅಜಮೋದಾದಿ ಚೂರ್ಣವನ್ನು ದಿನಕ್ಕೆರಡು ಸಾರೆ ಬಿಸಿನೀರಿನಲ್ಲಿ ಕೊಡುವುದರಿಂದ ವಾತಾನುಲೋಮುನವಾಗಿ ಆಮವಾತ ಕಡಿಮೆ ಆಗುವುದು.

 • ಸ್ಥೂಲರೋಗಿಗೆ ಶುದ್ಧಗುಗ್ಗುಳ ಇಲ್ಲವೆ ಸಿಂಹನಾದಗುಗ್ಗುಳು, ಯೋಗರಾಜ ಗುಗ್ಗುಳಗಳನ್ನು ಕೊಡಬೇಕು.
 • ಅಮವಾತಾದಿ ವಟಿ ಚೆನ್ನಾಗಿ ಕೆಲಸ ಮಾಡುವುದು.
 • ಮಹಾರಾಸ್ನಾದಿ ಕಾಢಾವನ್ನು ಮೇಲಿನ ಔಷಧಿಗಳೊಡನೆ ಕೊಡಬೇಕು.
 • ಉರಿ, ಶೋಥ(ಬಾವು) ಹೆಚ್ಚಾಗಿದ್ದರೆ ಶೀತಲೇಪ ಹಾಕಬೇಕು.
 • ನೋವಿನ ಭಾಗಕ್ಕೆ ಹಚ್ಚಲು ಕರಂಜ ತೈಲ, ಸೈಂಧವಾದಿ ತೈಲ, ಮಹಾ ವಿಷಗರ್ಭ ತೈಲ ಸೂಕ್ತವಿವೆ.
 • ಪಥ್ಯ-ಬಿಸಿನೀರು, ಕೆನೆ ತೆಗೆದ ಹಾಲು, ಬೆಣ್ಣೆ ತೆಗೆದ ಮಜ್ಜಿಗೆ ತೆಗೆದುಕೊಳ್ಳಬೇಕು. ಅಜೀರ್ಣ-ಮಲಬದ್ಧತೆಗಳಾಗದಂತೆ ನೋಡಿಕೊಳ್ಳಬೇಕು.

೧೮. ವಾತರಕ್ತ (Gout)

ವಾತರಕ್ತ – ಆಮರಸ ಪೋಷಿತವಾದ ರಕ್ತವು ಪ್ರಕುಪಿತ ವಾತದೊಡನೆ ಸೇರಿದಾಗ ವಾತರಕ್ತ ರೋಗವುಂಟಾಗುತ್ತದೆ. ಇದರಲ್ಲಿ ವಾತದೋಷ ಪ್ರಧಾನವಾಗಿದ್ದು ರಕ್ತವು ದೂಷ್ಯವೆನಿಸುತ್ತದೆ. ದುಷ್ಟ ರಕ್ತವು ವಾತದ ಗತಿಯನ್ನು ಅಡ್ಡಿಪಡಿಸುವುದರಿಂದ ಹಾಗು ವಾತಪ್ರಕೋಪವಾದಾಗ ಈ ರೋಗವಾಗುವುದು ಹಾಗೂ ಇದು ಆಮವಾತಕ್ಕಿಂತಲೂ ಹೆಚ್ಚಿನ ನೋವನ್ನುಂಟು ಮಾಡುವುದು. ಇದು ಹೆಚ್ಚಾಗಿ ಯುವಕರಿಗೆ, ಒಳ್ಳೆಯ ಭೋಜನ, ಸುಖವಾದ ಹಾಸಿಗೆ ಆಶ್ರಯಿಸುತ್ತ ಶ್ರಮಪಡದವರಲ್ಲಿ ಕಂಡುಬರುತ್ತದೆ.

ಕಾರಣ: ವಿರುದ್ಧಾಹಾರ, ವಿದಾಹಕರ, ಆಹಾರ ರಕ್ತವನ್ನು ಅಶುದ್ಧಗೊಳಿಸುವ ಆಹಾರ, ಅಕಾಲ ನಿದ್ರೆ, ರಾತ್ರಿ ಜಾಗರಣೆ, ಕೋಪ, ಅತಿ ಮೈಥುನಗಳಿಂದ, ವಾತಪ್ರಕೋಪ ಆಹಾರ-ವಿಹಾರ ಸೇವನೆಗಳಿಂದ ವಾತವು ರಕ್ತದಿಂದ ತಡೆಯಾದಾಗ ಆ ಜಾಗದಲ್ಲಿ ಈ ರೋಗವು ಕಾಣಿಸಿಕೊಳ್ಳುವುದು.

ಲಕ್ಷಣಗಳು: ವಾತರಕ್ತದಲ್ಲಿ ಸಂದುಗಳಲ್ಲಿ ಸ್ತಬ್ಧವಾದ ಮತ್ತು ಬಿರುಸಾದ ಬಾವು ಇರುವುದು. ಒಳಗೆ ಅತ್ಯಂತ ನೋವು ಮತ್ತು ಉರಿಗಳಿರುವುವು. ಶೋಥವು ಗಂಟು-ಗಂಟಾಗಿದ್ದು ಪಾಕವಾಗುವುದುಂಟು. ಮಲಸಂಚಯವು ಆಳವಾಗಿರುವುದರಿಂದ ಪ್ರಕುಪಿತವಾತವು ವೇಗವಾಗಿ ಅಸ್ಥಿಸಂಧಿ, ಮಜ್ಜೆ ಭಾಗಗಳಲ್ಲಿ ಕತ್ತರಿಸಿದಂತೆ ಹೆಚ್ಚಾದ ನೋವನ್ನು ಮತ್ತು ಸಂಧಿ ಸಂಕೋಚವನ್ನುಂಟು ಮಾಡುತ್ತದೆ. ಚರ್ಮವು ಶ್ಯಾಮವರ್ಣ ಹಾಗೂ ಒಣಗಿದಂತೆ ಕಾಣುವುದು, ಸಂಧಿ ಸಂಕೋಚತೆಯಿಂದ ಚಲನೆಯು ಕಷ್ಟವಾಗುವುದು. ಶೀತ ಹಾಗೂ ಉಷ್ಣವಾದ ಸ್ಪರ್ಶದಿಂದಲೂ ಸಹನೆ ಆಗುವುದಿಲ್ಲ. ವ್ರಣವಾದ ಸ್ಥಳದಿಂದ ಲಸಿಕೆ ಜಿನುಗುತ್ತಲಿರುವುದು. ಅಲ್ಲದೆ ಆಯಾ ದೋಷದ ಪ್ರಾಬಲ್ಯಕ್ಕನುಸಾರ ಇನ್ನಿತರ ಲಕ್ಷಣಗಳಿರುವುವು.

ಉಪದ್ರವಗಳು: ನಿದ್ರಾನಾಶ, ಅರೋಚಕತೆ, ಶ್ವಾಸ, ಗಾಯವಾಗಿದ್ದರೆ, ಮಾಂಸದ ಕೊಳೆತ, ಶಿರಸ್ಸು ಹಿಡಿದುಕೊಳ್ಳುವುದು, ಮದ, ಮೂರ್ಛೆ, ತೃಷ್ಣಾ, ಜ್ವರ ಮುಂತಾದವು ವಾತರಕ್ತದ ಉಪದ್ರವಗಳೆನಿಸಿವೆ.

ಚಿಕಿತ್ಸೆ: ಸ್ನೇಹನ ಚಿಕಿತ್ಸೆ ಮಾಡಿ ನಂತರ ಸಿರಾವ್ಯಧ ಮೂಲಕ ರಕ್ತಸ್ರಾವ ಮಾಡಿಸಬೇಕು. ವಿರೇಚನಕ್ಕೆ ಸ್ನೇಹಲ ಔಷಧಿಯನ್ನೇ ಕೊಡಬೇಕು. ನಂತರ ಅಮೃತಬಳ್ಳಿಸ್ವರಸಕ್ಕೆ ಔಡಲೆಣ್ಣೆ ಸೇರಿಸಿ ಕುಡಿಸುವುದರಿಂದ ಉಗ್ರವಾಗಿರುವ ವಾತರಕ್ತ ಕೂಡ ಶಮನವಾಗುವುದು.

 • ಹಿಪ್ಪಲಿ ಗಿಡದ ಚೆಕ್ಕೆಯ ಕಷಾಯವನ್ನು ಒಂದರಿಂದ ಎರಡು ಔಂಸುಗಳಷ್ಟು ದಿನಕ್ಕೆ ೨ ರಿಂದ ೩ ಸಾರೆ ಕೊಡಬೇಕು.
 • ಕೈಶೋರ ಗುಗ್ಗುಳು, ಪಂಚತಿಕ್ತ ಘೃತ ಗುಗ್ಗುಳು, ವಾತರಕ್ತಾಂತಕ ರಸ-ಔಷಧಿಗಳು ಚೆನ್ನಾಗಿ ಕಾರ್ಯಮಾಡುತ್ತವೆ.
 • ಮಹಾಮಂಜಿಷ್ಟಾದಿ ಕಾಢಾ ಸಾರಿವಾದ್ಯಾರಿಷ್ಟಗಳನ್ನು ೧ ರಿಂದ ೨ ಚೌಂಸುಗಳಷ್ಟು ದಿನಕ್ಕೆ ೨ ಸಾರೆ ರಕ್ತಶುದ್ಧಿ ಆಗಲು ಕೊಡಬೇಕು.
 • ಸಂದು ನೋವಿಗೆ ಹಚ್ಚಲು ಗುಡುಚ್ಯಾದಿ ತೈಲ, ಪಿಂಡ ತೈಲಗಳು ಉಪಯುಕ್ತ.

ಕಲ್ಯಾಣಕಾರಕದಲ್ಲಿ ಈ ವಿಕಾರಕ್ಕೆ ರಾಸ್ನಾದಿ ಲೇಪ, ಮುದ್ಗಾದಿ ಲೇಪ, ಪುನರ್ನವಾದಿ ಲೇಪ, ಮುಸ್ತಾದಿ ಲೇಪಗಳನ್ನು ಮೇಲೆ ಹಚ್ಚಲು ಹೇಳಿದ್ದಾರೆ. ಆಡಿನ ಹಾಲು, ಟಂಡುಕಾದಿ ದುಗ್ಧಗಳನ್ನು ವಿಶೇಷವಾಗಿ ಸೇವಿಸಲು ಆದೇಶಿಸಿದ್ದಾರೆ. ವಾತರಕ್ತ ಹಾಗು ರಕ್ತಮೋಕ್ಷಣ, ಬಸ್ತಿ ಚಿಕಿತ್ಸೆ, ಉಪನಾಹ, ಶೀತಲವಾದ ಮಧುರ, ತಿಕ್ತ, ಕಷಾಯ ರಸಗಳನ್ನು ಸೇವಿಸುತ್ತಿರುವವನಿಗೆ ವಾತರಕ್ತ ಇಲ್ಲವೆ ರಕ್ತಪಿತ್ತಗಳು ದೂರವಾಗುತ್ತವೆ. (ಕ.ಅ.೯, ಶ್ಲೋಕ, ೩೫-೪೯)

ಪಥ್ಯ: ಆಹಾರಕ್ಕೆ ಬೇಯಿಸಿದ ಹಳೆಧಾನ್ಯ ಒಳ್ಳೆಯದು. ತೊಗರೆ, ಕಡಲೆ, ಹೆಸರು, ಸಾರಂಗಿ ಬೇಳೆಗಳ ಸಾರಿಗೆ ಹೆಚ್ಚು ತುಪ್ಪವನ್ನು ಹಾಕಿ ಉಣ್ಣಲು ಹೇಳಬೇಕು. ಅಣ್ಣೆಸೊಪ್ಪು, ಗಣಿಕ ಸೊಪ್ಪು, ಚಕ್ಕೋತ ಸೊಪ್ಪು, ಬಸಳೆ – ಇವನ್ನು ಸೌವರ್ಚಲ ಲವಣದೊಂದಿಗೆ ಉಪಯೋಗಿಸಬೇಕು. ಹಸು-ಎಮ್ಮೆಗಳ ಹಾಲನ್ನು ಉಪಯೋಗಿಸಬಹುದು.

೧೯. ಗೃಧ್ರಸೀ (Sciatica)

ಟೊಂಕದ ಮಣಿಶಿರದಿಂದ ಹೊರಡುವ ಸಯಾಟಿಕಾ ನರದ ಮೇಲೆ ಒತ್ತಡ ಬೀಳುವುದರಿಂದ ಹೊರಡುವ ನೋವು ಪೃಷ್ಠ, ತೊಡೆಯ ಹಿಂಭಾಗ, ಮೊಣಕಾಲು ಕೆಳಗಿನ ಮೀನಗಂಡ ಹಾಗೂ ಪಾದದ ಹಿಂಭಾಗದವರೆಗೆ ಒಂದೇ ಸಮನೆ ಹೊಡೆಯುವುದು/ಸೆಳೆಯುವುದು. ಓಡಾಡಲು/ಕೆಲಸ ಮಾಡಲು ತುಂಬ ತೊಂದರೆ ಆಗುವುದು. ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡರೆ ಕಡಿಮೆ ಆಗುವುದು. ಓಡಾಡಿದರೆ ಮತ್ತೆ ಪ್ರಾರಂಭವಾಗುವುದು. ಇದೇ ವಿಕಾರಕ್ಕೆ ‘ಗೃಧ್ರಸೀ’ ಎನ್ನುವರು.

ಚಿಕಿತ್ಸೆ: ಆಚಾರ್ಯರು ಈ ವಿಕಾರಕ್ಕೆ ರಕ್ತಮೋಕ್ಷಣ ಮಾಡಿ ವಾತಹರ ಚಿಕಿತ್ಸೆ ಮಾಡಬೇಕೆಂದು ಹೇಳಿದ್ದಾರೆ. (ಕ.ಅ೧೨, ಶ್ಲೋಕ.೪೧)

 • ರೋಗಿಗೆ ೩ ವಾರಗಳವರೆಗೆ ಸಂಪೂರ್ಣ ವಿಶ್ರಾಂತಿ ಅವಶ್ಯ.
 • ಗುಲಗಂಜಿ/ಧತೂರ ಎಲೆಗಳನ್ನು ನೀರಿನಲ್ಲಿ ಅರೆದು ಹೊಡೆತದ ಭಾಗಕ್ಕೆ ಹಚ್ಚಬೇಕು. ಸೈಂಧವಾದಿ ತೈಲವನ್ನು ಮೇಲ್ಭಾಗ್ಕಕೆ ಹಚ್ಚಬಹುದು.
 • ಯೋಗರಾಜ ಗುಗ್ಗುಳ + ರಾಸ್ನಾಸಪ್ತಕ ಕಷಾಯ
 • ಬೃಹತ್ ವಾತ ಚಿಂತಾಮಣಿ, ವಾತಗಜಾಂಕುಶ ರಸ, ಸಮೀರ ಪನ್ನಗಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು.

೨೦. ಅರ್ದಿತವಾತ (Facial paralysis)

ಮುಖದ ನರಕ್ಕೆ ಬಾವು ಇಲ್ಲವೆ ಒತ್ತಡವು ಕಿವಿಭಾಗದಿಂದ ಬರುವುದರಿಂದ ಆ ನರದ ಕ್ರಿಯೆ ಪೂರ್ಣ ಇಲ್ಲವೆ ಭಾಗಶಃ ನಿಲ್ಲುವುದು. ಅದರಿಂದ ಮುಖದ ಅರ್ಧಭಾಗದ ಕ್ರಿಯೆಗಳೆಲ್ಲ ಇಚ್ಛಿತವಾಗಿ ನಡೆಯುವುದಿಲ್ಲ. ಬಾಯಿ ಮುಚ್ಚಲು ಹೋದರೆ ತುಟಿಗಳನ್ನು ಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಅರ್ಧಭಾಗವು ತೆರೆದಂತಿರುವುದು. ಮಾತನಾಡಲು ನಾಲಗೆ ತೊದಲಿಸುವುದು. ಊಟ ಮಾಡುವಾಗಲೂ ನಾಲಗೆ ಸಹಕರಿಸುವುದಿಲ್ಲ. ಸ್ವಲ್ಪ ಲಾಲಾರಸ ಬರುವುದು. ಕಣ್ಣಿನ ರೆಪ್ಪೆಯನ್ನು ಪೂರ್ಣ ಮುಚ್ಚಲು ಸಾಧ್ಯವಾಗದು. ಇದು ಕೂಡ ಪ್ರಕುಪಿತ ವಾತದುಷ್ಟಿಯೇ.

ಆಕಸ್ಮಾತ್ತಾಗಿ ಬಂದ ಅತಿಯಾದ ದುಃಖ, ಚಿಂತೆ, ಪೆಟ್ಟು, ಕೆಲವಿಧ ಜ್ವರ, ಅತಿಯಾದ ಮದ್ಯಪಾನ-ಮೈಥುನ, ಚಳಿಗಾಳಿಗೆ ಮುಕ ಒಡ್ಡುವುದರಿಂದ ಅರ್ದಿತರೋಗ ಬರುವುದು.

ಚಿಕಿತ್ಸೆ: ಅರ್ದಿತ ವಾತರೋಗಿಗೆ ಊಟಕ್ಕೆ ಕೊಡದೆ ಹುಳಿರಸಗಳನ್ನು ಇಲ್ಲವೆ ಮೊಸರನ್ನು ಕುಡಿಸಿ ನಾನಾ ಪ್ರಕಾರದ ಸ್ವೇದನ ವಿಧಿಗಳಿಂದ ಸ್ವೇದನ ಮಾಡಿಸಬೇಕು. ಅರ್ಕತೈಲದಿಂದ ಮಾಲೀಶ ಮಾಡಬೇಕು. ಕಾಸಾದಿ ತೈಲದಿಂದ ನಸ್ಯ ಮಾಡಿಸಬೇಕು. ಇದರಿಂದ ಅರ್ದಿತ ವಾತವು ನಿವಾರಣೆ ಆಗುವುದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. (..೧೨, ಶ್ಲೋಕ ೩೭,೪೦)

 • ಮಾದಳ ಹಣ್ಣಿನ ರಸವನ್ನು ಒಂದು ಚಿಕ್ಕ ವಾಟಕಾದಷ್ಟು ಆಕಳ ಹಾಲಿನೊಡನೆ ಕುಡಿಯಲು ಕೊಡಬೇಕು.
 • ಬೃಹತ್ ವಾತ ಚಿಂತಾಮಣಿ, ವಾತಗಜಾಂಕುಶ ರಸ, ಸಮೀರ ಪನ್ನಗಗಳನ್ನು ಎರಡರಿಂದ ಐದು ಗ್ರೇನುಗಳಷ್ಟು ದಿನಕ್ಕೆ ಎರಡು ಸಾರೆ ಬಿಸಿನೀರು ಇಲ್ಲವೆ ತುಪ್ಪದಲ್ಲಿ ಕೊಡಬೇಕು.
 • ಮುಖದ ವ್ಯಾಯಾಮ ಅವಶ್ಯ.

೨೧. ಪಕ್ಷಾಘಾತ (Paralysis)

ದೇಹದ ಒಂದು ಭಾಗವು ಸಂಪೂರ್ಣ/ಭಾಗಶಃ ನಿಷ್ಕ್ರಿಯವಾಗುವುದು. ಈ ವಿಕಾರದಲ್ಲಿ ಒಮ್ಮೊಂದೊಮ್ಮೆಲೆ ವಾತದ ಆವೇಗ ಬಂದು ಶರೀರದ ಒಂದು ಭಾಗ ಶೂನ್ಯವಾಗುತ್ತ ನಿಷ್ಕ್ರಿಯವಾಗುತ್ತದೆ. ಒಂದೊಂದು ಸಾರೆ ೨-೩ ಆವೇಗಗಳು ಮೇಲಿಂದ ಮೇಲೆ ಬರಬಹುದಾಗಿದೆ. ಮೆದುಳಿನಲ್ಲಿ ಅತಿಯಾದ ರಕ್ತಸ್ರಾವವಾದರೆ ಅದು ಹೆಪ್ಪುಗಟ್ಟಿ ಸ್ರೋತಸ್ಸುಗಳನ್ನು ಅವರೋಧ ಮಾಡುವುದರಿಂದ ಸ್ಮೃತಿ ತಪ್ಪಬಹುದು. ರಕ್ತಸ್ರಾವ ಸ್ವಲ್ಪ ಪ್ರಮಾಣದಲ್ಲಾಗಿದ್ದರೆ ಅದು ಕರಗಿ ಇಲ್ಲವೆ ರಕ್ತದ ಪೂರೈಕೆ ಇನ್ನಿತರ ಸಮಾನಾಂತರ ನರಗಳಿಂದ ಪ್ರಾರಂಭವಾದರೆ ರೋಗಿ ಚೇತರಿಸಿಕೊಳ್ಳಲಾರಂಭಿಸುತ್ತಾನೆ. ಇಲ್ಲವೆ ಸನ್ಯಾಸ (coma) ಅವಸ್ಥೆಯಲ್ಲಿಯೇ ಬಹುಕಾಲವಿದ್ದು ಮರಣವನ್ನಪ್ಪಬಹುದು. ಕೆಲವು ಸಂದರ್ಭಗಳಲ್ಲಿ ರೋಗಿ ತಿಂಗಳುಗಟ್ಟಲೆ ಸನ್ಯಾಸಾವಸ್ಥೆಯಲ್ಲಿದ್ದು ಸುಧಾರಿಸಿಕೊಂಡ ಉದಾಹರಣೆಗಳೂ ಇವೆ. ರೋಗಿ ಚಿಕಿತ್ಸೆಯಿಂದ ಸ್ವಲ್ಪ ಗುಣಮುಖನಾದರೂ ಅವನಿಗೆ ಆ ಭಾಗದಲ್ಲಿ ಮೊದಲಿನಂತೆ ಶಕ್ತಿ ಬರುವುದಿಲ್ಲ.

ಇದು ಸಾಮಾನ್ಯವಾಗಿ ಮುಪ್ಪಿನ ಕಾಲದಲ್ಲಿ ಬರುವ ರೋಗವಾಗಿದೆ. ಅತಿ ಶ್ರಮ, ಮನೋ ಆಘಾತ, ತೀಕ್ಷ್ಣ ಭೋಜನ, ಮದ್ಯಪಾನ, ಶರೀರದ ರಕ್ತವಾಹಿನಿಗಳಲ್ಲಿ ಕ್ಷಾರದಂತಹ ಆವರಣವಾಗಲಾರಂಭಿಸುತ್ತದೆ. ಇದರಿಂದ ರಕ್ತವಾಹಿನಿಗಳು ತಮ್ಮ ಕಾರ್ಯಕ್ಷಮತೆ ಕಳೆದುಕೊಳ್ಳುವುದರ ಕಾರಣ ರಕ್ತದೊತ್ತಡವು ಹೆಚ್ಚಲಾರಂಭಿಸುತ್ತದೆ. ರಕ್ತವು ಅತಿ ವೇಗದಿಂದ ಹರಿದಾಡುವುದರಿಂದ ಮೆದುಳಿನ ರಕ್ತನಾಳ ಹರಿದು ಅದರಿಂದ ರಕ್ತವು ಹೊರಬರಲಾರಂಭಿಸುತ್ತದೆ. ಆಗ ಅರ್ಧಾಂಗವಾತವಾಗುತ್ತದೆ. ಇವರಲ್ಲಿ ದೈಹಿಕ ಕಾರಣಗಳ ಜೊತೆಗೆ ವಿಶೇಷವಾಗಿ ಮಾನಸಿಕ ಸಂತಾಪ ಸೇರುತ್ತದೆ. ತಾಮಸಿಗಳು, ಸ್ವಭಾವತಃ ಸಿಟ್ಟಿನಸ್ವಭಾದವರಲ್ಲಿ ಈ ವಿಕಾರ ಹೆಚ್ಚು. ಹೆಚ್ಚಾಗಿ ಮಾನಸಿಕ ತಾಪ, ಜಗಳ, ಸಿಟ್ಟು, ಮನೋದ್ರೇಕ ಮುಂತಾದ ಸಂದರ್ಭಗಳಲ್ಲಿಯೇ ಪಕ್ಷಾಘಾತವಾಗುವುದು. ರೋಗಿ ಮೂರ್ಛಿತನಾಗಿ ಇಲ್ಲವೆ ನಿಶ್ಚೇಷ್ಚಿತನಾಗಿ ಬಿದ್ದಾಗಲೇ ಇದರ ಕಲ್ಪನೆ ಆಗುವುದು.

ಈ ರೋಗವಾಗುವ ಪ್ರಾರಂಭದಲ್ಲಿ ತಲೆತಿರುಗುವಿಕೆ, ಅಶಕ್ತತನ, ಗ್ಲಾನಿ, ಸಿಡುಕುತನ ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಈ ವಿಕಾರವಾದಾಗ ಮಲ-ಮೂತ್ರಗಳು ಗೊತ್ತಾಗದಂತೆ ಹೋಗುವುವು. ಗಂಟಲಿನಲ್ಲಿ ಗುರು-ಗುರುಶಬ್ಧ, ರೋಗಿ ಎಚ್ಚರವಿಲ್ಲದೆ ಗೊರಕೆ ಹೊಡೆಯುವುದು, ಬಾಯಿ ಸೊಟ್ಟಾಗುವುದು, ದೇಹದ ಅರ್ಧಭಾಗ ಅಲುಗಾಡದೆ ತಣ್ಣಗಾಗಿ ನಿಲ್ಲುವುದು, ಮುಖದ ಬಲಭಾಗ ಸೊಟ್ಟುಗಾಗಿದ್ದರೆ ಕೆಳ ಮೈ ಎಡಭಾಗ ಶೂನ್ಯವಾಗಿರುವುದು. ಮುಖದ ಎಡಭಾಗ ಸೊಟ್ಟಗಾಗಿದ್ದರೆ ಕೆಳಮೈಯ ಬಲಭಾಗ ಶೂನ್ಯವಾಗಿರುವುದು. ಮುಖದ ಎಡಭಾಗ ಎಡಭಾಗ ಸೊಟ್ಟಗಾಗಿದ್ದರೆ ಕೆಳಮೈಯ ಬಲಭಾಗ ಶೂನ್ಯವಾಗಿರುವುದು. ರೋಗಿಯ ಬಾಯಿಯಿಂದ ಜೊಲ್ಲು, ಕಣ್ಣಿನಿಂದ ನೀರು, ರೋಗಿಗೆ ಎಚ್ಚರವಾದೊಡನೆ ತನಗೇನೋ ಆಗಿದೆ, ಏಳಲು, ಕೈಯಿಂದ ಹಿಡಿಯಲು ಬರುತ್ತಿಲ್ಲವೆನಿಸಿ – ಮನೋ ಆತಂಕ ಪ್ರಾರಂಭವಾಗುತ್ತದೆ ಕೆಲವರು ಅಳಲಾರಂಭಿಸುತ್ತಾರೆ.

ಚಿಕಿತ್ಸೆ: ಈ ರೋಗಿಗೆ ಚಿಕಿತ್ಸೆ ಪ್ರಾರಂಭಿಸುವುದಕ್ಕಿಂತ ಮೊದಲು ಚೆನ್ನಾಗಿ ವಿರೇಚನ ಮಾಡಿಸಿ ಆಸ್ಥಾಪನ ಬಸ್ತಿ ಮೊದಲಾದ ವಾತರೋಗದ ವಿಶೇಷ ಚಿಕಿತ್ಸೆ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಮೈಗೆ ಹಚ್ಚಲು ಗುಂಜಾತೈಲ, ರಸೋನಾದಿ ತೈಲ, ಧನ್ವಂತರಿ ತೈಲ, ನಾರಾಯಣ ತೈಲ, ಮಹಾ ಮಾಷತೈಲ, ಬಲಾ ತೈಲ ಮುಂತಾದವುಗಳನ್ನು ಉಪಯೋಗಿಸಬೇಕು.

ಮಹಾಬಲ್ಯಾದಿ ಕ್ವಾಥ, ಶತಾವರಿ ಘೃತ, ಬೃಹತ್ ವಾತ ಚಿಂತಾಮಣಿ, ರಸರಾಜರಸ, ವಾತ ಗಜಾಂಕುಶ ರಸ, ಏಕಾಂಗವೀರ – ಮೊದಲಾದ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಕೊಡಬೇಕು.

ನಾಲಿಗೆ ತೊದಲುತ್ತಿದ್ದರೆ ಆಕಲ್ಕರೆಯನ್ನು ನಿಂಬೆಹಣ್ಣಿನ ರಸದಲ್ಲಿ ತೇಯ್ದು ನಾಲಿಗೆಗೆ ನಿತ್ಯ ೨-೩ ಸಾರೆ ಹಚ್ಚಬೇಕು.

ಈ ರೋಗಿಗಳಿಗೆ ಅಂಗಚಿಕಿತ್ಸೆ(Physio therapy)ಬಹುಮುಖ್ಯ.

ಪಥ್ಯ: ಹಾಲು, ಎಳೆ ತೆಂಗಿನ ನೀರು, ಅಕ್ಕಿ ಅನ್ನ, ಭತ್ತದರಳಿನ ಗಂಜಿ, ಗೋದಿ ಸಜ್ಜಿಗೆ, ಅನ್ನ ಹಾಲು, ಬೆಣ್ಣೆ-ತುಪ್ಪಗಳನ್ನು ಕೊಡಬೇಕು. ಸಂಪೂರ್ಣ ಮಾನಸಿಕ, ದೈಹಿಕ ವಿಶ್ರಾಂತಿ ಅವಶ್ಯ. ಕಾಮ-ಕ್ರೋಧಾದಿಗಳನ್ನು ಬಿಡಬೇಕು. ರೋಗಿಯನ್ನು ಆಯಾಸವಾಗದಂತೆ ತಿರುಗಾಡಿಸಬೇಕು. ಬೆಚ್ಚಗಿರುವ ಬಟ್ಟೆ ಹಾಕಬೇಕು. ರೋಗವಾದ ಭಾಗಕ್ಕೆ ತಣ್ಣಗಿನ ಗಾಳಿ ಬೀಸದಂತೆ ನೋಡಿಕೊಳ್ಳಬೇಕು.

ಅಸಾಧ್ಯ ರೋಗಿ: ಶರೀರವೆಲ್ಲ ಊತಬಂದಿರುವ, ಸ್ಪರ್ಶಜ್ಞಾನ ಗೊತ್ತಾಗದ, ಆಧ್ಮಾನವುಳ್ಳ, ಕಂಪವುಳ್ಳ, ಅತಿಯಾದ ವಾತಪೀಡೆಯುಳ್ಳ, ಶರೀರವೆಲ್ಲ ಒಣಗಿದ ರೋಗಿಯು ಚಿಕಿತ್ಸೆಗೆ ಅಸಾಧ್ಯನೆಂದು ಹೇಳಿದ್ದಾರೆ. (ಕ.ಅ.೧೨, ಶ್ಲೋಕ-೩೩)