೨೬. ಕುಷ್ಠ ರೋಗ (Leprosy)

ಕುಷ್ಠ ರೋಗವು ಕೂಡ ಇತರ ಚರ್ಮರೋಗಗಳಂತೆ ಒಂದು ರೋಗ ಹಾಗೂ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂಬುದು ಇನ್ನೂ ಅನೇಕರಿಗೆ ತಿಳಿದಿಲ್ಲ. ಇನ್ನೂ ಸಮಾಜದಲ್ಲಿ ಇದೊಂದು ರೋಗವೆಂದು ತಿಳಿಯಲ್ಪಡದೆ ಪೂರ್ವಜನ್ಮದ ಶಾಪವೆಂದು ಪರಿಣಗಿಸಲ್ಪಡುವುದು. ಈ ರೋಗಗಳನ್ನು ಸಂಬಂಧಿಕರು ಹಾಗೂ ಸಮಾಜ, ಬಹುತೇಕ ಬಹಿಷ್ಕರಿಸುವುದರಿಂದ ಇವರು ಭಿಕ್ಷೆ ಬೇಡುತ್ತ ತಮ್ಮ ಜೀವನ ಸಾಗಿಸುವುದನ್ನು ನೋಡಬಹುದು. ಇದೊಂದು ತೀವ್ರ ಸಾಂಕ್ರಾಮಿಕ ರೋಗವಾದ್ದರಿಂದ ಈ ರೋಗಿಗಳು ತಮ್ಮ ಸಂಪರ್ಕಕ್ಕೆ ಬಂದವರಿಗೆಲ್ಲಾ ರೋಗವನ್ನು ಅಂಟಿಸುತ್ತ ಹೋಗುವರು. ಭಾರತದಿಂದ ಇನ್ನೂ ಈವರೆಗೆ ಈ ರೋಗ ನಿರ್ಮೂಲವಾಗಿಲ್ಲ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ೩೦ ಲಕ್ಷಕ್ಕೂ ಹೆಚ್ಚು ಕುಷ್ಠ ರೋಗಿಗಳಿದ್ದಾರೆ.

ಕುಷ್ಠವು ಚರ್ಮದಲ್ಲಿ ಪ್ರಾರಂಭವಾಗಿ ನಂತರ ನಿಧಾನವಾಗಿ ಮಾಂಸ, ರಕ್ತ ಮತ್ತು ಲಸಿಕೆಗಳನ್ನು ಕ್ರಮಿಸಿ, ಗುಳ್ಳೆಗಳನ್ನುಂಟು ಮಾಡಿ ಚರ್ಮದ ಮೇಲ ಕಪ್ಪುಕಲೆಯನ್ನುಳಿಸುವ ಒಂದು ಮಹಾರೋಗವೆಂದು ಆಯುರ್ವೇದದಲ್ಲಿ ಹೇಳಿದ್ದಾರೆ.

ಕಾರಣಗಳು: ಪರಸ್ಪರ ವಿರುದ್ಧ ಗುಣವನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು, ದ್ರವ, ಸ್ನಿಗ್ಧ, ಗುರು ದ್ರವ್ಯಗಳನ್ನು ವಿಶೇಷವಾಗಿ ಉಪಯೋಗಿಸುವುದು, ವಾಂತಿ ಮಲ-ಮುತ್ರಾದಿ ವೇಗಗಳನ್ನು ತಡೆಯುವುದು, ಗುರುವಾಗಿರುವ ಭೋಜನ ಜೀರ್ಣಿಸುವುದಕ್ಕೆ ಮೊದಲೇ ಶ್ರಮವಾಗುವ ಕೆಲಸ ಮಾಡುವುದು, ಲಂಘನ-ಭೋಜನಗಳನ್ನು ಕ್ರಮತಪ್ಪಿ ಮಾಡುವುದು, ಬಿಸಿಲು ಆಯಾಸ, ಭಯ, ಚಿಂತನೆಗಳಿಂದ ಪೀಡಿತರಾಗಿರುವಾಗ ಸ್ವಲ್ಪ ವಿಶ್ರಮಿಸಿಕೊಳ್ಳದೇ ಕೂಡಲೇ ತಣ್ಣೀರು ಕುಡಿಯುವುದು, ಪಂಚಕರ್ಮ ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಅಪಥ್ಯ ಮಾಡುವುದು, ಅಜೀರ್ಣ, ಅಧ್ಯಶನ, ಹೊಸ ಧಾನ್ಯಗಳಿಂದ ತಯಾರಿಸಿದ ಆಹಾರ, ಅಜೀರ್ಣವಾಗಿರುವಾಗ ಸಂಭೋಗ ಮಾಡುವುದು ಈ ಮುಂತಾದ ಕಾರಣಗಳಿಲ್ಲದೇ ಗುರು-ಹಿರಿಯರು ಸಾಧು-ಸಂತರನ್ನು ದೂಷಿಸುವುದು, ಈ ಜನ್ಮ ಹಾಗೂ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಂದಲೂ ಈ ರೋಗವು ಬರುವುದೆಂದು ಆಯುರ್ವೇದದಲ್ಲಿ ಹೇಳಲಾಗಿದೆ.(ಕಲ್ಯಾಣಕಾರಕ ಅ.೧೧, ಪುಟ.೨೦೩-೨೧೭)

ಈ ರೋಗವಂಟಲು ಮೈಕ್ರೋ ಬ್ಯಾಕ್ಟೇರಿಯಾ ಲೇಪ್ರಾ ಕಾರಣವೆಂದು ೧೮೭೪ರಲ್ಲಿ ಡಾ. ಹಾನ್ಸರ್ ಕಂಡು ಹಿಡಿದಿದ್ದಾನೆ.

ಈ ಕುಷ್ಟರೋಗದಲ್ಲಿ ೧೮ ವಿಧಗಳಿವೆ ಎಂದು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ. ಕಪಾಲ, ಔದುಂಬರ, ಮಂಡಲ, ಋಷ್ಯಜಿಹ್ವ, ಪುಂಡರೀಕ, ಸಿಧ್ಮ, ಕಾರಣ ಕುಷ್ಠವೆಂಬ ಏಳು ವಿಧ ಮಹಾಕುಷ್ಠಗಳನ್ನು ಕೂಡ ವರ್ಣಿಸಲಾಗಿದೆ.

ಆಧುನಿಕ ವೈದ್ಯಶಾಸ್ತ್ರದಲ್ಲಿ ಮುಖ್ಯವಾಗಿ ಅನಿಶ್ಚಿತ ಕುಷ್ಠ, ಗಂಟುಗೂಡಿದ ಕುಷ್ಠ, ಇಬ್ಬಗೆಯ ಕುಷ್ಠ, ನರಸೀಮಿತ ಕುಷ್ಠ, ಸ್ಪರ್ಶಹೀನ ಕಲೆಗಳ ಕುಷ್ಠ, ಹಾಗೂ ಘನತಮ ಕುಷ್ಠಗಳೆಂದು ಮುಖ್ಯವಾಗಿ ಮೂರು ವಿಧಗಳನ್ನಾಗಿ ಮಾಡಿ ಹೇಳಲಾಗಿದೆ. ಆಯುರ್ವೇದದಲ್ಲಿ ಬಹುತೇಕ ಚರ್ಮ ರೋಗಗಳನ್ನೆಲ್ಲ ಕುಷ್ಠರೋಗಗಳೇ ಎಂದು ವರ್ಗೀಕರಿಸಲಾಗಿದೆ.

ಪೂರ್ವರೂಪ: ಕುಷ್ಠ ರೋಗ ಬರುವ ಜಾಗೆಯಲ್ಲಿ ಮೊದಲು ಸ್ಪರ್ಶ ನಾಶವಾಗುವುದು. ಅತಿಯಾಗಿ ಬೆವರುವುದು ಇಲ್ಲವೆ ಬೆವರೇ ಬಾರದಿರುವುದು, ಬಣ್ಣ ಬದಲಾವಣೆ, ಉಬ್ಬಿದ ಗಂಧೆಗಳು, ರೋಮಹರ್ಷ, ಕಂಡೂ, ತಂದ್ರಾ, ಆಯಾಸ, ಬಳಲಿಕೆ, ವ್ರಣಗಳಾದರೆ ಅತಿಯಾದ ನೋವು ಹಾಗೂ ಬೇಗನೆ ಬೆಳೆಯುವಿಕೆ ಹಾಗೂ ಬಹುಕಾಲದವರೆಗೂ ವಾಯವಾಗಿರುವುದು, ಉರಿಯಾಗುವುದು ಈ ಮೊದಲಾದ ಲಕ್ಷಣಗಳು ಕುಷ್ಠರೋಗವಾಗುವ ಮುನ್ನ ಕಂಡುಬರುವುವು. ಕಾರಣ ಈ ಮೇಲ್ಕಂಡ ಲಕ್ಷಣಗಳು ಕಂಡುಬಂದಾಗಲೇ ಬೇಗನೆ ಚಿಕಿತ್ಸಿಸಿದರೆ ಮುಂಬರುವ ಕುಷ್ಠರೋಗವನ್ನು ನಿಯಂತ್ರಿಸಬಹುದಾಗಿದೆ.

ಸಂತ್ರಾಪ್ತಿ: ಚರ್ಮದಲ್ಲಿರುವ ದುಷ್ಟವಾದ ಮೂರು ದೋಷಗಳು ದೇಹದೊಳಗಿರುವ ಲಸಿಕೆ, ಮಾಂಸ, ರಕ್ತಗಳನ್ನು ಪ್ರವೇಶಿಸಿ ಬೆವರು ಮತ್ತು ಕ್ಲೇದಗಳನ್ನು ಕೊಳೆಯಿಸಿ, ಭಯಂಕರವಾದ ಅತಿ ಸೂಕ್ಷ್ಮ ಕ್ರಿಮಿಗಳನ್ನುಂಟು ಮಾಡುವುವು. ಇವು ಮೈ ಮೇಲಿನ ಕೂದಲು, ಚರ್ಮ, ಸ್ನಾಯು, ರಕ್ತವಹ ಸ್ರೋತಸ್ಸು, ತುರುಣಾಸ್ದಿ(ಕಿವಿ, ಮೂಗು ಇತ್ಯಾದಿ)ಗಳನ್ನು ಕ್ರಮವಾಗಿ ತಿನ್ನುತ್ತ ನಾಶಮಾಡುವುವು.

ಕುಷ್ಠದ ಏಳು ಭೇದಗಳು ಹಾಗೂ ಅವುಗಳ ಲಕ್ಷಣಗಳು.

೧. ಕಪಾಲವು ರೊಟ್ಟಿ ಹಂಚಿನ ಆಕಾರಕ್ಕೆ ಕಪ್ಪು ಅಥವಾ ಅರುಣ ವರ್ಣವಾಗಿ, ರೂಕ್ಷವಾಗಿ, ಒರಟಾಗಿ ತೆಳ್ಳಗಿರುವುದು, ಚುಚ್ಚಿದಂತೆ ನೋವು ಮತ್ತು ಹುರುಕುಬರಕಾಗಿರುವುದರಿಂದ ವಾತ ಪ್ರಧಾನವೆಂದು ತಿಳಿಯಬೇಕು.

೨. ಔದುಂಬರದಲ್ಲಿ ಉರಿ, ನವೆ, ನೋವು ಮತ್ತು ಕೆಂಪು ಬಣ್ಣಗಳಿರುವುವು. ರೋಮಗಳು ಕಪಿಲ ವರ್ಣ ಮತ್ತು ಚರ್ಮವು ಅತ್ತಿ ಹಣ್ಣಿನ ಬಣ್ಣಕ್ಕೂ ಇರುವುದರಿಂದ ಪಿತ ಪ್ರಧಾನವೆಂದು ತಿಳಿಯಬೇಕು.

೩. ಮಂಡಲವು ಶ್ವೇತ ವರ್ಣ-ರಕ್ತ ವರ್ಣಗಳಿಂದ ಗಟ್ಟಿಯಾಗಿ, ಸ್ವಲ್ಪ ಉಬ್ಬಿಕೊಂಡಿದ್ದು ಒಂದಕ್ಕೊಂದು ಸೇರಿಕೊಂಡು ಚಲಿಸದಂತಿರಬೇಕು. ಇದರಲ್ಲಿ ವಾತಪಿತ್ತಗಳ ಲಕ್ಷಣಗಳನ್ನು ಕಾಣಬಹುದು.

೪. ಋಷ್ಯಜಿಹ್ವ – ದೊಡ್ಡ ಜಾತಿಯ ಜಿಂಕೆ ನಾಲಗೆಯಂತೆ ಸುತ್ತಲೂ ಕೆಂಪಗೆ, ಮಧ್ಯ ಕಪ್ಪು ಮತ್ತು ನೋವುಳ್ಳದ್ದಾಗಿ ಒಳಗಿರುವುದು. ಇದು ಸಹ ವಾತ-ಪಿತ್ತ ಪ್ರಧಾನವಾದುದು.

೫. ಪುಂಡರೀಕವು ಮಧ್ಯ ಬೆಳ್ಳಗೂ, ಸುತ್ತಲೂ ತಾವರೆ ದಳದಂತೆ ಕೆಂಪಗೂ, ಸ್ವಲ್ಪ ಉರಿಯಿಂದ ಕೂಡಿರುವುದು ಇದು ವಿಶೇಷವಾಗಿ ಕಫಪಿತ್ತ ದೂಷಣೆಯಿಂದಾಗುವುದು.

೬. ಸಿಧ್ಮವು ಬೆಳ್ಳಗೆ ಇಲ್ಲವೆ ತಾಮ್ರ ವರ್ಣವಾಗಿದ್ದು ತೆಳುವಾಗಿ ಕಾಣುವುದು. ಇದರ ಆಕಾರವು ನೊರೆಹಾಲಿನಂತಿರುವುದು. ಎದೆಯ ಮೇಲೆ ಕಂಡುಬರುವುದು ಹಾಗೂ ವಾತ-ಕಫ ದೋಷಗಳಿಂದಾಗುವುದು.

೭. ಕಾಕಣ ಕುಷ್ಠವು ಗುಲಗಂಜಿಯಂತೆ ಕೆಂಪಗೆ, ಪಾಕವಾಗದೆ ನೋವುಗಳಿಂದ ಕೂಡಿರುವುದು. ಮೂರು ದೋಷಗಳೂ ಇದರಲ್ಲೆ ಉಲ್ಬಣವಾಗಿರುವುದರಿಂದ ಇದು ಚಿಕಿತ್ಸೆಗೆ ಅಸಾಧ್ಯವಾಗಿರುವುದು.

ಚಿಕಿತ್ಸೆ: ಪ್ರಪ್ರಥಮವಾಗಿ ಈ ರೋಗಿಗಳಿಗೆ ವಮನ-ವಿರೇಚನ, ರಕ್ತಮೋಕ್ಷಣ ಇತ್ಯಾದಿ ಶೋಧನ ಚಿಕಿತ್ಸೆ ಮಾಡಬೇಕು.

 • ಬೇವಿನ ಬೀಜದ ಒಳಭಾಗ, ವಾಯುವಿಡಂಗ, ಕೇರಿನ ಬೀಜ, ಅರಿಶಿನ, ದಾರುಹರಿದ್ರ, ಇವುಗಳ ಸಮಭಾಗ ಚೂರ್ಣ ಸಿದ್ಧಪಡಿಸಿಕೊಂಡು ಬೇವಿನೆಣ್ಣೆ, ಸೇರಿಸಿ ತೆಗೆದುಕೊಂಡರೆ ಎಲ್ಲ ವಿಧ ಕುಷ್ಠರೋಗಗಳು ಗುಣವಾಗುವವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
 • ಪನ್ನಗ ಬೀಜಾದಿ ಲೇಪ, ಪಲಾಶಕ್ವಾರಲೇಪ, ಸಿದ್ಧಾರ್ಥದಿಲೇಪ, ಭಲ್ಲಾತಕಾಸ್ಧ್ಯಾದಿಲೇಪ, ಭಲ್ಲಾತಕ ಲೇಪ, ಖದಿರ ಚೂರ್ಣ, ತೀಕ್ಷ್ಣ ಲೋಹ ಭಸ್ಮ, ನವಾಯಸ ಚೂರ್ಣ, ಮುಂತಾದ ಯೋಗಗಳನ್ನೂ ಶಾಸ್ತ್ರದಲ್ಲಿ ಹೇಳಲಾಗಿದೆ. ವೈದ್ಯರ ಸಲಹೆಯ ಮೇರೆಗೆ ಈ ಯೋಗಗಳನ್ನೂ ತೆಗೆದುಕೊಳ್ಳಬೇಕು.
 • ಕಲ್ಯಾಣಕಾರಕ ಗ್ರಂಥದಲ್ಲಿ ಖದಿರ ಪ್ರಯೋಗವನ್ನು ವಿಶೇಷವಾಗಿ ಹೇಳಲಾಗಿದೆ. ಖದಿರ ಚೆಕ್ಕೆಯು ಕಷಾಯವನ್ನು ಕುಡಿಯಲು, ಸ್ನಾನಕ್ಕೆ ಉಪಯೋಗಿಸಿದರೆ ಕ್ರಮೇಣ ಕುಷ್ಠರೋಗವು ಗುಣವಾಗುವುದೆಂದು ತಿಳಿಸಿದ್ದಾರೆ.
 • ಚಾರ್ಮುಗರ ಎಣ್ಣೆ ಚರ್ಮದ ಮೇಲೆ ಹಚ್ಚಲು ಉಪಯುಕ್ತ.
 • ಮಹಾತಿಕ್ತಕ ಘೃತ, ಆರೋಗ್ಯವರ್ಧಿನಿ, ರಸಮಾಣಿಕ್ಯ, ತಾಕೇಶ್ವರ ರಸ, ಅಮೃತ ಭಲ್ಲಾತಕ, ಮಹಾಭಲ್ಲಾತಕ ಗುಡ – ಇತ್ಯಾದಿ ಸಿದ್ಧೌಷಧಿಗಳನ್ನು ಕುಷ್ಠರೋಗ ಚಿಕಿತ್ಸೆಗೆ ತುಂಬ ಜನಪ್ರಿಯವಾಗಿದೆ.

೨೭. ಮೂರ್ಛೆ ರೋಗ

ಯಾವ ಮನುಷ್ಯನು ಅತ್ಯಂತ ಕ್ಷೀಣನಾಗಿದ್ದು ಅವನಲ್ಲಿ ದೋಷಗಳು ಅಧಿಕವಾಗಿ ಪ್ರಕೋಪಗೊಂಡಿದ್ದರೆ, ವಿರುದ್ಧಾಹಾರ, ವೇಗಗಳ ಧಾರಣೆ, ತಲೆಗೆ ಬೀಳುವ ಭಾರೀ ಪೆಟ್ಟುಗಳು ಹಾಗೂ ದುರ್ಬಲ ಮನಸ್ಸು ಇದ್ದವರಿಗೆ ಮನಸ್ಸು ಹಾಗೂ ಇಂದ್ರಿಯ ಸಂಬಂಧವಾದ ಸ್ರೋತಸ್ಸುಗಳಲ್ಲಿ ದೋಷಗಳು ಪ್ರವೇಶಿಸಿ ಮೂರ್ಛೆಯನ್ನುಂಟು ಮಾಡುವುವು.

ಶರೀರಸ್ಥ ತ್ರಿದೋಷಗಳು ಪ್ರಕುಪಿತಗೊಂಡಾಗ ಸಂಜ್ಞಾ ನಾಡಿಗಳನ್ನು ಪ್ರವೇಶಿಸಿ ವ್ಯಾಪಿಸಿದಾಗ ಕಣ್ಣುಗಳ ಮುಂದೆ ಸುಖ-ದುಃಖ ಪರಿಜ್ಞಾನವಾಗದಂತಹ ತಮೋಗುಣವು ಅಂಧಕಾರವನ್ನುಂಟು ಮಾಡುವುದು. ಆಗ ಮಾನವನು ಒಣಗಿದ ಕಟ್ಟಿಗೆಯಂತೆ ಕೆಳಕ್ಕೆ ಬಿದ್ದುಬಿಡುವುದು. ಈ ಸ್ಥಿತಿಗೆ ಮೋಹ ಅಥವಾ ಮೂರ್ಛೆ ಎನ್ನುವರು.

(ಕಲ್ಯಾಣಕಾರಕ .೧೭, ಪುಟ.೪೩೮೪೪೧)

ಮೂರ್ಛೆರೂಪ: ಎದೆಯಲ್ಲಿ ಪೀಡೆ, ಆಕಳಿಕೆ, ಬಳಲಿ, ಎಚ್ಚರವಿಲ್ಲದಿರುವಿಕೆ, ಬಲಹಾನಿ-ಇವುಗಳ ಮೂರ್ಛೆಯಲ್ಲಿ ಪೂರ್ವರೂಪವಾಗಿ ಕಾಣಿಸಿಕೊಳ್ಳುವುವು.

ಎರಡು ವಿಧ: ಮೂರ್ಛೆಯಲ್ಲೂ ಸಾಮಾನ್ಯವಾಗಿ ಸೌಮ್ಯ ಹಾಗೂ ಪ್ರಬಲ ಎಂಬ ಎರಡು ಸ್ಥಿತಿಗಳನ್ನು ಕಾಣಬಹುದು. ಸಾಧಾರಣ ಮೂರ್ಛೆಯು ಬಿಸಿಲು, ಆರ್ತನಾದ, ಪೆಟ್ಟು, ರಕ್ತಸೋರುವಿಕೆ, ಅಸ್ವಾಸ್ಥ್ಯತೆ – ಮೊದಲಾದ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವುದು. ಆಗ ರೋಗಿಯು ಬೇರೆಯವರ ಮಾತನಾಡುವ ಶಬ್ದಗಳನ್ನು ಕೇಳಿಸಿದಂತೆನಿಸಿದರೂ, ಉತ್ತರಿಸುವ ಸ್ಥಿತಿಯಲ್ಲಿರುವುದಿಲ್ಲ. ಮುಖಕ್ಕೆ ಸ್ವಲ್ಪ ನೀರನ್ನು ಜೋರಾಗಿ ಗೊಜ್ಜಿದರೆ ಎಚ್ಚರಾಗುವನು. ಇದಕ್ಕೆ ಬೇರೆ ಚಿಕಿತ್ಸೆಯ ಅಗತ್ಯವಿರುವುದಿಲ್ಲ.

ಇನ್ನು ಪ್ರಬಲ ಮೂರ್ಛೆಯನ್ನು ರೋಗಿಯು ಬೇಗನೆ ಎಚ್ಚರಗೊಳ್ಳುವುದಿಲ್ಲ. ಅಲಕ್ಷಿಸಿದಂತೆ ರೋಗಿಯ ಸ್ಥಿತಿ ಗಂಭೀರಗೊಳ್ಳುತ್ತ ಹೋಗುವುದು. ಕೆಲ ವೇಳೆ ಮರಣವೂ ಸಂಭವಿಸಬಹುದು. ಗಂಭೀರ ಸ್ವರೂಪದ ಅಪಸ್ಮಾರ ರೋಗದಲ್ಲಿ ಹೀಗೆ ಆಗಬಹುದು. ಆಗ ಕೂಡಲೇ ತಜ್ಞ ವೈದ್ಯರಿಂದ ಪರೀಕ್ಷಿಸಿ ಚಿಕಿತ್ಸೆ ಮಾಡಿಸಬೇಕು. ಮಧುಮೇಹ, ಮದ್ಯಪಾನ, ಪೈತ್ತಿಕ, ಮೂರ್ಛೆ, ವೃಕ್ಕ ವ್ಯಾಧಿಗಳು, ಶರೀರದಲ್ಲಿ ಶರ್ಕರಾಂಶ ಕಡಿಮೆ ಆದಾಗ, ಮಸ್ತಿಷ್ಕದಲ್ಲಿ ರಕ್ತಸ್ರಾವ, ಮಸ್ತಿಷ್ಕಜ್ವರ, ಮಸ್ತಿಷ್ಕ ಬಾವು ವಿಷ ಸೇವನೆ, ಕಾರ್ಬನ್ ಮೊನೋಕ್ಸಾಯಿಡ್ ಗ್ಯಾಸಿನ ಸೇವನೆ, ನಿದ್ರಾಕಾರಿ ಔಷಧಿ, ಮಸ್ತಿಷಾರ್ಬುದ, ಸನ್ನಿಪಾತ ಜ್ವರ, ಸೂರ್ಯಾಘಾತ- ಈ ಮೊದಲಾದ ಸಂದರ್ಭಗಳಲ್ಲಿ ರೋಗಿಗಳಲ್ಲಿ ಗಂಭೀರ ಸ್ವರೂಪದ ಮೂರ್ಛೆಯನ್ನು ಕಾಣಬಹುದು.

ವಿವಿಧ ಮೂರ್ಛೆಗಳು: ಶಾಸ್ತ್ರದಲ್ಲಿ ಆರು ವಿಧ ಮೂರ್ಛೆಗಳನ್ನು ವಿವರಿಸಲಾಗಿದೆ. ವಾತ, ಪಿತ್ತ, ಕಫ ಮದ್ಯ ಹಾಗೂ ವಿಷ ದೋಷಗಳಿಂದ ಮೂರ್ಛೆಯು ಕಂಡುಬರುವುದೆಂದು ಉಗ್ರದಿತ್ತಾಚಾರ್ಯರು ಹೇಳಿದ್ದಾರೆ. ಇವೆಲ್ಲವುಗಳಲ್ಲಿ ಪಿತ್ತದೋಷವು ಪ್ರಧಾನವಾಗಿರುತ್ತದೆ.

ಲಕ್ಷಣಗಳು: ತ್ರಿದೋಷಗಳ ವಿಕಾರದಿಂದ ಮೂರ್ಛೆಯಲ್ಲಿ ಆಯಾ ದೋಷಗಳ ಲಕ್ಷಣಗಳನ್ನು ಕಾಣುತ್ತೇವೆ.

ವಾತಿಕ ಮೂರ್ಛೆಯಲ್ಲಿ ರೋಗಿಯು ಆಕಾಶವನ್ನು ನೀಲಿ, ಕಪ್ಪು, ಅಥವಾ ಕೆಂಪು ವರ್ಣದ್ದಾಗಿ ನೋಡುತ್ತಾ ಮೂರ್ಛೆ ಹೋಗುವನು. ಹಾಗು ಬೇಗನೆ ಎಚ್ಚರಗೊಳ್ಳುವನು. ಈ ಅವಸ್ಥೆಯಲ್ಲಿ ಅವನ ಶರೀರವು ಕಂಪಿಸುವುದು. ಮೈಕೈಗಳ ನೋವು ಇರುವುದು. ಹೃದಯ ಭಾಗದಲ್ಲಿ ನೋವು ಹಾಗೂ ಮುಖದ ಮೇಲೆ ಕಪ್ಪು ಅಥವಾ ಕೆಂಪು ಬಣ್ಣವು ಕಂಡುಬರುವುದು. ಈತನು ಕೃಶನಾಗಿರುವನು.

ಪೈತ್ತಿಕ ಮೂರ್ಛೆಯಲ್ಲಿ ರೋಗಿಯು ಮೂರ್ಛಿತವಾಗುವಾಗ್ಗೆ ಆಕಾಶವನ್ನು ಕೆಂಪು, ಹಸಿರು ಅಥವಾ ಹಳದಿ ವರ್ಣದಲ್ಲಿ ನೋಡುತ್ತ ಮೂರ್ಛೆ ಹೋಗುವನು. ಹಾಗೂ ಎಚ್ಚರಗೊಳ್ಳುವಾಗ್ಗೆ ಇವನಿಗೆ ಬೆವರು ಹೆಚ್ಚಾಗಿ ಬಂದಿರುವುದು, ಹೆಚ್ಚು ನೀರಡಿಕೆ, ಶರೀರದಲ್ಲಿ ಉರುಪು, ಕಣ್ಣುಗಳು ಕೆಂಪು ಇಲ್ಲವೆ ಹಳದಿ ಆಗುವುವು. ಇವನು ಮೂರ್ಛೆಯಿಂದ ಬೇಗನೆ ಎಚ್ಚರಗೊಳ್ಳುವನು. ಮೂರ್ಛಾವಸ್ಥೆಯಲ್ಲಿ ಅನಿಯಂತ್ರಿತವಾಗಿ ಮಲವಿಸರ್ಜನೆ ಆಗುವುದು. ರೋಗಿಯ ಮುಖವು ಹಳದಿ ವರ್ಣದ್ದಾಗಿರುವುದು.

ಕಫಜ ಮೂರ್ಛೆಯಲ್ಲಿ ರೋಗಿಯು ಆಕಾಶವನ್ನು ಮೇಘಾಚ್ಛಾದಿತವಾದಂತೆ ಕಾಣುತ್ತ ಮೂರ್ಛೆ ಹೋಗುವನು. ಇವನಿಗೆ ಎಚ್ಚರಿಕೆಯು ತಡವಾಗಿ ಬರುವುದು. ಮೈಭಾರವೆನಿಸುವುದು. ಲಾಲಾಸ್ರಾವ ಹೆಚ್ಚಾಗಿರುವುದು.

ಮದ್ಯಜ ಮೂರ್ಛೆಯಲ್ಲಿ ರೋಗಿಯು ಪ್ರಲಾಪಿಸುತ್ತ ಸಂಜ್ಞಾಹೀನ ಅಥವಾ ವಿಕ್ಷಿಪ್ತಚಿತ್ತನಾಗಿ ಕೈ ಕಾಲುಗಳನ್ನು ಅತ್ತಿಂದಿತ್ತ ಒದ್ದಾಡಿಸುತ್ತ ಮೂರ್ಛೆ ಹೋಗುವನು. ಮದ್ಯದ ಅಮಲು ಇಳಿದ ಮೇಲೆ ತಂತಾನೆ ಎಚ್ಚರಗೊಳ್ಳುವನು.

ವಿಷಜ ಮೂರ್ಛೆಯಲ್ಲಿ ಶರೀರದ ಕಂಪನ, ನಿದ್ರೆ, ನೀರಡಿಕೆ, ಕಣ್ಣು ಕತ್ತಲುಗೂಡಿಸುವುದು. ಮೊದಲಾದ ಲಕ್ಷಣಗಳಿರುವುವು. ಬೇರೆ ಬೇರೆ ವಿಷಸೇವನೆ ಮಾಡಿದಾಗ ಈ ಲಕ್ಷಣಗಳು, ಸೌಮ್ಯ, ತೀವ್ರ ಹಾಗೂ ತೀವ್ರತಮವಾಗಿರುವುವು.

ಚಿಕಿತ್ಸೆ: ಸಾಮಾನ್ಯವಾದ ಮೂರ್ಛೆಯಲ್ಲಿ ಕೇವಲ ತಣ್ಣೀರನ್ನು ಮುಖಕ್ಕೆ ಎರಚುವುದರಿಂದ ಎಚ್ಚರಿಕೆ ಬರುವುದೆಂದು ಈಗಾಗಲೇ ನೋಡಿದ್ದೇವೆ. ಎಚ್ಚರ ಬರಿಸಲು ಈರುಳಳಿ ಒಡೆದು ಮೂಸಿಸಬಹುದು. ನವಸಾಗರ ಸುಣ್ಣ ತಿಕ್ಕಿ ಮೂಸಿಸಬಹುದು. ಇಲ್ಲವೆ ಮೆಣಸಿನ ಪುಡಿ, ತ್ರಿಕಟು ಚೂರ್ಣಗಳಿಂದಲೂ ನಸ್ಯ ಮಾಡಿಸಿದರೆ ಕೂಡಲೇ ಎಚ್ಚರಬರುವುದು. ಮುಖ್ಯವಾಗಿ ಮೂರ್ಛೆಗೆ ಶೈತ್ಯೋಪಚಾರ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೇಷ್ಠಮಧು, ದ್ರಾಕ್ಷಿ, ಹಾಲು, ತುಪ್ಪ, ಕಬ್ಬಿನ ಹಾಲು, ಕಡ್ಲಿ, ಅಗಸಿ, ಸಕ್ಕರೆ ಮೊದಲಾದ ಪದಾರ್ಥಗಳು ಸೇರಿದ ಆಹಾರ ಕೊಡಬೇಕು.

 • ಮೂರ್ಛಾಂತಕ ನಸ್ಯ – ಒಂದು ಉತ್ತಮ ಔಷಧಿ.
 • ಮುಕ್ತಾಪಿಷ್ಟಿ – ೨ ರಿಂದ ೩ ಗ್ರೇನುಗಳಷ್ಟು ಹಾಲಿನೊಡನೆ
 • ಅಶ್ವಗಂಧಾರಿಷ್ಟ + ಸಾರಸ್ವತಾರಿಷ್ಟ – ಇವೆರಡನ್ನು ಕೆಲ ದಿವಸಗಳವರೆಗೆ ತೆಗೆದುಕೊಳ್ಳಬೇಕಾಗುವುದು.
 • ತಾಪ್ಯಾದಿಲೋಹ + ಚಂದ್ರಕಲಾ ರಸ.

೨೮. ಉನ್ಮಾದ (Mania)

‘ಧೃತಿ’ ಎಂದರೆ ಧೈರ್ಯ. ಈ ಧೈರ್ಯವಿರುವುದರಿಂದಲೇ ವ್ಯಕ್ತಿಯು ತನ್ನನ್ನು ಅಧೋಗತಿಗೆ ಒಯ್ಯುವ ಶಕ್ತಿಗಳ ವಿರುದ್ಧ ತನ್ನ ಜಯಗಳಿಸುತ್ತಾನೆ. ಈ ಧೈರ್ಯವು ಕುಂದಿತೆಂದರೆ ಇಲ್ಲದ ಸಮಸ್ಯಗಳೆಲ್ಲ ಎದ್ದು ಕುಳಿತುಕೊಳ್ಳುತ್ತವೆ. ಹೀಗಾಗಿ ಅವನು ಚಂಚಲ ಸ್ವಭಾವದವನೂ, ಕೆಲ ವೇಳೆ ಉಗ್ರನೂ ಆಗುತ್ತಾನೆ. ರಜೋಗುಣ ಹಾಗೂ ವಾತ ಪ್ರಕೋಪಗೊಂಡ ಲಕ್ಷಣಗಳು ಅದರಲ್ಲಿ ಸೇರಿಕೊಳ್ಳುತ್ತವೆ. ಕೆಲ ದಿನ ಈ ಸ್ಥಿತಿಯಲ್ಲಿದ್ದು ಕ್ರಮೇಣ ತಮೋಗುಣವು ಅಧಿಕಗೊಳ್ಳಲಾರಂಭಿಸಿ ಕಫವಿಕಾರದ ಲಕ್ಷಣಗಳು ಕಂಡು ಬರಲಾರಂಭಿಸುತ್ತವೆ. ಇದೇ ಉ‌ನ್ಮಾದ. ಇದರ‍ಲ್ಲಿ ಪ್ರವೃದ್ಧಗೊಂಡ ದೋಷಗಳು ಉನ್ಮಾರ್ಗಗಾಮಿಗಳಾಗಿ ಮನೋವಿಭ್ರಮೆಯನ್ನುಂಟು ಮಾಡುತ್ತವಾದ್ದರಿಂದ ಈ ಮಾನಸರೋಗಕ್ಕೆ ‘ಉನ್ಮಾದ’ ಎನ್ನುವರು.

ಕಾರಣಗಳು: ಸಂಯೋಗ ವಿರುದ್ಧ, ದುಷ್ಟ ಹಾಗೂ ಅಪವಿತ್ರ ಭೋಜನ ಮಾಡುವುದರಿಂದ, ದೇವ-ಗುರು ಮಾತಾ-ಪಿತೃ ಹಾಗೂ ಪೂಜ್ಯರನ್ನು ಅವಮಾನಗೊಳಿಸುವುದರಿಂದ, ಅತ್ಯಧಿಕ ಭಯ ಹಾಗೂ ಆನಂದಗಳಿಂದ ಮನಸ್ಸಿನಲ್ಲಿ ಉಂಟಾಗುವ ಪ್ರಭಾವದಿಂದ, ಶಾರೀರಿಕ ವಿಷಮ ಚೇಷ್ಟಗಳಿಂದ, ಮನೋ ಆಘಾತಗಳು ಉಂಟಾಗುವುದರಿಂದ ಉನ್ಮಾದ ರೋಗಬರುವುದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ವಾತ, ಪಿತ್ತ, ಕಫ, ತ್ರಿದೋಷಜ ಹಾಗೂ ಶೋಕದಿಂದ ಐದು ಪ್ರಕಾರದ ಉನ್ಮಾದ ರೋಗವುಂಟಾಗುವುದೆಂದು ಹೇಳಿದ್ದಾರೆ. (ಕಲ್ಯಾಣಕಾರಕ ಅ.೧೭, ಪುಟ.೪೩೫-೪೩೮)

ಉನ್ಮಾದ ವಿಕಾರಕ್ಕೆ ಸನ್ನಿಕೃಷ್ಟ ಕಾರಣಗಳಲ್ಲಿ ಅಧಿಕ ಪರಿಶ್ರಮ, ಅತಿಯಾದ ಚಿಂತೆ, ಚಿರಕಾರಿ ವ್ಯಾಧಿಗಳು, ಅಪೌಷ್ಟಿಕ ಆಹಾರ, ಮದ್ಯಪಾನ, ವಿಷ ಸೇವನೆ ಮುಂತಾದವು ಬರುತ್ತವೆ. ದೊರದ (ವಿಪ್ರಕೃಷ್ಣ) ಕಾರಣಗಳಲ್ಲಿ ಅನುವಂಶಿಕತೆ ಮುಖ್ಯವಾಗಿ ಬರುತ್ತದೆ. ಈ ವಂಶದಲ್ಲಿ ಹುಟ್ಟಿದವರು ಜನ್ಮತಃ ವಿಚಿತ್ರ ಸ್ವಭಾವದವರಾಗಿರುತ್ತಾರೆ. ಅವರ ಜೀವನದಲ್ಲಾಗುವ ಯಾವುದೇ ಒಂದು ಆಕಸ್ಮಿಕ ಘಟನೆಯೂ ಉನ್ಮಾದ ರೋಗವುಂಟಾಗಲು ಕಾರಣವಾಗಬಹುದು. ಯೌವನಾವಸ್ಥೆ ಹಾಗೂ ಗ್ರೀಷ್ಮ ಕಾಲಗಳಲ್ಲಿ ಈ ವಿಕಾರವಾಗುವುದು ಹೆಚ್ಚು.

ಸಂಪ್ರಾಪ್ತಿ: ಈ ಮೇಲ್ಕಂಡ ಕಾರಣಗಳಿಂದ ಪ್ರಕುಪಿತವಾದ ವಾತಾದಿ ದೋಷಗಳು ಸತ್ವಗುಣಹೀನವುಳ್ಳ ಅಥವಾ ದುರ್ಬಲ ಮನುಷ್ಯನ ಬುದ್ಧಿಯ ಆವಾಸಸ್ಥಾನವಾದ ಹೃದಯ(ಮಿದುಳು) ವನ್ನು ದೂಷಿಸಿ ಹಾಗೂ ಮನೋವಾಹಿ ಸ್ರೋತಸ್ಸುಗಳನ್ನು ವ್ಯಾಪಿಸಿ ಮನುಷ್ಯನ ಬುದ್ಧಿಯನ್ನು ಭ್ರಾಂತಿಯುಕ್ತ ಇಲ್ಲವೆ ಉನ್ಮತ್ತಗೊಳಿಸುವುವು.

ಪೂರ್ವರೂಪಗಳು: ಉನ್ಮಾದವು ಪ್ರಾರಂಭವಾಗುವುದಕ್ಕೆ ಮುಂಚೆ ತಲೆಯು ಖಾಲಿ ಇದ್ದಂತೆ ಎನಿಸುವುದು. ದೃಷ್ಟಿಯು ಸ್ಥಿರವಿಲ್ಲದೆ ಅಲ್ಲಲ್ಲಿ ನೋಡುವಿಕೆ, ಕಿವಿಯಲ್ಲಿ ಎಲ್ಲ ವಿಧದ ಶಬ್ದಗಳು ಕೇಳಿಬಂದಂತಾಗುವುದು. ಉಸಿರಾಟ ಹೆಚ್ಚುವುದು. ಜೊಲ್ಲು ವಿಶೇಷವಾಗಿ ಬರುತ್ತಿರುವುದು. ಆಹಾರಾಪೇಕ್ಷೆ, ರುಚಿ ಹಾಗೂ ಜೀರ್ಣಕ್ರಿಯೆಗಳು ಕೆಟ್ಟಿರುವುದು, ನಿಷ್ಕಾರಣವಾಗಿ ಏನನ್ನೋ ಯೋಚಿಸುತ್ತಿರುವುದು, ಆಯಾಸ ಪಟ್ಟುಕೊಳ್ಳುವುದು, ಉದ್ವೇಗ, ಸದಾ ರೋಮಾಂಚನಗೊಳ್ಳುವುದು, ಆಗಾಗ ಜ್ವರ, ಚಪಲ ಚಿತ್ತತೆ, ಆರ್ದಿತವಾತವಾದಂತೆ ಮುಖ ಸೊಟ್ಟಗೆ ಮಾಡುವುದು. ಈ ಮೊದಲಾದ ಲಕ್ಷಣಗಳು ಕಂಡುಬರುವುವು. ಕನಸಿನಲ್ಲಿ ಅಪ್ರಶಸ್ತವಾದ ಸ್ಥಳ ಅವನು ಸಿಕ್ಕಿಹಾಕಿಕೊಂಡಂತೆ ಎಣ್ಣೆ ಗಾಣದ ಮೇಲೆ ಸುತ್ತುತ್ತಿರುವಂತೆ, ನೀರಿನ ಸುಳಿಯಲ್ಲಿ ಸಿಕ್ಕಿ ಹಾಕಿಕಂಡಂತೆ, ಮನಸ್ಸು ಶೂನ್ಯವಾದಂತೆ, ಕೆಟ್ಟ ಯೋಚನೆಯಲ್ಲಿ ತೊಡಗಿಕೊಂಡಿರುವುದು, ಈ ಮೊದಲಾದ ಲಕ್ಷಣಗಳಿರುವುವು.

ಲಕ್ಷಣಗಳು: ಬುದ್ಧಿಭ್ರಮಣೆ, ಮನಸ್ಸಿನ ಚಂಚಲತೆ, ಕಣ್ಣುಗಳನ್ನು ಅತ್ತಿತ್ತ ಹೊರಳಾಡಿಸುವುದು ಅಥವಾ ವ್ಯರ್ಥವಾಗಿ ಅತ್ತಿಂದಿತ್ತ ನೋಡುವುದು, ಬುದ್ಧಿಯ ಅಸ್ಥಿರತೆ, ಅಸಂಬದ್ಧವಾಗಿ ಪ್ರಲಾಪಿಸುವುದು ಹಾಗೂ ಹೃದಯಶೂನ್ಯತೆ (ತನ್ನತನ ಶೂನ್ಯವಾಗುವುದು) ಇವು ಉನ್ಮಾದದ ಸಾಮಾನ್ಯ ಲಕ್ಷಣಗಳೆನಿಸಿವೆ.

ವಾತ, ಪಿತ್ತ, ಕಫ ಹಾಗೂ ಸನ್ನಿಪಾತಜ ಉನ್ಮಾದಗಳಲ್ಲಿ ಆಯಾ ದೋಷಗಳ ಲಕ್ಷಣಗಳು ಕಂಡುಬರುವುವು.

ಇವುಗಳಲ್ಲದೆ ಆಯುರ್ವೇದದಲ್ಲಿ ಮಾನಸಿಕ ಭಾವಜನ್ಮ ಉನ್ಮಾದ, ವಿಷಜನ್ಯ ಉನ್ಮಾದ, ಭೂತೋನ್ಮಾದಗಳನ್ನು ಹೇಳಿದ್ದಾರೆ.

. ಮಾನಸಿಕ ಭಾವಜನ್ಯ ಉನ್ಮಾದ: ಕಳ್ಳರು, ರಾಜಭಟರು, ಶತ್ರುಗಳು ಹಾಗೂ ಹಿಂಸ್ರ ಪಶುಗಲ ಭಯಕ್ಕೊಳಗಾದವರು, ತನ್ನ ಪ್ರಿಯತಮೆಯೊಡನೆ ಕಾಮಿಸಬೇಕೆಂಬ ಉತ್ಕಟೇಚ್ಛೆ ಇರುವಾಗ ಭಂಗ ಉಂಟಾದರೆ ಆಗುವ ಆಘಾತದಿಂದ ಭಯಂಕರವಾದ ಉನ್ಮಾದ ಉತ್ಪತ್ತಿಯಾಗುವುದು. ಇದರಿಂದ ಪೀಡಿತನಾದ ವ್ಯಕ್ತಿ ವಿಚಿತ್ರವಾಗಿ ಮಾತನಾಡುತ್ತ ಎಷ್ಟೋ ಸಾರೆ ಮನಸ್ಸಿನಲ್ಲಿ ಹುದುಗಿದ ಮಾತುಗಳನ್ನ ಕೂಡ ಹೇಳಿ ಬಿಡುವನು. ಈ ವಿಕಾರದಲ್ಲಿ ರೋಗಿ ಹಾಡುವುದು, ಅಳುವುದು ಅತೀ ಸಾಮಾನ್ಯ ಲಕ್ಷಣ (ಸುಶ್ರುತ)

. ವಿಷಜನ್ಯ ಉನ್ಮಾದ: ಧತ್ತೂರ ಮೊದಲಾದ ವಿಷಗಳ ಸೇವನೆಯಿಂದ, ಇಲ್ಲವೇ ಅತಿಯಾದ ಮದ್ಯಪಾನ ಮಾಡುವುದರಿಂದ, ಮನುಷ್ಯನು ಉನ್ಮತ್ತನಾಗುತ್ತಾನೆ. ಇದರಲ್ಲಿ ರೋಗಿಯ ಕಣ್ಣುಗಳು ಕೆಂಪಗಿರುತ್ತವೆ. ಬಲ, ಇಂದ್ರಿಯಶಕ್ತಿ, ಕಾಂತಿಗಳು ಕ್ಷೀಣವಾಗಿರುತ್ತವೆ. ಅವನು ದೀನನಾಗುವನು. ಮುಖದ ಚೂರ್ಣವು ಹಸಿರು ನೀಲಿಯಾಗುವುದು, ರೋಗಿಯು ಬೇಶುದ್ಧಿಯಾಗಿ ಸ್ಮೃತಿ ತಪ್ಪುವನು. (ಸುಶ್ರುತ)

. ಭೂತೋನ್ಮಾದ: ಯಾವ ಮಾತುಗಳು ಪರಾಕ್ರಮ, ಶಕ್ತಿ ಹಾಗೂ ಚೇಷ್ಟೆಗಳು ಮಾನವ ಶಕ್ತಿಗೆ ಮೀರಿ ವಿಚಿತ್ರವಾಗಿರುವವೋ, ಯಾವನ ತಿಳುವಳಿಕೆ-ವಿಜ್ಞಾನಗಳು ಶಕ್ತಿಯುತ ವಾಗಿರುವವೋ ಹಾಗೂ ಉನ್ಮಾದ. ವಾತಾದಿ ಗುಣಗಳಂತೆ ನಿಶ್ಚಿತ ಸ್ವರೂಪದ್ದು ಇರುವುದಿಲ್ಲವೋ ಸ್ವಾಭಾವಿಕವಾಗಿ ಇಂತಹ ರೋಗಿಯ ಉನ್ಮಾದಾವಸ್ಥೆಗೆ ಭೂತಶಕ್ತಿ ಕಾರಣವೆಂದು ಚರಕರು ಹೇಳಿದ್ದಾರೆ.

ಸಾಧ್ಯಾಸಾಧ್ಯತೆ: ಶಕ್ತಿ ಗುಂದಿದ ಹಾಗೂ ಮಾಂಸಕ್ಷೀಣನಾದ ರೋಗಿ, ಕೆಳಗೆ ಇಲ್ಲವೆ ಮೇಲಕ್ಕೆ ಸದಾ ಮುಖ ಮಾಡಿಕೊಂಡಿರುವ ರೋಗ ನಿದ್ರೆ ಬಾರದಿರುವ ರೋಗಿ ಇವರು ಚಿಕಿತ್ಸೆಗೆ ಅಸಾಧ್ಯರು. ಇವಲ್ಲದೇ ಕಣ್ಣು ಗುಡ್ಡೆಗಳು ಹೊರಬಂದಂತೆ ಕಂಡುಬರುವ ರೋಗಿ, ದೃಷ್ಟಿ ವಿಸ್ಛಾರಿತಗೊಂಡಿದ್ದರೆ, ಬೇಗ ಬೇಗ ನಡೆಯುವ, ಬಾಯಿಯಲ್ಲಿ ಹೊರ ಬರುತ್ತಿರುವ ನೊರೆಯುಳ್ಳವ, ಅಧಿಕ ನಿದ್ರೆಯುಳ್ಳವ, ಒಮ್ಮಿಂದೊಮ್ಮೆಲೆ ಕೆಳಕ್ಕೆ ಬಿದ್ದು ಬಿಡುವ ಅಥವಾ ನಡುಕುಗೊಳ್ಳುವ, ಪರ್ವತ, ಆನೆ, ಗಿಡಗಳ ಮೇಲಿಂದ ಬಿದ್ದು ಉನ್ಮಾದಿತರಾದ ರೋಗಿಗಳು ಮತ್ತು ೧೩ ವರ್ಷಗಳ ಮೇಲ್ಪಟ್ಟು ಉನ್ಮಾದ ರೋಗವಿದ್ದರೆ ಚಿಕತ್ಸೆಗೆ ಅಸಾಧ್ಯವೆಂದು ಹೇಳಲಾಗಿದೆ.

ಎಳೆ ವಯಸ್ಸಿನಲ್ಲಿ ಉನ್ಮಾದ ಕಾಣಿಸಿತೆಂದರೆ ಹಾಗೂ ಅದು ಆರು ತಿಂಗಳಾವಧಿಯಷ್ಟು ಇರದಿದ್ದರೆ ಅದು ಗುಣವಾಗುವುದು.

ಚಿಕಿತ್ಸೆ: ಉನ್ಮಾದ ರೋಗಿಗೆ ಚಿಕತ್ಸೆ ಪ್ರಾರಂಭಿಸುವುದಕ್ಕಿಂತ ಪೂರ್ವದಲ್ಲಿ ಸಂಶೋಧನ ಚಿಕಿತ್ಸೆ ಕೊಡಬೇಕಾಗುವುದು. ಪಿತ್ತ ಪ್ರಧಾನ ರೋಗಿ ಶಿರೋ ವಿರೇಚನವನ್ನು, ವಾತ ರೋಗಿಗೆ ಮೊದಲು ನಿರೂಹಬಸ್ತಿ ನಂತರ ಸ್ನೇಹನ ಬಸ್ತಿಗಳನ್ನು (ನಾರಾಯಣ ತೈಲ) ದಿಂದ ಕೊಡಬೇಕು. ಕಫ ರೋಗಿಗೆ ನಸ್ಯಕೊಟ್ಟು ಶಿರೋವಿರೇಚನ ಮಾಡಿಸಬೇಕು.

ದೋಷಗಳ ಶಾಂತಿಗಾಗಿ ಈ ಕೆಳಕಾಣಿಸಿದ ಉಪಕ್ರಮಗಳನ್ನು ಮಾಡಿಸಬೇಕಾಗುವುದು.

. ಜಲ ಚಿಕಿತ್ಸೆ: ರೋಗಿಯನ್ನು ಕೆರೆ ಇಲ್ಲವೆ ನೀರಿನ ತೊಟ್ಟಿಯಲ್ಲಿ ೧೦-೧೨ ಗಂಟೆಗಳವರೆಗೆ ಅವಗಾಹನ ಮಾಡಿಸಬೇಕು. ಇಲ್ಲವೆ ಮೇಲಿನಿಂದ ಜೋರಾಗಿ ಬೀಳುವ ನೀರಿನೆಡೆ ತಲೆಯನ್ನಿಟ್ಟು ಸ್ನಾನ ಮಾಡಿಸಿದರೂ ಅದರ ರಭಸಕ್ಕೆ ಉನ್ಮಾದ ಕಡಿಮೆ ಆಗುವುದು.

. ಬೃಂಹಣ ಚಿಕಿತ್ಸೆ: ಉತ್ತಮ ಪೌಷ್ಟಿಕವಾದ ಮಧುರ, ಹೃದ್ಯ, ಬಲಕಾರಿಯಾದ ಆಹಾರವನ್ನು ಕೊಡಬೇಕು.

. ನಿದ್ರಾಕಾರಕ ಔಷಧಿಗಳು: ಅಶ್ವಗಂಧ, ಸರ್ಪಗಂಧ, ಜಟಾ ಮಾಂಸಿ, ಬಜೆಗಳ ಪ್ರಯೋಗ ಉತ್ತಮವೆನಿಸಿದೆ. ಇದಕ್ಕೂ ಅಧಿಕವಾಗಿ ನಿದ್ರೆ ಬರಿಸುವ ಔಷಧಿಗಳನ್ನು ಬಳಸಿ ಕೆಲ ವೈದ್ಯರು ಯಶಸ್ಸು ಕಂಡಿದ್ದಾರೆ.

ಕಲ್ಯಾಣಕಾರಕದಲ್ಲಿ ಉನ್ಮಾದ ರೋಗಿಯ ಶುದ್ಧಿ ಕಾರ್ಯವಾದ ಬಳಿಕ ಅವಪೀಡನ ನಸ್ಯ, ಶಿರೋವಿರೇಚನ ಹಾಗೂ ತೀವ್ರವಾದ ಧೂಪಗಳನ್ನು ಹಾಕಬೇಕು ಎಂದು ಹೇಳಿದ್ದಾರೆ. ರೋಗಿಗೆ ತೀಕ್ಷ್ಣವಾದ ನಸ್ಯ-ಲೇಪಗಳನ್ನು ಹಾಕಬೇಕಲ್ಲದೆ ರೋಗಿಗೆ ಕೃತ್ರಿಮ ಭಯ ಹುಟ್ಟಿಸುವ ಕ್ರಮಗಳನ್ನು ಅನುಸರಿಸಬೇಕಲ್ಲವೇ ಅವನನ್ನು ಬೆದರಿಕೆ ಬರುವ ಕತ್ತಲೆಯ ಕೋಣೆಯಲ್ಲಿಡಬೇಕು ಎಂದಿದ್ದಾರೆ. ಅಲ್ಲದೆ ರೋಗಿಯ ಹಣೆಭಾಗದಲ್ಲಿ ರಕ್ತಮೋಕ್ಷಣ ಕ್ರಿಯೆಯನ್ನು ಮಾಡಬೇಕಾಗುವುದು.

ಸಿದ್ಧೌಷಧಿಗಳು

 • ಉನ್ಮಾದ ಗಜಕೇಸರಿ, ಭೂತಭೈರವಿ, ಸ್ಮೃತಿ ನಾಗರ ರಸ, ಸಮೀರ ಪನ್ನಗ, ಮಲ್ಲಸಿಂಧೂರ ಮೊದಲಾದ ರಸೌಷಧಿಗಳನ್ನು ಇಲ್ಲವೆ ಕಲ್ಯಾಣಕ ಘೃತ, ಮಹಾಪೈಶಾಚಿಕ ಘೃತ, ಬ್ರಾಹ್ಮಿಘೃತಗಳ ಸೇವನೆಯು ಲಾಭದಾಯಕವೆನಿಸಿದೆ.
 • ಮಂದಾಗ್ನಿ ಇದ್ದರೆ ಸಾರಸ್ವತಾರಿಷ್ಟ, ಅಶ್ವಗಂಧಾರಿಷ್ಟಗಳನ್ನು ಕೊಡಬೇಕು.

ಸಾಮಾನ್ಯ ಮನೋ ವ್ಯಾಕುಲತೆ ಇರುವ ರೋಗಿಗೆ ಯಾವ ದೋಷ ಮಂದವಾಗಿರುವುದೋ ಅದಕ್ಕೆ ಮೇಲೆ ತಿಳಿಸಿರುವ ಕರ್ಮವನ್ನು ನಡೆಸುವುದರಿಂದ ಅವನ ಮನೋವಹ ಸ್ರೋತಸ್ಸುಗಳ ಮೂಲಕ ಬುದ್ಧಿ, ಜ್ಞಾನೇಂ‌ದ್ರಿಯ, ಕಮೇಂದ್ರಿಯ ಮೂಲಗಳೆಲ್ಲವೂ ಶುದ್ಧವಾಗುವುವು. ಈ ವಿಧವಾಗಿ ಆಗಿಂದಾಗ್ಗೆ ಮಾಡುತ್ತಲಿದ್ದರೆ ಶಾರಿರೀಕ ಮಲಾಯನಗಳಲ್ಲಿರುವ ಅತಿಸೂಕ್ಷ್ಮ ಮಲವೂ ಹೊರಬರುವುದು. ಪ್ರತಿದಿನ ಶಮನೌಷಧಗಿಳನ್ನು ಕೊಡುವುದರಿಂದ ಮನೋ ಉದ್ವೇಗವಾಗುವುದಿಲ್ಲ. ಚಿತ್ತಶಾಂತತೆ ಒಳ್ಳೆ ಆಹಾರ-ವಿಹಾರ-ವಿಚಾರ ದೇವರ ಧ್ಯಾನಗಳನ್ನು ನಿತ್ಯ ಜೀವನದಲ್ಲಿಟ್ಟುಕೊಳ್ಳುವಂತೆ ಹೇಳಬೇಕು. ರೋಗಿಯ ಹಿತೈಷಿಗಳೊಡನೆ ಭಜನೆ, ಸಂಗೀತ, ನೀತಿ ಬೋಧನೆಗಳನ್ನು ನಡೆಸುವುದರಿಂದ ಕ್ರಮೇಣ ಹಿಂದಿನ ಕ್ಲೇಶಗಳನ್ನು ಮರೆಯಲು ಸಾಧ್ಯವಾಗುತ್ತದೆ. ಅನ್ಯೋಕ್ತಿ ಮೂಲಕ ಅವನ ಭಾವನೆಗಳು ಬದಲಾಗುತ್ತ ಹೋಗುವುವು. ಅವನಿಗೆ ಸರಿಯಾಗಿರುವ ವೃತ್ತಿಯನ್ನು ಕೊಟ್ಟು ದೀರ್ಘವಾಗಿ ಉಳಿದಿರುವ ಚಿಂತೆ, ಕೋಪ, ಸೇಡನ್ನು ತೀರಿಸಿಕೊಳ್ಳುವ ಭಾವನೆಗಳನ್ನು ಹೋಗಲಾಡಿಸಬೇಕು.

೨೯. ಅಪಸ್ಮಾರ (Epilepsy)

ಆಯುರ್ವೇದದಲ್ಲಿ ಅಪಸ್ಮಾರವನ್ನು ಮನೋರೋಗಗಳ ಗುಂಪಿನಲ್ಲಿ ಸೇರಿಸಲಾಗಿದೆ. ಮನಸ್ಸಿನ ಸ್ಥಾನ ಮೆದುಳು ಹಾಗೂ ಈ ಮೆದುಳಿನಲ್ಲಿಯೇ ಕೋಟ್ಯಂತರ ನರ ಕೋಶಗಳು, ನರ ತಂತುಗಳು ಸೇರಿಕೊಂಡದ್ದು, ಅವು ದೇಹದ ಹೊರ-ಒಳ ಅಂಗಾಂಗಗಳ ಕಾರ್ಯ ಚಟುವಟಿಕೆಗಳನ್ನು ನಿರ್ದೇಶಿಸಿ ಅವು ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ. ೩-೪ ಸಾವಿರ ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿದ್ದು ಇದರ ಬಗ್ಗೆ ಸಾಕಷ್ಟು ವಿವರಣೆಗಳು ಶಾಸ್ತ್ರದಲ್ಲಿವೆ. ಬುದ್ಧಿ ಹಾಗೂ ಮನಸ್ಸು ಮುಳುಗಿ ಹೋಗುವ ದೆಸೆಯಿಂದ ರೋಗಿಯಲ್ಲಿ ಕತ್ತಲೆಯು ಪ್ರವೇಶವಾಗಿ ಭಯಂಕರವಾದ ಚೇಷ್ಟೆಗಳನ್ನುಂಟು ಮಾಡುವ ಸ್ಮೃತಿ ಅಪಸ್ಮಾರ ಶಬ್ಧದಲ್ಲಿ ‘ಅಪ’ ಎಂದರೆ ಅಗಲುವಿಕೆ, ಸ್ಮೃತಿ ಎಂದರೆ ಹಿಂದೆ ನಡೆದ ವಿಷಯದ ಪರಿಜ್ಞಾನದ ಅಗಲುವಿಕೆಯು ಅಪಸ್ಮಾರಿಯಲ್ಲಿರುವುದು. ಈ ರೋಗಿಗೆ ತನಗಾಗುವ ಯಾವ ಭಾದೆಗಳು ತಿಳಿಯುವುದಿಲ್ಲ. ಹುಚ್ಚನಿಗೆ ಕೆಲ ವಿಷಯಗಳು ನೆನಪಿನಲ್ಲಿ ಇರಬಹುದು. ಆದರೆ ಅವನ ಮಾತು, ನಡವಳಿಕೆಗಳ ಮೇಲೆ ಸ್ವಾಧೀನವಿರುವುದಿಲ್ಲ. ನೋಯಿಸಿದರೆ ತಿಳಿಯುವುದು. ಅಲ್ಲದೇ ಪ್ರತಿ ಕ್ರಿಯೆಯನ್ನು ತೋರುವನು. ಆದರೆ ಅಪಸ್ಮಾರ ರೋಗಿಗೆ ಹೀಗಾಗುವುದಿಲ್ಲ. ಕೆಲವರಿಗೆ ಸ್ಮೃತಿ ತಪ್ಪುವುದಕ್ಕೆ ಮುಂಚೆ ಲಕ್ಷಣಗಳು ಅಲ್ಪ-ಸ್ವಲ್ಪ ತಿಳಿಯುತ್ತಿದ್ದರೂ ಅವನ್ನು ಹೇಳುವಷ್ಟರಲ್ಲಿಯೇ ಸ್ಮರಣೆ ತಪ್ಪಿ ಹೋಗಿ ಇದ್ದಸ್ಥಿತಿಯಲ್ಲಿಯೇ ಬಿದ್ದುಬಿಡುವನು. ಹೀಗೆ ಎಚ್ಚರ ತಪ್ಪುವಿಕೆ ಹಾಗೂ ಒಂದೆರಡು ನಿಮಿಷಗಳಲ್ಲಿಯೇ ರೋಗಿ ಎಚ್ಚರವಾಗಿ ಎದ್ದು ಹೋಗಿ ಬಿಡುವುದು ಈ ರೋಗಿಗಳಲ್ಲಿ ಸಾಮಾನ್ಯ. ಹೀಗಾಗಿ ಹಿಂದಿನ ಕಾಲದಲ್ಲಿ ಇದೊಂದು ಗ್ರಹಪೀಡೆ ಎಂದೂ ಕರೆಯುತ್ತಿದ್ದರೆಂದೂ, ಆದರೆ ಇದು ದೋಷಗಳಿಂದಾದ ರೋಗವೆಂದೂ ಕರ್ಮದ ಫಲವೆಂದೂ ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.

(ಕಲ್ಯಾಣಕಾರಕ೧೭ಪು. ೪೩೮೪೪೧)

ಕಾರಣಗಳು: ದುಃಖ, ಭಯ, ಮಲಿನವಾದ ಆಹಾರ ಸೇವನೆ, ಶಾರರೀಕ ವಿಷಮ ಚೇಷ್ಟೆ ಮುಂತಾದ ಕಾರಣಗಳಿಂದ ಮನಸ್ಸು ಹಾಗೂ ಶಾರೀರಿಕ ದೋಷಗಳು ಪ್ರಕೋಪಗೊಳ್ಳುವುವು. ಈ ದೋಷಗಳು ಸಂಜ್ಞಾವಾಹಿನಿ ಹಾಗೂ ಇಂದ್ರಿಯ ಕೇಂದ್ರಗಳಲ್ಲಿ ನಿಂತಿರುವಷ್ಟು ಹೊತ್ತು ಅಪಸ್ಮಾರ ವೇಗವಿದ್ದು ರಕ್ತ ಸಂಚಾರದಲ್ಲಿ ಕೊಚ್ಚಿ ಹೋದ ಕೂಡಲೇ ಈ ಭಯಂಕರವಾದ ಚೇಷ್ಟೆ(ಸೆಳೆತ)ಗಳು ತಂತಾನೆ ನಿಲ್ಲುವುವು. ಆದರೂ ಇಂದ್ರಿಯಗಳು ಮನಸ್ಸಿನ ಸಂಪರ್ಕ ಪಡೆಯುವ ಕಾರಣ ಅಪಸ್ಮಾರಿಯು ನಿದ್ರೆಗೊಳಗಾಗುವುದು. ಇದಲ್ಲದೆ ಅವನಿಗೆ ಸೆಳೆತಗಳಿಂದ ದಣಿವೂ ಆಗಿರುತ್ತದೆ. ನಂತರ ರೋಗಿ ತಂತಾನೆ ಎಚ್ಚರಗೊಳ್ಳುವನು. ದೋಷಗಳು ಪುನಃ ಹಿಂದಿನಂತೆ ಸಂಜ್ಞಾವಾಹಿನಿ ಕೇಂದ್ರಗಳನ್ನು ಆವರಿಸುವಾಗ ವೇಗಗಳಿಂದ ಜ್ಞಾನ ತಪ್ಪುವುದು. ಹೀಗೆ ಒಂದೇ ದಿನದಲ್ಲಿ ನಾಲ್ಕಾರು ಸಾರೆ ಆಗಬಹುದು. ಅನಂತರ ಕೆಲ ದಿವಸಗಳಲ್ಲಿ ಮತ್ತೆ ಮರಕಳಿಸಬಹುದು. ಇದಕ್ಕೆ ತಕ್ಕಷ್ಟು ಪೂರ್ವ ರೂಪಗಳಿರುವುದರಿಂದ ಸೆಳೆತಗಳು ಯಾವಾಗಲಾದರೂ, ಎಲ್ಲಿಯಾದರೂ ಸಂಭವಿಸಬಹುದು. ವೇಗ ನಿಲ್ಲದಿರುವಾಗ ರೋಗಿ ಎಲ್ಲ ರೀತಿಯಿಂದಲೂ ಸಹಜವಾಗಿದ್ದು ಸಹಜ ಜೀವನ ನಡೆಸುತ್ತಿರುವನು.

ಅತಿಯಾದ ಮದ್ಯಪಾನ, ತಲೆಗೆ ಬೀಳುವ ಪೆಟ್ಟು ಔಷಧಿಗಳ ದುಷ್ಟರಿಣಾಮ, ಮಾದಕ ದ್ರವ್ಯಗಳ ಅತಿಯಾದ ಸೇವನೆ, ವಿಷವಾಯು, ಅತಿಯಾದ ಮನೋ ಉದ್ವೇಗ, ಅನುವಂಶೀಯತೆ, ದೊಡ್ಡ ಜಲಾಶಯ – ಸಮುದ್ರಗಳನ್ನು ನೋಡುವುದು – ಈ ಮೊದಲಾದ ಕಾರಣಗಳಿಂದಲೂ ಅಪಸ್ಮಾರ ರೋಗವು ಬರುವುದು.

ಪೂರ್ವ ರೂಪ: ಅಪಸ್ಮಾರ ವಿಕರವು ಬರುವ ಮುನ್ನ ಹೃದಯದಲ್ಲಿ ಕಂಪನ ಹಾಗೂ ಶೂನ್ಯತಾಭಾವ, ಬೆವರು, ಚಿಂತೆ, ಮನಸ್ಸು ಹಾಗೂ ಇಂದ್ರಿಯಗಳ ಕ್ರಿಯಾನಾಶ ಹಾಗೂ ನಿದ್ರಾನಾಶಗಳಿರುತ್ತವೆ.

. ವಾತಿಕ ಅಪಸ್ಮಾರ: ವಾತಪ್ರಕೋಪದಿಂದ ಉಂಟಾಗುವ ಅಪಸ್ಮಾರದಲ್ಲಿ ವೇಗಗಳು ಬರುವ ಮೊದಲು ವಸ್ತುಗಳನ್ನು ರೂಕ್ಷ, ಅರುಣ ಹಾಗೂ ಕಪ್ಪು ವರ್ಣಗಳಿಂದ ಕಾಣುತ್ತಾನೆ. ಸ್ಮೃತಿಯು ತಪ್ಪಿದ ಕೂಡಲೇ ಒದ್ದಾಡತೊಡಗುವನು. ಹಲ್ಲುಗಳನ್ನು ಕುಡಿಯುವನು. ಬಾಯಿಯಲ್ಲಿ ಬುರುಗು ಬರುವುದು ಹಾಗೂ ಉಸಿರಾಟದ ವೇಗ ಹೆಚ್ಚಿಗಿರುವುದು.

. ಪಿತ್ತಜ ಅಪಸ್ಮಾರ: ರೋಗಿಯು ಎಲ್ಲ ವಸ್ತುಗಳನ್ನು ಹಳದಿ ಇಲ್ಲವೆ ಕೆಂಪು ಬಣ್ಣದಲ್ಲಿ ಕಾಣುತ್ತಾನೆ. ಅವನ ಶರೀರ, ಬಾಯಿ, ಕಣ್ಣು ಹಾಗೂ ಬಾಯಿಯಿಂದ ಬರುವ ನೊರೆಯುಉ ಕೂಡ ಅಲ್ಪ ಹಳದಿ ಬಣ್ಣದ್ದಾಗಿರುತ್ತದೆ. ನೀರಡಿಕೆ ಹೆಚ್ಚಾಗಿರುವುದರಿಂದ ಹಾಗೂ ಅವನ ಮೈಯಲ್ಲಿ ಹೆಚ್ಚು ಕಾವೆನಿಸುವುದು. ಎಲ್ಲ ವಸ್ತುಗಳು ಅವನಿಗೆ ಸುಡುತ್ತಿರುವಂತೆ ಕಾಣುವುವು.

. ಕಫಜ ಅಪಸ್ಮಾರ: ಬಾಯಿಯಿಂದ ಹೊರಡುವ ನೊರೆಯು ಹಾಗೂ ಬಾಯಿ ಕಣ್ಣುಗಳು ಬಿಳುಪಾಗಿರುವುವು. ರೋಗಿಗೆ ತನ್ನ ಶರೀರರವು ಶೀತಲವಾದಂತೆ, ರೋಮಾಂಚನಗೊಂಡಂತೆ ಹಾಗೂ ಭಾರವಾದಂತೆ ಅನುಭವವಾಗುವುದು, ಅವನು ಎಲ್ಲ ವಸ್ತುಗಳನ್ನು ಬಿಳಿಯಾಗಿ ಕಾಣತೊಡಗುವನು. ಹಾಗೂ ಅವನಿಗೆ ಬಾಯಿಯಲ್ಲಿನ ನೊರೆಯು ತಡವಾಗಿ ನಿಲ್ಲುವುದು.

ಸನ್ನಪಾತಜ ಅಪಸ್ಮಾರ ಹಾಗೂ ಅದರ ಅಸಾಧ್ಯತೆ: ಇದು ಮೂರೂ ದೋಷಗಳ ಪ್ರಕೋಪ ಹಾಗೂ ಅವುಗಳ ಲಕ್ಷಣಗಳಿಂದ್ಯುಕ್ತವಾಗಿರುತ್ತದೆ. ಸನ್ನಿಪಾತಿಕ, ಹಾಗೂ ದುರ್ಬಲ ರೋಗಿ ಹಾಗೂ ಪುರಾತನವಾದ ಎಲ್ಲ ಅಪಸ್ಮಾರಗಳು ಚಿಕಿತ್ಸೆಗೆ ಅಸಾಧ್ಯವೆನಿಸುತ್ತದೆ. ಇದಲ್ಲದೆ ಮೇಲಿಂದ ಮೇಲೆ ಆ ವೇಗಗಳು ಬರತೊಡಗಿದ ರೋಗಿ, ಅತ್ಯಂತ ಕ್ಷೀಣನಾದ ರೋಗಿ ಹಾಗೂ ಹುಬ್ಬುಗಳು ಮೇಲೇರಿದ, ಕಣ್ಣುಗಳು ವಿಕೃತವಾದ ರೋಗಿಯು ಕೂಡ ಚಿಕತ್ಸೆಗೆ ಅಸಾಧ್ಯವೆಂದು ಹೇಳಿದ್ದಾರೆ.

ಚಿಕಿತ್ಸೆ: ಮೊಟ್ಟ ಮೊದಲಿಗೆ ದೋಷಾನುಸಾರ ಶೋಧನ ಚಿಕಿತ್ಸೆ ಮಾಡಬೇಕು. ಇದರಿಂದ ಬುದ್ಧಿ, ಚಿತ್ತ ಹಾಗೂ ಹೃದಯಗಳನ್ನು ಸೇರುವ ಅತೀಂದ್ರಿಯ ಸ್ರೋತಸ್ಸುಗಳೆಲ್ಲವೂ ಶುದ್ಧವಾಗುವುವು. ಸ್ನೇಹನ, ಸ್ವೇದನ, ವಮನ, ವಿರೇಚನ ಬಸ್ತಿಗಳಲ್ಲದೆ ವಿಶೇಷವಾಗಿ ಈ ರೋಗದಲ್ಲಿ ಪ್ರಮುಖ ಪಾತ್ರವಹಿಸುವ ಊರ್ಧ್ವಾಂಗಗಳು ಶುದ್ಧವಾಗುವ ರೀತಿಯಲ್ಲಿ ನಸ್ಯ, ಡೂಮ್ರ, ಅಂಜನಾದಿಳನ್ನು ಪ್ರಯೋಗಿಸಬೇಕು. ತಜ್ಞರ ಮಾರ್ಗದರ್ಶನದಲ್ಲಿ ಪಂಚಕರ್ಮ ಕ್ರಿಯೆ ನಡೆಯಬೇಕು.

ವಾತಾಪಸ್ಮಾರಿಗೆ ವಿಶೇಷವಾಗಿ ಬಸ್ತಿಯನ್ನು ಪ್ರಯೋಗಿಸಬೇಕು. ಪಿತ್ತಕ್ಕೆ ವಿರೇಚನ ಮತ್ತು ಕಫಕ್ಕೆ ವಮನಕ್ರಿಯೆ ಮಾಡಿಸುವುದರಿಂದ ಶಾರೀರಿಕ ಮಲಗಳು ಹೊರಹೋಗುವುವು. ಹೀಗೆ ಅನೇಕಾವರ್ತಿ ಶೋಧನ ಕ್ರಿಯೆಗಳನ್ನು ನಡೆಸುವುದರಿಂದ ಪ್ರಕುಪಿತ ದೋಷಗಳು, ದೂಷ್ಯ ಮಲಗಳು ಹೊರ ಹೋಗಿ ರೋಗವು ಪೀಡಿತ ಕಡಿಮೆ ಆಗುತ್ತ ಹೋಗುವುದು. ಇನ್ನುಳಿದ ದೋಷಗಳನ್ನು ಶಮನೌಷಧಿಗಳಿಂದ ಸಮಸ್ಥಿತಿಗೆ ತರಬೇಕು. ದೇಹಶುದ್ಧಿಗೆ ಮೊದಲೇ ಶಮನೌಷಧಿ ಕೊಟ್ಟರೆ ಚಿಕಿತ್ಸೆ ಅಷ್ಟೊಂದು ಪರಿಣಾಮಕಾರಿ ಎನಿಸುವುದಿಲ್ಲ.

ಪಂಚಗವ್ಯ ಘೃತ, ಕಲ್ಯಾಣಕಘೃತ, ಅಮಲಕೀ ಘೃತ, ಕೂಷ್ಮಾಂಡ ಘೃತ, ಅಪಸ್ಮಾರಾಂತಕ ರಸ ಮೊದಲಾದ ಪರಿಣಾಮಕಾರಿ ಔಷಧಿಗಳನ್ನು ಆಯುರ್ವೇದದಲ್ಲಿ ಹೇಳಿದ್ದಾರೆ. ಕಲ್ಯಾಣಕಾರಕದಲ್ಲಿ ಈ ರೋಗಿಗಗಳಿಗೆ ತುಪ್ಪದ ಅಂಜನ ಹಾಗೂ ಲೇಪನಗಳನ್ನು ಕಣ್ಣುಗಳಿಗೆ ಹಾಕಬೇಕೆಂದೂ ಹಾಗೂ ನಸ್ಯ ಪ್ರಯೋಗ ಮಾಡಬೇಕೆಂದು ಹೇಳಿದ್ದಾರೆ.

ಬ್ರಾಹ್ಮಿ ರಸ, ಚಂಗಲ್ಕೋಷ್ಕ ಕಷಾಯ, ಬಜೆಯ ಚೂರ್ಣ, ಹಳೆ ಬೂದುಗುಂಬಳಕಾಯಿ ರಸಕ್ಕೆ ಜೇಷ್ಠ ಮಧುವಿನ ಚೂರ್ಣ ಸೇರಿಸಿ ಅರೆದುಕೊಂಡು ತೆಗೆದುಕೊಳ್ಳುವುದು, ಜೀವನೀಯ ಗಣದ ಔಷಧಿಗಳ ಪ್ರಯೋಗಗಳು ಅಪಸ್ಮಾರ ನಿವಾರಣೆಗೆ ಉತ್ತಮ ಪರಿಣಾಮಕಾರಿ ತೋರುತ್ತವೆ.