೨೨. ಕ್ರಿಮಿ ವಿಕಾರಗಳು (Worms infestation)

ಶರೀರದಲ್ಲಿ ಕ್ರಿಮಿವಿಕಾರಗಳು ಉತ್ಪನ್ನವಾದರೆ ಶಿರಸ್ಸು-ಹೃದಯಭಾಗಗಳಲ್ಲಿ ಅತಿಯಾದ ನೋವು ಉಬ್ಬಳಿಕೆ ಹಾಗೂ ವಾಂತಿ, ಶೀನು ಹಾಗೂ ಜ್ವರಗಳು, ಮೇಲಿಂದ ಮೇಲೆ ಭೇದಿ, ಭ್ರಮೆ, ಹೃದ್ರೋಗ ಮೊದಲಾದ ವಿಕಾರಗಳಾಗುತ್ತವೆಂದು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ. ಆಯುರ್ವೇದದಲ್ಲಿ ಬಾಹ್ಯ ಕ್ರಿಮಿಗಳು – ಅಂತಃ ಕ್ರಿಮಿಗಳು ಎಂದು ಮುಖ್ಯವಾಗಿ ಎರಡು ಭೇದಗಳನ್ನು ಮಾಡಿದ್ದಾರೆ. ಪುರೀಷಜ, ಶ್ಲೇಷ್ಮಜ, ಶೋಣಿತಜ (ರಕ್ತಜ) ಮತ್ತು ಮಲಜಗಳೆಂದು, ಇಲ್ಲಿ ಮುಖ್ಯವಾಗಿ ಹೊಟ್ಟೆಯಲ್ಲಾಗುವ ಜಂತು ವಿಕಾರಗಳನ್ನು ನೋಡೋಣ.

ಜಂತು ವಿಕಾರವು ಜಗತ್ತಿನಲ್ಲೆಲ್ಲ ಸಾಮಾನ್ಯವಾಗಿ ಹರಡಿದ್ದರೂ ಉಷ್ಣವಲಯ ಪ್ರದೇಶಗಳಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ನೈರ್ಮಲ್ಯವಿಲ್ಲದ ವಾತಾವರಣವೇ ಈ ಕ್ರಿಮಿಗಳು ಹುಟ್ಟುವುದಕ್ಕೆ ಮುಖ್ಯ ಕಾರಣ. ಆದ್ದರಿಂದ ಸ್ವಚ್ಛತೆಗೆ ಮಹತ್ವವನ್ನೀಯದ ಮಕ್ಕಳಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಮಾಂಸಾಹಾರಿಗಳಲ್ಲಿ ಈ ವಿಕಾರವು ವಿಶೇಷವಾಗಿ ಕಂಡುಬರುವುದು. ಸಾಮಾನ್ಯವಾಗಿ ಕಂಡುಬರುವ ಮೂರು ವಿಧ ಕ್ರಿಮಿಗಳ ವಿವರಗಳನ್ನು ಇಲ್ಲಿ ನೋಡೋಣ.

. ದುಂಡು ಕ್ರಿಮಿ(Round worm): ಅಸ್ಕಾರಿಸ್ ಲಂಬ್ರಿಕಾಯ್ಡಿಸ್ ಎಂದು ಕರೆಯಲ್ಪಡುವ ದುಂಡು ಜಂತು ಉಷ್ಣವಲಯದಲ್ಲಿ ವಾಸಿಸುವ ಮಕ್ಕಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇವಕ್ಕೆನೇ ಸಾಮಾನ್ಯವಾಗಿ ಎಲ್ಲರೂ ‘ಜಂತು’ ಎಂದು ಕರೆಯುವರು. ಇವು ಸಣ್ಣ ಕರುಳಿನ ಮೊದಲನೆಯ ಭಾಗದಲ್ಲಿ ಇರುತ್ತವೆ. ಈ ಒಂದು ಕ್ರಿಮಿ ದಿನವೊಂದಕ್ಕೆ ಎರಡು ಲಕ್ಷ ಮೊಟ್ಟೆಗಳನ್ನಿಡುವ ಶಕ್ತಿಯನ್ನು ಹೊಂದಿದೆ ಎಂದರೆ ವಾತಾವರಣವನ್ನು ಅದೆಷ್ಟು ಬೇಗನೆ ದೂಷಿಸಬಹುದೆಂಬುದನ್ನು ಊಹಿಸಬಹುದು. ಈ ಮೊಟ್ಟೆಗಳು ಮಲದ ಮೂಲಕ ದೇಹದಿಂದ ಹೊರಬಂದು ಸಾಮಾನ್ಯ ವಾತಾವರಣದಲ್ಲಿ ಆರು ತಿಂಗಳು ಕಾಲ ಬದುಕುವ ಶಕ್ತಿಯನ್ನು ಹೊಂದಿವೆ. ಇವೇ ಮೊಟ್ಟೆಗಳು ಮತ್ತೆ ಮಾನವನಲ್ಲಿ ಆಹಾರ ಇಲ್ಲವೆ ಪಾನೀಯಗಳ ಮೂಲಕ ದೇಹದಲ್ಲಿ ಸೇರಿ ಅಲ್ಪಾವಧಿಯಲ್ಲಿಯೇ ಬೆಳೆದು ದೊಡ್ಡ ಜಂತುಗಳಾಗುತ್ತವೆ.

. ಕೊಕ್ಕೆ ಹುಳು (Hook worm): ಈ ಹುಳ ವಿಕಾರ ಜಂತು ಹುಳಗಳಿಗಿಂತ ಗಂಭೀರವಾದುದು. ಇವು ತಮ್ಮ ಕೊಕ್ಕೆಯಂತಹ ಮೊನಚಾದ ಬಾಯಿಯಿಂದ ಕರುಳುಗಳನ್ನು ಹಿಡಿದುಕೊಂಡು ಅತೀ ತೀವ್ರ ಸ್ವರೂಪದಲ್ಲಿ ಬೆಳೆಯಲಾರಂಭಿಸುವುವು. ಒಂದು ಜಂತು ದಿನವೊಂದಕ್ಕೆ ಒಂದು ಕೋಟಿಯಷ್ಟು ಮೊಟ್ಟೆಗಳನ್ನಿಡುವುದು ಎಂದರೆ ಆದರೆ ಬೆಳವಣಿಗೆ ಹೇಗಾಗುವುದು ಎಂದು ಊಹಿಸಬಹುದು. ಇದು ವ್ಯಕ್ತಿಯಲ್ಲಿ ಮುಖ್ಯವಾಗಿ ರಕ್ತಹೀನತೆಯನ್ನುಂಟು ಮಾಡುವುದು. ಈ ಕ್ರಿಯೆ ವ್ಯಕ್ತಿಯಲ್ಲಿ ತುಂಬ ನಿಧಾನವಾಗಿಒ ನಡೆಯುತ್ತಿರುವುದರಿಂದ ಬೇಗನೆ ಗೊತ್ತಾಗುವುದಿಲ್ಲ.

ಗ್ರಾಮಾಂತರ ಪ್ರದೇಶಗಳಲ್ಲಿ ಹೊಲ ಗದ್ದೆಗಳ ಬಳಿ, ಬಯಲಿನಲ್ಲಿ, ನಡೆದಾಡುವ ರಸ್ತೆಗಳ ಪಕ್ಕ, ಹಿತ್ತಲಿನಲ್ಲಿ ಮಲವಿಸರ್ಜನೆ ಮಾಡುವುದರಿಂದ ಅಲ್ಲಿನ ಮಣ್ಣಿನೊಡನೆ ಈ ಕ್ರಿಮಿಗಳು ಸೇರಿ, ಬೆಳವಣಿಗೆಗೆ ಹೊಂದುತ್ತವೆ. ಸಾಮಾನ್ಯ ವಾತಾವರಣದಲ್ಲಿ ಬದುಕುಳಿಯುವ ಇವು ಬರಿಗಾಲಿನಲ್ಲಿ ಓಡಾಡುವವರ ಕಾಲಿನಲ್ಲಿ ಚುಚ್ಚಿ ಒಳ ಸೇರುತ್ತವೆ. ಪ್ರತಿ ಕ್ರಿಮಿಯು ದಿನವೊಂದಕ್ಕೆ ೦-೧ ಮಿ.ಲಿ.ದಷ್ಟು ರಕ್ತವನ್ನು ಕುಡಿಯುತ್ತಿದಾದ್ದರಿಂದ ದೇಹದಲ್ಲಿರುವ ಸಹಸ್ರಾರು ಕ್ರಿಮಿಗಳು ಎಷ್ಟು ರಕ್ತವನ್ನು ಕುಡಿಯುತ್ತವೆ ಎನ್ನುವುದರ ಮೇಲೆ ಪಾಂಡುರೋಗವು ಹೇಗೆ ಬರುವುದೆಂದು ಊಹಿಸಬಹುದು.

. ದಾರ ಹುಳು (Thread worm): ಜಗತ್ತಿನಲ್ಲಿ ಎಲ್ಲೆಡೆ ಪ್ರಚಲಿತವಿರುವ ದಾರದ ಹುಳು, ಸೂಜಿ ಹುಳು (Pin worm)ಗಳು ಮಕ್ಕಳ ಕರುಳಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಗುದ ಪ್ರದೇಶದಲ್ಲಿ ವಿಪರೀತ ಕೆರೆತವು ಇದರ ಲಕ್ಷಣ. ಇದರಿಂದ ಆ ಭಾಗದಲ್ಲಿ ಚರ್ಮದ ಹೊರಪದರುಗಳು ಉದುರಿ ಅಲ್ಲಿ ಹುಣ್ಣುಗಳು ತೋರಿಬರುವುವು. ಅಲ್ಲದೆ ಮಕ್ಕಳಲ್ಲಿ ನಿದ್ರಾಹೀನತೆ, ದೈಹಿಕ ಅಸ್ವಾಸ್ಥ್ಯ, ಕೈ-ಕಾಲುಗಳಲ್ಲಿ ನಡುಕ ಮತ್ತು ಸೆಳೆತಗಳ ವಿಕಾರ (fits)ವೂ ಕಂಡುಬರುವುವು.

ಈ ಮೇಲ್ಕಂಡ ಯಾವುದೇ ವಿಧದ ಕ್ರಿಯೆಯನ್ನು ನಿರ್ದಿಷ್ಟವಾಗಿ ಗೊತ್ತು ಹಿಡಿಯಬೇಕಾದರೆ ರೋಗಿಯ ಮಲ ಪರೀಕ್ಷೆ ಮಾಡಿಸಿ ನೋಡಬೇಕಾಗುತ್ತದೆ.

ಚಿಕಿತ್ಸೆ: ಪ್ರಪ್ರಥಮವಾಗಿ ಕ್ರಿಮಿರೋಗಗಳ ಶಮನಾರ್ಥ ಶರೀರಶುದ್ಧಿ ಕ್ರಮವನ್ನು ಅನುಸರಿಸಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಕಟು, ತಿಕ್ತ, ಕಷಾಯ ದ್ರವ್ಯಗಳಿಂದ ವಮನ ವಿರೇಚನ ಸೈಂಧವ ಲವಣದಿಂದ ನಿರೂಹಬಸ್ತಿ ಪ್ರಯೋಗ ಮಾಡಬೇಕು.

ಕರಿ ತುಳಸಿ, ಪಲಾಶ, ಚಿಕ್ಕ ಎಲೆಯುಳ್ಳ ತುಳಸಿಗಳಿಂದ ಸಿದ್ಧಪಡಿಸಿದ ಘೃತಪಾನ ಮಾಡಿಸಬೇಕು. ಕ್ರಿಮಿಘ್ನ ಸ್ವರಸ, ವಿಡಂಗ ಚೂರ್ಣ, ಮೂಷಿಕ ಕರ್ಣಾದಿಯೋಗ, ಕ್ರಿಮಿನಾಶ, ತೈಲ, ಸುರಸಾದಿಯೋಗ, ಕ್ರಿಮಿಘ್ನ ಯೋಗ, ಹಿಪ್ಪಲಿ ಮೂಲ ಕಲ್ಕ ಮೊದಲಾದ ಸಿದ್ಧೌಷಧಿಗಳನ್ನು ಕ್ರಿಮಿಚಿಕಿತ್ಸೆಗಾಗಿ ಹೇಳಿದ್ದಾರೆ.

ವಿಡಂಗ ಚೂರ್ಣ, ವಿಡಂಗಾರಿಷ್ಟ, ಕಂಪಿಲ್ಲಕ ಚೂರ್ಣ, ಕ್ರಿಮಿಕುಠಾರ ರಸ, ವಿಡಂಗಾದಿ ಲೋಹಗಳು ಕ್ರಿಮಿ ಚಿಕಿತ್ಸೆಗಾಗಿ ಉತ್ತಮ ಔಷಧಿಗಳೆನಿಸಿವೆ.

ನಿಯಂತ್ರಣ

ಈ ಜಂತುವಿಕಾರವಾಗದಂತೆ ನಿಯಂತ್ರಿಸಲು ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಯಾವಾಗಲೂ ಶುದ್ಧವಾದ ನೀರನ್ನೇ ಕುಡಿಯಬೇಕು. ಕೈ ತೊಳೆಯದೇ ಊಟ ಮಾಡಕೂಡದು.

ಕಾಯಿಪಲ್ಯ ಹಣ್ಣು ಹಂಪಲುಗಳನ್ನು ಶುದ್ಧಮಾಡಿ ನೀರಿನಿಂದ ತೊಳೆಯದೆ ತಿನ್ನಬಾರದು. ನೊಣ ಕುಳಿತ ಪದಾರ್ಥಗಳನ್ನು, ಬೀದಿಯಲ್ಲಿ ಮಾರಲ್ಪಡುವ ತಿಂಡಿತಿನಿಸುಗಳನ್ನು ತಿನ್ನಬಾರದು. ಮನೆಸುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳು ಮಣ್ಣು ತಿನ್ನದಂತೆ ಎಚ್ಚರವಹಿಸಬೇಕು. ಮಲವಿಸರ್ಜನೆಗಾಗಿ ಬಯಲು ಜಾಗೆಗಿಂತ ಪಾಯಖಾನೆಗಳನ್ನೇ ಅವಲಂಬಿಸಬೇಕು. ಬರಿಗಾಲಿನಲ್ಲಿ ಅಡ್ಡಾಡಬಾರದು. ನಿತ್ಯ ಆಹಾರದಲ್ಲಿ ಇಂಗು, ಬೇವಿನ ಹೂವು, ನುಗ್ಗೆಗಳಿದ್ದರೆ ಇವು ಕ್ರಿಮಿವಿಕಾರವಾಗದಂತೆ ನೋಡಿಕೊಳ್ಳುವುವು.

೨೩. ಪಾಂಡುರೋಗ (Aneamia)

ಶರೀರದಲ್ಲಿರುವ ರಕ್ತಧಾತುವಿನ ಪ್ರಮಾಣ, ವರ್ಣ, ಆಕೃತಿ ಮತ್ತು ಕರ್ಮಹೀನತೆ ಗಳಿಂದುಂಟಾದ ವಿಕಾರಕ್ಕೆ ‘ಪಾಂಡುರೋಗ’ ಎನ್ನುವರು. ಪಾಂಡು ಎಂದರೆ ಬಿಳುಪು. ರಕ್ತದಲ್ಲಿ ಹಿಮೋಗ್ಲೋಬಿನ್ – ವರ್ಣ ಕೊಡುವ ಅಂಶ ಕಡಿಮೆ ಆಗುವುದರಿಂದ ಪಾಂಡು ಬರುವುದು. ಬಡತನವೇ ವಿಶೇಷವಾಗಿರುವ ನಮ್ಮ ದೇಶದಲ್ಲಿ ಈ ವಿಕಾರ ತುಂಬ ಹೆಚ್ಚಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ.

ಕಾರಣಗಳು: ಅಲ್ಪ ಆಹಾರ ಸೇವನೆ, ವಿಶೇಷವಾಗಿ ಕ್ಷಾರ, ಆಮ್ಲ, ಲವಣ ಹಾಗೂ ಅತ್ಯುಷ್ಣವಾದ ಆಹಾರ ಪದಾರ್ಥಗಳನ್ನು ಸೇವಸುವುದರಿಂದ ಪರಸ್ಪರ ವಿರುದ್ಧ ಗುಣ, ಅಸಾ‌ತ್ಮ್ಯ ಆಹಾರ, ಹೀನ ಸತ್ವವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅವು ವಿದಗ್ಧಪಾಕ ಹೊಂದುವುವು.

 • ಹಗಲು ನಿದ್ರೆ, ವ್ಯಾಯಾಮವಿಲ್ಲದಿರುವುದು, ಅತಿಯಾದ ಶ್ರಮ, ಅತಿ ಮೈಥುನ, ವಿರುದ್ಧವಾದ ಋತುಚರ್ಯೆ, ವೇಗಗಳ ಧಾರಣೆ, ಅರಿಷಡ್ವೈರಿಗಳನ್ನು ಮೈಗೂಡಿಸಿ ಕೊಳ್ಳುವುರಿಂದ.
 • ಶರೀರದಲ್ಲಾಗುವ ರಕ್ತಸ್ರಾವಗಳು.
 • ಹಳೆಯದಾದ ಅತಿಸಾರ ಹಾಗೂ ಆಮಶಂಕೆ, ಗ್ರಹಣಿ, ಕ್ಷಯ ರೋಗಗಳು, ಜಂತು ಹುಳಗಳು, ಕ್ಯಾನ್ಸರ ಸಂಬಂಧಿತ ರೋಗಗಳು.

ಪಾಂಡುರೋಗದಲ್ಲಿ ವಾತ, ಪಿತ್ತ ಹಾಗೂ ಕಫಗಳು ಒಟ್ಟಾಗಿಯೇ ಸೇರಿದ್ದರೂ ಪಿತ್ತ ಪ್ರಧಾನವಾಗಿರುವುದರಿಂದ ಮತ್ತು ವಿದಗ್ಧ ಪಾಕದಿಂದ ತನ್ನ ಸ್ನಿಗ್ಧತೆಯನ್ನು ಕಳೆದುಕೊಂಡು ಉಷ್ಣ ಹಾಗೂ ತೀಕ್ಷ್ಣ ಗುಣಗಳನ್ನು ಮುಂದೆ ಮಾಡಿಕೊಂಡು ಓಜಸ್ಸನ್ನು ಕ್ರಮೇಣ ನಾಶಪಡಿಸುವುದು. ಇದರ ಪರಿಣಾಮವಾಗಿ ಮೇದಸ್ಸಿನ ಅಂಶವು ಕಡಿಮೆ ಆಗುತ್ತ ಹೋಗುವುದು. ಓಜಸ್ಸು ಕ್ಷೀಣವಾಗುವುದರಿಂದ ಧಾತುಗಳು ತಮ್ಮ ಗುಣಗಳನ್ನು ಕಳೆದುಕೊಳ್ಳುವುವು. ಇಂದ್ರಿಯಗಳು ದುರ್ಬಲವಾಗುವುವು. ಮತ್ತು ಒಂದು ಇಂದ್ರಿಯವು ಇನ್ನೊಂದು ಇಂದ್ರಿಯದೊಡನೆ ಬೆರೆಯುವುದು ಕಷ್ಟವಾಗುವುದು. ಕೆಲಸ ಮಾಡಲಾಗುವುದಿಲ್ಲ. ಶರೀರದ ಛಾಯೆಯು ಬದಲಾಗುವುದು. ಚರ್ಮದ ವರ್ಣವು ಬದಲಾಗುವುದು. ಅಗಿಂದಾಗ ರೋಗಿಗೆ ಹೆದರಿಕೆಯಾದಂತೆ ಆಗಿ ಅವನು ಚಿಂತಿತನಾಗುವನು.

ಆಧಾರ: .೧೭ನೇ ಅಧ್ಯಾಯ ಪಾಂಡುರೋಗಾಧಿಕಾರ(೧೭)

ಐದು ವಿಧ

. ವಾತಜ ಪಾಂಡು: ಇದರಲ್ಲಿ ಕಪ್ಪು ವರ್ಣ, ಅಂಗಾಂಗಗಳು ಒಣಗಿದಂತಾಗಿ ಒರಟು ಬರುವಿಕೆ, ನೋವು, ನಡುಕ, ಪಕ್ಕೆನೋವು, ತಲೆನೋವು, ಮಲಪ್ರವೃತ್ತಿಯು ಗಟ್ಟಿಯಾಗಿದ್ದು, ಒಣಗಿರುವುದು. ಕೈಕಾಲುಗಳಲ್ಲಿ ಬಾವು, ಹೊಟ್ಟೆಯುಬ್ಬರ ಕಂಡುಬರುವುದು.

. ಪಿತ್ತಜ ಪಾಂಡು: ಇದರಲ್ಲಿ ಪಿತ್ತದೋಷವು ಪ್ರಕೋಪವಾಗಿ ರಕ್ತ ಮುಂತಾದ ಧಾತುಗಳನ್ನು ದೂಷಿಸಿ ರೋಗೋತ್ಪತ್ತಿ ಮಾಡುವುದು. ಪಾಂಡುತ್ವವು ಸ್ವಲ್ಪ ಹಳದಿ ಹಾಗೂ ಹಸಿರು ವರ್ಣಗಳಿಂದ ಕೂಡಿರುವುದು. ಜ್ವರ, ಉರಿ, ಬಾಯಾರಿಕೆಗಳಿರುವುವು. ಮಲಮೂತ್ರಗಳು ಹಳದಿವರ್ಣದ್ದಾಗಿರುತ್ತವೆ. ಮೈ ಬೆವರು ತಣ್ಣಗಿರುವ ಅನ್ನಪಾನ, ಶೀತಲ ಪ್ರದೇಶಗಳಲ್ಲಿ ಉಷ್ಣತೆ, ನಾಲಗೆಗೆ ಎಲ್ಲವೂ ಕಹಿ ಎನಿಸುವುದು. ಹುಳಿ ದೇಗು, ಎದೆಯಲ್ಲಿ ಉರಿ ಮತ್ತು ವಿಪಾಕ ವ್ಯತ್ಯಾಸದಿಂದ ಆಹಾರವು ವಿರುದ್ಧ ಪಾಕನಾಗಿ ದೌರ್ಬಲ್ಯ ಮತ್ತು ರಕ್ತಹೀನತೆಯಿಂದ ಕಣ್ಣಿಗೆ ಕತ್ತಲು ಗೂಡಿಸಿದಂತಾಗುವುದು. ಮಲವು ದುರ್ಗಂಧವಾಗಿದ್ದು ಒಡಕಾಗಿರುವುದು.

. ಕಫಜ ಪಾಂಡುವಿನಲ್ಲಿ: ಮೈಭಾರ, ತೂಕಡಿಕೆ, ವಾಂತಿ, ಕಣ್ಣಿಗೆ ಎಲ್ಲ ವಸ್ತುಗಳು ಬಿಳುಪಾಗಿ ಕಾಣಸಿವುದು, ತಲೆಸುತ್ತುವಿಕೆ,ಸಂಕಟ, ಉಬ್ಬುಸ, ಕೆಮ್ಮು, ಸೋಮಾರಿತನ, ಅರುಚಿ, ಸ್ವರ, ಭೇದ, ಮಲಮೂತ್ರಗಳು ಬಿಳಿಯಾಗುವುದು. ಕಣ್ಣುಗಳಲ್ಲಿ ಶೈಥಿಲ್ಯತೆ ಹಾಗೂ ಬಿಳುಚುವಿಕೆ, ಕಟು, ರೂಕ್ಷ, ಉಷ್ಣ ಪದಾರ್ಥಗಳಲ್ಲಿ ಅಪೇಕ್ಷೆ, ಬಾಯಿಯಲ್ಲಿ ಸದಾ ಸ್ವಾದು ರಸ, ಮೈಬಾವು ಮೊದಲಾದ ಲಕ್ಷಣಗಳಿರುವುವು.

. ಸನ್ನಿವಾತಜ ಪಾಂಡುವಿನಲ್ಲಿ: ಮೇಲೆ ಕಾಣಿಸಿದ ಮೂರು ದೋಷಗಳೂ ಕಾಣಿಸಿಕೊಳ್ಳುವುವು.

ಜೈನಾಯುರ್ವೇದ ಗ್ರಂಥದಲ್ಲಿ ನಾಲ್ಕು ವಿಧ ಪಾಂಡು ರೋಗಗಳನ್ನು ವರ್ಣಿಸಿದ್ದಾರೆ. ಆದರೆ ಇತರ ಆಯುರ್ವೇದ ಗ್ರಂಥಗಳಲ್ಲಿ ಮೃದ್ ಭಕ್ಷಣಜನ್ಯ ಪಾಂಡು ಎಂಬುದೊಂದು ಭೇದವನ್ನು ಸೇರಿಸಿ ಹೇಳಿದ್ದಾರೆ.

. ಮೃದ್ ಭಕ್ಷಣಜನ್ಯ ಪಾಂಡು: ಇದರಲ್ಲಿ ಮುಖ್ಯವಾಗಿ ಸಣ್ಣ ಮಕ್ಕಳನ್ನು ಗರ್ಭಿಣಿಯರು ಕದ್ದು ಮುಚ್ಚಿ ಮಣ್ಣಿನ ಸಣ್ಣ ಹೆಂಟೆಗಳನ್ನು ತಿನ್ನುವರು. ಇದರಿಂದ ಮಣ್ಣಿನಲ್ಲಿರುವ ಅತಿಸೂಕ್ಷ್ಮ ಜಂತಿನ ತತ್ತಿಗಳು ಹೊಟ್ಟೆಯನ್ನು ಸೇರುವುವು. ಇವು ಬೆಳೆದಂತೆಲ್ಲ ಅವು ರಕ್ತವನ್ನು ಹೀರುವುದರಿಂದ ರಕ್ತ ಕೊರತೆ ಉಂಟಾಗುವುದು.

ಉಪದ್ರವಗಳು: ಅರುಚಿ, ಬಾಯಾರಿಕೆ, ವಾಂತಿ, ಜ್ವರ, ತಲನೋವು, ಅಗ್ನಿಮಾಂದ್ಯ, ಶೋಥ, ಕಂಠದಲ್ಲಿ ಬಾವು, ಶಕ್ತಿಹೀನತೆ, ಮೂರ್ಛೆ, ಕ್ಷಯ ಹಾಗೂ ಹೃದಯದ ಭಾಗದಲ್ಲಿ ನೋವು – ಈ ಲಕ್ಷಣಗಳು ಉಪದ್ರವ ಸ್ವರೂಪವಾಗಿ ಪಾಂಡುರೋಗಿಯಲ್ಲಿ ಕಾಣಿಸಿಕೊಳ್ಳುವುವು.

ಚಿಕಿತ್ಸೆ

 • ರೋಗಿಯ, ರೋಗದ ಸ್ಥಿತಿಯನ್ನು ನೋಡಿ ದೇಹಶೋಧನೆ ಚಿಕತ್ಸೆ ಮಾಡಬೇಕಾಗುವುದು
 • ಜಂತು ಹುಳಕ್ಕೆ ಚಿಕಿತ್ಸೆ ಮಾಡಬೇಕು.
 • ಮಲಬದ್ಧತೆ ಇದ್ದರೆ ಗೋಮೂತ್ರ ತ್ರಿಫಲಾ ೨ ಗ್ರೇನುಗಳಷ್ಟು ಬೆಳಿಗ್ಗೆ, ರಾತ್ರಿ ಕೊಡಬೇಕು.
 • ಶಾಸ್ತ್ರದಲ್ಲಿ ಪಾಂಡುರೋಗಕ್ಕೆ ತ್ರಿಫಲಾ+ತ್ರಿಕಟು ಚೂರ್ಣ ಇಲ್ಲವೆ ಅರಿಶಿನ, ಮರದರಿಶಿನ, ಶುಂಠಿ+ಹಿಪ್ಪಲಿ+ಮೆಣಸುಗಳ ಪುಡಿಯನ್ನು ಲೋಹಭಸ್ಮದೊಡನೆ ಸಕ್ಕರೆ ಸೇರಿಸಿ ಕೊಡಬೇಕೆಂದು ಹೇಳಿದ್ದಾರೆ.
 • ನವಾಯಸ ಚೂರ್ಣ, ಲೋಹಭಸ್ಮ, ನವಾಯಸ ಮಂಡೂರ, ಪುನರ್ನವಾ ಮಂಡೂರ, ಲೋಹಾಸವ – ಮೊದಲಾದ ಔಷಧಿಗಳ ರಕ್ತಕ್ಕೆ ಕೆಂಪು ವರ್ಣವನ್ನು ಹೆಚ್ಚಿಸುವಂಥವು. ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು.
 • ರೋಗಿಗೆ ಪಾಂಡುರೋಗ ತುಂಬ ಹೆಚ್ಚಾಗಿದ್ದು ರೋಗಿ ತುಂಬ ನಿಃಶಕ್ತನಾಗಿದ್ದರೆ, ರಕ್ತ ಪೂರಣ ಚಿಕಿತ್ಸೆ ಒಳ್ಳಯದು, ಇದರಿಂದ ಅತಿ ಬೇಗನೆ ರೋಗಿ ಗುಣಮುಖನಾಗುವನು. ಈ ಚಿಕಿತ್ಸೆಯಲ್ಲಿ ಆಸ್ಪತ್ರೆಯಲ್ಲಿ ಮಾಡಿಸಬೇಕಾಗುತ್ತದೆ. ಇದಕ್ಕೂ ಮೊದಲು ರೋಗಿಯ ರಕ್ತ, ದಾನಿಯ ರಕ್ತಗಳನ್ನು ಪರೀಕ್ಷಿಸಬೇಕಾಗುತ್ತದೆ.
 • ರೋಗಿಗೆ ಚಿಕಿತ್ಸೆಯಷ್ಟೇ ವಿಶ್ರಾಂತಿ, ಒಳ್ಳೆಯ ಪೌಷ್ಠಿಕ ಆಹಾರ, ಯೋಗ್ಯ ವಾತಾವರಣ ಮುಖ್ಯ.

೨೪. ಪ್ರಮೇಹ ರೋಗಗಳು

ಗುರು, ದ್ರವ್ಯ, ಸ್ನಿಗ್ದ ಹಾಗೂ ತಣ್ಣಗಿನ ಆಹಾರ ಪಾನೀಯಗಳನ್ನು ಹೆಚ್ಚು ಸೇವಿಸುವುದರಿಂದ, ಹಗಲು ಹೆಚ್ಚು ನಿದ್ರೆ ಮಾಡುವುದರಿಂದ, ಶ್ರಮದ ಕೆಲಸ ಮಾಡದಿರುವುದರಿಂದ ಅಲಸ್ಯಮೊದಲಾದ ಕಾರಣಗಳಿಂದ ಪ್ರಮೇಹವು ಹುಟ್ಟಿಕೊಳ್ಳುತ್ತದೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಅಂಗಾಂಗಳಲ್ಲಿ ದಾಹ, ಅತಿಯಾದ ನೀರಡಿಕೆ, ಶರೀರದಲ್ಲಿ ಸ್ನಿಗ್ಧತೆ ಹಾಗೂ ಜಿಗುಟುತನ, ಬಾಯಿಯಲ್ಲಿ ಸಿಹಿ, ಹೆಚ್ಚು ಊಟ ಮಾಡುವುದು, ಇವುಗಳಿಂದ ಪ್ರಮೇಹ ರೋಗದ ಸಂಶಯವನ್ನು ಮಾಡಬಹುದು.

ವಿವಿಧ ನಮೂನೆಯ ದೋಷಪೂರಿತ ಮೂತ್ರವನ್ನು ವಿಸರ್ಜಿಸುವ ೨೦ ಪ್ರಕಾರದ ಪ್ರಮೇಹವನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಉದಕಮೇಹ, ಇಕ್ಷು, ಮೇಹ, ಸಾಂದ್ರಮೇಹ, ಸುರಾಮೇಹ, ಪಿಷ್ಠಮೇಹ, ಶು‌ಕ್ರಮೇಹ, ಶೀತಮೇಹ, ಸಿಕತಾಮೇಹ, ಶನೈಮೇಹ, ಲಾಲಾಮೇಹ, ಕ್ಷಾರಮೇಹ, ನೀಲಮೇಹ, ರಕ್ತಮೇಹ, ಮಂಜಿಷ್ಠಾಮೇಹ, ಹರಿದ್ರಾಮೇಹಯ, ವಸಾಮೇಹ, ಮಜ್ಜಾಮೇಹ, ಹಸ್ತಿಮೇಹ ಹಾಗೂ ಮಧುಮೇಹ ಎಂಬವುಗಳು. ಆದರೆ ಕಲ್ಯಾಣಕಾರಕದಲ್ಲಿ ಮಾತ್ರ ಒಬ್ಬ ವೇಷಧಾರಿಯು ಅನೇಕ ಪಾತ್ರಗಳನ್ನು ವಹಿಸುವಂತೆ ಪ್ರಮೇಹ ವಿಕಾರಗಳು ಅನೇಕ ಇವೆ ಎಂದಿದ್ದಾರಲ್ಲದೆ ಇವೆಲ್ಲ ಚಿಕಿತ್ಸೆಗೆ ಅಸಾಧ್ಯವೆಂದಿದ್ದಾರೆ.

ಮೇಲ್ಕಂಡ ಮಧುಮೇಹ ಪ್ರಕಾರಗಳಲ್ಲಿ ಮೊದಲಿನ ೧೦ ಕಫ ದೋಷದಿಂದಲೂ, ನಂತರದ ೬ ಪಿತ್ತ ದೋಷದಿಂದಲು ಇನ್ನುಳಿದ ೪ ವಾತದೋಷದಿಂದಲೂ ಹುಟ್ಟಿಕೊಳ್ಳುತ್ತವೆ. ಹೀಗಾಗಿ ಮಧುಮೇಹದಲ್ಲಿ ಬಸ್ತಿ ಪ್ರದೇಶದಲ್ಲಿನ ವಾತವು ವಿಕಾರಗೊಂಡಾಗ ಅದು ಶರೀರದ ಧಾತುಗಳಾದ ವಸಾ, ಮಜ್ಜಾ, ಓಜಸ್ಸು ಹಾಗೂ ಲಸಿಕೆಗಳನ್ನೂ ದೂಷಿತಗೊಳಿಸಿ ಅವುಗಳನ್ನು ಬಸ್ತಿ ಪ್ರದೇಶಕ್ಕೆ ತಂದು ಮಧುಮೇಹವನ್ನುಂಟು ಮಾಡುತ್ತದೆ.

ಪ್ರಮೇಹದ ೧೯ ವಿಧಗಳನ್ನು ಹಂತದಲ್ಲಿಯೇ ಚಿಕಿತ್ಸಿಸಿದರೆ ಮುಂದೆ ಮಧುಮೇಹ ಬರುವುದಿಲ್ಲ. ಚಿಕಿತ್ಸಿಸದೇ ಅಲಕ್ಷಿಸಿದರೆ ಮಧುಮೇಹಕ್ಕೆ ತಿರುಗುವವು ಎಂದಿದ್ದಾರೆ.

ಮಧುಮೇಹವು ವಂಶಾವಳಿಯಿಂದ ಬಂದರೆ ಅದು ಬೀಜದೋಷದಿಂದ ಚಿಕಿತ್ಸೆಗೆ ಸಾಧ್ಯವಾಗುವುದಿಲ್ಲವೆಂದಿದ್ದಾರೆ.

ಪ್ರಮೇಹದ ಇತರ ಕಾರಣಗಳಿಲ್ಲ ಮೊಸರು, ಹಾಲು, ಮಳೆನೀರು, ಹೊಸದಾಗಿ ಬೆಳೆದ ಧಾನ್ಯಗಳು, ಸಿಹಿ ಪದಾರ್ಥಗಳು, ಕಫ ಹೆಚ್ಚಿಸಲು ಆಹಾರ-ವಿಹಾರಗಳು, ಅತಿಪೌಷ್ಟಿಕ ಆಹಾರಗಳು, ಅದ್ಧೂರಿ ಭೋಜನ ಕೂಟಗಳು, ಅತಿ ಸ್ಥೌಲ್ಯತೆ, ಎಂಬ ಸುಖಜೀವನ ನಡೆಸುವುದು – ಇವೆಲ್ಲ ಕಾರಣಗಳಿಂದ ಮಧುಮೇಹ ವಿಶೇಷವಾಗಿ ಬರುವುದು ಕಂಡುಬಂದಿದೆ.

ಮೇದೋಜೀರಕಾಂಗ (Pancreas)ವು ದೇಹಕ್ಕೆ ಅಗತ್ಯವಿದ್ದಷ್ಟು ಇನ್ಸುಲಿನ್ ರಸವನ್ನು ಉತ್ಪನ್ನ ಮಾಡುವುದರಿಂದುಂಟಾಗುವ ಅವ್ಯವಸ್ಥೆಯೇ ಈ ವಿಕಾರವಾಗುವುದಕ್ಕೆ ಮೂಲ ಕಾರಣವೆನಿಸಿದೆ. ಇದು ಜಠರದ ಹಿಂಭಾಗಕ್ಕರುವ ಗ್ರಂಥಿ. ಇದು ಸಾಕಷ್ಟು ಇನ್ಸುಲಿನ್ನನ್ನು ಉತ್ಪನ್ನ ಮಾಡದಿದ್ದರೆ ರಕ್ತದಲ್ಲಿರುವ ಸಕ್ಕರೆಯನ್ನು ಉಪಯೋಗಿಸಲ್ಪಡದೇ ಹೆಚ್ಚುವರಿ ಶೇಖರವಾಗತೊಡಗುವುದು. ಈ ಹೆಚ್ಚಿನ ಕೆಲಸವನ್ನು ಮೂತ್ರ ಪಿಂಡಗಳು ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ೧೦೦ ಸಿಸಿ ರಕ್ತದಲ್ಲಿ ೧೦೦ ರಿಂದ ೧೨೦ ಮಿಲಿಗ್ರಾಂ ಸಕ್ಕರೆ ಇರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪನ್ನವಾಗದಿದ್ದಲ್ಲಿ ಈ ಸಕ್ಕರೆಯ ಪ್ರಮಾಣವು ೩೦೦-೪೦೦ ಮಿಲಿಗ್ರಾಂ ಇಲ್ಲವೆ ಅದಕ್ಕೂ ಹೆಚ್ಚಾಗಬಹುದು. ಸಕ್ಕೆಯ ಶರೀರದಲ್ಲಿ ಆಮ್ಲೀಕರಣವಾಗದಿದ್ದ ಪಕ್ಷದಲ್ಲಿ ಕೊಬ್ಬುಕೂಡ ಪೂರ್ಣವಾಗಿ ಆಮ್ಲೀಕರಣಗೊಳ್ಳುವುದಿಲ್ಲ. ತತ್ಪರಿಣಾಮವಾಗಿ ಡಯಾಸಿಟಿಕ್ ಆಮ್ಲ, ಅಸಿಟೋನ್‌ಗಳು ಉತ್ಪತ್ತಿಯಾಗಿ ರಕ್ತಗತವಾದರೆ ಮನುಷ್ಯನು ಮೂರ್ಛೆಗೊಳ್ಳುವನು.

ಮಧುಮೇಹ ರೋಗಬರಲು ಅನುವಂಶಿಯತೆಯು ಬಹುಮಟ್ಟಿಗೆ ಕಾರಣವೆನಿಸಿದೆ. ಮೇದೋಜೀರಕಾಂಗದ ಕಾರ್ಯಚಟುವಟಿಕೆಯಲ್ಲಿ ಅನುವಂಶಿಕತೆಯಿಂದಾದ ನ್ಯೂನತೆಯು ವಂಶವಾಹಿನಿಗಳ ಮುಖಾಂತರ ಪೀಳಿಗೆಗೆ ಸಾಗಿಸಲ್ಪಟ್ಟು ಅದರಲ್ಲಿ ಸಕ್ಕರೆ ರೋಗವುಂಟಾಗುವುದಕ್ಕೆ ಕಾರಣವಾಗುತ್ತದೆ. ಅನುವಂಶಿಕ ಮಧುಮೇಹ ಇತಿಹಾಸವಿದ್ದ ಕುಟುಂಬಗಳಲ್ಲಿ ಅನೇಕ ಜನ ಈ ರೋಗಿಗಳು ದೊರಕುತ್ತಾರೆ. ರೋಗದಿಂದ ತಾನಷ್ಟೇ ಪ್ರತ್ಯೇಕವಾಗಿ ಬಳಲದೇ ಅದು ಉಂಟಾಗುವ ಸಾಧ್ಯತೆಯನ್ನು ಪೀಳಿಗೆಗೆ ಕೊಂಡೊಯ್ಯಬಲ್ಲ ರೋಗವಾಕವನ್ನು ಮಧುಮೇಹರೋಗಿಗಳು ವಿವಾಹವಾದರೆ ಅವರಿಗೆ ಹುಟ್ಟುವ ಮಕ್ಕಳಲ್ಲಿ ಅರ್ಧದಷ್ಟು ಜನ ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ತಂದೆ ತಾಯಿಗಳಿಬ್ಬರೂ ಈ ರೋಗದಿಂದ ಬಳಲುತ್ತಿದ್ದರೆ ಅವರ ಮಕ್ಕಳೆಲ್ಲರೂ ಈ ರೋಗದಿಂದ ಬಳಲುವ ಭೀತಿ ಇದೆ. ಇಂಥವರಿಗೆ ಮಧುಮೇಹ ಗುಣವಾಗುವುದಿಲ್ಲವೆಂದು ಶಾಸ್ತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. (ಕಲ್ಯಾಣಕಾರಕ ಅ.೧೧, ಪುಟ.೧೯೧-೨೦೩)

ಪೂರ್ವರೂಪಗಳು: ಕೈ-ಕಾಲು ಹಾಗು ಅಂಗಾಂಗಳಲ್ಲೆಲ್ಲ ಉರಿ, ಅತಿಯಾದ ನೀರಡಿಕೆ, ಶರೀರದಲ್ಲಿ ಸ್ನಿಗ್ಧತೆ ಹಾಗೂ ಮೃದುತನ, ಬಾಯಿಯಲ್ಲಿ ಅತಿಯಾದ ಸಿಹಿರುಚಿ, ಹೆಚ್ಚಿಗೆ ಊಟ ಮಾಡುವುದು.ಇವೆಲ್ಲ ಮಧುಮೇಹ ಬರುವ ಮೊದಲು ಕಂಡಬರುವ ಲಕ್ಷಣಗಳಾಗಿವೆ.

ಲಕ್ಷಣಗಳು: ತೀವ್ರತೆ ಕಡಿಮೆ ಇರುವ ಮಧುಮೇಹದಲ್ಲಿ ಮೈನವೆ, ಚರ್ಮದಡಿ ಇರುವೆಗೆಳು ಓಡಾಡಿದಂತಾಗುವುದು. ವ್ರಣ ಹಾಗೂ ಕೀವು, ದೃಷ್ಟಿಮಾಂದ್ಯ, ಉದರ ಕ್ಷಯ, ಮಲಬದ್ಧತೆ, ತಲೆ ತಿರುಗುವಿಕೆ ಹಾಗೂ ಹಳೆ ಹಾಗು ಗುರುತಿಸಲಾಗದ ಮಧುಮೇಹದಲ್ಲಿ ಶರೀರಾವಯವಗಳು ಸವೆಯುತ್ತ ರೋಗದ ಲಕ್ಷಣಗಳು ಸ್ಪಷ್ಟವಾಗುವುದನ್ನು ಕಾಣಬಹುದು. ಈ ಸ್ಥಿತಿಯನ್ನು ವೃದ್ಧರಲ್ಲಿ ಕಾಣಬಹುದು. ಯಕೃತ್ತಿನಲ್ಲಿ ಮೇದಸ್ಸು ತುಂಬಿರುವುದು, ಕಣ್ಣುಗಳಲ್ಲಿ ರಕ್ತ ಸ್ರೋತಸ್ಸುಗಳು ಗ್ರಥಿತವಾಗಿರುವುವು. ತಿಮಿರ ರೋಗ, ವೃಕ್ಕ ವ್ಯಾಧಿ ಹಾಗೂ ಪಾದಗಳಲ್ಲಿ ಮಾಂಸ ದೃಷ್ಟಿಯಿಂದ ಬಾವುಗಳಾಗುವುವು. ಮೂತ್ರಾಶಯದ ಮೇಲಿನ ಸ್ವಾಧೀನ ಕಡಿಮೆ ಆಗುವುದು. ಷಂಡತ್ವ, ನಷ್ಟಾರ್ತವ, ಕಾಲುಗಳಲ್ಲಿ ಸ್ಪರ್ಶಜ್ಞಾನ ಕಡಿಮೆ ಆಗುವುದು, ನೋವಿಲ್ಲದೆ ಸಂಧಿಬಂಧಗಳು ಕ್ರಮೇಣ ನಾಶವಾಗುವುವು.

ರೋಗವನ್ನು ಅಲಕ್ಷಿಸಿದರೆ ಪ್ರಮೇಹ ಪಿಟಕೆ (Carbuncle) ಗಳಾಗುವುವು. ಅತಿಯಾದ ಹಸಿವೆಯಿಂದ ಭಸ್ಮಕ ವಿಕಾರವಾಗಬಹುದು. ಅತಿ ಸೌಮ್ಯತೆಯಿಂದ ಪಿಟಕಜ್ವರ, ಭಗಂದರ, ವಿದ್ರಧಿ ಹಾಗೂ ಕಷ್ಟತಮವಾದ ವಾತರೋಗಗಳು ಬರುವುವು ಎಂದು ಮೇದೊರೋಗದ ನಿದಾನದ ಟೀಕೆಯಲ್ಲಿ ಶ್ರೀಕಂಠದತ್ತನು ಬರೆದಿದ್ದಾನೆ.

ಬಹುವಾದ ತೀವ್ರ ಮಧುಮೇಹದಲ್ಲಿ ಪ್ರಜ್ಞಾಹೀನತೆ (Diabetic coma) ಉಂಟಾಗುವುದು. ಕೆನ್ನೆ ಕೆಂಪಗಾಗುವಿಕೆ, ಶರೀರದಲ್ಲಿ ಜೀವದ್ರವಗಳು ಕಡಿಮೆ ಆಗುವುದು. ಮೈಬಿಸಿ ಇಳಿಯುವುದು. ರಕ್ತದೊತ್ತಡ ಕಡಿಮೆ ಆಗುವುದು. ಉಸಿರಾಟಕ್ಕೆ ತಳಮಳವೆನಿಸುವುದು ಮುಂತಾದ ಲಕ್ಷಣಗಳು ಕಂಡಬರುತ್ತವೆ.

ಮೂತ್ರ ಪರೀಕ್ಷೆ: ಮಧುಮೇಹ ರೋಗಿಗಗಳು ವಿಸರ್ಜಿಸುವ ಮೂತ್ರವು ರುಚಿಯಲ್ಲಿ ಸಿಹಿಯಾಗಿದ್ದು ಇದಕ್ಕೆ ಇರುವೆಗಳು ಮುಕ್ಕುವುವು. ಇದೀಗ ಮನೆಯಲ್ಲಿಯೇ ಮೂತ್ರ ಪರೀಕ್ಷೆ, ರಕ್ತ ಪರೀಕ್ಷೇ ಮಾಡಿಕೊಳ್ಳುವ ಸಾಧನಗಳು ದೊರಕುತ್ತಿದ್ದು, ರೋಗಿಗಳಿಗೆ ತುಂಬ ಅನುಕೂಲವಾಗಿದೆ. ಇದರಿಂದ ಆಹಾರ ಹಾಗೂ ಚಿಕಿತ್ಸೆಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳಲು ಬರುತ್ತದೆ.

ಉಪದ್ರವಗಳು: ಬಾಯಾರಿಕೆ, ಅತಿಸಾರ, ಜ್ವರ, ಮೈ ಉರಿ, ದೌರ್ಬಲ್ಯ, ಅರೋಚಕತೆ, ಆಹಾರ ಪಾಕವಾಗದಿರುವಿಕೆ, ಪಿಡಿಕೆಗಳು, ಮಾಂಸ ದುರ್ಗಂಧತೆ – ಇವು ಮಧುಮೇಹದ ಉಪದ್ರವಗಳೆನಿಸಿವೆ.

ಚಿಕಿತ್ಸೆ: ಪ್ರಮೇಹ ರೋಗಿಗೆ ಎಳ್ಳು, ಅಗಸಿ, ಸಾಸಿವೆ, ಮೊದಲಾದ ತೈಲಗಳಿಂದ ಮೊಟ್ಟ ಮೊದಲು ಸ್ನೇಹನ ಮಾಡಿಸಿ ನಂತರ ಉಪ್ಪಿನ ನೀರು ಇಲ್ಲವೆ ಮದನಫಲ ಕೊಟ್ಟು ವಾಂತಿ ಹಾಗೂ ವಿರೇಚನಕ್ಕೆ ಔಷಧ ಕೊಟ್ಟು ದೇಹ ಶುದ್ಧಿ ಮಾಡಬೇಕು. ನಂತರ ಗೋಮೂತ್ರ ಎಳ್ಳಣ್ಣೆ ಸೇರಿಸಿ ನಿರೂಹವಸ್ತಿ ಕೊಡಬೇಕು.

ಶಾಸ್ತ್ರದಲ್ಲಿ ಆಮಲಕಾರಿಷ್ಟ, ನಿಶಾದಿಕ್ವಾಥ, ಚಂದನಾದಿ ಕ್ವಾಥ, ಕಪಿತ್ಥಾದಿಕ್ವಾಥ, ತ್ರಿಫಲಾ ಕಷಾಯ ಮುಂತಾದವುಗಳನ್ನು ಈ ರೋಗ ಚಿಕಿತ್ಸೆಯಲ್ಲಿ ಹೇಳಿದ್ದಾರೆ.

 • ಮಧುನಾಶಿನಿ ಎಲೆಗಳ ಚೂರ್ಣ – ೧೫ ರಿಂದ ೩೦ ಗ್ರೇನು
 • ವಿಂಬಿ ಸ್ವರಸ ೪೦ ರಿಂದ ೩ ಡ್ರಾಮು
 • ಹಾಲಕಾಯಿರಸ ೨ ರಿಂದ ೩ ಡ್ರಾಮು
 • ಜಂಬು ಬೀಜ ೧೫ ರಿಂದ ೪೫ ಗ್ರೇನು
 • ಸಪ್ತರಂಗಿ, ಏಕನಾಯಕನ ಬೇರು ಇಲ್ಲವೆ ಜತಸಾಯಿ ಬೇರು – ಇವುಗಳಲ್ಲಿ ಯಾವುದಾದರೊಂದು ರಸವನ್ನು ನಿತ್ಯ ತೆಗೆದುಕೊಳ್ಳಬೇಕು.
 • ಅತ್ತಿ ಚೆಕ್ಕೆಯ ಕಷಾಯ ತುಂಬ ಉಪಯುಕ್ತವೆನಿಸಿದೆ.
 • ಜಸದ ಭಸ್ಮ, ಮಧುಮೇಹಾಂತಕ ಚೂರ್ಣ, ವಸಂತ ಕುಸಮಾಕರ ರಸ, ವಸಂತ ತಿಲಕ ರಸ, ಹೇಮನಾಥ ರಸ, ಚಂದ್ರಪ್ರಭಾ ವಟಿ, ತಾರಕೇಶ್ವರ ರಸ, ತ್ರಿವಂಗ ಮೊದಲಾದ ಔಷಧಿಗಳನ್ನು ವೈದ್ಯರು ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು.

ಪ್ರಮೇಹ ಪಿಡಿಕೆ ಚಿಕಿತ್ಸೆ: ಪಿಡಿಕೆಗಳು ಇನ್ನು ಗಟ್ಟಿಯಾಗಿರುವಾಗ ಅಕ್ಕಿಹಿಟ್ಟಿನಿಂದ ತಯಾರಿಸಿದ ಪೋಲ್ಟಿಸಿಗೆ ಮೊಸರು ಸೇರಿಸಿ ಸ್ವಲ್ಪ ಬಿಸಿಯಾಗಿರುವಾಗಲೇ ವಿದ್ರಧಿಯ ಮೇಲೆ ಹಾಕಿ ಕಾಸಬೇಕು.

ಪಿಡಿಕಾ ಶೋಧನದ ಬಳಿಕ – ನಿಶಾದಿ ಲೇಪ, ವ್ರಣಹರ ಮುಲಾಮು, ಪ್ರಮೇಹ ಪಿಡಿಕಹರ ಮುಲಾಮುಗಳು ತುಂಬ ಉಪಯುಕ್ತವೆನಿಸಿವೆ. ಇವು ವಿಧ್ರದಿಯ ಶೋಧನ ಹಾಗೂ ರೋಪಣ ಕಾರ್ಯಗಳನ್ನೂ ಚೆನ್ನಾಗಿ ನಿರ್ವಹಿಸುತ್ತದೆ. ಇದಕ್ಕಾಗಿ ಅವಶ್ಯಕತೆಗಳಿಗನುಸಾರ ಕ್ಷಾರ, ಔಷಧಿ ಶಸ್ತ್ರಕರ್ಮಗಳನ್ನು ಪ್ರಯೋಗಿಸಬೇಕೆಂದು ಹೇಳಿದ್ದಾರೆ.

ಮೇಲೆ ಹೇಳಿದ ಮಧುಮೇಹ ಚಿಕಿತ್ಸೆ ಮುಂದುವರಿಸುತ್ತ ಅದರೊಡನೆ ಕೈಶೋರ ಗುಗ್ಗುಳ ಮಂಜಿಷ್ಠಾದಿ ಕಷಾಯ, ಸಾರಿವಾದ್ಯಾಸವ, ಗಂಧಕ ರಸಾಯನ ಮುಂತಾದವುಗಳನ್ನು ರಕ್ತಶುದ್ಧಿಯಾಗಲು ಹಾಗು ಗಾಯ ಒಣಗಲು ಕೊಡಬೇಕು.

ಪಥ್ಯ: ಈ ರೋಗಿಗಳು ಹಳೆಯ ಅಕ್ಕಿಯ ಗಂಜಿ ಇಲ್ಲವೆ ಬಸಿದ ಅನ್ನವನ್ನು ಊಟ ಮಾಡಬಹುದು. ಸಾಧ್ಯವಿದ್ದಷ್ಟು ಮಟ್ಟಿಗೆ ಆಹಾರ ಪಾನೀಯಗಳಲ್ಲಿ ಸಕ್ಕರೆ ಬೆಲ್ಲಗಳಿರಬಾರದು. ಅತಿ ಸಿಹಿಯಾದ ಮಾವು, ಚಿಕ್ಕು, ಬಾಳೆಹಣ್ಣು, ಸೀತಾಫಲ, ಹಲಸಿನ ಹಣ್ಣುಗಳನ್ನು ತಿನ್ನಬಾರದು. ಹಾಲು ಮೊಸರು ಬೆಣ್ಣೆ ತುಪ್ಪಗಳನ್ನು ವಿಶೇಷವಾಗಿ ಸೇವಿಸಬಾರದು. ಕಿತ್ತಳೆ, ಮೋಸಂಬಿ, ಸೇಬು ಹಣ್ಣುಗಳನ್ನು ತಿನ್ನಬಹುದು. ಬೆಣ್ಣೆ ತೆಗೆದ ಮಜ್ಜಿಗೆಯನ್ನು ಸಾಕಷ್ಟು ಉಪಯೋಗಿಸಬಹುದು. ಎಲ್ಲ ವಿಧ ಕಾಯಿಪಲ್ಲೆ-ಕಾಳು ಕಡಿಗಳನ್ನು ತಿನ್ನಬಹುದು. ಆಹಾರದಲ್ಲಿ ಜೋಳ, ರಾಗಿ, ಗೋಧಿ, ಹುರಳಿ ಹಾಗೂ ಹಳೆ ಅಕ್ಕಿಗಳಿಂದ ತಯಾರಿಸಿದ ತಿಂಡಿ ತಿನಸುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ರೊಟ್ಟಿ, ಚಪಾತಿ, ಮುದ್ದೆ, ಅನ್ನ ಇತ್ಯಾದಿಗಳೊಡನೆ ವಿಶೇಷವಾಗಿ ಕಾಯಿಪಲ್ಲೆ ಹಾಗೂ ಇತರ ಕಾಳುಗಳನ್ನು (ಉಸುಳಿ) ಸೇವಿಸಬೇಕು.

ವ್ಯಾಯಾಮ ಹಾಗೂ ಯೋಗಾಸನಗಳು: ಮಧುಮೇಹ ರೋಗಿಗಳಿಗೆ ನಿತ್ಯ ವ್ಯಾಯಾಮ ಅವಶ್ಯ. ಅದಕ್ಕಾಗಿ ಬೆಳಿಗ್ಗೆ ಚಂಕ್ರಮಣ(walking)ಮಾಡುವುದೊಂದು ಉತ್ತಮ ಪದ್ಧತಿ. ೩-೪ ಕಿಲೋಮೀಟರ್ ದೂರವನ್ನು ವೇಗವಾಗಿ, ದೀರ್ಘ ಉಸಿರಾಟ ಮಾಡುತ್ತ ಹೋಗಬೇಕು. ಪಟ್ಟನ ಊರುಗಳಿಂದ ದೂರದ ಪರಿಸರದಲ್ಲಿ ಅವರವರ ಪ್ರಕೃತಿ, ವಯಸ್ಸುಗಳಿಗೆ ತಕ್ಕಂತೆ ವ್ಯಾಯಾಮ ಮಾಡಬೇಕು. ತಮ್ಮ ಕಾರ್ಯಾಲಯ ಹಾಗೂ ಇತರ ಕೆಲಸಗಳಿಗೆ ಕಾರು, ಸ್ಕೂಟರು, ರಿಕ್ಷಾಗಳನ್ನು ಅವಲಂಬಿಸದೇ ನಡದೇ ಹೋಗುವುದೊಳಿತು. ಬಹು ಅಂತಸ್ತಿನ ಕಟ್ಟಡಗಳಿಗೆ ಲಿಫ್ಟ್ ಉಪಯೋಗಿಸದೇ ನಡೆದೇ ಹೋಗಬೇಕು. ಸದಾಕಾಲ ರೋಗಿ ಪರಿಶ್ರಮದಪಡುತ್ತಿರಬೇಕೆಂದು ಆಚಾರ್ಯರು ಅಭಿಪ್ರಾಯ ಪಡುತ್ತಾರೆ.

ಕೆಲ ಯೋಗಾಸನಗಳು ಮಧುಮೇಹ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಾಗಿವೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಈ ರೋಗಿಗಳು ಯೋಗ ತಜ್ಞರ ಬಳಿ ಸಾಮಾನ್ಯ ಯೋಗಾಸನಗಳನ್ನು ಕಲಿತುಕೊಂಡು ನಂತರ ಉತ್ಥಾನಾಸನ, ಊರ್ಧ್ವ, ಧನುರಾಸನ, ಅರ್ಧಮತ್ಸೇಂದ್ರಿಯಾಸನ, ಪಶ್ಚಿಮೋತ್ತಾಸನ, ಜಾನುಶೀರ್ಷಾಸನ ಮುಂತಾದವುಗಳನ್ನು ವಿಶೇಷವಾಗಿ ಕಲಿತುಕೊಂಡು ನಿತ್ಯ ಅಭ್ಯಾಸದಲ್ಲಿಟ್ಟುಕೊಳ್ಳಬೇಕು ಹಾಗೂ ಸದಾ ಚಟುವಟಿಕೆಯುಳ್ಳವರಾಗಿರಬೇಕು.

೨೫. ದಮ್ಮು (ಶ್ವಾಸರೋಗ) (Bronchial Asthma)

ಕಫ ಪ್ರಕೋಪಪೂರ್ವಕ ಪ್ರಕುಪಿತ ವಾಯು ಪ್ರಾಣವಾಯು ಸ್ರೋತಸ್ಸುಗಳನ್ನು ತಡೆದು ಪುಷ್ಪಸದಲ್ಲೆಲ್ಲ ವ್ಯಾಪಿಸಿದಾಗ ‘ದಮ್ಮು’ ರೋಗ ಕಂಡುಬರುತ್ತದೆ. ಆಯುರ್ವೇದದಲ್ಲಿ ಇದನ್ನು ‘ಒಂದು ಮಹಾವ್ಯಾಧಿ’ ಎಂದು ಕರೆದಿದ್ದು ಇದರ ತೀವ್ರತೆ, ವ್ಯಾಪಕತೆ ಹಾಗೂ ಅನೇಕ ವೇಳೆ ಅಸಾಧ್ಯತೆಗಳನ್ನೂ ಸೂಚಿಸುತ್ತದೆ. ಈ ಶ್ವಾಸರೋಗದಲ್ಲಿ ಕ್ಷುದ್ರ, ತಮಕ, ಛಿನ್ನ, ಮಹಾಶ್ವಾಸ ಹಾಗೂ ಊರ್ಧ್ವ ಶ್ವಾಸಗಳೆಂದು ಐದು ವಿಧಗಳಿವೆ. ಇವುಗಳಲ್ಲಿ ಕ್ಷುದ್ರ ಹಾಗೂ ಹೊಸದಾಗಿ ಬಂದ ತಮಕ ಶ್ವಾಸಗಳನ್ನು ಮಾತ್ರ ಚಿಕಿತ್ಸೆಯಿಂದ ಕಡಿಮೆ ಮಾಡಬಹುದು. ಇನ್ನುಳಿದವುಗಳು ಚಿಕಿತ್ಸೆಗೆ ಅಸಾಧ್ಯ. ಇದೊಂದು ಚಿಕಿತ್ಸೆ ತೆಗೆದುಕೊಂಡಾಗ ಕಡಿಮೆ ಆಗುತ್ತ ಮತ್ತೆ ಮತ್ತೆ ಬರುತ್ತಿರುವ ಯಾಪ್ಯ ರೋಗ. ಇದಕ್ಕೊಂದು ಶಾಶ್ವತ ಪರಿಹಾರವಿಲ್ಲ. ಲಾಕ್ಷಣಿಕ ಗುಣ ಕೊಡುವ ನೂರಾರು ಔಷಧಿಗಳಿದ್ದರೂ, ವ್ಯಕ್ತಿಯ ಪ್ರಕೃತಿ, ಅವನ ಆಹಾರ-ವಿಹಾರ ಪದ್ಧತಿಗಳು, ಹವಾಮಾನ, ಉದ್ಯೋಗ, ಪರಿಸರ ಮಾಲಿನ್ಯ, ಮನೋ ಆತಂಕ, ಅನುವಂಶೀಯತೆ, ಒಗ್ಗದಿರುವಿಕೆ, ಧೂಮ್ರಪಾನ ಮೊದಲಾದ ಚಟಗಳು ಹೀಗೆ ಅನೇಕಾನೇಕ ಕಾರಣಗಳಿಂದ ಹುಟ್ಟಿಕೊಳ್ಳುವ ಈ ದಮ್ಮಿಗೆ ಶಾಶ್ವತವಾದ ಔಷಧವೊಂದು ದೊರಕುವುದು ಅಷ್ಟೊಂದು ಸುಲಭಸಾಧ್ಯವಲ್ಲ.

ತಮಕಶ್ವಾಸ ಕಾರಣ ಮತ್ತು ಲಕ್ಷಣಗಳು: ಇದರಲ್ಲಿ ಕಫಪ್ರಧಾನತೆ ವಿಶೇಷವಾಗಿರುವುದು. ಮಲ ಸ್ವರೂಪವಾದ ಕಫವು ಪ್ರಾಣವಹ ಸ್ರೋತಸ್ಸುಗಳನ್ನು ಅಡ್ಡಿ ಮಾಡುವುದರಿಂದ ನಿಃಶ್ವಾಸವು ತಕ್ಕಷ್ಟು ಹೊರಬರುವುದಿಲ್ಲ. ಇದು ವಿರುದ್ಧ ಮಾರ್ಗವಾಗಿ ಕಂಠ, ಶಿರಸ್ಸುಗಳಲ್ಲಿ ಕಫವನ್ನು ಕೆರಳಿಸಿ ನೆಗಡಿಯನ್ನುಂಟು ಮಾಡುವುದು. ಇದರಿಂದ ಉಸಿರು ಗುರ್ ಗುರ್ ಎಂದು ಶಬ್ಧ ಮಾಡುವುದು. ವೇಗವು ಕ್ರಮೇಣ ಇಲ್ಲವೇ ಒಮ್ಮಿಂದೊಮ್ಮೆಲೆ ಹೆಚ್ಚಿ ಹಿಂಸೆಯಾಗುವುದು. ಕಷ್ಟದಿಂದ ಉಸಿರು ಹೊರಡುವ ವೇಳೆ ಹೆಚ್ಚುವುದರಿಂದ ಉಚ್ಛಾಸದ ಸಮಯ ಕಡಿಮೆ ಆಗುವುದು. ಆದುದರಿಂದ ಶರೀರಕ್ಕೆ ಸಾಕಾಗುವಷ್ಟು ಶುದ್ಧ ವಾಯು ಸೇರುವುದಿಲ್ಲ. ಅಲ್ಲದೆ ಅಶುದ್ಧ ವಾಯುವಿನ ಪ್ರಮಾಣ ಎದೆಯಲ್ಲಿ ಹೆಚ್ಚುವುದು. ಅತ್ಯಂತ ಸೂಕ್ಷ್ಮವಾದ ಪ್ರಾಣವಹ ಸ್ರೋತಸ್ಸುಗಳು ಇಕ್ಕಟ್ಟಿಗೆ ಸಿಕ್ಕು ಜಗ್ಗಲ್ಪಡುವುವು. ಇದರೊಂದಿಗೆ ಅನುಬಂಧವಾಗಿ ಪಿತ್ತ ದೋಷವಿದ್ದರೆ ಜ್ವರ ಕೂಡ ಬರುವುದು.

ದಮ್ಮಿಗೆ ವೇಗ ಬಂದಾಗ ಹಣೆಯ ಮೇಲೆ ಬೆವರಿನ ಬಿಂದುಗಳು ಕಂಡುಬರುವುವು. ಕಣ್ಣಿಗೆ ಕತ್ತಲುಗೂಡಿಸುವುದು, ಗುಡ್ಡೆಗಳ ಮೇಲ್ನೋಟ, ಆಗಾಗ ಎಚ್ಚರ ತಪ್ಪುವುದು, ಬಾಯಾರಿಕೆ, ಕೆಮ್ಮಿದಾಗ ಕಫ ಬರದಿದ್ದರೆ ತುಸು ತೊಂದರೆ ಎನಿಸುವುದು ಹಾಗೂ ಕಫ ಬಂದರೆ ಸಮಾಧಾನವೆನಿಸುವುದು. ಉಷ್ಣ ಪದಾರ್ಥ, ಬಿಸಿನೀರು, ಬಿಸಿಲುಗಳಿಂದ ಸುಖವೆನಿಸುವುದು.

ಮೋಡ, ಕಣ್ಣೀರು, ಎಡಸುಗಾಳಿ ಹಾಗೂ ಕಫಕಾರಿ ದ್ರವ್ಯಗಳ ಸೇವನೆಯಿಂದ ದಮ್ಮು ಮರಕಳಿಸುವುದು. ಜಗ್ಗಿದ್ದ ಸೂಕ್ಷ್ಮವಾದ ಪ್ರಾಣವಾಹಿನಿಗಳು ರೂಕ್ಷವಾಗುವುದಕ್ಕೆ ಮುಂಚೆ ಚಿಕಿತ್ಸಿಸದಿದ್ದರೆ ರೋಗವು ಯಾಪ್ಯವಾಗಿಯೇ ಉಳಿಯುವುದು.

ಆದರೆ ಇತ್ತೀಚೆಗೆ ನಡೆಯುತ್ತಿರುವ ಸಂಶೋಧನೆಗಳಿಂದ ಈ ದಮ್ಮಿನ ರೋಗವನ್ನು ಸಂಪೂರ್ಣ ಗುಣಮುಖವಾಗಿಲ್ಲದಿದ್ದರೂ ಅದನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಂಡು ಸುಖಜೀವನ ನಡೆಸಬಹುದು ಎಂಬಂಶವನ್ನು ಕಂಡಿಹಿಡಿಯಲಾಗಿದೆ. ಇದಕ್ಕೆ ಆಯುರ್ವೇದವೇನು ಹೊರತಲ್ಲ. ರೋಗಿಯು ತನ್ನ ದೈನಂದಿನ ಚಟುವಟಿಕೆ, ವೃತ್ತಿ, ಆಹಾರ ಪದ್ಧತಿಗಳನ್ನು ಸರಿಯಾಗಿಟ್ಟುಕೊಂಡು ಕಾಲಕಾಲಕ್ಕೆ ರೋಗ ಪ್ರತಿಬಂಧಕ ಕ್ರಮ ಹಾಗೂ ಚಿಕತ್ಸೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಹಾಗೂ ದಮ್ಮಿನ ಮೂಲ ಕಾರಣಗಳಿಂದ ದೂರವಿದ್ದರೆ ದಮ್ಮನ್ನು ಹತೋಟಿಯಲ್ಲಿಟ್ಟುಕೊಂಡು ತನ್ನ ದೈನಂದಿನ ಕೆಲಸಗಳನ್ನು ಮಾಡುತ್ತಿರಬಹುದು.

ಆಯುರ್ವೇದದಲ್ಲಿ ದಮ್ಮನ್ನು ಕಡಿಮೆ ಮಾಡುವ, ನಿಯಂತ್ರಿಸುವ ಅನೇಕ ಔಷಧಿಗಳಿಂದ ಯಾವುದೇ ತರಹದ ಉಪದ್ರವಗಳಾಗಲೀ, ಔಷಧ ಒಗ್ಗದಿರುವಿಕೆಯ ಲಕ್ಷಣಗಳಾಗಲೀ ಆಗುವುದಿಲ್ಲ. ಬಹಳ ವರ್ಷಗಳವರೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೂ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ.

ಚಿಕಿತ್ಸೆ: ರೋಗಿಯು ಸಬಲನಾಗಿದ್ದು ಕಫವು ಹೆಚ್ಚಿಗಿದ್ದರೆ ವಮನವನ್ನು ಮಾಡಿಸಿ ಕಫವನ್ನು ಹೊರಹಾಕಬೇಕು.

 • ಹಿಪ್ಪಲಿ ಹಾಗೂ ಲವಣಗಳಿಂದ ಸೇರಿದ ಪಿಪ್ಪಲ್ಯಾಧಿಘೃತ ಸೇವನೆಯಿಂದ ಅತ್ಯಂತ ಹಳೆಯದಾದ ಶ್ವಾಸರೋಗವು ಕೂಡ ಗುಣವಾಗುವುದು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.
 • ತ್ರಿಫಲಾ ಕಷಾಯದಲ್‌ಇಲ ತುಪ್ಪಸೇರಿಸಿ ತೆಗೆದುಕೊಂಡರೆ ದಮ್ಮು ಕಡಿಮೆ ಆಗುವುದು.
 • ಇದರಂತೆ ಭೃಂಗರಾಜ ತೈಲ, ತ್ವಗಾದಿ ಚೂರ್ಣ, ತಲ ಪೋಟಕಯೋಗ ಮುಂತಾದವುಗಳನ್ನು ಶಾಸ್ತ್ರದಲ್ಲಿ ದಮ್ಮು ರೋಗ ಚಿಕಿತ್ಸೆಯಲ್ಲಿ ಹೇಳಲಾಗಿದೆ.
 • ಹಿಪ್ಪಲೀ ಕ್ಷೀರಪಾಕ – ೩ ಗ್ರಾಂ ಹಿಪ್ಪಲಿ + ೫೦ ಮಿಲಿ. ಹಾಲು + ೨೦೦ ಮಿಲಿ. ನೀರು ಸೇರಿಸಿ ನೀರು ಕುದಿದು ಆವಿ ಆಗಿ ಹೋಗಿ ಹಾಲು ಮಾತ್ರ ಉಳಿಯಬೇಕು. ಈ ಹಾಲನ್ನು ನಿತ್ಯ ಬೆಳಿಗ್ಗೆ ಕುಡಿಯಲು ಕೊಡಬೇಕು.
 • ಒಣಶುಂಠಿ ಚೂರ್ಣ + ಬೆಲ್ಲ. ೧ ಚಮಚ
 • ಹರಿದ್ರಾಖಂಡ(ಚೂರ್ಣ)ಬೆಳಿಗ್ಗೆ ಸಾಯಂಕಾಲ ಬಿಸಿನೀರಿನಲ್ಲಿ ಕುಡಿಯಬೇಕು.
 • ಬಿಸಿ ಮೆಣಸಿನ ಕಾಳಿನ ಪುಡಿ + ಕಲ್ಲುಸಕ್ಕರೆ ತಿಂದು ಬಿಸಿ ನೀರು ಕುಡಿಯಬೇಕು.
 • ತಾಲೀಸಾದಿ ಚೂರ್ಣ + ಸೀತೋಪಲಾದಿ ಚೂರ್ಣ+ ಹರಿದ್ರಾಖಂಡಗಳನ್ನು ಸಮಭಾಗ ತೆಗೆದುಕೊಂಡು ಬಿಸಿನೀರಿನಲ್ಲಿ ನಿತ್ಯ ತೆಗೆದುಕೊಳ್ಳಬೇಕು.
 • ರೋಗಿಯು ದುರ್ಬಲನಾಗಿದ್ದರೆ ಮಹಾಲಕ್ಷ್ಮಿ ವಿಲಾರಸರಸ, ಬೃಹತ್ ಹಿತ ಚಿಂತಾಮಣಿ, ಶ್ವಾಸಕಾಸ ಚಿಂತಾಮಣಿ (ಸ್ವರ್ಣಯುಕ್ತ) ೬೨.೫ ಮಿಲಿ ಗ್ರಾಂ – ೧೨೫ ಮಿಲಿ ಗ್ರಾಂ ಬೆಳಿಗ್ಗೆ ೧, ರಾತ್ರಿ ೯
 • ಶ್ವಾಸಕುಠಾರ – ಮಾತ್ರೆಗಳು ದಿನಕ್ಕೆ ೩, ಅವಶ್ಯಕತೆಗೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ಹೆಚ್ಚು ತೆಗೆದುಕೊಳ್ಳಬಹುದು.
 • ಕಫವು ಹೆಚ್ಚಿಗಿದ್ದರೆ ಶೃಂಗ್ಯಾದಿ ಚೂರ್ಣ, ಕಫ ಕೇತು, ಸಮೀರ ಪನ್ನಗಗಳನ್ನು ತೆಗೆದುಕೊಳ್ಳಬೇಕಾಗುವುದು.
 • ರೋಗ ನಿರೋಧಕ ಶಕ್ತಿ ಬೆಳೆಯಲು – ೫೦೦ ಮಿಲಿ ಗ್ರಾಂ ಚ್ಯವನಪ್ರಾಶನಕ್ಕೆ ೫ ಮಿಲಿ ಗ್ರಾಂ ಶತಪುಟಿ ಅಭ್ರಕ ಭಸ್ಮ ಸೇರಿಸಿ, ಚೆನ್ನಾಗಿ ಕಲಿಸಿಕೊಂಡು ಬೆಳಿಗ್ಗೆ- ರಾತ್ರಿ ಒಂದೊಂದು ಚಮಚ ತೆಗೆದುಕೊಳ್ಳಬೇಕು. ಇದೆ ರೀತಿ ಅಗಸ್ತ್ಯ್ರ ರಸಾಯನ, ಅಭಯಾಮಲಕಿ ರಸಾಯನಗಳನ್ನು ತೆಗೆದುಕೊಳ್ಳಬಹುದು.
 • ಕೆಮ್ಮಿಗೆ ಕನಕಾಸವ, ಪುಷ್ಕರಮುಲಾಸವ, ಕಂಟಕಾರಿ ಅವಲೇಹಗಳು ಚೆನ್ನಾಗಿ ಕೆಲಸ ಮಾಡುತ್ತವೆ.

ಪಥ್ಯಕ್ರಮ: ಕುಡಿಯಲು ಸದಾ ಬಿಸಿನೀರನ್ನೇ ಉಪಯೋಗಿಸಬೇಕು. ತಣ್ಣಗಿನ ಆಹಾರ ಪದಾರ್ಥಗಳು ಪಾನೀಯಗಳು – ಕ್ರೀಮು-ಬಿಸ್ಕತ್ತುಗಳು, ಕೇಕುಗಳನ್ನು ತಿನ್ನಬಾರದು. ಬಾಳೇಹಣ್ಣು, ಇತರ ತಂಪಾದ ಹಣ್ಣುಗಳು – ಅತಿ ಹುಳಿಯಾದ ಹಣ್ಣುಗಳು, ಬೆಣ್ಣೆ, ಕೆನೆ, ಮೊಸರು, ಜಿಡ್ಡಿನ ಪದಾರ್ಥಗಳನ್ನು ಬಿಡಬೇಕು. ಅತಿ ತಂಪಾದ ಮನೆ, ಪ್ರದೇಶಗಳಲ್ಲಿ ವಾಸಿಸಬಾರದು. ಕೃತ್ರಿಮವಾಗಿ ತಂಪು ಮಾಡಿದ ಮನೆಗಳಲ್ಲಿ ಕೂಡ ವಾಸಿಸಬಾರದು.

 • ಜೀರ್ಣಕ್ರಿಯೆಯನ್ನು ಚೆನ್ನಾಗಿಟ್ಟುಕೊಳ್ಳಬೇಕು.
 • ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು.
 • ಅತಿಯಾದ ಹೊಗೆ, ಧೂಳುಗಳಿಂದ ದೂರವಿರಬೇಕು.
 • ಕ್ರಮಬದ್ಧವಾದ ವ್ಯಾಯಾಮ, ಯೋಗಾಸನಗಳನ್ನು ಮಾಡಬೇಕು.
 • ಉಸಿರಾಟ ವ್ಯಾಯಾಮ, ‌ಪ್ರಾಣಾಯಾಮಗಳು ತುಂಬಾ ಪರಿಣಾಮಕಾರಿ.