೩೪. ಮೂಲವ್ಯಾಧಿ (ಅರ್ಶಸ್) (Heamorrhoids)

ಮೂಲ(ತಳ-ಗುದಭಾಗ)ದಲ್ಲಿ ಬರುವ ರೋಗವಾದ್ದರಿಂದ ಇದಕ್ಕೆ ಮೂಲವ್ಯಾಧಿ ಎಂದು ಹೆಸರು ಬಂದಿದೆ. ಮಲಬದ್ಧತೆಯನ್ನು ಅಲಕ್ಷಿಸುವುದೇ ಈ ವಿಕಾರವಾಗಲು ಮೂಲಕಾರಣ. ಗುದದ್ವಾರದ ನೀಲಿ ರಕ್ತವಾಹಿನಿಗಳಲ್ಲಿ ತೋರಿಬರುವ ಕೆಲ ತೊಂದರೆಗಳಿಂದ ಈ ವಿಕಾರವಾಗುವುದು. ಗುದದ್ವಾರದ ಅಶುದ್ಧ ರಕ್ತವಾಹಿನಿಗಳು ಹಲವಾರು ಕಾರಣಗಳಿಂದ ಊದಿಕೊಳ್ಳುವ ಇಲ್ಲವೆ ಸೂಡುಕಟ್ಟುವ ಸಾಧ್ಯತೆ ಇದೆ. ಇವೇ ಮುಂದೆ ಮೊಳಕೆ-ಮೂಲವ್ಯಾಧಿಗಳಾಗಿ ತೊಂದರೆ ಕೊಡುವವು. ಈ ರೋಗದ ಬಗ್ಗೆ ಒಳ್ಳೆಯ ಶಾಸ್ತ್ರೀಯ, ‌ಉತ್ತಮ ಮಟ್ಟದ ವರ್ಣನೆಯು ಕಲ್ಯಾಣಕಾರಕದಲ್ಲಿ ಬಂದಿದೆ.(ಕಲ್ಯಾಣಕಾರಕ ಅ.೧೨, ಪುಟ.೨೪೮-೨೬೦)

ದುಷ್ಟವಾದ ದೋಷಕಗಳು ತ್ವಕ್, ಮಾಂಸ, ಮೇದಸ್ಸುಗಳನ್ನು ದೂಷಿಸಿ ಮಾಂಸಾಂಕುರ (ಅರ್ಶಸ್)ವನ್ನುಂಟು ಮಾಡುವುವು ಎಂದು ಹೇಳಲಾಗಿದೆ. ಶತ್ರುಗಳು ವೈರಿಗಳ ಪ್ರಾಣವನ್ನು ಹಿಂಸಿಸುವಂತೆ ಈ ಮಾಂಸಾಂಕುರಗಳು ಶರೀರದಲ್ಲೇ ಸೇರಿಕೊಂಡು ಪೀಡಿಸುವುದರಿಂದ – ಈ ವಿಕಾರಕ್ಕೆ ‘ಅರ್ಶ’ ಎಂದು ಹೆಸರು ಬಂದಿದೆ. ಇವು ಮಲದ್ವಾರದ ಹೊರಗೂ ಒಳಗೂ ಇರುತ್ತವೆ.

(ಕಲ್ಯಾಣಕಾರಕ೧೩ಪು.೨೬೨೨೭೦)

ಕಾರಣಗಳು: ಮಲಮೂತ್ರಗಳ ವೇಗಗಳನ್ನು ತಡೆಯವುದು, ಬಹಳ ಹೊತ್ತಿನವರೆಗೆ ಕುಳಿತುಕೊಂಡಿರುವುದು, ಮಲಬದ್ಧತೆ, ಗುದಭಾಗಕ್ಕೆ ಪೆಟ್ಟು ಬೀಳುವುದು, ವಿಷಮಭೋಜನ ಈ ಮುಂತಾದ ಕಾರಣಗಳಿಂದ ದೋಷಗಳು ಕುಪಿತಗೊಳ್ಳುವುದರಿಂದ ವಾತ, ಪಿತ್ತ, ಕಫ, ತ್ರಿದೋಷಜ ಹಾಗೂ ರಕ್ತಗಳೆಂದು – ಐದು – ವಿಧ ಮೂಲವ್ಯಾಧಿಗಳುಂಟಾಗುವುವು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಇವುಗಳಲ್ಲದೇ ಅತಿಯಾದ ಗುರು, ಶೀತ, ಅಭಿಷ್ಯಂದಿ ಆಹಾರ, ಕೆಲವಿಧ ಮಾಂಸಾಹಾರ, ದುಷ್ಟ ಮದ್ಯ, ಅಶುದ್ಧ ನೀರು, ಅತಿ ಸ್ನೇಹಪಾನ ಮಾಡಿ ವಮನ ವಿರೇಚನಗಳಿಂದ ಶುದ್ಧವಾಗದಿರುವುದು, ಸೋಮಾರಿತನ, ಅತಿಯಾದ ವಾಹನಗಳ ಬಳಕೆ, ಅತಿ ವ್ಯಾಯಾಮ, ಸ್ತ್ರೀಯರಲ್ಲಿ ಗರ್ಭಪಾತ, ಗರ್ಭಿಣ್ಯಾವಸ್ಥೆ – ಈ ಮೊದಲಾದ ಕಾರಣಗಳಿಂದಲೂ ಅಪಾನವಾತವು ಸಂಚಿತವಾದ ಮಲವನ್ನು ಅಧೋ ಮಾರ್ಗದಲ್ಲಿರುವ ಗುದವಲಯಗಳಲ್ಲಿ ಸೇರಿ ನಂತರ ಗುದಾಂಕುರಗಳನ್ನುಂಟು ಮಾಡುವುದು.

ಲಕ್ಷಣಗಳು

೧. ವಾತದೋಷದಿಂದಾದ ಅರ್ಶಗಳು ಶುಷ್ಕವಾಗಿ, ಬಾಡಿದಂತೆ ಶ್ಯಾವ ವರ್ಣವಾಗಿಯೂ, ಒಂದಕ್ಕೊಂದು ಪ್ರತ್ಯೇಕವಾಗಿಯೂ, ಗಟ್ಟಿಯಾಗಿ, ಒರಟು, ವಕ್ರ ಮತ್ತು ಚೂಪಾಗಿಯೂ, ಅಂಕುರಗಳು ಬಿರಿದಂತೆಯೂ ಇರುವುವು. ತಲೆನೋವು ಹಾಗೂ ಇತರ ಮೈ ಕೈ ನೋವುಗಳು, ನೆಗಡಿ, ಕೆಮ್ಮು, ಅಗ್ನಿಮಾಂದ್ಯ, ಮಲಬದ್ಧತೆ (ಒಣಗಿದ ಮಲ) ಗಳಿರುವುವು.

೨. ಪಿತ್ತಾರ್ಶವು ನೀಲ, ರಕ್ತ, ಹಳದಿ ಬಣ್ಣದ ತುದಿಗಳಿಂದ ಕಾಣುವುದು. ತೆಳ್ಳಗಿರುವ ರ‍ಕ್ತ ಸ್ರಾವವಾಗುವುದು. ಆರ್ಶವು ಮೃದುವಾಗಿಯೂ, ಸಡಿಲವಾಗಿಯೂ, ಕೆಂಪಗಾಗಿರುವುದು. ದಾಹ, ಪಾಕ, ಜ್ವರ, ಸ್ವೇದ, ತೃಷ್ಣಾ, ಮೂರ್ಛೆ ಮೊದಲಾದ ಲಕ್ಷಣಗಳಿರುತ್ತವೆ. ಮಲವು ಬಿಸಿಯಾಗಿ, ದ್ರವವಾಗಿ, ನೀಲ, ರಕ್ತ, ಹಳದಿ ಬಣ್ಣದ್ದಾಗಿರುತ್ತದೆ.

೩. ಕಫಾರ್ಶವು ಬುಡದಲ್ಲಿ ಅಗಲವಾಗಿ, ದಿಪ್ಪನಾಗಿ, ಸ್ನಿಗ್ಧವಾಗಿರುತ್ತದೆ. ಅದರ ತುದಿಯು ಗುಂಡಗೆ, ಬೆಳ್ಳಗೆ, ಸ್ತಬ್ಧವಾಗಿರುತ್ತದೆ. ನವೆ ಇರುವ ಕಾರಣ ಕೆರೆದರೆ ಹಿತವೆನಿಸುತ್ತದೆ. ವಂಕ್ಷ್ಣ, ಪಾಯು, ಬಸ್ತಿ, ನಾಭಿ, ಪ್ರದೇಶಗಳಲ್ಲಿ ಬಾವು ಮತ್ತು ಸೆಳೆತಗಳಿರುತ್ತವೆ. ಶ್ವಾಸ, ಕಾಸ, ಹ್ವಲ್ಲಾಸ, ಪ್ರಸೇಕ – ಮೊದಲಾದ ಉಪದ್ರವಗಳಿರುತ್ತವೆ. ಸ್ವಲ್ಪ ಒತ್ತಡದ ನಂತರ ಜಿಗುಟಾದ ಮಲವಿಸರ್ಜನೆ ಆಗುವುದು. ಚರ್ಮವು ಬಿಳುಪಾಗುವುದು.

೪. ತ್ರಿದೋಷಜ ಅರ್ಶಸ್ಸಿನಲ್ಲಿ ಎಲ್ಲ ದೋಷಗಳು ಲಕ್ಷಣಗಳು ಕೂಡಿಕೊಂಡಿರುವುವು. ಇದು ಚಿಕಿತ್ಸೆಗೆ ಕಷ್ಟಸಾಧ್ಯವೆನ್ನಲಾಗಿದೆ.

೫. ರಕ್ತಾರ್ಶವು ಪಿತ್ತಾರ್ಶದ ಲಕ್ಷಣಗಳನ್ನೇ ಹೊಂದಿರುತ್ತದೆ. ಅರ್ಶವು ಕೆಂಪಗಿರುವುದು. ಹಾಗೂ ಉರುಪು ಹೆಚ್ಚಾಗಿದ್ದು ರಕ್ತಸ್ರಾವವಾಗುತ್ತಿರುವುದು. ಇದರಿಂದ ರೋಗಿಯ ಬಲ, ವರ್ಣ, ಉತ್ಸಾಹ ಮತ್ತು ಓಜಸ್ಸುಗಳು ಹೀನವಾಗುತ್ತವೆ.

(ಕಲ್ಯಾಣಕಾರಕ೧೨ಪು. ೨೪೮೨೬೦)

ಅಸಾಧ್ಯ ಲಕ್ಷಣಗಳು: ತ್ರಿದೋಷಜ ಮೂಲವ್ಯಾಧಿಯಲ್ಲಿ ಎಲ್ಲ ಲಕ್ಷಣಗಳಿದ್ದು ಉಪದ್ರವಗಳಿಂದ ಕೂಡಿದ್ದರೆ, ಅಧಿಕ ರಕ್ತಸ್ರಾವ, ಅತಿಸಾರ, ಶ್ವಾಸ,ಶೂಲ, ಪರಿಶೋಷ ಹಾಗೂ ಅತ್ಯಂತ ನೀರಡಿಕೆಯಿಂದ ಕೂಡಿದ ರೋಗಿ, ವೇದನೆಯಿಂದ ಕೂಡಿದ ಆಮಶಂಕೆ, ಗುದ ಸಮೂಹವನ್ನೇ ವ್ಯಾಪಿಸಿದ ಅರ್ಶಸ್‌ಗಳು ಚಿಕತ್ಸೆಗೆ ಅಸಾಧ್ಯವೆಂದು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ.

ಚಿಕಿತ್ಸೆ: ಅರ್ಶಸ್ಸಿಗೆ ನಾಲ್ಕು ವಿಧ ಚಿಕಿತ್ಸೆಗಳನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಔಷಧಿ ಚಿಕಿತ್ಸೆ, ಕ್ಷಾರಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಹಾಗೂ ಅಗ್ನಿಕರ್ಮ ಚಿಕಿತ್ಸೆ ಎಂದು ಇವೆಲ್ಲವುಗಳಲ್ಲಿ ಔಷಧಿ ಚಿಕಿತ್ಸೆಯೇ ಉತ್ತಮವೆಂದು ಆಯುರ್ವೇದ ಪಿತಾಮಹ ಚರಕನ ಅಭಿಪ್ರಾಯವಾಗಿದೆ.

ಸುಶ್ರುತಾಚಾರ್ಯರು-೧ ಅರ್ಶವು ದೋಷಜವಿದ್ದು ಹೊಸದಾಗಿ ಆಗಿದ್ದರೆ ಮಾತ್ರ ಔಷಧಕ್ಕೆ ಗುಣವಾಗುವುವು. ೨. ಅರ್ಶವು ಮೃದುವಾಗಿ, ಆಳವಾಗಿ, ಮೇಲೆ ಗೋಪುರದಂತಾಗಿದ್ದರೆ ಕ್ಷಾರಕರ್ಮ ಅವಶ್ಯ. ೩. ಒರಟಾಗಿ, ಅಲ್ಲಾಡದೆ, ಗಟ್ಟಿಯಾಗಿದ್ದರೆ ಅಗ್ನಿಪ್ರಯೋಗ ಅವಶ್ಯ. ೪. ಬುಡದಲ್ಲಿ ಸಣ್ಣಗೆ ಮತ್ತು ಮೇಲೆ ದಪ್ಪನಾಗಿ ಮತ್ತು ದ್ರವದಿಂದ ಜಿನುಗುತ್ತಿದ್ದರೆ ಶಸ್ತ್ರ ಚಿಕಿತ್ಸೆ ಅವಶ್ಯವೆಂದು ಹೇಳಿದ್ದಾರೆ.

ಉಪದ್ರವಗಳು: ಅರ್ಶಗಳು ಹಳೆಯವಾದಂತ ನಪುಂಸಕತೆ, ಗುದ ಪ್ರದೇಶದಲ್ಲಿ ಬಾವು, ವೇಗಗಳ ತಡೆ, ಹೊಟ್ಟೆಯುಬ್ಬರ, ತೀವ್ರವಾದ ನೋವು, ಅತಿ ರಕ್ತಸ್ರಾವ, ಮೊಳಕೆಗಳು ಮತ್ತೆ ಮತ್ತೆ ಬೆಳೆಯುವುದು, ಗುದಭ್ರಂಶ(Prolapse of Rectum) ಮೊದಲಾದ ತೊಂದರೆಗಳುಂಟಾಗುವುವು.

ಚಿಕಿತ್ಸೆ: ಶಾಸ್ತ್ರದಲ್ಲಿ ಈ ಮೂಲವ್ಯಾಧಿ ನಿವಾರಣೆಗಾಗಿ ಕೆಲ ವಿಶೇಷ ಪ್ರಯೋಗಗಳನ್ನು ಹೇಳಿದ್ದಾರೆ.

 • ಯಂತ್ರ, ಪಟ್ಟಿಬಂಧನ, ಉತ್ತಮ ಔಷಧಿ, ಶಸ್ತ್ರಕರ್ಮ ಹಾಗೂ ಕ್ಷಾರ ಪ್ರಯೋಗ.
 • ಎಕ್ಕದ ಹಾಲಿನಲ್ಲಿ ಹರತಾಳ ಹಾಗೂ ಅರಿಶಿನಪುಡಿ ಸೇರಿಸಿ ಲೇಪನ ಮಾಡಬೇಕು.
 • ಭಲ್ಲಾತಕ(ಕೇರು ಬೀಜ) ಹಾಗೂ ಅಳಲೆಕಾಯಿ ಚೂರ್ಣವನ್ನು ಬೆಲ್ಲದಲ್ಲಿ ಸೇರಿಸಿ ತಿನ್ನಲು ಕೊಡಬೇಕು.
 • ಚಿತ್ರಕ, ಕೇರು ಬೀಜ, ಕರಿ ಎಳ್ಳುಗಳ ಪುಡಿಯನ್ನು ಬೆಲ್ಲದೊಡನೆ ತಿನ್ನಲು ಕೊಟ್ಟರೆ ಎಲ್ಲ ವಿಧ ಮೂಲವ್ಯಾಧಿಗಳು ದೂರವಾಗುವುವು.
 • ಆಹಾರ ಪದಾರ್ಥಗಳನ್ನು ಬಿಟ್ಟು ಕೇವಲ ಹುಳಿ ಮಜ್ಜಿಗೆಯನ್ನು ಕುಡಿಯಬೇಕು.
 • ಕರಿ ಎಳ್ಳುಗಳನ್ನು ನಿತ್ಯ ಬೆಳಿಗ್ಗೆ (೫೦-೧೦೦ ಗ್ರಾಂ) ತಿಂದು ತಣ್ಣೀರನ್ನು ಕುಡಿಯಬೇಕು.
 • ಭಲ್ಲಾತಕ ಪ್ರಯೋಗವನ್ನು ವಿಶೇಷವಾಗಿ ಹೇಳಿದ್ದಾರೆ.

ಈ ರೋಗಿಯು ವಿಶೇಷವಾಗಿ ಸಪ್ಪಗಿನ ಆಹಾರ, ಮಜ್ಜಿಗೆ ಹಾಗೂ ಬಾಳೆ ಹಣ್ಣುಗಳನ್ನು ನಿತ್ಯ ತೆಗೆದುಕೊಳ್ಳಬೇಕು. ಚಹ, ಕಾಫಿ, ಕರಿದ, ಖಾರದ, ಗಟ್ಟಿಯಾದ ಆಹಾರ ಪದಾರ್ಥಗಳನ್ನು ತಿನ್ನಬಾರದು. ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು.

ಹೊನಗನೆ ಸೊಪ್ಪು, ನೆಲ್ಲಿಚಟ್ಟು, ಅಳಲೇಕಾಯಿ, ಮುಟ್ಟಿದರೆ ಮುನಿ ಮುಂತಾದವುಗಳನ್ನು ನಿತ್ಯ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಮೇಲೆ ಹಚ್ಚಲು ಅರಿಶಿನ ಬೇರಿನ ಕೊನೆಯನ್ನು ನೀರಿನಲ್ಲಿ ತೇಯ್ದು ಸೈಂಧವ ಲವಣ ಸೇರಿಸಿ ಮೊಳಕೆಗೆ ಹೆಚ್ಚಬೇಕು. ಇಲ್ಲವೆ ಅರಿಶಿನ ಪುಡಿಗೆ ಔಡಲೆಣ್ಣೆ ಸೇರಿಸಿ, ಸ್ವಲ್ಪ ಬಿಸಿ ಮಾಡಿ ಮೊಳಕೆಗೆ ಹಚ್ಚಿದರೆ ಬಾವು ನೋವುಗಳು ಕಡಿಮೆ ಆಗುವುವು.

 • ಹರತಾಳ + ಅರಿಶಿನ ಪುಡಿಗಳನ್ನು ಹಾಲಿನಲ್ಲಿ ಸೇರಿಸಿ ಮೂಲವ್ಯಾಧಿಗೆ ಲೇಪಿಸಬೇಕು.
 • ಅರ್ಶಕುಠಾರ, ಅಭಯಾರಿಷ್ಟಗಳನ್ನು ನಿತ್ಯ ಉಪಯೋಗಿಸುವುದರಿಂದ ಅಗ್ನಿಮಾಂದ್ಯವು ಹೋಗಿ ವಿಸರ್ಜನೆ ಸರಿಯಾಗಿ ಆಗುವುದು.
 • ಗುದದಿಂದ ರಕ್ತಸ್ರಾವ ಹೆಚ್ಚಾಗುತ್ತಿದ್ದರೆ ಉಶೀರಾಸವನ್ನು ನಿತ್ಯ ಬೆಳಿಗ್ಗೆ ೩ ಚಮಚ ಸಾಯಂಕಾಲ ೩ ಚಮಚ ನೀರಿನಲ್ಲಿ ಸೇರಿಸಿ ಕುಡಿಯಲು ಕೊಡಬೇಕು.
 • ಕಾಸೀಸಾದಿ ತೈಲವನ್ನು ಮೂಲವ್ಯಾಧಿಗೆ ಲೇಪಿಸುವುದರಿಂದ ಕೆರೆತ, ಉರುಪು, ನೋವು, ರಕ್ತಸ್ರಾವಗಳು ನಿಲ್ಲುವುವು. ಇಲ್ಲವೆ ಕಾಚು + ಅಫೀಮು ಸೇರಿಸಿದ ಮಲವನ್ನು ಇದಕ್ಕಾಗಿ ಬಳಸಬಹುದು.
 • ಹದವಾದ ಬಿಸಿನೀರಿನಲ್ಲಿ ಪೃಷ್ಠಭಾಗವನ್ನು ಅದ್ದಿ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿಯು ಬರದಂತೆ ನೋಡಿಕೊಳ್ಳಬಹುದು.
 • ಈ ಮೇಲ್ಕಂಡ ಯಾವ ಕ್ರಮಕ್ಕೂ ಮೂಲವ್ಯಾಧಿಯು ಕಡಿಮೆಯಾಗದಿದ್ದರೆ ತಜ್ಞ ವೈದ್ಯರನ್ನು ಕಂಡು ಕ್ಷಾರ ಸೂತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

ಅಪಥ್ಯ: ವೇಗಗಳನ್ನು ತಡೆಯುವುದು, ಸ್ತ್ರೀ ಸಂಗ, ಕುದುರ, ಆನೆ, ಒಂಟೆಗಳ ಮೇಲೆ ಕುಳಿತುಕೊಳ್ಳುವುದು, ಸೈಕಲ್ ಹತ್ತುವದು, ವಿಷಮವಾದ ಸ್ಥಳಗಳಲ್ಲಿ ಕುಳಿತುಕೊಳ್ಳವುದು – ಇವನ್ನೆಲ್ಲ ಬಿಡಬೇಕು. ಆಯಾ ದೋಷಗಳನ್ನು ಹೆಚ್ಚಿಸುವ ಆಹಾರ ವಿಹಾರಗಳನ್ನು ಬಿಡಬೇಕಾಗುವುದು.

೩೫. ಮಸೂರಿಕಾ (Small pox)

ಹಿಂದೆ ಭಾರತದಲ್ಲಿ ತುಂಬ ಸಾಂಕ್ರಾಮಿಕವಾಗಿ ಹರಡಿ ಸಹಸ್ರಾರು ಜನರ ಸಾವಿಗೆ ಕಾರಣವಾಗುತ್ತಿದ್ದ ಈ ಮೈಲಿ ಬೇನೆ ಈಗ ಸುಮಾರು ೩೦ ವರ್ಷಗಳಿಂದ ದೂರವಾಗಿದ್ದರೂ ಕಳೆದ ೩-೪ ವರ್ಷಗಳ ಹಿಂದೆ ಗುಜರಾತದ ಸುರತ ಭಾಗದಲ್ಲಿ ಕಾಣಿಸಿಕೊಂಡಿದೆ. ವ್ಯಾಕ್ಸಿನೀಯಾ ವೈರಸ್ ಎಂಬ ಗಾಳಿಯ ಮೂಲಕ ಹರಡುವ ಸಾಂಸರ್ಗಿಕ ರೋಗ ಇದಾಗಿದೆ.

(ಕಲ್ಯಾಣಕಾರಕ೧೮ಪು. ೪೫೨೪೬೦)

ಕಲ್ಯಾಣಕಾರಕ ಗ್ರಂಥದಲ್ಲಿ ಈ ರೋಗದ ಕಾರಣಗಳನ್ನು ಹೀಗೆ ಹೇಳಿದ್ದಾರೆ. ದುಷ್ಟ ಗ್ರಹಗಳ ಕೋಪ, ವಿಷ ವೃಕ್ಷಗಳಿಂದ, ವಿಷ ಪ್ರಯೋಗ, ವಿಷಮ ಭೋಜನ, ಋತುಕಾಲ, ವೈಪರೀತ್ಯ, ಧಾರ್ಮಿಕ ವಿಧಿ-ವಿಧಾನಗಳನ್ನು ಉಲ್ಲಂಘಿಸುವುದರಿಂದ, ಹಿಂಸಾಮಯ ಯಜ್ಞ ಯಾಗಾದಿಗಳನ್ನು ಮಾಡುವುದರಿಂದ, ಹಿಂಸೆಯಿಂದ, ಗುರುಗಳ ಶಾಪದಿಂದ ಪರಿಸರ ಕೆಟ್ಟು ಜನಪದೋಧ್ವಂಸಕ ರೋಗವೆನಿಸಿದ ಮೈಲಿ ಬೇನೆ(ಮಸೂರಿಕಾ) ಯನ್ನುಮಟು ಮಾಡುವುದು. ಮೈ ಮೇಲೆ ಕೆಂಪು, ಕರಿ, ಬಿಳಿ, ಹಳದಿ ಆಕಾರದ ಧಾನ್ಯದಂತಿರುವ ಗುಳ್ಳೆಗಳು ಎದ್ದು ತುಂಬ ತೊಂದರೆಯನ್ನುಂಟು ಮಾಡುವುವು. ಇವು ಪ್ರತ್ಯೇಕವಾಗಿ ೩ ದೋಷಗಳು, ರಕ್ತಜ ಹಾಗೂ ತೊಂದರೆಯನ್ನುಂಟು ಮಾಡುವುವು. ಇವು ಪ್ರತ್ಯೇಕವಾಗಿ ೩ ದೋಷಗಳು, ರಕ್ತಜ ಹಾಗೂ ತ್ರಿದೋಷಗಳೆಂದು ಐದು ವಿಧಗಳಾಗಿವೆ.

ಮೈಲಿ ಬೇನೆಯಲ್ಲಿ ಮುಖ್ಯವಾಗಿ ಪಿತ್ತದೋಷದ ಪ್ರಾಬಲ್ಯವಿರುತ್ತದೆ. ಇದರೊಡನೆ ಪ್ರಕುಪಿತ ಅನ್ಯದೋಷಗಳ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಪ್ರಮುಖವಾದ ಲಕ್ಷಣಗಳ ಮೇಲೆ ವಾತಜ, ಪಿತ್ತಜ, ಕಫಜ ಹಾಗೂ ತ್ರಿದೋಷವೆಂದು ಕರೆಯಲಾಗುತ್ತದೆ. ಮೈಲಿಗಳ ಬಣ್ಣ ಬೂದಿಯಾಗಿದ್ದು, ಅತಿಯಾದ ಜ್ವರ, ನೀರಡಿಕೆ, ದಾಹ, ಬೇಗನೆ ಪಕ್ವವಾಗುವುದು ಈ ಲಕ್ಷಣಗಳಿದ್ದರೆ ಅವು ಪಿತ್ತಜವೆನ್ನಬೇಕು. ಕಫಜದಲ್ಲಿ ಗುಳ್ಳೆಗಳು ಗಟ್ಟಿಯಾಗಿ, ದಿಪ್ಪನಾಗಿ, ಅತಿ ಶೀತಲವಾಗಿದ್ದು ಛಳಿಜ್ವರದಿಂದ ಕೂಡಿರುತ್ತವೆ. ಬೇಗನೆ ಪಕ್ವವಾಗುವುದಿಲ್ಲ. ರಕ್ತವಿಕಾರದ ಮೈಲಿಗಳು ಹೆಸರಿನ ಕಾಳಿನಂತಿದ್ದು ಕೆಂಪಗಾಗಿರುವುವು. ತ್ರಿದೋಷಜ ಮೈಲಿ ಬೇನೆಯಲ್ಲಿ ಮೂರು ದೋಷಗಳ ಉಗ್ರ ಲಕ್ಷಣಗಳು ತೋರಿಬರುತ್ತವೆ.

ಪೂರ್ವರೂಪಗಳು: ಮೈಲಿ ಬೇನೆ ರೋಗವು ಬರುವ ಪೂರ್ವದಲ್ಲಿ ಹೆಚ್ಚಿನ ಜ್ವರ, ಅರೋಚಕತೆ, ರೋಮಾಂಚನ, ಅತ್ಯಂತ ನೀರಡಿಕೆ, ಮೈ ಉರಿ, ತಲೆನೋವು, ಅತಿಯಾದ ನಡ-ಮೈ-ಕೈಗಳ ನೋವು, ಅತಿಯಾದ ನಿದ್ರೆ, ಮೂರ್ಛೆ, ಭ್ರಮೆ, ಬಾಯಿಯ ಒಣಗುವಿಕೆ, ಆಕಳಿಕೆ, ಬಾವು, ಮೈಕೆರೆತ, ಶರೀರ ಜಡತೆ ಹಾಗೂ ವಿಷವಿಕಾರ ಪೀಡಿತನಾದಂತಹ ರೋಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಲಕ್ಷಣಗಳು: ಒಮ್ಮೆಲೆ ಜ್ವರ, ಛಳಿ, ತೀವ್ರವಾದ ತಲೆಶೂಲೆ, ಬೆನ್ನು ಹೊಡೆತ – ಈ ಮೊದಲಾದ ಲಕ್ಷಣಗಳು ೩-೪ ದಿವಸಗಳವರೆಗೆ ಇರುವವು. ನಂತರ ಜ್ವರ ಹಾಗೂ ಇತರ ಲಕ್ಷಣಗಳು ಕಡಿಮೆ ಆಗಿ ಮೈ ಮೇಲೆ ಸಣ್ಣ ಕೆಂಪು ಬೊಕ್ಕೆಗಳು ಏಳುವುವು. ಇವು ಮೊದಲು ಕೆಂಪು ಬೊಕ್ಕೆಗಳಾಗಿ, ಸಾಸಿವೆ, ಚೆನ್ನಂಗಿ ಬೇಳೆಯಂತೆ ನಂತರ ಅಗಲವಾಗಿ, ಉಬ್ಬಿಕೊಂಡು, ಕೀವಿನಂತೆ ರಸ ತುಂಬಿ ನಂತರ ಒಡೆದು ಚಪ್ಪಟೆಯಾಗಿ ತಗ್ಗು ಬೀಳುವುವು. ಈ ಎಲ್ಲ ಹಂತ ಆಗಬೇಕಾದರೆ ಮೂರು ವಾರಗಳ ಅವಧಿ ಬೇಕಾಗುವುದು. ಇದರಿಂದ ಮೈ ಮೇಲೆ ಅವುಗಳ ಕಲೆಗಳು ಉಳಿಯುವುವು. ಅಲ್ಲದೇ ಕಣ್ಣುಗಳಲ್ಲಿ ಎದ್ದು ಅಲಕ್ಷಿಸಲ್ಪಟ್ಟರೆ ದೃಷ್ಟಿ ನಾಶವೂ ಆಗುವುದು. ಲಕ್ಷಣಗಳ ತೀವ್ರತೆ, ಬೊಕ್ಕೆಗಳು ದೊಡ್ಡದಾಗುವಿಕೆ, ಮೊಟ್ಟಮೊದಲು ಮುಖ, ಎದೆ, ತೋಳುಗಳ ಮೇಲೆ ಕಂಡುಬರುವಿಕೆ ಈ ಲಕ್ಷಣಗಳಿಂದ ಈ ರೋಗವನ್ನು ನಿದಾನಿಸಬಹುದು.

ರೋಗಿಯ ಉಗುಳು, ಸಿಂಬಳ ಹಾಗೂ ಹುಣ್ಣಿನ ಲಸಿಕೆ, ಹಕ್ಕಳಿಗಳಿಂದ ಅಸಂಖ್ಯ ರೋಗ ಜಂತುಗಳು ಹೊರಬಂದು ಸುತ್ತಮುತ್ತಲಿನ ಪರಿಸರವನ್ನು ದೂಷಿಸುವುವು. ಇಂತಹ ದೂಷಿತ ಹವೆಯನ್ನು ಸೇವಿಸುವವರಿಗೆ ೭ ರಿಂದ ೧೨ ಇಲ್ಲವೆ ೧೬ ದಿವಸಗಳಲ್ಲಿ ಮೈಲಿ ಬೇನೆಯು ಕಂಡುಬರುವುದು. ಒಮ್ಮೆ ಈ ರೋಗವು ಬಂದು ಹೋದರೆ ಈ ವ್ಯಕ್ತಿಗೆ ಜೀವನಪರ್ಯಂತ ಬಾರದು.

ರೋಗಿ ಶುಶ್ರೂಷೆ: ಈ ಮೈಲಿ ಬೇನೆಯ ರೋಗಿಯನ್ನು ಮನೆಯಲ್ಲಿಟ್ಟುಕೊಳ್ಳದೆ ಸರಕಾರಿ ಆಸ್ಪತ್ರೆಯ ಅಸೆಪ್ಟಿಕ್ ವಾರ್ಡಿಗೆ ದಾಖಲಿಸಬೇಕು. ಮೈಲಿ ಹುಣ್ಣುಗಳು ಒಡೆಯದಂತೆ ಎಚ್ಚರಿಕೆ ವಹಿಸಬೇಕು. ರೋಗಿಯು ಅವನ್ನು ಕೆರೆದು ಕೊಳ್ಳದಂತೆ ನೋಡಿಕೊಳ್ಳಬೇಕು. ಬಾಯಿ ಹಾಗೂ ಗಂಟಲುಗಳನ್ನು ತ್ರಿಫಲಾ ಇಲ್ಲವೆ ಬೇವಿನ ಕಷಾಯದಿಂದ ಮೇಲಿಂದ ಮೇಲೆ ಮುಕ್ಕಳಿಸುತ್ತಿರಬೇಕು. ಕಣ್ಣುಗಳಿಗೆ ನಿಂಬಾದಿ ಅಂಜನವನ್ನು ದಿನಕ್ಕೆ ೩-೪ ಸಾರೆ ಹಾಕಬೇಕು. ಮೈಯನ್ನು ಬೇವಿನೆಲೆಯ ಕಷಾಯದಿಂದ ಒರೆಸಿ ನಂತರ ಮೈಗೆಲ್ಲ ಬೇವಿನೆಣ್ಣೆ ಇಲ್ಲವೆ ಚಂದನಾದಿ ತೈಲವನ್ನು ಹಚ್ಚಬೇಕು. ರೋಗಿಗೆ ಕೇವಲ ಗಂಜಿ, ಹಾಲು, ಹಣ್ಣಿನ ರಸ, ಸಕ್ಕರೆ, ಹುಗ್ಗಿಯಂತಹ ಅನ್ನ, ಹೆಸರು ಬೇಳೆ ಪಾಯಸ, ನೀರುಗಳನ್ನು ಮೇಲಿಂದ ಮೇಲೆ ಕೊಡುತ್ತಿರಬೇಕು.

ಅಸಾಧ್ಯ ಲಕ್ಷಣ: ಅಧಿಕ ನೋವು, ಎಚ್ಚರ ತಪ್ಪುವುದು, ಬಾಯಿ, ಮೂಗುಗಳಿಂದ ರಕ್ತ ಸ್ರಾವ, ದಾಹ, ಬಾವು, ಭ್ರಮೆ, ಬಡಬಡಿಕೆ, ಅತಿಯಾದ ನೀರಡಿಕೆ, ಮೂರ್ಛೆ, ಮೊದಲಾದ ಉಪದ್ರವಳುಂಟಾದರೆ ರೋಗಿ ಚಿಕಿತ್ಸೆಗೆ ಅಸಾಧ್ಯವೆಂದು ತಿಳಿಯಬೇಕೆಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.

ಚಿಕಿತ್ಸೆ: ಮೈಲಿ ಬೇನೆಯ ಪೂರ್ವ ರೂಪಗಳು ಕಂಡಕೂಡಲೇ ಸರಿಯಾಗಿ ಲಂಘನ ಮಾಡಿಸಿ ಜೇಷ್ಠ ಮಧುವಿನ ಕಷಾಯದಿಂದ ವಾಂತಿ ಮಾಡಿಸಬೇಕು. ತ್ರಿವೃಟ್ ಹಾಗೂ ಸಕ್ಕರೆಗಳನ್ನು ಕೊಟ್ಟು, ವಿರೇಚನ ಮಾಡಿಸಬೇಕು. ಮಧುರಗಣ ಆಹಾರ, ಶೀತ ಪ್ರಧಾನವಾದ ದ್ರವ್ಯಗಳ ಆಹಾರ ಪಾನೀಯಗಳನ್ನು ಕೊಡಬೇಕು. ರೋಗಿಗೆ ಅತಿಯಾದ ದಾಹ ಇತ್ಯಾದಿ ತೊಂದರೆಗಳಿದ್ದಾಗ ರಕ್ತಮೋಕ್ಷಣ ಚಿಕಿತ್ಸೆ ಹೇಳಿದ್ದಾರೆ. ನೀಲಕಮಲ, ಕಮಲ, ನಾಗಕೇಶರ, ಚಂದನ, ಬೇವು, ಕ್ಷೀರ ವೃಕ್ಷಗಳಿಂದ ತಯಾರಿಸಿದ ಲೇಪವನ್ನೂ ಹಚ್ಚಲು ಹೇಳಿದ್ದಾರೆ. ಶರ್ಕರಾದಿ ಲೇಪ, ಶೈಮಲಾದಿ ಲೇಪ, ಮೈಲಿ ಬೇನೆಯ ವಿಶೇಷ ಕಷಾಯ, ಲೇಪ, ಧೂಪ ಇತ್ಯಾದಿ ಯೋಗಗಳನ್ನು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ. ಇದಲ್ಲದೇ ಕ್ರಿಮಿಜನ್ಯ (ಕ್ರಿಮಿಸಾಂಕರ್ಯಿತ) ಮೈಲಿಬೇನೆಯ ಚಿಕಿತ್ಸೆ, ಮೈಲಿ ಬೇನೆಯ ಉಪದ್ರವ ಸ್ವರೂಪವಾಗಿ ಕಂಡುಬರುವ ಸಂದುಬಾವಿನ ಚಿಕಿತ್ಸೆ ಹಾಗೂ ಮೈ ಮೇಲೆ ಕಲೆಗಳು ಉಳಿಯಬಾರದೆಂದು ಅರಿಷಿಣ, ಚಂದನ, ಮಂಜಿಷ್ಠಗಳಿಂದ ತಯಾರಿಸಿದ ಲೇಪ, ಉಪದ್ರವಗಳಿಗೆ ವಿಶೇಷ ಚಿಕಿತ್ಸೆ ಹೀಗೆ ತುಂಬ ವಿವರವಾಗಿ ಈ ರೋಗದ ಬಗ್ಗೆ ಹೇಳಲಾಗಿರುವುದು ಒಂದು ವಿಶೇಷ.

ಉಪಸರ್ಗಜ ಮೈಲಿಬೇನೆ: ಈ ವಿಕಾರವು ಮೈಲಿಬೇನೆಯಿಂದ ಬಳಲುತ್ತಿರುವ ರೋಗಿಯನ್ನು ಮುಟ್ಟುವುದರಿಂದ, ಆತನ ಜೊತೆಗಿರುವುದರಿಂದ, ಅವನು ತಿಂದು ಕುಡಿದು ಬಿಟ್ಟ ಆಹಾರ/ಪಾನೀಯಗಳನ್ನು ಸೇವಿಸುವುದರಿಂದ ಅದು ಶೀಘ್ರವಾಗಿ ಇನ್ನೊಬ್ಬ ವ್ಯಕ್ತಿಗೆ ಅಂಟಿಕೊಳ್ಳುವುದು ಎಂದಿದ್ದಾರೆ. ಮೈಬಾವು, ಚರ್ಮರೋಗಗಳು, ಜ್ವರ, ನೇತ್ರರೋಗಗಳು, ಕೂಡ ಸಂಪರ್ಕದಿಂದ ಇನ್ನೊಬ್ಬರಿಗೆ ಅಂಟಿಕೊಳ್ಳುತ್ತವೆ. ಕಾರಣ ಇಂತಹ ರೋಗಿಗಳನ್ನು ಚಿಕಿತ್ಸಿಸುವ ವೈದ್ಯನು ಸ್ವತಹ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಹಾಗೂ ಜಿನೇಂದ್ರ ಭಗವಾನರನ್ನು, ಸದ್ಗುರುಗಳನ್ನು ಪೂಜಿಸಿ, ವಂದಿಸಿ ಮಂತ್ರಪ್ರಯೋಗ ವಿಧಾನಗಳಿಂದ ರೋಗಿಯನ್ನು ಚಿಕಿತ್ಸಿಸಬೇಕು. (ಕ.ಅ೧೮, ಶ್ಲೋಕ-೬೨, ೬೩, ೬೪)

ಪಥ್ಯಾಹಾರ: ರೋಗಿಗೆ ಚೆನ್ನಂಗಿ ಬೇಳೆ, ಹೆಸರು ಮುಂತಾದ ಧಾನ್ಯಗಳಿಂದ ಸಿದ್ಧವಾದ ಅನ್ನಕ್ಕೆ ತುಪ್ಪ ಸೇರಿಸಿ ಕೊಡಬೇಕು. ಹುಳಿಯಾದ ಹಣ್ಣುಗಳನ್ನು ಮೇಲಿಂದ ಮೇಲೆ ಕೊಡಬೇಕು. ಭೋಜನ ಲಘುವಾಗಿರಬೇಕು. ಕ್ರಮೇಣ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಕುದಿಸಿ, ಆರಿಸಿ ತಣ್ಣಗಾದ ನೀರನ್ನು ಮೇಲಿಂದ ಮೇಲೆ ಕುಡಿಯಲು ಕೊಡಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. (ಶ್ಲೋಕ.೫೭)

ರೂಢಿಯಲ್ಲಿರುವ ವಿಶೇಷ ಚಿಕಿತ್ಸೆ

ಒಂದನೆಯ ಹಂತ
೧. ಗೋದಂತಿ ಮಿಶ್ರಣ – ೨೫೦ ಮಿ.ಗ್ರಾಂ – ದಿನಕ್ಕೆ ೩ ಸಾರೆ
ರಸಾದಿ ವಟಿ – ೨ ಮಾತ್ರೆಗಳು – ದಿನಕ್ಕೆ ೩ ಸಾರೆ
ಪಟೋಲಾದಿ ಕ್ವಾಥ- ೩೦ ಮಿಲಿ – ನಿತ್ಯ ೨ ಸಾರೆ.

೨.ಸ್ವರ್ಣ ಮಾಕ್ಷಿಕ ಭಸ್ಮ- ೧೨೦ ಮಿಲಿಗ್ರಾಂ – ನಿತ್ಯ ೨ ಸಾರೆ
೩. ಎಲಾದ್ಯರಿಷ್ಟ – ೨೦ ಮಿಲೀ – ನಿತ್ಯ ೨ ಸಾರೆ.

ಎರಡನೆ ಹಂತ
ಇಂದುಕಲಾವಟಿಕಾ – ೧೨೦ ಮಿಲಿಗ್ರಾಂ – ಬೆಳಿಗ್ಗೆ ರಾತ್ರಿ
ಹರಿದ್ರಾಚೂರ್ಣ – ೧ ಗ್ರಾಂ, – ಮಧ್ಯಾಹ್ನ ಹಾಗೂ ರಾತ್ರಿ ಕಹಿಸೋರೆಕಾಯಿ ಎಲೆ ರಸದೊಡನೆ.

ರೋಗ ಪ್ರತಿಬಂಧ ಕೋಪಾಯಗಳು

೧. ರೋಗಿಯು ವಿಸರ್ಜಿಸಿದ ಅಂಶಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸುಡಬೇಕು. ಅವನು ಉಪಯೋಗಿಸಿದ ಪಾತ್ರೆಗಳನ್ನು ಕುದಿಯುವ ನೀರಿನಲ್ಲಿ ಅದ್ದಿ ಶುದ್ಧಿಗೊಳಿಸಬೇಕು. ಮನೆಯನ್ನು ಸಾರಿಸಿ ಶುದ್ಧಗೊಲಿಸಬೇಕಲ್ಲದೇ ಬೇವಿನ ಹೊಗೆಯನ್ನು ಹಾಕಬೇಕು.

೨. ರೋಗ ಹರಡಿದ ಕಾಲದಲ್ಲಿ ಪ್ರತಿಯೊಬ್ಬರು ಮಲಬದ್ಧತೆಯಾಗದಂತೆ ನೋಡಿ ಕೊಳ್ಳಬೇಕು. ಉಪ್ಪನ್ನು ಕಡಿಮೆ ಮಾಡಿ ಜೇಷ್ಠ ಮಧುವನ್ನು ವಿಶೇಷವಾಗಿ ತೆಗೆದುಕೊಳ್ಳಬೇಕು. ಹುಣಸೆ ಹುಳಿ ಹಾಗೂ ಅರಿಷಣ ಪುಡಿಗಳನ್ನು ನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ತೆಗೆದುಕೊಳ್ಳಬೇಕು.ಬೇವಿನ ಎಲೆಗಳನ್ನು ಹಾಕಿ ಕಾಯಿಸಿದ ನೀರನಿಂದ ಸ್ನಾನ ಮಾಡಬೇಕು.

೩. ರೋಗ ಪ್ರತಿಬಂಧಕ ಲಸಿಕೆ ತೆಗೆದುಕೊಳ್ಳಬೇಕು.

೩. ಜನತೆಗೆ ಈ ರೋಗದ ಬಗ್ಗೆ ಸರಿಯಾದ ತಿಳುವಳಿಕೆಯನ್ನುಂಟು ಮಾಡುವಂತೆ ವೈದ್ಯರು, ಸಮಾಜ ಕಾರ್ಯಕರ್ತರು, ಪ್ರಯತ್ನಿಸಬೇಕು. ಇದು ಕೂಡ ಮುಂಜಾಗ್ರತೆಯಷ್ಟೇ ಮಹತ್ವದ್ದಾಗಿದೆ. ಪತ್ರಿಕೆ, ಕರ ಪತ್ರಗಳು, ಆಕಾಶವಾಣಿ, ದೂರದರ್ಶನ, ಚಲನಚಿತ್ರಗಳ ಮಾಧ್ಯಮಗಳ ಮೂಲಕ ಜನತೆಗೆ ತಿಳುವಳಿಕೆಯನ್ನುಂಟು ಮಾಡಬೇಕು.

೩೬. ಶ್ಲೀಪದ (ಆನೆಕಾಲು ರೋಗ) (Filaria)

ಸರ್ವದೋಷಗಳು ಕುಪಿತವಾಗಿ ಒಂದೆಡೆ ಸೇರಿ ಪ್ರಕೋಪಗೊಳ್ಳುವುದರಿಂದ ಇಲ್ಲವೆ ಒಂದೊಂದೇ ದೊಷ ಪ್ರಕೋಪಗೊಳ್ಳುವುದರಿಂದ ತಮ್ಮ-ತಮ್ಮ ಲಕ್ಷಣಗಳಿಂದ ಯುಕ್ತವಾಗಿ ಎರಡೂ ತೊಡೆಗಳ ಸಂಧಿಗಳಲ್ಲಿ ಬಾವು ಬಂದು ಕ್ರಮೇಣ ಶಿಶ್ನಭಾಗ ತೊಡೆಗಳು, ಮೊಳಕಾಲು ಸಂದು – ಹೀಗೆ ಪಾದಗಳವರೆಗೆ ಕಂಡುಬರುತ್ತದೆ. ಇದಕ್ಕೆ ಶ್ಲೀಪದ ರೋಗವೆನ್ನುವರು ಹಾಗೂ ಇದು ಚಿಕಿತ್ಸೆಗೆ ಕಠಿಣವಾಗಿದೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. (ಕಲ್ಯಾಣಕಾರಕ ಅ.೧೪, ಶ್ಲೋಕ- ೧೧,೧೨)

ಆಯುರ್ವೇದದ ಪ್ರಕಾರ ಶ್ಲೀಪದವು ಕಫೋಲ್ಬಣ ವಿಷಮ ಜ್ವರ ಎನಿಸಿದೆ. ಈ ರೋಗಕ್ಕೆ ಫೈಲೇರಿಯ ಎಂಬ ದಾರದಂತಿರುವ ಹುಳು ಕಾರಣವೆನಿಸಿದೆ. ಅಶುದ್ಧವಾದ ಕುಡಿಯುವ ನೀರಿನೊಡನೆ ಈ ಕ್ರಿಮಿಯ ತತ್ತಿಗಳು ಮಾನವ ದೇಹ ಪ್ರವೇಶಿಸಿ ಅಲ್ಲಿ ಬೆಳೆದು ಈ ರೋಗೋತ್ಪತ್ತಿಗೆ ಕಾರಣವಾಗುತ್ತವೆ. ಇದಕ್ಕೆ ಸುಮಾರು ಒಂದು ವರ್ಷ ಅವಧಿ ಬೇಕಾಗುತ್ತದೆ. ಮೊದಮೊದಲಿಗೆ ಕಾಲುಗಳಲ್ಲಿ ನೋವುಳ್ಳ ಬಾವು ಕಂಡುಬರುವುದು. ತೊಂದರೆಗೊಳಗಾದ ಚರ್ಮಚು ಆನೆಯ ಚರ್ಮದಂತೆ ಬಿರುಸಾಗುವುದು. ಅದಕ್ಕೆನೇ ಇದಕ್ಕೆ ‘ಆನೆಕಾಲು’ರೋಗವೆಂತಲೂ ಕರೆಯುತ್ತಾರೆ. ಕೆಲ ವೇಳೇ ಈ ರೋಗವು ಸೊಳ್ಳೆಗಳ ಮೂಲಕವೂ ಪಸರಿಸುವುದು. ಈ ರೋಗವು ಭಾರತದ ಅನೇಕ ಭಾಗಗಳಲ್ಲಿ – ಅದೂ ನೀರು ಸರಿಯಾಗಿ ಹರಿದು ಹೋಗುವ ತೇವ ಪ್ರದೇಶಗಳಲ್ಲಿ ಇಂದಿಗೂ ಇದೆ. ಈ ರೋಗದ ವಿವರಣೆ ಕಲ್ಯಾಣಕಾರಕದಲ್ಲೂ ದೊರಕುತ್ತದೆ. ತ್ರಿದೋಷಗಳು ಸಂಯುಕ್ತವಾಗಿ ಎರಡೂ ಪಾದಗಳಲ್ಲಿ ಬಾವು-ನೋವನ್ನುಂಟು ಮಾಡುವುವು. ಅನಂತರ ಅದು ಶಿಶ್ನ, ತೊಡೆ ಹಾಗೂ ಪಾದದವರೆಗೆ ತಿಳಿದುಬರುವುದು. ಇದು ಚಿಕಿತ್ಸೆಗೆ ತುಂಬ ಕಠಿಣವೆನಿಸಿದೆ. ರೋಗಿಗೆ ಇದು ನಿತ್ಯ ತೊಂದರೆ ಕೊಡುತ್ತಿರುತ್ತದೆ. ಇದಕ್ಕೆ ಬಂಧನ, ರಕ್ತಮೋಕ್ಷಣ ಮೊದಲಾದ ವಿಧಾನಗಳಿಂದ ಚಿಕಿತ್ಸಿಸಬೇಕು ಎಂದು ಹೇಳಿದ್ದಾರೆ.

ಲಕ್ಷಣಗಳು: ಈ ರೋಗದ ಪ್ರಾರಂಭದಲ್ಲಿ ಅತಿಯಾದ ಜ್ವರ ಕಂಡುಬರುವುದು. ಜ್ವರವು ಸಾಮಾನ್ಯವಾಗಿ ನಾಲ್ಕು ದಿವಸಗಳವರೆಗೆ ಕಂಡುಬಂದರೂ ತೀವ್ರತೆ ಹೆಚ್ಚಾಗಿರುವುದು. ಮೇಲಿಂದ ಮೇಲೆ ಛಳಿ ಬಂದು ಜ್ವರದ ಲಕ್ಷಣಗಳು ತೋರಿಬರುವುವು. ಅದರೊಡನೆ ಚರ್ಮ ಹಾಗೂ ಅದರಡಿಯ ಬಾವು, ರಸವಹ ಸ್ರೋತಸ್ಸುಗಳಲ್ಲಿಯ ಅವರೋಧದಿಂದಾಗಿ ಬಾವು ಹೆಚ್ಚುತ್ತ ಹೋಗುವುದು, ಸಂಧಾನಕಾರಿ ಸ್ನಾಯುಗಳು ಅತಿಯಾಗಿ ಬೆಳೆದುದರ ಪರಿಣಾಮವಾಗಿ ಈ ಬಾವು ತಲೆದೋರುವುದು. ಈ ಬಾವು ಕಾಲುಗಳ ಸ್ನಾಯುಗಳನ್ನು ಆವರಿಸಿರುವುದರಿಂದ ಅವು ಅಶಕ್ತಗೊಳ್ಳುವುವು.

ಇನ್ನು ಕೆಲವರಲ್ಲಿ ಅಂಡಗ್ರಂಥಿಗಳು ಬಾವು ಬಂದು ಬೆಳೆಯಲಾರಂಭಿಸುವುವು. ಕಾಲುಗಳ ಸುತ್ತಳತೆ ಕೆಲ ಅಡಿಗಳವರೆಗೆ ಏರಿದರೆ, ಅಂಡಗ್ರಂಥಿ ಸುಮಾರು ೨೫ ಕಿಲೋ ಭಾರದವರೆಗೆ ಏರಬಹುದು. ಈ ರೋಗವು ಮೈಯನ್ನು ಆವರಿಸಬಹುದಾದರೂ ತುಂಬ ಕ್ಚಚಿತ.

ಚಿಕಿತ್ಸೆ: ಶಾಸ್ತ್ರದಲ್ಲಿ ಮುಖ್ಯವಾಗಿ ಈ ರೋಗಕ್ಕೆ ಜಿಗಳೆಗಳನ್ನು ಹಿಡಿಸಿ ರಕ್ತ ಮೋಕ್ಷಣ ಮಾಡಿಸಬೇಕೆಂದು ಹೇಳಲಾಗಿದೆ. ತ್ರಿಕಟುಕಾದಿ ಉಪನಾಹ, ವಲ್ಮೇಕ ಪಾದಘ್ವ ತೈಲ, ಘೃತ ಮೊದಲಾದ ಔಷಧಿಗಳಿಂದ ಚಿಕಿತ್ಸಿಸಬೇಕು ಎನ್ನಲಾಗಿದೆ.

 • ಅಭ್ರಕ ಭಸ್ಮವನ್ನು ವಿಶೇಷ ಸೇರಿಸಿ ತಯಾರಿಸಿದ ಲಕ್ಷ್ಮಿ ವಿಲಾಸ ರಸವನ್ನು ಕೊಡಬೇಕು.
 • ನಿತ್ಯಾನಂದ ರಸವು ಶ್ಲೀಪದ ಜ್ವರಕ್ಕೊಂದು ಉತ್ತಮ ಔಷಧಿ.
 • ಮಲ್ಲಸಿಂಧೂರವನ್ನು ಕೊಡುವುದರಿಂದ ಜ್ವರ, ಕಫ ಆಮದೋಷದಿಂದಾದ ಬಾವು ಕೂಡ ಕಡಿಮೆ ಆಗುವವು.

೩೭. ಉಪದಂಶ (Syphilis)

ಇದು ಗುಹ್ಯ-ಲೈಂಗಿಕ ರೋಗದಲ್ಲಿ ಬರುವುದು. ಇದು ಮಾನವನ ಅಂಗಗಳಿಗೆ ಒಬ್ಬರೊಡನೆ ಇನ್ನೊಬ್ಬರು ಲೈಂಗಿಕ ಸಂಪರ್ಕ ಮಾಡಿದಾಗ ಇವರೀರ್ವರಲ್ಲಿ ಯಾವನಾದವನೊಬ್ಬ ಈ ರೋಗದಿಂದ ಬಳಲುತ್ತಿದ್ದರೆ ಅವನು ಇನ್ನೊಬ್ಬನಿಗೆ ಅಂಟಿಸುವನು. ಇದು ಲೈಂಗಿಕ ಸಂಪರ್ಕ ಮಾಧ್ಯಮದಿಂದ ಅಂಟುವ ರೋಗ. ಈ ರೋಗಿಗಳ ಬಗ್ಗೆ ಭಾವಮಿಶ್ರನು ೬ ನೇ ಶತಮಾನದಲ್ಲಿಯೇ ಹೇಳಿದ್ದಾನೆ. ಕಲ್ಯಾಣಕಾರಕದಲ್ಲೂ ವಿವರಣೆ ಇದೆ. (ಕಲ್ಯಾಣಕಾರಕ ಅ.೧೪, ಶ್ಲೋಕ, ೧-೭)

ಇತ್ತೀಚೆಗೆ ಈ ರೋಗಗಳು ನವನಾಗರಿಕತೆಯ ಶಾಪವೆನಿಸಿವೆ. ಬೆಳೆಯುತ್ತಿರುವ ಫ್ಯಾಶನ್‌ಗಳು, ಚಲನಚಿತ್ರದಲ್ಲಿನ ಪ್ರಚೋದನಾತ್ಮಕ ದೃಶ್ಯಗಳು, ಭಿತ್ತಿ ಚಿತ್ರಗಳು, ದೂರದರ್ಶನ, ವಿಕೃತ ಲೈಂಗಿಕ ಸಾಹಿತ್ಯ, ವಿಡಿಯೋ ವಿಕೃತ ಚಿತ್ರಗಳು, ಕ್ಯಾಬರೆ ನೃತ್ಯ, ಚಟಗಳು ಮುಂತಾದ ಕಾರಣಗಳಿಂದ ಕಾಮದಾಹ ಹೆಚ್ಚಿ ಯುವಕ-ಯುವತಿಯರು ಲೈಂಗಿಕ ಸುಖ ಬಯಸಿ ಇಂತಹ ರೋಗಗಳಿಗೆ ಬಲಿಯಾಗುತ್ತಾರೆ. ಪೂಯಮೇಹ, ಉಪದಂಶ, ಏಡ್ಸಗಳೆಲ್ಲ ಇಂತಹ ರೋಗಗಳೇ.

ಟ್ರಿಪೋನಿಮಾ ಪೆಲಿಡಮ ಎಂಬ ಸೂಕ್ಷ್ಮಾಣುವಿನಿಂದ ಹರಡುವ ಈ ಮಹಾಗುಹ್ಯ ರೋಗವು ಗತಿಯಲ್ಲಿ ತುಂಬ ಮಂದವಾಗಿದ್ದು ದೇಹದಲ್ಲಿ ಅದು ಯಾವುದೇ ವಿಕಾರಗಳನ್ನೂ ತೋರದೆ ಉಳಿಯುವುದರಿಂದ ರೋಗದ ಪತ್ತೆಯು ಬೇಗನೆ ಆಗುವುದಿಲ್ಲ. ಇದು ತನ್ನ ವಿನಾಶಕಾರಕ ಕ್ರಿಯೆಗಳಿಂದ ದೇಹದ ಎಲ್ಲ ಅಂಗಾಂಗಗಳನ್ನೂ ನಾಶಪಡಿಸಬಹುದು. ಒಮ್ಮೊಮ್ಮೆ ರೋಗವು ತನ್ನ ಲಕ್ಷಣಗಳನ್ನು ತೋರಬಹುದು.

ರೋಗ ಲಕ್ಷಣಗಳು: ಮೊಟ್ಟಮೊದಲಿಗೆ ಜನನೇಂದ್ರಿಯಗಳಲ್ಲಿ ಒಂದು ಕಂದುಬಣ್ಣದ ವ್ರಣವಾಗಲು ೧೫-೨೦ ದಿವಸಗಳ ಅವಧಿ ತೆಗೆದುಕೊಳ್ಳುವುದು. ಇದರಲ್ಲಿ ಕೀವಿನ ಬದಲಾಗಿ ನೀರಿನಂತಹ ಸ್ರಾವ ಬರುವುದು. ಅಲ್ಲದೆ ಅದು ಸ್ಪರ್ಶಕ್ಕೆ ಬಿರುಸಾಗಿರುವುದು. (Hard Chancre) ಇದರಿಂದ ಬರುವ ಸ್ರಾವದಲ್ಲಿ ಅಸಂಖ್ಯ ರೋಗಾಣುಗಳಿರುವುವು. ಆದರೆ ನೋವು ಇರುವುದಿಲ್ಲ. ಗಾಯವು ಒಣಗಲು ನಾಲ್ಕಾರು ವಾರಗಳು ಬೇಕಾಗುವವು. ನಂತರ ಹುಣ್ಣು ಪೂರ್ತಿಯಾಗಿ ಮಾಯ್ದು ಹೋಗಿ ಕಲೆ ಮಾತ್ರ ಬಿಳಿಯಾಗಿರುವುದು. ಇದು ಪುರುಷರಿಗೆ ಜನನೇಂದ್ರಿಯ ಮೇಲಾದರೆ ಸ್ತ್ರೀಗೆ ಯೋನಿಯ ಹೊರದುಟಿ ಅಥವಾ ಒಳದುಟಿಯ ಮೇಲಾಗುವುದು. ಕ್ವಚಿತ್ತಾಗಿ ಮೂತ್ರದ್ವಾರ, ಮೂತ್ರನಾಳ, ಯೋನಿ ಮಾರ್ಗ, ಗರ್ಭಕಂಠದಲ್ಲಿ ತೋರಬಹುದು. ಗರ್ಭಿಣಿಯರಲ್ಲಿ ಈ ಹುಣ್ಣು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವುದು. ಈ ಸ್ಥಳವಲ್ಲದೇ ತುಟಿ, ನಾಲಗೆ, ಗಂಟಲು, ಕೈ ಬೆರಳುಗಳು, ಕಣ್ಣಿನ ರೆಪ್ಪೆ, ಗುದಮಾರ್ಗ, ಗುದದ್ವಾರದಲ್ಲಿಯೂ ವ್ರಣವು ಕಾಣಿಸಿಕೊಳ್ಳಬಹುದು. ವ್ರಣ ರೋಪಣ ಚಿಕಿತ್ಸೆಯೊಡನೆ ಜಲೂಕಾಗಳಿಂದ ರಕ್ತಮೋಕ್ಷಣ ಮಾಡಿಸಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

೨. ೨ನೇ ಹಂತದಲ್ಲಿ ರೋಗಾಣುಗಳ ದೇಹದ ತುಂಬ ತಮ್ಮ ಚಟುವಟಿಕೆಯನ್ನು ನಡೆಸುತ್ತವೆ. ರೋಗಿಗೆ ತಲೆಶೂಲೆ – ಮೈಕೈಗಳ ನೋವು, ಅರುಚಿ ಹಾಗೂ ಬಾಯಿ ಒಣಗುವಿಕೆ ಇತ್ಯಾದಿ ತೊಂದರೆಗಳು ಪ್ರಾರಂಭವಾಗಿ ಸತತವಾಗಿ ಅಲ್ಪಜ್ವರವೂ ಬರುವುದು. ಅವು ಗಂಟಲನ್ನಾವರಿಸಿದರೆ ಗಂಟಲ ನೋವು, ಗಡಸು ಧ್ವನಿಗಳುಂಟಾಗುವುವು. ತಲೆ ಕೂದಲು ಯಾವ ಕಾರಣವಿಲ್ಲದೆ ಉದರಲಾರಂಭಿಸುವುವು. ಚರ್ಮದಲ್ಲಿ ನಸುಗೆಂಪಾದ ಕಲೆಗಳು, ಬೊಕ್ಕೆಗಳು, ಗಾದರಿ ಹಾಗೂ ಕೀವು ತುಂಬಿದ ಬೊಕ್ಕೆಗಳು ಕಂಡುಬರುವುವು. ಒಳದುಟಿ, ಗಲ್ಲ, ಗಂಟಲು, ನಾಲಗೆ, ಮೂಗು, ಯೋನಿ, ಗುದದ್ವಾರಗಳಲ್ಲೂ ಈ ವಿಕಾರಗಳು ಕಂಡುಬರುವುವು. ದೇಹದ ರಸಗ್ರಂಥಿಗಳಲ್ಲಿ ಊದಿಕೊಂಡು ಬಿರುಸಾಗಿ ಗಂಟಿನಂತೆ ಹತ್ತುವುವು. ಕಣ್ಣು ಬೇನೆ, ಯಕೃತ್, ಬಾವು, ಸಂದು ನೋವು, ಎಲುಬುಗಳ ಬೇನೆ, ಮೆದುಳಿನ ಉರಿ – ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಒಮ್ಮೊಮ್ಮೆ ಈ ಹಂತದಲ್ಲಿ ರೋಗ ಲಕ್ಷಣಗಳೆಲ್ಲ ಮಾಯವಾಗುವ ಸಾಧ್ಯತೆಯೂ ಇದೆ. ಆಗ ರೋಗಿಯು ರೋಗದಿಂದ ಮುಕ್ತನಾದೆನೆಂದು ಸಂತೋಷ ಪಡಬಹುದಾದರೂ ಮುಂದೆ ಈ ರೋಗ ಲಕ್ಷಣಗಳು ಒಮ್ಮೆಲೇ ಧುತ್ತೆಂದು ಭೀಕರ ಸ್ವರೂಪದಲ್ಲಿ ಕಾಣಿಸಿಕೊಳ್ಳಬಹುದು.

೩. ಮೂರನೆಯ ಹಂತದಲ್ಲಿ ರೋಗವಂಟಿದ ಸುಮಾರು ೧೦ ವರ್ಷಗಳ ನಂತರ ತೃತೀಯ ಹಂತವು ಪ್ರಾರಂಭವಾಗಿ ‘ಗಮ್ಮಾ’ ಎಂದು ಗುರುತಿಸಲ್ಪಡುತ್ತದೆ. ಇದು ಸಂಖ್ಯೆಯಲ್ಲಿ ೧ ರಿಂದ ೬ಕ್ಕೆ ಏರಬಹುದು. ಗಾತ್ರದಲ್ಲಿ ಎಳ್ಳಿನಷ್ಟು ಚಿಕ್ಕವಾಗಿಯೂ ಕೆಲವು ಸೆಂಟಿಮೀಟರಿನಷ್ಟು ದೊಡ್ಡವಾಗಿಯೂ ಇರಬಹುದು. ಇದರಿಂದ ಗರ್ಭಿಣಿಯರಲ್ಲಿ ಗರ್ಭಪಾತ, ಮಗು ಆರೋಗ್ಯಕರವಾಗಿ ಬೆಳೆಯದಿರುವುದು, ಗರ್ಭದಲ್ಲಿಯೇ ಮಗುವಿನ ಸಾವು, ಸತ್ತು ಹುಟ್ಟುವುದು, ಹುಟ್ಟಿದರೂ ಮುದರಿದ ಚರ್ಮ, ಕುಸಿದ ತಲೆ, ಡೊಳ್ಳು ಹೊಟ್ಟೆ, ಚಪ್ಪಟೆ ಮೂರು, ಚರ್ಮದ ಮೇಲೆ ಗುಳ್ಳೆಗಳು, ಯಕೃತ್ ಪ್ಲೀಹಗಳು ದೊಡ್ಡದಾಗಿರುವ ವಿಕಾರಗಳನ್ನು ಹೊಂದಿರುವುವು.

ಅಸಾಧ್ಯ ಲಕ್ಷಣ : ಉಪದಂಶವು ತೀವ್ರ ಸ್ವರೂಪದ್ದಾಗಿದ್ದು ರೋಗಿಯು ಅತ್ಯಂತ ಕ್ಷೀಣನಾಗಿದ್ದರೆ ಜ್ವರ, ದಾಹ, ಶ್ವಾಸ, ನೀರಡಿಕೆ, ಅತಿಸಾರ, ಅರುಚಿ, ಉದ್ಗಾರ ಪೀಡಿತ, ಶೂನ್ಯತೆ ವ್ಯಾಪಿಸಿದ ರೋಗಿಯು ಚಿಕಿತ್ಸೆಗೆ ಪ್ರತಿಕ್ರಿಯಿಸುವುದಿಲ್ಲವೆಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.

ಚಿಕಿತ್ಸೆ: ಅಪಾಮಾರ್ಗ ಎಲೆಗಳ ರಸವನ್ನು ಸ್ವಲ್ಪ ಬಿಸಿಲಿಗೆ ಹಿಡಿದು ಒಣಗಿದ ಬಳಿಕ ಅದಕ್ಕೆ ಸ್ವಲ್ಪ ಅಫೀಮನ್ನು ಸೇರಿಸಿ ಮುಲಾಮಿನಂತೆ ಮಾಡಿಕೊಂಡು ಅದನ್ನು ಉಪದಂಶದ ಗುಳ್ಳಗಳಿಗೆ ಹಚ್ಚಬೇಕು.

 • ಚೋಪಚಿನ್ಯಾದಿ ಚೂರ್ಣ, ಜೋಪಚಿನ್ನಾದಿ ಅವಲೇಹಗಳು ಉಪದಂಶಕ್ಕೆ ತುಂಬ ಒಳ್ಳೆ ಔಷಧಿಗಳು.
 • ಸಾರಿವಾದ್ಯಲೇಹ್ಯ, ಸಾರಿವಾದ್ಯಾಸವಗಳು ಕೂಡ ಉಪದಂಶ ನಿವಾರಣೆಗೆ, ರಕ್ತಶುದ್ಧಿಗೆ ತುಂಬ ಪರಿಣಾಮಕಾರಿ ಔಷಧಿಗಳೆನಿಸಿವೆ.
 • ರಸಚಂದ್ರಾದಿ ಯೋಗ, ಹಿಂಗುಲಾಮೃತ ಯೋಗಗಳು ಕೂಡಿ ಉತ್ತಮ ಔಷಧಗಳೆನಿಸಿವೆ. ಇದನ್ನು ಅವಶ್ಯಕತೆಗೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕಾಗುವುದು.