೩೦. ರಾಜಯಕ್ಷ್ಮ (Tuberculosis)

ಸರ್ವ ರೋಗಗಳಿಗೂ ಇದು ಅಧಿಪತಿಯಾದ್ದರಿಂದ ಇದಕ್ಕೆ ‘ರಾಜಯಕ್ಷ್ಮ’ ಎನ್ನುವರು. ‘ಕ್ಷಯ ರೋಗ’ ‘ಶೋಷ ರೋಗ’ ಎಂತಲು ಕರೆಯುತ್ತಾರೆ. ಇದರಲ್ಲಿ ಮುಖ್ಯವಾಗಿ ಅನುಲೋಮಕ್ಷಯ ಹಾಗೂ ವಿಲೋಮಕ್ಷಯಗಳೆಂದು ಎರಡು ಭೇದಗಳನ್ನು ಮಾಡಿದ್ದಾರೆ. ಅನುಲೋಮದಲ್ಲಿ ಕಫವನ್ನೇ ಪ್ರಧಾನವಾಗಿಟ್ಟುಕೊಂಡು ದೋಷಗಳು ರಸವಾಗಿ ಸ್ರೋತಸ್ಸುಗಳನ್ನು ಅಡ್ಡ ಗಟ್ಟುವುದರಿಂದ ಮುಂದಿನ ಧಾತುಗಳಾದ ರಕ್ತ ಮಾಂಸಾದಿಗಳಿಗೆ ಸರಿಯಾಗಿ ಪೋಷಣೆ ದೊರಕದೆ ಅವು ಕ್ರಮೇಣ ಕ್ಷಯಿಸುತ್ತ ಹೋಗುವುವು. ಅತಿ ವ್ಯವಾಯ(ಸಂಭೋಗ)ದಿಂದ ಶುಕ್ರಧಾತು ಉತ್ಪತ್ತಿ ಆಗುವುದಕ್ಕೆ ಮೊದಲೇ ವ್ಯವಾಯಕ್ಕೆ ನಿರತವಾಗುವುದರಿಂದ ಮಜ್ಜಾಧಾತು ನಷ್ಟವಾಗುವುದು. ಹೀಗೆ ಹಿಂದೆ ಹಿಂದಿನ ಧಾತುಗಳು ಕ್ರಮವಾಗಿ ಕಡಿಮೆ ಆಗುವುದರಿಂದ ಮನುಷ್ಯನು ಒಣಗುತ್ತ ಬರುವನು.

ಈ ರೋಗ ಅನಾದಿಕಾಲದಿಂದಲೂ ವಿಶ್ವದಲ್ಲೆಲ್ಲ ಮನೆ ಮಾಡಿರುವುದು. ಈ ರೋಗವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕೆಂದು ಜಗತ್ತಿನಾದ್ಯಂತ ವಿವಿಧ ವೈದ್ಯಕೀಯ ಶಾಸ್ತ್ರಗಳು ಸಂಶೋಧನೆ ಮಾಡುತ್ತ ಬಂದಿವೆಯಾದರೂ ರೋಗವಿನ್ನೂ ಪೂರ್ಣ ಉಚ್ಚಾಟನೆಯಾಗಿಲ್ಲ.

ಕ್ಷಯರೋಗವು ಸಾಮಾನ್ಯವಾಗಿ ಬಡವರು, ಅಶಕ್ತರು, ಮಕ್ಕಳು, ವೃದ್ಧರು, ಕೊಳಚೆ ವಾಸಿಗಳು, ಅನುವಂಶಿಕ ಇತಿಹಾಸ ಇರುವವರು, ಮೇಲಿಂದ ಮೇಲೆ ಸಾಂಕರ್ಯ ರೋಗಗಳಿಗೆ ಬಲಿಯಾಗುತ್ತಿರುವವರು, ಧೂಮಪಾನಿಗಳು ಹಾಗೂ ಕಾರಖಾನೆಗಳಲ್ಲಿ ಕೆಲಸ ಮಾಡುವವರು. ಈ ಮೊದಲಾದವರಿಗೆ ವಿಶೇಷವಾಗಿ ಅಂಟುವುದುಂಟು. ನಮ್ಮ ದೇಶದಲ್ಲಿ ಈ ರೋಗದ ಮೂಲೋಚ್ಛಾಟನೆಯಾಗಬೇಕಾದರೆ ಒಳ್ಳೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ತಳಹದಿಯು ಪ್ರತಿಯೊಬ್ಬ ನಾಗರಿಕನಿಗೆ ದೊರಕಬೇಕು.

ಪೂರ್ವ ರೂಪಗಳು: ಸ್ವಲ್ಪ ಶ್ರಮವಾದರೂ ದಮ್ಮು ಬಂದಂತಾಗುವುದು, ಮೈ-ಕೈ ನೋವು, ಕಫವನ್ನು ಕೇಕರಿಸುತ್ತಿರುವಿಕೆ, ಗಂಟಲು ಒಣಗುವುದು, ವಾಂತಿ, ಅಗ್ನಿಮಾಂದ್ಯ, ಮದ, ನೆಗಡಿ, ಅತಿ ನಿದ್ರೆ, ರಕ್ತಹೀನತೆಯಿಂದ ಕಣ್ಣುಗಳು ಬಿಳಿಚುವಿಕೆ, ವ್ಯವಾಯ(ಸಂಭೋಗ) ದಲ್ಲಿ ಅತಿಯಾದ ಆಸಕ್ತಿ – ಈ ಲಕ್ಷಣಗಳು ಕಂಡುಬರುವುವು.

(ಕಲ್ಯಾಣಕಾರಕ೧೮ಪು.೪೪೪೪೫೨)

ಗಟ್ಟಿಯಾದ ಕಫ ಬೀಳುವುದು, ಆಯಾಸ, ಸರ್ವಾಂಗಗಳಲ್ಲಿ ಶಿಥಿಲತೆ, ವಾಂತಿ, ಗಂಟಲು ಒಣಗುವುದು, ಅಗ್ನಿಮಾಂದ್ಯ, ಮದ, ಕಣ್ಣುಗಳು ಬೆಳ್ಳಗಾಗುವುವು, ಹೆಚ್ಚು ನಿದ್ರೆ, ನೆಗಡಿ ಕೆಲ ದುಷ್ಟ ಸ್ವಪ್ನಗಳು ಬೀಳುವುದು ಇತ್ಯಾದಿ ಲಕ್ಷಣಗಳು ರಾಜಯಕ್ಷ್ಮದ ಪೂರ್ವ ರೂಪಿಗಳಾಗಿ ಕಂಡುಬರುವುವು ಎಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.

ಲಕ್ಷಣಗಳು

೧. ವಾತದ ಉದ್ರೇಕದಿಂದ ಸ್ವರನಷ್ಟತೆ ಇಲ್ಲವೆ ಖಿನ್ನತೆ, ಎರಡೂ ಪಕ್ಕಡಿಗಳು ಒಳಸೇರಿದಂತಾಗುವುದು. ಕುತ್ತಿಗೆ ಭಾಗ ಸಂಕೋಚಗೊಳ್ಳುವಿಕೆಯ ಲಕ್ಷಣಗಳು ಕಂಡುಬರುತ್ತವೆ.

೨. ಪಿತ್ತ ಪ್ರಕೋಪದಿಂದ ಜ್ವರ, ದಾಹ, ರಕ್ತಸ್ರಾವ, ಅತಿಸಾರ – ಈ ಮೊದಲಾದ ಲಕ್ಷಣಗಳು ಕಂಡುಬರುತ್ತವೆ.

೩. ಕಫ ಪ್ರಕೋಪದಿಂದ ಅರುಚಿ, ಕೆಮ್ಮು, ಗಂಟಲು ಕೆರೆತ ಹಾಗು ತಲೆಭಾರ ಈ ಲಕ್ಷಣಗಳು ಕಂಡುಬರುತ್ತವೆ. (ಉಗ್ರದಿತ್ಯಾಚಾರ್ಯ)

ಕ್ಷಯರೋಗ ಪ್ರಾರಂಭದಲ್ಲಿ ಕೆಮ್ಮು ತೀವ್ರ ಸ್ವರೂಪದ್ದಾಗಿರುವುದಿಲ್ಲ. ಅಲ್ಲದೆ ಕಫವು ಕೂಡು ಹೆಚ್ಚಿಗೆ ಬರುವುದಿಲ್ಲ. ರಾತ್ರಿ ಮಲಗಿದಾಗ, ಧೂಮ್ರಸೇವನೆಯಾದಾಗ, ಧೂಳುಬಂದಾಗ ಕೆಮ್ಮು ವಿಶೇಷವಾಗಿ ಬರುವುದು. ರೋಗವು ಬೆಳೆದ ಮೇಲೆ ಕೆಮ್ಮು ಸದಾ ಕಾಣಿಸಿಕೊಳ್ಳಲಾರಂಭಿಸುತ್ತದೆ. ಹಾಗೂ ತುಂಬ ತೊಂದರೆಯೊಡನೆ ಕಫ ಹೊರ ಬರುವವರೆಗೆ ನಿಲ್ಲುವುದಿಲ್ಲ. ಜ್ವರ ಹಾಗೂ ಅಶಕ್ತತನಗಳು ಹೆಚ್ಚುತ್ತ ಹೋಗುತ್ತವೆ.

ರೋಗನಿದಾನಕ್ಕಾಗಿ ರೋಗಿಯ ತೂಕ, ಜ್ವರ, ಕ್ಷಕಿರಣ, ರಕ್ತ ಹಾಗೂ ಉಗುಳಿನ ಪರೀಕ್ಷೆಗಳು ಸಹಾಯವಾಗುತ್ತವೆ. ಶ್ವಾಸಕೋಶದ ಕ್ಷಕಿರಣದಿಂದ ಈ ರೋಗದ ಹಂತವನ್ನು ಗುರುತಿಸಬಹುದು. ಟ್ಯೂಬರ್‌ಕೂಲಿನ್ ಪರೀಕ್ಷೆಯಿಂದ ಚಿಕ್ಕಮಕ್ಕಳಲ್ಲಿ ಬಹುಬೇಗನೆ ಕ್ಷಯ ರೋಗದ ಪತ್ತೆ ಮಾಡಬಹುದು. ಇವೆಲ್ಲವುಗಳ ಸಹಾಯದಿಂದ ರೋಗವನ್ನು ಬೇಗನೆ ಪತ್ತೆ ಹಚ್ಚಬಹುದು.

ಅಸಾಧ್ಯ ಲಕ್ಷಣ: ಕ್ಷೀಣ ರೋಗಿ ಊಟದಲ್ಲಿ ಬಹಳ ಆಸಕ್ತಿ ತೋರಿದರೂ ಮತ್ತೆ ಕ್ಷೀಣವಾಗುವುದು, ಕಾಲು-ಹೊಟ್ಟೆ- ಜನನೇಂದ್ರಿಯಗಳಲ್ಲಿ ಬಾವು, ಅತಿಸಾರ ಕಡಿಮೆ ಆಗಿದರುವ ರೋಗಿ ಗುಣವಾಗಲಾರನೆಂದು ತಿಳಿಯಬೇಕು.

ಚಿಕಿತ್ಸೆ: ರೋಗಿಯು ಬಲಿಷ್ಠನಾಗಿದ್ದು ದೋಷಗಳು ಹೆಚ್ಚಿಗಿದ್ದರೆ ಅವನ ಬಲ ಕಡಿಮೆ ಆಗದಷ್ಟು ಮಿತವಾಗಿ ಲಘು ಪಂಚಕರ್ಮವಿಧಾನ ಮಾಡಬೇಕು. ಸ್ನೇಹನ-ಸ್ವೇದನ-ವಮನ – ಶಿರೋವಿರೇಚನ ಮೃದು, ವಿರೇಚನ ಮಾಡಿಸಬೇಕು. ನಂತರ ರೋಗಿಗೆ ಬೃಂಹಣ, ದೀಪನ, ಹೃದ್ಯ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಕೊಡಬೇಕು. ಒಳ್ಳೇ ಹಣ್ಣು ಹಂಪಲು, ಹಾಲು, ತುಪ್ಪ, ಬೆಣ್ಣೆ, ಸಿಹಿ ಪದಾರ್ಥಗಳು ಮೊದಲಾದ ಮೂಧರಗುಣಯುಕ್ತ ಪೌಷ್ಟಿಕಾಹಾರಗಳನ್ನು ಕೊಡಬೇಕು.

ತ್ರಿಕಟು, ಜೇಷ್ಠಮಧು, ಚವ್ಯ, ವಾಯುವಿಡಂಗ – ಇವುಗಳ ಸಮಭಾಗ ಚೂರ್ಣವನ್ನು ತುಪ್ಪ ಇಲ್ಲವೇ ಬೆಲ್ಲದೊಡನೆ ಚೆನ್ನಾಗಿ ಕಲಿಸಿ ನಿತ್ಯ ಬೆಳಿಗ್ಗೆ ಕೊಡಬೇಕು. ಇಲ್ಲವೆ ದ್ರಾಕ್ಷಿ, ಹಿಪ್ಪಲಿಗಳನ್ನು ಬೆಲ್ಲ ಇಲ್ಲವೆ ತುಪ್ಪದೊಡನೆ ತಿಂದು ಮೇಲೆ ಹಾಲನ್ನು ಕುಡಿಯಬೇಕು.

ತಿಲಾದಿಯೋಗ, ಕ್ಷಯನಾಶಕ ಯೋಗ (ಯೋಗಾಂತರ) ಅಡಸಾಲ ಘೃತ, ಕ್ಷಯಾನಾಶಕ ಘೃತ, ಮಹಾಕ್ಷಯರೋಗಾಂತಕ ಯೋಗ, ಬಲ್ಲಾತಕಾರಿ, ಘೃತ, ಶಬರಾದಿ ಘೃತ, ಕ್ಷಯರೋಗನಾಶಕ ಮೊಸರು-ಇತ್ಯಾದಿ ಯೋಗಗಳನ್ನು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ.

ಬಲಾದಿ ಘೃತ, ಚ್ಯವನಪ್ರಾಶ ಅಮೃತಪ್ರಾಶ ಘೃತ, ಮುಕ್ತಾ ಪಂಚಾಮೃತ, ವಸಂತ ಮಾಲತಿ ರಸ, ಮಹಾಲಕ್ಷ್ಮಿ ವಿಲಾಸ ರಸ, ಮಹಾಮೃಗಾಂಕ ರಸ, ಹೇಮಗರ್ಭರಸ, ದ್ರಾಕ್ಷಾರಿಷ್ಟ, ಏಲಾದಿ ವಟಿ, ವಾಸಕಾವಲೇಹ – ಮೊದಲಾದ ಯೋಗಗಳನ್ನು ಅವಶ್ಯಕತೆಗೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು.

ಪಥ್ಯ: ಸಾಧ್ಯವಿದ್ದಷ್ಟು ಬೆಳಿಗ್ಗೆ ಹಾಗೂ ರಾತ್ರಿ ತಾಜಾ ಆಡಿನ ಹಾಲನ್ನು ಕುಡಿಯಲು ಕೊಡಬೇಕು. ಈ ಮೊದಲು ಹೇಳಿದಂತೆ ಪೌಷ್ಟಿಕಾಹಾರ ಕೊಡಬೇಕಾಗುವುದು. ಸೌಮ್ಯ ವ್ಯಾಯಾಮ ಇಲ್ಲವೆ ಚಂಕ್ರಮಣ, ಮನಸ್ಸನ್ನು ಸದಾ ಉಲ್ಲಸಿತವಾಗಿಟ್ಟುಕೊಳ್ಳಬೇಕು. ಸುಲಭವಾಗಿ ಪಚನವಾಗುವ ತರಕಾರಿಗಳು, ತೊಗರಿ-ಹೆಸರು ಬೇಳೆಯ ಕಟ್ಟುಗಳು, ಮೊಲಕೆಯೊಡೆದ ಧಾನ್ಯ, ಅಲ್ಪ ಮಸಾಲೆಯುಕ್ತ ಪದಾರ್ಥಗಳು, ಭಜನೆ, ಉತ್ತಮ ಆಟಪಾಠಗಳು, ಧ್ಯಾನ ಹಿತಕರವೆನಿಸಿವೆ. ಹಗಲುನಿದ್ರೆ, ಆಯಾಸ, ಕ್ರೋಧ, ಕಾಮಭೋಗ, ಕಾಮೋದ್ಧೀಪಕ ಮಾತುಗಳು- ಅದರ ಸಾಹಿತ್ಯ ಓದುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಬಿಡಬೇಕು.

೩೧. ಹೃದಯ ರೋಗಗಳು

ಹೃದಯವು ಎದೆಯ ಗುಹೆಯಲ್ಲಿ ಸೇರಿರುವ ಒಂದು ಮುಖ್ಯ ಅಂಗ. ಇದು ರಸ, ರಕ್ತಗಳ ವಿಶ್ಲೇಷಣೆಗಳಿಗೆ ಅತ್ಯವಶ್ಯವಾದ ಅವಯವವಾಗಿರುವುರಿಂದ ಇದಕ್ಕೆ ‘ರಸಸ್ಥಾನ’ ಎಂದು ಹೇಳಲಾಗಿದೆ. ಇದರ ಕಾರ್ಯವು ಸ್ವಯಂ ಪ್ರೇರಿತವಾಗಿದ್ದರೂ ಪ್ರಾಣದ ಅಧೀನವಾಗಿರುವ ವ್ಯಾನವಾಯುವು ಇದನ್ನು ನಿಯಂತ್ರಿಸುತ್ತದೆ. ಸಪ್ತ ಧಾತುಗಳ ಸಾರಸ್ವರೂಪವಾದ ಓಜಸ್ಸು ಇಲ್ಲಿಯೇ ಇರುವುದರಿಂದ ಜೀವನ ವ್ಯಾಪಾರಕ್ಕೆ ಚೈತನ್ಯ ನೀಡುವುದು. ಇಂತಹದೊಂದು ಮಹತ್ವದ ಅಂಗವಾದ ಈ ಹೃದಯಕ್ಕೆ ಏನದರೂ ಆದರೆ ಅದು ಅಷ್ಟೇ ತೊಂದರೆದಾಯಕವಾಗಿರುವುದು, ಕೆಲ ವಿಕಾರಗಳಂತೂ ಪ್ರಾಣ ಘಾತಕವಿರುವುವು.

ಕಾರಣಗಳು: ಅತ್ಯುಷ್ಣಕಾರಕ ಆಹಾರ ಸೇವನೆ, ಮಧುರ ರಸ ಹೊರತಾಗಿ ಇನ್ನುಳಿದ ರಸಗಳನ್ನು ವಿಶೇಷವಾಗಿ ಸೇವಿಸುವುದು, ಭಾರವಾದ ಊಟ, ಮೇಲಿಂದ ಮೇಲೆ ಉಪವಾಸ ಮಾಡುವುದು, ಅತಿ ವ್ಯಾಯಾಮ ಇಲ್ಲವೆ ಭಾರವಾದ ಕೆಲಸ ಮಾಡುವುದು, ಸಂಪೂರ್ಣ ವಿಶ್ರಾಂತಿಯುತ ಜೀವನಕ್ರಮ, ಅತಿಯಾದ ನಿದ್ರೆ, ವೇಗಧರಣೆ, ಅತಿಯಾದ ಮದ್ಯಪಾನ, ತಂಬಾಕು ಸೇವನೆ, ಮನೋ ಉದ್ವೇಗ, ಅಘಾತಗಳು, ಚಿಂತೆ, ಭಯ ಮುಂತಾದ ಕಾರಣಗಳಿಂದ ಹೃದಯ ರೋಗಗಳು ಬರುವುವು.

ಹೃದಯ ರೋಗಕ್ಕೆ ಮಗು ಗರ್ಭದಲ್ಲಿ ಬೆಳೆಯುವಾಗಲೇ ಆಗುವ ವಿಕೃತಿ, ಸಂಧಿವಾತ ರೋಗವನ್ನು ಅಲಕ್ಷಿಸಿದಾಗ ಆಗುವ ಹೃದಯ ರೋಗ, ಕವಾಟ ರೋಗಗಳು, ಉಪದಂಶ, ಅಧಿಕ ರಕ್ತದೊತ್ತಡ, ರಕ್ತ ಪರಿಚಲನೆ ಸರಿಯಾಗಿ ಆಗದಿದ್ದರೆ, ಅತಿಯಾದ ರಕ್ತಹೀನತೆ, ಜೀವಸತ್ವನ್ಯೂನತೆ, ಅತಿ ಮದ್ಯಪಾನ, ಥೈರಾಯ್ಡು ಗ್ರಂಥಿ ವಿಕಾರ, ದೀರ್ಘಕಾಲದ ಕೆಮ್ಮು, ವೃದ್ಧಾಪ್ಯ, ಹೃದಯದ ಇತರ ರೋಗಗಳು – ಅತಿ ಸ್ಥೌಲ್ಯತೆ ಇವೆಲ್ಲ ಹೃದಯ ರೋಗಕ್ಕೆ ಕಾರಣವಾಗುತ್ತವೆ. ಹೃದಯವು ಅಶಕ್ತಗೊಂಡರೆ ಸ್ವಲ್ಪ ಶ್ರಮಪಟ್ಟರೂ ಏದುಸಿರು ಬಿಡಲಾರಂಭಿಸುತ್ತಾನೆ. ಬರಬರುತ್ತ ರೋಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವಾಗಲೂ ಉಬ್ಬುಸ ಬರುವುದು ಹಾಸಿಗೆಯಲ್ಲಿ ನೇರವಾಗಿ ಮಲಗಿದರೂ ಉಸಿರಾಡಿಸಲು ಸಾಧ್ಯವಾಗದೇ ಎದ್ದು ಕುಳಿತು ಕೊಳ್ಳಬೇಕಾಗುತ್ತದೆ. ಇದು ಹೃದಯದ ಸೋಲುವಿಕೆಯನ್ನು ತೋರಿಸುತ್ತದೆ.

ಈ ಹೃದಯ ರೋಗಗಳಲ್ಲಿ ಮುಖ್ಯವಾಗಿ ರಸವಹಸ್ರೋತೋದುಷ್ಟಿ ಹಾಗೂ ಪ್ರಾಣವಹ ಸ್ರೋತೊದುಷ್ಟಿಗಳನ್ನು ಕಾಣಬಹುದು.

ಹೃದಯರೋಗ ಪ್ರಕಾರಗಳು

. ವಾತಜ ಹೃದಯ ರೋಗ: ಇದರಲ್ಲಿ ರೋಗಿಗೆ ಅಂಗಾಂಗ ನಡುಕ, ಶರೀರದ ಸ್ನಾಯು ಪೇಶಿಗಳಲ್ಲಿ ಬಿಗಿತ ಹಾಗೂ ನೋವು, ಕೈ-ಕಾಲುಗಳು ಸೆಟೆದುಕೊಳ್ಳುವುದು, ಮೂರ್ಛೆ, ಹೃದಯ ಪ್ರದೇಶದಲ್ಲಿ ಖಾಲಿಯಾಗಿರುವಂತೆ ಅನಿಸಿಕೊಳ್ಳುವುದು, ಅತಿಯಾದ ನೋವು, ಎದೆಯಲ್ಲಿ ಕಡಗೋಲಿನಂತೆ ಕಡಿದಂತೆ – ಸೀಳಿದಂತೆ- ಎಳೆದಾಡಿದಂತೆ ಚುಚ್ಚುವಿಕೆ ಹಾಗೂ ನೋವುಗಳು ಕಾಣಿಸಿಕೊಳ್ಳುವುದು.

. ಪಿತ್ತಜ ಹೃದಯರೋಗ: ಪಿತ್ತ ಪ್ರಕೋಪಕಾರಿಗಳಾದ ಆಹಾರ-ವಿಹಾರಗಳಿಂದ ಈ ವಿಕಾರ ಹುಟ್ಟಿಕೊಳ್ಳುವುದು. ಹೃದಯ ಪ್ರದೇಶದಲ್ಲಿ ಬೆಂಕಿ ಹತ್ತಿದಂತೆ, ಹೊಗೆಯಾಡಿದಂತೆ ಅನಿಸುವಿಕೆ, ಉರಿ, ಬಾಯಿ, ಉರಿ, ಹುಳಿ ಹಾಗೂ ಕಹಿ ರಸಗಳುಂಟಾಗುವುದು, ಇಂದ್ರಿಯಗಳಲ್ಲಿ ನಿರಾಸಕ್ತಿ, ಆಯಾಸ, ಅತಿಯಾದ ಬೆವರು, ಮೂರ್ಛೆ, ಬಾಯಾರಿಕೆ ಹಾಗೂ ತಲೆ ತಿರುಗುವುದು – ಮುಂತಾದ ಲಕ್ಷಣಗಳು ಕಂಡು ಬರುತ್ತವೆ.

. ಕಫಜ ಹೃದ್ರೋಗ: ಕಫವು ಹೃದಯವನ್ನಾವರಿಸಿರುವುದರಿಂದ ಎದೆಯಲ್ಲಿ ಭಾರ, ತೂಕಡಿಕೆ, ಅರುಚಿಗಳುಂಟಾಗುತ್ತವೆ. ಎದೆಯಲ್ಲಿ ಕಲ್ಲು ಸಿಕ್ಕಿ ಹಾಕಿದಂತೆ ಭಾಸವಾಗುತ್ತದೆ.

(ಕಲ್ಯಾಣಕಾರಕ೧೭ಪು.೪೧೦)

. ತ್ರಿದೋಷಜ ಹೃದ್ರೋಗ: ಇದು ಚಿಕತ್ಸೆಗೆ ಕಷ್ಟಸಾಧ್ಯವೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಚಿಕಿತ್ಸೆ: ಆಯುರ್ವೇದ ಶಾಸ್ತ್ರಪ್ರಕಾರ ಶೋಧನ ಚಿಕಿತ್ಸೆ ಹೃದಯರೋಗಿಗಳಿಗೆ ಅನ್ವಯಿಸಿದರೂ ಎಲ್ಲರಿಗೂ ಮಾಡುವಂತಿಲ್ಲ. ರೋಗಿಯ ಸ್ಥಿತಿ ನೋಡಿ ಲಘು ಪಂಚಕರ್ಮಗಳನ್ನು ಮಾಡಬಹುದು.

. ವಾತಜ ಹೃದಯ ವಿಕಾರಗಳಿಗೆ

 • ಮಕರ ಧ್ವಜ – ೬೦ ಮಿಲಿ ಗ್ರಾಂ ಬೆಳಿಗ್ಗೆ ಹಾಗೂ ರಾತ್ರಿ ಕೊಡಬೇಕು.
  ಚಿಂತಾಮಣಿ ರಸ – ೧೨೦ ಮಿಲಿ ಗ್ರಾಂ
  ಶಂಖ ಭಸ್ಮ- ೨೪೦ ಮಿಲಿ ಗ್ರಾಂ
 • ಪುಷ್ಕರ ಮೂಲಾದಿ ಚೂರ್ಣ – ೧ ಗ್ರಾಂ – ಊಟವಾದ ಬಳಿಕ ಜೇಷ್ಠ ಮಧು ಕಷಾಯದೊಡನೆ
 • ವಿಶ್ವೇಶ್ವರ ರಸ – ೧೨೦ ಮಿಲಿ ಗ್ರಾಂ ನೀರಿನೊಡನೆ. ರಾತ್ರಿ ಮಲಗುವಾಗ್ಗೆ ಸಕ್ಕರೆ
  ಹೃತ್ವತ್ರಿ ಚೂರ್ಣ – ೧೨೦ ಮಿಲಿಗ್ರಾಂ

. ಪಿತ್ತಜ ಹೃದಯ ವಿಕಾರಕ್ಕೆ

 • ಪಂಚಾನನ ರಸ: ೧೨೦ ಗ್ರಾಮ ಬೆಳಿಗ್ಗೆ ಹಾಗೂ ಸಾಯಂಕಾಲ ತಣ್ಣೀರಿನೊಡನೆ.
  ವ್ಯೋಮಾಶ್ಮಪಿಷ್ಟ – ೧೨೦ ಗ್ರಾಂ
  ದ್ರಾಕ್ಷಾದಿ ಚೂರ್ಣ – ೨ ಗ್ರಾಂ
 • ಅರ್ಜುನ ಘೃತ – ೧೨ ಗ್ರಾಂ ಬೆಳಿಗ್ಗೆ ಆಕಳ ಹಾಲಿನೊಡನೆ

. ಕಫಜ ಹೃದಯ ರೋಗಕ್ಕೆ

 • ಹೃದ್ಯಾರ್ನವ ರಸ – ೧೨೦ ಮಿಲಿ ಗ್ರಾಂ ಬೆಳಿಗ್ಗೆ ಹಾಗೂ ರಾತ್ರಿ ಬಿಸಿ ನೀರಿನಲ್ಲಿ
  ಶಂಕರ ವಟಿ – ೧೨೦ ಮಿಲಿ ಗ್ರಾಂ
  ಪಿಪ್ಪಲಿ ಮೂಲಚೂರ್ಣ – ೫೦೦ ಮಿಲಿ ಗ್ರಾಂ
 • ಮಕರ ಧ್ವಜ – ೬೦ ಮಿಲಿ ಗ್ರಾಂ ರಾತ್ರಿ ಮಲಗುವಾಗ್ಗೆ ತ್ರಿಫಲಾ ಕಷಾಯದೊಡನೆ
  ಪ್ರಭಾಕರ ವಟಿ – ೧೨೦ ಮಿಲಿ ಗ್ರಾಂ
  ಆರೋಗ್ಯವರ್ಧಿನಿ -೫೦೦ ಮಿಲಿ ಗ್ರಾಂ

. ತ್ರಿದೋಷಜ ಹೃದಯವಿಕಾರಕ್ಕೆ

 • ರತ್ನಾಕರ ರಸ – ೧೨೦ – ಮಿಲಿ ಗ್ರಾಂ ಬೆಳಿಗ್ಗೆ ಹಾಗೂ ಸಾಯಂಕಾಲ ಅರ್ಜುನ ಘೃತದೊಡನೆ
 • ಮುಕ್ತಾಪಿಷ್ಟಿ – ೧೨೦ ಮಿಲಿ ಗ್ರಾಂ
 • ಪುಷ್ಠರ ಮೂಲ ಚೂರ್ಣ – ೫೦೦ ಮಿಲಿ ಗ್ರಾಂ

ಹೃದಯ ರೋಗಗಳಲ್ಲಿ ಉಪಯುಕ್ತವಾದ ಇನ್ನಿತರ ಔಷಧಿಗಳು: ಅರ್ಜುನ, ಘೃತ, ಪ್ರಭಾಕರ ವಟಿ, ಅರ್ಜುನಾರಿಷ್ಟ, ಅಶ್ವಗಂಧಘೃತ, ಅಶ್ವಗಂಧಾರಿಷ್ಟ, ಅಕೀಕಭಸ್ಮ ಚಿಂತಾಮಣಿ ರಸ, ಹೃದ್ಯಚೂರ್ಣ, ಶೃಂಗ ಭಸ್ಮ ಮುಂತಾದವುಗಳು (ಹೃದಯರೋಗಗಳಿಗೆ ರೂಢಿಯಲ್ಲಿರುವ ಆಯುರ್ವೇದದ ವಿಶೇಷ ಚಿಕಿತ್ಸೆಯಲ್ಲಿ ಇಲ್ಲಿ ಹೇಳಲಾಗಿದೆ).

ಪಥ್ಯಾಪಥ್ಯ: ರೋಗದ ಉಲ್ಬಣಾವಸ್ಥೆಯಲ್ಲಿ ರೋಗಿಗೆ ಹಿತಕರವಾದ ಆಹಾರ ವಿಹಾರ, ಹೆಸರುಬೇಳೆ, ಪಾನಕ, ಪಡುವಲಕಾಯಿ, ಬಾಳೆಹಣ್ಣು, ಬೂದುಗುಂಬಳ, ಹೂವು, ದಾಳಿಂಬೆ ಹಣ್ಣು, ಕಕ್ಕೆ ಹಣ್ಣು ಬೂದುಗುಂಬಳ, ಹರಳೆಣ್ಣೆ, ಸ್ವಚ್ಛ ನೀರು, ಸೈಂಧವ ಲವಣ, ದ್ರಾಕ್ಷಿ, ಮಜ್ಜಿಗೆ, ಹಳೆಯ ಬೆಲ್ಲ, ಶುಂಠಿ, ಬಡೇಸೋಪು, ಧನಿಯ(ಹವೀಜ). ಚಂದನ, ಕಸ್ತೂರಿ, ತಾಂಬೂಲ ಇತ್ಯಾದಿ ಪದಾರ್ಥಗಳು ಹೃದಯರೋಗಿಗೆ ಪಥ್ಯಕರಗಳಾಗಿವೆ.

೩೨. ಮೂತ್ರವಿಕಾರಗಳು

. ಮೂತ್ರಕೃಚ್ಛ್ರ: (Dysurea)

ಇದರಲ್ಲಿ ಮೂತ್ರದ ಪ್ರಮಾಣವು ಕಡಿಮೆಯಾಗಿ ತೊಂದರೆದಾಯಕವೆನಿಸುವುದು. ಈತನಿಗೆ ಮೇಲಿಂದ ಮೇಲೆ ಮೂತ್ರಕ್ಕೆ ಹೋಗಬೇಕೆಂಬ ಅನಿಸಿಕೆ ಇರುವುದು, ಹೋದರೆ ಸ್ವಲ್ಪ ಮೂತ್ರವೂ ನೋವಿನೊಡನೆ ವಿಸರ್ಜಿತವಾಗುವುದು. ಆದರೆ ಮೂತ್ರ ಸಂಪೂರ್ಣ ಹೋದಾಗ ಆಗುವ ಸಮಾಧಾನವಾಗುವುದಿಲ್ಲ.

ವಾತ, ಪಿತ್ತ, ಕಫ, ಸನ್ನಿಪಾತ, ಶಲ್ಯಜ, ಪುರೀಷಜ, ಶುಕ್ರಜ, ಆಶ್ಮರಿಜ ಎಂದು ಎಂಟು ಪ್ರಕಾರದ ಮೂತ್ರಕೃಚ್ಛ್ರ ವಿಕಾರಗಳಿವೆ.

ಅತಿ ವ್ಯಾಯಾಮ, ತೀಕ್ಷ್ಣವಾದ ಔಷಧಿ, ಸೇವನೆ, ರೂಕ್ಷಾಹಾರ, ಮದ್ಯಸೇವನೆ, ವ್ಯಸನಗಳು, ಯಾವಾಗಲೂ ವಾಹನಗಳ ಮೇಲೆ ಓಡಾಡುತ್ತಿರುವುದು, ಅಜೀರ್ಣ, ಮಲಬದ್ಧತೆ, ಪ್ರಸ್ಥಿತ ಗ್ರಂಥಿ (Prostategland) ಬೆಳವಣಿಗೆ – ಇವು ಮೂತ್ರಕೃಚ್ಛ್ರಕ್ಕೆ ಕಾರಣವಾಗುವುವು.

ಲಕ್ಷಣಗಳು: ವಾತದೋಷದಿಂದ ನೋವು ತೀವ್ರವಾಗಿ ವಂಕ್ಷ್ಣ ಮೂತ್ರಾಶಯ, ಶಿಶ್ನಗಳಲ್ಲಿ ತೋರುವುದು, ಮೇಲಿಂದ ಮೇಲೆ ಮೂತ್ರ ವಿಸರ್ಜನೆ ಆಗುತ್ತಿರುವುದು. ಪಿತ್ತ ದೋಷದಿಂದ ಮೂತ್ರವು ಹಳದಿಯಾಗಿ, ಸ್ವಲ್ಪ ಕೆಂಪಗಿದ್ದು ಉರಿಯೊಡನೆ ಕಷ್ಟದಿಂದ ವಿಸರ್ಜನೆ ಆಗುವುದು. ಕಫದೋಷದಲ್ಲಿ ಬಸ್ತಿ, ಶಿಶ್ನಗಳಲ್ಲಿ ಗುರುತ್ವ, ಶೋಥಗಳಿರುವುವು. ಮೂತ್ರವು ಪಿಚ್ಛಲವಾಗಿರುವುದು. ಸನ್ನಿಪಾತ ದೋಷದಲ್ಲಿ ಎಲ್ಲ ಲಕ್ಷಣಗಳಿರುವುವು ಹಾಗೂ ಇದು ಚಿಕಿತ್ಸೆಗೆ ಕಷ್ಟಸಾಧ್ಯ.

ಶಲ್ಯಜ ಮೂತ್ರಕೃಚ್ಛ್ರದ್ಲಲಿ ಶಸ್ತ್ರ, ನಾಡೀ ಯಂತ್ರ ಮುಂತಾದವುಗಳಿಂದ ಗಾಯವಾಗಿ ಬಹಳ ತೊಂದರೆ ಆಗುವುದು ಹಾಗೂ ವಾತದೋಷಜ ಲಕ್ಷಣಗಳಿರುವುವು.

ಮಲಬದ್ಧತೆಯು ಅತಿಯಾಗಿ ಅಧ್ಮಾನವಾದಾಗ ಮೂತ್ರವಹ ಸ್ರೋತಸ್ಸುಗಳು ಹಾಗೂ ಬಸ್ತಿ ಭಾಗಗಳನ್ನು ಒತ್ತುವುದರಿಂದ ಮೂತ್ರದ ತಡೆ ಉಂಟಾಗಿ ಕಷ್ಟದಿಂದ ಮೂತ್ರ ವಿಸರ್ಜನೆ ಆಗುವುದು.

ಮೂತ್ರ ಸಂಯೋಗದಿಂದ ಕೆಲ ಪಾರ್ಥಿವ ದ್ರವ್ಯಗಳು ಒಟ್ಟಾಗಿ ಹರಳಿನಂತಾಗುವುವು. ಇದೇ ಮೂತ್ರಾಶ್ಮರಿ. ಇವು ಬಸ್ತಿಯಲ್ಲಾಗಲೀ, ವೃಕ್ಕಗಳಲ್ಲಾಗಲಿ ಆದರೆ ಸ್ರೋತೋಮಾರ್ಗಗಳನ್ನು ತಡೆಯುವುದರಿಂದ ಸರಿಯಾಗಿ ಮೂತ್ರ ಹರಿದುಹೋಗಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಮುಖ್ಯವಾಗಿ ವಾತಕೃಚ್ಛ್ರ ಲಕ್ಷಣಗಳು ಎಂದರೆ ಅಧ್ಮಾನ, ನೋವು ಮತ್ತು ಮೂತ್ರ ತಡೆಗಳಾಗುವುವು. ನಾಭಿ ಭಾಗದಲ್ಲಿ ನೋವು, ಮೈನಡುಕ, ಅತಿಯಾದ ಹೊಟ್ಟೆನೋವು, ಅಗ್ನಿಮಾಂದ್ಯ, ಮೂರ್ಛೆ – ಮುಂತಾದ ಲಕ್ಷಣಗಳಿರುವುವು.

ಶುಕ್ರಜ ಮೂತ್ರ ಕೃಚ್ಛ್ರದಲ್ಲಿ ಪುರುಷನು ಸಂಭೋಗ ಕ್ರಿಯೆಯಲ್ಲಿ ತೊಡಗಿದಾಗ ಶುಕ್ರದ ವೇಗವನ್ನು ಯಾವುದೇ ಕಾರಣಗಳಿಂದ ತಡೆದಾಗ ಶುಕ್ರಾಶ್ಮರಿ ಉಂಟಾಗುವುದು.

ಚಿಕಿತ್ಸೆ: ಈ ರೋಗಿಗಳಿಗೆ ನಿತ್ಯ ಶೋಧನ ಚಿಕಿತ್ಸೆ ಹಾಗೂ ಉತ್ತರ ಬಸ್ತಿಗಳನ್ನು ಕೊಡಬೇಕೆಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.

ಮೂತ್ರಕೃಚ್ಛ್ರನಾಶಕ ಯೋಗ, ತ್ರಟ್ಯಾದಿ ಯೋಗ, ಕ್ಷಾರೋದಕ, ಮಧುಕಾದಿ ಕಲ್ಕ, ದಾಡಿಮಾದಿ ಚೂರ್ಣ, ಮಧುಕಾದಿ ಯೋಗಗಳನ್ನು ಶಾಸ್ತ್ರದಲ್ಲಿ ಹೇಳಿದ್ದಾರೆ.

ಮೂತ್ರದ ಉರಿ, ಮೂತ್ರದಲ್ಲಿ ಕೀವುಗಳಿಗೆ ಚಂದನಾದಿ ವಟಿ, ಚಂದನಾದಿ ಚೂರ್ಣ, ಚಂದನಾಸವ, ಚಂದ್ರಪ್ರಭಾ ವಟಿ, ಉಶೀರಾಸವ, ಗೋಕ್ಷುರಾದಿ ಗುಗ್ಗುಳುಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಮೂತ್ರದಲ್ಲಿ ಆಮ್ಲತೆಯ ಪ್ರಮಾಣ ಹೆಚ್ಚಾಗಿದ್ದರೆ ತ್ರಿಫಲಾ ಕಷಾಯ, ನ್ಯಗ್ರೋದಾದಿ ಕಷಾಯಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಗೋಮೂತ್ರ ಶಿಲಾಜಿತು + ಯವಕ್ಷಾರಗಳನ್ನು ಕೊಡಬಹುದು.

೩೩. ಮೂತ್ಮಾಶ್ಮರಿ (Urinary Calculi)

ಮೂತ್ರಾಂಗಗಳಲ್ಲಿ ಯಾವುದೇ ಭಾಗದಲ್ಲಾದರೂ ಆಶ್ಮರಿಗಳಾಗಬಹುದು. ಈ ಹರಳುಗಳು ಹೊರಗಿನಿಂದ ಬರದೇ ಶರೀರದಲ್ಲಿಯೇ ಹುಟ್ಟಿಕೊಳ್ಳುತ್ತವೆ. ಹೆಚ್ಚಿನ ಬೆವರು ಸುರಿತ, ಬೇಸಿಗೆ ಕಾಲ, ಅತಿ ಉಷ್ಣ ಪ್ರದೇಶದಲ್ಲಿನ ವಾಸ, ಮೇಲಿಂದ ಮೇಲೆ ಮೂತ್ರಾಶಯ ವಿಕಾರಗಳಿಂದ ಬಳಲುತ್ತಿರುವವರಿಗೆ ಮೂತ್ರದಲ್ಲಿ ಮೂತ್ರಾಮ್ಲ ಹಾಗೂ ಕ್ಯಾಲ್ಸಿಯಂಗಳು ಅಧಿಕ ಪ್ರಮಾಣದಲ್ಲಿದ್ದರೆ ಈ ಹರಳುಗಳು ಹುಟ್ಟಿಕೊಳ್ಳುವುವು. ಇವು ಸ್ತ್ರೀಯರಿಗೆ ವಿಶೇಷವಾಗಿ ಆಗುವುದಿಲ್ಲ. ಮೂತ್ರಾಂಗಗಳಲ್ಲಿ ಯಾವುದೇ ಭಾಗದಲ್ಲಿ ಮೂತ್ರಾಮ್ಲ, ಕ್ಯಾಲ್ಸಿಯಂ ಸ್ವಲ್ಪ ಒಂದೆಡೆ ಸೇರಿದರೂ ಅವು ಮೂತ್ರದಲ್ಲಿನ ಈ ಅಂಶಗಳನ್ನು ಹೀರುತ್ತ ಬೆಳೆಯ ತೊಡಗುವುವು.

(ಕಲ್ಯಾಣಕಾರಕ೧೭ಪು.೪೨೨೪೨೫)

ಶಾಸ್ತ್ರದಲ್ಲಿ ಸರ್ವ ಪ್ರಕಾರದ ಅಶ್ಮರಿಗಳಿಗೆ ಕಫ ದೋಷವೇ ಪ್ರಧಾನವೆನ್ನಲಾಗಿದೆ. ಇದರಲ್ಲಿ ಕಫಜ, ಪಿತ್ತಜ, ವಾತಜ ಹಾಗೂ ಶುಕ್ರಜ ಎಂದು ನಮೂನೆಗಳಿವೆ.

ಕಫ ದೋಷದಿಂದಾದ ಅಶ್ಮರಿಯು ಬಿಳಿಯದಾಗಿದ್ದು ಭಾರವಾಗಿರುತ್ತದೆ. ಇದು ಮೂತ್ರದ್ವಾರದಲ್ಲಿ ತಡೆ ಒಡ್ಡುವುದರಿಂದ ಮೂತ್ರಾಶಯದಲ್ಲಿ ಮೂತ್ರ ಸಂಗ್ರಹವಾಗಿ ಅದು ಭಾರವೆನಿಸತೊಡಗುವುದಲ್ಲದೆ ಅದು ಎಲ್ಲ ಹರಿದುಹೋಗುವುದೋ ಎನ್ನುವಷ್ಟರ ಮಟ್ಟಿಗೆ ನೋವು ಎನಿಸುವುದು.

ಪಿತ್ತದೋಷದಿಂದಾಗಿ ಅಶ್ಮರಿಯು ಕೆಂಪು, ಕಪ್ಪು ಹಾಗೂ ಹಳದಿ ವರ್ಣದ್ದಾಗಿದ್ದು ಇದು ಗಟ್ಟಿಯಾಗಿರುವುದರಿಂದ ಮೂತ್ರ ಮಾರ್ಗದಲ್ಲಿ ಸ್ಥಿರವಾಗಿ ಕುಳಿತು ಮೂತ್ರವನ್ನು ತಡೆಯುವುದು. ಮೂತ್ರದ ಉರುಪು ತುಂಬ ಹೆಚ್ಚಾಗಿರುವುದಲ್ಲದೆ ನೀರಡಿಕೆ ಹೆಚ್ಚಾಗುವುದು. ಈತನಿಗೆ ಮೇಲಿಂದ ಮೇಲೆ ಉಷ್ಣವಾತದ ತೊಂದರೆ ಕಂಡುಬರುವುದು.

ವಾತದೋಷಾಧಿಕ್ಯತೆಯಿಂದಾದ ಅಶ್ಮಿಯು ರೂಕ್ಷವಾಗಿದ್ದು ಬಣ್ಣದಲ್ಲಿ ಕಪ್ಪಗಾಗಿರುವುದು. ಕದಂಬ ಪುಷ್ಪದ ಆಕಾರವಾಗಿದ್ದು ಮೂತ್ರದ ತಡೆ ಒಡ್ಡಿದಾಗ ನೋವು ವಿಶೇಷವಾಗಿರುವುದು, ಮಲಗಿದರೂ, ಕುಳಿತರೂ ಸಮಾಧಾನವಾಗದೆ ರೋಗಿ ಅತ್ತಿತ್ತ ಓಡಾಡಿವನು, ನಾಭಿಭಾಗದಲ್ಲಿ ಹಿಸುಕಿ ಕೊಳ್ಳುವನು, ಲಿಂಗವನ್ನು ಮರ್ದಿಸಿಕೊಳ್ಳುವನು, ಗುದದಲ್ಲಿ ಬೆರಳು ಹಾಕಿಕೊಳ್ಳುವನು. ನೋವನ್ನು ತಡೆದುಕೊಳ್ಳಲಾರದೆ ಹಲ್ಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮೂರ್ಛೆ ಹೋಗುವನು.

ಶುಕ್ರದ ವೇಗವನ್ನು ತಡೆದಾಗ ಅದು ಗಟ್ಟಿಯಾಗಿ ಮೂತ್ರಾಶಯದ ಮುಖಕ್ಕೆ ಬಂದು ಕುಳಿತು ಅಲ್ಲಿಯೇ ಒಣಗುವುದರಿಂದ ಅಶ್ಮರಿಯಂತಾಗುವುದು. ಇದರಿಂದ ಅಂಡಕೋಶದಲ್ಲಿ ಬಾವು ಬರುವುದು, ಇದು ಕೇವಲ ಯುವಕರಿಗೆ ಬರುವ ವಿಕಾರ.

ಬಾಲಾಶ್ಮರಿ: ಬಾಲಕರಲ್ಲಿ ಕಫದೋಷದ ಪ್ರಧಾನತೆ ಇರುವುದರಿಂದ ಹಗಲು ನಿದ್ರೆ, ಮೂತ್ರಮಾರ್ಗವು ಚಿಕ್ಕದಾಗಿರುವುದರಿಂದ, ವಿಶೇಷವಾಗಿ ಸಿಹಿ ಹಾಗೂ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದರಿಂದ ಮೂರೂ ದೋಷಗಳುಳ್ಳ ಅಶ್ಮರಿಗಳುಂಟಾಗುವುವು. ಲಕ್ಷಣಗಳೆಲ್ಲ ಮೇಲ್ಕಂಡಂತೆ ಇರುವುವು.

ಮಕ್ಕಳಲ್ಲಿ ಇಂತಹ ಚಿಕ್ಕ ಅಶ್ಮರಿಯನ್ನು ಯಂತ್ರದ ಸಹಾಯದಿಂದ ಸುಲಭವಾಗಿ ಹೊರ ತೆಗೆಯಬಹುದೆಂದು ಹೇಳಿದ್ದಾರೆ.

ಚಿಕಿತ್ಸೆ: ರೋಗಿಗೆ ಮೊದಲು ಪಂಚಕರ್ಮ ಶೋಧನ ವಿಧಿಗಳನ್ನು ಮಾಡಬೇಕು. ಆತನಿಗೆ ಪಾಷಾಣ ಭೇದಿ, ಶಿಲಾಜಿತು, ಶತಾವರಿ, ಗೋಕ್ಷುರಿ, ಕಸಗಸಿ, ಮುತ್ತುಗ ಬೀಜ, ತಗರು, ಬ್ರಾಹ್ಮೀ, ಬೇಲ, ಯವಕ್ಷಾರ, ಹಿಂಗು, ಸೈಂಧವ ಲವಣ ಮುಂತಾದವುಗಳಿಂದ ಕಷಾಯ ಸಿದ್ಧಪಡಿಸಿ ಅದಕ್ಕೆ ತುಪ್ಪ ಸೇರಿಸಿ ಕುಡಿಯಲು ಕೊಡಬೇಕು.

 • ದೋಷಗಳಿಗೆ ತಕ್ಕಂತೆ ಚಿಕಿತ್ಸೆ ಕೊಡಬೇಕು.
 • ಪಟೋಲ, ಅಶ್ವಸ್ಥ ಚೆಕ್ಕೆಗಳ ಕಷಾಯಕ್ಕೆ ಶಿಲಾಜಿತು, ಸಕ್ಕರೆಗಳನ್ನು ಸೇರಿಸಿ ಕುಡಿಯಲು ಕೊಟ್ಟರೆ ಎಲ್ಲ ವಿಧದ ಅಶ್ಮರಿಗಳು ದೂರವಾಗುವುವು.
 • ಇನ್ನಿತರ ಆಹಾರಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟು ಕೇವಲ ಆಡಿನ ಹಾಲನ್ನು ಬಿಸಿಮಾಡಿ ಸಕ್ಕರೆ ಸೇರಿಸಿ ಕುಡಿದರೆ ಅಶ್ಮರಿಗಳು ನಾಶವಾಗುವುವು.
 • ಮೂತ್ರದ್ವಾರದಿಂದ ಕೊಡಲ್ಪಡುವ ಉತ್ತರ ಬಸ್ತಿ ಪ್ರಯೋಗ ಮಾಡಬೇಕೆಂದು ವಿಶೇಷವಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ.
 • ಪಾಷಾಣಭೇದಿ ಸೊಪ್ಪನ್ನು ಕಷಾಯ ಮಾಡಿ ಕುಡಿಸುವುದರಿಂದ ಮೂತ್ರದಲ್ಲಿನ ಹರಳು ಒಡೆದು ಮೂತ್ರದೊಡನೆ ಹೊರಬರುವುದು.
 • ಹುರಳಿ ಸಾರನ್ನು ನಿತ್ಯ ಆಹಾರದಲ್ಲಿ ಉಪಯೋಗಿಸುವುದರಿಂದ ಹರಳು ಒಡೆದು ಹೋಗುವುದು.
 • ಮದರಂಗಿ ಚೆಕ್ಕೆಯು ಕಷಾಯವನ್ನು ದಿನಕ್ಕೆ ೧ ರಿಂದ ೨ ಔಂಸಗಳವರೆಗೆ ೨ ಸಾರೆ ಕುಡಿಯಲು ಕೊಡಬೇಕು.
 • ನೆಗ್ಗಿಲ ಮುಳ್ಳಿನ ಕಷಾಯ.
 • ಮೂತ್ರದಲ್ಲಿ ಹರಳು ಆದವರಿಗೆ ಹೆಚ್ಚಾಗಿ ನೀರನ್ನೂ, ಎಳೆ ತೆಂಗಿನ ನೀರನ್ನು ವಿಶೇಷವಾಗಿ ಕುಡಿಯಲು ಕೊಡಬೇಕು. ವಿಶೇಷವಾಗಿ ಹಾಳು, ಗಡ್ಡೆ ಗೆಣಸುಗಳು ಇತ್ಯಾದಿ ಭೂಮಿಯ ಒಳಗೆ ಇರುವಂಥವುಗಳು, ಮೆಂತೆ ಪಲ್ಲೆ, ಟೊಮ್ಯಾಟೊ ಇತ್ಯಾದಿಗಳನ್ನು ತಿನ್ನಲು ಕೊಡಬಾರದು. ಇವುಗಳಿಂದ ಅಶ್ಮರಿಯು ದೊಡ್ಡದಾಗುವ ಸಂಭವವಿರುತ್ತದೆ.