. ನೆಗಡಿ (ಪ್ರತಿಶ್ಯಾಯ)

ನೆಗಡಿಯೊಂದು ಸಾಮಾನ್ಯ ವಿಕಾರ. ಹಾಗೆಂದು ಅಲಕ್ಷಿಸಿದರೆ ಗಂಟಲು ಕೆರೆತ, ಕೆಮ್ಮು, ಜ್ವರ, ಕಮ್ಮು, ಕ್ಷಯಗಳಿಗೆ ದಾರಿ ಮಾಡಿಕೊಡುವುದು. ಆದ್ದರಿಂದ ಇದು ಸಣ್ಣ ವಿಕಾರವೆಂದು ಅಲಕ್ಷಿಸುವಂತಿಲ್ಲ. ಮಸ್ತಿಷ್ಕದಲ್ಲಿ ತ್ರಿದೋಷಗಳು ಕುಪಿತಗೊಂಡಾಗ ನೆಗಡಿ ಬರುವುದೆಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ. ಇ‌ದಕ್ಕೆ ಅತಿ ಶೈತ್ಯ ಹವೆ, ಧೂಳು, ಹೊಗೆ, ಶೈತ್ಯ, ಪದಾರ್ಥಗಳ ಸೇವನೆ, ಕೃತ್ರಿಮ ಶೈತ್ಯ ಕೋಣೆಯಲ್ಲಿ ಮಲಗಿಕೊಳ್ಳುವುದು – ಮೊದಲಾದ ಕಾರಣಗಳಿಂದ ದೋಷಗಳು ಪ್ರಕೋಪಗೊಂಡು ಮಸ್ತಿಷ್ಕ ಸೇರಿದಾಗ ನೆಗಡಿ ಬರುವುದು. ಈ ರೋಗವಂಟಲು ಅತಿ ಸೂಕ್ಷ್ಮ ವೈರಸ್ ಜೀವಾಣು ಕಾರಣವೆಂದು ಆಧುನಿಕ ವೈದ್ಯ ಹೇಳುತ್ತದೆ. ಇದು ತೀವ್ರ ಸ್ವರೂಪದ ಅಂಟುರೋಗವಾದ್ದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುವುದು.

ನೆಗಡಿಯ ಪೂರ್ವದಲ್ಲಿ ಶೀನುಗಳು, ಮೈನೋವು, ತಲೆಭಾರ, ರೋಮಾಂಚನ, ನೀರಡಿಕೆಗಳು ಕಂಡು ಬಂದರೆ ನೆಗಡಿ ಆದಾಗ ಮೂಗಿನಿಂದ ನೀರಿನಂತಹ ಸ್ರಾವ, ಮೂಗು ಕಟ್ಟುವುದು, ಗಂಟಲು ಒಣಗುವುದು, ಕಿವಿಗಳ ಭಾಗದಲ್ಲಿ ನೋವು, ಅನಿದ್ರೆ, ಹೆಚ್ಚು ಶೀನುಗಳು ಬರುವುದು, ಗಂಟಲು ಕೂಡ್ರುವುದು – ಇವು ವಾತದೋಷದಿಗಂದ ಉಂಟಾಗುತ್ತವೆ. ಪಿತ್ತದೋಷದಲ್ಲಿ ಮೂಗಿನಿಂದ ಹಳದಿ ವರ್ಣ ಬಿಸಿಯಾದ ಸ್ರಾವ, ಬಿಸಿಯಾದ ನಿಶ್ವಾಸ, ನೀರಡಿಕೆ, ಉರಿಗಳು ಕಂಡುಬರುವುದು. ಕಫ ದೋಷದಲ್ಲಿ ಕಣ್ಣಿನ ಭಾಗದಲ್ಲಿ ಬಾವು, ತಲೆಭಾರ, ಗಂಟಲು ಭಾಗದಲ್ಲಿ ಕೆರೆತ, ಮೂಗಿನಿಂದ ತಣ್ಣಗಿನ ಸ್ರಾವ, ಉಷ್ಣವಾದ ಪದಾರ್ಥಗಳಲ್ಲಿ ಆಸಕ್ತಿ – ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ರಕ್ತಜದಲ್ಲಿ ಮೂಗಿನಲ್ಲಿ ಸ್ರಾವದೊಡನೆ ರಕ್ತವೂ ಬರುವುದು. ಕಣ್ಣುಗಳು ಕೆಂಪಗಾಗುವವು. ಉರಃ ಕ್ಷತದ ಲಕ್ಷಣಗಳು ಕಂಡುಬರುವುವು. ನಿಶ್ವಾಸವು ದುರ್ಗಂಧವಾಗಿರುವುದು, ಸನ್ನಿಪಾತಜ ವಿಕಾರಗಳಲ್ಲಿ ಮೂರು ದೋಷಗಳು ಕಂಡು ಬಂದರೆ ನೆಗಡಿಯು ಹಳೆಯದಾದಾಗ ದುಷ್ಟ ಪ್ರತಿಶ್ಯಾಯದ ಲಕ್ಷಣಗಳು ಕಂಡುಬರುವುವು. ಅಲಕ್ಷಿಸಿದ ಕಷ್ಟಸಾಧ್ಯವಾದ ಕೆಮ್ಮು, ದಮ್ಮು, ಕ್ಷಯ ರೋಗಗಳಿಗೆ ದಾರಿ ಮಾಡಿ ಕೊಡುವುದು.

ಚಿಕಿತ್ಸೆ : ದೋಷಗಳ ಸ್ಥಿತಿ ನೋಡಿಕೊಂಡು ಅವನ್ನು ನಿವಾರಿಸಲು ಅವಶ್ಯವಾದ ದ್ರವ್ಯಗಳನ್ನೆಲ್ಲ ಸೇರಿಸಿ ತಯಾರಿಸಿದ ಘೃತವನ್ನು ಕುಡಿದರೆ ಹೊಸ ನೆಗಡಿ ದೂರವಾಗುವುದು. ಶುಂಠಿ, ಮೆಣಸು, ಹಿಪ್ಪಲಿಗಳ ಕಷಾಯ ಸೇವನೆ ಒಳ್ಳೆಯದು. ಇದೇ ಕಷಾಯವನ್ನು ಮುಕ್ಕಳಿಸಲು, ಮೂಗಿನಲ್ಲಿ ಹಾಕಿಕೊಳ್ಳಲು ಉಪಯೋಗಿಸಬಹುದು.

 • ವಾತಜ ನೆಗಡಿಗೆ ಪಂಚಲವಣಗಳನ್ನು ತುಪ್ಪದಲ್ಲಿ ಹಾಕಿಕೊಂಡು ಸೇವಿಸಬೇಕು.
 • ಪಿತ್ತಜ-ರಕ್ತಜ ನೆಗಡಿಗಳಲ್ಲಿ ಕಹಿ, ಹುಳಿ ಹಾಗೂ ಮಧುರ ರಸ ಔಷಧಿಗಳನ್ನು ಹಾಕಿ ತಯಾರಿಸಿದ ತುಪ್ಪವನ್ನು ಸೇವಿಸಬೇಕು.
 • ಕಫಜದಲ್ಲಿ ಉಷ್ಣವಾದ ಕಟು, ತಿಕ್ತ, ರೂಪ ದ್ರವ್ಯಗಳಿಂದ ತಯಾರಿಸಿದ ತುಪ್ಪವನ್ನು ಸೇವಿಸಬೇಕು.
 • ಶುಂಠಿಯನ್ನು ಹಾಕಿ ತಯಾರಿಸಿದ ಬಿಸಿ ನೀರು, ಶುಂಠಿ ಹಾಕಿ ಕಾಯಿಸಿದ ಹಾಲು, ಮೆಣಸು ಹಾಕಿ ತಯಾರಿಸಿದ ಗಂಜಿಯನ್ನು ಕುಡಿಯುವುದರಿಂದ ನೆಗಡಿ ಬೇಗನೆ ಕಡಿಮೆ ಆಗುವುದು.
 • ಅರಿಷಿಣದ ಹೊಗೆ ತೆಗೆದುಕೊಂಡರೆ ನೆಗಡಿ, ಮೂಗು ಕಟ್ಟುವುದು, ತಲೆ ಭಾರಗಳು ನಿಲ್ಲುವುವು. (ಕಲ್ಯಾಣಕಾರಕ ಅ.೧೬, ಪುಟಗಳು ೪೦೪-೪೦೮)
 • ಹಸಿ ತುಳಸಿರಸ, ಲವಂಗಗಳೂ ಉಪಯುಕ್ತ. ಮೇಲಿಂದ ಮೇಲಾಗುವ ನೆಗಡಿಗೆ ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಸೇರಿಸಿ ತೆಗೆದುಕೊಳ್ಳಬೇಕು.
 • ಆಯುರ್ವೇದ ಔಷಧಿಗಳಾದ ಸಿತೋಪಲಾದಿ ಚೂರ್ಣ, ತ್ರಿಭುವನ ಕೀರ್ತಿ, ಲಕ್ಷ್ಮಿ ವಿಲಾಸ ರಸ, ರಸ ಸಿಂಧೂರಗಳನ್ನು ವೈದ್ಯರ ಸಲಹೆಯಂತೆ ಸೇವಿಸಬಹುದು.

. ಕೆಮ್ಮು (ಕಾಸ)

ನೆಗಡಿಯನ್ನು ಅಲಕ್ಷಿಸಿದಾಗ, ಮೂಗು-ಬಾಯಿಯೊಳಗೆ ಬಾಧಕ ಹೊಗೆಯು ಸೇರುವುದರಿಂದ, ಅತಿ ವ್ಯಾಯಾಮ, ರೂಕ್ಷವಾದ ಆಹಾರ, ಅಪಥ್ಯಕರ ಆಹಾರ, ಮಲಮೂತ್ರ ನಿರೋಧ – ಈ ಮೊದಲಾದ ಕಾರಣಗಳಿಂದ ಪ್ರಾಣವಾಯುವು ದುಷ್ಟವಾಗಿ ಉದಾನವಾಯುವಿನೊಡನೆ ಸೇರಿ ಕೆಮ್ಮನ್ನುಂಟು ಮಾಡುತ್ತದೆ. ಇದರಲ್ಲಿ ಒಡೆದ ಕಂಚಿನ ಶಬ್ದವಿರುವುದರಿಂದ ಇದಕ್ಕೆ ‘ಕಾಸ’ ಎಂಬ ಹೆಸರು ಬಂದಿದೆ.

ಗಂಟಲು, ಶ್ವಾಸನಾಳ, ಧ್ವನಿಯಂತ್ರ, ಪುಪ್ಪುಸಗಳಲ್ಲಿ ಎಲ್ಲಿಯಾದರೂ ಬಾವು, ಕೆರೆತ, ಆತಂಕ ಮೊದಲಾದ ತೊಂದರೆಗಳಾದರೆ ಕೆಮ್ಮು ಲಕ್ಷಣರೂಪವಾಗಿ ಕಂಡುಬರುವುದು. ಕೆಮ್ಮು ಒಂದು ಪ್ರತ್ಯೇಕ ರೋಗವಾಗಿರದೆ ಒಂದು ಲಕ್ಷಣವಾಗಿದೆ. ಅನೇಕ ಶ್ವಾಸಾಂಗ ರೋಗಗಳಲ್ಲಿ ಕೆಮ್ಮು ಬರುವುದನ್ನು ಕಾಣಬಹುದು. ಅತಿ ಜೋರಾಗಿ ಮಾತು ಇಲ್ಲವೆ ಬಹಳ ಹೊತ್ತಿನವರೆಗೆ ಹಾಡುವುದರಿಂದ ಗಂಟಲು ಕೆರೆತವುಂಟಾಗಿ ಕೆಮ್ಮು ಬರುವುದು. ಆಹಾರವನ್ನು ನುಂಗುವಾಗ ಇಲ್ಲವೇ ಪೇಯಗಳನ್ನು ಕುಡಿಯುವಾಗ ಬೇರೆಡೆಗೆ ಲಕ್ಷ್ಯ ಕೊಡುವುದು. ಮಾತನಾಡುವುದು, ನಗುವುದನ್ನು ಮಾಡಿದಾಗ ಅದು ಶ್ವಾಸನಾಳಕ್ಕೆ ಹೋಗುವ ಸಂಭವವಿರುವುದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ಕೆಮ್ಮು ಬರುವುದು. ಇದರಂತೆ ಪುಪ್ಪುಸ, ಶ್ವಾಸನಾಳಗಳಲ್ಲಿ ಸೇರಿದ ಕಫವನ್ನು ಹೊರಹಾಕುವ ಪ್ರಯತ್ನವೇ ಕೆಮ್ಮು.

ಬಾಯಿ ಮತ್ತು ಗಂಟಲಿನಲ್ಲಿ ಮುಳ್ಳು ಹೊರಡುವುದು, ಗಂಟಲಿನಲ್ಲಿ ಕೆರೆತ, ಆಹಾರ ನುಂಗುವಾಗ ತೊಂದರೆ – ಇವು ಕೆಮ್ಮಿನ ಪೂರ್ವ ಲಕ್ಷಣಗಳು.

ವಾತಜ ಕೆಮ್ಮು: ಹೃದಯ, ಮಸ್ತಕ, ಉದರ, ಪಕ್ಕೆಲಬುಗಳಲ್ಲಿ ನೋವು, ಸ್ವರ, ಬಲ, ಶಕ್ತಿಗಳು ಕ್ಷೀಣವಾಗುವುವು. ಮೇಲಿಂದ ಮೇಲೆ ಕೆಮ್ಮು ಬರುವುದು. ಧ್ವನಿ ಒಡೆಯುವುದು, ಒಣ ಕೆಮ್ಮು ಬರುವುದು.

ಚಿಕಿತ್ಸೆ: ರೂಕ್ಷತೆಯಿಂದಾದ ವಾತಕಾಸವನ್ನು ಮೊದಲು ಸ್ನೇಹದಿಂದ ಉಪಚರಿಸಬೇಕು. ವಾತಹರ ತೈಲಾಭ್ಯಂಗ, ಸ್ವೇದನ ಮಾಡಿಸಬೇಕು. ಸ್ನೇಹವಸ್ತಿ, ಘೃತಪಾನ ಮಾಡಿಸಬೇಕು. ಇದಕ್ಕೆ ಷೆಟ್ ಪಲ ಘೃತ ಒಳ್ಳೆಯದು. ಪಿಪ್ಪಲ್ಯಾದಿ ಘೃತ, ಕಂಟಕಾರಿ ಘೃತ, ಅಗಸ್ತ್ಯ ಹರೀತಕಿಗಳು ಈ ಕೆಮ್ಮಿನಲ್ಲಿ ಹೆಚ್ಚು ಉಪಯುಕ್ತ.

ಹಿಪ್ಪಲಿಯನ್ನು ತುಪ್ಪದಲ್ಲಿ ಹುರಿದು ಸ್ವಲ್ಪ ಸೈಂಧವಲವಣ ಸೇರಿಸಿ ತುಪ್ಪದಲ್ಲಿ ತೆಗೆದುಕೊಳ್ಳಬೇಕು.

ಪಿತ್ತಜಕೆಮ್ಮು: ಹೃದಯದಲ್ಲಿ ಉರಿ, ಜ್ವರ, ಬಾಯಿ ಒಣಗುವುದು, ಕಹಿಯಾಗುವುದು, ನೀರಡಿಕೆ, ಮೈಗೆ ಅರಿಶಿನ ಬಣ್ಣ ಹಾಗೂ ಉರಿ, ದುರ್ಗಂಧವಾದ ಉಗುಳು, ಸ್ವರಭೇದ, ಗಂಟಲಿನಲ್ಲಿ ಉರಿ, ಮೋಹ, ಅರುಚಿ ಮತ್ತು ಭ್ರಮೆ ಉಂಟಾಗುವುದು. ಕೆಮ್ಮು ಹೆಚ್ಚಾದಾಗ ಕಣ್ಣು ಮುಂದೆ ನಕ್ಷತ್ರಗಳನ್ನು ನೋಡಿದಂತಾಗುತ್ತದೆ. ಇದರಲ್ಲಿ ರೋಗಿ ಪಿತ್ತ ಮಿಶ್ರವಾದ ಕಫವನ್ನು ಉಗುಳುವನು.

ಚಿಕಿತ್ಸೆ: ಕಮಲ, ಶ್ವೇತ ಕಮಲ, ನೀಲ ಕಮಲ, ಜೇಷ್ಠ ಮಧು ಹಾಗೂ ಸಾರಿವಾಗಳ ಕಷಾಯವನ್ನು ತುಪ್ಪ ಹಾಳುಗಳೊಡನೆ ಕೊಟ್ಟರೆ ಪಿತ್ತಜ ಕೆಮ್ಮು ಬೇಗನೆ ಕಡಿಮೆ ಆಗುವುದು. ಹಿಪ್ಪಲಿ, ತುಪ್ಪ, ಬೆಲ್ಲಗಳನ್ನು ಎಮ್ಮೆ ಹಾಲಿನಲ್ಲಿ ತೆಗೆದುಕೊಳ್ಳಬೇಕು. ಇದಕ್ಕೂ ಮೊದಲು ಸಿಹಿದ್ರವ್ಯಯುಕ್ತವಾದ ತ್ರಿವೃಟ್ ವಿರೇಚನ ಕೊಡಬೇಕು.

ಕಫಜ ಕೆಮ್ಮು: ಕಫ ಬರುವುದು, ಅರುಚಿ, ನೆಗಡಿ, ಅಗ್ನಿಮಾಂದ್ಯ, ಮೈಭಾರ, ಗಂಟಲಿನಲ್ಲಿ ಕೆರೆತ ಮತ್ತು ಮೇಲಿಂದ ಮೇಲೆ ಕಫವನ್ನು ಉಗುಳುವುದರಿಂದ ಮುಖವು ಬಾಡುವುದು. ದೌರ್ಬಲ್ಯವೆನಿಸುವುದು. ಕೆಮ್ಮಿದಾಗ ಗಟ್ಟಿಯಾದ, ಮಧುರ, ಸ್ನಿಗ್ಧವಾದ ಕಫವು ಬೀಳುವುದು. ಎದೆಯಲ್ಲಿ ಸ್ವಲ್ಪ ನೋವು ಹಾಗೂ ಕಫ ತುಂಬಿರುವುದು.

ಚಿಕಿತ್ಸೆ: ರೋಗಿಯು ಸಶಕ್ತನಾಗಿದ್ದರೆ ವಾಂತಿ ಮಾಡಿಸಿ ಎದೆಯಲ್ಲಿದ್ದ ಕಫವನ್ನು ಹೊರಹಾಕಬೇಕು. ನಂತರ ಲಂಘನ, ಆಮೇಲೆ ಕಟು ರಸ ಪ್ರಧಾನವಾಗಿರುವ ಹಗುರವಾದ ಆಹಾರ ಕೊಡಬೇಕು. ನಂತರ ಪಿಪ್ಪಲ್ಯಾದಿ ಕಷಾಯ, ಶುಂಠಿ, ಶೃಂಗಿ, ಜೇಷ್ಠ ಮಧು, ಅಜವಾನ, ನೆಲಗುಳ್ಳ, ಲಕ್ಕಿ ಸೊಪ್ಪು, ಚಿತ್ರಕ, ಅಡಸಾಲಗಳನ್ನು ೧೨೫ ಮಿ.ಲಿ ಗ್ರಾಂನಂತೆ ತೆಗೆದುಕೊಂಡು, ಪುಡಿ ಮಾಡಿ ಚತುರ್ಥಾಂಶ ಕಷಾಯ ಮಾಡಿ ಕುಡಿಯಲು ಕೊಡಬೇಕು.

ಕ್ಷತಜ, ಕ್ಷಯಜ ಕೆಮ್ಮು : ನೆಲ್ಲಿಕಾಯಿ, ಗೋಕ್ಷುರ, ಖರ್ಜೂರ, ಪ್ರಿಯಾಲ, ಜೇಷ್ಠಮಧು, ನೀಲಕಮಲ ಬಾರಂಗಿ ಹಿಪ್ಪಲಿ- ಇವುಗಳನ್ನು ಸಮವಾಗಿ ತೆಗೆದುಕೊಂಡು ಚೂರ್ಣಿಸಿ ಬೆಳಿಗ್ಗೆ – ರಾತ್ರಿ ೧೦ ಗ್ರಾಂನಂತೆ ತುಪ್ಪ ಸಕ್ಕರೆಗಳಲ್ಲಿ ಕೊಡಬೇಕು. ಆಹಾರದೊಡನೆ ಹಾಲನ್ನು ವಿಶೇಷವಾಗಿ ಕೊಡಬೇಕು.

ಅತಿಯಾಗಿ ಬಲಹೀನನಾದ, ರಾಜಯಕ್ಷ್ಮ ರೋಗಿಯನ್ನು ಚಿಕಿತ್ಸಿಸಬಾರದು. ರೋಗಿಯು ಬಲವಂತನಾಗಿದ್ದರೆ ರೋಗವು ಹೊಸದಾಗಿದ್ದರೆ ಚಿಕಿತ್ಸೆ ಮಾಡಬೇಕು. ಮೊದಲು ಪುಷ್ಟಿಕರವಾದ, ಅಗ್ನಿವೃದ್ಧಿಯನ್ನುಂಟು ಮಾಡತಕ್ಕಂತಹ ಔಷಧೋಪಚಾರ ಮಾಡಬೇಕು. ದೋಷಗಳು ಬಹಳವಾಗಿದ್ದಲ್ಲಿ ಸ್ನೇಹಯುಕ್ತವಾದ ಮೃದುವಿರೇಚನ ಕೊಡಬೇಕು. ಕಕ್ಕೆಮರದ ಚೆಕ್ಕೆ ಇಲ್ಲವೇ ಕಾಯಿಯ ಚೂರ್ಣ ತಿಗಡೆ ಚೂರ್ಣ, ದ್ರಾಕ್ಷಿ ಹಣ್ಣಿನ ರಸ, ಲೋಧ್ರ ಚೆಕ್ಕೆ ಕಷಾಯ, ನೆಲಗುಂಬಳ ರಸ ಮುಂತಾದವುಗಳನ್ನು ಹಾಕಿ ಘೃತಮಾಡಿ ರೋಗಿಗೆ ಕೊಡಬೇಕು. ಇದು ರೋಗಿಗೆ ಹಿತವಾಗಿ ಅವನ ದೇಹ – ಬಲವನ್ನು ಸಂರಕ್ಷಿಸುವುದು.

. ಸ್ವರ ಭೇದ

ಕೆಮ್ಮು, ನೆಗಡಿ, ಗಂಟಲು ಕೆರೆತ ಹೆಚ್ಚಾಗಿ ಮಾತನಾಡುವುದು, ಕೂಗಾಟ, ಜೋರಾಗಿ ಓದುವುದು, ಅತಿಶೋಕ, ವಿಷಸೇವನೆ, ಗಂಟಲಿನಲ್ಲಿ ಕಡ್ಡಿಯಂತಹ ವಸ್ತು ಅಡ್ಡವಾಗಿ ಕುಳಿತುಕೊಳ್ಳುವುದು. ಭಾಷಣ ಮಾಡುವುದು, ಸಂಗೀತ ಮುಂತಾದ ಕಾರಣಗಳಿಂದ ಧ್ವನಿ ಪೆಟ್ಟಿಗೆಗೆ ಪೆಟ್ಟುಬಿದ್ದು ಧ್ವನಿ ಒಡೆಯುವುದು. ಇವಲ್ಲದೆ ಕರಿದ ಪದಾರ್ಥಗಳು, ಅತಿ ತಣ್ಣನೆಯ ಪದಾರ್ಥಗಳು, ಅಸಹಜ ಬೆಳವಣಿಗೆಗಳು, ಕ್ಷಯ ರೋಗ ಮುಂತಾದ ಕಾರಣಗಳಿಂದಲೂ ಧ್ವನಿ ಒಡೆಯುವುದು. ಪ್ರಕುಪಿತವಾದ ವಾತ, ಪಿತ್ತ, ಕಫ, ತ್ರಿದೋಷ, ಮೇದಸ್ಸು ಹಾಗೂ ರಕ್ತಗಳಿಂದ ಸ್ವರಭೇದ ಉಂಟಾಗುವುದೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. (..೧೬, ಶ್ಲೋಕ.೫೭)

ಧ್ವನಿ ಒಡೆತದ ರೋಗಿಗಳನ್ನು ಸರಿಯಾಗಿ ಪರೀಕ್ಷಿಸಿ ಸ್ನೇಹನ ವಿಧಿಗಳ ಮುಖಾಂತರ ಯೋಗ್ಯ ಔಷಧಿ ಇಲ್ಲವೆ ಕೆಮ್ಮು, ದಮ್ಮುಗಳಲ್ಲಿ ಕೊಡುವ ಔಷಧಿಗಳನ್ನು ಕೊಡಬೇಕು. (..೧೬, ಶ್ಲೋಕ.೬೧)

ಜೇಷ್ಠಮಧು ಕಷಾಯ ಸೇರಿಸಿದ ಹಾಲನ್ನು ಹೆಸರುಬೇಳೆಯನ್ನು ಪಾಯಸಕ್ಕೆ ಹಾಕಿಕೊಂಡು ಒಂದು ವಾರ ತಿಂದರೆ/ಕುಡಿದರೆ ಸರ್ವ ವಿಧದ ಸ್ವರಭೇದಗಳು ದೂರವಾಗುತ್ತವೆ. (..೧೬, ಶ್ಲೋಕ.೬೪)

 • ಧ್ವನಿ ಒಡೆತಕ್ಕೆ ಕಾರಣವಾದ ಅಂಶಗಳಿಂದ ದೂರವಿರಬೇಕು.
 • ಖದಿರಾದಿ ವಟಿ, ಏಲಾದಿವಟಿ ಇಲ್ಲವೆ ಜೇಷ್ಠಮಧುವಿನ ಬೇರನ್ನು ಸದಾ ಬಾಯಿಯಲ್ಲಿಟ್ಟುಕೊಳ್ಳುವುದರಿಂದ ಗಂಟಲು ಒಡೆತವು ಕಡಿಮೆ ಆಗುವುದು.

. ವಿವಿಧ ಜ್ವರಗಳು

ಮೈಯಲ್ಲಿ ಉಷ್ಣತೆಯು ಸಹಜೋಷ್ಣ ಮಟ್ಟಕ್ಕಿಂತ ಹೆಚ್ಚಾಗಿರುವುದೇ ಜ್ವರ, ಇದು ಪ್ರತ್ಯೇಕ ರೋಗವಾಗಿ, ಕೆಲ ವೇಳೆ ಇನ್ನಿತರ ರೋಗಗಳಲ್ಲಿ ಒಂದು ಲಕ್ಷಣವಾಗಿಯೂ ಕಂಡುಬರುವುದು. ಜ್ವರವು ಯಾವುದೇ ಹಂತದಲ್ಲಿದ್ದರೂ ರೋಗಿಯ ದೇಹ-ಮನಸ್ಸುಗಳಲ್ಲಿ ‘ಸಂತಾಪ’ವು ಮಾತ್ರ ಇದ್ದೇ ಇರುವುದು.

ಕಾರಣಗಳು: ವ್ಯಕ್ತಿಯು ಆಚರಿಸುವ ಮಿಥ್ಯಾ ಆಹಾರ – ವಿಹಾರಗಳಿಂದ ಆಮಾಶಯದಲ್ಲಿರುವ ದೋಷಗಳು ಪ್ರಕೋಪ ಹೊಂದಿ ಕೋಷ್ಠಾಗ್ನಿಯನ್ನು ಮಂದಗೊಳಿಸಿ ‘ಆಮ’ವನ್ನುಂಟು ಮಾಡುವುವು. ಈ ಆಮರಸವು ಕೋಷ್ಠದಿಂದ ಶಾಖಾ ಮಾರ್ಗಗಳ ಕಡೆಗೆ ರಸವಹ ಸ್ರೋತಸ್ಸುಗಳಲ್ಲಿ ಅವರೋಧವನ್ನುಂಟು ಮಾಡುವದು. ಇದರಿಂದ ಶರೀರದಲ್ಲಿ ಉತ್ಪತ್ತಿಯಾಗುವ ಶಾಖದ ಪ್ರಸಾರ ವ್ಯತ್ಯಸ್ಥವಾಗಿ ಕೋಷ್ಠಾಗ್ನಿಯು ಮಂದವಾಗಿ ಶಾಖೆಗಳಲ್ಲಿ ಹೆಚ್ಚು ಉಷ್ಣತೆ ಕಂಡು ಬರುವುದು. ಇದರಿಂದಲೇ ಮೈ ಬಿಸಿ ಹೆಚ್ಚಾಗಿರುವುದು. ಇದೇ ಜ್ವರದ ಪ್ರಮುಖ ಲಕ್ಷಣವೆನಿಸುವುದು.

ಎಂಟು ವಿಧಗಳು: ಈ ಜ್ವರಗಳು ವಾತ, ಪಿತ್ತ ಹಾಗೂ ಕಫಗಳೆಂದು ಮೂರು, ಎರಡು ದೋಷಗಳು ಕೂಡಿ ಮೂರು ಹಾಗೂ ಮೂರು ದೋಷಗಳು ಕೂಡಿ ಒಂದು ಹೀಗೆ ೭ ವಿಧಗಳು ಮತ್ತು ಅಗಂತು ಕಾರಣಗಳಿಂದ ಒಂದು ಹೀಗೆ ೮ ವಿಧ ಜ್ವರಗಳಿವೆ. ಅಗಂತು ಕಾರಣಗಳಿಂದ ಬರುವ ಜ್ವರಕ್ಕೆನೇ ಕಲ್ಯಾಣಕಾರಕದಲ್ಲಿ ‘ಭೂತಜ್ವರವೆಂದು’ ಕರೆದಿದ್ದಾರೆ.

ಜ್ವರದ ಪ್ರಾರಂಭ ಲಕ್ಷಣಗಳು : ಜ್ವರವು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಆಯಾಸ, ಸಂಕಟ, ಮುಖವು ಕಳೆಹೀನವಾಗುವುದು, ಬಾಯಿ ರುಚಿ ಕೆಡುವುದು, ಕಣ್ಣೀರು, ಶೀತಪದಾರ್ಥ – ಗಾಳಿ, ಬಿಸಿಲುಗಳು ಒಂದು ಸಾರೆ ಬೇಕೆನಿಸಿದರೆ ಇನ್ನೊಮ್ಮೆ ಬೇಡವೆನಿಸುವುದು. ಆಕಳಿಕೆ, ಅಂಗಾಂಗಗಳಲ್ಲಿ ನೋವು, ಮೈಭಾರ, ರೋಮಾಂಚನ, ಕಣ್ಣುಗಳಿಗೆ ಕತ್ತಲುಗೂಡಿಸಿದಂತಾಗುವುದು. ಈ ಮೊದಲಾದ ಲಕ್ಷಣಗಳು ಕಂಡುಬರುವುವು. ವಾತಾಧಿಕ್ಯವಿದ್ದರೆ ಮೇಲಿನ ಲಕ್ಷಣಗಳೊಡನೆ ವಿಶೇಷವಾಗಿ ಆಕಳಿಕೆಗಳು, ಪಿತ್ತಾಧಿಕ್ಯವಿದ್ದರೆ ಕಣ್ಣುರಿ ಹಾಗೂ ಕಫಾಧಿಕ್ಯವಿದ್ದರೆ ಅರುಚಿಗಳು ಹೆಚ್ಚಾಗಿದ್ದರೆ ಇನ್ನುಳಿದ ಜ್ವರಗಳಲ್ಲಿ ಅವುಗಳ ದೋಷಗಳಿಗನುಸಾರ ಲಕ್ಷಣಗಳಿರುತ್ತವೆ.

ಲಕ್ಷಣಗಳು: ಸ್ವೇದವಾಹಿನಿಗಳಲ್ಲಿ ಆಮದೋಷದಿಂದ ತಡೆ ಉಂಟಾಗಿ ಬೆವರು ಬಾರದೆ ಹಾಗೂ ದೇಹದಲ್ಲಿಯ ಹೆಚ್ಚುವರಿ ಶಾಖವು ಹೊರಹೋಗಲಾರದೆ ಸಂತಾಪವೆನಿಸುವುದು. ಮೈ ಕೈಗಳೆಲ್ಲ ನೋವು – ಇವು ಜ್ವರದ ಸಾಮಾನ್ಯ ಲಕ್ಷಣಗಳು.

ವಾತಜ್ವರದಲ್ಲಿ ಮೈನಡುಕ, ಜ್ವರದ ತಾಪದಲ್ಲಿ ಏರುಪೇರು, ಗಂಟಲು, ತುಟಿ ಒಣಗುವಿಕೆ, ನಿದ್ರಾನಾಶ, ಶೀನು, ಮಲಬದ್ಧತೆಗಳು ಕಂಡುಬರುವುವು.

ಪಿತ್ತಜ್ವರದಲ್ಲಿ ಸಂತಾಪ ಹೆಚ್ಚಿಗಿರುವುದು, ಅತಿಸಾರ, ನಿದ್ರಾಲ್ಪತೆ, ವಾಂತಿ, ಗಂಟಲು ತುಟಿ ಬಾಯಿಗಳಲ್ಲಿ ವ್ರಣಶೋಧದ ಲಕ್ಷಣಗಳು, ಪ್ರಲಾಪ, ಬಾಯಿಯಲ್ಲಿ ಕಹಿ, ಕಣ್ಣು ಕತ್ತಲುಗೂಡಿಸಿದಂತಾಗುವುದು, ಮೈ ಉರಿ, ಬಾಯಾರಿಕೆ, ಮಲಮೂತ್ರಗಳು ಹಳದಿಯಾಗುವಿಕೆ – ಈ ಲಕ್ಷಣಗಳು ಕಂಡುಬರುವುವು.

ಕಫ ಜ್ವರದಲ್ಲಿ ಜ್ವರದ ವೇಗ ಕಡಿಮೆ ಇರುವುದು. ಬಾಯಿಯು ಸಿಹಿಯಾಗಿರುವುದು, ರೋಗಿಯು ಮುಸುಕು ಹೊದ್ದುಕೊಂಡು ಮಲಗಿಕೊಂಡಿರುವನು, ಸೋಮಾರಿತನ, ಬಾಯಿಯಲ್ಲಿ ಲಾಲಾಸ್ರಾವ ಹೆಚ್ಚಾಗುವುದು, ವಾಂತಿ, ನೆಗಡಿ, ಅರುಚಿ, ಕೆಮ್ಮುಗಳಿರುವುವು.

ಮೂರು ದೋಷಗಳು ಸೇರಿದ ಸನ್ನಿಪಾತ ಜ್ವರದಲ್ಲಿ ಒಂದು ಸಾರೆ ಮೈ ಉರಿ – ಮತ್ತೊಂದು ಸಾರೆ ಶೀತ, ಅಸ್ಥಿ ಸಂದುಗಳಲ್ಲಿ ನೋವು, ಕಣ್ಣುಗಳಲ್ಲಿ ಕೊಳೆಯಾಗಿರುವ ನೀರು, ಕಣ್ಣಿನ ರೆಪ್ಪೆಗಳು ಬಡಿದುಕೊಳ್ಳುವುದು, ಕಿವಿಗಳಲ್ಲಿ ಶಬ್ದ, ಗಂಟಲಲ್ಲಿ ಮುಳ್ಳುಚುಚ್ಚಿದಂತಾಗುವುದು, ತೂಕಡಿಕೆ, ಅಜ್ಞಾನ, ಪ್ರಲಾಪ, ಕೆಮ್ಮು, ಉಬ್ಬುಸ, ತಲೆ ತಿರುಗುವಿಕೆ, ನಾಲಿಗೆ ಬಿದ್ದಂತೆನಿಸುವುದು ಹಾಗೂ ಒರಟಾಗಿರುವುದು.

ಹೆಚ್ಚಿಗೆ ಜ್ವರ ಬಂದು ಎಚ್ಚರ ತಪ್ಪಿ ಬೀಳುವುದು, ಅಂಗಾಂಗಗಳಲ್ಲಿ ಅತಿಯಾದ ನೋವು, ಧಾತುಗಳ ಕ್ಷೀಣತೆ, ಅತಿಯಾದ ನೀರಡಿಕೆ, ವಾಂತಿ, ಉಬ್ಬುಸ, ಶರೀರದಲ್ಲಿ ಚುಚ್ಚಿದಂತಾಗುವುದು. ಮಲ-ಮೂತ್ರಾವರೋಧ, ದಾಹ, ಬಿಕ್ಕು, ಗಂಟಲು ಆರಿಬರುವುದು, ಅತಿಸಾರ, ಮೈಬಾವು, ಕೆಮ್ಮು – ಈ ಲಕ್ಷಣಗಳು ಸನ್ನಿಪಾತ ಜ್ವರದಲ್ಲಿದ್ದರೆ ಅದು ಚಿಕಿತ್ಸೆಗೆ ಅಸಾಧ್ಯವೆಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.

ಚಿಕಿತ್ಸೆ: ಹೊಸದಾಗಿ ಬಂದ ಜ್ವರದಲ್ಲಿ ಹಗಲು ನಿದ್ರೆ, ಸ್ನಾನ, ಎಣ್ಣೆ ಸ್ನಾನ, ಭಾರವಾದ ಊಟ, ಸಂಭೋಗ, ಕೋಪ, ಬೀಸುವ ಗಾಳಿ, ವ್ಯಾಯಾಮ ಹಾಗೂ ಒಗರಾಗಿರುವ ಆಹಾರ ಪದಾರ್ಥಗಳನ್ನು ಬಿಡಬೇಕು.

ತರುಣಜ್ವರದಲ್ಲಿ ಅಮಪಚನವಾಗುವಷ್ಟು ಮಾತ್ರ ಲಂಘನ ಮಾಡಿಸಬೇಕು. ಮೈ ಬೆವರಿಸುವುದು, ಆಹಾರ ಕಾಲದಲ್ಲಿ ತಿಕ್ತರಸ ದ್ರವ್ಯಗಳಿಂದ ಮಾಡಿರುವ ಯಾವಾಗೂ ಮುಂತಾದ ಲಘು ಅನ್ನವನ್ನು ಸೇವಿಸುವುದು ಮತ್ತು ಪಾಕವಾಗದಿರುವ ದೋಷಗಳನ್ನು ಪಚನಮಾಡುವ ಔಷಧಿಗಳನ್ನು ಕೊಡುವುದು ಹಿತಕರ. ವಾತಕಫ ಪ್ರಧಾನ್ಯತೆ ಇದ್ದರೆ ಬಿಸಿನೀರು, ಪಿತ್ತಜ್ವರದಲ್ಲಿ ಕಾದಾರಿದ ನೀರನ್ನು ಕುಡಿಯಲು ಕೊಡಬೇಕು. ದೋಷಗಳು ಉದ್ರೇಕವಾಗಿದ್ದು ರೋಗಿ ಸ್ತಬ್ಧನಾಗಿದ್ದರೆ ಮಾತ್ರ ಲಂಘನ ಮಾಡಿಸಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಜ್ವರದ ಪೂರ್ವರೂಪಗಳಿದ್ದಾಗಲೇ ಬೆಚ್ಚಗಿನ ನೀರನ್ನು ಹೆಚ್ಚು ಕುಡಿಸಿ ವಾಂತಿ ಮಾಡಿಸಬೇಕು. ತೀಕ್ಷ್ಣ ವಿರೇಚಕ ಔಷಧಿ ಕೊಟ್ಟು ಮಲಾಂಶವನ್ನು ಹೊರಹಾಕಬೇಕು. ಹೀಗೆ ಮಾಡಿದರೆ ಜ್ವರಗಳು ಪ್ರಕಟವಾಗುವುದಿಲ್ಲ.

ವಾತಜ್ವರ ಚಿಕಿತ್ಸೆ

ಜ್ವರವು ಊಟವಾದ ಸ್ವಲ್ಪ ಹೊತ್ತಿನೊಳಗೆ ಬರುವಂತಿದ್ದರೆ ಅದಕ್ಕೆ ವಾಂತಿ ಆಗಲು ಔಷಧ ಕೊಡಬೇಕು. ೨೫೦ ರಿಂದ ೫೦೦ ಮಿಲಿಗ್ರಾಂ ಬಜೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿದರೆ ವಾಂತಿ ಆಗುವುದು.

ಅಮೃತಬಳ್ಳಿ+ ಒಣಶುಂಠಿಗಳನ್ನು ೫೦೦ ಮಿಲಿ ಗ್ರಾಂ ಸಮ ಪ್ರಮಾಣ ತೆಗೆದುಕೊಂಡು ಅದರ ಕಷಾಯ ಮಾಡಿ ಕುಡಿಸಬೇಕು.

ತ್ರಿಫಲಾ, ತ್ರಿಕಟು, ಬೆಲ್ಲ, ಸಕ್ಕರೆ ಸಮಭಾಗ, ಇದಕ್ಕೆ ಅರ್ಧ ಭಾಗ ಬಿಳಿ ತಿಗಡೆ ತೆಗೆದುಕೊಂಡು ಚೂರ್ಣಿಸಿ ೨೫೦-೫೦೦ ಮಿಲಿ ಗ್ರಾಂ ಬಿಸಿನೀರಿನಲ್ಲಿ ಕೊಡಬೇಕು. ಇದರಿಂದ ವಾತಜ್ವರವಲ್ಲದೆ ಕೆಮ್ಮು, ಹೊಟ್ಟೆನೋವು, ಅರುಚಿಗಳು ದೂರವಾಗುವುವು.

ಪಥ್ಯ: ಅನ್ನ ಬೇಯಿಸುವಾಗ್ಗೆ ಅದಕ್ಕೆ ಶುಂಠಿ, ಮೆಣಸು, ಜೀರಿಗೆಗಳನ್ನು ಹಾಕಿ ರುಚಿಗೆ ತಕ್ಕಂತೆ ಸೈಂಧವ ಲವಣ ಸೇರಿಸಿ, ತುಪ್ಪವನ್ನು ಹಾಕಿ ಊಟಕ್ಕೆ ಕೊಡಬೇಕು. ಹಾಲಿನಲ್ಲಿ ಶುಂಠಿ ಸೇರಿಸಿ ಕಾಯಿಸಿ ಕುಡಿಯಲು ಕೊಡಬಹುದು. ಅನ್ನಕ್ಕೆ ನಿಂಬೆಹಣ್ಣಿನ ರಸ ಹಾಕಿಕೊಳ್ಳಬಹುದು. ತಾಜಾ ಮಜ್ಜಿಗೆಗೆ ಸೈಂಧವ ಲವಣ ಹಾಕಿ ಕುಡಿಯುವಂತೆ ಹೇಳಬೇಕು.

ಪಿತ್ತ ಜ್ವರ: ಪರ್ಪಾಟಕ, ಚಂದನ, ಲಾವಂಚಗಳನ್ನು ೫೦೦ ಮಿಲಿ ಗ್ರಾಂ ಶುಂಠಿ ೨೫೦ ಮಿಲಿ ಗ್ರಾಂ ತೆಗೆದುಕೊಂಡು ೨೦೦ ಮಿಲಿ ನೀರಿನಲ್ಲಿ ಹಾಕಿ ಚತುರ್ಥಾಂಶ ಕಷಾಯ ಮಾಡಿಕೊಡಬೇಕು.

ಅತ್ತಿಬೇರು ೫೦೦ ಮಿಲಿ ಗ್ರಾಂ, ಅಮೃತಬಳ್ಳಿ ೧ ಗ್ರಾಂ ತೆಗೆದುಕೊಂಡು ೨೦೦ ಮಿಲಿ ನೀರಿನಲ್ಲಿ ಹಾಕಿ ಚತುರ್ಥಾಂಶಕ್ಕೆ ಕುದಿಸಿ, ಸೋಸಿಕೊಂಡು ಅದಕ್ಕೆ ತಕ್ಕಷ್ಟು ಕೆಂಪು ಸಕ್ಕರೆ ಹಾಕಿ ಕೊಡಬೇಕು.

ಪಥ್ಯ : ಒಣಶುಂಠಿ ಹಾಕಿ ಬೇಯಿಸಿದ ಅನ್ನದ ಗಂಜಿಯನ್ನು ಕುಡಿಯಲು ಕೊಡಬೇಕು. ಇದರೊಡನೆ ಸಕ್ಕರೆ ಇಲ್ಲವೆ ತಾಜಾ ಮಜ್ಜಿಗೆಯನ್ನು ಸೇರಿಸಿಕೊಳ್ಳಬಹುದು. ನೆಲ್ಲಿಚೆಟ್ಟನ್ನು ೨೫೦-೫೦೦ ಮಿಲಿ ಗ್ರಾಂ ನಷ್ಟು ಹೆಸರು ಬೇಳೆಯೊಡನೆ ಬೇಯಿಸಿ ತಯಾರಿಸಿದ ಸಾರಿಗೆ ನಿಂಬೆ ಹುಳಿ ಹಾಕಿ ಮೆತ್ತಿಗಿನ ಅನ್ನವನ್ನು ಕೊಡಬಹುದು. ಸಿಹಿ ಹಣ್ಣಗಳ ರಸ ಕೊಡಬಹುದು. ಸಕ್ಕರೆ ಹಾಕಿ ಹುಳಿ ಇಲ್ಲದ ತಾಜಾ ಮಜ್ಜಿಗೆಯನ್ನು ಕುಡಿಸಬಹುದು. ಆದರೆ ಹುಳಿ, ಉಪ್ಪಿನ ಪದಾರ್ಥಗಳನ್ನು ಕೊಡಬಾರದು.

ಕಫ ಜ್ವರ : ಪಂಚಕೋಲ ಎಂದರೆ ಹಿಪ್ಪಲಿ, ಹಿಪ್ಪಲಿ ಮೂಲ, ಚವ್ಯ, ಶುಂಠಿ, ಚಿತ್ರಮೂಲಗಳನ್ನು ೧೨೫ ಮಿಲಿ ಗ್ರಾಂ ಪ್ರತಿಯೊಂದನ್ನು ತೆಗೆದುಕೊಂಡು ಅರ್ಧಾಂಶ ಕಷಾಯ ಮಾಡಿ ರಾತ್ರಿ ಕುಡಿಯಲು ಕೊಡಬೇಕು. ಈ ಜ್ವರದಲ್ಲಿ ಕಫ ಕೇತುರಸ, ತ್ರಿಭುವನ ಕೀರ್ತಿಗಳು ಚೆನ್ನಾಗಿ ಕೆಲಸ ಮಾಡುತ್ತವೆ.

ಪಥ್ಯ – ಹುರಳಿಕಟ್ಟು, ಕಡಲೆ ಕಟ್ಟು, ಮತ್ತೆ ನೀರು ಹಾಕಿ ಬೇಯಿಸಿದ ಅನ್ನ, ಹಳೆ ಉಪ್ಪಿನಕಾಯಿ ಕೊಡಬೇಕು. ಅತಿಯಾಗಿ ಸಿಹಿ, ಹುಳಿ, ಉಪ್ಪಿನ ಪದಾರ್ಥಗಳನ್ನು ಸೈಂಧವಲವಣಗಳನ್ನು ಕೊಡಬಾರದು.

ವಾತಪಿತ್ತ ಜ್ವರ: ಅಮೃತಬಳ್ಳಿ, ಪರ್ಪಾಟಕ, ಜೇಕಿನಗಡ್ಡೆ, ನೆಲಬೇವು, ಶುಂಠಿಗಳನ್ನು ಪ್ರತಿಯೊಂದನ್ನು ೧೨೫ ರಿಂದ ೨೫೦ ಮಿಲಿ.ಗ್ರಾಂ ತೆಗೆದುಕೊಂಡು ೨೦೦ ಮಿ.ಲಿ. ನೀರಿನಲ್ಲಿ ಹಾಕಿ ಕುದಿಡಿ, ಚತುರ್ಥಾಂಶಕ್ಕೆ ಇಳಿಸಿಕೊಂಡು ಬೆಳಿಗ್ಗೆ ಕುಡಿಯಲು ಕೊಡಬೇಕು.

ಬೀಜದ್ರಾಕ್ಷಿ ೧೦ ಗ್ರಾಂ, ನೆಲಬೇವು ೫ ಗ್ರಾಂ ಅಮೃತಬಳ್ಳಿ ೫ ಗ್ರಾಂ, ಅಡಸಾಲದ ಎಲೆ ೧೦ – ಇವೆಲ್ಲವನ್ನು ನೀರಿನಲ್ಲಿ ಹಾಕಿ ಅರ್ಧಾಂಶ ಕಷಾಯ ಮಾಡಿ ಬೆಳಿಗ್ಗೆ ಕೊಡಬೇಕು.

ಪಥ್ಯ : ತೊಗರಿಬೇಳೆ ಕಟ್ಟು + ಅನ್ನ

ವಾತಕಫ ಜ್ವರ : ಜೇಕಿನಗಡ್ಡೆ, ಪರ್ಪಾಟಕ, ಶುಂಠಿ, ಅಮೃತಬಳ್ಳಿ ತುರುಚಿ ಪ್ರತಿಯೊಂದನ್ನು ೧೨೫ ಮಿಲಿಗ್ರಾಂ ತೆಗೆದುಕೊಂಡು ೨೦೦ ಮಿಲೀ ನೀರಿನಲ್ಲಿ ಹಾಕಿ ಅರ್ಧಾಂಶ ಕಷಾಯ ಮಾಡಿ ರಾತ್ರಿ ಕೊಡಬೇಕು. ಇದರಿಂದ ಅರುಚಿ, ವಾಂತಿ, ದಾಹ, ಬಾಯಾರಿಕೆಗಳು ದೂರವಾಗುವುವು.

ಗುಳ್ಳದ ಬೇರು, ಅಮೃತಬಳ್ಳಿ, ಶುಂಠಿ, ಪುಷ್ಕರ ಮೂಲ – ಇವುಗಳಲ್ಲಿ ೧೨೫ ಮಿಲಿಗ್ರಾಂ ತೆಗೆದುಕೊಂಡು ಮೇಲಿನಂತೆಯೇ ಕಷಾಯ ಮಾಡಿ ಕೊಡಬೇಕು. ಇದರಿಂದ ಶ್ವಾಸ-ಕಾಸ, ಅರುಚಿ, ಹೊಟ್ಟೆನೋವು, ವಾತಶ್ಲೇಷ್ಮ ಜ್ವರಗಳಲ್ಲದೆ ತ್ರಿದೋಷಜ ಜ್ವರವೂ ಗುಣವಾಗುವುದು.

ಪಥ್ಯ: ರವೆಗಂಜಿಗೆ ಸ್ವಲ್ಪ ಉಪ್ಪು ಹಾಕಿ ಕೊಡಬೇಕು.

ಪಿತ್ತ ಕಫಜ್ವರ: ಹಾಗಲಕಾಯಿಯ ರಸ ೨ ಚಮಚಕ್ಕೆ ಜೀರಿಗೆ ಪುಡಿ – ೧೨೫ ಮಿಲಿಗ್ರಾಂ ಕಲಿಸಿ ಕೊಟ್ಟರೆ ಚಳಿ ಬಂದು ಬರುವ ಜ್ವರವು ನಿಲ್ಲುವುದು.

ಕಟುಕರೋಹಿಣಿ, ಲಾವಂಚ, ಹವೀಜ, ಪರ್ಪಾಟ, ಜೇಕಿನಗಡ್ಡೆ ಪ್ರತಿಯೊಂದನ್ನು ೧೨೫ ಮಿಲಿಗ್ರಾಂ ತೆಗೆದುಕೊಂಡು ೨೦೦ ಮಿಲಿ ನೀರಿನಲ್ಲಿ ಹಾಕಿ ಕುದಿಸಿಕೊಂಡು ಚತುರ್ಥಾಂಶಕ್ಕೆ ಇಳಿಸಿ ಬಿಟ್ಟು ಬಿಟ್ಟು ಬರುವ ಜ್ವರಕ್ಕೆ ಮಧ್ಯಾಹ್ನ ಕೊಡಬೇಕು.

ಪಥ್ಯ : ಮಜ್ಜಿಗೆ ಅನ್ನ, ರವೆ ಗಂಜಿ, ಸೈಂಧವ, ಜೀರಿಗೆ.

ತ್ರಿದೋಷಜ ಜ್ವರ: ಈ ಜ್ವರದಲ್ಲಿ ಮೊಟ್ಟ ಮೊದಲಿಗೆ ಜೀರ್ಣವಾಗದೆ ಬಿದ್ದಿರುವ ಆಹಾರಾಂಶಗಳನ್ನು ಹೊರಗೆ ಹಾಕುವ ಪ್ರಯತ್ನ ಮಾಡಬೇಕು. ಅವರೊಡನೆ ಕಫವೂ ಹೊರ ಹೋಗುವುದು. ಶುಂಠಿ, ಹಿಪ್ಪಲಿ, ಮೆಣಸು, ಜೇಷ್ಠಮಧು- ಇವು ನಾಲ್ಕು ಆಮ ಮತ್ತು ಕಫದೋಷಗಳನ್ನು ಸ್ವಚ್ಛಗೊಳಿಸಲು ಉತ್ತಮವೆನಿಸಿದೆ.

ಎಲ್ಲ ವಿಧ ಸನ್ನಪಾತಜ್ವರಗಳಲ್ಲಿ ಲಂಘನವು ಬಹಳ ಹಿತಕಾರಿ. ಅದರ ಕ್ಷಯ, ಭಯ, ವಾಯು, ಶೋಕ, ಕಾಮ ಕ್ರೋಧಾದಿಗಳಿಂದ ಉತ್ಪನ್ನವಾದ ಜ್ವರಗಳಲ್ಲಿ ಲಂಘನ ಮಾಡಿಸಬಾರದು.

ನಿತ್ಯ ಒಮ್ಮೆ ರೋಗಿಗೆ ಬಸ್ತಿ ಕೊಟ್ಟು ಮಲಾಂಶಗಳನ್ನು ಹೊರಹಾಕಬೇಕು. ಮಲವು ಹೊರಬಿದ್ದು ಜ್ವರ ಕಡಿಮೆ ಆಗಿ ದೇಹವು ಲಘುವಾದರೆ ಜ್ವರವು ಪಕ್ವವಾಗಿದೆ ಎಂದು ತಿಳಿಯಬೇಕು. ಹೀಗೆ ಜ್ವರಪಕ್ವವಾದ ಬಳಿಕವೇ ಔಷಧಿಗಳನ್ನು ಪ್ರಾರಂಭಿಸಬೇಕು. ಆದರೂ ಅನೇಕ ಸಾರೆ ಜ್ವರದ ತೀಕ್ಷ್ಣ ಲಕ್ಷಣಗಳು ವಿಶೇಷವಾಗಿ ಅವುಗಳ ಭಾದೆಯಿಂದಲೇ ಪ್ರಾಣಕ್ಕೆ ಹಾನಿಯಾಗಬಹುದು. ಆದ್ದರಿಂದ ಅಂತಹ ಕಠಿಣವಾದ ತೊಂದರೆ ಕಡಿಮೆ ಮಾಡುವುದಕ್ಕಾಗಿ ಪ್ರಕೃತಿಗೆ ತಕ್ಕಸಮಯವು ದೊರೆಯುವಂತೆ ಕೆಲವು ಸೌಮ್ಯವಾದ ಔಷಧಿಗಳನ್ನು ಬಾಹ್ಯೋಪಚಾರಗಳನ್ನೂ ಮಾಡುವುದುತ್ತಮ. ರೋಗಿಗೆ ಸಂಪೂರ್ಣ ಲಂಘನ ಮಾಡಲು ಸಾಧ್ಯವಾಗದಿದ್ದರೆ, ಆಕಳ ಸಿಹಿ ಮಜ್ಜಿಗೆ ಇಲ್ಲವೆ ಹಣ್ಣುಗಳ ರಸಗಳನ್ನು ಕುಡಿಯಲು ಕೊಡಬೇಕು.

ಜ್ವರವು ಹಚ್ಚಿಗಿದ್ದಾಗ ಹಣೆಗೆ ತಣ್ಣೀರಿನ ಪಟ್ಟಿಯನ್ನು, ಮೈಯನ್ನೆಲ್ಲ ತಣ್ಣೀರಿನ ಬಟ್ಟೆಯಿಂದ ಒರೆಸುವುದನ್ನೂ, ಎರಡು ಪಾದಗಳನ್ನು ೧೦-೧೫ ನಿಮಿಷಗಳವರೆಗೆ ತಣ್ಣೀರಿನಲ್ಲಿಡುವುದನ್ನೂ ಮಾಡಿದರೆ ಜ್ವರದ ವೇಗವು ಇಳಿಯುವುದು. ಈ ಸಂದರ್ಭದಲ್ಲಿ ಮೈಗೆ ತಂಗಾಳಿ ಹತ್ತದಂತೆ ಎಚ್ಚರಿಕೆ ವಹಿಸಬೇಕು. ಹೀಗೆ ಮಾಡುವುದಕ್ಕೆ ಮೊದಲು ರೋಗಿಗೆ ಸ್ವಲ್ಪ ಸ್ವಲ್ಪವಾಗಿ ಬಿಸಿನೀರನ್ನು ಕುಡಿಸುತ್ತಿದ್ದರೆ ಮೈಯಲ್ಲಿ ಬೆವರು ಬರಲು ಅನುಕೂಲವಾಗುವುದು. ಇದರಂತೆ ರೋಗಿಯನ್ನು ನಿರ್ವಾತ ಪ್ರದೇಶದಲ್ಲಿ ಹೊದಿಕೆ ಹೊದಿಸಿ ಮಲಗಿಸಿ ಬಿಸಿ ನೀರನ್ನು ಕುಡಿಯಲು ಕೊಟ್ಟರೆ ಬೆವರು ಬರುವುದು.

. ಶ್ಲೇಷ್ಮಕ ಸನ್ನಿಪಾತ ಜ್ವರ (Influenza Fever)

ಈ ರೋಗ ಲಕ್ಷಣಗಳು ಒಮ್ಮಿಂದೊಮ್ಮೆಲೆ ನೆಗಡಿ, ಅಸ್ವಸ್ಥತೆ, ತಲೆಶೂಲೆ, ಬೆನ್ನು ಹೊಡೆತ ಹಾಗೂ ಮೈಕೈಗಳ ನೋವಿನಿಂದ ಪ್ರಾರಂಭವಾಗುತ್ತದೆ. ಊಟದಲ್ಲಿ ಅನಾಸಕ್ತಿ ಉಬ್ಬಳಿಕೆ, ವಾಂತಿ, ಛಳಿಗಳು ಕೆಲವರಲ್ಲಿ ಕಾಣಿಸಿಕೊಳ್ಳುವುವು. ಜ್ವರವು ೧೦೨ ರಿಂದ ೧೦೪ ವರೆಗೆ ಕಾಣಿಸಿಕೊಂಡು ೨-೩ ದಿವಷವಿರುವುದು. ಮುಖವೆಲ್ಲ ಬಾಡಿದಂತೆ, ಶಕ್ತಿಗುಂದಿದಂತೆ ಆಗುತ್ತದೆ. ಒಣ ಕೆಮ್ಮು ಕಂಡುಬರುವುದು. ಸಾಮಾನ್ಯವಾದ ಚಿಕತ್ಸೆಯಿಂದ ೩-೫ ದಿವಸಗಳಲ್ಲಿ ಗುಣವಾಗುವುದು. ಆದರೆ ಕೆಲ ಉಪದ್ರವ ಲಕ್ಷಣಗಳಿಂದ ಶ್ವಾಸನಾಳದ ಬಾವು, ಶ್ವಾಸಕೋಶಗಳ ಬಾವುಗಳು ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಹೃದಯ ರೋಗವಿದ್ದವರಿಗೆ ಕೆಲ ಅನೀರಿಕ್ಷಿತ ತೊಂದರೆಗಳಾಗುವುವು. ಈ ವಿಕಾರವು ಪೂರ್ಣ ಗುಣವೆನಿಸಿದರೂ ೮-೧೦ ದಿವಸಗಳವರೆಗೆ ದೌರ್ಬಲ್ಯ – ನಿರಾಸಕ್ತಿ ಭಾವಗಳು ರೋಗಿಯಲ್ಲಿ ಮುಂದು ವರೆಯುವುವು.

ಚಿಕಿತ್ಸೆ: ರೋಗಿಗೆ ಸಂಪೂರ್ಣ ವಿಶ್ರಾಂತಿ ಅವಶ್ಯ. ಕುಡಿಯಲು ಬಿಸಿನೀರು ಕೊಡಬೇಕು. ಕೇವಲ ಹಗುರವಾದ, ಕೆರಳಿಕೆಯನ್ನುಂಟು ಮಾಡದ ಆಹಾರ ಪದಾರ್ಥಗಳನ್ನು ಮಾತ್ರ ಉಣ್ಣಲು ಕೊಡಬೇಕು. ಮಲಬದ್ಧತೆ ಇದ್ದರೆ ರಾತ್ರಿ ಮಲಗುವಾಗ್ಗೆ ಒಂದು ಚಮಚ ತ್ರಿಫಲಾ ಚೂರ್ಣವನ್ನು ಬಿಸಿನೀರಿನಲ್ಲಿ ಕೊಡಬೇಕು. ಮರುದಿನ ಬೆಳಿಗ್ಗೆ ಸೌಮ್ಯವಿರೇಚನವಾಗುವುದು. ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುವುದರಿಂದ ರೋಗಿಯನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸಿಸಬೇಕು.

 • ತ್ರಿಭುವನ ಕೀರ್ತಿ ಇಲ್ಲವೆ ಕಸ್ತೂರಿ ಭೈರವ ರಸ ಮಾತ್ರೆಗಳನ್ನು ದಿನಕ್ಕೆ ೩ ರಂತೆ ಕೊಡಬೇಕು. ಇವು ಜ್ವರ ಕೆಮ್ಮುಗಳನ್ನು ಇಳಿಸುವುವು.
 • ಜ್ವರದ ಪ್ರಾರಂಭದಲ್ಲಿ ರಸಮಾಣಿಕ್ಯ, ಹಿಪ್ಪಲಿಗಳನ್ನು ಸಕ್ಕರೆ ನೀರಿನೊಡನೆ ಕೊಡಬೇಕು.
 • ಅಮೃತಸತ್ವ ಇಲ್ಲವೆ ಅಮೃತಾರಿಷ್ಟವನ್ನು ಜ್ವರ ತಪ್ಪಿಸಿ ಬರಲಾರಂಭಿಸಿದರೆ ಕೊಡಬೇಕು. ಇದು ಬೆವರನ್ನು ಬರಿಸಿ ಜ್ವರ ಇಳಿಸುವುದು. ಪ್ರಮಾಣ ೩ ಚಮಚ ದಿನಕ್ಕೆ ಎರಡು ಸಾರೆ. ಅಮೃತಸತ್ವವಾದರೆ ೧೨೫ ಮಿ.ಲಿ.ಗ್ರಾಂ ೨ ಸಾರೆ.
 • ಛಳಿ ಜ್ವರ, ಕೆಮ್ಮು ಹಾಗೂ ಸಂದು ನೋವುಗಳು ವಿಶೇಷವಾಗಿದ್ದರೆ ದಶಮೂಲಾರಿಷ್ಟವನ್ನು ೩ ಚಮಚದಂತೆ ಎರಡು ಸಾರೆ ಕೊಡಬೇಕು. ಇಲ್ಲವೆ ಮಹಾಸುದರ್ಶನ ಚೂರ್ಣ ೨೫೦ ಮಿ.ಲಿ.ಗ್ರಾಂ ೩ ಸಾರೆ.
 • ಗೋದಂತಿ ಭಸ್ಮವು ಪಿತ್ತಜ್ವರ, ತಲೆ ನೋವು, ಜೀರ್ಣಜ್ವರ, ವಿಷಮಜ್ವರ, ದಾಹ, ತೃಷ್ಣಾಗಳನ್ನು ನಿವಾರಿಸುವುದು.

. ಛಳಿ ಜ್ವರ (Malaria)

ಆಯುರ್ವೇದದ ಪ್ರಕಾರ ಇದನ್ನು ವಿಷಮಜ್ವರದಲ್ಲಿ ಸೇರಿಸಬಹುದು. ಇದರಲ್ಲಿ ಛಳಿ ಬಂದು ಜ್ವರ ಏರಿ ಮತ್ತೆ ಮತ್ತೆ ಇಳಿದು ನಂತರವು ತಪ್ಪಿ ತಪ್ಪಿಸಿ ಈ ರೀತಿ ಜ್ವರ ಬರಲಾರಂಭಿಸುವುದು. ಮಲೆನಾಡು ತುಂಬ ಹೊಲಸಾದ ನೀರು ಇರುವಲ್ಲಲಿ, ಕೊಳಚೆ ಪ್ರದೇಶ ಅನಾರೋಗ್ಯಕರವಾದ ಹವೆ, ಆಹಾರ, ನೀರು, ಸೇವಿಸುವವರಿಗೆ ಈ ರೋಗ ಬರುವುದು ಹೆಚ್ಚು.

ಲಕ್ಷಣಗಳು: ಮೊಟ್ಟ ಮೊದಲು ಆಯಾಸ, ಬಳಲಿಕೆ, ಛಳಿ ಎನಿಸುವುದು. ತುಂಬ ನಡುಕ ಹೀಗೆ ಒಮ್ಮೆಲೆ ಲಕ್ಷಣಗಳು ಪ್ರಾರಂಭವಾಗಿ ಈ ಕೆಳಗಿನ ಹಂತಗಳನ್ನು ತೋರಿಸುವುದು.

. ಶೀತಸ್ಥಿತಿ: ಶೀತ, ತಲೆನೋವು, ಉಬ್ಬಳಿಕೆ, ವಾಂತಿಗಳಿದ್ದು ಕೂಡಲೇ ರೋಗಿಗೆ ನಡುಕ ಬಂದು ಹಲ್ಲುಗಳನ್ನು ಕಟಗರಿಸಲಾರಂಭಿಸುವನು. ಉಷ್ಣಾಂಶವು ಕಡಿಮೆ ಆಗುವುದು. ಆದರೆ ಗುದಾಂಶದ ಉಷ್ಣಾಂಶ ಹೆಚ್ಚುತ್ತ ಹೋಗುವುದು.

. ಉಷ್ಣ ಸ್ಥಿತಿ: ಮೇಲಿನ ಹಂತವಾದ ಒಂದೆರಡು ಗಂಟೆಗಳ ನಂತರ ರೋಗಿಗೆ ಜ್ವರ ಹಾಗೂ ತಲೆನೋವುಗಳು ಕಾಣಿಸತೊಡಗುವುವು. ನಾಡೀ ವೇಗವು ತುಂಬಿದಂತಿದ್ದು ತೀವ್ರವಾಗಿರುವುದು. ಈ ಸ್ಥಿತಿಯಲ್ಲಿ ಎಚ್ಚರ ತಪ್ಪುವಿಕೆ, ಬಡಬಡಿಸುವುದು ಹಾಗೂ ಹೆಚ್ಚಿನ ಉಷ್ಣತೆ ಕಂಡುಬರುವವು.

. ಸ್ವೇದ ಸ್ಥಿತಿ: ಒಣಗಿದ ಹಾಗೂ ಬಿಸಿಯಾದ ಚರ್ಮವು ಒಮ್ಮೆಲೆ ತಂಪಾಗಿ ಬೆವರು ಅತಿಯಾಗಿ ಬರಲಾರಂಭಿಸುವುದು. ಉಷ್ಣಾಂಶವು ಸಹಜಸ್ಥಿತಿಗಿಳಿದು ರೋಗಿ ಸ್ವಲ್ಪ ಚೇತರಿಸಿಕೊಳ್ಳುವನು.

ಪಾಂಡು ರೋಗ, ಪ್ಲೀಹ ವೃದ್ಧಿ, ಯಕೃತ ವೃದ್ಧಿಗಳು – ಈ ರೋಗದ ಉಪದ್ರವ ಸ್ವರೂಪದಲ್ಲಿ ಕಂಡುಬರುವವು.

ಈ ರೀತಿಯ ಛಳಿಯು ದಿನಕ್ಕೊಮ್ಮೆ ಅಥವಾ ಎರಡು ಸಾರೆ, ಎರಡು ದಿವಸಕ್ಕೊಮ್ಮೆ ಇಲ್ಲವೆ ಮೂರು ದಿವಸಗಳಿಗೊಮ್ಮೆ ಬರುವುದು. ಕೆಲವು ವೇಳೆ ಅನೇಕ ದಿವಸಗಳವರೆಗೆ ವೇಳೆ ತಪ್ಪಿಸಿ ಜ್ವರ ಬರುತ್ತಿದ್ದರೂ ನಿಶ್ಚಿತ ಲಕ್ಷಣಗಳು ಕಂಡು ಬರದೇ ಹೋಗಿ ರೋಗ ನಿದಾನ ತಪ್ಪುವುದು. ಅಂತಹ ಪರಿಸ್ಥಿತಿಯಲ್ಲಿ ರಕ್ತದ ಪರೀಕ್ಷೆ ಮಾಡಿಸಿ ಅದರಲ್ಲಿ ಮಲೇರಿಯಲ್ ಪ್ಯಾರಾಸೈಟುಗಳಿವೆಯೇ ಹೇಗೆಂಬುದನ್ನು ಗೊತ್ತುಪಡಿಸುವುದು ಒಳ್ಳೆಯದು.

ಚಿಕಿತ್ಸೆ: ರೋಗಿಗೆ ಸಂಪೂರ್ಣ ವಿಶ್ರಾಂತಿ ಅವಶ್ಯ. ಕುಡಿಯಲು ಸಾಕಷ್ಟು ಬಿಸಿನೀರನ್ನು ಕೊಡಬೇಕು. ಬಿಸಿಲು-ಬೆಂಕಿಯನ್ನು ಕಾಯಿಸಬಾರದು. ರೋಗಿಗೆ ಛಳಿ ಬಂದಾಗ ಉಣ್ಣಿ ಬಟ್ಟೆಯಿಂದ ಕಾವು ಕೊಡಬೇಕು. ಅಲ್ಲದೇ ಶುಂಠಿ, ಮೆಣಸು, ಹವೀಜ, ದಾಲಚಿನ್ನಿಗಳಿಂದ ತಯಾರಿಸಿದ ಕಷಾಯವನ್ನು ಸಿದ್ಧಪಡಿಸಿ ಕುಡಿಯಲು ಕೊಡುವುದರಿಂದ ಮೈಯಲ್ಲಿನ ಛಳಿ ಕಡಿಮೆ ಆಗುವುದು. ಜ್ವರ ನಿಲ್ಲುವವರೆಗೆ ನಿತ್ಯ ೨ ಸಾರೆ ಈ ಕಷಾಯ ಕೊಡುತ್ತಿರಬೇಕು.

ಗೋದಂತಿ ಮಿಶ್ರಣ, ಕಿರಾತ ಕಲ್ವ, ಕರಂಜಾದಿ ವಟಿ, ಸಪ್ತವರ್ಣ ಘನಸತ್ವವಟಿ – ಆಗ್ಯುಮಿಕ್ಚರ್ ಚಿರಾಯಿತ ಮುಂತಾದವುಗಳು ಛಳಿ ಜ್ವರದಲ್ಲಿ ಚೆನ್ನಾಗಿ ಕಾರ್ಯ ಮಾಡುವುವು.

ಶೀತಮಣಿ ರಸ -೨೫೦ ಮಿಲಿಗ್ರಾಂ- ದಿನಕ್ಕೆ ೨ ಸಾರೆ ಬಿಸಿ ನೀರಿನಲ್ಲಿ ಮಹಾ ಜ್ವರಾಂಕುಶ ಸುದರ್ಶನ ಚೂರ್ಣ, ಪಂಚತಿಕ್ತಾರಿಷ್ಟ, ತ್ರಿಭುವನ ಕೀರ್ತಿ ಮೊದಲಾದ ಸಿದ್ಧೌಷಧಿಗಳು ಛಳಿ ಜ್ವರದಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ. ವೈದ್ಯರ ಸಲಹೆ ಪಡೆದು ಈ ಔಷಧಿಗಳನ್ನು ತೆಗೆದುಕೊಳ್ಳಬೇಕು.