ಅಶೋಕವೃಕ್ಷ, ಸುರಪುಷ್ಟ ವೃಷ್ಟಿ, ದಿವ್ಯಧ್ವನಿ, ಛತ್ರ, ಚಾಮರ, ರತ್ನಮಯ ಸಿಂಹಾಸನ, ಭಾಮಂಡಲ ಹಾಗೂ ದೇವ ದುಂದುಭಿಸ್ವರೂಪ ಅಷ್ಟಮಹಾ ಪ್ರತಿಹಾರ್ಯ ಹಾಗೂ ಹನ್ನೆರಡು ಪ್ರಕಾರದ ಸಭೆಗಳಿಂದ ವೇಷ್ಟಿತನಾದ ಶ್ರೀ ಋಷಭನಾಥ ತೀರ್ಥಂಕರ ಸಮವಸರಣದಲ್ಲಿ ಭರತ ಚಕ್ರವರ್ತಿ ಮುಂತಾದವರು ಆಗಮಿಸಿ, ವಿನಯಪೂರ್ವಕವಾಗಿ ತ್ರಿಕರಣ ಶುದ್ಧಿಯಿಂದ ತ್ರಿಲೋಕನಾಥರನ್ನು ನಮಸ್ಕರಿಸಿ ಹೀಗೆ ಕೇಳುತ್ತಾರೆ. “ಈ ವಿಶ್ವದಲ್ಲಿರುವ ಪುಣ್ಯಾತ್ಮರು ವಿಷ, ಶಸ್ತ್ರಾದಿಗಳಿಂದ ಅಪಘಾತಕ್ಕೊಳಗಾಗದೆ ಹೋದರೆ ದೀರ್ಘಾಯುಷಿಗಳಾಗುತ್ತಾರೆ. ಆದರೆ ಅನೇಕರಿಗೆ ಇವುಗಳು, ವಾತ-ಪಿತ್ತ-ಕಫಗಳ ಉದ್ರೇಕ, ಹವೆಯಲ್ಲಿ ಕಂಡುಬರುವ ವೈಪರೀತ್ಯಗಳು, ಜನರು ಆಚರಿಸುವ ಮಿಥ್ಯವಾದ ಆಹಾರ-ವಿಹಾರಗಳಿಂದ ರೋಗಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಕಾರಣ ತ್ರಿಲೋಕನಾಥನೇ ಈ ರೋಗ ರುಜಿನಗಳಿಂದ ಬಳಲುವ ವಿಶ್ವದ ಜನತೆಗೆ ಅವುಗಳ ಪರಿಹಾರ ಸ್ವರೂಪವಾಗಿ ಆಹಾರ, ಔಷಧಿಗಳನ್ನು ಹಾಗೂ ರೋಗಬಾರದಂತೆ ಆಚರಿಸಬೇಕಾದ ಆರೋಗ್ಯ ಕ್ರಮಗಳನ್ನು ಕೃಪೆ ಮಾಡಿ ನಿವೇದಿಸಬೇಕೆಂದು” ಹೇಳಿ ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗುತ್ತಾರೆ. ಆಗ ಸಮವಸರಣದಲ್ಲಿ ಭಗವಂತನ ಸಾಕ್ಷಾತ್‌ಪಟ್ಟದರಾಣಿ ಸರಸ ಶಾರದಾದೇವಿಯು ದಿವ್ಯಧ್ವನಿರೂಪದಲ್ಲಿ ಉಪದೇಶಿಸಲಾರಂಭಿಸುತ್ತಾಳೆ.

ವೈದ್ಯಕೀಯ ಶಾಸ್ತ್ರವನ್ನು ಪುರುಷ, ರೋಗ, ಔಷಧ ಹಾಗೂ ಕಾಲಗಳೆಂದು ನಾಲ್ಕು ಭೇದಗಳಲ್ಲಿ ವಿಭಜಿಸಿ ಅವುಗಳ ಲಕ್ಷಣ,ಭೇದ, ಪ್ರಭೇದ ಮುಂತಾದ ವಿಷಯಗಳನ್ನು ಸಂಕ್ಷಿಪ್ತವಾಗಿ ವರ್ಣಿಸಲಾರಂಭಿಸಿದಳು. ಇವೇ ಭಗವಂತನಿಂದ ಬಂದ ಸರ್ವಜ್ಞತ್ವದ ಸೂಚಕಗಳಾಗಿವೆ. ಈ ಶಾಸ್ತ್ರವೇ ಆಯುರ್ವೇದ.

ಭಗವಂತನ ದಿವ್ಯಧ್ವನಿ ಮೂಲಕ ಆಯುರ್ವೇದ ಸಂಬಂಧಿತ ಸಮಸ್ತ ವಿಷಯಗಳನ್ನು ಸಾಕ್ಷಾತ್ ಗಣಧರ ಪರಮೇಷ್ಠಿಗಳು ಮೊದಲು ತಿಳಿದುಕೊಂಡರು. ತದನಂತರ ಗಣಧರರೀಮದ ನಿರೂಪಿತ ವಾದ ವಸ್ತು ಸ್ವರೂಪವನ್ನು ನಿರ್ಮಲ ಬುದ್ಧಿ, ಶೃತ, ಅವಧಿ ಹಾಗೂ ಮನಃಪರ್ಯಯ ಜ್ಞಾನವನ್ನು ಯೋಗಿಗಳು ತಿಳಿದುಕೊಂಡರು. ಈ ಪ್ರಕಾರ ಈ ಸಂಪೂರ್ಣ ಆಯುರ್ವೇದ ಶಾಸ್ತ್ರವನ್ನು ಋಷಭ ತೀರ್ಥಂಕರಿಂದ ಮಹಾವೀರರವರೆಗೆ ೨೪ ತೀರ್ಥಂಕರರು ಬೆಳೆಸಿದರು. ಈ ಶಾಸ್ತ್ರವು ಅತ್ಯಂತ ವಿಸ್ತೃತ, ದೋಷ ಮುಕ್ತವಾದ ಹಾಗೂ ಗಂಭೀರ ವಸ್ತು ವಿವೇಚನೆಯಿಂದ ಕೂಡಿದೆ. ತೀರ್ಥಂಕರ ಮುಖ ಕಮಲಗಳಿಂದ ತನ್ನಿಂದ ತಾನೇ ಹುಟ್ಟಿಕೊಂಡ ಈ ಶಾಸ್ತ್ರ ಸ್ವಯಂಭೂ ಆಗಿದೆ. ಸನಾತನವಾಗಿದೆ. ಗೋವರ್ಧನ, ಭದ್ರಬಾಹು ಮೊದಲಾದ ಶೃತ ಕೇವಲಿಗಳ ಮುಖಾರವಿಂದಗಳಿಂದ, ಮುನಿಗಳಿಂದ ಸಾಕ್ಷಾತ್ ತಿಳಿದುಕೊಂಡಂಥಹುದೂ, ಉಪದೇಶಿಸಲ್ಪಟ್ಟದ್ದೂ ಆಗಿದೆ. ಈ ಪ್ರಕಾರ ಪರಂಪರಾಗ ಶಾಸ್ತ್ರಗಳ ಆಧಾರದಿಂದ ಉಗ್ರದಿತ್ಯಾಚಾರ್ಯರು ತಮ್ಮ ಕಲ್ಯಾಣಕಾರ ಗ್ರಂಥದಲ್ಲಿ ಆಯುರ್ವೇದದ ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಈ ಗ್ರಂಥವು ವಿಶ್ವದ ಸಮಸ್ತ ಜೀವಿಗಳ ಹಿತಕ್ಕಾಗಿ ಬರೆದದ್ದು ಎಂದೂ, ಸ್ವ-ಪರ ಕಲ್ಯಾಣಕಾರಕವಾದ ಈ ಗ್ರಂಥ ರಚನೆಕಾರ್ಯವನ್ನು ತಾವು ಒಂದು ತಪಶ್ಚರ್ಯ ಎಂದು ತಿಳಿದಿದ್ದಾಗಿಯೂ ಹೇಳಿದ್ದಾರೆ.

ಆಯುರ್ವೇದವೆಂದರೇನು?

ತೀರ್ಥಂಕರ ದಿವ್ಯಧ್ವನಿಯಿಂದ ಹೊರಟ ಈ ವೈದ್ಯಶಾಸ್ತ್ರಕ್ಕೆ ‘ಆಯುರ್ವೇದ’ವೆಂತಲೂ ಕರೆದಿದ್ದಾರೆ. ‘ಆಯುಃ’ ಎಂದರೆ ಆಯುಷ್ಯ. ‘ವೇದ’ ಮನನ ಮಾಡಿಕೊಂಡವರಿಗೆ ‘ವೈದ್ಯ’ರೆನ್ನುತ್ತಾರೆ. ಈ ಶಾಸ್ತ್ರವನ್ನು ಅಭ್ಯಸಿಸುವವರು ಆಚರಣ ಶುದ್ಧರು, ಬುದ್ಧಿವಂತರು, ಕುಶಲಮತಿಗಳು ಹಾಗೂ ನಮ್ರರಾಗಿರಬೇಕು. ಇಂಥವರನ್ನು ಆಯ್ಕೆ ಮಾಡಿ ಅವರಿಗೆ ಅಹಿಂಸೆ, ಸತ್ಯ, ಅಚೌರ್ಯಾದಿ ವ್ರತಗಳನ್ನು ಧಾರಣೆ ಮಾಡಿಸಿ ಗುರುವು ಈ ಪವಿತ್ರವಾದ ಶಾಸ್ತ್ರವನ್ನು ಕಲಿಸಬೇಕು.

ಆರೋಗ್ಯವಂತನ ಆರೋಗ್ಯವನ್ನು ರಕ್ಷಿಸುವುದು ಹಾಗೂ ರೋಗಿಗಳ ರೋಗ ವಿಮುಕ್ತಿಗೊಳಿಸಿ ಮತ್ತೆ ಆರೋಗ್ಯವಂತರನ್ನಾಗಿ ಮಾಡುವುದೇ ಈ ಶಾಸ್ತ್ರದ ಮೂಲ ಉದ್ದೇಶ.

ವೈದ್ಯಶಾಸ್ತ್ರವು ಸಮುದ್ರದ ಆಳ-ವಿಸ್ತಾರಗಳಂತೆ ಗಂಭೀರವಾಗಿದೆ, ವ್ಯಾಪಕವಾಗಿದೆ. ಇದನ್ನು ಸರಿಯಾಗಿ ತಿಳಿಯಬೇಕಾದರೆ ಪ್ರತ್ಯಕ್ಷ ದರ್ಶನ ಹಾಗೂ ಅನುಭವಗಳು ಬೇಕಾಗುತ್ತವೆ. ಅದರಂತೆ ವೈದ್ಯಶಾಸ್ತ್ರವನ್ನು ಕೂಡ ಅನುಭವದಿಂದಲೇ ತಿಳಿಯಬೇಕಾಗುತ್ತದೆ.

ಆಯುರ್ವೇದ ವಿದ್ಯೆಯನ್ನು ಕಲಿಯಬೇಕೆಂಬ ಇಚ್ಛೆಯುಳ್ಳ ವಿದ್ಯಾರ್ಥಿಗಳಿಗೆ ಗುರು, ಪುಸ್ತಕಗಳು, ಸಹಪಾಠಿಗಳು, ವಸತಿ, ಭೋಜನ ವ್ಯವಸ್ಥೆ ಮುಂತಾದವುಗಳು ಬಾಹ್ಯ ಸಾಧನೆಗಳಾದರೆ ಆರೋಗ್ಯ, ಬುದ್ಧಿ, ವಿನಯ,ಪ್ರಯತ್ನ ಹಾಗೂ ವಿದ್ಯೆ ಕಲಿಯಬೇಕೆಂಬ ವಾಂಛೆಗಳು ಅಂತರಂಗದ ಸಾಧನೆಗಳಾಗಿವೆ. ಇವೆಲ್ಲವುಗಳಿದ್ದರೆ ಮಾತ್ರ ಒಬ್ಬ ಒಳ್ಳೆ ವೈದ್ಯ ಹುಟ್ಟುವುದು ಸಾಧ್ಯ (ಕಲ್ಯಾಣಕಾರಕ ಅಥವಾ ಸ್ವಾಸ್ಥಸ್ಥ್ಯರಕ್ಷಣಾಧಿಕಾರ).

ಮುನಿಗಳಿಗೆ ಆಯುರ್ವೇದ ಶಾಸ್ತ್ರದ ಅವಶ್ಯಕತೆ : ಯಾವ ಮುನಿಯು ಆರೋಗ್ಯ ಶಾಸ್ತ್ರವನ್ನು ಚೆನ್ನಾಗಿ ತಿಳಿದುಕೊಂಡು ಅದರಂತೆ ಆಹಾರ-ವಿಹಾರಗಳನ್ನು ಸೇವಿಸುತ್ತ ತನ್ನ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುತ್ತಾನೆಯೋ. ಆತನು ಸಿದ್ಧಸುಖದ ಮಾರ್ಗವನ್ನು ಪ್ರಾಪ್ತಿಮಾಡಿಕೊಳ್ಳುತ್ತಾನೆ. ಇದರ ಹೊರತಾಗಿರುವವನು ತನ್ನ ಆರೋಗ್ಯವನ್ನು ಚೆನ್ನಾಗಿ ರಕ್ಷಿಸಿಕೊಳ್ಳಲಾರದೆ ರೋಗಪೀಡಿತನಾಗಿ ಅನೇಕ ಪ್ರಕಾರಗಳ ದುಷ್ಪರಿಣಾಮಗಳಿಂದ ಕರ್ಮಬಂಧ ಮಾಡಿಕೊಳ್ಳುತ್ತಾನೆ. (ಕ.ಅ. ೨೦, ಶ್ಲೋಕ ೮೯)

ಅಷ್ಟಾಂಗಾಯುರ್ವೇದ : ಜೈನಾಚಾರ್ಯರ ವಿಚಾರದ ಪ್ರಕಾರ ದ್ವಾದಶಾಂಗ ಶಾಸ್ತ್ರಗಳಲ್ಲಿ ದೃಷ್ಟಿವಾದವೆಂಬ ಹನ್ನೆರಡನೆ ವಿಭಾಗವಿದೆ. ಅದರಲ್ಲಿ ಐದು ಭೇದಗಳಲ್ಲಿ ಒಂದು ಭೇದ ಪೂರ್ವಗತವಿದೆ. ಈ ಭೇದಗಳಲ್ಲಿ ಪ್ರಾಣವಾದವೆಂಬ ಪೂರ್ವಶಾಸ್ತ್ರದಲ್ಲಿ ವಿಸ್ತಾರಪೂರ್ವಕವಾಗಿ ‘ಅಷ್ಟಾಂಗಾಯುರ್ವೇದ’ವನ್ನು ಹೇಳಲಾಗಿದೆ. ಇದೇ ಆಯುರ್ವೇದ ಶಾಸ್ತ್ರದ ಮೂಲ ‘ವೇದ’ವಾಗಿದೆ. ಇದೇ ವೇದದ ಆಧಾರದ ಮೇಲೆ ಆಚಾರ್ಯರು ಆಯುರ್ವೇದ ಶಾಸ್ತ್ರವನ್ನು ರಚಿಸಿದ್ದಾರೆ. ಈ ಅಷ್ಟಾಂಗಗಳ ವರ್ಣನೆ ಕಲ್ಯಾಣಕಾರಕದಲ್ಲಿದೆ.

. ಕಾರ್ಯಚಿಕಿತ್ಸೆ (medicine): ಇಡಿ ದೇಹಕ್ಕೆ ಬರುವ ರೋಗಗಳ ಚಿಕಿತ್ಸೆ.

. ಬಾಲ ಚಿಕಿತ್ಸೆ (pediatrics):ಮಕ್ಕಳ ರೋಗಗಳ ಚಿಕಿತ್ಸೆ.

. ಗ್ರಹ ಚಿಕಿತ್ಸೆ : ಶರೀರದ ಸಹಸ್ರಾರು ಹಾಗೂ ನಾಡೀ ಚಕ್ರಗಳಲ್ಲಿ ದೋಷಗಳು ಉತ್ಪನ್ನವಾಗುವುದರಿಂದ ರೋಗಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಚಿಕಿತ್ಸೆ

. ಊರ್ಧ್ವಾಂಗ ಚಿಕಿತ್ಸೆ (ENT, Dentistry, opthalmology): ಇದಕ್ಕೆ ಶಾಲಾಕ್ಯ ವಿಭಾಗವೆಂದೂ ಕರೆಯುತ್ತಾರೆ. ಕಣ್ಣು, ಕಿವಿ, ಮೂಗೂ, ಬಾಯಿ ಇತ್ಯಾದಿ ಎಲ್ಲ ಕುತ್ತಿಗೆಯಿಂದ ಮೇಲ್ಭಾಗದ ರೋಗಗಳ ಚಿಕಿತ್ಸೆ.

. ಶಲ್ಯ ಚಿಕಿತ್ಸೆ (surgery):ಔಷಧಿ ಪ್ರಯೋಗದಿಂದ ಸಾಧ್ಯವಾಗದ ಕೆಲರೋಗಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ಗುಣಪಡಿಸುವ ವಿಭಾಗ.

. ದಂಷ್ಟ್ರಾವಿಭಾಗ (Toxicology):ವಿಷಜಂತುಗಳು ಹಾಗೂ ವಿಷದ್ರವ್ಯಗಳಿಂದ ಬರುವ ರೋಗಗಳ ಚಿಕಿತ್ಸೆ.

. ಜರಾಚಿಕಿತ್ಸೆ (Geriatrics):ಪುನಃ ಯೌವ್ವನ ಶರೀರ ಪ್ರಾಪ್ತಿಯಾಗುವಂತೆ ಮಾಡಲ್ಪಡುವ ಚಿಕಿತ್ಸೆ. ಇದಕ್ಕೆ ರಸಾಯನ ಚಿಕಿತ್ಸೆ ಎಂತಲು ಕರೆಯುತ್ತಾರೆ.

. ವೃಷ ಚಿಕಿತ್ಸೆ (Ofrodiasics):ಲೈಂಗಿಕ ಶಕ್ತಿವರ್ಧನದ ಚಿಕಿತ್ಸೆ.

ವೈದ್ಯ: ಗುರುಗಳಿಂದ ಸಕಲ ಶಾಸ್ತ್ರಗಳನ್ನು ಓದಿ ತಿಳಿದವನು, ಅನೇಕ ಪ್ರಯೋಗಗಳನ್ನು ಸ್ವತಃ ಮಾಡಿ ಅನುಭವ ಪಡೆದವನೂ, ಮೈ-ಮನಗಳಿಂದ ಶುಚಿರ್ಭೂತನೂ, ಆಯಾ ಕಾರ್ಯಗಳಲ್ಲಿ ದಕ್ಷನಾಗಿರುವವನು ಮಾತ್ರ ವೈದ್ಯನೆನಿಸುತ್ತಾನೆ.

ವೈದ್ಯನಿಗೆ ಸ್ನೇಹವನ್ನು ಗಳಿಸುವ ಸ್ವಭಾವ, ರೋಗಿಗಳಲ್ಲಿ ದಯೆ, ವೈದ್ಯ ವೃತ್ತಿಯಲ್ಲಿ ಪ್ರೀತಿ, ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರುವಿಕೆ(ರೋಗಿಗಳ ಬಗ್ಗೆ) ಈ ನಾಲ್ಕು ಗುಣಗಳಿರಬೇಕು.

ಶರೀರದಲ್ಲಿ ಪ್ರಾಣ ಇರುವವರೆಗೂ, ಇಂದ್ರಿಯಗಳು ಕೆಲಸ ಮಾಡುತ್ತಿರುವವರೆಗೂ ವೈದ್ಯನು ತನ್ನ ಚಿಕಿತ್ಸಾಕಾರ್ಯವನ್ನು ಬಿಡಿಕೂಡದು. ಏಕೆಂದರೆ ಕಾಲನ ಮೋಸಗಾರಿಕೆಯಿಂದ ರೋಗಿಗಳಿಗೆ ಯಾವ ಹೊತ್ತಿಗೆ ಏನಾಗುತ್ತದೆ ಎಂದು ಹೇಳಬಾರದು.

ವೈದ್ಯನು ತನ್ನ ಬುದ್ಧಿ ಮತ್ತು ನೆನಪಿನ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಲು ಸದಾ ಶಾಸ್ತ್ರದ ಅಭ್ಯಾಸ, ಅದರ ಬಗ್ಗೆ ವಾದ ವಿವಾದ, ಬೇರೆಯವರ ಗ್ರಂಥಗಳ ಅವಲೋಕನೆ ಹಾಗೂ ಆಯಾ ಶಾಸ್ತ್ರಗಳಲ್ಲಿ ನಿಷ್ಣಾತರಾದವರ ಸೇವೆ-ಇವುಗಳನ್ನು ಕೈಗೊಳ್ಳಬೇಕು. ಇದರಿಂದ ವೈದ್ಯನಿಗೆ ತನ್ನ ಶಾಸ್ತ್ರದಲ್ಲಿ ನಿಶ್ಚಿತವಾದ ಜ್ಞಾನವಾಗಲು ಸಹಾಯವಾಗುತ್ತದೆ.

ಅಭ್ಯಾಸ ಮಾಡುವ ಪ್ರವೃತ್ತಿಯಿಂದಲೇ ಕಾರ್ಯಸಿದ್ಧಿಯನ್ನು ಕೊಡುವ, ದಿವ್ಯವಾದ ಜ್ಞಾನದೃಷ್ಟಿಯು ಪ್ರಾಪ್ತವಾಗುತ್ತದೆ. ಕೇವಲ ಶಾಸ್ತ್ರಗ್ರಂಥಗಳ ಓದುವಿಕೆಯಿಂದಲೇ ರತ್ನಗಳ ಗುಣಾವಗುಣಗಳು ತಿಳಿಯಲಾರವು. ಇದಕ್ಕೆ ಅಭ್ಯಾಸ ಪೂರ್ವಕವಾದ ಅನುಭವವೇ ಬೇಕಾಗುವುದು.

ಜೀವಾದಿಗಳ ಸಮಸ್ತ ಪದಾರ್ಥಗಳ ಲಕ್ಷಣಗಳನ್ನು ಪ್ರಕಟ ಮಾಡುವಂಥದೇ ‘ಕೇವಲ ಜ್ಞಾನವಿದ್ಯೆ’ ಎನಿಸುತ್ತದೆ. ಅಂಥ ವಿದ್ಯೆಯಿಂದ ಈ ಗ್ರಂಥದ ಉತ್ಪತ್ತಿಯಾಗಿದೆ. ಆದ್ದರಿಂದಲೇ ಇದಕ್ಕೆ ‘ವೇದ’ ಎನ್ನುತ್ತಾರೆ. ಈ ಗ್ರಂಥದ ಅಧ್ಯಯನ ಹಾಗೂ ಮನನ ಮಾಡುವ ವಿದ್ವಾಂಸರಿಗೆ ‘ವೈದ್ಯ’ನೆಂದು ಕರೆಯುತ್ತಾರೆ. (ಕಲ್ಯಾಣಕಾರಕ.ಶ್ಲೋಕ ೨೮)

ಚಿಕಿತ್ಸಕನು ಸತ್ಯನಿಷ್ಠ, ಧೀರ, ಕ್ಷಮಾಗುಣವುಳ್ಳವ, ಹಗುರ ಕೈಗುಣವುಳ್ಳವ, ಸ್ವತಃ ಔಷಧಿ ಸಿದ್ಧಪಡಿಸಿಕೊಳ್ಳುವವ, ತನ್ನ ಗುರುಗಳು ಮಾಡಿದ ದೊಡ್ಡ-ದೊಡ್ಡ ಚಿಕಿತ್ಸಾ ಪ್ರಯೋಗಗಳನ್ನು ಕಂಡವನೂ, ಸಂಪೂರ್ಣ ಆಯುರ್ವೇದ ಶಾಸ್ತ್ರವನ್ನು ಗುರುಗಳಿಂದ ಅಧ್ಯಯನ ಮಾಡಿದವನೂ, ಪ್ರಮಾದ ರಹಿತನೂ ಆದವನೇ ಯೋಗ್ಯ ವೈದ್ಯನೆನೆಸಿಕೊಳ್ಳುತ್ತಾನೆ. (ಕಲ್ಯಾಣಕಾರಕ .,ಶ್ಲೋಕ.೩೮)