ಪುರಾತನ ಕಾಲದಿಂದಲೂ ವೈದ್ಯಕೀಯ ಶಾಸ್ತ್ರಕ್ಕೆ ಜೈನರು ಅತ್ಯಮೂಲ್ಯ ಕೊಡುಗೆಗಳನ್ನು ಕೊಡುತ್ತಾ ಬಂದಿದ್ದಾರೆ. ಆಯುರ್ವೇದದ ಪ್ರಪಿತಾಮಹ ಅಗ್ನಿವೇಶನ ಕಾಲದಿಂದಲೇ ಜೈನಾಚಾರ್ಯರು ವೈದ್ಯಕೀಯ ಗ್ರಂಥಗಳನ್ನು ರಚಿಸಿದರು ಎಂಬುದಕ್ಕೆ ಆಧಾರಗಳಿವೆ. ಇವರು ರೋಗ ಚಿಕಿತ್ಸೆಯಲ್ಲಿ ಔಷಧಿಗಳಿಗೆ ಕೊಟ್ಟಂತಹ ಮಹತ್ವವನ್ನು ಕ್ಷಾರಕರ್ಮ, ಅ‌ಗ್ನಿಕರ್ಮ, ಶಸ್ತ್ರಚಿಕಿತ್ಸೆಗಳಿಗೂ ಕೊಟ್ಟಿದ್ದಾರೆ. ಅಶುದ್ಧ ರಕ್ತನಿವಾರಣೆಗಾಗಿ ಜಲೂಕಾವಿಧಿ, ರಕ್ತಮೋಕ್ಷಣ ವಿಧಿಗಳನ್ನು ಹೇಳಿದ್ದಾರೆ.

 • ಆಯುರ್ವೇದ ಕ್ಷೇತ್ರದಲ್ಲಿ ತುಂಬ ಹೆಸರುವಾಸಿಯಾದ ವೈದ್ಯರೂ, ಗ್ರಂಥಕರ್ತರೂ ಆದ ಅಹಮದನಗರದ ಗಂಗಾಧರ ಗೋಪಾಲ ಗುಣೆ ಅವರ ಕಲ್ಯಾಣಕಾರಕ ಗ್ರಂಥದಲ್ಲಿ ಬರೆದ ಸುದೀರ್ಘ ಪ್ರಸ್ತಾವನೆ ಲೇಖನದಲ್ಲಿ ಜೈನಾಯುರ್ವೇದದ ಬಗೆಗೆ, ಕಲ್ಯಾಣಕಾರಕ ಗ್ರಂಥದ ಬಗೆಗೆ ತಮ್ಮ ಸ್ಪಷ್ಟವಾದ ಅಭಿಪ್ರಾಯಗಳನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.
 • ಆಯುರ್ವೇದದ ಮೂಲ ಸಿದ್ಧಾಂತಗಳಾದ ಪಂಚ ಮಹಾಮಹಾಭೂತಗಳು ತ್ರಿದೋಷಗಳು, ಸಪ್ತಧಾತುಗಳು, ಮಲಗಳ ಆಧಾರದ ಮೇಲೆಯೇ ಜೈನಾಯುರ್ವೇದವು ಕೂಡ ರಚಿತವಾಗಿದೆ. ಚಿಕಿತ್ಸಾಶಾಸ್ತ್ರದ ಸರ್ವವಿಸ್ತಾರ. ಅನೇಕ ಪ್ರಕಾರದ ಪ್ರಕ್ರಿಯೆಗಳೆಲ್ಲ ಇದೇ ಆಧಾರದ ಮೇಲೆ ಅವಲಂಬಿತವಾಗಿವೆ. ಈ ವಿಷಯಗಳ ಬಹುವಿಸ್ತಾರವಾದ ಸುಂದರ ವಿವೇಚನೆಯು ಸಾಂಗೋಪಾಂಗವಾಗಿ ಕಲ್ಯಾಣಕಾರಕದಲ್ಲಿ ಬಂದಿದೆ.
 • ಕಲ್ಯಾಣಕರ ಗ್ರಂಥದ ರಚನೆಯು ಸುಂದರವಾಗಿರುವಂತೆ ಅದರಲ್ಲಿ ಹೇಳಿರುವ ಚಿಕಿತ್ಸಾ ಪ್ರಯೋಗಗಳು ಈ ಮೊದಲು ಕೇಳಿದಂಥವುಗಳಲ್ಲ. ಮೇಲಾಗಿ ಇತರರ ಪ್ರಯೋಗಗಳಿಗಿಂತ ಭಿನ್ನವಾಗಿದ್ದು, ವಿಶೇಷವಾಗಿವೆ. ಯಾವಾಗಲು ಧ್ಯಾನಾಧ್ಯಯನ, ಯೋಗಾಭ್ಯಾಸ ನಿರತವಾದ ನಿರ್ಮಲಚಿತ್ತದ ಯೋಗಿಗಳಿಂದ ಹೇಳಲ್ಪಟ್ಟ ಈ ಪ್ರಯೋಗಗಳು ವಿಶೇಷ ಮಹತ್ವದವಾಗಿವೆ. ಇವುಗಳನ್ನು ವೈದ್ಯರು ಸಂಶೋಧನಾತ್ಮಕ ದೃಷ್ಟಿಯಿಂದ ಪ್ರಯೋಗಕ್ಕೆ ತಂದರೆ ಉತ್ತರೋತ್ತರವಾಗಿ ವೈದ್ಯಲೋಕಕ್ಕೆ ಉಪಕಾರವಾಗುವುದರಲ್ಲಿ ಸಂಶಯವಿಲ್ಲ.
 • ರಸಶಾಸ್ತ್ರ ವಿಷಯದಲ್ಲಿ ಜೈನಾಚಾರ್ಯರು ಬಹಳ ಪರಿಶ್ರಮ ಪಟ್ಟಿದ್ದಾರೆ ಇಂದು ಲಭ್ಯವಿರುವ/ಬಳಸುತ್ತಿರುವ ಅನೇಕಾನೇಕ ಸಿದ್ಧೌಷಧಗಳ ತಯಾರಿಕೆಯ ಹಿಂದೆ ಜೈನ ಹಾಗೂ ಬೌದ್ಧಯತಿಗಳ ಪ್ರತಿಭೆ ಹಾಗೂ ಅವಿಶ್ರಾಂತ ಪರಿಶ್ರಮದ ಫಲವಿದೆ. ಅನೇಕ ಪ್ರತಿಭಾವಂತ, ತ್ಯಾಗಿ-ವಿರಾಗಿಗಳಾದ ಆಚಾರ್ಯರ ಜೀವನ ಪೂರ್ತಿ ವಿಚಾರ ಪರಿಪೂರ್ವಕ ಪರಿಶ್ರಮ, ಪ್ರಯೋಗಪೂರ್ವಕ ಅನುಭವ ಪಡೆದು ಅನೇಕ ಔಷಧ ರತ್ನಗಳ ಭಂಡಾರವನ್ನು ಸಂಗ್ರಹಿಸಲಾಗಿದೆ. ಜೈನಾಚಾರ್ಯರು ರಚಿಸಿದ ರಸಶಾಸ್ತ್ರ, ವನಸ್ಪತಿ ಶಾಸ್ತ್ರ, ಪ್ರಾಣಿಶಾಸ್ತ್ರ, ನಿಘಂಟು ಹಾಗೂ ಔಷಧಿ ಗುಣಧರ್ಮಶಾಸ್ತ್ರ ಮುಂತಾದ ಅನೇಕ ಶಾಸ್ತ್ರಗಳ ಅಪ್ರತಿಮ ನಿರ್ಮಾಣ ಕಾರ್ಯವು ಇಂದಿನ ಆಯುರ್ವೇದ ವಿಶ್ವಕ್ಕೆ ತುಂಬ ಯಪಕಾರಿಯಾಗಿದೆ.
 • ಈ ಗ್ರಂಥದ ಭಾಷೆ, ವಿಷಯ ವರ್ಣನಶೈಲಿ, ತತ್ವ ಪ್ರಣಾಲಿಗಳನ್ನು ಗಮನಿಸಿದಾಗ ಇದು ವಾಗ್ಭಟನ ಅಷ್ಟಾಂಗ ಹೃದಯ ಗ್ರಂಥದ ತತ್ಸಮಾನ ಕಾಲ ಇಲ್ಲವೆ ನಂತರ ಬರೆದದ್ದಾಗಿದೆ ಎಂದು ಅನುಮಾನಿಸಬಹುದು.
 • ಈ ಗ್ರಂಥದ ಚಿಕಿತ್ಸಾ ವಿಷಯದಲ್ಲಿ ಜೇನು, (ಮಧು)ಮದ್ಯ/ಮಾಂಸಗಳ ಹೊರತಾಗಿ ಇನ್ನುಳಿದ ವಿಷಯಗಳು ಚರಕ ಸಂಹಿತೆಗೆ ಹೋಲುತ್ತವೆ.
 • ಈ ಗ್ರಂಥದಲ್ಲಿ ಶಸ್ತ್ರ ಚಿಕಿತ್ಸೆ(ನೇತ್ರ ಶಸ್ತ್ರಚಿಕಿತ್ಸೆಯನ್ನೊಳಗೊಂಡು)ಯ ಅಂಶಗಳು ಸುಶ್ರುತನಂತೆ ವ್ಯಕ್ತವಾಗಿವೆ. ಇದರಲ್ಲಿ ಅಷ್ಟವಿಧ ಶಸ್ತ್ರಕರ್ಮಗಳನ್ನು ಸುವ್ಯವಸ್ಥಿತವಾಗಿ ಹೇಳಲಾಗಿದೆ.
 • ಜೈನಶಾಸ್ತ್ರಕಾರರು ಶಸ್ತ್ರ ಚಿಕಿತ್ಸೆಯ ವಿಷಯಗಳನ್ನು ತಮ್ಮ ಗ್ರಂಥಗಳಲ್ಲಿ ಹೇಳಿದ್ದರೂ ಚಿಕಿತ್ಸಾ ವಿಷಯದಲ್ಲಿ ವಿಶೇಷವಾಗಿ ಪಾದರಸ ಶುದ್ಧಿ ಮಾಡಿ ತಯಾರಿಸಿದ ಯೋಗಗಳನ್ನು ಹೇಳಿದ್ದಾರೆ. ಚರಕ-ಸುಶ್ರುತರ ಕಾಲದಲ್ಲಿ ಚಿಕಿತ್ಸೆಯಲ್ಲಿ ವನಸ್ಪತಿಗಳು ಹಾಗೂ ಪ್ರಾಣಿಗಳ ಅಂಗಗಳನ್ನು ಔಷಧ ರೂಪದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಇವೆಲ್ಲ ಅನೆಕ ಕಾರಣಗಳಿಂದ ಹಿಂದೆಬಿದ್ದು ರಸ (ಪಾದರಸ), ಲೋಹಗಳು, ಗಂಧಕ, ಮಾಕ್ಷಿಕಾದಿ ಉಪಧಾತುಗಳೆಲ್ಲ ಚಿಕಿತ್ಸೆಯಲ್ಲಿ ಉಪಯೋಗಕ್ಕೆ ಬರತೊಡಗಿದವು. ಇವುಗಳಿಂದ ರೋಗಗಳು ಬೇಗನೆ ಗುಣವಾಗತೊಡಗಿದ್ದರಿಂದ ಶಸ್ತ್ರಚಿಕಿತ್ಸೆಯ ಪ್ರಕರಣಗಳು ಕೂಡ ಕಡಿಮೆಯಾಗತೊಡಗಿ ಈ ಪರಂಪರೆಯ ಹಿಂದೆ ಬೀಲತೊಡಗಿತು.
 • ಅನೇಕ ಜೀವಿಗಳನ್ನು ಕೊಂದು ತಯಾರಿಸಲ್ಪಡುವ ಔಷಧಿಗಳು ಹಿಂಸಾಜನ್ಯವೆನಿಸುತ್ತವೆ. ಅಹಿಂಸಾ ಧರ್ಮದ ಆಚರಣೆಗಾಗಿ ಇಂಥವನ್ನು ತ್ಯಾಗ ಮಾಡುವುದು ಅವಶ್ಯವೆನಿಸಿದೆ. ಪ್ರಾಣಿಜನ್ಯ ಪದಾರ್ಥಗಳ ಹೊರತಾಗಿಯೂ ಒಳ್ಳೆ ಪರಿಣಾಮಕಾರಿ ಔಷಧಿಗಳನ್ನು ಸಿದ್ಧಪಡಿಸಬಹುದು. ಆರ್ಯಸಂಸ್ಕೃತಿಯಲ್ಲಿ ಹಿಂಸಾಜನ್ಯ ನಿಂದ್ಯ ಪದಾರ್ಥಗಳ ಅವಶ್ಯಕತೆ ಇಲ್ಲ. ಇದರಿಂದ ಅಸಂಖ್ಯಾತ ಪ್ರಾಣಿಗಳು ಬದುಕಿಕೊಳ್ಳುತ್ತವೆ.
 • ಶಾಸ್ತ್ರದಲ್ಲಿ ಮನಸ್ಸಿನ ಬಗೆಗೆ ಹೆಚ್ಚಿನ ವಿಷಯಗಳನ್ನು ಹೇಳಿಲ್ಲವಾದರೂ ಮನೋರೋಗಗಳಾದ ಮೂರ್ಛೆ, ಅಪಸ್ಮಾರ, ಉನ್ಮಾದಗಳಿಗೆ ಬಗೆಗೆ ಹೇಳಿದ್ದಾರೆ. ಆತ್ಮನ ಬಗೆಗೆನೇ ಇವರಿಗೆ ವಿಶೇಷ ಒಲವು ಇರುವುದು ಕಂಡುಬರುತ್ತದೆ.
 • ರೋಗಿಯನ್ನು ಚಿಕಿತ್ಸಿಸುವ ಮುನ್ನ ರೋಗಿಯ ಭವಿಷ್ಯ ನೋಡಲು ಆದೇಶಿಸಿದ್ದಾರೆ. ರೋಗಿಯ ಆಯುಷ್ಯವಿನ್ನೂ ಗಟ್ಟಿಯಾಗಿದ್ದು ದೂತ-ಶಕುನ ಹಾಗೂ ಗ್ರಹಗತಿಗಳು ಶುಭವಾಗಿದ್ದರೆ ಚಿಕಿತ್ಸೆ ಯಶಸ್ವಿ ಆಗುವುದು.
 • ಯಾವುದೇ ರೋಗಿಗೆ ಒಮ್ಮೆ ಚಿಕಿತ್ಸೆ ಪ್ರಾರಂಭಿಸಿದರೆ ಅದನ್ನು ಯಾವ ಕಾರಣಕ್ಕೂ ಉಪೇಕ್ಷಿಸಬಾರದು ಎಂದಿದ್ದಾರೆ. ಒಳ್ಳೆ ಔಷಧಿ, ಸೇವೆ, ವೈದ್ಯನ ಅಂತಃಕರಣ ಪೂರ್ವಕ ಸಂಬಂಧ ಇವೆಲ್ಲ ರೋಗ ಬೇಗ ಗುಣವಾಗಲು ಅವಶ್ಯ. ರೋಗಿ ಬಡವನೆಂದೋ, ಸಹಕರಿಸುವುದಿಲ್ಲವೆಂತಲೋ, ಅಸಹ್ಯಕರವಾಗಿದ್ದಾನೆಂದೋ, ವೃದ್ಧನಿಗೆ ಏಕೆ ಚಿಕಿತ್ಸೆ ಅಂತಲೋ ಉಪೇಕ್ಷಿಸಬಾರದು ಎಂದೇ ಇಲ್ಲಿರುವ ತಾತ್ಪರ್ಯ.
 • ಕಲ್ಯಾಣಕಾರಕದಲ್ಲಿ ಅನೇಕ ಕಠಿಣ ತಮವಾದ ರೋಗಗಳಿಗೆ ಚಿಕಿತ್ಸೆ ಹೇಳಿದುದು ಒಂದು ವಿಶೇಷ. ವಿಷಚಿಕಿತ್ಸೆ, ಆನೆಕಾಲು ರೋಗ, ಅರ್ಬುದ, ಮೈಲಿಬೇನೆ, ಉಪದಂಶ, ಅರ್ಧತಲೆನೋವು, ಹೃದ್ರೋಗ, ನಪುಂಶಕತ್ವ, ಮೂತ್ರಾಶ್ಮರಿ, ಪ್ರಮೇಹ, ಆಂತ್ರವೃದ್ಧಿ, ಭಗಂದರ, ನಾಡೀ ವ್ರಣ, ಗಲಗಂಡ, ಜಲರೋಗ, ತ್ರಿದೋಷ ವಿಕಾರಗಳ ವಿಶೇಷ ಚಿಕಿತ್ಸೆ, ಮೂಡಗರ್ಭ, ಬಾಯಿ-ಮೂಗು, ಹಲ್ಲು, ಕಣ್ಣು, ಕಿವಿ ಹಾಗು ಶಿರೋರೋಗಗಳ ಬಗೆಗೆ ಸಾಕಷ್ಟು ವಿವರಣೆ ದೊರಕುತ್ತದೆ.

ಜೈನಾಚಾರ್ಯರು ಕರ್ಮಸಿದ್ಧಾಂತಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ.