• ಕಲ್ಯಾಣಕಾರಕ ವೈದ್ಯಗ್ರಂಥವಾಗಲೀ ಹಾಗೂ ಇನ್ನಿತರ ಜೈನಾಚಾರ್ಯರು ಬರೆದ ವೈದ್ಯಕೀಯ ಗ್ರಂಥಗಳಲ್ಲಾಗಲೀ ಜೈನ ಧರ್ಮದ ತತ್ವಗಳು ಹಾಸುಹೊಕ್ಕಾಗಿವೆ. ಇದು ಸಹಜವೂ ಕೂಡ. ಈ ವೈದ್ಯದಲ್ಲಿ ಅರ್ಹತ್ ಪರಮಾತ್ಮನೇ ಪ್ರಪ್ರಥಮ ವೈದ್ಯನೆಂದು ಹಾಗೂ ಕೇವಲ ರೋಗಗಳನ್ನು ಪರಿಹರಿಸುವವನು ಸಾಧಾರಣ ವೈದ್ಯನೆನಿಸಿದರೆ ಆ ಪರಮಾತ್ಮನು ಇಹ-ಪರಲೋಕಗಳಲ್ಲಿಯ, ಸಕಲ ಜೀವಾತ್ಮರ ಒಳಿತನ್ನೇ ಸದಾ ಬಯಸುವ ದಯಾಘನನು, ಭವವೈದ್ಯನು.
 • ಪಂಚಭೂತಾತ್ಮಕ ದ್ರವ್ಯಗಳ ವಿಚಾರ ಹೇಳುವಾಗ ಸ್ಯಾದ್ವಾದ, ಅನೇಕಾಂತವಾದಗಳ ವಿಚಾರ ನಮೂದಿಸಿದ್ದಾರೆ.
 • ವೈದ್ಯಶಾಸ್ತ್ರವೊಂದು ದ್ವಿತೀಯ ಧರ್ಮಶಾಸ್ತ್ರವೆಂದು ಕಲ್ಯಾಣಕಾರಕದ ಹಿತಾಹಿತಾಧ್ಯಾಯದಲ್ಲಿ ವರ್ಣಿಸಲಾಗಿದೆ.
 • ವೈದ್ಯಶಾಸ್ತ್ರವು ಅಷ್ಟೋಪದಿಷ್ಟವೆನಿಸಿದೆ.
 • ಕಲ್ಯಾಣಕಾರಕವೊಂದು ಶಾಸ್ತ್ರಪ್ರಮಾಣವೆನಿಸಿದೆ ಎಂದು ಬಣ್ಣಿಸಲಾಗಿದೆ.
 • ಕಲ್ಯಾಣಕಾರಕದ ಹಿತಾಹಿತಾಧ್ಯಾಯದಲ್ಲಿ ಅಹಿಂಸೆಯಪ್ರತಿಪಾದನೆಯನ್ನು ತುಂಬ ಚೆನ್ನಾಗಿ, ವಿವರವಾಗಿ ಮಾಡಿದ್ದಾರೆ.
 • ರೋಗಗಳು ಬರುವುದಕ್ಕೆ ಪೂರ್ವಜನ್ಮದ ಪಾಪಕರ್ಮಗಳೇ ಕಾರಣವೆಂದಿದ್ದಾರೆ.
 • ಶಾಸ್ತ್ರದಲ್ಲಿ ರೋಗದ ವಿಷಯಬಂದಾಗ “ಅನಾರೋಗ್ಯವುಳ್ಳ ಮನುಷ್ಯ ಧೀರ-ವೀರನಾಗಿದ್ದರು ಧರ್ಮದ ಆಚರಣೆ ಮಾಡಲಾರ, ಪಂಚೇಂದ್ರಿಯಾರ್ಥಗಳ ಉಪಾರ್ಜನ ಮಾಡಲಾಗದು, ಭೋಗಗಳನ್ನು ಭೋಗಿಸಲಾರ, ಮೋಕ್ಷಕ್ಕೆ ಹೋಗಲಾರ, ಅವನಿಗೆ ಚತುರ್ವರ್ಗಗಳ ಸಿದ್ಧಿಯಾಗದು, ಆರೋಗ್ಯ ಶಾಸ್ತ್ರದ ಅಧ್ಯಯನವಾಗದು” ಎಂದಿದ್ದಾರೆ. ಈ ಮಾತುಗಳಲ್ಲಿ ಅಪರೋಕ್ಷವಾಗಿ ಆರೋಗ್ಯಜೀವನದ ಮಹತ್ವ ಹಾಗೂ ಗುರಿಗಳನ್ನು ಹೇಳಲಾಗಿದೆ.
 • ಈ ವೈದ್ಯಕೀಯ ಗ್ರಂಥದಲ್ಲಿ ಇಲ್ಲಿ ವಿವರಿಸಲಾದ ಅನೇಕ ಪ್ರಮುಖ ವಿಷಯಗಳ ಹೊರತಾಗಿ ಇನ್ನು ಅನೇಕ ವಿಚಾರಗಳನ್ನೂ ವಿವರವಾಗಿ ಹೇಳಲಾಗಿದೆ. ಶೀರೋರೋಗಗಳು, ಕಿವಿ ರೋಗಗಳು, ಮೂಗಿನ ರೋಗಗಳು, ಬಾಯಿ ರೋಗಗಳು, ದಂತ ರೋಗಗಳು, ನೇತ್ರರೋಗಗಳು, ಯೋನಿ ರೋಗಗಳು, ಗ್ರಹಸಂಬಂಧಿ ರೋಗಗಳು, ವಿಷ ಸೇವನೆ ಸಂಬಂಧಿತ ರೋಗಗಳು, ಸ್ಥೌಲ್ಯತೆ, ಸೌಂದರ್ಯ ಕಾಪಾಡುವ ಬಗ್ಗೆ, ಗುಲ್ಮರೋಗಗಳು, ರಸಾಯನಗಳು, ಲೈಂಗಿಕ ಶಕ್ತಿ ವರ್ಧಿಸುವ ಯೋಗಗಳು, ಅರಿಷ್ಟ ಲಕ್ಷಣಗಳು, ಮರಣಾಸನ್ನ ರೋಗಿಯ ಮರಣ ನಿಶ್ಚಯ ಬಗ್ಗೆ, ವೃದ್ಧರಲ್ಲಿ ಕಂಡುಬರುವ ಮರಣ ಭಯ ಹಾಗೂ ಗ್ರಂಥದ ಕೊನೆಯಲ್ಲಿ ಹಿತಾಹಿತಾಧ್ಯಾಯ – ಹೀಗೆ ಅನೇಕ ವಿಷಯಗಳನ್ನು ವಿವರವಾಗಿ ಹೇಳಲಾಗಿದೆ. ಗ್ರಂಥ ವಿಸ್ತಾರದ ಭಯದಿಂದ ಇಲ್ಲಿ ಅವೆಲ್ಲವನ್ನು ಹೇಳಲಾಗಿಲ್ಲ. ಓದುಗರಿಗೆ ಅತ್ಯವಶ್ಯಕವಾದ, ಉಪಯುಕ್ತವೆನಿಸಿದ ಹಾಗೂ ಗ್ರಂಥಪಠನದಲ್ಲಿ ಆಸಕ್ತಿ ಉಂಟಾಗುವಂತೆ ವಿಷಯ ನಿರೂಪಿಸಲಾಗಿದೆ.
 • ಶಾಸ್ತ್ರದಲ್ಲಿ ಅಲ್ಲಲ್ಲಿಗೆ ಹೇಳಲಾದ ಅಹಿಂಸೆ, ಪಂಚ ಪಾಪಗಳು, ಸಪ್ತ ವ್ಯಸನಗಳು, ಸಾತ್ಮ್ಯ ವಿಚಾರ, ಆತ್ಮನ ಅಸ್ತಿತ್ವ/ಮರಣ/ಪುನರ್ಜನ್ಮ/ಜಾತಿಸ್ಮರಣ, ಸಮಾಧಿ ಮರಣ – ಮುಂತಾದ ವಿಚಾರಗಳನ್ನು ಹೇಳಿದ್ದಾರೆ. ಅನ್ನು ಸ್ಥೂಲವಾಗಿ ನೋಡೋಣ.

. ಅಹಿಂಸೆ

ಜೈನ ದರ್ಶನವು ಅಹಿಂಸೆಗೆ ತುಂಬ ಮಹತ್ವಕೊಟ್ಟಿದೆ. ಅದು ಜೀವವದೆಗಷ್ಟೇ ಹಿಂಸೆ ಎಂದು ಅರ್ಥ ಮಾಡಿಲ್ಲ. ಜೈನ ದರ್ಶನದ ಅಹಿಂಸೆಯ ವ್ಯಾಪ್ತಿಯು ಬಹುವಿಸ್ತಾರವಾಗಿದೆ. ಅಲ್ಲದೇ ಬಹುಮುಖ್ಯವೂ ಆಗಿದೆ. ಉಮಾಸ್ವಾಮಿಯವರು ‘ತತ್ವಾರ್ಥಸೂತ್ರದಲ್ಲಿ ಪ್ರಮತ್ತಯೋಗದಿಂದ ಪ್ರಾಣದ ನಾಶವಾಗುವುದೇ ಹಿಂಸೆ’ ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿ ‘ಪ್ರಮತ್ತಯೋಗ’ ಶಬ್ದ ಪ್ರಯೋಗದಲ್ಲಿ ಬಹಳ ಅರ್ಥವಿದೆ. ರಾಗ-ದ್ವೇಷಗಳಿಂದ ಕೂಡಿದ ಮನೋವೃತ್ತಿಯವನಿಂದ ಒಂದು ವೇಳೆ ಅನ್ಯಪ್ರಾಣಿಗಳ ವಧೆಯಾಗಲಿಕ್ಕಿಲ್ಲ : ಆದರೆ ಅವನು ತನ್ನ ನಿರ್ಮಲ ಮನೋವೃತ್ತಿಯನ್ನು ನಾಶಮಾಡಿಕೊಳ್ಳುತ್ತಾನೆ. ಇದರಿಂದ ಸ್ವಪ್ರಾಣಾಘಾತವಾಗುವುದು. ಕಷಾಯದಿಂದ ಕೂಡಿ ಜೀವ ಪ್ರಾಣಗಳ ವಿಯೋಗದ ಕ್ರಿಯೆಗೆ ಪ್ರಚೋದನೆ ಸಿಗುವುದು. ಅದುವೆ ಹಿಂಸೆ ಎನಿಸುವುದು. ಅದರಿಂದ ರಾಗ-ದ್ವೇಷಾದಿ ಭಾವನೆಗಳ ಉತ್ಪತ್ತಿಯೇ ಮೊದಲು ಹಿಂಸೆಗೆ ಕಾರಣವಾಗಿದೆ. ಅದಕ್ಕಾಗಿಯೇ ‘ಪುರುಷಾರ್ಥ ಸಿದ್ದ್ಯಾಪಾಯ’ದಲ್ಲಿ ಅಮೃತ ಚಂದ್ರ ಸೂರಿ ಇವರು ಅಭಿಮಾನ, ಭಯ, ಜಿಗುಪ್ಸೆ, ದಾಸ್ಯ, ರತಿ, ಶೋಕ, ಕಾಮ, ಕೋಪ ಇತ್ಯಾದಿಗಳು ಹಿಂಸೆಯ ಪರ್ಯಾಯಗಳೆಂದು ಪ್ರತಿಪಾದಿಸಿದ್ದಾರೆ.

ಗೃಹಸ್ಥರ ಜೀವನವನ್ನು ಲಕ್ಷ್ಯದಲ್ಲಿಟ್ಟುಕೊಂಡು ಜೈನ ದರ್ಶನವು ಹಿಂಸೆಯಲ್ಲಿ ಸಂಕಲ್ಪ, ವಿರೋಧಿ, ಆರಂಭ ಹಾಗೂ ಉದ್ಯಮೀ ಎಂದು ನಾಲ್ಕು ಭೇದಗಳನ್ನು ಮಾಡಿದೆ.

. ಸಂಕಲ್ಪ ಹಿಂಸೆ : ಪ್ರಾಣಘಾತದ ಉದ್ದೇಶದಿಂದ ಮಾಡಿದುದು, ಬೇಟೆಯಾಡುವುದು, ಮಾಂಸಭಕ್ಷಣ ಮಾಡುವುದು, ಹಿಂಸೆಗೆ ಅನ್ಯರಿಗೆ ಪ್ರಚೋದಿಸುವುದು, ಅನುಮೋದಿಸುವುದು.

. ವಿರೋಧಿ ಹಿಂಸೆ : ಒಬ್ಬ ವೈರಿಯು ಮೈ ಮೇಲೆ ಏರಿ ಬಂದಾಗ ಆತ್ಮ ರಕ್ಷಣಾರ್ಥವಾಗಿ ಮಾಡಬೇಕಾದ ಹಿಂಸೆ, ಯುದ್ಧ ಇತ್ಯಾದಿ.

. ಆರಂಭ ಹಿಂಸೆ : ಜೀವನಕಾಲದಲ್ಲಿ ಶರೀರ ಪೋಷಣೆಗಾಗಿ ಬೆಳವಣಿಗೆಗಾಗಿ ಆಹಾರ ಪಡೆದುಕೊಳ್ಳಲಿಕ್ಕಾಗಿ ಮಾಡಲ್ಪಡುವ ಹಿಂಸೆ.

. ಉದ್ಯಮೀ ಹಿಂಸೆ : ಒಕ್ಕಲುತನ, ವ್ಯಾಪಾರ, ಮೊದಲಾದ ಜೀವನೋಪಯೋಗಿ, ಉದ್ಯೋಗಗಳಲ್ಲಿ ಸ್ವಾಭಾವಿಕವಾಗಿ ಹಿಂಸೆಯಾಗುವುದುಂಟು: ಇದರಲ್ಲಿ ಉದ್ದೇಶ ಪೂರ್ವಕವಾಗಿ ಹಿಂಸೆಗೆ ಯಾರೂ ಕೈ ಹಾಕುವುದಿಲ್ಲ.

ಮಾಂಸಾಹಾರದ ಬಗ್ಗೆ

 • ಮಾಂಸ ಔಷಧವಲ್ಲ. ಔಷಧಕ್ಕಾಗಿ ಪ್ರಾಣಿವಧೆ ಸಲ್ಲದು.
 • ಮಾಂಸ ಪ್ರಾಣನಾಶಕವೆನಿಸಿದೆ.
 • ಮಾಂಸ ರಸಾಯನವಲ್ಲ.
 • ಮಾಂಸವನ್ನು ತಿನ್ನದಿದ್ದರೂ ಒಳ್ಳೆಯ ಆರೋಗ್ಯ ಸಾಧ್ಯ.
 • ಮಾಂಸವು ಅಭಕ್ಷ್ಯವಾಗಿದೆ.
 • ಮಾಂಸವು ಜೀವ ಶರೀರವೆನಿಸಿದೆ.

. ಪಂಚಪಾಪಗಳು

ಕೆಟ್ಟ ಕಾರ್ಯಗಳನ್ನು ಮಾಡುವುದಕ್ಕೆ ‘ಪಾಪ’ ಎಂದು ಹೇಳುತ್ತಾರೆ. ಇಲ್ಲವೇ ಆತ್ಮನಿಗೆ ಅಹಿತತೆ ಇಲ್ಲವೆ ಅಪವಿತ್ರ ಮಾಡುವುದಕ್ಕೆ ಪಾಪ ಎನ್ನುತ್ತಾರೆ. ಇದರಲ್ಲಿ ಐದು ಪ್ರಕಾರಗಳಿವೆ. ಹಿಂಸೆ, ಅಸತ್ಯ, ಕಳ್ಳತನ, ಕುಶೀಲ ಹಾಗೂ ಪರಿಗ್ರಹಗಳೆಂದು.

೧. ಪ್ರಮಾದದಿಂದ ತನ್ನ ಹಾಗೂ ಪರರ ಪ್ರಾಣಘಾತ ಮಾಡುವುದು. ಹಾಗೂ ಮನಸ್ಸನ್ನು ನೋಯಿಸುವುದಕ್ಕೆ ‘ಹಿಂಸೆಯ ಪಾಪ’ ಎನ್ನುತ್ತಾರೆ. ಈ ರೀತಿ ಪಾಪ ಮಾಡುವವನಿಗೆ ಹಿಂಸಕ, ಹತ್ಯಾರು, ನಿರ್ದಯಿ ಎನ್ನವರು.

೨. ಸತ್ಯವನ್ನು ಮರೆಮಾಚಿ ನಿಜವೋ ಎಂಬಂತೆ ಸುಳ್ಳು ನುಡಿಯುವುದಕ್ಕೆ ‘ಅಸತ್ಯ ಪಾಪ’ ಎನ್ನುತ್ತಾರೆ. ಇಂಥವನಿಗೆ ಸುಳ್ಳುಗಾರ, ಬಂಡುಗಾರ ಎನ್ನುತ್ತಾರೆ.

೩. ಯಾರೂ ಕೈ ಎತ್ತಿ ಕೊಡದೇ ಇರುವಂತಹ, ಬಿದ್ದದ್ದು, ಇಟ್ಟಿದ್ದು, ಅಥವಾ ಮರೆತಿದ್ದ ವಸ್ತುಗಳನ್ನು ಗ್ರಹಣ ಮಾಡುವುದಕ್ಕೆ ಅಥವಾ ಪರರಿಗೆ ಕೊಡುವುದಕ್ಕೆ ‘ಕಳ್ಳತನದ ಪಾಪ’ವೆನ್ನುತ್ತಾರೆ. ಈತನಿಗೆ ಕಳ್ಳ, ತಸ್ಕರ, ಚೋರ, ಡಾಕು ಎನ್ನುತ್ತಾರೆ.

೪. ಪರಸ್ತ್ರೀ-ಪರಪುರುಷನ ಜೊತೆ ರಮಣ ಮಾಡುವುದಕ್ಕೆ ‘ಕುಶೀಲ ಪಾಪ’ಎನ್ನುತ್ತಾರೆ. ಈತನಿಗೆ ವ್ಯಭಿಚಾರಿ, ಜಾರಿ ಎನ್ನುತ್ತಾರೆ.

೫. ಭೂಮಿ, ಮನೆ, ಧನಧಾನ್ಯ, ಆಕಳು, ಎತ್ತು, ಎಮ್ಮೆ, ಆನೆ, ಕುದುರೆ, ಬಟ್ಟೆ, ಪಾತ್ರೆ ಆಭರಣ ಇತ್ಯಾದಿ ವಸ್ತುಗಳ ಮೇಲೆ ಮೋಹವಿಡುವುದು ಹಾಗೂ ಮೋಹದಿಂದ ಕೂಡಿ ಒಟ್ಟು ಹಾಕುವುದಕ್ಕೆ, ಲಾಲನೆ ಇ‌ಟ್ಟುಕೊಳ್ಳುವುದಕ್ಕೆ ‘ಪರಿಗ್ರಹ ಪಾಪ’ ಎನ್ನುತ್ತಾರೆ.

. ಸಪ್ತವ್ಯಸನಗಳು

ಕೆಟ್ಟ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ‘ವ್ಯಸನ’ ಎನ್ನವರು. ಯಾವುದು ಆತ್ಮ ಸ್ವರೂಪದಿಂದ ದೂರಮಾಡುವುದೋ ಹಾಗೂ ಆತ್ಮ ಕಲ್ಯಾಣವನ್ನು ಮಾಡಿಕೊಡುವುದಿಲ್ಲವೋ ಅದಕ್ಕೆ ‘ವ್ಯಸನ’ ಎನ್ನವರು. ಇದಕ್ಕೆ ‘ಏಳು ಬಗೆಗಳಿವೆ’

. ಜೂಜು : ಸೋಲು -ಗೆಲುವಿನ ಮೇಲೆ ದೃಷ್ಟಿ ಇಟ್ಟು ಶರತ್ತು ಕಟ್ಟುವುದು, ಇಸ್ಪೀಟು ಆಡುವುದು, ರೂಪಾಯಿ ಪೈಸೆಗಳಿಂದ ಸೋಲು-ಗೆಲುವಿನ ಕಾರ್ಯದಲ್ಲಿ ಲೀನನಾಗಿರುವುದು, ಈತನಿಗೆ ಜೂವಾರಿ ಎನ್ನುತ್ತಾರೆ.

. ಕಳ್ಳತನ : ಕಳುವು ಮಾಡುವ ವ್ಯಸನದ ಅರ್ಥ ಪ್ರಮಾದದಿಂದ ಯಾರೂ ಕೈ ಎತ್ತಿ ಕೊಡದಂತಹ ಬಿದ್ದದ್ದು, ಇಟ್ಟದ್ದು ಹಾಗೂ ಮರೆತ ವಸ್ತುಗಳನ್ನು ಸ್ವಂತಕ್ಕೆ ಉಪಯೋಗಿಸುವುದು ಇಲ್ಲವೆ ಪರರಿಗೆ ಎತ್ತಿ ಕೊಡುವುದು.

. ಮಾಂಸ ತಿನ್ನುವುದು: ಜೀವಿಗಳನ್ನು ಹೊಡೆದು ಕೊಂದು ಇಲ್ಲವೇ ಸತ್ತ ಜೀವಿಗಳ ಮಾಂಸವನ್ನು ತಿನ್ನುವುದು ಒಂದು ವ್ಯಸನವೆನಿಸುತ್ತದೆ. ಈತನಿಗೆ ಕ್ರೂರಿ, ಹಿಂಸಕ, ನಿರ್ದಯಿ ಎನ್ನತ್ತಾರೆ.

. ಮಧ್ಯಪಾನ ವ್ಯಸನ: ಸರಾಯಿ, ಗಾಂಜಾ, ಬ್ರೌನ್ ಶುಗರ್, ಎಲ್.ಎಸ್.ಡಿ.ಚರಸ್, ಅಫೀಮು, ಬ್ಯ್ರಾಂಡಿ, ವಿಸ್ಕಿ, ರಮ್, ಜಿನ್ ಇತ್ಯಾದಿ ಮದ್ಯ ಹಾಗೂ ಮಾದಕ ವಸ್ತುಗಳನ್ನು ಉಪಯೋಗಿಸುವುದು.

. ವೇಶ್ಯಾಗಮನ : ವೇಶ್ಯೆಯರ, ಕರೆಪೆಣ್ಣುಗಳ, ಜಾರೆಯರ ಸಂಗಡ ರಮಣ ಮಾಡುವ ಇಚ್ಛೆ ಇರುವುದು, ಅವಳ ಮನೆಗೆ ಹೋಗಿ ಬರುವುದು, ಅವಳೊಡನೆ ಪ್ರೀತಿಯಿಂದ ಇರುವುದು ವೇಶ್ಯಾಗಮನವೆನಿಸುತ್ತದೆ. ಇದರಿಂದ ಅನೇಕ ಅಸಾಧ್ಯ ರೋಗಗಳು ಅಂಟಿಕೊಳ್ಳುತ್ತವೆ. ಈ ವ್ಯಕ್ತಿಗೆ ‘ವ್ಯಭಿಚಾರಿ’ ಎನ್ನುತ್ತಾರೆ.

. ಪರಸ್ತ್ರೀ ಗಮನ : ತನ್ನ ಧರ್ಮಪತ್ನಿಯನ್ನು ಬಿಟ್ಟು ಅನ್ಯ ಪರಸ್ತ್ರೀಗಮನ ಪ್ರಮಾದದಿಂದ ಇಲ್ಲವೇ ಮನೋರಂಜನೆ ಮಾಡುವುದಕ್ಕೆ ಪರಸ್ತ್ರೀಗಮನ ವ್ಯಸನ ಎನ್ನುತ್ತಾರೆ.

. ಶಿಕಾರಿ: ಪಶು, ಪಕ್ಷಿ, ಪ್ರಾಣಿಗಳನ್ನು ಅವು ಚಿಕ್ಕವಿರಲಿ, ದೊಡ್ಡವಿರಲಿ ಅವನು ಉದ್ದೇಶ ಪೂರ್ವಕವಾಗಿ ಇಲ್ಲವೆ ಮನೋರಂಜನೆಗಾಗಿ ಕೊಲ್ಲುವುದಕ್ಕೆ ಶಿಕಾರಿ ಎನ್ನವರು.

. ಸಾತ್ಮ್ಯ ವಿಚಾರ

ಪ್ರಕೃತಿಗೆ ಒಗ್ಗಿಕೊಂಡ ಔಷಧ, ವಾಸವಾಗಿರುವ ಪ್ರದೇಶ, ನೀರು, ರೋಗ, ಶರೀರ ಮೊದಲಾದ ಸುಖ ಪ್ರದವಾದ ಪದಾರ್ಥಗಳು ಸಾತ್ಮ್ಯವೆನಿಸುತ್ತದೆ. ಇದರ ವಿರುದ್ಧವಾಗಿ ಯಾವ ಪದಾರ್ಥಗಳ ಸೇವನೆಯಿಂದ ದುಃಖ ಅಥವಾ ತೊಂದರೆಯುಂಟಾಗುವುದೋ ಅದು ‘ಅಸಾತ್ಮ್ಯ’ ಎನಿಸುತ್ತದೆ.

ನಿತ್ಯ ರೂಢಿಯಲ್ಲಿರುವ ಆಹಾರ ಪದಾರ್ಥಗಳು, ನೀರು, ಹವೆ, ಮುಂತಾದವುಗಳು ಅವು ಸ್ವಲ್ಪ ದುಷ್ಟರಿಣಾಮಕಾರಿಗಳೆನಿಸಿದರೂ ವ್ಯಕ್ತಿಯಲ್ಲಿ ಹೆಚ್ಚಿನ ತೊಂದರೆಯನ್ನುಂಟು ಮಾಡಲಾರವು. ಅತ್ಯಲ್ಪ ಪ್ರಮಾಣದಲ್ಲಿ ವಿಷವನ್ನು ನಿತ್ಯ ಸೇವಿಸಿ ಪ್ರಕೃತಿಗೆ ಒಗ್ಗಸಿಕೊಂಡರೂ ಅದು ದುಷ್ಪರಿಣಾಮ ಬೀರುವುದಿಲ್ಲ. ಏಳು ದಿವಸಗಳವರೆಗೆ ಯಾವುದೊಂದು ಪದಾರ್ಥವನ್ನು ರೂಢಿಸಿಕೊಂಡರೆ ಅದು ಪ್ರಕೃತಿಗೆ ಒಗ್ಗಿ ಹೋಗುವುದು ಎಂದು ಆಚಾರ್ಯರು ಹೇಳಿದ್ದಾರೆ.

. ಆತ್ಮನ ವಿಚಾರಗಳು

ಆತ್ಮನು ಶರೀರಾದಿ ಪ್ರಾಣಗಳನ್ನು ಹೊಂದಿ ಜೀವಿಸುತ್ತಾನೆ. ಮತ್ತೆ ಮತ್ತೆ ಭವಿಷ್ಯಕಾಲದಲ್ಲೂ ಜೀವಿಸುತ್ತಾನೆ. ಭೂತಕಾಲದಲ್ಲೂ ಹೀಗೆಯೇ ಜೀವಿಸಿದ್ದನು. ಇದಕ್ಕಾಗಿ ಜೀವಿಯ ಹೆಸರಿನಿಂದ ಆತನಿಗೆ ‘ಆತ್ಮ’ನೆನ್ನುತ್ತಾರೆ.

ಜೈನ ದಾರ್ಶನಿಕರ ದೃಷ್ಟಿಯಿಂದ ಆತ್ಮನ ಅಸ್ತಿತ್ವ

ಪ್ರತಿಯೊಂದು ದರ್ಶನವು ಮಾನವ ಜೀವನದ ಮಹತಿಯನ್ನು ತೋರಿಸುತ್ತದೆ. ಅದರಲ್ಲಿ ಜೈನ ದರ್ಶನವಂತೂ ಮಾನವತೆಗೆ ಅತ್ಯಂತ ಮಹತ್ವವನ್ನು ಕೊಟ್ಟಿದೆ. ಸ್ವರ್ಗದಲ್ಲಿ ದೇವೇಂದ್ರನಾಗಿ ಜನಿಸುವುದಕ್ಕಿಂತ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟುವುದಕ್ಕೆ ಜೈನ ತಾತ್ವಿಕ ದೃಷ್ಟಿಯಿಂದ ಮಹತ್ವ ಹೆಚ್ಚು. “ಈ ಮಾನವ ಜನ್ಮವು ದುರ್ಲಭವಾದುದು. ಅದನ್ನು ನೀನು ದೊರಕಿಸಿರುವಿ. ಅಹಿತ ಸಂಗವನ್ನು ಬಿಡು. ಆತ್ಮ ಹಿತವನ್ನು ಮಾಡಿಕೊಳ್ಳಿ” ಎಂದು ಅಮೋಘವರ್ಷನು ಹೇಳಿದ್ದಾನೆ. ಹೀಗೆ ಎಲ್ಲ ಸಂತರೂ, ಜೈನ ದಾರ್ಶನಕರೂ, ನರಜನ್ಮದ ಮಹತ್ವವನ್ನು ಹೇಳುವಲ್ಲಿ ಒಂದು ಅರ್ಥವಿದೆ. ಆತ್ಮನು ಮುಕ್ತನಾಗಬೇಕಾದರೆ, ತನ್ನ ಪರಮೋನ್ನತಿಯನ್ನು ಸಾಧಿಸಬೇಕಾದರೆ ಮಾನವ ಜನ್ಮದಲ್ಲಿಯೇ ಸಾಧ್ಯವಿದೆ. ದೇವಜನ್ಮವು ಮಾನವ ಜನ್ಮದಲ್ಲಿ ಆತ್ಮನು ಸಂಪಾದಿಸಿದ ಪುಣ್ಯಭಾಗದ ಒಂದು ಅಂಶ. ಪುಣ್ಯ ತೀರದ ನಂತರ ಎಣ್ಣೆ ತೀರಿದ ದೀಪದಂತೆ ದೇವೇಂದ್ರನ ಸುಖ ಸಂಪತ್ತುಗಳೆಲ್ಲ ಇಲ್ಲದಂತಾಗುವುವು. ಅದಕ್ಕಾಗಿಯೇ ತೀರ್ಥಂಕರರು ಮಾನವರಾದರೂ ಅವರಿಗೆ ರತ್ನಾಕರ ವರ್ಣಿ ವರ್ಣಿಸಿರುವಂತೆ ದೇವೇಂದ್ರನಂತೆ ಎಲ್ಲ ಸುಖೋಪಭೋಗಗಳು ದೊರಕುವವು. ಇದರಿಂದ ಮಾನವನ ಮಹತಿಯೂ, ಆತ್ಮನ ಅಸ್ತಿತ್ವವೂ ವ್ಯಕ್ತವಾಗುತ್ತವೆ.

ವಿದ್ಯಾನಂದ ಆಚಾರ್ಯರು ದೇಹ-ಆತ್ಮಗಳು ಬೇರೆ ಬೇರೆಯಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಶರೀರವು ಅಚೇತನವಿದೆ. ಅಲ್ಲದೆ ಅದು ಆತ್ಮನ ಭೋಗಕ್ಕೆ ಆಶ್ರಯ ಸ್ಥಾನವೂ ಆಗಿದೆ. ಆತ್ಮನು ಭೋಕ್ತನು. ಶರೀರದಂತೆ ಇಂದ್ರಿಯಗಳೂ ಆತ್ಮವೆನಿಸಲಾರವು. ಅವು ಆತ್ಮನ ಉಪಭೋಗದ ಸಾಧನಗಳಾಗಿವೆ. ‘ನಾನು ಕಣ್ಣಿನಿಂದ ನೋಡುತ್ತೇನೆ ಎನ್ನುವಲ್ಲಿ ಕಣ್ಣುಗಳ ನೋಡುವ ಕ್ರಿಯೆಗೆ ಸಾಧನಗಳಾಗಿವೆ. ನೋಡುವವನೊಬ್ಬ ಬೇರೆಯೇ ಇದ್ದಂತಾಯಿತು. ಅವನೇ ಆತ್ಮನು. ಇದರಂತೆ ಜೀವನ ಶಬ್ಧವು ಬುದ್ಧಿಗೂ ಅನ್ವಯಿಸಲಾರದು. ಇವನ್ನೆಲ್ಲ ಗಮನಿಸಿಯೇ ಅಕಲಂಕಾಚಾರ್ಯರು ಹೊಗೆ ಇರುವಲ್ಲಿ ಅಗ್ನಿ ಇದೆ ಎಂದು ನಂಬುವಂತೆ ಆತ್ಮನ ಅಸ್ತಿತ್ವವನ್ನು ಒಪ್ಪಲಿಕ್ಕೆ ಬೇಕೆಂದು ಹೇಳಿರುವರು. ಮೃಗಜಲದಲ್ಲಿ ಉಂಟಾಗುವ ನೀರಿನ ಜ್ಞಾನಕ್ಕೆ ಬಾಧೆ ಇರುವುದರಿಂದ ಅಲ್ಲಿ ನೀರಿನ ಅಸ್ತಿತ್ವಕ್ಕೆ ಸ್ಥಾನವಿಲ್ಲ. ಈ ನಿಯಮಕ್ಕನುಸರಿಸಿ ‘ಜೀವ’ ಶಬ್ದವು ಆತ್ಮ ವಸ್ತುವಿನ ದ್ಯೋತಕವಾಗಿದೆ.

ಈ ಆತ್ಮ ವಸ್ತುವಿಗೆ ಹರ್ಷ – ವಿಷಾದಗಳೇ ಮೊದಲಾದ ಅವಸ್ಥೆಗಳುಂಟು. ಇವನ್ನು ಪ್ರತಿಯೊಬ್ಬ ವ್ಯಕ್ತಿಗೂ ಅನುಭವಿಸಲು ಬರುತ್ತದೆ. ಅಲ್ಲದೆ ಪ್ರತಿಯೊಂದು ಶರೀರದಲ್ಲಿ ಬೇರೆ ಬೇರೆ ರೀತಿಯಾಗಿ ಅನುಭವದಲ್ಲಿ ಬರುತ್ತವೆ. ಈ ಅನುಭವಗಳನ್ನು ಅಲ್ಲಗಳೆಯಲಾಗದು. ಈ ಪ್ರಕಾರ ಯುಕ್ತಿ, ಅನುಭವ, ಪ್ರಮಾಣಗಳಿಂದ ಆತ್ಮನ ಅಸ್ತಿತ್ವವು ಸಿದ್ಧಿಸುವುದು. ಆತ್ಮನ ಅಸ್ತಿತ್ವದ ಮೇಲೆಯೇ ಜೈನ ದರ್ಶನ ತತ್ವಜ್ಞಾನವು ಆಧರಿಸಿದೆ.

ಶುದ್ಧಾತ್ಮನಲ್ಲೆ ಪರದ್ರವ್ಯದ ಸಂಯೋಗವಾಗುವುದರಿಂದ ಅಶುದ್ಧತೆಯುಂಟಾಗುವುದು. ಈ ಅಶುದ್ಧಾವಸ್ಥೆಗಳೇ ಆತ್ಮನ ಪರ್ಯಾಯ ಸ್ವರೂಪಗಳೆನಿಸುವುವು.

. ಶರೀರದಲ್ಲಿ ಆತ್ಮನ ಪ್ರವೇಶ

ರಜಸ್ವಲೆಯಾಗಿ ನಾಲ್ಕು ದಿವಸಗಳ ನಂತರ ಪರಿಶುದ್ಧಳಾದ ಸತಿಯಲ್ಲಿ ಸಂಭೋಗಿಸಿದ ಪುರುಷನ ವೀರ್ಯವು ಢಿಂಬಾಣುವಿನೊಡನೆ ಸೇರಿ ಗರ್ಭಧಾರಣೆ ಮಾಡಲು ಸಮರ್ಥವೆನಿಸಿದೆ. ಅದೇ ಕಾಲದಲ್ಲಿ ಗರ್ಭಸ್ಥಾಪನೆಯಾಗಿ ಅನಾದಿ, ಅನಂತ ಹಾಗೂ ಚೈತನ್ಯ ಸ್ವರೂಪಿ ಆತ್ಮನು ತನ್ನ ಪೂರ್ವಕರ್ಮಗಳಿಗನುಸಾರವಾಗಿ ಅಲ್ಲಿ ಪ್ರವೇಶಿಸುತ್ತಾನೆ.

ಈ ಜ್ಞಾನದರ್ಶನ ಸ್ವರೂಪನಾದ ಆತ್ಮನು ತನ್ನ ಕರ್ಮಗಳಿಂದ ರಚಿತವಾದ ಶರೀರದ ಮೂಲಕ ಅನಾದಿಕಾಲದಿಂದ ಬಂಧನಾಗಿದ್ದಾನೆ. ಆದ್ದರಿಂದ ಒಮ್ಮೊಮ್ಮೆ ಆಕಾರ ರಹಿತವಾಗಿ, ಒಮ್ಮೊಮ್ಮೆ ಆಕಾರ ಯುಕ್ತನಾಗಿದ್ದಾನೆ. ಈತನ ಲಕ್ಷಣವು ಜ್ಞಾನದರ್ಶನವೆನಿಸಿದ್ದು ಅವನೇ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುತ್ತಾನೆ. ಹಾಗೂ ಎಲ್ಲವನ್ನು ನೋಡಬಲ್ಲವನಾಗಿದ್ದಾನೆ. ಆದ್ದರಿಂದ ಆತ್ಮನಿಗೆ ಜ್ಞಾತಾ, ದ್ರಷ್ಟಾ ಎನ್ನುತ್ತಾರೆ.

ಆತ್ಮನು ಯಾವಾಗಲೂ ಕರ್ತವ್ಯನಿರತನಾಗಿರುತ್ತಾನೆ. ಹಾಗೂ ಎಲ್ಲ ಕೆಲಸಗಳನ್ನು ಮಾಡುತ್ತಾನೆ ಆದ್ದರಿಂದ ಈತನಿಗೆ ‘ಕರ್ತಾ’ ಎನ್ನುತ್ತಾರೆ. ‘ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳನ್ನು ಭೋಗಿಸುವವನಾದ್ದರಿಂದ ‘ಭೋಕ್ತಾ’ಎನ್ನುವರು. ಈ ಆತ್ಮನು ಅನಾದಿ ಹಾಗೂ ಅನಂತನಾಗಿರುವನು. ಹಾಗೂ ತನ್ನ ಶರೀರ ಪ್ರಮಾಣದಲ್ಲಿರುವವನಾಗಿರುವನು. ಅಲ್ಲದೇ ಸಂಕುಚಿತಗೊಳ್ಳುವ, ವಿಸ್ತಾರಗೊಳ್ಳುವ ಗುಣಸ್ವಭಾವದವನಾಗಿದ್ದಾನೆ. ಆತ್ಮನು ದೇಹದಲ್ಲಿ ಅಣು ಸ್ವರೂಪನಾಗಿರುವನೆಂದೂ, ಕಣಸ್ವರೂಪನಾಗಿರುವನೆಂದೂ, ಅಂಗುಷ್ಠ ಪ್ರಮಾಣದಲ್ಲಿರುವನೆಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಈತನ ಪ್ರಮಾಣ ಯೋಜನೆಗೂ ಸಿಕ್ಕನು, ಲೋಕವ್ಯಾಪ್ತಿಯೂ ಅಲ್ಲ. ಈ ಆತ್ಮ ತಾನು ಹೊಂದಿದ ದೇಹ ಗಾತ್ರದವನಾಗಿದ್ದಾನೆ.

ಆತ್ಮನು ನಿತ್ಯ ಹಾಗೂ ಅವಿನಾಶಿಯಾಗಿದ್ದಾನೆ ಹಾಗೂ ಜನ್ಮ ಜರಾಮೃತ್ಯು ಇತ್ಯಾದಿ ಪರ್ಯಾಯಗಳಿಂದ ಪರಿಣಾಮಶೀಲನಾಗಿದ್ದಾನೆ.(ಅನಿತ್ಯನಾಗಿದ್ದಾನೆ) ವಿನಾಶಸ್ವರೂಪಿಯಾಗಿದ್ದಾನೆ. ಅನೇಕ ಶ್ರೇಷ್ಠ ಗುಣಗಳನ್ನು ಹೊಂದಿದ್ದಾನೆ. ಸುಖ-ದುಃಖಗಳನ್ನು ಸ್ವಯಂ ಅನುಭವಿಸುತ್ತಾನೆ. ಕರ್ಮಕ್ಷಯವಾದ ಬಳಿಕ ಮೋಕ್ಷಗತಿ ಹೊಂದುತ್ತಾನೆ.

ಮನಸ್ಸಿನ ವರ್ಣನೆ ಇಲ್ಲ : ಜೈನಾಚಾರ್ಯರ ಹೊರತಾಗಿ ರಚಿತವಾದ ವೈದ್ಯಕೀಯ ಗ್ರಂಥಗಳಲ್ಲಿ ಆತ್ಮನ ಜೊತೆಗೆ ನೆರಳಾಗಿ ಬರುವ ಮನಸ್ಸಿನ ವಿಚಾರಗಳ ಪ್ರಸ್ತಾಪವಿದೆ. ಆದರೆ ಜೈನ ಆಚಾರ್ಯರುಗಳು ರಚಿಸಿದ ಆಯುರ್ವೇದ ಗ್ರಂಥಗಳಲ್ಲಿ ಮಾತ್ರ ಎಲ್ಲೆಲ್ಲಿಯೂ ಮನಸ್ಸಿನ ವಿಸ್ತ್ರತವಾದ ವರ್ಣನೆ ಕಂಡುಬರುವುದಿಲ್ಲ. ವ್ಯವಹಾರ ಸ್ವಾಥ್ಯ ಲಕ್ಷಣಗಳನ್ನು ಹೇಳುವಾಗ ಮಾತ್ರ ಮನಸ್ಸು ಪ್ರಸನ್ನವಾಗಿರಬೇಕು ಎಂದಿದ್ದಾರೆ. ಇದಲ್ಲದೇ ಉನ್ಮಾದ, ಅಪಸ್ಮಾರ, ಮೂರ್ಛೆ ಮೊದಲಾದ ಮನೋರೋಗಗಳ ವರ್ಣನೆ ಮಾಡಿದ್ದಾರೆ. ಮನಸ್ಸೇ ಮಾನವನ ಬಂಧ ಮೋಕ್ಷಗಳಿಗೆ ಮೂಲ ಕಾರಣವೆಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಿದ್ದಾರೆ. ಆದರೆ ಈ ವಿಷಯ ಜೈನ್ಯ ವೈದ್ಯಕೀಯ ಗ್ರಂಥಗಳಲ್ಲಿಲ್ಲ.

. ಮರಣ

ಆಯುಷ್ಯವು ನಾಶವಾಗಿ ಈ ಆತ್ಮನು ಗತ್ಯಂತರ ಹೊಂದುವುದರಿಂದ ಮರಣ ಬರವುದು. ದೇಹಕ್ಕೆ ಸಾವೇ ಹೊರತು ಆತ್ಮನಿಗಲ್ಲ. ಆಯುಷ್ಯವು ಪೂರ್ಣವಾಗದೇ ಅಪಘಾತ, ವಿಷಪ್ರಾಶನ, ವಿಷಜಂತುಗಳು ಕಡಿಯುವುದು, ಆತ್ಮಹತ್ಯೆ ಈ ಮೊದಲಾದ ಕಾರಣಗಳಿಂದ ಸಾವು ಬಂದರೂ ಅದು ಸಾವೇ ಎನಿಸುವುದು ಎಂದಿದ್ದಾರೆ ಯಾವನಲ್ಲಿ ಮೋಹ ಹೆಚ್ಚಾಗಿರುವುದೋ ಅವನಿಗೆ ಮರಣ ಭಯ ಹೆಚ್ಚಿಗಿರುವುದು. ಅಲ್ಲದೇ ಪೂರ್ಣಾಯುಷ್ಯ ಕಳೆದವರಿಗೆ ಎಂದರೆ ಅತಿ ವೃದ್ಧರಿಗೆ ಮರಣ ಸುದ್ದಿಯನ್ನು ಹೇಳಬಾರದು. ಒಂದು ವೇಳೆ ಈ ವಾರ್ತೆ ತಲುಪಿದರೆ ಅವರು ತುಂಬ ಭೀತಿಗೊಳಗಾಗುವರು ಎಂದು ಆಚಾರ್ಯರು ಹೇಳಿದ್ದಾರೆ. (ಕ.ಅ.೨೦, ಶ್ಲೋಕ ೪-೫)

ಯಾವ ವ್ಯಕ್ತಿ ಮೋಕ್ಷ ಪ್ರಾಪ್ತಿಗಾಗಿ ಸದಾ ಚಿಂತಿಸುತ್ತ ಇಹಬಂಧನಗಳನ್ನು ಕಡಿದುಕೊಂಡು ಈ ದೇಹವನ್ನು ತ್ಯಾಗ ಮಾಡಲು ಸಿದ್ಧನಿರುವನೋ ಅಂಥವನಿಗೆ ಮರಣ ವಾರ್ತೆಯನ್ನು ಅವಶ್ಯವಾಗಿ ತಿಳಿಸಬೇಕು ಎಂದಿದ್ದಾರೆ. ಅವನು ಮರಣದ ಪೂರ್ವ ಕಂಡುಬರುವ ಚಿಹ್ನೆ, ಲಕ್ಷಣಗಳನ್ನು ಸಂತೋಷದಿಂದ ಕೇಳಿ ತಿಳಿಯುವನು. ಹಾಗೂ ಆ ಸ್ಥಿತಿ ಬಂದಾಗ ಅವನ್ನು ಸಂತೋಷದಿಂದ ಸ್ವಾಗತಿಸುವನು.

ಶರೀರದ ವಾಸ್ತವಿಕ ಪ್ರಕೃತಿ ಹಾಗೂ ಸ್ವಭಾವಗಳಿಗೆ ವ್ಯತಿರಿಕ್ತವಾದ ಲಕ್ಷಣಗಳು ವೃದ್ಧನಲ್ಲಿ ಇಲ್ಲವೆ ತೀವ್ರರೋಗಿಯಲ್ಲಿ ಕಂಡುಬಂದರೆ ಅವು ಅರಿಷ್ಟಲಕ್ಷಣ(ಮುಂಬರುವ ಮೃತ್ಯು ಸೂಚಕ ಲಕ್ಷಣ)ಗಳೆಂದು ತಿಳಿಯಬೇಕೆಂದು ಜಿನೇಂದ್ರಭಗವಾನರು ಹೇಳಿದ್ದಾರೆ.

ಮರಣ ಬರುವ ಪೂರ್ವದ ಎರಡು ಮೂರು ವರ್ಷಗಳ ಮೊದಲಿನಿಂದ ಹಿಡಿದು ಅಂದೇ ರಾತ್ರಿ ಮರಣ ಚಿಹ್ನೆಗಳವರೆಗೆ ಶಾಸ್ತ್ರದಲ್ಲಿ ವಿಸ್ತ್ರೃತವಾದ ವರ್ಣನೆ ಇದೆ.

ಮರಣದ ವಿಶೇಷ ಲಕ್ಷಣಗಳನ್ನು ಈ ರೀತಿ ಹೇಳಿದ್ದಾರೆ. ಮಾನವನ ದೃಷ್ಟಿ ಭ್ರಾಂತವಾಗುವುದು. ಕಣ್ಣುಗಳಿಗೆ ಕತ್ತಲು ಗೂಡಿಸುವುದು, ಹಾರುವುದು ಹಾಗೂ ಹೆಚ್ಚಾಗಿ ನೀರು ಬರುವುದು, ಮುಖದ ಮೇಲೆ ಅತಿಯಾದ ಬೆವರು, ನಾಡಿ ವೇಗ ಸ್ಥಿರವಾಗುವುದು. ಕೈ ಕಾಲುಗಳ ಮೇಲೆ ವಿಶೇಷವಾಗಿ ಕೂದಲುಗಳು ಹುಟ್ಟುವುದು, ಅತಿಯಾದ ಮಲಪ್ರವೃತ್ತಿ, ಅತಿಯಾದ ಜ್ವರ, ಉಸಿರಾಟ ನಿಲ್ಲುವುದು ಈ ಲಕ್ಷಣಗಳು ಕಂಡ ಬರಲಾರಂಭಿಸಿದರೆ ಆ ವ್ಯಕ್ತಿಯ ಮರಣವು ಕೂಡಲೇ ಬರುವುದೆಂದು ತಿಳಿಯಬೇಕೆಂದು ಆಚಾರ್ಯರು ಹೇಳಿದ್ದಾರೆ.

ಈ ರೀತಿ ಮಹಾಮುನಿ ಉಗ್ರದಿತ್ಯಾಚಾರ್ಯರು ವಿವರವಾಗಿ ತಮ್ಮ ಕಲ್ಯಾಣಕಾರಕ ಗ್ರಂಥದಲ್ಲಿ ಜನನ-ಮರಣಗಳನ್ನೂ ಸವಿಸ್ತಾರವಾಗಿ ವರ್ಣಿಸಿದ್ದಾರೆ. ಈ ಜೀವನ ಸ್ಥಿರವಲ್ಲ. ಇದರಲ್ಲಿ ಹುಟ್ಟು-ಮರಣಗಳಿವೆ. ರೋಗ-ರುಜಿನಗಳಿವೆ. ವೃದ್ಧಾಪ್ಯವಿದೆ. ನಮ್ಮ ಶರೀರದ ಅಸ್ಥಿರೆಯನ್ನೂ ಗಮನದಲ್ಲಿಟ್ಟುಕೊಂಡು ಮೋಕ್ಷ ಸಾಧನೆಯತ್ತ ಗಮನಹರಿಸಬೇಕೆಂದು ಹೇಳಿದ್ದಾರೆ. (ಕಲ್ಯಾಣಕಾರಕ. ಅ.೨೦ ಶ್ಲೋಕ.೩೭

. ಪುನರ್ಜನ್ಮ

ಪ್ರಾಣವು ಹೋಗುವಾಗ ಬುದ್ಧಿ ಹಾಗೂ ಮನಸ್ಸುಗಳು ನಿರ್ಮಲಚಿತ್ತವಾಗಿರುವುದು. ಶಾಸ್ತ್ರಜ್ಞಾನವಿರುವುದು. ಧಾರ್ಮಿಕ ವಿಚಾರಗಳಿರುವುದು. ಒಳ್ಳೆಯ ಆಚರಣೆ, ಸರಳ ಪರಿಣಾಮಗಳ ಪ್ರಾಪ್ತಿ- ಈ ಮುಂತಾದ ಅಂಶಗಳು ‘ಜಾತಿ ಸ್ಮರಣ’ ಕಾರಣವೆನಿಸಿವೆ. ಇದರಿಂದ ಪೂರ್ವ ಜನ್ಮ ಹಾಗೂ ಪರಾಜನ್ಮಗಳ ಅಸ್ತಿತ್ವ ವಿಚಾರ ಸಿದ್ಧವಾಗುತ್ತದೆ.

ಮೊದಲಿನ ಜನ್ಮದಲ್ಲಿ ಅನುಭವಿಸಿದ ವಿಷಯಗಳನ್ನು ಕೇಳಿ, ನೋಡಿ ಹಾಗೂ ಸ್ವಪ್ನ ಹಾಗೂ ಭಯ ಅವಸ್ಥೆಗಳಲ್ಲಿ ತತ್ ಸದೃಶ ವಸ್ತುಗಳನ್ನು ನೋಡಿ ಹುಟ್ಟಿಕೊಂಡ, ಅದರಂತೆ ಅನುಮಾನದಿಂದ ಹಾಗೂ ಬುದ್ಧಿ, ಜ್ಞಾನಾವರಣೀಯ ಕರ್ಮಕ್ಷಯ, ಉಪಶಮ ಮತ್ತು ಕ್ಷಯೋಪಶಮದಿಂದ ಮಾನವನು ತನ್ನ ಪೂರ್ವ ಜನ್ಮ ಸಂಬಂಧಿತವಾದ ವಿಷಯಗಳನ್ನು ಸ್ಮರಣ ಮಾಡಿಕೊಳ್ಳುತ್ತಾನೆ. (ಕಲ್ಯಾಣಕಾರಖ -೩ನೇ ಅಧ್ಯಾಯ,ಶ್ಲೋಕ, -೧೪-೧೪-೧೬)

. ಸಮಾಧಿ ಮರಣ (ಸಲ್ಲೇಖನ)

ಆತ್ಮನ ಅಮರತ್ವವನ್ನು ಒಪ್ಪುವ ಸಾಧಕನು ಮರಣಕ್ಕೆ ಹೆದರಲಾರನು. ಅವನು ಮರಣವೊಂದು ಮರಣಯಾತ್ರೆ ಎಂದು ಭಾವಿಸುವನು. ಸಾಧಕನ ದೃಷ್ಟಿಯಿಂದ ಮರಣಕ್ಕೊಂದು ವಿಶಿಷ್ಟ ಸ್ಥಾನವಿದೆ. ಎಂಥ ವಿಪತ್ತುಗಳು ಬಂದೊದಗಿದರೂ ಸಾಧಕನೂ ತನ್ನ ಸತ್ಪಥದಿಂದ ಚ್ಯುತನಾಗಬಾರದು. ಮರಣಕ್ಕಂಝದ ಮಾನವನು ಉಳಿದ ಯಾವ ವಿಪತ್ತಿಗೂ ಹೆದರಲಾರನು. ಇಂಥವನ ಮುಂದೆ ಕರ್ಮವೂ ಕೂಡ ತನ್ನ ಶಕ್ತಿಯನ್ನು ಕಳೆದುಕೊಳ್ಳುವುದು. ಗುಣಭದ್ರಾಚಾರ್ಯರು ಹೇಳುವಂತೆ ಸಾಧಕನ ಮನೋವೃತ್ತಿಯು ಉಳಿದ ಜೀವಿಗಳಿಗಿಂತ ಬೇರೆಯಾಗಿರುತ್ತದೆ. ಅವನಿಗೆ ಧನ-ದ್ರವ್ಯಗಳ ಮೇಲೆ ಆಸೆ ಇರುವುದಿಲ್ಲ. ಅವನು ಜೀವಿತದ ಮೇಲಣ ಮಮತೆಯಿಂದ ಎಂದೂ ಸಾಧನೆಯಲ್ಲಿ ಹಿಂದುಳಿಯಲಾರನು. ಕರ್ತವ್ಯ ಪಾಲನದಲ್ಲಿ ಒದಗುವ ಸಾವಿಗೂ ಜೀವನವೆಂದು ಭಾವಿಸುತ್ತಾನೆ.

ಸಮಾಧಿ ಮರಣವೆಂದರೆ ಆತ್ಮಹತ್ಯೆಯಲ್ಲಿ ಅಲ್ಲ. ಈ ಮಾತನ್ನು ಸ್ಪಷ್ಟಪಡಿಸಲು ಒಂದೆಡೆಗೆ ಪ್ರಸಿದ್ಧ ದಾರ್ಶನಿಕ ಸರ್.ಎನ್.ರಾಧಾಕೃಷ್ಣನ್ ಅವರು “ಬೌದ್ಧ ಧರ್ಮವು ಆತ್ಮಘಾತವನ್ನು ನಿಷೇಧಿಸುವುದು. ಅದೇ ಜೈನಧರ್ಮವು ಆತ್ಮಘಾತವು ಜೀವನವರ್ಧಕವೆಂದು ತಿಳಿಯುತ್ತದೆ. ಸಾಧು ಜೀವನಕ್ಕೆ ಎಲ್ಲಿ ಸಾಧ್ಯವಿಲ್ಲವೋ ನಮ್ಮ ವಾಸನೆಗಳ ಮೇಲೆ ನಾವು ವಿಜಯವನ್ನು ಎಲ್ಲಿ ಸಂಪಾದಿಸಲು ಅಸಮರ್ಥರಾಗುವೆಯೋ ಅಲ್ಲ ಜೈನಧರ್ಮವು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಹೇಳುತ್ತದೆ”. ಈ ಮಾತನ್ನು ಉಲ್ಲೇಖಿಸಿ ಪಾಶ್ಚಿಮಾತ್ಯರಲ್ಲಿ ಭಾರತೀಯರ ಬಗೆಗೆ ಹೇಗೆ ತಪ್ಪು ಕಲ್ಪನೆಗಳಂತೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಜೈನ ಧರ್ಮವು ಆತ್ಮಘಾತಕ್ಕೆ ‘ಹಿಂಸೆ’ ಎಂದು ಪರಿಗಣಿಸಲಾಗಿದೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವವನಲ್ಲಿ ಭಯ, ದೈನ್ಯ ಮೊದಲಾದ ದುರ್ಬಲತೆಗಳಿರುತ್ತವೆ. ಮನಸ್ಸಿನ ದುರ್ಬಲತೆಗೆ ವಶನಾಗಿ ಅವನು ಆತ್ಮಘಾತಕ್ಕೆ ಶರಣು ಹೋಗುವನು. ಆದರೆ ಸಮಾಧಿ ಮರಣವನ್ನು ಹೊಂದುವ ಸಾಧಕನ ಮನೋಭಾವನೆ ಹಾಗಿರುವುದಿಲ್ಲ. ಅವನಲ್ಲಿ ನಿರ್ಭೀತಿ ವೀರತ್ವಗಳು ಪ್ರಾಮುಖ್ಯವಾಗಿ ಕಂಡುಬರುತ್ತವೆ. ಸಾಧಕನು ರಾಗ, ದ್ವೇಷ, ಕ್ರೋಧ, ಮಾನ, ಮಾಯಾ, ಲೋಭಗಳನ್ನು ತ್ಯಜಿಸಿ ಶುದ್ಧ ಅಹಿಂಸಾತ್ಮಕ ವೃತ್ತಿಯನ್ನು ಪಾಲಿಸುತ್ತ ಸಮಾಧಿ ಮರಣವನ್ನು ಹೊಂದುತ್ತಾನೆ.

ಪೂಜ್ಯಪಾದರು ಈ ಮಾತಿಗೊಂದು ಉತ್ತಮ ಉದಾಹರಣೆಯನ್ನು ಹೀಗೆ ಕೊಟ್ಟಿದ್ದಾರೆ. ಒಬ್ಬ ಗ್ರಹಸ್ಥರ ತುಂಬಿದ ಮನೆಗೆ ಬೆಂಕಿ ಬಿದ್ದಾಗ ಆಗ ಅವನು ಮೊದಲು ಅಗ್ನಿಯನ್ನು ಆರಿಸಲು ಮುಂದಾಗುತ್ತಾನೆ. ಅದು ಸಾಧ್ಯವಾದಾಗ ಮನೆಯನ್ನು ಕೆಡವಿಯಾದರೂ ಅಮೂಲ್ಯ ಪದಾರ್ಥಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಾನೆ. ಆಗ ಅವನಲ್ಲಿ ಮನೆಯ ಮೇಲಿನ ಮಮತೆ ದೂರವಾಗುತ್ತದೆ. ಇನ್ನುಳಿದ ಬೆಲೆಯುಳ್ಳ ವಸ್ತುಗಳನ್ನಾದರೂ ರಕ್ಷಿಸಬೇಕೆಂಬ ಹಂಬಲ ಉಂಟಾಗುತ್ತದೆ. ಇದು ಬುದ್ಧಿವಂತರ ಲಕ್ಷಣವಾಗಿದೆ. ಇದರಂತೆ ಸಾಧಕನು ಸುಮ್ಮಸುಮ್ಮನೆ ದೇಹ ತ್ಯಾಗ ಮಾಡಲು ಸಿದ್ಧನಾಗುವುದಿಲ್ಲ. ಶರೀರವು ಆತ್ಮಕಲ್ಯಾಣದ ಸಾಧನವೆಂದು ಅವನು ತಿಳಿದಿರುತ್ತಾನೆ. ಆದರೆ ಅದರಿಂದ ಆ ಕಾರ್ಯವು ನಡೆಯದಂತಾದಾಗ ರೋಗ ರುಜಿನಗಳಿಗೆ ತುತ್ತಾಗಿ ಆತ್ಮಜ್ಞಾನಕ್ಕೆ ತೊಡಕಾಗಿ ನಿಲ್ಲುವುದೋ ಆಗ ಅದನ್ನು ನಿರ್ಮಮತ್ವ ಭಾವದಿಂದ ತ್ಯಜಿಸಲು ಸಿದ್ಧನಾಗುತ್ತಾನೆ. ಇಲ್ಲಿ ಸಮಾಧಿ ಮರಣದ ಗುರಿಯು ಮೃತ್ಯುವಿನ ಅನಿವಾರ್ಯ ಪರಿಸ್ಥಿತಿಯುಂಟಾದಾಗ ಸದ್ಗುಣದ ರಕ್ಷಣೆಯನ್ನು ಮಾಡಿಕೊಂಡು ಆತ್ಮನ ಜೀವನ ನಿರ್ಮಾಣ ಮಾಡುವುದಿರುತ್ತದೆ. ಇಲ್ಲಿ ಮರಣವೇ ಧ್ಯೇಯವಾಗಿರುವುದಿಲ್ಲ. ಇದೇ ಮಾತನ್ನು ಸಮಂತಭದ್ರಾಚಾರ್ಯರು ರತ್ನಕರಂಡಕ ಶ್ರಾವಕಾಚಾರದಲ್ಲಿ ಉಪಸರ್ಗ, ದುರ್ಭಿಕ್ಷೆ, ವೃದ್ಧಾಪ್ಯ, ಕೈಮೀರಿದ ರೋಗಗಳಲ್ಲಿ ಆತ್ಮ ಪವಿತ್ರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಶರೀರವನ್ನು ತ್ಯಾಗ ಮಾಡುವುದೇ ‘ಸಮಾಧಿ ಮರಣ’ ವೆನಿಸುವುದು ಎಂದಿದ್ದಾರೆ.

ಸರ್ವಾರ್ಥಸಿದ್ಧಿ ಗ್ರಂಥದಲ್ಲಿ ‘ವಿಷ, ಶಸ್ತ್ರ’ ಮೊದಲಾದ ಉಪಕರಣಗಳಿಂದ ರಾಗ-ದ್ವೇಷಗಳಿಂದ ಮೋಹಾ ವಿಷ್ಟವಾದ ಪ್ರಾಣಿಯು ಆತ್ಮಘಾತ ಮಾಡಿಕೊಳ್ಳುವುದರಿಂದ ಆತ್ಮನ ಪ್ರಗತಿಗೆ ಭಾದೆಯುಂಟಾಗುವುದಿಲ್ಲವಾದ್ದರಿಂದ ಅವನಿಗೆ ಆತ್ಮವಧೆಯ ದೋಷ ತಟ್ಟುವುದಿಲ್ಲ ಎಂದಿದ್ದಾರೆ. ಸಲ್ಲೇಖನ ವ್ರತ ತೆಗೆದುಕೊಳ್ಳಬೇಕಾದರೆ ಅವನು ಆಂತರಿಕ ಕಷಾಯಗಳನ್ನು ಮೊದಲು ಬಿಡಬೇಕಾಗುವುದೆಂದು ಹೇಳಲಾಗಿದೆ ಮತ್ತು ಬಾಹ್ಯ ಪರಿಣಾಮಗಳಿಂದ ಶರೀರವನ್ನು ಕೃಶಗೊಳಿಸುತ್ತ ಹೋಗುವುದರಿಂದ ಏನೂ ಲಾಭವಿಲ್ಲ. ಅಂಥವನ ಸಲ್ಲೇಖನವು ವ್ಯರ್ಥವಾಗುವುದು. ಕಷಾಯಗಳು ಇರುವವರೆಗೆ ಚಿತ್ತವು ಬಾಹ್ಯ ಪ್ರಪಂಚದಲ್ಲಿ ವಿಹರಿಸುವುದು. ಅದರಿಂದ ಆತ್ಮ ಚಿಂತನೆಯಾಗುವುದಿಲ್ಲ. ಅದಕ್ಕಾಗಿ ಚಳಿ, ಮಳೆ, ಗಾಳಿ, ಬಿಸಿಲುಗಳಿಂದ ದೇಹದಂಡನೆ ಮಾಡುವುದಕ್ಕಿಂತ ಆತ್ಮ ನಿರ್ಮಲತೆಯು ಮುನಿಗಳಿಗೆ ಹೆಚ್ಚಿನದು. ಇದನ್ನು ಸಾಧಿಸಿಕೊಂಡವನ ಸಮಾಧಿ ಮರಣವು ಸಾರ್ಥಕ ವಾಗುವುದು.