ಪೀಠಿಕೆ

ಈ ಜಗತ್ತಿನಲ್ಲಿ ವೈದ್ಯಕೀಯ ಶಾಸ್ತ್ರವು ಎಂದಿನಿಂದ ಹುಟ್ಟಿಕೊಂಡಿತು ಎಂದು ನಿಶ್ಚಿತವಾಗಿ ಹೇಳುವುದು ಕಷ್ಟ. ಈ ಪ್ರಥ್ವಿಯ ಮೇಲೆ ಮಾನವ ಹಾಗೂ ಇತರ ಜೀವಿಗಳು ಹುಟ್ಟಿಕೊಂಡ ಮೇಲೆ ಆಹಾರ, ವಿಹಾರ, ಪರಿಸರಗಳಲ್ಲಾದ ಏರು ಪೇರುಗಳಿಂದ ಆಗುವ ರೋಗ ರುಜಿನಾದಿಗಳ ಪರಿಹಾರಕ್ಕಾಗಿ ಏನಾದರೊಂದು ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. ಈಗಲೂ ಪಶು,ಪಕ್ಷಿ, ಪ್ರಾಣಿಗಳು ತಮಗೆ ರೋಗವಾದಾಗ ಉಪವಾಸವಿದ್ದೋ ಇಲ್ಲವೇ ಯಾವುದಾದರೊಂದು ಮೂಲಿಕೆಗಳನ್ನು ತಿಂದು ವಾಂತಿ ಮಾಡಿಯೋ ತಮ್ಮ ರೋಗಗಳನ್ನು ಪರಿಹಾರ ಮಾಡಿಕೊಳ್ಳುವುದನ್ನು ನಾವು ಕಾಣಬಹುದು. ಅರ್ಷ್ಯಪದ್ಧತಿಯಲ್ಲಿ ಜೀವನ ಶಾಸ್ತ್ರವಾದ ಆಯುರ್ವೇದವು ವೇದಗಳ ಕಾಲದಲ್ಲಿಯೇ ಹುಟ್ಟುದೆಯೆಂದೂ ಬ್ರಹ್ಮನೇ ಇದನ್ನು ಪ್ರಪ್ರಥಮವಾಗಿ ಭೋದಿಸಿದನೆಂದೂ ತದನಂತರ ಅದು ದಕ್ಷ ಪ್ರಜಾಪತಿ, ಅಶ್ವಿನೀ ದೇವತೆಗಳು, ಇಂದ್ರ, ಭಾರಧ್ವಾಜ, ಕಶ್ಯಪ, ಧನ್ವಂತರಿ, ಅಗ್ನಿವೇಶ, ಭೇಲ, ಜೀತೂಕರ್ಣ, ಪರಾಶರ, ಹಾರೀತ, ಕ್ಷಾರಪಾಣಿ ಹೀಗೆ ಈ ಸಂಪ್ರದಾಯ ಬೆಳೆಯುತ್ತ ಬಂದಿತೆಂದು ಇತಿಹಾಸವಿದ್ದರೆ ಜೈನಾಯುರ್ವೇದ ಗ್ರಂಥಗಳಲ್ಲಿ ಋಷಭನಾಥನೇ ಈ ಶಾಸ್ತ್ರವನ್ನು ಭರತನಿಗೆ ಭೋದಿಸಿದನು ಹಾಗೂ ಸಾರರೋಪಾದಿಯಲ್ಲಿದ್ದ ಶಾಸ್ತ್ರದ ಬಿಂದು-ಬಿಂದುಗಳನ್ನ ಉ ತೆಗೆದುಕೊಂಡ ಇತರ ಆಚಾರ್ಯರು ವೈದ್ಯಕೀಯ ಗ್ರಂಥಗಳನ್ನು ರಚಿಸಿದ್ದಾರೆ ಎಂದು ತಿಳಿದು ಬರುತ್ತದೆ. ಇದು ಪರಿಪೂರ್ಣ ಶುದ್ಧಶಾಸ್ತ್ರವಾಗಿದ್ದು ತ್ರಿಕಾಲಬಾಧಿತವಾಗಿದೆ. ಇದರಲ್ಲಿ ಬದಲಾವಣೆ ಸಲ್ಲ.

ಜೈನ ಆಚಾರ್ಯರು, ಋಷಿಗಳು, ಕವಿಗಳು ಸಾಹಿತ್ಯದ ಯಾವುದೇ ಅಂಗದಲ್ಲಿ ಸೇವೆಯನ್ನು ಮಾಡಿದರೂ ಅವರ ಸಾಹಿತ್ಯದ ಧ್ಯೇಯವು ಆತ್ಮನಲ್ಲಿ ಸಾಮ್ಯಭಾವವನ್ನು ಬೆಳೆಸುವುದೇ ಆಗಿದೆಯನ್ನಬಹುದು. ಅಲ್ಲದೇ ಅದು ಜೀವಿಗಳನ್ನೂ, ನಿರ್ವಾಣದ ಪರಮಪ್ರಕಾಶಮಯ ದಾರಿಯಲ್ಲಿ ಮುನ್ನಡೆಸುವುದು. ಜೈನರ ಯಾವುದೇ ರಾಗ, ದ್ವೇಷ, ಮೋಹ, ಮಾತ್ಸರ್ಯ, ದೀನತೆ ಮೊದಲಾದ ವಿಕೃತಿಗಳನ್ನು ಉತ್ಪನ್ನ ಮಾಡುವುದೋ ಅದು ಹೀನ ಸಾಹತ್ಯವೆಂದು ನಂಬಿದ್ದಾರೆ. ಇಂಥ ಸಾಹಿತ್ಯವು ಆತ್ಮ ಘಾತಕವೆಂದು ತಿಳಿದಿದ್ದಾರೆ. ಆದ್ದರಿಂದ ಜೈನ ಸಾಹಿತ್ಯ ಪ್ರಕಾರಗಳೆಲ್ಲವೂ ಮಾನವರ ಆತ್ಮ ತೇಜಸ್ಸನ್ನು ಹೆಚ್ಚಿಸುವಂಥವಾಗಿದೆ. ಇದಕ್ಕೆ ವೈದ್ಯಕೀಯ ಶಾಸ್ತ್ರವೇನೂ ಹೊರತಾಗಿಲ್ಲ.

ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಜೈನ ಲೇಖಕರು ಜನರ ಬದುಕಿಗೆ ಬೇಕಾದ ಭಾಷೆ, ವೈದ್ಯಕೀಯ, ಸಂಗೀತ, ರಾಜನೀತಿ, ತರ್ಕ, ವ್ಯಾಕರಣ, ಕಾಮಶಾಸ್ತ್ರ, ಗಣಿತ, ಮುಂತಾದ ಲೌಕಿಕ ಶಾಸ್ತ್ರಗಳ ನೂರಾರು ಗ್ರಂಥಗಳನ್ನು ವಿವಿಧ ಭಾಷೆಗಳಲ್ಲಿ ರಚಿಸಿದುದು ಕಂಡುಬರುತ್ತದೆ. ಇವನ್ನೆಲ್ಲ ಕ್ರೋಢಿಕರಿಸಿ, ಪರಿಷ್ಕರಿಸಿ, ಒಂದೊಂದೇ ವಿಷಯದಲ್ಲಿ ಒಗ್ಗೂಡಿಸಿದರೆ ಅವೆಲ್ಲ ಇಂದಿನ ಜನಾಂಗಕ್ಕೊಂದು ದೊಡ್ಡ ಕೊಡುಗೆ ಆಗಬಹುದು. ಆದರೆ ಈವರೆಗೆ ಇಂಥ ಕೆಲಸವಾಗಿಲ್ಲ. ಧರ್ಮ ಹಾಗೂ ಸಾಹಿತ್ಯಗಳ ಬಗೆಗೆ ಎಲ್ಲರ ಆಸಕ್ತಿ ಇದ್ದು ಇವುಗಳ ಕುರಿತು ವಿಪುಲ ಸಾಹಿತ್ಯ ದೊರಕುತ್ತದೆ. ಆದರೆ ಲೌಕಿಕ ಶಾಸ್ತ್ರಗಳಲ್ಲಿ ಈ ಕೆಲಸವಾಗಿಲ್ಲ. ವಿವಿಧ ಪ್ರಕಾರಗಳ ಸಾಹಿತ್ಯ ರಚನೆ ಕಾರ್ಯದಲ್ಲಿ ತೊಡಗಿದ್ದವರು. ಬಹುಜನ ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ.

ಜೈನ ಆಯುರ್ವೇದ ಗ್ರಂಥಗಳು

ಜೈನರು ನ್ಯಾಯ, ಕಾವ್ಯ, ಅಲಂಕಾರ, ಕೋಶ,ಛಂದಸ್ಸು ಮೊದಲಾದ ವಿಷಯಗಳ ಮೇಲೆ ಗ್ರಂಥಗಳನ್ನು ರಚಿಸಿರುವಂತೆ ಜ್ಯೋತಿಷ್ಯ, ವೈದ್ಯಕೀಯ,ವೃಕ್ಷಶಾಸ್ತ್ರ ಹಾಗೂ ಪ್ರಾಣಿಗಳ ರೋಗರುಜಿನಾದಿಗಳ ಕುರಿತಿ ಬರೆದುದು ಕಂಡುಬರುತ್ತದೆ. ಪ್ರಾತಃ ಸ್ಮರಣೀಯರಾದ ಪೂಜ್ಯಪಾದರು, ಸಮಂತಭದ್ರರು, ಜೀನಸೇನಗುರು, ವೀರದೇವರು, ಶ್ರೀಗುಣಭದ್ರರು, ಮಹಿರ್ಷಿ ಸೋಮದೇವರು, ರತ್ನಾಕರರು, ಆರಾಧಕರು – ಮೊದಲಾದ ಮಹಾಪಂಡಿತೋತ್ತಮರು ರಚಿಸಿದ ಗ್ರಂಥಗಳನ್ನು ಅವಲೋಕಿಸಿದಾಗ ಅವರು ತಮ್ಮ ಪ್ರಗಲ್ಭವಾದ ಪಾಂಡಿತ್ಯವನ್ನು ಅನೇಕ ವಿಷಯಗಳಲ್ಲಿ ವಿಸ್ತರಿಸುದುದು ಗೋಚರವಾಗುತ್ತದೆ. ಇವರು ವೈದ್ಯಕೀಯ ವಿಶೇಷವಾಗಿ ಅರ್ಧಮಾಗದಿ, ಸಂಸ್ಕೃತ ಹಾಗೂ ಹಳೇ ಕನ್ನಡದಲ್ಲಿವೆ. ನಮ್ಮ ದೌರ್ಭಾಗ್ಯವೆಂದರೆ ಬಹುತೇಕ ಗ್ರಂಥಗಳು ನಮಗಿಂದು ಲಭ್ಯವಿಲ್ಲ. ಇದಕ್ಕಿಂತಲೂ ಖೇದಕರ ವಿಷಯವೆಂದರೆ ನಮಗೆ ದೊರಕಿರುವ ತಾಳೆಗರಿಗಳಲ್ಲಿ ರಚಿಸಿದ ಗ್ರಂಥಗಳನ್ನು ಸಂಗ್ರಹಿಸಲು, ರಕ್ಷಿಸಿಡಲು, ಪ್ರಕಟಿಸಲು ನಾವು ಅಸ್ಥೆ ತೋರಿಸದಿರುವುದು. ಈಗಿನ ನಮ್ಮ ಪೀಳಿಗೆಗೆ ಜೈನರೂ ಆಯುರ್ವೇದ ಗ್ರಂಥಗಳನ್ನೂ ರಚಿಸಿದ್ದಾರೆ ಎಂಬ ಮಾತು ಎಷ್ಟರ ಮಟ್ಟಿಗೆ ಗೊತ್ತಿದೆ ಎಂದಾದರೆ ಮುಂದಿನ ಪೀಳಿಗೆಗೆ ಇದು ಎಂತು ಹರಿದುಬಂದೀತು ಎಂದು ಹೇಳುವುದು ಕಷ್ಟ.

ಅರ್ಷ್ಯ ಪದ್ಧತಿಯ ಆಯುರ್ವೇದದಲ್ಲಿ ನಮಗಿಂದು ನೂರಾರು ಗ್ರಂಥಗಳು ಪ್ರಕಟಿತ ರೂಪದಲ್ಲಿ ದೊರಕುತ್ತಿದ್ದರೆ ಜೈನಾಚಾರ್ಯರು ರಚಿಸಿದ ಗ್ರಂಥಗಳಲ್ಲಿ ನಾಲ್ಕಾರು ಕೂಡು ಪ್ರಕಟಿತ ರೂಪದಲ್ಲಿಲ್ಲ. ಅನೇಕ ಶಾಸ್ತ್ರಕಾರರು ಜೈನವೈದ್ಯ ಶಾಸ್ತ್ರಕರ್ತರು, ಹೆಸರುಗಳನ್ನು, ಗ್ರಂಥಾಧಾರಗಳನ್ನು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಚರಕ, ಸುಶ್ರುತ, ವಾಗ್ಭಟ, ಮಾಧವ, ಶಾರಗಂಧರ, ಯೋಗರತ್ನಾಕರ , ಭಾವ ಪ್ರಕಾಶ ಮುಂತಾದ ಆಯುರ್ವೇದ ಪ್ರಭೃತಿಗಳ ಸರಿಸಮ ಪ್ರತಿಭೆ ತೋರಿಸಿದೆ ಜೈನಶಾಸ್ತ್ರಕಾರರ ರಚನೆಗಳು ಹೇಳಹೆಸರಿಲ್ಲದೆ ಇತಿಹಾಸ ಗರ್ಭದಲ್ಲಿ ಸೇರಿಹೋಗಿವೆ. ಕಾಲಗರ್ಭದಲ್ಲಿ ವಿಲೀನವಾದ ಈ ಸಂಗತಿಗೆ ಅದಾವ ರಾಜಕೀಯ, ಧಾರ್ಮಿಕ, ಸಾಮಾಜಿಕ ಒತ್ತಡಗಳು ಬಂದವೋ ತಿಳಿಯದು. ಆದರೆ ಇಷ್ಟು ಮಾತ್ರ ಸತ್ಯವೆಂದರೆ ಜೈನ-ಬೌದ್ಧರ(ಚಂದ್ರಗುಪ್ತ ಮೌರ್ಯ ಅಶೋಕ ಚಕ್ರವರ್ತಿಗಳ) ಕಾಲಕ್ಕೆ ಅಹಿಂಸೆಯು ಪರಾಕಾಷ್ಠತೆ ತಲುಪಿ ಯಜ್ಞಯಾಗಾದಿಗಳು, ಪ್ರಾಣಿವಧೆ, ಯುದ್ಧಗಳು ಕಡಿಮೆ ಆದವು. ಇದೇ ಅಹಿಂಸೆಯ ಪರಿಣಾಮ ಆಯುರ್ವೇದ ಶಸ್ತ್ರ ಚಿಕಿತ್ಸೆಯ ಮೇಲೂ ಆಯಿತು. ಯುದ್ಧಗಳಲ್ಲಿ ಗಾಯಗೊಂಡವರಿಗಾಗಿ ನಡೆಯುತ್ತಿದ್ದ ಶಸ್ತ್ರ ಚಿಕಿತ್ಸೆಗಳು, ಎಲುಬು-ಸಂದು ಜೋಡಣೆ, ಮೂಗು, ಕಿವಿಗಳನ್ನು ಹರಿದುಕೊಂಡವರಿಗೆ ದೊರಕುತ್ತಿದ್ದ ಪ್ರಸಾಧನ ಶಸ್ತ್ರಚಿಕಿತ್ಸೆ (Plastic Surgery)ಗಳೆಲ್ಲ ಕಡಿಮೆ ಆಗುತ್ತ ಬಂದವು. ಹೀಗಗಿ ಭಾರತದಲ್ಲುಜ ಶಸ್ತ್ರಚಿಕಿತ್ಸೆಯ ಬೆಳವಣಿಗೆ ಕುಂಠಿತಗೊಂಡಿತು ಎಂದು ಇತಿಹಾಸ ಹೇಳುತ್ತದೆ.

ಉಗ್ರದಿತ್ಯಾಚಾರ್ಯರು ರಚಿಸಿದ ಕಲ್ಯಾಣಕಾರಕ ಗ್ರಂಥದಲ್ಲಿ ಅನೇಕ ಕಡೆಗೆ ನಮ್ಮ ಆಚಾರ್ಯ ಗುರುಗಳಾದ ಶೃತಕೀರ್ತಿ, ಕುಮಾರಸೇನ, ವೀರಸೇನ, ಪೂಜ್ಯಪಾದ, ಪಾತ್ರಸ್ವಾಮಿ, ಸಿದ್ಧದೇವ, ದಶರಥ ಗುರು, ಮೇಘನಾದ, ಸಿಂಹನಾದ, ಸಮಂತಭದ್ರ ಹಾಗೂ ಜಟಾಚಾರ್ಯ ಮುಂತಾದವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಗ್ರಂಥದ ೨೦ನೇ ಅಧ್ಯಾಯ ೮೫ನೇ ಶ್ಲೋಕದಲ್ಲಿ ಹೇಳಿದ ಪ್ರಕಾರ ನಮ್ಮ ಗ್ರಂಥಕಾರರು ಹಾಗೂ ಅವರ ರಚನೆಗಳು ಇಂತಿವೆ.

.        ಶಾಲಾಕ್ಯಂ ಪೂಜ್ಯವಾದ ಪ್ರಕಟಿತಮಧಿಕಂ ಶಲ್ಯತಂತ್ರ
ಪಾತ್ರಸ್ವಾಮಿ ಪ್ರೋಕ್ತಂ ವಿಷಾಗ್ರಗ್ರಶಮನವಿಧಿಃ
ಸಿದ್ಧಸೇನ್ಯೆಃ ಪ್ರಸಿದ್ಧೈ|
ಕಾಯೇ ಯಾ ಸಾ ಚಿಕಿತ್ಸಾದಶರಥಗುರುಭಿಮೇಘನಾದೈಃ
ಶಿಶೂನಾಂ ವೈದ್ಯವೃಕ್ಷ್ಯಂ ದಿವ್ಯಾಮೃತಪಿ ಕಥಿತಂ
ಸಿಂಹನಾದೈರ್ಮುನಿಂದ್ರೈಃ||
(ಕಲ್ಯಾಣಕಾರಕ ಅ.೨೦ ಶ್ಲೋಕ ೮೫)

.        ಅಷ್ಟಾಂಗಮಪ್ಯಖಿಲಮತ್ರ ಸಮಂತಭದ್ರೈ ಪ್ರೋಕ್ತಂ
ಸವಿಸ್ತಾರವಚೋವಿಭವೈರ್ವಿಶೇಷಾತ್
ಸಂಕ್ಷೇಪತೋ ನಿಗದಿತಂ ತದಿಹಾತ್ಮಶಕ್ತ್ಯಾ ಕಲ್ಯಾಣಕಾರಕ
ಶೇಷಪದಾರ್ಥಯುಕ್ತಮ್‌||
(ಕಲ್ಯಾಣಕಾರಕ ಅ.೨೦ ಶ್ಲೋಕ ೮೬)

೧. ಪೂಜ್ಯಪಾದರು – ಶಾಲಾಕ್ಯ (ಕುತ್ತಿಗೆ ಮೇಲ್ಭಾಗದ ರೋಗಗಳು, ENT, Eye, Brain, Disease) ಶಿರಾಭೇದನ (Venisection) ಶಸ್ತ್ರ ಚಿಕಿತ್ಸೆ.

೨. ಪಾತ್ರಸ್ವಾಮಿ ಅಥವಾ ಕೇಸರಿ ಎಂಬುವರು ಶಲ್ಯತಂತ್ರ (Surgery) ಕುರಿತು

೩. ಸಿದ್ಧಸೇನಾಚಾರ್ಯರು -ಗ್ರಹಪೀಡೆಗಳನ್ನೂ ದೂರೀಕರಿಸುವ ಬಗೆಗೆ (ಮನೋರೋಗಗಳು ಹಾಗೂ ಗ್ರಹಪೀಡೆಗಳ ನಿವಾರಣೆ)

೪. ದಶರಥಗುರು ಹಾಗೂ ಮೇಘನಾದ ಎಂಬವರು ಚಿಕ್ಕಮಕ್ಕಳರೋಗ (Pediatrics) ಬಗೆಗೆ

೫. ಸಿಂಹನಾದ ಎಂಬುವರು ಶರೀರವನ್ನು ಬಲಪಡಿಸುವ ರಸಾಯನ ಪ್ರಯೋಗ (Geriatrics) ಕುರಿತು.

೬. ಸಮಂತಭದ್ರಾಚಾರ್ಯರು ಕಾಯ(Medicine) ಬಾಲ, ಗ್ರಹ, ಉರ್ಧ್ವಾಂಗ, ದಂಷ್ಟ್ರಾ, ಜರಾ ಎಂಬ ಅಷ್ಟಾಂಗಗಳ ಕುರಿತು ವಿಸ್ತ್ರತ ಗ್ರಂಥ ರಚಿಸಿದುದು ಕಂಡು ಬರುತ್ತದೆ. ಇವರು ಬರೆದ ಅಷ್ಟಾಂಗ ಗ್ರಂಥದ ಸಂಕ್ಷಿಪ್ತ ವಿವರಣೆಯೇ ಕಲ್ಯಾಣಕಾರಕ ಗ್ರಂಥವೆಂದು ಹೇಳಲಾಗಿದೆ.

ಅನೇಕ ಜೈನ ಬೌದ್ಧ ಗ್ರಂಥಕರ್ತರು ಭಾರತದಲ್ಲಿ ಮೊಟ್ಟಮೊದಲಿಗೆ ಪಾದರಸ, ಮಹಾರಸಗಳು, ಉಪರಸಗಳು, ಸಾಧಾರಣ ರಸಗಳು, ರತ್ನಗಳು, ವಿಷಗಳು, ಉಪವಿಷಗಳು, ಲೋಹಗಳಿಂದ ಔಷಧಿಗಳನ್ನು ಸಿದ್ಧಪಡಿಸಿ, ಪ್ರಯೋಗಿಸಿದರು. ಇವು ಕೆಡದಿರುವ, ಬೇಗನೇ ಗುಣಕೊಡುವ, ರುಚಿ ಇಲ್ಲದ, ಅಲ್ಪಪ್ರಮಾಣದ ಗುಣಗಳಿಂದಾಗಿ ಇಂದಿಗೂ ಪ್ರಖ್ಯಾತವಾಗಿವೆ.

ಪುಷ್ಟಾಯುರ್ವೇದ

ಜೈನಧರ್ಮವು ಅಹಿಂಸಾ ಪ್ರಧಾನವಾದುದ್ದರಿಂದ ಮಹಾವ್ರತಧಾರಿಗಳಾಗಿದ್ದ ನಮ್ಮ ಆಚಾರ್ಯರು ತಾವು ರಚಿಸಿದ ವೈದ್ಯಕೀಯ ಗ್ರಂಥಗಳಲ್ಲಿ ಔಷಧಿ ನಿರ್ಮಾಣಕ್ಕಾಗಿ ಉಪಯೋಗಿಸಲ್ಪಡುವ ಯಾವುದೇ ದ್ರವವು ಪ್ರಾಣಿಮೂಲದಿಂದಾಗಲೀ ಇಲ್ಲವೇ ಅದರಿಂದ ಏಕೇಂದ್ರಿಯ ಜೀವಿಗೂ ಹಿಂಸೆಯಾಗದಂತೆ ಉಪಯೋಗಿಸಿದುದು ವ್ಯಕ್ತವಾಗುತ್ತದೆ. ಅಹಿಂಸಾ ಪ್ರಣೀತವಾದ ‘ಪುಷ್ಪಾಯುರ್ವೇದ’ ಎಂಬ ಗ್ರಂಥವೊಂದನ್ನು ರಚಿಸಿ ಕೇವಲ ಕುಸುಮ ರಹಿತವಾದ ೧೮೦೦೦ ನಮೂನೆಯ ಪುಷ್ಪಗಳಿಂದಲೇ ಚಿಕಿತ್ಸೆಗಾಗಿ ಬೇಕಾಗುವ ಔಷಧಿಗಳನ್ನು, ಆರೋಗ್ಯಕ್ಕಾಗಿ ಬೇಕಾಗುವ ರಸಾಯನಗಳನ್ನು ಸಿದ್ಧಪಡಿಸುವ ಕ್ರಮ ಹೇಳಿದ್ದು ಈಗಿನ ಪ್ರಚಲಿತ ಆಯುರ್ವೇದ ಗ್ರಂಥಕಾರರು ಈ ವಿಷಯವಾಗಿ ಬರೆದಿಲ್ಲ.*

ಈ ಗ್ರಂಥವು ಕ್ರಿ.ಶ. ೩ನೇಯ ಶತಮಾನದ್ದಾಗಿದ್ದು ಕನ್ನಡ ಭಾಷೆಯಲ್ಲಿದೆ. ಇತಿಹಾಸಕಾರರಿಗೆ, ಸಸ್ಯಶಾಸ್ತ್ರಜ್ಞರಿಗೆ, ವೈದ್ಯರಿಗೆ ಇದೊಂದು ಅಪೂರ್ವ ಕೊಡುಗೆಯಾಗಿದ್ದು ಕಷ್ಟದಿಂದ ಓದಬಹುದಾಗಿದ್ದ ಈ ಗ್ರಂಥವನ್ನು ಸಂಶೋಧಿಸಿ ಪ್ರಕಟಿಸುವುದವಶ್ಯ.(ಆಯುರ್ವೇದ ಇತಿಹಾಸ ಗ್ರಂಥದಲ್ಲಿ ಈ ವಿಷಯವಾಗಿ ಪ್ರಸ್ತಾಪಿಸಿಲ್ಲ ಹಾಗೂ ಇದರ ಪ್ರತಿ ಎಲ್ಲಿದೆ ಎಂಬುದರ ಬಗೆಗೂ ನಿಶ್ಚಿತವಾಗಿ ತಿಳಿದುಬಂದಿಲ್ಲ.)

ಸರ್ವಾಂಜನ: ಭೂಗರ್ಭದಲ್ಲಿರು ವಸ್ತುಗಳನ್ನೂ ನೋಡಲುಪಯುಕ್ತವಾದ ‘ಸರ್ವಾಂಜನ’ವನ್ನು ಗೆರುಸೊಪ್ಪೆಯ ಭಾಗದಲ್ಲಿಯೇ ದೊರಕುವ ವಿಶೇಷ ಹೂವುಗಳಿಂದ ತಯಾರಿಸುವ ವಿಧಾನವನ್ನು ಈ ಗ್ರಂಥದಲ್ಲಿ ಹೇಳಲಾಗಿದೆ. ಸಮಂತಭದ್ರಾಚಾರ್ಯರು ತಮ್ಮ ಸಿದ್ಧಾಂತ ರಸಾಯನಕಲ್ಪದಲ್ಲಿ ‘ಶ್ರೀಮದ್ಭಲ್ಲಾತಕಾದ್ರೌ ವಸಿ ಜನಮುನಿಃ ಸೂತವಾದೇರಸಬ್ದಂ’ ಎಂಬ ಮಾತಿನಲ್ಲಿ ಸೂಚಿಸಿದ್ದಾರೆನ್ನಲಾಗಿದೆ. ಭಲ್ಲಾತಕೀಪುರವೆಂದರೆ ಗೇರುಸೊಪ್ಪೆ. (ಭಲ್ಲಾತಕವೆಂದರೆ ಗೇರು) (ಕಲ್ಯಾಣಕಾರಕ, ಪುಟ-೨೩) ಇಂತಹ ಅನೇಕ ಅಮೂಲ್ಯವಾದ ಪುಷ್ಟಗಳು, ಸಸ್ಯಗಳು, ಮೂಲಿಕೆಗಳು ದೊರಕುವ ಗೆರುಸೊಪ್ಪೆ(ಈಗಿನ ಜೋಗ ಜಲಪಾತವಿರುವ ಪ್ರದೇಶ) ಭಾಗವನ್ನು ಉಲ್ಲೇಖಿಸಿ ಇದನ್ನು ‘ರತ್ನ ಗರ್ಭಾವಸುಂಧರಾ’ ಎಂದು ವಿಶೇಷಣದಿಂದ ಕರೆದುದು ವ್ಯಕ್ತವಾಗುತ್ತದೆ.

ವೃಕ್ಷಾಯುರ್ವೇದ: ಗಣ ತನ್ನ ‘ಸದ್ದರ್ಶನ ಸಮುಚ್ಚಯ’ ಗ್ರಂಥದ ಟೀಕೆಯಲ್ಲಿ ಉದ್ಭಿಜಗಳ ವೈಶಿಷ್ಟ್ಯ ಕುರಿತು ಬರೆಯುತ್ತ ವನಸ್ಪತಿಗಳ ಬಾಲ್ಯ, ತಾರುಣ್ಯ, ವೃದ್ಧಾವಸ್ಥೆಗಳನ್ನೂ, ನಿಯಮಿತವಾಗಿ ಬೆಳವಣಿಗೆಯನ್ನೂ, ಬೇರೆ ಬೇರೆ ಚಲನವಲನಾದಿ ಕ್ರಿಯೆಗಳನ್ನೂ, ನಿದ್ರೆ, ಜಾಗೃತಿ, ಸ್ಪರ್ಶ ವಿಕಸನ, ಸ್ಪರ್ಶ ಸಂಕೋಚನ ಮುಂತಾದ ಗುಣಸ್ವಭಾಗಳನ್ನೂ ವಿವರಿಸಿದ್ದಾನೆ. ವೃಕ್ಷಾಯುರ್ವೇದಲ್ಲಿ ಔಷಧಿಗಳು ವೃದ್ಧಿ, ಕ್ಷಯವನ್ನು ಹೊಂದುವಿಕೆ, ರೋಗವಿಮುಕ್ತಿ, ಭೂಮಂಡಲದೊಳಗಿನ ರಸದ ಶೋಷಣ ಕ್ರಿಯೆಗಳನ್ನು ವಿವರಿಸಲಾಗಿದೆ.

ಉದಯನ ಎಂಬ ಜೈನ ಪಂಡಿತನು ಸಹ ಉದ್ಭಿಜಗಳಲ್ಲಿ ಚೈತನ್ಯಶಕ್ತಿ ಮಂದವಾಗಿ ಇದ್ದೇ ಇದೆ ಎಂದು ಪ್ರತಿಪಾದಿಸಿದ್ದಾನೆ.

ವೈದ್ಯಕೀಯ ಪಾರಿಭಾಷಿಕ ಶಬ್ಧಕೋಶ: ಜನಸಾಮಾನ್ಯರಿಗೆ ಅದರಲ್ಲೂ, ಜೈನೇತರರಿಗೆ ಜೈನ ಪಾರಿಭಾಷಿಕ ಶಬ್ಧಗಳು ಗೊತ್ತಾಗದೇ ಹೋಗುತ್ತಿದ್ದುದರಿಂದ ‘ಅಮೃತನಂದಿ’ ಎಂಬುವರು ಒಂದು ವೈದ್ಯಕೀಯ ಪಾರಿಭಾಷಿಕ ಶಬ್ದಕೋಶವನ್ನು ರಚಿಸಿದ್ದು ಅದು ಕೂಡ ಅಪೂರ್ಣವಾಗಿದೆ. ಅದರಲ್ಲಿ ‘ಅ’ ದಿಂದ ‘ಸ’ ಕಾರದವರೆಗೆ ಮಾತ್ರ ಶಬ್ಧಗಳ ಅರ್ಥವನ್ನು ಬರೆಯಲಾಗಿದೆ. ಇನ್ನುಳಿದವುಗಳು ದೊರೆತಿಲ್ಲ. ಸುಮಾರು ೩೦೦೦ ಶಬ್ದಗಳ ಅರ್ಥಗಳನ್ನು ಇದರಲ್ಲಿ ಕಾಣಬಹುದಾಗಿದೆ. ಈ ಗ್ರಂಥದಲ್ಲಿ ಅನೇಕ ಶಬ್ದಗಳು ಜೈನಮಯವಾದುದು ಕಂಡುಬರುತ್ತದೆ. ಉದಾ : ಅಭಪ್ಯ, ಅಹಿಂಸ್ರಾ, ಅನಂತ, ಋಷಭ, ಋಷಭಾ, ಮುನಿಖರ್ಜೂರಿಕಾ, ವರ್ಧಮಾನ, ವೀತರಾಗ ಮುಂತಾದ ಹೆಸರುಗಳನ್ನು ಸಸ್ಯಗಳಿಗೆ ಕೊಟ್ಟಿರುವುದು ವ್ಯಕ್ತವಾಗುತ್ತದೆ.

ಔಷಧಿಕೋಶ : ಕ್ರಿ.ಶ.೧೭೦೦ರ ಸುಮಾರಿನಲ್ಲಿ ರಚಿತವಾಗಿರಬಹುದಾದ ವೈದ್ಯಕೀಯ ನಿಘಂಟು ರೂಪವಾದ ಗ್ರಂಥವೊಂದನ್ನು ‘ಔಷಧಿ ಕೋಶ’ ಎಂಬ ಹೆಸರಿನಲ್ಲಿ ಮದ್ರಾಸ ಸರಕಾರದವರು ತಮ್ಮ ಪ್ರಾಚ್ಯವಿದ್ಯಾಗ್ರಂಥ ಮಾಲೆಯಲ್ಲಿ ಪ್ರಕಟಿಸಿದ್ದಾರೆ. ಕರ್ತ್ರುವಿನ ಹೆಸರು, ಕಾಲ ಹಾಗೂ ಪರಿಚಯಗಳ ಬಗ್ಗೆ ತಿಳಿದುಬಂದಿಲ್ಲ. ಆದರೆ ಪ್ರತಿ ಅಕ್ಷರ ಶಬ್ದಾಂತ್ಯದಲ್ಲಿ ಚತುರ್ವಿಂಶತಿ ತೀರ್ಥಂಕರರು, ಸರಸ್ವತಿ, ಅಜಿತ ಸೇನ, ಪೂಜ್ಯಪಾದ, ಆಕಳಂಕ, ಜಿನದೇವ, ಗುಣಭದ್ರ, ಭಟ್ಟಾಕಳಂಕ ಮೊದಲಾದ ಜೈನ ಗುರುಗಳಿಗೆ ನಮಿಸಿದ್ದನ್ನು ಗಮನಿಸಿದರೆ ಈತ ಜೈನ ಕವಿಯಾಗಿರಲಿಕ್ಕೇ ಬೇಕು ಎಂಬರ್ಥವಾಗುತ್ತದೆ. ಚರಕ, ಸುಶ್ರುತ, ವಾಗ್ಬಟ ಮುಂತಾದ ಗ್ರಂಥಗಳಲ್ಲಿದ್ದ ಕ್ಲಿಷ್ಟಪದಗಳು ಈ ಗ್ರಂಥದಲ್ಲಿವೆ. ದ್ರವ್ಯಗಳಿಗೆ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಶಬ್ದಗಳನ್ನು ಕೊಡಲಾಗಿದೆ. ಕನ್ನಡ ನಾಡಿನ ವೈದ್ಯ ವೃಂದಕ್ಕೆ ಈ ಶಾಸ್ತ್ರದಿಂದ ಸಾಕಷ್ಟು ಉಪಕಾರವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

ಪಶುವೈದ್ಯ: ಮನುಷ್ಯನಿಗೆ ಬೇಕಾಗುವ ಔಷಧ ಉಪಚಾರಗಳ ವಿಚಾರವಾಗಿ ಜೈನ ಕವಿಗಳು ಗ್ರಂಥಗಳನ್ನು ರಚಿಸಿದಂತೆಯೇ ಪಶುವೈದ್ಯವನ್ನೂ ಕುರಿತು ಸಹ ಹೊತ್ತಿಗೆಗಳನ್ನು ಬರೆದಿದ್ದಾರೆ. ಅಂಥವುಗಳಲ್ಲಿ ಕೀರ್ತಿವರ್ಮನ (೧೬೭೬) ಗೋವೈದ್ಯ, ಪದ್ಮಣ ಪಂಡಿತನ (೧೬೨೭) ಹಯಸಾರ ಸಮುಚ್ಚಯಗಳನ್ನು ಇಲ್ಲಿ ಉಲ್ಲೇಖಿಸಬಹುದು. ಗೋವೈದ್ಯದಲ್ಲಿ ಗೋವುಗಳ ವ್ಯಾಧಿಗಳಿಗೆ ಔಷಧಗಳೂ, ಬರೆ ಹಾಕುವ ಕ್ರಮಗಳೂ, ಯಂತ್ರಗಳೂ ಹೇಳಲ್ಪಟ್ಟಿವೆ. ಅದರಂತೆ ಹಯಚಾರ ಸಮುಚ್ಚಯ’ ದಲ್ಲಿ ಕುದುರೆಗಳಿಗೆ ಆಗುವ ಬೇನೆ-ಬೇಸರಿಕೆಗಳಿಗೆ ಔಷಧವನ್ನು ಹೇಳಿರುವುದಲ್ಲದೇ ಕುದುರೆಗಳ ಆಕೃತಿ, ಲಿಂಗಗಳ ನಿರೂಪಣೆ ಸಹ ಹೇಳಲ್ಪಟ್ಟಿದೆ.

ಸಿದ್ಧಾಂತ ರಸಾಯನಕಲ್ಪ: ಕೆಲ ಪ್ರಮುಖ ವೈದ್ಯಗ್ರಂಥಕರ್ತರು ಕಂಚಿಯಲ್ಲಿ ರಾಜ್ಯವಾಳುತ್ತಿದ್ದ ಪಲ್ಲವರ (ಕ್ರಿ.ಶ.೪೦೦) ಕಾಲದಲ್ಲಿ ಸಮಂಭದ್ರರು ಜೈನಧರ್ಮದಲ್ಲಿ ಅಷ್ಟೇ ಏಕೆ ವಿವಿಧ ಶಾಸ್ತ್ರಗಳಲ್ಲಿ ಪಾಂಡಿತ್ಯವುಳ್ಳವರಾಗಿದ್ದರು, ವೈದ್ಯಶಾಸ್ತ್ರವನ್ನು ತಿಳಿಸುವ ‘ಸಿದ್ಧಾಂತ ರಸಾಯನ ಕಲ್ಪ’ ಎಂಬ ಗ್ರಂತ ಬರೆದು ಅದರಲ್ಲಿ ಆಯುರ್ವೇದದ ಎಂಟು ವಿಭಾಗಗಳನ್ನೂ ವಿಸ್ತಾರವಾಗಿ ನಿರೂಪಿಸಿರುವರೆಂದು ಕಲ್ಯಾಣಕಾರಕದಲ್ಲಿ ಹೇಳಲಾಗಿದೆ. ಜೈನ ಧರ್ಮದ ಅನೇಕ ಪಾರಿಭಾಷಿಕ ಶಬ್ದಗಳಿಂದ ಕೂಡಿದ ಸಂಸ್ಕೃತ ಶ್ಲೋಕಗಳಲ್ಲಿ ರಚಿತವಾಗಿರುವ ಈ ಗ್ರಂಥವು ೧೮೦೦೦ ಶ್ಲೋಕಗಳನ್ನು ಹೊಂದಿದ್ದತೆಂದು ಹೇಳಲಾಗಿದ್ದು ಸಧ್ಯ ಈ ಗ್ರಂಥ ಲಭ್ಯವಾಗಿಲ್ಲ.

ಸಮಂತಭದ್ರರು ಸಹ ಜೈನ ಪರಿಭಾಷೆಗಳನ್ನು ಪ್ರಯೋಗಿಸಿ ಸಾಂಕೇತಿಕ ರೀತಿಯಲ್ಲಿ ಔಷಧಿಗಳನ್ನು ಸೂಚಿಸಿರುತ್ತಾರೆ. ಉದಾ- ‘ರತ್ನತ್ರಯೌಷಧ’ ಎಂಬ ಮಾತು ಸಮ್ಯಗ್ದರ್ಶನ, ಜ್ಞಾನ, ಚಾರಿತ್ರಗಳು ಹೇಗೆ ವಿಥ್ಯಾತ್ವಗಳನ್ನು ನಾಶಪಡಿಸುತ್ತವೆಯೋ ಹಾಗೆ ರಸ, ಗಂಧಕ ಹಾಗೂ ಪಾಷಾಣಗಳೆಂಬ ಮೂರು ವಿಧದ ಧಾತುಗಳ ಅಮೃತೀಕರಣದಿಂದ ತಯಾರಾದ ರಸಾಯನವುವಾತ, ಪಿತ್ತ, ಕಫಗಳೆಂಬ ತ್ರಿದೋಷಗಳನ್ನು ದೂರಮಾಡುತ್ತದೆ ಎಂದಿದ್ದಾರೆ.

ಇದಲ್ಲದೆ ಪೂಜ್ಯಪಾದರಂತೆ ಇವರೂ ಸಹ ದ್ರವ್ಯಗಳ ಪ್ರಮಾಣ ಸೂಚಿಸುವಾಗ ತೀರ್ಥಂಕರರ ಚಿಹ್ನೆಗಳನ್ನು ಹೇಳಿದ್ದಾರೆ. ಉದಾ – ರಸಸಿಂಧೂರವನ್ನು ತಯಾರಿಸುವಾಗ ‘ಸೂತಂ ಕೇಸರಗಂಧಕಂ ಮೃಗನಸಾರ ಧ್ರುವಂ’ ಎಂದಿದ್ದಾರೆ. ಇಲ್ಲಿ ಕೇಸರಿ (ಸಿಂಹ) ಹಾಗೂ ಮೃಗ (ಜಿಂಕೆ) ಎಂಬೆರಡು ಪ್ರಾಣಿಗಳ ಹೆಸರಿದೆ. ಕೇಸರಿಯು ೨೪ನೇ ಹಾಗೂ ಜಿಂಕೆಯು ೧೬ನೇ ತೀರ್ಥಂಕರರ ಲಾಂಛನಗಳಾಗಿವೆ. ೨೪ ಭಾಗ ಗಂಧಕಕ್ಕೆ ೧೬ ಭಾಗ ನವಸಾಗರವನ್ನು ಸೇರಿಸಬೇಕೆಂದು ಇದರ ಅರ್ಥ. ಇಂಥ ಪಾರಿಭಾಷಿಕಗಳನ್ನು ಅರ್ಥಮಾಡಿಕೊಳ್ಳಲು ಅದೇ ಬಗೆಯ ಅರ್ಥಕೋಶಗಳು ಬೇಕಾಗುತ್ತವೆ. ಇಂಥವುಗಳ ರಚನೆಯನ್ನು ಕೂಡ ಜೈನಾಚಾರ್ಯರು ಮಾಡಿದ್ದಾರೆ. ಇವುಗಳ ಪೈಕಿ ೨೨,೦೦೦ ಶಬ್ದಗಳ ಅರ್ಥನೀಡುವ ಆಚಾರ್ಯ ಅಮೃತನಂದಿಯ ‘ವೈದ್ಯಕ ನಿಘಂಟು’ ಪ್ರಸಿದ್ಧವಾಗಿದೆ.

ಸಮಂತಭದ್ರರ ಕೃತಿಯಲ್ಲಿ ವನಸ್ಪತಿಗಳ ಹೆಸರುಗಳನ್ನು ಸಹ ಜೈನ ಪರಿಭಾಷಿಕ ರೂಪದಲ್ಲಿ ಹೇಳಿದುದು ಕಂಡುಬರುತ್ತದೆ ಉದಾ: ಅಭವ್ಯ ಎಂದರೆ ಹಂಸಪಾದಿ. ಅಹಿಂಸಾ ಎಂದರೆ ವೃಶ್ಚಿಕಾಲಿ. ವೃಷಭ ಎಂದರೆ ನೆಲ್ಲಿಕಾಯಿ. ವರ್ಧಮಾನ ಎಂದರೆ ಮಧುರ ಮಾತುಲಿಂಗ, ವೀತರಾಗ ಎಂದರೆ ಮಾವು ಇತ್ಯಾದಿ.

ಪೂಜ್ಯಪಾದರು: ಗಂಗರಾಜ ದುರ್ವಿನೀತನ (ಕ್ರಿ.ಶ.೬೦೫-೬೫೦) ಗುರುವಾಗಿದ್ದ ಇವರು ಆ ಕಾಲದ ಉದ್ದಾಮ ಪಂಡಿತರೆಂದು ಪ್ರಸಿದ್ಧಿ ಪಡೆದಿದ್ದರು. ಶ್ರವಣಬೆಳಗೊಳದ ೪೦ನೆಯ ಶಾಸನ ಮತ್ತು ಶಿವಮೊಗ್ಗೆಯ ೪೬ನೇ ಶಾಸನಗಳಿಂದ ಇವರ ಪರಿಚಯವಾಗುತ್ತದೆ. ಇವರಿಗೆ ದೇವನಂದಿ, ಜೀನೇಂದ್ರ ಬುದ್ಧಿ, ಪೂಜ್ಯಪಾದ ಎಂಬ ಹೆಸರುಗಳೂ ಇದ್ದವು. ಈತನ ಪೂಜಾಪಾಠಗಳನ್ನು ದೇವತೆಗಳೂ ಪೂಜಿಸಿದ್ದರಿಂದ ಪೂಜ್ಯಪಾದನೆನೆಸಿದನೆಂದು ಶ್ರವಣಬೆಳಗುಳದ ೪೦ನೇ ಶಿಲಾಲೇಖದಿಂದ ತಿಳಿದುಬರುತ್ತದೆ. ಇವರು ಇನ್ನಿತರ ವಿಷಯಗಳ ಮೇಲೂ ಸಾಕಷ್ಟು ಗ್ರಂಥಗಳನ್ನು ರಚಿಸಿದ್ದು ಕಲ್ಯಾಣಕಾರಕ, ಶಲ್ಯತಂತ್ರ ಹಾಗೂ ವೈದ್ಯಾಮೃತ ಎಂಬ ಮೂರು ವೈದ್ಯಗ್ರಂಥಗಳನ್ನು ಸಂಸ್ಕೃತದಲ್ಲಿ ಬರೆದಿದ್ದುದಾಗಿ ಚಾವುಂಡರಾಯ ಕವಿಯ ಪುರಾಣ ಹಾಗೂ ಗೊಮ್ಮಟದೇವ ಮುನಿಯ ‘ಮೇರುತಂತ್ರ’ ಗ್ರಂಥಗಳಿಂದ ತಿಳಿದುಬರುತ್ತದೆ.

ರಸಸಿದ್ಧಿಯಿಂದ ಇವರು ಗಗನಯಾನ ಸಾಮರ್ಥ್ಯ ಹೊಂದಿದ್ದರು ಎಂಬುದಾಗಿ ತಿಳಿದಿದೆ. ಇವರು ಕರ್ನಾಟಕದಲ್ಲಿರುವ ಕೊಳ್ಳೆಗಾಲಪುರದಲ್ಲಿ ಮಾಧವ ಭಟ್ಟ ಮತ್ತು ಶ್ರೀದೇವಿಯವರ ಪುತ್ರನಾಗಿ ೫ನೇ ಶತಮಾನದಲ್ಲಿ ಜನಿಸಿದರು ಎಂಬುದಾಗಿ ತಿಳಿದುಬರುತ್ತದೆ.

ಬಸವರಾಜೀಯ ರಸರತ್ನ ಸಮುಚ್ಚಯ ಇತ್ಯಾದಿ ಅನಂತರ ಕಾಲೀನ ರಸಶಾಸ್ತ್ರ ಗ್ರಂಥಗಳಲ್ಲಿ ಕೆಲ ಔಷಧ ಯೋಗಗಳು ಪೂಜ್ಯಪಾದ ನಿರ್ಮಿತವೆಂದು ವಿವರಿಸಲ್ಪಟ್ಟಿವೆ. ಇದರಿಂದ ಇವರು ವ್ಯಾಧಿ ನಿವಾರಣೆಗಾಗಿ ರಸಶಾಸ್ತ್ರವನ್ನು ಉಪಯೋಗಿಸುತ್ತಿದ್ದರು ಎಂಬುದು ದೃಢಪಡುತ್ತದೆ.

ಇವರು ರಚಿಸಿದ ಕಲ್ಯಾಣಕಾರಕವು ನಮಗಿಂದು ಸಮಗ್ರವಾಗಿ ದೊರಕಿಲ್ಲ. ಈ ಗ್ರಂಥ ಶಾಲಾಕ್ಯ(ENT) ಪ್ರಧಾನವಾದದ್ದು ಎಂಬ ಉಗ್ರದಿತ್ಯಾಚಾರ್ಯ ಹೇಳಿದ್ದಾನೆ.

ಜಗದ್ದಳ ಸೋಮನಾಥ ಎಂಬ ಕವಿಯು ಈ ಕಲ್ಯಾಣಕಾರಕವನ್ನೇ ಕನ್ನಡದಲ್ಲಿ ಭಾಷಾಂತರಿಸಿದ್ದನೆಂದು ಹೇಳಿ ‘ ಕರ್ಣಾಟಕ ಕಲ್ಯಾಣಕಾರಕ’ ಎಂಬ ಕಿರುಗ್ರಂಥವನ್ನು ರಚಿಸಿ ಉತ್ತಮವಾದುದೆಂದೂ ಇದರಲ್ಲಿರುವ ಚಿಕಿತ್ಸೆಗಳು ಮದ್ಯ, ಮಾಂಸ, ಮಧು ವರ್ಜಿತಗಳೆಂದೂ ತನ್ನ ಗ್ರಂಥದಲ್ಲಿ ಹೊಗಳಿದ್ದಾನೆ.

ಮೈಸೂರಿನ ಪ್ರಾಚ್ಯ ವಿದ್ಯಾಸಂಶೋಧನಾಲಯದಲ್ಲಿ ಸುಮಾರು ೨೮೦ ಪತ್ರಗಳುಳ್ಳ ಕನ್ನಡ ಲಿಪಿಯ ಪೂಜ್ಯಪಾದ ಕೃತ ಕಲ್ಯಾಣಕಾರಕ ಎಂಬ ತಾಳಪತ್ರ ಪ್ರತಿಯೊಂದಿದೆ. ಇದರ ಕೆಲವು ಪತ್ರಗಳು ಮೂಲಗ್ರಂಥವಾಗಿದ್ದು ಮತ್ತೆ ಕೆಲವು ಬೇರೆಯವರಿಂದ ಬರೆಯಲ್ಪಟ್ಟಿರಬೇಕೆಂಬ ಸಂದೇಹ ಬರುವಂತಿವೆ. ಇದರಲ್ಲಿ ಸಿದ್ಧೌಷಧಿಗಳ ಪ್ರಯೋಗಗಳೆ ವಿಶೇಷವಾಗಿ ಕಂಡುಬರುತ್ತವೆ.

* ಇತ್ತೀಚೆಗೆ ಹೋಮಿಯೊಪಥಿ ತಜ್ಞ ಡಾ. ಬ್ಯಾಚ್ ಎಂಬವರು ಕೆಲವಿಧ ಹೂವುಗಳಿಂದ ಔಷಧಿ ತಯಾರಿಸಿ ಅದ್ಬುತ ಗುಣ ಕಂಡಿದ್ದಾರೆ. ಅವಿಂದು ‘ಬ್ಯಾಚ್ ಫ್ಲಾವರ್ ರೆಮೆಡೀಸ್’ ಎಂದು ಪ್ರಸಿದ್ಧವಾಗಿವೆ.