ಚಿಕಿತ್ಸಾಶಾಸ್ತ್ರ: ಈ ವೈದ್ಯಗ್ರಂಥವನ್ನು ಪೂಜ್ಯಪಾದರು ರಚಿಸಿದ್ದಾರೆ ಎಂಬುದಕ್ಕೆ ಅನೇಕ ಆಧಾರಗಳಿವೆ ಶುಭ ಚಂದ್ರಾಚಾರ್ಯರು ತಮ್ಮ ‘ಜ್ಞಾನಾರ್ಣವ’ ಕೃತಿಯಲ್ಲಿ ಹೇಳಿರುವ ಒಂದು ಶ್ಲೋಕದಲ್ಲಿ ಪೂಜ್ಯಪಾದರ ವಚನಗಳು ‘ವಚನಮಲ’ ಮತ್ತು ‘ಚಿತ್ತಮಲ’ಗಳನ್ನು ದೂರಮಾಡುವಂತೆಯೇ ಕಾಮ ಎಂದರೆ ಶರೀರದ ಮಲವನ್ನೂ ದೂರ ಮಾಡುವುದೆಂದು ಹೇಳಿದ್ದಾರೆ. ಎಂದರೆ ಶರೀರಕ್ಕೆ ಬರುವ ವ್ಯಾಧಿಗಳು. ಈ ಬಗ್ಗೆ ಅವರು ಒಂದು ಗ್ರಂಥವನ್ನು ಬರೆದಿದ್ದಾರೆಂದಗುತ್ತದೆ. ಇದು ‘ಚಿಕಿತ್ಸಾಶಾಸ್ತ್ರ’ ವಾಗಿದೆ. ಎರಡನೆಯದಾಗಿ ಉಗ್ರನಂದಿ ಆಚಾರ್ಯರು ರಚಿಸಿರುವ ಕಲ್ಯಾಣಕಾರಕ ಗ್ರಂಥದಲ್ಲಿ ‘ಪೂಜ್ಯಪಾದೇ ಭಾಷಿತಃ, ಶಾಲಾಕ್ಯಂ ಪೂಜ್ಯಪಾದ ಪ್ರಕಟಿತಮಧಿಕಮ್’ ಎಂದು ಮೊದಲಾಗಿ ಹೇಳಿ ಪೂಜ್ಯಪಾದರು ಹೇಳಿರುವ ವೈದ್ಯಕ ಗ್ರಂಥದ ಬಗ್ಗೆ ಹೇಳಿದ್ದಾರೆ. ಮೂರನೆಯದಾಗಿ ಶಿವಮೊಗ್ಗ ಜಿಲ್ಲೆಯ ಶ್ಲೋಕದಲ್ಲಿ ಪೂಜ್ಯಾಪಾದರ ವಿಚಾರ ಹೇಳುತ್ತ ‘ಮನುಜತಹಿತಂ ವೈದ್ಯಶಾಸ್ತ್ರಂ ಚ ಕೃತ್ವಾ’ ಎಂದು ಹೇಳಿ ಅವರು ವೈದ್ಯಶಾಸ್ತ್ರವನ್ನು ರಚಿಸಿದ್ದಾರೆಂದು ಸೂಚನೆ ಕೊಟ್ಟಿದ್ದಾರೆ. ನಾಲ್ಕನೆಯದಾಗಿ ಕನ್ನಡದಲ್ಲಿ ‘ಖಗೇಂದ್ರಮಣಿದರ್ಪನ’ ಎಂಬ ವೈದ್ಯ ಗ್ರಂಥವನ್ನು ಬರೆದಿರುವ ಮಂಗರಾಜ ಕವಿಯು ತನ್ನ ಕೃತಿಯಲ್ಲಿ ಪೂಜ್ಯಪಾದರ ವೈದ್ಯಗ್ರಂಥದ ವಿಚಾರವನ್ನು ತಿಳಿಸಿದ್ದಾನೆ. ಇದರಿಂದ ಪೂಜ್ಯಪಾದರು ಖಂಡಿತವಾಗಿಯೂ ಒಂದು ವೈದ್ಯಶಾಸ್ತ್ರದ ಗ್ರಂಥವನ್ನು ರಚಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ.

ಸರ್ವಾರ್ಥಸಿದ್ಧಿ ಶಾಸ್ತ್ರವನ್ನು ರಚಿಸಿದ ಪೂಜ್ಯಪಾದರ ಹೆಸರು ಸಂಸ್ಕೃತ ಜೈನಸಿದ್ಧಾಂತ ಕ್ಷೇತ್ರದಲ್ಲಿ ತುಂಬ ವಿಶಿಷ್ಟವಾದುದು. ಅಲ್ಲದೆ ಭಾರತೀಯ ಪರಂಪರೆಯಲ್ಲಿ ಸುಪ್ರಸಿದ್ಧವಾಗಿರುವ ಜೈನ್ಯ ತತ್ವಕೋಶದಲ್ಲಿ ಆಚಾರ್ಯರುಗಳಲ್ಲಿ ಇವರ ಹೆಸರು ಪ್ರಮುಖವಾಗಿ ಕಂಡುಬರುತ್ತದೆ. ಜೈನ ಸಿದ್ಧಾಂತ ಕ್ಷೇತ್ರದಲ್ಲಿ ಸಮಂತಭದ್ರರು ಮತ್ತು ಸಿದ್ಧಸೇನರನ್ನು ಬಿಟ್ಟರೆ ಮುಂದಿನ ದೊಡ್ಡ ಸ್ಥಾನವು ಇವರಿಗೆನೇ ಸಲ್ಲಬೇಕು. ಪೂಜ್ಯಪಾದರ ನಂತರ ಆದ ಸಂಸ್ಕೃತ ಹಾಗು ಕನ್ನಡದ ಕವಿಗಳು, ಶಾಸ್ತ್ರಜ್ಞರು ತಾವು ರಚಿಸಿರುವ ಗ್ರಂಥಗಳಲ್ಲಿ ಇವರ ಹೆಸರನ್ನು ಮೊಟ್ಟಮೊದಲಿಗೆ ಸೇರಿಸಿ, ವಂದಿಸಿ ಪ್ರಾರಂಭಿಸಿದ್ದಾರೆ. ಸಂಸ್ಕೃತದ ಮಹಾಪುರಾಣದಲ್ಲಿ ಭಗವಜ್ಜಿನ ಸೇನಾಚಾರ್ಯರು, ಧನಂಜಯ, ವಾದಿರಾಜ, ಶುಭಚಂದ್ರ, ಭಟ್ಟಾರಕ, ಪದ್ಮಪ್ರಭ ಮೊದಲಾದ ಅತಿರಥ-ಮಹಾರಥ ಜೈನಾಚಾರ್ಯರು ಹಾಗೂ ಆದಿಪಂಪ ಹಾಗು ಚಾವುಂಡರಾಯ, ಆಚಣ್ಣ ಕವಿ, ದೇವಪ್ಪ ಕವಿ ಮುಂತಾದ ಕನ್ನಡ ಕವಿಗಳು ಕೂಡ ಪೂಜ್ಯಪಾದರನ್ನು ತಮ್ಮ ಗ್ರಂಥಗಳಲ್ಲಿ ಸ್ತುತಿಸಿದ್ದಾರೆ. (‘ಸರ್ವಾರ್ಥಸಿದ್ಧಿ’ ಸಂ.ಡಿ.ಪದ್ಮನಾಭಶರ್ಮ).

ಪೂಜ್ಯಪಾದರಿಗೆ ದೇವನಂದಿ, ಜಿನೇಂದ್ರಬುದ್ಧಿ, ಪೂಜ್ಯಪಾದರೆಂದು ಕರೆದುದರ ಪುಷ್ಟೀಕರಣಕ್ಕಾಗಿ ಶ್ರವಣಬೆಳಗೊಳ ಶಿಲಾಶಾಸನ ನಂ. ೧೦೫, ವಿ.ಸಂ. ೧೩೧೦, ನಂ. ೧೦೮.ವಿ.ಸಂ.೧೩೫೫ ನೋಡಿ ತಿಳಿಯಬಹುದು. ಇದರಲ್ಲಿ ಪೂಜ್ಯಪಾದರು ಕಾಲಿಗೆ ಹಚ್ಚಿಕೊಂಡ ಲೇಪನವನ್ನು ನೀರಿನಲ್ಲಿ ತೊಳೆದು ಅದನ್ನು ಕಬ್ಬಿಣಕ್ಕೆ ಹಾಕಿದರೆ ಅದು ಚಿನ್ನವಾಗುತ್ತಿದ್ದಿತು ಎಂದು ಹೇಳಲಾಗಿದೆ.

[1]

ಇವರು ಒಳ್ಳೆ ಯೋಗಿಗಳಾಗಿದ್ದರು ದೇವವಿಮಾನದಲ್ಲಿ ಕುಳಿತು ಅನೇಕ ತೀರ್ಥಯಾತ್ರೆಗಳನ್ನು ಮಾಡಿದರು ಎಂಬುದಾಗಿ ತಿಳಿದುಬರುತ್ತದೆ.

ಪೂಜ್ಯಪಾದರು ತಮ್ಮ ಯಾವ ಗ್ರಂಥಗಳಲ್ಲೂ ತಮ್ಮ ಬಗ್ಗೆ ಪ್ರಸ್ತಾಪಿಸಿಲ್ಲ. ಪೂಜ್ಯಪಾದ ಚರಿತೆ (ಚಂದ್ರಯ್ಯ ಕವಿ) ಹಾಗೂ ರಾಜಾವಳೀ ಕಥೆ(ದೇವಚಂದ್ರ ಕವಿ ವಿರಚಿತ) ಗಳಿಂದ ಮಾತ್ರ ತಿಳಿದುಬರುತ್ತದೆ.

ಪೂಜ್ಯಪಾದರು ಜೈನೇಂದ್ರವ್ಯಾಕರಣ, ಅರ್ಹ ಪ್ರತಿಷ್ಠಾಲಕ್ಷಣ, ಸರ್ವಾರ್ಥಸಿದ್ಧಿ, ವೈದ್ಯಕ(ಕಲ್ಯಾಣಕಾರಕ?),ಜ್ಯೋತಿಷ್ಯ ಮುಂತಾದ ಅನೇಕ ಶಾಸ್ತ್ರಗಳನ್ನು ರಚಿಸಿದ್ದಾರೆ.

ಪೂಜ್ಯಪಾದರು ವಿಶೇಷವಾಗಿ ತಪಸ್ಸನ್ನಾಚರಿಸಿದ ಮಲೆಯೂರು ಪಕ್ಕದ ಬೆಟ್ಟದ ಪ್ರದೇಶದಲ್ಲಿ ಕ್ಷಾಮ ಬಿದ್ದಾಗ ಜನರ ಸಂಕಷ್ಟ ಪರಿಹರಿಸಲು ತಮ್ಮ ರಸಶಕ್ತಿಯ ಪ್ರಭಾವದಿಂದ ಕಬ್ಬಿಣದಿಂದ ಚಿನ್ನವನ್ನು ಸಿದ್ಧಪಡಿಸಿಕೊಡುತ್ತಿದ್ದರು ಎಂಬುದಾಗಿ ದಂತಕಥೆ ಇದ್ದು ಇದೀಗ ಆ ಬೆಟ್ಟಕ್ಕೆ ‘ಕನಕಗಿರಿ’ ಎಂದು ಹೆಸರು ಬರುವುದಕ್ಕೆ ಕಾರಣ. (ಶ್ರೀ ಕ್ಷೇತ್ರ ಕನಕಗಿರಿ’- ಲೇ.ಪ.ನಾಗರಾಜಯ್ಯ)

ಪೂಜ್ಯಪಾದರು ತಮ್ಮ ಜೀವಿತಾವಧಿಯ ಕೊನೆಯ ಭಾಗವನ್ನು ತಮ್ಮ ಜನ್ಮಸ್ಥಳವಾದ ಕೊಳ್ಳೆಗಾಲಕ್ಕೆ ಹಾಗೂ ಸಮಾಧಿ ಮರಣ ಹೊಂದಿದರು ಎಂದು ತಿಳಿದುಬರುತ್ತದೆ.

ಪೂಜ್ಯಪಾದರ ನಂತರದ ಅನೇಕ ಗ್ರಂಥಕಾರರು ಅವನ ಉಪಕಾರವನ್ನು ತಮ್ಮ ಗ್ರಂಥಗಳಲ್ಲಿ ಸ್ಮರಿಸಿದ್ದಾರೆ. ಬಸವರಾಜೀಯ ಗ್ರಂಥದಲ್ಲಿ ಬರುವ ‘ಸಿಂಧೂರ ದರ್ಪಣಂ’ ಔಷಧವು ಪೂಜ್ಯಪಾದರ ಯೋಗವೇ ಆಗಿದೆ. ಇದೇ ರೀತಿ ಅಗ್ನಿತುಂಡಿ, ಗಂಧಕ ರಸಾಯನ, ತ್ರಿಕೂಟಕಾದಿ ನಸ್ಯ ಯೋಗಗಳನ್ನು ಬಸವ ರಾಜೀಯ ಗ್ರಂಥದಲ್ಲಿ ಸ್ಮರಿಸಲಾಗಿದೆ.

ಮಾಧವನಿಗೆ ಗ್ರಂಥದಲ್ಲಿ ಜ್ವರಗಜಾಂಕುಶ, ನಿತ್ಯಾನಾಥೀಯದಲ್ಲಿ ಚಂಡಭಾನುರಸ, ಶೋಫಮುದ್ಗರರಸಗಳನ್ನು ರಸರತ್ನ ಜಮುಚ್ಛಯ ಗ್ರಂಥದಲ್ಲಿ ಆಧಾರ ತೆಗೆದುಕೊಳ್ಳಲಾಗಿದೆ.

ಈ ಎಲ್ಲ ವಿಷಯಗಳನ್ನು ಗಮನಿಸಿದಾಗ ಪೂಜ್ಯಪಾಲರು ಎಂದು ತಿಳಿದುಬರುತ್ತದೆ. ಪೂರ್ಣವಾದ ಅನೇಕ ಸಿದ್ಧೌಷಧಿಗಳನ್ನು ಪ್ರಯೋಗಿಸುತ್ತಿದ್ದರು ಎಂದು ತಿಳಿದುಬರುತ್ತದೆ. ಇವರು ಕಲ್ಯಾಣಕಾರಕ, ಶಾಲಾಕ್ಯ ತಂತ್ರಗಳಲ್ಲದೆ ವೈದ್ಯಾಮೃತವೆಂಬ ವೈದ್ಯಕ ಗ್ರಂಥವನ್ನು ಕನ್ನಡದಲ್ಲಿ ರಚಿಸಿದ್ದಾರೆಂಬುದಾಗಿ ತಿಳಿದುಬರುತ್ತದೆ. ಆದರೆ ದುರ್ದೈವದ ಸಂಗತಿಯೆಂದರೆ ಅವಾನವೂ ಇಂದಿನವರೆಗೆ ಲಭ್ಯವಾಗಿಲ್ಲ. (ಆಧಾರಕಲ್ಯಾಣಕಾರಕಸಂಪಾದಕೀಯ, ಪುಟ.೩೨೩೫)

ಪೂಜ್ಯಪಾದರು ಸರ್ವಾರ್ಥಸಿದ್ಧಿ, ಸಮಾಧಿತಂತ್ರ, ಇಷ್ಟೋಪದೇಶ, ದಶಭಕ್ತಿ, ಜೈನೇಂದ್ರ ವ್ಯಾಕರಣ, ಶಾಂತ್ಯಷ್ಟಕ, ಸಾರಸಂಗ್ರಹ, ಚಿಕಿತ್ಸಾಶಾಸ್ತ್ರ, ಜೈನಾಭಿಷೇಕ ಮೊದಲಾದ ಗ್ರಂಥಗಳನ್ನು ರಚಿಸಿದ್ದಾಗಿ ತಿಳಿದಿದೆ. ಇವರ ಸಂಸ್ಕೃತಭಾಷೆ ಹಾಗೂ ವ್ಯಾಕರಣ ಜ್ಞಾನ ತುಂಬ ಅದ್ಭುತವಾಗಿದ್ದವು. (‘ಸರ್ವಾರ್ಥಸಿದ್ಧಿ‘- ಪುಟ.೬೮)

ಪೂಜ್ಯಪಾದಾಚಾರ್ಯರು ‘ಜೈನೇಂದ್ರವ್ಯಾಕರಣ’ದ ಮೂಲಕ ವಾಗ್ದೋಷಗಳನ್ನು ‘ತತ್ವಾರ್ಥಸೂತ್ರ’ದ ಮೇಲೆ ರಚಿಸಿದ ವೃತ್ತಿಯ ಮೂಲಕವಾಗಿ ಮಾನಸಿಕ ದೋಷವಾದ ಮಿಥ್ಯಾತ್ವವನ್ನು ಹಾಗೂ ಕಲ್ಯಾಣಕಾರಕವೆಂಬ ವೈದ್ಯಗ್ರಂಥದ ಮೂಲಕ ದೇಹದ ದೋಷಗಳನ್ನು ಕಳೆದರೆಂದು ಪಾರ್ಶ್ವಪಂಡಿತನು ಹೀಗೆ ಸ್ತುತಿಸಿದ್ದಾನೆ-

ಸಕಳೋರ್ವೀನುತ ಪೂಜ್ಯಪಾದ ಮುನಿಪಂ ತಾಂ ಪೇಳಿದ ಕಲ್ಯಾಣಕಾರ
ಕಾದಿ ದೇಹದ ದೋಷಮಂ ವಿತತ ವಾಚಾದೋಷಮಂ ಶಬ್ದಸಾಧಕ
ಜೈನೇಂದ್ರದಿನೀ ಜಗಜ್ಜನದ ಮಿಥ್ಯಾದೋಷಮಂ ತತ್ವರೋಧಕ
ತತ್ವಾರ್ಥದ ವೃತ್ತಿಯಿಂದ ಕಳೆದಂ ಕಾರುಣ್ಯದುಗ್ಧಾರ್ಣವಂ|
(ಕಲ್ಯಾಣಕಾರಕ – ಪುಟ. ೩೪)

ವೈದ್ಯಶಾಸ್ತ್ರದಲ್ಲಿ ಪೂಜ್ಯಪಾದ ಮುನಿಕೃತ ಸಂಸ್ಕೃತ ಕಲ್ಯಾಣಕಾರಕದ ಅನುವಾದ ಮಾಡಿ ‘ಕರ್ನಾಟಕ ಕಲ್ಯಾಣಕಾರಕ’ವೇ ಮೊದಲಿನದು. ಇದರ ಎಂಟು ಅಧ್ಯಾಯಗಳು ಮಾತ್ರ ದೊರಕಿವೆ. ವಾಗ್ಬಟ, ಸುಶ್ರುತ, ಚರಕ ಮೊದಲಾದ ಆಚಾರ್ಯರ ವೈದ್ಯ ಗ್ರಂತಗಳಿಗಿಂತಲೂ ಪೂಜ್ಯಪಾದ ಕಲ್ಯಾಣಕಾರದವು ಶ್ರೇಷ್ಠವಾದುದೆಂದೂ ಇದರಲ್ಲಿ ಹೇಳಲಾದ ಚಿಕಿತ್ಸೆಯು ಮದ್ಯ, ಮಾಂಸ, ಮಧು ವರ್ಜಿತವೆಂದೂ ಈ ಕೆಳಗಿನ ಪದ್ಯದಿಂದ ತಿಳಿಯುತ್ತದೆ.

ಸುಕರಂ ತಾನೆ ಪೂಜ್ಯಪಾದ ಮುನಿಗಳ ಮುಂಪೇಳ್ದ
ಕಲ್ಯಾಣಕಾರಕಮಂ ವಾಹಟಸಿದ್ಧಸಾರ ಚರಕಾದ್ಯುತ್ಕೃಷ್ಟಮಂ
ಸದ್ಗುಣಾಧಿಕಂ ವರ್ಜಿತ ಮದ್ಯಮಾಂಸ ಮಧುವಂ ಕರ್ಣಾಟದಿಂ
ಲೋಕ ರಕ್ಷಕಮಾ ಚಿತ್ರಮದಾಗೆ ಚಿತ್ರಕವಿ ಸೋಮಂ ಪೇಳ್ ದನಿಂ ತಳಿತಯಂ
(‘ಕಲ್ಯಾಣಕಾರಕ’ ಸಂ. ವರ್ಧಮಾನ ಶಾಸ್ತ್ರಿ, ಪುಟ.೪೦)

ಜೈನಾಚಾರ್ಯರುಗಳಲ್ಲಿ ಪೂಜ್ಯಪಾದರಿಗೆ ವೈದ್ಯಕೀಯ ಗ್ರಂಥಗಳ ಪ್ರಪಿತಾಮಹರು ಎನ್ನುವಷ್ಟರ ಮಟ್ಟಿಗೆ ವರ್ಣನೆ ಇದೆ. ಅನೇಕ ಆಚಾರ್ಯರು, ಶಿಷ್ಯರು ಇವರ ಪಾದ ಪದ್ಮಂಗಳಿಗೆ ವಂದನೆ ಸಲ್ಲಿಸಿ ತಮ್ಮ ಗ್ರಂತಗಳನ್ನು ಪ್ರಾರಂಭಿಸಿದ್ದಾರೆ.

ಪೂಜ್ಯಪಾದರ ಅಪ್ರಕಟಿತ ತಾಳೆಪತ್ರಗಳನ್ನೂ ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದರೆ ಅದು ವೈದ್ಯಲೋಕಕ್ಕೊಂದು ಅಪೂರ್ವ ಕೊಡುವೆಯಾಗುವುದೆಂಬುದರಲ್ಲಿ ಸಂಶಯವಿಲ್ಲ.

ಸಿದ್ಧನಾಗಾರ್ಜುನ: ಪೂಜ್ಯಪಾದರ ಸಹೋದರಿಯ ಮಗನಾದ ಈತನು ನಾಗಾರ್ಜುನಕಲ್ಪ, ನಾಗಾರ್ಜುನ ಕ್ಷಪುಟ ಮೊದಲಾದ ಗ್ರಂಥಗಳನ್ನು ನಿರ್ಮಿಸಿದ್ದಾನೆ. ಈತನು ವಜ್ರಖೇಚರ ಗುಟಿಕಾ’ ಎಂಬ ಹೆಸರಿನ ಚಿನ್ನವನ್ನು ಸಿದ್ಧಪಡಿಸುವ ರತ್ನಗುಟಿಕಾವನ್ನು ತಯಾರಿಸಿದ್ದನು. ಈತನು ಅನೇಕ ಮಂತ್ರತಂತ್ರಗಳನ್ನು ಮತ್ತು ರಸಾದಿ ಸಿದ್ಧಿಗಳನ್ನು ಮಾಡುತ್ತ ಬಹಳ ಪ್ರಸಿದ್ಧನಾಗಿದ್ದನು. ಪೂಜ್ಯಪಾದರೇ ಈತನಿಗೆ ಈ ಮೊದಲಿದ್ದ ಬಡತನವನ್ನು ನಿವಾರಿಸಿಕೊಳ್ಳಲು ಪದ್ಮಾವತಿ ಮಂತ್ರ ಹಾಗು ಇತರ ವಿಧಾನಗಳನ್ನು ಹೇಳಿ ಸಿದ್ಧಿಮಾಡಿಕೊಳ್ಳಲು ಹೇಳಿದರು. ನಾಗಾರ್ಜುನನು ಹಾಗೆ ಇತರ ವಿಧಾನಗಳನ್ನು ಹೇಳಿ ಸಿದ್ಧಿಮಾಡಿಕೊಳ್ಳಲು ಹೇಳಿದರು. ನಾಗಾರ್ಜುನನು ಹಾಗೆ ಮಾಡಿ ಪದ್ಮಾವತಿ ದೇವಿಯ ಅನುಗ್ರಹದಿಂದ ಸಿದ್ಧಿರಸ ವನಸ್ಪತಿ ಪಡೆದುಕೊಂಡು ಚಿನ್ನವನ್ನು ಮಾಡತೊಡಗಿದನು. ಈತನ ಆಶೆ ಹೆಚ್ಚಾಗುತ್ತ ಹೋಗಿ ಬೆಟ್ಟಗಳನ್ನೇ ಚಿನ್ನಮಾಡತೊಡಗಿದ. ಯಕ್ಷಿಣಿ ಪದ್ಮಾವತಿ ದೇವಿಯಿಂದ ಜಿನ ಚೈತ್ಯಾಲಯಗಳನ್ನು ಕಟ್ಟಿಸುವ ಆದೇಶವಾಯಿತು. ಪಾರ್ಶ್ವನಾಥ ಸ್ವಾಮಿ ಮಂದಿರವನ್ನು ಕಟ್ಟಿಸಿದನು. ಸಂಗೀತ, ನೃತ್ಯ ಪರಿಣಿತರಾದ ಈರ್ವರು ಲಂಪಟ ಸ್ತ್ರೀಯರ ವ್ಯಾವೋಹದಲ್ಲಿ ಚಿನ್ನ ತಯಾರು ಮಾಡುವ ರಸ ಗುಟಿಕೆಯನ್ನು ಕಳೆದುಕೊಂಡು ದೇಶಾಂತರ ಹೋಗಿ ಅನೇಕ ವರ್ಷಗಳ ನಂತರ ಮತ್ತೆ ಬಂದು ಅವನ್ನು ಪಡೆದು ಆಯುರ್ವೇದ ರಸೌಷಧಿ ವಿಭಾಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾನೆ(ಸರ್ವಾರ್ಥಸಿದ್ಧಿ, ಪು.೬೫).

ಉಗ್ರದಿತ್ಯಾಚಾರ್ಯ(ಕ್ರಿ..೮೨೦): ಜೈನ ಸನ್ಯಾಸಿಯಾಗಿದ್ದ ಈತನು ನೃಪತುಂಗ ದೊರೆಯ ಕಾಲಕ್ಕೆ ಅಸ್ಥಾನ ವೈದ್ಯನಾಗಿದ್ದನು. ರಾಜಾಸ್ಥಾನದಲ್ಲಿ ನಡೆದ ಒಂದು ಚರ್ಚೆಯ ಸಂದರ್ಭದಲ್ಲಿ ಮಾಂಸಾಹಾರದ ವಿರುದ್ಧ ಪಾಂಡಿತ್ಯಪೂರ್ಣ ವಾದವನ್ನು ಮಾಡಿ ನೆರೆದಿದ್ದ ವಿದ್ವಾಂಸರನ್ನು ಸೋಲಿಸಿ ರಾಜರ್ಯಾದೆಯನ್ನು ಪಡೆದಿದ್ದನು. ‘ಕಲ್ಯಾಣಕಾರಕ’ ಎಂಬ ಹೆಸರಿನಲ್ಲಿ ಆಯುರ್ವೇದ ಶಾಸ್ತ್ರದ ಸಂಸ್ಕೃತ ಗ್ರಂತವೊಂದನ್ನು ರಚಿಸಿ ಅವರಲ್ಲಿ ತಾನು ಶ್ರೀನಂದಿ ಎಂಬ ಆಚಾರ್ಯರ ಶಿಷ್ಯನೆಂದು ತಿಳಿಸಿದ್ದಾನೆ. ಜೈನ ಧರ್ಮದ ಸಿದ್ಧಾಂತಗಳನ್ನೇ ಅನುಸರಿಸಿರುವ ಈ ಗ್ರಂತದಲ್ಲಿ ಮ‌ದ್ಯ, ಮಾಂಸ ಮತ್ತು ಮಧುಗಳನ್ನು ಆಹಾರ, ಔಷಧ ರೂಪವಾಗಿ ನಿಷೇಧಿಸಲಾಗಿದೆ. ಜೈನ ಸಾಹಿತ್ಯದಲ್ಲಿ ಈ ಗ್ರಂಥಕ್ಕೆ ಇಂದಿಗೂ ಉನ್ನತಸ್ಥಾನ ಮೀಸಲಾಗಿದೆ. ಇದನ್ನು ವರ್ಧಮಾನ ಶಾಸ್ತ್ರಗಳು ಹಿಂದಿ ಭಾವಾರ್ಥದೊಡನೆ ಸೋಲಾಪುರದ ಸಖಾರಾಮ ನೇಮಿಚಂದ್ರ ಗ್ರಂಥಮಾಲೆಯ ಮೂಲಕ ವೈದ್ಯರು ಮಾಡಬೇಕಾದ ಕೆಲಸವನ್ನು ತುಂಬ ಕಷ್ಟಪಟ್ಟು ಸಿದ್ಧಪಡಿಸಿ ೧೯೪೦ರಲ್ಲಿ ಪ್ರಕಟಿಸಿದ್ದಾರೆ.

ಕಲ್ಯಾಣಕಾರಕವು ೨೫ ಪರಿಚ್ಛೇದಗಳುಳ್ಳ ಒಂದು ಬೃಹತ್ ಗ್ರಂತ. ಸ್ವಾಥ್ಯ ರಕ್ಷಣಾಧಿಕಾರ, ಚಿಕಿತ್ಸಾಧಿಕಾರ ಎಂಬ ಎರಡು ಸ್ಥೂಲ ವಿಭಾಗಗಳನ್ನು ಹೊಂದಿದೆ. ಮೊದಲನೆಯ ಭಾಗದಲ್ಲಿ ಆಯುರ್ವೇದೋತ್ಪತ್ತಿ. ಶರೀರರಚನೆ, ಕಾಲವರ್ಣನೆ, ಋತುಚರ್ಯೆ, ದ್ರವ್ಯಗುಣ, ರಸಾಯನ, ಆತ್ಮವಿವೇಚನೆ ಇತ್ಯಾದಿ ಅಂಶಗಳನ್ನು ತಿಳಿಸುವ ಆರು ಅಧ್ಯಾಯಗಳಿವೆ. ಎರಡನೆ ಚಿಕಿತ್ಸಾಧಿಕಾರವು ಪುನಃ ಎರಡು ವಿಭಾಗವಾಗಿದ್ದು ಮೊದಲಿನ ೧೩ ಅಧ್ಯಾಯಗಳಲ್ಲಿ ವ್ಯಾಧಿಗಳ ನಿದಾನ, ಸಂಪ್ರಾಪ್ತಿ ಮತ್ತು ಚಿಕಿತ್ಸೆಗಳನ್ನು ; ಇನ್ನುಳಿದ ಅಧ್ಯಾಯಗಳಲ್ಲಿ ಪಂಚಕರ್ಮ, ಕ್ಷಾರ, ಅಗ್ನಿ – ಜಲೌಕ ಪ್ರಯೋಗಾದಿ ಕ್ರಮಗಳನ್ನು, ಪಾದರಸದ ಕೆಲ ಸಂಸ್ಕಾರಗಳು, ರಸಾಯನ ಕಲ್ಪಗಳು, ರೋಗಿಯ ಅರಿಷ್ಟ ಲಕ್ಷಣಗಳು – ಇತ್ಯಾದಿ ವಿಷಯಗಳನ್ನು ಹೊಂದಿದೆ. ಚಿಕಿತ್ಸಾಧಿಕಾರದಲ್ಲಿ ವಾತ ರೋಗ, ಪಿತ್ತರೋಗ (ರಕ್ತ ಪಿತ್ತ, ಪ್ರದರ, ವಿಸರ್ಪ, ವಾತರಕ್ತ, ಜ್ವರ ಅತಿಸಾರ)ಕಫ ರೋಗ, ಮಹಾಮಯಾಧಿಕಾರ (ಪ್ರಮೇಹ, ಕುಷ್ಠ, ಉದರ, ಮೂಢಗರ್ಭ, ಅರ್ಶಸ್, ಅಶ್ಮರಿ, ಭಗಂಧರ) ಉಪದಂಶ, ಶ್ಲೀಪದ, ಕ್ಷುದ್ರರೋಗಗಳು, ಶ್ವಾಸ, ಕಾಸ,ತೃಷ್ಣಾ, ಛರ್ಧಿ(ವಾಂತಿ), ಹಿಕ್ಕಾ ಉದಾವರ್ತ, ಹೃದ್ರೋಗ, ಕ್ರಿಮಿ,ಅಜೀರ್ಣ, ಮೂತ್ರಕೃಚ್ರ ಮೂತ್ರಾಘಾತ, ಗುಲ್ಮಪಾಂಡು, ಉನ್ಮಾದ, ಅಪಸ್ಮಾರ, ರಾಜಯಕ್ಷ್ಮ, ಶಿರ, ಕರ್ಣ, ನಾಸಾ, ಮುಖ, ನೇತ್ರರೋಗಗಳು, ಶಸ್ತ್ರಪ್ರಯೋಗಾಧಿಕಾರ, ಬಾಲರೋಗಾಧಿಕಾರ, ಗ್ರಹರೋಗಾಧಿಕಾರ, ವಿಷಚಿಕಿತ್ಸಾಧಿಕಾರ, ರಸಾಯನ, ವಾಜೀಕರಣ – ಹೀಗೆ ಆಯುರ್ವೇದದ ಅಷ್ಟಾಂಗಗಳನ್ನು ಹೇಳಲಾಗಿದೆ.

[Another manuscript of some interest is the medical work -Kalyanakaraka of Ugraditya, a Jain author, who was a contemporary of Rashtrakuta king amoghavarsha I and a eastern Chalukya King Kali Vishnu vardnan V. The work opens with the statement that the science of medicine is divided into Two parts namely prevention and cure and gives at the end a long discourse in Sanskrit prose on the uselesnes of a flesh diet said to have been delivered by the authour at the court of Amoghavarsha, where many learned men and doctors had assembled.

Narasimhacharya
Mysore Archaelogical Report-1922, Pp.23

ಗ್ರಂಥದ ಕೊನೆಯ ಹಿತಾಹಿತೀಯ ಎಂಬ ಅಧ್ಯಾಯದಲ್ಲಿ ಮಾಂಸಾಹಾರದ ನಿಷ್ಟ್ರಯೋಜವನ್ನು ಪ್ರತಿಪಾದಿಸಿ ಅದನ್ನು ಸರ್ವಥಾ ಸೇವಿಸಕೂಡದೆಂದು ಹೇಳಿದ್ದಾನೆ. ಔಷಧಿ ಯೋಗಗಳಲ್ಲಿ ಕಾಷ್ಟೌಷಧಿಗಳೆ ಹೇರಳವಾಗಿವೆ. ಹೆಚ್ಚು ದ್ರವ್ಯಗಳಿಂದ, ಸುಲಭಯೋಗಗಳುಳ್ಳ ಈ ಗ್ರಂಥವು ಆಯುರ್ವೇದದ ಒಂದು ಮೂಲ ಗ್ರಂಥವೆನಿಸಿದೆ. ಗಿಡಮೂಲಿಕೆಗಳಲ್ಲಿಯೇ ಸಾಕಷ್ಟು ವೀರ್ಯವಂತಿಕೆ ಇದ್ದು ಆರೋಗ್ಯರಕ್ಷಣೆಗಾಗಲಿ, ರೋಗಚಿಕಿತ್ಸೆಗಾಗಲಿ, ಪ್ರಾಣಿವಧೆ ಮಾಡಿ ಜೀವಮೂಲ ಪದಾರ್ಥಗಳನ್ನು ಉಪಯೋಗಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬ ಮಾತನ್ನು ಪ್ರತಿಪಾದಿಸಲಾಗಿದೆ.

(ಈ ಗ್ರಂಥದ ಬಗ್ಗೆ ‘ಕಲ್ಯಾಣಕಾರಕ – ಒಂದು ಅಧ್ಯಯನ’ ಎಂಬ ಅಧ್ಯಾಯದಲ್ಲಿ ವಿವರವಾಗಿ ಹೇಳಲಾಗಿದೆ.)

ಶಿವಮೂರದೇವರು (೮೦೦): ಶಿವಮೂರತಮತವೆಂಬ ಹಸ್ತ್ಯಾಯುರ್ವೇದ ಶಾಸ್ತ್ರವೊಂದನ್ನು ಬರೆದನೆಂದು ನಗರದ ೩೫ನೇ ಶಾಸನದಿಂದ ತಿಳಿಯುತ್ತದೆ.

ಚಂದ್ರರಾಜನು (೧೦೭೯): ‘ಮದನತಿಲಕ’ ಎಂಬ ಕಾಮಶಾಸ್ತ್ರವೊಂದನ್ನು ಬರೆದಿದ್ದಾನೆ. ಈ ವಿಷಯದಲ್ಲಿ ಕನ್ನಡ ಭಾಷೆಯಲ್ಲಿ ಇದೇ ಮೊದಲನೆಯ ಗ್ರಂಥವು. ಕವಿಯು ತನ್ನ ಪೋಷಕನಾದ ಮಾಚಿರಾಜನು ತನ್ನ ಹೆಂಡತಿಗೆ ಹೇಳಿದ ಕಾಮತತ್ವಗಳನ್ನೇ ಗ್ರಂಥರೂಪವಾಗಿ ಬರೆದಂತೆ ಹೇಳಿರುತ್ತಾನೆ. ಇದು ಚಂಪೂ ರೂಪದಲ್ಲಿದೆ. ಗ್ರಂಥದ ಆದಿಯಲ್ಲಿ ಮನ್ಮಥನನ್ನೇ ಸ್ತುತಿಸಿದ್ದಾನೆ. ಇದರ ನಂತರ ಜನ್ನನ (೧೨೦೯) ಸ್ವರತಂತ್ರವೇ ಪ್ರಸಿದ್ಧವಾದುದು. ಕಾಮಶಾಸ್ತ್ರದ ಬಗ್ಗೆ ಜೈನರು ಗ್ರಂಥ ರಚಿಸಿದ್ದಾರೆ ಎಂದರೆ ಅದೊಂದು ವಿಶೇಷವೆಂದೇ ಹೇಳಬೇಕು.

ಕೀತೀವರ್ಮ (೧೧೨೫): ಜೈನ ಮತಾವಲಂಬಿಯಾದ ಈತನು ಸಾಹಿತ್ಯ ಮತ್ತು ಕಲೆಗಳಲ್ಲಿ ನಿಪುಣನಾಗಿದ್ದನು. ‘ವೈದ್ಯರತ್ನ’ ಎಂಬ ಪ್ರಶಸ್ತಿಯಿಂದ ಈತನಿಗೆ ವೈದ್ಯ ಶಾಸ್ತ್ರದಲ್ಲೂ ಪ್ರಾವೀಣ್ಯತೆ ಇದ್ದಿತೆಂದು ಸ್ಪಷ್ಟವಾಗುತ್ತದೆ. ಇವನು ‘ಗೋವೈದ್ಯ’ ಎಂಬ ಗ್ರಂಥವನ್ನು ಕನ್ನಡದಲ್ಲಿ ರಚಿಸಿದ್ದಾನೆ. ಮೈಸೂರು ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿರುವ ಈ ಗ್ರಂಥದ ಒಂದು ತಾಳಪತ್ರ ಪ್ರತಿಯ ಬಗ್ಗೆ ಬರೆಯುತ್ತ ಆರ್.ನರಸಿಂಹಾಚಾರ್ಯರು ೮೩ ಓಲೆಗಳ ಅಸಮಗ್ರ ಪ್ರತಿಯಾದ ಇದರ ಆದಿಯ ೩೩ ಒಲೆಗಳವರೆಗೆ ಪದ್ಯರೂಪವಾಗಿಯೂ ಉಳಿದ ೫೦ ಓಲೆಗಳು ಗದ್ಯ(ಓಲೆ)ರೂಪವಾಗಿಯೂ ಇದ್ದು ಆಕಳುಗಳು ವ್ಯಾಧಿಗಳಿಗೆ ಔಷಧಿಗಳು, ಯಂತ್ರಗಳು, ಬರೆಹಾಕುವ ಕ್ರಮ ಮುಂತಾದವುಗಳನ್ನು ವಿಸ್ತಾರವಾಗಿ ಹೇಳಿದ್ದಾರೆ ಎಂಬುದಾಗಿ ಕರ್ನಾಟಕ ಚರಿತ್ರೆ ಗ್ರಂಥದಲ್ಲಿ ಹೇಳಿದ್ದಾರೆ.

ಸುಮನೋಬಾಣ (ಕ್ರಿ..೧೧೫೦): ಈತನು ಕರ್ನಾಟಕದ ದಕ್ಷಿಣ ಭಾಗದಲ್ಲಿ ನೆಲೆಸಿದ್ದು ಅನೇಕ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದನೆಂದೂ ಹಲವು ಗ್ರಂಥಗಳನ್ನು ರಚಿಸಿದ್ದನೆಂದೂ ಅವುಗಳಲ್ಲಿ ವೈದ್ಯಕೀಯ ಗ್ರಂಥಗಳೂ ಸೇರಿರಬಹುದೆಂದೂ ಊಹಿಸಲಾಗಿದ್ದು ಈತನ ಯಾವ ಗ್ರಂಥಗಳೂ ದೊರಕಿಲ್ಲ.

ಜಗದ್ದಳ ಸೋಮನಾಥ:ಕ್ರಿ.ಶ.೧೧೫೦ರ ಕಾಲದಲ್ಲಿಯೇ ಇದ್ದ ಈ ಪಂಡಿತನು ಕವಿತಾ ಶಕ್ತಿಯಲ್ಲಿ ಸಿದ್ದಹಸ್ತನಾಗಿ ‘ವಿಚಿತ್ರ ಕವಿ’ ಎಂಬ ಪ್ರಶಸ್ತಿಯನ್ನು ಪಡೆದಿದ್ದುದಲ್ಲದೇ ವೈದ್ಯವಿದ್ಯೆಯಲ್ಲೂ ನಿಪುಣನಾಗಿದ್ದನೆಂದು ತಿಳಿದುಬರುತ್ತದೆ. ಪೂಜ್ಯಪಾದರಿಮದ ರಚಿತವಾದ ‘ಕಲ್ಯಾಣಕಾರಕ’ ಎಂಬ ಗ್ರಂಥವನ್ನು ಈತನು ಕನ್ನಡದಲ್ಲಿ ರಚಿಸಿದ್ದಾನೆ ಎಂದೂ, ಜೊತೆಗೆ ಚರಕ,ವಾಗ್ಬಟ, ಸಿದ್ಧಸಾರ ಮೊದಲಾದ ಗ್ರಂಥಗಳಿಂದ ವಿಷಯಗಳನ್ನು ಆರಿಸಿ ಸೇರಿಸಲಾಗಿದೆ ಎಂದೂ, ಅಭಯಚಂದ್ರ ಸಿದ್ಧಾಂತಿ ಹಾಗೂ ಸುಮನೋಬಾಣರು ತನ್ನ ಗ್ರಂಥವನ್ನು ಪರಿಷ್ಕರಿಸಿದರೆಂದೂ, ಇದರಲ್ಲಿ ಹೇಳಲ್ಪಟ್ಟಿರುವ ಚಿಕತ್ಸೆಗಳು ಮದ್ಯ, ಮಾಂಸ, ಮಧು ವರ್ಜಿತವಾದವುಗಳೆಂದೂ ಪ್ರಶಂಶಿಸಿಕೊಂಡಿದ್ದಾನೆ.

ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಈ ಗ್ರಂಥದ ತಾಳಪತ್ರದ ಪ್ರತಿಯೊಂದಿದೆ. ಇದು ೩೩ ಅಧ್ಯಾಯವುಳ್ಳ ಮಧ್ಯಮ ಪ್ರಮಾಣದ ಗ್ರಂಥ. ಕೆಲವು ಕಡೆ ಗ್ರಂಥಾಪಾತವಿದ್ದು ವಾಕ್ಯ ದೋಷಗಳೂ ಸಾಕಷ್ಟಿವೆ. ಪದ್ಯರೂಪವಾಗಿರುವ ಈ ಗ್ರಂಥ ಕನ್ನಡದ ವೈದ್ಯಗ್ರಂಥಗಳ ಪೈಕಿ ಮೊದಲನೆಯದು ಎಂದು ಪ್ರಮುಖ ಸ್ಥಾನವನ್ನು ಹೊಂದಿದೆ.

ದೇವೇಂದ್ರಮುನಿ: ಕ್ರಿ.ಶ.೧೨೦೦ರ ಸುಮಾರಿಗೆ ‘ಬಾಲಗ್ರಹಚಿಕಿತ್ಸೆ’ ಎಂಬ ಗ್ರಂಥವನ್ನು ಕನ್ನಡದಲ್ಲಿ ಗದ್ಯರೂಪವಾಗಿ ರಚಿಸಿದ್ದು ಇದರ ೧೦-೧೨ ಓಲೆಗಳು ಮಾತ್ರ ಈಗ ದೊರಕಿರುವುದರಿಂದ ಗ್ರಂಥದ ಪೂರ್ಣ ಪರಿಚಯ ಹಾಗೂ ಕರ್ತೃವಿನ ಪೂರ್ಣ ವೃತ್ತಾಂತ ತಿಳಿದುಬಂದಿಲ್ಲ. ಶಿಶುಗಳಿಗೆ ಉಂಟಾಗುವ ಗ್ರಹಬಾಧಕಗಳು ಹಾಗೂ ಅವುಗಳ ನಿವಾರಣೋಪಾಯಗಳನ್ನು ಈ ಗ್ರಂಥದಲ್ಲಿ ಹೇಳಲಾಗಿದೆ.

ಮಲಧಾರಿದೇವ: ಕ್ರಿ.ಶ.೧೨೦೦ರ ಸುಮಾರಿಗಿದ್ದ ಈತನು ವೈದ್ಯನಾಗಿದ್ದು ರಾಜಮಾನ್ಯತೆ ಪಡೆದಿದ್ದನು. ಈತನು ಕೃತಿಗಳಾವುವೂ ದೊರೆತಿಲ್ಲ. ಈತನು ಹೆಸರು ಅನೇಕ ಶಾಸನಗಳಲ್ಲಿ ನಮೂದಿತವಾಗಿದೆ.

ಅಮೃತನಂದಿ : (ಕ್ರಿ.ಶ.೧೩೦೦) ಈತನು ‘ಅಕಾರಾದಿ ವೈದ್ಯ ನಿಘಂಟು’ ರಚಿಸಿದ್ದು ಈಗಾಗಲೇ ಈ ವಿಷಯವಾಗಿ ತಿಳಿದಿದ್ದೇವೆ.

ಮಂಗರಾಜ (ಕ್ರಿ..೧೩೬೦): ವಿಜಯನಗರದ ಒಂದನೆಯ ಹರಿಹರರಾಯನ ಆಶ್ರಿತರಾಜರಲ್ಲೊಬ್ಬನಾದ ಈತನು ಪೂಜ್ಯಪಾದರ ಶಿಷ್ಯ ಸಂಪ್ರದಾಯಕ್ಕೆ ಸೇರಿದವನು. ವಿಷ ಚಿಕಿತ್ಸೆಯಲ್ಲಿ ಸಿದ್ಧಹಸ್ತನಾಗಿದ್ದು ಪ್ರತಿನಿತ್ಯ ನೂರಾರು ರೋಗಿಗಳಿಗೆ ತಾನೆ ಸ್ವತಃ ಚಿಕಿತ್ಸೆ ಮಾಡುತ್ತಿದ್ದನಂತೆ. ತನ್ನ ವಿದ್ಯೆಯನ್ನು ಮುಂಬರುವ ಪೀಳಿಗೆಗೂ ಹಂಚಿಕೊಡುವ ಉದ್ದೇಶದಿಂದ ‘ಖಗೇಂದ್ರ ಮಣಿದರ್ಪಣ’ ಎಂಬ ವಿಷವೈದ್ಯಗ್ರಂಥವನ್ನು ರಚಿಸಿದ್ದಾನೆ. ಕನ್ನಡ ಭಾಷೆಯ ಕಂದ ಮತ್ತು ವೃತ್ತ ರೂಪ ಪದ್ಯಗಳಲ್ಲಿ ರಚಿತವಾಗಿರುವ ಈ ಗ್ರಂಥಕ್ಕೆ ‘ಮೃತ ಸಂಜೀವಿನಿ’ ‘ಜೀವಿತ ಚಿಂತಾಮಣಿ’ ಎಂಬ ಅನ್ವರ್ಥನಾಮಗಳೂ ಇವೆ. ಇದು ೧೬ ಅಧ್ಯಾಯಗಳನ್ನು ಹೊಂದಿದ್ದು ವಿಷೋತ್ಪತ್ತಿ, ಅವುಗಳ ಭೇದಗಳು, ಔಷಧ ಸಂಗ್ರಹಣೆ, ವತ್ಸನಾಭಿ, ಇಂದ್ರವಜ್ರ, ಕಾಲಕೂಟ ಮುಂತಾದ ಕಂದಮೂಲ ಪಾಷಾಣಾದಿ ಸ್ಥಾವರ ವಿಷವಸ್ತುಗಳ ಲಕ್ಷಣ, ವಿಷಜುಷ್ಟ ಲಕ್ಷಣ ಮತ್ತು ಚಿಕಿತ್ಸೆ, ಸರ್ಪಾದಿ ಜಂಗಮವಿಷಗಳ ಚಿಕಿತ್ಸೆ, ವಿಷ ನಿವಾರಕ ಮಂತ್ರ, ಆರಾಧನೆ, ಗರುಡಮಣಿ, ವಿಘ್ನ ಔಷಧಿಗಳ ಪ್ರಯೋಗಗಳು ಹಾಗೂ ನಾಗಪ್ರೇಕ್ಷಣ, ಮಂತ್ರ ಕ್ರಮ, ಯಂತ್ರಧಾರಣೆ, ಉಂಗುರಧಾರಣೆ ಮುಂತಾದ ಯುಕ್ತಿ ಉಪಾಯಗಳ ವಿವರಣೆ ಇದೆ. ಈತನು ಹೇಳಿದ ಚಿಕಿತ್ಸೆಯಲ್ಲಿ ಸಸ್ಯೌಷಧಿ ಪ್ರಯೋಗವೇ ಹೆಚ್ಚಾಗಿದ್ದು ಕೆಲವು ಕಡೆ ರಸೋಪರಸಗಳನ್ನು ಹೇಳಲಾಗಿದೆ. ಅನೇಕ ಗಿಡಮೂಲಿಕೆಗಳಿಗೆ ಈ ಗ್ರಂಥದಲ್ಲಿ ಕನ್ನಡ ಭಾಷೆಯ ವ್ಯವಹಾರಿಕ ಹೆಸರುಗಳನ್ನೇ ಬಳಸಲಾಗಿದೆ. ಅನೇಕ ಯೋಗಗಳು ಕರ್ತೃವಿನ ಅನುಭವ ಸಿದ್ಧ ಯೋಗಗಳೆಂಬುದರಲ್ಲಿ ಸಂಶಯವಿಲ್ಲ. ಅಲ್ಪ ಸಂಖ್ಯೆಯ ವಿಷವೈದ್ಯಗ್ರಂಥಗಳ ಪೈಕಿ ವೈವಿಧ್ಯಪೂರ್ಣವಾದ ಈ ಗ್ರಂಥವನ್ನು ೧೯೪೨ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದವರು ಪ್ರಥಮಬಾರಿಗೆ ಪ್ರಕಟಿಸಿದ್ದಾರೆ.

ಇದನ್ನು ಸಾಳ್ವ ಕವಿಯು ‘ಕನ್ನಡದಿಂ ಸಮಸ್ತ ಜನಗೋ ಚರಮಪ್ಪ ಪಾಲಣ್ಣ ಪೇಲ್ವುದು ನೀಂ ನಮಗೆಂದು ಭವ್ಯರೊಸೆದ ತ್ತಿಯೋಳ್ ಬೆಳಗೊಳ್’ – ಈ ಕೃತಿಯನ್ನು ಮಾಡಿದನು ಎಂದು ತಿಳಿಯುತ್ತದೆ. (ಔಷಧಿ ಕೊಡುವುದು – ವೈದ್ಯಕೀಯ) ಭೇಷಜವು ಮೋಕ್ಷ ಸಾಧಕವೆಂದೂ ಈ ಕೃತಿಗೆ ಕಾರಣ ಹೇಳುತ್ತಾನೆ. ಈ ಗ್ರಂಥದಲ್ಲಿ ಪ್ರತಿಪಾದಿತವಾದ ವಿಷಯಗಳನ್ನು ಹೀಗೆ ಹೇಳಿದ್ದಾನೆ. (ಸಾಳ್ವ-೧೫೫೦)

ಉರಗಮೃಗಮೂಖು ವೃಶ್ಚಿಕ ಸುರೆ ಕೀಟಮಂ ಕುಧಾನ್ಯತಂಬೂಲ ಕನಕಂ
ನಿರೂಪಯಿತ ಕೃತಿಮಂಗಳ ಪರಿರೆಪೊಡಿವು ದಶವಿಧಂ ವಿಷಂಗಳೆನಿಕ್ಕುಂ

ಗ್ರಂಥಾವತಾರದಲ್ಲಿ ಕವಿಯು ಪಾರ್ಶ್ವನಾಥನನ್ನು ಸ್ತುತಿಸಿದ್ದಾನೆ. ಗ್ರಂಥದ ವಿಷಯವು ವೈದ್ಯವಾದರೂ ಪದ್ಯಗಳು ಲಲಿತವಾಗಿವೆ. ಈತನು ಬೇರೆ ಗ್ರಂಥಗಳನ್ನೂ ಬರೆದಂತೆ ತಿಳಿದುಬರುತ್ತದೆ. ಇವನು ಹೊಯ್ಸಳ ರಾಜ್ಯದಲ್ಲಿಯ ದೇವಳಿಗೆ ನಾಡಿನ ಮುಖ್ಯ ಪಟ್ಟಣವಾದ ಮುಗಳಿಯ ಪುರದ ವಿಭುವಾಗಿದ್ದನು. ಇವನ ಗುರುವು ಪೂಜ್ಯಪಾದ ಮುನಿ ಎಂಬವನಿದ್ದನು.

(ಇನ್ನು ಸಾಳ್ವನ ವೈದ್ಯ ಸಾಂಗತ್ಯದಲ್ಲಿ ಕೆಲವು ಪಠ್ಯಗಳು ‘ವರಕವಿ ಸಾಳ್ವನ ಮತದಿಂ’ ಎಂದು ಮುಗಿಯುತ್ತದೆ. ವಿವಿಧ ರಸಗಳನ್ನು ಮಾಡಿಕೊಳ್ಳುವ ಕ್ರಮ(ರಸೌಷಧಿ) ಹಾಗೂ ಅನುಮಾನಗಳನ್ನು ಕವಿಯು ಬಹು ಸುಂದರವಾಗಿ ವಿವರಿಸಿದ್ದಾನೆ.)’ ಖಗೇಂದ್ರ ಮಣಿದರ್ಪಣ’ – ಗ್ರಂಥ ಕುರಿತು ಮುಂದೆ ವಿವರಿಸಲಾಗಿದೆ.

ಶ್ರೀಧರದೇವ: (ಕ್ರಿ.ಶ.೧೫೦೦ರ ಸುಮಾರು) ಜೈನ ವೈದ್ಯನಾದ ಈತನು ತನ್ನ ಗುರುವಾದ ಮುನಿಚಂದ್ರದೇವರ ಇಷ್ಟಾನುಸಾರ ‘ವೈದ್ಯಾಮೃತ’ ಎಂಬ ಗ್ರಂಥವನ್ನು ಕನ್ನಡದಲ್ಲಿ ಬರೆದಿದ್ದಾನೆ. ಈತನು ಮಂತ್ರವಿದ್ಯೆಯೊಂದೊಡಗೂಡಿದ ವೈದ್ಯವೃತ್ತಿಯವನಾಗಿರಬೇಕೆಂದು ಊಹಿಸಲಾಗಿದೆ. ವೈದ್ಯಾಮೃತವು ೨೪ ಅಧ್ಯಾಯಗಳುಳ್ಳ ಚಂಪೂಗ್ರಂಥ. ಮೊದಲಿನ ಎರಡು ಅಧ್ಯಾಯಗಳನ್ನು ಸಂಸ್ಕೃತ ಶ್ಲೋಕ ರೂಪಗಳಲ್ಲಿ ಬರೆಯಲಾಗಿದೆ. ಅಷ್ಟಾಂಗಗಳಿಗೂ ಸೇರಿದ ವ್ಯಾಧಿ ಚಿಕಿತ್ಸಾ ನಿರೂಪಣೆ ಇದರಲ್ಲಿದೆ. ಚಿಕಿತ್ಸೆಯಲ್ಲಿ ರಸೌಷಧಿಗಳನ್ನೂ, ಯಂತ್ರಮಂತ್ರಗಳನ್ನೂ ಹೇಳಲಾಗಿದೆ. ಗ್ರಂಥವನ್ನು ಅನುಭೂತಯೋಗಗಳ ಸಂಗ್ರಹವೆನ್ನಬಹುದು.

ಬಾಚರಸ: ಶ್ರೀಧರ ದೇವನ ಸಮಕಾಲೀನದಲ್ಲಿ ಈತನು ಅಶ್ವಶಾಸ್ತ್ರಜ್ಞನಾಗಿದ್ದನು. ರಾಜವಂಶೀಯ ‘ಅಶ್ವವೈದ್ಯ’ ಎಂಬ ಗ್ರಂಥವನ್ನು ಕನ್ನಡದಲ್ಲಿ ಬರೆದಿದ್ದಾನೆ. ಅಲ್ಪ ಗದ್ಯ, ಹೆಚ್ಚು ಪದ್ಯಗಳುಳ್ಳ ಮಧ್ಯಮ ಪ್ರಮಾಣದ ಈ ಗ್ರಂಥವು ಅಶ್ವಲಕ್ಷಣ, ಪರೀಕ್ಷೆ, ವ್ಯಾಧಿನಿರ್ಣಯ ಮತ್ತು ಚಿಕಿತ್ಸೆಗಳನ್ನು ವಿವರಿಸಿರುತ್ತದೆ.

ಮಂಗರಸ (ಕ್ರಿ..೧೫೦೮): ಇವನೊಬ್ಬ ಶ್ರೇಷ್ಠ ವಿದ್ವಾಂಸನಾಗಿದ್ದು ಅನೇಕ ಧಾರ್ಮಿಕ ಹಾಗೂ ಶಾಸ್ತ್ರೀಯ ಗ್ರಂಥಗಳನ್ನು ರಚಿಸಿದ್ದಾನೆ. ‘ಸೂಪಶಾಸ್ತ್ರ’ದಲ್ಲಿ ಅನ್ನಪಾನಾದಿಗಳ ತಯಾರಿಕೆ ಕ್ರಮವನ್ನು ೩೫೬ ಪದ್ಯಗಳಲ್ಲಿ ಹೇಳಲಾಗಿದ್ದು, ಇದೊಂದು ಉತ್ತಮ ಪಾಕಶಾಸ್ತ್ರ ಪುಸ್ತಕವಾಗಿದೆ.

ಸಾಳ್ವ (ಕ್ರಿ..೧೫೫೦): ಈತನು ‘ವೈದ್ಯ ಸಾಂಗತ್ಯ’ ಎಂಬ ಗ್ರಂಥವನ್ನು ರಚಿಸಿದ್ದು ಶೃತಕೀರ್ತಿ ಎಂಬುವರ ಶಿಷ್ಯ. ಸಾಹಿತ್ಯ ಸಂಗೀತ ಮತ್ತು ವೈದ್ಯ ಶಾಸ್ತ್ರಗಳಲ್ಲಿ ನಿಪುಣ. ಕನ್ನಡ ಭಾಷೆಯಲ್ಲಿ ರಚಿತವಾಗಿರುವ ವೈದ್ಯ ಸಾಂಗತ್ಯವು ನಾಡೀ, ಮೂತ್ರಾದಿ ಅಷ್ಟಸ್ಥಾನ ಪರೀಕ್ಷೆ, ಮುಖ್ಯ ವ್ಯಾಧಿಗಳ ಚಿಕಿತ್ಸೆ ವಿಷ ನಾಶಕೌಷಧಿಗಳನ್ನು ತಿಳಿಸುತ್ತದೆ. ಇದರಲ್ಲಿ ಮಂಗರಸನ ಖಗೇಂದ್ರಮಣಿದರ್ಪಣದಿಂದ ಯೋಗಗಳನ್ನೂ ಉದ್ಧರಿಸಲಾಗಿದೆ.

ಶ್ರೀಕಂಠನಂದಿ : ಈತನು ‘ಪರ್ಯಾಯ ಮಂಜರಿ’ ಎಂಬ ಗ್ರಂಥವನ್ನು ರಚಿಸಿದ್ದಾನೆ. ಅಷ್ಟಾಂಗ ಸಂಗ್ರಹದಲ್ಲಿ ತಿಳಿಸಲಾಗಿರುವ ಆಹಾರ ಮತ್ತು ಔಷಧ ದ್ರವ್ಯಗಳೆಲ್ಲವುಗಳ ಪರ್ಯಾಯ ಶಬ್ಧ ಮತ್ತು ಗುಣಗಳನ್ನು ವಿವರಿಸುತ್ತದೆ. ಅನೇಕ ಸಹಸ್ರಶ್ಲೋಕಗಳುಳ್ಳ ಈ ಗ್ರಂಥವು ಈತನ ಪಾಂಡಿತ್ಯವನ್ನು ಪ್ರತಿಬಿಂಬಿಸುತ್ತದೆ. ಈ ಗ್ರಂಥದ ಒಂದು ಅಪೂರ್ಣ ಪ್ರತಿ ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿದೆ. ಸುಮಾರು ೧೭೦೦ ಶ್ಲೋಕಗಳುಳ್ಳ ಮೊದಲನೆ ಅಧ್ಯಾಯ ದ್ರವ, ದ್ರವ್ಯ, ಧಾನ್ಯ, ಮಾಂಸ, ಶಾಕ, ಔಷಧ ಮುಂತಾದವುಗಳನ್ನು ವಿವರಿಸುತ್ತದೆ. ಎರಡನೆ ಗುಣಪಾಠ ಸಂಗ್ರಹಾಧ್ಯಾಯದಲ್ಲಿ ಅನ್ನಪಾಕ ಕ್ರಮ, ವಿವಿಧ ಭಕ್ಷ, ಭೋಜ್ಯ ಗುಣಗಳು, ಭೋಜನ ನಿಯಮ, ತಾಂಬೂಲ, ವಸ್ತ್ರ ಭೂಷಣ, ಸ್ವಪ್ನ, ಯಾನ, ಸ್ತ್ರೀಭೋಗದ ಹಿತಾಹಿತಗಳನ್ನು ತಿಳಿಸುವ ಸುಮಾರು ಒಂದು ಸಾವಿರ ಶ್ಲೋಕಗಳಿವೆ. ಮುಂದಿನ ವಿವರಣೆ ದೊರಕಿಲ್ಲ. ಪರ್ಯಾಯ ಮಂಜರಿ ಎಂಬ ಹೆಸರುಳ್ಳದ್ದಾಗಿದ್ದರೂ ಕೇವಲ ನಿಘಂಟು ರೂಪವಾದ ಶಬ್ಧ ಸಮುಚ್ಛಯವು ಮಾತ್ರವಲ್ಲ; ಸ್ವಾಸ್ಥ್ಯ ಜೀವನವನ್ನು ಸಾಧಿಸಲು ಅತ್ಯವಶ್ಯಕವಾಗಿ ಪಾಲಿಸಬೇಕಾದ ಎಲ್ಲ ನಿಯಮಗಳನ್ನು ಗ್ರಂಥವು ವಿವರಿಸುತ್ತದೆ. ಸಂಸ್ಕೃತ ವೈದ್ಯ ಗ್ರಂಥಗಳಲ್ಲಿ ಇದೊಂದು ಮಹತ್ವಪೂರ್ಣ ಗ್ರಂಥವೆಂಬುದು ನಿರ್ವಿವಾದ. ಇದು ಅಪೂರ್ಣವಾಗಿದ್ದರು ಇಂದಿನ ವೈದ್ಯರಿಗೆ ಉಪಯುಕ್ತವಾಗಿರುವುದರಿಂದ ಪ್ರಕಾಶನ ಯೋಗ್ಯವಾಗಿದೆ.

ಲಕ್ಷ್ಮಣ ಪಂಡಿತ (ಕ್ರಿ..೧೭೭೫): ಈ ಜೈನ್ಯ ವೈದ್ಯನು ಮೈಸೂರಿನಲ್ಲಿದ್ದುದಾಗಿ ತಿಳಿದು ಬಂದಿದ್ದು ಹೆಚ್ಚಿನ ವಿವರಗಳು ಗೊತ್ತಿಲ್ಲ. ‘ಆಕಾರಾದಿ ನಿಘಂಟು’ ಎಂಬ ಗ್ರಂಥವನ್ನು ಈತನು ರಚಿಸಿದ್ದು ಇದು ತಾಳಪತ್ರ ರೂಪದಲ್ಲಿದೆ. ಸಂಸ್ಕೃತ ವೈದ್ಯಕೀಯ ಶಬ್ದಗಳಿಗೆ ಕನ್ನಡದಲ್ಲಿ ಅರ್ಥವನ್ನು ಹಾಗೂ ಇದರ ಪರ್ಯಾಯ ಶಬ್ಧಗಳನ್ನು ಕೊಟ್ಟಿದ್ದಾನೆ. ಚಿಕಿತ್ಸೆಯಲ್ಲಿ ಉಪಯೋಗಿಸುವ ಔಷಧಿ ದ್ರವ್ಯಸೂಚಕಗಳೆ ಇಲ್ಲಿ ಹೆಚ್ಚು. ಮೂಲಿಕೆಗಳಿಗೆ ಕರ್ನಾಟಕದಲ್ಲಿ ಪ್ರಚಾರದಲ್ಲಿರುವ ಹೆಸರುಗಳನ್ನು ಸೂಚಿಸಿರುವುದು ಈ ಗ್ರಂಥದ ವೈಶಿಷ್ಟ್ಯ. ಇದು ಕೂಡ ಮುದ್ರಿತವಾಗಿಲ್ಲ.

ಕೆಲ ಅನಾಮಧೇಯರು : ‘ವೈದ್ಯ ಚಿಕಿತ್ಸಾಮೃತಂ’ ಎಂಬ ಸಂಸ್ಕೃತ ಗ್ರಂಥವೊಂದು ಮೈಸೂರಿನ ಪ್ರಾಚ್ಯ ವಸ್ತು ಸಂಶೋಧನಾಲಯದಲ್ಲಿದ್ದು ಮಂಗಲ ಸ್ತ್ರೋತ್ರದಿಂದ ಇದನ್ನು ರಚಿಸಿದವನು ಜೈನ ಮತೀಯನೆಂದು ಗೊತ್ತಾಗುತ್ತದೆ. ವೈದ್ಯಶಾಸ್ತ್ರದ ಅಷ್ಟಾಂಗಗಳು ಹಾಗೂ ಜ್ಯೋತಿಷ್ಯವನ್ನೂ ಕೂಡ ಇದರಲ್ಲೆ ಹೇಳಲಾಗಿದ್ದು ಗ್ರಂಥಕರ್ತನ ಹೆಸರು ಹಾಗೂ ಕಾಲಗಳ ಸೂಚನೆ ಇಲ್ಲ.

ಶ್ರೀ ಪಂಡಿತ ಎಂಬಾತನು ವರರುಚಿಯ ‘ಯೋಗಶತಕ’ಕ್ಕೆ ಸಂಸ್ಕೃತದಲ್ಲಿ ವ್ಯಾಖ್ಯಾನ ಬರೆದಿದ್ದು ಇದು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿದೆ. ಸುಲಭವಾಗಿ ಗದ್ಯಶೈಲಿಯಲ್ಲಿರುವ ಈ ವ್ಯಾಖ್ಯಾನ ಗ್ರಂಥಕಾರನ ಹಿರಿಮೆ ಹಾಗೂ ಪಾಂಡಿತ್ಯಗಳ ದ್ಯೋತಕವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೩-೪ ಶತಮಾನಗಳ ಹಿಂದಿನಿಂದಲೂ ಅನೇಕ ಪ್ರಸಿದ್ಧ ವೈದ್ಯರು ಆಗಿಹೋದ ಬಗ್ಗೆ ತಿಳಿದುಬಂದಿದೆ. ಅವರಲ್ಲಿ ಜೈನರೇ ಹೆಚ್ಚಾಗಿದ್ದರು. ಕಾರ್ಕಳ, ಮೂಡುಬಿದ್ರೆ ಹಾಗೂ ಇತರ ಸ್ಥಳಗಳಲ್ಲಿರುವ ಜೈನ ಬಸದಿಗಳಲ್ಲಿ ಈ ಗ್ರಂಥಗಳಿವೆ.

ಶಾಂತರಾಜ ಪಂಡಿತರು, ಸೂರಿ ಪಂಡಿತರು ಕೂಡ ಕೆಲ ವೈದ್ಯಕೀಯ ಗ್ರಂಥಗಳನ್ನು ರಚಿಸಿದ್ದರು ಎಂದು ತಿಳಿದುಬಂದಿದೆ. ಆದರೆ ಈ ವಿಷಯವಾಗಿ ಹೆಚ್ಚಿನ ವಿವರಗಳು ದೊರೆತಿಲ್ಲ ಹಾಗೂ ಆ ಗ್ರಂಥಗಳು ಲಭ್ಯವಿಲ್ಲ. ದಕ್ಷಿಣ ಕನ್ನಡದ ಅನೇಕ ಪುರೋಹಿತರು ವೈದ್ಯಕೀಯ ಪಂಡಿತರಾಗಿದ್ದು ಚಿಕಿತ್ಸೆ ಮಾಡುತ್ತಿದ್ದರೆಂಬ ಅಂಶ ತಿಳಿದುಬಂದಿದೆ.

ಈ ತರಹದ ಅನೇಕ ತಾಳೆಗರಿ ಗ್ರಂಥಗಳು ಅಲ್ಲಲ್ಲಿಗೆ ದೊರಕುತ್ತವೆ. ಕೆಲವು ಹಳೆ ಮನೆತನಗಳಲ್ಲಿ, ಮಠಗಳಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯಗಳಲ್ಲಿ ವಾಚನಾಲಯಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಈ ತಾಳೆಗರಿಗಳು, ಕಯ ಬರಹದ ಪ್ರತಿಗಳು, ಹಳೇ ಗ್ರಂಥಗಳು ಇವೆ. ಈ ಸಂಪತ್ತನ್ನು ನಾವಿಂದು ರಕ್ಷಿಸುವುದು ಅತ್ಯವಶ್ಯವಾಗಿದೆ. ಇವುಗಳ ಅಧ್ಯಯನ, ಸಂಶೋಧನೆ, ಸಂಪಾದನೆ, ಪ್ರಕಟನೆ ಕಾರ್ಯ ಕೂಡ ನಡೆಯಬೇಕಾಗಿದೆ. ಕೊನೆಯ ಪಕ್ಷ ಕೆಲ ಮೌಲಿಕ ಗ್ರಂಥಗಳನ್ನಾದರು ಬೆಳಕಿಗೆ ತರಬೇಕಾಗಿದೆ.

ಆಯುರ್ವೇದದ ಅವನತಿ: ಭಾರತದಲ್ಲಿ ೧೮ನೇ ಶತಮಾನದಿಂದೀಚೆಗೆ ಮುಸಲ್ಮಾನರು, ಪೋರ್ತುಗೀಜರು, ಇಂಗ್ಲೀಷರ ದಾಳಿಗಳಿಂದ ಹಾಗೂ ಬದಲಾದ ಜನತೆಯ ಮನೋಭಾವನೆಯಿಂದ ಆಯುರ್ವೇದದ ಪ್ರಗತಿ ಕುಂಠಿತವಾಯಿತು. ತನ್ನ ಸ್ವಂತಿಕೆಯನ್ನು ಕಾಯ್ದುಕೊಂಡು ಹೋಗುವುದೇ ಅದಕ್ಕೆ ಪ್ರಯಾಸವೆನಿಸಿತು. ಸ್ವಾತಂತ್ಯ್ರ ಸಿಕ್ಕು ೫೦ ವರ್ಷಗಳಾದರೂ ಪಾಶ್ಚಾತ್ಯ ವೈದ್ಯರ ಪ್ರಭಾವಲಯದಿಂದ ನಮ್ಮ ಜನವಿನ್ನೂ ಹೊರಬಂದಿಲ್ಲ. ಈ ಆಯುರ್ವೇದವು ತನ್ನ ಹಿರಿಮೆಯಿಂದ ಪಾಶ್ಚಾತ್ಯರಿಗೂ ಪೌರ್ವಾತ್ಯರಿಗೂ ಇಂದು ಬೇಕಾಗಿದೆ. ಭಾರತದಲ್ಲಿ ಅದು ಅಲ್ಪ-ಸ್ವಲ್ಪ ಬೆಳೆಯುತ್ತಿದ್ದರೂ ಅದು ಅರ್ಷ್ಯಪದ್ಧತಿಯಲ್ಲಿ ಮಾತ್ರ. ಜೈನ ಆಯುರ್ವೇದ ಸಿದ್ಧಾಂತಗಳ ಮೇಲೆ ಬೋಧನೆ, ಚಿಕಿತ್ಸೆ, ಸಂಶೋಧನೆಗಳಾಗುತ್ತಿಲ್ಲ. ಅಹಿಂಸಾ ಮಾದರಿ ಚಿಕಿತ್ಸೆಗೆ ಯಾವ ಬೆಲೆ ಇಲ್ಲದಂತಾಗಿದೆ. ನಮ್ಮ ಸಮಾಜ ಬಾಂಧವರು, ಮುನಿಗಳು, ವೈದ್ಯರು, ಮಠಗಳಿಂದು ಜಾಗೃತರಾಗದಿದ್ದರೆ ಜೈನವೈದ್ಯ ಪರಂಪರೆ ನಿಂತು ಹೋಗುವುದರಲ್ಲಿ ಸಂಶಯವಿಲ್ಲ.

[1] ಶ್ರೀಪೂಜ್ಯಪಾದ ಮುನಿರಪ್ರತಿಮೌಷದರ್ದ್ಧಿಂ
ಜೀಯಾತ್ವಿದೇಹ ಜಿನದರ್ಶನ ಪೂತಗಾತ್ರಃ
ಯತ್ಪಾದಧೌತಜಲಸಂಸ್ಪರ್ಶ ಪ್ರಭಾವಾತ್
ಕಾಲಾಯಸಂ
ಕಿಲತದಾಕನ ಕೀಚಕಾರ
(ಶ್ರವಣಬೆಳಗುಳ ಶಿಲಾಲೇಖ ನಂ.೧೦೮, ವಿ.ಶ.೧೩೫೫)