ಕೃತಿ ರಚನೆ : ಉಗ್ರದಿತ್ಯಾಚಾರ್ಯ
ಭಾಷೆ: ಮೂಲಪ್ರತಿ ಪ್ರಾಕೃತ, ಸಂಸ್ಕೃತ
ಸಂಪಾದನೆ ಹಾಗೂ ಹಿಂದಿ ಅನುವಾದ : ಪಂಡಿತನ ವರ್ಧಮಾನ ಶಾಸ್ತ್ರಿಗಳು
ಪ್ರಕಾಶಕರು : ಶೇಠ ಗೋವಿಂದಜಿ ರಾವಜಿ ದೋಶಿ, ಸಖಾರಾಂ ನೇಮಚಂದ್ರ ಗ್ರಂಥಾಲಯ, ಸೊಲ್ಲಾಪೂರ.
ಪ್ರಕಟಣೆ ವರ್ಷ : ೧೯೪೦
ಪುಟಗಳು : ಫೂಲ್ ಸ್ಕೇಪ ಪುಟಗಳು ೮೧೨

ಮೂಲಗ್ರಂಥ : ಮೂಲ ಪಾಕೃತ (ಅರ್ಧಮಾಗಧಿ) ಭಾಷೆಯಲ್ಲಿದ್ದ ಈ ಗ್ರಂಥವನ್ನು ಉಗ್ರದಿತ್ಯಾಚಾರ್ಯರು ಸಕಲ ಜೀವಿಗಳ ಉದ್ದಾರಕ್ಕಾಗಿ ಸಂಸ್ಕೃತದಲ್ಲಿ ರಚಿಸಿದರು. ಇವೆರಡು ಗ್ರಂಥಗಳಲ್ಲಿ ಇರುವ ಭೇದವೆಂದರೆ ಅದು ಭಾಷೆಯದು ಮಾತ್ರ. ಈ ಆಗಮವು ದ್ವಾದಶಾಂಗಗಳ ಒಂದು ಅಂಗವಾಗಿದೆ ಹಾಗೂ ಈ ಗ್ರಂಥ ರಚನೆಯಲ್ಲಿ ಗ್ರಂಥಕರ್ತರ ಯಾವುದೇ ರೀತಿ ಸ್ವಾರ್ಥವೆಂಬುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ತತ್ವವಿವೇಚನೆಯೇ ಈ ಗ್ರಂಥದ ಮೂಲಗುರಿಯಾಗಿದೆ. ಆದ್ದರಿಂದ ಈ ಗ್ರಂಥವು ಸರ್ವಕಾಲಕ್ಕೂ ಪ್ರಮಾಣ ಗ್ರಂಥವಾಗಿದೆ.

ಈ ಗ್ರಂಥದ ಪ್ರಕಟಣೆಯ ಪೂರ್ವದಲ್ಲಿ ಅಲ್ಲಲ್ಲಿಗೆ ದೊರಕಿದ ನಾಲ್ಕು ಹಸ್ತಪ್ರತಿಗಳ ಅವಲೋಕನ ಮಾಡಲಾಗಿದೆ.

೧. ಮೈಸೂರು ಸರಕಾರದ ವಾಚನಾಲಯದಲ್ಲಿ ದೊರಕಿದ ತಾಡಪತ್ರಿಯ ಪ್ರತಿಲಿಪಿ. ಇದು ಚೆನ್ನಾಗಿದ್ದು ಓದಲು ಚೆನ್ನಾಗಿ ಬರುವಂತಿದ್ದರೂ ಲೇಖನ ಶುದ್ಧವಾಗಿರಲಿಲ್ಲ. ಇದಲ್ಲದೇ ಹಿತಾಹಿತಧ್ಯಾಯವು ಲೇಖಕನ ಪ್ರಮಾದದಿಂದ ಸಂಪೂರ್ಣ ಉಳಿದು ಹೋಗಿಬಿಟ್ಟಿದೆ.

೨. ಇನ್ನೊಂದು ತಾಡಪಾತ್ರದಲ್ಲಿ ಬರೆದ ಕನ್ನಡ ಲಿಪಿಯು ಪಂಡಿತ ದೋರ್ಬಲಿ ಶಾಸ್ತ್ರಿಯವರ ಗ್ರಂಥ ಭಂಡಾರದಲ್ಲಿ ಶ್ರವಣಬೆಳಗೊಳದಲ್ಲಿ ದೊರಕಿದ್ದು ಗಾಂಧಿನಾಥಾರಂಗಜಿ ಚೈನೋನ್ನತಿ ಪಂಡಿತ ಕೃಪೆಯಿಂದ ದೊರೆತದ್ದು, ತಾಡಪತ್ರದಲ್ಲಿ ಇದನ್ನು ಬರೆಯಲಾಗಿದ್ದರೂ ಬರವಣಿಗೆ ಅಷ್ಟೊಂದು ಚೆನ್ನಾಗಿರದ್ದಕ್ಕೆ ಸರಿಯಾಗಿ ಓದಲು ಸಾಧ್ಯವಾಗಲಿಲ್ಲ.

೩. ಮುಂಬೈಯ ಎ.ಪ. ಸರಸ್ವತಿ ಭವನದಲ್ಲಿ ದೊರೆತ ಪ್ರತಿಯು ಮೂಲ ಪ್ರತಿಯಾಗಿರಲಿಲ್ಲ, ಹಾಗೂ ಅದರಲ್ಲಿ ತುಂಬಾ ಪ್ರಮಾದಗಳಿದ್ದವು.

೪. ರಾಯಚೂರು ಜಿಲ್ಲೆಯ ಶಿಕ್ಷಕರೊಬ್ಬರಿಂದ ಕಾಗದದಲ್ಲಿ ಬರೆದ ಹಸ್ತಪ್ರತಿಯು ಹಳೆಯದಾಗಿದ್ದರೂ ಶುದ್ಧಗ್ರಂಥವಾಗಿದ್ದಿತು. ಅನೇಕ ಸಂದರ್ಭದಲ್ಲಿ, ಓದುವಾಗ ಅಡೆತಡೆಗಳು ತೋರಿಬಂದರೂ ಅವಕ್ಕೆ ಅದೇ ಗ್ರಂಥದಲ್ಲಿ ಪರಿಹಾರಗಳು ದೊರಕಿದ್ದಕ್ಕೆ ಸುಲಭವಾಯಿತು.

ಬಾಲಚಂದ್ರ ಭಟ್ಟಾರಕರು ಈ ಮೊದಲು ಬರೆದ ಗ್ರಂಥವನ್ನು ನೋಡಿಕೊಂಡು ಈ ಗ್ರಂಥ ರಚಿಸಿದುದಾಗಿ ಹೇಳಿಕೊಂಡು ತಮ್ಮ ಗುರುಗಳ ಗುಣಗೌರವವನ್ನು ಉಲ್ಲೇಖಿಸಿ ಹೀಗೆ ಬರೆದಿದ್ದಾರೆ.

“ಸ್ವಸ್ತಿಶ್ರೀ ಶಾಲಿವಾಹನ ಶಕೆ ವರ್ಷ ೧೩೫೧ರ ಸೌಮ್ಯನಾಮ ಸಂವತ್ಸರದ ಜೇಷ್ಠಶುದ್ಧ ೨ ಗುರುವಾರ ಬಾಲಚಂದ್ರ ಭಟ್ಟಾರಕರು ಬರೆದ ಗ್ರಂಥ. ಇದನ್ನು ಓದಿ ಅವರ ಶಿಷ್ಯರು ಬರೆದುಕೊಂಡರು. ಈ ಪ್ರತಿ ನೋಡಿ ಸ್ವಸ್ತಿಶ್ರೀ ಶಕವರ್ಷ ೧೪೭೬ ವರ್ತಮಾನ ಆನಂದ ನಾಮ ಸಂವತ್ಸರದ ಕಾರ್ತಿಕ ಶುದ್ಧ ೧೫ ಶುಕ್ರವಾರದಲ್ಲೂ, ಶ್ರೀಮತ್‌ಚಾಕುರು ಶುಭಸ್ಥಾನ ಶ್ರೀ ಪಾರ್ಶ್ವಜಿನನಾಥ ಸನ್ನಿಧಿಯಲ್ಲೂ ಇಂದ್ರವಂಶಾನ್ವಯ ರಾಯಚೂರು ವೈದ್ಯ ಚಂದ್ರಪ್ಪಯ್ಯನ ಪುತ್ರ ವೈದ್ಯ ಭುಜಬಲಿ ಪಂಡಿತ ಬರೆದ ಪ್ರತಿ ನೋಡಿ ಶ್ರೀ ಮನ್ನಿರ್ವಾಣ ಮಹೇಂದ್ರಕೀರ್ತಿಜಿ ಇವರು ಬರೆದರು.”

ಈ ಮೇಲ್ಕಂಡ ನಾಲ್ಕು ಪ್ರತಿಗಳನ್ನು ಅವಲೋಕಿಸಿ, ಸಂಶೋಧಿಸಿ ಈ ಕೃತಿಯನ್ನು ಪಂಡಿತ ವರ್ಧಮಾನ ಶಾಸ್ತ್ರಿಗಳು ರಚಿಸಿದ್ದಾರೆ. ಇದರಲ್ಲಿ ಮೂಲದಲ್ಲಿದ್ದ “ಹಿತಾ ಹಿತಾಧ್ಯಾಯ” ವು ಬಿಟ್ಟು ಹೋಗಿದೆ. ಒಳ್ಳೆಯದಿದ್ದ ಎರಡು ಹಸ್ತ ಪ್ರತಿಯನ್ನೂ ತುಂಬ ಕಷ್ಟಪಟ್ಟು ಓದಿದರೂ, ಓದಿಸಿದರೂ ಅವುಗಳಲ್ಲಿ ಅನೇಕ ಪ್ರಮಾದಗಳಿದ್ದುದರಿಂದ ಅದಕ್ಕೊಂದು ರೂಪಕೊಡಲು ಸಾಧ್ಯವಾಗದೇ ಹೋದುದಕ್ಕೆ ಆ ಅಧ್ಯಾಯವು ಕೈ ಬಿಟ್ಟು ಹೋಗಿದೆ. ಆ ಅಧ್ಯಾಯದ ಗೊತ್ತಾದ ಕೆಲ ವಿಷಯವನ್ನು ಸಂಗ್ರಹಿಸಿ ಕೊನೆಯಲ್ಲಿ ಕೊಡಲಾಗಿದೆ.

ಗ್ರಂಥದ ಪ್ರಾಮಾಣಿಕತೆ : ಜೈನಾಗಮಗಳಲ್ಲಿ ಪ್ರಾಮಾಣಿಕತೆಯು ಎಲ್ಲೆಲ್ಲೂ ಪ್ರತಿಪಾದಿತವಾಗಿದೆ. ಇಲ್ಲಿ ಸ್ವರಚನೆಗೆ ಯಾವ ಸ್ಥಾನವೂ ಇಲ್ಲ. ಸರ್ವಜ್ಞ ಪರಮೇಷ್ಠಿಗಳ ಮುಖಾರವಿಂದರಿಂದ ಹೊರಟ ದಿವ್ಯಧ್ವನಿಯನ್ನು ಚೆನ್ನಾಗಿ ಕೇಳಿ ತಿಳಿದ ಗಣಧರ ಪರಮೇಷ್ಠಿಗಳು ಆಚಾರಾಂಗ ಮೊದಲಾದ ೧೨ ಭೇದಗಳಲ್ಲಿ ಇದನ್ನು ನಿರೂಪಣ ಮಾಡಿದ್ದಾರೆ. ಅವುಗಳಲ್ಲಿ ೧೨ ಅಂಗಗಳ ೧೪ ಉತ್ತರ ಭೇದಗಳಿವೆ. ಆ ೧೦ ಭೇದಗಳಲ್ಲಿ ‘ಪ್ರಾಣಾವಾಯ’ ಎಂಬ ಭೇದವಿದೆ. ಅದರಲ್ಲಿ ಕಾಮ, ತದ್ಗತದೋಷ ಹಾಗೂ ಚಿಕಿತ್ಸಾದಿ ಅಷ್ಟಾಂಗ ಆಯುರ್ವೇದದ ವರ್ಣನೆಯು ವಿಸ್ತಾರವಾಗಿದೆ. ಪ್ರಥ್ವಿ ಆದಿಪಂಚ ಮಹಾಭೂತಗಳ ಕ್ರಿಯೆ, ವಿಷಯುಕ್ತ ಕಡತದಿಂದಾಗುವ ಪರಿಣಾಮ, ಹಾಗೂ ಚಿಕಿತ್ಸೆ, ಪ್ರಾಣಾಪಾನಗಳ ವಿಭಾಗ ಹೀಗೆ ಅನೇಕ ವಿಭಾಗಗಳಿದ್ದು ಇದಕ್ಕೆ ‘ಪ್ರಾಣಾವಾಯ ಪೂರ್ವ ಶಾಸ್ತ್ರ’ ಎನ್ನತ್ತಾರೆ ಈ ಗ್ರಂಥದ ಆಧಾರದ ಮೇಲೆಯೇ ಉಗ್ರದಿತ್ಯಾಚಾರ್ಯರು ಈ ‘ಕಲ್ಯಾಣಕಾರಕ’ ಗ್ರಂಥವನ್ನು ರಚಿಸಿದ್ದಾರೆ ಎಂದು ಈ ಗ್ರಂಥಕರ್ತರು ಗ್ರಂಥದ ಮಧ್ಯದಲ್ಲಿ ಅಲ್ಲಲ್ಲಿಗೆ ಸ್ಪಷ್ಟಪಡಿಸಿದ್ದು ಗ್ರಂಥದ ಕೊನೆಯಲ್ಲೂ ಹಾಗೆಂದು ಉಲ್ಲೇಖಿಸಿದ್ದಾರೆ.

ಕಲ್ಯಾಣ ಕಾರಕ ಗ್ರಂಥದಹುಟ್ಟು : ಗ್ರಂಥದ ಪ್ರಾರಂಭದಲ್ಲಿ ಆಚಾರ್ಯರು ಆಯುರ್ವೇದ ಶಾಸ್ತ್ರದ ಉತ್ಪತ್ತಿ ಹೇಗಾಯಿತು ಎಂಬುದರ ಬಗೆಗೆ ಒಂದು ಸುಂದರವಾದ ಇತಿಹಾಸವನ್ನು ಕೊಟ್ಟಿದ್ದಾರೆ. ಇದನ್ನು ತಿಳಿದರೆ ಈ ಗ್ರಂಥದ ಪ್ರಾಮಾಣಿಕತೆ ಹಾಗೂ ಅದರ ಹಿಂದೆ ಅಡಿಗಿರುವ ಶ್ರದ್ಧೆ ಅರ್ಥವಾಗುತ್ತದೆ.

ಶ್ರೀ ವೃಷಭನಾಥ ತೀರ್ಥಂಕರರ ಸಮವಸರಣದಲ್ಲಿ ಭರತ ಚಕ್ರವರ್ತಿ ಮೊದಲಾದ ಭವ್ಯರು ಆಗಮಿಸಿ ಭಗವಂತನಲ್ಲಿ ಸವಿನಯವಾಗಿ ವಂದಿಸಿ ಹೀಗೆ ಪ್ರಾರ್ಥಿಸುತ್ತಾರೆ ‘ಹೇ ಸ್ವಾಮಿನ್ ಈ ಮೊದಲು ಭೋಗಕಾಲದಲ್ಲಿ ಮನುಷ್ಯನು ಕಲ್ಪವೃಕ್ಷಗಳಿಂದ ಉತ್ಪನ್ನವಾದ ಅನೇಕ ಪ್ರಕಾರಗಳ ಭೋಗೋಪಯೋಗಿ ಸಾಮಗ್ರಿಗಳಿಂದ ಸುಖವನ್ನು ಭೋಗಿಸುತ್ತಿದ್ದನು. ಇಲ್ಲಿ ಸಾಕಷ್ಟು ಸುಖಭೋಗಿಸಿ ತದನಂತರ ಸ್ವರ್ಗದಲ್ಲಿ ಆಗಮಿಸಿ ಅಲ್ಲಿಯೂ ಸುಖಭೋಗಿಸುತ್ತಿದ್ದರು. ಅಲ್ಲಿಂದ ಪುನಃ ಮನುಷ್ಯ ಭವಕ್ಕೆ ಬಂದು ಅನೇಕ ಪುಣ್ಯಕಾರ್ಯಗಳನ್ನು ಮಾಡಿ ತಮ್ಮ ಇಚ್ಛೆಯ ಪ್ರಕಾರ ಎರಡು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದರು. ಹೇ ಭಗವಂತರೇ ಇದೀಗ ಭಾರತ ವರ್ಷಕ್ಕೆ ಕರ್ಮಭೂಮಿಯ ರೂಪ ದೊರಕಿದೆ. ಇದು ಚರಮ ಶರೀರಯಾಗಿದ್ದು ಉಪಪಾದ ಜನ್ಮದಲ್ಲಿ ಜನ್ಮ ತೆಗೆದುಕೊಳ್ಳುವವರಗಿದ್ದು ಅವರಿಗೆ ಈಗಲೂ ಅಪಮರಣವೆಂಬುದಿಲ್ಲ. ಅವರಿಗೆ ದೀರ್ಘ ಆಯುಷ್ಯ ಪ್ರಾಪ್ತಿವಾಗುವುದು. ಇನ್ನು ಕೆಲವರಿಗೆ ಆಯುಷ್ಯ ಪ್ರಮಾಣ ಕಡಿಮೆ ಇರುವುದು, ಅವರಿಗೆ ವಾತ, ಪಿತ್ತ, ಕಫಾದಿ ದೋಷಗಳ ಉದ್ರೇಕವಾಗುತ್ತಿರುವುದು. ಅದರಿಂದ ಕೆಲವೊಮ್ಮೆ ಶೀತ, ಕೆಲವೊಮ್ಮೆ ಉಷ್ಣ ಹವಾಮಾನದಿಂದ ಕಾಲ ಕ್ರಮೇಣ ಮಿಥ್ಯಾಹರ ವಿಹಾರಗಳನ್ನು ಸೇವನೆ ಮಾಡುವುದರಿಂದ ರೋಗಗಳು ಹುಟ್ಟಿಕೊಳ್ಳುವವು. ಈ ಜನ ಎಂಥ ಆಹಾರ ಸೇವಿಸಬೇಕು, ಎಂಥ ಆಹರಗಳನ್ನು ಸೇವಿಸಬಾರದು ಎಂದು ನಮಗೆ ತಿಳಿಯದು. ಕಾರಣ ತಾವು ದಯವಿಟ್ಟು ಸ್ವಾಸ್ಥ್ಯ ರಕ್ಷಣೆಯ ಉಪಾಯಗಳನ್ನು ತಿಳಿಸಿರಿ -ಹೀಗೆಂದು ಭರತನು ಪ್ರಾರ್ಥಿಸಿದಗ ಭಗವಾನ್ ಆದಿನಾಥರು ಲೋಕ ಕಲ್ಯಾಣರ್ಥವಾಗಿ ತಮ್ಮ ದಿವ್ಯಧ್ವನಿಯಿಂದ ಪುರುಷನ ಲಕ್ಷಣ, ಶರೀರ, ಶರೀರದ ಭೇದ, ದೋಷೋತ್ಪತ್ತಿ, ಚಿಕಿತ್ಸೆ, ಕಾಲ ಭೇದ ಮೊದಲಾದ ಎಲ್ಲ ವಿಷಯಗಳನ್ನು ವಿಸ್ತಾರವಾಗಿ ಹೇಳಿದರು. ತದನಂತರ ಶಿಷ್ಯ ಗಣಧನ ಹಾಗೂ ತದನಂತರ ತೀರ್ಥಂಕರು ಅದೇ ರೀತಿಯಲ್ಲಿ ಆಯುರ್ವೇದ ಕಾರ್ಯ ಮಾಡಿದರು. ಈ ಶಾಸ್ತ್ರವೊಂದು ಸಮುದ್ರ ದೋಪಾಧಿಯಲ್ಲಿದೆ. ಗಂಭೀರವಾಗಿದೆ. ಅದರ ಒಂದು ಬಿಂದುವಿನ ಪ್ರಮಾಣದಲ್ಲಿ ಈ ಕಲ್ಯಾಣಕಾರಕ ಗ್ರಂಥವಿದೆ. ಲೋಕ ಕಲ್ಯಾಣವನ್ನುಂಟು ಮಾಡುವುದರಿಂದ ಇದಕ್ಕೆ ‘ಕಲ್ಯಾಣಕಾರಕ’ ಎಂದು ಹೆಸರಿಲಾಗಿದೆ. ಇದರಲ್ಲಿ ಸ್ವಾಸ್ಥ್ಯ ರಕ್ಷಣೆ ಹಾಗೂ ರೋಗ ಪರಿಹಾರಗಳ ವಿಚಾರವಾಗಿ ವಿವರಣೆ ಇದೆ.

ಗ್ರಂಥದ ಉದ್ದೇಶ : ಈ ಮೊದಲೇ ಹೇಳಿದಂತೆ ವೈದ್ಯಶಾಸ್ತ್ರ ರಚನೆಯ ಉದ್ಧೇಶ ಲೋಕೋಪಕಾರ. ಈ ಗ್ರಂಥದ ರಚನೆಯಲ್ಲಿ ಮುಖ್ಯವಾಗಿ ಎರಡು ಪ್ರಕಾರದ ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ. ಆರೋಗ್ಯವಂತರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಹಾಗೂ ಎರಡನೆಯದು ರೋಗಿಗಳಾದವರು ರೋಗಮುಕ್ತರಾಗಿ ಮತ್ತೆ ಆರೋಗ್ಯಭಾಗ್ಯ ಪಡೆಯಲಿಕ್ಕಾಗಿ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಕ್ಷೇಪವಾಗಿ ಈ ಗ್ರಂಥದಲ್ಲಿ ಹೇಳಲಾಗಿದೆ.

ಲೋಕೋಪಕಾರಣಾರ್ಥಮಿದಂ ಹಿ ಶಾಸ್ತ್ರಂ |
ಶಾಸ್ತ್ರ ಪ್ರಯೋಜನಮಪಿ ದ್ವಿವಿಧಂ ಯಥಾವತ್‌ ||
ಸ್ವಸ್ಥಸ್ಯ ರಕ್ಷಣ ಮಥಾಮಯಮೋಕ್ಷಣಂ |
ಸಂಕ್ಷೇಪತಸ್ಸಕಲಮೇವ ನಿರೂಪ್ಯತೇsತ್ರ ||
(ಕಲ್ಯಾಣ ಕಾರಕ. ಅ-೧, ಶ್ಲೋಕ.೨೪)

ಕಾಲ : ಉಗ್ರದಿತ್ಯಾಚಾರ್ಯರು ಪ್ರಸ್ತುತ ಗ್ರಂಥದಲ್ಲಿ ಪೂಜ್ಯಪಾದ, ಸಮಂತ್ರ ಭದ್ರ, ಪಾತ್ರಸ್ವಾಮಿ, ಸಿದ್ಧದೇವ, ದಶರಥಗಳು, ಮೇಘನಾದ, ಸಿಂಹಸೇನ – ಈ ಮೊದಲಾದ ಆಚಾರ್ಯರುಗಳ ಉಲ್ಲೇಖಮಾಡಿದ್ದಾರೆ. ಇವರಿಂದ ಇವರು ಮೇಲ್ಕಾಣಿಸಿದ ಪ್ರಭೃತಿಗಳ ನಂತರದವರು ಎಂಬ ಮಾತು ಸ್ಪಷ್ಟವಾಗುತ್ತದೆ. ಈ ಎಲ್ಲ ಆಚಾರ್ಯರುಗಳು ಆರನೆಯ ಶತಮಾನಕ್ಕೂ ಮೊದಲು ಆಗಿಹೋದವರು ಎಂದರ್ಥವಾಗುತ್ತದೆ.

ಆಯುರ್ವೇದ ಗ್ರಂಥವಾದ ಅಷ್ಟಾಂಗ ಹೃದಯದ ಕರ್ತೃ. ವಾಗ್ಬಟನ ಕಾಲದಲ್ಲಿಯೇ ಈ ಗ್ರಂಥ (ಕಲ್ಯಾಣಕಾರಕ)ರಚನೆಯಾದ ಸಾಧ್ಯತೆ ಇದೆ. ಏಕೆಂದರೆ ಗ್ರಂಥ ಶೈಲಿ, ಭಾಷೆ, ವಿಷಯ ಮಂಡನ ವಿಧಾನ, ತತ್ವ, ಪ್ರಾಣಾಲಿಗಳು- ಮುಂತಾದ ಅಂಶಗಳೆಲ್ಲ ಒಂದೇ ತೆರನಾಗಿವೆ. ಕಾರಣ ಈ ಗ್ರಂಥವು ವಾಗ್ಭಟನ ನಂತರ ರಚಿತವಾಗಿದೆ ಎಂದು ಖಂಡಿತವಾಗಿ ಹೇಳಬಹುದು.

ಉಗ್ರದಿತ್ಯಾಚಾರ್ಯರು ತಮ್ಮ ಗ್ರಂಥದ ಕೊನೆಯಲ್ಲಿ ತಾವು ನೃಪತುಂಗ ಅರಸರ ಆಸ್ಥಾನದಲ್ಲಿ ಮಾಂಸಹಾರವನ್ನು ಖಂಡಿಸಿ ಶಾಖಾಹಾರದ ಮಹತ್ವವನ್ನು ಸಾರಿದುದಾಗಿ ಹೇಳಿದ್ದಾರೆ. ಆದ್ದರಿಂದ ಇವರು ನೃಪತುಂಗನ ಕಾಲದಲ್ಲಿಯೇ ಆಗಿ ಹೋಗಿದ್ದಾರೆ. (ಕ್ರಿ.ಶ.೮೧೫ ರಿಂದ ೮೭೭) ಎಂದು ನಿರ್ಧರಿಸಬಹುದಾಗಿದೆ. ಇತಿಹಾಸಕಾರರು ಕೂಡ ಉಗ್ರಿದಿತ್ಯಾಚಾರ್ಯರ ಕಾಲವು ೮ ರಿಂದ ೯ನೇ ಶತಮಾನವೆಂದು ತಿಳಿಸಿದ್ದಾರೆ.

ಉಗ್ರದಿತ್ಯಾಚಾರ್ಯರು ತಮ್ಮ ವಿಶೇಷ ಪರಿಚಯವನ್ನು ಗ್ರಂಥದಲ್ಲಿ ಎಲ್ಲೆಲ್ಲೂ ಕೊಟ್ಟಿಲ್ಲ. ಅವರ ವಿದ್ವತ್ತು, ಮತ್ತು ವಿವೇಚನ ಸಾಮರ್ಥ್ಯಗಳಿಂದ ಈ ಗ್ರಂಥವನ್ನು ಅವರೇ ರಚಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇವರ ಗುರುಗಳಾದ ಶ್ರೀನಂದಿ, ಗ್ರಂಥನಿರ್ಮಾಣವನ್ನು ತ್ರಿಕಲಿಂಗ ಪ್ರದೇಶದಲ್ಲಿರುವ ರಾಮಗಿರಿ ಎಂಬ ಪರ್ವತ ಪ್ರದೇಶದಲ್ಲಿರುವ ಜಿನ ಜೈತ್ಯಾಲಯದಲ್ಲಿ ಮಾಡಿದ್ದಾರೆ. ಇವರು ಆ ಕಾಲದ ಒಬ್ಬ ಪ್ರಭಾವೀ ವೈದ್ಯಕೀಯ ಗ್ರಂಥಕರ್ತರಾಗಿದ್ದರು ಎಂಬ ಮಾತಿಗೆ ಎರಡಿಲ್ಲ.

ಅಹಿಂಸಾವಾದ: ಗ್ರಂಥದ ಕೊನೆ ಪ್ರಕರಣದಲ್ಲಿ ಆಚಾರ್ಯರು ಮದ್ಯ, ಮಾಂಸಾದಿ ಪದಾರ್ಥಗಳನ್ನು ಔಷಧಿ ಇಲ್ಲವೇ ಆಹಾರ ರೂಪದಲ್ಲಿ ತೆಗೆದುಕೊಳ್ಳಬಾರದೆಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಈ ಮಾತಿನಿಂದ ಇವರೊಬ್ಬ ಅಪೂರ್ವ ಅಹಿಂಸಾ ಧರ್ಮ ಪಾಲಕರಾಗಿದ್ದರು ಎಂಬ ಮಾತು ಸ್ಪಷ್ಟವಾಗುತ್ತದೆ. ಪ್ರತಿ ಜೀವಿಗೂ ಜೀವಿಸುವ ಹಕ್ಕಿದೆ. ಅದನ್ನು ಹಿಂಸಿಸಿ ಕೊಂದು ಅದರ ರಕ್ತ-ಮಾಂಸಗಳನ್ನು ಆಹಾರ ಔಷಧಿ ರೂಪವಾಗಿ ಉಪಯೋಗಿಸಬಾರದೆಂಬ ಮಾತನ್ನು ಅನೇಕ ದೇಶೀಯ ಪಾಶ್ಚಿಮಾತ್ಯ ಪೌರ್ವಾತ್ಯ ವೈದ್ಯ ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ. ಗಿಡ ಮೂಲಿಕೆಗಳಲ್ಲಿ ಸ್ವಾಸ್ಥ್ಯವನ್ನು ರಕ್ಷಿಸುವ ರೋಗಗಳನ್ನು ಪರಿಹರಿಸುವ ಪುನಹ ಸ್ವಾಸ್ಥ್ಯ ಸ್ಥಾಪನೆ ಮಾಡುವ ಸಾಮರ್ಥ್ಯ ಇರುವಾಗ ಈ ಜೀವಿಗಳನ್ನೇಕೆ ಕೊಲ್ಲಬೇಕು? ಇದೇ ವಾದವನ್ನು ಅವರು ನೃಪತುಂಗ ಅರಸರ ಸಭೆಯಲ್ಲಿ ಮಂಡಿಸಿದುದಾಗಿ ತಿಳಿದುಬರುತ್ತದೆ.

ಆಯುರ್ವೇದದ ಎಲ್ಲ ಗ್ರಂಥಗಳಲ್ಲಿ ಆಹಾರ ಔಷಧಿಗಳಿಗಾಗಿ ಪ್ರಾಣಿಜ ಪದಾರ್ಥಗಳನ್ನು ಹೇಳಿದ್ದಾರೆ. ಇದಕ್ಕೆ ಬೇರೆ ವೈದ್ಯಕೀಯ ಶಾಸ್ತ್ರಗಳೂ ಪುಷ್ಟಿಕೊಟ್ಟಿವೆ, ನಿಸರ್ಗ ಚಿಕಿತ್ಸೆಯಲ್ಲಿ ಮಾತ್ರ ಪ್ರಾಣಿಜ ಪದಾರ್ಥಗಳನ್ನು ಎಲ್ಲಿಯೂ ಆಹಾರ ಔಷಧಿಗಾಗಿ ಹೇಳಿಲ್ಲ. ವೈದ್ಯಕೀಯದಲ್ಲಿ ಅಹಿಂಸಾವಾದವನ್ನು ಪ್ರತಿಪಾದಿಸಿದವರೆಂದರೆ ಜೈನರು ಮಾತ್ರ ಎಂದು ಹೇಳಬಹುದು.

ಅಷ್ಟಾಂಗಗಳು: ಈ ಕಲ್ಯಾಣಕಾರಕದಲ್ಲಿ ಆಯುರ್ವೇದ ಶಾಸ್ತ್ರದಲ್ಲಿ ವಿಭಾಗಿಸಿದಂತೆ ಎಂಟು ವಿಧದ ಚಿಕಿತ್ಸಾಂಗಗಳ ಬಗ್ಗೆ ವಿವರವಾಗಿ ಹೇಳಲಾಗಿದೆ.

ಕಲ್ಯಾಣಕಾರಕ ವೈಶಿಷ್ಟ್ಯ

ಈ ಗ್ರಂಥದ ರಚನೆ ತುಂಬ ಸುಂದರವಾಗಿದೆ. ಈ ಮೊದಲು ಕೇಳಿರದ ರೋಗಗಳಿಗೆ ಅನೇಕ ಚಿಕಿತ್ಸಾ ಪ್ರಯೋಗಗಳನ್ನು ಇದರಲ್ಲಿ ವಿವರಿಸಲಾಗಿದೆ.

ಯಾವಾಗಲೂ ಧ್ಯಾನ, ಅಧ್ಯಯನ ಹಾಗೂ ಯೋಗಾಭ್ಯಾಸಗಳಲ್ಲಿ ನಿರತವಾದ ಮಹರ್ಷಿಗಳಿಗಾಗಿ ಈ ಗ್ರಂಥವನ್ನು ರಚಿಸಿರುವುದರಿಂದ ಕೆಲ ಮಹತ್ವದ ಅಂಶಗಳಿರುವುದು ಸ್ವಾಭಾವಿಕ. ಇದನ್ನು ವೈದ್ಯರು ಸಂಶೋಧಿಸಿ, ಪ್ರಯೋಗಿಸಿ ಜನಕಲ್ಯಾಣಕ್ಕಾಗಿ ಬಳಸಬೇಕಾದುದು ಅವಶ್ಯ. ಇದರಿಂದ ಆಯುರ್ವೇದದ ಉದ್ಧಾರವೂ ಆದಂತಾಗುತ್ತದೆ.

ಈ ಗ್ರಂಥದಲ್ಲಿ ಪ್ರತಿಯೊಂದು ರೋಗದ ನಿದಾನ(ಕಾರಣ, ಪೂರ್ವರೂಪ (ರೋಗ ಬರುವುದಿಕ್ಕಿಂತ ಮೊದಲು ಕಂಡುಬರುವ ಲಕ್ಷಣಗಳು) ರೂಪ (ರೋಗದ ಪೂರ್ಣ ಲಕ್ಷಣಗಳು) ಸಂಪ್ರಾಪ್ತಿ (ರೋಗವು ಹೇಗೆ ಬಂದಿತೆಂಬುದನ್ನು ಗೊತ್ತುಪಡಿಸಿಕೊಳ್ಳುವುದು) ಚಿಕಿತ್ಸೆ (ರೋಗವನ್ನು ಗುಣಪಡಿಸಲು ಅನುಸರಿಸಬೇಕಾದ ಚಿಕಿತ್ಸಾಕ್ರಮಗಳು) ಹಾಗೂ ರೋಗ ಸಾಧ್ಯಾಸಾಧ್ಯಾತ್ವ (ರೋಗಿಗೆ ಬಂದ ರೋಗಿಯು ಗುಣವಾಗುವುದೋ ಇಲ್ಲವೋ ಎಂಬುದರ ವಿವರ) ಹೀಗೆ ಎಲ್ಲ ವಿಷಯಗಳ ಬಗೆಗೆ ಸವಿಸ್ತಾರ ವಿವರ ಇದೆ. ರಸಾಯನಗಳು ಹಾಗೂ ಔಷಧಿ ಕಲ್ಪಗಳನ್ನು ಸಿದ್ಧಪಡಿಸಿಕೊಳ್ಳುವ ವಿಧಾನಗಳನ್ನು ಹೇಳಲಾಗಿದೆ.

ಈ ಗ್ರಂಥದ ಮತ್ತೊಂದು ವಿಶೇಷತೆ ಎಂದರೆ ಆರೋಗ್ಯ ರಕ್ಷಣೆ ಹಾಗೂ ಚಿಕಿತ್ಸಾ ಸಂದರ್ಭಗಳಲ್ಲಿ ಎಲ್ಲಿಯೂ ಜೇನುತುಪ್ಪ, ಮದ್ಯ ಹಾಗೂ ಮಾಂಡಿಲ ದ್ರವ್ಯಗಳನ್ನು (ಪ್ರಾಣಿಜನ್ಯ) ಉಪಯೋಗಿಸಲು ಹೇಳಿಲ್ಲ. ಈ ಮೂರು ಹಿಂಸಾಜನ್ಯವಾಗಿವೆ. ಅಹಿಂಸಾ ಪರಿವೋ ಧರ್ಮವೆಂದು ಪ್ರತಿಪಾದಿಸಿದ ಈ ಆಚಾರ್ಯರು ಎಲ್ಲಿಯೂ ಹಿಂಸೆಯನ್ನು ಹೇಳಿಲ್ಲ. ಚಿಕಿತ್ಸೆಯಲ್ಲಿ ಇವುಗಳ ಪಾತ್ರ ಅಂತಹ ಮಹತ್ವದ್ದೇನೂ ಅಲ್ಲ. ಇವುಗಳ ಬದಲಾಗಿ ಅಷ್ಟೇ ಶಕ್ತಿಯುಳ್ಳ ಗಿಡಮೂಲಿಕೆ, ರಸೌಷಧಿಗಳನ್ನು ಬಳಸಬಹುದಾಗಿದೆ. ಇದರಿಂದ ಪಶು ಪಕ್ಷಿಪ್ರಾಣಿಗಳ ರಕ್ಷಣೆಯಾದಂತಾಗುತ್ತದೆ.

ಈ ಗ್ರಂಥದ ೭ನೇ ಅಧ್ಯಾಯದಲ್ಲಿ ಚಿಕಿತ್ಸೆಯು ಪಾಪಕರ್ಮಗಳನ್ನು ದೂರ ಮಾಡಿ ಧರ್ಮವನ್ನು, ಬೆಳೆಸುವುದು ಎಂದಿದ್ದಾರೆ. ರೋಗಿ ಚಿಕಿತ್ಸೆ ಮಾಡುವುದರಿಂದ ವೈದ್ಯನಿಗೆ ಇಹಲೋಕ ಪರಲೋಕಗಳಲ್ಲಿ ಸುಖ ದೊರಕುವುದು. ಈ ಚಿಕಿತ್ಸೆಯನ್ನು ಯಾವುದೇ ತರಹದ ಕರ್ಮ,ಮೋಹ, ಇಲ್ಲವೇ ಲೋಭವಶರಾಗಿ ಮಾಡಬಾರದು. ಚಿಕಿತ್ಸಿಸುವಾಗ ಕೇವಲ ರೋಗವನ್ನು ಗಮನಿಸಿ ಚಿಕಿತ್ಸಿಸಬೇಕೇ ಹೊರತು ರೋಗಿಯ ಸಂಬಂಧ, ಹಣ, ಕೀರ್ತಿಗಳನ್ನು ನೋಡಬಾರದು. ಯಾವುದೇ ರೀತಿಯ ಮನೋವಿಕಾರಗಳನ್ನು ಹೊಂದಿರಬಾರದು. ನಿಸ್ಪೃಹರಾಗಿ ವೈದ್ಯನು ಚಿಕಿತ್ಸಿಸಿದರೆ ಅದು ವ್ಯರ್ಥ ಹೋಗುವುದಿಲ್ಲ. ಸಫಲತೆ ಸಿಕ್ಕೇ ಸಿಕ್ಕುವುದು ಎಂದು ಹೇಳಿದ್ದಾರೆ.

ವೈದ್ಯನು ಸತ್ಯನಿಷ್ಠ, ಧೀರ, ಕ್ಷಮಾಸಂಪನ್ನ, ಹಗುರ ಕೈವುಳ್ಳವ, ಔಷಧಿಗಳನ್ನು ಸ್ವತಃ ತಯಾರಿಸುವ ಸಾಮರ್ಥ್ಯವುಳ್ಳವನು. ಇತರರು ಮಾಡಿದ ಚಿಕಿತ್ಸೆಯನ್ನು ನೋಡಿ ಅನುಭವ ಪಡೆದವನೂ, ಶಾಸ್ತ್ರಗಳನ್ನು ಚೆನ್ನಾಗಿ ಮನನ ಮಾಡಿಕೊಂಡವನೂ ಆಗಿರಬೇಕೆಂದು ಹೇಳಿದ್ದಾರೆ.

ರೋಗಿಯಾದವನು ತನ್ನ ತಾಯಿ ತಂದೆ, ಅಣ್ಣ-ತಮ್ಮ, ಅಕ್ಕ-ತಂಗಿಯರ ಮೇಲೆ ಇಟ್ಟ ವಿಶ್ವಾದಂತೆ ವೈದ್ಯನ ಮೇಲೂ ವಿಶ್ವಾಸವಿರಬೇಕಾಗುತ್ತದೆ. ಯಾವುದೇ ವಿಷಯವನ್ನು ವೈದ್ಯನ ಮುಂದೆ ರೋಗಿ ಮುಚ್ಚಿಡಬಾರದು. ವೈದ್ಯರೂ ಕೂಡ ರೋಗಿಗೆ ವಂಚನೆ ಮಾಡಬಾರದು. ಹಾಗೂ ಮಾಯಾಚಾರದ ವಿಷಯಗಳನ್ನು ಅನುಸರಿಸಬಾರದು.

ಈ ಗ್ರಂಥದಲ್ಲಿ ವಿಶೇಷವಾಗಿ ಎಂದರೆ ಮೂಢ ಗರ್ಭಚಿಕಿತ್ಸೆ, ಉಪದಂಶ (syphilis) ಮಸೂರಿಕಾ (ಮೈಲೆಬೇನೆ -Small pox) ಆನೆಕಾಲು ರೋಗ (Elephentis) ಅರ್ಬುದರೋಗ (Tumour/maligancy) ಅರ್ಧಾವಭೇದ (Migrane) ಹೃದ್ರೋಗ, ಉನ್ಮಾದ, ಅಪಸ್ಮಾರ, ವಿಷ ಸಂಬಂಧಿತ ರೋಗಗಳ ಚಿಕಿತ್ಸೆ, ಕ್ಷಾರಕರ್ಮ (Appling strong alkoloids)ದ ಅಗ್ನಿಕರ್ಮ (cauterization) ಶಸ್ತ್ರ ಚಿಕಿತ್ಸೆ (surgery) ಮುಂತಾದ ವಿಷಯಗಳ ಬಗೆಗೆ ವರ್ಣನೆ ಇದೆ. ಇದಲ್ಲದೇ ಹಳೇ ರೋಗಗಳಿಗೆ ಮಾಡಲ್ಪಡುವ ಪಂಚಕರ್ಮ ಚಿಕಿತ್ಸೆ, ನಪುಂಸಕ ಚಿಕಿತ್ಸೆ, ರಸಾಯನಗಳು -ಹೀಗೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ.

ಈ ಗ್ರಂಥದ ಕೊನೆಯಲ್ಲಿ ಹೇಳಿದ ಹಿತಾಹಿತಾಧ್ಯಾಯವೂ ವೈದ್ಯಶಾಸ್ತ್ರಕ್ಕೊಂದು ಮಹತ್ವದ ಕೊಡುಗೆ. ಇದೊಂದು ದ್ವಿತೀಯ ಧರ್ಮಶಾಸ್ತ್ರದಂತಿದೆ. ವ್ಯಕ್ತಿಯ ಹಿತ ಅಹಿತಗಳಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಇಲ್ಲಿ ಹೇಳಲಾಗಿದೆ.

ಶಸ್ತ್ರ, ಚಿಕಿತ್ಸೆ ಕುರಿತ ಸವಿಸ್ತಾರ ವರ್ಣನೆ ಈ ಗ್ರಂಥದಲ್ಲಿದೆ. ಕಾಯ ಚಿಕಿತ್ಸೆ (Medicine)ಯಲ್ಲಿ ವಿಶೇಷವಾಗಿ ರಸೌಷಧಗಳನ್ನು ಮಾತ್ರ ಶಾಸ್ತ್ರಕಾರರು ಹೇಳಿರುವುದರಿಂದ ಹಿಂದಿನಿಂದ ಪರಂಪರೆಯಾಗಿ ಬಂದ ವನಸ್ಪತಿ ಔಷಧಿಗಳಿಗಿಂತ ಇವು ಅಲ್ಪ ಪ್ರಮಾಣದಲ್ಲಿ, ಸೂಕ್ಷ್ಮವೂ, ತೀವ್ರ ಪರಿಣಾಮಕಾರಿಗಳು, ರುಚಿ ಇಲ್ಲದವು, ಬಹಳ ದಿವಸಗಳವರೆಗೆ ತೆಗೆದಿಟ್ಟರೂ ಕೆಡದಂಥವುಗಳಾದ್ದರಿಂದ ಪ್ರಸಿದ್ಧಿಗೆ ಬರತೊಡಗಿ ಶಸ್ತ್ರ ಚಿಕಿತ್ಸಾ ಪರಂಪರೆಗೆ ಕ್ರಮೇಣ ಧಕ್ಕೆಯಾಗುತ್ತ ಬಂದಿತೆಂಬ ಒಂದು ಅಪವಾದವೂ ಇದೆ. ಈ ಗ್ರಂಥದಲ್ಲಿ ಒಂದು ಸುಸಂಬದ್ಧವಾದ ವಿಷಯಗಳ ಪ್ರಸ್ತಾಪವಿಲ್ಲವೆನ್ನಬಹುದು. ಅಧ್ಯಾಯಗಳು ಕ್ರಮವಾಗಿಲ್ಲ ಹಾಗೂ ಒಂದು ಅಧ್ಯಾಯದಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸುವಾಗ ಮಧ್ಯೆ ಮಧ್ಯೆ ವಿಷಯಗಳನ್ನು ಹೇಳುತ್ತ ಹೋಗಿರುವುದು ಕಂಡುಬರುತ್ತದೆ. ಹೀಗಾಗಿ ಓದುಗರಿಗೆ ಒಂದೇ ಕಡೆಗೆ ಕ್ರಮಬದ್ಧವಾಗಿ ವಿಷಯಗಳು ಸಿಕ್ಕುವುದಿಲ್ಲ.

ಈ ಗ್ರಂಥದಲ್ಲಿ ಧರ್ಮದ ವಿಚಾರಗಳು ಅಲ್ಲಲ್ಲಿಗೆ ಪ್ರಸ್ತಾಪವಾಗಿದ್ದರೂ, ಸ್ತ್ರೀ ಆರೋಗ್ಯ,ಮು‌ಟ್ಟುನ ತೊಂದರೆಗಳು, ಗರ್ಭಧಾರಣೆ ಹಾಗೂ ಬೆಳವಣಿಗೆ ಮೊದಲಾದ ವಿಷಯಗಳಲ್ಲದೇ ಮೈಥುರ, ಕಾಮೋತ್ಪತ್ತಿ, ನಪುಂಸಕತೆ ನಿವಾರಣೋಪಾಯಗಳು ಹೀಗೆ ಅನೇಕ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ.

ಆತ್ಮನ ಸ್ವರೂಪ, ಆತ್ಮನ ಕರ್ತವ್ಯ ಹಾಗೂ ಸ್ವಭಾವ,ನಿತ್ಯ ಅನಿತ್ಯಾದಿ ಸ್ವರೂಪ, ಆತ್ಮನ ಉಪಯು‌ಕ್ತ ಸ್ವರೂಪವು ಚಿಕಿತ್ಸೆಯಲ್ಲಿ ಅತ್ಯವಶ್ಯವಾದ ಅಂಶ, ಕರ್ಮಗಳ ಉದಯ ಮುಂತಾದ ವಿಷಯಗಳು ಪ್ರಸ್ತಾಪವಿದೆ. ಆದರೆ ಆತ್ಮನ ನೆರಳು, ದೇಹದಲ್ಲಿರುವ ‘ಮನಸ್ಸಿನ’ ವಿಚಾರಗಳು ವಿಶೇಷ ಪ್ರಸ್ತಾಪವಾಗಿಲ್ಲ. ಆದರೆ ಮನೋರೋಗಗಳಾದ ಅಪಸ್ಮಾರ (Epilepsy), ಉನ್ಮಾದಗಳ (Mania) ಬಗೆಗೆ ವಿವರಣೆ ಇದೆ. ಗ್ರಹಭಾಧೆಗಳ ಬಗೆಗೆ ಪ್ರತ್ಯೇಕವಾದ ಪ್ರಸ್ತಾಪವೂ ಇದೆ.

ಅಧ್ಯಾಯಗಳು: ಕಲ್ಯಾಣಕಾರಕ ಗ್ರಂಥದಲ್ಲಿ ಒಟ್ಟು ೨೫ ಅಧ್ಯಾಯಗಳಿವೆ. ಮುಖ್ಯವಾಗಿ ಒಂದೊಂದು ಅಧ್ಯಾಯದಲ್ಲಿ ಈ ಕೆಳಕಂಡಂತೆ ವಿಷಯ ಮಂಡಿಸಲಾಗಿದೆ. ಪ್ರತಿ ಅಧ್ಯಾಯ ಪ್ರಾರಂಭಿಸುವ ಮೊದಲು ಮಂಗಲಾಚರಣೆ ಹೇಳಿದ್ದಾರೆ.

೧ನೇ ಅಧ್ಯಾಯ : ಮಂಗಲಾಚರಣೆ ಆಯುರ್ವೇದದ ಉತ್ಪತ್ತಿ -ಅರ್ಥ ಉದ್ದೇಶ, ದುರ್ಜನ ನಿಂದೆ ವೈದ್ಯ ಶಬ್ದದ ಉತ್ಪತ್ತಿ ಆಯುರ್ವೇದ ಶಬ್ದದ ಅರ್ಥ ಆಯುರ್ವೇದ ಅಧ್ಯಯನ ಮಾಡಲು ಯೋಗ್ಯ ಶಿಷ್ಯ ಲೋಕ ಶಬ್ದದ ಅರ್ಥ ಚಿಕಿತ್ಸೆಯ ಆಧಾರ ಚಿಕಿತ್ಸೆಯ ನಾಲ್ಕು ಪಾದಗಳು ವೈದ್ಯಲಕ್ಷಣ ಚಿಕಿತ್ಸಾ ಪದ್ಧತಿ -ಅರಿಷ್ಟ ಲಕ್ಷಣ, ರಿಷ್ಟಸೂಚಕ ದೂತ ಲಕ್ಷಣ, -ಅಶುಭ ಶಕುನ-ಶುಭ ಶಕುನ – ಸಾಮುದ್ರಿಕ ಶಾಸ್ತ್ರಾನುಸಾರ, ಅ‌ಲ್ಪಾಯು ಮಹಾಯು ಪರೀಕ್ಷೆ -ಉಪಸಂಹಾರ.

೨ನೇ ಅಧ್ಯಾಯ: ಸ್ವಾಸ್ಥ್ಯ ಭೇದಗಳು – ಪರಮಾರ್ಥ ಸ್ವಾಸ್ಥ್ಯ ಲಕ್ಷಣಗಳು, ವ್ಯವಹಾರ, ಸ್ವಾಸ್ಥ್ಯ ಲಕ್ಷಣಗಳು – ಸಾತ್ಮ್ಯವಿಚಾರ- ಅವಸ್ಥಾ ವಿಚಾರ – ಜಠರಾಗ್ನಿಯ ವಿಚಾರ – ವಿಕೃತ ಜಠರಾಗ್ನಿ – ವಿಷಮಾಗ್ನಿ – ಸಮಾಗ್ನಿ ರಕ್ಷಣೋಪಾಯ- ಬಲಪರೀಕ್ಷೆ – ಬಲವಂತನ ಲಕ್ಷಣಗಳು- ಜಾಂಗಲ – ಅನೂಪ – ಸಾಧಾರಣ ದೇಶ (ಪ್ರದೇಶ)ಗಳ ವಿಚಾರ – ಸಾತ್ಮ್ಯ ವಿಚಾರ- ಪ್ರಕೃತಿ ಕಥನ ಪ್ರತಿಜ್ಞೆ – ಋತುಮತಿ ಸ್ತ್ರೀ ನಿಯಮಗಳು – ಗರ್ಭಾದಾನ ಕ್ರಮ – ಗಭೋತ್ಪತ್ತಿ ಕ್ರಮ- ಜೀವ ಶಬ್ದದ ಉತ್ಪತ್ತಿ – ಮರಣ ಸ್ವರೂಪ – ಶರೀರ ವೃದ್ಧಿಗೆ ಆರು ಮಾರ್ಗಗಳು – ಗರ್ಭದಲ್ಲಿ ಶರೀರ ವಿರ್ಭಾವ ಕ್ರಮ – ಗರ್ಭಾವಸ್ಥೆಯಲ್ಲಿ ಮಗುವಿನ ಪೋಷಣೆ, ಕರ್ಮದ ಮಹಿಮೆ -ಶರೀರ ಲಕ್ಷಣ ಕಥನ-ಅಂತಿಮ ಕಥನ.

೩ನೇ ಅಧ್ಯಾಯ : ಅಸ್ಥಿ – ಸಂದುಗಳು – ಧಮನಿ, ಮಾಂಸರಜ್ಜು ಮರ್ಮಗಳು – ಹಲ್ಲುಗಳು – ಮಲಮೂತ್ರಗಳು ಹುಟ್ಟಿಕೊಳ್ಳುವಿಕೆ, ಪಂಚಭೂತರೂಪಗಳು, ಜಾತಿಸ್ಮರಣ ವಿಚಾರ – ಪ್ರಕೃತಿಯ ಉತ್ಪತ್ತಿ – ವಿವಿಧ ಪ್ರಕೃತಿಗಳು – ಔಷಧ ಯೋಜನೆ – ಜೀರ್ಣಾಜೀರ್ಣ ಔಷಧ ವಿಚಾರ, ಸ್ಥೂಲಕೃಶ ಪ್ರಕೃತಿಗಳು- ಆರೋಗ್ಯ ರಕ್ಷಣೆಗೆ ಬಾಧಕ ವಿಚಾರಗಳ ಪರಿಹಾರ – ವಾತ-ಪಿತ್ತ – ಕಫಗಳ ದೀರ್ಘ ವಿವೇಚನೆ – ಕ್ಷೇತ್ರ ರಕ್ಷಣ ಕಥನ ಪರೀಕ್ಷೆ. ಔಷಧೀಯ ಲಕ್ಷಣ – ಪರೀಕ್ಷಾ ಪೂರ್ವಕ ಔಷಧ ಪ್ರಯೋಗ – ಅಧಿಕ ಪ್ರಮಾಣದಲ್ಲಿ ಔಷಧಿ ಸೇವನೆಯಿಂದಾಗುವ ಫಲಗಳು-ಸ್ಥೂಲ -ಕೃಶ ಶರೀರಗಳ ಚಿಕಿತ್ಸೆ – ಮಧ್ಯಮ ಶರೀರ-ಸ್ವಾಸ್ಥ್ಯ ಬಾಧಕ ಕಾರಣಗಳ ಪರಿಹಾರ.

೪ನೇ ಅಧ್ಯಾಯ: ಋತುಕಾಲದ ವರ್ಣನೆ-ಮುಹೂತಾರ್ದಿಗಳ ಪರಿಣಾಮ – ಋತುವಿಭಾಗ – ದೋಷಗಳ ಸಂಚಯ – ಪ್ರಕೋಪ – ಆಹಾರಕಾಲ-ಭೋಜನ ಕ್ರಮ-ಅನುಪಾನ-ದ್ವಿದಳ ಧಾನ್ಯಗಳ ಗುಣಗಳು – ವಿವಿಧ ಧಾನ್ಯ – ತರಕಾರಿ-ಹಣ್ಣು ಹಂಪಲಗಳು -ಔಷಧಿಗಳ ವರ್ಣನೆ, ಉಪಸಂಹಾರ.

೫ನೇ ಅಧ್ಯಾಯ: ರಸಗಳು ಹು‌ಟ್ಟುವ ಬಗೆ, ಜಲ ಸ್ವರೂಪ – ವಿವಿಧ ದೋಷಗಳು ಹಾಗೂ ಅವುಗಳ ಶುದ್ಧೀಕ್ರಮಗಳು – ಅನ್ನ-ಕ್ಷೀರ ವರ್ಗ-ಮೂತ್ರ ವರ್ಗ-ವಿವಿಧ ಅನುಪಾನಗಳು-ಇವುಗಳ ವರ್ಣನೆ ಇದೆ.

೬ನೇ ಅಧ್ಯಾಯ : ದಂತ ಧಾವನ -ಅಭ್ಯಂಗ-ವ್ಯಾಯಾಮ-ಉದ್ವರ್ತನ, ಸ್ನಾನ, ತಾಂಬೂಲ, ಪಾದರಕ್ಷೆ ಧರಿಸುವುದು.

ರಾತ್ರಿ ಚರ್ಯೆ: ಮೈಥುನ ಕ್ರಿಯೆ, ಬ್ರಹ್ಮಚರ್ಯ,ನಿದ್ರೆ,ಹಗಲು ನಿದ್ರೆ. ಸರ್ವಋತು ಸಾಧಾರಣ ಚರ್ಯಾಧಿಕಾರ : ಹಿತಿಮಿತ ಭಾಷಣ- ಬೆಟ್ಟ-ವೃಕ್ಷ-ದುಷ್ಟ ಆನೆ, ಕುದುರೆ ಸವಾರಿ ಬಿಡಬೇಕು.ಪಾಪಾದಿ ಕರ್ಮಗಳ ನಿಷೇಧ, ಹಿಂಸಾದಿ ಕರ್ಮಗಳು ತ್ಯಾಗ.

ವೃಷ್ಯಾಧಿಕಾರ: ಕಾಮೋತ್ಪತ್ತಿ, ವೃಷ್ಯಕಾರಿ ವಿವಿಧ ಯೋಗಗಳು, ನಪುಂಸಕತೆಯ ಕಾರಣ ಹಾಗೂ ಚಿಕಿತ್ಸೆ.

ರಸಾಯನಧಿಕಾರ: ವಿವಿಧ ರಸಾಯನಗಳು-ಪಥ್ಯಾಹಾರ-ರಸಾಯನಗಳನ್ನು ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳು.

ಅಂತಿಮ ಕಥನ

೭ನೇ ಅಧ್ಯಾಯ: ಪುರುಷ ನಿರೂಪಣ-ಆತ್ಮ ಸ್ವರೂಪ ಇತ್ಯಾದಿ ಕರ್ಮಗಳು ಹುಟ್ಟುವಿಕೆ, ರೋಗೋತ್ಪತ್ತಿ , ಕಾರಣ, ಕರ್ಮ ಪ್ರಶಾಂತಿ ಮಾಡುವುದೇ ನಿಜವಾದ ಚಿಕಿತ್ಸೆ-ಗೃಹ ನಿರ್ಮಾಣ, ಶಯನ ವಿಧಿ-ರೋಗಗಳ ದಿನಚರ್ಯೆ-ವಿವಿಧ ಚಿಕಿತ್ಸೆಗಳು -ವೈದ್ಯ-ರೋಗಿ-ಔಷಧಿ-ಪರಿಚಾರಕರ ಗುಣ-ಪರಸ್ಪರ ವಿಶ್ವಾಸ -ಯೋಗ್ಯ ವೈದ್ಯ -ವಿವಿಧ ರೋಗಿ ಪರೀಕ್ಷಾ ವಿಧಾನಗಳು -ರೋಗದ ಸಾಧ್ಯಾಸಾಧ್ಯತ್ವ ಲಕ್ಷಣಗಳೂ -ಚಿಕಿತ್ಸೆ ವಿಷಯದಲ್ಲಿ ಉಪೇಕ್ಷೆ ಕೂಡದು- ಅಂತಿಮ ಕಥನ.

೮ನೇ ಅಧ್ಯಾಯ : ಪಂಚಿವಿಧ ವಾತ ದೋಷಗಳು-ಕುಪಿತ ವಾತ ಹಾಗೂ ರೋಗೋತ್ಪತ್ತಿ -ಕಫ-ಪಿತ್ತರಕ್ತಯುಕ್ತ ವಾತದ ಲಕ್ಷಣ -ವಾತವ್ಯಾದಿಗಳ ಭೇದ-ಅಪತಾನಕ-ಅರ್ದಿತ -ಪಕ್ಷಘಾತ, ದಂಡಾಪತಾನಕ -ಧನುಸ್ತಂಭ ಗೃದ್ರಸೀ – ಕಲಾಯ ಖಂಜ ಪಂಗು ಉರುಸ್ತಂಭ ಇತ್ಯಾದಿ ರೋಗಗಳು – ವಾತರಕ್ತ ಅಸಾಧ್ಯ ಲಕ್ಷಣ -ವಾತರೋಗ ಚಿಕಿತ್ಸಾ -ಸ್ನೇಹ- ಸ್ವೇದನ-ವಮನ ವಿರೇಚನ ವಿಧಿಗಳು – ಸರ್ವ ಶರೀರಗತವಾತ ಚಿಕಿತ್ಸೆ-ಬಸ್ತಿ ಚಿಕಿತ್ಸೆ, ನಸ್ಯಕರ್ಮ ಹಾಗೂ ಅದರ ಫಲಗಳು-ಅಂತಿಮ ಕಥನ.

೯ನೇ ಅಧ್ಯಾಯ: ಪಿತ್ತ ಪ್ರಕೋಪದ ಕಾರಣ ಹಾಗೂ ರೋಗಗಳು – ಪಿತ್ತ ಪ್ರಶಮನ ವಿಧಿ-ರಕ್ತಪಿತ್ತ ವಿಧಾನ-ಸಾಧ್ಯಾಸಾಧ್ಯತ್ವ-ಘ್ರಾಣ ಪ್ರವೃತ್ತ ರುಧಿರ ಚಿಕಿತ್ಸೆ-ಉರ್ಧ್ವಾದಿಃ ಪ್ರವೃತ್ತ ರಕ್ತಚಿತ್ತ ಚಿಕಿತ್ಸೆ,ಪ್ರದರ ಚಿಕಿತ್ಸೆ -ವಿಸರ್ಪ ವಾತರಕ್ತ ರೋಗ -ಚಿಕಿತ್ಸೆ-ವಿವಿಧ ಜ್ವರಗಳು ಲಕ್ಷಣಗಳು -ಸನ್ನಿಪಾತ ಜ್ವರ -ಚಿಕಿತ್ಸೆ-ಅತಿಸಾರ ಕಾರಣ -ಲಕ್ಷಣಗಳು -ಚಿಕಿತ್ಸೆ-ಸಾಧ್ಯಾಸಾಧ್ಯತ್ವ-ಪಥ್ಯ-ಅಂತಿಮ ಕಥನ.

೧೦ನೇ ಅಧ್ಯಾಯ: ಪ್ರಕುಪಿತ ಕಫದ ಲಕ್ಷಣಗಳು -ಕಫ ನಾಶಕ ಗಣ-ವಾತನಾಶಕ ಗಣ-ವಾತಘ್ನ ಔಷಧಗಳ ಸಮುಚ್ಛಯ -ದೋಷಗಳ ಉಪಸಂಹಾರ-ಲಘುತಾ ಪ್ರದರ್ಶನ, ಚಿಕಿತ್ಸಾ ಸೂತ್ರ -ಔಷಧಗಳ ಯಥಾಲಾಭ ಪ್ರಯೋಗ ಸಾಧ್ಯಾಸಾಧ್ಯ ರೋಗಗಳ ವಿಷಯದಲ್ಲಿ ವೈದ್ಯನ ಕರ್ತವ್ಯ -ಅಂತಿಮ ಕಥನ.

೧೧ನೇ ಅಧ್ಯಾಯ: ಮಹಾಮಾಯ ಸಂಜ್ಞೆ ಹಾಗೂ ವರ್ಣನೆ ಕ್ರಮ

ಪ್ರಮೇಹ: ಪೂರ್ವ ರೂಪ, ಸಂಪ್ರಾಪ್ತಿ, ಭೇದ, ಪ್ರಮೇಹ ಚಿಕಿತ್ಸೆ, ಉಪದ್ರವಗಳು – ಅಸಾಧ್ಯ ಲಕ್ಷಣ- ಪಥ್ಯ- ವಮನ – ವಿರೇಚನ ವಿಧಿಗಳು – ರೋಗಿಗೆ ವಿಹಾರ – ಸದ್ಯೋವ್ರಣ ಚಿಕಿತ್ಸೆ – ಬಂಧನ ಕ್ರಿಯೆ.

ಕುಷ್ಠ ರೋಗ :ಸಂಪ್ರಾಪ್ತಿ – ಪೂರ್ವ ರೂಪ- ಸಪ್ತ ಮಹಾಕುಷ್ಠಗಳು – ಅಸಾಧ್ಯ ಕುಷ್ಠ -ಅಪಥ್ಯ ಪದಾರ್ಥಗಳು – ಕುಷ್ಠ ಚಿಕಿತ್ಸೆ -ಪಂಚಕರ್ಮ ವಿಧಾನಗಳು- ಖದಿರ-ತೀಕ್ಷ್ಣ ಲೋಹ, ಲೋಹಭಸ್ಮ -ನವಾಯಸ ಚೂರ್ಣ ಪ್ರಯೋಗ.

ಉದರ ರೋಗ: ನಿದಾನ – ವಿವಿಧ ಉದರ ರೋಗಗಳು-ಜಲೋದರ-ಅಸಾಧ್ಯ ಉದರರೋಗ-ಉದರ ರೋಗ ಚಿಕಿತ್ಸೆ -ಏರಂಡ ತೈಲ- ನಾರಾಚ-ಮಹಾನಾರಾಚ ಫೃತ ಪ್ರಯೋಗ – ಮೂತ್ರವರ್ತಿಗಳು – ಯಕೃತ – ಪ್ಲಿಹೋದರ ಚಿಕಿತ್ಸೆ – ಪಿಪ್ಪಲ್ಯಾದಿ ಚೂರ್ಣ – ಷಟ್ಫಲ ಸರ್ಪಿಪ್ರಯೋಗ -ಜಲೋದರ ಚಿಕಿತ್ಸೆ – ಹೊಟ್ಟೆಯಿಂದ ನೀರನ್ನು ಹೊರತೆಗೆಯುವ ಉಪಾಯ – ಪಥ್ಯ – ಹಾಲಿನ ವಿಶೇಷ ಪ್ರಯೋಗ- ಅಂತಿಮ ಕಥನ.

೧೨ನೇ ಅಧ್ಯಾಯ: ವಾತರೋಗ ವಿಶೇಷ ಚಿಕಿತ್ಸೆ – ತಿಲ್ವಕಾಧಿಘೃತ -ಅಣುತೈಲ-ಸಹಸ್ರ ವಿಪಾಕ ತೈಲ – ಪತ್ರಲವನ-ಕ್ವಾಥಸಿದ್ಧ ಲವಣ – ಕಲ್ಯಾಣ ಲವಣ ಪ್ರಯೋಗಗಳು- ವಿವಿಧ ವಾತ ರೋಗಗಳ ಅಸಾಧ್ಯ ಲಕ್ಷಣಗಳು – ವಾತಹರ ತೈಲ- ಅರ್ದಿತವಾತ ಚಿಕಿತ್ಸೆ -ಕರ್ಣಶೂಲ ಚಿಕಿತ್ಸೆ.

ಮೂಢಗರ್ಭ:ಗರ್ಭ ಪಾತ ಕಾರಣ -ಗರ್ಭಸ್ರಾವ ಸ್ವರೂಪ- ಮೂಢ ಗರ್ಭ ಲಕ್ಷಣ -ಗತಿ-ಅಸಾಧ್ಯಮೂಢಗರ್ಭ- ಮೃತ ಗರ್ಭಲಕ್ಷಣ- ಮೂಢಗರ್ಭ ಉದ್ಧರಣ ವಿಧಿ- ಶಸ್ತ್ರ ಚಿಕಿತ್ಸೆಯಿಂದ ಹೊಟ್ಟೆ ಕೊರೆದು ಗರ್ಭವನ್ನು ಹೊರತೆಗೆಯುವ ವಿಧಾನ-ಪ್ರಸೂತಳ ಉಪಚಾರ-ಬಲಾತೈಲ-ಶತಪಾಕ ಬಲಾ ತೈಲ – ನಾಗಬಲಾದಿ ತೈಲ ಪ್ರಯೋಗ – ಪ್ರಸೂತಳಿಗೆ ಯೋಗ್ಯ ಔಷಧಿ – ಗರ್ಭಿಣಿಗೆ ಸುಖಕರವಾಗುವ ಉಪಾಯಗಳು.

ಬಾಲರಕ್ಷೆ: ಶಿಶುವಿಗೆ ಯೋಗ್ಯ ಘೃತ-ಧಾತ್ರೀ ಲಕ್ಷಣ, ಬಾಲಗೃಹ ಪರೀಕ್ಷೆ-ಬಾಲಗೃಹ ಚಿಕಿತ್ಸೆ- ಬಾಲರೋಗಗಳ ಚಿಕಿತ್ಸೆ -ಬಾಲಕರ ರೋಗಗಳಿಗೆ ಅನ್ನಕರ್ಮಾದಿಗಳ ನಿಷೇಧ.

ಅರ್ಶರೋಗ: ಕಾರಣ, ಲಕ್ಷಣ-ವಿವಿಧ ಅರ್ಶವಿಕಾರಗಳು -ಅವುಗಳ ಚಿಕಿತ್ಸೆ – ಅರ್ಶಘ್ನ ಲೇಪ – ಚೂರ್ಣಗಳು-ಚಿತ್ರಕಾದಿ ಚೂರ್ಣ- ಅರ್ಶನಾಯಕ ಮಜ್ಜಿಗೆ, ಸೂರಣ ಮೋದಕ, ತಕ್ರ ಕಲ್ಪ, ಅರ್ಶಘ್ನ ಕಲ್ಕ, ಭಲ್ಲಾತಕ ರಸಾಯನ-ತಿಲ ಪ್ರಯೋಗ -ಅಂತಿಮ ಕಥನ.

೧೩ನೇ ಅಧ್ಯಾಯ: ಶರ್ಕರಾಧಿಕಾರ-ಬಸ್ತಿ ಸ್ವರೂಪ -ಶರ್ಕರ ಸ್ವರೂಪ ಲಕ್ಷಣ-ಶರ್ಕರಾಮೂಲ

ಅಶ್ಮರಿ: ಭೇದ-ಲಕ್ಷಣ-ಬಾಲಾಶ್ಮರಿ-ಅಶ್ಮರಿಯ ಕಠಿಣ ಸಾಧ್ಯ ಲಕ್ಷಣ -ಅಸಾಧ್ಯ ಲಕ್ಷಣ-ಉತ್ತರ ಬಸ್ತಿ ವಿಧಾನ-ಪಾಟಲಿಕಾದಿ ಕ್ವಾಥ-ಕಪೋತಕಾದಿ ಕ್ವಾಥ-ಆಡಿನ ಹಾಲಿನ ಪ್ರಯೋಗ -ತಿಲಾದಿ ಕ್ಷಾರ.

ಭಗಂದರ: ಬೇದ -ಲಕ್ಷಣಗಳೂ -ಸಾಧ್ಯಾಸಾಧ್ಯಾತ್ವ-ಚಿಕಿತ್ಸೆ-ಭಗಂಧರ ಯಂತ್ರ-ಶಸ್ತ್ರಾಗ್ನಿಕ್ಷಾರ ಪ್ರಯೋಗ-ಛೇದನ ಕ್ರಮ-ಉಪನಾಹ- ಶಲ್ಯಜ ಭಗಂದರ ಚಿಕಿತ್ಸೆ- ಭಗಂದರಘ್ನ ತೈಲ ಹಾಗೂ ಘೃತಗಳು-ಹರೀತಕ್ಯಾದಿ ಚೂರ್ಣ- ಅಪಥ್ಯ-ಅಶ್ಮರಿ-ಉಪಸಂಹಾರ-ತ್ರಿದೋಷಗಳ ವೃದ್ಧಿ ಲಕ್ಷಣ- ಮೇದಸ್ಸು-ಮೂತ್ರ-ಅಂತ್ರ ವೃದ್ಧಿ ಲಕ್ಷಣ (Hernia)ಗಳು ಹಾಗೂ ಚಿಕಿತ್ಸೆ-ಅಂಡವೃದ್ಧಿಘ್ನ ಲೇಪ- ಕಲ್ಕಗಳು -ಸುವರ್ಣಕಾದಿ ಚೂರ್ಣ-ಅಂತಿಮ ಕಥನ.

೧೪ನೇ ಅಧ್ಯಾಯ: ಉಪದಂಶ (Syphilis) ಚಿಕಿತ್ಸೆ-ಎರಡು ವಿಧದ ಶೋಧಗಳು-ಅಸಾಧ್ಯ ಲಕ್ಷಣಗಳು -ದಂತೋದ್ಭವ ಉಪದಂಶಚಿಕಿತ್ಸೆ- ಶೂಕ ದೋಷ- ನಿದಾನ ಹಾಗೂ ಚಿಕಿತ್ಸೆ -ಶ್ಲೀಪದ (Elephentisis) ರೋಗ – ತ್ರಿಕಟುಕಾದಿ ಉಪನಾಹ – ಅಪಚಿ ಲಕ್ಷಣ ಹಾಗೂ ಚಿಕಿತ್ಸೆ -ನಾಡಿ ವ್ರಣ (Sinus) ಅಪಚಿನಾಶಕಯೋಗ-ಗಲಗಂಡ ಲಕ್ಷಣ ಹಾಗೂ ಚಿಕಿತ್ಸೆ – ಅರ್ಬುದ ಲಕ್ಷಣ ಹಾಗೂ ಚಿಕಿತ್ಸೆ -ಗ್ರಂಥಿ ಲಕ್ಷಣ ಹಾಗೂ ಚಿಕಿತ್ಸೆ- ವಿದ್ರಧಿಗಳು (Abscess) ಎರಡು ವಿಧ ಚಿಕಿತ್ಸೆ- ಅಮವಿದಗ್ಧವಿಪಕ್ವ ಲಕ್ಷಣ- ಅಷ್ಟ ವಿಧ ಶಸ್ತ್ರ ಕರ್ಮ ಹಾಗೂ ಯಂತ್ರನಿರ್ದೇಶ- ಬಾಹ್ಯ ವಿದ್ರಧಿ-ಅಂತರ ವಿದ್ರಧಿಗಳ ಚಿಕಿತ್ಸೆ-ಕ್ಷುದ್ರ ರೋಗಗಳು – ಅಜಗಲ್ಲಿಕಾ, ಅಲಚಿ – ಕಚ್ಚಪಿಕಾ-ಇಂದ್ರವಿದ್ವಾಹರ್ದಮಿಕಾ- ಪಾಷ್ಣಾಗರ್ದಭರಿ ಲಕ್ಷಣ -ಪನಸಿ – ಇರವೆಲ್ಲಿಕಾ-ಕಕ್ಷಾ-ಗಂಧನಾಮಾ ಚಿಪ್ಪ ಲಕ್ಷಣ- ಅನುಶಯ ಲಕ್ಷಣ – ವಿದಾರಿಕ ಲಕ್ಷಣ-ಶರ್ಕರಾರ್ಬುದ ಲಕ್ಷಣ – ವಿಚರ್ಚಿಕಾ-ವೈಪಾದಿಕಾ,ಪಾಮಾ-ಕಚ್ಚು, ಕದರ, ದಾರೀರೋಗ ಲಕ್ಷಣ-ಇಂದ್ರಲುಪ್ತ-ಜತುಮಣಿ ಲಕ್ಷಣ – ವ್ಯಂಗ ಲಕ್ಷಣ -ಮಾಷ- ತಿಲನ್ಯಚ್ಚ ಲಕ್ಷಣ- ನೀಲಿಕಾ-ತಾರುಣ್ಯ ಪೀಟಿಕಾ-ವರ್ತಿಕಾ-ಸನ್ನಿರುದ್ಧ ಗುದಲಕ್ಷಣ- ಅಗ್ನಿರೋಹಿಣಿ-ಸ್ತನರೋಗ ಇತ್ಯಾದಿ ಕ್ಷುದ್ರರೋಗಗಳ ಚಿಕಿತ್ಸೆ -ನಾಡಿ ನಿದಾನ ಹಾಗೂ ಚಿಕಿತ್ಸೆ – ಮುಖಕಾಂತಿಕಾರಕ ಘೃತ -ಲೇಪನಗಳ -ಅಂತಿಮ ಕಥನ.

೧೫ನೇ ಅಧ್ಯಾಯ: ಶಿರೋರೋಗಗಳು -ಕ್ರಿಮಿಜ -ಕ್ಷಮಜ – ಸೂರ್ಯಾವರ್ತ – ಅರ್ಧಾವಭೇದಕ – ಶಂಖರ ಲಕ್ಷಣಗಳು – ರಕ್ತ ಪಿತ್ತಜ – ವಾರ ಕಫಜ ಶಿರೋರೋಗಗಳ ವಿಶಿಷ್ಟ ಲಕ್ಷಣಗಳು ಹಾಗು ಅವುಗಳ ಚಿಕಿತ್ಸೆ.

ಕರ್ಣರೋಗಗಳು : ಕರ್ಣಶೂಲ – ಕರ್ಣನಾದ- ಬಾಧಿರ್ಯ ಹಾಗೂ ಕ್ಷೋದ ಲಕ್ಷಣ -ಕರ್ಣಸ್ರಾವ – ಪೂತಿಕರ್ಣ ಕ್ರಿಮಿಕರ್ಣ ಲಕ್ಷಣ – ಕರ್ಣ ಕಂಡು – ಕರ್ಣಗೂಢ- ಕರ್ಣಪ್ರತಿನಾದ ಲಕ್ಷಣ – ಕರ್ಣ ಪಾಕ – ವಿದ್ರಧಿ – ಶೋಥ, ಅರ್ಶದಲಕ್ಷಣಗಲೂ ಹಾಗು ಅವುಗಳ ಚಿಕಿತ್ಸೆ.

ನಾಸಾ ರೋಗಗಳು: ಪೀನಸ -ಪೂತಿನಾಸಾ – ಪೂಯರಕ್ತ – ದೀಪ್ತನಾಸಾ – ಕ್ಷವಥು – ಮಹಾಭ್ರಂಶನ – ನಾಶಾ ಪ್ರತಿನಾಹ – ಪ್ರತಿಸ್ರಾವ – ಪರಿಶೋಷ ಲಕ್ಷಣ – ಪಠ್ಯ – ಸರ್ವನಾಸ ರೋಗಗಳ ಚಿಕಿತ್ಸೆ.

ಮುಖ ರೋಗಗಳು: ಸ್ಥಾನ – ಎಂಟು ವಿಧ ತುಟಿ ರೋಗಗಳು – ತ್ರಿದೋಷ ತುಟಿ ರೋಗ ಲಕ್ಷಣಗಳು – ಚಿಕಿತ್ಸೆ.

ದಂತ ರೋಗಗಳು : ಕ್ರಿಮಿದಂತ – ದಂತ ಹರ್ಷ- ಭಂಜನಕ -ದಂತ ಶರ್ಕರಾ – ಕಪಾಲಿಕಾ – ಕಪ್ಪು ದಂತಕ – ಹನುಮೋಕ್ಷ ಲಕ್ಷಣ ಹಾಗೂ ಅವುಗಳ ಚಿಕತ್ಸೆಗಳು.

ನಾಲಿಗೆ ರೋಗಗಳು : ಜಿವ್ಹಾಲಸಕ – ಉಪಜಿವ್ಹ- ಸಿತೋದ- ದಂತಪುಪ್ಪಟ – ಸುಷಿರಕ್ಷನ -ಪರಿದ್ರವರ- ಉಪಕುಶ – ವೈದರ್ಭ- ಖಲವರ್ಧನ- ಅಧಿಮಾಂಸ ಲಕ್ಷಣ ಹಾಗೂ ಚಿಕಿತ್ಸೆ – ದಂಡ ನಾಡೀ ಲಕ್ಷಣ ಹಾಗೂ ಚಿಕಿತ್ಸೆ ದಂತ ಮೂಲ ಗತರೋಗ ಚಿಕಿತ್ಸೆ – ಉಪಶುಶ – ವೈದರ್ಭ್ಯ- ಖಲವರ್ಧನ – ರೋಹಿಣಿ – ಕಂಠಶಾಲೂಕ – ಅಧಿಜಿವ್ಹಿಕಾ – ವಲಯಲಕ್ಷಣ – ಮಹಾಲಸ- ಏಕವೃಂದ – ಶತಗ್ನಿ- ಗಿಲಾಯು – ಗಲವಿದ್ರಧಿ ಹಾಗೂ ಗತೌಘ ಲಕ್ಷಣ – ಸ್ವರಘ್ನ ಲಕ್ಷಣ – ಮಾಂಸ ರೋಗ ಲಕ್ಷಣ ಹಾಗೂ ಚಿಕಿತ್ಸೆ.

ತಾಲು ರೋಗ : ೧೨ವಿಧ ತಾಲು ರೋಗಗಳು – ಮುಖರೋಗನಾಶಕ ಮಧುಯಕಾದಿ ಧೂಪವರ್ತಿ ಹಾಗೂ ಯೋಗಗಳು – ಭೃಂಗರಾಜಾದಿ ತೈಲ – ಸಹಾದಿ ತೈಲ – ಸರ್ವಮುಖರೋಗ ಚಿಕಿತ್ಸಾ ಸಂಗ್ರಹ – ಪಥ್ಯ – ಮುಖರೋಗಗಳು – ಅಸಾಧ್ಯ ರೋಗಗಳು.

ನೇತ್ರ ರೋಗಗಳು: ಕಣ್ಣುಗಳ ಪ್ರಾಮುಖ್ಯತೆ – ನೇತ್ರ ರೋಗಗಳ ಸಂಖ್ಯೆ ಕಾರಣ – ಆಶ್ರಯ – ಆರು ಪಟಲಗಳು – ಅಭಿಷ್ಯಂದ (ತ್ರಿದೋಷಜ – ರಕ್ತಜ) ಲಕ್ಷಣಗಳು ಹಾಗೂ ಚಿಕಿತ್ಸೆ – ಅಂಜನಗಳು – ಅಕ್ಷಿದಾಹ ಚಿಕಿತ್ಸೆ – ಅಭಿಷ್ಯಂದ ರೋಗದ ಅಲಕ್ಷತೆಯಿಂದ ಅದಿಮಂಥ ರೋಗದ ಉತ್ಪತ್ತಿ – ಅಧಿಮಂಥ ನೇತ್ರಪಾಕ ಕ -ಶಿರೋತ್ಪಾದಕ ಲಕ್ಷಣ – ಶಿರಾಪ್ರಹರ್ಷ -ಅಲಜಾ-ಪೂಯಾಲಸ-ಕಫೋಪನಾಹ-ಕಫಜಸ್ರಾವ-ಕ್ರಿಮಿಗ್ರಂಥಿ-ವರ್ತ್ಮರೋಗಗಳು – ಕುಂಭಿಕ-ಪೋಥಕಿ-ವರ್ತ್ಮಶರ್ಕರಾ-ಶುಷ್ಕಾಶರ – ಅರ್ಬುದ -ರಕ್ತಾರ್ಶ ಮೊದಲಾದ ರೋಗಗಳ ವಿವರಣೆ ಹಾಗೂ ಚಿಕಿತ್ಸೆ. ಕೃಷ್ಣ ಮಂಡಲಗತರೋಗಗಳು -ವಿದಗ್ಧ ದೃಷ್ಟಿ – ಧೂಮದರ್ಶಿ- ನೇತ್ರರೋಗಗಳ ಸಾಧ್ಯಾಸಾಧ್ಯತೆ – ರಕ್ತಜ ನೇತ್ರ ರೋಗಗಳು – ಕಣ್ಣಿನ ರೋಗಗಳಲ್ಲಿ ಶಸ್ತ್ರ ಚಿಕಿತ್ಸೆ.

೧೬ನೇ ಅಧ್ಯಾಯ : ಶ್ವಾಸ ರೋಗಗಳು- ಲಕ್ಷಣ -ಕ್ಷುದ್ರ-ತಮಕ-ಊರ್ಧ್ವಶ್ವಾಸ -ಸಾಧ್ಯಾಸಾಧ್ಯ ವಿಚಾರ-ಚಿಕಿತ್ಸೆ -ಪಿಪ್ಯಲ್ಯಾದಿಘೃತ- ಭೃಂಗರಾಜ ತೈಲ -ತ್ರಿಫಲಾಯೋಗ – ತ್ವಗಾಧಿ ಚೂರ್ಣ.

ಕೆಮ್ಮು – ಲಕ್ಷಣ, ಭೇದ – ತ್ರಿದೋಷಗಳ ಕೆಮ್ಮುಗಳು -ಕ್ಷತಜ -ಕ್ಷಯಜ-ಸಕ್ರುಪ್ರಯೋಗ -ವಿರಸ ನಿದಾನ ಹಾಗೂ ಚಿಕಿತ್ಸೆ.

ತೃಷ್ಣಾ ರೋಗ – ನಿದಾನ – ಲಕ್ಷಣಗಳು- ಕ್ಷತಜ – ಚಿಕಿತ್ಸೆ – ತೃಷ್ಣಾ ನಿವಾರಣಾರ್ಥ ಉಪಾಯಗಳು, ಉತ್ಪಲಾದಿ ಕಷಾಯ – ಸಾರಿವಾದಿ ಕಷಾಯ.

ಛರ್ಧಿ ರೋಗ – ನಿದಾನ ಚಿಕಿತ್ಸೆ – ಅಸಾಧ್ಯಲಕ್ಷಣ – ಪಥ್ಯ -ಸಕ್ತು ಪ್ರಯೋಗ. ಅರುಚಿ – ನಿದಾನ – ಚಿಕಿತ್ಸೆ- ವಮನ ಪ್ರಯೋಗ – ಮಾತುಲುಂಗ ರಸ ಪ್ರಯೋಗ -ಮುಖ ಪ್ರಕ್ಷಾಲನೆ – ಪಥ್ಯ.

ಸ್ವರಭೇದ : ನಿದಾನ – ಭೇದ – ವಿವಿಧ ಸ್ವರ ಭೇದಗಳು – ಚಿಕಿತ್ಸೆ – ನಸ್ಯ- ಗಂಡೂಷಗಳ ಪ್ರಯೋಗ – ಮೇದಜ – ಸನ್ನಪಾತಜ – ರಕ್ತಜ – ಸ್ವರಭೇದ ಚಿಕಿತ್ಸೆ – ಸ್ವರಭೇದನಾಶಕ ಯೋಗ.

ಉದಾವರ್ತ -ಸಂಪ್ರಾಪ್ತಿ-ಅಪಾನವಾತಜ- ಮೂತ್ರಾವರೋಧಜ-ಮಲಾವರೋಧಜ-ಶುಕ್ರಾವರೋಧಜ-ವಮನಾದ ರೋಧಜ – ಕ್ಷುತ ನಿರೋಧಜ- ಶುಕ್ರೋದಾವರ್ತ ಹಾಗೂ ಅನ್ಯ ಕಾಣಗಳಿಂದ ಬರುವ ಉದಾವರ್ತ ರೋಗಗಳು – ಚಿಕಿತ್ಸೆ.

ಹಿಕ್ಕಾ ರೋಗ – ನಿದಾನ – ಪಂಚಭೇದಗಳು – ಲಕ್ಷಣಗಳು – ಅಸಾಧ್ಯಲಕ್ಷಣಗಳು – ಚಿಕಿತ್ಸೆ – ಹಿಕ್ಕಾ – ನಾಶಕಯೋಗ – ಅಧಿಕ ಊರ್ಧ್ವವಾತಯುಕ್ತ ಹಿಕ್ಕಾ ಚಿಕಿತ್ಸೆ.

ಪ್ರತಿಶ್ಯಾಯ -ನಿದಾನ- ಪೂರ್ವರೂಪ-ಲಕ್ಷಣಗಳು-ರಕ್ತಜ ಪ್ರತಿ ಶ್ಯಾಯ- ಸನ್ನಿಪಾತಕ – ದುಷ್ಟಪ್ರತಿಶ್ಯಾಯ -ಉಪೇಕ್ಷೆಯಿಂದಾಗುವ ತೊಂದರೆ – ಚಿಕಿತ್ಸೆ.

೧೭ನೇ ಅಧ್ಯಾಯ: ಸರ್ವರೋಗಗಳು ತ್ರಿದೋಷಗಳಾಧೀನ – ರೋಗ ಪರೀಕ್ಷೆಯ ಸೂತ್ರಗಳು.

ಹೃದ್ರೋಗ – ವಾತಪಿತ್ತ- ಕಫಜ ಹೃದಯರೋಗ ಚಿಕಿತ್ಸೆ – ಹೃದಯರೋಗಗಳಲ್ಲಿ ಬಸ್ತಿ ಪ್ರಯೋಗ.

ಕ್ರಿಮಿ ರೋಗ : ಲಕ್ಷಣ – ವಿವಿಧ ಕ್ರಿಯೆಗಳು – ಚಿಕಿತ್ಸೆ – ಕ್ರಮಿರೋಗ ಶಮನಾರ್ಥ ಶುದ್ಧಿವಿಧಾನ – ಕೃಮಿಘ್ನ ಸ್ವರಸ – ವಿಡಂಗ ಚೂರ್ಣ – ಮೂಷಕ ಕರ್ಣಾಧಿಯೋ ಕೃಮಿನಾಶಕ ತೈಲ, ಸುರಸಾದಿ ಯೋಗ – ಕೃಮಿಘ್ನ ಯೋಗ – ಪಿಪ್ಪಿಲೀ ಮೂಲ ಕಲ್ಕ-ರಕ್ತಜ ಕ್ರಿಮಿರೋಗ ಚಿಕಿತ್ಸೆ – ಅಪಥ್ಯ.

ಅಜೀರ್ಣ : ಅಮ – ವಿದಗ್ಧ – ವಿಷ್ಟಬ್ದಾಜೀರ್ಣಲಕ್ಷಣ – ಅಜೀರ್ಣದಿಂದ ಅಲಸಕ, ವಿಲಂಬಿಕಾ, ವಿಷೂಚಿಕ ರೋಗಗಳ ಹುಟ್ಟುವಿಕೆ – ಅವುಗಳ ಲಕ್ಷಣ – ಚಿಕಿತ್ಸೆ- ಲಂಘನ -ಅಜೀರ್ಣನಾಶಕ ಯೋಗ – ಅಜೀರ್ಣ ಹೃದ್ರೋಗತ್ರಯ – ಕುಲತ್ಥಕ್ವಾಥ – ವಿಷೂಚಿಕಾ ಚಿಕಿತ್ಸೆ- ತ್ರಿಕಟುಕಾಕದ್ಯಂಜನ – ಅಸಾಧ್ಯ ಲಕ್ಷಣ.

ಮೂತ್ರಾಘಾತ: ವಾತಕುಂಡಲಿಕ – ಮೂತ್ರಷ್ಠಿಲಿಕಾ – ವಾತ ಬಸ್ತಿ – ಮೂತ್ರಾಘಾತ ಲಕ್ಷಣ ಮೂತ್ರಜಠರ ಲಕ್ಷಣ -ಮೂತ್ರೇತ್ಸರ್ಗ ಲಕ್ಷಣ – ಮೂತ್ರ ಕ್ಷಯ ಲಕ್ಷಣ – ಮೂತ್ರಾಶ್ಮರಿ – ಮೂತ್ರ ಶುಕ್ರ – ತ್ರಿದೋಷಜ, ಮೂತ್ರ ವಿಕಾರಗಳು – ರೋಗ ನಿದಾನ ಹಾಗೂ ಉಪಸಂಹಾರ – ಕಪಿಕಾಚ್ಚ್ವಾದಿ ಚೂರ್ಣ ಮೂತ್ರಾಮನುಘ್ನ ಘೃತ.

ಮೂತ್ರ ಕೃಚ್ವ್ರ: ಎಂಟು ಪ್ರಕಾರದ ಮೂತ್ರ ಕೃಚ್ಛ್ರದ ವಿಕಾರಗಳು- ಅವುಗಳ ಬೇರೆ ಬೇರೆ ಲಕ್ಷಣಗಳು – ಚಿಕಿತ್ಸೆ – ಮೂತ್ರಕೃಚ್ಛ್ರನಾಶಕ – ಯೋಗ – ಮಧುಕಾದಿಕಲ್ಕ – ದಾಡಿಮಾದಿ ಚೂರ್ಣ, ಕಪೋತಕಾದಿ ಯೋಗ – ತುರಸಾದಿಸ್ವರ- ಮಧುಕಾದಿಯೋಗ – ಕಾರೋದಕ- ತೃಟ್ಯಾದಿ ಯೋಗ.

ಯೋನಿ ರೋಗಗಳು : ವಿವಿಧ ಯೋನಿ ರೋಗಗಳು ಹಾಗೂ ಅವುಗಳ ಚಿಕಿತ್ಸೆ ಕರ್ಣನೀ ಚಿಕಿತ್ಸೆ – ಪ್ರಸ್ರಂಸಿನಿ ಯೋನಿರೋಗ ಚಿಕಿತ್ಸೆ.

ಗುಲ್ಮ – ನಿದಾನ ಚಿಕಿತ್ಸೆ – ಭೋಜನ – ಗುಲ್ಮ ನಾಶಕ ಪ್ರಯೋಗ – ವಿಶಿಷ್ಟ ಪ್ರಯೋಗ- ಅಪಥ್ಯ.

ಪಾಂಡುರೋಗ : ನಿದಾನ – ಲಕ್ಷಣ- ಕಾಮಲಾ ಲಕ್ಷಣ – ಪಾಂಡು ರೋಗ ಚಿಕಿತ್ಸೆ- ಪಾಂಡುರೋಗಘ್ನಯೋಗ – ಕಾಮಲಾ ಚಿಕಿತ್ಸೆ.

ಮೂರ್ಛೆ, ಉನ್ಮಾದ : ಅಪಸ್ಮಾರ: ಮೂರ್ಛೆಯ ನಿದಾನ ಹಾಗೂ ಚಿಕಿತ್ಸೆ – ಉನ್ಮಾದ ನಿದಾನ – ಭೇದಗಳು – ಚಿಕಿತ್ಸೆ – ನಸ್ಯ ಹಾಗು ತ್ರಾಸನ – ಅನ್ಯವಿಧಿಗಳು – ಪಥ್ಯ – ಅಪಸ್ಮಾರ ನಿದಾನ – ಅಪಸ್ಮಾರ ಹುಟ್ಟುವಾಗ ಭ್ರಮೆ – ಚಿಕಿತ್ಸೆ-ನಸ್ಯ- ಅಂಜನ.

೧೮ನೇ ಅಧ್ಯಾಯ: ಕ್ಷಯರೋಗ – ಪೂರ್ವರೂಪ – ತ್ರಿದೋಷಜನ್ಯ ಕ್ಷಯರೋಗಗಳು ಅಸಾಧ್ಯ ಲಕ್ಷಣ – ಚಿಕಿತ್ಸೆ-ರೋಗಿಯ ಆಹಾರ- ಕ್ಷಯನಾಶಕ ಯೋಗ – ಶಿಲಾದಿಯೋಗ -ಕ್ಷಯನಾಶಕ ಘೃತ – ಭಲ್ಲಾತಕಾದಿಘೃತ – ಶಬರಾದಿಘೃತ.

ಮೈಲಿ ಬೇನೆ : ನಿದಾನ – ಆಕೃತಿ – ವಿಸ್ಫೋಟ ಲಕ್ಷಣ – ಪೂರ್ವ ರೂಪಗಳು -ಅಸಾಧ್ಯ ಲಕ್ಷಣ -ನಾಲಿಗೆ ಮುಂತಾದ ಪ್ರದೇಶಗಳಲ್ಲಾದ ಮೈಲಿ ಬೇನೆ – ಪಿತ್ತದ ಪ್ರಬಲತೆ ಮತ್ತು ವಾತದ ಲಕ್ಷಣಗಳು -ಚಿಕಿತ್ಸೆ -ಪಥ್ಯ-ನೀರಡಿಕೆ ಚಿಕಿತ್ಸೆ ಹಾಗೂ ಮಲಗುವ ವಿಧಾನ -ದಾಹ, ಶಾಕೋಪಚಾರ- ಶರ್ಕರಾದಿ ಲೇಪ – ಶೋಥ-ಲೇಪ-ರೋಗಿಯ ಆಹಾರ

ಸಂಧಿಶೋಥ ಚಿಕಿತ್ಸೆ- ಉಪಸರ್ಗಗಳಲ್ಲಿ ಮೂತ್ರ ಪ್ರಯೋಗ – ಬಾಲಗ್ರಹಗಳು- ವಿವಿಧ ಬಾಲಗ್ರಹಗಳ ಲಕ್ಷಣಗಳು ಹಾಗೂ ಚಿಕಿತ್ಸೆ.

ಗ್ರಹರೋಗಗಳು: ಗ್ರಹ-ದೇವ- ಅಸುರ-ಗಂಧರ್ವ-ಯಕ್ಷ, ಭೂತ, ಪಿತೃ-ರಾಕ್ಷಸ-ಪಿಶಾಚಿ-ನಾಗಗ್ರಹ ಮೊದಲಾದವುಗಳ ಪೀಡೆಗಳ ಲಕ್ಷಣಗಳು ಹಾಗೂ ಚಿಕಿತ್ಸೆ -ಮಂತ್ರ -ಬಲಿದಾನ-ಮಹಾಮಯಘ್ನಘೃತ, ತೈಲ -ಧೂಪಗಳು.

೧೯ನೇ ಅಧ್ಯಾಯ : ವಿಷಜನ್ಯ ರೋಗಗಳು – ವಿಷಯುಕ್ತ ಆಹಾರ ಪರೀಕ್ಷೆ – ವಿವಿಧ ವಿಷಲಕ್ಷಣಗಳು (ಬಾಯಿ, ಹಲ್ಲುಗಳು, ಅಮಾಶಯ) ವಸ್ತ್ರಮೌಲ್ಯಾದಿಗತ ವಿಷ ಲಕ್ಷಣಗಳು -ಚಿಕಿತ್ಸೆ-ವಿಷಘ್ನಘೃತ-ಮದ್ಯಪಾನದಿಂದ ಅನರ್ಥ-ಹತ್ತುವಿಧಸ್ಥಾವರ ವಿಷ-ವಿಷದ ಹತ್ತು ಗುಣಗಳು- ದೂಷೀ ವಿಷ ಲಕ್ಷಣಗಳು-ಸ್ಥಾವರ ವಿಷದ ಸಪ್ತ ವೇಗ ಲಕ್ಷಣಗಳು -ವಿಷ ಚಿಕಿತ್ಸೆ, ಸರ್ಪದಂಷ್ಟ್ರ ಚಿಕಿತ್ಸಾ – ಮಂತ್ರ -ರಕ್ತ ಮೋಕ್ಷಣ -ವಿವಿಧ ಯೋಗಗಳು -ವಿಷಗುಣ-ಹಿಂಸ್ರಪ್ರಾಣಿ ಜನ್ಯ ವಿಷಯ ಅಸಾಧ್ಯ ಲಕ್ಷಣಗಳು- ಮೂಷಿಕಾ ವಿಷ ಲಕ್ಷಣ ಹಾಗೂ ಚಿಕಿತ್ಸೆ -ಕೀಟ ವಿಷ ವರ್ಣನೆ -ದಷ್ಟ ಲಕ್ಷಣ – ಕೀಟ ಭಕ್ಷಣ ಜನ್ಯ ವಿಷ ಚಿಕಿತ್ಸೆ -ಸರ್ವವಿಷನಾಶಕ ಅಗದ ಪಥ್ಯಪಥ್ಯ -ದುಸ್ಸಾಧ್ಯ ವಿಷಚಿಕಿತ್ಸೆ.

೨೦ನೇ ಅಧ್ಯಾಯ : ಸಪ್ತಧಾತುಗಳ ಉತ್ಪತ್ತಿ – ಲಕ್ಷಣಾಧಿಷ್ಠಾನ – ೬೦ ಪ್ರಕಾರದ ಉಪಕ್ರಮಗಳು ಹಾಗೂ ಚತುರ್ವಿಧ ಕರ್ಮ- ಅಗ್ನಿ ವೃದ್ಧಿಕಾರಕ ಉಪಾಯ – ಜಲಾದಿ ಸೇವನೆ.

ಭೋಜನದ ೧೨ ಭೇದಗಳು – ಶೀತ ಉಷ್ಣಲಕ್ಷಣಗಲು – ಸ್ನಿಗ್ಧ-ರೂಕ್ಷಭೋಜನ-ದ್ರವ, ಶುಷ್ಕ ಏಕಕಾಲ, ದ್ವಿಕಾಲ ಭೋಜನ – ಭೈಷಜ ಕರ್ಮ – ಪಂಚದಶ ಔಷಧ ಕರ್ಮ – ೧೦ ಔಷಧ ಕಾಲ – ಸ್ನೇಹ ಪಾಕಾದಿವರ್ಣನ – ವಿವಿಧ ಪಾಕಗಳು

ರಿಷ್ಟ ಲಕ್ಷಣಗಳು – ಮರಣ ನಿರ್ಣಯ – ಮರಣ ಸೂಚಕ ಸ್ವಪ್ನ, ನಿಷ್ಫಲ ಸ್ವಪ್ನಗಳು – ಅವುಗಳ ಫಲ- ಶುಭಸ್ವಪ್ನ- ಇತರ ಅರಿಷ್ಟ ಲಕ್ಷಣಗಳು.

ಶಾಖಾಗತ ಮರ್ಮ ವರ್ಣನೆ: ಕ್ಷಿಪ್ರ ಹಾಗೂ ತಲಹೃದಯ ಪೂರ್ವ ಕೂರ್ಚಕೂರ್ಚಶಿರಗುಲ್ಮ ಮರ್ಮ – ಇಂದ್ರಬಸ್ತಿ ಜಾನುಮರ್ಮ – ಅಣಿ ಹಾಗೂ ಊರ್ವಿಮರ್ಮ-ಲೋಹಿತಾ ಕ್ಷಮರ್ಮ- ವಿಟಪಮರ್ಮ-ಗುದ-ಬಸ್ತಿನಾಭಿಮರ್ಮಗಳು -ಹೃದಯ-ಸ್ತನಮೂಲ – ಸ್ತನ ರೋಹಿತಮರ್ಮ- ಕಪಾಲ – ಅಪಸ್ತಂಭಮರ್ಮ ಕಟಿಕತರುಣ- ಕುಂಕುಂದರ- ನಿಂತಂಬ- ಪಾರ್ಶ್ವ ಸಂಧಿ ಕಾರ್ಯಗಳು – ಬೃಹತೀ ಅಂಸಫಲಕ ಮರ್ಮ- ಕ್ರಕನ್ಯಾ ಅಂಸಮಮ್/ಊರ್ಧ್ವ ಜತೃಗತಮರ್ಮ- ಕುಕಾಟಿಕಾವಿಧುರಮರ್ಮ- ಫಣ ಅಪಾಂಗ ಮರ್ಮ – ಶಂಕ -ಆವರ್ತ ಉತ್ಪೇಪಶ ಸ್ಥಾಪನಿ – ಸೀಮಂತಮರ್ಮಮ ಶೃಂಗಾಟಕ ಅಧಿಮರ್ಮ-ಮರ್ಮಗಳ ಐದು ಭೇದಗಳು -ಸಧ್ಯ ಪ್ರಾಣಹರ ಹಾಗೂ ಕಾಲಾಂತರ ಪ್ರಾನಹರ ಮರ್ಮಗಳು – ಸಂಖ್ಯೆ

೨೧ನೇ ಅಧ್ಯಾಯ: ಮಹತ್ವ – ಅಗ್ನಿಕರ್ಮ- ವರ್ಜ್ಯಕಾಲ- ಭೇದ- ಚರ್ಮದಗ್ಧ- ಮಾಂಸದಗ್ಧ ಲಕ್ಷಣ – ದಹನ ಯೋಗ್ಯ ಸ್ಥಾನ – ಸಹಜ ಸಾಧ್ಯರೋಗ ಹಾಗೂ ಸಹನಪಶ್ಚಾತ್ ಕರ್ಮಗಳು- ಅಗ್ನಿಕಾರ್ಯಕ್ಕೆ ಅಯೋಗ್ಯ ಮನುಷ್ಯ – ನಾಲ್ಕು ಭೇದಗಳು – ಸ್ಪಷ್ಟ-ಸಮ್ಯಕ್‌ದಗ್ಧ-ದುರ್ದಗ್ಧ-ಅತೀದಗ್ಧ ಲಕ್ಷಣ – ಚಿಕಿತ್ಸೆ- ರೋಪಣ ಕ್ರಿಯೆ- ಸವರ್ಣಕರಣ ವಿಧಾನ- ಅನುಶಸ್ತ್ರ ವರ್ಣನ – ರಕ್ತಸ್ರಾವದ ಉಪಾಯಗಳು – ಜಲೌಕ ಲಕ್ಷಣ – ಅಲಗರ್ದಾ-ಇಂದ್ರಾಯುಧಾ- ಸಾಸುದ್ರಿಕಾ-ಗೋಚಂದನ-ಸವಿಷಜಲಾಕ ಲಕ್ಷಣ – ಚಿಕಿತ್ಸೆ- ನಿರ್ವಿಷ ಜಲೌಕ ಲಕ್ಷಣ -ಕಪಿಲಾ-ಐಂಗಲಾ ಮೂಷಿಕಾ -ಶಂಖಮೂಖೀ- ಪುಂಡರೀ ಶಮುಖೀ ಸಾವಾರಿಕಾ ಲಕ್ಷಣ – ಜಲೌಕಗಳು ಇರುವ ಸ್ಥಳ-ಪಾಲನವಿಧಿ – ಪ್ರಯೋಗ- ರಕ್ತಹೀರಿದ ನಂತರದ ಕ್ರಿಯೆ – ಶುದ್ಧ ರಕ್ತ ಹರಣದಲ್ಲಿ -ಪ್ರತಿಕ್ರಿಯೆ- ರಕ್ತಿ ಸಲ್ಲಿಸುವ ವಿಧಾನ- ಅಯೋಗ್ಯ ಜಲೌಕಾ ಲಕ್ಷಣ – ಶಾಸ್ತ್ರಕರ್ಮವರ್ಣನ -ಅಷ್ಟವಿಧಿ ಶಸ್ತ್ರ ಕರ್ಮಗಳು-ಶಲ್ಯಾ ಹರಣ ವಿಧಿ – ಸೀವನ-ಸಂಧಾನ – ಉತ್ಫೀಡನ -ರೋಪಣ-ಶಸ್ತ್ರ ಕರ್ಮವಿಧಿ- ಅರ್ಶವಿದಾರಣ- ಶಿರಾವ್ಯಧವಿಧಿ -ಅಧಿಕ ಸ್ರಾವವಾದರೆ ಅಪಾಯ- ಶುದ್ಧ ಅಶುದ್ಧ ರಕ್ತ ಲಕ್ಷಣ- ತ್ರಿದೋಷಗಳಿಂದ ದೂಷಿತ ರಕ್ತ – ಶಿರಾವ್ಯಧಕ್ಕೆ ಅಯೋಗ್ಯ ವ್ಯಕ್ತಿ – ಅಂತಿಮ ಕಥನ.

೨೨ನೇ ಅಧ್ಯಾಯ: ಸ್ನೇಹದ ವಿಧಿ ಸರಿಯಾಗದಿದ್ದರೆ ಆಗುವ ತೊಂದರೆಗಳು ಘೃತಪಾನ ಪ್ರಮಾಣ -ಅರ್ಹವ್ಯಕ್ತಿ-ಸಧ್ಯಸ್ನೇಹನ ಯೋಗ – ರೂಕ್ಷ ಮನುಷ್ಯನ ಲಕ್ಷಣಗಳು- ಅತಿಸ್ನಿಗ್ಧ ಲಕ್ಷಣ ಹಾಗೂ ಚಿಕಿತ್ಸೆ.

ಸ್ವೇದನ ಕಾರ್ಯ: ಸ್ವೇದದ ಯೋಗ – ಅತಿ ಯೋಗ – ಭೇದ – ತಪ- ಉಷ್ಮಸ್ವೇದ- ಚತುರ್ವಿಧ ಸ್ವೇದಗಳು – ಗುಣ -ಲಕ್ಷಣಗಳು – ಅತಿಯೋಗ ಲಕ್ಷಣಗಳು

ವಮನ ವಿರೇಚನ: ಪ್ರಾಧಾನ್ಯತೆ. ವಮನದಲ್ಲಿ ಭೋಜನ ವಿಧಿ – ವಮನ ಕಾಲ ಹಾಗೂ ಔಷಧಿ

ವಮನ: ವಿರೇಚನೌಷಧಗಳ ಸ್ವರೂಪ-ವಮನವಿಧಿ-ಸಮ್ಯಕ್ ವಮನ ಲಕ್ಷಣ- ಪಶ್ಚಾತ್ ಕರ್ಮ – ಗುಣ – ತದನಂತರ ವಿರೇಚನ- ಭೋಜನಪಾನ- ವಿರೇಚಕ ಔಷಧದಾನ ವಿಧಿ – ವಿವಿಧ ಕೋಷ್ಠಗಳಲ್ಲಿ ಪ್ರಯೋಗಿಸಬೇಕಾದ ಔಷಧಗಳು – ಸಮ್ಯಕ್ ವಿರೇಚನ ಗುಣಗಳು – ದುರ್ಬಲರಿಗೆ ವಿರೇಚನ, ಸಂಶೋಧನ ಕರ್ಮದಲ್ಲಿ ೧೫ ಪ್ರಕಾರದ ವ್ಯಾಪತ್ತಿಗಳು ಹಾಗೂ ಚಿಕಿತ್ಸೆ- ಪ್ರವಾಹಿಕಾ ಲಕ್ಷಣ – ಬಸ್ತಿಗುಣ ಹಾಗೂ ದೋಷಗಳು – ವಿವಿಧ ವ್ಯಾಪತ್ತಿ ಚಿಕಿತ್ಸೆಗಳು – ಅಯೋಗ- ಅಧ್ಮಾನ ಲಕ್ಷಣ ಹಾಗೂ ಚಿಕಿತ್ಸೆ ಹೃದಯೋಪಸರಣ ಲಕ್ಷಣ – ಚಿಕಿತ್ಸೆ, ಅತಿಯೋಗ ಲಕ್ಷಣ ಹಾಗೂ ಚಿಕಿತ್ಸೆ- ಜೀವಾದಾನ ಹಾಗೂ ಅದರ ಚಿಕಿತ್ಸೆ – ಅನುಬಸ್ತಿವಿಧಿ- ಮೂತ್ರಾ- ಖಾಲಿ ಹೊಟ್ಟೆಯಲ್ಲಿ ಬಸ್ತಿ ಕೊಡಬಾರದು-ವಿವಿಧ ಬಸ್ತಿ ಪ್ರಯೋಗಗಳು -ಶೋಧನ-ಲೇಖನ -ಬೃಂಹಣ -ಶಮನ-ವಾಜೀಕರಣ ಇತ್ಯಾದಿ- ಶೂಲಘ್ನ ಬಸ್ತಿ – ಸಿದ್ಧಬಸ್ತಿ- ಉಪಸಂಹಾರ.

೨೩ನೇ ಅಧ್ಯಾಯ : ನೇತ್ರಬಸ್ತಿ ಉತ್ತರಬಸ್ತಿ (Douche) ಪ್ರಯೋಗ ವಿಧಿ- ಪ್ರಮಾಣ-ವಿವಿಧ ದೋಷಗಳಲ್ಲಿ – ಸಾಧ್ಯಾಸಾಧ್ಯ ವಿಚಾರ- ದೋಷಜನ್ಯವಿರ್ಯ ರೋಗಿಯ ಚಿಕಿತ್ಸೆ-ರಜೋವಿರ್ಯ ದೋಷಗಳಲ್ಲಿ ಉತ್ತರಬಸ್ತಿಯ ಪ್ರಾಮುಖ್ಯತೆ -ಶುದ್ಧ ಶುಕ್ರಾರ್ತವಗಳ ಲಕ್ಷಣ- ಸ್ತ್ರಿ ಪುರುಷರಲ್ಲಿ ನಪುಂಸಕತೆ -ಗರ್ಭಾಧಾನ ವಿಧಿ – ಸಧ್ಯೋಗ್ರಹಿತ ಗರ್ಭಿಣಿ ಲಕ್ಷಣ- ಗರ್ಭಿಣಿ ಚರ್ಯೆ, ಪ್ರಸವ ವಿಧಿ – ಜನ್ಮೋತ್ತರ ವಿಧಿ – ಅಪರಾ (Plecenta)ಪತನ ಉಪಾಯ-ಸೂತಿಕೋಪಚಾರ-ಉತ್ತರ ಬಸ್ತಿಯ ವಿಶೇಷ ಗುಣ-ಧೂಮಪಾನ ವಿಧಾನ ಹಾಗೂ ವಿವಿಧ ಧೂಮಪಾನ ವಿಧಿಗಳು – ಕಾಲ -ಗಂಡೂಷ , ನಸ್ಯ- ಶಿರೋವಿರೇಚನ ನಸ್ಯ – ಶೋಥ- ವ್ರಣ ಶೋಧ- ವಿವಿಧ ಶೋಥ (odema) ಶೋಧೋಪಶಮನ ವಿಧಿ- ಬಂಧನ ವಿಧಿ- ಅಜ, ವೈದ್ಯನಿಂದೆ- ಪಲಿತ ನಾಶಕ ತೈಲ- ಲೇಪ – ಕೂದಲು ಕಪ್ಪು ಮಾಡುವ ಲೇಪ – ತೈಲ – ವಯಃಸ್ತಂಭನ ನಸ್ಯ- ಅಂತಿಮ ಕಥನ.

೨೪ನೇ ಅಧ್ಯಾಯ: ಪಾದರಸದ ತ್ರಿವಿಧ ಸಂಸ್ಕಾರ – ಮೂರ್ಛನ – ಮಾರನ- ಬದ್ದರಸಗುಣ – ರಸಬಂಧನ ವಿಧಿ- ರಸಾಶಾಲಾ ನಿರ್ಮಾಣ ವಿಧಿ – ರಸಸಂಸ್ಕಾರ ವಿಧಿ-ಪ್ರಯೋಗವಿಧಿ – ಅಂತಿಮ ಕಥನ.

೨೫ನೇ ಅಧ್ಯಾಯ: ಹರೀತಕಿ – ತ್ರಿಫಲಾ-ಶಿಲಾಜಿತು- ಪಾಷಾಣಭೇದ ಕಲ್ಪ – ಭಲ್ಲಾತಕ ಪಾಷಾಣ ಕಲ್ಪ – ಬರ್ಪರಿಕಲ್ಪ – ವಜ್ರಕಲ್ಪ- ಮೃತ್ತಿಕಾ ಕಲ್ಪ – ಹೋಶೃಂಗ್ಯಾದಿಕಲ್ಪ-ಏರಂಡಾದಿಕಲ್ಪ – ಕ್ಷಾರ ಕಲ್ಪ- ಚಿತ್ರಕಲ್ಪ – ತ್ರಿಫಲಾದಿ ಕಲ್ಪ- ಅಂತಿಮ ಕಥನ.

ಪರಿಶಿಷ್ಟರಿಷ್ಟಾಧ್ಯಾಯ: ವೃದ್ಧರಲ್ಲಿ ಮರಣ ಭಯ – ರಿಷ್ಟ ಲಕ್ಷಣ – ವಿವಿಧ ತಿಂಗಳುಗಳಲ್ಲಿ ಕಂಡುಬರುವ ಮರಣ ಲಕ್ಷಣಗಳು – ಮರಣದ ವಿಶೇಷ ಲಕ್ಷಣಗಳು – ರಿಷ್ಟ ಲಕ್ಷಣಗಳು ಪ್ರಕಟವಾದಾಗ ಆತ್ಮನ ಕರ್ತವ್ಯ – ಉಪಸಂಹಾರ.