ಲೇಖಕ : ಮಂಗರಾಜ ( ಮಂಗರಸ)
ಸಂಪಾದನೆ : ಎ.ವೆಂಕಟರಾವ್ ಪಂಡಿತ ಎಚ್.ಶೇಷ ಅಯ್ಯಂಗಾರ್
ಪ್ರಕಾಶಕರು: ಮದ್ರಾಸ್ ವಿಶ್ವವಿದ್ಯಾಲಯ – ೧೯೪೨, ಕನ್ನಡ ಸಿರೀಜ್ – ನಂ.೯

ಮಂಗರಸನ ಬಗ್ಗೆ ನಾವು ಈಗಾಗಲೇ ಕೆಲ ವಿಚಾರಗಳನ್ನು ತಿಳಿದುಕೊಂಡಿದ್ದೇವೆ. ಇದೀಗ ಅವನ ರಚನೆ ಖಗೇಂದ್ರ ಮಣಿದರ್ಪಣದ ಬಗೆಗೆ ತಿಳಿದುಕೊಳ್ಳೋಣ.

ಈ ಗ್ರಂಥಕ್ಕೆ ಕವಿಯು ‘ಖಗೇಂದ್ರ ಮಣಿ ದರ್ಪಣ’ವೆಂದು ಹೆಸರಿಸಲು ಪಕ್ಷಿಗಳಿಗೆಲ್ಲ ಒಡೆಯನಾದ ಗರುಡನು ಸರ್ಪಗಳಿಗೆ ವೈರಿ ಎಂದೂ ಅವನಿಂದ ಸರ್ಪಗಳ ವಿಷವು ಪರಿಹಾರವಾಗುವುದೆಂದು, ಗರುಡ ಮಣಿ, ಗರುಡ ಪಚ್ಚೆ ಎಂಬ ರತ್ನದಿಂದಲೂ ವಿಷವು ನಾಶವಾಗುವುದೆಂದೂ ರೂಢಿಯಲ್ಲಿರುವುದೇ ಕಾರಣ. ಆದುದರಿಂದಲೇ ಖಗೇಂದ್ರ ಮಣಿ ಶಬ್ದಕ್ಕೆ ರಕ್ಷಣೆಯಿಂದ ವಿಷಾಪಹಾರಕೋಪಾಯವೆಂದು ಅರ್ಥ ಹೇಳಿ ಇದಕ್ಕೆ ‘ಮಣಿ’ ದರ್ಪಣದಂತಿರುವುದರಿಂದ ಎಂದರೆ ವಿಷಾಪಹಾರಕೋಪಾಯವನ್ನು ಸ್ಪಷ್ಟವಾಗಿ ತಿಳಸುವುದರಿಂದ ಖಗೇಂದ್ರಮಣಿದರ್ಪಣ ಎಂಬ ಹೆಸರು ಅನ್ವರ್ಥಕವಾಗಿದೆ. ಸರ್ಪಗಳ ನಿಜ ವಿಷಗಳಲ್ಲದೆ ನಾವು ಆಹಾರದಲ್ಲಿ ಉಪಯೋಗಿಸುವ ಅಕ್ಕಿ,ರಾಗಿ, ಮೊದಲಾದ ಎಲ್ಲ ಪದಾರ್ಥಗಳಲ್ಲಿಯೂ ವಿಷಾಂಶವಿರುವುದೆಂದು ಈತನು ಪ್ರತಿಪಾದಿಸಿ ಅದಕ್ಕೆಲ್ಲ ಪರಿಹಾರ ಹೇಳಿದ್ದಾನೆ. ವಿಷಶಬ್ಧ ಪರ್ಯಾಯವಾಗಿ ಅಲ್ಲಲ್ಲಿ ನೊರ್ಕು, ಮದಗಳೆಂಬ ಶಬ್ಧಗಳನ್ನು ಬಳಸಿರುವನು. ಗ್ರಂಥವನ್ನು ಹದಿನಾರು ವಿಭಾಗ ಮಾಡಿ ಒಂದೊಂದು ವಿಭಾಗಕ್ಕೂ ‘ಅಧಿಕಾರ’ ವೆಂಬ ಹೆಸರು ಕೊಟ್ಟಿರುವನು, ಇದನ್ನು ತೀರ್ಥಂಕರ ಪೂಣ್ಯನಿದಾನ ಕಾರಣವಾದ ಷೋಡಶಭಾವನೆಗಳಂತೆ ಷೋಢಶಾಧಿಕಾರವನ್ನು ಮಾಡಿರುವೆನೆಂದು ಕವಿಯೇ ಗ್ರಂಥದ ಕೊನೆ (೧೬ನೇ ಅಧ್ಯಾಯ)ಯಲ್ಲಿ ಒಂದು ಕಂದ ಕಾವ್ಯದಲ್ಲಿ ಹೇಳಿರುವನು.

ಗ್ರಂಥದಲ್ಲಿ – ಅಲ್ಲಲ್ಲಿ ಹಳೆಗನ್ನಡ ಪದಗಳನ್ನು ಬಹುವಾಗಿ ಉಪಯೋಗಿಸಿರುವನು. ಒಂದೆರಡು ಕಡೆ ಹೊಸಗನ್ನಡ ಪ್ರಯೋಗವು ಇದ್ದಂತೆ ಕಂಡುಬರುವುದು.ಇದೊಂದು ಶಾಸ್ತ್ರಗ್ರಂಥವಾದರು ಇದರಲ್ಲಿ ಕಾವ್ಯಶೈಲಿಯಂತೆ ಅಲ್ಲಲ್ಲಿ ಅಪೂರ್ವವೂ ಅರ್ಥಪೂರ್ಣವುಳ್ಳ ಹಲವು ಉಪಮಾನಗಳೂ ದೊರೆಯುವುವು. ಕವಿಯು ಅಲ್ಲಲ್ಲಿಗೆ ಅಪೂರ್ವವಾದ ಸಂಸ್ಕೃತ ಶಬ್ಧಗಳನ್ನೂ ಪ್ರಯೋಗಿಸಿರುವನು. ಒಟ್ಟಿನಲ್ಲಿ ಈ ಗ್ರಂಥವು ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸ್ವರೂಪವನ್ನು ತಿಳಿಸುವುದೇ ಗ್ರಂಥದ ಪ್ರಯೋಜನವಾಗಿರುವುದರಿಂದ ಈ ಗ್ರಂಥವು ಗಾರುಡದಿಂದ ಧರ್ಮವನ್ನು ಪ್ರತಿಪಾದಿಸುವುದೆಂದು ಕವಿಯೇ ಧರ್ಮಾರ್ಥ’ ವೆಂಬ ೫೦ನೇ ಪದ್ಯದಲ್ಲಿ ವಿವರಿಸಿದ್ದಾನೆ. ವಿಷಾದಿಗಳಿಂದ ಜೀವಿಸುವಂತೆ ಮಾಡುವ ಔಷಧಿಗಳನ್ನು ವಿವರಿಸಿ ಹೇಳಿರುವ ಈ ಗ್ರಂಥಕ್ಕೆ ‘ಮೃತ ಸಂಜೀವಿನಿ’ ಅಥವಾ ‘ಜೀವಿತ ಚಿಂತಾಮಣಿ’ ಎಂದು ಹೇಳಿರುವುದೂ ಅತಿಶಯೋಕ್ತಯಾಗಿರಲಾರದು. ಗ್ರಂಥದ ವಿಷಯವನ್ನು ಈ ಕೆಳಗೆ ಕೊಡಲಾಗಿದೆ.

. ಮೊದಲನೆ ಅಧಿಕಾರದಲ್ಲಿ: ಇಷ್ಟದೇವತಾ ನಮಸ್ಕೃತಿ ಪೂರ್ವಕ ಮಂಗಳವಾದ ಬಳಿಕ ಪ್ರಕೃತ ಗ್ರಂಥ, ಗ್ರಂಥಕರ್ತೃಗಳ ವಿಷಯವನ್ನು ನಿರೂಪಿಸಿ ಗ್ರಂಥವು ಆರಂಭವಾಗಿದೆ. ವಿಷವು ಹತ್ತು ವಿಧವಾಗಿರುವುದು (ಉರಗಾದಿ) ಅವು ಸ್ಥಾವರ, ಜಂಗಮ, ಕೃತ್ರಿಮಗಳೆಂದು ಮೂರು ಬಗೆ. ಸ್ಥಾವರವು ೨೫ವಿಧ. ಅವುಗಳಲ್ಲಿ ಎಂಟು ಜಾಗಿಗಳುಂಟು. ಸ್ಮಶಾನಾದಿ ವಿಷಮ ಸ್ಥಳದಲ್ಲಿರುವ ಸರ್ಪದಷ್ಟನ ವಿಷೋದ್ಧರಣವು ಚಿಕಿತ್ಸೆಗೆ ಅಸಾಧ್ಯವಾದುದು. ಔಷಧಿಗಳ ಸಂಗ್ರಹಣಕಾಲ, ಔಷಧದಲ್ಲಿ ಪ್ರಸವಾದಿ ಪಂಚವಿಧಗಳ ಉತ್ತರೋತ್ತರ ಶಕ್ತ್ಯಾಧಿಕ್ಯ, ಸದ್ವೈದ್ಯಲಕ್ಷಣ, ದುರ್ವೈದ್ಯಲಕ್ಷಣ ಇವುಗಳನ್ನು ಹೇಳುವುದರೊಡನೆ ಈ ಅಧಿಕಾರವು (ಸಂಜ್ಞಾಧಿಕಾರ) ಮುಗಿಯುವುದು.

. ಎರಡನೆಯ ಅಧಿಕಾರದಲ್ಲಿ: ಸ್ಥಾವರ ವಿಷಭೇದ, ವಿಷಾಕ್ರಾಂತ ಲಕ್ಷನ, ಅವುಗಳ ಪರಿಹಾರಕ್ಕೆ ನಸ್ಯ, ಪೇಯ, ಲೇಪ, ಅಂಜನಾದಿ ನಾ‌ಲ್ಕು ಬಗೆಯ ಔಷಧಿಗಳು ಮಂತ್ರಗಳು.

. ಮೂರನೆಯ ಅಧಿಕಾರದಲ್ಲಿ: ದಷ್ಟನಿಗೆ ಮಾಡತಕ್ಕ ಸಂಗ್ರಹಾದಿ ಎಂಟು ಬಗೆಯ ಕಾರ್ಯಗಳು, ಅಷ್ಟಕುಲ ಸರ್ಪಲಕ್ಷಣ, ಅವುಗಳ ದಂಶಪ್ರಕಾರ, ಲಕ್ಷಣ, ದಂಶನವಾರ, ವೈದ್ಯ ಅಥವಾ ಮಾಂತ್ರಿಕನಲ್ಲಿ ಬರುವ ಧೂತ ಲಕ್ಷಣದಿಂದ ಸಾಧ್ಯಾಸಾಧ್ಯಾ ನಿಶ್ಚಯ ಮೊದಲಾಗಿ, ಹಲವು ಬಗೆಯ ದಷ್ಟಶೋಧನ ಪ್ರಕಾರಗಳು ಉಕ್ತವಾಗಿವೆ.

. ನಾಲ್ಕನೆಯ ಅಧಿಕಾರದಲ್ಲಿ: ದಷ್ಟನಿಗೆ ಮಾಡತಕ್ಕ ಸಂಗ್ರಹಾದ್ಯಷ್ಟ ವಿಧ ಶೋಧನ ಕಾರ್ಯವಿಧಾನವು ಹಲವು ಮಂತ್ರಗಳೊಡನೆ ಹೇಳಲಾಗಿದೆ.

. ಐದನೆಯ ಅಧಿಕಾರದಲ್ಲಿ: ವಿಷವನ್ನು ನಿರ್ಮೂಲಿಸುವ ಹಲವು ಬಗೆಯ ಪಾನೌಷಧಿಗಳು – ಮಂತ್ರಗಳೊಡನೆ ಹೇಳಲಾಗಿದೆ.

. ಆರನೆಯ ಅಧಿಕಾರ: ಇದರಲ್ಲಿ ವಿಷಹರಣಕ್ಕೆ ತಕ್ಕ ಹಲವು ಅಂಜನಗಳನ್ನು ಹೇಳಲಾಗಿದೆ.

. ಏಳನೆಯ ಅಧಿಕಾರದಲ್ಲಿ: ವಿಷಹರಣಕ್ಕೆ ತಕ್ಕ ನಸ್ಯವಿಧಾನಗಳನ್ನು ಹೇಳಲಾಗಿದೆ.

. ಎಂಟನೆಯ ಅಧಿಕಾರದಲ್ಲಿ: ನಿರ್ವಿಷಿಕರಣಕ್ಕೆ ಹಲವು ಲೇಪ ವಿಧಾನಗಳನ್ನು ಹೇಳಲಾಗಿದೆ.

. ಒಂಬತ್ತನೆಯ ಅಧಿಕಾರದಲ್ಲಿ: ಪಾನಾದಿ ಸಕಲಕ್ರಿಯೆಗೂ ತಕ್ಕ ಔಷಧಿ ಕ್ರಮಗಳನ್ನು ಹೇಳಲಾಗಿದೆ.

೧೦. ಹತ್ತನೆಯ ಅಧಿಕಾರದಲ್ಲಿ : ಮಂಡಲ ಹಾವುಗಳ ಭೇದ, ಅವುಗಳ ವಂಶ ಲಕ್ಷಣ, ತತ್ಪರಿಹಾರಕ ಮಂತ್ರೌಷಧಗಳು (ಪಾನ, ಲೇಪನ, ನಸ್ಯ, ಅಂಜನಗಳು) ಹೇಳಲ್ಪಟ್ಟಿವೆ.

೧೧. ಹನ್ನೊಂದನೆಯ ಅಧಿಕಾರದಲ್ಲಿ: ಚೇಳಿನ ಭೇದಗಳು, ಅವುಗಳ ಕಡಿತಕ್ಕೆ ನಿವಾರಕವಾದ ಪಾನಾಂಜನ ನಸ್ಯ ಲೇಪಾದಿಗಳ ವಿವರಣೆ ಇದೆ.

೧೨. ಹನ್ನೆರಡೆಯ ಅಧಿಕಾರದಲ್ಲಿ: ಇಲಿ ಹೆಗ್ಗಣಗಳ ಜಾತಿ ಭೇದ- ಅವುಗಳ ವಿಷಕ್ಕೆ ತಕ್ಕ ನಸ್ಯಪಾನ ಲೇಪಾಂಜನೌಷಧಗಳ ವಿವರಣೆ ಇದೆ.(ಈ ಪ್ರಕರಣದಲ್ಲಿ ಇಲಿಗಳು ಕರುಣೆಗಳ ಕಾರುವುದಕ್ಕೂ ಔಷಧಿಯನ್ನು ಹೇಳಲಾಗಿದೆ.)

೧೩. ಹದಿಮೂರನೆಯ ಅಧಿಕಾರದಲ್ಲಿ: ತೋಳ, ಹುಲಿ, ಆನೆ,ಹಂದಿ, ನರಿ ಮೊದಲಾದ ಮೃಗಗಳು, ಶಿಂಶುವಾರ, ಆಮೆ, ಮಕೆ ಮೊದಲಾದ ಜಲಚರಗಳು ಲಾವಿಗೆ ಪಾರಿವಾಳ ಮೊದಲಾದ ಪಕ್ಷಿಗಳು, ಇರುವೆ, ನೊಣ ಮೊದಲಾದ ಕ್ಷುದ್ರ ಜೀವಿಗಳು, ದಂತ, ನಖಗಳು – ಇವೇ ಮೊದಲಾದ ಸರ್ವಜಂಗಮ ವಿಷ ಸ್ವರೂಪ ತನ್ನಿವಾರಣ ಔಷಧಗಳು, ಮಂತ್ರಗಳೊಡನೆ ಹೇಳಲ್ಪಟ್ಟಿವೆ.

೧೪. ಹದಿನಾಲ್ಕನೆಯ ಅಧಿಕಾರದಲ್ಲಿ: ಸರ್ವಕೃತ್ರಿಮ ವಿಷಸ್ವರೂಪ, ತನ್ನಿವಾರಣೊಪಾಯಗಳು ವರ್ಣಿತವಾಗಿವೆ. ಈ ಅಧಿಕಾರದಲ್ಲಿ ಕೆಲವು ದ್ರಾವಿಡ ಮಂತ್ರಗಳೂ ಇವೆ.

೧೫. ಹದಿನೈದನೆಯ ಅಧಿಕಾರದಲ್ಲಿ: ಬಾಷ್ಪ(ಷ್ಮ) ವಿಧಾನವನ್ನು ಹೇಳಲಾಗಿದೆ. ಈ ಬಾಷ್ಪವು ಪಿತ್ತಶ್ಲೇಷ್ಮಾದಿ ಇಪ್ಪತ್ಮೊಂದು ಬಗೆಯೆಂದು ವಿಂಗಡಿಸಿ ಅದಕ್ಕೆ ಪರಿಹಾರವನ್ನು ಹೇಳಲಾಗಿದೆ. ಈ ಬಾಷ್ಪ ಭೇದಗಳು ೮೪ ಎಂದೂ, ಇದೊಂದು ಬಹುಮುಖ್ಯವಿಧಾನವೆಂದೂ ಹೇಳಲಾಗಿದೆ.

೧೬. ಹದಿನಾರನೇ ಅಧಿಕಾರದಲ್ಲಿ: ನಾಗಾಕೃಷ್ಣ, ನಾಗಸಹಾಗಮನ ಮೊದಲಾದ ನಾಗಕ್ರೀಡೆಗಳನ್ನು ಮಂತ್ರಗಳೊಡನೆ ವಿವರಿಸಿದೆ. ವಿಷಭಕ್ಷಣವನ್ನು ಮಾಡತಕ್ಕ ಕ್ರಮ (ವಿಷಭಕ್ಷಣದಿಂದ ಅಪಾಯವಾಗದಿರುವಿಕೆ) ಶಬ್ದ ನಿರ್ವಿಷ ಮಂತ್ರವಿಧಾನ, ಭೂತ ನಿರ್ವಿಷವಿಧಾನ, ಸರ್ಪೋಚ್ಛಾಟನೆ, ವಿಷಕ್ಕೆ ಕವಳ ಪ್ರಯೋಗ, ವಾಂತಿಯ ಔಷಧ, ಉಪನಾಹ(ವ್ರಣಕ್ಕೆ ಕಟ್ಟುವ ಪಿಂಡ ವಿಧಾನ) ವಿಷದ ಬಾವಿಗೆ ಔಷಧಿ, ಮೂಷಕ ವಿಷಭಾದ್ಯುಚ್ಛಾಟನ, ವೃಶ್ಚಿಕಾದಿಗಳ ಉಚ್ಛಾಟನೆ ಧೂಪ ವಿಧಾನ, ಎಣ್ಣೆಯ ಮದ್ದು, ವಿಷವ್ರಣಹಾರಕಗಳಾದ ಕರಿಕು, ವ್ಯಾಘ್ರ ಮುಖಸ್ತಂಭನಾದಿ, ಮಂತ್ರವಿಧಾನ, ನಿರ್ವಿಷದ ಉಂಗುರ ನಿರ್ಮಾಣ ವಿಧಾನ, ಸರ್ವವಿಷಹತೌಷಧ, ವಿಷವು ದೇಹಕ್ಕೆ ವ್ಯಾಪಿಸದಂತೆ ಔಷಧಿ ಸೇವನೆ ಮಾಡುವಿಕೆ ಮುಂತಾದ ಸಂಕಿರ್ಣ ವಿಷಯಗಳನ್ನು ಹೇಳಲ್ಪಟ್ಟಿವೆ.

ಕವಿಯು ಆದಿಯಲ್ಲಿ ಶಿಷ್ಟಾಚಾರವನ್ನನುಸರಿಸಿ ಗ್ರಂಥದ ನಿರ್ವಿಘ್ನತಾಪರಿ ಸಮಾಪ್ತಿಗಾಗಿ ತಾನು ಜೈನ ಮತದವನಾದುದರಿಂದ ಸ್ತುತಿಸಿ ಪೂಜ್ಯಪಾದರು, ವೀರಸೇನ, ಕುಂದಕುಂದ ಮುನಿ, ಮತ್ತೊಮ್ಮೆ ಪೂಜ್ಯಪಾದ, ಭಾನುಕೀರ್ತಿ, ಮಲಧಾರಿ, ಸೋಮು ಅವರ ಶಿಷ್ಯ ಧರ್ಮಭೂಷಣ, ವರ್ಧಮಾನ ಮುನಿ, ಲಕ್ಷ್ಮಿಸೇನ, ಮಾಣಿಕ್ಯನಂದಿ, ಸಾರತ್ರಯದೇವಿಯೆನಿಪ ‘ಕೇಶವವರ್ಮ’- ಇನ್ನೂ ಜೈನಧರ್ಮಕ್ಕರ್ಮರಪ್ಪ ಸಕಲ ಮುನಿಗಳು- ಇವರನ್ನು ವಂದಿಸಿ ಪ್ರಕೃತದಲ್ಲಿ ಖಗೇಂದ್ರಮಣಿದರ್ಪಣ’ವೆಂಬ ವಿಷಶಾಸ್ತ್ರವನ್ನು ಬರೆಯುವುದಾಗಿ ಪ್ರತಿಜ್ಞೆ ಮಾಡುವನು. ಬಳಿಕ ಹೊಯ್ಸಳ ವಂಶದ ಅನ್ವರ್ಥನಾಮವನ್ನು ವಿವರಿಸಿ ಆ ಹೊಯ್ಸಳ ನಾಡನ್ನು ಹರಿಹರನು ಆಳುತ್ತಿರುವನು. ಆ ದೇಶದ ದೇವಳಿಗೆ ನಾಡಿನಲ್ಲಿ ಮಗಳೀಪುರವು ರಾರಾಜಿಸುತ್ತಿರುವುದು. ಅದರ ಅರಸು ಮಂಗರಾಜನು. ಆತನ ಪತ್ನಿ ಪೆರ್ಮಲೆ, ಇವರಿಬ್ಬರಿಗೂ ಮಂಗಮನ್ಮಥ(ಮಂಗಣವರ್ಮ) ಎಂಬ ಪುತ್ರನು ಜನಿಸಿದನು. ಈತನನ್ನು ವಿಭುದರು ಕವೀಶನೆಂದು ಹೊಗಳುತ್ತಿರುವರು. ಆ ಮಂಗವಿಭುವೇ ನಾನು. ಜಿನೋಕ್ತಿಯಲ್ಲಿ ಗರ್ಭೀಕೃತವಾದ ಈ ಶಾಸ್ತ್ರವನ್ನು (ಭಾಷೆ-ಅರ್ಥ ಮಾಗದಿ – ಸರ್ವಭಾಷಾತ್ಮಕ) ಕನ್ನಡ ಭಾಷೆಯಲ್ಲಿ ವಿವರಿಸುವೆನು ಎಂದು ಹೇಳಿ ಪ್ರಕೃತ ಗ್ರಂಥದ ಪ್ರಯೋಜನವು ಸಾಮಾನ್ಯ ಕಾವ್ಯಗಳಿಗಿಂತಲು ಅಪಾರವಾದುದೆಂದು ಪ್ರತಿಪಾದಿಸಿ ಧರ್ಮಾರ್ಥಕಾಮಗಳಲ್ಲಿ ಒಳ್ವನ್ನೊದಗಿಸುವ ಈ ಕಾವ್ಯವು ಮೋಕ್ಷವನ್ನು ಕೊಡುವುದೆಂದು ಹೇಳಿ ಈ ಗ್ರಂಥವನ್ನು ಪ್ರಾರಂಭಿಸಿರುವನು.

* * *

ಕಲ್ಯಾಣಕಾರಕದ ೧೯ನೇ ಅಧ್ಯಾಯ ‘ವಿಷ ರೋಗಾಧಿಕಾರ’ದಲ್ಲಿ ಅರಸರನ್ನು ವಿಷಪ್ರಯೋಗದಿಂದ ರಕ್ಷಿಸುವ ಬಗೆ, ಆಹಾರಪದಾರ್ಥಗಳಲ್ಲಿ ಸೇರಿದ ವಿಷವನ್ನು ಪರೀಕ್ಷಿಸುವ ಬಗೆ, ಮದ್ಯಪಾನ, ಧಾತುವಿವಜನ್ಯ ಲಕ್ಷಣ, ಸ್ಥಾವರ-ಜಂಗಮಾದಿ ವಿಷಗಳು ಹಾಗೂ ಅವುಗಳ ಚಿಕಿತ್ಸೆ, ಪಥ್ಯಾಪಥ್ಯ ಆಹಾರ- ವಿಹಾರಗಳು -ಹೀಗೆ ೧೪೮ ಶ್ಲೋಕಗಳಲ್ಲಿ ಈ ವಿಷಯವನ್ನು ವಿವರಿಸಲಾಗಿದೆ.