೧೦. ವಸ್ತ್ರಧಾರಣೆ (ಬಟ್ಟೆ ಹಾಕಿಕೊಳ್ಳುವುದು)

ಸ್ನಾನದ ನಂತರ ಬಟ್ಟೆಯಿಂದ ಚೆನ್ನಾಗಿ ಮೈಯನ್ನು ಒರೆಸಿಕೊಂಡು ನಂತರ ಅನುಲೇಪನಗಳನ್ನು ಅವಶ್ಯಕತೆಗೆ ತಕ್ಕಂತೆ ಹಚ್ಚಿಕೊಂಡು ಬಟ್ಟೆಗಳನ್ನು ಹಾಕಿಕೊಳ್ಳಬೇಕು.

ನಿರ್ಮಲವಾದ ಬಟ್ಟೆಗಳನ್ನು ಧರಿಸುವುದರಿಂದ ಕಾಮೋದ್ಧೀಪನವಾಗುವುದು. ಕೀರ್ತಿ, ಆಯುಷ್ಯ, ಕಲಿನಾಶಕ, ಹರ್ಷಕರ, ಸಂಪದ್ಯುಕ್ತವಾದದ್ದು, ಸಭಾಯೋಗ್ಯ ಹಾಗೂ ಪ್ರಶಸ್ತವಾದದ್ದು.

ಮಲಿನ ಬಟ್ಟೆ ಧರಿಸಬಾರದು. ಅದರಿಂದ ಮೈ ತುರಿಕೆ, ಕ್ರಿಮಿ, ದರಿದ್ರತೆಗಳುಂಟಾಗುತ್ತವೆ. ಶೀತಪ್ರದೇಶ ಹಾಗೂ ಶೀತಕಾಲದಲ್ಲಿ ಉಣ್ಣೆಯಂತಹ ಶೀತವನ್ನು ತಡೆಹಿಡಿದು ಶರೀರಕ್ಕೆ ಉಷ್ಣತೆಯನ್ನು ಕೊಡಬಲ್ಲ ಬಟ್ಟೆಗಳನ್ನು, ಬೇಸಿಗೆಕಾಲದಲ್ಲಿ ತೆಳುವಾದ, ಹಗುರವಾದ, ಶರೀರದ ಉಷ್ಣತೆಯನ್ನು ಹೊರಹಾಕಲು ಅನುಕೂಲವಾಗುವಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಕು.

ಬಟ್ಟೆಗಳು ಚರ್ಮಕ್ಕೆ ಹತ್ತುವ ಹೊಲಸುಗಳನ್ನು ವಿರೋಧಿಸುವುವು. ಹಾಗೂ ತೀಕ್ಷ್ಣ ಆಮ್ಲ ಮೊದಲಾದ ಕ್ಷೋಭಕ ದ್ರವ್ಯಗಳಿಂದ ಚರ್ಮವನ್ನು ರಕ್ಷಿಸುವುವು.

ನಾವು ಧರಿಸುವ ಬಟ್ಟೆಗಳು ಶರೀರದ ಸಹಜ ಕ್ರಿಯೆಗಳಿಗೆ ಆತಂಕವನ್ನೊಡ್ಡದಂತಿರಬೇಕು.

ಬಿಳಿಯಾದ, ಶುಭ್ರವಾದ ಹತ್ತಿಯ ಬಟ್ಟೆಗಳು ಸದಾಕಾಲಕ್ಕೂ ಒಳ್ಳೆಯವು. ಇತ್ತೀಚೆಗೆ ಬಂದ ಟೆರಿಲಿನ, ನೈಲಾನ್, ಪಾಲಿಸ್ಟರ್ ಮೊದಲಾದ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಚರ್ಮದ ಮೇಲೆ ಕೆಲ ಒಗ್ಗದಿರುವಿಕೆಯ ಲಕ್ಷಣಗಳು ಕಂಡುಬರುತ್ತವೆ.

೧೧. ನಸ್ಯಕರ್ಮ

ನಿತ್ಯವೂ ಶಾಸ್ತ್ರೋಕ್ತವಾದ ನಸ್ಯ ಕರ್ಮವನ್ನಾಚರಿಸುವುದರಿಂದ ವ್ಯಕ್ತಿಯ ಚರ್ಮ, ಭುಜ, ಎದೆ, ಕುತ್ತಿಗೆಗಳು ಬಲಿಷ್ಠವೂ, ಉನ್ನತವೂ, ಪ್ರಸನ್ನವೂ ಆಗುವುವು. ಇಂದ್ರಿಯಗಳು ದೃಢವಾಗಿ ನೆರೆಗೂದಲುಗಳ ನಿವಾರಣೆಯಾಗುದು. ಮೂಗಿನ ಒಳಮೈ ಶ್ಲೇಷ್ಮತ್ವಚೆಯು ದುರ್ಬಲವಾಗಿದ್ದರೆ ವಾತಾವರಣ ಶೀತೋಷ್ಣ ವ್ಯತ್ಯಾಸಗಳನ್ನು ಸಹಿಸುವ ಶಕ್ತಿಯು ದೂರವಾಗಿ ಮೇಲಿಂದ ಮೇಲೆ ಶೀನು, ನೆಗಡಿ, ಕೆಮ್ಮು, ಉಬ್ಬುಸ, ರಕ್ತಸ್ರಾವಗಳಿಂದ ಬಳಲುವವರು ನಸ್ಯ ಕರ್ಮವನ್ನಾಚರಿಸಿದರೆ ಆ ರೋಗಗಳು ವಿರೋಧಿಸಲ್ಪಡುವುವು. (ಕಲ್ಯಾಣಕಾರಕ ಅ-೮-ಶ್ಲೋಕ, ೬೮-೭೨)

ಆರೋಗ್ಯಕರವಾದ ಚೂರ್ಣ ಅಥವಾ ಅಗರು, ‌ಜೇಷ್ಠ ಮಧು, ನೀಲಕಮಲ, ಛದ್ರಮುಷ್ಠಿ, ಲಾಮಂಚ, ಮೊದಲಾದ ದ್ರವ್ಯಗಳಿಂದಾಗಲಿ, ಶಾಮಕ ಗುಣವುಳ್ಳ ಅಣುತೈಲ ಮುಂತಾದವುಗಳಿಂದ ನಿತ್ಯವೂ ನಸ್ಯ ಪ್ರಯೋಗ ಮಾಡಿಕೊಂಡರೆ ಕಣ್ಣು – ಕಿವಿ, ಮೂಗುಗಳ ಶಕ್ತಿ ಕುಗ್ಗುವುದಿಲ್ಲ.

ಕುತ್ತಿಗೆಯ ಮೇಲ್ಭಾಗದ ರೋಗಗ ಚಿಕಿತ್ಸೆಯಲ್ಲಿ ನಸ್ಯ ವಿಧಿಯು ವಿಶೇಷ ಗುಣಕಾರಿಯಾದ ಸಾಧನವೆನಿಸಿದೆ.

ನಿತ್ಯವೂ ನಸ್ಯಕರ್ಮವನ್ನಾಚರಿಸುವುದರಿಂದ ತಲೆಯ ಹಾಗೂ ಮುಖದ ಮೇಲಿನ ಕೂದಲುಗಳು ಕೂಡ ಬೆಳ್ಳಗಾಗುವುದಿಲ್ಲ. ಕೂದಲು ಉದುರುವುದು ನಿಂತು ಬೆಳೆಯಲಾರಂಭಿಸುವುವು.

ಮನ್ಯಾಸ್ತಂಭ, ತಲೆನೋವು, ಅರ್ದಿತವಾತ, ಗದ್ದ ಹಿಡಿದುಕೊಳ್ಳವುದು, ದುಷ್ಟ ನೆಗಡಿ, ಅರ್ಧಾವಭೇದ, ತಲೆ ನಡುಕ ವಿಕಾರಗಳು ದೂರವಾಗುವುವು. ನಸ್ಯದಿಂದ ತೃಪ್ತವಾದ ಶಿರಸ್ಸಿನ ಕಪಾಲ. ಸಿರೆಗಳು, ಸಂಧಿಗಳು, ಸ್ನಾಯು, ಕಂಡರಗಳು ಹೆಚ್ಚು ಬಲಗೊಳ್ಳುವುವು. ಮುಖವು ಪ್ರಸನ್ನವಾಗಿ ಧ್ವನಿ ಸ್ವಷ್ಟವಾಗುವದು. ಹಾಗೂ ಇಂದ್ರಿಯಗಳ ಬಲವು ಹೆಚ್ಚುವುದು ಕುತ್ತಿಗೆಯ ಮೇಲ್ಭಾಗದ ರೋಗಗಳು ನಿರೋಧಿಸಲ್ಪಟ್ಟ್‌ಉ ವೃದ್ಧ್ಯಾಪ್ಯದಲ್ಲಿಯೂ ಆ ಲಕ್ಷಣಗಳು ಕಂಡುಬರುವುದಿಲ್ಲವೆಂದು ಆಯುರ್ವೇದದಲ್ಲಿ ಹೇಳಲಾಗಿದೆ.

‘ಯೋಗ’ದಲ್ಲಿ ಜಲನೇತಿ ಹಾಗೂ ನೈಸರ್ಗಿಕ ಚಿಕಿತ್ಸೆಯಲ್ಲಿಯೂ ತಣ್ಣೀರಿನಿಂದ ನಸ್ಯ ತೆಗೆದುಕೊಳ್ಳಲು ಹೇಳಲಾಗಿದೆ.

‘ನಸ್ಯ’ವೆಂದರೆ ಇಲ್ಲಿ ತಂಬಾಕಿನದು ಅಲ್ಲ ಎಂಬ ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು.

೧೨. ಕಣ್ಣುಗಳಿಗೆ ಅಂಜನ

ಕಣ್ಣುಗಳು ತೇಜೋಮಯವಾಗಿದ್ದರೂ ಅವಕ್ಕೆ ವಿಶೇಷವಾಗಿ ಕಫದೋಷದ ಭಯವಿರುತ್ತದೆ. ಆದ್ದರಿಂದ ದೃಷ್ಟಿಶಕ್ತಿಯು ಚೆನ್ನಾಗಿರಬೇಕೆಂದು ಅಪೇಕ್ಷಿಸುವವರು ಕಣ್ಣುಗಳಲ್ಲಿ ಅವಶ್ಯಕ್ಕಿಂತಲೂ ಹೆಚ್ಚಿನ ಕಫಾಂಶ ಸಂಚಯವಾಗುವಂತೆ ನೋಡಿಕೊಳ್ಳಬೇಕಾದರೆ ಅಂಜನ ಹಾಕಿಕೊಳ್ಳಬೇಕಾಗುತ್ತದೆ. ನಿತ್ಯ ಹಾಕಿಕೊಳ್ಳಲು ಸ್ತ್ರೋತಾಂಜನ ಒಳ್ಳೆಯದು. ಇದರಿಂದ ಕಣ್ಣುಗಳು ಸುಂದರವಾಗಿ ಕಾಣುವುದಲ್ಲದೆ ಸೂಕ್ಷ್ಮ ಪದಾರ್ಥಗಳನ್ನು ನೋಡಲು ಸಮರ್ಥವಾಗುವುವು.

ಕಣ್ಣುಗಳಲ್ಲಿನ ಕಫ ಸಂಚಯವನ್ನು ಪರಿಹರಿಸಲು ಐದು ಅಥವಾ ಎಂಟು ದಿವಸಗಳಿಗೊಮ್ಮೆಯಾದರೂ ರಾತ್ರಿ ಮಲಗುವಾಗ್ಗೆ ಶೋಧಕ ಗುಣವುಳ್ಳ ರಸಾಂಜನವನ್ನು ಹಾಕಿಕೊಳ್ಳಬೇಕು.

ಅಂಜವನ್ನು ಲೇಪಿಸುವುದಕ್ಕೆ ಮೊದಲು ಎರಡು ಕಣ್ಣುಗಳನ್ನು ತಣ್ಣೀರಿನಿಂದ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ತೊಳೆದುಕೊಂಡರೆ ನೇತ್ರರೋಗಗಳು ಬಾರವು.

ಅಂಜನವನ್ನು ಕಣ್ಣುಗಳೊಳಗೆ ಸೇರಿಸುವುದರ ಸಲುವಾಗಿ ಮತ್ತು ಅಂಗುಲ ಉದ್ದವೂ, ಬೆಳ್ಳಿ, ತಾಮ್ರದ ಶಲಾಕೆಯನ್ನು ಉಪಯೋಗಿಸಬೇಕು. ಮೊದಲು ಅಂಜನ ದ್ರವ್ಯದಲ್ಲಿ ಶಲಾಕೆಯ ಮುಖವನ್ನದ್ದಿ ಅಗಲಿಸಿದ ಕಣ್ಣುಗಳ ವೈದ್ಯದಲ್ಲಿ ಮೃದುವಾಗಿ ಶಲಾಕೆಯನ್ನಿಟ್ಟು ರೆಪ್ಪೆಗಳನ್ನು ಮುಚ್ಚಿ ಅದನ್ನೀಚೆಗೆ ಎಳೆದುಕೊಂಡರೆ ಅಂಜನವು ಕಣ್ಣುಗಳಿಗೆ ಸರಿಯಾಗಿ ಲೇಪವಾಗುವುದು.

ಕಣ್ಣುಗಳನ್ನು ಹೊರಗಿನ ಧೂಳು, ಕಸರು, ಹರಳುಗಳು, ದ್ರಾವಕಗಳು, ಉಷ್ಣವಾದ ಗಾಳಿ- ಬೆಳಕು-ರಸಾಯನಕಗಳು ಹಾಗೂ ರೋಗಗಳಿಂದ ರಕ್ಷಿಸಿಕೊಳ್ಳಬೇಕು. ದೂರದರ್ಶನ, ಚಲನಚಿತ್ರಗಳನ್ನು ಬಹಳ ಹೊತ್ತಿನವರೆಗೆ ನೋಡಬಾರದು. ಚಲಿಸುವ ವಸ್ತುವನ್ನು ತದೇಕ ಚಿ‌ತ್ತದಿಂದ ನೋಡಬಾರದು. ನಾವು ಪುಸ್ತಕ ಓದುವಾಗ ಇಲ್ಲವೆ ಬರೆಯುವಾಗ ಸುಮಾರು ಒಂದುವರೆ ಅಡಿಯಷ್ಟು ಆರೋಗ್ಯಕರ ಅಂತರವನ್ನಿಟ್ಟುಕೊಳ್ಳಬೇಕು. ಚಲಿಸುವ ವಾಹನಗಳಲ್ಲಿ ಕುಳಿತು ಪುಸ್ತಕ, ಪತ್ರಿಕೆಗಳನ್ನು ಓದಬಾರದು. ನಾವು ಓದುವ ಪುಸ್ತಕದ ಮೇಲೆ ಚೆನ್ನಾಗಿ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ಅತಿ ಕಿರಿದಾದ ಅಕ್ಷರಗಳನ್ನು ಬೆಳಕು ಕಡಿಮೆ ಇದ್ದಾಗ ಓದುವ ಪ್ರಯತ್ನ ಮಾಡಬಾರದು. ಸೂರ್ಯಗ್ರಹಣವನ್ನು ಬರಿ ಕಣ್ಣುಳಿಂದ ನೋಡಬಾರದು. ‘ಎ’ಜೀವಸತ್ವದ ಕೊರತೆ ಮಕ್ಕಳಲ್ಲಿ ಅಂಧತ್ವವನ್ನುಂಟು ಮಾಡುವುದರಿಂದ ಅದರ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಕಣ್ಣುಗಳ ವಿವಿಧ ರೋಗಗಳ ಚಿಕಿತ್ಸೆಯನ್ನು ಹೇಳುವಾಗ ಕಲ್ಯಾಣಕಾರಕ ಗ್ರಂಥದಲ್ಲಿ ಅನೇಕ ವಿಧದ ಅಂಜನಗಳನ್ನು ಉಲ್ಲೇಖಿಸಿದ್ದಾರೆ. (ಕ.ಅ.೧೫ ನೇತ್ರರೋಗಾಧಿಕಾರ)

೧೩. ಧೂಮಪಾನ

ಕುತ್ತಿಗೆಯ ಮೇಲ್ಭಾಗದ ವಿಕಾರಗಳು ಹುಟ್ಟಿದಂತೆ ಮಾಡಲು ಹಾಗೂ ಹುಟ್ಟಿದ ವಿಕಾರಗಳನ್ನು ದೂರಮಾಡಲು ಬುದ್ಧಿವಂತರು ಧೂಮಪಾನ(ತಂಬಾಕಿನದಲ್ಲ)ವನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಧೂಮಪಾನದಿಂದ ಶಿರಭಾರವಾಗುವಿಕೆ, ನೋವು, ನೆಗಡಿ, ಅರ್ಧಾವಭೇದ, ಕಿವಿ-ಕಣ್ಣುಗಳ ನೋವು, ಬಿಕ್ಕು, ಶ್ವಾಸಕಟ್ಟುವಿಕೆ, ಗೋಣು ಹಿಡಿಯುವುದು, ಹಲ್ಲುಗಳ ದೌರ್ಬಲ್ಯ, ಕಿವಿ-ಕಣ್ಣು ಮೂಗುಗಳಲ್ಲಿಯ ದೋಷ ಜನ್ಯಸ್ರಾವ, ಮೂಗು ಬಾಯಿಗಳಲ್ಲಿ ದುರ್ಗಂಧ, ಹಲ್ಲುನೋವು, ಅರುಚಿ, ಹನು ಹಾಗೂ ಮನ್ಯಾಶಿರೆಗಳು ಹಿಡಿದು ಕೊಂಡಿರುವುದು, ಮೈ ಕಡಿತ, ಕ್ರಿಮಿದೋಷಗಳು, ಬಾಯಿಯು ಹಳದಿಯಂತಾಗುವುದು, ಕಫ ಬೀಳುವುದು, ಸ್ವರಭೇದ, ಕೂದಲುಗಳು ಉದುರುವುದು. ವಿಶೇಷವಾಗಿ ಶೀನು ಬರುವಿಕೆ, ಅಧಿಕ ನಿದ್ರೆ ಮೊದಲಾದ ವಿಕಾರಗಳು ದೂರವಾಗುವುವು. ಕೂದಲು, ಶಿರಸ್ಸಿನ ಅಸ್ಥಿಗಳು, ಇಂದ್ರಿಯಗಳು ಸ್ವರದ ಶಕ್ತಿ ಹೆಚ್ಚುವುದು. (ಕ.ಅ.೨೩ ಶ್ಲೋಕ.೪೫)

ಆರೋಗ್ಯ ರಕ್ಷಣೆಗಾಗಿ ಪ್ರಾಯೋಗಿಕ ಧೂಮಪಾನವನ್ನು, ಕುತ್ತಿಗೆಯ ಮೇಲ್ಭಾಗದ ಅಂಗಗಳಿಗೆ ಸ್ನೇಹನ ಮಾಡಬೇಕಾದಾಗ ‘ಸ್ನೇಹನ ಧೂಮವರ್ತಿ’ ಯನ್ನು ಹಾಗೂ ಅವುಗಳ ಕಫಹರಣವಾಗಬೇಕಾದಾಗ ‘ವಿರೇಚನ ಧುಮವರ್ತಿ’ಯನ್ನು ಕೊಡಬೇಕಾಗುವುದು.

ಧೂಮಪಾನದ ಅವಧಿ, ಅತಿಯಾದ ಧೂಮಪಾನ, ದ್ರವ್ಯಗಳ ವ್ಯತ್ಯಾಸ ಮುಂತಾದ ಕಾರಣಗಳಿಂದ ಕಿವುಡುತನ, ಕುರುಡುತನ, ರಕ್ತ-ಪಿತ್ತ, ಮೂಕತನ, ತಲೆತಿರುಗುವಿಕೆ ಈ ಮೊದಲಾದ ವಿಕಾರಗಳಾಗುವುವು.

ತಂಬಾಕಿನಿಂದ ತಯಾರಿಸಿದ ಬೀಡಿ, ಸಿಗರೇಟುಗಳನ್ನು ಸೇದುವುದರಿಂದ ಪಚನಶಕ್ತಿಯು ದುರ್ಬಲಗೊಳ್ಳುವುದು, ಗಂಟಲಿನ ಬಾವು,ಕೆಮ್ಮು ಮತ್ತು ಉಬ್ಬುಸ, ರಾತ್ರಿ ವೇಳೆಯಲ್ಲಿ ಗಂಟಲಿನ ಕೆರೆತವುಳ್ಳ ಕೆಮ್ಮು, ಶರೀರವನ್ನು ಸ್ಥಿರವಾಗಿ ನಿಲ್ಲಿಸಲಾರದಂತಹ ಸ್ಥಿತಿ, ಕೈ ಕಾಲುಗಳಲ್ಲಿ ನಡುಕ ಮೊದಲಾದ ವಿಕಾರಗಳಾಗುವುವು. ಅತಿಯಾದ ಧೂಮಪಾನದಿಂದ ಪುಪ್ಪುಸ ಕ್ಷಯ, ಕ್ಯಾನ್ಸರ, ಹೃದಯರೋಗಗಳು ಬರುವುವು. ತಲೆತಿರುಗುವಿಕೆ, ಉಸಿರು ಕಟ್ಟಿದಂತಾಗುವುದು, ನಡುಕುಗಳು ಹಾಗೂ ಕಾರ್ಬನ್ ಮೊನಾಕ್ಸೈಡ್ ವಿಷ ಪ್ರಭಾವದ ಲಕ್ಷಣಗಳುಂಟಾಗುವುವು. ಅಲ್ಲದೇ ಇವರ ಆಯುಷ್ಯದ ಪ್ರಮಾಣವೂ ಕಡಿಮೆ ಆಗುವುದು.

೧೪. ಆಹಾರ

ಪ್ರಾನವಿದ್ದವರಿಗೆಲ್ಲ ಆಹಾರವು ಜೀವವಿದ್ದಂತೆ. ಆದ್ದರಿಂದಲೇ ಈ ವಿಶ್ವದಲ್ಲಿರುವ ಜೀವಿಗಳೆಲ್ಲ ಅನ್ನಕ್ಕಾಗಿ ಹಂಬಲಿಸುತ್ತವೆ. ಶರೀರದ ಬಣ್ಣ, ಪ್ರಸನ್ನಭಾವ, ಸುಸ್ವರ, ಜೀವಂತಿಕೆ, ಪ್ರತಿಭೆ, ಸುಖ, ತುಷ್ಟಿ, ಪುಷ್ಟಿ, ಬಲ, ಬುದ್ಧಿಶಕ್ತಿಗಳೆಲ್ಲ ಅನ್ನವನ್ನೇ ಅವಲಂಬಿಸಿರುತ್ತದೆ. ಆಹಾರವು ಜೀವಿಗೆ ಸರಿಯಾಗಿ ಪೂರೈಸಲ್ಪಡದಿದ್ದರೆ ಈ ಗುಣಗಳು ದೂರವಾಗಿ ಜೀವಿಸುವುದೇ ಅಸಾಧ್ಯವೆನಿಸುವುದು ಎಂದು ಚರಕಾಚಾರ್ಯರು ಹೇಳಿದ್ದಾರೆ.

ಅನ್ನವನ್ನು ವಿಧಿಪೂರ್ವಕ ಸೇವಿಸಬೇಕು. ಸಾತ್ವಿಕ ಆಹಾರ ಸೇವನೆಯಿಂದ ಮಾತ್ರ ಸಾತ್ವಿಕ ಜೀವನ ಸಾಧ್ಯ. ಒಂದೇ ರೀತಿಯ ಆಹಾರವನ್ನು ಬಹಳ ದಿವಸಗಳವರೆಗೆ ಸೇವಿಸದೇ ಷಡ್ರಸಗಳಿಂದ ಯುಕ್ತವಾದ ಆಹಾರವನ್ನು ಸೇವಿಸಬೇಕು.

ಹಸಿದು ಉಣ್ಣಬೇಕು. ದಿನಕ್ಕೆ ಬೆಳಿಗ್ಗೆ ಹಾಗೂ ಸಾಯಂಕಾಲ ಎರಡು ಸಾರೆ ಊಟ ಮಾಡಬೇಕು. ಹಗಲು ಹೊತ್ತಿನಲ್ಲಿ ಜೀರ್ಣ ರಸಗಳು ವಿಶೇಷವಾಗಿ ಸ್ರವಿಸುವುದರಿಂದ ಆಹಾರ ಪಚನ ಸರಿ ಆಗುವುದು. ಆದರೆ ರಾತ್ರಿ ಈ ಕ್ರಿಯೆ ಸರಿಯಾಗಿ ಅಗುವುದಿಲ್ಲ. ಆದ್ದರಿಂದ ರಾತ್ರಿ ಊಟ ಆರೋಗ್ಯಕರವಲ್ಲ.

ಆಹಾರ ಸೇವನೆಯ ಕಾಲ ಹಾಗೂ ಕ್ರಮ

ಶರೀರದಿಂದ ಮಲ ಮೂತ್ರಗಳು ವಿಸರ್ಜನೆಯಾದಾಗ, ಅಪಾನವಾಯುವು ಹೊರ ಹೋದಾಗ, ಶರೀರವು ಹಗುರವಾಗಿರುವಾಗ, ಪಂಚೇಂದ್ರಿಯಗಳು ಪ್ರಸನ್ನವಾಗಿರುವಾಗ, ಮನಸ್ಸು ಮಾತುಗಳು ಮೃದುವಾದಾಗ, ಹೊಟ್ಟೆ(ಜಠರ) ಖಾಲಿಯಾಗಿದ್ದು ಊಟ ಮಾಡಬೇಕೆಂಬ ಇಚ್ಛೆ ಇದ್ದರೆ ಅದೇ ಆಹಾರ ತೆಗೆದುಕೊಳ್ಳಬೇಕಾದ ಪ್ರಶಸ್ತ ಕಾಲವೆಂದು ತಿಳಿಯಬೇಕು.

ಊಟಕ್ಕೆ ಕುಳಿತುಕೊಳ್ಳಲು ಅನುಕೂಲವಾದ ಸುಖಕರ ಅಸನದಲ್ಲಿ ಸ್ಥಿರಚಿತ್ತನಾಗಿ ಕುಳಿತುಕೊಳ್ಳಬೇಕು. ತನ್ನ ಪ್ರಕೃತಿ ಹಾಗೂ ಬಲಗಳನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಬಿಸಿಯಾದ ಸರ್ವ ಋತುಕಾಲದಲ್ಲಿ ಸೇವಿಸಬಹುದಾದ ಆಹಾರ ಪದಾರ್ಥಗಳನ್ನು ಅತ ಮೆಲ್ಲನೆ ಇಲ್ಲವೆ ಅತಿ ತೀವ್ರವಾಗಿ ಸೇವಿಸದೆ ಮನಸ್ಸುಗೊಟ್ಟು ಸೇವಿಸಬೇಕು. ಮೊಟ್ಟ ಮೊದಲಿಗೆ ಸಿಹಿ ಹಾಗೂ ಸ್ನಿಗ್ಧ ಪದಾರ್ಥಗಳನ್ನು ಮಧ್ಯದಲ್ಲಿ ಉಪ್ಪು, ಹುಳಿ,ಮಸಾಲೆಯುಕ್ತ ಪದಾರ್ಥಗಳನ್ನು ಹಾಗೂ ಕೊನೆಯಲ್ಲಿ ಹಾಲು, ಹಣ್ಣಿನ ರಸ, ಮಜ್ಜಿಗೆ, ತೆಂಗಿನ ನೀರು ಮುಂತಾದ ದ್ರವ ಪ್ರಧಾನ ಆಹಾರಗಳನ್ನು ಸೇವಿಸಬೇಕು.

ಊಟದ ಪ್ರಾರಂಭಕ್ಕೆ ಅತಿಯಾಗಿ ನೀರನ್ನು ಕುಡಿದರೆ ಹಸಿವು ಕಟ್ಟಿ ಶರೀರವು ಕೃಶವಾಗುತ್ತದೆ. ಊಟದ ಮಧ್ಯ-ಮಧ್ಯದಲ್ಲಿ ಸೇವಿಸಿದ ನೀರು ಶರೀರವನ್ನು ಮಧ್ಯ ಗಾತ್ರವನ್ನಾಗಿಸುತ್ತದೆ. ಊಟದ ಕೊನೆಯಲ್ಲಿ ಕುಡಿದ ನೀರು ದೇಹವನ್ನು ದಪ್ಪನಾಗಿಸುತ್ತದೆ. ಕಾರಣ ಭೋಜನ ಕಾಲದಲ್ಲಿ ನಮ್ಮ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಯೋಗ್ಯ ದ್ರವ ಪದಾರ್ಥಗಳನ್ನು ಆಯ್ಕೆ ಮಾಡಿ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಅನುಪಾನ ಎನ್ನುತ್ತಾರೆ. ಇದು ಆಹಾರದಲ್ಲಿ ಸಮತೋಲತೆಯನ್ನು ಕಾಪಾಡುತ್ತದೆ. ಹಾಗೂ ಆಯಾ ಋತುಕಾಲಕ್ಕೆ ತಕ್ಕ ಹಾಗೆ ಅನುಪಾನ ತೆಗೆದುಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ಈ ವಿಷಯ ಮುಂದೆ ಬರುವುದು. (ಆಧಾರಕಲ್ಯಾಣಕಾರಕ . ಶ್ಲೋಕ೧೬, ೧೭,೧೮,೧೯)

ಬೆಳೆಗಳಿಂದಲೇ ವಿಶೇಷವಾಗಿ ತಯಾರಿಸಿದ ಆಹಾರಗಳಿದ್ದಲ್ಲಿ ಗಂಜಿಯನ್ನು ಕುಡಿಯಬೇಕು. ಅನ್ನ, ಉಣ್ಣುವಾಗ ಮಜ್ಜಿಗೆ ಕುಡಿಯಬೇಕು. ಅತಿಯಾಗಿ ತುಪ್ಪ, ಎಣ್ಣೆ ಪದಾರ್ಥಗಳು ಆಹಾರದಲ್ಲಿದ್ದರೆ ಬಿಸಿ ನೀರನ್ನು ಕುಡಿಯಬೇಕು. ಪಿಷ್ಟ ಪದಾರ್ಥಗಳು ಅತಿಯಾಗಿದ್ದರೆ ತಣ್ಣಿರನ್ನೇ ಕುಡಿಯಬೇಕು. ನಿತ್ಯ ಈ ರೀತಿ ಆಹಾರ ಕ್ರಮವನ್ನು ಯೋಗ್ಯ ಅನುಪಾನಗಳನ್ನು ಅನುಸರಿಸಿದರೆ ನಿತ್ಯ ಸುಖ ದೊರಕುವುದು ಎಂದಿದ್ದಾರೆ.

ಬೆಳಿಗ್ಗೆ ಹಾಗೂ ಸಾಯಂಕಾಲಗಳು ಮಾತ್ರ ಎರಡೇ ಯೋಗ್ಯ ಆಹಾರ ಕಾಲಗಳು, ಸೂರ್ಯನಿರುವ ಕಾಲದಲ್ಲಿ ದೇಹದಲ್ಲಿ ಹೆಚ್ಚು ಜೀರ್ಣರಸಗಳು ಸ್ರವಿಸುವುದರಿಂದ ಆಗಿನ ವೇಳೆಯು ಆಹಾರ ಜೀರ್ಣಕ್ಕೆ ಒಳ್ಳೆಯದು. ರಾತ್ರಿಯ ವೇಳೆಯಲ್ಲಿ ಪರಿಸರದಲ್ಲಿ ಶೈತ್ಯವು ಹೆಚ್ಚಾಗಿರುವುದರಿಂದ ಜೀರ್ಣರಸಗಳು ಶಾಂತವಾಗಿದ್ದು ಜೀರ್ಣಕ್ರಿಯೆ ಸರಿಯಾಗಿ ಆಗದು. ಬೆಳಿಗ್ಗೆ ಆಹಾರವನ್ನು ಸೇವಿಸುವಾಗಲೂ ಹಿಂದಿನ ದಿನ ಸೇವಿಸಿದ ಆಹಾರವು ಪೂರ್ತಿಯಾಗಿ ಜೀರ್ಣವಾಗಿದೆಯೇ ಹೇಗೆಂಬುದನ್ನು ನೋಡಿಕೊಳ್ಳಬೇಕು.

ನಿತ್ಯ ನಾವು ರೂಢಿಸಿಕೊಂಡಿರುವ ಸಮಯಕ್ಕೆ ಸರಿಯಾಗಿ ಊಟಮಾಡಬೇಕು. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದು. ಆಹಾರವನ್ನು ನಿಯಮಿತ ವೇಳೆಗಿಂತ ಮೊದಲು ಅಥವಾ ನಂತರ ಸೇವಿಸುವುದರಿಂದ ಇಲ್ಲವೆ ಹೆಚ್ಚು/ಕಡಿಮೆ ಸೇವಿಸುವುದರಿಂದ ಅಗ್ನಿಮಾಂದ್ಯ, ಅಜೀರ್ಣ ವಿಕಾರಗಳು ಹುಟ್ಟಿಕೊಳ್ಳುವುವು.

ಆಹಾರವನ್ನು ಸೇವಿಸಿದ ನಂತರ ಮೂರು ಗಂಟೆಗಳವರೆಗೆ ಏನನ್ನೂ ತಿನ್ನಬಾರದು. ನಂತರದ ಮೂರು ಗಂಟೆಗಳವರೆಗೆ ಅವಶ್ಯವೆನಿಸಿದರೆ ನೀರು, ಹಾಲು, ಮಜ್ಜಿಗೆ, ಪಾನಕ, ತೆಂಗಿನ ಎಳನೀರು, ಹಣ್ಣಿನರಸ- ಹೀಗೆ ದ್ರವಾಹಾರಗಳನ್ನು ತೆಗೆದುಕೊಳ್ಳಬಹುದು. ಹೀಗೆ ಆರು ಗಂಟೆಗಳಾದ ಬಳಿಕ ಮತ್ತೆ ಆಹಾರ ಸೇವಿಸಬೇಕು. ಇದು ಹಗಲು ಹೊತ್ತಿಗೆ ಮಾತ್ರ ಸೀಮಿತ.

ಆಹಾರವಿಧಿ

 • ಆಹಾರವನ್ನು ಏಕಾಂತದಲ್ಲಿ ಸೇವಿಸಬೇಕು. ಅಲ್ಲಿ ಗಾಳಿ, ಬೆಳಕು, ಸ್ವಚ್ಛತೆಗಳಿರಬೇಕು.
 • ಏಕಾಗ್ರತೆಯಿಂದ ಊಟಮಾಡಬೇಕು,
 • ಆಹಾರವನ್ನು ಅತಿ ಅವಸರವಾಗಿಯಾಗಲೀ, ಇಲ್ಲವೇ ಅತಿ ಸಾವಕಾಶವಾಗಿಯಾಗಲೀ ಸೇವಿಸಬಾರದು.
 • ಊಟ ಮಾಡುವಾಗ ನಿಂದಾತ್ಮಕವಾದ, ಮನಸ್ಸಿಗೆ ಹೇಸಿಗೆಯನ್ನುಂಟು ಮಾಡುವ ಮಾತುಗಳನ್ನಾಡಬಾರದು.
 • ತನ್ನ ಮನಸ್ಸಿಗೆ ಇಷ್ಟವಾದುದನ್ನು, ತನಗೆ ಇಷ್ಟವಾದವರೊಡನೆ ಕುಳಿತುಕೊಂಡು ಹಾಗೂ ತನ್ನ ಹಿತೈಷಿಗಳಿಂದ ತಯಾರಿಸಿ ಬಡಿಸಲ್ಪಟ್ಟ ಆಹಾರವನ್ನು ಸೇವಿಸಬೇಕು.
 • ಆಹಾರಕ್ಕೆ ಪದ್ಮಾಸನವೇ ಉಚಿತ.
 • ಹಸಿದು, ಹಿತವಾದುದನ್ನುಮ, ಮಿತವಾಗಿ, ಋತುಕಾಲಕ್ಕನುಸರಿಸಿ ಧರ್ಮದಿಂದ ಸಂಪಾದಿಸಿದ ಆಹಾರವನ್ನು ಸೇವಿಸಬೇಕು.

ಶಾಸ್ತ್ರದಲ್ಲಿ ನಾವು ನಿತ್ಯ ತೆಗೆದುಕೊಳ್ಳುವ ಆಹಾರ ಪದಾರ್ಥಗಳಾದ ವಿವಿಧ ಧಾನ್ಯಗಳು, ತರಕಾರಿಗಳು, ಹಣ್ಣು ಹಂಪಲುಗಳು, ನೀರು, ಹಾಲು, ಮಜ್ಜಿಗೆ, ಮೊಸರು, ತುಪ್ಪ, ತೈಲಗಳು, ಲವಣಗಳು, ಅನುಪಾನಗಳು ಈ ಮೊದಲಾದ ಅನೇಕ ಪದಾರ್ಥಗಳ ಗುಣಾವಗುಣಗಳನ್ನು ಕಲ್ಯಾಣಕಾರಕದ ನಾಲ್ಕು, ಐದನೆಯ ಅಧ್ಯಾಯಗಳಲ್ಲಿ ಹೇಳಿದ್ದಾರೆ. ವಿವಿಧ ನೀರಿನ ಗುಣಗಳು, ನೀರನ್ನು ಶುದ್ಧಗೊಳಿಸುವ ಬಗೆ, ವಿವಿಧ ಅನ್ನ – ಗಂಜಿಗಳ ಗುಣಗಳು ಇವನ್ನೆಲ್ಲ ಹೇಳಿದ್ದಾರೆ.

ಆಹಾರ ಸೇವಿಸಿದ ನಂತರ ಕೈಗಳನ್ನು ತೊಳೆದುಕೊಂಡು, ತಿಕ್ಕಿಕೊಂಡು, ಕಣ್ಣುಗಳಿಗೆ ಸ್ವಲ್ಪ ನೀರನ್ನು ಸಿಂಪಡಿಸಿಕೊಂಡು ಒರೆಸಿಕೊಳ್ಳಬೇಕು. ಇದರಿಂದ ಕಣ್ಣುಗಳಿಗೆ ಹಿತವಾಗುವುದು, ತೇಜಸ್ಸು ಬರುವುದು, ವಿವಿಧ ಕಣ್ಣುಗಳ ರೋಗಗಳು ದೂರವಾಗುವುವು. ಇದೇ ರೀತಿ ಅವೇ ಕೈಗಳಿಂದ ಮುಖವನ್ನೆಲ್ಲ ಒರೆಸಿಕೊಳ್ಳಬೇಕು. ಇದರಿಂದ ಮುಖವು ಕಾಂತಿಯುಕ್ತವಾಗುವುದಲ್ಲದೆ ಮುಖದ ಮೇಲೆ ವ್ಯಂಗ, ತಿಲಕಾಲಕ, ನೀಲಿ ಮೊದಲಾದ ಚರ್ಮದ ಅಂದ ಕೆಡಿಸುವ ವಿಕಾರಗಳು ದೂರವಾಗುವುವು.

ಆಹಾರದ ನಂತರ ತಾಂಬೂಲ ಹಾಕಿಕೊಳ್ಳಬೇಕು. ಧೂಮಪಾನ ಮಾಡಬೇಕು. ಇದರಿಂದ ಕಫವು ಹೊರಹೋಗುವುದು. ನಂತರ ಕೆಲವೇಳೆ ಆರಾಮವಾಗಿ ಕುಳಿತುಕೊಂಡು ನುರು ಹೆಜ್ಜೆ ನಡೆದು ಒಂದು ಎಡಭಾಗಕ್ಕೆ ವಾಲಿಕೊಂಡು ಸ್ವಲ್ಪ ಹೊತ್ತು ಮಲಗಿಕೊಳ್ಳಬೇಕು. ಎದ್ದ ಬಳಿಕ ವ್ಯಾಯಾಮ ಮುಂತಾದ ಶ್ರಮದಾಯಕ ಕೆಲಸಗಳನ್ನು ಮಾಡಬಾರದು.(ಕ.ಅ.೫, ಶ್ಲೋಕ ೪೩-೪೫)

ಆಹಾರದ ೧೨ ಭೇದಗಳು

 • ದಾಹ, ನೀರಡಿಕೆ, ಉಷ್ಣತೆ, ಮದ, ಮದ್ಯ, ರಕ್ತಪಿತ್ತ, ಸ್ತ್ರೀವ್ಯಸನೀ, ಮೂರ್ಛಾರೋಗ – ಇವರಿಗೆ ಶೀತಲವಾದ ಭೋಜನದಿಂದ ಉಪಚರಿಸಬೇಕು.
 • ಸ್ನೇಹಪಾನ, ವಿರೇಚನೌಷಧಿ ಸೇವಿಸಿದವರಿಗೆ, ವಾತ-ಕಫಗಳ ವಿಕಾರವಿದ್ದವರಿಗೆ, ಕ್ಲೇದಯುಕ್ತ ಮಲವಿಸರ್ಜಿಸುವವರಿಗೆ ಉಷ್ಣಭೋಜನ ಕೊಡಬೇಕು.
 • ವಾತವ್ಯಾಧಿ, ಅಧಿಕ ಪರಶ್ರಮಿ- ಸಂಭೋಗಿಗಳಿಗೆ ಹೆಚ್ಚಿನ ಸ್ನೇಹಾಂಶ(ಎಣ್ಣೆ, ಬೆಣ್ಣೆ, ತುಪ್ಪ, ಕೆನೆ ಇತ್ಯಾದಿ) ಭೋಜನ ಕೊಡಬೇಕು.
 • ಕಫಾಧಿಕ್ಯ, ಸ್ಥೂಲ, ಪ್ರಮೇಹಿ, ಮೇದಸ್ಸುಳ್ಳ ವ್ಯಕ್ತಿಗೆ ರೂಕ್ಷವಾದ ಆಹಾರ ಪದಾರ್ಥಗಳನ್ನು ಕೊಡಬೇಕು.
 • ತೀವ್ರ ನೀರಡಿಕೆಯಿಂದ ಬಳಲುವವರಿಗೆ ದ್ರವಪದಾರ್ಥಗಳಿಂದ ಉಪಚರಿಸಬೇಕು.
 • ಪ್ರಮೇಹಿ,ಮಹೋದರ, ಅಕ್ಷಿರೋಗ, ಕುಷ್ಟರೋಗ, ಪೆಟ್ಟಾದವರಿಗೆ ರೂಕ್ಷವಾದ ಆಹಾರಪದಾರ್ಥಗಳನ್ನು ಕೊಡಬೇಕು.
 • ಮಂದಾಗ್ನಿ ಇದ್ದವರಿಗೆ ಹಗುರವಾದ ಆಹಾರ ಕೊಡಬೇಕು.
 • ಸಮಾಗ್ನಿ ಇದ್ದವರಿಗೆ ಎರಡು ಸಾರೆ ಭೋಜನ ಕೊಡಬೇಕು.
 • ಔಷಧ ದ್ವೇಷಿಸುವವರಿಗೆ ಆಹಾರದೊಡನೆ ಔಷಧಿ ದ್ರವ್ಯಗಳನ್ನು ಸೇರಿಸಿ ಕೊಡುವ ಯೋಜನೆ ಮಾಡಬೇಕು.
 • ಅಗ್ನಿಶಕ್ತಿ ಕೂಡಲೇ ಆಕಸ್ಮಿಕವಾಗಿ ಕಡಿಮೆ ಆದವರಿಗೆ ಅತಿಕಡಿಮೆ ಪ್ರಮಾಣದಲ್ಲಿ ಆಹಾರ ಕೊಡಬೇಕು.
 • ದೋಷಗಳನ್ನು ಶಮನಮಾಡಲು ಆಯಾ ಋತುಗಳಿಗೆ ತಕ್ಕ ಹಾಗೆ ಆರೋಗ್ಯ ಆಹಾರಗಳನ್ನು ಕೊಡಬೇಕು.
 • ಆರೋಗ್ಯವಂತರ ಶರೀರ ರಕ್ಷಣೆಗಾಗಿ, ಪುಷ್ಟಿ, ಬಲ, ವೃಷ್ಯಕರಗಳಾದ ಆಹಾರಗಳನ್ನು ಕೊಡಬೇಕು.(ಕ.ಅ.೨೦, ಶ್ಲೋಕ-೧೨-೧೫)

೧೫. ಶಾಖಾಹಾರ

ಸ್ವಸ್ಥ ಜೀವನಕ್ಕೆ ಶಾಖಾಹರ ತುಂಬ ಒಳ್ಳೆಯದು. ಪ್ರಕೃತಿ ನಮ್ಮ ಬೇಕು-ಬೇಡಗಳಿಗೆ ಸ್ಪಂದಿಸಿ ವಿಧ-ವಿಧವಾದ ಆಹಾರ ಪದಾರ್ಥಗಳನ್ನು ಹುಟ್ಟಿಸಿದೆ. ಅದಕ್ಕಾಗಿ ಜೀವಿಸುವ ಹಕ್ಕನ್ನು ಪಡೆದ ಪಶು-ಪಕ್ಷಿ-ಪ್ರಾಣಿಗಳನ್ನು – ಕೊಂದು ಅವುಗಳ ಮಾಂಸವನ್ನು ತಿಂದು ನಾವು ಬದುಕಬೇಕಾಗಿಲ್ಲ. ಹುಲಿ ಸಿಂಹಗಳನ್ನೇ ಹಿಮ್ಮೆಟ್ಟಿಸುವ ಬಲಶಾಲಿ ಆನೆ ಸಂಪೂರ್ಣ ಶಾಖಾಹಾರಿ. ಮತ್ತು ಎಮ್ಮೆ,ಹಸು, ಕಾಡುಕೋಣ ಮುಂತಾದವು ತುಂಬ ಬಲಶಾಲಿಗಳಾಗಿದ್ದರೂ ಅವು ಶಾಖಾಹಾರಿಗಳು. ಹಾಗಾದರೆ ನಾವು ಜೀವಿಸಲು ಈ ವಿಶ್ವದಲ್ಲಿ ಬೆಳೆಯುವ ಆಹಾರ ಪದಾರ್ಥಗಳನ್ನೇ ಸಾಕು. ಹಾಗಿದ್ದರೆ ಜೀವಿಗಳನ್ನು ಕೊಂದು ಅವುಗಳ ಮಾಂಸವನ್ನು ತಿಂದು ಬದುಕಬೇಕೆಂಬ ಮಾನವನ ಚಪಲಕ್ಕೆ ಕೊನೆ ಎಂದು? ಅನೇಕ ಪ್ರಾಣಿಗಳ ಮಾಂಸ ಇಂದು ಆರೋಗ್ಯಕರವಲ್ಲ ಎಂದು ತಿಳಿದಿದ್ದರೂ, ತಿಂದು ರೋಗಕ್ಕೆ ತುತ್ತಾದವರ, ಅನೇಕ ಮಾಂಸಾಹಾರಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮೂಲ ಮಾಂಸಹಾರಿಗಳಾದ ಪಾಶ್ಚಾತ್ಯರು ಶಾಖಾಹಾರಿಗಳಾಗಿ ಪರಿವರ್ತಿತರಾಗುತ್ತಿದ್ದರೆ ನಮ್ಮ ದೇಶದಲ್ಲಿ ಅನೇಕ ಶಾಖಾಹಾರಿಗಳು ಮಾಂಸಾಹಾರಿಗಳಾಗುತ್ತಿರುವುದು ಒಂದು ವಿಪರ್ಯಾಸ. ಮಾಂಸಾಹಾರ ಸೇವನೆ, ಮದ್ಯ-ಮಾದಕಗಳ ಸೇವನೆ, ಪಾಶ್ಚಾತ್ಯ ಸಂಗೀತ – ನೃತ್ಯಗಳಿಂದು ನಮ್ಮ ಯುವಜನಾಂಗಕ್ಕೆ ಆಧುನಿಕ ಸುಸಂಸ್ಕೃತಿ ಎನಿಸುತ್ತಿರುವುದು ನಮ್ಮ ದೌರ್ಭಾಗ್ಯ. ವಿಶ್ವವಿಖ್ಯಾತ ಜ್ಞಾನಿಗಳು. ಇದರ ಬಗ್ಗೆ ಹೀಗೆ ಹೇಳುತ್ತಾರೆ:

 • ಮಾಂಸಹಾರವು ಮೃಗೀಯ ಲಾಲಸೆಗಳನ್ನು, ಕಾಮುಕತೆಯನ್ನು ಉತ್ತೇಜಿಸುತ್ತದೆ. ಅದು ಅನೇಕ ತುಚ್ಛ ಪ್ರವೃತ್ತಿಗಳನ್ನು ಪ್ರೋತ್ಸಾಹಿಸುತ್ತದೆ – ಟಾಲ್‌ಸ್ಟಾಯ
 • ಮಾಂಸಹಾರಿಗಳಿಗೆ ರೋಗಗಳು ಜಾಸ್ತಿ. ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚು. ಹೃದಯಾಘಾತಕ್ಕೆ ಕಾರಣವಾಗುವುದು. ಕ್ರೌರ್ಯ ಹೆಚ್ಚುವುದು. ಮಾನವನ ಕ್ಷಣಿಕ ಸುಖಕ್ಕೆ ಒಂದು ಪ್ರಾಣಿಯು ತನ್ನ ಜೀವವನ್ನು ಕಳೆದುಕೊಳ್ಳಬೇಕಾಗುವುದು. ಮಾನವನ ಹಲ್ಲಗಳು, ಪಚನ ವ್ಯವಸ್ಥೆ ಮಾಂಸಾಹಾರಕ್ಕೆ ಯೋಗ್ಯವಾಗಿಲ್ಲ. ಮಾನವನ ಕ್ರೌರ್ಯಕ್ಕೆ ಬಲಿಯಾಗುವಾಗ ಪ್ರಾಣಿಯು ಬಿಡುವ ಒಂದು ವಿಧದ ರಸಯನವು ಅದರ ರಕ್ತ ಮಾಂಸದಲ್ಲಿ ಸೇರುವುದರಿಂದ ಅದನ್ನು ತಿನ್ನುವ ಮಾನವನಿಗೆ ಶಾಪವಾಗಿ ಪರಿಣಮಿಸುತ್ತದೆ.
 • …..ಅಯ್ಯೋ, ಒಂದು ದುರಾಸೆಯು ದೇಹವು ಮತ್ತೊಂದು ದೇಹದಿಂದ ಪಡೆದ ಆಹಾರದಿಂದ ಪುಷ್ಟವಾಗಿ ಬೆಳೆಯಲು ಮಾಂಸವನ್ನು ಶೇಖರಿಸುವುದು. “ಒಂದು ಪ್ರಾಣಿಯು ಮತ್ತೊಂದು ಪ್ರಾಣಿ ವಧೆ ಮಾಡಿ ಜೀವಿಸುವುದು ಎಂಥ ಅಪರಾಧ? ಭೂಮಿ ತಾಯಿಯು ನಮಗೆ ಒದಗಿಸುವ ಸಸ್ಯಾಹಾರ ಸಾಕಷ್ಟು, ಸಂಪದ್ಭರಿತವಾಗಿದೆಯಲ್ಲ. ಪ್ರಾಣಿಯನ್ನು ಕೊಂದು ಅದರ ಮಾಂಸವನ್ನೇಕೆ ಜಗಿಯುವ ಹೇಯ ಕೆಲಸ ಮಾಡಬೇಕು? – ಓವಿದ್

೧೬. ಶುದ್ಧ ಆಹಾರಸಾತ್ವಿಕ ಮನಸ್ಸು

ನಾವು ತೆಗೆದುಕೊ‌ಳ್ಳುವ ಆಹಾರವು ಶುದ್ಧವಿದ್ದರೆ ಭಾವನೆಗಳು ಶುದ್ಧವಿರುತ್ತವೆ. ವಿಚಾರಗಳು ಒಳ್ಳೆಯವಿರುತ್ತವೆ. ಅಶುದ್ಧ ಆಹಾರದಿಂದ ಅಪವಿತ್ರ ವಿಚಾರ‍ಗಳು ಉತ್ಪನ್ನವಾಗುತ್ತದೆ. ಅಪವಿತ್ರ ವಿಚಾರಗಳಿಂದ ಕರ್ಮ ಕಟ್ಟುವುದು. ಅದಕ್ಕಾಗಿ ಆತ್ಮನಿರ್ಮಲತೆಗಾಗಿ ಶುದ್ಧ ಆಹಾರ-ಪಾನೀಯಗಳ ಅಗತ್ಯವಿದೆ.

 • ಆರೋಗ್ಯವನ್ನು ಕೆಡಿಸುವ ಆಹಾರ ಪದಾರ್ಥಗಳು ಭಕ್ಷ್ಯವೆನಿಸುತ್ತವೆ.
 • ಅಲ. ಅತ್ತಿ, ಬಸರಿ, ಗೋಣಿ, ಅರಳಿ ಹಣ್ಣುಗಳು, ಹಳಸಿದ ಅನ್ನ, ಅಮರ್ಯಾದಿತ ಪದಾರ್ಥ, ಮಳೆಗಾಲದಲ್ಲಿ ಬುಳುಸು ಹತ್ತಿದ ಪದಾರ್ಥ, ಹಪ್ಪಳ, ಉಪ್ಪಿನಕಾಯಿ, ದ್ವಿದಳಗಳನ್ನು ತಿನ್ನುವುದರಿಂದ ತ್ರಸ ಜೀವಿಗಳಿಗೆ ಘಾತವಾಗುವುದು ಎನ್ನಲಾಗಿದೆ.
 • ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಮೂಲಂಗಿ, ಗೆಣಸು, ಗಜ್ಜರಿ, ಕ್ಯಾಬಿಜ, ನವಲಕೋಲು, ಕೆಂಪುಗಡ್ಡೆ – ಇವುಗಳಲ್ಲಿ ಸ್ಥಾವರ ನಿಗೋದ ಜಂತುಗಳಿಗೆ ಹಿಂಸೆಯಾಗುವುದರಿಂದ ತಿನ್ನಬಾರದು.
 • ಸರಾಯಿ, ಗಾಂಜಾ, ತಂಬಾಕು, ಅಫೀಮು, ಮದ್ಯಪಾನ, ಧೂಮ್ರಪಾನ ಇತ್ಯಾದಿ ನಶೆಯನ್ನುಂಟು ಮಾಡುವ ಪದಾರ್ಥಗಳನ್ನು ತೆಗೆದುಕೊಳ್ಳಬಾರದು.
 • ತಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಅನಿಷ್ಟಕಾರಕ ಭಕ್ಷ್ಯಗಳನ್ನು ತಿನ್ನಬಾರದು. ಉದಾ:ನೆಗಡಿ, ಕೆಮ್ಮು ಇರುವಾಗ ತಣ್ಣಗಿರುವ ವಸ್ತುವನ್ನು ಸಾಫ್ಟ ಡ್ರಿಂಕ್ಸ್, ಐಸ್ ಕ್ರೀಮು, ಬರ್ಫ, ಪೇರಲ ಹಣ್ಣು, ಸೀತಾಫಲ, ಬಾಳೆಹಣ್ಣು ತಿನ್ನುವುದು. ಒಣಕೆಮ್ಮಿರುವಾಗ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದು-ಆಮ್ಲಪಿತ್ತವಿಕಾರವಿರುವಾಗ ಹೆಚ್ಚಿಗೆ ಕಾರ, ಹುಳಿ, ಉಪ್ಪುಗಳನ್ನು ತಿನ್ನುವುದು. ಇಲ್ಲಿ ಪದಾರ್ಥದ ದೋಷವಿರದಿದ್ದರೂ ಅದರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಾದರೆ ಬೇಡ ಎಂಬ ಅಭಿಪ್ರಾಯವಿದೆ.
 • ಉಗುಳು, ಮಲ ಮೂತ್ರ ಇತ್ಯಾದಿ ಶರೀರದಿಂದ ಹೊರಹೋಗಬೇಕಾದ ಮಲಾಂಶಗಳಿಗೆ ಅಭಕ್ಷ್ಯಗಳೆನ್ನುತ್ತಾರೆ. ಇವುಗಳಲ್ಲದೆ ಇನ್ನಿತರ ಅಭಕ್ಷ್ಯವೆನಿಸಿದ ೨೨ ಪ್ರಕಾರದ ಪದಾರ್ಥಗಳಿವೆ. ಅವನ್ನು ತಿನ್ನಬಾರದು.

ಅಣಿಕಲ್ಲು, ರಾತ್ರಿ ಭೋಜನ, ಬದನೆಕಾಯಿ, ಉಪ್ಪಿನಕಾಯಿ, ಅತ್ತಿಯ ಹಣ್ಣು, ಬಸರಿ ಹಣ್ಣು, ಅಲದ ಹಣ್ಣು, ಅರಳಿ ಹಣ್ಣು, ದೋಣಿಯ ಹಣ್ಣು, ಜೇನುತುಪ್ಪ, ಯಾವುದೇ ಗೊತ್ತಿಲ್ಲದ ಹಣ್ಣು, ಅರಳಿ ಹಣ್ಣು, ದೋಣಿಯ ಹಣ್ಣು, ಜೇನುತುಪ್ಪ, ಯಾವುದೇ ಗೊತ್ತಿಲ್ಲದ ಹಣ್ಣು, ಕಂದಮೂಲಗಳು, ಮಣ್ಣು, ವಿಷ, ಮಾಂಸ, ಬೆಣ್ಣೆ, ಮದ್ಯಪಾನ, ಅತೀ ತುಚ್ಛ ಫಲ, ಮಂಜುಗಡ್ಡೆ, ಕೆಟ್ಟ ಕೊಳೆತ ವಾಸನೆ ಬರುವ ರಸ, ಇಬ್ಬನ್ನಿ, ಮೊಸರುವಡೆ, ಕಚ್ಚಾ ಹಾಲಿನಿಂದ ತಯಾರಿಸಿದ ಮೊಸರು ಇತ್ಯಾದಿ ೨೨ ಅಭಕ್ಷ್ಯ ಪದಾರ್ಥಗಳು.

ರಾತ್ರಿ ಭೋಜನ ತ್ಯಾಗ: ರಾತ್ರಿ ಸಮಯದಲ್ಲಿ ಅನ್ನ, ನೀರು, ಫಲಾಹಾರ ಮತ್ತು ಎಲೆ ಅಡಿಕೆಗಳನ್ನು ಸೇವಿಸಬಾರದು. ಎಂದರೆ ಇವುಗಳಲ್ಲಿ ಎಲ್ಲ ವಿಧ ಆಹಾರ ಪದಾರ್ಥ ಪಾನೀಯಗಳು ಒಳಗೊಳ್ಳುವುವು. ಈ ಕೆಲಸ ತ್ರಿಕರಣ ಪೂರ್ವಕವಾಗಿ -ಆಗಬೇಕು. ಸೂರ್ಯೋದಯವಾದ ಎರಡು ಗಳಿಗೆಗಳ ನಂತರ ಹಾಗೂ ಸೂರ್ಯಾಸ್ತವಾಗುವ ಎರಡು ಗಳಿಗೆಗಳ ಮೊದಲು ಮಾತ್ರ ಆಹಾರ ಸೇವಿಸಲು ಯೋಗ್ಯ ಕಾಲ.

ವರ್ಜಿಸಬೇಕಾದ ಆಹಾರ ಪದಾರ್ಥಗಳು: ಮಲೀನವಾದ, ಎಂಜಲಿನ, ಹೊಲಸುಳ್ಳ, ಹೇಸಿಕೆ ಎನಿಸುವ, ತಂಗಳಾಧ, ರುಚಿ ಎನಿಸದ, ಕೊಳೆತ, ತಯಾರಾಗಿ ಬಹಳ ಹೊತ್ತಾದ, ತುಂಬ ತಣ್ಣಗಾದ, ತಣ್ಣಗಾಗಿರುವುದನ್ನು ಪುನಃ ಬಿಸಿ ಮಾಡಿದ, ಹೊತ್ತಿದ, ಚೆನ್ನಾಗಿ ಬೇಯಿದೆ ಇದ್ದ ಆಹಾರ ಪದಾರ್ಥಗಳನ್ನು ಅವೆಷ್ಟೇ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ ಹಾಗು ನಮಗೆಷ್ಟೇ ಹಸಿವಾಗಿದ್ದರೂ ತಿನ್ನಬಾರದು.

ಆಹಾರ ದ್ರವ್ಯಗಳು ಪರಸ್ಪರ ವಿರುದ್ಧ ಗುನ, ವೀರ್ಯಾಂಶ ಹೊಂದಿರಬಾರದು. ಉದಾ: ಹಾಲಿನೊಡನೆ ಹುಳಿರಸ ಇಲ್ಲವೆ ಹುಳಿಯಾದ ಹಣ್ಣುಗಳು ವಿರುದ್ಧವಾಗಿವೆ. ಬಾಳೆಹಣ್ಣನ್ನು ಮಜ್ಜಿಗೆಯ ಜೊತೆ, ತಾಳೆಹಣ್ಣನ್ನು ಮೊಸರಿನ ಜೊತೆಯಲ್ಲೂ ಸೇವಿಸಬಾರದು.

ಆಹಾರ ಸೇವನೆಯ ಲಕ್ಷಣಗಳು

. ಮಿತಾಹಾರ:ಆಹಾರವು ಹೊಟ್ಟೆ, ಹೃದಯ, ಪಕ್ಕಡೆಗಳಲ್ಲಿ ತಡೆ ಇಲ್ಲವೆ ನೋವನ್ನುಂಟು ಮಾಡುವುದಿಲ್ಲ. ಹೊಟ್ಟೆ ಭಾರವಾಗುವುದಿಲ್ಲ. ಇಂದ್ರಿಯಗಳು ತೃಪ್ತಿಗೊಳ್ಳುವುವು. ಹಸಿವು ಬಾಯಾರಿಕೆಗಳು ಶಾಂತವಾಗುವುವು. ಶರೀರದ ಯಾವುದೇ ತರಹದ ಚಟುವಟಿಕೆಗಳಿಗೆ ತೊಂದರೆ ಆಗುವುದಿಲ್ಲ. ಸುಖವಾಗಿ ಜೀರ್ಣವಾಗುವುದು. ಶರೀರಕ್ಕೆ ಒಳ್ಳೆಯ ಬಲ, ವರ್ಣಗಳನ್ನು ಕೊಡುವುದು.

. ಹೀನಾಹಾರ :ಶರೀರದ ಬಲ, ವರ್ಣಗಳು ಕ್ಷಯಿಸಿ ತೃಪ್ತಿ ಇಲ್ಲದಂತಾಗುವುದು. ಸಂಭೋಗ ಶಕ್ತಿ, ಆಯುಷ್ಯ, ತೇಜಸ್ಸುಗಳು ಕುಂದುವವು. ಮನೋಬುದ್ಧಿ, ಇಂದ್ರಿಯಗಳು ಕೆಡುವುವು. ಶರೀರವು ಒಣಗಿ ವಿಶೇಷವಾಗಿ ವಾತರೋಗಗಳು ಪೀಡಿಸ ತೊಡಗುವುವು.

. ಅತ್ಯಾಹಾರದ ಲಕ್ಷಣಗಳು: ಎಲ್ಲ ದೋಷಗಳು ಪ್ರಕೋಪಗೊಳ್ಳುವುದು. ಆಹಾರ ಪದಾರ್ಥಗಳು ಪಕ್ವವಾಗದೆ ಹೊಟ್ಟೆಭಾರವಾಗಿ ಡೇಕರಿಕೆ, ವಾಂತಿ, ಬಿಕ್ಕು, ದೂಷಿತ ಅಪಾನವಾಯು ಇಲ್ಲವೆ ಭೇದಿ ಮೂಲಕ ಹೊರಬೀಳಲಾರಂಭಿಸುವುವು.

೧೮. ಖಾದ್ಯ ಪದಾರ್ಥಗಳು ಹಾಗೂ ಅವುಗಳ ಶುದ್ಧತೆಯ ಕಾಲ ಮರ್ಯಾದೆ

ಹೆಸರು ಮಳೆಗಾಲ ಬೇಸಿಗೆಯ ಕಾಲ ಚಳಿಗಾಲ
ಹಿಟ್ಟು ನುಚ್ಚುರವೆ, ಖಾರ ಮಸಾಲ ಪುಡಿ ಇತ್ಯಾದಿ ೩ ದಿವಸ ೭ ದಿವಸ ೭ ದಿವಸ
ಪೇಢೆ ಮೊದಲಾದ ನೀರು ಹಾಕದೆ ಮಾಡಿದ ಪದಾರ್ಥಗಳು
ಅರಳು ಕಾಜು (ಗೋಡಂಬಿ)ಮೊದಲಾದ ಹುರಿದ ಪದಾರ್ಥಗಳು
ಜೀರಿಗೆ, ಕೋತಂಬರಿ ಕಾಳು, ಸಾಸಿವೆ ಮುಂತಾದವುಗಳು ಪುಡಿ ೭ ‌ದಿವಸ ೧೫ ದಿವಸ ೧೫ರಿಂದ ೩೦ ದಿವಸ
ಶುದ್ಧ ಮಾಡಿದ ಸಕ್ಕರೆ ಹಾಗೂ ಬತ್ತಾಸ ನೀರು ಹಾಕಿ ತಯಾರಿಸಿದ ಉಂಡಿ, ಗುಲಾಬ, ಜಾಮುನ್, ಅನ್ನಾರಸ, ಮಿಠಾಯಿ ಇತ್ಯಾದಿಗಳು ೨೪ತಾಸು ೨೪ ತಾಸು ೨೪ತಾಸು
ಕಾಯಿಸಿದ ಹಾಲು ಮತ್ತು ನೀರು (ಚೆನ್ನಾಗಿ ಎಸರು ಬರುವಾಗೆ ಕಾಯಿಸಿದ್ದು) ೬ ತಾಸು ೬ತಾಸು ೬ತಾಸು
ಬಸಿ ನೀರಿನಿಂದ ಮಾಡಿದ ಮಜ್ಜಿಗೆ ಮತ್ತು ಹಪ್ಪಳ, ಸೆಂಡಿಗೆ, ಶಾವಿಗೆ ವಡೆ, ಹಲವಾ, ಕರಚೀಕಾಯಿ, ಗಾರಿಗೆ, ಬಜಿ, ಉಪ್ಪಿನಕಾಯಿ ಮುಂತಾದವುಗಳು. ೧೨ ತಾಸು ೧೨ತಾಸು ೧೨ತಾಸು
ಕಚ್ಚಾ ಕಾಯಿಸಿದ ನೀರು ೧೨ತಾಸು ೧೨ತಾಸು ೧೨ತಾಸು
ಕುಂಬಳ,ಮೂಡಲ ಮುಂತಾದವುಗಳು, ರೊಟ್ಟಿ, ಅನ್ನ, ಕಿಚಡಿ, ಬೇಳೆಯ ಸಾರು, ಕಡ್ಲಿ ಹಿಟ್ಟಿನ ಜುಣಕ, ಹುಗ್ಗಿ, ಮಜ್ಜಿಗೆ ಸಾರು, ಒಣ ಶುಂಠಿ, ಲವಂಗ ಮುಂತಾದವುಗಳನ್ನು ಹಾಕಿ ಪ್ರಾಸುಕ ಮಾಡಿದ ನೀರು. ೬ತಾಸು ೬ತಾಸು ೬ತಾಸು
ಸೋಸಿದ ನೀರು, ಸೋಸಿ ಕಾಸದ ಹಾಲು, ಹಾಗೂ ಬೆಣ್ಣೆ ಕಾಯಿಸಲು, ಪಾಕ ಮಾಡಿದ ಸೈಂಧವ ಲವಣ ೪೮ ನಿಮಿಷ ೪೮ನಿಮಿಷ ೪೮ನಿಮಿಷ

ಸೂಚನೆ: ತುಪ್ಪ, ಎಣ್ಣೆಗಳು ಎಲ್ಲಿಯವರೆಗೆ ದುರ್ಗಂಧವಾಗುದಿಲ್ಲವೋ ಅಲ್ಲಿಯವರೆಗೆ ಅವನ್ನು ಉಪಯೋಗಿಸಬಹುದು.

 • ಆಕಳ ಹಾಲು, ಆಕಳು ಈದ ೧೦ ದಿವಸಗಳ ಮೇಲೆ ಶುದ್ಧವಾಗುವುದು.
 • ಎಮ್ಮೆ ಹಾಲು ಈದ ೧೫ ದಿವಸಗಳಾದ ಮೇಲೆ ಶುದ್ಧವಾಗುತ್ತದೆ.

ಆಹಾರ ಶುದ್ಧಿ ದೃಷ್ಟಿಯಿಂದ ಅಡಿಗೆಯಲ್ಲಿ ಉಪಯೋಗಿಸುವ ಎಲ್ಲ ಪದಾರ್ಥಗಳು ಮೇಲಿನ ಕಾಲ ಮರ್ಯಾದೆಯೊಳಗಿರಬೇಕು.

೧೯. ಜಲಪಾನ

ಶರೀರದಲ್ಲಿ ಹುಟ್ಟಿಕೊಳ್ಳುವ ಮಲಾಂಶಗಳನ್ನು ಹೊರಹಾಕಲು ನೀರು ಅತ್ಯಗತ್ಯವಾಗಿದೆ. ಶರೀರದಲ್ಲಿ ಸಾಕಷ್ಟು ಜಲಾಂಶವಿರುವುದಿಂದಲೇ (ನೀರು, ಗಾಳಿಗಳು ೯೫ಶೇಕಡಾ ಇದ್ದರೆ ಇತರ ಪದಾರ್ಥಗಳು ಶೇ.೫ರಷ್ಟು ಇವೆ) ವಿವಿಧ ಪಾಚಕ ರಸಗಳು, ಸಂರಕ್ಷಕ ದ್ರವಗಳೂ ಸಪ್ರಮಾಣದಲ್ಲಿ ಸ್ರವಿಸುತ್ತವೆ.

ಶುದ್ಧವಾದ ತಣ್ಣೀರನ್ನು ಕುಡಿಯವುದರಿಂದ ಶರೀರದಲ್ಲಿ ಉತ್ಸಾಹ, ಮನಃಶಾಂತಿ, ಸಮಾಧಾನ, ಹಾಗು ಬುದ್ಧಿಯ ಸ್ಪಷ್ಟತೆಗಳುಂಟಾಗುತ್ತವೆ.

ಶರೀರದ ತೂಕ ಮತ್ತು ಗಾತ್ರಗಳನ್ನು ಇಚ್ಛಾನುಸಾರ ಬೆಳೆಸಿಕೊಳ್ಳಲು ಇಲ್ಲವೇ ಉಳಿಸಿಕೊಳ್ಳಲು ಸಹಾಯಕವಾಗುವಂತೆ ನೀರನ್ನು ಕುಡಿದರೆ ಶರೀರವು ಕೃಶವಾಗುವುದು. ಮಧ್ಯದಲ್ಲಿ ಕುಡಿದರೆ ಸಮವಾಗಿರುವುದು. ಕೊನೆಯಲ್ಲಿ ಕುಡಿದರೆ ಶರೀರವು ಸ್ಥೂಲವಾಗುವುದು ಎಂಬ ಮಾತನ್ನು ಈಗಾಗಲೇ ತಿಳಿದಿದ್ದೇವೆ.

ಹೊಟ್ಟೆ ತುಂಬ ಊಟ ಮಾಡಿದ ನಂತರ ಹೆಚ್ಚು ಪ್ರಮಾಣದಲ್ಲಿ ನೀರು ಅಥವಾ ಪೇಯಾಹಾರಗಳನ್ನು ಸೇವಿಸಿದರೆ ಅಮಾಶಯದಲ್ಲಿರುವ ತ್ರಿದೋಷಗಳ ಕಾರ್ಯಕ್ಕೆ ತಡೆಯುಂಟಾಗಿ ಅವು ಒಮ್ಮಲೇ ಪ್ರಕೋಪಗೊಂಡು ಅನೇಕ ವಿಕಾರಗಳನ್ನುಂಟು ಮಾಡಲು ಸಮರ್ಥವಾಗುವುವು.