೨೦. ಅನುಪಾನಗಳು

ಆಹಾರದಲ್ಲಿ ದೊರದಕ ಅಂಶಗಳನ್ನು ಪ್ರಕೃತಿಗೆ ಸರಿದೂಗಿಸುವಂತೆ ಅನುಪಾನವನ್ನು ಯೋಜಿಸಿಕೊಳ್ಳಬೇಕು. ಬಿಸಿನೀರು, ಮಜ್ಜಿಗೆ, ತಿಳಿಸಾರು, ಲಿಂಬೆ ಪಾನಕ, ತಿಳಿಯಾದ ಪಾಯಸ, ಖೀರು ಬೇಳೆ ಕಟ್ಟುಗಳು, ಎಳೆ ತೆಂಗಿನಕಾಯಿ ನೀರು, ಹಣ್ಣಿನ ರಸಗಳು, ಧಾನ್ಯಾಮ್ಲ, ಹಾಲು ಮೊದಲಾದವುಗಳೆಲ್ಲ ರೂಢಿಯಲ್ಲಿದ್ದ ಅನುಪಾನಗಳು.

ವ್ಯಕ್ತಿಯ ಆರೋಗ್ಯವಸ್ಥೆ ಮತ್ತು ಋತುಕಾಲಕ್ಕನುಸರಿಸಿ ಅನುಪಾನವನ್ನಾರಿಸಿ ಕೊಳ್ಳಬೇಕು. ವಾತಾವಸ್ಥೆಯಲ್ಲಿ ಸ್ನಿಗ್ಧೋಷ್ಣವಾದುದನ್ನು, ಪಿತ್ತಾವಸ್ಥೆಯಲ್ಲಿ ಮಧುರಶೀತವಾದುದನ್ನು ಮತ್ತು ಕಫಾವಸ್ಥೆಯಲ್ಲಿ ರೂಕ್ಷ ಉಷ್ಣವಾದುದನ್ನು ಆರಿಸಿಕೊಳ್ಳಬೇಕು.

ಶರೀರದ ಊರ್ಧ್ವಭಾಗದಲ್ಲಿ ವಾತ ಪ್ರಕೋಪಗೊಂಡಾಗ, ಕೆಮ್ಮು, ಉಬ್ಬಸ, ಬಕ್ಕಿಳಿಕೆಗಳಿಂದ ಬಳಲುತ್ತಿರುವಾಗ ತಣ್ಣೀರನ್ನು ಕುಡಿಯಬಾರದು.

ಬಿಸಿ ನೀರು ಕಫ ದೋಷಗಳು, ಮೇದೋರೋಗ, ವಾಯು ರೋಗಗಳು, ಅವದೋಷ, ಉಬ್ಬುಸ, ಕೆಮ್ಮು, ಜ್ವರ ಮುಂತಾದವುಗಳನ್ನು ದೂರಮಾಡಿ ದೀಪನವನ್ನುಂಟು ಮಾಡುವುದು. ಮೂತ್ರಾಶಯ ಶೋಧನೆ ಮಾಡುವುದು. ಕುಡಿಯಲು ಹಿತಕಾರಿ, ಸ್ವಲ್ಪ ಬಿಸಿಯಾದ ನೀರನ್ನೇ ಕುಡಿಯಲು ಉಪಯೋಗಿಸಬೇಕು.

ಅರುಚಿ, ಪೀನಸ (ಹಳೇ ನೆಗಡಿ)ನೆಗಡಿ, ಮೈಬಾವು, ಕ್ಷಯ ವಿಕಾರ, ಮಂದಾಗ್ನಿ, ಉದರರೋಗ (ಜಲರೋಗ) ಕುಷ್ಠ, ಜ್ವರ, ನೇತ್ರರೋಗ, ವ್ರಣ, ಮಧುಮೇಹ ಮುಂತಾದ ವ್ಯಾಧಿಗಳಲ್ಲಿ ಶುದ್ಧ ನೀರನ್ನೂ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕುಡಿಯಬೇಕು.

೨೧. ಉಪವಾಸ

 • ನಿರೋಗಿಯಾಗಬೇಕಾದರೆ ವಾರಕ್ಕೊಂದು ದಿವಸ ನಿರಾಹಾರ ಉಪವಾಸವನ್ನು ಮಾಡಬೇಕು. ಇದರಿಂದ ದೇಹದ ಅಂಗಾಂಗಗಳ ಕ್ರಿಯೆ ಬಿರುಸಿನಿಂದ ಸಾಗುವುದು. ಮತ್ತು ದೇಹಗತ ವಿಶೇಷ ವಸ್ತುಗಳ ವಿಸರ್ಜನೆ ಸರಳವಾಗುವುದು. ಜೀರ್ಣಾಂಗಗಳಿಗೆ ವಿಶ್ರಾಂತಿ ದೊರಕಿದಂತಾಗಿ ಅವು ಪುನಃ ಚೇತನಗೊಳ್ಳುವುವು. ಜೈನರ ಪರ್ವದಿವಸಗಳಲ್ಲಿ ಉಪವಾಸಕ್ಕೊಂದು ಮಹತ್ತದ ಸ್ಥಾನವಿದೆ.
 • ಅನೇಕ ರೋಗಗಳಿಗೆ ‘ಉಪವಾಸ’ವೊಂದು ಉತ್ತಮ ಚಿಕಿತ್ಸೆ, ನೈಸರ್ಗಿಕ ಚಿಕಿತ್ಸಾ ವಿಧಾನಗಳಲ್ಲಿ ಇದಕ್ಕೊಂದು ಮಹತ್ವದ ಸ್ಥಾನವಿದೆ.
 • ಉಪವಾಸವು ಅಮದೋಷ(ಅಜೀರ್ಣಕ್ಕೆ ಸಂಬಂಧಿಸಿದುದು) ವನ್ನು ದೂರಮಾಡುತ್ತದೆ. ಅಗ್ನಿಯನ್ನು ವೃದ್ಧಿಸುತ್ತದೆ. ಸ್ಫೂರ್ತಿಯನ್ನೀಯುತ್ತದೆ. ಇಂದ್ರಿಯಗಳನ್ನು ಶುದ್ಧಗೊಳಿಸುತ್ತದೆ.
 • ಉಪವಾಸದಲ್ಲೂ ಸಂಪೂರ್ಣ ನಿರಾಹಾರ ಉಪವಾಸ ಹಾಗೂ ಅಲ್ಪ ಫಲರಸ ಸಹಿತ ಉಪವಾಸವೆಂದು ಎರಡು ವಿಧ. ಸಂಪೂರ್ಣ ನಿರಾಹಾರ ಉಪವಾಸದಲ್ಲೂ ಕೆಲವರು ಕಾಯ್ದಾರಿಸಿದ ನೀರನ್ನು ತೆಗೆದುಕೊಳ್ಳುವರು. ಇದನ್ನು ಕೆಲವರು ಏನನ್ನೂ ತೆಗೆದುಕೊಳ್ಳುವುದಿಲ್ಲ.
 • ಉಪವಾಸದ ಹಿಂದಿನ ದಿವಸ ಕೂಡ ಅತಿಯಾದ ಭೋಜನ ಮಾಡಬಾರದು. ಅತಿ ಪಿಷ್ಟ ಪದಾರ್ಥಗಳನ್ನು ಸೇವಿಸಬಾರದು.
 • ಉಪವಾಸದ ಅವಧಿಯಲ್ಲಿ ಸೋಮಾರಿತನದಿಂದಿರದೇ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕು. ಬೇಕಾದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬಹುದು.
 • ಆಯುರ್ವೇದದಲ್ಲಿ ಎಲ್ಲ ರೋಗಗಳಿಗೆ ಮಂದಾಗ್ನಿಯೇ ಕಾರಣವೆಂದಿದ್ದಾರೆ. ಅಗ್ನಿಯನ್ನು ಪ್ರದೀಪ್ತಗೊಳಿಸುವುದೇ ಈ ಉಪವಾಸ.
 • ಗರ್ಭಿಣಿಯರು, ಹಾಲುಣ್ಣಿಸುವ ತಾಯಂದಿರು, ಮಕ್ಕಳು, ರಕ್ತ ಹೀನತೆ, ಜಠರ ವ್ರಣ, ಆಮ್ಲಪಿತ್ತ ರೋಗಿಗಳು, ರೋಗದಿಂದ ಅಶಕ್ತರಾದವರು, ಅತಿಯಾಗಿ ಕೃಶರಾಗಿರುವವರು ಉಪವಾಸವನ್ನಾಚರಿಸಬಾರದು. ಮೈಯಲ್ಲಿನ ರಕ್ತ (ಶಕ್ತಿ) ನಾಶವಾಗುವವರೆಗೆ ಉಪವಾಸವನ್ನು ಮಾಡಬಾರದು. ಇದರಿಂದ ಕೈ ಕಾಲು ಬೆರಳುಗಳಲ್ಲಿ ನೋವು, ಮೈ, ನೋವು, ಕೆಮ್ಮು, ಬಾಯಿ ಒಣಗುವಿಕೆ, ಹಸಿವು ಕಟ್ಟುವುದು, ಅರುಚಿ ಕಣ್ಣು, ಕಿವಿ, ಮೊದಲಾದ ಇಂದ್ರಿಯ ದೌರ್ಬಲ್ಯ, ಭ್ರಮೆ, ಕಣ್ಣಿಗೆ ಕತ್ತಲು ಗೂಡಿಸುವುದು. ಬುದ್ಧಿ ಶೂನ್ಯತೆ, ದೇಹಾಗ್ನಿಗಳ ಶಕ್ತಿಗುಂದುವಿಕೆ -ಈ ಮೊದಲಾದ ಲಕ್ಷಣಗಳು ಕಂಡುಬರುತ್ತವೆ.
 • ಉಪವಾಸದ ಮರುದಿವಸ ಶುಚಿರ್ಭೂತವಾಗಿ ಹಗುರವಾದ, ಮಧುರವಾದ, ರುಚಿಯಾದ, ಸರಿಯಾಗಿ ಬೇಯಿಸಿದ ಆಹಾರಗಳನ್ನು ಮಾತ್ರ ಸೇವಿಸಬೇಕು.

೨೨. ತಾಂಬೂಲ

ಊಟವಾದ ಬಳಿಕ ತಾಂಬೂಲವನ್ನು ತಿನ್ನುವುದರಿಂದ ಶರೀರದಲ್ಲಿ ಸೌಖ್ಯ, ಭಾಗ್ಯ, ಬಾಯಿಯಲ್ಲಿ ಸುಗಂಧವಾಸನೆ, ಸಂತೋಷ, ಶಾಂತಿ, ಉಲ್ಲಾಸ, ಸುಂದರವಾದ ವಿಷಯಾಭಿಲಾಷೆ ಮುಂತಾದ ಹೆಚ್ಚುವುವು. ಮುಖದಲ್ಲಿ ಕಾಂತಿ ಹೆಚ್ಚುವುದರ ಜೊತೆ ಮನಸ್ಸಿನಲ್ಲಿ ಸಂತೋಷವಿರುವುದು. ಬಾಯಿಯಲ್ಲಿ ದ್ರವತ್ವವಿರುವುದು. ಈತನು ಸಮಾಜದಲ್ಲಿ ಭೂಷಣವೆನಿಸುವನು. ಸ್ವರವು ಮಧುರವಾಗುವುದು. ಬಾಯಿಯಲ್ಲಿ ಲಾಲಾರಸವು ಹೆಚ್ಚು ಹುಟ್ಟುವುದರೊಡನೆ ಅನೇಕ ಮುಖ(ಬಾಯಿ) ರೋಗಗಳ ನಾಶವಾಗುವುದು. ಆಹಾರದಲ್ಲಿ ಇಚ್ಛೆ ಹುಟ್ಟುವುದು. ಊಟವಾದ ಬಳಿಕ ಬಾಯಿ ಶುದ್ಧಿ ಆಗುವುದು. ಇಂತಹ ತಾಂಬೂಲವನ್ನು ನಿತ್ಯ ಹಾಕಿಕೊಳ್ಳಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಊಟವಾದ ಬಳಿಕ, ಮಲಗಿ ಎದ್ದ ಮೇಲೆ, ಸ್ನಾನವಾದ ನಂತರ ಹಾಗೂ ವಾಂತಿಯಾದ ಮೇಲೆ ತಾಂಬೂಲ ಹಾಕಿಕೊಳ್ಳಬೇಕು. ಇನ್ನೂ ಕೆಲವರು ಈ ವೇಳೆಗಳಲ್ಲದೆ ಮೈಥುನ,ಯುದ್ಧ, ಸಭೆ, ಸಮಾರಂಭಗಳಲ್ಲಿ ತಾಂಬೂಲ ಸೇವನೆ ಮಾಡಬೇಕೆಂದೂ ಇದರಿಂದ ಕಾರ್ಯೋತ್ಸಾಹ, ಗೌರವಗಳು ಹೆಚ್ಚಾಗುವುದೆಂದು ಹೇಳಿದ್ದಾರೆ. ತಾಂಬೂಲಕ್ಕೆ ಪಚ್ಚಕರ್ಪೂರ, ಜಾಜಿಕಾಯಿ, ಬಾಲಮೆಣಸು, ಲವಂಗ, ಕಾಚು, ಸುಣ್ಣ, ಅಡಿಕೆ, ಜಾಯಿ ಪತ್ರ, ಏಲಕ್ಕಿ, ವೀಳ್ಯದೆಲೆ- ಇವೆಲ್ಲ ಇರಬೇಕಾಗುವುದು. ತಾಂಬೂಲಕ್ಕೆ ತಂಬಾಕವನ್ನು ಉಪಯೋಗಿಸಬಾರದು. ತಾಂಬೂಲವನ್ನು ಹಾಕಿಕೊಂಡನಂತರ ಬರುವ ಮೊದಲನೆ, ಎರಡನೆ ರಸಗಳನ್ನು ಉಗುಳಬೇಕು. ನಂತರದ ರಸಗಳು ಅಮೃತ ಸಮಾನ ಹಾಗೂ ರಸಾಯನ ಗುಣವುಳ್ಳವಾಗಿವೆ.

ಅತಿಯಾಗಿ ತಾಂಬೂಲ ಹಾಕಿಕೊಂಡರೆ ರಸಾದಿ ಸಪ್ತಧಾತುಕ್ಷಯ, ವಾತ ರೋಗ ಹಾಗೂ ರಕ್ತ ರೋಗಗಳನ್ನುಂಟು ಮಾಡಲು ಸಮರ್ಥವಾಗುವುವು. ಇದಲ್ಲದೇ ರಕ್ತಪಿತ್ತ, ಕ್ಷಯ, ಕ್ಷೀಣತೆ, ಬಾಯಾರಿಕೆ, ಜ್ವರ, ಮೂರ್ಛೆ, ವಿಕಾರಗಳಿಂದ ಬಳಲುವವರು, ಕೃಶರು, ಬಲಹೀನರು, ಬಾಯಲ್ಲಿ ಹುಣ್ಣಾದವರು ತಾಂಬೂಲ ಹಾಕಿಕೊಳ್ಳಬಾರದು.

೨೩. ವಿಶ್ರಾಂತಿ/ನಿದ್ರೆ

ವಿಶ್ರಾಂತಿ: ಸತತವಾಗಿ ಕೆಲಸ ಮಾಡುವುದರಿಂದ ದೇಹ-ಮನಸ್ಸುಗಳು ದಣಿದು ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗಿ ಬೇಸರವೆನಿಸಿದಾಗ ವಿಶ್ರಾಂತಿ ಬೇಕೆನ್ನಿಸುವುದು. ಒಂದೇ ರೀತಿಯ ಕೆಲಸವನ್ನು ಬಹಳ ಹೊತ್ತು ಮಾಡುತ್ತಿರುವಾಗಲೂ ಹೀಗಾಗಬಹುದು. ಆಗ ಕೆಲಸವನ್ನು ಬದಲಿಸಿದರೂ ಅದೊಂದು ರೀತಿಯ ಬದಲಾವಣೆ ಎನಿಸಿ ವಿಶ್ರಾಂತಿ ದೊರಕಿದಂತಾಗುವುದು. ಇದು ಯಾವುದೇ ಕೆಲಸ, ಪಾಠ, ನೃತ್ಯ, ಸಂಗೀತ, ನಾಟಕ, ಟಿ.ವಿ. ಸೀರಿಯಲ್, ಚಲನಚಿತ್ರ, ಸಂಗಿತಗಳನ್ನೂ ಬಿಟ್ಟಿಲ್ಲ. ಆಗಲೂ ನಮಗೆ ಕೆಲ ನಿಮಿಷಗಳ ಬದಲಾವಣೆ ಅವಶ್ಯವೆನಿಸುತ್ತದೆ.

ಕೆಲಸಗಳಲ್ಲಿ ವೈವಿಧ್ಯತೆ ಇರುವುದು ಕೂಡ ಒಂದು ರೀತಿಯ ವಿಶ್ರಾಂತಿಯೇ. ಈ ಮಾತನ್ನು ಮನಃ ಶಾಸ್ತ್ರಜ್ಞರೇ ಒಪ್ಪುತ್ತಾರೆ. ಒಬ್ಬ ವ್ಯಕ್ತಿ ನಿತ್ಯ ಬೌದ್ಧಿಕವಾಗಿ ಹೆಚ್ಚು ಕಾರ್ಯಮಗ್ನನಾಗುತ್ತಿದ್ದರೆ ಅವನಿಗೆ ದೈಹಿಕ ಶ್ರಮವಾಗುವ ಓಟ, ವ್ಯಾಯಾಮ, ಈಜು, ಯೋಗಾಸನಗಳನ್ನು ಮಾಡಬೇಕಾಗುತ್ತದೆ. ದೇಹ ಬೆವರಿದರೆ ಕಶ್ಮಲಗಳೆಲ್ಲ ಹೊರಹೋಗಿ ಯೋಗ್ಯ ವಿಶ್ರಾಂತಿ ದೊರಕುತ್ತದೆ. ನಂತರ ಧ್ಯಾನಮಾಡಿ ಕೆಲವೇಳೆ ಶವಾಸನ ಹಾಕಿದರೆ ದೇಹ-ಮನಸ್ಸುಗಳಿಗೆ ಮರುಚೈತನ್ಯ ತುಂಬಿದಂತಾಗುತ್ತದೆ. ನೀವು ಹೆಚ್ಚು ದಣಿದಾಗಲೆಲ್ಲ ಹೀಗೆ ಮಾಡಬೇಕು. ಇದನ್ನು ನಿವಾರಿಸಿಕೊಳ್ಳಲು ದುಶ್ಚಟಗಳನ್ನು ಅಂಟಿಸಿಕೊಳ್ಳಬಾರದು. ಮಧ್ಯಾಹ್ನ ಊಟವಾದ ಬಳಿಕ ಕೆಲ ವೇಳೆ ವಿಶ್ರಾಂತಿ, ವಾರಕ್ಕೊಂದು ದಿನ ವಿಶ್ರಾಂತಿ ಹಾಗೂ ನಾಲ್ಕಾರು ತಿಂಗಳಿಗೊಮ್ಮೆ ಜೀವನ ಜಂಜಾಟಗಳಿಂದ ದೂರವಾಗಿ ತೀರ್ಥಕ್ಷೇತ್ರಗಳು, ಗಿರಿಧಾಮ, ಪ್ರವಾಸಿ ತಾಣಗಳಿಗೆ ಹೋಗಿ ವಿಶ್ರಾಂತಿ ಪಡೆಯಬೇಕು.

ನಿದ್ರೆ: ನಮ್ಮ ದಿನನಿತ್ಯದ ಕೆಲಸಗಳಿಂದ ಮನಸ್ಸು ಹಾಗೂ ಕರ್ಮಾತ್ಮಗಳು ಬಳಲಿ ಸೋತು ಬಂದಾಗ ಅವುಗಳಿಗೆ ವಿಶ್ರಾಂತಿ ದೊರಕಿಸಿಕೊಡಲೆಂದು ಪ್ರಕೃತಿಯು ನಿದ್ರೆ ತರಿಸುವುದು.

 • ಸುಖವಾದ ನಿದ್ರೆಯಿಂದ ಆರೋಗ್ಯ, ಪುಷ್ಟಿ, ಶಕ್ತಿ, ಜ್ಞಾನ, ವೀರ್ಯವಂತಿಕೆಗಳು ಲಭಿಸುವುವು. ನಿದ್ರೆ ಸರಿಯಾಗಿ ಆಗದಿದ್ದರೆ ದುಃಖ, ಸೊರಗುವಿಕೆ, ದೌರ್ಬಲ್ಯ, ವೀರ್ಯಹೀನತೆ, ಅಜ್ಞಾನಗಳುಂಟಾಗುವುವು.(ಕ.ಅ.೬, ಶ್ಲೋಕ.೨೪) ಆದ್ದರಿಂದ ರಾತ್ರಿ ವೇಳೆ ವಯಸ್ಸಿಗನುಸಾರ ೬ ರಿಂದ ೮ ಗಂಟೆಗಳಷ್ಟು ನಿದ್ರೆ ಬೇಕು. ಹಗಲು ನಿದ್ರೆ ಬೇಕು. ಹಗಲು ನಿದ್ರೆ ಆರೋಗ್ಯಕ್ಕೆ ಒಳಿತಲ್ಲ. ನಿತ್ಯ ರಾತ್ರಿ ಸಮಯಕ್ಕೆ ಸರಿಯಾಗಿ ಬೇಗನೆ ಮಲಗಿಕೊಳ್ಳುವ ಹಾಗೂ ನಸುಕಿನಲ್ಲಿ ಬೇಗನೆ ಏಳುವ ರೂಢಿಯನ್ನು ಇಟ್ಟುಕೊಳ್ಳಬೇಕು.
 • ನಿದ್ರೆಯಲ್ಲಿ ಪ್ರಜ್ಞೆಯು ಇರುವುದಾದರೂ ತನ್ಮೂಲಕ ನಿಷ್ಕ್ರಷ್ಟ ಭಾವನೆಗಳು ಉದ್ಭವಿಸುವುದಿಲ್ಲವೆಂದು ಯೋಗಶಾಸ್ತ್ರವು ಹೇಳುತ್ತದೆ.
 • ನಿದ್ರೆಯಲ್ಲಿದ್ದಾಗ ಸುಖ,ದುಃಖ, ಸ್ಥೂಲತೆ, ಕೃಶತೆ, ಬಲಾಬಲಗಳು,ಜ್ಞಾನ ಅಜ್ಞಾನಗಳು, ವೃಷತ್ವ -ನಪುಂಸಕತ್ವಗಳು, ಜೀವಿತ-ಮರಣಗಳ ಜ್ಞಾನವು ಕೂಡ ಮಾನವನಿಗೆ ತಿಳಿದುಬರುವುದಿಲ್ಲವೆಂದು ಹೇಳಲಾಗಿದೆ.
 • ನಿದ್ರೆಯಲ್ಲಿ ಶರೀರದಲ್ಲಿರುವ ರಕ್ತಪರಿಚಲನೆ ಮುಂದುವರಿಯುತ್ತದೆ. ಹೃದಯದ ಬಡಿದ ಸ್ವಲ್ಪ ಸಾವಧಾನವಾಗುತ್ತದೆ. ಆಹಾರ ಜೀರ್ಣ ಕ್ರಿಯೆ ಸಾಮಾನ್ಯ ರೀತಿಯಲ್ಲಿ ನಡೆಯುತ್ತದೆ. ಪಿತ್ತ ಜನಕಾಂಗ ಮತ್ತು ಮೂತ್ರಪಿಂಡಗಳು ತಮ್ಮ ತಮ್ಮ ಕೆಲಸ ಮಾಡುತ್ತಿರುತ್ತದೆ. ಶಬ್ದ, ಬೆಳಕು, ಉಷ್ಣತೆ, ವಾಸನೆ ಮುಂತಾದವುಗಳು ನಿದ್ರೆಯಲ್ಲಿರುವ ಪ್ರತಿ ವ್ಯಕ್ತಿಯ ಮೇಲೆ ಒಂದೇ ಸಮನಾದ ಪರಿಣಾಮ ಬೀರುತ್ತದೆ. ಇವುಗಳು ಪ್ರಬಲವಾಗಿದ್ದರೆ ಗಾಢ ನಿದ್ರೆಯಲ್ಲಿಯೂ ತಿಳುವಳಿಕೆಯುಂಟಾಗುತ್ತದೆ. ದೇಹದ ಉಷ್ಣಾಂಶ ಸ್ವಲ್ಪ ಕಡಿಮೆ ಆಗುತ್ತದೆ. ದೇಹದಲ್ಲಿಯ ಮಲನಿಸ್ಸರಣ, ಧಾತು ಗತ ಕ್ರಿಯೆಗಳೆಲ್ಲ ಎಂದಿನಂತೆ ನಡೆದಿರುತ್ತದೆ.
 • ರಾತ್ರಿಯ ನಿದ್ರೆಯು ಆರೋಗ್ಯ ರಕ್ಷಣೆ ಹಾಗೂ ದೀರ್ಘಾಯು ಸಾಧನೆಗಾಗಿ ಸಹಕಾರಿಯಾಗಿದೆ.
 • ಹಗಲು ನಿದ್ರೆಯಿಂದ ಶರೀರದಲ್ಲಿ ಹೆಚ್ಚು ಸ್ಥಿಗ್ಧತೆ ಬರುವುದು. ರಾತ್ರಿಯಲ್ಲಿ ಜಾಗರಣೆ ಮಾಡುವುದರಿಂದ ರೂಕ್ಷತೆ ಉಂಟಾಗುವುದು. ಇವೆರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ.
 • ಹಗಲು ನಿದ್ರೆಯಿಂದ ಅನಾರೋಗ್ಯ, ದೋಷಗಳ ಪ್ರಕೋಪತೆ, ಕೆಮ್ಮು, ಉಬ್ಬಸ, ನೆಗಡಿ, ತಲೆಭಾರ, ಮೈನೋವು, ಅಶುಚಿ, ಜ್ವರ, ಅಗ್ನಿಮಾಂದ್ಯತೆಗಳುಂಟಾಗುವುವು.
 • ಬೇಸಿಗೆ ಕಾಲದಲ್ಲಿ ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬಹುದು. ಮಧ್ಯಾಹ್ನ ವೇಳೆ ಮಲಗುವ ರೂಢಿ ಇರುವವರು ಮಲಗಬಹುದು. ಬುದ್ಧಿಜೀವಿಗಳಿಗೆ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಅವಶ್ಯ.(ಕ.ಅ.೬, ಶ್ಲೋಕ ೨೪-೨೫)

೨೪. ವ್ಯಕ್ತಿತ್ವ ವಿಕಾಸ

 • ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಒಂದು ವಿಶಿಷ್ಟ ವ್ಯಕ್ತಿತ್ವವನ್ನು ಪಡೆದುಕೊಂಡಿರುವನು. ಆ ವ್ಯಕ್ತಿತ್ವವನ್ನು ‘ಸರಳ ಜೀವನ ಹಾಗೂ ಮೇಲ್ಮಟ್ಟದ ಚಿಂತನೆ’ಯಲ್ಲಿ ಬೆಳೆಸಬೇಕಾಗುತ್ತದೆ. ಇದಕ್ಕಾಗಿ ಎಳೆವಯಸ್ಸಿನ ಯುವಕ ಯುವತಿಯರು, ಆರೋಗ್ಯವಂತ ಶರೀರ, ತಮಗೆ ಒಪ್ಪುವ ವೇಷಭೂಷಣ, ಹುರುಪು ತುಂಬಿದ ನಡೆ ನುಡಿಗಳಲ್ಲಿ ಪ್ರಸನ್ನ ಮುಖ ಮಾನವನು ವ್ಯಕ್ತಿತ್ವವನ್ನು ಸೂಚಿಸುತ್ತದೆ. ಅಂಥವನು ತಾನು ಕೈಗೊಂಡ ವಿದ್ಯಾಭ್ಯಾಸ, ಉದ್ಯೋಗ ಅಥವಾ ವ್ಯವಹಾರಗಳಲ್ಲಿ ಅವಶ್ಯವಾಗಿ ಜಯಶೀಲನಾಗುತ್ತಾನೆ. ಆಗ ದೇಹ, ಮನಸ್ಸು ಬುದ್ಧಿ, ಮುಂತಾದವುಗಳೆಲ್ಲ ಚುರುಕಾಗಿದ್ದು ತಾನು ನೆಮ್ಮದಿಯಿಂದ ಇದ್ದು ಇತರರನ್ನು ಕೂಡ ಸಂತೋಷಪಡಿಸುತ್ತಾನೆ.
 • ಒಳ್ಳೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಅದಕ್ಕೆ ಬಹುಕಾಲ ಬೇಕಾಗುವುದು. ಆದರೆ ವ್ಯಕ್ತಿತ್ವವನ್ನು ಕೆಡಿಸಿಕೊಳ್ಳುವುದು ಬಹುಬೇಗ. ಜೀವನದಲ್ಲಿ ವಾಮ ಮಾರ್ಗಗಳ ಆಕರ್ಷಣೆಯೇ ಹೆಚ್ಚು. ಇದೀಗ ನಮ್ಮ ಯುವ ಜನಾಂಗ ವಿಶೇಷವಾಗಿ ಇದೇ ಮಾರ್ಗದಲ್ಲಿಯೇ ನಡೆಯುತ್ತಿದೆ. ಹೀಗಾಗಿ ಕೊಲೆ, ಸುಲಿಗೆ, ದರೋಡತನ, ಬಲಾತ್ಕಾರ, ಅಪಘಾತ, ಕೆಟ್ಟ ವ್ಯಸನಗಳು, ಬ್ರಷ್ಟಾಚಾರ, ಮೊದಲಾದ ದುರ್ಗುಣಗಳು ಬೆಳೆಯುತ್ತಿವೆ. ಇವು ಮುಖ್ಯವಾಗಿ ಸಾಮಜಿಕ ಆರೋಗ್ಯವೇ ಹಾಳುಗೆಡುವುತ್ತವೆ. ಆದ್ದರಿಂದ ನಮ್ಮ ಮಕ್ಕಳನ್ನು ಚಿಕ್ಕವರಿದ್ದಾಗಿನಿಂದಲೇ ಒಳ್ಳೆ ಪರಿಸರದಲ್ಲಿ ಬೆಳೆಸಬೇಕು. ಅವರಿಗೆ ಒಳ್ಳೆ ಸ್ನೇಹಿತರಿರಬೇಕು. ಶಿಕ್ಷಕರಿರಬೇಕು. ಅವರನ್ನು ಪ್ರೀತಿಸಬೇಕು. ಸನ್ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸಬೇಕು. ದಾತಿ ತಪ್ಪಿದಾಗ ತಿದ್ದಬೇಕು. ಎಲ್ಲಕ್ಕೂ ಮಿಗಿಲಾಗಿ ಮಗು/ಮಗಳು ತನ್ನದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ನಾವೆಲ್ಲ ಮಾರ್ಗದರ್ಶಕರಾಗಬೇಕು.
 • ಜೀವನದಲ್ಲಿ ಎಲ್ಲರೂ ತಮಗೆ ಎಟಕುವ ಗುರುಗಳನ್ನಿಟ್ಟುಕೊಳ್ಳಬೇಕು. ಅದನ್ನು ಕಷ್ಟಪಟ್ಟು ಸಾಧಿಸಬೇಕಾಗುತ್ತದೆ. ಇದಕ್ಕೆ ಸತತ ಶ್ರಮ, ಗಟ್ಟಿ ಮನಸ್ಸು ಹಾಗೂ ಛಲಗಳಿರಬೇಕಾಗುತ್ತದೆ.
 • ಒಳ್ಳೆ ವ್ಯಕ್ತಿತ್ವ ನಿರ್ಮಾಣಕ್ಕೆ ಒಳ್ಳೇ ಆರೋಗ್ಯ ಬೇಕು. ಚೆನ್ನಾಗಿ ರಕ್ಷಿಸಿಕೊಳ್ಳಬೇಕು. ದೇಹ ಮನಸ್ಸುಗಳಿಗೆ ಅತಿಯಾದ ಒತ್ತಡಗಳನ್ನು ಹಾಕಿ ಅದನ್ನು ದುರ್ಬಲ ಗೊಳಿಸಬಾರದು.
 • ನಿತ್ಯ ವ್ಯಾಯಾಮ, ಯೋಗಾಸನಗಳು, ಧ್ಯಾನ, ಸಾತ್ವಿಕ ಆಹಾರ, ಸನ್ಮಾರ್ಗಗಳಲ್ಲಿ ನಡೆದರೆ ಒಳ್ಳೆ ವ್ಯಕ್ತಿತ್ವ ರೂಪುಗೊಂಡು ಚಿರಯೌವನ ನಿಮ್ಮದಾಗುವುದು.

೨೫. ದುಶ್ಚಟಗಳಿಂದ ದೂರವಿರಿ

ಇತ್ತೀಚೆಗೆ ಯುವಕರು ವಿಶೇಷವಾಗಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇವುಗಳ ಆಕರ್ಷಣೆಯೇ ಇದು ಹೆಚ್ಚಾಗಿದೆ. ಇಂಥವರು ಇಂದು ತಮ್ಮ ಆರೋಗ್ಯವನ್ನು ಕೆಡಿಸಿಕೊಂಡು ರೋಗಗಳ ಕೂಪವಾಗುತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಅಶಾಂತಿ, ಆರ್ಥಿಕ ಮುಗ್ಗಟ್ಟುಗಳು ಹೆಚ್ಚುತ್ತಲಿವೆ. ಇಂತಹ ವ್ಯಸನಿಗಳು ಅಕಾಲದಲ್ಲಿ ಮರಣವನ್ನಪ್ಪಿದರೆ ಇಡಿ ಕುಟುಂಬ ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ ಸಾಮಾಜಿಕ ಆರೋಗ್ಯವೂ ಕೆಟ್ಟು ದೇಹ ದುರ್ಗತಿಗೆ ಈಡಾಗುತ್ತದೆ.

 • ಮೊದಮೊದಲು ವ್ಯಕ್ತಿ ಈ ದುಶ್ಚಟಗಳಿಗೆ ತನಗಾದ ದೈಹಿಕ ದಣಿವು, ಮಾನಸಿಕ ಒತ್ತಡ, ದುಷ್ಟ ಸಹವಾಸ, ಚೇಷ್ಟೇ,ಸಂತೋಷ ಬೇಸರ ಕಳೆಯಲು, ಜಾಹೀರಾತುಗಳಿಗೆ ಮನಸೋತು -ಹೀಗೆ ಏನಾದರೊಂದು ಕಾರಣ ಮುಂದೊಡ್ಡಿ ಪ್ರಾರಂಭಿಸುವನು. ಹೀಗೆ ಸುಲಭವಾಗಿ ಪ್ರಾರಂಭವಾದ ಈ ಚಟಗಳು ಬರುಬರುತ್ತ ವ್ಯಕ್ತಿಯನ್ನೇ ತನ್ನ ದಾಸನನ್ನಾಗಿ ಮಾಡಿಕೊಳ್ಳುವುವು. ಪ್ರಕೃತಿ ಕೆಟ್ಟು ರೋಗಗಳು ಅಂಟಿಕೊಳ್ಳುವುವು. ಚಹ, ಕಾಫಿ, ಮದ್ಯ, ಧೂಮ್ರಪಾನ, ತಂಬಾಕು ತಿನ್ನುವುದು(ಗುಟುಕಾ ಹಾಕಿಕೊಳ್ಳುವುದು), ಅಫೀಮು, ಗಾಂಜಾ, ಬ್ರೌನ್, ಶುಗರ್, ಎಲ್.ಎಸ.ಡಿ ಮುಂತಾದ ಮಾದಕ ಪದಾರ್ಥಗಳ ಸೇವನೆ ಇಂದು ಅವಿದ್ಯಾವಂತರಲ್ಲಿ ಅಷ್ಟೇ ಅಲ್ಲ ವಿದ್ಯಾವಂತರಲ್ಲೂ ದಿನೇ ದಿನೇ ಹೆಚ್ಚಾಗುತ್ತಿದೆ. ಇವಲ್ಲದೇ ಹಣಹಚ್ಚಿ ಇಸ್ಫೀಟ ಆಡುವುದು, ಜೂಜಾಟ, ವೇಶ್ಯೆ – ಕರೆವೆಣ್ಣುಗಳ ಹತ್ತಿರ ಹೋಗುವುದು, ಲೈಂಗಿಕ ಕಾಮವಾಸನೆಗಳನ್ನು ಉದ್ರೇಕಿಸುವ ನೃತ್ಯ, ಸಂಗೀತ, ನಾಟಕ, ಬ್ಲ್ಯೂ ಫಿಲ್ಮ, ಚಲನಚಿತ್ರಗಳನ್ನು ನೋಡುವ ದುರಾಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಇವು ಮಾನವನನ್ನು ನೈತಿಕವಾಗಿ ಅಧೋಗತಿಗಿಳಿಸಿವುವು. ಈತನು ಮೋಸ, ವಂಚನೆ, ಕಳ್ಳತನ, ಸುಳ್ಳು, ಕೊಲೆ, ಸುಲಿಗೆಗೆಳನ್ನೂ ಕೂಡ ಮಾಡಲು ಹೇಸುವುದಿಲ್ಲ. ಮೊದಲು ಕಳ್ಳಕಾರರ, ದರೋಡೆಕೋರರ ಒಂದೊಂದು ದೊಡ್ಡ ಗುಂಪುಗಳೇ ಇರುತ್ತಿದ್ದವು. ಆದರೀಗ ನಮ್ಮ ಯುವಕರೇ ಈ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಪರಾಧಿಗಳ ಸಂಖ್ಯೆ ವಿಪರೀತವಾಗಿ ಬೆಳೆಯುತ್ತಿದೆ.
 • ದುಶ್ಚಟಗಳಿಗೆ ಬಲಿಬೀಡಬೇಡಿ. ಒಳ್ಳೇ ವ್ಯಸನಗಳನ್ನು ಬೆಳೆಸಿಕೊಳ್ಳಿರಿ. ನಿಮ್ಮ ಮಕ್ಕಳನ್ನು ಒಳ್ಳೆ ಮಾರ್ಗದಲ್ಲಿ ನಡೆಸಿರಿ.

೨೬. ಬ್ರಹ್ಮ ಚರ್ಯ

ಯಾವ ಪುರುಷನು ತನ್ನ ಶರೀರವೊಂದು ಮಲದ ಬೀಜವೆಂತಲೂ, ಮಲದ ಉತ್ಪತ್ತಿಗೆ ಕಾರಣವೆಂದು, ಮಲವು ಹೊರಬರುವ ದ್ವಾರವೆಂದೂ, ದುರ್ಗಂಧ ಯುಕ್ತವಾಗಿದ್ದು ಹೇಸಿಗೆ ಬರಿಸುವಂತಹದು ಎಂದು ಭಾವಿಸಿ ಕಾಮ ಭೋಗದಿಂದ ವಿರಕ್ತವಾಗುವುದು ‘ಬ್ರಹ್ಮಚರ್ಯ’ ವೆನಿಸುತ್ತದೆ.

ಈತನು ಮನ, ವಚನ, ಕಾಯದಿಂದ ಪರಸ್ತ್ರೀಯರ ಸಂಪರ್ಕವನ್ನು ತ್ಯಾಗಮಾಡಿ ಆತ್ಮಧ್ಯಾನದಲ್ಲಿ ಮನವನ್ನು ರಮಿಸುವುದಕ್ಕೆ ಬ್ರಹ್ಮ ಚರ್ಯವ್ರತ ಪ್ರತಿಮೆ ಎನ್ನುತ್ತಾರೆ.

ಈ ಶರೀರವು ತಂದೆಯ ವೀರ್ಯ, ತಾಯಿಯ ರಜಸ್ಸಿನಿಂದ ಉತ್ಪನ್ನವಾಗಿದೆ. ಆದ್ದರಿಂದ ಇದೊಂದು ಮೂಲಬೀಜ. ಅಪವಿತ್ರ ಮಲೋತ್ಪತ್ತಿಯ ಜನ್ಮ ಸ್ಥಾನವಿದಾದ್ದರಿಂದ ಶರೀರಕ್ಕೆ ‘ಮಲಯೋನಿ’ ಎಂದಿದ್ದಾರೆ. ಶರೀರದ ಒಂಭತ್ತು ದ್ವಾರಗಳಿಂದ ದುರ್ಗಂಧಯುಕ್ತ ಮಲವು ಸದಾ ಹೊರಬರುತ್ತಿರುತ್ತದೆ. ಈ ರೀತಿ ವಿಚಾರಮಾಡಿ ಕಾಮ ವಿಚಾರದಿಂದ ದೂರವಿರುವುದೇ ಬ್ರಹ್ಮಚರ್ಯ.

 • ಬ್ರಹ್ಮಚರ್ಯವೆಂದರೆ ಸದಾ ಬ್ರಹ್ಮಸ್ವರೂಪದ ಯೋಚನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದರಂತೆ ಆಹಾರ ವಿಹಾರಗಳನ್ನಿಟ್ಟುಕೊಳ್ಳುವುದೇ ಆಗಿದೆ.
 • ಬ್ರಹ್ಮಚರ್ಯವು ಸ್ತ್ರೀ-ಪುರುಷರಿಬ್ಬರಿಗೂ ಅನ್ವಯಿಸುವುದು.
 • ಕೇವಲ ಸ್ತ್ರೀ-ಪುರುಷರು ಪರಸ್ಪರ ದೂರವಿರಬೇಕೆಂಬುದು ಮಾತ್ರ ಬ್ರಹ್ಮಚರ್ಯವಲ್ಲ.
 • ಆರೋಗ್ಯ ರಕ್ಷಣೆಗೆ ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯಗಳೇ ಮೂರು ಆಧಾರ ಸ್ತಂಭವಾಗಿದೆ ಎಂದು ಆಯುರ್ವೇದ ಹೇಳುತ್ತದೆ.
 • ಬ್ರಹ್ಮಚರ್ಯದಿಂದ ಮನೋಸ್ಥೈರ್ಯ, ಬುದ್ಧಿಶಕ್ತಿ, ಜ್ಞಾನಶಕ್ತಿ, ಸ್ಮರಣಶಕ್ತಿಗಳನ್ನು ಬೆಳೆಸಿಕೊಳ್ಳಬಹುದು. ಒಳ್ಳೆಯ ಬಣ್ಣ, ಗಾತ್ರ, ದೀರ್ಘಾಯುಷ್ಯ, ಕೀರ್ತಿ, ವೀರ್ಯವಂತಿಕೆಗಳು ಲಭಿಸುವುವು.(ಕಲ್ಯಾಣಕಾರಕ ಅ.೬, ಶ್ಲೋಕ.೨೧)
 • ಗೃಹಾಸ್ಥಾಶ್ರಮದಲ್ಲಿ ಮಾತ್ರ ಬ್ರಹ್ಮಚರ್ಯವನ್ನು ಸಡಿಲಿಸಿಕೊಳ್ಳುಲು ಅವಕಾಶವಿದೆ. ಅದುಕೂಡ ಸಂತಾನಾಪೇಕ್ಷೆ ಇದ್ದರೆ ಮಾತ್ರ. ಇಲ್ಲವಾದರೆ ಕೂಡದು.
 • ದಕ್ಷಸ್ಮೃತಿಯು ವಿವರಿಸಿದ ಅಷ್ಟಮೈಥುನಗಳನ್ನು ಬಿಡಬೇಕು. ಅಂದಾಗ ಮಾತ್ರ ನಿಜವಾದ ಬ್ರಹ್ಮಚರ್ಯ ಸಾಧ್ಯ.

ಅಷ್ಟ ಮೈಥುನಗಳು

೧. ನೃತ್ಯ, ನಾಟಕ, ಬಯಲಾಟ, ಚಲನಚಿತ್ರ, ಪುಸ್ತಕ ಮತ್ತು ಚಿತ್ರಗಳಲ್ಲಿಯೂ ಲಲನೆಯರ ಅಥವಾ ಕಣ್ಮುಚ್ಚಿ ನೋಡಿದ ಸ್ತ್ರೀಯರ ಸ್ಮರಣಧ್ಯಾನ ಮತ್ತು ಚಿಂತನೆ ಮಾಡುವುದು.

೨. ಸ್ತ್ರೀಯರ ರೂಪ, ಯೌವನ, ಅಭಿನಯ, ಶೃಂಗಾರಾದಿಗಳ ಕೌತುಕಮಯ ವರ್ಣನೆ ಮಾಡುವುದು / ಹಾಡುವುದು / ಕೇಳುವುದು.

೩. ಸ್ತ್ರೀಯರೊಡನೆ ಆಡುವುದು ಇಲ್ಲವೆ ಕುಚೇಷ್ಟೆ ಮಾಡುತ್ತ ಅತಿ-ಹತ್ತಿರದಿಂದಿರುವುದು.

೪. ಸ್ತ್ರೀಯರನ್ನು ಪ್ರತ್ಯಕ್ಷ/ಪರೋಕ್ಷವಾಗಿ ಸದಾ ನೋಡುತ್ತಿರುವುದು.

೫. ಏಕಾಂತದಲ್ಲಿ ಸ್ತ್ರೀಯರೊಡನೆ ರಹಸ್ಯವಾಗಿ ಮಾತನಾಡುವುದು.

೬. ವಿಷಯ ವಿಚಾರದಿಂದ ವಿಕಾರದಿಂದ/ಪ್ರೇರಿತನಾಗಿ ನೀಚ ವಾಸನೆಯನ್ನು ತೃಪ್ತಿಗೊಳಿಸಲು ದೃಢಸಂಕಲ್ಪ ಮಾಡುವುದು.

೭. ಪಾಪವಿಚರಕ್ಕನುಸರಿಸಿ ಗುಪ್ತ ಹಾಗೂ ಅಧಮ ಪ್ರಯತ್ನ ಮಾಡುವುದು.

೮. ಸಂಭೋಗ ಮಾಡಲು ಬಯಸುವುದು. ಅದರಂತೆಯೇ ಹಸ್ತ ಮೈಥುನಾದಿ ಸೃಷ್ಟಿಬಾಹ್ಯ ವರ್ತನೆಗಳಿಂದ ಸ್ವತಃ ವೀರ್ಯಪಾತ ಮಾಡಿಕೊಳ್ಳುವುದು.

 • ಸಂತತಿ ನಿಯಂತ್ರಣಕ್ಕೂ ಈ ಬ್ರಹ್ಮಚರ್ಯವೇ ಒಂದು ಅಮೂಲ್ಯವಾದ ನೈಸರ್ಗಿಕ ಸಾಧನ.
 • ನಮ್ಮ ಮಕ್ಕಳನ್ನು ಸರಳ ಹಾಗೂ ನೈಸರ್ಗಿಕ ಮಾರ್ಗದಲ್ಲಿ ನಡೆಸುವುದು. ಸಾತ್ವಿಕ ಆಹಾರ ಸೇವನೆ, ಒಳ್ಳೆ ದೈಹಿಕ-ಮಾನಸಿಕ ಆರೋಗ್ಯ ರಕ್ಷಣೆ, ಗಂಡ-ಹೆಂಡತಿ ಪ್ರತ್ಯೇಕ ಕೋಣೆಯಲ್ಲಿರುವುದು, ಆರೋಗ್ಯ ನಿಯಮಗಳನ್ನು ಸರಿಯಾಗಿ ಆಚರಿಸುವುದು, ಕೀಳುಮಟ್ಟದ ಸಾಹಿತ್ಯದಿಂದ ದೂರವಿರುವುದು. ಲೈಂಗಿಕ ಪ್ರಚೋದಕ ಚಿತ್ರ-ಚಲನಚಿತ್ರಗಳಿಂದ ದೂರವಿರುವುದು, ಕನಸಿನ ರಾಣಿಯರಿಂದ ದೈಹಿಕ ಪ್ರಕ್ಷುಬ್ಧತೆಯಾಗದಂತೆ ನೋಡಿಕೊಳ್ಳುವುದು, ದಾಂಪತ್ಯವೊಂದು ಸರಳ, ಸುಗಮ ಹಾಗೂ ನೈಸರ್ಗಿಕ ಕ್ರಮವೆಂದು ತಿಳಿಯುವುದು. ನಿತ್ಯ ದೇವರ ಪ್ರಾರ್ಥನೆ ಈ ಹತ್ತು ಅಂಶಗಳನ್ನು ಮಹಾತ್ಮಾ ಗಾಂಧಿಯವರು ಬ್ರಹ್ಮಚರ್ಯ ಆಚರಣೆಗಾಗಿ ಸೂಚಿಸಿದ್ದಾರೆ.

೨೭. ಸದಾಚಾರಗಳು

ಕೇವಲ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಸಂಪೂರ್ಣ ಆರೋಗ್ಯ ದೊರಕುವುದು ಅಸಾಧ್ಯ. ಅದಕ್ಕಾಗಿ ನಮ್ಮ ಮನೆ, ನಾವಿರುವ ಪರಿಸರ, ಸಮಾಜ, ಸಾರ್ವಜನಿಕ ವ್ಯವಸ್ಥೆಗಳು ಕೂಡಿ ಚೆನ್ನಾಗಿರ ಬೇಕಾಗುತ್ತದೆ. ವ್ಯಕ್ತಿಯ ಸದಾಚಾರಗಳ ಅನುಕರಣೆ ಮಾಡಿದರೆ ತನ್ನ ವೈಯಕ್ತಿಕ ಆರೋಗ್ಯವನ್ನಲ್ಲದೇ ಕೌಟುಂಬಿಕ, ಸಾರ್ವಜನಿಕ ಆರೋಗ್ಯ, ಸುಖ, ಶಾಂತಿಗಳಿಗೆ ಕಾರಣನಾಗುತ್ತಾನೆ. ಇಂತಹ ಅನೇಕ ಸದಾಚಾರಗಳನ್ನು ಆಯುರ್ವೇದಲ್ಲಿ ಆರೋಗ್ಯ ಸೂತ್ರಗಳನ್ನು ಹೇಳುವಾಗ ಹೇಳಿದ್ದಾರೆ. ಇಲ್ಲಿ ಕೆಲವನ್ನು ನೋಡೋಣ.

 • ಶಾರೀರಿಕ ಆಂತರಿಕ ಹಾಗೂ ಬಾಹ್ಯ ಶುದ್ಧಿ ಅವಶ್ಯ.
 • ಇಂದ್ರಿಯಗಳ ಉಪಯೋಗವು ಹೀನ, ಮಿಥ್ಯಾ, ಅತಿಯೋಗಗಳಿಗೆ ಗುರಿಯಾಗಬಾರದು
 • ನಾವು ಧರಿಸುವ ಬಟ್ಟೆಗಳು ಸ್ಥಳ, ಹವಾಮಾನ, ಲಿಂಗ, ಸಮಾಜ, ಜನಸಮುದಾಯದ ರೀತಿ-ನೀತಿಗಳಿಗೆ ಹೊಂದಿಕೊಂಡಿರಬೇಕು.
 • ಮಾತು ಮಿತವಾಗಿರಬೇಕು. ವಿನಯ ಪೂರ್ವಕವಾಗಿರಬೇಕು. ಸತ್ಯವನ್ನೇ ಮಾತನಾಡಬೇಕು.
 • ಉತ್ತಮರೊಡನೆ ಸ್ನೇಹಮಾಡಬೇಕು. ಇಲ್ಲಿ ಸ್ವಾರ್ಥ ಬೇಡ.
 • ಯಾರೊಡನೆಯೂ ದ್ವೇಷ ಬೇಡ – ವಿಶೇಷವಾಗಿ ಹಿರಿಯರು, ಅಧಿಕಾರಿಗಳು, ಧರ್ಮಗುರುಗಳೊಡನೆ.
 • ತನ್ನಂತೆ ಪರರನ್ನು ಬಗೆ.
 • ಅಪಕಾರವನ್ನು ಮಾಡಿದವನಿಗೂ ಉಪಕಾರ ಮಾಡು
 • ಪಶು, ಪಕ್ಷಿ, ಪ್ರಾಣಿಗಳನ್ನು ಆತ್ಮೀಯತೆಯಿಂದ ನೋಡಿಕೊಳ್ಳಬೇಕು.
 • ಅಪರಿಚಿತರ ವಿಷಯದಲ್ಲಿ ಮಿತಿಮೀರಿದ ವಿಶ್ವಾಸವನ್ನಾಗಲೀ ಅನವಶ್ಯ ಸಂಶಯವನ್ನಾಗಲಿ, ತಳೆಯಬಾರದು.
 • ಪರರ ಸೊತ್ತನ್ನು ಅಪಹರಿಸಬಾರದು. ಪರ ಹೆಂಗಸಿನ ಅಭಿಲಾಶೆ ಬೇಡ. ಪಾಡ ಮಾಡಬೇಡಿರಿ.
 • ಅತಿಯಾದ ಸಾಹಸ ಕೆಲಸ ಮಾಡಲು ಹೋಗಬೇಡಿ. ಎಲ್ಲರೂ ಬೇಡವೆನ್ನುವುದನ್ನು ಮಾಡಬೇಡಿ. ಅಗ್ನಿ ಜ್ವಾಲೆ, ಸೂರ್ಯ, ಅತಿ ಸೂಕ್ಷ್ಮ ವಸ್ತು, ಚಲಿಸುತ್ತಿರುವ ಇಲ್ಲವೇ ಸುತ್ತಿತ್ತಿರುವ ವಸ್ತುವನ್ನು ಏಕ ಚಿತ್ತದಿಂದ ನೋಡುತ್ತಿರಬಾರದು, ಅತೀ ಎನ್ನುವುದು ಒಳ್ಳೆಯದಲ್ಲ.
 • ಹಿಂಸೆ, ಕಳ್ಳತನ, ವ್ಯಭಿಚಾರ, ಚಾಡಿ ಹೇಳುವುದು, ನಿಷ್ಠುರತೆ, ಸುಳ್ಳು, ಅಸಂಬದ್ಧ ಮಾತು, ದ್ರೋಹ, ಚಿಂತನೆ, ಅಸೂಯೆ, ವಿಪರೀತ ಬುದ್ಧಿಗಳನ್ನು ತ್ಯಜಿಸಬೇಕು. ಇವು ಹತ್ತು ಪಾಪದ ಕರ್ಮಗಳೆಸಿದೆ.)ಕ.ಅ.೬)

೨೮. ದುರ್ಜನ ಸಂಗಬೇಡ

ಸರ್ಪಗಳು ಭಯಂಕರ ಸ್ವರೂಪದವುಗಳಾಗಿವೆ. ಅವುಗಳ ಗತಿ ಕುಟಿಲವಾಗಿರುತ್ತದೆ. ಅವುಗಳ ದೃಷ್ಟಿಯಿಂದ ಮಾನವನಿಗೆ ಅಪಾಯವಾಗುತ್ತದೆ. ಅವುಗಳಿಗೆ ಎರಡು ನಾಲಿಗೆಗಳಿರುತ್ತವೆ. ಇದು ಸದಾ ದುಷ್ಟ ಬುದ್ಧಿಯನ್ನೇ ಹೊಂದಿರುತ್ತವೆ. ಯಾವಾಗಲೂ ತಮ್ಮ ಬಿಲದಲ್ಲಿಯೇ ಹೊಕ್ಕೊಂಡು ಇನ್ನಿತರರಿಗೆ ಬಾಧೆಯನ್ನುಂಟು ಮಾಡಲು ಹವಣಿಸುತ್ತಿರುತ್ತವೆ. ಇವೇ ಗುಣಗಳನ್ನು ದುಷ್ಟ ಜನರು ಹೊಂದಿರುತ್ತಾರೆ. ಇವರ ಸ್ವಭಾವ ಕುಟಿಲವಾಗಿರುತ್ತದೆ. ಮಿಥ್ಯಾ ದೃಷ್ಟಿ ಇದ್ದು ಚಾಡಿಕೋರರಾಗಿರುತ್ತಾರೆ. ಅಜ್ಞಾನಿಗಳಾಗಿರುತ್ತಾರೆ. ಇನ್ನಿತರ ದೋಷಗಳನ್ನೇ ಸದಾ ಹುಡುಕುತ್ತಿರುತ್ತಾರೆ. ಹಾಗೂ ಇನ್ನಿತರರಿಗೆ ಕಾಯಾ, ವಾಚಾ, ಮನಸಾ ದುಂಖವನ್ನುಂಟು ಮಾಡುತ್ತಾರೆ. ಇಂಥ ನೀಚ ಜನರು ವಿಷ ಸರ್ಪದಂತಿರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಇನ್ನೂ ಕೆಲ ದುರ್ಜನರ ವಿವರಣೆ ಕೊಡುತ್ತಾ ಹೀಗೆ ಹೇಳುತ್ತಾರೆ – ಅವರ ವಿಚಾರ- ಗುಣಗಳು ಅವರ ಮನೆಯವರಿಗಷ್ಟೇ ಪ್ರೀತಿ. ಮನೆಬಿಟ್ಟು ಹೊರಗಡೆ ಇವರಿಗೆ ಎಳ್ಳಷ್ಟೂ ಬೆಲೆ ಇರುವುದಿಲ್ಲ. ಇಂಥವರು ಎಲ್ಲ ವಿದ್ವಾಂಸರುಗಳು, ಒಳ್ಳೇ ಜನರ ನಿಂದೆ ಮಾಡುತ್ತಿರುತ್ತಾರೆ. ಚಾಡಿ ಹೇಳುವುದು, ಮತ್ಸರ ಭಾವನೆ, ಕಠೋರ ಶಬ್ದಗಳಲ್ಲಿ ಮಾತನಾಡುವುದು. ಪಾಪಕಾರ್ಯಗಳಲ್ಲಿ ತೊಡಗಿರುವುದೇ ಅವರ ಜನ್ಮಗತ ಸ್ವಭಾವವಾಗಿರುತ್ತದೆ. ಆದರೆ ಇಂಥವರ ನಿಂದೆಯಿಂದ ವಿದ್ವಾಂಸರೇನೂ ದಡ್ಡರಾಗುವುದಿಲ್ಲ.

ಅವಿಚಾರಿಗಳಾದ, ಬಲಶಾಲಿಗಳಾದ ದುರ್ಜನರು ಜನತೆಗೆ ನಾನಾವಿಧಗಳಿಂದ ಕಷ್ಟಕೊಟ್ಟರೂ, ಪಿಶಾಚಿಗಳಂತೆ ಭ್ರಮಣ ಮಾಡಿದರೂ ಸಜ್ಜನರು ಅವರ ಬಗ್ಗೆ ಮತ್ಸರ ಭಾವನೆ ತೋರುವುದಿಲ್ಲ.

೨೯. ಚಾರಿತ್ರದ ಧ್ಯೇಯ

ಜೈನ ಚಾರಿತ್ರವು ಅತ್ಮೋನ್ನತಿಗೆ ಕ್ರಮಬದ್ಧವಾದ ಮೆಟ್ಟಿಲುಗಳನ್ನು ಕಟ್ಟಿ ಕೊಟ್ಟಿದೆ. ಈ ಕ್ರಮದಿಂದ ಎಂಥವರು ಕೂಡ ಸಾಧನೆ ಮಾಡಿ ಸಿದ್ಧ ಪದವಿ ಪಡೆಯಬಹುದು. ಈ ಸಾಧನೆಯ ಪದ್ಧತಿಯಲ್ಲಿ ಪ್ರಾಪಂಚಿಕ ಹಾಗೂ ಅಧ್ಯಾತ್ಮಿಕ ಜೀವನಗಳ ಸುಂದರ ಸಮನ್ವಯವಿದೆ. ಒಂದಕ್ಕಾಗಿ ಇನ್ನೊಂದನ್ನು ಕೆಡಿಸಿಕೊಳ್ಳುವ ಉಪದೇಶ ಈ ಮಾರ್ಗದಲ್ಲಿಲ್ಲ. ಒಳ್ಳೆಯ ಶ್ರಾವಕನಾಗಿದ್ದರೆನೇ ಮುಂದೆ ಉತ್ತಮ ಸಾಧುವೂ ಆಗಬಲ್ಲನು. ಶ್ರಾವಕ ಧರ್ಮವನ್ನೇ ಚೆನ್ನಾಗಿ ಆಚರಿಸಲಿಕ್ಕೆ ಬಾರದವನು ಸಾಧುವಾಗುವುದೂ ವ್ಯರ್ಥ. ಆಗಲೂ ಬರುವುದಿಲ್ಲ. ಇನ್ನು ಶ್ರಾವಕನಾಗಿಯೇ ಮರಣಹೊಂದುವ ಪ್ರಸಂಗ ಬಂದರೂ ಸಲ್ಲೇಖನ ವ್ರತವನ್ನು ಸ್ವೀಕರಿಸಲು ಒಪ್ಪಿಗೆ ಇದೆ. ಅದುದರಿಂದ ಅವನು ಆಧ್ಯಾತ್ಮಿಕ ಪ್ರಗತಿಯ ಫಲವನ್ನು ಪಡೆಯಬಹುದು. ಸಮಾಜ – ದೇಶಗಳ ಸುಸ್ಥಿತಿಯ ವಿಚಾರವನ್ನು, ಮಾಡಲಾಗಿದೆ. ಪ್ರತಿಯೊಬ್ಬ ಶ್ರಾವಕನು ತನ್ನ ಜೀವಾನಾವಶ್ಯಕ ವಸ್ತುಗಳನ್ನು ತಾನೇ ದುಡಿದು ಸಂಪಾದಿಸಬೇಕೆಂದು ವಿಧಿಸಿದೆ. ಅದರಂತೆ ಹೆಚ್ಚಿನ ಸಂಪಾದನೆಯ ವಿಷಯದಲ್ಲಿ ಒಂದು ಪರಿಮಿತ ದೃಷ್ಟಿಯನ್ನು ಬೋಧಿಸಿದೆ. ಪರಿಗ್ರಹ- ಪರಿಣಾಮ ವ್ರತದಿಂದ ಒತ್ತೊಟ್ಟಿಗೆ ಆಗುವ ಧನದ ಸಂಚಯಕ್ಕೆ ತಡೆಯೊಡ್ಡಲಾಗಿದೆ. ಇದರಿಂದ ಸಮಾಜ ದೇಶಗಳ ಆರ್ಥಿಕ ಪರಿಸ್ಥಿತಿಯ ಮೇಲೆ ತುಂಬ ಒಳ್ಳೆಯ ಪರಿಣಾಮವಾಗುವುದು. ಹೀಗೆ ಜೈನಾಚಾರ್ಯರು ವ್ಯಕ್ತಿ, ಸಮಾಜ, ರಾಷ್ಟ್ರಗಳ ಉನ್ನತಿಗೆ ಒಳ್ಳೆಯ ಚೌಕಟ್ಟನ್ನು ಹಾಕಿದ್ದಾರೆನ್ನಬಹುದು. ಕೊನಗೆ ವ್ಯಕ್ತಿಯು ಅತ್ಮೋನ್ನತಿಯ ಅತ್ಯಚ್ಛ ಸ್ಥಿತಿಗೆ ಮುಟ್ಟಲೂ ಸಹಕಾರಿಯಾಗಿದೆ. ಒಳ್ಳೆ ಚಾರಿತ್ಯ್ರದಿಂದ ಇವನ್ನೆಲ್ಲ ಸುಲಭವಾಗಿ ಸಾಧಿಸಬಹುದು.

೩೦. ಲೈಂಗಿಕ ಜೀವನ

ಉಗ್ರಿದಿತ್ಯಾಚಾರ್ಯರು ‘ರಾತ್ರಿಚರ್ಯಾಧಿಕಾರ’ (ನಿಶಾಚಾರ್ಯ) ಅಧ್ಯಾಯದಲ್ಲಿ ಗೃಹಸ್ಥ ಧರ್ಮಕ್ಕೆ ಅತ್ಯವಶ್ಯವಾದ ಲೈಂಗಿಕ ಜೀವನದ ಬಗ್ಗೆ ಕೆಲ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ಅವನ್ನು ಕ್ರೂಢೀಕರಿಸಿ ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.

‘ಸಂಭೋಗ’ವೆಂದರೆ ಸ್ತ್ರಿ – ಪುರುಷರು ಕಾಮ ಸಂಯೋಗವಾಗಿದೆ ಇದಕ್ಕಾಗಿಯೇ ವಿವಾಹವೆಂಬ ಬಂಧನವಿದೆ. ಮರ್ಯಾದಿತ ಸ್ಥಾನಮಾನವಿದೆ. ಈ ಬಂಧನ ಜೀವನಪರ್ಯಂತವೂ ಇದೆ. ಇದರಲ್ಲಿ ಲೈಂಗಿಕಾರ್ಷಣೆ ಇದ್ದರೂ ಧಾರ್ಮಿಕ, ನೈತಿಕ ಹಾಗೂ ಸಾಮಾಜಿಕ ಕಟ್ಟಳೆಗಳಿವೆ. ಕಷ್ಟ-ಸುಖಗಳಲ್ಲಿ ಪರಸ್ಪರ ಸಮಭಾಗಿತ್ವವಿದೆ. ಅವರದೇ ಆದ ಜವಾಬ್ದಾರಿಗಳಿವೆ.

ಸಂಭೋಗದ ಇಚ್ಛೆಯು ಆಯಾ ವಯಸ್ಸಿಗನುಸರಿಸಿ ಪ್ರತಿಯೊಬ್ಬ ಜೀವಿಗೂ ಇರುವುದು ಸ್ವಾಭಾವಿಕ. ಹೀಗೆಂದು ಅತಿ ಲೈಂಗಿಕ ತೃಷೆ ಹೊಂದಿರಬಾರದು. ಸಂತಾನಾಪೇಕ್ಷೆ ಇಲ್ಲದಿದ್ದರೆ ಸಂಭೋಗ ಮಾಡಬಾರದು. ಆರೋಗ್ಯವಂತರು ಶೀತಕಾಲದಲ್ಲಿ ನಿತ್ಯ ಒಂದು ಸಾರೆ ಸಂಭೋಗಮಾಡಬಹುದು. ಉಷ್ಣಕಾಲದಲ್ಲಿ ತನ್ನ ಶಕ್ತಿಗನುಸಾರ ವಾರಕ್ಕೊಂದು ಸಾರೆ ಸಂಭೋಗ ಮಾಡಬಹುದು.

ಅತಿ ಸಂಭೋಗದಿಂದ ಮೈಶೂಲೆ, ಕೆಮ್ಮು, ಜ್ವರ, ಉಬ್ಬುಸ, ಕೃಶತೆ, ಪಾಂಡುರೋಗ, ಧಾತು ಕ್ಷಯ, ಅಪ್ಷೇಪಕ(Fits) ಮೊದಲಾದ ವಿಕಾರಗಳುಂಟಾಗುತ್ತವೆ. ಆದ್ದರಿಂದ ವ್ಯಕ್ತಿಯು ಸಂಯಮದಿಂದಿದ್ದು ಅತಿಯಾಗಿ ಸ್ತ್ರೀ ಸಂಭೋಗಮಾಡದಂತೆ ತನ್ನನ್ನು ತಾನು ಕಾಪಾಡಿಕೊಳ್ಳಬೇಕು.

ಸಂಭೋಗ ಕ್ರಿಯೆಗೆ ಒಂದು ನಿರ್ದಿಷ್ಟವಾದ ವೇಳೆ, ಕಾಲಗಳಿವೆ, ಆಸನಗಳಿವೆ. ಮಾನ ಮರ್ಯಾದೆಗಳಿವೆ. ರೀತಿ-ನೀತಿಗಳಿವೆ. ಸಾಮಾಜಿಕ ಕಟ್ಟಳೆಗಳಿವೆ. ಈ ವಿಷಯದಲ್ಲಿ ಪಶುವಿನಂತೆ ವರ್ತಿಸಬಾರದು. ವೇಶ್ಯಾಗಮನ ಕೂಡದು, ದೇವಾಳಯ, ಸ್ಮಶಾನ, ಗುರುಸ್ಥಾನ, ಜನನಿಬಿಡ ಸ್ಥಾನಗಳು, ಚಾವಡಿ ಮೊದಲಾದ ಕಡೆ ಸಂಭೋಗ ಕ್ರಿಯೆ ಮಾಡಬಾರದು. ಅದರಂತೆ ಸ್ತ್ರೀ ರಜಸ್ವಲೆಯಾದಾಗ, ಮುಂದುವರಿದ ಗರ್ಭಿಣ್ಯಾವಸ್ಥೆಯಲ್ಲಿ ಅತಿ ಬಾಲ್ಯಾವಸ್ಥೆ, ವೃದ್ಧಾಪ್ಯಗಳಲ್ಲಿ ಕೂಡದು. ಒತ್ತಾಯದ ಲೈಂಗಿಕ ಕ್ರಿಯೆ ಬೇಡ. ಲೈಂಗಿಕ ರೋಗಗಳಿದ್ದಾಗ ಪರಸ್ಪರರು ದೂರವಿದ್ದು ಚಿಕಿತ್ಸೆ ತೆಗೆದುಕೊಳ್ಳಬೇಕು. ಸಂಪೂರ್ಣ ಗುಣವಾಗುವವರೆಗೆ ಲೈಂಗಿಕ ಸಂಪರ್ಕ ಮಾಡಬಾರದದು.

ಹಸಿದವರು, ನೀರಡಿಕೆಯಿಂದ ಬಳಲುತ್ತಿರುವವರು, ಮಲಮೂತ್ರಾದಿ ವೇಗವಿದ್ದವರು, ದೂರದಿಂದ ನಡೆದುಬಂದು ದಣಿದವರು, ಇಲ್ಲವೇ ಶ್ರಮವಹಿಸಿ ಕೆಲಸ ಮಾಡಿದವರು, ಕ್ಷಯರೋಗ, ಪೀಡಿತರು, ಶುಕ್ರಕ್ಷೀಣತೆ, ಶಕ್ತಿಹೀನತೆ, ಜ್ವರಗಳಿದ್ದವರು, ಮೈಥುನಮಾಡಬಾರದೆಂದು ಹೇಳಿದ್ದಾರೆ. ಬೆಳಗಿನ ಕಾಲ, ಸಾಯಂಕಾಲ, ಅಷ್ಟಮಿ, ಚತುರ್ದಶಿ ಹಾಗೂ ಇತರ ಪರ್ವ ದಿನಗಳು ಮೈಥುನ ಕ್ರಿಯೆಗೆ ಒಳ್ಳೆಯದಲ್ಲ.

ನಿರೋಗಿಗಳಾಗಿದ್ದು, ಯುವಕರಾಗಿದ್ದರೂ ಸಹ ಸಂಭೋಗ ಮಾಡುತ್ತಿರುವವರು ವಿಶೇಷವಾಗಿ ಕಾಮವರ್ಧಕ, ಶುಕ್ರ ಜನಕ ಪದಾರ್ಥಗಳನ್ನು ಸೇವಿಸಬೇಕೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಮೈಥುನದ ನಂತರ ಸ್ವಾದಿಷ್ಟ, ಜಿಡ್ಡಾಗಿರುವ, ಸ್ವಚ್ಛ, ಸ್ವೇಚ್ಛಾ ಪ್ರವೃತ್ತಿಗೆ ಅನುಕೂಲವಾಗಿರುವ, ಮನೋಜ್ಞವಾದ ಹಾಗೂ ಸಕ್ಕರೆ ಹಾಲು, ಬಾದಾಮಿ ಹಾಲು, ಕೇಶರಿ ಹಾಲುಗಳನ್ನು ಸೇವಿಸಬೇಕು. ತಣ್ಣನ್ನೆ ಹವೆಯನ್ನು ನಿಯಂತ್ರಿಸಬೇಕು. ಅಲ್ಲದೇ ಶೀತಯುಕ್ತವಾದ ಪಾನೀಯಗಳನ್ನು ಸೇವಿಸಿ ಸುಖಕರವಾದ ನಿದ್ರೆ ಮಾಡಬೇಕು.

೩೧. ವಾಸದ ಮನೆ ನಿರ್ಮಾಣ

ಸ್ವಸ್ಥರು, ರೋಗಿಗಳು ವಾಸಿಸಲು ಯೋಗ್ರವಾರಿರುವಂತಹ ಮನೆಗಳನ್ನು ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಕಲ್ಯಾಣಕಾರದಲ್ಲಿ ಹೇಳಿದ್ದಾರೆ. ಮನೆಯು ಪ್ರಶಸ್ತ ಪ್ರದೇಶದಲ್ಲಿ, ಪ್ರಶಸ್ತ ದಿಕ್ಕಿನಲ್ಲಿರಬೇಕು. ಅದರಲ್ಲಿಯೂ ಶ್ರೇಷ್ಠ ಭಾಗದಲ್ಲಿರಬೇಕು. ಪ್ರಾಚೀನ ಮಂತ್ರ – ತಂತ್ರ ವಿಷಯಗಳನ್ನು ತಿಳಿದಿರತಕ್ಕ ವಿದ್ವಾಂಸರಿಂದ ಪೂಜೆ ಪುನಸ್ಕಾರ ಮಾಡಿಸಿ ದುಷ್ಟಶಕ್ತಿಗಳಿಂದ ರಕ್ಷಿತವಾಗಿರಬೇಕು.

ಮನೆಯಲ್ಲಿ ಸದಾ ಕಸವನ್ನು ತೆಗೆದು ಸ್ವಚ್ಛ ಮಾಡುತ್ತಿರಬೇಕು. ದೀಪ ಬೆಳಗುತ್ತಿರಬೇಕು. ಸುಗಂಧಿತ ಧೂಪಗಳಿರಬೇಕು. ಹೂವು ಹಾರಗಳಿಂದ ಸುಶೋಭಿತ – ಮನೋಹರವಾಗಿರಬೇಕು. ಹಾಗೂ ರಕ್ಷಕರಿಂದ ರಕ್ಷಿತವಾಗಿರಬೇಕು. ಯೋಗ್ಯ ಸ್ತ್ರೀ-ಪುರುಷರು ಪ್ರವೇಶ ಮಾಡಿ ಪರೀಕ್ಷಿವಾಗಿರಬೇಕು.

ಇಂಥ ಮನೆಯಲ್ಲಿ ತುಂಬ ಹವೆ(ಗಾಳಿ) ಬೀಸುತ್ತಿರಬಾರದು. ಮನೆ ಛಿದ್ರ-ಛಿದ್ರವಾಗಿರಬಾರದು. ಅವಶ್ಯಕ ಉಪಕರಣಗಳು, ಸುಂದರ ಚಿತ್ರಗಳು, ಹೂವುಗಳೊಡನೆ ಶೋಭಿತವಾಗಿರಬೇಕು. ಇಂಥ ಮನೆಯು ವಾಸಿಸಲು ಪ್ರಶಕ್ತ. (ಕ.ಅ.೭, ಶ್ಲೋಕ-೧೮-೨೨)

೨೩. ಆರೋಗ್ಯ ಜೀವನಕ್ಕೆ ರಸಾಯನಗಳ ಸೇವನೆ

ರಸದಿಸಪ್ತಧಾತುಗಳ ವೃದ್ಧಿಗೆ ನಿತ್ಯ ರಸಾಯನಗಳನ್ನು ಸೇವಿಸಿ ನಾವು ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು. ಯಾವ ಪದಾರ್ಥಗಳು ಶೀತಗುಣ, ಸ್ನಿಗ್ಧಗುಣ, ಮಧುರ ಗುಣಗಳನ್ನು ಹೊಂದಿರುವವೋ ಅವೆಲ್ಲ ವೀರ್ಯವರ್ಧಕಗಳೆನಿಸಿವೆ. ಆತ್ಮರಕ್ಷಣೆಗಾಗಿ ನಿರೋಗ ಶರೀರದ ಅವಶ್ಯಕತೆ ಇದೆ. ಆದ್ದರಿಂದ ಎಲ್ಲ ರೋಗಗಳನ್ನು ದೂರಮಾಡಲು ಅತ್ಯಂತ ವೀರ್ಯಯುಕ್ತ ರಸಾಯನ ಯೋಗಗಳನ್ನು ನಿತ್ಯ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. (ಕ.ಅ.೬, ಶ್ಲೋಕ.೪೧)

ತ್ರಿಫಲ ರಸಾಯನ: ಬೆಳಗಿನ ಭೋಜನ ಕಾಲದಲ್ಲಿ ಮೂರು ನೆಲ್ಲಿಕಾಯಿಗಳನ್ನು ಸಾಯಂಕಾಲ ಊಟದ ಹೊತ್ತಿಗೆ ಒಂದು ಅಳಲೆಕಾಯಿ ಎರಡು ತಾರೆಕಾಯಿಯ ಚೂರ್ಣವನ್ನು ತುಪ್ಪ ಸಕ್ಕರೆಗಳೊಡನೆ ಸೇವಿಸಿದರೆ ಶರೀರದ ಸಕಲ ರೋಗಗಳು ನಾಶವಾಗಿ ಶರೀರ ಸುಂದರವಾಗುವುದು, ಕಣ್ಣುಗಳಲ್ಲಿ ತೇಜಸ್ಸು ಕಂಡುಬರುವುದು. ಈ ವ್ಯಕ್ತಿ ಧರ್ಮ, ಅರ್ಥ, ಕಾಮಗಳನ್ನು ಪಾಲಿಸುತ್ತ ಚಿರಾಯುವಾಗುವನು. (ಕ.ಅ.೬, ಶ್ಲೋಕ-೪೨)

ವಾಯುವಿಡಂಗ ಇಲ್ಲವೆ ಜೇಷ್ಠಮಧು ರಸಾಯನ: ಇವುಗಳಲ್ಲಿ ಒಂದರ ಸೂಕ್ಷ್ಮ ಚೂರ್ಣವನ್ನು ಸಕ್ಕರೆ ಸಮಭಾಗ ಸೇರಿಸಿ ನಿತ್ಯ ಬೆಳಿಗ್ಗೆ ಸೇವಿಸುತ್ತ ಹೋದರೆ ಮುಪ್ಪನ್ನು ಮೂಂದುಡಬಹುದು. (ಕ.ಅ.೬, ಶ್ಲೋಕ.೪೩)

ಅನುಪಾನ: ನಾವು ರಸಾಯನಕ್ಕೆಂದು ಸೇವಿಸುವ ದ್ರವ್ಯದ ಕಷಾಯವನ್ನೇ ಅನುಪಾನವಾಗಿ ತಗೆಗೆದುಕೊಳ್ಳಬೇಕು. ಇದರಿಂದ ರಸಾಯನ ದ್ರವ್ಯದ ಪರಿಣಾಮ ಹೆಚ್ಚಾಗುವುದೆಂದು ಹೇಳಿದ್ದಾರೆ. (ಶ್ಲೋಕ-೪೪)

ಪಥ್ಯಾಹಾರ: ರಸಾಯನಗಳನ್ನು ಉಪಯುಕ್ತ ಅನುಪಾನಗಳೊಡನೆ ಕುಡಿದು ಅವು ಜೀರ್ಣವಾದ ಬಳಿಕ ಹಾಲು, ತುಪ್ಪ, ಹೆಸರು ಬೇಳೆಗಳಿಂದೊಡಗೂಡಿನ ಆಹಾರ ಸೇವಿಸಬೇಕು. ಉಪ್ಪು ಇತ್ಯಾದಿ ತೀಷ್ಣ ಪದಾರ್ಥಗಳನ್ನು ಇವುಗಳೊಡನೆ ತಿನ್ನಬಾರದು. ಇದರಿಂದ ದೊಡ್ಡ – ದೊಡ್ಡ ರೋಗಗಳು ಸಹಿತ ದೂರವಾಗುವುವು. ಮುಪ್ಪು, ಮುಪ್ಪಿನಲ್ಲಿ ಕಂಡುಬರು ಚರ್ಮ ಸುಕ್ಕುಗಟ್ಟುವಿಕೆಗಳು ದೂರವಾಗಿ ಅನೇಕ ವರ್ಷಗಳವರೆಗೆ ಬದುಕಬಹುದು. (ಶ್ಲೋಕ.೪೫)

ಶಾಸ್ತ್ರದಲ್ಲಿ ಇಂತಹ ಅನೇಕ ಪ್ರಕಾರದ ರಸಾಯನಗಳನ್ನು ವಿಡಂಗಸಾರ ರಸಾಯನ, ಬಲಾ ರಸಾಯನ, ನಾಗಬಲಾದಿ ರಸಾಯನ, ಬಾಕುಚಿ ರಸಾಯನ, ಬ್ರಾಹ್ಮಾದಿ ರಸಯನ, ವಜ್ರಾದಿ ರಸಾಯನ, ಚಂದ್ರಮೃತ ರಸಾಯನ ಮುಂತಾದವುಗಳನ್ನು ಹೇಳಿದ್ದಾರೆ.

ಈ ರಸಾಯನಗಳನ್ನು ಸೇವಿಸುವವರು ಮದ್ಯ, ಮಾಂಸ, ಉಪ್ಪು, ಕಷಾಯ, ಕ್ಷಾರ, ಪದಾರ್ಥಗಳು, ಒಣಗಿದ ಪದಾರ್ಥಗಳನ್ನು ಸೇವಿಸಬಾರದು. ಕ್ರೋಧ, ಪರಿಶ್ರಮ, ಮೈಥುನ ಬಿಸಿಲು, ಗಾಳಿ, ವಿರುದ್ಧಾಹಾರ, ಅಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ತಿನ್ನಬಾರದು. ಕಷ್ಟ(ದುಃಖ)ದಿಂದ ರಹಿತವಾಗಿರಬೇಕು. ಸತ್ಯವ್ರತವನ್ನು ಪಾಲಿಸಬೇಕು. ಸರ್ವಪ್ರಾಣಿಗಳಲ್ಲೂ ದಯೆಯನ್ನಿಡಬೇಕು. ಸದಾಕಾಲ ಸರ್ವಜ್ಞರಾದಂತಹ ತೀರ್ಥಂಕರರೂ, ಮುನಿಗಣಗಳ ಹಾಗೂ ಧರ್ಮದ ಉಪಾಸನೆ ಕೈಕೊಳ್ಳಬೇಕು. ಹೀಗೆ ಆಚರಣೆ ಮಾಡುತ್ತ ರಸಾಯನಗಳನ್ನು ಸೇವಿಸುತ್ತಿದ್ದರೆ ಅವು ವಿಶೇಷ ಸತ್ಫಲಗಳನ್ನು ಕೊಡುವುವು.

೩೩. ದೀರ್ಘಾಯುಷ್ಯ

ಆರೋಗ್ಯದ ಗುರಿಯು ಮಾನವನನ್ನು ಕೇವಲ ಆರೋಗ್ಯವಂತನನ್ನಾಗಿ ಮಾಡದೇ ಅವನು ದೀರ್ಘಾಯುಷ್ಯದ ತುಂಬು ಸುಖ ಜೀವನವನ್ನು ಉಪಭೋಗಿಸುವಂತೆ ಮಾಡುವುದಾಗಿದೆ. ಮುಪ್ಪನ್ನು ಮುಂದೂಡುವುದು ಆಗಿದೆ. ಅದು ಆಯಾ ವ್ಯಕ್ತಿಯು ಆಚರಿಸುವ ಆಹಾರ – ವಿಹಾರಗಳಲ್ಲಿ ಅಡಗಿದೆ.

ಧರ್ಮ, ಅರ್ಥ, ಸುಖಗಳಿಗೆ ಸಾಧಕವಾಗಿರುವ ದೀರ್ಘಾಯುಷ್ಯತ್ವವನ್ನು ಬಯಸುವ ಮನುಷ್ಯನು ಶಾಸ್ತ್ರದಲ್ಲಿ ಹೇಳಿರುವ ವಿಷಯಗಳ ಬಗೆಗೆ ಶ್ರದ್ಧೆಯನ್ನಿಟ್ಟುಕೊಂಡು ಆ ರೀತಿ ಶರೀರ ಪೋಷಣೆ ಮಾಡಿಕೊಳ್ಳಬೇಕು.

ಸ್ವಸ್ಥ ವೃತ್ತ(ಆರೋಗ್ಯ ಶಾಸ್ತ್ರ)ದಲ್ಲಿ ಹೇಳಿರುವಂತೆ ಅನುಸರಿಸುವ ವ್ಯಕ್ತಿಯು ಮರಣಪರ್ಯಂತರವಾಗಿ ಜ್ಞಾನೇಂದ್ರಿಯ – ಕಮೇಂದ್ರಿಯಗಳಲ್ಲಿ ಅಕುಂಠಿತವಾದ ಶಕ್ತಿ ಹೊಂದಿ, ವ್ಯಾಧಿ ರಹಿತನಾಗಿ ನೂರು ವರ್ಷಗಳ ಪೂರ್ಣಾಯುಷ್ಯ ಪಡೆಯುವನು.

ಬ್ರಹ್ಮಚರ್ಯಪಾಲನದಿಂದ ಮಾನವನು ದೀರ್ಘಾಯುಷಿಯೂ, ಸದೃಢ ಶರೀರದವನೂ, ಬಲಶಾಲಿಯೂ, ಆತ್ಮ ತೇಜಸ್ಸುಳ್ಳವನೂ ಆಗುತ್ತಾನೆ.

ಮಾನವ ಇದ್ದುದರಲ್ಲಿ ಸಂತೃಪ್ತನಾಗಿದ್ದುಕೊಂಡಿರಬೇಕು. ಇಲ್ಲದ್ದಕ್ಕೆ ಕೊರಗಬಾರದು. ಸಾಧ್ಯವಾಗದ ಆಕಾಂಕ್ಷೆಗಳನ್ನಿಟ್ಟುಕೊಂಡಿರಬಾರದು. ಇತರರ ವಿಷಯದಲ್ಲಿ ದ್ವೇಷಾಸೂಯೆಗಳನ್ನು ತೊರೆಯಬೇಕು. ಸ್ನೇಹ, ಸಂತಸಮಯ, ಸಂತೃಪ್ತಜೀವನ ನಡೆಸಿಕೊಂಡಿದ್ದರೆ ಅದೇ ಅಯುರಾರೋಗ್ಯ ಅಭಿವೃದ್ಧಿಗೆ ಸಹಾಯಕವಾಗಿ ದೀರ್ಘಾಯುಷ್ಯತ್ವಕ್ಕೆ ದಾಡಿ ಮಾಡಿಕೊಡುವುದು.