ಆರೋಗ್ಯವಂತನಾರು? ಶರೀರದಲ್ಲಿ ಯಾವುದೇ ತರಹದ ರೋಗಗಳಿರದಿರುವುದೇ ಆರೋಗ್ಯ, ಅವನೇ ಆರೋಗ್ಯವಂತ.

ಮಾನವನಿಗೆ ಪರಮಾರ್ಥಿಕ, ವ್ಯವಹಾರಿಕ ಎಂದು ಎರಡು ವಿಧದ ಆರೋಗ್ಯ ಭೇದಗಳಿವೆ.[1]

ಇವುಗಳಲ್ಲಿ ಪಾರಿಮಾರ್ಥಿಕ ಅರೋಗ್ಯವೇ ಮುಖ್ಯವೆನಿಸಿದ್ದು ವ್ಯವಹಾರಿಕ ಆರೋಗ್ಯ ದೇಹಕ್ಕೆ ಸ್ವಚ್ಛತೆಗೆ ಸಂಬಂಧಿಸಿದ್ದು ಗೌಣವೆನಿಸಿದೆ.

ಆತ್ಮನ ಸಂಪೂರ್ಣ ಕರ್ಮಗಳಿಂದ ಮುಕ್ತನಾದ, ಅತ್ಯದ್ಭುತ, ಅತ್ಯಂತಿಕ ಹಾಗೂ ಅದ್ವಿತೀಯ, ವಿದ್ವಾಂಸರಿಂದ ಅಪೇಕ್ಷಿತ, ಅತೀಂದ್ರಿಯಗಳಿಂದ ಅನುಭವಿಸಬಹುದಾದ ಮೋಕ್ಷ ಸುಖದ ಅವಸ್ಥೆಗೆ ‘ಪಾರಿಮಾರ್ಥಿಕ ಸ್ವಾಸ್ಥ್ಯ’ ಎನ್ನುವರು.[2]

ಶರೀರದಲ್ಲಿರುವ ೧೩ ವಿಧ ಅಗ್ನಿಗಳು ಸಮನಾಗಿರುವುದು, ಸಪ್ತಧಾತುಗಳು ಸಮನಾಗಿರುವುದು, ತ್ರಿದೋಷಗಳು(ವಾತ-ಪಿತ್ತ-ಕಫಗಳು) ಸಮಸ್ಥಿತಿಯಲ್ಲಿರುವುದು, ಮಲಮೂತ್ರಗಳ ವಿಸರ್ಜನೆ ಸರಿಯಾಗಿ ಆಗುತ್ತಿರುವುದು, ಆತ್ಮ-ಇಂದ್ರಿಯ-ಮನಸ್ಸುಗಳು ಪ್ರಸನ್ನವಾಗಿರುವಿಕೆಯ ಲಕ್ಷಣಗಳು ‘ವ್ಯವಹಾರಿಕ ಸ್ಥಾಸ್ಥ್ಯ’ವೆನಿಸುತ್ತದೆ.[3]

ಆಹಾರ‍ದಲ್ಲಿ ರುಚಿ, ಊಟ ಮಾಡಿದ್ದು ಸರಿಯಾಗಿ ಪಚನವಾಗುವುದು, ಶಕ್ತಿ ಬರುವುದು ಆರೋಗ್ಯದ ಲಕ್ಷಣಗಳೆನಿಸುತ್ತದೆ. ಹಿತ-ಮಿತವಾದ ಆಹಾರ ಸೇವನೆ ಮಾಡುವುದರಿಂದ ಆಹಾರದಲ್ಲಿ ರುಚಿ ಕಂಡುಬರುವುದು. ಧರ್ಮ-ಅರ್ಥ-ಕಾಮ-ಮೋಕ್ಷಾದಿಗಳು ಬಲದ ಮುಖಗಳಾಗಿವೆ. ಶರೀರದಲ್ಲಿ ಆರೋಗ್ಯ – ಬಲಾದಿಗಳಿದ್ದರೆ ಇವನ್ನೆಲ್ಲ ಸಾಧಿಸಬಹುದು.

ಶರೀರವು ಬಲ (ಮನೋಬಲ/ವಚನಬಲ/ವಚನಬಲ-ಕಾಯಬಲ)ಗಳಿಂದ ಸುಶೋಭಿತವಾದ ಮನುಷ್ಯನನ್ನು ತಿಳಿದವರು ಆರೋಗ್ಯವಂತನೆಂದು ಕರೆಯುತ್ತಾರೆ.

ಯಾವುದೇ ತರಹದ ರೋಗ-ರುಜಿನಗಳಿಲ್ಲದ ಶರೀರವನ್ನು ಯಾವನು ಧಾರಣ ಮಾಡುವನೋ ಅವನೇ ಸ್ವಸ್ಥನೆನಿಸಿಕೊಳ್ಳುತ್ತಾನೆ.[4]

ಎಲ್ಲ ಕೆಲಸಗಳಿಗೂ ಶರೀರ ಬಲವೇ ಮುಖ್ಯವೆನಿಸುತ್ತದೆ. ರೋಗಿಯಲ್ಲಿ ಬಲವಿರದಿದ್ದರೆ, ಚಿಕಿತ್ಸೆ ಕೂಡ ವ್ಯರ್ಥವೆನಿಸುತ್ತದೆ. ಆದ್ದರಿಂದ ವೈದ್ಯನು ಚಿಕಿತ್ಸಿಸುವಾಗಲೂ ರೋಗಿ ಬಲಾಢ್ಯ ಎಂದರೆ ಶಾರೀರಿಕ ಮಾನಸಿಕ ಬಲಗಳನ್ನು ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಚಿಕಿತ್ಸೆ ಸಫಲವಾಗುವುದಿಲ್ಲ. ಬಲವಂತರಾದವರು ತಮ್ಮ ಸಂಪತ್ತನ್ನು ಕಳೆದುಕೊಂಡರೂ ಧೃತಿಗೆಡುವುದಿಲ್ಲ. ಅವನ ಮುಖದಲ್ಲಿ ಕಾಂತಿ ಶಾಂತಿಗಳು ಹಾಗೇ ಇರುವುವು. ಮುಖ ಪ್ರಫುಲ್ಲಿತವಾಗಿರುವುದು. ಅವನ ಮನಸ್ಸು ಸ್ವಲ್ಪವಾದರೂ ವಿಚಿಲಿತಗೊಂಡಿರುವುದಿಲ್ಲ.[5]

ಆರೋಗ್ಯದ ಬಗ್ಗೆ ಕಾಳಜಿ ಮಾಡಿಕೊಳ್ಳುವ ವ್ಯಕ್ತಿಯು ವ್ಯಕ್ತಿಯು ಹಿಂಸೆ, ಅಪಥ್ಯ, ಕಳ್ಳತನ, ಪರಿಗ್ರಹ, ದುರ್ನಡತೆ ಮುಂತಾದ ಪಾಪಗಳನ್ನು ಬಿಟ್ಟುಕೊಟ್ಟು ಸದಾಚಾರಗಳಲ್ಲಿ ತೊಡಗಿಕೊಂಡಿರಬೇಕು. ಸಜ್ಜನರು, ಸಂಯಮಿಗಳ ಸೇವೆ ಮಾಡಬೇಕು. ಹಾಗೂ ಒಳ್ಳೆ ರಸಾಯನಗಳ ಸೇವನೆ ಮಾಡುತ್ತಿರಬೇಕೆಂದು ಉತ್ರದಿತ್ಯಾಚಾರ್ಯರು ಹೇಳಿದ್ದಾರೆ. (.. ಶ್ಲೋಕ೨೯)

ಮಾನವನು ಬುದ್ಧಿವಂತನೂ, ದೃಢಮನಸ್ಕನಾದರೂ ಅವನ ಆರೋಗ್ಯ ಸರಿ ಇರದಿದ್ದರೆ ಧರ್ಮ, ಧನ ಸಂಪಾದನೆ ಹಾಗೂ ಮೋಕ್ಷಸಾಧನೆಗಳನ್ನು ಮಾಡಲಾರ, ಮಾನವನ ಸಫಲತೆಯ ಧರ್ಮಾರ್ಥ ಕಾಮಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಪಡೆಯುವುದರಲ್ಲಿಯೇ ಇದೆ.(ಕ.ಅಂ.೨೦ ಶ್ಲೋಕ-೯೦)

. ಬೆಳಿಗ್ಗೆ ಬೇಗ ಏಳುವುದು

 • ಆರೋಗ್ಯವಂತರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದರ ಸಲುವಾಗಿ ಅತಿ ನಸುಕಿನಲ್ಲಿ ಎಂದರೆ ಸೂರ್ಯೋದಯಕ್ಕಿಂತ ಸುಮಾರು ಒಂದು ಗಂಟೆ ಮೊದಲು ಏಳಬೇಕು. ಈ ಕಾಲವು ಅತ್ಯಂತ ಪವಿತ್ರವಾದ್ದರಿಂದ ಇದಕ್ಕೆ ‘ಬ್ರಾಹ್ಮೀ ಮುಹೂರ್ತ’ ಎನ್ನುವರು. ಈ ಅಮೃತ ವೇಳೆಯಲ್ಲಿ ಎದ್ದೇಳುವುದು ಸರ್ವಾರ್ಥಸಾಧಕವೆಂದು ಆಯುರ್ವೇದದಲ್ಲಿ ಹೇಳಲಾಗಿದೆ.
 • ಬೇಸಿಗೆ ಕಾಲದಲ್ಲಿ ಬೆಳಗ್ಗೆ ೪-೦೦ ಗಂಟೆಗೆ ಹಾಗೂ ಚಳಿಗಾಲದಲ್ಲಿ ಬೆಳಿಗ್ಗೆ ೫.೦೦ ರಿಂದ ೫.೩೦ ಗಂಟೆಗೆ ಏಳಬೇಕು.
 • ಬೆಳಗಿನ ಜಾವ ಪರಿಸರದಲ್ಲಿ ಪ್ರಶಾಂತ ವಾತಾವರಣವಿರುವುದರಿಂದ ಮನಸ್ಸು ಸ್ವಸ್ಥವಾಗಿರಲು ಸಹಕಾರಿ. ಇದರಿಂದ ಮನೋ ಏಕಾಗ್ರತೆ ಬೆಳೆದು ಧ್ಯಾನ, ತಪಸ್ಸು, ಕಲೆ ಹಾಗೂ ಅಭ್ಯಾಸಗಳಿಗೆ ಅನುಕೂಲವಾಗಿದೆ. ದೈಹಿಕ ಆರೋಗ್ಯವೂ ಸುಧಾರಿಸುವುದು. ಮುಖವು ತೇಜಸ್ಸು ಹಾಗೂ ರಕ್ತದಂತೆ ಕೆಂಪಗಾಗುವುದು. ಈ ಶರೀರ ಬಲ ಹೆಚ್ಚುವುದು. ಚಟುವಟಿಕೆಗಳೂ ಹೆಚ್ಚುವುವು. ಇದಕ್ಕೆಲ್ಲಾ ವಾತಾವರಣದಲ್ಲಿರುವ ಸೋಮಶಕ್ತಿಯೇ ಕಾರಣ. ಈ ಸೋಮಶಕ್ತಿಯಲ್ಲಿ ಒಝೋನ್ ಸೇರಿದೆ.
 • ಬೆಳಗಿನ ಅರುಣ ಕಿರಣಗಳು ಕೂಡ ಆರೋಗ್ಯದಾಯಕ. ಬಯಲು ಹವೆ ಮತ್ತು ಬೆಳಕಿನಲ್ಲಿರುವ ಪ್ರಾಣಿ, ಗಿಡ, ಮರಗಳು ಹೆಚ್ಚು ಆರೋಗ್ಯವಂತವಾಗಿರುತ್ತವೆ. ಈ ಕಿರಣಗಳಲ್ಲಿ ಡಿ-ಜೀವಸತ್ವವನ್ನು ತುಂಬುವ, ಪಾಂಡು, ಅಶಕ್ತತೆಗಳನ್ನು ನಿವಾರಿಸಿ ರೋಗಪ್ರತಿಬಂಧಕ ಶಕ್ತಿ ಬೆಳೆಸುವ ಶಕ್ತಿ ಇದೆ. ಆದ್ದರಿಂದ ನಮ್ಮ ಪೂರ್ವಜರು ಹಿಂದಿನ ಕಾಲದಿಂದಲೂ ಆರೋಗ್ಯ ಹಾಗೂ ದೀರ್ಘಾಯುಷ್ಯಗಳ ಲಾಭಕ್ಕಾಗಿ ಸೂರ್ಯನನ್ನು ಪೂಜಿಸಿ ತನ್ಮೂಲಕ ಆರೋಗ್ಯವನ್ನು ಪಡೆಯುತ್ತಿದ್ದರು.
 • ನಸುಕಿನಲ್ಲಿ ಎದ್ದ ತಕ್ಷಣ ನಿಮ್ಮ ಇಷ್ಟ ದೇವತೆಗಳನ್ನು ಮನದಲ್ಲಿ ನೆನೆದು ವಂದಿಸಬೇಕು. ಬೆಳಿಗ್ಗೆ ಮನಸ್ಸು ಸಮಾಧಾನವಾಗಿದ್ದರೆ ಇಡೀ ದಿವಸ ಹಾಗೆಯೇ ಇರುತ್ತದೆ ಹಾಗೂ ನೀವು ಲವಲವಿಕೆಯಿಂದಿರುವಿರಿ.

. ಹಲ್ಲುಗಳ ಆರೋಗ್ಯ

 • ಹಲ್ಲುಗಳು ಚೆನ್ನಾಗಿ ಶುಭ್ರವಾಗಿದ್ದರೆ ಮುಖಕ್ಕೆ ಒಳ್ಳೆಯ ಕಾಂತಿಯನ್ನು ಕೊಡುತ್ತವೆ. ಒಳ್ಳೆಯ ಹಲ್ಲುಗಳು ಒಳ್ಳೆಯ ಆರೋಗ್ಯದ ಲಕ್ಷಣ. ನಾವು ಸೇವಿಸಿದ ಆಹಾರವನ್ನು ಅತಿ ಸಣ್ಣಗೆ ಮಾಡಿ ಜೀರ್ಣಕ್ಕೆ ಅವಕಾಶ ಮಾಡಿಕೊಡುವ ಕೆಲಸವನ್ನು ಈ ಹಲ್ಲುಗಳು ಮಾಡುತ್ತವೆ. ಹಲ್ಲುಗಳು ಇದ್ದರೆನೇ ಮಾತುಗಳು ಸ್ಪಷ್ಟ.
 • ಬೆಳಿಗ್ಗೆ ಹಾಗೂ ಆಹಾರ ಸೇವನೆಯ ನಂತರ ಎಕ್ಕ,ಅಲ, ಕಗ್ಗಲಿ, ಹೊಂಗೆ, ಮತ್ತಿ, ಮೊದಲಾದ ಒಗರು,ಕಾರ, ಕಹಿ ರಸಗಳುಳ್ಳ ಗಿಡಗಳ ಚಿಗುರುಗಳನ್ನು ಹಲ್ಲು, ಒಸಡು, ಗಂಟಲುಗಳಿಗೆ ರಸ ತಗಲುವಂತೆ ಚೆನ್ನಾಗಿ ಕಚ್ಚಿ ಬ್ರಷ್ಷಿನಂತೆ ಮಾಡಿಕೊಂಡು ಹಲ್ಲುಗಳನ್ನು ತಿಕ್ಕಿಕೊಳ್ಳಬೇಕು. ರಸವನ್ನು ಬಾಯಿಯಲ್ಲೆ ಹಿಡಿದುಕೊಂಡು ಸ್ವಲ್ಪ ಹೊತ್ತಿನ ನಂತರ ಉಗುಳಬೇಕು. ಒಂದೊಂದೇ ಹಲ್ಲುಗಳನ್ನು ಉಜ್ಜಿಕೊಳ್ಳುವಾಗ ವಸಡುಗಳಿಗೆ ಅಪಾಯವಾಗದಂತೆ ಎಚ್ಚರ ವಹಿಸಬೇಕು.[6]
 • ಮೇಲಿನ ಗಿಡಗಳು ನಿಮ್ಮ ಮನೆಯ ಸಮೀಪವಿರದಿದ್ದರೆ ತತ್ಸಮಾನ ಗುಣವುಳ್ಳ ಒಣಶುಂಠಿ, ಹಿಪ್ಪಲಿ, ಮೆಣಸು, ಹಾಗೂ ದಾಲಚಿನ್ನಿಯ ಪುಡಿಯಿಂದ ಇಲ್ಲವೇ ತ್ರಿಫಲಾ ಚೂರ್ಣದಿಂದ ಹಲ್ಲುಗಳನ್ನು ಉಜ್ಜಿಕೊಳ್ಳಬೇಕು. ಇದ್ದಲು + ಉಪ್ಪನ್ನೂ ಇದಕ್ಕಾಗಿ ಉಪಯೋಗಿಸಬಹುದು. ಪೇಟೆಯಲ್ಲಿ ಆಯುರ್ವೇದದ ಅನೇಕ ಹಲ್ಲುಪುಡಿಗಳೂ, ಪೇಸ್ಟುಗಳೂ ಕೂಡ ಲಭ್ಯವಿದೆ.
 • ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನುಜ್ಜಿಕೊಳ್ಳಬೇಕು.
 • ಹಲ್ಲುಗಳು ಆರೋಗ್ಯವನ್ನು ಕೆಡಿಸುವ ಐಸ್‌ಕ್ರೀಂ, ಬಿಸ್ಕತ್ತು, ಕೇಕು, ಸಿಹಿಪದಾರ್ಥ, ಚಾಕೋಲೇಟ್, ಪೆಪ್ಪರಮೆಂಟುಗಳನ್ನು ಮಕ್ಕಳಿಗೆ ಅತಿಯಾಗಿ ಕೊಡಬಾರದು.
 • ಹಲ್ಲುಗಳು ಆರೋಗ್ಯ ಸರಿ ಇರಬೇಕಾದರೆ ವಸರು, ನಾಲಿಗೆ ಹಾಗೂ ಒಟ್ಟಾರೆ ಬಾಯಿಯ ಆರೋಗ್ಯ ಚೆನ್ನಾಗಿರಬೇಕಾದುದು ಅವಶ್ಯ. ಕಾರಣ ಹಲ್ಲುಗಳನ್ನುಜ್ಜಿಕೊಂಡ ಮೇಲೆ ವಸಡು, ನಾಲಗೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕಲ್ಲದೇ ಬಾಯಿ, ಗಂಟಲಿನವರೆಗೆ ತಣ್ಣೀರನ್ನು ತುಂಬಿಕೊಂಡು, ಕೆಲ ಹೊತ್ತು ಬಾಯಿಯಲ್ಲಿ ಹಿಡಿದು ನಂತರ ಮುಕ್ಕಳಿಸಿ ಉಗುಳಬೇಕು.

. ಚಂಕ್ರಮಣ (WALKING)

 • ದಾರಿ ನಡಯುವುದೊಂದು ಸುಲಭ ವ್ಯಾಯಾಮ. ನಿತ್ಯವೂ ವ್ಯಾಯಾಮ ಮಾಡಲಾರದಂತಹ ವೃದ್ಧರು, ಸ್ತ್ರೀಯರು, ರೋಗಿಗಳು, ರೋಗದಿಂದ ಅದೇ ಆಗ ಗುಣವಾದವರು ತಮ್ಮ ಶಕ್ತ್ಯಾನುಸಾರ ಒಂದೆರಡು ಕಿಲೋಮೀಟರುಗಳವರೆಗೆ ಸುಖಕರವಾದ ಬಯಲು ಹವೆಯಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲದಲ ವೇಳೆಯಲ್ಲಿ ಚಂಕ್ರಮಣ ಮಾಡಬೇಕು.
 • ಬಯಲು ಹವೆ, ಬೆಟ್ಟ, ಗುಡ್ಡ, ಗಿಡಗಳು, ನದಿ, ಸರೋವರ ಇತ್ಯಾದಿ ನಿಸರ್ಗ ರಮಣೀಯ ಸ್ಥಳಗಳಲ್ಲಿ ಚಂಕ್ರಮಣ ಮಾಡುವುದರಿಂದ ದೇಹ ಮನಸ್ಸುಗಳು ಉಲ್ಲಾಸಗೊಳ್ಳುವುವು. ಕಾಲುಗಳು, ಶರೀರ ಧೃಡಗೊಳ್ಳುವುವು. ಇಡೀ ದಿವಸ ಕೆಲಸಗಳಲ್ಲಿ ಸ್ಫೂರ್ತಿ ಇರುವುದು. ಒಳ್ಳೇ ಹಸಿವು, ನಿದ್ರೆ ಹಾಗೂ ಮಲ ವಿಸರ್ಜನೆಗಳಾಗುವುವು. ಉತ್ತಮ ಹವೆಯಲ್ಲಿ ಉಸಿರಾಟದಿಂದ ಶ್ವಾಸಾಂಗಗಳು ಶುದ್ಧಿ ಆಗುವುವು. ರೋಗಗಳು ನಿರೋಧಿಸಲ್ಪಟುವುವು. ಸ್ಥೂಲತೆಯು ಕಡಿಮೆ ಆಗಿ ಎಳೆತನ ಬರುವುದು. ಕಫ ವಿಕಾರಗಳು ನಿವಾರಣೆ ಆಗಿ ಒಳ್ಳೇ ಬಣ್ಣ ಬರುವುದು. ಆಯುಷ್ಯ ಹೆಚ್ಚುವುದು. ಮನೋ ಆತಂಕಗಳು ಕಡಿಮೆ ಆಗುವುವು. ಸಂದುರೋಗಗಳು ಬರುವುದಿಲ್ಲ.
 • ಈ ಚಂಕ್ರಮಣವು ಹೃದ್ರೋಗ, ರಕ್ತದೊತ್ತಡ, ಮಧುಮೇಹಿಗಳಿಗೆ ತುಂಬ ಒಳ್ಳೆಯದು. ಈ ವಿಕಾರಗಳಿಂದ ದೂರವಿರಬೇಕೆನ್ನುವರು ಸಹ ನಿತ್ಯ ಚಂಕ್ರಮಣ ಮಾಡಬೇಕು.
 • ಚಂಕ್ರಮಣ ಮಾಡುವಾಗ್ಗೆ ಬಿಗಿ ಬಟ್ಟೆಗಳನ್ನು ಹಾಕಿಕೊಳ್ಳಬಾರದು. ಸಡಿಲವಾದ, ಅರಳೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಮಾತನಾಡುತ್ತ, ಹರಟೆ ಹೊಡೆಯುತ್ತ ಮೆಲ್ಲಗೆ ನಡೆಯದೆ ಶಿಸ್ತಿನ ಸಿಪಾಯಿಗಳಂತೆ ತೀವ್ರ ನಡಿಗೆ ಮಾಡಬೇಕು. ಹೀಗೆ ಅರ್ಧಗಂಟೆಯವರೆಗೆ ಚಂಕ್ರಮಣ ಮಾಡಿದರೆ ಅದರ ಸತ್ಫಲಗಳು ನಿಮಗೆ ದೊರಕುವುವು.

. ವ್ಯಾಯಾಮ

 • ಶರೀರವನ್ನು ದಣಿಸುವಂತೆ ಮಾಡುವ ಕಾರ್ಯವೇ ವ್ಯಾಯಾಮ ಎನಿಸುವುದು. ಆದರೆ ಇದು ವಿಧಿಬದ್ದವಾಗಿರಬೇಕು. ಇದರಿಂದ ದೇಹ ಸ್ಥಿರವಾಗಿ ಬಲವು ಹೆಚ್ಚುವುದು. ದೇಹ ಮನಸ್ಸುಗಳಲ್ಲಿ ಹಗುರತನವು, ಕಾರ್ಯ ಸಾಮರ್ಥ್ಯವೂ ಹೆಚ್ಚಿ ದೇಹಾಗ್ನಿಗಳು ಪ್ರಜ್ವಲಿತವಾಗುವುವು. ಮೇದಸ್ಸು ಕರಗುವುದು. ಇನ್ನಿತರ ಅಂಗಾಂಗಳಿಗೆ ಅಗತ್ಯವಾದ ಬಿರುಸುತನ ಹಾಗೂ ದೇಹಕ್ಕೆ ಒಂದು ಒಳ್ಳೆಯ ರೂಪ ದೊರಕುವುದು.[7]

ವ್ಯಾಯಾಮದಿಂದಾಂಟುಗುವ ಅತಿಯಾದ ಉಸಿರಾಟದಿಂದ ದೇಹಕ್ಕೆ ಆಮ್ಲಜನಕವು ದೊರೆತು ರಕ್ತವು ಫಪ್ಪುಸಗಳಿಂದ ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳುವುದು. ಹೃದಯದ ಬಡಿತಗಳು ಹೆಚ್ಚಾಗಿ ರಕ್ತಪರಿಚಲನೆ ವಿಶೇಷವಾಗುವುದರಿಂದ ಸ್ನಾಯುಗಳಿಗೆ ಅಧಿಕ ಆಮ್ಲಜನಕಾಂಶವು ದೊರಕಿ ಒಳ್ಳೆಯ ಪೋಷಣೆ ಆಗುವುದು. ರಕ್ತ ಸಂಚಲನೆಯಿಂದ ಚರ್ಮವು ಹೆಚ್ಚು ಬಿಸಿಯಾಗಿ ದೇಹದಲ್ಲಿ ಶಾಖವು ಉತ್ಪನ್ನವಾಗುತ್ತ ಹೋದಂತೆ ಶರೀರದಲ್ಲಿಯ ಸ್ರಾವಗಳು ಅಧಿಕವಾಗಿ ಬೆವರಿನ ಮೂಲಕ ಹೊರಬರುವುದು. ಧಾತುಗಳ ಕ್ರಿಯೆಯ ಉತ್ತೇಜನದಿಂದ ಮಲಾಂಶಗಳು ಹೊರಹೋಗಲು ಸಾಧ್ಯವಾಗುವುದು. ಶರೀರಸ್ಥ ಅಗ್ನಿಗಳು ಪ್ರಜ್ಷಲಿಸುವುದರಿಂದ ಜೀರ್ಣಕ್ರಿಯೆ ಹಾಗೂ ಪೋಷಣೆಗಳು ಸುಧಾರಿಸಿ ಶರೀರ ಹಾಗೂ ಮನಸ್ಸುಗಳಿಗೆ ಒಂದು ಆರೋಗ್ಯಕರ ಸ್ಥಿತಿ ಖಂಡಿತವಾಗಿ ದೊರಕುವುದು.

 • ಗರಡಿ ಮನೆಯಲ್ಲಿ ಆಚರಿಸಲ್ಪಡುವ ಕಸರತ್ತುಗಳಷ್ಟೇ ವ್ಯಾಯಾಮವಲ್ಲ. ಲೇಝಿಮ, ತಿಳ್ಳಿ, ಆಟ, ಖೋಖೋ, ತೀವ್ರವಾದ ನಡಿಗೆ, ಓಟ, ಸೈಕಲ್ ಸವಾರಿ, ಚಿಣ್ಣಿಕೋಲು, ಚೆಂಡಿನ ಆಟ, ಕ್ರಿಕೆಟ್, ಹಗ್ಗದಾಟ, ಈಜು, ಉಠಾಬೈಸ್, ನೀರು ಸೇದುವುದು, ಕುಟ್ಟುವುದು, ಬೀಸುವುದು ಮುಂತಾದವುಗಳೆಲ್ಲ ವ್ಯಾಯಾಮಗಳೇ.
 • ಅತಿಯಾದ ವ್ಯಾಯಾಮ ಒಳಿತಲ್ಲ. ಅದು ಅನಾರೋಗ್ಯಕ್ಕೆ ದಾರಿ. ವ್ಯಾಯಾಮವನ್ನು ಆಯಾ ವ್ಯಕ್ತಿಯ ವಯಸ್ಸು, ಲಿಂಗ, ನಿತ್ಯದ ಕೆಲಸಗಳು ವಾತಾವರಣ, ಹಾಗೂ ವೈಯಕ್ತಿಕವಾಗಿ ತಕ್ಕಷ್ಟು ಎನಿಸುವ ಪ್ರಮಾಣದಲ್ಲಿ, ನಿಯಮಿತ ವೇಳೆಯಲ್ಲಿ, ಬಯಲು ಹವೆಯಲ್ಲಿ ಮಾಡಬೇಕು.
 • ಬಲವಂತರು ಮಾತ್ರ ವ್ಯಾಯಾಮ ಮಾಡಬೇಕು.
 • ವ್ಯಾಯಾಮ ಮಾಡುವವರು ಸ್ನಿಗ್ಧ, ಸಿಹಿ, ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿಶೇಷವಾಗಿ ಸೇವಿಸಬೇಕು.
 • ವ್ಯಾಯಾಮ ಮಾಡುವವರು ತಮ್ಮ ಶರೀರ ಸಾಮರ್ಥ್ಯದ ಅರ್ಧದಷ್ಟು ದಣಿಸುವಂತೆ ಮಾಡಬೇಕು. ಎಂದರೆ ವ್ಯಾಯಾಮ ಮಾಡಿ ಎದುರಿಸಿ ಬರತೊಡಗಿದರೆ ಅಲ್ಲಿಗೆ ಅವರ ಸಾಮರ್ಥ್ಯ ತಿಳಿಯುತ್ತದೆ. ಇದು ಅವರವರ ಪ್ರಕೃತಿ, ವಯಸ್ಸು, ಹವಾಮಾನ, ಲಿಂಗಗಳ ಮೇಲೆ ಅವಲಂಬಿಸಿದೆ. ಇದಕ್ಕೂ ಮೀರಿ ವ್ಯಾಯಾಮ ಮಾಡತೊಡಗಿದರೆ ದೌರ್ಬಲ್ಯವುಂಟಾಗುತ್ತದೆ. ಬಾಯಾರಿಕೆ, ಕ್ಷಯ (ಸಪ್ತಧಾತು ಕ್ಷೀಣತೆ) ಉಬ್ಬುಸ, ರಕ್ತಪಿತ್ತ, ಶ್ರಮ, ಆಯಾಸ, ಕೆಮ್ಮು, ಜ್ವರ ಹಾಗೂ ವಾಂತಿರೋಗಗಳು ಹುಟ್ಟಿಕೊಳ್ಳುತ್ತವೆ.
 • ರಕ್ತಪಿತ್ತ ರೋಗಿಗಳು, ಕೃಶರು, ಶೋಷಣೆಗೊಂಡವರು, ಶ್ವಾಸಕೃಚ್ಛ್ರ ರೋಗಿಗಳು, ಕೆಮ್ಮು, ಉರ:ಕ್ಷತಗಳಿಂದ, ಬಳಲುತ್ತಿರುವವರು, ಅದೇ ಆಗ ಭೋಜನ ಮಾಡಿದವರು, ಅತಿಯಾದ ಸ್ತ್ರೀ ಸಂಗದಿಂದ ಕ್ಷೀಣರಾದವರು, ತಲೆ ತಿರುಗುತ್ತಿರುವವರು, ವ್ಯಾಯಾಮವನ್ನು ಮಾಡಬಾರದು.
 • ಯಾವುದೇ ವ್ಯಾಯಾಮ ನಮ್ಮ ದೇಹ ವ್ಯವಸ್ಥೆಗೆ ಸರಿ ಹೊಂದಿಕೊಳ್ಳಬೇಕಾದರೆ ಅದನ್ನು ಮಾಡಿದ ಕೆಲ ನಿಮಿಷಗಳ ಮೇಲೆ ಸಮಾಧಾನ, ಸಂತೋಷಗಳನ್ನು ಅನುಭವಿಸುವಂತೆ ಇರಬೇಕು.
 • ದಣಿವಾರಿಸಿಕೊಂಡ ಬಳಿಕ ಮೈ ತೊಳೆದುಕೊಳ್ಳಬೇಕು. ಇಲ್ಲವೇ ಒದ್ದೆ ಬಟ್ಟೆಯಿಂದ ಮೈಯನ್ನು ಒರೆಸಿಕೊಂಡು ಬೆವರನ್ನು ನಿವಾರಿಸಿಕೊಳ್ಳಬೇಕು.

. ಯೋಗಾಸನಗಳು

 • ದೈಹಿಕ ವ್ಯಾಯಾಮದಿಂದ ಸ್ನಾಯುಗಳ ಬಲ ಹೆಚ್ಚಿ ದೇಹಶಕ್ತಿ ಹೆಚ್ಚಾಗುತ್ತದೆ. ಎಂಬುದು ನಿಜ. ಆದರೆ ಯೋಗಾಸನಗಳಿಂದ ದೈಹಿಕ ಅಂಗಾಂಗಗಳ ಸೂಕ್ಷ್ಮ ನರಗಳಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಮಾತ್ರವಲ್ಲದೇ ಕೋಮಲ ಮರ್ಮಗಳಾದ ಮಿದುಳು, ಶ್ವಾಸಕೋಶ, ಹೃದಯ, ಪಿತ್ತಕೋಶ, ಮೂತ್ರಜನಕಾಂಗ, ನಿರ್ನಾಳಗ್ರಂಥಿ ಮುಂತಾದ ಅವಯವಗಳಲ್ಲಿ ರಕ್ತಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಮಾನವ ಸೇವಿಸುವ ಆಮ್ಲಜನಕಾಂಶ ಹೆಚ್ಚುತ್ತದೆ. ದೇಹದೊಳಗಿನ ಜೀವದ್ರವಗಳ ಪರಿಣಾಮ ಹಾಗೂ ಸ್ರಾವಕ ಕ್ರಿಯೆಯ ವೇಗ ಹೆಚ್ಚುತ್ತದೆ. ಇದರಿಂದ ಎಲ್ಲ ಅವಯವಗಳ ಸಾಮರ್ಥ್ಯ, ಚೈತನ್ಯಗಳು ಉತ್ತಮಗೊಳ್ಳುತ್ತವೆ ಹಾಗೂ ವಯಸ್ಸೇರಿದರೂ ಮಾನವನಲ್ಲಿ ವೃದ್ಧಾಪ್ಯದ ಲಕ್ಷಣ ಹಾಗೂ ತೊಂದರೆಗಳು ಮೂಡಿಬರದೇ ಮುಪ್ಪನ್ನು ಮುಂದೂಡಲು ಸಾಧ್ಯವಾಗುತ್ತದೆ. ಹೀಗಾಗಿಯೇ ಹಿಂದಿನ ಕಾಲದಲ್ಲಿ ಋಷಿಮುನಿಗಳು ನೂರಾರು ವರ್ಷ ಬದುಕುತ್ತಿದ್ದರು.
 • ಯೋಗಾಸನಗಳಿಂದ ವ್ಯಾಯಾಮದಿಂದಾಗುವ ದುಷ್ಪರಿಣಾಮಗಳಲ್ಲದೆ ಎಲ್ಲ ಲಾಭಗಳನ್ನು ಪಡೆಯಬಹುದು.
 • ಯೋಗಾಭ್ಯಾಸಗಳನ್ನು ಮಾಡುವಾಗ ಮನಸ್ಸಿನ ಏಕಾಗ್ರತೆ, ಶ್ವಾಸನಿಯಂತ್ರಣಗಳೆಡೆಗೆ ವಿಶೇಷ ಲಕ್ಷ್ಯ. ಕೊಡುವುದು ಅಗತ್ಯ. ವ್ಯಾಯಾಮಗಳಲ್ಲಿ ಅನುಸರಿಸುವ ಶ್ವಾಸ ನಿಯಂತ್ರಣಕ್ಕೂ ಯೋಗಸನಗಳಲ್ಲಿ ಅನುಸರಿಸುವ ಶ್ವಾಸ ನಿಯಂತ್ರಣಕ್ಕೂ ಬಹಳ ವ್ಯತ್ಯಾಸವಿದೆ.
 • ಯೋಗಾಸನಗಳ ಆಚರಣೆಯಿಂದ ಕೆಲವು ಯೌಗಿಕ ನಾಡೀ ಚಕ್ರಗಳ ಮೇಲೆ ಒತ್ತಡ ಬೀಳುವುದರಿಂದ ತಜ್ಞರ ಮೇಲ್ವಿಚಾರಣೆಯಲ್ಲಿಯೇ ಇದನ್ನು ಮಾಡಬೇಕು. ಆಸನ ಸ್ವರೂಪದ ವ್ಯಾಯಾಮಗಳನ್ನು ಮಾಡುವ ಮೊದಲು ಯಮ ನಿಯಮ ಮುಂತಾದ ನಾಡೀ ಶುದ್ಧಿಯ ಸಾಧನಗಳನ್ನು ಕೈಕೊಳ್ಳಬೇಕಾಗುವುದು. ಯುಕ್ತಿ-ಯುಕ್ತವಾದ ಆಸನಾಭ್ಯಾಸಗಳಿಂದ ಅನೇಕ ರೋಗಗಳು ದೂರವಾಗುವುವಲ್ಲದೇ ರೋಗ ನಿರೋಧಕ ಶಕ್ತಿಯು ಬೆಳೆಯುವುದು.
 • ಆಸನಗಳನ್ನು ಹಾಕಲು ಶುದ್ಧ ಗಾಳಿ, ಬೆಳಕು ಇರುವ ಕೋಣೆ ಇದ್ದರೆ ಸಾಕು. ನಿತ್ಯ ಆಸನಗಳನ್ನು ಹಾಕಬೇಕೆಂಬ ನಿರ್ಧಾರ ಅಚಲವಾಗಿರಬೇಕು. ಮಲ ಮೂತ್ರ ವಿಸರ್ಜಿಸಿದ ನಂತರ ಬರಿಹೊಟ್ಟೆಯಲ್ಲಿ ೩೦-೪೫ ನಿಮಿಷಗಳವರೆಗೆ ಆಸನಗಳನ್ನು ಹಾಕಬೇಕು.
 • ನೂರಾರು ವಿಧ ಆಸನಗಳಿದ್ದರೂ ಆರೋಗ್ಯ ರಕ್ಷಣೆಗಾಗಿ ನಿತ್ಯ ಸರ್ವಾಂಗಾಸನ, ಹಲಾಸನ, ಪಶ್ಚಿಮೋತ್ಥಾನ, ಮತ್ತ್ಯಾಸನ, ಸೂರ್ಯ ನಮಸ್ಕಾರ, ಶವಾಸನಗಳನ್ನೂ ಹಾಕಬೇಕು.

. ಪ್ರಾಣಾಯಾಮ

 • ಉಸಿರಾಟದ ವ್ಯಾಯಾಮಕ್ಕೆ ‘ಪ್ರಾಣಾಯಾಮ’ ಎನ್ನವರು. ನಿಧಾನವಾಗಿ ಉಸಿರನ್ನು ಒಳಕ್ಕೆ ಎಳೆದುಕೊಂಡು ಆದಷ್ಟು ಹೆಚ್ಚು ಸಮಯ ಅದನ್ನು ಒಳಗಿಟ್ಟುಕೊಂಡು ಆಮೇಲೆ ನಿಧಾನವಾಗಿ ಹೊರ ಬಿಡುವುದೇ ‘ಪ್ರಾಣಾಯಾ’ ಎನಿಸಿದೆ.
 • ಬೆಂಕಿಯಲ್ಲಿ ಕಾಯಿಸುವುದರಿಂದ ಧಾತುಗಳು ನಾಶವಾಗುವಂತೆ ಪ್ರಾಣಾಯಾಮದಿಂದಲೇ ಇಂದ್ರಿಯ ದೋಷಗಳು ನಾಶವಾಗುತ್ತವೆ ಎಂದು ಮನು ಹೇಳುತ್ತಾನೆ.
 • ವಾಯುವನ್ನು ನಿಗ್ರಹಿಸತಕ್ಕವನಿಗೆ ಮನಸ್ಸು ಸ್ವಾಧೀನವಾಗುತ್ತದೆ. ಮನಸ್ಸನ್ನು ನಿಗ್ರಹಿಸಿಕೊಂಡವನಿಗೆ ವಾಯುವು ಸ್ವಾಧೀನವಾಗುತ್ತದೆ. ಎಲ್ಲ ರೋಗಗಳು ನಾಶವಾಗುತ್ತವೆ. ಆದರೆ ಇದನ್ನು ಯೋಗ್ಯ ರೀತಿಯಿಂದ ಆಚರಿಸಬೇಕೆಂದು ಹಠಯೋಗ ಪ್ರದೀಪಿಕಾದಲ್ಲಿ ಹೇಳಲಾಗಿದೆ.
 • ನಿತ್ಯ ಪ್ರಾಣಾಯಾಮ ಮಾಡುವುದರಿಂದ ಹೃದಯ, ಶ್ವಾಸೋಚ್ಛಾಸಗಳ ಪ್ರಕ್ರಿಯೆ ಸುಧಾರಿಸುವುದು. ಮಾತ್ರವಲ್ಲದೇ ಕಾಲ ಕ್ರಮೇಣ ಹೊಸ ಉಸಿರಾಟದ ಕ್ರಮವನ್ನೇ ಅರಿತು ಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದಲ್ಲದೇ ಮಿದುಳಿನ ಅತಿಸೂಕ್ಷ್ಮ ನರಕೋಶಗಳಿಗೆ ಹೆಚ್ಚಿನ ಆಮ್ಲಜನಕ ದೊರಕಿ ಮನಶಾಂತಿಯು ದೊರಕುತ್ತದೆ. ಅದರಿಂದ ಕ್ರಮೇಣ ಏಕಾಗ್ರತೆ ಹಾಗೂ ಧ್ಯಾನ ಮಾಡಲು ಸಾಧ್ಯವಾಗುತ್ತದೆ. ಯೋಗಾಭ್ಯಾಸದ ಅಂತಿಮ ಗುರಿಯಾದ ಸಮಾಧಿ ಸಾಧನೆಗೂ ಇದು ಸಹಾಯವಾಗುತ್ತದೆ.
 • ಪ್ರಾಣಾಯಾಮವನ್ನು ಯೋಗಾಭ್ಯಾಸದ ನಂತರ, ಧಾನ್ಯವನ್ನು ಆರಂಭಿಸುವ ಮೊದಲು ನಡೆಸಬೇಕು.ಇದರಲ್ಲಿ ಮೂರು ಹಂತಗಳಿವೆ.

೧. ಪೂರಕ – ಎಂದರೆ ಶ್ವಾಸವನ್ನೊಳಕ್ಕೆ ತೆಗೆದುಕೊಳ್ಳುವುದು.
೨. ಕುಂಭಕ – ಎಂದರೆ ಉಸಿರನ್ನು ಒಳಗೆ ತಡೆಹಿಡಿದುಕೊಳ್ಳಬೇಕು.
೩. ರೇಚಕ – ಎಂದರೆ ಉಸಿರನ್ನು ಹೊರಕ್ಕೆ ಬಿಡುವುದು.

ಈ ಮೇಲಿನ ಪ್ರತಿ ಹಂತಗಳಲ್ಲಿಯೂ ಸಮಯ ಮಿತಿ ಬೇಕಾಗುತ್ತದೆ. ಪೂರಕ್ಕೆ ಎರಡು ಸೆಕೆಂಡುಗಳು ಬೇಕಾದರೆ ಕುಂಭಕಕ್ಕೆ ಎಂಟು ಸೆಕೆಂಡುಗಳು ಹಾಗೂ ರೇಚಕ್ಕೆ ನಾಲ್ಕು ಸೆಕೆಂಡುಗಳು.

 • ಒಂದು ದಿನಕ್ಕೆ ೨೦ ಸಾರಿ ಪ್ರಾಣಾಯಾಮಗಳನ್ನು ಮಾಡಬೇಕು. ಇದರಿಂದ ದೇಹ-ಮನಸ್ಸುಗಳಲ್ಲಿ ಹೊಸ ಚೈತನ್ಯ, ಮುಖಕ್ಕೆ ಕಳೆ, ಹೊಸ ಹುರುಪುಗಳುಂಟಾಗುತ್ತವೆ.

. ಧ್ಯಾನ (MEDITATION)

ಧ್ಯಾನಯೋಗವು ಪತಂಜಲಿಯವರು ಹೇಳಿದ ಸಮಗ್ರ ಯೋಗಾಭ್ಯಾಸದ ಅತಿ ಮುಖ್ಯ ಸಂಪೂರ್ಣ ಶಾಂತವಾಗಿರಬೇಕಾಗುತ್ತದೆ. ಏಕಾಗ್ರತೆಯಿಂದಿರಬೇಕಾಗುತ್ತದೆ. ಹೊರಪ್ರಪಂಚದ ಆಗುಹೋಗುಗಳಿಂದ ನಿರ್ಲಿಪ್ತರಾಗಿ ತಮ್ಮದೇ ಆದ ಪ್ರಶಾಂತ ಲೋಕದಲ್ಲಿ ವಿಹರಿಸಬೇಕಾಗುತ್ತದೆ. ಇದರಿಂದ ದೇಹ-ಮನಸ್ಸುಗಳು ತುಂಬ ಹಗುರವಾಗುತ್ತವೆ. ಹೊಸ ಚೈತನ್ಯ ಚಿಮ್ಮುತ್ತದೆ. ಒತ್ತಡದಿಂದುಂಟಾಗುವ ಮನೋದೈಹಿಕ ರೋಗಗಳು ನಿರೋಧಿಸಲ್ಪಡುತ್ತವೆ. ಎಂಥ ಕಠಿಣ ಪ್ರಸಂಗವನ್ನಾದರೂ ಎದುರಿಸುವ ಶಕ್ತಿ ದೊರಕುತ್ತದೆ. ಧ್ಯಾನವೇ ಒಂದು ವಿಶಿಷ್ಟ ಅನುಭವ.

ಧ್ಯಾನವನ್ನು ಯಾವಾಗ ಬೇಕಾದರು ಮಾಡಬಹುದು. ಯಾರು ಬೇಕಾದರೂ ಮಾಡಬಹುದು. ಎಷ್ಟು ಹೊತ್ತು ಬೇಕಾದರೂ ಮಾಡಬಹುದು. ಕೆಲವೇ ನಿಮಿಷಗಳ ನೈಜ ಧ್ಯಾನದಿಂದ ದೈಹಿಕ ಸಡಲಿಕೆ ಉಂಟಾಗುವುದು. ನಿದ್ರಾವಸ್ಥೆಯ ಸುಖವನ್ನು ಅನೂಭವಿಸುವರು. ಪದ್ಮಾಸನದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ಕೊಳ್ಳಬೇಕು. ಮನಸ್ಸನ್ನು ಎರಡು ಹುಬ್ಬುಗಳ ಮಧ್ಯೆ ಕೇಂದ್ರಿಕರಿಸಬೇಕು. ಇಷ್ಟ ದೇವತೆಯ ಜಪ ಮಾಡಬೇಕು. ಈ ಕಾಲದಲ್ಲಿ ಪುರಾಣ ಪುಣ್ಯ ಕಥೆಗಳನ್ನು, ಸುಂದರ ಪರಿಸರ, ತೀರ್ಥ ಕ್ಷೇತ್ರಗಳನ್ನು ನೆನಪಿಸಿಕೊಳ್ಳಬಹುದು. ಪ್ರತಿಯೊಂದು ಮತ-ಧರ್ಮಗಳನ್ನು ಪ್ರಾರ್ಥನೆ, ಧ್ಯಾನಗಳ ಮೂಲಭೂತ ಅಂಶಗಳಾಗಿವೆ. ಧ್ಯಾನದಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚುತ್ತ ಹೋದಂತೆ ಮಾನವನಲ್ಲಿ ಪ್ರಾರ್ಥನಾ ಗುಣವೂ ಮನೋ ಬಲವೂ ಹೆಚ್ಚುವುದು.

ನಿತ್ಯ ಜೀವನದಲ್ಲಿ ಧ್ಯಾನ ಒಂದು ಅಂಗವಾಗಿರಬೇಕು. ಅದಕ್ಕೆ ಪ್ರಶಾಂತ ಕಾಲ, ಪರಿಸರಗಳು ಬೇಕು. ದೃಢನಿರ್ಧಾರ ಬೇಕು. ನಿಶ್ಚಿತವಾದುದೊಂದು ಸ್ಥಳಬೇಕು. ಧ್ಯಾನಕ್ಕೆ ಕುಳಿತು ಕೊಳ್ಳುವಾಗ್ಗೆ ಯಾವ ಆಶೆ, ಆಕಾಂಕ್ಷೆ, ಕಾಮ, ಕ್ರೋಧ, ಮುಂತಾದವುಗಳನ್ನೆಲ್ಲ ಮರೆತು ಮನಸ್ಸನ್ನು ದಿವ್ಯ ಚೇತನದತ್ತ ಕೇಂದ್ರಿಕರಿಸಬೇಕು. ಶ್ರದ್ಧೆ ಉತ್ಸಾಹ, ಆಸಕ್ತಿಗಳಿರಬೇಕು. ಉದಾತ್ತ ಜೀವಿಗಳ ಸ್ನೇಹ ಸಂಬಂಧವಿರಬೇಕು. ಯೌವನಾವಸ್ಥೆಯಿಂದಲೇ ‘ಧ್ಯಾನ’ವನ್ನು ಪ್ರಾರಂಭಿಸಬೇಕು. ದುಶ್ಚಟಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

. ನಿತ್ಯ ಸ್ನಾನಅಭ್ಯಂಗ

 • ಸ್ನಾನವು ದಾಹ, ಕ್ರಮ, ಬೆವರು, ಮೈ ಕೆರೆತ ಹಾಗೂ ಬಾಯಾರಿಕೆಗಳನ್ನು ದೂರ ಮಾಡುವುದು. ಹೃದಯವನ್ನು ಪ್ರಸನ್ನಗೊಳಿಸುವುದು. ಕೊಳೆನಾಶಕ,ಇಂದ್ರಿಯಗಳ ಶೋಧಕವಾಗಿದೆ. ನಡುಕ, ಪಾಪಗಳನ್ನು ನಾಶಪಡಿಸಿ, ತುಷ್ಟಿ, ಪುಷ್ಟಿ, ಕಾಂತಿ, ಸಂತೋಷವನ್ನುಂಟು ಮಾಡುವುದು. ಪೌರುಷವನ್ನು ವರ್ಧಿಸಿ ರಕ್ತಶುದ್ಧಿ, ಅಗ್ನಿ ಮತ್ತು ದೀಪ್ತಿಯನ್ನುಂಟು ಮಾಡುವುದು ಎಂದು ಉಗ್ರದಿತ್ಯಾಚಾರ್ಯರು ಹೇಳಿದ್ದಾರೆ.[8]
 • ಪವಿತ್ರ ಸ್ವರೂಪವಾದ ಸ್ನಾನವು ಶರೀರದ ದಣಿವು, ಬೆವರುಗಳನ್ನು ಮತ್ತು ಇಂದ್ರಿಯಗಳ ಹೊಲಸನ್ನು ದೂರಮಾಡಿ ಬಲ-ವರ್ಣಗಳನ್ನು ಸ್ಥಿರಪಡಿಸಿ ವೀರ್ಯವಂತಿಕೆ ಹಾಗೂ ಆಯುಷ್ಯವನ್ನು ವೃದ್ಧಿಸುವುದು ಎಂದು ಚರಕಾಚಾರ್ಯರು ಹೇಳಿದ್ದಾರೆ.
 • ಸ್ನಾನವನ್ನು ಪ್ರಾತಃ ಕಾಲದಲ್ಲಿ ಮಾಡಬೇಕು. ತಣ್ಣೀರಿನಿಂದ ಮಾಡಬೇಕು. ನದಿ, ಪವಿತ್ರ ತೀರ್ಥ, ಕೆರೆ, ಸರೋವರ, ಮಡು ಮತ್ತು ಝರಿಗಳಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ತಣ್ಣೀರಿನಿಂದ ಸ್ನಾನ ಮಾಡಿದರೆ ಪಿತ್ತ ರೋಗ ಶಾಂತವಾಗುವುದು. ನೀರಡಿಕೆ, ಹಸಿವುಗಳು ಕಂಡುಬರುವುವು.
 • ಸ್ನಾನವನ್ನು ಕೇವಲ ನಿರ್ಮಲೀಕರಣದ ಒಂದು ಸಾಧನವೆಂದು ಪರಿಗಣಿಸದೇ ಚಿಕಿತ್ಸೆಯ ಒಂದು ಅಂಗವನ್ನಾಗಿಯೂ ಹೇಳಲಾಗಿದೆ. ಈ ರೀತಿಯ ಸ್ನಾನಕ್ಕಾಗಿ ವಿವಿಧ ಪ್ರಕಾರದ ನೀರು, ಕಷಾಯ, ಸ್ನೇಹ, ತುಷಾರ, ಆತಪ ಸ್ನಾನಗಳನ್ನು ಹೇಳಲಾಗಿದೆ. ನಿತಂಬ ಸ್ನಾನ, ಉಗಿಯ ಸ್ನಾನ, ಉಗಿಯ ಸ್ನಾನ, ಅಂಗಾಲು ಸ್ನಾನಗಳನ್ನು ಚಿಕಿತ್ಸೆಯ ಅಂಗವಾಗಿ ಕೊಡಲಾಗುತ್ತದೆ.
 • ತೈಲಾಭ್ಯಂಗದಿಂದ ಮುಪ್ಪು, ಬಳಲಿಕೆಗಳು ದೂರವಾಗಿ ವಾತವಿಕಾರಗಳು ಇಲ್ಲವಾಗುವುವು. ದೃಷ್ಟಿ ಶಕ್ತಿಯ ಬಲಗೊಳ್ಳುವುದು, ಆಯುಷ್ಯವು ಪುಷ್ಟಿಯಾಗುವುದು. ಚರ್ಮವು ಕೋಮಲವು ಬಲವುಳ್ಳದ್ದಾಗಿ ಇಡೀ ಶರೀರದಲ್ಲೆ ದೃಢತೆ ಉಂಟಾಗುವುದು. ಕೂದಲುಗಳು ಮೃದುವಾಗಿ ಕಪ್ಪು, ಸ್ನಿಗ್ಧ ಮತ್ತು ಅಧಿಕಗೊಳ್ಳುವುವು. ತಲೆಯಲ್ಲಿ ಸಮಾಧಾನ ಮತ್ತು ಬಲವುಂಟಾಗುವುದು. ಇಂದ್ರಿಯಗಳು ತೃಪ್ತವಾಗುವುವು. ಮುಖದ ಚರ್ಮವು ಪ್ರಸನ್ನವಾಗುವುದು.[9]
 • ಶೈಲಭೃಂಗಕ್ಕೆ ಎಳ್ಳೆಣ್ಣೆ ಒಳ್ಳೆಯದು.
 • ಸ್ನಾನವನ್ನು ಅರ್ಧಾಂಗವಾಯು, ಕಣ್ಣು -ಮುಖ, ಕಿವಿಗಳ ರೋಗವಿದ್ದವರು; ಅತಿಸಾರ, ಹೊಟ್ಟೆಯುಬ್ಬರ, ನೆಗಡಿ, ಅಜೀರ್ಣ ಮುಂತಾದ ರೋಗವುಳ್ಳವರು ಮತ್ತು ಅದೇ ಆಗ ಆಹಾರವನ್ನು ಸೇವಿಸಿದವರು ಮಾಡಕೂಡದು. ಇಂಥವರು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಿಕೊಳ್ಳಬೇಕು.
 • ಕಥ ದೋಷ ಪ್ರಧಾನವಾದ ಕೆಮ್ಮು, ಉಬ್ಬುಸ, ಮೊದಲಾದ ರೋಗಗಳಲ್ಲಿ ವಮನ-ವಿರೇಚನ ಮೊದಲಾದ ಕರ್ಮಗಳನ್ನು ಮಾಡಿಸಿಕೊಂಡವರು, ಅಜೀರ್ಣ ಜ್ವರ, ತರುಣಜ್ವರ, ಸಂತರ್ಪಣ ವಿಕಾರವುಳ್ಳವರು ಅಭ್ಯಂಗ ಮಾಡಬಾರದು.
 • ಪಾದಗಳಿಗೆ ತೈಲಾಭ್ಯಂಗ ಮಾಡುವುದರಿಂದ ಅವು ಮುಳ್ಳಾಗಿ ಒಣಗಿಸಿಕೊಂಡು ಬರಡಾಗಿ ನಿರ್ಜೀವಗೊಳ್ಳುವುದು ತಪ್ಪುತ್ತದೆ. ಅವುಗಳಲ್ಲಿ ಬಲ, ಸ್ಥಿರತ್ವ ಮತ್ತು ಕೋಮಲತ್ವಗಳುಂಟಾಗುತ್ತವೆ. ದೃಷ್ಟಿ ಶಕ್ತಿಯ ಪ್ರಸನ್ನವಾಗುತ್ತದೆ. ವಾತವು ಶಾಂತವಾಗುತ್ತದೆ. ಗೃಧ್ರಸೀ ವಾತ (sciatica) ಗುಣವಾಗುತ್ತದೆ. ಪಾದಗಳಲ್ಲಿ ಸಿರಾನಾಳಗಳ ಸಂಕೋಚಗಳು ಕೂಡ ಬಾರವು.
 • ಕರ್ಣಾಭ್ಯಂಗ – ಆರೋಗ್ಯಕರ ಕಿವಿಗಳಲ್ಲಿ ನಿತ್ಯ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ಕರ್ಣಶೂಲ, ಕರ್ಣನಾದಗಳು ದೂರವಾಗುತ್ತವೆ. ಇದರಿಂದ ವಾತಜನ್ಯ ಕರ್ಣರೋಗಗಳು ಮನ್ಯಾಸ್ಥಂಭ, ಕಿವುಡುಗಳುಂಟಾಗುವುದಿಲ್ಲ.

. ಅನುಲೇಪನ

ಅನುಲೇಪವು ದೇಹಕ್ಕೆ ಒಳ್ಳೆಯ ಬಣ್ಣವನ್ನು ಸೌಭಾಗ್ಯವನ್ನು ಕೊಟ್ಟು ಪ್ರೀತಿ, ತೇಜಸ್ಸು, ಬಲವನ್ನು ವೃದ್ಧಿಪಡಿಸುವುದು. ಬೇವರು, ದುರ್ವಾಸನೆ ಹಾಗೂ ಚರ್ಮ ವಿಕಾರಗಳನ್ನು ಪರಿಹರಿಸುವುದು. ಇದರಿಂದ ಶರೀರದ ಶ್ರಮ ಕಡಿಮೆ ಆಗುವುದು.

ಸ್ನಾನದ ನಂತರ ಶರೀರದಿಂದ ಅದೂ ವಿಶೇವಷಾಗಿ ಪಿತ್ತ ಪ್ರಕೃತಿಯವರಲ್ಲಿ ಹೊರಸೂಸುವ ದುರ್ಗಂಧವನ್ನು ಅಗೋಚರವಾಗಿಸುವಂತೆ ಮಾಡಲು ಕೆಲ ವಿಧದ ಸುಂಗಂಧಪೂರಿತ ದ್ರವ್ಯಗಳು ಚೂರ್ಣಗಳನ್ನು ಮೆಲ್ಲಗೆ ಲೇಪಿಸಿಕೊಳ್ಳುವುದು ಅನುಲೇನವೆನಿಸಿದೆ.

ಚಂದನ, ಕಮಲ,ಕರ್ಪೂರ ಮೊದಲಾದ ಸುಂಗಂಧಿತ ಹಾಗೂ ಶೀತಲವಾದ ಲೇಪನ ದ್ರವ್ಯಗಳು, ಗ್ರೀಷ್ಮ ಋತುವಿನ ಕಾಲದಲ್ಲಿ ಶ್ರೇಷ್ಠವೆನಿಸಿದೆ. ಹಾಗೆಯೇ ಕೇಶರ, ಚಂದನಗಳು ಸಮಶೀತೋಷ್ಣವುಳ್ಳವಿದ್ದು ಮಳೆಗಾಲದಲ್ಲಿ ಲೇಪಿಸಿಕೊಳ್ಳಲು ಹಿತಕಾರಿ ಎನಿಸಿದೆ.

ಸ್ನೋ, ಪೌಡರ್ ಹಾಗೂ ಇತರ ಸುಗಂಧಿತ ಲೇಪಗಳಲ್ಲಿ ಶರೀರದಿಂದ ರೋಮರಂಧ್ರಗಳ ಮೂಲಕ ಹೊರಹೋಗುವ ಮಲಾಂಶಗಳು ತಡೆಯಲ್ಪಡುವುದರಿಂದ ಹಾಗೂ ರಾಸಾಯನಿಕ ಪ್ರತಿಕ್ರಿಯೆಯಿಂದ ಚರ್ಮವಿಕಾರಗಳಾಗುವುದು ಕಂಡುಬಂದಿದೆ. ಕಾರಣ ಇಂಥವನ್ನು ಲೇಪನಕ್ಕಾಗಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ.

[1] ಅಥೇಹ ಭವ್ಯಸ್ಭ ನರಸ್ಯ ಸಾಂಪ್ರತಂ ದ್ವಿಧೈವ ತತ್ಸ್ವಾಸ್ಥ್ಯಮದ ಹತಂ ಜಿನೈಃ
ಪ್ರಧಾನಮಾಧ್ಯಂ ಪರಮಾರ್ಥಮಿತ್ಯತೊ ದ್ವಿತೀಯ ಮನ್ಯದ್ಯವಹಾರ ಸಂಭವಮ್
(ಕ. ಅಧ್ಯಾಯ ೭, ಶ್ಲೋಕ ೭)

[2] ಪರಮಾರ್ಥಸ್ವಾಸ್ಥಲ್ಯಲಕ್ಷಣ
ಅಶೇಷಕರ್ಮಕ್ಷಯಜಂ ಮಹಾದ್ಭುತಂ|ಯದೇತದಾತ್ಯಂತಿಕಮದ್ವೀತಿ
ಅತೀಂದ್ರಿಯಂ ಪ್ರಾರ್ಥಿತಮರ್ಥವೇದಿಭಿಃ| ತದ್ದೇತದುಕ್ತಂ ಪರಮಾರ್ಥನಾಮಕಮ್
(ಕ.ಅ.೭, ಶ್ಲೋಕ ೭)

[3] ವಹಾರಸ್ವಾಸ್ಥ್ಯಲಕ್ಷಣ
ಸಮಾಗ್ನಿಧಾತುತ್ವಮದೋಷವಿಭ್ರಮಲಕ್ರಿಯಾತ್ಮೇಂದ್ರಿಯ ಸುಪ್ರಸನ್ನತಾ|
ಮನಃಪ್ರಸಾದಶ್ಚ ನರಸ್ಯ ಸರ್ವದಾಃ |

[4] ಸ್ವಸ್ಥ ಲಕ್ಷಣ
ಕಿಮುಚ್ಯತೆ ಸ್ವಸ್ಥವಿಚಾರ ಲಕ್ಷಣಂ ಯದಾ ಗದೈರ್ಮುಕ್ತತನುರ್ಭವೆತ್ಪುಮಾನ್
ತದೈವ ಸಸ್ವಸ್ಥ ಇತಿ ಪ್ರತೀರ್ತಿತಸ್ಸುಶಾಸ್ತ್ರಮಾರ್ಗಾನ್ನ ಕಿಂಚಿದನ್ಯಥಾ
(ಕ.ಅ.೨ ಶ್ಲೋಕ.೭)

[5] ಬಲಂ ಪ್ರಧಾನಂ ಖಲು ಸರ್ವಕರ್ಮಣಾಮತೊ ವಿಚಾರ್ಯಂ ಭಿಷಣಾ ವಿಜಾನತಾ ||
ನರೇಷು ಸಮ್ಯಕ್ ಬಲವತ್ತರೆವ್ಹಿವ ಕ್ರಿಯಾ ಸುಕಾರ್ಯಸುಖಸಿದ್ಧಿ ಮಿಚ್ಛಿತಾ ||
(ಕ.ಅ.೨, ಶ್ಲೋಕ.೧೬)

[6] ಪ್ರಾಂತಃಪ್ರಾತರ್ಭಕ್ಷಯೇದ್ಬಂತಕೌಷ್ಟಂ ನಿರ್ದೋಷಂ ಯುದ್ದೋಷರ್ಣಾಮ ರೂಪಮ್ ||
ಅನ್ನೇಕಾಲಷೌ ವಾಕ್ಪ್ರವೃತಿಂ ಸುಗಂಧಿಂ ಕುರ್ಯಾದಂತನ್ನಾಶಯೆದಾಸ್ಯರೋಗಾನ್ ||
(ಕ.ಅ.೬, ಶ್ಲೋಕ.೭)

[7] ದೀಪ್ತಾಗ್ನತ್ವಂ ವ್ಯಾದಿನಿರ್ಮುಕ್ತಗಾತ್ರಂ ನಿದ್ರಾತಂದ್ರಾಸ್ಥೌಲ್ಯನಿರ್ನಾಶಂ ಚ ||
ಕುರ್ಯಾತ್ಕಾಂತಿಂ ಪುಷ್ಟಿಮಾರೋಗ್ಯಮಾಯೂರ್ವ್ಯಾಯಾಮ್ಯೋಯಂ ಯೌವನಂ ದೇಹದಾರ್ಢ್ಯಮ್ ||
(ಕ.ಅ.೬, ಶ್ಲೋಕ. ೭)

[8] ತುಷ್ಟಿಂ ಪುಷ್ಟಿಂ ಕಾಂತಿಮಾರೋಗ್ಯಮಾಯುಸ್ಸೌಮ್ಯಂ ದೋಷಾಣಾಂ ಸಾಮ್ಯಮಗ್ನೆಶ್ಚ |
ದೀಪ್ತಿಮ್| ತಂದ್ರಾನಿದ್ರಾಪಾಪಾಶಾಂತಿಂ ಪವಿತ್ರಂ ಸ್ನಾನಂ ಕೂರ್ಯದನ್ನಕೌಂಷೌಮತೀವ ||
(ಕ.ಅ.೬, ಶ್ಲೋಕ.೧೨)

[9] ದದ್ಯಾತ್ತೈಲಂ ಮಸ್ತಕೆ ಸ್ವಸ್ಥಕಾಲೆ ಕೂರ್ಯಾರ್ದೇತ ತರ್ಪಣಂ ಚೇಂದ್ರಿಯಾಣಾಂ |
ಕೇಶಾನಾಂ ವಾ ಮಾರ್ದವಂ ಹಿ ಪ್ರಶಾಂತಂ ರೋಗಸ್ತರ್ವಾನ್ನಾಶಯೇತ್ವಗ್ಗತಾಂಶ್ಚ ||
(ಕ.ಅ.೬, ಶ್ಲೋಕ.೪)